Monday, January 30, 2017

Sandakphu - Himalayan Tekking Expedition

ಬಹಳ ದಿನದಿಂದ ಹಿಮಾಲಯಕ್ಕೆ ಚಾರಣ ಹೋಗಬೇಕೆಂಬ ಬಯಕೆ ಇತ್ತು. ಸಮಯ ಕೂಡಿ ಬಂದಿರಲಿಲ್ಲ. ಹೀಗೆ ಕೆಲವು ದಿನಗಳ ಹಿಂದೆ ಪ್ರಶಸ್ತಿಯ ಜೊತೆ ಮಾತನಾಡುವಾಗ . ಈ ವರ್ಷದ ಕೊನೆಯಲ್ಲಿ ಏನೇ ಆದರೂ ಹಿಮಾಲಯ ಚಾರಣಕ್ಕೆ ಹೋಗಬೇಕೆಂದಿದ್ದೇನೆ ಎಂದಾಗ,ಅವನು ಕೂಡ ಹೋಗಬೇಕು ಅಂದ. ಕೆಲವೇ ದಿನಗಳಲ್ಲಿ ಅವನ ಸ್ನೇಹಿತರು ಕೂಡ ಚಾರಣಕ್ಕೆ ಹೋಗುತ್ತಿರುವುದಾಗಿ ಹೇಳಿ,ನನ್ನನ್ನು ಅವರ ಜೊತೆ ಸೇರಿಸಿಕೊಂಡು ಚಾರಣದ ಸ್ಥಳವನ್ನು ಸಂದಾಕ್ಫು (Sandakphu )  ಹಾಗು ಹೊರಡುವ ದಿನವನ್ನು ನಿಗದಿ ಪಡಿಸಿ ಆಯಿತು. ಪಶ್ಚಿಮ ಘಟ್ಟಗಳಲ್ಲಿ ಬಹಳಷ್ಟು ಚಾರಣ ಮಾಡಿದ್ದರೂ ಹಿಮಾಲಯದ ಚಾರಣದ ಬಗ್ಗೆ ಕುತೂಹಲ ಇಮ್ಮಡಿಯಾಗಿತ್ತು . ನಮ್ಮ ಚಾರಣ ಚಳಿಗಾಲದಲ್ಲಿ ಇದ್ದಿದ್ದರಿಂದ ಹಿಮಪಾತ ಆಗಬಹುದೆಂಬ ನಿರೀಕ್ಷೆ, ಹವಾಮಾನ ವೈಪರೀತ್ಯ ಹೀಗೆ ಬಹಳಷ್ಟು ಕುತೂಹಲಗಳು . ಹೊರಡಲು ಇನ್ನೇನು ಕೆಲವು ದಿನಗಳು ಇವೆ ಅನ್ನುವಷ್ಟರಲ್ಲಿ ಹಿಮಾಲಯದ ಹವಾಮಾನಕ್ಕೆ ಅನುಗುಣವಾಗಿ ಬಟ್ಟೆ ಬರೆಗಳು, ಚಾರಣಕ್ಕೆ ಅವಶ್ಯಕ ವಸ್ತುಗಳನ್ನು ಖರೀದಿ ಮಾಡಿದ್ದಾಯ್ತು . ದಿನ ಸಮೀಪಿಸಿದಂತೆ ಕುತೂಹಲ ಹೆಚ್ಚಾಗುತ್ತಾ ಹೋಯಿತು . 

ನಾವು ಚಾರಣಕ್ಕೆ ಹೊರಟಿದ್ದ ಸ್ಥಳದ ಬಗ್ಗೆ ಕಿರು ಮಾಹಿತಿಯನ್ನು ಕೊಟ್ಟು ಮುಂದುವರೆಯುತ್ತೇನೆ . 
Sandakphu , ಪಶ್ಚಿಮ ಬಂಗಾಳದ ಅತಿ ಎತ್ತರದ ಪ್ರದೇಶ . ಇದು ಸಿಗ್ನಲಿಯಾ (Singalia National Park) ವನ್ಯಜೀವಿ ಅಭಯಾರಣ್ಯ ಪ್ರದೇಶಕ್ಕೆ ಒಳಪಡುತ್ತದೆ ಮತ್ತು ಡಾರ್ಜೀಲಿಂಗ್ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದೆ. ಅಲ್ಲದೆ ಇದು ಪಶ್ಚಿಮ ಬಂಗಾಳ ಮತ್ತು ನೇಪಾಳದ ಗಡಿಯಲ್ಲಿ ಬರುವಂತಹ ಶಿಖರ. ಇದು ಸಮುದ್ರ ಮಟ್ಟದಿಂದ ೩೬೩೬ ಮೀಟರ್ (೧೧೯೪೧ ಅಡಿ) ಎತ್ತರದ್ಲಲಿರುವ ಶೃಂಗ ಪ್ರದೇಶ . ಇಲ್ಲಿಂದ ಕಾಂಚನಜುಂಗಾ ಮತ್ತು ಎವರೆಸ್ಟ್ ಪರ್ವತಗಳನ್ನು ಕಾಣಬಹುದು. ಇಂಥ ಒಂದು ಕುತೂಹಲಕಾರಿ ಶಿಖರ ಏರಲು ನಾವು ಹವಣಿಸುತ್ತಿದ್ದೆವು. 

ಬೆಂಗಳೂರಿನಿಂದ ಕೋಲ್ಕತ್ತಾಗೆ ನಮ್ಮ ಪ್ರಯಾಣ ಶುರು ಆಗಿದ್ದು ಡಿಸೆಂಬರ್ ೧೬, ೨೦೧೬. ಬೆಂಗಳೂರಿನಿಂದ ನಾವು ಒಟ್ಟು ನಾಲ್ಕು ಜನದ ತಂಡ ಹೊರಟಿದ್ದು . ಬನಶಂಕರಿ ಅಲ್ಲಿ ಶೈಲೇಶನನ್ನ ಭೇಟಿ ಆಗಿ, ಅಲ್ಲಿಂದ ಇಬ್ಬರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೊರಟೆವು . ನಾವು ಅಲ್ಲಿ ತಲುಪುವ ವೇಳೆಗೆ ಪ್ರಶಸ್ತಿ ಮತ್ತು ಹರೀಶ್ ಬಂದು ನಮಗಾಗಿ ಕಾಯುತ್ತಿದ್ದರು . ಶೈಲೇಶ್ ಮತ್ತು ಹರೀಶ್ ಇಬ್ಬರನ್ನು ನಾನು ಭೇಟಿ ಆಗಿದ್ದು ಇದೆ ಮೊದಲು . ಹರೀಶ್ ನಮ್ಮ ಗುಂಪಿನ ಆಯೋಜಕ ಮತ್ತು ಖಜಾಂಚಿ. 

Arrival at Kolkata Airport.

ಬೆಂಗಳೂರಿನಿಂದ ಹೊರಟ ವಿಮಾನ ಕೋಲ್ಕತ್ತಾ ತಲುಪಿದ್ದು ಮಧ್ಯಾಹ್ನ ೧೨:೪೫. ಅಲ್ಲಿಂದ ಸಿಲಿಗುರಿಗೆ ನಮ್ಮ ರೈಲು ಇದ್ದಿದ್ದು ರಾತ್ರಿ ೧೧ಕ್ಕೆ, ಆಗಾಗಿ ನಮ್ಮ ಗಂಟುಮೂಟೆಯನ್ನು ರೈಲ್ವೆ ಸ್ಟೇಷನ್ನಿನಲ್ಲಿ ಇಟ್ಟು ಕೋಲ್ಕತ್ತಾ ನಗರ ಸುತ್ತಲು ಹೊರಟೆವು.  Sealdah ರೈಲು ನಿಲ್ದಾಣದಿಂದ ನಾವು ಸೀದಾ ದಕ್ಷಿಣೇಶ್ವರಕ್ಕೆ ಹೊರಟೆವು . ದಕ್ಷಿಣೇಶ್ವರದಲ್ಲಿ ಕಾಳಿ ಮತ್ತು ಜ್ಯೋತಿರ್ಲಿಂಗಗಳ ದರ್ಶನ ಪಡೆದು ಪುನೀತರಾದೆವು . ಹೂಗ್ಲಿ ನದಿಯ ದಂಡೆಯಲ್ಲಿರುವ ಕಾಳಿ ಮಂದಿರದಿಂದ ನಮ್ಮ ಪ್ರಯಾಣ ಬೇಲೂರು ಮಠಕ್ಕೆ ದೋಣಿಯಲ್ಲಿ ಸಾಗಿತು. ದಕ್ಷಿಣೇಶ್ವರದಿಂದ ಬೇಲೂರು ಮಠಕ್ಕೆ ಹೋಗುವಾಗ ವಿವೇಕಾನಂದ ಸೇತುವಿನ ಕೆಳಗೆ ಹೋಗಬೇಕು, ಹೂಗ್ಲಿ ನದಿಯ ಮೇಲಿರುವ ಈ ಸೇತುವೆಯನ್ನು Willingdon Bridge ಮತ್ತು Bally Bridge ಎಂದೂ ಕರೆಯುತ್ತಾರೆ.  ಸಂಜೆ ೪:೩೦ ರ್ ಸುಮಾರಿಗೆ ಹೂಗ್ಲಿ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ನಮ್ಮ ಪ್ರಯಾಣ ಶುರು ಆಯಿತು, ಅದಾಗಲೇ ಕೋಲ್ಕತಾದಲ್ಲಿ ಸೂರ್ಯಾಸ್ತದ  ಸಮಯವೂ ಆಗಿತ್ತು. ಹೂಗ್ಲಿ ನದಿಯಲ್ಲಿ ಸೂರ್ಯಾಸ್ತವನ್ನು ಕಂಡು ಬೇಲೂರು ಮಠ ತಲುಪುವ ವೇಳೆಗೆ ಅಲ್ಲಿ ದಿನ ನಿತ್ಯದಂತೆ  ಸಂಜೆ ಆರತಿ ಕಾರ್ಯಕ್ರಮ ಶುರು ಆಗಿತ್ತು. ಸಾವಿರಾರು ಜನರು ನೆರೆದಿದ್ದರೂ ಮನಸ್ಸಿಗೆ ಮುದ ನೀಡುವಷ್ಟು ಪ್ರಶಾಂತವಾದ ಸ್ಥಳ ಅದು. ಸ್ವತಃ ವಿವೇಕಾನಂದರೇ ಅಲ್ಲಿ ಇದ್ದಾರೆ ಎಂಬಂತಿತ್ತು ಆ ಪ್ರದೇಶ . ಮಠದ ಹೊರಗೆ paaprichat ತಿಂದು ಅಲ್ಲಿಂದ ಸೀದಾ howrah ಸೇತುವೆಯ ಕಡೆ ಹೊರಟೆವು . ಕೋಲ್ಕತ್ತಾದಲ್ಲಿ ಬಸ್ಸಿನ ದರ ನಮ್ಮ ಬೆಂಗಳೂರಿನ ಬಸ್ಸಿನ ದರಕ್ಕಿಂತ ಬಹಳ ಕಡಿಮೆ. ಬೇಲೂರು ಮಠದಿಂದ ಹೌರಾಗೆ ದೋಣಿಯಲ್ಲೇ ಹೋಗಬಹುದಾಗಿದ್ದರೂ ನಮ್ಮ ಸಮಯಕ್ಕೆ ಯಾವುದೇ ದೋಣಿ ಇರಲಿಲ್ಲ. ಆಗಾಗಿ ಅಲ್ಲಿಂದ ಬಸ್ಸಿನಲ್ಲಿ ಹೊರಟೆವು. ಈ ಪ್ರಯಾಣದಲ್ಲಿ ಕೆಲವು ಆಶ್ಚರ್ಯಕರವಾದ ಸಂಗತಿಗಳು ಗೋಚರಿಸಿದವು. ಬಾರಿನ ಮುಂದೆ ಯಾವುದೇ ನೂಕು ನುಗ್ಗಲಿಲ್ಲದೆ, ಸರದಿ ಸಾಲಿನಲ್ಲಿ ನಿಂತು ಜನರು ಸಾರಾಯಿಯನ್ನು ಕೊಳ್ಳುತ್ತಿದ್ದರು. ಬಹುಷ ಭಾರತದ ಯಾವುದೇ ನಗರದಲ್ಲಿ ಇಂತಹ ಒಂದು ಶಿಸ್ತು ಬಾರಿನಲ್ಲಿ ಕಾಣಲು ಸಾಧ್ಯವಿಲ್ಲ. ಹೌರಾ ಸೇತುವೆಯ ಮೇಲೆ ಒಂದು ದಡದಿಂದ ಇನ್ನೊಂದು ದಡಕ್ಕೆ ನೂಕು ನುಗ್ಗಲಿನಲ್ಲೇ ಬಂದಿದ್ದಾಯಿತು , ವೇಗವಾಗಿ ನಡೆಯುವ ಜನ ಒಂದು ಕಡೆ. ಆದರೆ ಪಾದಚಾರಿ ಮಾರ್ಗದಲ್ಲಿ ತರಕಾರಿ, ಹಣ್ಣು  ಇತ್ಯಾದಿಗಳನ್ನು ಮಾರುತ್ತಿರುವವರು ಒಂದು ಕಡೆ. ಆದರೆ ,ಗಂಗಾ ನದಿಯ ಸೇತುವೆಯ ಮೇಲೆ ನಡೆದಾಡಿದ ಆ ಒಂದು ಅನುಭವ ಮರೆಯಲಾಗದ್ದು. ಅಲ್ಲಿಂದ ಸೀದಾ ರೈಲ್ವೆ ಸ್ಟೇಷನ್ನಿಗೆ ಬಂದು ಅದರ ಸುತ್ತ ಇದ್ದ ಮಾರುಕಟ್ಟೆಯಲ್ಲಿ ಒಂದು ಪ್ರದಕ್ಷಿಣೆ ಹಾಕಿ ಹೊಟ್ಟೆಗೆ ಒಂದಷ್ಟು ತಂಪಾಗುವಂತೆ ಮಣ್ಣಿನ ಮಡಕೆಯಲ್ಲಿ ಲಸ್ಸಿ ಕುಡಿದು ನಮ್ಮ ರೈಲಿಗೆ ಕಾಯುತ್ತಾ ಕೂತೆವು . ಈ Sealdah ನಿಲ್ದಾಣದಲ್ಲಿ ಲೋಕಲ್ ರೈಲು ಮತ್ತು ಬೇರೆ ನಗರಗಳಿಗೆ ಹೋಗುವ ರೈಲುಗಳೂ ಇದ್ದಿದ್ದರಿಂದ ಜನ ಒಂದು ರೈಲಿನಿಂದ ಇಳಿದು ಇನ್ನೊಂದು ರೈಲನ್ನು ಹಿಡಿಯಲು ಹಿಂದೆ ಮುಂದೆ ನೋಡದೆ ಓಟದ ಸ್ಪರ್ಧೆಯಲ್ಲಿ ಓಡಿದಂತೆ ಹೋಗುತ್ತಿರುತ್ತಾರೆ. ಇಲ್ಲಿಂದ ರಾತ್ರಿ ೧೧ಕ್ಕೆ ನಮ್ಮ ಪ್ರಯಾಣ ಜಲಪೈಗುರಿಗೆ  (ಸಿಲಿಗುರಿಯ ಹತ್ತಿರ) ಹೊರಟಿತು. 

Dakshineshwar Kali temple on the banks of Hoogley river
Willingdon Bridge

Vivekananda Setu or Bally Bridge

Sunset at Hoogley river
Belur Math, Kolkata

Howrah Bridge

Market under Howrah bridge

ಬೆಳಗ್ಗೆ ಸುಮಾರು ೮ಕ್ಕೆ ಸಿಲಿಗುರಿ ತಲುಪಬೇಕಿದ್ದ ನಮ್ಮ ರೈಲು ೧೦ ಘಂಟೆಗೆ ಸಿಲಿಗುರಿ ತಲುಪಿತು . ಅಲ್ಲಿಂದ ಟ್ಯಾಕ್ಸಿಯಲ್ಲಿ ಡಾರ್ಜೀಲಿಂಗ್ ಕಡೆಗೆ ಹೊರಟೆವು. ಇಲ್ಲಿಂದ ನಮ್ಮ ಚಾರಣದ ವೇಳಾಪಟ್ಟಿ ಶುರು. 

ದಿನ ೧ :
ಡಾರ್ಜೀಲಿಂಗ್  ಎಂದ ಕೂಡಲೇ ನೆನಪಾಗುವುದು ಹಿಮ ಮತ್ತು ಅಲ್ಲಿನ  ರೈಲ್ವೆ. ನಾವು ಡಾರ್ಜೀಲಿಂಗ್ ತಲುಪುವ ವೇಳೆಗೆ ಮಧ್ಯಾಹ್ನ ೧ ಘಂಟೆ ಆಗಿತ್ತು . ನಮ್ಮ ಟ್ಯಾಕ್ಸಿ ಡಾರ್ಜೀಲಿಂಗ್ ನ ರೈಲು ನಿಲ್ದಾಣದ ಮುಂದೆಯೇ ನಿಂತಿತು. ಸಿಲಿಗುರಿ ಇಂದ ಡಾರ್ಜೀಲಿಂಗ್ ಬರುವಾಗ ದಾರಿ ಮಧ್ಯದಲ್ಲಿ ಬಹಳ ಕಡೆ ಈ ರೈಲ್ವೆ ಹಳಿಗಳನ್ನು ಕಂಡಿದ್ದೆವು . ಆ ಗುಡ್ಡಗಾಡು ಪ್ರದೇಶದಲ್ಲಿ ಇರುವ ಈ ರೈಲ್ವೆ ಸೇವೆಯು ಯುನೆಸ್ಕೋ ಪರಂಪರೆಯ ಪಟ್ಟಿಯಲ್ಲಿ ಕೂಡ ಸೇರಿದೆ. ಅಲ್ಲದೆ ಭಾರತದಲ್ಲಿ ಅತಿ ಎತ್ತರದ ಪ್ರದೇಶದಲ್ಲಿರುವ ರೈಲ್ವೆ ನಿಲ್ದಾಣ ಕೂಡ ಡಾರ್ಜೀಲಿಂಗ್ ಇಂದ ಸುಮಾರು ೮ ಕಿ.ಮೀ ದೂರದಲ್ಲಿರುವ ghoom ಎಂಬಲ್ಲಿದೆ. ಇದು ಡೀಸೆಲ್ ಮತ್ತು ಕಲ್ಲಿದ್ದಲಿನಿಂದ ಓಡುವ ರೈಲುಗಳು. 

Railway station at Darjeeling, This rail is also called as Toy Train

Workshop



ಅಲ್ಲಿಂದ ಸುಮಾರು ೫ ನಿಮಿಷದ ನಡಿಗೆಯಲ್ಲಿ ನಾವು ವರದಿ ಮಾಡಿಕೊಳ್ಳಬೇಕಾಗಿದ್ದ ನಮ್ಮ ಶಿಬಿರಕ್ಕೆ ಹೊರಟೆವು. ನಮ್ಮ ಹಡಪಗಳನ್ನು ಕಂಡ ಕೆಲವು ಸ್ಥಳೀಯರಿಗೆ ನಾವು ಚಾರಣಕ್ಕೆ ಬಂದಿರಬಹುದೆಂದು ಊಹಿಸಿ , ನಮ್ಮ ಶಿಬಿರದ ದಾರಿಯನ್ನು ತಿಳಿಸಿದರು. YHAI (Youth Hostel) ನ ಶಿಬಿರ ತಲುಪಿ ನಮಗಾಗಿ ಕೊಟ್ಟ ಕೋಣೆಯಲ್ಲಿ ನಮ್ಮ ಬ್ಯಾಗುಗಳನ್ನು ಇಟ್ಟು ,ಅಲ್ಲೇ ಊಟದ ವ್ಯವಸ್ಥೆ ಇದ್ದರೂ ಕೂಡ ನಾವು ಬೇರೆ ಕಡೆ ಊಟಕ್ಕೆ ಹೊರಟೆವು. ಅಲ್ಲಿನ ಸ್ಥಳೀಯ ಖಾದ್ಯಗಳನ್ನು ಸೇವಿಸುವುದು ನಮ್ಮ ಮೂಲ ಇಂಗಿತ. ಸುಮಾರು ಹೋಟೆಲುಗಳ ಬಗ್ಗೆ ಹುಡುಕಿ ಕೊನೆಗೆ ನಮ್ಮನ್ನು ಸೆಳೆದಿದ್ದು 'Kunga ' ಎಂಬ ಟಿಬೆಟಿಯನ್ ರೆಸ್ಟೋರೆಂಟ್. ಅಲ್ಲಿ ಊಟವಾದ ನಂತರ ಸೀದಾ ಜಪಾನೀಸ್ ದೇವಸ್ಥಾನಕ್ಕೆ ಹೊರಟೆವು . ಸುಮಾರು ೩ ಕಿ.ಮೀ ಆ ಏರಿಳಿತದ ಪ್ರದೇಶದಲ್ಲಿ ನಡೆದೇ ಹೋದೆವು. ಆ ಹವಾಮಾನಕ್ಕೆ ಮತ್ತು ಚಾರಣಕ್ಕೆ ನಮ್ಮ ದೇಹವನ್ನು ಒಗ್ಗಿಸುವುದಕ್ಕೆ ಅಲ್ಲಿ ನಡೆದೇ ಹೋಗುವುದು ಒಂದಂಶದಲ್ಲಿ ಅವಶ್ಯಕವಾಗಿತ್ತು. ಬುದ್ಧನ ಶಾಂತಿ ಸ್ತೂಪ ಇದ್ದ ಆ ದೇವಾಲಯ ನಿಜಕ್ಕೂ ಪ್ರಶಾಂತವಾದ ಸ್ಥಳ. ಅದಾಗಲೇ ಸೂರ್ಯಾಸ್ತದ ಸಮಯ ಆಗಿತ್ತು , ಅಲ್ಲದೆ ಬೆಳ್ಳಗೆ ಕಾಣುತ್ತಿದ್ದ  ಕಾಂಚನಜುಂಗಾ ಪರ್ವತದ ಬಣ್ಣ ಬದಲಾಗುತ್ತಿತ್ತು. 
Peace of Pagoda

Inside Japaneese Temple



ದಿನ ೨:

ಹಿಂದಿನ ದಿನವೇ ನಮಗೆ ಈ ದಿನದ ವೇಳಾಪಟ್ಟಿಯನ್ನು ತಿಳಿಸಲಾಗಿತ್ತು.ಅದರಂತೆ ಬೆಳಗ್ಗೆ ಎದ್ದು ಆ ಚುಮು ಚುಮು ಚಳಿಯಲ್ಲಿ ಹತ್ತಿರದ ಒಂದು ಕಾಲೇಜಿನ ಮೈದಾನಕ್ಕೆ ಹೋದೆವು. ಅಲ್ಲಿ ಲಘು ವ್ಯಾಯಾಮದ ನಂತರ ಶಿಬಿರಕ್ಕೆ ಹಿಂತಿರುಗಿದೆವು. ಅಷ್ಟರಲ್ಲಿ ನಮ್ಮ ಹಿಂದಿನ ತಂಡ ಚಾರಣಕ್ಕೆ ಹೊರಟು ನಿಂತಿತ್ತು ಅವರಿಗೆ ಬೀಳ್ಕೊಟ್ಟು ,ನಮ ಉಪಹಾರದ ನಂತರ ನಮ್ಮನ್ನು  Acclimatization walk ಗೆಂದು ಪುನಃ ನಾವು ಹಿಂದಿನ ದಿನ ಹೋಗಿದ್ದ ಜಪಾನೀಸ್ ದೇವಾಲಯಕ್ಕೆ ಕರೆದುಕೊಂಡು ಹೋದರು. ಅಲ್ಲಿ ದೇಶದ ಮೂಲೆ ಮೂಲೆಯಿಂದ ಬಂದಿದ್ದ ಸುಮಾರು ೪೨ ಜನರ ತಂಡದ ಪರಸ್ಪರ ಪರಿಚಯ ವಿನಿಮಯ ಗೋಷ್ಠಿಯು ನಡೆಯಿತು.  ಅಲ್ಲಿ ನಮ್ಮ ತಂಡಕ್ಕೆ ಒಬ್ಬ ನಾಯಕ , ಸಹ ನಾಯಕ ಮತ್ತು ಪರಿಸರ ನಾಯಕನನ್ನು ಆಯ್ಕೆ ಮಾಡಿದ ನಂತರ ಮತ್ತೆ ಶಿಬಿರಕ್ಕೆ ವಾಪಸ್ ಬಂದೆವು. ಸಂಜೆಯ ವೇಳೆಗೆ ಚಾರಣದ ಬಗ್ಗೆ ಮತ್ತು ಅದಕ್ಕೆ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ನಮಗೆ ತಿಳಿಯಪಡಿಸಲು ಒಂದು ಅವಧಿ ಇತ್ತು. ಅಲ್ಲಿಯ ತನಕ ಸಮಯ ಇದ್ದ ಕಾರಣ ಮತ್ತೆ ನಾವು ೪ ಜನ ಡಾರ್ಜೀಲಿಂಗ್  ಸುತ್ತಲು ಹೊರಟೆವು. ಡಾರ್ಜೀಲಿಂಗ್ ನ ಪ್ರಸಿದ್ಧ ಚೌಕ ಚೌರಸ್ತಾದಲ್ಲಿ  ಸುತ್ತಾಡಿ ಅಲ್ಲೇ ಹತ್ತಿರದಲ್ಲಿದ್ದ ಮಹಾಕಾಳ್ ಮಂದಿರಕ್ಕೆ ಭೇಟಿ ಕೊಟ್ಟೆವು. ಈ ದೇವಾಲಯದ ವಿಶೇಷ ಅಂದರೆ ಅದನ್ನು ಪೂಜೆ ಮಾಡುತ್ತಿದ್ದವರು ಭೌದ್ಧರು , ಶಿವಲಿಂಗದ ಪಕ್ಕದಲ್ಲೇ ಬುದ್ಧನ ವಿಗ್ರಹ ಇದ್ದದ್ದು ಇನ್ನೊಂದು ವಿಶೇಷ . ಸ್ವಲ್ಪ ಸಮಯ ಅಲ್ಲಿ ಕಳೆದು ಪುನಃ ಚೌರಸ್ತಾ ಕಡೆ ಬಂದೆವು. ಅಲ್ಲಿ ಒಂದಷ್ಟು ಶಾಲ್ ಮತ್ತು ಇನ್ನಿತರ ಉಡುಪುಗಳನ್ನು ಖರೀದಿಸಿದೆವು .  ಡಾರ್ಜೀಲಿಂಗ್ ಗೆ ಬಂದು ಅಲ್ಲಿ ಚಹಾ ಸೇವಿಸಲಿಲ್ಲ ಅಂದರೆ ಹೇಗೇ .ಸರಿ ಎಂದು  ಅಲ್ಲೇ ಹತ್ತಿರದಲ್ಲಿದ್ದ Nathmulls ಟೀ ಅಂಗಡಿಗೆ ಹೋದೆವು. ಒಂದು ಕಡೆಯಿಂದ ಹಿಮಾಲಯದ ಶ್ರೇಣಿಗಳನ್ನು ಕಾಣುವ ಸೊಬಗು , ಸೂರ್ಯಾಸ್ತದ ವೇಳೆಗೆ ಈ ಅಂಗಡಿಗೆ ಬಂದರೆ ಸೂರ್ಯಾಸ್ತವನ್ನು ನೋಡುತ್ತಾ ಚಹಾ ಸೇವಿಸಬಹುದು, ಅಂತಹ ಕಡೆ ಇದೆ ಈ ಅಂಗಡಿ. ಇಲ್ಲಿ Black tea ,white tea ,green tea ಹೀಗೆ ನಾನಾ ರೀತಿಯ ಚಹಾವನ್ನು ಸೇವಿಸಬಹುದಾಗಿದ್ದು, ಅಲ್ಲಿಂದ ಊರಿಗೆ ಒಂದಷ್ಟು ಚಹಾ ಪುಡಿ ಖರೀದಿಸಿ ಊಟಕ್ಕೆ ಹೊರಟೆವು. ನಮ್ಮ ಶಿಬಿರದಲ್ಲೇ ಊಟದ ವ್ಯವಸ್ಥೆ ಇದ್ದರೂ ಕೂಡ ಬೇರೆ ರುಚಿ ಸವಿಯುವ ಸಲುವಾಗಿ ಬೇರೊಂದು  ರೆಸ್ಟೋರೆಂಟ್ ನ ಹುಡುಕಾಟಲ್ಲಿದ್ದಾಗ 'ದಿ ಪಾರ್ಕ್ ರೆಸ್ಟೋರೆಂಟ್' ಗೆ ಹೋಗುವುದೆಂದು ತೀರ್ಮಾನ ಆಯಿತು. ಹಿಂದಿನ ದಿನ ಟಿಬೆಟಿಯನ್ ರುಚಿ ಸವಿದಿದ್ದರಿಂದ ಇವತ್ತು ಥಾಯ್ ರುಚಿ ಸವಿಯಲು ನಮ್ಮ ನಾಲಿಗೆ ಹವಣಿಸುತ್ತಿತ್ತು. ಊಟದ ನಂತರ ಮತ್ತೆ ನಮ್ಮ ಶಿಬಿರಕ್ಕೆ ಬಂದೆವು . ಅದಾಗಲೇ ಕಾರ್ಯಕ್ರಮದ ನಿರೀಕ್ಷಕರಾದ ಬೆಂಗಳೂರಿನ ಸ್ವಾಮಿಯವರು ಅವಧಿ ತೆಗೆದುಕೊಳ್ಳುತ್ತಿದ್ದರು. ಹಿಮಾಲಯದ ಚಾರಣದಲ್ಲಿ ಸಂಭವಿಸಬಹುದಾದ ಘಟನೆಗಳು , ದೇಹದಲ್ಲಾಗುವ ಬದಲಾವಣೆಗಳು , ಅವುಗಳನ್ನು ಹೇಗೆ ಸರಿಪಡಿಸಿಕೊಳ್ಳಬೇಕು , ಹೀಗೆ ಇನ್ನಿತರ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಮರುದಿನದಿಂದ ಶುರು ಆಗುವ ನಮ್ಮ ಚಾರಣಕ್ಕೆ ದೇಹ ಮತ್ತು ಮನಸ್ಸು  ಕಾತುರದಿಂದ ಕಾಯುತ್ತಿತ್ತು. ಆ ಅವಧಿಯ ತರುವಾಯ ಮರುದಿನದ ಚಾರಣಕ್ಕೆ ನಮ್ಮ ಬ್ಯಾಗನ್ನು ಸಿದ್ಧ ಪಡಿಸಿಕೊಳ್ಳಬೇಕಾಗಿತ್ತು.ಅದಾಗಲೇ ನಾವು ಸ್ನಾನ ಮಾಡಿ ೩ ದಿನ ಆಗಿತ್ತು.  ಮರುದಿನ ಶುರು ಆದರೆ ಇನ್ನ ಚಾರಣ ಮುಗಿಯೋದು ೬ ದಿನದ ನಂತರ. ಅಲ್ಲಿಯ ತನಕ ಆ ಬೆಟ್ಟ ಗುಡ್ಡಗಳಲ್ಲಿ ಹವಾಮಾನ ಹೇಗಿರತ್ತೋ ಏನೋ . ಅಲ್ಲಿ ನೀರು ಸಿಗುತ್ತದೋ ಇಲ್ಲವೋ , ಸಿಕ್ಕರೂ ಹಿಮದ ರೂಪದಲ್ಲಿ ಸಿಕ್ಕರೆ ಹೇಗೆ ಎಂಬ ಪ್ರಶ್ನೆ ಕಾಡುತ್ತಿತ್ತು. ಆ ಚಳಿಯಲ್ಲಿ ಅಷ್ಟು ತಣ್ಣನೆ ನೀರಿನಲ್ಲಿ ಹೇಗೆ ಸ್ನಾನ ಮಾಡುವುದು ಎಂಬ ಅಂಜಿಕೆ . ಕೊನೆಗೆ ಆಗಿದ್ದಾಗಲಿ ಎಂದು ನಾವು ೪ ಜನ ಆ ಕೊರೆಯುವ ಚಳಿಯಲ್ಲಿ ಮಂಜುಗೆಡ್ಡೆಯಷ್ಟೇ ತಣ್ಣಗಿರುವ ನೀರಿನಲ್ಲಿ ಹರ ಶಿವ ಅನ್ಕೊಂಡು ಸ್ನಾನ ಮಾಡಿದ್ದಾಯಿತು. ತರುವಾಯ ಮತ್ತೆ ಡಾರ್ಜೀಲಿಂಗ್ ಸುತ್ತಲು ಹೊರಟೆವು,ಈ ಬಾರಿ ನಾವು ಅನ್ವೇಷಣೆ ಮಾಡಿರದ ದಿಕ್ಕಿಗೆ ಹೊರಟೆವು. ರಸ್ತೆ ಬದಿಯ ಅಂಗಡಿಯಲ್ಲಿ ಒಂದಷ್ಟು ತಿಂದು ಮತ್ತೆ ನಮ್ಮ ಶಿಬಿರಕ್ಕೆ ವಾಪಸ್ ಬಂದೆವು . 
At Chowrastha



Shiva at Mahakal Mandir

Mahakali 


Nathmulls tea


ದಿನ ೩:
ನಮ್ಮ ಚಾರಣ ಶುರು ಆಗುವ ದಿನ. ಬೆಳಗ್ಗೆ ಉಪಹಾರದ ನಂತರ ಶಿಬಿರದ ಮುಂದೆ ಎಲ್ಲರೂ ಹಾಜರ್ ಆದೆವು. ನಮಗಾಗಿ ಅದಾಗಲೇ ಜೀಪುಗಳು ಬಂದು ಕಾಯುತ್ತಿದ್ದವು. ಅಲ್ಲಿಂದ ನಮ್ಮ ಪಯಣ ಧೋತ್ರೆ  (Dhotrey ) ಎಂಬ ಹಳ್ಳಿಗೆ . ಸುಮಾರು ೨ ಘಂಟೆಗಳ ಪ್ರಯಾಣದ ನಂತರ  Dhotrey ತಲುಪಿದೆವು. ಅಲ್ಲಿ ತಲುಪುವ ಮುಂಚೆ maneybhanjan ಎಂಬಲ್ಲಿ Signilia National Park ನ ಚೆಕ್ ಪೋಸ್ಟ್ ಇದೆ . ಅಲ್ಲಿ ಆ ಅಭಯಾರಣ್ಯಕ್ಕೆ ಹೋಗಲು ಅನುಮತಿ ಪಡೆದು ಮುಂದೆ ಹೋಗಬೇಕು . ಈ maneybhanjan ಭಾರತ ಮತ್ತು ನೇಪಾಳದ ಗಡಿಯಲ್ಲಿದ್ದು, ಈ ಗಡಿಯು open border ಆಗಿರುವುದರಿಂದ ಅಲ್ಲಿ ಎರಡು ದೇಶಗಳ ನಡುವೆ ವಾಹನಗಳ ಮತ್ತು ಜನರ ಮುಕ್ತ ಸಂಚಾರ ನಡೆಯುತ್ತದೆ. 
Starting point of our trek

With our guides Norbu Sherpa(Blue jacket), Shibu Tapang(2nd from right)


ಅಲ್ಲಿ ನಮ್ಮ ತಂಡಕ್ಕೆ ಇಬ್ಬರು ಸ್ಥಳೀಯ  ಮಾರ್ಗದರ್ಶಕರು ಸಿದ್ಧರಾಗಿದ್ದರು. ಒಬ್ಬ ನೋರ್ಬು ಶೆರ್ಪಾ , ಇನ್ನೊಬ್ಬ ಶಿಬು ತಪಾಂಗ್ . ನಮ್ಮ ಮುಂದಿನ ೬ ದಿನದ ಚಾರಣದ ಪೂರ್ತಿ ಇವರಿಬ್ಬರೇ ಮಾರ್ಗದರ್ಶಕರು. ಅವರ ಪರಿಚಯ ಆದ ನಂತರ ಅಲ್ಲಿಂದ ನಮ್ಮ ಚಾರಣ ಶುರು ಆಯಿತು. ಕೆಲವರು ಸಹಾಯಕ್ಕಾಗಿ ಬೆತ್ತದ ಕೋಲುಗಳನ್ನು ಖರೀದಿಸಿದರು, ಇನ್ನು ಕೆಲವರು ಹಾಗೆ ನಡೆಯುತ್ತೇವೆ ಎಂದು ಅವುಗಳನ್ನು ಕೊಳ್ಳಲಿಲ್ಲ. ತಂಡದ ಮುಂದೆ ಒಬ್ಬ ಮಾರ್ಗದರ್ಶಕ, ಹಿಂದೆ ಒಬ್ಬ ಮಾರ್ಗದರ್ಶಕರು ನಿಗದಿ ಆದ ನಂತರ ಚಾರಣ ಶುರು ಆಯಿತು .. ಮೊದಲ ದಿನ ಆದ್ದರಿಂದ ಎಲ್ಲರೂ ಬಹಳ ಉತ್ಸುಕರಾಗಿದ್ದರು. ಹಿಮಾಲಯದ ಗುಡ್ಡಗಳ ನಡುವೆ ಹೋಗುವುದು ಒಂದು ರೋಮಾಂಚನೀಯ ಅನುಭವ. ನಡುವೆ ಭೇಟಿ ಆಗುತ್ತಿದ್ದ ಸ್ಥಳೀಯ ಜನರು , ಅವರ ಸಂಸ್ಕೃತಿ ಹೀಗೆ ಎಲ್ಲದರ ಅನುಭವ ಮತ್ತು ಅವುಗಳನ್ನು ನಮ್ಮ ಜೊತೆ ಇದ್ದ ಮಾರ್ಗದರ್ಶಕ ನೋರ್ಬು ವಿವರಿಸುತ್ತಿದ್ದ. 
The Gang 

Enthu guys

Happy posing


ಅವತ್ತಿನ ಮಧ್ಯಾಹ್ನದ ಊಟದ ವ್ಯವಸ್ಥೆ Tonglu ಎಂಬ ಸ್ಥಳದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಊಟದ ನಂತರ ಲಘು ವಿಶ್ರಾಮದ ನಂತರ ನಮ್ಮ ನಡಿಗೆ ಅವತ್ತಿನ ತಂಗುವ ಸ್ಥಳ Tumlimg ಕಡೆಗೆ. ಸುಮಾರು ೨ ಘಂಟೆಗಳ ಚಾರಣದ ನಂತರ Tumlimg (೨೯೦೦ ಮೀ ) ತಲುಪಿದೆವು . ಈ ಊರು ಭಾರತ ಮತ್ತು ನೇಪಾಳದ ಗಡಿಯಲ್ಲಿಯೇ  ಇದ್ದು , ಇಲ್ಲಿಗೆ ಹೋಗುವ ದಾರಿ ಕೂಡ ಎರಡು ದೇಶಗಳ ಒಳಗೆ ಸಾಗುತ್ತದೆ. ಆ ದಿನ ನಾವು ತಂಗಿದ್ದ ಮನೆ ನೇಪಾಳದ ಒಳಗೆ ಇತ್ತು ಮತ್ತು ಅಲ್ಲಿಂದ ೫-೬ ಅಡಿ ದೂರದಲ್ಲೇ ಗಡಿ ನಿಯಂತ್ರಣ ರೇಖೆಯಲ್ಲಿರುವ border outpost ಇತ್ತು . ಮೊದಲ ಬಾರಿ ವೀಸಾ ಮತ್ತು  ಪಾಸ್ ಪೋರ್ಟ್ ಇಲ್ಲದೆ ಬೇರೆ ದೇಶಕ್ಕೆ ಹೋಗಿದ್ದು. 
First day lunch point

The Path

This building is inside Nepal

Legally we were inside Nepal


ಇಲ್ಲಿನ ಮನೆಗಳ ಬಗ್ಗೆ ಒಂದು ಸಣ್ಣ ಅಂಶವನ್ನು ತಿಳಿಸಲೇಬೇಕು. ಇಲ್ಲಿ ವರ್ಷಕ್ಕೆ ೨-೩ ತಿಂಗಳು ಹಿಮಪಾತ ಆಗುವುದರಿಂದ ಮತ್ತು ಬಹುಮಟ್ಟಿಗೆ ಚಳಿ ಇರುವುದರಿಂದ, ಇಲ್ಲಿನ ಹವಾಮಾನಕ್ಕೆ ಅನುಗುಣವಾಗಿ ಇಲ್ಲಿನ ಮನೆಗಳನ್ನು  ಮರ ಮುಟ್ಟಿನಿಂದ ಮಾಡಿರುತ್ತಾರೆ ಮತ್ತು ಅದಕ್ಕೆ ತಗಡಿನ ಹೊರ ಕವಚದಿಂದ ಮುಚ್ಚಿರುತ್ತಾರೆ. ನಾವು ತಂಗಿದ್ದ ಮನೆ ಕೂಡ ಮರಮುಟ್ಟುಗಳಿಂದ ಕಟ್ಟಿದ್ದ ಇಂಥ ಒಂದು ಮನೆಯಲ್ಲೇ. ನಮ್ಮ ಗುಂಪಿನವರೆಲ್ಲ ಸೇರಿ ಅಂತ್ಯಾಕ್ಶರಿ ಹಾಡಿದ್ದು ಮರೆಯಲಾಗದು. 


Typical wooden home



ದಿನ ೪:

ಸೂರ್ಯೋದಯವನ್ನು ನೋಡುವ ಕಾತುರ ನಮ್ಮೆಲ್ಲರಿಗೂ ಇತ್ತು . ಆದರೆ ಆ ದಿನ ನಮ್ಮ ಅದೃಷ್ಟ ಫಲಿಸಲಿಲ್ಲ. ಸುಮಾರು ಹೊತ್ತು ಕಾದರೂ ಮೋಡಗಳ ಆಟ ತಪ್ಪಲಿಲ್ಲ , ನಮಗೆ ಸೂರ್ಯೋದಯದ ಸೊಬಗು ಕಾಣಲಿಲ್ಲ. ಬೆಳಗಿನ ಚಹಾ, ಉಪಹಾರ ಸೇವಿಸಿ ಮಧ್ಯಾಹ್ನಕ್ಕೆ ಕೂಡ ಊಟವನ್ನು ತೆಗೆದುಕೊಂಡು ಚಾರಣ ಶುರು ಮಾಡಿದೆವು. ಸ್ವಲ್ಪ ದೂರ ಕ್ರಮಿಸಿದ ನಂತರ Signalia National Park ನ ಮತ್ತೊಂದು ಚೆಕ್ ಪೋಸ್ಟ್ ಇದೆ . ಅಲ್ಲಿ ಮತ್ತೆ ಆ ಅರಣ್ಯ ಪ್ರದೇಶಕ್ಕೆ ಪ್ರವೇಶಿಸಲು ಅನುಮತಿ ಪಡೆದು ಮುಂದೆ ಸಾಗಿದೆವು. ಅಲ್ಲಿಂದ ಸುಮಾರು ೧೦೦ ಮೀಟರ್ ದೂರದಲ್ಲಿ ಭಾರತೀಯ ಸೇನೆಯ ಒಂದು ಚೆಕ್ ಪೋಸ್ಟ್ ಇದೆ. ಅಲ್ಲಿ ಸೇನೆಯ ಒಂದು ತುಕಡಿ ಇದ್ದು, ಸುಮಾರು ಯೋಧರು ಇದ್ದರು . ಅವರಿಗೆಲ್ಲ ನಮ್ಮ ಕಡೆ ಇಂದ ವಂದನೆಗಳನ್ನು ತಿಳಿಸಿ ಮುಂದೆ ಹೊರಟೆವು .


Entry to Signalia national park

Border check post

 ಮೊದಲ ದಿನದಂತೆ ಈ ದಿನ ಕೇವಲ ಎತ್ತರಕ್ಕೆ ಹೋಗುವಂತಿರಲಿಲ್ಲ ,ಬದಲಾಗಿ ಈ ದಿನದ ಚಾರಣ ಸ್ವಲ್ಪ ಏರು ಮತ್ತೆ ಸ್ವಲ್ಪ ದೂರ ಇಳಿತ ಹೀಗೆ ಸಾಗಿತ್ತು .  ನಿಧಾನವಾಗಿ ನಮ್ಮ ದೇಹ ಆ ಹವಾಮಾನ ಮತ್ತು ತಂಡಿಗೆ ಹೊಂದಿಕೊಳ್ಳುತಿತ್ತು.  ನಂತರ ತಲುಪಿದ್ದು  gairibas(೨೬೨೫ mts ) ಎಂಬ ಸ್ಥಳ . ಇಲ್ಲಿ ಕೂಡ ಭಾರತೀಯ ಸೇನೆಯ ಒಂದು ತುಕಡಿ ಮತ್ತು ಚೆಕ್ ಪೋಸ್ಟ್ ಇದೆ. ಇಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿದ ನಂತರ ಅಲ್ಲೇ ಒಂದು ಸಣ್ಣ ಹೋಟೆಲ್ ಕೂಡ ಇದ್ದು, ಅಲ್ಲಿ ಚಹಾ ಸೇವಿಸಿ ಮುಂದಿನ ನಿಗದಿತ ಸ್ಥಳವಾದ kaiyakatta ಕಡೆಗೆ ಹೊರಟೆವು. ಈ ಊರು ನೇಪಾಳಕ್ಕೆ ಸೇರಿದ್ದು ಅಲ್ಲಿ ಊಟದ  ನಂತರ ಅವತ್ತಿನ ನಮ್ಮ ಕ್ಯಾಂಪ್ ಇದ್ದಂತಹ ಸ್ಥಳವಾದ Kalaphokri (೩೧೦೮ ಮೀ ) ಕಡೆಗೆ ಸಾಗಿತು . ದಾರಿ ಮಧ್ಯದಲ್ಲಿ ಒಂದು ಸಣ್ಣ ಕೆರೆಯಿದ್ದು , ಅದನ್ನು ಭೌದ್ಧ ಧರ್ಮೀಯರು ಪವಿತ್ರ ಪ್ರದೇಶ ಎಂದು ಪೂಜಿಸುತ್ತಾರೆ. 
At Gairibas, guys enjoying football in road itself

One path is in Indian side and another in Nepal side

We came across many such Indo-Nepal border posts


Kalaphokri ಕೂಡ ನೇಪಾಳ ಮತ್ತು ಭಾರತ್ ಗಡಿಯಲ್ಲಿದ್ದು , ನಾವು ತಂಗಿದ್ದ ಮನೆ ನೇಪಾಳದ ಒಳಗೆ ಇತ್ತು. ಅಲ್ಲಿಂದ ೧೦ ಹೆಜ್ಜೆ ಬಂದರೆ ಭಾರತ . ಅಲ್ಲಿಂದ ಆ Kalaphokri  ಕೆರೆಗೆ ಎರಡು ದಾರಿ ಇದ್ದು, ಒಂದು ಭಾರತದ ಪ್ರದೇಶದೊಳಗೆ ಇದ್ದಾರೆ ಇನ್ನೊಂದು ನೇಪಾಳದೊಳಗೆ . ಅವತ್ತಿನ ಸಂಜೆ ಅಂತ್ಯಾಕ್ಷರಿ ಜೊತೆ ಇನ್ನಷ್ಟು ಮನರಂಜನೆ ಕಾರ್ಯಕ್ರಮಗಳು. ನಮ್ಮ ಜೊತೆ ಬಂದಿದ್ದ ಮಾರ್ಗದರ್ಶಕರು ಇಬ್ಬರೂ ನೇಪಾಳಿ ಮೂಲದವಾರಾಗಿದ್ದು ಅಂದು ಸಂಜೆ ಕೆಲವು ನೇಪಾಳಿ ಹಾಡುಗಳನ್ನು ಹಾದಿ ಜೊತೆ ಆ ಶೈಲಿಯ ನೃತ್ಯಗಳನ್ನು ಕೂಡ ಮಾಡಿ ನಮ್ಮೆಲ್ಲರನ್ನೂ ರಂಜಿಸಿದರು . ಜೊತೆಗೆ ಆ ಹೋಟೆಲ್ ಮಾಲೀಕರ ಮಕ್ಕಳು ಕೂಡ ಹಾಡಿ ಕುಣಿದು ನಮ್ಮಗೆ ಮನರಂಜನೆ ನೀಡಿದರು . 

Kaliphokri 




ದಿನ ೫:
ಈ ದಿನ ಕೂಡ ಮತ್ತೆ ಸೂರ್ಯೋದಯ ನೋಡುವ ಆಸೆ . ನೇಪಾಳದೊಳಗೆ ತಂಗಿದ್ದ ನಾವು ಭಾರತಕ್ಕೆ ಸೇರಿದ ಒಂದು ಗುಡ್ಡದ ಮೇಲೆ ಬಂದು ನಿಂತೆವು. ಆ ದಿನ ಕೂಡ ಮೋಡಗಳ ಚೆಲ್ಲಾಟದಿಂದ ಸುಮಾರು ಹೊತ್ತು ಕಾದರೂ ಸೂರ್ಯೋದಯ ಕಾಣಲಿಲ್ಲ . ಬಹಳಷ್ಟು ಜನ ಕಾದು ಕಾದು ಬೇಸತ್ತು ವಾಪಸ್ ಹೋದರು . ನಾವು ಒಂದಷ್ಟು ಜನ , ಇನ್ನು ಸ್ವಲ್ಪ ಸಮಯ ಕಾದು ಕುಳಿತೆವು. ಆಗ ನಿಧಾನವಾಗಿ ಅರುಣೋದಯ ದೂರದ ಬೆಟ್ಟದ ಹಿಂದಿನ ಮೋಡದೊಳಗಿಂದ ಆಯಿತು. ಕಾದದ್ದಕ್ಕೂ ಸಾರ್ಥಕ ಆಯಿತು ಎಂದುಕೊಂಡೆವು . 

Before we say bye to Kaliphokri, group snap 
Owner's kids who entertained us with dance


Trekked few kms in such terrain with little snowfall.

ಉಪಹಾರದ ನಂತರ ಹೋಟೆಲ್ ಮಾಲಿಕರಿಗೆ  ಅವರ ಮನೆಯವರಿಗೆ ಮತ್ತು ನಮ್ಮ ಕ್ಯಾಂಪ್ ಲೀಡರ್ ಗೆ ವಿದಾಯ ಹೇಳಿ ನಮ ಚಾರಣದ ಎತ್ತರದ ಶಿಖರ Sandakphu ಕಡೆಗೆ ಹೊರಟೆವು. ಮೊದಲೆರಡು ದಿನದ ಚಾರಣದ ಹವಾಮಾನ ಅಷ್ಟೊಂದು ತೃಪ್ತಿದಾಯಕವಾಗಿರಲಿಲ್ಲ. ಬರಿ ಮೋಡಗಳ ನಡುವೆ ಸಾಗಿದ್ದಾಗಿತ್ತು . ಈ ದಿನವೂ ಹೀಗೆ ಆದರೆ ನಮಗೆ ಕಾಂಚನಜುಂಗಾ ಆಗಲಿ ಎವರೆಸ್ಟ್ ಆಗಲಿ ಕಾಣ ಸಿಗುವುದಿಲ್ಲ ಎಂಬುದು ಕಾಡುತ್ತಿತ್ತು. ನಮ್ಮ ಅದೃಷ್ಟ ಚೆನ್ನಾಗಿತ್ತು ಅನ್ನಿಸುತ್ತದೆ, ಈ ದಿನ ಸೂರ್ಯದೇವನ ಕೃಪೆ ಇತ್ತು . ವಾತಾವರಣ ಸ್ವಲ್ಪ ಬಿಸಿಲು ಕೂಡ ಇತ್ತು . ಈ ದಿನದ ಚಾರಣ ಕೇವಲ ೭ ಕಿ.ಮೀ ಆದರೂ ಕೂಡ ಬಹಳ ಕಡಿದಾದ ಚಾರಣ. ಮೊದಲೆರಡು ದಿನ ಅಷ್ಟೊಂದು ಕಡಿದಾದ ಚಾರಣ ಇರಲಿಲ್ಲ . ಒಂದೇ ದಿನದಲ್ಲಿ ೩೧೦೮ ಮೀ ಎತ್ತರದಿಂದ ೩೬೩೬ ಮೀ ಎತ್ತರಕ್ಕೆ ಚಾರಣ ಮಾಡಿದ್ದೆವು. ಪಶ್ಚಿಮ ಬಂಗಾಳದ ಎತ್ತರದ ಶಿಖರ ಏರಿದ್ದೆವು . 
Guide of another trek team, but was very friendly with me. 

Reached our camp Sandakphu at 3636 mts

Sleeping Buddha, Mt.Kanchenjunga
Buddhus in front of Sleeping Buddha


ಇಲ್ಲಿಂದ ಕಾಂಚನಜುಂಗಾ ಶಿಖರವನ್ನು ನೋಡುವುದೇ ಒಂದು ಆನಂದ . ಸ್ಲೀಪಿಂಗ್ ಬುದ್ಧ (Sleeping Buddha ) ಎಂದು ಕೂಡ ಇದನ್ನು ಕರೆಯುತ್ತಾರೆ . ಅಲ್ಲದೆ ದೂರದಲ್ಲಿ ಎವರೆಸ್ಟ್ ಶ್ರೇಣಿ ಕೂಡ ಕಾಣುತ್ತದೆ . 


Sunset from Sandakphu

This is how Kanchejunga changed its color during sunset

Another color magic

ಮಧ್ಯಾಹ್ನ ಊಟದ ನಂತರ ಸ್ವಲ್ಪ ಹೊತ್ತು ವಿಶ್ರಮಿಸಿ , ಸಂಜೆ ೪ ಘಂಟೆಯ ಸುಮಾರಿಗೆ ಸೂರ್ಯಾಸ್ತ ನೋಡಲು ಅಲ್ಲಿಂದ ಸುಮಾರು ೨ ಕಿ,ಮೀ ದೂರದಲ್ಲಿರುವ ಒಂದು ಪ್ರದೇಶಕ್ಕೆ ಹೋದೆವು . ನಾವು ಮೋಡಗಳ ಮೇಲೆ ನಿಂತಿರುವಂತೆ ಭಾಸವಾಗುವ ಆ ಸೌಂದರ್ಯ , ಸಮುದ್ರದಂತೆ ದೂರ ದಿಗಂತದವರೆಗೆ ಕಾಣುವ ಮೋಡಗಳು. ನಾನು ಇದುವರೆಗೆ ಕಂಡಂತಹ ಅದ್ಭುತ ಸೂರ್ಯಾಸ್ತ ಇದು .ಸೂರ್ಯಾಸ್ತದ ಸಮಯದಲ್ಲಿ ಬೆಳ್ಳಗೆ ಹಾಲಿನಂತೆ ಇದ್ದ ಕಾಂಚನಜುಂಗಾ ಶಿಖರ ನಿಧಾನವಾಗಿ ಬಣ್ಣ ಬದಲಾಗುತ್ತಾ ಹೋಗುತ್ತದೆ.  


Sunrise as seen from Sandakphu


During sunrise


. ದಿನ ೬:

ಬೆಳಗ್ಗೆ ಎದ್ದು ಮತ್ತೆ ನಮ್ಮ ೩-೪ ದಿನದ ಚಾಳಿಯಂತೆ ಸೂರ್ಯೋದಯ ನೋಡಲು ಅಲ್ಲೇ ಹತ್ತಿರದ ಒಂದು ಸಣ್ಣ  ಗುಡ್ಡ ಏರಿದೆವು . ಇಲ್ಲಿ ಸೂರ್ಯೋದಯಕ್ಕಿಂತ ಹೆಚ್ಚಾಗಿ ಆ ಸಮಯದಲ್ಲಿ ಸೂರ್ಯನ ಕಿರಣಗಳು ಕಾಂಚಾಜುಂಗಾ ಮೇಲೆ ಬಿದ್ದು, ಅಲ್ಲಿ ನಡೆಯುವ ಬಣ್ಣದ ಆಟಕ್ಕೆ ಮನಸೋಲದೆ ಇದ್ದವರ್ಯಾರು ಇಲ್ಲ . ಅಂತ ಅದ್ಭುತ ಬದಲಾವಣೆ ಆಗುತ್ತದೆ ಆ ಶಿಖರದಲ್ಲಿ. 


Mamu, who took care of everything during our stay in this hotel

ಇಲ್ಲಿಂದ ಕೆಲವರು Gurudum ಕಡೆಗೆ ಇಳಿದರೆ , ಇನ್ನು ಕೆಲವರು Phalut ಎಂಬಲ್ಲಿಗೆ ಚಾರಣ ಮಾಡುತ್ತಾರೆ. ೩ ದಿನಗಳ ಕಾಲ ಎತ್ತರಕ್ಕೆತ್ತರಕ್ಕೆ ಏರಿ ಚಾರಣ ಮಾಡಿದ್ದ ನಾವು , ಈ ದಿನ ಕೆಳಗೆ ಇಳಿಯಬೇಕಿತ್ತು. ನಮ್ಮ ಮುಂದಿನ ಕ್ಯಾಂಪ್ ಇದ್ದಿದ್ದು Gurudum (೨೯೧೦ ಮೀ) ಒಂದೇ ದಿನ ೧೪ ಕಿ.ಮೀ ಕೆಳಗೆ ಇಳಿಯಬೇಕಿತ್ತು .  ಚಾರಣದಲ್ಲಿ ಮೇಲೆ ಹತ್ತುವುದು ಇಳಿಯುವುದಕ್ಕಿಂತ ಸ್ವಲ್ಪ ಸುಲಭ. ಒಂದೇ ದಿನ ಕಡಿದಾದ ದಾರಿಯಲ್ಲಿ ಇಳಿಯಬೇಕಿತ್ತು. ೩ ದಿನ ಇರದಿದ್ದ ಕಾಲಸೆಳೆತ ಈ ದಿನ ಸ್ವಲ್ಪ ಮಟ್ಟಿಗೆ ಶುರು ಆಯಿತು . ಕಾಲುಗಳು ಪದ ಹಾಡಲು ಆರಂಭಿಸಿದ್ದವು. ಕೆಲವೇ ಸಮಯದಲ್ಲಿ ಅವತ್ತಿನ ಕ್ಯಾಂಪ್ ತಲುಪಿದೆವು . ಇಲ್ಲಿ ಬಂದ ಕೂಡಲೇ ನಮಗೆ ಸ್ನಾನ ಮಾಡಿಕೊಳ್ಳುವವರು ಮಾಡಿಕೊಳ್ಳಬಹುದು ಎಂದು ಅಲ್ಲಿನ ಕ್ಯಾಂಪ್ ಲೀಡರ್ ನಿರ್ದೇಶಿಸಿದರು  . ಹಿಂದಿನ ದಿನ Sandakphu ಅಲ್ಲಿ ನೀರಿನ ಕೊರತೆ ಇದ್ದು, ಅವರು ಅಲ್ಲಿಂದ ಸ್ವಲ್ಪ ದೂರ ಕೆಳಗೆ ಕ್ರಮಿಸಿ ನೀರನ್ನು ತರಬೇಕು . ಆದರೆ  Gurudum ಅಲ್ಲಿ ಆಗಿಲ್ಲ. ಸುತ್ತ ಗುಡ್ಡಗಳಿಂದ ಸುತ್ತುವರೆದು ಮಧ್ಯದಲ್ಲಿರುವ ಪುಟ್ಟ ಗ್ರಾಮ ಇದು. ಇಲ್ಲೇ ಹತ್ತಿರದಲ್ಲೇ ಒಂದು ಸಣ್ಣ ನದಿ ಹರಿಯುತ್ತಿದ್ದು ನೀರಿನ ಅಭಾವ ಇರಲಿಲ್ಲ.. ಸ್ವಲ್ಪ ತಗ್ಗು ಪ್ರದೇಶದಲ್ಲಿದ್ದ ಕಾರಣ ಮೇಲಿನ ಪ್ರದೇಶದ ಮಳೆ ನೀರು ಕೆಳಗೆ ಹರಿಯುವುದರಿಂದ ಇಲ್ಲಿಗೆ ನೀರಿನ ಕೊರತೆ ಇರಲಿಲ್ಲ. ಡಾರ್ಜೀಲಿಂಗ್ ನ ಕೊರೆಯುವ ಚಳಿಯಲ್ಲಿ ಆ ತಣ್ಣಗಿನ ನೀರಿನಲ್ಲಿ ಸ್ನಾನ ಮಾಡಿದ ನಂತರ ೪ ದಿನದಿಂದ ಎಲ್ಲೂ ಸ್ನಾನ ಮಾಡಿರಲಿಲ್ಲ . ಆ ದಿನ ಸ್ನಾನಕ್ಕೆ ನೀರು ಸಿಕ್ಕಿದ್ದು ದೇಹಕ್ಕೂ ಮನಸ್ಸಿಗೂ ಉಲ್ಲಾಸ ಭರಿತವಾಯಿತು. 

Gurudum camp surrounded with hills



ಈ ದಿನದ ಸಂಜೆಯ ಕಾರ್ಯಕ್ರಮ ಇನ್ನಷ್ಟು ಮನರಂಜಕವಾಗಿತ್ತು . ಚೆನ್ನೈ ಮೂಲದ ಶಂಕರ್ ಎಂಬ ಕ್ಯಾಂಪ್ ಲೀಡರ್ ಬಹಳ ಉತ್ಸುಕರಾಗಿದ್ದರು ಮತ್ತು ಎಲ್ಲರ ಜೊತೆ ಚೆನ್ನಾಗಿ ಬೆರೆಯುತ್ತಾ ,ಅವತ್ತಿನ ಸಂಜೆಯ  ಕಾರ್ಯಕ್ರಮಕ್ಕೆ  ಒಂದು ನಿರ್ಬಂಧನೆಯನ್ನು ಹಾಕಿದ್ದರು , ಪ್ರತಿಯೊಬ್ಬರೂ ಕೂಡ ಏನಾದರೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರದರ್ಶಿಸಬೇಕು ಎಂದು. ನಂತರ  pole dance , ramp walk ಹೀಗೆ ಒಂದರ ಹಿಂದೆ ಒಂದು ಪ್ರದರ್ಶನ ಸಾಗಿತು . ಬೆಂಗಾಲಿ ಸ್ನೇಹಿತರು ಒಂದು ಬೆಂಗಾಲಿ ಹಾಡನ್ನು ಹಾಡಿದರು , ಕರ್ನಾಟಕದಿಂದ ಸುಮಾರು ೧೦ ಜನ ಇದ್ದ ನಾವು , ಸತ್ಯ ಹರಿಶ್ಚಂದ್ರ ಚಿತ್ರದ ಕುಲದಲ್ಲಿ ಕೀಳ್ಯಾವುದೋ ಹಾಡನ್ನು ಹಾಡಿದೆವು . 

ದಿನ ೭:

ಚಾರಣದ ಕೊನೆಯ ದಿನ. ಹಿಮಾಲಯದ ಗುಡ್ಡಗಳಲ್ಲಿ ಕೊನೆಯ ದಿನ ಚಾರಣ . ಇಲ್ಲಿ ಬೆಳಗ್ಗೆ ಎದ್ದು ಸೂರ್ಯೋದಯ ನೋಡಲು ಹೋಗುವ ಪ್ರಮೇಯವೇ ಇರಲಿಲ್ಲ, ಕಾರಣ ನಾವಿದ್ದ ಜಾಗ ಸುತ್ತ ಗುಡ್ಡಗಳಿಂದ ಕೂಡಿದ್ದು , ಸೂರ್ಯೋದಯ ನೋಡಲು ಅವನ್ನು ಏರಬೇಕಿತ್ತು . ಬೆಳಗ್ಗಿನ ಉಪಹಾರ ಸೇವಿಸಿ ಮುಂದಿನ ಜಾಗಕ್ಕೆ ಹೊರಟೆವು . ಮತ್ತೆ ಇದು ಕೂಡ ಕೆಳಗೆ ಇಳಿಯ ಬೇಕಾಗಿತ್ತು. ಸ್ವಲ್ಪ ದೂರ ಕ್ರಮಿಸಿದ ಮೇಲೆ ಒಂದು ಸಣ್ಣ ಜಲಪಾತ ಮತ್ತು ನೀರಿನ ತೆರೆ ಕಂಡಿತು . ನಮ್ಮ ಶಿಬಿರದ ಪಕ್ಕದಲ್ಲೇ ಹರಿಯುತ್ತಿದ್ದಿದ್ದು ಇದೆ ಹಳ್ಳ ಎಂದು ತಿಳಿಸಿದರು. ಅಲ್ಲಿಂದ ಸಿರಿಕೊಳ (sirikola) ಎಂಬಲ್ಲಿ ನಮಗೆ ಊಟದ ವ್ಯವಸ್ಥೆ ಆಗಿತ್ತು. ಊಟದ ನಂತರ ಸ್ವಲ್ಪ ಹೊತ್ತು ವಿಶ್ರಮ , ಅಲ್ಲೇ ಪಕ್ಕದಲ್ಲೇ ಇದ್ದ ಒಂದು wooden bridge ಬಳಿ ಸ್ವಲ್ಪ ಸಮಯ ಕಳೆದು ನಮ್ಮ ಚಾರಣ ಕಾರ್ಯಕ್ರಮದ ಕೊನೆಯ ಕೆಲವು ಕ್ಷಣಗಳನ್ನು ಕೆಲವು ದೂರವನ್ನಷ್ಟೇ ಕ್ರಮಿಸಬೇಕಿತ್ತು . ಆದರೆ ಸಿರಿಕೋಲ ಇಂದ ರಿಂಬಿಕ್ ( rimbick ೨೨೮೬ ಮೀ ) ಹೋಗುವ ಚಾರಣ ಟಾರ್ ರಸ್ತೆಯ ಮೇಲೆ ಇದ್ದಿದ್ದರಿಂದ ಅಷ್ಟೇನೂ ಉತ್ಸಾಹ ಇರಲಿಲ್ಲ.. ನಾವುಸಾಗುತ್ತಿದ್ದಪಕ್ಕದ ಶಿಖರದಲ್ಲಿ  ಒಂದು ನದಿ ಹರಿಯುತ್ತಿತ್ತು . ಆ ನದಿಯ ಆ ಕಡೆಯ ಗುಡ್ಡ ಸಿಕ್ಕಿಂ ರಾಜ್ಯಕ್ಕೆ ಸೇರಿದ್ದು , ನಾವು ಪಶ್ಚಿಮ ಬಂಗಾಳದ ಗುಡ್ಡದಲ್ಲಿದ್ದೆವು. 
Had come across many such football ground in Himalayan villages even in the hilly region

Rimbick falls

A war memorial



Wooden bridge at Sirikola

ಅಲ್ಲಿಂದ ಸ್ವಲ್ಪ ಸಮಯದಲ್ಲೇ ರೀಂಬಿಕ್ ಶಿಬಿರ ಸೇರಿದೆವು .ಅಲ್ಲಿನ ಕ್ಯಾಂಪ್ ಲೀಡರ್  ಮುಂಬೈ ಮೂಲದ ಸಂಜೀವಿನಿ ಅವರು. ಮೊದಲ ತಂಡದೊಂದಿಗೆ ಚಾರಣ ಮಾಡಿ ಕೊನೆಯ ಶಿಬಿರದಲ್ಲಿ ಕ್ಯಾಂಪ್  ಲೀಡರ್ ಆಗಿದ್ದರು . ನಾವು ಅಲ್ಲಿ ತಲುಪಿದ ಕೂಡಲೇ ನಮ್ಮನ್ನು ಸ್ವಾಗತಿಸಿ ಚಾರಣದ ಬಗ್ಗೆ ವಿಚಾರಿಸಿದರು. 
ಚಹಾ ಸಮೋಸದ ನಂತರ ಆ ಸಣ್ಣ ಪಟ್ಟಣವನ್ನು ಸುತ್ತಲು ಹೊರಟೆವು . ಅಲ್ಲಿನ ಸ್ಥಳೀಯ ತಿನಿಸುಗಳನ್ನು ತಿನ್ನುವ ಆಸೆಯ ಸಲುವಾಗಿ . ಚಾರಣದ ಕೊನೆಯ ದಿನ ಆದ್ದರಿಂದ ಅಲ್ಲಿ ವಿಶೇಷ ಊಟದ ವ್ಯವಸ್ಥೆ ಆಗಿತ್ತು ,ಅಲ್ಲದೆ ಪ್ರತಿ ದಿನ ಸಂಜೆಯಂತೆ ಮನರಂಜನೆ ಕಾರ್ಯಕ್ರಮ . ಕೊನೆಯ ದಿನ ಆದರಿಂದ ಎಲ್ಲರೂ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡೆವು , ನಮ್ಮ ಮಾರ್ಗದರ್ಶಕರು ನೇಪಾಳಿ ಹಾಡನ್ನು ಹಾಡಿದರು , ಕೊನೆಗೆ ಎಲ್ಲರೂ ಸೇರಿ ಕುಣಿದು ಅವತ್ತಿನ ಕಾರ್ಯಕ್ರಮಕ್ಕೆ ವಿದಾಯ ಹೇಳಿದೆವು. 
Last camp

Closing ceremony

Our trek guides singing Nepali song- Resham firiri


ದಿನ ೮:

ಬೆಳಗ್ಗೆ ಉಪಹಾರದ ನಂತರ ನಮಗಾಗಿ ಜೀಪುಗಳು ಕಾಯುತ್ತಿದ್ದವು . ರೀಂಬಿಕ್ ಇಂದ ಡಾರ್ಜೀಲಿಂಗ್ ಗೆ ಸುಮಾರು ೪ ಘಂಟೆಯ ಪ್ರಯಾಣ . ಮಧ್ಯದಲ್ಲಿ ನಮ್ಮ ಚಾರಣ ಶುರು ಆಗಿದ್ದ Dhotrey ಅಲ್ಲಿ ನಮ್ಮ ಮಾರ್ಗದರ್ಶಕರಾಗಿ ಬಂದಿದ್ದ ನೋರ್ಬು ಮತ್ತು ಶಿಬು ಇಬ್ಬರಿಗೂ ಬೀಳ್ಕೊಟ್ಟು ಮುಂದೆ ಸಾಗಿದೆವು . ನಮ್ಮ ಮೂಲ ಶಿಬಿರದಲ್ಲಿ ನಮ್ಮ ನಮ್ಮ ಬ್ಯಾಗ್ ಗಳನ್ನ ಹಿಂಪಡೆದು ಎಲ್ಲರಿಗು ಬೀಳ್ಕೊಟ್ಟು , ಒಂದಷ್ಟು ಅನುಭವಗಳನ್ನು ಮರೆಯಲಾಗದಂತಹ ನೆನಪುಗಳನ್ನು ಆ ಸಮಯವನ್ನು ಹೊತ್ತು ನಮ್ಮ ಮುಂದಿನ ಪ್ರಯಾಣಕ್ಕೆ ಸಜ್ಜಾದೆವು. 

೪೨ ಜನ ಇದ್ದ ತಂಡದಿಂದ ಬೀಳ್ಕೊಟ್ಟು ನಾವು ಬೆಂಗಳೂರಿನಿಂದ ಹೋಗಿದ್ದ ನಾವು ೪ ಜನ,ನಮಗಾಗಿ ಕಾಯುತ್ತಿದ್ದ ಟ್ಯಾಕ್ಸಿಯಲ್ಲಿ ಸಿಕ್ಕಿಂ ಕಡೆಗೆ ಪ್ರಯಾಣ ಬೆಳೆಸಿದೆವು.  

Monday, December 28, 2015

ಕುಪ್ಪಳ್ಳಿ

ಸುಮಾರು ಮೂರು ತಿಂಗಳ ಹಿಂದೆ ಭದ್ರಾವತಿಯ ತಂಗಿಯ ಮನೆಯಲ್ಲಿ ತಿಂಡಿ ತಿಂದು ತೀರ್ಥಹಳ್ಳಿಗೆ ಹೊರಟು ಕವಲೇದುರ್ಗ ಕೋಟೆಗೆ ಹೋಗುವ ಯೋಜನೆ ಹಾಕಿಕೊಂಡಿದ್ದೆ. ನಾನು ತೀರ್ಥಹಳ್ಳಿ ತಲುಪುವ ವೇಳೆಗೆ ಕವಲೇದುರ್ಗ ಹೋಗುವ ಬಸ್ ಅದಾಗಲೇ ಹೊರಟು ಹೋಗಿತ್ತು . ಮತ್ತೆ ಮಧ್ಯಾಹ್ನ ಎರಡು ಘಂಟೆಗೆ ಬಸ್ ಇದ್ದಿದ್ದರಿಂದ ಯೋಜನೆಯನ್ನು ಬದಲಾಯಿಸಿ ಕುಪ್ಪಳ್ಳಿ ಕಡೆಗೆ ಹೊರಟೆ. 

ತೀರ್ಥಹಳ್ಳಿಯಿಂದ ಸುಮಾರು ೧೮ ಕಿ.ಮೀ ದೂರದಲ್ಲಿ ಕುಪ್ಪಳ್ಳಿ ಇದೆ. ಬಸ್ಸಿನಿಂದ ಇಳಿದ ಕೂಡಲೆ ಕುಪ್ಪಳ್ಳಿಗೆ ಹೋಗುವ ನಿರ್ದೇಶನ ಫಲಕ ಸಿಗುತ್ತದೆ. ಅಲ್ಲಿಂದ ಕವಿಮನೆ ತಲುಪಬೇಕಾದರೆ ಸುಮಾರು ೨ ಕಿ.ಮೀ ದೂರ ನಡೆದು ಹೋಗಬೇಕು.


ಈ ಸ್ಥಳದಿಂದ ಸುಮಾರು ೧ ಕಿ. ಮೀ ಸಾಗಿದರೆ ಮೊದಲು ಸಿಗುವುದು ಪೂರ್ಣಚಂದ್ರ ತೇಜಸ್ವಿ ಅವರ ಸಮಾಧಿ . ಅದರ ಎದುರಲ್ಲೇ ಕವಿಶೈಲಕ್ಕೆ ಹೋಗುವ ದಾರಿಯೂ ಇದೆ. 

Way to KaviShaila



ತೇಜಸ್ವಿ ಸಮಾಧಿ 

ಇಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಕುವೆಂಪು ಜನ್ಮಶತಮಾನೋತ್ಸವ ಭವನ ಸಿಗುತ್ತದೆ. 'ಓ ನನ್ನ ಚೇತನ , ಆಗು ನೀ ಅನಿಕೇತನ. ಎಂಬ ಕುವೆಂಪ ಅವರ ಸುಪ್ರಸಿದ್ಧ ಸಾಲು ಈ ಭವನದ ಮುಖ್ಯದ್ವಾರದಲ್ಲಿ ನಮ್ಮನ್ನು ಸ್ವಾಗತಿಸುತ್ತದೆ. ಈ ಭವನವು ಯಾತ್ರಿ ನಿವಾಸವು ಕೂಡ ಆಗಿದ್ದು ಇದರ ಒಳಗೆ ಪ್ರತಿ ಗೋಡೆಯಲ್ಲೂ ಕುವೆಂಪು ಅವರ ಹಲವಾರು ಉಲ್ಲೇಖಗಳನ್ನು ಕೆತ್ತಲಾಗಿದೆ. ಕುವೆಂಪು ಮಲ್ಟಿ ಮೀಡಿಯಾ ಹಾಲ್ ಮತ್ತು ತೇಜಸ್ವಿ ಗ್ಯಾಲರಿ ಕೂಡ ಇದ್ದು , ತೇಜಸ್ವಿ ಅವರ ಹಲವಾರು ಪಕ್ಷಿ ಛಾಯಾ ಚಿತ್ರಗಳ ಪ್ರದರ್ಶನ ಇದೆ. ಅಲ್ಲದೆ ಕುವೆಂಪು ಅವರ ಜೀವನದ ಕೆಲವು ಘಟನೆಗಳು ಮತ್ತು ಹಲವಾರು ಹಿರಿಯ ಸಾಹಿತಿಗಳು ಮತ್ತು ರಾಜಕಾರಣಿಗಳ ಜೊತೆ ಇರುವ ಛಾಯಾಚಿತ್ರಗಳು ಕೂಡ ಪ್ರದರ್ಶನಕ್ಕಿವೆ . ಈ ಪ್ರದೇಶದಲ್ಲಿ ಕುವೆಂಪು ಅವರ ಹಲವಾರು ಕವಿತೆಗಳನ್ನು ಕೆತ್ತಲಾಗಿದ್ದು , ಅವರ ಕಾದಂಬರಿಗಳ  ಮುಖ್ಯ ಪಾತ್ರಗಳಾದ ನಾಯಿಗುತ್ತಿ ಮತ್ತು ಹೆಗ್ಗಡತಿಯ ಕಲಾಕೃತಿ ಕೂಡ ಇದೆ . ಅಲ್ಲಿಂದ ಸ್ವಲ್ಪ ದೂರ ಸಾಗಿದರೆ ಸಿಗುವುದು ಕವಿಮನೆ. ಕುವೆಂಪು ಅವರು ಹುಟ್ಟಿ ಬೆಳೆದಂತಹ ಮನೆ . ಈಗ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವು ಇದನ್ನು ಕುವೆಂಪು ಸ್ಮಾರಕವನಾಗಿ ಪರಿವರ್ತಿಸಿ ಅದರ ರೂಪುರೇಷೆಗಳನ್ನು ನೋಡಿಕೊಳ್ಳುತ್ತಿದೆ. 

ಕುವೆಂಪು ಜನ್ಮಶತಮಾನೋತ್ಸವ ಭವನ 




Thejaswi Gallery

ಮಲೆನಾಡಿನ ಹಸಿರಿನ ನಡುವೆ ಇರುವ ಈ ಕವಿಮನೆಯು ಮಲೆನಾಡಿನ ವಿಶಿಷ್ಟ ವಾಸ್ತುಶಿಲ್ಪವನ್ನು ಹೊಂದಿದೆ. ಈ ಮನೆಯ ಒಳಗೆ ಛಾಯಾಚಿತ್ರ ತೆಗೆಯುವುದು ನಿಷೇದ ಇರುವ ಕಾರಣ ಯಾವುದೇ ಛಾಯಾಚಿತ್ರವನ್ನು ಈ ಲೇಖನದಲ್ಲಿ ಸೇರಿಸಲಾಗುತ್ತಿಲ್ಲ. ಈ ಮನೆಯ ಕೆಲ ಮಹಡಿಯಲ್ಲಿ ಹಲವಾರು ಹಳೆಯ ಮನೆ ಬಳಕೆ ವಸ್ತುಗಳು ಪ್ರದರ್ಶನಕ್ಕಿವೆ. ಅದರಲ್ಲಿ ಮುಖ್ಯವಾದದ್ದು ಕುವೆಂಪ ಅವರ ಮಾಡುವೆ ಆದಂತಹ ಮಂಟಪ , ಅವರ ಲಗ್ನ ಪತ್ರಿಕೆ , ದವಸ ಧಾನ್ಯಗಳನ್ನು ಶೇಕರಿಸಿ ಇದುತ್ತಿದ್ದಂತಹ ಮರದ ಡಬ್ಬಿಗಳು  ತೊಟ್ಟಿಲು , ಅಡುಗೆ ಮನೆಯ ಪಾತ್ರೆಗಳು , ಶಾವಿಗೆ ಮಣೆ , ಮಜ್ಜಿಗೆ ಕಡೆಯುವ ಪಂತು ಅಥವಾ ಕಡೆಗೋಲು , ಹೊಗೆ ಅಟ್ಟ ಇತ್ಯಾದಿ . ಅಲ್ಲದೆ ಬಾಣಂತಿ ಮನೆ ಎಂಬ ಇನ್ನೊಂದು ಕೋಣೆ ಕೂಡ ಇದೆ . 


ಮೆಟ್ಟಿಲುಗಳನ್ನು ಏರಿ ಮೊದಲನೇ ಮಹಡಿ ತಲುಪಿದರೆ ಅಲ್ಲಿ ಕುವೆಂಪು ಅವರು ಬಳಸುತ್ತಿದ್ದ ಕನ್ನಡಕ ಛತ್ರಿ ಪೆನ್ನು, ಬಾಚಣಿಗೆ , ಉರು ಗೋಲು , ಕೋಟು ಮುಂತಾದ ವಸ್ತುಗಳಿವೆ . ಅಲಲ್ದೆ ಅವರ ಪದ್ಮ ಭೂಷಣ ಮತ್ತು ಪದ್ಮ ವಿಭೂಷಣ , ಕರ್ನಾಟಕ ರತ್ನ ಪ್ರಶಸ್ತಿಗಳು ಕೂಡ ಇದೆ . ಎರಡನೇ ಮಹಡಿಯಲ್ಲಿ ಅವರ ಕೃತಿಗಳು ಮತ್ತು ಎಷ್ಟೋ ವಿಶ್ವವಿದ್ಯಾಲಯಗಳಿಂದ ದೊರಕಿದ ಗೌರವ ಡಾಕ್ಟರೇಟ್ ಪದವಿಗಳು ಕೂಡ ಅಲ್ಲಿ ಪ್ರದರ್ಶನಕ್ಕಿದೆ . 

ಕವಿ ಮನೆಯ ಹೊರಗೆ ಇನ್ನೊಂದು ಸಣ್ಣ ಮನೆ ಇದ್ದು ಅಲ್ಲಿ ಕೃಷಿ ಸಲಕರಣೆಗಳನ್ನು ಇಡಲಾಗಿದೆ. 

ಅಲ್ಲಿಂದ ಸೀದಾ ನನ್ನ ನದಿಗೆ ಕವಿ ಶೈಲದ ಕಡೆಗೆ ತಿರುಗಿತು . ಕವಿಮನೆಯ ಪಕ್ಕದಲ್ಲೇ ಕವಿಶೈಲಕ್ಕೆ ಕಾಲುದಾರಿ ಇದೆ, 

Kavimane



Way to Kavishaila from Kavimane

Signboard

Entrance of Kavishaila

ಕವಿ ಸಮಾಧಿ 


Signatures of legends

ಕವಿಶೈಲದಲ್ಲಿ ಕುವೆಂಪು ಅವರ ಸಮಾಧಿ ಇದ್ದು , ಅಲ್ಲಿ ಒಂದು ಕಲ್ಲಿನ ಮೇಲೆ ಕುವೆಂಪ ಅವರ ಹಸ್ತಾಕ್ಷರ ಇದ್ದು, ಅವರ ಗುರುಗಳಾದ ಟಿ .ಎಸ್  ವೆಂಕಣ್ಣಯ್ಯ ಮತ್ತು ಬಿ.ಎಮ್.ಶ್ರಿ ಅವರ ಸಹಿ ಕೂಡ ಇದೆ. ಅಲ್ಲದೆ ಪೂರ್ಣಚಂದ್ರ ತೇಜಸ್ವಿ ಅವರದ್ದು ಕೂಡ . 

ಕವಿಮನೆಯಲ್ಲಿ ಕುವೆಂಪು ಮತ್ತು ತೇಜಸ್ವಿ ಅವರ ಪುಸ್ತಕಗಳು ಕೂಡ ಮಾರಟಕ್ಕೆ ಲಭ್ಯವಿದೆ.

ಹೀಗೆ ಕುಪ್ಪಳ್ಳಿಯ ಸೊಬಗನ್ನು ಸವಿದು ಇಬ್ಬರು ಮಹಾನ ಲೇಖಕರ ಅಸ್ತಿತ್ವವನ್ನು ಅರಿತು ಅಲ್ಲಿಂದ ಕವಲೇದುರ್ಗದ ಕಡೆಗೆ ನನ್ನ ಏಕಾಂಗಿ  ಪಯಣ ಸಾಗಿತು . ಮುಂದಿನ ಸಂಚಿಕೆಯಲ್ಲಿ ಕವಲೇದುರ್ಗದ ಇತಿಹಾಸವನ್ನು ಮತ್ತು ನನ್ನ ಅನುಭವಗಳನ್ನು ಕೆಲವು ಛಾಯಾಚಿತ್ರಗಳ ಜೊತೆ ಹಂಚಿಕೊಳ್ಳುತ್ತೇನೆ. 

Sunday, August 16, 2015

ಸ್ವಾತಂತ್ರ್ಯ ದಿನಾಚರಣೆ - ನನ್ನ ಭಾಷಣ


ಎಲ್ಲರಿಗೂ  ೬೯ನೇ ಸ್ವಾತಂತ್ರ್ಯ ದಿನದ ಶುಭ ಕಾಮನೆಗಳು. ಈ ಸಂದರ್ಭದಲ್ಲಿ ನಮ್ಮ ಗುಬ್ಬಿ ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನು ಮಾಡಿದ ಭಾಷಣದ ಕೆಲವು ವಿಷಯಗಳನ್ನು ಇಲ್ಲಿ ಹಂಚಿಕೊಳ್ಳ ಬಯಸುತ್ತೇನೆ . 

ಬ್ರಿಟೀಷರಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿರಬಹುದು ,  ಯಾವಾಗ ಕೃಷಿಕ ವರ್ಗದ ಘನತೆಹೆಚ್ಚಿದಾಗ , ಸೈನಿಕರಿಗೆ ಸೂಕ್ತ ಗೌರವ ಸಿಕ್ಕಾಗ , ಪ್ರತಿಯೊಬ್ಬ ಮಗುವಿಗೆ ಶಿಕ್ಷಣ ಸಿಕ್ಕಾಗ , ಪ್ರತಿಯೊಬ್ಬ ಪ್ರತಿಭಾವಂತರಿಗೆ ಸರಿಯಾದ ಅವಕಾಶ ಸಿಕ್ಕಿದಾಗ ಅದು ನಿಜವಾದ ಸ್ವಾತಂತ್ಯ ,ಶಿಕ್ಷಣದಿಂದ ವಂಚಿತರಾಗಿರುವವರು ಬಹಳಷ್ಟು ಮಂದಿ ಇನ್ನೂ ನಮ್ಮ ದೇಶದಲ್ಲಿ ಇದ್ದಾರೆ , ಅಂಥವರಿಗೆ ಸೂಕ್ತ ಶಿಕ್ಷಣ ಮತ್ತು ಅವಕಾಶಗಳು ಸಿಗಬೇಕಾಗಿದೆ ಮತ್ತು ಸರ್ಕಾರ ಕೂಡ ಇದರ ಬಗ್ಗೆ ಗಮನ ಹರಿಸಬೇಕಾಗಿದೆ 


ಈ ಕಾರ್ಯಕ್ರಮದಲ್ಲಿ ನಮ್ಮ ದೇಶದ ಸ್ವರಾಜ್ಯಕ್ಕಾಗಿ ಹೋರಾಡಿದದವರನ್ನು ನೆನೆಯದೇ ಸ್ವಾತಂತ್ಯ ದಿನವನ್ನು ಆಚರಿಸಲು ಆಗುತ್ತದೆಯೇ ??  ಬ್ರಿಟೀಷರ ಆಳ್ವಿಕೆಯಿಂದ ಹೊರಬಂದು ಪೂರ್ಣ ಸ್ವರಾಜ್ಯ ದೇಶ ನಿರ್ಮಿಸುವಲ್ಲಿ ಲಕ್ಷಾಂತರ ಹೋರಾಟಗಾರರ ಶ್ರಮ ಬಲಿದಾನ ಇದೆ. ನಮ್ಮ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಕೆಲವೇ ಕೆಲವು ನಾಯಕರನ್ನು ಮಾತ್ರ ಬಿಂಬಿಸಿ ತೋರಿಸಲಾಗುತ್ತದೆ . ಆದರೆ ಎಲೆ ಮರೆಯ ಕಾಯಿಯಂತೆ ಹೋರಾಡಿದ ಅದೆಷ್ಟೋ ಜನ ತಮ್ಮ ಜೀವ ಜೀವನವನ್ನು ದೇಶಕ್ಕೆ , ತಾಯಿ ಭಾರತಾಂಬೆಯ ಸಲುವಾಗಿ ಅರ್ಪಿಸಿದ್ದಾರೆ .  

ಮೊದಲಿಗೆ ವೀರ್ ಸಾವರ್ಕರ್ ಬಗ್ಗೆ ಹೇಳುತ್ತೇನೆ . ದೇಶ ಕಂಡ ಒಬ್ಬ ಅದ್ಭುತ ದೂರದೃಷ್ಟಿಯುಳ್ಳ ನಾಯಕ , ಚಿಂತಕ ಮತ್ತು ಕವಿ . ಸಾವರ್ಕರ್ ಅವರು ಕೇವಲ ಭಾರತದಲ್ಲಿದ್ದುಕೊಂಡು ಬ್ರಿಟೀಷರ ವಿರುದ್ಧ ಹೋರಾಡಲಿಲ್ಲ. ಲಂಡನ್ ಗೆ ಉನ್ನತ ವ್ಯಾಸಂಗಕ್ಕೆ ಹೋದ ಇವರು ಅಲ್ಲಿ "ಅಭಿನವ ಭಾರತ" ಎಂಬ  ಗುಪ್ತ ಕ್ರಾಂತಿಕಾರಿ ಸಂಘಟನೆಯನ್ನು ಶುರು ಮಾಡಿ ಬ್ರಿಟೀಷರ ವಿರುದ್ಧ ಹೋರಾಡುತ್ತಾರೆ . ಈತ ಒಬ್ಬ ಸಾಮಾನ್ಯನಲ್ಲ , ಈತನಿಂದ ನಮಗೆ ಕಂಟಕ ತಪ್ಪಿದ್ದಲ್ಲ ಎಂದು ಅರಿತ ಬ್ರಿಟೀಷರು ಸಾವರ್ಕರ್ ಅವರ ಹಿಂದೆ ಬಿದ್ದು ಅವರ ಬಗ್ಗೆ ಮಾಹಿತಿಯನ್ನು ಕಲೆಹಾಕಲು ಶುರು ಮಾಡುತ್ತಾರೆ . ನಂತರ ಅವರನ್ನು ಬಂಧಿಸಿ ಭಾರತಕ್ಕೆ ಹಡಗಿನ ಮೂಲಕ ಕರೆತರಲಾಗುತ್ತದೆ. ಆಗ ಸಾವರ್ಕರ್ ಫ್ರಾನ್ಸ್ ನ ಗಡಿಯತ್ತ ಬಂದಾಗ ಹಡಗಿನಿಂದ ಜಿಗಿದು ಸಮುದ್ರದಲ್ಲಿ ಈಜಿಕೊಂಡು ತಪ್ಪಿಸಿಕೊಂಡು ಹೋಗುತ್ತಾರೆ .ಫ್ರಾನ್ಸಿನ ಅಧಿಕಾರಿಗಳಿಂದ ಮತ್ತೆ ಬಂಧಿಯಾದ ಸಾವರ್ಕರ್ ಅವರನ್ನು ಬ್ರಿಟೀಷ್  ಅಧಿಕಾರಿಗಳು ಫ್ರಾನ್ಸಿನ ಅಧಿಕಾರಿಗಳಿಗೆ ಲಂಚ ಕೊಟ್ಟು ಮತ್ತೆ ಬಂಧಿಸಿ ಭಾರತಕ್ಕೆ ತಂದು ಅಂಡಮಾನ್ ಜೈಲಿನಲ್ಲಿ ಇರಿಸುತ್ತಾರೆ .  ಬಹುಷಃ ವಿಶ್ವದಲ್ಲೇ ಎರಡು ಜೀವಾವಧಿ ಶಿಕ್ಷೆ ಅನುಭವಿಸಿದ ಏಕೈಕ ವ್ಯಕ್ತಿ ಸಾವರ್ಕರ್ ಇರಬಹುದು . ಎರಡು ಜೀವಾವಧಿ ಅಂದರೆ ಆಗಿನ ಕಾನೂನಿನ ಪ್ರಕಾರ ೫೦ ವರ್ಷಗಳ ಜೈಲು ವಾಸ . ನಂತರ ಸಾವರ್ಕರ್ ಅವರನ್ನು ಜೈಲಿನಿಂದ ಬಿಡಿಸಲು ದೇಶಾದ್ಯಂತ ಎಲ್ಲರಿಂದ ಸಹಿ ಸಂಗ್ರಹವನ್ನು ಮಾಡಲಾಗುತ್ತದೆ , ಕೆಲವು ಹಿರಿಯ ನಾಯಕರ ಬಳಿ ಅದನ್ನು ತೆಗೆದುಕೊಂಡು ಹೋಗಿ ಅವರ ಸಹಿ ಮತ್ತು ಬೆಂಬಲವನ್ನು ಅಪೇಕ್ಷಿಸಿದಾಗ ಆ ಸಹಿ ಸಂಗ್ರಹದ ಹಾಳೆಯನ್ನು ಹರಿದು ಬಿಸಾಕುತ್ತಾರೆ . ಇದು ನಮ್ಮ ಕೆಲವು ನಾಯಕರಿಗೆ ಹೋರಾಟಗಾರರಿಗೆ ನಮ್ಮದೇ ನಾಯಕರು ನಡೆಸಿಕೊಂಡ ರೀತಿ . ನಮ್ಮ ದೇಶಕ್ಕೆ ಸ್ವಾತಂತ್ರ್ಯ ದಕ್ಕಿಸುವಲ್ಲಿ ಸಾವರ್ಕರ್ ಅವರ ಕೊಡುಗೆಯನ್ನು ಹೆಚ್ಚು ಪ್ರಚರ ಪಡಿಸುವ ಅವಶ್ಯಕತೆ ಇದೆ ಮತ್ತು ಇಂದಿಗೂ ಅವರು ಎಷ್ಟೋ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ . 

Vinayak Damodar Savarkar


ಅದೇ ರೀತಿ ಯುವಕರಿಗೆ ಇನ್ನೊಬ್ಬ ಮಾದರಿ ನಾಯಕ ಎಂದರೆ ಸುಭಾಶ್ ಚಂದ್ರ ಬೋಸ್ . ಹಲವಾರು ನೇತಾಗಳಿದ್ದರೂ ನೇತಾಜಿ ಮಾತ್ರ ಒಬ್ಬರೇ . ಇವರ ಪರಿಸ್ಥಿತಿಯೂ ಒಂದು ಮಟ್ಟದಲ್ಲಿ ಸಾವರ್ಕರ್ ಅವರ ರೀತಿಯದ್ದೇ . Indian National Army ಸ್ಥಾಪಿಸಿದ ಬೋಸರಿಗೆ ದೇಶಕ್ಕಾಗಿ ಮುಡಿಪಾಗಿಟ್ಟ ಇಂಥ ಒಂದು ಸೈನ್ಯವನ್ನು ನಮ್ಮ ದೇಶದ ಒಳಗೆ ಶುರು ಮಾಡಲು ಆಗದೆ , ಬೇರೆ ದೇಶದಲ್ಲಿ ಶುರು ಮಾಡಿ ಅಲ್ಲಿಂದ ಬ್ರಿಟೀಷರ ವಿರುದ್ಧ ಹೋರಾಡುತ್ತಾರೆ . ಬ್ರಿಟೀಷ್ ಸೈನ್ಯದ ಭಾಗವಾಗಿದ್ದ ಅದೆಷ್ಟೋ ಭಾರತೀಯ ಸೈನಿಕರು ಬೋಸರಿಂದ ಪ್ರೇರಿತರಾಗಿ INA ಯನ್ನು ಸೇರಿಕೊಳ್ಳುತ್ತಾರೆ . ಇದು ಬೋಸರ ನಾಯಕ ಗುಣ .  ಸಾವರ್ಕರ್ ಅವರ ರೀತಿಯಲ್ಲಿ ಬೋಸರು ಕೂಡ ಬ್ರಿಟೀಷರಿಗೆ ದುಸ್ವಪ್ನವಾಗಿ ಕಾಡಿದ್ದರು , ಬೋಸರನ್ನು ಬಂಧಿಸಲು ಬ್ರಿಟೀಷರು ಹಲವಾರು ಮಸಲತ್ತುಗಳನ್ನುಮಾಡುತ್ತಾರೆ . ಇಂಥ ಬೋಸರನ್ನು ಬಂಧಿಸಲು ನಮ್ಮ ಕೆಲವು ನಾಯಕರು ಬೋಸರಿಂದ ತಮಗೆ ತೊಂದರೆ ಎಂದು ಅರಿತು  ಬ್ರಿಟೀಷರಿಗೆ ಬೆಂಬಲ ಕೊಟ್ಟಿದ್ದು ಇತಿಹಾಸದ ಒಂದು ಕಪ್ಪು ಚುಕ್ಕೆ . 

Subash Chandra Bose


ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾದ ಮತ್ತೊಬ್ಬ ನಾಯಕ ಅಂದರೆ ಸರ್ದಾರ್ ವಲ್ಲಭಭಾಯಿ ಪಟೇಲ್ . ಆಗಸ್ಟ್ ೧೫, ೧೯೪೭ ರಲ್ಲಿ ಸ್ವಾತಂತ್ರ್ಯ ಬಂದ ನಂತರವೂ ನಮ್ಮ ದೇಶದಲ್ಲಿ ಹಲವಾರು ಸಮಸ್ಯೆಗಳಿದ್ದವು . ಒಂದು ಕಡೆ ದೇಶ ಇಬ್ಬಾಗ ಆಗಿದೆ , ಇನ್ನೊಂದು ಕಡೆ ಎಲ್ಲ ರಾಜ ಮನೆತನಗಳು ಯಾವ ಕಡೆಗೆ ಹೋಗಬೇಕೆಂಬ ಅವರ ಡೋಲಾಯಮಾನ ಸ್ಥಿತಿ. ಇಂಥ ಸನೀವೆಶದಲ್ಲಿ ಮುಂಚೂಣಿಗೆ ಬಂದಿದ್ದು ಉಕ್ಕಿನ ಮನುಷ್ಯ ಪಟೇಲ್ .  ೫೫೦ಕ್ಕೂ ಹೆಚ್ಚಿನ  ಸಂಸ್ಥಾನಗಳನ್ನು ಒಗ್ಗೂಡಿಸಿ "Great Republic India" ನಿರ್ಮಿಸುವಲ್ಲಿ ಅವರ ಪಾತ್ರ ಮುಖ್ಯವಾದದ್ದು .  ಬಹುಷಃ ಪಟೇಲರಲ್ಲದೇ ಬೇರೆ ಯಾರಿಂದಲೂ ಈ ಕಾರ್ಯ ಯಶಸ್ವಿಗೊಳಿಸಲು ಸಾಧ್ಯವಾಗುತ್ತಿರಲಿಲ್ಲ . ಈ ಕಾರ್ಯಚರಣೆಯಲ್ಲಿ ಮುಖ್ಯವಾಗಿ ನೆನಪಿಸಿಕೊಳ್ಳಬೇಕಾದ್ದು  ಪಾಕಿಸ್ತಾನಕ್ಕೆ ಸೇರುತ್ತೇನೆ ಎಂದಿದ್ದ  ಹೈದರಾಬಾದಿನ ನಿಜಾಮರನ್ನು ಭಾರತದ ತೆಕ್ಕೆಗೆ ತರುವಲ್ಲಿ ನಡೆಸಿದ "Operation Polo" . 
Sardar Patel


ಇದೇ ರೀತಿ ಬ್ರಿಟೀಷರ ವಿರುದ್ಧ ಹೋರಾಡಿದ ನಮ್ಮ ಕೆಚ್ಚೆದೆಯ ರಾಜರು ಅಂದರೆ ತಮಿಳುನಾಡಿನ ಪುಲಿ ದೇವರ್ (Puli Thevar ). ಕೇರಳದ ವರ್ಮಾ ಪಜಾಸ್ಸಿ ರಾಜಾ (Pazhassi ರಾಜ ) ಇವರಿಬ್ಬರೂ ೧೮ನೆ ಶತಮಾದಲ್ಲೇ ಅವರ ವಿರುದ್ಧ ಹೋರಾಡಿದ್ದವರು . ಅದೇ ರೀತಿ ೧೯ನೆ ಶತಮಾದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ , ಸಂಗೊಳ್ಳಿ ರಾಯಣ್ಣ ಕೂಡ ಬ್ರಿಟೀಷರ ವಿರುದ್ಧ ಹೋರಾಡಿದ್ದಾರೆ . ಇವರನ್ನು ಕೂಡ ಇಂದು ನಾವು ಸ್ಮರಿಸಿಕೊಳ್ಳಬೇಕು . ನಂತರ ೧೮೫೭ರ ಸಿಪಾಯಿ ದಂಗೆ , ಮಂಗಲ್ ಪಾಂಡೆಯ ನೇತೃತ್ವದಲ್ಲಿ ಶುರು ಆಯಿತು . ಇದು ಬ್ರಿಟೀಷರ ವಿರುದ್ಧ ನಡೆದ ಹೋರಾಟಗಳಲ್ಲಿ ಅತೀ ಮುಖ್ಯವಾದದ್ದು ಮತ್ತು ಸ್ವಾತಂತ್ಯ ಹೋರಾಟಕ್ಕೆ ಮುಖ್ಯ ತಿರುವನ್ನು ಕೊಟ್ಟಿದ್ದು . ಈ ದಂಗೆಯ ಬಗ್ಗೆ ಸಾವರ್ಕರ್ ಬರೆದ ಪುಸ್ತಕ, ಬಿಡುಗಡೆಗೆ ಮುನ್ನವೇ ಬ್ರಿಟೀಷರಿಂದ ನಿಷೇಧಗೊಳ್ಳುತ್ತದೆ. ಇಂಗ್ಲೆಂಡ್ ನಲ್ಲಿ ಹಚ್ಚು ಹಾಕಿಸಲು ಆಗದೆ ಈ ಪುಸ್ತಕವನ್ನು ಹಾಲೆಂಡ್ ನಲ್ಲಿ ಮುದ್ರಿಸಿ ಭಾರತಕ್ಕೆ  ಈ ಪುಸ್ತಕವನ್ನು ರವಾನೆ ಗೊಳಿಸುತ್ತಾರೆ. ೧೯೦೦ ರ ನಂತರ ಈ ಪುಸ್ತಕ ಎಷ್ಟೋ  ಜನರಿಗೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೇರಲು ಸ್ಪೂರ್ತಿ ಆಗುತ್ತದೆ, ಅವರ ಹೋರಾಟಕ್ಕೆ ಮುನ್ನುಡಿ ಆಗುತ್ತದೆ . ನಂತರ ೧೯೧೯ರ ಜಲಿಯನ್ ವಾಲಾ  ಭಾಗ್ ದುರಂತ . ಈ ದುರಂತವನ್ನು ಕಣ್ಣಾರೆ ಕಂಡ  ಭಗತ್ ಸಿಂಗ್ ಎಂಬ ಚಿಕ್ಕ ಬಾಲಕ ಬ್ರಿಟೀಷರ ವಿರುದ್ಧ ಹೋರಾಡಲು ಸಿದ್ಧಗೊಳ್ಳುತ್ತಾನೆ , ಎಷ್ಟೋ ಯುವಕರಿಗೆ ಸ್ಪೂರ್ತಿ ಆಗುತ್ತಾರೆ ಭಗತ್ ಸಿಂಗ್. 

ಇದೇ ರೀತಿ ೧೯೪೨ರ "Quit India Movement" ನಲ್ಲಿ ಕೂಡ ಅದೆಷ್ಟೋ ಜನ ಎಲ್ಲ ವರ್ಗದ  ಎಲ್ಲ ವಯಸ್ಸಿನವರು ಭಾಗಿ ಆಗುತ್ತಾರೆ . ನಮ್ಮ ಖ್ಯಾತ ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ನವರು ಕೂಡ ಈ ಚಳುವಳಿಯಲ್ಲಿ ಭಾಗಿಯಾಗುತ್ತಾರೆ . H.N ಅವರು ತಮ್ಮ ಪರೀಕ್ಷೆಯನ್ನು ಬಿಟ್ಟು ಈ ಚಳುವಳಿಯಲ್ಲಿ ಭಾಗವಹಿಸುತ್ತಾರೆ , ಜೈಲುವಾಸವನ್ನು ಕೂಡ ಅನುಭವಿಸುತ್ತಾರೆ . ಜೈಲಿನಿಂದ ಬಿಡುಗಡೆ ಆದ ನಂತರ ತಮ್ಮ ಶಿಕ್ಷಣವನ್ನು ಮುಂದುವರೆಸುತ್ತಾರೆ . ಇದೇ ರೀತಿ ಬೆಂಗಳುರಿನ ಮೈಸೂರ್ ಬ್ಯಾಂಕ್ ಸರ್ಕಲ್ ನಲ್ಲಿರುವ ಹುತಾತ್ಮರ ಸ್ಮಾರಕದ ಬಗ್ಗೆ ಹೇಳಲೇಬೇಕು . ಈ ಸ್ಮಾರಕವನ್ನು ೧೯೪೨ರ ಚಳುವಳಿಯಲ್ಲಿ ಭಾಗವಹಿಸಿ ಬ್ರಿಟೀಷರ ಗುಂಡೇಟಿಗೆ ಬಲಿಯಾಗಿ ಹುತಾತ್ಮರಾದ  ಸೆಂಟ್ರಲ್ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳ ನೆನಪಿಗಾಗಿ ನಿರ್ಮಿಸಲಾಗಿದೆ . ಈ ಸ್ಮಾರಕದ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಓದಿ ( http://giri-shikhara.blogspot.in/2014/08/blog-post.html) 

Memorial at Mysore Bank Circle, Bengaluru



ಇನ್ನ ಸ್ವಾತಂತ್ರ್ಯ ಬಂದ ನಂತರ ನಮ್ಮ ಪರಿಸ್ಥಿತಿ ಭಿನ್ನವಾಗಿತ್ತು . ಒಂದು ಕಡೆ ಬ್ರಿಟೀಷರ ಆಳ್ವಿಕೆಯಿಂದ ಬಿಡುಗಡೆ ಆಗಿದ್ದು ಸಂಭ್ರಮ ಮತ್ತು ಸಮಾಧಾನಕರ ವಿಷಯವಾದರೆ ದೇಶ ಇಬಾಗ ಆಗಿದ್ದು ದುರಂತವೇ ಸರಿ . ಕೆಲವು ನಾಯಕರ ತಮ್ಮ ಸ್ವಂತ ಹಿತಾಸಕ್ತಿಗಳಿಗೋಸ್ಕರ ದೇಶ ಹೊಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಭಾರತದಿಂದ ಪಾಕಿಸ್ತಾನಕ್ಕೆ , ಪಾಕಿಸ್ತಾನದಿಂದ ಭಾರತಕ್ಕೆ ಅದೆಷ್ಟೋ ಮಂದಿ ವಲಸೆ ಬಂದರು , ಲಕ್ಷಾಂತರ ಅಮಾಯಕರು ಬಲಿಯಾದರು . ಸ್ವಾತಂತ್ರ್ಯ ಭಾರತದ ಮೊದಲ ದುರಂತ . 


ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಹೇಳುವುದಾದರೆ ವಿಶ್ವದಾದ್ಯಂತ ಭಾರತೀಯರ ಸಾಧನೆ. ವಿಶ್ವದ ದೊಡ್ಡ ದೊಡ್ಡ IT ಸಂಸ್ಥೆಗಳ ಚುಕ್ಕಾಣಿಯನ್ನು ಭಾರತೀಯರು ಹಿಡಿಯುತ್ತಿರುವುದು ಹೆಮ್ಮೆಯ ಸಂಗತಿ ಆಗಿರಬಹುದು , ಜೊತೆಗೆ ಅದರ ಬಗ್ಗೆ ಸ್ವಲ್ಪ ಯೋಚಿಸುವ ಅವಶ್ಯಕತೆ ಕೂಡ ಇದೆ .  ಇದೇ ವ್ಯಕ್ತಿಗಳಿಗೆ ನಮ್ಮ ದೇಶದಲ್ಲೇ ಸೂಕ್ತ ಅವಕಾಶಗಳು ದೊರಕಿದಲ್ಲಿ ತಮ್ಮ ಸ್ವಂತ ಸಂಸ್ಥೆಯನ್ನು ಶುರು ಮಾಡುವ ಸಾಮರ್ಥ್ಯ ಇದೆ . ಇಂಥ ಅವಕಾಶವನ್ನು ಉಪಯೋಗಿಸಿಕೊಳ್ಳುವ ವಿದೇಶಿ ಸಂಸ್ಥೆಗಳು ಭಾರತೀಯ ಪ್ರತಿಭಾವಂತ ಯುವಕರನ್ನು ಆಕರ್ಷಕ ಸಂಬಳ ಕೊಟ್ಟು ತಮ್ಮ ಸಂಸ್ಥೆಗೆ ದುಡಿಸಿಕೊಳ್ಳುತಾರೆ.ಇಂಥಹ ವಿದ್ಯಾರ್ಥಿಗಳು ಒಂದು ಸಂಸ್ಥೆಯನ್ನು ಹುಟ್ಟು ಹಾಕಿದರೆ ವಿದೇಶಿ ಕಂಪೆನಿಗಳಿಗೆ ಸೆಡ್ಡು ಹೊಡೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ. ಅಂತ ಸಾಮರ್ಥ್ಯ ನಮ್ಮ ಯುವ ಪೀಳಿಗೆಗೆ ಇದೆ . ಇವರನ್ನು ತಮ್ಮ ಸಂಸ್ಥೆಗೆ ಸೇರಿಸಿಕೊಳ್ಳದಿದ್ದರೆ ತಮಗೆ competitor ಆಗುತ್ತಾರೆ ಎಂಬ ಹೆದರಿಕೆ ಕೂಡ ಕೆಲವು ವಿದೇಶಿ ಕಂಪೆನಿಗಳಿಗೆ ಇದೆ.. ಆದ್ದರಿಂದಲೇ ಅವರು ಹೆಚ್ಚು ಸಂಬಳ ಕೊಡಲೂ ತಾಯಾರಗಿರುತ್ತಾರೆ .   ನಮ್ಮ ದೇಶದ ವಿದ್ಯಾರ್ಥಿಗಳಲ್ಲಿ ಕೂಡ ದೊಡ್ಡ ದೊಡ್ಡ ವಿದೇಶಿ ಸಂಸ್ಥೆಗಳಲ್ಲಿ ಕೆಲಸ ಗಿಟ್ಟಿಸುವ ಬಯಕೆ ಇದ್ದೇ ಇತ್ತು . 
.
ಇಂಥ ಮನಸ್ಥಿತಿ ಕಳೆದ ೪-೫ ವರ್ಷದಿಂದ ಈಚೆಗೆ ಸ್ವಲ್ಪ ಬದಲಾಗಿದೆ ಎಂದರೆ ಅತಿಶಯೋಕ್ತಿ ಅಲ್ಲ . ಇತ್ತೀಚಿಗೆ ಭಾರತೀಯ ಯುವಕರಿಂದ ಶುರು ಆಗಿರುವ ಅದೆಷ್ಟೋ ಸಂಸ್ಥೆಗಳು ಒಳ್ಳೆಯ ಕಾರ್ಯ ನಿರ್ವಹಿಸುತ್ತಿದ್ದು , ಬೇರೆಯವರಿಗೆ ಕೂಡ ಮಾದರಿ ಆಗಿದೆ .ಉದಾಹರಣೆಗೆ ಇತ್ತೀಚಿನ start -up ಕಂಪೆನಿಗಳಾದ  flipkart , snapdeal ,ola cabs ಮುಂತಾದವು ಭಾರತೀಯರಿಂದ ಶುರು ಆದ ಸಂಸ್ಥೆಗಳು . ಇವತ್ತು ಬೆಳಗ್ಗೆ ಪ್ರಧಾನ ಮಂತ್ರಿಗಳು ಕೆಂಪು ಕೋಟೆಯಿಂದ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವಾಗ strat-up ಕಂಪನಿಗಳ ಬಗ್ಗೆ ಉಲ್ಲೇಖಿಸುತ್ತ ಹೇಳುತ್ತಾರೆ "We want to enable Start-ups to make India no 1 in this field. Start-up India and Stand-up India" ತಮ್ಮ ಸರ್ಕಾರ ಮಂಡಿಸಿದ ೨೦೧೪ರ ಬಜೆಟ್ ನಲ್ಲಿ ಕೂಡ ಇಂಥ start-up ಸಂಸ್ಥೆಗಳಿಗೆ ಸಹಾಯ ಧನವನ್ನು ನೀಡುವುದಾಗಿ  ಘೋಷಿಸಿರುವ ನರೇಂದ್ರ ಮೋದಿ ಸರ್ಕಾರ ಅದಕ್ಕಾಗಿ ಹಣವನ್ನು ಕೂಡ ಮೀಸಲಿಟ್ಟಿದೆ. ಇಂಥ ಅವಕಾಶವನ್ನು ನಮ್ಮ ಯುವಕರು ಬಳಸಿಕೊಂಡು ದೇಶದ ಅಭಿವೃದ್ಧಿಗೆ ಮತ್ತು ದೇಶದ ಒಳಿತಿಗಾಗಿ ಕಾರ್ಯ ನಿರ್ವಹಿಸಿಬೇಕಾಗಿದೆ. ಇದಕ್ಕೆ ಪುಷ್ಟಿ ಕೊಡುವಂತೆ "Make In India " ಯೋಜನೆ ಕೂಡ ಇದೆ 

ಇದೆ ರೀತಿ ಭಾರತದಲ್ಲಿ ನಡೆಯುತ್ತಿರುವ ಸಂಶೋಧನೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿರುವ ತೊಡಕುಗಳ ಬಗ್ಗೆ ಹೇಳಬಯಸುತ್ತೇನೆ.  ನಮ್ಮ ದೇಶದಲ್ಲಿ ನಡೆದ ಹಲವಾರು ಸಂಶೋಧನೆಗಳಲ್ಲಿ "Param" ಎಂಬ Super Computer , ಪೋಖ್ರಾನ್ ಅಣು ಪರೀಕ್ಷೆ ಮತ್ತು ಇತ್ತೀಚಿನ Mars Mission ಮುಖ್ಯವಾದವು . ಇವೆಲ್ಲ ಯಾವ ದೇಶದ ಸಹಾಯ ಇಲ್ಲದೆ ಸ್ವತಂತ್ರವಾಗಿ ನಡೆದಂಥವು . ಅತೀ ಕಡಿಮೆ ವೆಚ್ಚದಲ್ಲಿ ಮುಗಿಸಿದಂತಹ "Mars Mission " ನಿಜಕ್ಕೂ ಅದ್ಭುತವೇ ಸರಿ . ಬೇರೆ ರಾಷ್ಟಗಳು ಹಲವಾರು ಪ್ರಯತ್ನಗಳ ನಂತರ ಸಫಲರಾಗುತ್ತಾರೆ , ಆದರೆ ಭಾರತ ಮೊದಲನೇ ಪ್ರಯತ್ನದಲ್ಲೇ ಯಶಸ್ವಿ ಗೊಳ್ಳುತ್ತದೆ . ಅದು ನಮ್ಮ ವಿಜ್ಞಾನಿಗಳ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. ಅಣು ಸಂಶೋಧನೆಯಲ್ಲಿ ಬೇರೆ ದೇಶಗಳು(ಮುಖ್ಯವಾಗಿ ಅಮೇರಿಕಾ ಮತ್ತು ರಷ್ಯ) ಗೂಢಚಾರರ ಮುಖಾಂತರ ಅವರು ಬಳಸುತ್ತಿರುವ ತಂತ್ರಜ್ಞಾನದ ಬಗ್ಗೆ ಮಾಹಿತಿ ಕಲೆ ಹಾಕಿಕೊಂಡು ಸಂಶೋಧನೆ ನಡೆಸಿದರೆ , ಭಾರತ ಯಾರ ಮೇಲೂ ಅವಲಂಭಿತವಾಗದೆ ಸ್ವಂತ ತಂತ್ರಜ್ಞಾನಗಳ ಮೂಲಕ ಅಭಿವೃದ್ಧಿ ಪಡಿಸಿದೆ . 

ಆದರೂ ಕೂಡ ಬೇರೆ ದೇಶಕ್ಕೆ ಹೋಲಿಸಿಕೊಂಡರೆ ಭಾರತದಲ್ಲಿ ಆಗುತ್ತಿರುವ ಸಂಶೋಧಾನ ಕಾರ್ಯಗಳು ಬಹಳ ಕಡಿಮೆ . ಭಾರತದಿಂದ ಹೊರಬರುತ್ತಿರುವ  ಸಂಶೋಧನಾ ಕೃತಿಗಳು (research papers ) ಬೇರೆ ದೇಶಗಳಿಗೆ ಹೋಲಿಸಿದರೆ ಬಹಳ ಕಡಿಮೆ . ಇದಕ್ಕೆ ಕಾರಣ ಸಂಶೋಧನಾ ಕ್ಷೇತ್ರಕ್ಕೆ ಬರುತ್ತಿರುವ ಯುವಕರು ಮತ್ತು ಪದವೀಧರರು ಬಹಳ ಕಡಿಮೆ . ಮುಖ್ಯ ಕಾರಣ ಅವರಿಗೆ ಸರಿಯಾದ ಅರ್ಥಿಕ ಪ್ರೋತ್ಸಾಹ ಸಿಗದೇ ಇರುವುದು . ಬಹುತೇಕ ಮಧ್ಯಮ ವರ್ಗದವರೇ ಇರುವ ನಮ್ಮ ದೇಶದಲ್ಲಿ ಯುವಕರು ಪದವಿ ಗಳಿಸಿದ ನಂತರ ಜೀವನ ನಡೆಸಲು ಯಾವುದಾದರು ಒಂದು ಕೆಲಸ ಸಿಕ್ಕಿದರೆ ಸಾಕು ಆನುವ ಮನೋಭಾವನೆ ಇದೆ . ಕೆಲವೇ ಕೆಲವು ಸಂಸ್ಥೆಗಳಲ್ಲಿ (IISC , IIT ,BARC )ಮಾತ್ರ ಸಂಶೋಧನಾ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗುತ್ತಿದೆ . ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಈ ವಿದ್ಯಾರ್ಥಿ ವೇತನವನ್ನು ಇನ್ನು ಹಲವಾರು ವಿಶ್ವವಿದ್ಯಾನಿಲಯಗಳಿಗೆ ವಿಸ್ತರಿಸಿದರೆ ಬಹಳಷ್ಟು ವಿದ್ಯಾರ್ಥಿಗಳಿಗೆ  ಅನುಕೂಲ ಆಗುತ್ತದೆ   ಇಂಥ ಪ್ರತಿಭಾವಂತರಿಗೆ ಸೂಕ್ತ ಅವಕಾಶ ಸಿಕ್ಕರೆ ಭಾರತ ಸಂಶೋಧನಾ ಕ್ಷೇತ್ರದಲ್ಲಿ ಕೂಡ ಭಾರತ ಮಹತ್ತರವಾದ ಸಾಧನೆಯನ್ನು ಮಾಡಬಹುದು . ನಮ್ಮಲ್ಲಿರುವ ಮಾನವ ಸಂಪನ್ಮೂಲ ಮತ್ತು ಜ್ಞಾನ ಸಂಪನ್ಮೂಲವನ್ನು ಸೂಕ್ತವಾಗಿ ಬಳಸಿಕೊಂಡರೆ ಭಾರತ ವಿಶ್ವ ಗುರು ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಸಂಸ್ಕೃತ  ಭಾಷೆಯ ಮೂಲ ಭಾರತ . ಭಾರತ ಮೂಲದ vedic mathematics ಬಗ್ಗೆ ಭಾರತಕ್ಕಿಂತ ಜರ್ಮನಿ ಯಲ್ಲಿ ಆಗುತ್ತಿರುವ ಸಂಶೋಧನೆಗಳೇ ಹೆಚ್ಚು . ಜರ್ಮನಿಯ ೧೪ ವಿಶ್ವವಿದ್ಯಾನಿಲಯಗಳಲ್ಲಿ ಸಂಸ್ಕೃತ ಅಧ್ಯಯನ ಕೇಂದ್ರ ಇದೆ . ಭಾರತದಲ್ಲಿ ಕೇವಲ ಏಳು ಸಂಸ್ಕೃತ  ವಿಶ್ವವಿದ್ಯಾನಿಲಯಗಳಿವೆ . ಭಾರತದಲ್ಲಿ ಸಂಸ್ಕೃತ ಅಧ್ಯಯನಕ್ಕೆ ಹೊತ್ತು ಕೊಟ್ಟರೆ ಅದನ್ನು ಶಿಕ್ಷಣದಲ್ಲಿ ಕೇಸರೀಕರಣ ಎಂಬ ಹಣೆ ಪಟ್ಟಿ ಕಟ್ಟಿ ಅದನ್ನು ವಿರೋಧಿಸುತ್ತಾರೆ ನಮ್ಮ ಪ್ರಗತಿಪರರು ಮತ್ತು ಜಾತ್ಯಾತೀತವಾದಿಗಳು  . ಆದರೆ ಜರ್ಮನಿ ಅಲ್ಲದೆ ಆಸ್ಟ್ರೇಲಿಯ , ಜಪಾನ್ , ಯುರೋಪಿನ ಹಲವಾರು ದೇಶಗಳು ಮತ್ತು ಅಮೇರಿಕಾ ಸಂಸ್ಕೃತ ಶಿಕ್ಷಣಕ್ಕೆ ಹೊತ್ತು ಕೊಡುತ್ತಿದೆ . ನಮ್ಮ ಜ್ಞಾನ ಭಂಡಾರದ ಅಧ್ಯಯನಕ್ಕೆ ಬೇರೆ ದೇಶಗಳು ಕೊಡುತ್ತಿರುವ ಪ್ರಾಮುಖ್ಯತೆಯನ್ನುನಮ್ಮ ದೇಶದಲ್ಲಿ ಕೊಡುತ್ತಿಲ್ಲ . ಇದರ ಬಗ್ಗೆ ಕೂಡ ನಾವು ಯೋಚಿಸಬೇಕಾದ ಅವಶ್ಯಕತೆ ಇದೆ . Vedic mathematics ಬಗ್ಗೆ ಭಾರತಕ್ಕಿಂತ ಬೇರೆ ದೇಶಗಳಿಂದಲೇ ಹೆಚ್ಚು ಸಂಶೋಧನಾ ಕೃತಿಗಳು ಬರುತ್ತಿವೆ . 




 ಇಂದು ಬೆಳಗ್ಗೆ  ನರೇಂದ್ರ ಮೋದಿಯವರು ಭಾಷಣ ಮಾಡುವಾಗ "This is Team India, a team of 125 crore Indians. This is the Team that makes the Nation and takes our Nation to new heights" ಎಂದು ಹೇಳುತ್ತಾರೆ . ಖಂಡಿತ ದೇಶದ ಪ್ರತಿಯೊಬ್ಬ ಪ್ರಜೆಯು ದೇಶದ ಒಳಿತಿಗಾಗಿ ಶ್ರಮ ಪಟ್ಟರೆ , ಒಗ್ಗೂಡಿ ನಡೆದರೆ ದೇಶ ಉನ್ನತ ಸ್ಥಾನಕ್ಕೆ ಏರುತ್ತದೆ . ದೇಶವನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯಲು ಎಲ್ಲರೂ ಶ್ರಮಿಸೋಣ , ಭಾರತವನ್ನು ವಿಶ್ವಗುರು ಮಾಡೋಣ . ಮತ್ತೊಮ್ಮೆ ಎಲ್ಲರಿಗು ಸ್ವಾತಂತ್ಯ ದಿನದ ಶುಭಾಶಯಗಳು .

Pic of National Flag with Emblem location : Vidhana Soudha, Bengaluru
 
       
 

Tuesday, April 7, 2015

ಬಿದಿರುತಳ - ಕೊಡೆಕಲ್ಲು ಚಾರಣ

ಏಪ್ರಿಲ್ ೫ , ಪೂರ್ಣಚಂದ್ರ ತೇಜಸ್ವಿ ಅವರು ನಮ್ಮನ್ನಗಲಿ ಇಂದಿಗೆ ೯ ವರ್ಷ ಆಗಿದೆ .. ಅವರ ಸಂಸ್ಮರಣಾ  ಅಂಗವಾಗಿ ಕೊಟ್ಟಿಗೆಹಾರದ "ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜೀವ ವೈವಿಧ್ಯ ಸಂಶೋಧನಾ ಕೇಂದ್ರ ಮತ್ತು ವಿಸ್ಮಯ ಪ್ರತಿಷ್ಠಾನ," ಸಂಸ್ಥೆಯು ಒಂದು  ಚಾರಣವನ್ನು ಚಾರ್ಮಾಡಿ ಘಾಟಿನ ಬಳಿಯ ಬಿದುರುತಳದಿಂದ ಕೊಡೈಕಲ್ಲಿನವರೆಗೆ ಆಯೋಜಿಸಿತ್ತು. . ಕಾಡು ಸುತ್ತುವುದು , ಜೀವ ವೈವಿಧ್ಯಗಳ ಬಗ್ಗೆ ಅಧ್ಯಯನ  , ಛಾಯಾಗ್ರಹಣದ ಮೂಲಕ ಮಲೆನಾಡಿನ ಕಾಡುಗಳನ್ನು ಅಲ್ಲಿನ ಜೀವನ  ಶೈಲಿಯನ್ನು    ಕೃತಿಗಳ ಮೂಲಕ ಪರಿಚಯಿಸಿದ ತೇಜಸ್ವಿ ಅವರ ಬದುಕು ಕೂಡ ಒನ್ ರೀತಿಯ ವಿಸ್ಮಯವೇ ಸರಿ . ಈ ನಿಟ್ಟಿನಲ್ಲಿ ವಿಸ್ಮಯ ಪ್ರತಿಷ್ಠಾನದ ವಾರ್ಷಿಕ ಕಾರ್ಯಕ್ರಮಗಲ್ಲಿ ಚಾರಣ ಕಾರ್ಯಕ್ರಮವು ಕೂಡ ಒಂದು . ಇದೆ ಅಲ್ಲದೆ ಶಾಲಾ ಕಾಲೇಜುಗಳಲ್ಲಿ ತೇಜಸ್ವಿ ಪುಸ್ತಕ ಮತ್ತು ಬದುಕಿನ ಕುರಿತು ವಿಚಾರ ಸಂಕೀರ್ಣಗಳನ್ನು ಕೂಡ ಆಯೋಜಿಸಲಾಗುತ್ತದೆ . ಈ ಎಲ್ಲಾ ಕಾರ್ಯಕ್ರಮಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ನಡೆಯುತ್ತದೆ. 



ಚಾರಣಕ್ಕು ಮೊದಲು ಒಂದು ಗ್ರೂಪ್ ಫೋಟೋ 


ಈ ಚಾರಣಕ್ಕೆ ತೇಜಸ್ವಿ ಅವರ ಒಡನಾಡಿಗಳು , ವಿಸ್ಮಯ ಪ್ರತಿಷ್ಠಾನದ ಕೆಲವು ಸದಸ್ಯರು , ನಾಡಿನ  ನಾನಾ ಭಾಗಗಳಿಂದ ಚಾರಣಪ್ರಿಯರು ,ಪರಿಸರ ಪ್ರೇಮಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.  ಈ ಬಾರಿಯ ಚಾರಣ ಗುಂಪಿನಲ್ಲಿ ಅತಿ ಚಿಕ್ಕ  ಚಾರಣಿಗ ೯ ವರ್ಷ ವಯಸ್ಸಿನವನಾದರೆ , ೭೯ ವರ್ಷದ ಹಿರಿಯ ಚಾರಣಿಗರೂ ಇದ್ದರು . ವಯಸ್ಸಿನ ಮಿತಿ ಇಲ್ಲದೆಂಬಂತೆ ಎಲ್ಲ ವಯೋಮಿತಿಯ ಮತ್ತು ವಿವಿಧ ಉದ್ಯೋಗದಲ್ಲಿರುವವ ಚಾರಣಿಗರೂ ಬಂದಿದ್ದರು . 
With Vasu Sir,eldest trekker(79 yrs) of our troop 


With Navaneeth, youngest trekker(9 yrs) of our troop
With Blog friends(Prashathi, Vidruma, Bhagya)


ಪ್ರತಿ ಬಾರಿಯಂತೆ ಈ ಸಲವೂ ವಿಸ್ಮಯ ಪ್ರತಿಷ್ಠಾನದ ಕಛೇರಿಯಲ್ಲಿ ಬೆಳಗಿನ ಉಪಹಾರ ಸೇವಿಸಿ , ಎಲ್ಲರ ಪರಿಚಯ ಕಾರ್ಯಕ್ರಮದ ನಂತರ ನಮಗಾಗಿ ಕಾದಿದ್ದ ಜೀಪಿನಲ್ಲಿ 'ಖಾನ್ ಹೊರಟ್ಟಿ'ಯ ತನಕ ಸಾಗಿದೆವು . ಈ ಖಾನ್ ಹೊರಟ್ಟಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಅತೀ ಕಡಿಮೆ ಮತದಾರರು(ಸುಮಾರು ೪೦-೫೦)   ಮತಗಟ್ಟೆ ಕೇಂದ್ರ . ಕೊಟ್ಟಿಗೆಹಾರ ದಿಂದ ಚಾರ್ಮಾಡಿ ಘಾಟ್ ಕಡೆಗೆ ಸುಮಾರು ೫-೬ ಕಿ. ಮೀ ಹೋದ ನಂತರ ಬಲಕ್ಕೆ ತಿರುಗಿ ಈ ಜಾಗವನ್ನು ತಲುಪಬೇಕು . ಈ ಹಟ್ಟಿಯು  ನಮ್ಮ ಚಾರಣದ ಬೇಸ್ ಕ್ಯಾಂಪ್ . ಅಲ್ಲಿಂದ ಸುಮಾರು ೪೫ ಸದಸ್ಯರಿದ್ದ ನಮ್ಮ ಚಾರಣದ ಗುಂಪು ಬಿದಿರುತಳದ ಕಡೆಗೆ ನಮ್ಮ ಮಾರ್ಗದರ್ಶಕರಾಗಿದ್ದ ಅರ್ಜುನರ ಅಣತಿಯಂತೆ  ಸಾಗಿತು. ಬೆಳಗ್ಗೆ ಸುಮಾರು ೯:೩೦ ಕ್ಕೆ ಶುರುವಾದ ಚಾರಣ ಮಧ್ಯಾಹ್ನ ೧೨:೩೦ರ ವೇಳೆಗೆ ಬಿದಿರುತಳ ತಲುಪಿದೆವು . 
ಬಿದಿರುತಳದ ಬಳಿಯ ಝರಿ 


ಈ ಬಿರು ಬೇಸಿಗೆಯಲ್ಲೂ ಕೂಡ ಹಲವಾರು ಬಗೆಯ ಹೂವುಗಳ ಸೊಬಗು ಕಂಡಿದ್ದು ಆಶ್ಚರ್ಯವೇ ಅಲ್ಲದೆ ಪರಿಸರದ ಆಟವೂ ಎನ್ನಬಹುದು . ಸುಮಾರು ೩ ರೀತಿಯ ಕಾಡು ಮಲ್ಲಿಗೆ ಹೂವುಗಳು ನಮಗೆ ದರ್ಶನ ನೀಡಿದವು. ಅಷ್ಟೇ ಅಲ್ಲದೆ ಕೆಲವು ಹಣ್ಣುಗಳು ರುಚಿ ನೋಡಲು ಸಿಕ್ಕಿದವು . ಮುಖ್ಯವಾಗಿ ಚಟ್ಟೆ ಹಣ್ಣು , ಕೆಲವು ಕಡೆ ಇದನ್ನು ಮುಳ್ಳು ಹಣ್ಣು ಎಂದೂ ಕರೆಯುತ್ತಾರೆ .. 

ಚಾರಣದ ಹಾದಿಯಲ್ಲಿ 

ಚಾರಣದ ಹಾದಿಯಲ್ಲಿ 

ಚಟ್ಟೆ ಹಣ್ಣು 



Yellow Beauty
ಚಟ್ಟೆ ಹಣ್ಣು 

ಈ ಬಿದಿರುತಳ ಗ್ರಾಮದಲ್ಲಿ ಸುಮಾರು ೭-೮ ಕುಟುಂಬ ವಾಸವಾಗಿವೆ .  ಈ ಗ್ರಾಮವು ಕಾಡಿನ ಮಧ್ಯೆ ಇರುವುದರಿಂದ ಕಾಡು ಪ್ರಾಣಿಗಳ ಉಪಟಳ ಸ್ವಲ್ಪ ಜಾಸ್ತಿಯೇ ಇದೆ ..  ಒಂದು ರೀತಿಯ ಕಾಡು ಬೆಕ್ಕು ಈ ಮನೆಗಳಲ್ಲಿ ಸಾಕಿರುವ ಕೋಳಿ ಹುಂಜಗಳನ್ನು ಆಗಾಗೆ ಹೊತ್ತೊಯ್ಯುತ್ತದೆ .. ಆದರಿಂದ ಕೋಳಿಗಳನ್ನುಅವು ಹೊತ್ತೊಯ್ಯದಂತೆ  ಕೂಡಿ ಹಾಕಲು ಕೆಳಗಿನ ರೀತಿಯ ಕೊಲಿಮನೆಗಳನ್ನು ಎಲ್ಲಾ ಮನೆಯ ಮುಂದೆ ಕಾಣಬಹುದು .. ಅಲ್ಲಿ ಎರಡು ಸಣ್ಣ ಗುಡ್ಡಗಳ ನಡುವೆ ಒಂದು ಸಣ್ಣ ಝರಿಯಲ್ಲಿ ಶುಭ್ರ ನೀರು  ಹರಿಯುತ್ತಿತ್ತು ..  ಅಲ್ಲೇ ಕೂತು ,ನಮ್ಮ ಊಟವನ್ನು ಮುಗಿಸಿದೆವು . ಬೆಳಗ್ಗೆ ಚಾರಣ ಹೊರಡುವ ಮೊದಲೇ ನಮಗಾಗಿ ಊಟದ ಪೊಟ್ಟಣವನ್ನು ಕೊಟ್ಟಿದ್ದರು . ಸ್ವಲ್ಪ ಹೊತ್ತು ವಿರಾಮದ ನಂತರ ನಮ್ಮ ಉದ್ದಿಷ್ಟ ಸ್ಥಳವಾದ ಕೊಡೈ ಕಲ್ಲಿನೆಡೆಗೆ ಸಾಗಿತು . ಇದನ್ನು ಕೆಲವರು,ದೂರಕ್ಕೆ ಕೊಡೆಯ ರೀತಿ ಕಾಣುವುದರಿಂದ  ಕೊಡೆಕಲ್ಲು ಎಂದು ಕರೆಯುತ್ತಾರೆ ಎಂದೂ , ಇನ್ನು ಕೆಲವರು  ಇದು ಚಿಕ್ಕಮಗಳೂರು ಜಿಲ್ಲೆಯ ಅಂಚು ಆಗಿದ್ದು ,ಈ ಗುಡ್ಡದ ಕೆಳಗೆ ಇಳಿದರೆ ದಕ್ಷಿಣ ಕನ್ನಡ ಜಿಲ್ಲೆಯ ಸರಹದ್ದು ಶುರುವಾಗುವುದರಿಂದ ಇದನ್ನು ಕಡೆಕಲ್ಲು ಎಂದೂ ಕರೆಯುತ್ತಾರೆ ಎಂದು ಹೇಳಿದರು . 


ಕೊಡೆಕಲ್ಲು ಅಥವ ಛತ್ರಿ ಕಲ್ಲು 

ಈ ಕಲ್ಲಿನ ಬಳಿ ಸ್ವಲ್ಪ ವಿಶ್ರಾಮ ಮಾಡಿದ ನಂತರ ಮುಂದೆ ಸಾಗಿ ಚಾರ್ಮಾಡಿ ಘಾಟಿನ ಮುಖ್ಯ ರಸ್ತೆಯನ್ನು ಸಂಜೆ ೫:೩೦ ರ ವೇಳೆಗೆ ತಲುಪಿದೆವು .ಅಲ್ಲಿಗೆ ಸುಮಾರು ೧೪ ಕಿ. ಮೀ ನ ನಮ್ಮ ಚಾರಣ ಕೊನೆಗೊಂಡಿತ್ತು . ಮತ್ತೆ ಅಲ್ಲಿಂದ ನಮಗಾಗಿ ಕಾದಿದ್ದ ವಾಹನದಲ್ಲಿ ವಿಸ್ಮಯ ಪ್ರತಿಷ್ಠಾನದ ಕಛೇರಿಯನ್ನು ತಲುಪಿ , ಕಾಫಿ ಸೇವಿಸಿ ನಮ್ಮ ನಮ್ಮ ಊರಿನ ಕಡೆಗೆ ಹೊರಟೆವು .  

ಚಾರಣದ ಇನ್ನೊಂದು ವಿಶೇಷ ಅಂದರೆ ನಮ್ಮ ಧ್ಯೇಯ ಪರಿಸರವನ್ನುಹಾಳು ಮಾಡದೆ ಸ್ವಚ್ಚವಾಗಿಟ್ಟು ಪರಿಸರದ ಸೊಬಗನ್ನು ಸವಿಯುವುದು .. ಆಗಾಗಿ ಯಾರೂ ಕೂಡ ಯಾವುದೇ ರೀತಿಯ ಪ್ಲಾಸ್ಟಿಕ್ ಬಾಟಲ್ ಆಗಲಿ ಪ್ಲಾಸ್ಟಿಕ್ ವಸ್ತುಗಳನ್ನು ಕಾಡಿನ ಮಧ್ಯೆ ಬಿಸಾಡದೆ ಅದನ್ನು ಹಾಗೆ ಪುನಃ ತಂದಿದ್ದು . ಇದಕ್ಕೆ ಪ್ರತಿಯೊಬ್ಬ ಚಾರಣಿಗರೂ ಕೂಡ ಸಹಕರಿಸಿದರು 
ನಿರ್ಮಾಣ ಅಂತದಲ್ಲಿರುವ ವಿಸ್ಮಯ ಪ್ರತಿಷ್ಠಾನದ ನೂತನ ಕಟ್ಟಡ 


ಬರುವಾಗ ನಿರ್ಮಾಣ ಅಂತದಲ್ಲಿರುವ ವಿಸ್ಮಯ ಪ್ರತಿಷ್ಟಾನದ ನೂತನ ಕಚೇರಿಯ ಬಳಿ ಹೋಗಿ ಬಂದೆವು . ಇದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ನಿರ್ಮಾಣ ಆಗುತ್ತಿದ್ದು , ತೇಜಸ್ವಿ ಅವರ ಕುರಿತು ಸಂಶೋಧನೆಗೆ ಮೀಸಲಿಡಲಾಗುತ್ತದೆ. ಈಗ ಕೊಟ್ಟಿಗೆಹಾರದಲ್ಲಿರುವ ಇರುವ ಕಚೇರಿಯು ಅಲ್ಲಿನ Inspection Bungalow ಆಗಿದ್ದು ತಾತ್ಕಾಲಿಕವಾಗಿ ಅಲ್ಲಿ ಕಾರ್ಯ ನಿರ್ವಹಿಸುತ್ತಿದೆ . ಹಾಗಾಗಿ ಈ ಸಂಶೋಧನಾ ಕೇಂದ್ರಕ್ಕೆ ಸ್ವಂತ ಕಟ್ಟಡದ ಅವಶ್ಯಕತೆಯಿದ್ದು ಅದನ್ನು ಮಂಜೂರು ಮಾಡಿದ್ದು ನಿರ್ಮಾಣ ಅಂತದಲ್ಲಿದೆ . ಇಲ್ಲಿ ತೇಜಸ್ವಿ ಅವರು ಬಿಡಿಸಿರುವ ವರ್ಣ  ಚಿತ್ರಗಳು  ಮತ್ತು ಛಾಯಾಚಿತ್ರಗಳ ಪ್ರದರ್ಶನ ಇರುತ್ತದೆ ಮತ್ತು ಅವರ ಮತ್ತು ಪಶ್ಚಿಮ ಘಟ್ಟದ ಕುರಿತು ಅಧ್ಯಯನ ಮತ್ತು ಸಂಶೋಧನೆ ಮಾಡುವ ವಿಧ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ ಎಂಬ ಮಾಹಿತಿ ದೊರಕಿತು 


ಸೂರ್ಯಾಸ್ತ