Showing posts with label ಯುಗಾದಿ. Show all posts
Showing posts with label ಯುಗಾದಿ. Show all posts

Thursday, March 22, 2012

ಪೋಲಿಸ್ ಸ್ಟೇಷನ್ನಲ್ಲಿ ಮ್ಯಾಚ್ ನೋಡಿದ್ದು ಹಿಂಗೆ...

ಈ ಉಗಾದಿ ಹಬ್ಬಕ್ಕೆ ಊರಿಗೆ ಹೋಗಬೇಕಾದ್ರೆ ಏನಾದ್ರೂ ಒಂದು ತಾಪತ್ರೆ ಆಗುತ್ತೆ...ಅವಾಗ ಒಂದ್ಸಲ ಹಿಂಗೆ ದುಡ್ಡು ಕಳ್ಕೊಂಡು ಹೋಗಿದ್ದೆ ... ಹೋದ ವರ್ಷ ಹೋಗಬೇಕಾದ್ರೆ ಇನ್ನೂ ವಿಚಿತ್ರ... ಅದೇನಾಯ್ತು ಅಂದ್ರೆ ಎಲ್ಲರೂ ಮನೇಲಿ ಕೂತು ಕ್ರಿಕೆಟ್ ನೋಡ್ತಿದ್ರೆ ನಾವು ಪೋಲಿಸ್ ಸ್ಟೇಷನ್ ನಲ್ಲಿ ನೋಡ್ತಾ ಇದ್ವಿ ...... The story goes like this...

ಹಬ್ಬ ಇದ್ದಿದ್ದು ಸೋಮವಾರ... ಅದಕ್ಕಿಂತ ಎರಡು ದಿನ ಮುಂಚೆ ಅಂದ್ರೆ ಶನಿವಾರ ವಿಶ್ವ ಕಪ್ ಫೈನಲ್ ಮ್ಯಾಚ್ ಇತ್ತು.. ನಮ್ಮ  ದೇಶ ಮತ್ತೆ ಶ್ರೀಲಂಕಾ ನಡುವೆ... ಅವತ್ತೇ ಊರಿಗೆ ಹೊರಡೋ ಪ್ಲಾನ್ ಹಾಕಿಕೊಂಡೆ..ಬೆಳಗ್ಗೆ ಟ್ರೈನ್ ಪ್ರತಿ ಶನಿವಾರ ಫುಲ್ ರಶ್ ಇರತ್ತೆ...ಅದು ಅಲ್ಲದೆ ಇದು ಹಬ್ಬದ ವಾರ ಬೇರೆ..ಇನ್ನೂ ರಶ್ ಇರತ್ತೆ..ಹೇಗೂ ಇವತ್ತು ಫೈನಲ್ ಇರೋದ್ರಿಂದ ಸಂಜೆ ಟ್ರೈನ್ ಅಷ್ಟು ರಶ್ ಆಗಲ್ಲ ಅಂತ,ಅದಕ್ಕೆ ಹೋಗೋ ನಿರ್ಧಾರ ಮಾಡಿದೆ..ಹೇಗೂ ಊರಿಗೆ ಹೋಗಿ ಕಡಿದು ಕಟ್ಟೆ ಕಟ್ಟದು ಅಷ್ಟರಲ್ಲೇ ಇದೆ ಅಂತ.. ಕ್ರಿಕೆಟ್ ನೋಡದು ಬಿಟ್ಟು ಜಮಾನ ಆದ್ದರಿಂದ ಅವತ್ತು ಕೂಡ ಮ್ಯಾಚ್ ನೋಡೋ ಗೋಜಿಗೆ ತಲೆ ಕೆಡಿಸಿಕೊಳ್ಳಲಿಲ್ಲ...ಸರಿ ಸಂಜೆ ಟ್ರೈನ್ ಗೆ ಹೋದರೆ ಯಾವಾಗಲು ಖಾಲಿ ಇರೋದು ಅವತ್ತು ನೋಡಿದ್ರೆ ಸ್ವಲ್ಪ ಜನ ತುಂಬಿದ್ದರು.ಹಿಂದಿನ ದಿನ ಇದ್ದ ಮೂರ್ಖರ ದಿನ ಮೂರ್ಖ ಆಗಿರಲಿಲ್ಲ...ಆದರೆ ಅವತ್ತು ಆಗ್ಬಿಟ್ಟೆ...ಸೀಟು ಸಿಗುತ್ತೆ ಮ್ಯಾಚ್ ಇರೋದ್ರಿಂದ ಅಂತ ಈ ರೈಲಿಗೆ ಬಂದ್ರೆ ಇದರಲ್ಲೂ ಸಿಗಲಿಲ್ಲ...ಥೋ ಇನ್ನೇನ್ ಮಾಡೋದ್ ಅಂತ ಸುಮ್ಮನಾದೆ...

ಸರಿ ಆಮೇಲೆ ಏನಾಯ್ತು ಅಂದ್ರೆ ನನ್ನ ಹಳೆ ಚಾಳಿ ಅಂತೆ ಅಕ್ಕ ಪಕ್ಕದವರ ಜೊತೆ ಹರಟೆ ಹೊಡೆಯೋದು ಶುರು ಆಯ್ತು... ಸೀಟು ಸಿಕ್ಕಿದ್ದರೆ ಯಾವುದಾದರು ಪುಸ್ತಕ ಓದುತ್ತ ಕೂರ್ತಿದ್ದೆ...ನಿಂತಿದ್ದನಲ್ಲ ವಿಧಿ ಇಲ್ಲದೆ ಅವರಿವರ ಜೊತೆ ಮಾತು ಶುರು ಆಯ್ತು...ಎಲ್ಲಾರ್ಗೂ ಮ್ಯಾಚ್ ಬಗ್ಗೆನೇ ಚಿಂತೆ...ಅವಾಗ ಒಬ್ರು ಜಗದೀಶ್ ಅಂತ ಪರಿಚಯ ಆದರು,ನಮ್ಮ ಊರಿನ ಹತ್ತಿರದವರೇ...ಸಹಜ ಸ್ವಭಾವ,ನಮ್ಮ ಹತ್ತಿರದವರು ಎಲ್ಲಾದರು ಕಂಡಾಗ ಮಿತಿಗಿಂತ ಜಾಸ್ತಿ ಮಾತಾಡ್ತೀವಿ..ನಾವಿಬ್ಬರೂ ಅರಸಿಕೆರೆಯಲ್ಲಿ ಇಳಿದು ಒಂದೇ ಬಸ್ಸಿಗೆ ಹಳೇಬೀಡಿಗೆ ಹೋಗಬೇಕಿತ್ತು...ಅದು ನಮಗೆ ಕೊನೆ ಬಸ್..ಆಗಾಗಿ ನನಗೂ ಒಬ್ಬರು ಜೊತೆ ಸಿಕ್ಕಿದರು,ಅವರಿಗೂ ಸಿಕ್ಕಿದರು,ಮಾತು ಕಥೆ ಶುರು ಆಯ್ತು...ನಮ್ಮ ನಮ್ಮ ಊರಿನ ಬಗ್ಗೆ,ನಮ್ಮ ಕೆಲಸದ ಬಗ್ಗೆ,ಬೆಂಗಳೂರಿನಲ್ಲಿ ಎಲ್ಲಿರದು,ಅದು ಇದು ಎಲ್ಲಾ...

ಅಷ್ಟೊತ್ತಿಗಾಗಲೇ ಶ್ರೀಲಂಕಾ ಬ್ಯಾಟಿಂಗ್ ಮುಗಿದು ನಮ್ಮ ಇಂಡಿಯಾ ಬ್ಯಾಟಿಂಗ್ ಶುರು ಆಗಿತ್ತು... ಅದಕ್ಕೂ  ಮುಂಚೆ  ನನ್ನ ಸಹೋದ್ಯೋಗಿ ಒಬ್ಬ ಫೋನ್ ಮಾಡಿ ಅವ್ರು ಇಷ್ಟಿಷ್ಟು ಸ್ಕೋರ್ ಮಾಡಿದ್ದಾರೆ,ಬೆಟ್ ಗಿಟ್ ಕಟ್ಟುತ್ತೀಯ ಅಂತ ಕೇಳಿದ ...ಇಲ್ಲ ಗುರು,ನನಗೆ ಅದರ ಸಹವಾಸ ಬೇಡ ಅಂತ ಹೇಳಿ,ಅವನು, ಇವತ್ತು ನಮ್ಮವರು ಸೋಲ್ತಾರೆ ಅಂತ ಹೇಳಿ ಫೋನ್ ಇಟ್ಟ..ಅದಾದ್ ಮೇಲೆ ಬೇಡ ಬೇಡ ಅಂದ್ರು ಪಕ್ಕದಲ್ಲಿದ್ದವರು ಸ್ಕೋರ್ ಹೇಳಕ್ಕೆ ಶುರು ಮಾಡಿದ್ರು,ಒಹ್ ಸೆಹವಾಗ್ ಔಟ್ ಆದ,ಸಚಿನ್ ಔಟಾದ..ಗೆಲ್ಲಲ್ಲ ಬಿಡಿ ಹಂಗೆ ಹೀಗೆ ಅಂತ ಬಹುತೇಕ ಎಲ್ಲರ ಬಾಯಲ್ಲೂ ಇದೆ ಮಾತು...

ಸರಿ ಟ್ರೈನ್ ಅರಸೀಕೆರೆಗೆ ಬಂತು.. ಹೊಟ್ಟೆಗೆ ಸ್ವಲ್ಪ ತಳ ಕಟ್ಟಿಕೊಂಡು ನಾನು ಮತ್ತು ಜಗದೀಶ್ ಇಬ್ಬರೂ ನಮ್ಮ ಕೊನೆ ಬಸ್ ಹತ್ತಿ ಹೊರಟ್ವಿ..ನನಗೂ ಕೆಲ ಸ್ನೇಹಿತರು ಅವಾಗವಾಗ updates ಕೊಡ್ತಿದ್ರು..ಮ್ಯಾಚ್ ನೋಡಲಿಲ್ಲ ಅಂದ್ರು ಸ್ವಲ್ಪ excitment ಇದ್ದೆ ಇತ್ತು...ಅವರಿಗೂ ಕೆಲವರು ಸ.ಮೊ.ಸ ಕಳಿಸ್ತಿದ್ರು..ಇನ್ನ ೮೪ ಎಸೆತ ೮೪ ರನ್ ಬೇಕಿತ್ತು.. ಅದೇ ಸಮಯಕ್ಕೆ ಸರಿಯಾಗಿ ಜಾವಗಲ್ಲಿಗೆ(ಜಾವಗಲ್ ಶ್ರೀನಾಥ್ ಅವರ ಊರು) ಬಂದಿದ್ವಿ.ಅಲ್ಲಿ ಉಟಕ್ಕೆ ಅಂತ ೧೦ ನಿಮಿಷ ಬಸ್ ನಿಲ್ಲಿಸಿದರು,ಆಗ ನನ್ನ ಜೊತೆಗಿದ್ದ ಜಗದೀಶ್ ಅವರು,ಮುಂಚೆ ಅವರು ಕೂಡ ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡಿ,ಅಲ್ಲಿ ಬಿಟ್ಟು ಆಗ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು.ಅವರು ಪೋಲಿಸ್ ಆಗಿದ್ದಾಗ ಇದ್ದ ಸ್ನೇಹಿತರು ಕೆಲವರು ಆ ಸಮಯದಲ್ಲಿ ಜಾವಗಲ್ ಗೆ ವರ್ಗಾವಣೆ ಆಗಿದ್ದರು,ಆಗಾಗಿ "ಬನ್ನಿ ಗಿರೀಶ್,ಒಂದ್ ಹತ್ತು ನಿಮಿಷ ಮ್ಯಾಚ್ ನೋಡ್ಕಂಡು ಬರೋಣ" ಅಂತ ಬಸ್ ನಿಲ್ದಾಣದ ಪಕ್ಕದಲ್ಲೇ ಇರೋ ಅಲ್ಲಿನ ಪೋಲಿಸ್ ಸ್ಟೇಷನ್ ಗೆ ಕರ್ಕೊಂಡು ಹೊರಟರು.."ಬೇಡ ಸರ್,ಅಲ್ಲೇನ್ ಟಿವಿ ಇರುತ್ತಾ" ಅಂತ ಕೇಳ್ದಾಗ,"ಹೇ ನಮ್ಮ ಫ್ರೆಂಡ್ ಅಲ್ಲೇ ಇದ್ದಾನೆ,ಇಷ್ಟೊತ್ತು ಅವನೇ ನನಗೆ ಮೆಸೇಜ್ ಕಳ್ಸಿದ್ದು,ಫೋನ್ ಮಾಡಿದ್ದೆ,ಬನ್ನಿ ಅಂದ" ಅಂತ ಹೇಳಿ ಕರ್ಕೊಂಡ್ ಹೊರಟರು.."ಮತ್ತೆ ಬಸ್ ಗಿಸ್ ಮಿಸ್ ಆದ್ರೆ ಕಷ್ಟ" ಅಂದ್ರೆ"ಏ,ಕಂಡಕ್ಟರ್ ಗೆ ಹೇಳ್ತೀನಿ ತಾಳಿ,ಒಂದೆರಡು ಓವರ್ ನೋಡ್ಕಂಡ್ ಬರಣ" ಅಂತ ಕರ್ಕಂಡ್ ಹೊರಟರು...
"ನಿಮ್ ಬ್ಯಾಗ್ ಇದ್ರೆ ತಗಳಿ,ರಾತ್ರಿ ಬೇರೆ,ಸುಮ್ನೆ ಯಾಕ್ ರಿಸ್ಕ್,ಯಾವನಾದ್ರು ಎತ್ಕಂಡ್ ಹೋದ್ರೆ" ಅಂತ ಎಚ್ಚರಿಸಿ ಕರ್ಕಂಡ್ ಹೊರಟರು... ಅಲ್ಲಿ ಮುಂಬಯಿಯಲ್ಲಿ ಟೀಂ ಇಂಡಿಯಾದವರು ರನ್ chase ಮಾಡ್ತಿದ್ರೆ ನಮಗೆ ಇಲ್ಲಿ ಬಸ್ chase ಮಾಡಕ್ಕೆ ಆಗ್ಲೇ ಇಲ್ಲ...

ಮನಸಲ್ಲೇ ಜಗದೀಶ್ ಅವ್ರಿಗೆ ಬೈಕೊಂಡು "ಈಗೇನ್ ಮಾಡೋದ್ ಸರ್?" ಅಂದೆ,"ಏ ಬನ್ನಿ ಗಿರೀಶ್,ಮ್ಯಾಚ್ ನೋಡ್ಕಂಡ್ ಆಮೇಲೆ ನೋಡನ.. ಸಖತ್ ಇಂಟರೆಸ್ಟಿಂಗ್ ಇದೆ ಮ್ಯಾಚ್,ಯಾರ್ದಾರ ಬೈಕ್ ಇಸ್ಕಂಡ್ ಹೋಗಣ,ನಿಮ್ಮ ಊರಿಗೆ ಬಿಡ್ತೀನಿ ನಾನು" ಅಂತ ಧೈರ್ಯ ಕೊಟ್ರು..ಆದರು ಸಮಾಧಾನ ಆಗ್ಲಿಲ್ಲ..ಮತ್ತೆ ಸ್ಟೇಷನ್ ಗೆ ಹೋದ್ರೆ,ಅಲ್ಲಿದ್ದ ಬೇರೆ ಪೋಲಿಸಿನವರು ಯಾವೂರು ಅಂತ ಕೇಳಿದ್ರು,ಸಿದ್ದಾಪುರ ಅಂದೆ..ಆ ಊರಿನವರು ಒಬ್ರು  ಇದೆ ಸ್ಟೇಷನ್ ನಲ್ಲಿ ಇದ್ರು ಕಣಪ್ಪ ಮುಂಚೆ.. ಈಗ ಸಕಲೇಶಪುರದಲ್ಲಿ ಇದ್ದಾರೆ...ಅಯ್ಯೋ,ಅವರು ನಮ್ಮ ಚಿಕ್ಕಪ್ಪನೇ ಸರ್ ಅಂದೆ...ಬಿಡು ಮತ್ತೆ ನಮ್ಮವರೇ ನೀವು, ಯಾಕ್ ಯೋಚನೆ ಮಾಡ್ತಿಯ,ಬೈಕ್ ಕೊಡ್ತೀವಿ ತಗಂಡ್ ಹೋಗಿ,ಹೆಂಗೂ ಇವನು ಇದ್ದಾನಲ್ಲಾ ,ಬಿಡ್ತಾನೆ ಅಂದ್ರು...ಅವಾಗ ಸ್ವಲ್ಪ ಸಮಾಧಾನ ಆಯ್ತು..

ಸರಿ ಮ್ಯಾಚ್ ಮುಗಿತು,ನಮ್ಮವರು ಗೆದ್ದರು,ಇನ್ನೇನ್ ಹೊರಡೋಣ ಅಂತ ಇದ್ವಿ,ಆಗ ನಮ್ಮಂಗೆ ಹೊರಗಿನವರು ಅಲ್ಲಿ ಮ್ಯಾಚ್ ನೋಡ್ತಿದ್ದವರಲ್ಲಿ ಒಬ್ಬರು,'ಏ ಇಷ್ಟೊತ್ತು ಇದ್ದೀರಾ,ಅತ್ಲಾಗಿ ಕಪ್ ಕೊಡೋದನ್ನು  ನೋಡ್ಕಂಡ್ ಹೋಗಿ"ಅಂದ್ರು..ಅವರಿಗೆ ಪರಮಾತ್ಮ ಮೈ ಮೇಲೆ ಬಂದಿದ್ದ..."ಗೆದ್ದರಲ್ಲ ಅಷ್ಟು ಸಾಕು ಬಿಡಿ" ಅಂದಾಗ' "ನೋಡ್ರಿ ಅಲ್ಲಿ ನಮ್ ಅಣ್ಣ ಸಚಿನ್ ನ ಹೆಂಗೆ ಹೊತ್ಕಂಡವ್ರೆ" ಅಂತ ಆತ ಕೂಡ ಕುಣಿಯಕ್ಕೆ ಶುರು ಮಾಡಿದ...ಆಗ ಅಲ್ಲಿದ್ದ ಒಬ್ಬ ಪೀಸಿ ರೀ ಸಾಹೇಬರು ಬರ್ತಾರೆ ಇವಾಗ,ನಡೀರಿ ನಡೀರಿ,ನಾವು ಹೊರಡಬೇಕು..ಎಲ್ಲಾದರು ಗಲಾಟೆ ಗಿಲಾಟೆ ಆಗುತ್ತೆ ಅಂತ ರೌಂಡ್ಸ್ ಹೋಗಕ್ಕೆ ಹೇಳಿದ್ದಾರೆ ಅಂತ ಹೊರಟರು.. ಆಗ ಈ  ಜಗದೀಶ್ ಇದ್ದವರು ಅವರ ಫ್ರೆಂಡ್ ಹತ್ತಿರ ಬೈಕ್ ತಗೊಂಡು ನಾವು ಹೊರಟ್ವಿ...ನೋಡಿದ್ರೆ ದಾರಿ ಮಧ್ಯೆ ಎಲ್ಲಾ ಹಳ್ಳೀಲೂ celebrations ಫುಲ್ ಜೋರಾಗಿತ್ತು.. ತಮಟೆ ಬಾರಿಸ್ತಾ ಡೋಲು ಬಾರಿಸ್ತಾ ರಸ್ತೆ ಮಧ್ಯೆದಲ್ಲೇ ಕುಣಿತಿದ್ದರು..

ಅಂತು ಇಂತು ಮನೆ ತಲುಪಿದಾಗ ರಾತ್ರಿ ೧೨.೩೦...ಆ ಬಸ್ಸಿಗೆ ಹೋಗಿದ್ದರೆ ೧೦.೧೫ಕ್ಕೆ ಮನೇಲಿ ಇರ್ತಿದ್ದೆ.. ಇನ್ನೂ ಬರದೆ ಇದ್ದದಕ್ಕೆ ಅಪ್ಪ ಫೋನ್ ಮಾಡಿದ್ದಾರೆ..ನನ್ನ ಮೊಬೈಲ್ out of coverage area ಇತ್ತು... ಕೊನೆಗೆ ಬರ್ತಾನೆ ಬಿಡು ಅಂತ ಸುಮ್ನಾಗಿದ್ರಂತೆ...ಅವತ್ತು ನಮ್ಮ ದೊಡ್ಡಮ್ಮ ಬಂದಿದ್ದರು ಅಂತ ಪಾಯಸ ಮಾಡ್ಕೊಂಡು ನನಗೋಸ್ಕರ ಉಟಕ್ಕೆ ಕಾದು ಕಾದು ಸಾಕಾಗಿ ಫೋನ್ ಮಾಡಿ ಮಾಡಿ ಸುಸ್ತಾಗಿ "ಏಲ್ ಹೋದ ಈ ನನ್ ಮಗ" ಅಂತ ಬೈಕೊಂಡು,ಹೊಟ್ಟೆ ಹಸಿದ ಮೇಲೆ ಊಟ ಮಾಡಿ ಮಲಗಿದ್ದರು.. ಮನೆಗೆ ಹೋಗಿ ಯಾಕ್ ಲೇಟ್ ಅಂತ ಅವ್ರು ಕೇಳ್ದಾಗ,ಹಿಂಗಿಂಗೆ ಆಯ್ತು,ಅವ್ರು ಬಂದು ಬಿಟ್ಟು ಹೋದರು,ಅಂದೆ..ನಮ್ ಅಪ್ಪಾಜಿ ತಲೆ ತಲೆ ಚಚ್ಕಂಡ್ ನಕ್ಕಿದ್ರೆ,ನಮ್ ಅಮ್ಮ "ಅವ್ರು ಬೈಕ್ ಕೊಡಬಾರದಿತ್ತು ಕಣ್ಲ ನಿಮಗೆ,ಅಷ್ಟು ಪರಿಜ್ಞಾನ ಬ್ಯಾಡವೇ ?" ಅಂತ ಒಂದ್ ಲುಕ್ ಕೊಟ್ಟು "ಹೊಗ್ ಪಾಯಸ ತಣ್ಣಗೆ ಆಗಿದೆ,ಅದನ್ನೇ ತಿನ್ನು" ಅಂತೇಳಿ ಮಲಗಿದರು.. ಹಳೇಬೀಡಿನಲ್ಲಿ  ನನ್ನ ಫ್ರೆಂಡ್ ಪೃಥ್ವಿ ಮನೇಲಿ ಇದ್ದೀನಿ,ಅಲ್ಲಿ ಮ್ಯಾಚ್ ನೋಡ್ತಾ ಇದ್ದೆ ಅಂತ ತಿಳ್ಕಂಡಿದ್ದರಂತೆ...


ಹೋದ ವರ್ಷ ಹಿಂಗೆ ಆಗಿತ್ತು...ಈ ವರ್ಷ ಈ ಥರ ಏನು adventurous ಸಂಗತಿ ನಡೆಯಲ್ಲ.. ಯಾಕಂದ್ರೆ ಬೆಳಗ್ಗೆ ಟ್ರೈನ್ ಗೆ ಹೋಗ್ತಿರದು.. ಅಲ್ಲದೆ ಜೊತೆಗೆ ಫ್ರೆಂಡ್ಸ್ ಇರ್ತಾರೆ...ನನ್ ಕಥೆ ಯಾವಾಗ್ಲೂ ಹಿಂಗೆ ...ಅದ್ ಬಿಡಿ...


ಪ್ರಕೃತಿಯ ಹೊಸ ಚಿಗುರಿನೊಂದಿಗೆ,ಹುರುಪಿನೊಂದಿಗೆ ನವ 'ನಂದನ' ಸಂವತ್ಸರದ ಪಯಣ ಸಾಗಲಿ...
ಸುಖ ದುಃಖ,ಸಿಹಿ ಕಹಿ ಎಲ್ಲವನ್ನೂ ಸಮನಾಗಿ ಸ್ವೀಕರಿಸುತ್ತಾ ಬದುಕು ಸಾಗಲಿ...
ಸಮಸ್ತರಿಗೂ ಯುಗಾದಿಯ ಶುಭಾಶಯಗಳು... ಒಳ್ಳೇದ್  ಆಗ್ಲಿ ...


(ಹಳ್ಳಿ ಕಡೆ ಯುಗಾದಿ ದಿನ ಹೊನ್ನಾರು ಅಂತ ಆಚರಣೆ ಮಾಡ್ತಾರೆ... ಅದರ ಬಗ್ಗೆ ಒಂದೇ ಲೇಖನ ಇದೆ ನೋಡಿ...)


Saturday, April 2, 2011

ಯುಗಾದಿಗೆ ಊರಿಗೆ ಹೋಗುವಾಗ ಈಗಾಗಿತ್ತು.......!!


ಇಂಜಿನಿಯರಿಂಗ್    ಮೊದಲ  ವರ್ಷ ..ಮಾರನೆಯ  ದಿನ  ಯುಗಾದಿ  ಹಬ್ಬ  ಇದೆ .
ಹಾಗಾಗಿ  ಊರಿಗೆ  ಹೋಗುವ  ಹುಮ್ಮಸ್ಸಿನಲ್ಲಿ  ಮಧ್ಯಾನದ  ಕ್ಲಾಸ್  ಬಂಕ್  ಮಾಡಿ  ಊರಿಗೆ  ಹೊರಟೆ .
ಬಂಕ್ ಮಾಡಿದರೂ  ಕೂಡ  ಹೊರಡುವುದು  ಸ್ವಲ್ಪ  ತಡ  ಆಯಿತು .ಸಂಜೆ  ಅಗೋಗಿ ಬಿಟ್ಟಿತ್ತು .
ಸರಿ  ಇನ್ನೇನ್  ಮಾಡೋದ್  ಅಂತ  ಹೊರಟೆ .ತುಮಕೂರಿನಲ್ಲಿ  ಬಸ್  ಅತ್ತಿದೆ ,ಆಗ್ಲೇ  ಸಂಜೆ  ಆಗಿದ್ದರಿಂದ
ನಾನು  ಅರಸೀಕೆರೆ   ತಲುಪುವ  ವೇಳೆಗೆ  ನಮ್ಮ  ಊರಿಗೆ  ಲಾಸ್ಟ್  ಬಸ್  ಅರಸೀಕೆರೆ  ಮತ್ತು  ಬಾಣಾವರ  ೨  ಕಡೆ ಇಂದ  ಹೋಗಿ  ಬಿಟ್ಟಿರುತ್ತೆ .
ಹಾಸನದಿಂದ   ನಮ್ಮ  ಊರಿಗೆ  ಲಾಸ್ಟ್  ಬಸ್  ರಾತ್ರಿ  ೯ಕ್ಕೆ  ಇದೆ .ಆದ್ದರಿಂದ  ತಿಪಟೂರಿನಲ್ಲಿ  ಇಳಿದು  ಹಾಸನಕ್ಕೆ  ಹೋಗುವ  ಪ್ಲಾನ್  ಮಾಡಿದೆ.ಸರಿ  ತಿಪಟೂರಿನಲ್ಲಿ  ಇಳಿದು  ಸ್ವಲ್ಪ  ಸಮಯ  ಕಾದೆ  ,ಒಂದು  ಬಸ್  ಇಲ್ಲ  ಹಾಸನಕ್ಕೆ .
 ಯಾರೋ ಒಬ್ರನ್ನ  ಕೇಳ್ದಾಗ  ಅವರು  ಹೇಳಿದ್ರು ,"ಇವಾಗ  ಹಾಸನಕ್ಕೆ  ಯಾವ್ದು  ಬಸ್  ಇಲ್ಲಪ್ಪ ,ಯಾವ್ದಾದ್ರು
ಟೆಂಪೋಗೋ  ಅಥವಾ  ಲಾರಿಗೋ  ಹೋಗು "ಅಂತ .
ಇನ್ನೇನ್  ಮಾಡೋದು  ಅಂತ  ಕಾಯುತ್ತ ಇದ್ದೆ ,ಒಂದು  ಲಾರಿ  ಬಂತು ,ಸರಿ  ಅಲ್ಲಿದ್ದ  ಎಷ್ಟೋ  ಜನ  ಮುಗಿ  ಬಿದ್ರು ,ಆ  ಲಾರಿ  ಅತ್ತಕ್ಕೆ.ನಾನು  ಕೂಡ  ಒಬ್ಬ  ಅದ್ರಲ್ಲಿ .ಮಾರನೆಯ ದಿನ  ಹಬ್ಬ  ಆದ್ದರಿಂದ   ತುಂಬ ಜನ  ಪೇಟೆಗೆ  ಅದು  ಇದು  ತಗೊಂಡ್ ಹೋಗಕ್ಕೆ  ಬಂದಿದ್ರು  ಅನ್ಸುತ್ತೆ .ಹೇಗೋ ಲಾರಿ  ಅತ್ತಿ  ಆಯಿತು ,ನೋಡ್ಕೋತೀನಿ  ನನ್ನ ಪರ್ಸ್  ಇಲ್ಲ .ಬಿದ್ದೋಗಿ  ಬಿಟ್ಟಿತ್ತು.
ಹೇಗೋ  ಆ  ನೂಕು  ನುಗ್ಗುಲಲ್ಲಿ ಮತ್ತೆ  ಕೆಳಗೆ ಇಳಿದು  ನೋಡಿದೆ ,ಎಲ್ಲಾದರು ಬಿದ್ದಿದ್ಯ  ಅಂತ,
ನನ್ನ  ಪರ್ಸ್ ನಾಪತ್ತೆ.
೧ ರುಪಾಯಿ  ಕೂಡ  ದುಡ್ಡಿಲ್ಲ .ಎಲ್ಲ  ಅದರಲ್ಲೇ  ಇತ್ತು  .
ಗಾಬರಿ  ಹಾಗೋಯ್ತು  ,ಈಗೇನ್  ಮಾಡೋದು  ಅಂತ . ಈ  ಕಡೆ   ಅಳಬೇಕೋ  ಸಮಾಧಾನ  ಮಾಡ್ಕೊಬೇಕು  ಒಂದು  ತಿಳಿತಿಲ್ಲ .ಪರ್ಸ್ ಕೆಳಗೆ  ಬಿತ್ತೋ ,ಅಥವ  ಯಾರಾದ್ರೂ  ಎತ್ತಿದರೋ ,ಒಂದು  ಗೊತ್ತಿಲ್ಲ .
ಸರಿ ಇನ್ನೇನ್ ಮಾಡೋದು ಅಂತ ಅಲ್ಲಿದ್ದ ಒಬ್ಬ ಟ್ರಾಫಿಕ್ ಪೋಲಿಸ್ ಹತ್ತಿರ ಹೋಗಿ ಸರ್,ಯಾರಾದ್ರೂ ಒಂದು ಪರ್ಸ್ ತಂದು ಕೊಟ್ರ,ಲಾರಿ ಹತ್ತ ಬೇಕಾದ್ರೆ ಕೆಳಗೆ ಬಿದ್ದೋಯ್ತು ಅನ್ಸುತ್ತೆ  ಅಂತ ಕೇಳ್ದೆ,
ಯಾರಪ್ಪ ತಂದು ಕೊಡ್ತಾರೆ ಇಷ್ಟೊಂದ್ ಜನದಲ್ಲಿ ಯಾರ ಕೈಗೆ ಸಿಕ್ತೋ ಏನೋ,ಹಬ್ಬಕ್ಕೆ ಖರ್ಚಿಗೆ ಆಯಿತು ಬಿಡಿ ಅವರಿಗೆ ಅಂತ ಅವರು ಹೇಳ ಬೇಕಾದರೆ  ನಂಗೆ ತೋ ಥ್ಹರಿಕೆ ಏನಪ್ಪಾ ಮಾಡೋದು ಇವಾಗ ಅಂತ ಯೋಚಿಸ್ತಾ ಇದ್ದಾಗ,ಯಾವ್ ಊರು,ಎಷ್ಟಿತ್ತು ದುಡ್ಡು,ಬೇರೆ ಏನೇನ್ ಇತ್ತು ಅಂತ ಎಲ್ಲೇ ಕೇಳಿದ್ರು,
ಅದರಲ್ಲಿ ೨೦೦ ರುಪಾಯಿ ,ನನ್ನ ಲೈಬ್ರರಿ ಕಾರ್ಡ್,ಏಟಿಎಂ ಕಾರ್ಡ್,ಫಿ ರಶೀದಿ ಇತ್ತು,ನನ್ನು ಹಳೇಬೀಡಿಗೆ ಹೋಗಬೇಕು,ಇವಾಗ ಬಸ್ ಸಿಗಲ್ಲ,ಅದಕ್ಕೆ ಹಾಸನಕ್ಕೆ ಹೋಗಿ ನಮ್ಮ ಅಕ್ಕನ ಮನೇಲಿ ಉಳ್ಕೊಂಡು
ಬೆಳಗ್ಗೆ ಹೋಗ್ತೀನಿ ಅಂದೆ,ಸರಿ ಇನ್ನ್ಮುಂದೆ ಹುಷಾರಾಗಿ ಇಟ್ಕೋ ಅಂತ ಹೇಳಿ ೨೫ ರುಪಾಯಿ ಕೊಟ್ಟು ನೆಕ್ಷ್ತ ಬಸ್ಸಿಗೆ ಹೋಗು ಅಂತ ಹೇಳಿದ್ರು.
ನಾನು ಕಕ್ಕಾ  ಬಿಕ್ಕಿ ಅದೇ,ಆ ಟ್ರಾಫಿಕ್ ಪೋಲಿಸ್ ಗೆ ಏನ್ ಹೇಳ್ಬೇಕು ಅಂತ ಗೊತ್ತಾಗಲಿಲ್ಲ,ಸರ್ ಥ್ಯಾಂಕ್ಸ್ ಅಂದೆ,ಇರ್ಲಿ ಇರ್ಲಿ ಹುಷಾರಾಗಿ ಹೋಗು,ದುಡ್ಡನ್ನ ಸರಿಯಾಗಿ ಇಟ್ಕೋ ಅಂತ ಹೇಳಿ ಹೋದರು.
ಮತ್ತೆ  ಅದೇ  ರೀತಿ  ಸ್ವಲ್ಪ  ಕಾಯ್ತಾ  ಇದ್ದೆ ,ಆ  ಬಸ್  ಸ್ಟಾಪ್  ಹತ್ತಿರ ಫುಟ್  ಪಾತಿನಲ್ಲಿ   ಒಬ್ರು  ಗಂಡ  ಹೆಂಡತಿ  ಹಣ್ಣು
ಮಾರುತ್ತ ಇದ್ರೂ ಬಹುಷಃ  ಆ  ಪೋಲಿಸ್  ನನ್ನ  ಬಗ್ಗೆ  ಅವರಿಗೆ  ಹೇಳಿರಬೇಕು  ಅನ್ಸುತ್ತೆ .
ಅವರು  ನನ್ನನ್ನು  ಕರೆದು  "ಬಾರಪ್ಪ  ಇಲ್ಲಿ ,ದುಡ್ಡನ್ನ  ಹುಷಾರಾಗಿ  ಇತ್ಕೊಲದು  ತಾನೆ ,ಇಷ್ಟೊಂದ್  ಜನ  ಇದಾರೆ ,ಯಾರ್  ಎತ್ಕಂಡ್ರೋ   ಏನೋ ?"
ಅಂತ ಹೇಳಿ ಬೇಡ ಅಂದ್ರು ಊಟ  ಮಾಡಿದ್ಯೋ  ಇಲ್ವೋ , ತಗೋ ,ತಿನ್ನು ಅಂತ ಬಾಳೆಹಣ್ಣು ಕೊಟ್ಟರು
ಸರಿ  ಹಾಸನದಲ್ಲಿ  ನಮ್ಮ  ಅಕ್ಕನ  ಹತ್ರ  ಹೇಳಿ  ದುಡ್ಡು  ಇಸ್ಕೊಳನ  ಅಂತ  ಅಂದ್ರೆ ,ಯಾಕೋ  ಭಯ ಆಯಿತು ,ಅವರು  ಬೈತಾರೆ  ಅಂತ .
ಅವಾಗ  ನನ್ನ  ಹತ್ರ  ಮೊಬೈಲ್  ಕೂಡ  ಇರ್ಲಿಲ್ಲ .ಎಷ್ಟೋ  ಜನದ  ಫೋನ್  ನಂಬರ್  ನೆನಪಲ್ಲಿತ್ತು .
ತಕ್ಷಣ  ಅಲ್ಲಿ  ಕಾಯಿನ್  ಫೋನ್  ಇಂದ  ಅರಸಿಕೆರೆಯಲ್ಲಿರುವ  ನನ್ನ  ಒಬ್ಬ  ಫ್ರೆಂಡ್ ಗೆ   ಫೋನ್  ಮಾಡಿ ,ಇಂಗಿಂಗೆ ಆಗೋಗಿದೆ ,ನಂಗೆ  ದುಡ್ಡು  ಬೇಕು  ಇವಾಗ ,ಇನ್ನು  ಅರ್ಧ  ಗಂಟೇಲಿ
ಅಲ್ಲಿಗೆ  ಬರ್ತೀನಿ  ಅಂತ  ಹೇಳಿ  ಹೊರಟೆ .
ಅರಸಿಕೆರೆಯಲ್ಲಿ  ಅವನ  ಹತ್ರ ದುಡ್ಡು  ಇಸ್ಕೊಂಡು  ಹಾಸನಕ್ಕೆ  ಹೋಗಿ ,ನನ್ನ  ಅಕ್ಕನ  ಮನೇಲಿ  ಉಳ್ಕೊಂಡೆ .
ಆ  ಕಡೆ  ನಮ್ಮ  ಮನೇಲಿ  ನಾನು  ಬರ್ತೀನಿ  ಅಂತ  ಅಪ್ಪ  ಅಮ್ಮ  ಇಬ್ರು  ಕಾಯ್ತಿದ್ದಾರೆ  .ರಾತ್ರಿ  ಎಷ್ಟೊತ್ತು  ಆದರು   ಬರ್ಲಿಲ್ಲ  ಅಂತ  ನನ್ನ  ಕ್ಲಾಸ್ ಮೇಟ್  ಒಬ್ಬನಿಗೆ  ಫೋನ್  ಮಾಡಿದ್ದಾರೆ
(ನನ್ನ  ಹತ್ರ  ಮೊಬೈಲ್  ಇರಲಿಲ್ಲವಾದ್ದರಿಂದ  ಅವನೇ  ನನ್ನ  ಮನೆ  ಮತ್ತು  ನಂಗೆ  ಮೀಡಿಯೇಟರ್   ,ನಮ್ಮ  ಮನೆಯಿಂದ  ಏನಾದ್ರು  ವಿಷಯ  ಇದ್ರೆ  ಅವನಿಗೆ  ಫೋನ್  ಮಾಡ್ತಿದ್ರು
"ಅವನು  ಸಂಜೆನೇ  ಹೋದ ,ಅವನನ್ನ  ನಾನೇ  ಬಸ್  ಸ್ಟಾಪ್ ಗೆ  ಡ್ರಾಪ್  ಮಾಡಿದ್ದು " ಅಂತ  ಹೇಳಿ  ಬಿಟ್ಟಿದ್ದ .
ಎಲ್ಲಿ  ಹೋಗಿರಬಹುದು  ಅಂತ   ಮನೇಲಿ  ಯೋಚನೆ ,
ಬೆಳಗ್ಗೆ  ಹೋದ  ಮೇಲೆ  ಲೇಟ್  ಆಯಿತು ,ಅರಸಿಕೆರೆಯಿಂದ   ಬಸ್  ಸಿಗಲಿಲ್ಲ ,ಅದಕ್ಕೆ  ಹಾಸನದಲ್ಲಿ  ಉಳ್ಕೊಂಡೆ  ಅಂತ  ಹೇಳಿದೆ ,ಆದ್ರೆ  ಪರ್ಸ್  ವಿಷ್ಯ  ಮಾತ್ರ  ಹೇಳಲಿಲ್ಲ .
ಕೊನೆಗೂ  ಮನಸು  ತದೆಯೋಕ್ಕೆ  ಆಗದೆ   ಅಮ್ಮನ   ಹತ್ತಿರ  ಹೇಳ್ದೆ ,ಅಪ್ಪಾಜಿಗೆ  ಮಾತ್ರ  ಯಾವದೇ  ಕಾರಣಕ್ಕೂ  ಹೇಳ್ಬೇಡಿ  ಅಂತಾನು  ಹೇಳಿದ್ದೆ .
 ಆದ್ರೆ  ಬ್ಯಾಂಕ್ ನಲ್ಲಿ   ನನ್ನ  ಫೀ ರಶೀದಿ ಕೇಳ್ದಾಗ  ಅದು  ಕೂಡ  ಕಳೆದು  ಹೋದ್ದರಿಂದ  ಅಪ್ಪನ  ಹತ್ರ  ಅವಾಗ  ಈ  ವಿಷ್ಯ  ಹೇಳಲೇ  ಬೇಕಾಯಿತು  .
(ಅವತ್ತು ಆ ಪೋಲಿಸ್ ಮತ್ತು ಹಣ್ಣು ಅಂಗಡಿಯ ಗಂಡ ಹೆಂಡತಿ ಇಷ್ಟು ಜನರ ಸಹಾಯಕ್ಕೆ  ನಾನು ಯಾವತ್ತು ಚಿರ ಋಣಿ )