Showing posts with label ಪ್ರಯಾಣ. Show all posts
Showing posts with label ಪ್ರಯಾಣ. Show all posts

Monday, December 28, 2015

ಕುಪ್ಪಳ್ಳಿ

ಸುಮಾರು ಮೂರು ತಿಂಗಳ ಹಿಂದೆ ಭದ್ರಾವತಿಯ ತಂಗಿಯ ಮನೆಯಲ್ಲಿ ತಿಂಡಿ ತಿಂದು ತೀರ್ಥಹಳ್ಳಿಗೆ ಹೊರಟು ಕವಲೇದುರ್ಗ ಕೋಟೆಗೆ ಹೋಗುವ ಯೋಜನೆ ಹಾಕಿಕೊಂಡಿದ್ದೆ. ನಾನು ತೀರ್ಥಹಳ್ಳಿ ತಲುಪುವ ವೇಳೆಗೆ ಕವಲೇದುರ್ಗ ಹೋಗುವ ಬಸ್ ಅದಾಗಲೇ ಹೊರಟು ಹೋಗಿತ್ತು . ಮತ್ತೆ ಮಧ್ಯಾಹ್ನ ಎರಡು ಘಂಟೆಗೆ ಬಸ್ ಇದ್ದಿದ್ದರಿಂದ ಯೋಜನೆಯನ್ನು ಬದಲಾಯಿಸಿ ಕುಪ್ಪಳ್ಳಿ ಕಡೆಗೆ ಹೊರಟೆ. 

ತೀರ್ಥಹಳ್ಳಿಯಿಂದ ಸುಮಾರು ೧೮ ಕಿ.ಮೀ ದೂರದಲ್ಲಿ ಕುಪ್ಪಳ್ಳಿ ಇದೆ. ಬಸ್ಸಿನಿಂದ ಇಳಿದ ಕೂಡಲೆ ಕುಪ್ಪಳ್ಳಿಗೆ ಹೋಗುವ ನಿರ್ದೇಶನ ಫಲಕ ಸಿಗುತ್ತದೆ. ಅಲ್ಲಿಂದ ಕವಿಮನೆ ತಲುಪಬೇಕಾದರೆ ಸುಮಾರು ೨ ಕಿ.ಮೀ ದೂರ ನಡೆದು ಹೋಗಬೇಕು.


ಈ ಸ್ಥಳದಿಂದ ಸುಮಾರು ೧ ಕಿ. ಮೀ ಸಾಗಿದರೆ ಮೊದಲು ಸಿಗುವುದು ಪೂರ್ಣಚಂದ್ರ ತೇಜಸ್ವಿ ಅವರ ಸಮಾಧಿ . ಅದರ ಎದುರಲ್ಲೇ ಕವಿಶೈಲಕ್ಕೆ ಹೋಗುವ ದಾರಿಯೂ ಇದೆ. 

Way to KaviShaila



ತೇಜಸ್ವಿ ಸಮಾಧಿ 

ಇಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಕುವೆಂಪು ಜನ್ಮಶತಮಾನೋತ್ಸವ ಭವನ ಸಿಗುತ್ತದೆ. 'ಓ ನನ್ನ ಚೇತನ , ಆಗು ನೀ ಅನಿಕೇತನ. ಎಂಬ ಕುವೆಂಪ ಅವರ ಸುಪ್ರಸಿದ್ಧ ಸಾಲು ಈ ಭವನದ ಮುಖ್ಯದ್ವಾರದಲ್ಲಿ ನಮ್ಮನ್ನು ಸ್ವಾಗತಿಸುತ್ತದೆ. ಈ ಭವನವು ಯಾತ್ರಿ ನಿವಾಸವು ಕೂಡ ಆಗಿದ್ದು ಇದರ ಒಳಗೆ ಪ್ರತಿ ಗೋಡೆಯಲ್ಲೂ ಕುವೆಂಪು ಅವರ ಹಲವಾರು ಉಲ್ಲೇಖಗಳನ್ನು ಕೆತ್ತಲಾಗಿದೆ. ಕುವೆಂಪು ಮಲ್ಟಿ ಮೀಡಿಯಾ ಹಾಲ್ ಮತ್ತು ತೇಜಸ್ವಿ ಗ್ಯಾಲರಿ ಕೂಡ ಇದ್ದು , ತೇಜಸ್ವಿ ಅವರ ಹಲವಾರು ಪಕ್ಷಿ ಛಾಯಾ ಚಿತ್ರಗಳ ಪ್ರದರ್ಶನ ಇದೆ. ಅಲ್ಲದೆ ಕುವೆಂಪು ಅವರ ಜೀವನದ ಕೆಲವು ಘಟನೆಗಳು ಮತ್ತು ಹಲವಾರು ಹಿರಿಯ ಸಾಹಿತಿಗಳು ಮತ್ತು ರಾಜಕಾರಣಿಗಳ ಜೊತೆ ಇರುವ ಛಾಯಾಚಿತ್ರಗಳು ಕೂಡ ಪ್ರದರ್ಶನಕ್ಕಿವೆ . ಈ ಪ್ರದೇಶದಲ್ಲಿ ಕುವೆಂಪು ಅವರ ಹಲವಾರು ಕವಿತೆಗಳನ್ನು ಕೆತ್ತಲಾಗಿದ್ದು , ಅವರ ಕಾದಂಬರಿಗಳ  ಮುಖ್ಯ ಪಾತ್ರಗಳಾದ ನಾಯಿಗುತ್ತಿ ಮತ್ತು ಹೆಗ್ಗಡತಿಯ ಕಲಾಕೃತಿ ಕೂಡ ಇದೆ . ಅಲ್ಲಿಂದ ಸ್ವಲ್ಪ ದೂರ ಸಾಗಿದರೆ ಸಿಗುವುದು ಕವಿಮನೆ. ಕುವೆಂಪು ಅವರು ಹುಟ್ಟಿ ಬೆಳೆದಂತಹ ಮನೆ . ಈಗ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವು ಇದನ್ನು ಕುವೆಂಪು ಸ್ಮಾರಕವನಾಗಿ ಪರಿವರ್ತಿಸಿ ಅದರ ರೂಪುರೇಷೆಗಳನ್ನು ನೋಡಿಕೊಳ್ಳುತ್ತಿದೆ. 

ಕುವೆಂಪು ಜನ್ಮಶತಮಾನೋತ್ಸವ ಭವನ 




Thejaswi Gallery

ಮಲೆನಾಡಿನ ಹಸಿರಿನ ನಡುವೆ ಇರುವ ಈ ಕವಿಮನೆಯು ಮಲೆನಾಡಿನ ವಿಶಿಷ್ಟ ವಾಸ್ತುಶಿಲ್ಪವನ್ನು ಹೊಂದಿದೆ. ಈ ಮನೆಯ ಒಳಗೆ ಛಾಯಾಚಿತ್ರ ತೆಗೆಯುವುದು ನಿಷೇದ ಇರುವ ಕಾರಣ ಯಾವುದೇ ಛಾಯಾಚಿತ್ರವನ್ನು ಈ ಲೇಖನದಲ್ಲಿ ಸೇರಿಸಲಾಗುತ್ತಿಲ್ಲ. ಈ ಮನೆಯ ಕೆಲ ಮಹಡಿಯಲ್ಲಿ ಹಲವಾರು ಹಳೆಯ ಮನೆ ಬಳಕೆ ವಸ್ತುಗಳು ಪ್ರದರ್ಶನಕ್ಕಿವೆ. ಅದರಲ್ಲಿ ಮುಖ್ಯವಾದದ್ದು ಕುವೆಂಪ ಅವರ ಮಾಡುವೆ ಆದಂತಹ ಮಂಟಪ , ಅವರ ಲಗ್ನ ಪತ್ರಿಕೆ , ದವಸ ಧಾನ್ಯಗಳನ್ನು ಶೇಕರಿಸಿ ಇದುತ್ತಿದ್ದಂತಹ ಮರದ ಡಬ್ಬಿಗಳು  ತೊಟ್ಟಿಲು , ಅಡುಗೆ ಮನೆಯ ಪಾತ್ರೆಗಳು , ಶಾವಿಗೆ ಮಣೆ , ಮಜ್ಜಿಗೆ ಕಡೆಯುವ ಪಂತು ಅಥವಾ ಕಡೆಗೋಲು , ಹೊಗೆ ಅಟ್ಟ ಇತ್ಯಾದಿ . ಅಲ್ಲದೆ ಬಾಣಂತಿ ಮನೆ ಎಂಬ ಇನ್ನೊಂದು ಕೋಣೆ ಕೂಡ ಇದೆ . 


ಮೆಟ್ಟಿಲುಗಳನ್ನು ಏರಿ ಮೊದಲನೇ ಮಹಡಿ ತಲುಪಿದರೆ ಅಲ್ಲಿ ಕುವೆಂಪು ಅವರು ಬಳಸುತ್ತಿದ್ದ ಕನ್ನಡಕ ಛತ್ರಿ ಪೆನ್ನು, ಬಾಚಣಿಗೆ , ಉರು ಗೋಲು , ಕೋಟು ಮುಂತಾದ ವಸ್ತುಗಳಿವೆ . ಅಲಲ್ದೆ ಅವರ ಪದ್ಮ ಭೂಷಣ ಮತ್ತು ಪದ್ಮ ವಿಭೂಷಣ , ಕರ್ನಾಟಕ ರತ್ನ ಪ್ರಶಸ್ತಿಗಳು ಕೂಡ ಇದೆ . ಎರಡನೇ ಮಹಡಿಯಲ್ಲಿ ಅವರ ಕೃತಿಗಳು ಮತ್ತು ಎಷ್ಟೋ ವಿಶ್ವವಿದ್ಯಾಲಯಗಳಿಂದ ದೊರಕಿದ ಗೌರವ ಡಾಕ್ಟರೇಟ್ ಪದವಿಗಳು ಕೂಡ ಅಲ್ಲಿ ಪ್ರದರ್ಶನಕ್ಕಿದೆ . 

ಕವಿ ಮನೆಯ ಹೊರಗೆ ಇನ್ನೊಂದು ಸಣ್ಣ ಮನೆ ಇದ್ದು ಅಲ್ಲಿ ಕೃಷಿ ಸಲಕರಣೆಗಳನ್ನು ಇಡಲಾಗಿದೆ. 

ಅಲ್ಲಿಂದ ಸೀದಾ ನನ್ನ ನದಿಗೆ ಕವಿ ಶೈಲದ ಕಡೆಗೆ ತಿರುಗಿತು . ಕವಿಮನೆಯ ಪಕ್ಕದಲ್ಲೇ ಕವಿಶೈಲಕ್ಕೆ ಕಾಲುದಾರಿ ಇದೆ, 

Kavimane



Way to Kavishaila from Kavimane

Signboard

Entrance of Kavishaila

ಕವಿ ಸಮಾಧಿ 


Signatures of legends

ಕವಿಶೈಲದಲ್ಲಿ ಕುವೆಂಪು ಅವರ ಸಮಾಧಿ ಇದ್ದು , ಅಲ್ಲಿ ಒಂದು ಕಲ್ಲಿನ ಮೇಲೆ ಕುವೆಂಪ ಅವರ ಹಸ್ತಾಕ್ಷರ ಇದ್ದು, ಅವರ ಗುರುಗಳಾದ ಟಿ .ಎಸ್  ವೆಂಕಣ್ಣಯ್ಯ ಮತ್ತು ಬಿ.ಎಮ್.ಶ್ರಿ ಅವರ ಸಹಿ ಕೂಡ ಇದೆ. ಅಲ್ಲದೆ ಪೂರ್ಣಚಂದ್ರ ತೇಜಸ್ವಿ ಅವರದ್ದು ಕೂಡ . 

ಕವಿಮನೆಯಲ್ಲಿ ಕುವೆಂಪು ಮತ್ತು ತೇಜಸ್ವಿ ಅವರ ಪುಸ್ತಕಗಳು ಕೂಡ ಮಾರಟಕ್ಕೆ ಲಭ್ಯವಿದೆ.

ಹೀಗೆ ಕುಪ್ಪಳ್ಳಿಯ ಸೊಬಗನ್ನು ಸವಿದು ಇಬ್ಬರು ಮಹಾನ ಲೇಖಕರ ಅಸ್ತಿತ್ವವನ್ನು ಅರಿತು ಅಲ್ಲಿಂದ ಕವಲೇದುರ್ಗದ ಕಡೆಗೆ ನನ್ನ ಏಕಾಂಗಿ  ಪಯಣ ಸಾಗಿತು . ಮುಂದಿನ ಸಂಚಿಕೆಯಲ್ಲಿ ಕವಲೇದುರ್ಗದ ಇತಿಹಾಸವನ್ನು ಮತ್ತು ನನ್ನ ಅನುಭವಗಳನ್ನು ಕೆಲವು ಛಾಯಾಚಿತ್ರಗಳ ಜೊತೆ ಹಂಚಿಕೊಳ್ಳುತ್ತೇನೆ. 

Thursday, March 22, 2012

ಪೋಲಿಸ್ ಸ್ಟೇಷನ್ನಲ್ಲಿ ಮ್ಯಾಚ್ ನೋಡಿದ್ದು ಹಿಂಗೆ...

ಈ ಉಗಾದಿ ಹಬ್ಬಕ್ಕೆ ಊರಿಗೆ ಹೋಗಬೇಕಾದ್ರೆ ಏನಾದ್ರೂ ಒಂದು ತಾಪತ್ರೆ ಆಗುತ್ತೆ...ಅವಾಗ ಒಂದ್ಸಲ ಹಿಂಗೆ ದುಡ್ಡು ಕಳ್ಕೊಂಡು ಹೋಗಿದ್ದೆ ... ಹೋದ ವರ್ಷ ಹೋಗಬೇಕಾದ್ರೆ ಇನ್ನೂ ವಿಚಿತ್ರ... ಅದೇನಾಯ್ತು ಅಂದ್ರೆ ಎಲ್ಲರೂ ಮನೇಲಿ ಕೂತು ಕ್ರಿಕೆಟ್ ನೋಡ್ತಿದ್ರೆ ನಾವು ಪೋಲಿಸ್ ಸ್ಟೇಷನ್ ನಲ್ಲಿ ನೋಡ್ತಾ ಇದ್ವಿ ...... The story goes like this...

ಹಬ್ಬ ಇದ್ದಿದ್ದು ಸೋಮವಾರ... ಅದಕ್ಕಿಂತ ಎರಡು ದಿನ ಮುಂಚೆ ಅಂದ್ರೆ ಶನಿವಾರ ವಿಶ್ವ ಕಪ್ ಫೈನಲ್ ಮ್ಯಾಚ್ ಇತ್ತು.. ನಮ್ಮ  ದೇಶ ಮತ್ತೆ ಶ್ರೀಲಂಕಾ ನಡುವೆ... ಅವತ್ತೇ ಊರಿಗೆ ಹೊರಡೋ ಪ್ಲಾನ್ ಹಾಕಿಕೊಂಡೆ..ಬೆಳಗ್ಗೆ ಟ್ರೈನ್ ಪ್ರತಿ ಶನಿವಾರ ಫುಲ್ ರಶ್ ಇರತ್ತೆ...ಅದು ಅಲ್ಲದೆ ಇದು ಹಬ್ಬದ ವಾರ ಬೇರೆ..ಇನ್ನೂ ರಶ್ ಇರತ್ತೆ..ಹೇಗೂ ಇವತ್ತು ಫೈನಲ್ ಇರೋದ್ರಿಂದ ಸಂಜೆ ಟ್ರೈನ್ ಅಷ್ಟು ರಶ್ ಆಗಲ್ಲ ಅಂತ,ಅದಕ್ಕೆ ಹೋಗೋ ನಿರ್ಧಾರ ಮಾಡಿದೆ..ಹೇಗೂ ಊರಿಗೆ ಹೋಗಿ ಕಡಿದು ಕಟ್ಟೆ ಕಟ್ಟದು ಅಷ್ಟರಲ್ಲೇ ಇದೆ ಅಂತ.. ಕ್ರಿಕೆಟ್ ನೋಡದು ಬಿಟ್ಟು ಜಮಾನ ಆದ್ದರಿಂದ ಅವತ್ತು ಕೂಡ ಮ್ಯಾಚ್ ನೋಡೋ ಗೋಜಿಗೆ ತಲೆ ಕೆಡಿಸಿಕೊಳ್ಳಲಿಲ್ಲ...ಸರಿ ಸಂಜೆ ಟ್ರೈನ್ ಗೆ ಹೋದರೆ ಯಾವಾಗಲು ಖಾಲಿ ಇರೋದು ಅವತ್ತು ನೋಡಿದ್ರೆ ಸ್ವಲ್ಪ ಜನ ತುಂಬಿದ್ದರು.ಹಿಂದಿನ ದಿನ ಇದ್ದ ಮೂರ್ಖರ ದಿನ ಮೂರ್ಖ ಆಗಿರಲಿಲ್ಲ...ಆದರೆ ಅವತ್ತು ಆಗ್ಬಿಟ್ಟೆ...ಸೀಟು ಸಿಗುತ್ತೆ ಮ್ಯಾಚ್ ಇರೋದ್ರಿಂದ ಅಂತ ಈ ರೈಲಿಗೆ ಬಂದ್ರೆ ಇದರಲ್ಲೂ ಸಿಗಲಿಲ್ಲ...ಥೋ ಇನ್ನೇನ್ ಮಾಡೋದ್ ಅಂತ ಸುಮ್ಮನಾದೆ...

ಸರಿ ಆಮೇಲೆ ಏನಾಯ್ತು ಅಂದ್ರೆ ನನ್ನ ಹಳೆ ಚಾಳಿ ಅಂತೆ ಅಕ್ಕ ಪಕ್ಕದವರ ಜೊತೆ ಹರಟೆ ಹೊಡೆಯೋದು ಶುರು ಆಯ್ತು... ಸೀಟು ಸಿಕ್ಕಿದ್ದರೆ ಯಾವುದಾದರು ಪುಸ್ತಕ ಓದುತ್ತ ಕೂರ್ತಿದ್ದೆ...ನಿಂತಿದ್ದನಲ್ಲ ವಿಧಿ ಇಲ್ಲದೆ ಅವರಿವರ ಜೊತೆ ಮಾತು ಶುರು ಆಯ್ತು...ಎಲ್ಲಾರ್ಗೂ ಮ್ಯಾಚ್ ಬಗ್ಗೆನೇ ಚಿಂತೆ...ಅವಾಗ ಒಬ್ರು ಜಗದೀಶ್ ಅಂತ ಪರಿಚಯ ಆದರು,ನಮ್ಮ ಊರಿನ ಹತ್ತಿರದವರೇ...ಸಹಜ ಸ್ವಭಾವ,ನಮ್ಮ ಹತ್ತಿರದವರು ಎಲ್ಲಾದರು ಕಂಡಾಗ ಮಿತಿಗಿಂತ ಜಾಸ್ತಿ ಮಾತಾಡ್ತೀವಿ..ನಾವಿಬ್ಬರೂ ಅರಸಿಕೆರೆಯಲ್ಲಿ ಇಳಿದು ಒಂದೇ ಬಸ್ಸಿಗೆ ಹಳೇಬೀಡಿಗೆ ಹೋಗಬೇಕಿತ್ತು...ಅದು ನಮಗೆ ಕೊನೆ ಬಸ್..ಆಗಾಗಿ ನನಗೂ ಒಬ್ಬರು ಜೊತೆ ಸಿಕ್ಕಿದರು,ಅವರಿಗೂ ಸಿಕ್ಕಿದರು,ಮಾತು ಕಥೆ ಶುರು ಆಯ್ತು...ನಮ್ಮ ನಮ್ಮ ಊರಿನ ಬಗ್ಗೆ,ನಮ್ಮ ಕೆಲಸದ ಬಗ್ಗೆ,ಬೆಂಗಳೂರಿನಲ್ಲಿ ಎಲ್ಲಿರದು,ಅದು ಇದು ಎಲ್ಲಾ...

ಅಷ್ಟೊತ್ತಿಗಾಗಲೇ ಶ್ರೀಲಂಕಾ ಬ್ಯಾಟಿಂಗ್ ಮುಗಿದು ನಮ್ಮ ಇಂಡಿಯಾ ಬ್ಯಾಟಿಂಗ್ ಶುರು ಆಗಿತ್ತು... ಅದಕ್ಕೂ  ಮುಂಚೆ  ನನ್ನ ಸಹೋದ್ಯೋಗಿ ಒಬ್ಬ ಫೋನ್ ಮಾಡಿ ಅವ್ರು ಇಷ್ಟಿಷ್ಟು ಸ್ಕೋರ್ ಮಾಡಿದ್ದಾರೆ,ಬೆಟ್ ಗಿಟ್ ಕಟ್ಟುತ್ತೀಯ ಅಂತ ಕೇಳಿದ ...ಇಲ್ಲ ಗುರು,ನನಗೆ ಅದರ ಸಹವಾಸ ಬೇಡ ಅಂತ ಹೇಳಿ,ಅವನು, ಇವತ್ತು ನಮ್ಮವರು ಸೋಲ್ತಾರೆ ಅಂತ ಹೇಳಿ ಫೋನ್ ಇಟ್ಟ..ಅದಾದ್ ಮೇಲೆ ಬೇಡ ಬೇಡ ಅಂದ್ರು ಪಕ್ಕದಲ್ಲಿದ್ದವರು ಸ್ಕೋರ್ ಹೇಳಕ್ಕೆ ಶುರು ಮಾಡಿದ್ರು,ಒಹ್ ಸೆಹವಾಗ್ ಔಟ್ ಆದ,ಸಚಿನ್ ಔಟಾದ..ಗೆಲ್ಲಲ್ಲ ಬಿಡಿ ಹಂಗೆ ಹೀಗೆ ಅಂತ ಬಹುತೇಕ ಎಲ್ಲರ ಬಾಯಲ್ಲೂ ಇದೆ ಮಾತು...

ಸರಿ ಟ್ರೈನ್ ಅರಸೀಕೆರೆಗೆ ಬಂತು.. ಹೊಟ್ಟೆಗೆ ಸ್ವಲ್ಪ ತಳ ಕಟ್ಟಿಕೊಂಡು ನಾನು ಮತ್ತು ಜಗದೀಶ್ ಇಬ್ಬರೂ ನಮ್ಮ ಕೊನೆ ಬಸ್ ಹತ್ತಿ ಹೊರಟ್ವಿ..ನನಗೂ ಕೆಲ ಸ್ನೇಹಿತರು ಅವಾಗವಾಗ updates ಕೊಡ್ತಿದ್ರು..ಮ್ಯಾಚ್ ನೋಡಲಿಲ್ಲ ಅಂದ್ರು ಸ್ವಲ್ಪ excitment ಇದ್ದೆ ಇತ್ತು...ಅವರಿಗೂ ಕೆಲವರು ಸ.ಮೊ.ಸ ಕಳಿಸ್ತಿದ್ರು..ಇನ್ನ ೮೪ ಎಸೆತ ೮೪ ರನ್ ಬೇಕಿತ್ತು.. ಅದೇ ಸಮಯಕ್ಕೆ ಸರಿಯಾಗಿ ಜಾವಗಲ್ಲಿಗೆ(ಜಾವಗಲ್ ಶ್ರೀನಾಥ್ ಅವರ ಊರು) ಬಂದಿದ್ವಿ.ಅಲ್ಲಿ ಉಟಕ್ಕೆ ಅಂತ ೧೦ ನಿಮಿಷ ಬಸ್ ನಿಲ್ಲಿಸಿದರು,ಆಗ ನನ್ನ ಜೊತೆಗಿದ್ದ ಜಗದೀಶ್ ಅವರು,ಮುಂಚೆ ಅವರು ಕೂಡ ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡಿ,ಅಲ್ಲಿ ಬಿಟ್ಟು ಆಗ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು.ಅವರು ಪೋಲಿಸ್ ಆಗಿದ್ದಾಗ ಇದ್ದ ಸ್ನೇಹಿತರು ಕೆಲವರು ಆ ಸಮಯದಲ್ಲಿ ಜಾವಗಲ್ ಗೆ ವರ್ಗಾವಣೆ ಆಗಿದ್ದರು,ಆಗಾಗಿ "ಬನ್ನಿ ಗಿರೀಶ್,ಒಂದ್ ಹತ್ತು ನಿಮಿಷ ಮ್ಯಾಚ್ ನೋಡ್ಕಂಡು ಬರೋಣ" ಅಂತ ಬಸ್ ನಿಲ್ದಾಣದ ಪಕ್ಕದಲ್ಲೇ ಇರೋ ಅಲ್ಲಿನ ಪೋಲಿಸ್ ಸ್ಟೇಷನ್ ಗೆ ಕರ್ಕೊಂಡು ಹೊರಟರು.."ಬೇಡ ಸರ್,ಅಲ್ಲೇನ್ ಟಿವಿ ಇರುತ್ತಾ" ಅಂತ ಕೇಳ್ದಾಗ,"ಹೇ ನಮ್ಮ ಫ್ರೆಂಡ್ ಅಲ್ಲೇ ಇದ್ದಾನೆ,ಇಷ್ಟೊತ್ತು ಅವನೇ ನನಗೆ ಮೆಸೇಜ್ ಕಳ್ಸಿದ್ದು,ಫೋನ್ ಮಾಡಿದ್ದೆ,ಬನ್ನಿ ಅಂದ" ಅಂತ ಹೇಳಿ ಕರ್ಕೊಂಡ್ ಹೊರಟರು.."ಮತ್ತೆ ಬಸ್ ಗಿಸ್ ಮಿಸ್ ಆದ್ರೆ ಕಷ್ಟ" ಅಂದ್ರೆ"ಏ,ಕಂಡಕ್ಟರ್ ಗೆ ಹೇಳ್ತೀನಿ ತಾಳಿ,ಒಂದೆರಡು ಓವರ್ ನೋಡ್ಕಂಡ್ ಬರಣ" ಅಂತ ಕರ್ಕಂಡ್ ಹೊರಟರು...
"ನಿಮ್ ಬ್ಯಾಗ್ ಇದ್ರೆ ತಗಳಿ,ರಾತ್ರಿ ಬೇರೆ,ಸುಮ್ನೆ ಯಾಕ್ ರಿಸ್ಕ್,ಯಾವನಾದ್ರು ಎತ್ಕಂಡ್ ಹೋದ್ರೆ" ಅಂತ ಎಚ್ಚರಿಸಿ ಕರ್ಕಂಡ್ ಹೊರಟರು... ಅಲ್ಲಿ ಮುಂಬಯಿಯಲ್ಲಿ ಟೀಂ ಇಂಡಿಯಾದವರು ರನ್ chase ಮಾಡ್ತಿದ್ರೆ ನಮಗೆ ಇಲ್ಲಿ ಬಸ್ chase ಮಾಡಕ್ಕೆ ಆಗ್ಲೇ ಇಲ್ಲ...

ಮನಸಲ್ಲೇ ಜಗದೀಶ್ ಅವ್ರಿಗೆ ಬೈಕೊಂಡು "ಈಗೇನ್ ಮಾಡೋದ್ ಸರ್?" ಅಂದೆ,"ಏ ಬನ್ನಿ ಗಿರೀಶ್,ಮ್ಯಾಚ್ ನೋಡ್ಕಂಡ್ ಆಮೇಲೆ ನೋಡನ.. ಸಖತ್ ಇಂಟರೆಸ್ಟಿಂಗ್ ಇದೆ ಮ್ಯಾಚ್,ಯಾರ್ದಾರ ಬೈಕ್ ಇಸ್ಕಂಡ್ ಹೋಗಣ,ನಿಮ್ಮ ಊರಿಗೆ ಬಿಡ್ತೀನಿ ನಾನು" ಅಂತ ಧೈರ್ಯ ಕೊಟ್ರು..ಆದರು ಸಮಾಧಾನ ಆಗ್ಲಿಲ್ಲ..ಮತ್ತೆ ಸ್ಟೇಷನ್ ಗೆ ಹೋದ್ರೆ,ಅಲ್ಲಿದ್ದ ಬೇರೆ ಪೋಲಿಸಿನವರು ಯಾವೂರು ಅಂತ ಕೇಳಿದ್ರು,ಸಿದ್ದಾಪುರ ಅಂದೆ..ಆ ಊರಿನವರು ಒಬ್ರು  ಇದೆ ಸ್ಟೇಷನ್ ನಲ್ಲಿ ಇದ್ರು ಕಣಪ್ಪ ಮುಂಚೆ.. ಈಗ ಸಕಲೇಶಪುರದಲ್ಲಿ ಇದ್ದಾರೆ...ಅಯ್ಯೋ,ಅವರು ನಮ್ಮ ಚಿಕ್ಕಪ್ಪನೇ ಸರ್ ಅಂದೆ...ಬಿಡು ಮತ್ತೆ ನಮ್ಮವರೇ ನೀವು, ಯಾಕ್ ಯೋಚನೆ ಮಾಡ್ತಿಯ,ಬೈಕ್ ಕೊಡ್ತೀವಿ ತಗಂಡ್ ಹೋಗಿ,ಹೆಂಗೂ ಇವನು ಇದ್ದಾನಲ್ಲಾ ,ಬಿಡ್ತಾನೆ ಅಂದ್ರು...ಅವಾಗ ಸ್ವಲ್ಪ ಸಮಾಧಾನ ಆಯ್ತು..

ಸರಿ ಮ್ಯಾಚ್ ಮುಗಿತು,ನಮ್ಮವರು ಗೆದ್ದರು,ಇನ್ನೇನ್ ಹೊರಡೋಣ ಅಂತ ಇದ್ವಿ,ಆಗ ನಮ್ಮಂಗೆ ಹೊರಗಿನವರು ಅಲ್ಲಿ ಮ್ಯಾಚ್ ನೋಡ್ತಿದ್ದವರಲ್ಲಿ ಒಬ್ಬರು,'ಏ ಇಷ್ಟೊತ್ತು ಇದ್ದೀರಾ,ಅತ್ಲಾಗಿ ಕಪ್ ಕೊಡೋದನ್ನು  ನೋಡ್ಕಂಡ್ ಹೋಗಿ"ಅಂದ್ರು..ಅವರಿಗೆ ಪರಮಾತ್ಮ ಮೈ ಮೇಲೆ ಬಂದಿದ್ದ..."ಗೆದ್ದರಲ್ಲ ಅಷ್ಟು ಸಾಕು ಬಿಡಿ" ಅಂದಾಗ' "ನೋಡ್ರಿ ಅಲ್ಲಿ ನಮ್ ಅಣ್ಣ ಸಚಿನ್ ನ ಹೆಂಗೆ ಹೊತ್ಕಂಡವ್ರೆ" ಅಂತ ಆತ ಕೂಡ ಕುಣಿಯಕ್ಕೆ ಶುರು ಮಾಡಿದ...ಆಗ ಅಲ್ಲಿದ್ದ ಒಬ್ಬ ಪೀಸಿ ರೀ ಸಾಹೇಬರು ಬರ್ತಾರೆ ಇವಾಗ,ನಡೀರಿ ನಡೀರಿ,ನಾವು ಹೊರಡಬೇಕು..ಎಲ್ಲಾದರು ಗಲಾಟೆ ಗಿಲಾಟೆ ಆಗುತ್ತೆ ಅಂತ ರೌಂಡ್ಸ್ ಹೋಗಕ್ಕೆ ಹೇಳಿದ್ದಾರೆ ಅಂತ ಹೊರಟರು.. ಆಗ ಈ  ಜಗದೀಶ್ ಇದ್ದವರು ಅವರ ಫ್ರೆಂಡ್ ಹತ್ತಿರ ಬೈಕ್ ತಗೊಂಡು ನಾವು ಹೊರಟ್ವಿ...ನೋಡಿದ್ರೆ ದಾರಿ ಮಧ್ಯೆ ಎಲ್ಲಾ ಹಳ್ಳೀಲೂ celebrations ಫುಲ್ ಜೋರಾಗಿತ್ತು.. ತಮಟೆ ಬಾರಿಸ್ತಾ ಡೋಲು ಬಾರಿಸ್ತಾ ರಸ್ತೆ ಮಧ್ಯೆದಲ್ಲೇ ಕುಣಿತಿದ್ದರು..

ಅಂತು ಇಂತು ಮನೆ ತಲುಪಿದಾಗ ರಾತ್ರಿ ೧೨.೩೦...ಆ ಬಸ್ಸಿಗೆ ಹೋಗಿದ್ದರೆ ೧೦.೧೫ಕ್ಕೆ ಮನೇಲಿ ಇರ್ತಿದ್ದೆ.. ಇನ್ನೂ ಬರದೆ ಇದ್ದದಕ್ಕೆ ಅಪ್ಪ ಫೋನ್ ಮಾಡಿದ್ದಾರೆ..ನನ್ನ ಮೊಬೈಲ್ out of coverage area ಇತ್ತು... ಕೊನೆಗೆ ಬರ್ತಾನೆ ಬಿಡು ಅಂತ ಸುಮ್ನಾಗಿದ್ರಂತೆ...ಅವತ್ತು ನಮ್ಮ ದೊಡ್ಡಮ್ಮ ಬಂದಿದ್ದರು ಅಂತ ಪಾಯಸ ಮಾಡ್ಕೊಂಡು ನನಗೋಸ್ಕರ ಉಟಕ್ಕೆ ಕಾದು ಕಾದು ಸಾಕಾಗಿ ಫೋನ್ ಮಾಡಿ ಮಾಡಿ ಸುಸ್ತಾಗಿ "ಏಲ್ ಹೋದ ಈ ನನ್ ಮಗ" ಅಂತ ಬೈಕೊಂಡು,ಹೊಟ್ಟೆ ಹಸಿದ ಮೇಲೆ ಊಟ ಮಾಡಿ ಮಲಗಿದ್ದರು.. ಮನೆಗೆ ಹೋಗಿ ಯಾಕ್ ಲೇಟ್ ಅಂತ ಅವ್ರು ಕೇಳ್ದಾಗ,ಹಿಂಗಿಂಗೆ ಆಯ್ತು,ಅವ್ರು ಬಂದು ಬಿಟ್ಟು ಹೋದರು,ಅಂದೆ..ನಮ್ ಅಪ್ಪಾಜಿ ತಲೆ ತಲೆ ಚಚ್ಕಂಡ್ ನಕ್ಕಿದ್ರೆ,ನಮ್ ಅಮ್ಮ "ಅವ್ರು ಬೈಕ್ ಕೊಡಬಾರದಿತ್ತು ಕಣ್ಲ ನಿಮಗೆ,ಅಷ್ಟು ಪರಿಜ್ಞಾನ ಬ್ಯಾಡವೇ ?" ಅಂತ ಒಂದ್ ಲುಕ್ ಕೊಟ್ಟು "ಹೊಗ್ ಪಾಯಸ ತಣ್ಣಗೆ ಆಗಿದೆ,ಅದನ್ನೇ ತಿನ್ನು" ಅಂತೇಳಿ ಮಲಗಿದರು.. ಹಳೇಬೀಡಿನಲ್ಲಿ  ನನ್ನ ಫ್ರೆಂಡ್ ಪೃಥ್ವಿ ಮನೇಲಿ ಇದ್ದೀನಿ,ಅಲ್ಲಿ ಮ್ಯಾಚ್ ನೋಡ್ತಾ ಇದ್ದೆ ಅಂತ ತಿಳ್ಕಂಡಿದ್ದರಂತೆ...


ಹೋದ ವರ್ಷ ಹಿಂಗೆ ಆಗಿತ್ತು...ಈ ವರ್ಷ ಈ ಥರ ಏನು adventurous ಸಂಗತಿ ನಡೆಯಲ್ಲ.. ಯಾಕಂದ್ರೆ ಬೆಳಗ್ಗೆ ಟ್ರೈನ್ ಗೆ ಹೋಗ್ತಿರದು.. ಅಲ್ಲದೆ ಜೊತೆಗೆ ಫ್ರೆಂಡ್ಸ್ ಇರ್ತಾರೆ...ನನ್ ಕಥೆ ಯಾವಾಗ್ಲೂ ಹಿಂಗೆ ...ಅದ್ ಬಿಡಿ...


ಪ್ರಕೃತಿಯ ಹೊಸ ಚಿಗುರಿನೊಂದಿಗೆ,ಹುರುಪಿನೊಂದಿಗೆ ನವ 'ನಂದನ' ಸಂವತ್ಸರದ ಪಯಣ ಸಾಗಲಿ...
ಸುಖ ದುಃಖ,ಸಿಹಿ ಕಹಿ ಎಲ್ಲವನ್ನೂ ಸಮನಾಗಿ ಸ್ವೀಕರಿಸುತ್ತಾ ಬದುಕು ಸಾಗಲಿ...
ಸಮಸ್ತರಿಗೂ ಯುಗಾದಿಯ ಶುಭಾಶಯಗಳು... ಒಳ್ಳೇದ್  ಆಗ್ಲಿ ...


(ಹಳ್ಳಿ ಕಡೆ ಯುಗಾದಿ ದಿನ ಹೊನ್ನಾರು ಅಂತ ಆಚರಣೆ ಮಾಡ್ತಾರೆ... ಅದರ ಬಗ್ಗೆ ಒಂದೇ ಲೇಖನ ಇದೆ ನೋಡಿ...)


Monday, May 23, 2011

ರೈಲಿನಲ್ಲಿ ನಡೆದ ಕೆಲವು ಪ್ರಸಂಗಗಳು!!!!

BMTC ಬಸ್ ಇಳಿದು ಆ ಬಿಸಿಲ ಧಗೆಯಲಿ ಎರಡೂ  ಕೈಯಲ್ಲಿ ಲಗೇಜು ಹಿಡಿದು,fly over ಏರಿ  ಮತ್ತೆ ಕೆಳಗಿಳಿದು ಅಂಡರ್ ಪಾಸ್ ಎಂಬ ಸುರಂಗ ದಾಟಿ ,ಕೌಂಟರ್ ಮುಂದೆ ಲಗೇಜು ಇಟ್ಟು ಟಿಕೆಟ್ ಕೊಡಿ ಎಂದರೆ ಸರ್ ಚೇಂಜ್ ಇಲ್ಲ ದಯವಿಟ್ಟು ನೀವೇ ಇದ್ದರೆ ಕೊಟ್ಟು ಬಿಡಿ ಎಂದು ಆಕೆ ಹೇಳಿದಾಗ,'ಇದ್ದಿದ್ರೆ ಕೊಡುತ್ತಿದ್ದೆ,ನನ್ನ ಹತ್ರಾನು ಇಲ್ಲ ಎಂದರೆ ನೀವೇ ತಗೊಂಡು ಬರಬೇಕು ಎಂದಳು...
ಸರಿ ಬಿಡಮ್ಮ ತಾಯಿ ಎಂದು ಮನಸಿನಲ್ಲೇ ಹೇಳಿಕೊಳ್ಳುತ್ತಾ,ಹೇಗೂ  ಊಟ ಮಾಡಿಲ್ಲ,ಹೋಟೆಲಿಗೆ ಹೋದರೆ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯಿಂದ,ಊಟ ಮಾಡಿ ಆಕೆಯ ಇಚ್ಚೆಯಂತೆ ಚೇಂಜ್ ಕೊಟ್ಟು ಟಿಕೆಟ್ ತಗೊಂಡು ಮತ್ತೆ ಎರಡು ಕೈಯಲ್ಲಿ ಲಗೇಜು ಹಿಡಿದು ಅವಸರ ಅವಸರವಾಗಿ platform ಕಡೆಗೆ ಹೋಗುತ್ತಿದ್ದರೆ,ಬಿಸಿಲ ಧಗೆಗೆ ಬೆವರು ತೊಟ್ಟಿಕ್ಕುತ್ತಿತ್ತು.
*************************************
ಮುಕ್ಕಾಲು ಘಂಟೆ ಮುಂಚೆಯೇ ಬಂದು ರೈಲು ಹತ್ತಿ ಸೀಟಿಗಾಗಿ ಅರಸುತ್ತ ರೈಲಿನೊಳಗೆ ಸಾಗುತ್ತ ಹೋದೆ.ಕೆಲವು ಸೀಟು ಖಾಲಿ ಇದ್ದರು,ಆಗಲೇ ಅದನ್ನು ಆಕ್ರಮಿಸಿಕೊಂಡಿದ್ದವರ ಮುಖ ಚರ್ಯೆ ಇಂದ  ಕೂರಲು  ಮನಸ್ಸಾಗಲಿಲ್ಲ,ಹಾಗೆ ಮುಂದೆ ಸಾಗುತ್ತ ಹೋದಂತೆ ಎದುರು ಬದುರು ಸೀಟಿನಲ್ಲಿ ಒಬ್ಬೊಬ್ಬರು ಕೂತಿದ್ದರು,ಒಬ್ಬ ಸುಮಾರು ೧೫ ಪ್ರಾಯದ ಹುಡುಗ,ಇನ್ನೊಬ್ಬ ಬಹುಷಃ ೨೦ ಇರಬಹುದು...
***************************************
ಹಾಗೆ formality ಗೆ ಯಾರಾದ್ರು ಬರ್ತಾರ? ಎಂದು ಕೇಳಿದ ಕೂಡಲೇ,ಆ ಚಿಕ್ಕ ಹುಡುಗ "ಹೌದು ಅಣ್ಣ  ,ಇಬ್ಬರು  ಬರ್ತಾರೆ"ಅಂದ,ಇನ್ನೊಬ್ಬ"ಏ,ಇಲ್ಲ ಕೂರಿ ಸರ್ "ಅಂತ ಹೇಳಿ ಸ್ವಲ್ಪ ಸರಿದ..
"ಅಲ್ಲಪ್ಪ ,ಯಾರೋ ಬರ್ತಾರೆ ಅಂದೆ?"
"ಏನ್ ಮಾಡೋದು ಅಣ್ಣ ,ಆರಾಮಾಗಿ ಕೂರಬೇಕಲ್ಲ ಅದಕ್ಕೆ"
"ಮುಂಚೆ ಬಂದು ಕೂತಿದ್ಯ,ಅದಕ್ಕೆ ಹೀಗೆ ಹೇಳಿದೆ,ಬೇರೆ ಯಾರಾದ್ರೂ ಈ ಥರಾ ಕೂತು,ನಿನಗೆ ಇದೆ ಥರಾ ಹೇಳಿದ್ರೆ?"
"ಹೀ ಹೀ ಹೀ"ಅಂತ  ನಕ್ಕ.
ಸರಿ ಅಂತ ಲಗೇಜು ಇಟ್ಟು,ಅಲ್ಲೇ ಕೂತರೆ ಬೆವರು  ಇಳಿಯುತ್ತಿದೆ..ಫ್ಯಾನ್ ಕೂಡ ಆನ್ ಇಲ್ಲ,ಇದೆ initial point ಆದ್ದರಿಬ್ದ ರೈಲು ಹೊರಡುವ ಅರ್ಧ ಘಂಟೆ ಮುಂಚೆ ಫ್ಯಾನ್ ಆನ್ ಮಾಡುತ್ತಾರೆ.
ಪ್ರಯಾಣ ಮಾಡುವಾಗ  ಯಾವುದಾದರು ಪುಸ್ತಕ ಓದುವ ಅಭ್ಯಾಸ ನನಗೆ.ಅಭ್ಯಾಸ ಬಲದಂತೆ ಪುಸ್ತಕ ತೆಗೆದು,ಶೆಖೆ ಇದ್ದರಿಂದ ಸ್ವಲ್ಪ ಒತ್ತು ಗಾಳಿ ಬಿಸಿಕೊಳ್ಳೋಣ ಎಂದು,ಆ ಪುಸ್ತಕದಲ್ಲೇ ಬೀಸಿಕೊಳ್ಳುತ್ತಿದ್ದೆ.
"ಇನ್ನೊಂದು ೧೦ ನಿಮಿಷ ಅಣ್ಣ,ಇನ್ನೇನ್ ಫ್ಯಾನ್ ಆನ್ ಮಾಡುತ್ತಾರೆ" ಅಂತ ಅವನೇ ಶುರು ಮಾಡಿದ.
ಸರಿ ಮತ್ತಿನ್ನೇನು ಮಾಮೂಲು  ಚಾಳಿಯಂತೆ ಇಬ್ಬರೂ ಎಲ್ಲಿಗೆ ಹೋಗಬೇಕು,ಯಾವೂರು,ಅದೂ  ಇದು ಕುಶಲೋಪರಿ ಮಾತಾಡುತ್ತ ಕುಳಿತೆವು,ಎದುರುಗಿದ್ದವನು ಮಧ್ಯೆ ಏನೇನೋ ಪಸರಿಸುತ್ತಿದ್ದ.
ಸರಿ ಫ್ಯಾನ್ ಆನ್ ಆಯಿತು,ಪುಸ್ತಕ ತೊಡೆ ಮೇಲಿಟ್ಟು,ಸ್ವಲ್ಪ ನಿದ್ದೆ ಮಾಡೋಣ ಅನಿಸಿತು,ಹಾಗೆ ನಿದ್ರೆಗೆ ಜಾರಿದೆ.
*******************************************
ಸ್ವಲ್ಪ ಸಮಯದ ನಂತರ ಏನೇನೋ ಕಿವಿಗೆ ಬಿಳಲು ಶುರು ಆಯಿತು,ಯಾವುದೋ ಸಿನಿಮಾ ಗೀತೆ,
ಜೊತೆಗೆ ಯಾರೋ ಒಬ್ಬ "ಏ ಮುಚ್ಕಂಡು ಹೋಗು,ಕೊಡಲ್ಲ ಅಂತ ಹೇಳಿಲ್ವ?"
"ಏ ಅಣ್ಣಯ್ಯ,ಮಾಮು ಕೊಡೋ,ಯಾಕ್ ಹೀಗೆ ಸತಾಯಿಸುತ್ತಿದ್ದಿಯ?"ಅಂತ ಕೇಳಿಸಿತು.
ಎದ್ದು ನೋಡಿದರೆ,ನಾನು ಹತ್ತಿದಾಗ ತಕ್ಕ ಮಟ್ಟಿಗೆ ಖಾಲಿ ಇದ್ದ ಭೋಗಿ ತುಂಬಿದೆ,ಅಲ್ಲದೆ ಮೇಲಿನ ಸಂಭಾಷಣೆ ಪಕ್ಕದ ಸೀಟಿನಲ್ಲಿ ನಡೆಯುತ್ತಿದೆ,ಅಲ್ಲದೆ ರೈಲು ಯಶವಂತಪುರ ದಾಟಿದೆ.
ಅಲ್ಲಿ ಕೂತಿದ್ದ ಒಬ್ಬ ಯುವಕನಿಗೆ ಹಿಜಡಾ ದುಡ್ಡಿಗಾಗಿ ಪೀಡಿಸುತ್ತಿದ್ದ(ಳು)(ನು)(ತ್ತು).
ಅಲ್ಲಿಂದ ನಮ್ಮ ಸೀಟಿಗೆ ಬಂದು ಕೈ ಯೊಡ್ಡಿದಾಗ,ಅದರ ಜೊತೆ ಏನು ಮಾತು ಎಂದು ಸುಮ್ಮನೆ ಒಂದಷ್ಟು ಚಿಲ್ಲರೆ ಕೊಟ್ಟೆ.ರೈಲಿ ನಲ್ಲಿ  ಪ್ರತಿ ಸಾರಿ ಪ್ರಯಾಣ ಮಾಡುವಾಗ ಇದು ಮಾಮೂಲು,ಒಂಥರಾ ಮಾಮಂದಿರ ಮಾಮುಲಿದ್ದ ಹಾಗೆ.....

ಸರಿ ಅದು ಆಕಡೆ ಹೋದ ತಕ್ಷಣ ಪಕ್ಕದ  ಸೀಟಿನಲ್ಲಿ ಕೂತಿದ್ದ ಇಬ್ಬರು  ಚಿಕ್ಕ ಮಕ್ಕಳು ಸುಮಾರು ೭ ವರ್ಷ ಇರಬಹುದು.
ಅದರಲ್ಲೊಬ್ಬ  ತನ್ನ ಅಪ್ಪನಿಗೆ 'ಅಪ್ಪ ಇವರ್ಯಾರು ?"ಅಂದ,ಅವನ ಅಪ್ಪ ಮಾತು ಶುರು ಮಾಡುವ ಮುಂಚೆಯೇ ಇಷ್ಟೊತ್ತು ಅದರ ಜೊತೆ ವಾಗ್ವಾದ ಮಾಡುತ್ತಿದ್ದ ಇನ್ನೊಬ್ಬ"ಅಯ್ಯೋ ಬಿಡ್ರಪ್ಪ,ಯಾಕ್ ತಲೆ ಕೆಡಿಸ್ಕೊಳ್ತಿರ?"ಅಂದಾಗ
ಇನ್ನೊಬ್ಬ"ದೇವರು ಕಣಪ್ಪ"ಅಂದು ಬಿಟ್ಟ.
ಪಾಪ ಕಿಡಕಿ ಬದಿಯಲ್ಲಿ ಕೂತಿದ್ದ ಆ ಮಕ್ಕಳ  ತಾಯಿ ಕಕ್ಕಾ ಬಿಕ್ಕಿಯಾಗಿ ಬಿಟ್ಟರು.
ಇತ್ತ ಒಬ್ಬ ಮಗ ಅಪ್ಪನಿಗೆ ,ಇನ್ನೊಬ್ಬ ಮಗ ತಾಯಿಗೆ "ಹೌದೆನಪ್ಪ,ಹೌದೆನಮ್ಮ,ದೇವರು ಅಂದ್ರೆ ಇವರೇನಾ ಅಂತ ಪೀಡಿಸಲು ಶುರು ಮಾಡಿದರು.
ಅವರು ಕಾಟ ತಡೆಯಲಾರದೆ"ಇವರು ಗಂಡು ಅಲ್ಲ,ಹೆಣ್ಣು ಅಲ್ಲ"ಅಂದ.
ಅವರಿಬ್ಬರಲ್ಲಿ ದೊಡ್ಡವನು"ಗಂಡು ಅಂದ್ರೆ ಪುಲ್ಲಿಂಗ,ಹೆಣ್ಣು ಅಂದ್ರೆ ಸ್ತ್ರೀಲಿಂಗ,ಇವರು ಯಾವ ಲಿಂಗ"ಅಂದ....
ಶಾಲೆಯ  ಪರಿಭಾಷೆ ಇರಬಹುದು..
ಇರಲಿ.....
***********************************
ಹೀಗೆ ಅವರ ಮಾತು ನಡೆಯುತ್ತಿತ್ತು..
ನಾನು ನನ್ನ ಪಾಡಿಗೆ ತೊಡೆ ಮೇಲಿದ್ದ ಪುಸ್ತಕ ಓದಲು ಶುರು ಮಾಡಿದೆ..
ಎಲ್ಲಾ ರೈಲಿನ ಹಾಗೆ ಇದರಲ್ಲೂ ಚುರುಮುರಿ,ಬಿಸ್ಕತ್ತು,ಕಾಫಿ,ಟೀ ಮಾರುವವರು ಬರುತ್ತಲೇ ಇದ್ದರು,ನನ್ನ ಪಾಡಿಗೆ ಕಾದಂಬರಿ ಓದುತ್ತ,ಮಧ್ಯದಲ್ಲಿ ಪಕ್ಕದಲ್ಲಿದ್ದವನ ಜೊತೆ ಹರಟುತ್ತ ಕಾಲ ಕಳೆಯುತ್ತಿದ್ದಾಗ,ಬಿಸ್ಕತ್ತು ಮಾರುವವನು ಬಂದ..

ಪಕ್ಕದ ಸೀಟಿನ  ಆ ಹುಡುಗರು,ಬೇಕು ಎಂದಾಗ,ಮಕ್ಕಳ ಆಜ್ಞೆಯಂತೆ ಕೊಡಿಸಲು ಮುಂದಾದ ಅಪ್ಪನಿಗೆ,ಒಬ್ಬ ಕ್ರೀಂ ಬಿಸ್ಕೇಟು ಬೇಕು ಅಂದ,ಇನ್ನೊಬ್ಬ ಇನ್ನೇನೋ ಬೇಕು  ಎಂದ,ಮಾರುವವನು ಯಾವುದೋ ಒಂದ ತಗಂಡು ದುಡ್ಡು ಕೊಡಪ್ಪ,ಮುಂದಕ್ಕೆ ಹೋಗಬೇಕು ಅಂತ ಮನಸ್ಸಿನಲ್ಲೇ ಅಂದು ಕೊಂಡಿರಬೇಕು,ಅಲ್ಲಿಯವರೆಗೂ ಇತ್ತು ಅವರ ಕಾಟ,
ಯಾವುದೋ ಒಂದೂ ತಗಂಡ್ರು,ದುಡ್ಡು ಕೊಟ್ಟ,ಅವನು ಮುಂದಕ್ಕೆ ಹೋದ..
******************************************************************************
ಇನ್ನು ಸ್ವಲ್ಪ ಸಮಯದ ನಂತರ ನೀರು ಮಾರುವವನು ಬಂದ,ನನ್ನ ಹಿಂದಿನ ಸೀಟಿನಲ್ಲಿ ಕೂತಿದ್ದ ಹುಡುಗಿ  ಬೇಕೆಂದಾಗ ಅವನು ಒಂದು  ಬಾಟಲ್ ವಾಟರ್ ಕೊಟ್ಟ,ಅವಳು cold ನೀರು ಇಲ್ಲವ ಅಂತ ಕೇಳಿದಳು,ಅವನೇನು refrigerator
ಕೂಡ ಇಟ್ಟುಕೊಂಡು ಓಡಾಡ ಬೇಕಾ ?ಅವಳ ಮಾತಿಗೆ ಅತಿಶಯೋಕ್ತಿ ಅನ್ನಬೇಕೋ,ಅವಿವೇಕತನ ಅನ್ನಬೇಕೋ ಅಥವಾ ದುರಹಂಕಾರ ಅನ್ನಬೇಕೋ ಒಂದೂ ತಿಳಿಯಲಿಲ್ಲ.....
*******************************************************************************
ಸ್ವಲ್ಪ ಮುಂದೆ ಹೋದಾಗ  ಒಂದು  ಚಕ್ಕ ಮಗು ಚಡ್ಡಿಯಲ್ಲೇ ಮಲ ವಿಸರ್ಜನೆ ಮಾಡಿತು,ಅದರ ತಾಯಿ ಹತ್ತಿರವೇ ಇದ್ದ ಡೋರ್ ಬಳಿ ಹೋಗಿ ಆ ಮಗುವನ್ನು  ತೊಳೆಯಲು  ಮೊದಲು   ಮಾಡಿದಳು ,ಗಾಳಿ ಬೀಸುತ್ತಿದ್ದ ಕಾರಣ,ಆ ನೀರು ಗಾಳಿಗೆ ಹಿಂದೆ ಕಿಡಕಿ ಬಳಿ ಕೂತಿದ್ದವರಿಗೆ ಹಾರುತ್ತಿತ್ತು,ಅಲ್ಲೊಬ್ಬ  ಸಿಡಿದೆದ್ದು ಆ ಕಡೆ toilet ಇದೆ ಅಲ್ಲಿಗೆ ಹೋಗಿ ತೊಳೆಯಬಾರದ ,ಬುದ್ದಿ ಗಿದ್ದಿ  ಇದಿಯ ಅಂತ ದಬಾಯಿಸಿದ.
'ಅಯ್ಯೋ ಮಗು ಸರ್ ,ಏನ್ ಮಾಡ್ಲಿ ?"
"ಹೌದಮ್ಮ ಮಗೂನೆ,ತೊಳಿತಿರೋದು ನೀನ್ ತಾನೆ,ಅಲ್ಲೋಗು,ಇಲ್ಲಿ  ಕೂತಿರುವವರಿಗೆ ಮುಖಕ್ಕೆ ಹಾರುತ್ತಿದೆ,ಅಸಯ್ಯ ಅನ್ಸುತ್ತೆ"
ಅವಳ ವರ್ತನೆಗೆ ಏನನ್ನಬೇಕು....ನೀವೇ ಹೇಳಿ...
*************************************************************
ಹೀಗೆ ಮುಂದೆ ಹೋದಂತೆ,ಅಲ್ಲೊಂದು ಕ್ರಾಸಿಂಗ್ ಗೆ ಸ್ವಲ್ಪ ಸಮಯ  ನಿಲ್ಲಿಸಿ ಬಿಟ್ಟ,ಮತ್ತೆ ಕಾಫಿ,ಟೀ ಅದು ಇದು ವ್ಯಾಪಾರ ಶುರು ಆಯಿತು  ,ಸ್ವಲ್ಪ ಜೋರಾಗಿಯೇ  ಯಾಕೆ   ಅಂದ್ರೆ  ,ಕ್ರಾಸಿಂಗ್ ಇದೆಯಲ್ಲ  ಹಾಗಾಗಿ ..
ಕೂತು  ಕೂತು  ಸಾಕಾಗಿತ್ತು ,ಎಲ್ಲರಂತೆಯೇ  ನಾನು ಕೂಡ ಪುಸ್ತಕ ಅಲ್ಲೇ ಇಟ್ಟು( ಸೀಟು ಕಾದಿರಿಸಿದೆ .ಟವೆಲ್ಲು  ಹಾಕುವ  ಬುದ್ದಿ ನಮ್ಮ ಜಾಯಮಾನದಲ್ಲಿಯೇ  ಅಂಟಿಕೊಂಡು  ಬಂದಿದೆ ,ಯಾರೋ ಕೂತಿದ್ದ ಸೀಟಿಗೆ ಸೀಟು ಹಾಕುವವರು ,ಇಷ್ಟೊತ್ತು ಆ ಸೀಟನ್ನು  ವಿರಾಜಮಾನವಾಗಿ ಆಳಿ ,ಈಗ  ಬಿಟ್ಟು  ಕೊಡುತ್ತೀನ  ?ಖಂಡಿತ  ಇಲ್ಲ)
ಕೆಳಗಿಳಿದು platform ನಲ್ಲಿ  ಟೀ ಹೀರುತ್ತಾ  ನಿಂತು  ಬಿಟ್ಟೆ ,
ಅಷ್ಟೊತ್ತಿಗಾಗಲೇ  ಅಲ್ಲೊಂದು ಇಲ್ಲೊಂದು  ಗುಂಪುಗಳು  ಆಗಿ  ದೇಶದ  ಎಲ್ಲಾ ವಿಚಾರಗಳು ಎಲ್ಲರ  ಬಾಯಲ್ಲೂ  ರಾರಾಜಿಸುತ್ತಿದ್ದವು ,ನಾನು ಕೂಡ ಒಂದು   ಗುಂಪಿಗೆ  ಸದಸ್ಯನಾಗಿಬಿಟ್ಟೆ ,ಜೊತೆಗೆ ಮೇನಕ ,ಮಾಧುರಿ  ಏನಾಗಬಹುದು  ಮುಂದೆ ಎಂಬುದು  ತಲೆಯಲ್ಲಿ  ಹುಳು ಬಿಟ್ಟ ಹಾಗೆ ಆಗಿತ್ತು (ಮೇನಕ ,ಮಾಧುರಿ ನಾನು ಓದುತ್ತಿದ್ದ ಕಾದಂಬರಿಯ ಪಾತ್ರಗಳು )
ಅಷ್ಟರಲ್ಲೇ ಯಾರೋ ಒಬ್ಬ ಕಿಡಕಿಯಿಂದ ಕಾಫಿ ಕಪ್ ಅನ್ನು ಹೊರಗೆ ಎಸೆದ,ಅದು ನಮ್ಮ ಗುಂಪಿನ ಪಕ್ಕದಲ್ಲಿಯೇ ಬಿತ್ತು,ಆಗ ಅಲ್ಲೊಬ್ಬ ಅದನ್ನು ಕೆಳಕ್ಕೆ ತಳ್ಳುತ್ತ "ಈ ಮುಂಡೆ ಮಕ್ಕಳಿಗೆ ಮಾನ ಮರ್ಯಾದೆ ಇಲ್ಲ,ಹೀಗಾ ಬಿಸಾಡೋದು platform  ಮೇಲಕ್ಕೆ,?ಯಾರಾದ್ರೂ ಓಡಾಡುತ್ತಿರುತ್ತಾರೆ ಅನ್ನೋ common  ಸೆನ್ಸ್ ಕೂಡ ಇಲ್ಲ"
"ನಮ್ಮ ಜನಗಳಿಗೆ ಸರ್ಕಾರಿ ಜಾಗ ಅಂದ್ರೆ ಹೀಗೆ,ಹೆಂಗ್ ಬೇಕೋ ಹಂಗೆ,ಅವರ ಮನೇಲೂ ಈ ಥರಾ ಬಿಸಾಡುತ್ತಾರ ?" 
"ಅಯ್ಯೋ ಬಿಡಿ ಸರ್,ಏನ್ ಮಾಡಕ್ಕಾಗುತ್ತೆ ,ಈ ನನ್ ಮಕ್ಕಳಿಗೆ  ಬುದ್ಧಿ  ಬರಲ್ಲ,ಅವರು ಹೀಗೇನೆ"
"ಏನೋ ಸರ್,ನಮ್ಮ ಯಡ್ಡಿ ಏನಾದ್ರು? ಗಾಂಧೀ statue ಮುಂದೆ ಧರಣಿ ಮಾಡಿದರಂತೆ,ಇವಾಗ ಈ ಸಂಜೆ ಪೇಪರ್ ನಲ್ಲಿ  ಓದಿದೆ"
"ಏನಾದ್ರೂ ಮಾಡ್ಕೊಂಡು ಹಾಳಾಗಿ ಹೋಗಲಿ ಬಿಡಿ"
"ಏನ್ ಕೆಲಸ ಮಾಡಿದ್ದಾರೆ ಸರ್ ಇವರು,ಒಂದು ರೋಡ್ ನೆಟ್ಟಗೆ ರಿಪೇರಿ   ಮಾಡಿದ್ದಾರಾ?,ಜಪಾನ್ ನಲ್ಲಿ ಸುನಾಮಿ ಆದಾಗ ಒಂದು ವಾರಕ್ಕೆ ಯಾರ ಹೆಲ್ಪ್ ಇಲ್ಲದೆ ಅವರೇ ರೋಡ್  ರಿಪೇರಿ ಮಾಡಿದ್ದರೆ,ಇವರು ನೋಡಿದ್ರೆ  ಹೀಗೆ"
ಇನ್ನೊಬ್ಬ Hiroshima,naagasaki ವಿಷಯ ತೆಗೆದು ಶುರು ಮಾಡಿದ..
"ನಮ್ಮ ಶಿರಾಡಿ ಘಾಟ್ ರೋಡ್ ನಲ್ಲಿ ಮಳೆಗಾಲದಲ್ಲಿ ಹಾಳಾಗಿ ಹೋಗುತ್ತೆ,ಅವರು ರಿಪೇರಿ ಮಾಡೋ ಹೊತ್ತಿಗೆ ಮುಂದಿನ ಮಳೆಗಾಲ ಬಂದಿರುತ್ತೆ"ಅಂದೆ..
ಅಷ್ಟೊತ್ತಿಗೆ ಇನ್ನೊಬ್ಬ  ಈ ರೈಲು ಇಷ್ಟೊತ್ತು ನಿಂತು ಬಿಟ್ಟಿತಲ್ಲ ,ನಂಗೆ ಬಸ್ ಮಿಸ್ ಆಗಬಹುದು  ಅಂದ . 
ನನಗೂ ಅದೇ ತವಕ ಶುರು  ಆಯಿತು,ಯಾಕಂದ್ರೆ  ಅದೇ ಲಾಸ್ಟ್ ಬಸ್.
ಸ್ವಲ್ಪ ಹೊತ್ತಿನಲ್ಲೇ ಎದುರಿಂದ ಬಂದ ರೈಲು ವೇಗವಾಗಿ  ಹೋಯಿತು,ಇನ್ನೇನು ನಮ್ಮ ರೈಲಿನ ಸೈರನ್ ಕೂಗ ಬೇಕು ಅಷ್ಟೊತ್ತಿಗೆ platform ನಲ್ಲಿದ್ದ ಜನ ರೈಲಿಗೆ ಹತ್ತುತ್ತಿದ್ದರು..
ಒಬ್ಬ "ಇವನು ಇದೆ ಥರಾ ಫಾಸ್ಟ್ ಆಗಿ ಹೋಗಿ ಟೈಮ್ ಪಿಕ್ ಅಪ್ ಮಾಡ ಬೇಕು,ಆಗ್ಲೇ ಅರ್ಧ ಘಂಟೆ ಲೇಟ್ ಆಗಿ ಬಿಟ್ಟಿದೆ"ಅಂದರೆ,ಇನ್ನೊಬ್ಬ "ರೈಲು ಯಾವತ್ತು ಕರೆಕ್ಟ್ ಟೈಮ್ ಗೆ ಬರುತ್ತೆ ರೀ?"ಅಂದ..ಕಾಟು ಸತ್ಯದ ಮಾತು...
ಹೋಗ್ಲಿ ಬಿಡಪ್ಪ ಇನ್ನೇನ್ ಮಾಡಕ್ಕಾಗುತ್ತೆ ಅಂತ ಹತ್ತಿದೆವು..
ಅದಲ್ಲದೆ ಬೇರೆ ಬೇರೆ ವಿಷಯಗಳು ಪ್ರಸ್ತಾಪ ಆಗಿದ್ದವು..
ಮುಂದೆ ಸಾಗಿತು ನಮ್ಮ ಪಯಣ ಹಾಗೆಯೇ...ನನ್ನ ಲಾಸ್ಟ್ ಬಸ್ ಹಿಡಿದು ಬಂದು ಮನೆಯ ಕಾಲಿಂಗ್ ಬೆಲ್ ಒತ್ತಿದಾಗ ಸಮಯ  ೧೦ ಘಂಟೆ...
ಇದೆ ರೀತಿ ರೈಲು ಬಸ್ಸಿನಲ್ಲಿ ಪ್ರಯಾಣ ಮಾಡುವಾಗ  ಇನ್ನು ವಿಚಿತ್ರ  ಘಟನೆಗಳಿಗೆ ಸಾಕ್ಷಿ ಆಗಿದ್ದೇನೆ..
ಹೀಗೆ ಸಾಗಿತು ನನ್ನ ಊರಿನ ಪ್ರಯಾಣ..