Sunday, August 16, 2015

ಸ್ವಾತಂತ್ರ್ಯ ದಿನಾಚರಣೆ - ನನ್ನ ಭಾಷಣ


ಎಲ್ಲರಿಗೂ  ೬೯ನೇ ಸ್ವಾತಂತ್ರ್ಯ ದಿನದ ಶುಭ ಕಾಮನೆಗಳು. ಈ ಸಂದರ್ಭದಲ್ಲಿ ನಮ್ಮ ಗುಬ್ಬಿ ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನು ಮಾಡಿದ ಭಾಷಣದ ಕೆಲವು ವಿಷಯಗಳನ್ನು ಇಲ್ಲಿ ಹಂಚಿಕೊಳ್ಳ ಬಯಸುತ್ತೇನೆ . 

ಬ್ರಿಟೀಷರಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿರಬಹುದು ,  ಯಾವಾಗ ಕೃಷಿಕ ವರ್ಗದ ಘನತೆಹೆಚ್ಚಿದಾಗ , ಸೈನಿಕರಿಗೆ ಸೂಕ್ತ ಗೌರವ ಸಿಕ್ಕಾಗ , ಪ್ರತಿಯೊಬ್ಬ ಮಗುವಿಗೆ ಶಿಕ್ಷಣ ಸಿಕ್ಕಾಗ , ಪ್ರತಿಯೊಬ್ಬ ಪ್ರತಿಭಾವಂತರಿಗೆ ಸರಿಯಾದ ಅವಕಾಶ ಸಿಕ್ಕಿದಾಗ ಅದು ನಿಜವಾದ ಸ್ವಾತಂತ್ಯ ,ಶಿಕ್ಷಣದಿಂದ ವಂಚಿತರಾಗಿರುವವರು ಬಹಳಷ್ಟು ಮಂದಿ ಇನ್ನೂ ನಮ್ಮ ದೇಶದಲ್ಲಿ ಇದ್ದಾರೆ , ಅಂಥವರಿಗೆ ಸೂಕ್ತ ಶಿಕ್ಷಣ ಮತ್ತು ಅವಕಾಶಗಳು ಸಿಗಬೇಕಾಗಿದೆ ಮತ್ತು ಸರ್ಕಾರ ಕೂಡ ಇದರ ಬಗ್ಗೆ ಗಮನ ಹರಿಸಬೇಕಾಗಿದೆ 


ಈ ಕಾರ್ಯಕ್ರಮದಲ್ಲಿ ನಮ್ಮ ದೇಶದ ಸ್ವರಾಜ್ಯಕ್ಕಾಗಿ ಹೋರಾಡಿದದವರನ್ನು ನೆನೆಯದೇ ಸ್ವಾತಂತ್ಯ ದಿನವನ್ನು ಆಚರಿಸಲು ಆಗುತ್ತದೆಯೇ ??  ಬ್ರಿಟೀಷರ ಆಳ್ವಿಕೆಯಿಂದ ಹೊರಬಂದು ಪೂರ್ಣ ಸ್ವರಾಜ್ಯ ದೇಶ ನಿರ್ಮಿಸುವಲ್ಲಿ ಲಕ್ಷಾಂತರ ಹೋರಾಟಗಾರರ ಶ್ರಮ ಬಲಿದಾನ ಇದೆ. ನಮ್ಮ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಕೆಲವೇ ಕೆಲವು ನಾಯಕರನ್ನು ಮಾತ್ರ ಬಿಂಬಿಸಿ ತೋರಿಸಲಾಗುತ್ತದೆ . ಆದರೆ ಎಲೆ ಮರೆಯ ಕಾಯಿಯಂತೆ ಹೋರಾಡಿದ ಅದೆಷ್ಟೋ ಜನ ತಮ್ಮ ಜೀವ ಜೀವನವನ್ನು ದೇಶಕ್ಕೆ , ತಾಯಿ ಭಾರತಾಂಬೆಯ ಸಲುವಾಗಿ ಅರ್ಪಿಸಿದ್ದಾರೆ .  

ಮೊದಲಿಗೆ ವೀರ್ ಸಾವರ್ಕರ್ ಬಗ್ಗೆ ಹೇಳುತ್ತೇನೆ . ದೇಶ ಕಂಡ ಒಬ್ಬ ಅದ್ಭುತ ದೂರದೃಷ್ಟಿಯುಳ್ಳ ನಾಯಕ , ಚಿಂತಕ ಮತ್ತು ಕವಿ . ಸಾವರ್ಕರ್ ಅವರು ಕೇವಲ ಭಾರತದಲ್ಲಿದ್ದುಕೊಂಡು ಬ್ರಿಟೀಷರ ವಿರುದ್ಧ ಹೋರಾಡಲಿಲ್ಲ. ಲಂಡನ್ ಗೆ ಉನ್ನತ ವ್ಯಾಸಂಗಕ್ಕೆ ಹೋದ ಇವರು ಅಲ್ಲಿ "ಅಭಿನವ ಭಾರತ" ಎಂಬ  ಗುಪ್ತ ಕ್ರಾಂತಿಕಾರಿ ಸಂಘಟನೆಯನ್ನು ಶುರು ಮಾಡಿ ಬ್ರಿಟೀಷರ ವಿರುದ್ಧ ಹೋರಾಡುತ್ತಾರೆ . ಈತ ಒಬ್ಬ ಸಾಮಾನ್ಯನಲ್ಲ , ಈತನಿಂದ ನಮಗೆ ಕಂಟಕ ತಪ್ಪಿದ್ದಲ್ಲ ಎಂದು ಅರಿತ ಬ್ರಿಟೀಷರು ಸಾವರ್ಕರ್ ಅವರ ಹಿಂದೆ ಬಿದ್ದು ಅವರ ಬಗ್ಗೆ ಮಾಹಿತಿಯನ್ನು ಕಲೆಹಾಕಲು ಶುರು ಮಾಡುತ್ತಾರೆ . ನಂತರ ಅವರನ್ನು ಬಂಧಿಸಿ ಭಾರತಕ್ಕೆ ಹಡಗಿನ ಮೂಲಕ ಕರೆತರಲಾಗುತ್ತದೆ. ಆಗ ಸಾವರ್ಕರ್ ಫ್ರಾನ್ಸ್ ನ ಗಡಿಯತ್ತ ಬಂದಾಗ ಹಡಗಿನಿಂದ ಜಿಗಿದು ಸಮುದ್ರದಲ್ಲಿ ಈಜಿಕೊಂಡು ತಪ್ಪಿಸಿಕೊಂಡು ಹೋಗುತ್ತಾರೆ .ಫ್ರಾನ್ಸಿನ ಅಧಿಕಾರಿಗಳಿಂದ ಮತ್ತೆ ಬಂಧಿಯಾದ ಸಾವರ್ಕರ್ ಅವರನ್ನು ಬ್ರಿಟೀಷ್  ಅಧಿಕಾರಿಗಳು ಫ್ರಾನ್ಸಿನ ಅಧಿಕಾರಿಗಳಿಗೆ ಲಂಚ ಕೊಟ್ಟು ಮತ್ತೆ ಬಂಧಿಸಿ ಭಾರತಕ್ಕೆ ತಂದು ಅಂಡಮಾನ್ ಜೈಲಿನಲ್ಲಿ ಇರಿಸುತ್ತಾರೆ .  ಬಹುಷಃ ವಿಶ್ವದಲ್ಲೇ ಎರಡು ಜೀವಾವಧಿ ಶಿಕ್ಷೆ ಅನುಭವಿಸಿದ ಏಕೈಕ ವ್ಯಕ್ತಿ ಸಾವರ್ಕರ್ ಇರಬಹುದು . ಎರಡು ಜೀವಾವಧಿ ಅಂದರೆ ಆಗಿನ ಕಾನೂನಿನ ಪ್ರಕಾರ ೫೦ ವರ್ಷಗಳ ಜೈಲು ವಾಸ . ನಂತರ ಸಾವರ್ಕರ್ ಅವರನ್ನು ಜೈಲಿನಿಂದ ಬಿಡಿಸಲು ದೇಶಾದ್ಯಂತ ಎಲ್ಲರಿಂದ ಸಹಿ ಸಂಗ್ರಹವನ್ನು ಮಾಡಲಾಗುತ್ತದೆ , ಕೆಲವು ಹಿರಿಯ ನಾಯಕರ ಬಳಿ ಅದನ್ನು ತೆಗೆದುಕೊಂಡು ಹೋಗಿ ಅವರ ಸಹಿ ಮತ್ತು ಬೆಂಬಲವನ್ನು ಅಪೇಕ್ಷಿಸಿದಾಗ ಆ ಸಹಿ ಸಂಗ್ರಹದ ಹಾಳೆಯನ್ನು ಹರಿದು ಬಿಸಾಕುತ್ತಾರೆ . ಇದು ನಮ್ಮ ಕೆಲವು ನಾಯಕರಿಗೆ ಹೋರಾಟಗಾರರಿಗೆ ನಮ್ಮದೇ ನಾಯಕರು ನಡೆಸಿಕೊಂಡ ರೀತಿ . ನಮ್ಮ ದೇಶಕ್ಕೆ ಸ್ವಾತಂತ್ರ್ಯ ದಕ್ಕಿಸುವಲ್ಲಿ ಸಾವರ್ಕರ್ ಅವರ ಕೊಡುಗೆಯನ್ನು ಹೆಚ್ಚು ಪ್ರಚರ ಪಡಿಸುವ ಅವಶ್ಯಕತೆ ಇದೆ ಮತ್ತು ಇಂದಿಗೂ ಅವರು ಎಷ್ಟೋ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ . 

Vinayak Damodar Savarkar


ಅದೇ ರೀತಿ ಯುವಕರಿಗೆ ಇನ್ನೊಬ್ಬ ಮಾದರಿ ನಾಯಕ ಎಂದರೆ ಸುಭಾಶ್ ಚಂದ್ರ ಬೋಸ್ . ಹಲವಾರು ನೇತಾಗಳಿದ್ದರೂ ನೇತಾಜಿ ಮಾತ್ರ ಒಬ್ಬರೇ . ಇವರ ಪರಿಸ್ಥಿತಿಯೂ ಒಂದು ಮಟ್ಟದಲ್ಲಿ ಸಾವರ್ಕರ್ ಅವರ ರೀತಿಯದ್ದೇ . Indian National Army ಸ್ಥಾಪಿಸಿದ ಬೋಸರಿಗೆ ದೇಶಕ್ಕಾಗಿ ಮುಡಿಪಾಗಿಟ್ಟ ಇಂಥ ಒಂದು ಸೈನ್ಯವನ್ನು ನಮ್ಮ ದೇಶದ ಒಳಗೆ ಶುರು ಮಾಡಲು ಆಗದೆ , ಬೇರೆ ದೇಶದಲ್ಲಿ ಶುರು ಮಾಡಿ ಅಲ್ಲಿಂದ ಬ್ರಿಟೀಷರ ವಿರುದ್ಧ ಹೋರಾಡುತ್ತಾರೆ . ಬ್ರಿಟೀಷ್ ಸೈನ್ಯದ ಭಾಗವಾಗಿದ್ದ ಅದೆಷ್ಟೋ ಭಾರತೀಯ ಸೈನಿಕರು ಬೋಸರಿಂದ ಪ್ರೇರಿತರಾಗಿ INA ಯನ್ನು ಸೇರಿಕೊಳ್ಳುತ್ತಾರೆ . ಇದು ಬೋಸರ ನಾಯಕ ಗುಣ .  ಸಾವರ್ಕರ್ ಅವರ ರೀತಿಯಲ್ಲಿ ಬೋಸರು ಕೂಡ ಬ್ರಿಟೀಷರಿಗೆ ದುಸ್ವಪ್ನವಾಗಿ ಕಾಡಿದ್ದರು , ಬೋಸರನ್ನು ಬಂಧಿಸಲು ಬ್ರಿಟೀಷರು ಹಲವಾರು ಮಸಲತ್ತುಗಳನ್ನುಮಾಡುತ್ತಾರೆ . ಇಂಥ ಬೋಸರನ್ನು ಬಂಧಿಸಲು ನಮ್ಮ ಕೆಲವು ನಾಯಕರು ಬೋಸರಿಂದ ತಮಗೆ ತೊಂದರೆ ಎಂದು ಅರಿತು  ಬ್ರಿಟೀಷರಿಗೆ ಬೆಂಬಲ ಕೊಟ್ಟಿದ್ದು ಇತಿಹಾಸದ ಒಂದು ಕಪ್ಪು ಚುಕ್ಕೆ . 

Subash Chandra Bose


ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾದ ಮತ್ತೊಬ್ಬ ನಾಯಕ ಅಂದರೆ ಸರ್ದಾರ್ ವಲ್ಲಭಭಾಯಿ ಪಟೇಲ್ . ಆಗಸ್ಟ್ ೧೫, ೧೯೪೭ ರಲ್ಲಿ ಸ್ವಾತಂತ್ರ್ಯ ಬಂದ ನಂತರವೂ ನಮ್ಮ ದೇಶದಲ್ಲಿ ಹಲವಾರು ಸಮಸ್ಯೆಗಳಿದ್ದವು . ಒಂದು ಕಡೆ ದೇಶ ಇಬ್ಬಾಗ ಆಗಿದೆ , ಇನ್ನೊಂದು ಕಡೆ ಎಲ್ಲ ರಾಜ ಮನೆತನಗಳು ಯಾವ ಕಡೆಗೆ ಹೋಗಬೇಕೆಂಬ ಅವರ ಡೋಲಾಯಮಾನ ಸ್ಥಿತಿ. ಇಂಥ ಸನೀವೆಶದಲ್ಲಿ ಮುಂಚೂಣಿಗೆ ಬಂದಿದ್ದು ಉಕ್ಕಿನ ಮನುಷ್ಯ ಪಟೇಲ್ .  ೫೫೦ಕ್ಕೂ ಹೆಚ್ಚಿನ  ಸಂಸ್ಥಾನಗಳನ್ನು ಒಗ್ಗೂಡಿಸಿ "Great Republic India" ನಿರ್ಮಿಸುವಲ್ಲಿ ಅವರ ಪಾತ್ರ ಮುಖ್ಯವಾದದ್ದು .  ಬಹುಷಃ ಪಟೇಲರಲ್ಲದೇ ಬೇರೆ ಯಾರಿಂದಲೂ ಈ ಕಾರ್ಯ ಯಶಸ್ವಿಗೊಳಿಸಲು ಸಾಧ್ಯವಾಗುತ್ತಿರಲಿಲ್ಲ . ಈ ಕಾರ್ಯಚರಣೆಯಲ್ಲಿ ಮುಖ್ಯವಾಗಿ ನೆನಪಿಸಿಕೊಳ್ಳಬೇಕಾದ್ದು  ಪಾಕಿಸ್ತಾನಕ್ಕೆ ಸೇರುತ್ತೇನೆ ಎಂದಿದ್ದ  ಹೈದರಾಬಾದಿನ ನಿಜಾಮರನ್ನು ಭಾರತದ ತೆಕ್ಕೆಗೆ ತರುವಲ್ಲಿ ನಡೆಸಿದ "Operation Polo" . 
Sardar Patel


ಇದೇ ರೀತಿ ಬ್ರಿಟೀಷರ ವಿರುದ್ಧ ಹೋರಾಡಿದ ನಮ್ಮ ಕೆಚ್ಚೆದೆಯ ರಾಜರು ಅಂದರೆ ತಮಿಳುನಾಡಿನ ಪುಲಿ ದೇವರ್ (Puli Thevar ). ಕೇರಳದ ವರ್ಮಾ ಪಜಾಸ್ಸಿ ರಾಜಾ (Pazhassi ರಾಜ ) ಇವರಿಬ್ಬರೂ ೧೮ನೆ ಶತಮಾದಲ್ಲೇ ಅವರ ವಿರುದ್ಧ ಹೋರಾಡಿದ್ದವರು . ಅದೇ ರೀತಿ ೧೯ನೆ ಶತಮಾದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ , ಸಂಗೊಳ್ಳಿ ರಾಯಣ್ಣ ಕೂಡ ಬ್ರಿಟೀಷರ ವಿರುದ್ಧ ಹೋರಾಡಿದ್ದಾರೆ . ಇವರನ್ನು ಕೂಡ ಇಂದು ನಾವು ಸ್ಮರಿಸಿಕೊಳ್ಳಬೇಕು . ನಂತರ ೧೮೫೭ರ ಸಿಪಾಯಿ ದಂಗೆ , ಮಂಗಲ್ ಪಾಂಡೆಯ ನೇತೃತ್ವದಲ್ಲಿ ಶುರು ಆಯಿತು . ಇದು ಬ್ರಿಟೀಷರ ವಿರುದ್ಧ ನಡೆದ ಹೋರಾಟಗಳಲ್ಲಿ ಅತೀ ಮುಖ್ಯವಾದದ್ದು ಮತ್ತು ಸ್ವಾತಂತ್ಯ ಹೋರಾಟಕ್ಕೆ ಮುಖ್ಯ ತಿರುವನ್ನು ಕೊಟ್ಟಿದ್ದು . ಈ ದಂಗೆಯ ಬಗ್ಗೆ ಸಾವರ್ಕರ್ ಬರೆದ ಪುಸ್ತಕ, ಬಿಡುಗಡೆಗೆ ಮುನ್ನವೇ ಬ್ರಿಟೀಷರಿಂದ ನಿಷೇಧಗೊಳ್ಳುತ್ತದೆ. ಇಂಗ್ಲೆಂಡ್ ನಲ್ಲಿ ಹಚ್ಚು ಹಾಕಿಸಲು ಆಗದೆ ಈ ಪುಸ್ತಕವನ್ನು ಹಾಲೆಂಡ್ ನಲ್ಲಿ ಮುದ್ರಿಸಿ ಭಾರತಕ್ಕೆ  ಈ ಪುಸ್ತಕವನ್ನು ರವಾನೆ ಗೊಳಿಸುತ್ತಾರೆ. ೧೯೦೦ ರ ನಂತರ ಈ ಪುಸ್ತಕ ಎಷ್ಟೋ  ಜನರಿಗೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೇರಲು ಸ್ಪೂರ್ತಿ ಆಗುತ್ತದೆ, ಅವರ ಹೋರಾಟಕ್ಕೆ ಮುನ್ನುಡಿ ಆಗುತ್ತದೆ . ನಂತರ ೧೯೧೯ರ ಜಲಿಯನ್ ವಾಲಾ  ಭಾಗ್ ದುರಂತ . ಈ ದುರಂತವನ್ನು ಕಣ್ಣಾರೆ ಕಂಡ  ಭಗತ್ ಸಿಂಗ್ ಎಂಬ ಚಿಕ್ಕ ಬಾಲಕ ಬ್ರಿಟೀಷರ ವಿರುದ್ಧ ಹೋರಾಡಲು ಸಿದ್ಧಗೊಳ್ಳುತ್ತಾನೆ , ಎಷ್ಟೋ ಯುವಕರಿಗೆ ಸ್ಪೂರ್ತಿ ಆಗುತ್ತಾರೆ ಭಗತ್ ಸಿಂಗ್. 

ಇದೇ ರೀತಿ ೧೯೪೨ರ "Quit India Movement" ನಲ್ಲಿ ಕೂಡ ಅದೆಷ್ಟೋ ಜನ ಎಲ್ಲ ವರ್ಗದ  ಎಲ್ಲ ವಯಸ್ಸಿನವರು ಭಾಗಿ ಆಗುತ್ತಾರೆ . ನಮ್ಮ ಖ್ಯಾತ ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ನವರು ಕೂಡ ಈ ಚಳುವಳಿಯಲ್ಲಿ ಭಾಗಿಯಾಗುತ್ತಾರೆ . H.N ಅವರು ತಮ್ಮ ಪರೀಕ್ಷೆಯನ್ನು ಬಿಟ್ಟು ಈ ಚಳುವಳಿಯಲ್ಲಿ ಭಾಗವಹಿಸುತ್ತಾರೆ , ಜೈಲುವಾಸವನ್ನು ಕೂಡ ಅನುಭವಿಸುತ್ತಾರೆ . ಜೈಲಿನಿಂದ ಬಿಡುಗಡೆ ಆದ ನಂತರ ತಮ್ಮ ಶಿಕ್ಷಣವನ್ನು ಮುಂದುವರೆಸುತ್ತಾರೆ . ಇದೇ ರೀತಿ ಬೆಂಗಳುರಿನ ಮೈಸೂರ್ ಬ್ಯಾಂಕ್ ಸರ್ಕಲ್ ನಲ್ಲಿರುವ ಹುತಾತ್ಮರ ಸ್ಮಾರಕದ ಬಗ್ಗೆ ಹೇಳಲೇಬೇಕು . ಈ ಸ್ಮಾರಕವನ್ನು ೧೯೪೨ರ ಚಳುವಳಿಯಲ್ಲಿ ಭಾಗವಹಿಸಿ ಬ್ರಿಟೀಷರ ಗುಂಡೇಟಿಗೆ ಬಲಿಯಾಗಿ ಹುತಾತ್ಮರಾದ  ಸೆಂಟ್ರಲ್ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳ ನೆನಪಿಗಾಗಿ ನಿರ್ಮಿಸಲಾಗಿದೆ . ಈ ಸ್ಮಾರಕದ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಓದಿ ( http://giri-shikhara.blogspot.in/2014/08/blog-post.html) 

Memorial at Mysore Bank Circle, Bengaluru



ಇನ್ನ ಸ್ವಾತಂತ್ರ್ಯ ಬಂದ ನಂತರ ನಮ್ಮ ಪರಿಸ್ಥಿತಿ ಭಿನ್ನವಾಗಿತ್ತು . ಒಂದು ಕಡೆ ಬ್ರಿಟೀಷರ ಆಳ್ವಿಕೆಯಿಂದ ಬಿಡುಗಡೆ ಆಗಿದ್ದು ಸಂಭ್ರಮ ಮತ್ತು ಸಮಾಧಾನಕರ ವಿಷಯವಾದರೆ ದೇಶ ಇಬಾಗ ಆಗಿದ್ದು ದುರಂತವೇ ಸರಿ . ಕೆಲವು ನಾಯಕರ ತಮ್ಮ ಸ್ವಂತ ಹಿತಾಸಕ್ತಿಗಳಿಗೋಸ್ಕರ ದೇಶ ಹೊಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಭಾರತದಿಂದ ಪಾಕಿಸ್ತಾನಕ್ಕೆ , ಪಾಕಿಸ್ತಾನದಿಂದ ಭಾರತಕ್ಕೆ ಅದೆಷ್ಟೋ ಮಂದಿ ವಲಸೆ ಬಂದರು , ಲಕ್ಷಾಂತರ ಅಮಾಯಕರು ಬಲಿಯಾದರು . ಸ್ವಾತಂತ್ರ್ಯ ಭಾರತದ ಮೊದಲ ದುರಂತ . 


ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಹೇಳುವುದಾದರೆ ವಿಶ್ವದಾದ್ಯಂತ ಭಾರತೀಯರ ಸಾಧನೆ. ವಿಶ್ವದ ದೊಡ್ಡ ದೊಡ್ಡ IT ಸಂಸ್ಥೆಗಳ ಚುಕ್ಕಾಣಿಯನ್ನು ಭಾರತೀಯರು ಹಿಡಿಯುತ್ತಿರುವುದು ಹೆಮ್ಮೆಯ ಸಂಗತಿ ಆಗಿರಬಹುದು , ಜೊತೆಗೆ ಅದರ ಬಗ್ಗೆ ಸ್ವಲ್ಪ ಯೋಚಿಸುವ ಅವಶ್ಯಕತೆ ಕೂಡ ಇದೆ .  ಇದೇ ವ್ಯಕ್ತಿಗಳಿಗೆ ನಮ್ಮ ದೇಶದಲ್ಲೇ ಸೂಕ್ತ ಅವಕಾಶಗಳು ದೊರಕಿದಲ್ಲಿ ತಮ್ಮ ಸ್ವಂತ ಸಂಸ್ಥೆಯನ್ನು ಶುರು ಮಾಡುವ ಸಾಮರ್ಥ್ಯ ಇದೆ . ಇಂಥ ಅವಕಾಶವನ್ನು ಉಪಯೋಗಿಸಿಕೊಳ್ಳುವ ವಿದೇಶಿ ಸಂಸ್ಥೆಗಳು ಭಾರತೀಯ ಪ್ರತಿಭಾವಂತ ಯುವಕರನ್ನು ಆಕರ್ಷಕ ಸಂಬಳ ಕೊಟ್ಟು ತಮ್ಮ ಸಂಸ್ಥೆಗೆ ದುಡಿಸಿಕೊಳ್ಳುತಾರೆ.ಇಂಥಹ ವಿದ್ಯಾರ್ಥಿಗಳು ಒಂದು ಸಂಸ್ಥೆಯನ್ನು ಹುಟ್ಟು ಹಾಕಿದರೆ ವಿದೇಶಿ ಕಂಪೆನಿಗಳಿಗೆ ಸೆಡ್ಡು ಹೊಡೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ. ಅಂತ ಸಾಮರ್ಥ್ಯ ನಮ್ಮ ಯುವ ಪೀಳಿಗೆಗೆ ಇದೆ . ಇವರನ್ನು ತಮ್ಮ ಸಂಸ್ಥೆಗೆ ಸೇರಿಸಿಕೊಳ್ಳದಿದ್ದರೆ ತಮಗೆ competitor ಆಗುತ್ತಾರೆ ಎಂಬ ಹೆದರಿಕೆ ಕೂಡ ಕೆಲವು ವಿದೇಶಿ ಕಂಪೆನಿಗಳಿಗೆ ಇದೆ.. ಆದ್ದರಿಂದಲೇ ಅವರು ಹೆಚ್ಚು ಸಂಬಳ ಕೊಡಲೂ ತಾಯಾರಗಿರುತ್ತಾರೆ .   ನಮ್ಮ ದೇಶದ ವಿದ್ಯಾರ್ಥಿಗಳಲ್ಲಿ ಕೂಡ ದೊಡ್ಡ ದೊಡ್ಡ ವಿದೇಶಿ ಸಂಸ್ಥೆಗಳಲ್ಲಿ ಕೆಲಸ ಗಿಟ್ಟಿಸುವ ಬಯಕೆ ಇದ್ದೇ ಇತ್ತು . 
.
ಇಂಥ ಮನಸ್ಥಿತಿ ಕಳೆದ ೪-೫ ವರ್ಷದಿಂದ ಈಚೆಗೆ ಸ್ವಲ್ಪ ಬದಲಾಗಿದೆ ಎಂದರೆ ಅತಿಶಯೋಕ್ತಿ ಅಲ್ಲ . ಇತ್ತೀಚಿಗೆ ಭಾರತೀಯ ಯುವಕರಿಂದ ಶುರು ಆಗಿರುವ ಅದೆಷ್ಟೋ ಸಂಸ್ಥೆಗಳು ಒಳ್ಳೆಯ ಕಾರ್ಯ ನಿರ್ವಹಿಸುತ್ತಿದ್ದು , ಬೇರೆಯವರಿಗೆ ಕೂಡ ಮಾದರಿ ಆಗಿದೆ .ಉದಾಹರಣೆಗೆ ಇತ್ತೀಚಿನ start -up ಕಂಪೆನಿಗಳಾದ  flipkart , snapdeal ,ola cabs ಮುಂತಾದವು ಭಾರತೀಯರಿಂದ ಶುರು ಆದ ಸಂಸ್ಥೆಗಳು . ಇವತ್ತು ಬೆಳಗ್ಗೆ ಪ್ರಧಾನ ಮಂತ್ರಿಗಳು ಕೆಂಪು ಕೋಟೆಯಿಂದ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವಾಗ strat-up ಕಂಪನಿಗಳ ಬಗ್ಗೆ ಉಲ್ಲೇಖಿಸುತ್ತ ಹೇಳುತ್ತಾರೆ "We want to enable Start-ups to make India no 1 in this field. Start-up India and Stand-up India" ತಮ್ಮ ಸರ್ಕಾರ ಮಂಡಿಸಿದ ೨೦೧೪ರ ಬಜೆಟ್ ನಲ್ಲಿ ಕೂಡ ಇಂಥ start-up ಸಂಸ್ಥೆಗಳಿಗೆ ಸಹಾಯ ಧನವನ್ನು ನೀಡುವುದಾಗಿ  ಘೋಷಿಸಿರುವ ನರೇಂದ್ರ ಮೋದಿ ಸರ್ಕಾರ ಅದಕ್ಕಾಗಿ ಹಣವನ್ನು ಕೂಡ ಮೀಸಲಿಟ್ಟಿದೆ. ಇಂಥ ಅವಕಾಶವನ್ನು ನಮ್ಮ ಯುವಕರು ಬಳಸಿಕೊಂಡು ದೇಶದ ಅಭಿವೃದ್ಧಿಗೆ ಮತ್ತು ದೇಶದ ಒಳಿತಿಗಾಗಿ ಕಾರ್ಯ ನಿರ್ವಹಿಸಿಬೇಕಾಗಿದೆ. ಇದಕ್ಕೆ ಪುಷ್ಟಿ ಕೊಡುವಂತೆ "Make In India " ಯೋಜನೆ ಕೂಡ ಇದೆ 

ಇದೆ ರೀತಿ ಭಾರತದಲ್ಲಿ ನಡೆಯುತ್ತಿರುವ ಸಂಶೋಧನೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿರುವ ತೊಡಕುಗಳ ಬಗ್ಗೆ ಹೇಳಬಯಸುತ್ತೇನೆ.  ನಮ್ಮ ದೇಶದಲ್ಲಿ ನಡೆದ ಹಲವಾರು ಸಂಶೋಧನೆಗಳಲ್ಲಿ "Param" ಎಂಬ Super Computer , ಪೋಖ್ರಾನ್ ಅಣು ಪರೀಕ್ಷೆ ಮತ್ತು ಇತ್ತೀಚಿನ Mars Mission ಮುಖ್ಯವಾದವು . ಇವೆಲ್ಲ ಯಾವ ದೇಶದ ಸಹಾಯ ಇಲ್ಲದೆ ಸ್ವತಂತ್ರವಾಗಿ ನಡೆದಂಥವು . ಅತೀ ಕಡಿಮೆ ವೆಚ್ಚದಲ್ಲಿ ಮುಗಿಸಿದಂತಹ "Mars Mission " ನಿಜಕ್ಕೂ ಅದ್ಭುತವೇ ಸರಿ . ಬೇರೆ ರಾಷ್ಟಗಳು ಹಲವಾರು ಪ್ರಯತ್ನಗಳ ನಂತರ ಸಫಲರಾಗುತ್ತಾರೆ , ಆದರೆ ಭಾರತ ಮೊದಲನೇ ಪ್ರಯತ್ನದಲ್ಲೇ ಯಶಸ್ವಿ ಗೊಳ್ಳುತ್ತದೆ . ಅದು ನಮ್ಮ ವಿಜ್ಞಾನಿಗಳ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. ಅಣು ಸಂಶೋಧನೆಯಲ್ಲಿ ಬೇರೆ ದೇಶಗಳು(ಮುಖ್ಯವಾಗಿ ಅಮೇರಿಕಾ ಮತ್ತು ರಷ್ಯ) ಗೂಢಚಾರರ ಮುಖಾಂತರ ಅವರು ಬಳಸುತ್ತಿರುವ ತಂತ್ರಜ್ಞಾನದ ಬಗ್ಗೆ ಮಾಹಿತಿ ಕಲೆ ಹಾಕಿಕೊಂಡು ಸಂಶೋಧನೆ ನಡೆಸಿದರೆ , ಭಾರತ ಯಾರ ಮೇಲೂ ಅವಲಂಭಿತವಾಗದೆ ಸ್ವಂತ ತಂತ್ರಜ್ಞಾನಗಳ ಮೂಲಕ ಅಭಿವೃದ್ಧಿ ಪಡಿಸಿದೆ 

ಆದರೂ ಕೂಡ ಬೇರೆ ದೇಶಕ್ಕೆ ಹೋಲಿಸಿಕೊಂಡರೆ ಭಾರತದಲ್ಲಿ ಆಗುತ್ತಿರುವ ಸಂಶೋಧಾನ ಕಾರ್ಯಗಳು ಬಹಳ ಕಡಿಮೆ . ಭಾರತದಿಂದ ಹೊರಬರುತ್ತಿರುವ  ಸಂಶೋಧನಾ ಕೃತಿಗಳು (research papers ) ಬೇರೆ ದೇಶಗಳಿಗೆ ಹೋಲಿಸಿದರೆ ಬಹಳ ಕಡಿಮೆ . ಇದಕ್ಕೆ ಕಾರಣ ಸಂಶೋಧನಾ ಕ್ಷೇತ್ರಕ್ಕೆ ಬರುತ್ತಿರುವ ಯುವಕರು ಮತ್ತು ಪದವೀಧರರು ಬಹಳ ಕಡಿಮೆ . ಮುಖ್ಯ ಕಾರಣ ಅವರಿಗೆ ಸರಿಯಾದ ಅರ್ಥಿಕ ಪ್ರೋತ್ಸಾಹ ಸಿಗದೇ ಇರುವುದು . ಬಹುತೇಕ ಮಧ್ಯಮ ವರ್ಗದವರೇ ಇರುವ ನಮ್ಮ ದೇಶದಲ್ಲಿ ಯುವಕರು ಪದವಿ ಗಳಿಸಿದ ನಂತರ ಜೀವನ ನಡೆಸಲು ಯಾವುದಾದರು ಒಂದು ಕೆಲಸ ಸಿಕ್ಕಿದರೆ ಸಾಕು ಆನುವ ಮನೋಭಾವನೆ ಇದೆ . ಕೆಲವೇ ಕೆಲವು ಸಂಸ್ಥೆಗಳಲ್ಲಿ (IISC , IIT ,BARC )ಮಾತ್ರ ಸಂಶೋಧನಾ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗುತ್ತಿದೆ . ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಈ ವಿದ್ಯಾರ್ಥಿ ವೇತನವನ್ನು ಇನ್ನು ಹಲವಾರು ವಿಶ್ವವಿದ್ಯಾನಿಲಯಗಳಿಗೆ ವಿಸ್ತರಿಸಿದರೆ ಬಹಳಷ್ಟು ವಿದ್ಯಾರ್ಥಿಗಳಿಗೆ  ಅನುಕೂಲ ಆಗುತ್ತದೆ   ಇಂಥ ಪ್ರತಿಭಾವಂತರಿಗೆ ಸೂಕ್ತ ಅವಕಾಶ ಸಿಕ್ಕರೆ ಭಾರತ ಸಂಶೋಧನಾ ಕ್ಷೇತ್ರದಲ್ಲಿ ಕೂಡ ಭಾರತ ಮಹತ್ತರವಾದ ಸಾಧನೆಯನ್ನು ಮಾಡಬಹುದು . ನಮ್ಮಲ್ಲಿರುವ ಮಾನವ ಸಂಪನ್ಮೂಲ ಮತ್ತು ಜ್ಞಾನ ಸಂಪನ್ಮೂಲವನ್ನು ಸೂಕ್ತವಾಗಿ ಬಳಸಿಕೊಂಡರೆ ಭಾರತ ವಿಶ್ವ ಗುರು ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಸಂಸ್ಕೃತ  ಭಾಷೆಯ ಮೂಲ ಭಾರತ . ಭಾರತ ಮೂಲದ vedic mathematics ಬಗ್ಗೆ ಭಾರತಕ್ಕಿಂತ ಜರ್ಮನಿ ಯಲ್ಲಿ ಆಗುತ್ತಿರುವ ಸಂಶೋಧನೆಗಳೇ ಹೆಚ್ಚು . ಜರ್ಮನಿಯ ೧೪ ವಿಶ್ವವಿದ್ಯಾನಿಲಯಗಳಲ್ಲಿ ಸಂಸ್ಕೃತ ಅಧ್ಯಯನ ಕೇಂದ್ರ ಇದೆ . ಭಾರತದಲ್ಲಿ ಕೇವಲ ಏಳು ಸಂಸ್ಕೃತ  ವಿಶ್ವವಿದ್ಯಾನಿಲಯಗಳಿವೆ . ಭಾರತದಲ್ಲಿ ಸಂಸ್ಕೃತ ಅಧ್ಯಯನಕ್ಕೆ ಹೊತ್ತು ಕೊಟ್ಟರೆ ಅದನ್ನು ಶಿಕ್ಷಣದಲ್ಲಿ ಕೇಸರೀಕರಣ ಎಂಬ ಹಣೆ ಪಟ್ಟಿ ಕಟ್ಟಿ ಅದನ್ನು ವಿರೋಧಿಸುತ್ತಾರೆ ನಮ್ಮ ಪ್ರಗತಿಪರರು ಮತ್ತು ಜಾತ್ಯಾತೀತವಾದಿಗಳು  . ಆದರೆ ಜರ್ಮನಿ ಅಲ್ಲದೆ ಆಸ್ಟ್ರೇಲಿಯ , ಜಪಾನ್ , ಯುರೋಪಿನ ಹಲವಾರು ದೇಶಗಳು ಮತ್ತು ಅಮೇರಿಕಾ ಸಂಸ್ಕೃತ ಶಿಕ್ಷಣಕ್ಕೆ ಹೊತ್ತು ಕೊಡುತ್ತಿದೆ . ನಮ್ಮ ಜ್ಞಾನ ಭಂಡಾರದ ಅಧ್ಯಯನಕ್ಕೆ ಬೇರೆ ದೇಶಗಳು ಕೊಡುತ್ತಿರುವ ಪ್ರಾಮುಖ್ಯತೆಯನ್ನುನಮ್ಮ ದೇಶದಲ್ಲಿ ಕೊಡುತ್ತಿಲ್ಲ . ಇದರ ಬಗ್ಗೆ ಕೂಡ ನಾವು ಯೋಚಿಸಬೇಕಾದ ಅವಶ್ಯಕತೆ ಇದೆ . Vedic mathematics ಬಗ್ಗೆ ಭಾರತಕ್ಕಿಂತ ಬೇರೆ ದೇಶಗಳಿಂದಲೇ ಹೆಚ್ಚು ಸಂಶೋಧನಾ ಕೃತಿಗಳು ಬರುತ್ತಿವೆ . 




 ಇಂದು ಬೆಳಗ್ಗೆ  ನರೇಂದ್ರ ಮೋದಿಯವರು ಭಾಷಣ ಮಾಡುವಾಗ "This is Team India, a team of 125 crore Indians. This is the Team that makes the Nation and takes our Nation to new heights" ಎಂದು ಹೇಳುತ್ತಾರೆ . ಖಂಡಿತ ದೇಶದ ಪ್ರತಿಯೊಬ್ಬ ಪ್ರಜೆಯು ದೇಶದ ಒಳಿತಿಗಾಗಿ ಶ್ರಮ ಪಟ್ಟರೆ , ಒಗ್ಗೂಡಿ ನಡೆದರೆ ದೇಶ ಉನ್ನತ ಸ್ಥಾನಕ್ಕೆ ಏರುತ್ತದೆ . ದೇಶವನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯಲು ಎಲ್ಲರೂ ಶ್ರಮಿಸೋಣ , ಭಾರತವನ್ನು ವಿಶ್ವಗುರು ಮಾಡೋಣ . ಮತ್ತೊಮ್ಮೆ ಎಲ್ಲರಿಗು ಸ್ವಾತಂತ್ಯ ದಿನದ ಶುಭಾಶಯಗಳು .

Pic of National Flag with Emblem location : Vidhana Soudha, Bengaluru
 
       
 

Tuesday, April 7, 2015

ಬಿದಿರುತಳ - ಕೊಡೆಕಲ್ಲು ಚಾರಣ

ಏಪ್ರಿಲ್ ೫ , ಪೂರ್ಣಚಂದ್ರ ತೇಜಸ್ವಿ ಅವರು ನಮ್ಮನ್ನಗಲಿ ಇಂದಿಗೆ ೯ ವರ್ಷ ಆಗಿದೆ .. ಅವರ ಸಂಸ್ಮರಣಾ  ಅಂಗವಾಗಿ ಕೊಟ್ಟಿಗೆಹಾರದ "ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜೀವ ವೈವಿಧ್ಯ ಸಂಶೋಧನಾ ಕೇಂದ್ರ ಮತ್ತು ವಿಸ್ಮಯ ಪ್ರತಿಷ್ಠಾನ," ಸಂಸ್ಥೆಯು ಒಂದು  ಚಾರಣವನ್ನು ಚಾರ್ಮಾಡಿ ಘಾಟಿನ ಬಳಿಯ ಬಿದುರುತಳದಿಂದ ಕೊಡೈಕಲ್ಲಿನವರೆಗೆ ಆಯೋಜಿಸಿತ್ತು. . ಕಾಡು ಸುತ್ತುವುದು , ಜೀವ ವೈವಿಧ್ಯಗಳ ಬಗ್ಗೆ ಅಧ್ಯಯನ  , ಛಾಯಾಗ್ರಹಣದ ಮೂಲಕ ಮಲೆನಾಡಿನ ಕಾಡುಗಳನ್ನು ಅಲ್ಲಿನ ಜೀವನ  ಶೈಲಿಯನ್ನು    ಕೃತಿಗಳ ಮೂಲಕ ಪರಿಚಯಿಸಿದ ತೇಜಸ್ವಿ ಅವರ ಬದುಕು ಕೂಡ ಒನ್ ರೀತಿಯ ವಿಸ್ಮಯವೇ ಸರಿ . ಈ ನಿಟ್ಟಿನಲ್ಲಿ ವಿಸ್ಮಯ ಪ್ರತಿಷ್ಠಾನದ ವಾರ್ಷಿಕ ಕಾರ್ಯಕ್ರಮಗಲ್ಲಿ ಚಾರಣ ಕಾರ್ಯಕ್ರಮವು ಕೂಡ ಒಂದು . ಇದೆ ಅಲ್ಲದೆ ಶಾಲಾ ಕಾಲೇಜುಗಳಲ್ಲಿ ತೇಜಸ್ವಿ ಪುಸ್ತಕ ಮತ್ತು ಬದುಕಿನ ಕುರಿತು ವಿಚಾರ ಸಂಕೀರ್ಣಗಳನ್ನು ಕೂಡ ಆಯೋಜಿಸಲಾಗುತ್ತದೆ . ಈ ಎಲ್ಲಾ ಕಾರ್ಯಕ್ರಮಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ನಡೆಯುತ್ತದೆ. 



ಚಾರಣಕ್ಕು ಮೊದಲು ಒಂದು ಗ್ರೂಪ್ ಫೋಟೋ 


ಈ ಚಾರಣಕ್ಕೆ ತೇಜಸ್ವಿ ಅವರ ಒಡನಾಡಿಗಳು , ವಿಸ್ಮಯ ಪ್ರತಿಷ್ಠಾನದ ಕೆಲವು ಸದಸ್ಯರು , ನಾಡಿನ  ನಾನಾ ಭಾಗಗಳಿಂದ ಚಾರಣಪ್ರಿಯರು ,ಪರಿಸರ ಪ್ರೇಮಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.  ಈ ಬಾರಿಯ ಚಾರಣ ಗುಂಪಿನಲ್ಲಿ ಅತಿ ಚಿಕ್ಕ  ಚಾರಣಿಗ ೯ ವರ್ಷ ವಯಸ್ಸಿನವನಾದರೆ , ೭೯ ವರ್ಷದ ಹಿರಿಯ ಚಾರಣಿಗರೂ ಇದ್ದರು . ವಯಸ್ಸಿನ ಮಿತಿ ಇಲ್ಲದೆಂಬಂತೆ ಎಲ್ಲ ವಯೋಮಿತಿಯ ಮತ್ತು ವಿವಿಧ ಉದ್ಯೋಗದಲ್ಲಿರುವವ ಚಾರಣಿಗರೂ ಬಂದಿದ್ದರು . 
With Vasu Sir,eldest trekker(79 yrs) of our troop 


With Navaneeth, youngest trekker(9 yrs) of our troop
With Blog friends(Prashathi, Vidruma, Bhagya)


ಪ್ರತಿ ಬಾರಿಯಂತೆ ಈ ಸಲವೂ ವಿಸ್ಮಯ ಪ್ರತಿಷ್ಠಾನದ ಕಛೇರಿಯಲ್ಲಿ ಬೆಳಗಿನ ಉಪಹಾರ ಸೇವಿಸಿ , ಎಲ್ಲರ ಪರಿಚಯ ಕಾರ್ಯಕ್ರಮದ ನಂತರ ನಮಗಾಗಿ ಕಾದಿದ್ದ ಜೀಪಿನಲ್ಲಿ 'ಖಾನ್ ಹೊರಟ್ಟಿ'ಯ ತನಕ ಸಾಗಿದೆವು . ಈ ಖಾನ್ ಹೊರಟ್ಟಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಅತೀ ಕಡಿಮೆ ಮತದಾರರು(ಸುಮಾರು ೪೦-೫೦)   ಮತಗಟ್ಟೆ ಕೇಂದ್ರ . ಕೊಟ್ಟಿಗೆಹಾರ ದಿಂದ ಚಾರ್ಮಾಡಿ ಘಾಟ್ ಕಡೆಗೆ ಸುಮಾರು ೫-೬ ಕಿ. ಮೀ ಹೋದ ನಂತರ ಬಲಕ್ಕೆ ತಿರುಗಿ ಈ ಜಾಗವನ್ನು ತಲುಪಬೇಕು . ಈ ಹಟ್ಟಿಯು  ನಮ್ಮ ಚಾರಣದ ಬೇಸ್ ಕ್ಯಾಂಪ್ . ಅಲ್ಲಿಂದ ಸುಮಾರು ೪೫ ಸದಸ್ಯರಿದ್ದ ನಮ್ಮ ಚಾರಣದ ಗುಂಪು ಬಿದಿರುತಳದ ಕಡೆಗೆ ನಮ್ಮ ಮಾರ್ಗದರ್ಶಕರಾಗಿದ್ದ ಅರ್ಜುನರ ಅಣತಿಯಂತೆ  ಸಾಗಿತು. ಬೆಳಗ್ಗೆ ಸುಮಾರು ೯:೩೦ ಕ್ಕೆ ಶುರುವಾದ ಚಾರಣ ಮಧ್ಯಾಹ್ನ ೧೨:೩೦ರ ವೇಳೆಗೆ ಬಿದಿರುತಳ ತಲುಪಿದೆವು . 
ಬಿದಿರುತಳದ ಬಳಿಯ ಝರಿ 


ಈ ಬಿರು ಬೇಸಿಗೆಯಲ್ಲೂ ಕೂಡ ಹಲವಾರು ಬಗೆಯ ಹೂವುಗಳ ಸೊಬಗು ಕಂಡಿದ್ದು ಆಶ್ಚರ್ಯವೇ ಅಲ್ಲದೆ ಪರಿಸರದ ಆಟವೂ ಎನ್ನಬಹುದು . ಸುಮಾರು ೩ ರೀತಿಯ ಕಾಡು ಮಲ್ಲಿಗೆ ಹೂವುಗಳು ನಮಗೆ ದರ್ಶನ ನೀಡಿದವು. ಅಷ್ಟೇ ಅಲ್ಲದೆ ಕೆಲವು ಹಣ್ಣುಗಳು ರುಚಿ ನೋಡಲು ಸಿಕ್ಕಿದವು . ಮುಖ್ಯವಾಗಿ ಚಟ್ಟೆ ಹಣ್ಣು , ಕೆಲವು ಕಡೆ ಇದನ್ನು ಮುಳ್ಳು ಹಣ್ಣು ಎಂದೂ ಕರೆಯುತ್ತಾರೆ .. 

ಚಾರಣದ ಹಾದಿಯಲ್ಲಿ 

ಚಾರಣದ ಹಾದಿಯಲ್ಲಿ 

ಚಟ್ಟೆ ಹಣ್ಣು 



Yellow Beauty
ಚಟ್ಟೆ ಹಣ್ಣು 

ಈ ಬಿದಿರುತಳ ಗ್ರಾಮದಲ್ಲಿ ಸುಮಾರು ೭-೮ ಕುಟುಂಬ ವಾಸವಾಗಿವೆ .  ಈ ಗ್ರಾಮವು ಕಾಡಿನ ಮಧ್ಯೆ ಇರುವುದರಿಂದ ಕಾಡು ಪ್ರಾಣಿಗಳ ಉಪಟಳ ಸ್ವಲ್ಪ ಜಾಸ್ತಿಯೇ ಇದೆ ..  ಒಂದು ರೀತಿಯ ಕಾಡು ಬೆಕ್ಕು ಈ ಮನೆಗಳಲ್ಲಿ ಸಾಕಿರುವ ಕೋಳಿ ಹುಂಜಗಳನ್ನು ಆಗಾಗೆ ಹೊತ್ತೊಯ್ಯುತ್ತದೆ .. ಆದರಿಂದ ಕೋಳಿಗಳನ್ನುಅವು ಹೊತ್ತೊಯ್ಯದಂತೆ  ಕೂಡಿ ಹಾಕಲು ಕೆಳಗಿನ ರೀತಿಯ ಕೊಲಿಮನೆಗಳನ್ನು ಎಲ್ಲಾ ಮನೆಯ ಮುಂದೆ ಕಾಣಬಹುದು .. ಅಲ್ಲಿ ಎರಡು ಸಣ್ಣ ಗುಡ್ಡಗಳ ನಡುವೆ ಒಂದು ಸಣ್ಣ ಝರಿಯಲ್ಲಿ ಶುಭ್ರ ನೀರು  ಹರಿಯುತ್ತಿತ್ತು ..  ಅಲ್ಲೇ ಕೂತು ,ನಮ್ಮ ಊಟವನ್ನು ಮುಗಿಸಿದೆವು . ಬೆಳಗ್ಗೆ ಚಾರಣ ಹೊರಡುವ ಮೊದಲೇ ನಮಗಾಗಿ ಊಟದ ಪೊಟ್ಟಣವನ್ನು ಕೊಟ್ಟಿದ್ದರು . ಸ್ವಲ್ಪ ಹೊತ್ತು ವಿರಾಮದ ನಂತರ ನಮ್ಮ ಉದ್ದಿಷ್ಟ ಸ್ಥಳವಾದ ಕೊಡೈ ಕಲ್ಲಿನೆಡೆಗೆ ಸಾಗಿತು . ಇದನ್ನು ಕೆಲವರು,ದೂರಕ್ಕೆ ಕೊಡೆಯ ರೀತಿ ಕಾಣುವುದರಿಂದ  ಕೊಡೆಕಲ್ಲು ಎಂದು ಕರೆಯುತ್ತಾರೆ ಎಂದೂ , ಇನ್ನು ಕೆಲವರು  ಇದು ಚಿಕ್ಕಮಗಳೂರು ಜಿಲ್ಲೆಯ ಅಂಚು ಆಗಿದ್ದು ,ಈ ಗುಡ್ಡದ ಕೆಳಗೆ ಇಳಿದರೆ ದಕ್ಷಿಣ ಕನ್ನಡ ಜಿಲ್ಲೆಯ ಸರಹದ್ದು ಶುರುವಾಗುವುದರಿಂದ ಇದನ್ನು ಕಡೆಕಲ್ಲು ಎಂದೂ ಕರೆಯುತ್ತಾರೆ ಎಂದು ಹೇಳಿದರು . 


ಕೊಡೆಕಲ್ಲು ಅಥವ ಛತ್ರಿ ಕಲ್ಲು 

ಈ ಕಲ್ಲಿನ ಬಳಿ ಸ್ವಲ್ಪ ವಿಶ್ರಾಮ ಮಾಡಿದ ನಂತರ ಮುಂದೆ ಸಾಗಿ ಚಾರ್ಮಾಡಿ ಘಾಟಿನ ಮುಖ್ಯ ರಸ್ತೆಯನ್ನು ಸಂಜೆ ೫:೩೦ ರ ವೇಳೆಗೆ ತಲುಪಿದೆವು .ಅಲ್ಲಿಗೆ ಸುಮಾರು ೧೪ ಕಿ. ಮೀ ನ ನಮ್ಮ ಚಾರಣ ಕೊನೆಗೊಂಡಿತ್ತು . ಮತ್ತೆ ಅಲ್ಲಿಂದ ನಮಗಾಗಿ ಕಾದಿದ್ದ ವಾಹನದಲ್ಲಿ ವಿಸ್ಮಯ ಪ್ರತಿಷ್ಠಾನದ ಕಛೇರಿಯನ್ನು ತಲುಪಿ , ಕಾಫಿ ಸೇವಿಸಿ ನಮ್ಮ ನಮ್ಮ ಊರಿನ ಕಡೆಗೆ ಹೊರಟೆವು .  

ಚಾರಣದ ಇನ್ನೊಂದು ವಿಶೇಷ ಅಂದರೆ ನಮ್ಮ ಧ್ಯೇಯ ಪರಿಸರವನ್ನುಹಾಳು ಮಾಡದೆ ಸ್ವಚ್ಚವಾಗಿಟ್ಟು ಪರಿಸರದ ಸೊಬಗನ್ನು ಸವಿಯುವುದು .. ಆಗಾಗಿ ಯಾರೂ ಕೂಡ ಯಾವುದೇ ರೀತಿಯ ಪ್ಲಾಸ್ಟಿಕ್ ಬಾಟಲ್ ಆಗಲಿ ಪ್ಲಾಸ್ಟಿಕ್ ವಸ್ತುಗಳನ್ನು ಕಾಡಿನ ಮಧ್ಯೆ ಬಿಸಾಡದೆ ಅದನ್ನು ಹಾಗೆ ಪುನಃ ತಂದಿದ್ದು . ಇದಕ್ಕೆ ಪ್ರತಿಯೊಬ್ಬ ಚಾರಣಿಗರೂ ಕೂಡ ಸಹಕರಿಸಿದರು 
ನಿರ್ಮಾಣ ಅಂತದಲ್ಲಿರುವ ವಿಸ್ಮಯ ಪ್ರತಿಷ್ಠಾನದ ನೂತನ ಕಟ್ಟಡ 


ಬರುವಾಗ ನಿರ್ಮಾಣ ಅಂತದಲ್ಲಿರುವ ವಿಸ್ಮಯ ಪ್ರತಿಷ್ಟಾನದ ನೂತನ ಕಚೇರಿಯ ಬಳಿ ಹೋಗಿ ಬಂದೆವು . ಇದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ನಿರ್ಮಾಣ ಆಗುತ್ತಿದ್ದು , ತೇಜಸ್ವಿ ಅವರ ಕುರಿತು ಸಂಶೋಧನೆಗೆ ಮೀಸಲಿಡಲಾಗುತ್ತದೆ. ಈಗ ಕೊಟ್ಟಿಗೆಹಾರದಲ್ಲಿರುವ ಇರುವ ಕಚೇರಿಯು ಅಲ್ಲಿನ Inspection Bungalow ಆಗಿದ್ದು ತಾತ್ಕಾಲಿಕವಾಗಿ ಅಲ್ಲಿ ಕಾರ್ಯ ನಿರ್ವಹಿಸುತ್ತಿದೆ . ಹಾಗಾಗಿ ಈ ಸಂಶೋಧನಾ ಕೇಂದ್ರಕ್ಕೆ ಸ್ವಂತ ಕಟ್ಟಡದ ಅವಶ್ಯಕತೆಯಿದ್ದು ಅದನ್ನು ಮಂಜೂರು ಮಾಡಿದ್ದು ನಿರ್ಮಾಣ ಅಂತದಲ್ಲಿದೆ . ಇಲ್ಲಿ ತೇಜಸ್ವಿ ಅವರು ಬಿಡಿಸಿರುವ ವರ್ಣ  ಚಿತ್ರಗಳು  ಮತ್ತು ಛಾಯಾಚಿತ್ರಗಳ ಪ್ರದರ್ಶನ ಇರುತ್ತದೆ ಮತ್ತು ಅವರ ಮತ್ತು ಪಶ್ಚಿಮ ಘಟ್ಟದ ಕುರಿತು ಅಧ್ಯಯನ ಮತ್ತು ಸಂಶೋಧನೆ ಮಾಡುವ ವಿಧ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ ಎಂಬ ಮಾಹಿತಿ ದೊರಕಿತು 


ಸೂರ್ಯಾಸ್ತ 

     

Wednesday, December 31, 2014

ಬಲ್ಲಾಳರಾಯನದುರ್ಗ

ಡಿಸೆಂಬರ್ ೨೮ ರಂದು  "ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜೀವ ವೈವಿಧ್ಯ ಸಂಶೋಧನಾ ಕೇಂದ್ರ ಮತ್ತು ವಿಸ್ಮಯ ಪ್ರತಿಷ್ಠಾನ,ಕೊಟ್ಟಿಗೆಹಾರ" ಸಂಸ್ಥೆಯು ಒಂದು ದಿನದ ಚಾರಣ ಕಾರ್ಯಕ್ರಮವನ್ನು ಮೂಡಿಗೆರೆ ತಾಲ್ಲೂಕಿನ ಬಲ್ಲಾಳರಾಯನದುರ್ಗ ಕೋಟೆಗೆ ಹಮ್ಮಿಕೊಂಡಿತ್ತು . ಈ ಚಾರಣ ಕಾರ್ಯಕ್ರಮಕ್ಕೆ ನಾಡಿನ ವಿವಿದೆಡೆಯಿಂದ ಚಾರಣ ಪ್ರಿಯರು,ಪರಿಸರ ಪ್ರಿಯರು,ಛಾಯಾಗ್ರಾಹಕರು,ವಿಸ್ಮಯ ಪ್ರತಿಷ್ಠಾನದ ಸದಸ್ಯರು,ತೇಜಸ್ವಿ ಅವರ ಸ್ನೇಹಿತರು ಮತ್ತು ಒಡನಾಡಿಗಳು ಮತ್ತು ತೇಜಸ್ವಿ ಅವರ ಅಭಿಮಾನಿಗಳು ಭಾಗವಹಿಸಿದ್ದರು.. ಬಲ್ಲಾಳರಾಯನದುರ್ಗ ಕೋಟೆಯು ಹೊಯ್ಸಳರ ಒಬ್ಬ ಪಾಳೆಗಾರ ಎಂದು ತಿಳಿದು ಬರುತ್ತದೆ . ಆತ ಕಟ್ಟಿಸಿದ ಕೋಟೆ ಎಂಬ ಅಭಿಪ್ರಾಯ ಜನರಲ್ಲಿದೆ. ಇದು ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಂಚಿನಲ್ಲಿದೆ . 



ಬೆಳಗ್ಗೆ ವಿಸ್ಮಯ ಪ್ರತಿಷ್ಠಾನದ ಕಾರ್ಯಾಲಯದಲ್ಲಿ ತಿಂಡಿ ಸೇವಿಸಿ ಅಲ್ಲಿಂದ ನಮಗಾಗಿ ಕಾದಿದ್ದ ವಾಹನದಲ್ಲಿ ಸುಂಕಸಾಲೆ (ಹಿಂದೆ ಈ ಗ್ರಾಮವು ಸುಂಕ ವಸೂಲಿ ಮಾಡುವ ಕೇಂದ್ರವಾಗಿತ್ತು )ಗ್ರಾಮದ ಮೂಲಕ ದುರ್ಗದಹಳ್ಳಿಯ ತಪ್ಪಲನ್ನು ತಲುಪಿದೆವು .  ನಮ್ಮ ಚಾರಣ ಶುರುವಾಗುವುದು ಇಲ್ಲಿಂದ. ಇಲ್ಲಿ ಸ್ವಲ್ಪ ದೂರ ಸಾಗಿದ ನಂತರ ರಾಣಿ ಝರಿ ಕಾಣುತ್ತದೆ . ಪಾತಾಳದಂತೆ ಇರುವ ಈ ಜಾಗವನ್ನು ಬಹಳ ಜಾಗರೂಕತೆಯಿಂದ ನೆಲದ ಮೇಲೆ ಮಲಗಿ ನೋಡಬೇಕು . ನಂತರ ಕಾಡಿನ ಹಾದಿಯಲ್ಲಿ ನಡೆದು ಕೋಟೆಯನ್ನು ತಲುಪಬೇಕು . ಈಗ ಕೋಟೆಯ ಅವಶೇಷ ಮಾತ್ರ ಕಾಣ ಸಿಗುತ್ತದೆ . ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಕಾಣ ಸಿಗುವ ಬಹುತೇಕ ಕೋಟೆಗಳ ಪರಿಸ್ಥಿತಿ ಇದೆ ಆಗಿದೆ .  

ದೂರದಿಂದ ಕಂಡ ಕೋಟೆ 

ಕೋಟೆಗೆ ದಾರಿ

ಕೋಟೆಯ ಮತ್ತೊಂದು ಸುತ್ತನ್ನು ಕಾಣಬಹುದು 

View Point

ಬೆಂಗಳೂರಿನಿಂದ ಹೋಗಿದ್ದ ನಮ್ಮ ಸ್ನೇಹಿತರ  ತಂಡ  


ಈಗ ಆ ಕೋಟೆಯಲ್ಲಿ ಒಂದು ಗುಡಿಸಲು ಇದ್ದು , ಅಲ್ಲಿ ಲೋಕಪ್ಪ ಎಂಬ ಸ್ಥಳೀಯ ವ್ಯಕ್ತಿ ಇದ್ದರು . ಅವರು ಆ ಊರಿನ ಎಲ್ಲರ ದನಗಳನ್ನು ಮೇಯಿಸಿಕೊಂಡು ಅಲ್ಲೇ ಬಿಡಾರ ಹೂಡಿದ್ದಾರೆ . ಈ ಕಾಯಕ ಅವರ ಕುಟುಂಬಕ್ಕೆ ತಲೆತಲಾಂತರದಿಂದ ಬಂದಿರುವಂಥದ್ದು . ವಾರಕ್ಕೊಮ್ಮೆ ಬೆಟ್ಟದಿಂದ ಕೆಳಗೆ ಇಳಿದು ವಾರಕ್ಕೆ ಬೇಕಾದ ಅಡುಗೆ ಸಾಮಾನುಗಳನ್ನೆಲ್ಲ ಕೊಂಡೊಯ್ಯುತ್ತಾರೆ . ಪ್ರತಿ ವರ್ಷ ಮಳೆಗಾಲ ಮುಗಿದ ಮೇಲೆ ಸುಮಾರು ೩-೪ ತಿಂಗಳು ಅವರು ಅಲ್ಲೇ ವಾಸಿಸುತ್ತಾರೆ . ಕೋಟೆಯಿಂದ ಸ್ವಲ್ಪ ಕೆಳಗಿಳಿದರೆ ಅಲ್ಲಿ ಒಂದು ಸಣ್ಣ ಕೆರೆ ಇದೆ, ಅಲ್ಲಿಂದಲೇ ಅವರು ನೀರನ್ನು ಹೊತ್ತೊಯ್ದು ಬಳಸಬೇಕು . ಅವರೊಡನೆ ಮಾತಿಗಿಳಿದಾಗ ಅಲ್ಲಿ ಹುಲಿ ಕಾಟ ಇದ್ದು ,ಕೆಲವು ಹಸುಗಳು ರಾತ್ರೋ ರಾತ್ರಿ ಮಾಯ ಆಗಿರುತ್ತವೆ ಮತ್ತು ಕೆಲವು ಸಲ ದಕ್ಷಿಣ ಕನ್ನಡ ಜೆಲ್ಲೆಯಿಂದ  ಕೆಲವರು ಬಂದು ಕದ್ದೊಯ್ಯುತ್ತಾರೆ ಎಂದು ಹೇಳಿದರು . 
ಕೋಟೆಯ ಒಳಗೆ ಇರುವ ಗುಡಿಸಲು , ಅದರ ಮುಂದೆ ಲೋಕಪ್ಪ ಮತ್ತು ಇನ್ನೋರ್ವ ಸ್ಥಳೀಯ 

ಗುಡಿಸಲಿನಲ್ಲಿದ್ದ ಒಳಕಲ್ಲು 


ಕೋಟೆಯಿಂದ ಇಳಿದುಬಂದ ದಾರಿಯಲ್ಲಿ ಇಳಿಯದೆ ಇನ್ನೊಂದು ದಿಕ್ಕಿನಲ್ಲಿ ಇಲಿಯ ತೊಡಗಿದೆವು . ಅಲ್ಲಿ ಒಂದು ಸಣ್ಣ ಕೆರೆ ಇದ್ದು,  ಆ ಕೆರೆಯ ದಡದಿಂದ ಕಾಡು ಶುರು ಆಗಲಿದ್ದು , ಅಲ್ಲಿ ಅದರ ಚಿಹ್ನೆ ಯಂತೆ ಅಲ್ಲಿ ೩-೪ ಕಲ್ಲುಗಳನ್ನು ಜೋಡಿಸಿದ್ದರು ,ಹಿಂದಿನ ಕಾಲದಲ್ಲಿ ಕಾಡಿಗೆ ಬೇಟೆ ಆಡಲು ಹೋಗುತ್ತಿದ್ದವರು ಆ ಕಲ್ಲಿಗೆ ಪೂಜೆ ಸಲ್ಲಿಸಿ ಅದಕ್ಕೆ ಬಲಿಯನ್ನು ಅರ್ಪಿಸಿ ಕಾಡನ್ನು ಪ್ರವೇಶಿಸುತ್ತಿದರು ಎಂಬ ನಂಬಿಕೆ . ಅಲ್ಲಿಂದ ಸ್ವಲ್ಪ ಮುಂದೆ ಹೋದ ಬಳಿಕೆ ಅಲ್ಲಿ ಒಂದು ರಾಕ್ಷಸಿ ಕಲ್ಲು ಇತ್ತು  .(ಕೆಲವರು ಇದು ಆ ಪಾಳೆಗಾರನ ಹೆಂಡತಿಯ ಸಮಾಧಿ ಸ್ಥಳವೆಂದು ಇನ್ನು ಕೆಲವರು  ಇಲ್ಲಿ ಕಾಡಿನ ದೇವಿಯನ್ನು ಪ್ರತಿಷ್ಠಾಪಿಸಿದ್ದಾರೆ ಮತ್ತು ಇಲ್ಲಿ ಹಿಂದೆ ಬಲಿ ಕೊಡುತ್ತಿದ್ದರು ಎಂದು ವರ್ಣಿಸಿದರು )

ಕಾಡಿನ ಗಡಿ ಎಂದು ಸೂಚಿಸುವ ಕಲ್ಲು 

ರಾಕ್ಷಸ ಕಲ್ಲು 




ಅಲ್ಲಿಂದ  ಮುಂದೆ ಸಾಗಿ ಅಲ್ಲಿದ್ದ ಒಂದು ಸಣ್ಣ ಝರಿಯ ಬಳಿ ಎಲ್ಲರೂ ಊಟ ಮುಗಿಸಿಕೊಂಡೆವು . (ಊಟದ ಪೊಟ್ಟಣವನ್ನು ಬೆಳಗ್ಗೆಯೇ ಎಲ್ಲರಿಗೂ ವಿತರಿಸಲಾಗಿತ್ತು ). ೧೦-೧೫ ನಿಮಿಷದ ವಿಶ್ರಾಂತಿಯ ಬಳಿಕ ಮುಂದೆ ಸಾಗಿದೆವು . ಅಲ್ಲಿ ನಮಗೆ ಅಚಾನಕ್ ಆಗಿ ಒಂದು ಕಾಡು ಮೊಲ ಕಂಡಿದ್ದೆ ನಮ್ಮ ದಿನದ ಸಾರ್ಥಕ ಎನ್ನಬಹುದು .  ಆ ಕಾಡಿನಲ್ಲಿ ಸ್ವಲ್ಪ ಮುಂದೆ ಹೋದಾಗ ನಮಗೆ ಕಂಡಿದ್ದು ಕೋಟೆಯ ಹೆಬ್ಬಾಗಿಲು . ಆ ಹೆಬ್ಬಾಗಿಲಿನ ಎರಡೂ ಬದಿಯಲ್ಲಿ ಕೆಲವು ಕೆತ್ತನೆಗಳು ಇದ್ದದ್ದು ಕಂಡು ಪಾಳೆಗಾರರು  ಕೂಡ ಶಿಲ್ಪಕಲೆಗೆ ಬೆಲೆ ಕೊಡುತ್ತಿದ್ದರು ಎಂದು ತಿಳಿಯಬಹುದು . ಅಲ್ಲಿಂದ ಕಡಿದಾದ ದಾರಿಯಲ್ಲಿ ಕೆಳಗೆ ಇಳಿಯುವಾಗ ಕೋಟೆಯ ಮತ್ತಷ್ಟು ಅವಶೇಷಗಳು ಕಂಡವು . 
ಕಾಡಿನ ಮಧ್ಯೆ ಇರುವ ಹೆಬ್ಬಾಗಿಲು 

ಕಾಡಿನ ಮಧ್ಯೆ ಇರುವ ಹೆಬ್ಬಾಗಿಲು 


ಹೆಬ್ಬಾಗಿಲಿನ ಬದಿಯಲ್ಲಿರುವ ಗಣಪನ ಕೆತ್ತನೆ 

ಹೆಬ್ಬಾಗಿಲಿನಲ್ಲಿರುವಮತ್ತೊಂದು ಕೆತ್ತನೆ 



ನಂತರ ನಮಗಾಗಿ ಕಾದಿದ್ದ ವಾಹನಗಳಲ್ಲಿ ಮತ್ತೆ ಕೊಟ್ಟಿಗೆಹಾರದ ಕಡೆಗೆ ಹೊರಟೆವು . ಹಿಂದಿರುವಾಗ ಕೆಳಗೂರು(ಕೊಟ್ಟಿಗೆಹಾರದಿಂದ ಹೊರನಾಡು ಹೋಗುವ ದಾರಿಯಲ್ಲಿ ಈಗ್ರಾಮ ಇದೆ.ಇಲ್ಲಿ ಸಾಕಷ್ಟು ಟೀ ಎಸ್ಟೇಟ್ ಗಳು ಇವೆ ) ಎಂಬ ಉರಿನಲ್ಲಿ ಚಹಾ ಸೇವಿಸಿ ಅಲ್ಲಿಂದ ಹೊರಟು ಹೇಮಾವತಿ ನದಿಯ ಉಗಮ ಸ್ಥಾನಕ್ಕೆ ಹೊರಟೆವು

ಹೇಮಾವತಿ ನದಿಯ ಉಗಮ ಸ್ಥಾನ 



ಪಕ್ಕದಲ್ಲೇ ಇರುವ ಗಣಪತಿ ದೇವಸ್ಥಾನ 


ಹೇಮಾವತಿ ನದಿಯ ಉಗಮ ಸ್ಥಾನ ನೋಡಿದ ನಂತರ ಅಲ್ಲೇ ಇರುವ ಗಣಪತಿ ದೇವಸ್ಥಾನವನ್ನು ಪ್ರದಕ್ಷಿಣೆ ಹಾಕಿ  ಹೊರಟು  ಸಂಜೆಯ ಹೊತ್ತಿಗೆ ಕೊಟ್ಟಿಗೆಹಾರ ತಲುಪಿ ನಮ್ಮ ನಮ್ಮ ಊರಿನ ಕಡೆ ಹೊರಟು  ಬಂದೆವು . 

Friday, December 26, 2014

ಆಗಾಗ ಬಿದ್ದ ಹನಿಗಳು !!!

೧. ತಿಳಿನೀರಿಗೆ ಕಲ್ಲೆಸೆದು ಮೂಡಿದ ನೂರೆಂಟು ಬಿಂಬಗಳೆಂಬ
   'ನಾನು'ಗಳಲ್ಲೇ ಹುಡುಕುತ್ತಿಹೆನು ನಾನು ನನ್ನನು.. 

೨. ಮುಟ್ಟಿದರೆ ಮುದುಡುವ ನಾಚಿಕೆ ಗಿಡ ,
   ಮುತ್ತಿಟ್ಟರೆ ಅರಳುವ ಅವಳ ತುಟಿ ,
  ನಾಚಿದ ಬಳ್ಳಿಯಂತೆ ಮುದುಡುವುದವಳ ಕಣ್ಣ ರೆಪ್ಪೆ !!!

೩. ಅಲೆಯೊಂದು ಸೃಷ್ಟಿಯಾಯಿತು ನನ್ನೆದೆಯ ಬಡಿತಕ್ಕೆ,
   ಮತ್ತೊಂದು ಅಲೆ ಸೃಷ್ಟಿಯಾಯಿತು ಅವಳ ಗೆಜ್ಜೆ ಸದ್ದಿಗೆ ,
  ಎದೆಯ ಬಳಿ ಅವಳು ಹೆಜ್ಜೆ ಇಟ್ಟಾಗ 
  ಮಿಲನವಾದವು ಎರಡೂ ಅಲೆಗಳು ..
  ಸೃಷ್ಟಿಯಾಯಿತೊಂದು ಹೊಸ ಸ್ವರ...ನನ್ನೆದೆಯ ವೀಣೆಯಿಂದ.... 
  ಪದವೊಂದು ಹೊರಹೊಮ್ಮಿತು ಅವಳ ಮೃದು ಕಂಠದಿಂದ ...

೪. ನಿನ್ನ ಪ್ರೀತಿಗೆ ನನ್ನ ಸಿಹಿ ಮುತ್ತುಗಳೇ ಸುಂಕ ಗೆಳತಿ ,
    ಮುತ್ತಲ್ಲದೆ ಬೇರೇನೂ ಕೇಳಬೇಡ.. 

೫.. ಕಣ್ತುಂಬ ಕನಸುಗಳನ್ನು ಬಿತ್ತಿ ,
    ಕಣ್ಣಂಚಲೇ ಮರೆಯಾದವಳು .
   ನೆನಪುಗಳು ಅಳಿಯುವ ಮುನ್ನವೇ 
   ಹಳೆ ಕನಸುಗಳಿಗೆ ಹೊಸ ಬಣ್ಣ ಹಚ್ಚುತ್ತಿಹಳು..  

೬. ನನ್ನೆದೆಯ ವೀಣೆಯ ಸ್ವರಕ್ಕೆ ನುಡಿಯಾದವಳು ,
    ಕಣ್ಮುಚ್ಚಿ ಮಲಗಿದರೂ ಕಣ್ಣೊಳಗಿನ ಬಿಂಬವಾಗಿ ಕಾಡುತ್ತಿಹಳು.. 

೭. ಚಳಿಗೆ ಕನಸುಗಳೂ ಹೆಪ್ಪುಗಟ್ಟು ತ್ತಿವೆ ಗೆಳತಿ ,
    ನೀನಾದರೂ ಇರಬಾರದೇ ಸನಿಹ ?
   ಬೆಚ್ಚಗೆ ಅಪ್ಪಿಕೊಳ್ಳಲು , ಬಿಸಿ ಮುತ್ತೊಂದ ನೀಡಲು..