Wednesday, January 25, 2012

ಕಾಯಿ ಚಟ್ನಿ ಅನ್ನ ಮತ್ತು ಭಂಗಿ ಸೊಪ್ಪು

೫ನೆ ಕ್ಲಾಸ್ ತನಕ ಹಾಸನದಲ್ಲಿ ಓದುತ್ತಿದ್ದ ನನಗೆ ಅನಿವಾರ್ಯ ಕಾರಣಗಳಿಂದಾಗಿ ಮುಂದಿನ ಓದಿಗೆ ಊರಿಗೆ ವಾಪಸ್ ಬರಬೇಕಾಗಿ ಬಂತು.ಅಲ್ಲಿವರೆಗೂ ದೊಡ್ಡಪ್ಪನ ಮನೆಯಲ್ಲಿ ಓದಿಕೊಂಡಿದ್ದ ನಾನು ಊರಿಗೆ ಬರುತ್ತಿದ್ದದ್ದು ದಸರಾ ಮತ್ತು ಬೇಸಿಗೆ ರಜಾಕ್ಕೆ ಮಾತ್ರ,ಮತ್ತೆ ಅದೇ ರಜದಲ್ಲಿ ಅಜ್ಜಿ ಮನೆ,ನೆಂಟರು ಮನೆ ಎಲ್ಲ ಸುತ್ತಾಡದು..ಹೀಗೆ ಹಾಸನದಿಂದ ನಮ್ಮೂರಿಗೆ ಬಂದಾಗ ಹಳ್ಳಿಯ ಯಾವುದೇ ಕೆಲಸಗಳು ನನಗೆ ಬರ್ತಿರಲಿಲ್ಲ..ಆಮೇಲೆ ಒಂದೊಂದಾಗಿ ಕಲಿಯುತ್ತಾ ಹೋದೆ,ದನ ಕಟ್ಟಕ್ಕೂ ಬರ್ತಿರಲಿಲ್ಲ,ನಮ್ಮ ಅಪ್ಪ ಅಮ್ಮ ಅದೆಷ್ಟು ಸಾರಿ ಹೇಳಿಕೊಟ್ಟರು ನಂದು ಅದೇ ಹಣೆ ಬರಹ.ನಾನೇನಾದ್ರು ಹೊಲದಲ್ಲಿ ಹಸು ಕಟ್ಟಿ ಬಂದ್ರೆ ಅದು ಕಿತ್ತ್ಕೊಂಡು ಎಲ್ಲಾದರು ಹೊಗಿರದು,ಕೆಲವೊಮ್ಮೆ ಬೇರೆಯವರ ತೋಟಕ್ಕೆ ಕೂಡ..ಅದೇನ್ ನಾಯಿ ಗಂಟು ಕಟ್ತಾನೆ ಅಂತ ನಮ್ಮಮ್ಮ ಹೆಳವರು.ಕೊನೆಗೂ ದನ ಕಟ್ಟದು ಕಲ್ತಿದ್ದಾಯಿತು.ಹಾಗೆ ಮನೆಗೆಲಸ ತೋಟದ ಕೆಲಸ,ನೀರು ಆಯಿಸುವುದು,ಕಾಯಿ ಕೆಡವುವುದು ಎಲ್ಲ ಕಲಿತೆ.ಅದೇ ಅಲ್ಲದೆ ಎಂದೂ ಆಡಿರದ ಗಿಲ್ಲಿ ದಾಂಡು,ಮರ ಕೋತಿ ಆಟ ಮುಂತಾದ ಹಳ್ಳಿ ಆಟಗಳು ಆಡುತ್ತಿದ್ದದ್ದು ,ಹೀಗೆ ಹಳ್ಳಿ ಜೀವನ ಸಂಪ್ರದಾಯಕ್ಕೆ ಹೊಂದಿಕೊಳ್ಳುತ್ತಿದ್ದೆ. ನಮ್ಮ ಊರಿನವರೇ ಆದರೂ  ಎಷ್ಟೋ ಜನ ನಂಗೆ ಗೊತ್ತೇ ಇರಲಿಲ್ಲ,ಸಂಪರ್ಕವೇ ಇರದ ಕಾರಣ.ಮನೆ ಪಕ್ಕದಲ್ಲೇ ನಮ್ಮೂರ ಶಾಲೆ ಇತ್ತಾದರೂ ನಾನು ಹಳೇಬೀಡಿಗೆ ಹೋಗುತ್ತಿದ್ದೆ.ಆದರೆ ಒಬ್ಬೊಬ್ಬರಾಗಿ ಮನೆ ಪಕ್ಕದ ಸ್ಕೂಲಿನ ಹುಡುಗರು ಪರಿಚಯ ಆಗತೊಡಗಿದರು.ಸಿಟಿಗಿಂತ ಹಳ್ಳಿ ವಾತಾವರಣವೇ ನನಗೆ ಇಷ್ಟ ಆಗುತಿತ್ತು.

 ಅಷ್ಟಕಷ್ಟೇ ಪರಿಚಯ ಇದ್ದ ಹುಡುಗರೆಲ್ಲ ಆಗ ತುಂಬ ಪರಿಚಯ ಆದರು.ಅವರ ಗುಂಪಿಗೆ ನಾನೂ ಸೇರಿಕೊಂಡೆ.ಮತ್ತೆ ಅವರೊಂದಿಗೆ ಆಟಗಳು ಶುರುವಾದವು.ನಮ್ಮ ಊರಿನ ಹತ್ತಿರ ಪುಷ್ಪಗಿರಿ(ಹಳೇಬೀಡಿನಿಂದ ೨ ಕಿಮಿ) ಅಂತ ಬೆಟ್ಟ ಇದೆ.ಅಲ್ಲಿ ಮಲ್ಲಿಕಾರ್ಜುನ ಸ್ವಾಮಿ ಮತ್ತು ಪಾರ್ವತಮ್ಮ ದೇವಸ್ಥಾನ,ಅಲ್ಲದೆ  ವೀರಭದ್ರೇಶ್ವರ ದೇವಸ್ಥಾನ ಇದೆ .ತುಂಬ ಹಳೆಯದು.ಅಲ್ಲಿನ ಅರ್ಚಕರುಗಳು ನಮ್ಮ ಉರು ಮತ್ತು ನಮ್ಮ ಪಕ್ಕದ ಊರಿನವರು.ಅಲ್ಲಿನ ಪದ್ದತಿ ಹೇಗೆ ಅಂದರೆ ವಾರಕ್ಕೆ ಒಂದು ಮನೆಯವರು ಪೂಜೆ ಮಾಡಬೇಕು.ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ದತಿ.ಮಂಗಳವಾರದಿಂದ ಮುಂದಿನ ಸೋಮವಾರದವರೆಗೆ ಒಂದು ಮನೆಯವರು ಪೂಜೆ ಮಾಡಬೇಕು,ಸೋಮವಾರ ಸಂಜೆ ಅವರು ಪೂಜೆಯನ್ನು ಇನ್ನೊಬ್ಬರಿಗೆ ವಹಿಸಿಕೊಡಬೇಕು.ಅಧಿಕಾರ ಹಸ್ತಾಂತರಿಸಿದ ಹಾಗೆ,ದೇವಸ್ಥಾನದ ಬೀಗ,ಪೂಜಾ ಸಾಮಗ್ರಿಗಳು ಎಲ್ಲವನ್ನು .ಅಲ್ಲಿ ಪೂಜೆ ಮಾಡುವ ಪ್ರತಿಯೊಬ್ಬರಿಗೂ ಒಂದಿಷ್ಟು ಜಮೀನು ಕೊಟ್ಟಿದ್ದಾರೆ.ಎಲ್ಲರು ಅದನ್ನ "ದೇವರ ಹೊಲ" ಅಂತ ಕರೀತಾರೆ.ನಮ್ಮ ತಾತ ಸುಮಾರು ೭೫ ವರ್ಷದ ಹಿಂದೆ ಈ ಊರಿಗೆ ಬಂದು ಓಲೆ ಹಾಕಿದ್ದರಿಂದ,ಅದಕ್ಕೂ ಮುಂಚೆ ಇಂದಲೂ ಈ ಪದ್ದತಿ ಇದ್ದರಿಂದ ನಮ್ಮ ಮನೆಯವರಿಗೆ ಅಲ್ಲಿ ಪೂಜೆ ಮಾಡುವ ಅವಕಾಶ ಇಲ್ಲ.ನಮ್ಮ ಉರಿನಲ್ಲಿ ಸುಮಾರು ೪೦ ಮನೆ,ಪಕ್ಕದ ಉರಿನಲ್ಲಿ ೨೦ ಮನೆಯವರು ಅಲ್ಲಿ ಪೂಜೆ ಮಾಡುತ್ತಾರೆ.ಹೀಗೆ ಒಬ್ಬರಾದ ನಂತರ ಇನ್ನೊಬ್ಬರು ಹೀಗೆ ಸರಪಳಿ ಸಾಗುತ್ತದೆ.ಎಲ್ಲರದು ಮುಗಿದ ಮೇಲೆ ಮತ್ತೆ ಮೊದಲಿಂದ.

ಸೋಮವಾರ ಸಂಜೆ ಬೆಟ್ಟ ಹತ್ತಿದರು ಎಂದರೆ ಮುಂದಿನ ಸೋಮವಾರ ಬೇರೆಯವರಿಗೆ ವಹಿಸಿ ಕೊಟ್ಟು ಮಂಗಳವಾರ ಬೆಳಗ್ಗೆನೇ ಕೆಳಗೆ ಇಳಿಯುತ್ತಿದ್ದದ್ದು.ಯಾಕಂದ್ರೆ ದೇವಸ್ಥಾನ ಕೂಡ ಅವರೇ ಕಾಯಬೇಕಿತ್ತು,ಅವರು ಅಲ್ಲೇ ಮಲಗೆಬೇಕಿತ್ತು.ಅವರ ಜೊತೆ ಅಕ್ಕ ಪಕ್ಕದ ಮನೆಯವರು,ಊರಿನ ಇನ್ನು ಅನೇಕರು ಹೋಗುವುದು ವಾಡಿಕೆ.ಒಬ್ಬರ ಮನೆ ಪೂಜೆ ಇದ್ದಾಗ ಮತ್ತೊಬ್ಬರು,ಅವರ ಮನೆಯದ್ದು ಇದ್ದಾಗ ಇವರು ಹೋಗುತ್ತಿದ್ದರು.ಆಗ ಬೇಸಿಗೆ ರಜದಲ್ಲಿ ನಾನೂ ಎಲ್ಲಿಗೂ ಹೋಗದಿದ್ದರೆ,ನಮ್ಮ ಸ್ನೇಹಿತರ ಮನೆಯವರ ಪೂಜೆ ಇದ್ದಾಗ ನಾನೂ ಅವರ ಜೊತೆ ಹೋಗುತ್ತಿದ್ದೆ..ಪ್ರತಿ ದಿನ ರಾತ್ರಿ ಗುಂಪು ಗುಂಪಾಗಿ ಹೋಗುತ್ತಿದ್ದೆವು,ಜೊತೆಗೆ  ಹೊದಿಯಲು ಬೆಡ್ ಶೀಟ್ ಎಲ್ಲ ತಗಂಡು ಹೋಗ್ತಿದ್ವಿ.ನಮ್ಮ ಜೊತೆ ದೊಡ್ಡವರೆಲ್ಲ ಬರ್ತಿದ್ರು ,ಆದರೂ ನಮಗೆ ರಾತ್ರಿ ಬೆಟ್ಟ ಹತ್ತಲು ಹೆದರಿಕೆ.ನಮ್ಮ ಹುಡುಗರೆಲ್ಲ  ಹೇಳುತ್ತಿದ್ದ ಕಥೆಗಳು,ನಮ್ಮಜ್ಜಿ ಹೇಳಿದ್ದ ಕಥೆಗಳು ಹಾಗಿದ್ದವು..ಆ ಬೆಟ್ಟದಲ್ಲಿ ಚಿರತೆಗಳಿಗೂ ಕಾಡು ಕಿರುಬಗಳಿಗೂ ಯಾವುದೇ ಕೊರತೆ ಇರಲ್ಲಿಲ.ಎಷ್ಟೋ ಸಾರಿ ಊರಿನ ಒಳಗೆ  ಕೂಡ ಬಂದ ಉದಾಹರಣೆಗಳಿವೆ.ನಮ್ಮ  ಮಾವ ಒಬ್ಬರು ಸಂಜೆ ಸಮಯದಲ್ಲಿ ಹೊಲದಲ್ಲಿ ಇದ್ದಾಗ,ಚಿರತೆ ಕಂಡು,ಬೆಳಗ್ಗೆವರೆಗೂ ಕಬ್ಬಿನ ಗದ್ದೆ ಒಳಗೆ ಇದ್ದು ಬಂದಿದ್ದು ಎಲ್ಲ ಕೇಳಿದ್ದೆವು,ಅಲ್ಲದೆ ಹೀರೆಗೌಡ ಅಂತ ಅವರ ಮಗ ದನ ಕಾಯಲು ಅದೇ ಗುಡ್ಡಕ್ಕೆ  ಹೋಗಿದ್ದಾಗ ಒಂದು ಚಿರತೆ ಮರಿ ಸಿಕ್ಕಿತ್ತು,ಬೆಕ್ಕಿನಷ್ಟು ಇತ್ತು,ಇನ್ನೂ ಮರಿ.ಅದನ್ನವರು ತಗಂಡು ಬಂದು ಮನೇಲಿ ಇಟ್ಕಂದಿದ್ದರು.ನಮಗೆಲ್ಲ ಹೆದರಿಕೆ ಅವಾಗ.ಇದು ದೊಡ್ಡದಾದ ಮೇಲೆ ಮನುಷ್ಯರನ್ನು ತಿನುತ್ತೆ ಅಂತ.ಆಗ ಕೆಲವರು ಅದಕ್ಕೆ ಮಾಂಸದ ರುಚಿ ತೋರಿಸದೆ ಇದ್ದರೆ ಆಯಿತು ಅಂತಿದ್ದರು.ಸುಮಾರು ೧೫ ದಿನ ಆದ ಮೇಲೆ ಅರಣ್ಯ ಇಲಾಖೆ ಅವ್ರಿಗೆ ಗೊತ್ತಾಗಿ  ಬಂದು ಅದನ್ನ ತಗಂಡು ಹೋದರು.ಅಷ್ಟೊತ್ತಿಗೆ ಅದರ ಪಾಡು ಚಿಂತಾನಜನಕ ಆಗಿತ್ತು...ಥೇಟ್ ಬೆಕ್ಕಿನ ಹಾಗೆ... ಅಕ್ಕ ಪಕಕ್ದ ಊರಿನ ಜನ ಎಲ್ಲ ನೋಡ್ಕಂಡು ಹೋಗಕ್ಕೆ ಬರ್ತಿದ್ರು.. ಬಂದವರು ಸುಮ್ನೆ ನೋಡ್ತಿದ್ರ,ಅದು ಬಿಟ್ಟು ಮುಟ್ಟಿ ,ಕೆಲವರು  ಮುದ್ದು ಮಾಡಿ,ಇನ್ನು ಕೆಲವರು ಗಂಡೋ ಹೆಣ್ಣೋ ಅಂತ ಉಲ್ಟಾ ಮಾಡಿ ನೋಡದು,ಹೀಗಾಗಿ ಆ ಚಯಾರ್ತೆ ಬೆಕ್ಕಿನಂತೆ ಆಗಿತ್ತು.. ಇವನ್ನೆಲ್ಲ ಕಣ್ಣಾರೆ ಕಂಡಿದ್ದರಿಂದ ಸ್ವಲ್ಪ ಹೆದರಿಕೆ ಆಗ್ತಿತ್ತು,ಆಗ ನಮ್ಮ ಜೊತೆ ಇದ್ದ ದೊಡ್ಡವರೆಲ್ಲ ಇಷ್ಟು ಜನ ಇದ್ದೀವಿ ,ಒಂದು ಚಿರತೆನ ಹೊಡ್ಯಕ್ಕೆ ಆಗಲ್ವೆನ್ರುಲ ಅಂತ ಬಹಳ ಧೈರ್ಯವಾಗಿ ಹೇಳ್ತಿದ್ದರು.ನಮ್ಮ ಅದೃಷ್ಟಕ್ಕೆ ಒಂದು ದಿನ ಕೂಡ ಯಾವದೇ ಚಿರತೆ ಬರಲಿಲ್ಲ..ಆದರೂ ಬೆಟ್ಟ ಹತ್ತುವಾಗ ನಮ್ಮ ಓರಗೆಯ ಹುಡುಗರೆಲ್ಲ ಈಗ ಚಿರತೆ ಬಂದ್ರೆ ಏನ್ ಮಾಡೋದು,ಯಾವ್ ಕಡೆ ಇಂದ ಬಂದ್ರೆ ಯಾವ್ ಕಡೆ ಓದಿ ಹೋಗ್ಬೇಕು ಅಂತೆಲ್ಲ ಮಾತಾಡ್ತಿದ್ವಿ.ಯಾವಾಗಲೋ ಹಿಂದೆ ನಮ್ಮ ಮನೆ ಕೊಟ್ಟಿಗೆ ಕಿಡಕಿಯಲ್ಲಿ ಇಣುಕಿ ನೋಡ್ತಿತ್ತಂತೆ,ಆಗ ಹಸುಗಳೆಲ್ಲ  ಅರಚಿಕೊಳ್ಳಕ್ಕೆ ಶುರು ಮಾಡಿದ್ವಂತೆ,ಆಗ ಎದ್ದು ನೋಡಿದ್ರೆ ಚಿರತೆ, ಆಮೇಲೆ ಸ್ವಲ್ಪ ಒತ್ತಾದ ಮೇಲೆ ಹೋಯ್ತಂತೆ.ಹೀಗೆ ನಮ್ಮ ಮೆನೆಲಿ ಕೆಲಸಕ್ಕೆ ಇದ್ದ ಆಳುಗಳು ಹೇಳಿದ್ರು.
ಪುಷ್ಪಗಿರಿಯ ಒಂದು ನೋಟ..ಮಲ್ಲಿಕಾರ್ಜುನ ಸ್ವಾಮೀ ದೇವಸ್ಥಾನ

ಅಂಗು ಹಿಂಗು ಬೆಟ್ಟ ಹತ್ತಿ ಹೋಗ್ತಿದ್ವಿ,ಮನೇಲೆ ಉಟ ಮಾಡಿ ಹೋಗ್ತಿದ್ವಿ ಯಾವಾಗಲು,ಆದ್ರೆ ಸೋಮವಾರ ಮಾತ್ರ ಅಲ್ಲೇ ಉಟ.ಬೇರೆ ದಿನ ಹೋದ ಕೂಡಲೇ ದೇವಸ್ಥಾನದ ಒಳಗೆ ಮಲ್ಗದು,ಕೆಲವರು ಅಲ್ಲೇ ಪಕ್ಕದಲ್ಲಿ ಜೆನರೆಟರ್  ರೂಮಿನಲ್ಲಿ ಇಸ್ಪೀಟು ಆಡುತ್ತಿದ್ದರು,ದೇವಸ್ಥಾನದ ಒಳಗೆ ಆಡುವ ಆಗಿರಲಿಲ್ಲ ಹಾಗಾಗಿ .ನಮ್ಮಂಥ ಸಣ್ಣ ಹುಡುಗರಿಗೆ ಅಲ್ಲಿ ಅವಕಾಶ ಇರಲಿಲ್ಲ.ಆದರೂ   ಕಾಡಿ ಬೇಡಿ ಸ್ವಲ್ಪ ಹೊತ್ತು ನೋಡ್ತಿರ್ತಿದ್ವಿ.ಇನ್ನೂ ಕೆಲವರು ಅಲ್ಲಿ ಇಲ್ಲಿ ಸುತ್ತಾಡವ್ರು.ಆಮೇಲೆ ಮಲಗುವುದು.ಗರ್ಭ ಗುಡಿ ಇಂದ ಹೊರಗೆ ಒಂದು ದೊಡ್ಡ ವರಾಂಡ ಥರ ಇತ್ತು.ಅಲ್ಲಿ ಸಂಕ್ರಾಂತಿ ಮತ್ತು ನವರಾತ್ರಿಯಲ್ಲಿ  ದೇವರನ್ನ ಪಟ್ಟಕ್ಕೆ ಕೂರಿಸ್ತಾರೆ.ಅದಕ್ಕಿಂತ ಹೊರಗೆ ಇನ್ನೂ ದೊಡ್ಡ  ವರಾಂಡ   .ಅಲ್ಲಿ ನಂದಿ ವಿಗ್ರಹ ಇತ್ತು.ಅದು ಶಿವನ ದೇವಸ್ಥಾನ ಆದ್ದರಿಂದ ಅಲ್ಲಿ ನಂದಿ ವಿಗ್ರಹ ಇತ್ತು....ಆ ನಂದಿಯ ಮುಂದೆ ಇದ್ದ ಬಾಗಿಲನ್ನು ರಾತ್ರಿ ಮುಚ್ಚುವವರು.ಆ ಬಾಗಿಲಿನ ಚಿಲ್ಕ ಎಷ್ಟು ದಪ್ಪ ಇತ್ತು ಅಂದರೆ ನಮ್ಮ ಕಾಲಿನಷ್ಟು..ಅದಕ್ಕಿಂತ ದಪ್ಪಗೆ ಇದ್ದಿದ್ದು ಮುಖ್ಯ ಬಾಗಿಲಿನ ಚಿಲ್ಕ.ನಾವೆಲ್ಲಾ ಆ ನಂದಿಗಿಂತ ಹಿಂದೆ ಮಲಗುತ್ತಿದ್ದೆವು.ನಂದಿಯ ಮುಂದೆ ಮಲಗುವ ಆಗಿರಲಿಲ್ಲ..ಮತ್ತು ದೇವರ ವಿಗ್ರಹದ ನೇರಕ್ಕೆ ಎಲ್ಲೂ ಮಲಗುವ ಆಗಿರಲಿಲ್ಲ..ನಂದಿಗಿಂತ ಮುಂದೆ ಅಡ್ಡ ಬಿದ್ದು ನಮಸ್ಕಾರ ಕೂಡ ಮಾಡುವ ಆಗಿಲ್ಲ...ಯಾಕೆ ಅಂತ ಕೇಳಿದರೆ ಏನೇನೋ ಕಥೆ ಹೆಳವರು.ನೇರಕ್ಕೆ ಮಲಗಿದರೆ ದೇವ್ರು ಬೇರೆ ಕಡೆಗೆ ನಿಮ್ಮನ್ನ ಒದೆಯುತ್ತೆ ಅಂತೆಲ್ಲ..ಆದ್ರೆ  ಹೆದರಿಕೆಗೆ ನಾವು ಅಲ್ಲಿ ಮಲಗುವ ಸಾಹಸಕ್ಕೆ ಹೋಗ್ತಿರಲಿಲ್ಲ.ಏನಿದ್ರು ಗೋಡೆ ಬದಿಯಲ್ಲಿ ನಮ್ಮ ನಿದ್ರೆ.ಅಷ್ಟು  ದೊಡ್ಡ ಚಿಲ್ಕ ಹಾಕಿ ಮಲಗಿದರೆ ಬೆಳಗ್ಗೆ ಎದ್ದ ಕೂಡಲೇ ನಾವೆಲ್ಲಾ ಊರಿಗೆ ವಾಪಸ್ ಬರ್ತಿದ್ವಿ,ಪೂಜಾರರು ಪೂಜೆಗೆ ತಯಾರಿ ಮಾಡ್ತಿದ್ರು.

ಅಲ್ಲದೆ ಪ್ರತಿ ಹುಣ್ಣಿಮೆ ದಿನ ಭಜನೆ ಎಲ್ಲ ಮಾಡ್ತಿದ್ವಿ.ಅವಾಗ ನೋಡಿರದ ಎಷ್ಟೋ ಸಂಗೀತ ಸಲಕರಣೆಗಳನ್ನು ವಾದ್ಯಗಳನ್ನು ನೋಡಿದ್ದೇ.ಎಷ್ಟೋ ಪದಗಳನ್ನು ಹಾಡುಗಳನ್ನು  ಕಲ್ತಿದ್ದೆ...
ದೇವಸ್ಥಾನದಿಂದ ಇನ್ನೂ ಮೇಲಕ್ಕೆ ಇರುವ ಕೋಡುಗಲ್ಲು

ಆದರೆ ಅವರ ಪೂಜೆಯ ಕೊನೆ ದಿನ ನಾವೆಲ್ಲಾ ಅಲ್ಲಿಗೇ ಊಟಕ್ಕೆ ಹೋಗ್ತಿದ್ವಿ,ಅವತ್ತು ಜಾಸ್ತಿ ಜನ ಬರವ್ರು,ಬೇರೆಯವರಿಗೆ ಪೂಜೆ ವಹಿಸಿಕೊಡುವ ದಿನ..ಅವತ್ತು ಮಂಗಳಾರತಿಗೆ ಬಂದಿದ್ದ ಕಾಯಿಗಳಲ್ಲಿ ಕಾಯಿ ಚಟ್ನಿ ಮಾಡಿ,ಅನ್ನ ಮಾಡಿ ಎಲ್ಲ ಒಟ್ಟಿಗೆ ಮಾಡ್ತಿದ್ವಿ..ಎಲ್ಲ ಅಲ್ಲೇ ಅಡುಗೆ ಮಾಡುತ್ತಿದ್ದದ್ದು.. ಬರಿ ಗಂಡಸರೇ ಸೇರಿ.. ಪ್ರಸಾದ ನಿಲಯ ಅಂಥ ಇದೆ..ಅಲ್ಲಿ ಉತ ಮಾಡ್ತಿದ್ವಿ...ಅಲ್ಲಿ ತಳಿಗೆ ಮಾಡಲು ಜನ ಬಹಳ ಬರ್ತಾರೆ,ಆಗಾಗಿ ಅಲ್ಲಿ ಇಲ್ಲಿ ರುಬ್ಬುವ ಕಲ್ಲು(ಒಳಕಲ್ಲು) ಇತ್ತು.. ನಾವು ಚಟ್ನಿ ರುಬ್ಬುತಿದ್ದದ್ದು ಅಲ್ಲೇ...ಎಲ್ಲರು ಸ್ವಲ್ಪ ಸ್ವಲ್ಪ ಸಮಯ ರುಬ್ಬುವುದು.. ಆ ಕಲ್ಲನ್ನು ಒಬ್ಬರೇ ತಿರುಗಿಸುವುದಕ್ಕೆ ಆಗ್ತಿರಲಿಲ್ಲ.. ಮೂರು ನಾಲ್ಕು ಜನ ಸೇರಿ ಚಟ್ನಿ ಅರಿತಿದ್ವಿ.. ಅಲ್ಲಿ ಮಾಡಿದ ಚಟ್ನಿ ರುಚಿ ಅಂದ್ರೆ ರುಚಿ....ಆ ದಿನ ಕೆಲವರು ಭಂಗಿ ಸೊಪ್ಪು ಸೇದವ್ರು,ಅವಾಗ ಅದು ಏನಂತ ನಮಗೆ ಗೊತ್ತಿರ್ಲಿಲ್ಲ..ಸಿಗರೇಟ್ ಇಂದ ತಂಬಾಕು ತೆಗೆದು ಅದರ ಒಳಕ್ಕೆ ಈ ಭಂಗಿ ಸೊಪ್ಪನ್ನು ಎಡಗೈ ಹಸ್ತದ ಮೇಲೆ ಹಾಕಿ ಬಲ ಹೆಬ್ಬೆಟ್ಟಿನಿಂದ ಉಜ್ಜಿ ಉಜ್ಜಿ ಪುಡಿ ಮಾಡಿ ಅದರ ಬೀಜ ಎಸೆದು ಆ ಪುಡಿಯನ್ನು ಸಿಗರೆಟ್ ಒಳಕ್ಕೆ ತುಂಬಿ ನಂತರ ಅದನ್ನು ಸೇದುತ್ತಿದ್ದರು.. ನಾವೆಲ್ಲಾ ಗೊಂಬೆಗಳ ಹಾಗೆ ನೋಡುತ್ತಾ ಕೂರ್ತಿದ್ವಿ.ಈ ಭಂಗಿ ಸೊಪ್ಪನ್ನು ಹಚ್ಚುವುದು ಬೀಡಿ ಸಿಗರೇಟ್ಅನ್ನು ಹಚ್ಚಿದಷ್ಟು ಸುಲಭ ಇರಲಿಲ್ಲ...ಕೆಲವು ಪಂಟರ್ ಗಳಿದ್ದರು..ಅವರು ಮಾತ್ರ ಬೇಗ ಹಚ್ಚಿ ಬಿಡವ್ರು, ಏನಿಲ್ಲ ಅಂದ್ರು ೧ ನಿಮಿಷವಾದರು ಧಂ ಅನ್ನು ಒಳಕ್ಕೆ ಎಳೆಯ ಬೇಕಿತ್ತು ..ಕೆಲವರು ಉಸಿರು ಕಟ್ಟಿ ಮತ್ತೆ ಇಳಿಸಿ ಮತ್ತೆ ಎಳೆಯುವವರು.. ಅಂತೂ ಇಂತೂ ಬಹಳ ಕಷ್ಟ ಪಡುವವರು...ಕೆಲವರು ಸೇದುವಾಗ ೨ ನಿಮಿಷದವರೆಗೆ ಧಂ ಎಳೆದು ಬಿಡುವವರು..ಹಾಗೆ ಎಳೆಯುತ್ತಿದ್ದವರು ಬಹಳ expert ಗಳು...ಇನ್ನು ಕೆಲವರು ಹೊಸಬ್ಬರು ಇದ್ದರು.ಮಲ್ಲೇಶಣ್ಣ ಅಂತ ಒಬ್ಬರು ಇದ್ದರು,ಅವರು ಅವತ್ತೇ ಮೊದಲೇ ಭಂಗಿ ಸೇದಿದ್ದು... ಎರಡೇ ಧಂ ಎಳೆದಿದ್ದು,ಅದೇನಾಯಿತೋ ಗೊತ್ತಿಲ್ಲ,ಸುಮ್ಮನೆ ನಗ್ತಾ ಕೂತು ಬಿಟ್ರು.ಎಲ್ಲರು ಎದ್ದು "ಲೋ ಮಲ್ಲ ಯಾಕ್ಲ ಏನಾಯ್ತೋ" ಅಂದ್ರು, ಅಸ್ಸಾಮಿ ಎಲ್ಲರ ಮುಖ ನೋಡದು,ನಗದು,ಮಾತು ಗೀತು ಏನು ಇಲ್ಲ.ಹಿಂಗೆ ಸುಮಾರು ೧ ಘಂಟೆಗಿಂತ ಜಾಸ್ತಿ ಇದ್ದರು.ಆಮೇಲೆ ಊಟ ಕೊಟ್ಟರೆ ೩ ಜನ ತಿನ್ನೋ ಅಷ್ಟು ಅನ್ನ ಕಾಯಿ ಚಟ್ನಿ ಒಬ್ಬರೇ ತಿಂದಿದ್ದರು.. ಇದೆಲ್ಲ ಭಂಗಿ ಸೇದಿದ ಕಿಕ್ಕಿನ ಪ್ರಭಾವ ಅಂತೆ..ಅವಾಗ ಕೆಲವರು ಅವರ ಹಳೆ ಅನುಭವಗಳನ್ನ ಹೇಳಿದ್ರು.ಕೆಲವರು ಅಳುತ್ತ ಇದ್ದರಂತೆ,ಕೆಲವರು ಗಂಭೀರವಾಗಿ ಏನು ಮಾತಾಡದೆ ಕೂರುವವರಂತೆ,ಇನ್ ಕೆಲವರು ಬಾಯಿಗೆ ಬಂದಹಾಗೆ ಕಿರುಚವರಂತೆ.ನಮಗೂ ಒಂದು ಧಂ ಎಳೀಬೇಕು,ಹೆಂಗಿರುತ್ತೆ ಅಂತ ನೋಡಬೇಕು ಅನ್ನಿಸದು,ನಮ್ಮ ವಯಸಿನ ಹುಡುಗರಿಗೆಲ್ಲ,ಹಂಗೆನಾದರು ನಾವು ಕೇಳಿದ್ದೇ ಆದರೆ ನಮ್ಮ ಅಪ್ಪಂದಿರು ನಮ್ಮ ಚಮಡ ಸುಲಿದು ಬಿಡವ್ರು ಅನ್ಸುತ್ತೆ ...

ಹೀಗೆ ನಮ್ಮ ಬೆಟ್ಟ ಹತ್ತಿ ಮಲಗಿ ಬರುವ ಕಥೆ ನಡೆಯುತ್ತಿತ್ತು.ನಾನು,ನಮ್ಮ ಗೆಳೆಯರಾದ ದಿವಾಕರ,ಮಂಜ,ದರ್ಶನ್,ದಿಲೀಪ,ವಿಜಯ  ಎಲ್ಲ ಒಟ್ಟಿಗೆ ಹೋಗ್ತಾ ಇದ್ದ್ವಿ..ನಮ್ಮ  ಒಂದು ಗುಂಪು ಇದು .. 
ಹಿಂದಿನಿಂದ ಪುಷ್ಪಗಿರಿ ಹೀಗಿದೆ..
ಈ ಭಂಗಿ ಸೊಪ್ಪು ಅಂದಾಗ ಇನ್ನೊಂದ್ ವಿಷಯ ನೆನಪಾಗುತ್ತೆ.. ನಮ್ಮ ಕಡೆ ಉಗಾದಿ ಮತ್ತೆ ದೀಪಾವಳಿ ಹಬ್ಬದಲ್ಲಿ ಎಡೆ ಇಡದು ,ಹಿರಿಯರಿಗೆ ಇಡದು ಅಂತ ಹೇಳ್ತಾರೆ,ಕೆಲವರು ಬಟ್ಟೆ ಇಡದು ಅನ್ತಾಳು ಹೇಳ್ತಾರೆ..ಅಂದ್ರೆ ಮನೆಯ ಹಿರಿಯರು ತೀರಿ ಹೋಗಿರ್ತಾರಲ್ಲ ಅವರಿಗೆ ಎಡೆ ಇಟ್ಟುವುದು ..ಮನೇಲಿ ಕಳಸ ಹೂಡಿ,ಅದರ ಸುತ್ತ ಹೊಸ ಬಟ್ಟೆ ಇಟ್ಟಿ ಪೂಜೆ ಮಾಡಿ, ಮಾಡಿದ ಅಡುಗೆ ನೈವೇದ್ಯ ಮಾಡಿ ಆಮೇಲೆ ನಮ್ಮ ಉಟ.ಈ ಎಡೆ ಇಡಬೇಕಾದರೆ ಅವರಿಗೆ ಏನೇನ್ ಚಟಗಲಿದ್ವು ಅವನ್ನೆಲ್ಲ ಇಡಬೇಕು.ಕೆಲವರಿಗೆ ಬೀಡಿ ಸಿಗರೇಟ್ ಇಡಬೇಕು,ಇನ್ನು ಮೇಲಾಗಿ ಕುಡಿಯುವರಿಗೆ ಎಣ್ಣೆ ಬಾಟಲಿ ಕೂಡ ಇಡಬೇಕು.ನಮ್ಮ ತಾತನಿಗೆ ಮುಂಚೆ ಬಾಟಲಿ ಇಡವ್ರಂತೆ,ಆಮೇಲೆ ನಮ್ಮಮ್ಮ ಅತ್ತೆ ಎಲ್ಲ ಸೇರಿ ಕಿರಿಕ್ ತಗೆದಿದ್ದಕ್ಕೆ ಅದನ್ನ ಇಡದು ನಿಲ್ಲಿಸಿದರಂತೆ..ಒಂದ್ಸಲ ಯಾವ್ದೋ ಬೀಡಿ ತಂದಿದ್ದೆ,ಆಮೇಲೆ ಪುನಃ ವಾಪಸ್ ಕಳ್ಸಿದ್ರು ಮನೆ ಇಂದ ಯಾಕೆ ಅಂದ್ರೆ ನಮ್ಮ ತಾತ ಸೇದುತ್ತಿದ್ದದ್ದು ಸತೀಶ್ ಬೀಡಿ ಅಂತೆ,ಅದಕ್ಕೆ ಅದನ್ನೇ ಇಡಬೇಕಂತೆ ಹಂಗಾಗಿ.ಜೊತೆಗೆ ಭಂಗಿ ಸೊಪ್ಪು ಕೂಡ ಇಡಬೇಕಿತ್ತು.ಆದರೆ ಈ ಬೀಡಿ ಬಾಟಲಿ ಎಲ್ಲ ಅರಮಾಗಿ ಸಿಗತ್ತೆ,ಈ ಭಂಗಿ ಸೊಪ್ಪು ಎಲ್ಲೂ ಪಬ್ಲಿಕ್ ಆಗಿ ಮಾರೋ ಹಂಗಿಲ್ಲ..ಅದೇ ದೊಡ್ಡ ಗೋಳು ..ನಮ್ಮ ತಾತ ಸೇದವ್ರಂತೆ...ಅದೇನೋ ಹೇಳ್ತಾರಲ್ಲ ಈ ಶಾನುಭೋಗ ತಲೆ ಕೆಟ್ಟು ಹಳೆ ಕಥೆ ಹುಡುಕಿದನಂತೆ,ಹಂಗೆ ನಾನು ನಮ್ಮ ಮನೆ ಪಿಟಾರಿ ತೆಗೆದು ನೋಡ್ತಿದ್ದೆ,ಅವಾಗ ಒಂದು ಸಣ್ಣ ಕೊಳವೆ ಸಿಕ್ಕಿತ್ತು,ಸುಮಾರು ೩ ಇಂಚು ,ಮಣ್ಣಿನದು,ಪೀಪಿ ಥರ ಇತ್ತು ....,ಅದೇನು ಅಂತ ಕೇಳ್ದಾಗ ಅದು ನಮ್ಮ ತಾತ ಭಂಗಿ ಸೇದುವ ಪೀಪಿ ಅಂತೆ..ನಮ್ಮ ಅಜ್ಜನ ಹತ್ತಿರ ಬೆಳ್ಳಿಯದು ತಾಮ್ರದು ಇತ್ತಂತೆ...ಯಾವಾಗಲು ನಮ್ಮ ದೊಡ್ಡಪ್ಪ ತಂದು ಕೊಡವರು ಈ ಹಬ್ಬಕ್ಕೆ..ಅವರು ಕೂಡ ಸೇದುವವರು ಆಗಾಗಿ,ಕೆಲವೊಂದ ಸಲ ಇವರೆಲ್ಲ ಸೇದಿ ಆ ಬೀಜ ಅಲ್ಲೇ ಬಿಸಾಕುವವರು ,ಅದು ಹಂಗೆ ಅಲ್ಲೇ ಗಿಡ ಆಗಿರದು..ಇದೆ ಥರ ನಮ್ಮ ಗದ್ದೆ ಹೊಲದಲ್ಲಿ ಕೂಡ ಆ ಗಿಡ ಬೇಕಾದಷ್ಟು ಇತ್ತು...ಆದರೆ ಅದನ್ನ ಬೆಳೆಯದು illegal ..ಆಗಾಗಿ ಕಂಡ ಕೂಡಲೇ ಕಿತ್ತು ಬಿಸಾಕಿ ಅದಕ್ಕೆ ತೆಂಗಿನ ಸೋಗೆ ಮುಚ್ಚಿ ಬಿಡವ್ರು ನಮ್ಮ ಅಪ್ಪ ಮತ್ತೆ ಚಿಕ್ಕಪ್ಪ...ಆಮೇಲೆ ಅದು ಒಣಗಿದ ಮೇಲೆ ಸುಡದು..

ಪುಷ್ಪಗಿರಿ ಇಂದ ದ್ವಾರಸಮುದ್ರದ(ಹಳೇಬೀಡು) ಒಂದು ವಿಹಂಗಮ ನೋಟ


ಹಿಂಗೆ ಒಂದ್ಸಲ ಒಂದು ಹಬ್ಬಕ್ಕೆ ನಮ್ಮ ದೊಡ್ಡಪ್ಪ ಇರಲಿಲ್ಲ,ಆಗಾಗಿ ಈ ಭಂಗಿ ಸೊಪ್ಪು ಬೇಕಿತ್ತಲ್ಲ,ನಮ್ಮ ಅಪ್ಪ ಇದ್ದವರು ಮರಿ ಆ ಅಂಗಡಿಲಿ ೧೦ ರುಪಾಯಿದು ತಗಂಡು ಬಾ ಅಂದ್ರು,ಹಳೆಬೀಡಿನ ಹತ್ತಿರದ ಉರು.ನಮ್ಮ ಅಮ್ಮ ರೀ ,ಆ ಹುಡುಗನ್ನ ಕಳಿಸಿದರೆ ಅವರು ಕೊಡಬೇಕಲ್ಲ,ನೀವು ಹೋಗಿ ತನ್ನಿ ಅಂದ್ರು.ಏ ಕೊಡ್ತಾನೆ ಬಿಡೆ ಅವ್ನು ಅಂತ್ಹೇಳಿ ನನ್ನನ್ನೇ ಕಳ್ಸಿದ್ರು.ನಾನಿದ್ದವನು ರೀ ದುಡ್ಡು ಕೊಟ್ಟರೆ ಯಾಕ್ ಕೊಡಲ್ಲ ಅಂತ ನಮ್ಮ ತಾಯಿಗೆ ದಬಾಯಿಸಿ ಹೋದೆ..ಆಗ ನನಗಿನ್ನು ಈ ಭಂಗಿ ಸೊಪ್ಪಿನ ಬಗ್ಗೆ ಗೊತ್ತಿರಲಿಲ್ಲ..ಏನು ಅಂತ ಕೇಳೆ ಇರಲಿಲ್ಲ.. ಮಾಮೂಲಿ ದಂಟಿನ ಸೋಪ್ಪೋ.ಮೆಂತ್ಯ ಸೋಪ್ಪೋ ಅನ್ಕಂಡಿದ್ದೆ..ಸೀದಾ ಹೋದವನೇ ಅಂಗಡಿ ಮುಂದೆ ಸೈಕಲ್ ನಿಲ್ಲಿಸಿ "ಅಂಕಲ್ ೧೦ ರುಪಾಯಿ ಭಂಗಿ ಸೊಪ್ಪು ಕೊಡಿ " ಅಂದೇ..ಬಹಳ ಗಂಭೀರವಾಗಿ ಕೇಳಿದ್ದೆ...ಅದೊಂದು ಸಣ್ಣ ಪೆಟ್ಟಿಗೆ ಅಂಗಡಿ.. ಆ ಅಂಗಡಿಯಾತನಿಗೆ ಕಾಲಿರಲಿಲ್ಲ..ನನಗೆ ಅದೇ ಗುರುತು ನಮ್ಮಪ್ಪ ಹೇಳಿ ಕಳ್ಸಿದ್ದು..ಆ ಅಂಗಡಿ ಮುಂದೆ ತ್ರಿ ಚಕ್ರ ಸೈಕಲ್ ಇರತ್ತೆ ಅಂತ...ನಾನು ಹಾಗೆ ಕೇಳಿದ್ದೇ ತಡ ದುರುಗುಟ್ಟಿಕೊಂಡು ನೋಡಕ್ಕೆ ಶುರು ಮಾಡಿದ..ನನಗೆ ಫುಲ್ ಹೆದರಿಕೆ...."ಯಾರ್ ಕಳ್ಸಿದ್ದು ನಿನ್ನನ್ನ,ಯಾವೂರು ನಿಂದು,ನಮ್ಮ ಹತ್ತಿರ ಸಿಗಲ್ಲ ಅದು" ಅಂತ ಜೋರಾಗಿ ಹೇಳಿದ..ಪಕ್ಕದಲ್ಲೇ ಇನ್ನೊಬ್ಬರು ಏನೋ ತಗಳ್ತಿದ್ದರು,ಅವರಿಗೆ ಚಿಲ್ಲರೆ ಕೊಟ್ಟು ಕಳಿಸಿದ ಮೇಲೂ ನಾನು ಅಲ್ಲೇ ನಿಂತಿದ್ದೆ"ಅಂಕಲ್...." ಅಂತ ಗೋಗರೆಯುತ್ತಾ ..ನಮ್ಮಪ್ಪ ಹೇಳಿದ್ರು ಇಲ್ಲಿ ಬಿಟ್ರೆ ಬೇರೆ ಎಲ್ಲೂ ಸಿಗಲ್ಲ ಕೊಡಿ ಪ್ಲೀಸ್ ಅಂತ..ಅವರು ಅದಾದ್ ಮೇಲೆ ಸ್ವಲ್ಪ ಒತ್ತು ಬಿಟ್ಟಿ ಬಾ ಇಲ್ಲಿ ಯಾರು ಇಲ್ದೆ ಇದ್ದಾಗ ಅಂತ ನಿಧಾನಕ್ಕೆ ಗದರಿಸಿ ಕಳ್ಸಿದ್ರು.. ನಾನು ಅಲ್ಲೇ ಒಂದೆರಡು ಸುತ್ತು ಸೈಕಲ್ಲಿನಲ್ಲಿ ತಿರುಗಿ ಬಂದೆ..ಅವಾಗ ಮತ್ತೆ ಯಾವೂರು ಅಂದ್ರು... ಸಿದ್ದಾಪುರ ಅಂದೇ..ಯಾರ್ ಮನೆ ಅಂತ ಕೇಳಿದ್ರು.. ಸಣ್ಣಗೌಡ್ರು ಮನೆ ಅಂದೇ...ಓಹೋ ಸ್ಕೂಲ್ ಪಕ್ಕ ಮನೆ ಇದ್ಯಲ್ಲ ಆ ಸಣ್ಣಗೌಡಜ್ಜನ ಮೊಮ್ಮಗನ ನೀನು ಅಂದಾಗ ಹೌದು ಅಂತ ಕತ್ತು ಅಲ್ಲಾಡಿಸಿದೆ ...ಹಂಗೆಲ್ಲ ಎಲ್ಲರ ಮುಂದೆ ಕೇಳಬಾರದು ಮಗ,ಇದನ್ನ ಮಾರನ್ಗಿಲ್ಲ..ಅವಾಗ್ಲೇ ಯಾರೋ ಇದ್ದರಲ್ಲ ಅದಕ್ಕೆ ವಾಪಸ್ ಕಳಿಸ್ದೆ ಅಷ್ಟೇ ಅಂತ ಒಂದು ಸಣ್ಣ ಪೇಪರ್ ಸುತ್ತಿ ಕೊಟ್ಟರು..ಯಾರಿಗೂ ಹೇಳಬೇಡ..ಸೀದಾ ಮನೆಗೆ ಹೋಗು ಬೇಗ ಅಂತೇಳಿ ಕಳ್ಸಿದ್ರು..ಪರವಾಗಿಲ್ಲ ನಮ್ಮ ಅಜ್ಜನ ಹೆಸರು ಸತ್ತು ಇಷ್ಟು ವೆರ್ಷ ಆದಮೇಲು ಬೇಕಾಯ್ತು ಅಂತೇಳಿ ಮನೆಗೆ ಹೋಗಿ ಎಲ್ಲ ಹೇಳಿದೆ.. ತೂ ನಿನ್ನ ಹಂಗೆ ಎಲ್ಲರ ಮುಂದೆ ಕೆಳ್ತಾರ ಅಂತ ನಮ್ಮ ಅಪ್ಪ ಕೇಳಿದಾಗ,ನಂಗೇನ್ ಗೊತ್ತು..ಮೊದಲೇ ಹೇಳಬೇಕಿತ್ತು ಅಂತ ಅವರಿಗೆ ದಬಾಯ್ಸಿದ್ದೆ,ಅವರದೇ ತಪ್ಪು ಅಂತ..
ಆಮೇಲೆ ಆ ಪೇಪರ್ ತೆಗೆದು ನೋಡಿದ್ರೆ ಬಹಳ ಕಡಿಮೆ ಇತ್ತು.ಇದೇನ್ ಇಷ್ಟೇ ಕೊಟ್ಟವರಲ್ಲ ಅಂದ್ರೆ,ಇನ್ನು ಎಷ್ಟ್ ಕೊಡ್ತಾರೆ ಹತ್ತು ರುಪಾಯಿಗೆ,ಇದನ್ನ ಸೇದಕ್ಕೆ ಸಾಕಾಗಿ ಹೋಗುತ್ತೆ ಅಂದ್ರು.

(ಅವಧಿಯಲ್ಲಿ ಪ್ರಕಟಗೊಂಡಿದೆ,ಅದರ ಲಿಂಕ್ )

Saturday, December 31, 2011

Happy New Year !!!

ಗಳಿಗೆಗಳು ಉರುಳಿದಂತೆ ದಿನಗಳು
ದಿನಗಳು ಉರುಳಿದಂತೆ ವರುಷಗಳು
ಸುಖ ದುಃಖಗಳನ್ನು  ಹೊತ್ತು ಸಾಗುತ್ತಿದೆ ಜೀವನ !!!

ಆರಕ್ಕೇರದೆ ಮೂರಕ್ಕಿಳಿಯದೆ
ನಾಲ್ಕೈದರಲ್ಲೇ ಜೋತಾಡುತ್ತಿದೆ
ನಮ್ಮ ಭವಣೆ ,ಸಾಧನೆ...

*************************

ಕೈ ಜಾರಿ ನಯವಂಚಕನ ಸೇರಿದ ದುಡಿಮೆಯ ಫಲ
ಇದು ನನ್ನ ದಡ್ಡತನದಿ  ಗತಿಸಿದ ತಪ್ಪು
ನನ್ನ ನಂಬಿಕೆಗ ಅವ ಬಗೆದ ದ್ರೋಹ !
ಆದರೆ,ನನಗದು ಶಿಕ್ಷೆ,ಅಪ್ಪನ ಮಾತು ಕೇಳದ್ದಕ್ಕೆ ತಕ್ಕ ಶಾಸ್ತಿ.
ಬರೀ ಶಿಕ್ಷೆ ಅಲ್ಲ,ಈಗಲಾದರೂ
ಜಾಗರೂಕನಾಗು ಎಂಬ ಭೋಧನೆ..
ಇಲ್ಲ,ಇನ್ನೊಮ್ಮೆ ಮೋಸ ಹೋಗಲಾರೆ !
ಕೊನೆಗೆ ಅನಿಸಿದ್ದು ಅಪ್ಪನ ಮಾತು ಕೇಳಬೇಕಿತ್ತು .
ಕೈಯೊಳಗಿನ ರಂಧ್ರಗಳಿಗೆ ತೇಪೆ ಹಾಕಬೇಕು...
ಸಮಯ ಕೈ ಜಾರುವ ಮುನ್ನ ಎಚ್ಚೆತ್ತುಕೊಳ್ಳಬೇಕು,

***********************

ನನಸಾಗದೇ ಉಳಿದಿವೆ ಅದೆಷ್ಟೋ ಕನಸುಗಳು
ಕಾರ್ಯಗತವಾಗದ ನಿರ್ಣಯಗಳು
ಪಟ್ಟು ಬಿಡದೆ ಸಾಧಿಸಬೇಕಿದೆ ಕನಸು ಮತ್ತು ನಿರ್ಣಯಗಳನು...

ಚಿಂತಿಸದೆ  ಗತಿಸಿದ ಕರ್ಮಗಳನು
ಯೋಚಿಸದೆ ಮುಂದಿನ ಕಾರ್ಯಗಳನು
ಜೀವಿಸಬೇಕು ವರ್ತಮಾನದಲಿ..
****************************


                                       ನೇಸರನ ನವ ಕಿರಣಗಳು ನಿಮ್ಮ ಬಾಳಲ್ಲಿ ಹೊಂಗಿರಣವಾಗಲಿ..
                                      ಸುಖ ದುಃಖಗಳನ್ನೂ ಸಮವಾಗಿ ಸ್ವೀಕರಿಸುವ ಶಕ್ತಿ ನಿಮ್ಮದಾಗಲಿ..
                                             ಶಾಂತಿ,ನೆಮ್ಮದಿ ನಿಮಗೆ ಆಸರೆ ಆಗಲಿ..
                                             ಆತ್ಮ ಸ್ಥೈರ್ಯವೇ ನಿಮ್ಮ ಶಕ್ತಿಯಾಗಲಿ..
                                  ಎಲ್ಲರಿಗೂ ನವ ವಸಂತದ ಹಾರ್ದಿಕ  ಶುಭಾಶಯಗಳು....

Photo Courtesy:Girish.S

Sunday, December 4, 2011

ಕಡಿಮೆ ವೆಚ್ಚದ ಗೋಬರ್ ಗ್ಯಾಸ್ !!!

ಅವಶ್ಯಕತೆ ಮತ್ತು ಇರುವ ವಸ್ತುಗಳು ಮತ್ತು ಉಪಯೋಗಿಸದೆ ಬಿಟ್ಟ ಸರಕುಗಳನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂದು  ತಿಳಿದರೆ ಏನೆಲ್ಲಾ ಕಂಡು ಹಿಡಿಯಬಹುದು  ಎಂಬುದಕ್ಕೆ ಇದೊಂದು ನಿದರ್ಶನ ಅಂತ ಹೇಳಬಹುದು...
ನಾನೀಗ ಹೇಳುತ್ತಿರುವುದು ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಸಿದ್ಧನಹಳ್ಳಿ ಗ್ರಾಮದ ಹಾಲೇಗೌಡ ಎಂಬ ರೈತರ ಮನೆಯಲ್ಲಿ ಇರುವ ಒಂದು ಗೋಬರ್ ಗ್ಯಾಸ್ ಬಗ್ಗೆ.....ಇದಕ್ಕೆ ತಗುಲಿರುವ ವೆಚ್ಚ ಕೇವಲ ೫೦೦ ರುಪಾಯಿ ಎಂದರೆ ಆಶ್ಚರ್ಯ ಆಗಬಹುದು.... ಆದರೆ ಇದು ಸತ್ಯ...ಇದರ ಹಿಂದಿನ ಕತೃ ಅಲ್ಲೇ ಹತ್ತಿರದ ಊರಿನ ಸಿದ್ಧರಾಮಣ್ಣ ಅಂತ.. ಸದ್ಯ ಬೆಂಗಳೂರಿನಲ್ಲಿ GKVK ಯಲ್ಲಿ APOF ಎಂಬ ಅಂಗ ಸಂಸ್ಥೆಯಲ್ಲಿ  ರೈತರಿಗೆ ತರಬೇತಿ ಕೊಡುತ್ತಿದ್ದಾರೆ... ಈ ಗ್ಯಾಸ್ ಉತ್ಪಾದನೆಯ ತಂತ್ರಜ್ಞಾನ ಅವರ ಐಡಿಯಾ.

ಇವರು ಇಲ್ಲಿ ಉಪಯೋಗಿಸಿರುವುದು ಒಂದಿಷ್ಟು ಸೆಮೆಂಟ್ ಚೀಲಗಳನ್ನು ಹರಿದು ಅದರಿಂದ ಟಾರ್ಪೆಲ್ ಮಾಡಿದ್ದಾರೆ...ಜೊತೆಗೆ ಅಷ್ಟೇ ಆಕಾರದ ಇನ್ನೊಂದು ಪ್ಲಾಸ್ಟಿಕ್ ಟಾರ್ಪೆಲ್  ತಂದಿದ್ದಾರೆ...ಹನಿ ನೀರಾವರಿ ಪದ್ದತಿ ಯಲ್ಲಿ ಉಪಯೋಗಿಸುವ ಒಂದಿಷ್ಟು ಪೈಪ್ ಮತ್ತು ೩-೪ ಅಡಿ ಅಷ್ಟು PVC  ಪೈಪ್....  ಸುಮಾರು ೪೦-೫೦ ಇಟ್ಟಿಗೆ ಮತ್ತು ಸೀಮೆಂಟ್ ಅಷ್ಟೇ...


ಮೊದಲಿಗೆ ಒಂದು ಟಾರ್ಪೆಲ್ ಸುತ್ತಿ ಸಿಲಿಂಡರ್ ಆಕಾರದಲ್ಲಿ ಮಾಡಬೇಕು... ಅದರ ಸುತ್ತ ಇನ್ನೊಂದು ಪದರ ಸ್ವಲ್ಪ ಗಟ್ಟಿಯಾದ ಟಾರ್ಪೆಲ್ ಸುತ್ತಬೇಕು.. ಇದನ್ನು ಸೀಮೆಂಟ್ ನಲ್ಲಿ ಕೂಡ ಕಟ್ಟಾ ಬಹುದು... ಆದರೆ ಅದು ತುಂಬ ದುಬಾರಿ.... ಈ ಟಾರ್ಪೆಲ್ ನಿಂದ ಸುತ್ತಿದ ಆಕೃತಿ ಇಲ್ಲಿ ಆ ದೊಮೆ ನ ಕಾರ್ಯ ನಿರ್ವಹಿಸುತ್ತದೆ...ಇಲ್ಲಿ ಉತ್ಪಾದನೆ ಆಗುವ ಗ್ಯಾಸ್ ಇದರ ಸಾಮರ್ಥ್ಯದ ಮೇಲೆ ಅವಲಂಭಿಸಿದೆ....ಇದನ್ನು ಎಷ್ಟು ದೊಡ್ಡದು ಮಾಡುತ್ತಿವಿ ಅಷ್ಟು  ಸಾಮರ್ಥ್ಯ ಹೊಂದಿರುತ್ತದೆ.ಇದಕ್ಕೆ ಎರಡು ಬದಿಯಲ್ಲಿ ೨-೩ ಅಡಿ ಉದ್ದದ PVC ಪೈಪ್ ಅನ್ನು ಜೋಡಿಸಬೇಕು... ಮತ್ತು ಮಧ್ಯದಲ್ಲಿ ಮೇಲೆ ಹನಿ ನೀರಾವರಿಯಲ್ಲಿ ಬಳಸುವ ಪೈಪ್ ಅನ್ನು  ಜೋಡಿಸಿ ಅದನ್ನು ಸ್ಟವ್ ಗೆ ಜೋಡಿಸಬೇಕು.... ಇಲ್ಲಿ ಈ ಸಿಲಿಂಡರ್ ಆಕಾರದ ಹೊಳಗೆ ಗಾಳಿ ಹೋಗದಂತೆ ನೋಡಿಕೊಳ್ಳಬೇಕು... ಪೈಪ್ ಜೋಡಿಸುವ ೩ ಕಡೆ ಚೆನ್ನಾಗಿ ಕವರ್ ಮಾಡಬೇಕು...
ಹಾಲೇಗೌಡರು ತಮ್ಮ ಮನೆಯಲ್ಲಿ ಅಳವಡಿಸಲಾಗಿರುವ ಗೋಬರ್ ಗ್ಯಾಸ್ ಅನ್ನು ತೋರಿಸುತ್ತಿರುವುದು...
ನಂತರ ಕೆಳಗಿನ ಚಿತ್ರದಂತೆ ಒಂದು ತೊಟ್ಟಿಯನ್ನು ಕಟ್ಟಬೇಕು... ತೊಟ್ಟಿಯ ಕೆಳ ಭಾಗದಲ್ಲಿ ಒಂದು ಪೈಪ್ ಅನ್ನು ಜೋಡಿಸಿ ಅದನ್ನು ಟಾರ್ಪೆಲ್ ನಿಂದ ಮಾಡಿರುವ dome ಗೆ ಜೋಡಿಸಬೇಕು.... ಈ ತೊಟ್ಟಿಯಲ್ಲಿ ಸಗಣಿಯನ್ನು ಕಲಸಿ ಹಾಕಿದರೆ ಅದು ಆ ಪೈಪ್ ಮುಖಾಂತರ ಆ dome ಒಳಗೆ ಹೋಗುತ್ತದೆ... ಅಲ್ಲಿ ಗ್ಯಾಸ್ ಉತ್ಪಾದನೆ ಆಗಿ ಮಧ್ಯದಲ್ಲಿ  ಒಂದು  ಸಣ್ಣ  ಪೈಪ್ ಮುಖೇನ ಅದನ್ನು ಸ್ಟವ್ ಗೆ ಜೋಡಿಸಬೇಕು.... ಇವರು ಸಧ್ಯ ಹನಿ ನೀರಾವರಿಯ ಪೈಪ್ ಅನ್ನು ಜೋಡಿಸಿ ಅದರ ನಲ್ಲಿ ಅನ್ನು Regulator ಆಗಿ ಉಪಯೋಗಿಸುತ್ತಿದ್ದಾರೆ.... ಈ dome ನಲ್ಲಿ ಈ ಸಣ್ಣ ಪೈಪ್ ಅನ್ನು ಜೋಡಿಸುವಾಗ Clamp  ಹಾಕಿದರೆ ಒಳ್ಳೆಯದು.... ಆಗ ಗಟ್ಟಿಯಾಗಿ  ಇರುತ್ತದೆ...



ಸಗಣಿಯನ್ನು ಕದಡಿ ಹಾಕುತ್ತಿರುವುದು...

ಪ್ರತಿ ದಿನ ಸುಮಾರು ೫-೧೦ kg ಸಗಣಿಯನ್ನು ಕದಡಿ ಹಾಕಿದರೆ ಸಾಕು...ಕೇವಲ ೧೦ ನಿಮಿಷದ ಕೆಲಸ..


ಇನ್ನೊಂದು ಬದಿಯಲ್ಲಿ ಕಾಂಪೋಸ್ಟ್ ಹೊರ ಬರಲು ಪೈಪ್ ಹಾಕಿರುವುದು...
ಪ್ರತಿ ದಿನ ಹೊರಗೆ ಬರುವ ಕಾಂಪೋಸ್ಟ್ ಅನ್ನು ಎರೆ ಹುಳದ ಗೊಬ್ಬರ ತಯಾರು ಮಾಡಲು ಬಲಸ ಬಹುದು ಅಥವಾ ಅದಕ್ಕೆ ಯಾವುದಾದರು ಹಿಟ್ಟು(ರಾಗಿ,ಮೆಕ್ಕೆ ಜೋಳ,ಜೋಳ,ರಾಗಿ,ಹುರುಳಿ ಕಾಲು ಹಿಟ್ಟು....) ಮತ್ತು ಬೆಲ್ಲ ಬೆರೆಸಿದರೆ ಅದು ಬಹಳ ಉತ್ತಮವಾದ ಗೊಬ್ಬರ ಆಗುತ್ತ್ತದೆ...ಸಾವಯವ ಕೃಷಿ ಮಾಡುವವರಿಗೆ ಇದು ಹೇಳಿ ಮಾಡಿಸಿದಂತಹ ರೆಡಿ ಮೇಡ್ ಗೊಬ್ಬರ....
ಗ್ಯಾಸ್ ಹೋಗಲು ಪೈಪ್ ಜೋಡಿಸಿರುವುದು...ಇದನ್ನು ಸ್ಟವ್ ಗೆ ಜೋಡಿಸಲಾಗಿದೆ...
ಇಲ್ಲಿ ಇವರು ಸೈಕಲ್ ಟ್ಯೂಬ್ ನಲ್ಲಿರುವ Clamp ಅನ್ನು ಹಾಕಿ ಅದನ್ನು ಸಣ್ಣ ಪೈಪ್ ಗೆ ಜೋಡಿಸಿ ಅದನ್ನು ಸ್ಟವ್ ಗೆ connect ಮಾಡಿದ್ದಾರೆ...


ಇವರ ಮನೆಯಲ್ಲಿ ಇರುವ dome ೧೫೦೦ ಲೀಟರ್ ಸಾಮರ್ಥ್ಯದ್ದು...ಇದರಿಂದ ೩-೪  ಜನಕ್ಕೆ ಸಲೀಸಾಗಿ ಒಂದು ದಿನದ ಅಡುಗೆ ಮಾಡಬಹುದು.... ಅದರ ಸಾಮರ್ಥ್ಯ ಹೆಚ್ಚಿಸಿದಂತೆ(ಅದರ ಗಾತ್ರ ದೊಡ್ಡ ಮಾಡಬೇಕು) ಅದರಿಂದ ಉತ್ಪಾದನೆ ಆಗುವ ಗ್ಯಾಸ್ ಕೂಡ ಜಾಸ್ತಿ ಆಗುತ್ತದೆ.... ಯಾವುದೋ ಹಳೆ ಸ್ಟವ್ ಅನ್ನು ಸಧ್ಯ ಉಪಯೋಗಿಸುತ್ತಿದ್ದಾರೆ... ಅ ಸ್ಟವ್ ಬಿಟ್ಟು ಅವರಿಗೆ ತಗುಲಿರುವ ವೆಚ್ಚ ಕೇವಲ ೫೦೦ ರುಪಾಯಿ... ಇದು ಕನಿಷ್ಠ ಪಕ್ಷ ಏನೇ ಆದರು ೨ ವರ್ಷ ಬಾಳಿಕೆ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ...



ಆ dome ಅನ್ನು ಪ್ಲಾಸ್ಟಿಕ್ ಟಾರ್ಪೆಲ್ ನಿಂದ ಮಾಡಿರುವಿದರಿಂದ ಅದನ್ನು ಸ್ವಲ್ಪ ನೆರಳಿನಲ್ಲಿ ಇಟ್ಟರೆ ಒಳ್ಳಯದು...ಯಾಕೆ ಅಂದರೆ ಆ ಪ್ಲಾಸ್ಟಿಕ್ ಟೆಂಪರ್ ಕಳೆದುಕೊಂಡು ಹರಿದು ಹೋಗುಬಹುದು...ಇಲ್ಲಿ ಪ್ಲಾಸ್ಟಿಕ್ ನಿಂದ ಮಾಡಿರುವ dome ಅನ್ನು ಫೈಬರ್ ನಿಂದ ಅಥವಾ ಇಟ್ಟಿಗೆ ಇಂದ ಕೂಡ ಮಾಡಬಹುದು.. ಆದರೆ ಅದು ತುಂಬ ದುಬಾರಿ ಆಗುತ್ತದೆ....ಇಲ್ಲಿ ಇನ್ನೊಂದು ವಿಶೇಷ ಅಂದರೆ LPG ಗ್ಯಾಸ್ ನ ಹಾಗೆ burst ಆಗುವ ಸಂಭವ ಇಲ್ಲವೇ ಇಲ್ಲ...


ಕಳೆದ ವಾರ ಹಳೇಬೀಡು ಬಳಿ ಪುಷ್ಪಗಿರಿ ಬೆಟ್ಟದಲ್ಲಿ ನಡೆದ ಕೃಷಿ ಮೇಳದಲ್ಲಿ ಇದರ ಪ್ರಾತ್ಯಕ್ಷಿಕೆ ಮಾದರಿ ಅನ್ನು ಇಡಲಾಗಿತ್ತು....ಕುತೂಹಲ ಜಾಸ್ತಿ ಆಗಿ ಇದನ್ನು ನೋಡಲೇ ಬೇಕು ಎಂದು ಅಲ್ಲಿ ಹೋಗಿ ನೋಡಿಕೊಂಡು ಬಂದ್ದದಾಯಿತು...
ಸಧ್ಯ ಆ ಉರಿನಲ್ಲಿ ಸುಮಾರು ೧೦-೧೫ ಮನೆಗಳಲ್ಲಿ ಇದನ್ನು ಅಳವಡಿಸಿಕೊಳ್ಳುತ್ತಿದ್ದಾರೆ... ಇಲ್ಲಿ ಹೊರ ಬರುವ ಕಾಂಪೋಸ್ಟ್ ಬರಿ ಸಗಣಿಗಿಂತ ಹೆಚ್ಚು ಸ್ಟ್ರಾಂಗ್ ಇದೆ.. ಆದ್ದರಿಂದ ಇದು ಬಹಳ ಒಳ್ಳೆಯ ಗೊಬ್ಬರ..


ಇಲ್ಲಿ ಆ ಪ್ಲಾಸ್ಟಿಕ್ dome ಒಳಗೆ ಇನ್ನು ಒಂದು ಅಥವಾ ಎರಡು ಪದರ ಪ್ಲಾಸ್ಟಿಕ್  ಹಾಕಿದರೆ ಸ್ವಲ್ಪ ಗಟ್ಟಿಯಾಗಿ ಇರುತ್ತದೆ.... ಮತ್ತು ಇದರ ಒಳಗೆ ಒಂದು ಪದರ ತಾಮ್ರದ ತಗಡು ಹಾಕಿದರೆ ವಿದ್ಯುತ್ ಅನ್ನು ಕೂಡ ಉತ್ಪಾದಿಸಬಹುದು... ಮತ್ತು Insulin ಕೂಡ ಇದರಿಂದ ತೆಗೆಯಬಹುದು ಎಂದು ಸಿದ್ದರಾಮಣ್ಣನವರು ತಿಳಿಸಿದರು...... ಇದರ ಬಗ್ಗೆ ಇನ್ನು ಕೆಲವೇ ದಿನದಲ್ಲಿ ಪ್ರಯೋಗ ಮಾಡಲಾಗುವುದು.. ..ಇದರ ಪ್ರಯೋಗ ಮುಗಿದ ನಂತರ ಇನ್ನೊಮ್ಮೆ ಅದರ ಬಗ್ಗೆ ಲೇಖನ ಬರೆಯುತ್ತೀನೆ...


"Necessity is the mother of Invention" ಅಂತ ಇದಕ್ಕೆ ಹೇಳಬಹುದು ಅಲ್ಲವೇ?

ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸಿದ್ಧರಾಮಣ್ಣ ಅವರನ್ನು ಸಂಪರ್ಕಿಸಬಹುದು ... ಅವರ ಮೊಬೈಲ್ ಸಂಖ್ಯೆ:9141859991



Monday, November 28, 2011

ಇವ್ರು ಇದ್ದಾರಲ್ಲ........

ಇವ್ರು ಇದ್ದಾರಲ್ಲ ಇವ್ರು.ಈ LIC Agent ಗಳು,ಅದೇನ್ ಕಾಟ ಕೊಡ್ತಾರೋ ನಾ ಕಾಣೆ.ನಾವ್ ಸತ್ತ ಮೇಲೆ ,ನಾವು ಕೂಡಿಟ್ಟಿದ್ದ ಹಣವನ್ನು ಬೇರೆಯವರಿಗೆ ಕೊಡಿಸೋ ಜವಾಬ್ದಾರಿ ಇವರದು..ಸಾಲ ತಗೊಂಡು ಕಣ್ಣು ತಪ್ಪಿಸಿ ಓಡಾಡುವ ಹಾಗೆ,ಇವರ ಕಣ್ಣು ತಪ್ಪಿಸಿ ಓಡಾಡ ಬೇಕಾದ ಪರಿಸ್ಥಿತಿ ಬಂದಿದೆ.. ಈ ಸ್ಥಿತಿ ನನಗೆ ಮಾತ್ರ ಅಂದು ಕೊಂಡಿದ್ದೆ,ನನ್ನ ಎಷ್ಟೋ ಸ್ನೇಹಿತರಿಗೆ ಇದೆ ರೀತಿ ಪ್ರಾಣ ಹಿಂಡುತ್ತಿದ್ದಾರಂತೆ...

ಅದೇನ್ ಆಯಿತು ಅಂದ್ರೆ,ಅದೊಂದು ದಿನ ನಮ್ಮೂರಿನ ಬ್ಯಾಂಕ್ ನಲ್ಲಿ ನನ್ನ ಎಜುಕೇಶನ್ ಲೋನ್ ಕಟ್ಟಿ ಹೊರಗಡೆ ಬಂದೆ ,ಅಲ್ಲೊಬ್ರು ಪಾರ್ಟಿ ಸಿಕ್ಕಿದರು...ನಾನು ಹೈ ಸ್ಕೂಲ್ಗೆ  ಹಳೇಬೀಡಿನಿಂದ ಬೇಲೂರಿಗೆ ಹೋಗುತ್ತಿದ್ದಾಗ ಅವರ ಮಗ ನಮ್ಮ ಸ್ಕೂಲಿನಲ್ಲಿ  ಪ್ರೈಮರಿ ಓದುತ್ತಿದ್ದ..  ಆಗಾಗಿ ಅವನನ್ನು ಕರೆದುಕೊಂಡು ಹೋಗುವುದು,ಬರುವುದು ಕೆಲವು ಹೊಣೆಗಳು ನಮ್ಮ ಮೇಲಿತ್ತು...ವಾರಕ್ಕೆರಡು ದಿನ ಕಬಾಬ್ ತಿಂದು ನನ್ನ ಹತ್ತಿರ ಬದು ಅಣ್ಣ ನಮ್ಮಪ್ಪಂಗೆ ಹೇಳ್ಬೇಡಿ ಅಂತ ಹೇಳ್ತಿದ್ದ...ನನಗೆ ಅಲ್ಲಿ ಸಿಕ್ಕಿದ್ದು ಅವನ ತಂದೆ...ಸರಿ ಯಾರದೋ ಜೊತೆ ಮಾತಾಡ್ತಾ ಇದ್ದವರು ನನ್ನನ್ನು ನೋಡಿ ಮಾತಾಡಿಸಿದರು...ಜೊತೆಯಲ್ಲಿದ್ದವರಿಗೆ ನನ್ನನ್ನು ಪರಿಚಯ ಮಾಡಿಕೊಟ್ಟರು .ಅವರು ಹೋದ ಮೇಲೆ ಎಲ್ಲಿ ಇರುವುದು,ಎಲ್ಲಿ ಕೆಲಸ ಮಾಡುತ್ತಿರುವುದು ಎಲ್ಲ ಉಭಯ ಕುಶಲೋಪರಿ ಆದ ಮೇಲೆ ತನ್ನ ಮಗನ ಬಗ್ಗೆ ಹೇಳಿ ಹೆಗಲ ಮೇಲೆ ಕೈ
ಹಾಕಿಕೊಂಡು ಟೀ ಕುಡಿಯಣ ಬಾ ಅಂತ ಕರ್ಕೊಂಡು ಹೊರಟರು...ಹೆಗಲ ಮೇಲೆ ಕೈ ಹಾಕಿದಾಗಲೇ ಎಲ್ಲೋ ಏನೋ ಎಡವಟ್ಟು ಆಗ್ತಿದೆ ಅನ್ಕೊಂಡೆ...ಅಲ್ಲ ಎಲೈಸಿ ಗಿಲ್ಲೈಸಿ ಮಾಡ್ಸಿದ್ಯೋ ಇಲ್ವೋ,ಇಲ್ಲ ಅಂದ್ರೆ ಮಾಡ್ಸು ನನ್ನ ಹತ್ತಿರಾನೆ ಅಂದ್ರು... ಒಹ್ ಇದಾ ವಿಷ್ಯ ಅಂತ ನಮ್ಮ ಅಪ್ಪನೆ  ಕಟ್ತವ್ರೆ..ಮತ್ತಿನ್ಯಾಕೆ ಅಂದೇ... ಅಲ್ದೆ ಆಫಿಸಿನಲ್ಲಿ ಬೇರೆ ಇದೆ ಅಂದೇ...ಅಯ್ಯೋ ಅದೆಲ್ಲ
ಪ್ರೈವೇಟ್,ಇದು lic ದು ಒಂದು ಮಾಡ್ಸು ಅಂದ್ರು...ಮಾಡ್ಸನ.ಸ್ವಲ್ಪ ಈ ಲೋನ್ ಮುಗಿದು ಬಿಡ್ಲಿ...ಆಮೇಲೆ ಮಾಡಿಸ್ತೀನಿ  ಅಂದೆ... ಇವಾಗ್ಲೆ ಒಳ್ಳೆ ಒಳ್ಳೆ ಸ್ಕೀಮ್ ಗಳು ಇದೆ ನೋಡು ಅಂತ ಮತ್ತೆ ಹೇಳಿದ್ರು . ಯಾಕೋ  ಬಿಡೋ ಹಾಗೆ ಕಾಣಲಿಲ್ಲ.......ಇರ್ಲಿ ತಾಳಿ, ಮಾಡಿಸ್ತೀನಿ ಅಂತ ಹೇಳಿ ಬೇಗ ಹೋಗಬೇಕು ಅಂತ ಹೊರಟೆ ...ಸರಿ ನೆಕ್ಸ್ಟ್  ಟೈಮ್ ಬಂದಾಗ ನಂಗೆ ಫೋನ್ ಮಾಡು
ಅಂದಾಗ ಸರಿ ಸರಿ ಅಂತ ಕಾಲು ಕಿತ್ತಿದ್ದು  ಆಯಿತು......ಅದಾದ್ ಮೇಲೆ ಒಂದಿನ ಅವರ ಹೆಂಡತಿ ಸಿಕ್ಕಿ ನಮ್ಮ ಮನೆಯವರು ಹೇಳ್ತಿದರು  ನೀನ್ ಪಾಲಿಸಿ ಕೊಡ್ತಿಯ ಅಂತ,ಇನ್ನು ಕೊಟ್ಟಿಲ್ವಂತೆ ಅನ್ನಬೇಕಾ..ಕೊಡ್ತೀನಿ ಕೊಡ್ತೀನಿ ಅಂತ ಹೇಳಿ ಅದು ಇದು ಮಾತಾಡಿ ತಪ್ಪಿಸಿಕೊಂಡಿದ್ದಾಯಿತು...
-------------------------------------
ಇನ್ನೊಬ್ಬ ಸ್ನೇಹಿತ ನನ್ನ ಸ್ಕೂಲ್ ಮೇಟ್, ಪಿಯುಸಿಗೆ ರಾಷ್ಟ್ರ ಗೀತೆ ಹಾಡಿ "ಇಲ್ಲಿ ಸಲ್ಲದವನು ಅಲ್ಲಿಯೂ ಸಲ್ಲನಯ್ಯ" ಅನ್ನೋ ಹಾಗೆ ೩ -೪ ಬಿಸಿನೆಸ್ ಮಾಡಿ ಕೈ ಸುಟ್ಟುಕೊಂಡು ಕೊನೆಗೆ ಎಲೈಸಿ ಏಜೆಂಟ್ ಆಗಿದ್ದಾನೆ ...ಸೈಡ್ ಬಿಸಿನೆಸ್ಸ್ ಅಷ್ಟೇ... ...  ...
ಅದಿನ್ನು ನಾನು ಕಾಲೇಜಿನಲ್ಲೇ ಇದ್ದೆ,ಹೀಗೆ ಊರಿಗೆ ಹೋದಾಗ ಇಬ್ಬರು ಭೇಟಿ ಮಾಡಿ ತೋಟ ಗದ್ದೆ ಎಲ್ಲ ಸುತ್ತಾಡೋ ಪರಿ ಪಾಠ,ಪ್ರತಿ ಸಾರಿ ಅಂತೆ ಅವನಿಗೆ ಫೋನ್ ಮಾಡಿ ಮನೆಗೆ ಬರ್ತಿದ್ದೀನಿ ಅಂದ್ರೆ  "ಏ ಇಲ್ಲ,ನನಗೆ exam ಇದೆ" ಅಂದ...,ಒಹ್ ಪಿಯುಸಿ ಕಟ್ಟಿದ್ದಾನೆ ಅನ್ಕೊಂಡು ಇರ್ಲಿ ಅವನ ಅಪ್ಪ ಅಮ್ಮನ್ನಾದ್ರು ಮಾತಾಡಿಸಿಕೊಂಡು ಬರಣ ಅಂತ  ಅವನ ಮನೆಗೆ ಹೋದ್ರೆ ದಪ್ಪದೊಂದು ಬುಕ್ ಇಟ್ಕೊಂಡು ಓದ್ತಿದ್ದ...ನಂಗೆ ನಾಳಿದ್ದು exam ಇದೆ... ಅದಾದ್  ಮೇಲೆ ಎಲ್ಲಾದರು ಹೋಗಣ..ಇವತ್ತು ಬೇಡ ಅಂದ...ಸರಿ ಏನ್ exam ಅಂತ ಕೇಳಿದ್ರೆ LIC ಏಜನ್ಸಿ ತಗಳಕ್ಕೆ ಬರಿತ್ತಿದ್ದಿನಿ... ಮೈಸೂರಿನಲ್ಲಿ ಇದೆ ಅಂದ.. ಸರಿ ದೇವ್ರು ಒಳ್ಳೇದ್ ಮಾಡ್ಲಿ..ಇದನ್ನಾದ್ರು ಪಾಸ್ ಆಗು ಅಂತ ಹೇಳಿ ಅವನ ಮನೇಲಿ ಮಜ್ಜಿಗೆ ಕುಡಿದ ಹೊರಟೆ... ಹಿಂದೆ ಇಂದ ಲೇ ಮಗನೆ ಕೆಲಸ ಸಿಕ್ಕಿದ ಮೇಲೆ ನನಗೆ ಒಂದು ಪಾಲಿಸಿ ಕೊಡದೆ ಹೋಗು,ಕತ್ತ್ ಹಿಚಿಕಿ ಸಾಯಿಸ್ತಿನಿ ನಿನ್ನ ಅಂದ... ೩ ಮೆಣಸಿನ ಕಾಯಿ ಉದ್ದ ಇಲ್ಲ.. ನನ್ನ ಪಕ್ಕ ನಿಂತರೆ ನನ್ನ ಎದೆ ಮಟ್ಟಕ್ಕೆ ಬರಲ್ಲ, ಹಿಂಗೆ ಅವಾಜ್ ಹಾಕ್ತಿಯ ಅಂತ ಅನ್ಕೊಂಡು ಹೋಗ್ಲ ಲೋ...ನೀನ್ ಪಾಸ್ ಆಗಲ್ಲ ಅಂದು ಮನೆಗೆ ಹೊರಟೆ... ಕೊನೆಗೆ ಅದೇಗೆ ಪಾಸ್ ಆದ್ನೋ ಅವನ ಮಂದೆವರು ಮಲ್ಲಪ್ಪಂಗೆ ಗೊತ್ತು...ನನಗೆ ಕೆಲ್ಸನು ಸಿಕ್ಕಿಲ್ಲ.ಇನ್ನು ಓದ್ತಾ ಇದ್ದೆ,,ಅವನಿಗೆ ಇನ್ನು  ಏಜೆನ್ಸಿ ಸಿಕ್ಕಿಲ್ಲ..ಆಗ್ಲೇ ನನ್ನಿಂದೆ ಬಿದ್ದಿದ್ದ.... ಈಗಲೂ ಊರಿಗೆ ಹೋದ್ರೆ ಭೇಟಿ ಮಾಡೇ ಮಾಡ್ತೀನಿ...ಅವನು ಮತ್ತೆ ಪೀಡ್ಸೆ ಪೀಡಿಸ್ತಾನೆ.. ಭೇಟಿ ಮಾಡದೆ ವಿಧಿ ಇಲ್ಲ... ಜಿಗರಿ ದೋಸ್ತ್ ಬೇರೆ...ನನ್ನ ಕಷ್ಟ ನೋಡಿ ಅವನೇ ಸುಮ್ಮನಾಗಿದ್ದಾನೆ ಇವಾಗ ...
---------------------------------
ಹಿಂಗೆ ಒಂದ್ಸಲಿ ತಿಪಟೂರ್  ಹತ್ತಿರ ನನ್ನ ನೆಂಟರ ಮನೆಗೆ ಹೋಗಿದ್ದೆ...ವಾಪಸ್ ಬರಬೇಕಾದರೆ ಎಷ್ಟೋ ಹೊತ್ತು ಕಾದರು ಬಸ್ ಆಗ್ಲಿ  ಆಟೋ ಆಗ್ಲಿ  ಬರಲಿಲ್ಲ...ಆಗ್ಲೇ ನನ್ನ ಟ್ರೈನ್ ಗೆ ಲೇಟ್ ಆಗ್ತಿತ್ತು..ನನ್ನನ ಬಿಡಕ್ಕೆ ಬಂದಿದ್ದ ನನ್ನ ಕಸಿನ್ ,ಬೈಕ್ನಲ್ಲಿ ಬರುತ್ತಿದ್ದ ಅದೇ ಊರಿನ ಒಬ್ಬರನ್ನು ನಿಲ್ಲಿಸಿ ನಮ್ಮ ಅಣ್ಣನ್ನ ತಿಪಟೂರಿಗೆ ಬಿಡಿ ಅಂಕಲ್ ಅಂದ್ಲು..ಸರಿ ಅವರು ಕೂಡ ಅಲ್ಲಿಗೆ ಹೋಗ್ತಿದ್ರು,ನಮ್ಮ ಮನೆಗೆ ಹೋಗಿ ಒಂದು ಪತ್ರ ಇದೆ ಅದನ್ನ ತಗೊಂಡು ಹೋಗಬೇಕು ಅಂದ್ರು..ನಾನು ಸಮ್ಮತಿಸಿದೆ...ಅವರ ತೋಟದ ಮನೆಗೆ ಹೋಗಿ ಹೊರಟೆವು,ಸುತ್ತ ತಂತಿ ಭೇಲಿ ತೋರಿಸಿ ಇದಷ್ಟು ನಮ್ಮದೇ ತೋಟ ಅಂದ್ರು ...ಏನಿಲ್ಲ ಅಂದ್ರು ಹತ್ತು ಏಕರಿಗಿಂತ ಜಾಸ್ತಿ ಇತ್ತು..ಮನೆ ಪಕ್ಕ ಬೇರೆ ಅಡಕೆ ಮರದ ತುಂಡುಗಳನ್ನು ಸುತ್ತ ಕಟ್ಟಿ  ಕಾಯಿಗಳನ್ನು ಕೊಬ್ಬರಿಗೆ ಹಾಕಿದ್ದರು ...ಒಳ್ಳೆ ಕುಳ ಅಂತ ಅನ್ನಿಸ್ತು... ಅಷ್ಟೊತ್ತಿಗಾಗಲೇ ನನ್ನ ಉರು,qualificaton ,ಕೆಲಸ ಎಲ್ಲಾದರ ಬಗ್ಗೆ ಕೇಳಿದ್ರು..ನನ್ನ ಮಗನು MBA ಮಾಡಿದ್ದಾನೆ... ಅಲ್ಲೇ ಬೆಂಗಳೂರಿನಲ್ಲಿ ಸ್ವಲ್ಪ ದಿನ ಕೆಲಸ ಮಾಡಿದ...ಆಮೇಲೆ ಯಾಕೋ ಭೆಜಾರ್ ಆಗಿ ಇಲ್ಲೇ lecture ಆಗಿದ್ದಾನೆ...ಹೌದಾ ಅಂದೇ.. ದೊಡ್ಡ ಮಗಳು ಎಂ.ಫಿಲ್ ಆಗಿ,ಅವಳು ಕೆಲಸ ಮಾಡ್ತಿದ್ಲು,ಮದ್ವೆ ಮಾಡಿದ್ವಿ... ಇಬ್ಬರೇ ಮಕ್ಕಳ ಅಂದೇ...ಇನ್ನೊಬ್ಳು ಇದ್ದಾಳೆ...ಅವಳು ಈ ವರ್ಷ ಎಂ.ಎಸ್ಸಿ ಸೇರಿದಳು,ಬೆಂಗಳೂರ್ ಯುನಿವರ್ಸಿಟಿನಲ್ಲಿ....ಫ್ಯಾಮಿಲಿ ವಿಷ್ಯ ಎಲ್ಲ ಹೇಳ್ತಾವ್ರೆ ಏನಪ್ಪಾ ಇದು ಮಗಳನ್ನು ಏನಾದ್ರೂ ಕೊಟ್ಟು ಸಂಭಂದ ಗಿಮ್ಬಂದ ಕುದ್ರಿಸಿ ಕೊಳ್ಳಕ್ಕೆ ನೋಡ್ತಿದ್ದಾರ ಅಂತ ಮನಸಲ್ಲೇ ಅನ್ನಿಸ್ತು.. ಇರ್ಲಿ ಅನ್ಕೊಂಡು ಎಂ.ಎಸ್ಸಿ ನಲ್ಲಿ ಯಾವ ಡಿಪಾರ್ಟಮೆಂಟ್ ಅಂದೇ... ಮ್ಯಾಥ್ಸ್ ಅಂದ್ರು.. ಸರಿ..ಸ್ವಲ್ಪ ದೂರ ಬಂದ ಮೇಲೆ,ನೀವು lic  ಪಾಲಿಸಿ ಮಾಡ್ಸಿದ್ದಿರಾ ಅಂದ್ರು.. ಅಲೆಲೆಲೆಲೇ ಇದಾ ವಿಷ್ಯಾ...ಇವಾಗ ಬಂದ್ರು ನೋಡಿ ಟ್ರಾಕ್ ಗೆ ಅನ್ಕೊಂಡು..ಆಫಿಸಿನಲ್ಲೇ ಇದೆ ಅಂದೇ..ಅಯ್ಯೋ ಅದು ಬಿಡಿ,ನೀವು ಪದೇ ಪದೆ ಕಂಪನಿ ಚೇಂಜ್ ಮಾಡ್ತಿರ್ತಿರಾ,ಅದೆಲ್ಲ ಪ್ರಾಬ್ಲಂ,ಒಂದು LIC ಪಾಲಿಸಿ ಮಾಡಿಸ್ಬಿಡಿ... ಸುಮ್ನೆ ಟ್ಯಾಕ್ಸ್ ಎಲ್ಲ ಜಾಸ್ತಿ ಯಾಕ್ ಕಟ್ಟುತ್ತಿರಾ... ನಿಮಗೆ ಇದಿದ್ರೆ ಟ್ಯಾಕ್ಸ್ excemption ಆಗುತ್ತೆ...ಇದನ್ನೆಲ್ಲಾ ನಿಮಗೆ ಹೇಳಿ ಕೊಡಬೇಕಾಗಿಲ್ಲ ಅಲ್ವ? ಅಂದ್ರು.. ಅದು ಹೌದು ಇವಾಗ ಸ್ವಲ್ಪ ಟೈಟ್ ಇದೆ ದುಡ್ಡು ಆಗಾಗಿ,ಇಲ್ಲಿಗೆನ್ ಅವಾಗಾವಾಗ ಬರ್ತಿರ್ತೀನಿ ಮಾಡಿಸ್ತೀನಿ ಬಿಡಿ...ಸರಿ ಏನಿಲ್ಲ ನೀವು ನಿಮ್ಮ ಮಾರ್ಕ್ಸ್ ಕಾರ್ಡ್,ವೋಟರ್ ಐಡಿ ಕೊಟ್ಟರೆ ಸಾಕು ಅದರ ಜೊತೆಗೆ ಫೋಟೋ  ಅಂದ್ರು..ಸರಿ ಬಿಡಿ ಮುಂದಿನ ಸಾಲಿ ಬಂದಾಗ ನಿಮ್ಮನ್ನ ಭೇಟಿ ಮಾಡ್ತೀನಿ ಅನ್ನುವಷ್ಟೊತ್ತಿಗೆ ತಿಪಟೂರಿಗೆ ಬಂದಾಗಿತ್ತು..ನನ್ನ ಮೊಬೈಲ ನಂಬರ ತಗೊಂಡು ಅವರ ವಿಸಿಟಿಂಗ್ ಕಾರ್ಡ್ ಕೊಟ್ಟು ಹೊರಟರು.. ಅಬ್ಬ ಬಿಸೋ ದೊಣ್ಣೆ ಹೇಗೋ ತಪ್ಪಿಸಿ ಕೊಂಡಿದ್ದಾಯಿತು ಅಂತ ನಿಟ್ಟುಸಿರು  ಬಿಟ್ಟೆ....
----------------------------

ಹೀಗೆ ನಮ್ಮ ಆಂಟಿ ಒಬ್ಬರ ಮನೆಗೆ ಹೋದಾಗ ಒಂದು ಬುಕ್ ತಗಂಡು ನನ್ನ ಎಲ್ಲ ಮಾಹಿತಿ ಕೇಳಿದ್ರು,ಹುಟ್ಟಿದ ದಿನ,ಕಂಪನಿ ಹೆಸರು ಎಲ್ಲ... ಆಮೇಲೆ ಇನ್ನೊಂದ್ ಬುಕ್ ತಗಂಡು ಬಂದು ಕೂತು ಎಲ್ಲ ಪಾಲಿಸಿಗಳ ಬಗ್ಗೆ ಹೇಳಕ್ಕೆ ಶುರು ಮಾಡಿದ್ರು...ನನಗೆ ಯಾಕೆ ಹೇಳ್ತಿದ್ದಾರೆ ಅಂತ ಯೋಚನೆ ಮಾಡ್ತಿದ್ರೆ,ನೀನು ಇದು ಕಟ್ಟು..ಇಷ್ಟಿಷ್ಟು ಕಂತು,ಇಷ್ಟಿಷ್ಟು ವರ್ಷ ಅಂತ ಅವರೇ ಡಿಸೈಡ್ ಮಾಡ್ಬಿಟ್ರು... ಹೀಗ್ ಬೇಡ ಸುಮ್ನಿರ್ರಿ ನನ್ನ ಎಲ್ಲ ತಾಪತ್ರೆಗಳನ್ನು ಮುಗಿಸ್ಕೊತಿನಿ ಮೊದಲು ಅಂದ್ರು ಕೇಳಂಗಿಲ್ಲ,ಇನ್ನೆರಡು ತಿಂಗಳಲ್ಲಿ ನಿನ್ನ ಹುಟ್ಟಿದ ದಿನ ಇದೆ,ಅದಾದಮೇಲೆ ನೀನು ಪಾಲಿಸಿ ಮಾಡ್ಸಿದ್ರೆ ಕಂತು ಜಾಸ್ತಿ ಕಟ್ಟಬೇಕಾಗುತ್ತೆ ಅಂತೆಲ್ಲ ಹೇಳಿ ಅವರ ಸೀನಿಯರ್ ಯಾರೋ ಒಬ್ಬರಿಗೆ ಫೋನ್ ಬೇರೆ ಮಾಡಿ ಕೊಟ್ರು...ಅವರು ಕೂಡ ಈ ಪಾಲಿಸಿ ಚೆನ್ನಾಗಿದೆ ಅಂತ ಯಾವೊದೋ ಹೇಳಿದ್ರು,ಇದರಲ್ಲಿ ಲೈಫ್ ರಿಸ್ಕ್ ಕೂಡ ಇದೆ,ಜೊತೆಗೆ ಇದು ದುಡ್ಡು ಮೆಚುರ್  ಆದ ಮೇಲೆ  ಲೈಫ್ ಟರ್ಮ್ ಇರತ್ತೆ ಅಂತ... ಲೈಫ್ ರಿಸ್ಕ್ ಅಂದ್ರೆ ನಾವು ಸತ್ತರೆ ನಮ್ಮ ನಾಮಿನಿಗೆ ದುಡ್ಡು ಹೋಗುತ್ತಂತೆ...ಬೇರೆ ಎಲ್ಲ ಪಾಲಿಸಿಗಳು ಅದರ term ಮುಗಿದ ಮೇಲೆ ಮುಗಿದ ಹಾಗೆ,,ಆದರೆ ಇದು ಟರ್ಮ್ ಮುಗಿದು ನಾವು ಸಾಯೋವರ್ಗೂ ಇರುತ್ತೆ...ಒಂದು ಫಾರಂ ತಗಂಡು ಅದಕ್ಕೆ ನನ್ನ ಸೈನ್ ಹಾಕಿಸ್ಕೊಂದ್ರು,ಹೇಗಾದ್ರು ಮಾಡಿ ತಪ್ಪಿಸ್ಕೋ ಬೇಕು ಅಂತ,ಥೋ ಇವಾಗ ದುಡ್ಡಿಲ್ಲ,ಇನ್ನೊಂದ್ ಸ್ವಲ್ಪ ದಿನ ಬಿಟ್ಟು ಮಾಡಿಸ್ತೀನಿ ಬಿಡ್ರಿ ಅಂದ್ರೆ,ಈ ನಾನು ಈ ಕಂತು ಕಟ್ಟಿರ್ತೀನಿ,ನೀನು ನಿಧಾನಕ್ಕೆ ಕೊಡು ಅಂದ್ಬಿಟ್ಟು,ಸ್ವಲ್ಪ ದಿನ ಆದ ಕೂಡಲೇ ದುಡ್ಡು ಬೇಕಿತ್ತು, ಈ ತಿಂಗಳು ಕೊಡು ಅಂತ ಕೇಳ್ಬೇಕಾ ?ಬೇಡ ಬೇಡ ಅಂದ್ರು ದುಡ್ಡು ಕಟ್ಟಿ ಇವಾಗ ನನ್ನ ಬುಡಕ್ಕೆ ಕೊಡಲಿ ಪೆಟ್ಟು...
---------------------------------------------
ಇನ್ ಕೆಲವರು ಇದ್ದಾರೆ ಅವರು ಹೇಗೆ ಅಂದ್ರೆ ಸಮಯ ಸಾಧಕರು... ಹೆಗೇಗ್ ಟೈಮ್ ಟು ಟೈಮ್ ಆಟ ಆಡ್ತಾರೆ ಅಂದ್ರೆ ಹೇಳಕ್ಕೆ ತೀರದು..ಹೊಸ ವರ್ಷ ಹತ್ತಿರ ಬಂತು ಅಂದ್ರೆ ಸಾಕು ಜೊತೇಲಿ ಒಂದಿಷ್ಟು ಡೈರಿ ಗಳು ಮತ್ತೆ ಕ್ಯಾಲೆಂಡರ್ ಗಳನ್ನ ಇಟ್ಕೊಂಡಿರ್ತಾರೆ.... ಅಪರೂಪಕ್ಕೆ ಸಿಕ್ಕಿದ್ರೆ ಸಾಕು ಅವರಿಗೆ ಒಂದು ಡೈರಿ ಕೊಟ್ಟು "ಎಷ್ಟ್ ದಿನದಿಂದ ಹುಡುಕಿದೆ ನಿಮ್ಮನ್ನ,ಅವತ್ತು ಸಂತೆಲೂ  ಸಿಗಲಿಲ್ಲ'ಹೀಗೆ ಒಂದಿಷ್ಟು ಬುರುಡೆ ಕಚ್ಚಿ ಹೋಗುತ್ತಾರೆ...ಮತ್ತೆ ಇನ್ ಕೆಲವರು ಹೇಗೆ ಅಂದ್ರೆ ಸುತ್ತ ಮುತ್ತ ಊರುಗಳಲ್ಲಿ ಯಾರದಾದರು  ಮದ್ವೆ ಆಗ್ತಿದೆ ಅಂದ್ರೆ ಮೊದಲೇ ಬುಕ್ ಮಾಡ್ಕೋ ಬಿಡ್ತಾರೆ,ಅವರ ಹೆಂಡತಿಯ ಹೆಸರಲ್ಲಿ ಒಂದು ಪಾಲಿಸಿ ತಗಳಕ್ಕೆ..ಆಮೇಲೆ ಸುತ್ತ ಮುತ್ತ ಊರಲ್ಲಿ ಯಾರಿಗಾದರು ಕೆಲಸ ಸಿಗ್ತು ಅಂದ್ರೆ ಅವರ ಹಿಂದೆ ದೊಂಬಾಲು ಬೀಳುತ್ತಾರೆ... ಈ ಅನುಭವ ನಂಗೆ ಮಾತ್ರ ಅನ್ಕೊಂಡಿದ್ದೆ,ಆಮೇಲೆ ಗೊತ್ತಾಯ್ತು ನನ್ನ ಸ್ನೇಹಿತರು  ಎಷ್ಟೋ ಜನಕ್ಕೆ ಇದೆ ತರಹ ಕಾಟ ಇದೆ ಅಂತ...ಅಲ್ಲದೆ ಇವರ ಮೇಲ್ ಟಾರ್ಗೆಟ್ ಮೇಷ್ಟ್ರು  ಮೇಡಂಗಳು...ಯಾಕೆ ಅಂತ ಗೊತ್ತಿಲ್ಲ... ಅಲ್ಲದೆ ಎಲ್ಲಾದರು ಮಕ್ಕಳು ಹುಟ್ಟಿದೆ ಅಂತ ಗೊತ್ತಾದ್ರೆ ಸಾಕು, ಆ ಮಗುವಿನ ಅಪ್ಪ  ಅಮ್ಮಂಗೆ ತಲೆ ತಿಂದು ೧೮ ವರ್ಷ,೨೫ ವರ್ಷಕೀ ದುಡ್ಡು ಬರುತ್ತೆ...ಅದು ಇದು ಎಲ್ಲಾ ತಲೆಗೆ ತುಂಬಿ ಆ ಮಕ್ಕಳ ಹೆಸರಲ್ಲಿ ಒಂದು ಪಾಲಿಸಿ ಮಾಡಿಸ್ಬಿಡ್ತಾರೆ...
-------------------------------------
ಇದೆ ತರಹ ನಾನು ಈ ಜಗತ್ತಿಗೆ ಕಾಲಿಡುತ್ತಿದ್ದ ಹಾಗೆ ನನ್ನ ಹೆಸರಿಗೆ ಒಂದು ಪಾಲಿಸಿ ಮಾಡಿಸಿದರು ಒಬ್ಬ ಮಹಾಶಯರು... ಫ್ಯಾಮಿಲ ಡಾಕ್ಟರ್,ಫ್ಯಾಮಿಲಿ ಲಾಯರ್ ಇದ್ದ ಹಾಗೆ ಇವರು ಒಂದು ತರಹ ಫ್ಯಾಮಿಲಿ ಇನ್ಸುರೆನ್ಸ್ ಏಜೆಂಟ್ ಇದ್ದ ಹಾಗೆ...... ನಾನು ಹುಟ್ಟಿದ ಕೂಡಲೇ ಹೆಂಗೆ ಪಾಲಿಸಿ ಮಾಡಿಸ್ಕೊಂಡ್ರೋ ಹಾಗೆ ನನಗೂ ಮದ್ವೆ ಗಿದ್ವೆ ಆಗಿ ಮಕ್ಕಳಾದರೆ ಅದಕ್ಕೂ ಒಂದು ಪಾಲಿಸಿ ಮಾಡಿಸದೆ ಬಿಡೋ ಅಸ್ಸಾಮಿ ಅಲ್ಲ ಇವರು...ಹಿಂಗೆ ಊರಿಗೆ ಹೋದಾಗ ನಮ್ಮೂರ ಹತ್ತಿರ ಒಂದು ದೇವಸ್ಥಾನದಲ್ಲಿ ನಮ್ಮ ಬಳಗ ದಿಂದ ಒಂದು ಕಾರ್ಯಕ್ರಮ ಆಯೋಜಿಸುವ ಸಲುವಾಗಿ ನಡೆಯುತ್ತಿದ್ದ  ಮೀಟಿಂಗ್ ನಲ್ಲಿದ್ದೆ.... ಎಷ್ಟೋ ದಿನದಿಂದ ತಪ್ಪಿಸಿಕೊಂಡು ಇದ್ದೆ..ಅವತ್ತು ಅದೇಗೆ ನಾನು ಊರಿಗೆ ಬಂದಿರೋ ವಿಷಯ ಗೊತ್ತಾಯ್ತೋ  ಗೊತ್ತಿಲ್ಲ,ಮನಗೆ ಹುಡುಕಿಕೊಂಡು ಬಂದಿದ್ರು,ನಾನ್ ಮೀಟಿಂಗ್ ನಲ್ಲಿದ್ದೀನಿ ಅಂತ ನಮ್ಮ ಅಪ್ಪ ಹೇಳಿದ್ದೆ ತಡ ಅಲ್ಲಿಗೆ ಬಂದ್ರು... ಯಾರ್ ಹತ್ತಿರನೋ ಹೇಳಿ ಕಳಿಸಿ ಹೊರಗೆ ಕರಿಸ್ಕೊಂದು ಸೈನ್ ಮಾಡಿಸ್ಕೊಂಡೆ ಬಿಟ್ರು ಆ ಫಾರ್ಮ್ ಗೆ.... ಇನ್ನು ಸ್ವಲ್ಪ ದಿನ ಬಿಟ್ಟು ಮಾಡಿಸ್ತೀನಿ ಅಂದ್ರೆ ಈ ನಿಮ್ಮ ಅಪ್ಪ ಕತ್ತುತ್ತಾರಂತ ಬಿಡು ಅಂದ್ರು... ಅದೆಲ್ಲ ಆಗದ ಮಾತು ಅನ್ಕೊಂಡು  ಸಂಜೆ ಸಿಗ್ತೀನಿ ಮೀಟಿಂಗ್ ಮುಗಿದ ಮೇಲೆ ಅಂದ್ರು ಕೇಳಲಿಲ್ಲ,ಡಾಕ್ಯುಮೆಂಟ್ ಎಲ್ಲಾ ನಿಧಾನಕ್ಕೆ ಕೋಡು,ಇಲ್ಲ ಕೊರಿಯರ್ ಮಾಡು ಅಂತ ಹೇಳಿ ಹೋದರು...ನಾನು ಮೀಟಿಂಗ್ ಗೆ ಹೋಗೋ ಗಡಿಬಿಡಿ ಯಲ್ಲಿದ್ದೆ,ಆಗಾಗಿ ಅವರು ಹೇಳಿದ್ದ ಕಡೆ ಎಲ್ಲಾ ಸೈನ್ ಮಾಡಿ ಹೇಗೂ ಡಾಕ್ಯುಮೆಂಟ್ ಕೊಡಬೇಕು ಅಲ್ವ,ಅದು ಇಲ್ದೆ ಏನು ಮಾಡಕ್ಕಾಗಲ್ಲ ಅಂತ... ಕೊನೆಗೆ ಎಷ್ಟೋ  ದಿನದ ತನಕ ಕಾಯ್ಸಿ ಕೊಟ್ಟಿದ್ದ್ ಆಯಿತು... ಕೊಡದೆ ಇದ್ದರೆ ಬಿಡಬೇಕಲ್ಲ ಅವರು .

ಹಿಂದಿನ ತಿಂಗಳ ಸಂಬಳ ಎಲ್ಲಾ ಖಾಲಿ ಆಗಿ ಮುಂದಿನ ತಿಂಗಳ ಸಂಬಳ ಎಲ್ಲೆಲ್ಲಿ ಎಷ್ಟು ಕಟ್ಟಬೇಕು,ನನಗೆ ಎಷ್ಟು ಉಳಿಯುತ್ತೆ ಅಂತೆಲ್ಲ ಪೂರ್ತಿ ಪ್ಲಾನ್ ಮಾಡಿ ಕೊಂಡಿರುತ್ತೀವಿ ,ಆಗ ಮನೆಯಿಂದ ಅಮ್ಮನ ಫೋನ್ "ಪಾಪ,ಪ್ರೀಮಿಯಂ ಕಟ್ಟು ,ಬಿಲ್ ಬಂದಿದೆ" ಅಂತ... ಥೋ ತ್ತರಿಕೆ ,ನಮ್ಮ ಪ್ಲಾನ್ ಎಲ್ಲ  ಆಳಾಗಿ ಹೋಯಿತಲ್ಲ ಅಂತ ತಲೆ ಚಚ್ಚಿ ಕೊಳ್ಳಬೇಕು...ಇಂಥ ಟೈಮ್ ನಲ್ಲಿ ಇವರೆಲ್ಲ ನೆನಪಾಗ್ತಾರೆ...ಇನ್ ಸ್ವಲ್ಪ ದಿನ ಬಿಟ್ಟು ಅಪ್ಪ ಫೋನ್ ಮಾಡಿ"ಮರಿ,ಇನ್ಸುರೆನ್ಸ್ ಕಟ್ಟಿದ್ಯ,ಲಾಸ್ಟ್ ಡೇಟ್ ಆಗೋದರೊಳಗೆ ಕಟ್ಟು"...ನೀವೊಬ್ರು ಕಮ್ಮಿ ಆಗಿದ್ರಿ ಅನ್ಕೊಂಡು ಸುಮ್ನಿರ ಬೇಕು ಅಷ್ಟೇ...
ಬಹುಶ ಇಂಥ ಅನುಭವಗಳು ತುಂಬ ಜನಕ್ಕೆ ಆಗಿರುತ್ತೆ...