Showing posts with label ಬದುಕು. Show all posts
Showing posts with label ಬದುಕು. Show all posts

Wednesday, January 25, 2012

ಕಾಯಿ ಚಟ್ನಿ ಅನ್ನ ಮತ್ತು ಭಂಗಿ ಸೊಪ್ಪು

೫ನೆ ಕ್ಲಾಸ್ ತನಕ ಹಾಸನದಲ್ಲಿ ಓದುತ್ತಿದ್ದ ನನಗೆ ಅನಿವಾರ್ಯ ಕಾರಣಗಳಿಂದಾಗಿ ಮುಂದಿನ ಓದಿಗೆ ಊರಿಗೆ ವಾಪಸ್ ಬರಬೇಕಾಗಿ ಬಂತು.ಅಲ್ಲಿವರೆಗೂ ದೊಡ್ಡಪ್ಪನ ಮನೆಯಲ್ಲಿ ಓದಿಕೊಂಡಿದ್ದ ನಾನು ಊರಿಗೆ ಬರುತ್ತಿದ್ದದ್ದು ದಸರಾ ಮತ್ತು ಬೇಸಿಗೆ ರಜಾಕ್ಕೆ ಮಾತ್ರ,ಮತ್ತೆ ಅದೇ ರಜದಲ್ಲಿ ಅಜ್ಜಿ ಮನೆ,ನೆಂಟರು ಮನೆ ಎಲ್ಲ ಸುತ್ತಾಡದು..ಹೀಗೆ ಹಾಸನದಿಂದ ನಮ್ಮೂರಿಗೆ ಬಂದಾಗ ಹಳ್ಳಿಯ ಯಾವುದೇ ಕೆಲಸಗಳು ನನಗೆ ಬರ್ತಿರಲಿಲ್ಲ..ಆಮೇಲೆ ಒಂದೊಂದಾಗಿ ಕಲಿಯುತ್ತಾ ಹೋದೆ,ದನ ಕಟ್ಟಕ್ಕೂ ಬರ್ತಿರಲಿಲ್ಲ,ನಮ್ಮ ಅಪ್ಪ ಅಮ್ಮ ಅದೆಷ್ಟು ಸಾರಿ ಹೇಳಿಕೊಟ್ಟರು ನಂದು ಅದೇ ಹಣೆ ಬರಹ.ನಾನೇನಾದ್ರು ಹೊಲದಲ್ಲಿ ಹಸು ಕಟ್ಟಿ ಬಂದ್ರೆ ಅದು ಕಿತ್ತ್ಕೊಂಡು ಎಲ್ಲಾದರು ಹೊಗಿರದು,ಕೆಲವೊಮ್ಮೆ ಬೇರೆಯವರ ತೋಟಕ್ಕೆ ಕೂಡ..ಅದೇನ್ ನಾಯಿ ಗಂಟು ಕಟ್ತಾನೆ ಅಂತ ನಮ್ಮಮ್ಮ ಹೆಳವರು.ಕೊನೆಗೂ ದನ ಕಟ್ಟದು ಕಲ್ತಿದ್ದಾಯಿತು.ಹಾಗೆ ಮನೆಗೆಲಸ ತೋಟದ ಕೆಲಸ,ನೀರು ಆಯಿಸುವುದು,ಕಾಯಿ ಕೆಡವುವುದು ಎಲ್ಲ ಕಲಿತೆ.ಅದೇ ಅಲ್ಲದೆ ಎಂದೂ ಆಡಿರದ ಗಿಲ್ಲಿ ದಾಂಡು,ಮರ ಕೋತಿ ಆಟ ಮುಂತಾದ ಹಳ್ಳಿ ಆಟಗಳು ಆಡುತ್ತಿದ್ದದ್ದು ,ಹೀಗೆ ಹಳ್ಳಿ ಜೀವನ ಸಂಪ್ರದಾಯಕ್ಕೆ ಹೊಂದಿಕೊಳ್ಳುತ್ತಿದ್ದೆ. ನಮ್ಮ ಊರಿನವರೇ ಆದರೂ  ಎಷ್ಟೋ ಜನ ನಂಗೆ ಗೊತ್ತೇ ಇರಲಿಲ್ಲ,ಸಂಪರ್ಕವೇ ಇರದ ಕಾರಣ.ಮನೆ ಪಕ್ಕದಲ್ಲೇ ನಮ್ಮೂರ ಶಾಲೆ ಇತ್ತಾದರೂ ನಾನು ಹಳೇಬೀಡಿಗೆ ಹೋಗುತ್ತಿದ್ದೆ.ಆದರೆ ಒಬ್ಬೊಬ್ಬರಾಗಿ ಮನೆ ಪಕ್ಕದ ಸ್ಕೂಲಿನ ಹುಡುಗರು ಪರಿಚಯ ಆಗತೊಡಗಿದರು.ಸಿಟಿಗಿಂತ ಹಳ್ಳಿ ವಾತಾವರಣವೇ ನನಗೆ ಇಷ್ಟ ಆಗುತಿತ್ತು.

 ಅಷ್ಟಕಷ್ಟೇ ಪರಿಚಯ ಇದ್ದ ಹುಡುಗರೆಲ್ಲ ಆಗ ತುಂಬ ಪರಿಚಯ ಆದರು.ಅವರ ಗುಂಪಿಗೆ ನಾನೂ ಸೇರಿಕೊಂಡೆ.ಮತ್ತೆ ಅವರೊಂದಿಗೆ ಆಟಗಳು ಶುರುವಾದವು.ನಮ್ಮ ಊರಿನ ಹತ್ತಿರ ಪುಷ್ಪಗಿರಿ(ಹಳೇಬೀಡಿನಿಂದ ೨ ಕಿಮಿ) ಅಂತ ಬೆಟ್ಟ ಇದೆ.ಅಲ್ಲಿ ಮಲ್ಲಿಕಾರ್ಜುನ ಸ್ವಾಮಿ ಮತ್ತು ಪಾರ್ವತಮ್ಮ ದೇವಸ್ಥಾನ,ಅಲ್ಲದೆ  ವೀರಭದ್ರೇಶ್ವರ ದೇವಸ್ಥಾನ ಇದೆ .ತುಂಬ ಹಳೆಯದು.ಅಲ್ಲಿನ ಅರ್ಚಕರುಗಳು ನಮ್ಮ ಉರು ಮತ್ತು ನಮ್ಮ ಪಕ್ಕದ ಊರಿನವರು.ಅಲ್ಲಿನ ಪದ್ದತಿ ಹೇಗೆ ಅಂದರೆ ವಾರಕ್ಕೆ ಒಂದು ಮನೆಯವರು ಪೂಜೆ ಮಾಡಬೇಕು.ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ದತಿ.ಮಂಗಳವಾರದಿಂದ ಮುಂದಿನ ಸೋಮವಾರದವರೆಗೆ ಒಂದು ಮನೆಯವರು ಪೂಜೆ ಮಾಡಬೇಕು,ಸೋಮವಾರ ಸಂಜೆ ಅವರು ಪೂಜೆಯನ್ನು ಇನ್ನೊಬ್ಬರಿಗೆ ವಹಿಸಿಕೊಡಬೇಕು.ಅಧಿಕಾರ ಹಸ್ತಾಂತರಿಸಿದ ಹಾಗೆ,ದೇವಸ್ಥಾನದ ಬೀಗ,ಪೂಜಾ ಸಾಮಗ್ರಿಗಳು ಎಲ್ಲವನ್ನು .ಅಲ್ಲಿ ಪೂಜೆ ಮಾಡುವ ಪ್ರತಿಯೊಬ್ಬರಿಗೂ ಒಂದಿಷ್ಟು ಜಮೀನು ಕೊಟ್ಟಿದ್ದಾರೆ.ಎಲ್ಲರು ಅದನ್ನ "ದೇವರ ಹೊಲ" ಅಂತ ಕರೀತಾರೆ.ನಮ್ಮ ತಾತ ಸುಮಾರು ೭೫ ವರ್ಷದ ಹಿಂದೆ ಈ ಊರಿಗೆ ಬಂದು ಓಲೆ ಹಾಕಿದ್ದರಿಂದ,ಅದಕ್ಕೂ ಮುಂಚೆ ಇಂದಲೂ ಈ ಪದ್ದತಿ ಇದ್ದರಿಂದ ನಮ್ಮ ಮನೆಯವರಿಗೆ ಅಲ್ಲಿ ಪೂಜೆ ಮಾಡುವ ಅವಕಾಶ ಇಲ್ಲ.ನಮ್ಮ ಉರಿನಲ್ಲಿ ಸುಮಾರು ೪೦ ಮನೆ,ಪಕ್ಕದ ಉರಿನಲ್ಲಿ ೨೦ ಮನೆಯವರು ಅಲ್ಲಿ ಪೂಜೆ ಮಾಡುತ್ತಾರೆ.ಹೀಗೆ ಒಬ್ಬರಾದ ನಂತರ ಇನ್ನೊಬ್ಬರು ಹೀಗೆ ಸರಪಳಿ ಸಾಗುತ್ತದೆ.ಎಲ್ಲರದು ಮುಗಿದ ಮೇಲೆ ಮತ್ತೆ ಮೊದಲಿಂದ.

ಸೋಮವಾರ ಸಂಜೆ ಬೆಟ್ಟ ಹತ್ತಿದರು ಎಂದರೆ ಮುಂದಿನ ಸೋಮವಾರ ಬೇರೆಯವರಿಗೆ ವಹಿಸಿ ಕೊಟ್ಟು ಮಂಗಳವಾರ ಬೆಳಗ್ಗೆನೇ ಕೆಳಗೆ ಇಳಿಯುತ್ತಿದ್ದದ್ದು.ಯಾಕಂದ್ರೆ ದೇವಸ್ಥಾನ ಕೂಡ ಅವರೇ ಕಾಯಬೇಕಿತ್ತು,ಅವರು ಅಲ್ಲೇ ಮಲಗೆಬೇಕಿತ್ತು.ಅವರ ಜೊತೆ ಅಕ್ಕ ಪಕ್ಕದ ಮನೆಯವರು,ಊರಿನ ಇನ್ನು ಅನೇಕರು ಹೋಗುವುದು ವಾಡಿಕೆ.ಒಬ್ಬರ ಮನೆ ಪೂಜೆ ಇದ್ದಾಗ ಮತ್ತೊಬ್ಬರು,ಅವರ ಮನೆಯದ್ದು ಇದ್ದಾಗ ಇವರು ಹೋಗುತ್ತಿದ್ದರು.ಆಗ ಬೇಸಿಗೆ ರಜದಲ್ಲಿ ನಾನೂ ಎಲ್ಲಿಗೂ ಹೋಗದಿದ್ದರೆ,ನಮ್ಮ ಸ್ನೇಹಿತರ ಮನೆಯವರ ಪೂಜೆ ಇದ್ದಾಗ ನಾನೂ ಅವರ ಜೊತೆ ಹೋಗುತ್ತಿದ್ದೆ..ಪ್ರತಿ ದಿನ ರಾತ್ರಿ ಗುಂಪು ಗುಂಪಾಗಿ ಹೋಗುತ್ತಿದ್ದೆವು,ಜೊತೆಗೆ  ಹೊದಿಯಲು ಬೆಡ್ ಶೀಟ್ ಎಲ್ಲ ತಗಂಡು ಹೋಗ್ತಿದ್ವಿ.ನಮ್ಮ ಜೊತೆ ದೊಡ್ಡವರೆಲ್ಲ ಬರ್ತಿದ್ರು ,ಆದರೂ ನಮಗೆ ರಾತ್ರಿ ಬೆಟ್ಟ ಹತ್ತಲು ಹೆದರಿಕೆ.ನಮ್ಮ ಹುಡುಗರೆಲ್ಲ  ಹೇಳುತ್ತಿದ್ದ ಕಥೆಗಳು,ನಮ್ಮಜ್ಜಿ ಹೇಳಿದ್ದ ಕಥೆಗಳು ಹಾಗಿದ್ದವು..ಆ ಬೆಟ್ಟದಲ್ಲಿ ಚಿರತೆಗಳಿಗೂ ಕಾಡು ಕಿರುಬಗಳಿಗೂ ಯಾವುದೇ ಕೊರತೆ ಇರಲ್ಲಿಲ.ಎಷ್ಟೋ ಸಾರಿ ಊರಿನ ಒಳಗೆ  ಕೂಡ ಬಂದ ಉದಾಹರಣೆಗಳಿವೆ.ನಮ್ಮ  ಮಾವ ಒಬ್ಬರು ಸಂಜೆ ಸಮಯದಲ್ಲಿ ಹೊಲದಲ್ಲಿ ಇದ್ದಾಗ,ಚಿರತೆ ಕಂಡು,ಬೆಳಗ್ಗೆವರೆಗೂ ಕಬ್ಬಿನ ಗದ್ದೆ ಒಳಗೆ ಇದ್ದು ಬಂದಿದ್ದು ಎಲ್ಲ ಕೇಳಿದ್ದೆವು,ಅಲ್ಲದೆ ಹೀರೆಗೌಡ ಅಂತ ಅವರ ಮಗ ದನ ಕಾಯಲು ಅದೇ ಗುಡ್ಡಕ್ಕೆ  ಹೋಗಿದ್ದಾಗ ಒಂದು ಚಿರತೆ ಮರಿ ಸಿಕ್ಕಿತ್ತು,ಬೆಕ್ಕಿನಷ್ಟು ಇತ್ತು,ಇನ್ನೂ ಮರಿ.ಅದನ್ನವರು ತಗಂಡು ಬಂದು ಮನೇಲಿ ಇಟ್ಕಂದಿದ್ದರು.ನಮಗೆಲ್ಲ ಹೆದರಿಕೆ ಅವಾಗ.ಇದು ದೊಡ್ಡದಾದ ಮೇಲೆ ಮನುಷ್ಯರನ್ನು ತಿನುತ್ತೆ ಅಂತ.ಆಗ ಕೆಲವರು ಅದಕ್ಕೆ ಮಾಂಸದ ರುಚಿ ತೋರಿಸದೆ ಇದ್ದರೆ ಆಯಿತು ಅಂತಿದ್ದರು.ಸುಮಾರು ೧೫ ದಿನ ಆದ ಮೇಲೆ ಅರಣ್ಯ ಇಲಾಖೆ ಅವ್ರಿಗೆ ಗೊತ್ತಾಗಿ  ಬಂದು ಅದನ್ನ ತಗಂಡು ಹೋದರು.ಅಷ್ಟೊತ್ತಿಗೆ ಅದರ ಪಾಡು ಚಿಂತಾನಜನಕ ಆಗಿತ್ತು...ಥೇಟ್ ಬೆಕ್ಕಿನ ಹಾಗೆ... ಅಕ್ಕ ಪಕಕ್ದ ಊರಿನ ಜನ ಎಲ್ಲ ನೋಡ್ಕಂಡು ಹೋಗಕ್ಕೆ ಬರ್ತಿದ್ರು.. ಬಂದವರು ಸುಮ್ನೆ ನೋಡ್ತಿದ್ರ,ಅದು ಬಿಟ್ಟು ಮುಟ್ಟಿ ,ಕೆಲವರು  ಮುದ್ದು ಮಾಡಿ,ಇನ್ನು ಕೆಲವರು ಗಂಡೋ ಹೆಣ್ಣೋ ಅಂತ ಉಲ್ಟಾ ಮಾಡಿ ನೋಡದು,ಹೀಗಾಗಿ ಆ ಚಯಾರ್ತೆ ಬೆಕ್ಕಿನಂತೆ ಆಗಿತ್ತು.. ಇವನ್ನೆಲ್ಲ ಕಣ್ಣಾರೆ ಕಂಡಿದ್ದರಿಂದ ಸ್ವಲ್ಪ ಹೆದರಿಕೆ ಆಗ್ತಿತ್ತು,ಆಗ ನಮ್ಮ ಜೊತೆ ಇದ್ದ ದೊಡ್ಡವರೆಲ್ಲ ಇಷ್ಟು ಜನ ಇದ್ದೀವಿ ,ಒಂದು ಚಿರತೆನ ಹೊಡ್ಯಕ್ಕೆ ಆಗಲ್ವೆನ್ರುಲ ಅಂತ ಬಹಳ ಧೈರ್ಯವಾಗಿ ಹೇಳ್ತಿದ್ದರು.ನಮ್ಮ ಅದೃಷ್ಟಕ್ಕೆ ಒಂದು ದಿನ ಕೂಡ ಯಾವದೇ ಚಿರತೆ ಬರಲಿಲ್ಲ..ಆದರೂ ಬೆಟ್ಟ ಹತ್ತುವಾಗ ನಮ್ಮ ಓರಗೆಯ ಹುಡುಗರೆಲ್ಲ ಈಗ ಚಿರತೆ ಬಂದ್ರೆ ಏನ್ ಮಾಡೋದು,ಯಾವ್ ಕಡೆ ಇಂದ ಬಂದ್ರೆ ಯಾವ್ ಕಡೆ ಓದಿ ಹೋಗ್ಬೇಕು ಅಂತೆಲ್ಲ ಮಾತಾಡ್ತಿದ್ವಿ.ಯಾವಾಗಲೋ ಹಿಂದೆ ನಮ್ಮ ಮನೆ ಕೊಟ್ಟಿಗೆ ಕಿಡಕಿಯಲ್ಲಿ ಇಣುಕಿ ನೋಡ್ತಿತ್ತಂತೆ,ಆಗ ಹಸುಗಳೆಲ್ಲ  ಅರಚಿಕೊಳ್ಳಕ್ಕೆ ಶುರು ಮಾಡಿದ್ವಂತೆ,ಆಗ ಎದ್ದು ನೋಡಿದ್ರೆ ಚಿರತೆ, ಆಮೇಲೆ ಸ್ವಲ್ಪ ಒತ್ತಾದ ಮೇಲೆ ಹೋಯ್ತಂತೆ.ಹೀಗೆ ನಮ್ಮ ಮೆನೆಲಿ ಕೆಲಸಕ್ಕೆ ಇದ್ದ ಆಳುಗಳು ಹೇಳಿದ್ರು.
ಪುಷ್ಪಗಿರಿಯ ಒಂದು ನೋಟ..ಮಲ್ಲಿಕಾರ್ಜುನ ಸ್ವಾಮೀ ದೇವಸ್ಥಾನ

ಅಂಗು ಹಿಂಗು ಬೆಟ್ಟ ಹತ್ತಿ ಹೋಗ್ತಿದ್ವಿ,ಮನೇಲೆ ಉಟ ಮಾಡಿ ಹೋಗ್ತಿದ್ವಿ ಯಾವಾಗಲು,ಆದ್ರೆ ಸೋಮವಾರ ಮಾತ್ರ ಅಲ್ಲೇ ಉಟ.ಬೇರೆ ದಿನ ಹೋದ ಕೂಡಲೇ ದೇವಸ್ಥಾನದ ಒಳಗೆ ಮಲ್ಗದು,ಕೆಲವರು ಅಲ್ಲೇ ಪಕ್ಕದಲ್ಲಿ ಜೆನರೆಟರ್  ರೂಮಿನಲ್ಲಿ ಇಸ್ಪೀಟು ಆಡುತ್ತಿದ್ದರು,ದೇವಸ್ಥಾನದ ಒಳಗೆ ಆಡುವ ಆಗಿರಲಿಲ್ಲ ಹಾಗಾಗಿ .ನಮ್ಮಂಥ ಸಣ್ಣ ಹುಡುಗರಿಗೆ ಅಲ್ಲಿ ಅವಕಾಶ ಇರಲಿಲ್ಲ.ಆದರೂ   ಕಾಡಿ ಬೇಡಿ ಸ್ವಲ್ಪ ಹೊತ್ತು ನೋಡ್ತಿರ್ತಿದ್ವಿ.ಇನ್ನೂ ಕೆಲವರು ಅಲ್ಲಿ ಇಲ್ಲಿ ಸುತ್ತಾಡವ್ರು.ಆಮೇಲೆ ಮಲಗುವುದು.ಗರ್ಭ ಗುಡಿ ಇಂದ ಹೊರಗೆ ಒಂದು ದೊಡ್ಡ ವರಾಂಡ ಥರ ಇತ್ತು.ಅಲ್ಲಿ ಸಂಕ್ರಾಂತಿ ಮತ್ತು ನವರಾತ್ರಿಯಲ್ಲಿ  ದೇವರನ್ನ ಪಟ್ಟಕ್ಕೆ ಕೂರಿಸ್ತಾರೆ.ಅದಕ್ಕಿಂತ ಹೊರಗೆ ಇನ್ನೂ ದೊಡ್ಡ  ವರಾಂಡ   .ಅಲ್ಲಿ ನಂದಿ ವಿಗ್ರಹ ಇತ್ತು.ಅದು ಶಿವನ ದೇವಸ್ಥಾನ ಆದ್ದರಿಂದ ಅಲ್ಲಿ ನಂದಿ ವಿಗ್ರಹ ಇತ್ತು....ಆ ನಂದಿಯ ಮುಂದೆ ಇದ್ದ ಬಾಗಿಲನ್ನು ರಾತ್ರಿ ಮುಚ್ಚುವವರು.ಆ ಬಾಗಿಲಿನ ಚಿಲ್ಕ ಎಷ್ಟು ದಪ್ಪ ಇತ್ತು ಅಂದರೆ ನಮ್ಮ ಕಾಲಿನಷ್ಟು..ಅದಕ್ಕಿಂತ ದಪ್ಪಗೆ ಇದ್ದಿದ್ದು ಮುಖ್ಯ ಬಾಗಿಲಿನ ಚಿಲ್ಕ.ನಾವೆಲ್ಲಾ ಆ ನಂದಿಗಿಂತ ಹಿಂದೆ ಮಲಗುತ್ತಿದ್ದೆವು.ನಂದಿಯ ಮುಂದೆ ಮಲಗುವ ಆಗಿರಲಿಲ್ಲ..ಮತ್ತು ದೇವರ ವಿಗ್ರಹದ ನೇರಕ್ಕೆ ಎಲ್ಲೂ ಮಲಗುವ ಆಗಿರಲಿಲ್ಲ..ನಂದಿಗಿಂತ ಮುಂದೆ ಅಡ್ಡ ಬಿದ್ದು ನಮಸ್ಕಾರ ಕೂಡ ಮಾಡುವ ಆಗಿಲ್ಲ...ಯಾಕೆ ಅಂತ ಕೇಳಿದರೆ ಏನೇನೋ ಕಥೆ ಹೆಳವರು.ನೇರಕ್ಕೆ ಮಲಗಿದರೆ ದೇವ್ರು ಬೇರೆ ಕಡೆಗೆ ನಿಮ್ಮನ್ನ ಒದೆಯುತ್ತೆ ಅಂತೆಲ್ಲ..ಆದ್ರೆ  ಹೆದರಿಕೆಗೆ ನಾವು ಅಲ್ಲಿ ಮಲಗುವ ಸಾಹಸಕ್ಕೆ ಹೋಗ್ತಿರಲಿಲ್ಲ.ಏನಿದ್ರು ಗೋಡೆ ಬದಿಯಲ್ಲಿ ನಮ್ಮ ನಿದ್ರೆ.ಅಷ್ಟು  ದೊಡ್ಡ ಚಿಲ್ಕ ಹಾಕಿ ಮಲಗಿದರೆ ಬೆಳಗ್ಗೆ ಎದ್ದ ಕೂಡಲೇ ನಾವೆಲ್ಲಾ ಊರಿಗೆ ವಾಪಸ್ ಬರ್ತಿದ್ವಿ,ಪೂಜಾರರು ಪೂಜೆಗೆ ತಯಾರಿ ಮಾಡ್ತಿದ್ರು.

ಅಲ್ಲದೆ ಪ್ರತಿ ಹುಣ್ಣಿಮೆ ದಿನ ಭಜನೆ ಎಲ್ಲ ಮಾಡ್ತಿದ್ವಿ.ಅವಾಗ ನೋಡಿರದ ಎಷ್ಟೋ ಸಂಗೀತ ಸಲಕರಣೆಗಳನ್ನು ವಾದ್ಯಗಳನ್ನು ನೋಡಿದ್ದೇ.ಎಷ್ಟೋ ಪದಗಳನ್ನು ಹಾಡುಗಳನ್ನು  ಕಲ್ತಿದ್ದೆ...
ದೇವಸ್ಥಾನದಿಂದ ಇನ್ನೂ ಮೇಲಕ್ಕೆ ಇರುವ ಕೋಡುಗಲ್ಲು

ಆದರೆ ಅವರ ಪೂಜೆಯ ಕೊನೆ ದಿನ ನಾವೆಲ್ಲಾ ಅಲ್ಲಿಗೇ ಊಟಕ್ಕೆ ಹೋಗ್ತಿದ್ವಿ,ಅವತ್ತು ಜಾಸ್ತಿ ಜನ ಬರವ್ರು,ಬೇರೆಯವರಿಗೆ ಪೂಜೆ ವಹಿಸಿಕೊಡುವ ದಿನ..ಅವತ್ತು ಮಂಗಳಾರತಿಗೆ ಬಂದಿದ್ದ ಕಾಯಿಗಳಲ್ಲಿ ಕಾಯಿ ಚಟ್ನಿ ಮಾಡಿ,ಅನ್ನ ಮಾಡಿ ಎಲ್ಲ ಒಟ್ಟಿಗೆ ಮಾಡ್ತಿದ್ವಿ..ಎಲ್ಲ ಅಲ್ಲೇ ಅಡುಗೆ ಮಾಡುತ್ತಿದ್ದದ್ದು.. ಬರಿ ಗಂಡಸರೇ ಸೇರಿ.. ಪ್ರಸಾದ ನಿಲಯ ಅಂಥ ಇದೆ..ಅಲ್ಲಿ ಉತ ಮಾಡ್ತಿದ್ವಿ...ಅಲ್ಲಿ ತಳಿಗೆ ಮಾಡಲು ಜನ ಬಹಳ ಬರ್ತಾರೆ,ಆಗಾಗಿ ಅಲ್ಲಿ ಇಲ್ಲಿ ರುಬ್ಬುವ ಕಲ್ಲು(ಒಳಕಲ್ಲು) ಇತ್ತು.. ನಾವು ಚಟ್ನಿ ರುಬ್ಬುತಿದ್ದದ್ದು ಅಲ್ಲೇ...ಎಲ್ಲರು ಸ್ವಲ್ಪ ಸ್ವಲ್ಪ ಸಮಯ ರುಬ್ಬುವುದು.. ಆ ಕಲ್ಲನ್ನು ಒಬ್ಬರೇ ತಿರುಗಿಸುವುದಕ್ಕೆ ಆಗ್ತಿರಲಿಲ್ಲ.. ಮೂರು ನಾಲ್ಕು ಜನ ಸೇರಿ ಚಟ್ನಿ ಅರಿತಿದ್ವಿ.. ಅಲ್ಲಿ ಮಾಡಿದ ಚಟ್ನಿ ರುಚಿ ಅಂದ್ರೆ ರುಚಿ....ಆ ದಿನ ಕೆಲವರು ಭಂಗಿ ಸೊಪ್ಪು ಸೇದವ್ರು,ಅವಾಗ ಅದು ಏನಂತ ನಮಗೆ ಗೊತ್ತಿರ್ಲಿಲ್ಲ..ಸಿಗರೇಟ್ ಇಂದ ತಂಬಾಕು ತೆಗೆದು ಅದರ ಒಳಕ್ಕೆ ಈ ಭಂಗಿ ಸೊಪ್ಪನ್ನು ಎಡಗೈ ಹಸ್ತದ ಮೇಲೆ ಹಾಕಿ ಬಲ ಹೆಬ್ಬೆಟ್ಟಿನಿಂದ ಉಜ್ಜಿ ಉಜ್ಜಿ ಪುಡಿ ಮಾಡಿ ಅದರ ಬೀಜ ಎಸೆದು ಆ ಪುಡಿಯನ್ನು ಸಿಗರೆಟ್ ಒಳಕ್ಕೆ ತುಂಬಿ ನಂತರ ಅದನ್ನು ಸೇದುತ್ತಿದ್ದರು.. ನಾವೆಲ್ಲಾ ಗೊಂಬೆಗಳ ಹಾಗೆ ನೋಡುತ್ತಾ ಕೂರ್ತಿದ್ವಿ.ಈ ಭಂಗಿ ಸೊಪ್ಪನ್ನು ಹಚ್ಚುವುದು ಬೀಡಿ ಸಿಗರೇಟ್ಅನ್ನು ಹಚ್ಚಿದಷ್ಟು ಸುಲಭ ಇರಲಿಲ್ಲ...ಕೆಲವು ಪಂಟರ್ ಗಳಿದ್ದರು..ಅವರು ಮಾತ್ರ ಬೇಗ ಹಚ್ಚಿ ಬಿಡವ್ರು, ಏನಿಲ್ಲ ಅಂದ್ರು ೧ ನಿಮಿಷವಾದರು ಧಂ ಅನ್ನು ಒಳಕ್ಕೆ ಎಳೆಯ ಬೇಕಿತ್ತು ..ಕೆಲವರು ಉಸಿರು ಕಟ್ಟಿ ಮತ್ತೆ ಇಳಿಸಿ ಮತ್ತೆ ಎಳೆಯುವವರು.. ಅಂತೂ ಇಂತೂ ಬಹಳ ಕಷ್ಟ ಪಡುವವರು...ಕೆಲವರು ಸೇದುವಾಗ ೨ ನಿಮಿಷದವರೆಗೆ ಧಂ ಎಳೆದು ಬಿಡುವವರು..ಹಾಗೆ ಎಳೆಯುತ್ತಿದ್ದವರು ಬಹಳ expert ಗಳು...ಇನ್ನು ಕೆಲವರು ಹೊಸಬ್ಬರು ಇದ್ದರು.ಮಲ್ಲೇಶಣ್ಣ ಅಂತ ಒಬ್ಬರು ಇದ್ದರು,ಅವರು ಅವತ್ತೇ ಮೊದಲೇ ಭಂಗಿ ಸೇದಿದ್ದು... ಎರಡೇ ಧಂ ಎಳೆದಿದ್ದು,ಅದೇನಾಯಿತೋ ಗೊತ್ತಿಲ್ಲ,ಸುಮ್ಮನೆ ನಗ್ತಾ ಕೂತು ಬಿಟ್ರು.ಎಲ್ಲರು ಎದ್ದು "ಲೋ ಮಲ್ಲ ಯಾಕ್ಲ ಏನಾಯ್ತೋ" ಅಂದ್ರು, ಅಸ್ಸಾಮಿ ಎಲ್ಲರ ಮುಖ ನೋಡದು,ನಗದು,ಮಾತು ಗೀತು ಏನು ಇಲ್ಲ.ಹಿಂಗೆ ಸುಮಾರು ೧ ಘಂಟೆಗಿಂತ ಜಾಸ್ತಿ ಇದ್ದರು.ಆಮೇಲೆ ಊಟ ಕೊಟ್ಟರೆ ೩ ಜನ ತಿನ್ನೋ ಅಷ್ಟು ಅನ್ನ ಕಾಯಿ ಚಟ್ನಿ ಒಬ್ಬರೇ ತಿಂದಿದ್ದರು.. ಇದೆಲ್ಲ ಭಂಗಿ ಸೇದಿದ ಕಿಕ್ಕಿನ ಪ್ರಭಾವ ಅಂತೆ..ಅವಾಗ ಕೆಲವರು ಅವರ ಹಳೆ ಅನುಭವಗಳನ್ನ ಹೇಳಿದ್ರು.ಕೆಲವರು ಅಳುತ್ತ ಇದ್ದರಂತೆ,ಕೆಲವರು ಗಂಭೀರವಾಗಿ ಏನು ಮಾತಾಡದೆ ಕೂರುವವರಂತೆ,ಇನ್ ಕೆಲವರು ಬಾಯಿಗೆ ಬಂದಹಾಗೆ ಕಿರುಚವರಂತೆ.ನಮಗೂ ಒಂದು ಧಂ ಎಳೀಬೇಕು,ಹೆಂಗಿರುತ್ತೆ ಅಂತ ನೋಡಬೇಕು ಅನ್ನಿಸದು,ನಮ್ಮ ವಯಸಿನ ಹುಡುಗರಿಗೆಲ್ಲ,ಹಂಗೆನಾದರು ನಾವು ಕೇಳಿದ್ದೇ ಆದರೆ ನಮ್ಮ ಅಪ್ಪಂದಿರು ನಮ್ಮ ಚಮಡ ಸುಲಿದು ಬಿಡವ್ರು ಅನ್ಸುತ್ತೆ ...

ಹೀಗೆ ನಮ್ಮ ಬೆಟ್ಟ ಹತ್ತಿ ಮಲಗಿ ಬರುವ ಕಥೆ ನಡೆಯುತ್ತಿತ್ತು.ನಾನು,ನಮ್ಮ ಗೆಳೆಯರಾದ ದಿವಾಕರ,ಮಂಜ,ದರ್ಶನ್,ದಿಲೀಪ,ವಿಜಯ  ಎಲ್ಲ ಒಟ್ಟಿಗೆ ಹೋಗ್ತಾ ಇದ್ದ್ವಿ..ನಮ್ಮ  ಒಂದು ಗುಂಪು ಇದು .. 
ಹಿಂದಿನಿಂದ ಪುಷ್ಪಗಿರಿ ಹೀಗಿದೆ..
ಈ ಭಂಗಿ ಸೊಪ್ಪು ಅಂದಾಗ ಇನ್ನೊಂದ್ ವಿಷಯ ನೆನಪಾಗುತ್ತೆ.. ನಮ್ಮ ಕಡೆ ಉಗಾದಿ ಮತ್ತೆ ದೀಪಾವಳಿ ಹಬ್ಬದಲ್ಲಿ ಎಡೆ ಇಡದು ,ಹಿರಿಯರಿಗೆ ಇಡದು ಅಂತ ಹೇಳ್ತಾರೆ,ಕೆಲವರು ಬಟ್ಟೆ ಇಡದು ಅನ್ತಾಳು ಹೇಳ್ತಾರೆ..ಅಂದ್ರೆ ಮನೆಯ ಹಿರಿಯರು ತೀರಿ ಹೋಗಿರ್ತಾರಲ್ಲ ಅವರಿಗೆ ಎಡೆ ಇಟ್ಟುವುದು ..ಮನೇಲಿ ಕಳಸ ಹೂಡಿ,ಅದರ ಸುತ್ತ ಹೊಸ ಬಟ್ಟೆ ಇಟ್ಟಿ ಪೂಜೆ ಮಾಡಿ, ಮಾಡಿದ ಅಡುಗೆ ನೈವೇದ್ಯ ಮಾಡಿ ಆಮೇಲೆ ನಮ್ಮ ಉಟ.ಈ ಎಡೆ ಇಡಬೇಕಾದರೆ ಅವರಿಗೆ ಏನೇನ್ ಚಟಗಲಿದ್ವು ಅವನ್ನೆಲ್ಲ ಇಡಬೇಕು.ಕೆಲವರಿಗೆ ಬೀಡಿ ಸಿಗರೇಟ್ ಇಡಬೇಕು,ಇನ್ನು ಮೇಲಾಗಿ ಕುಡಿಯುವರಿಗೆ ಎಣ್ಣೆ ಬಾಟಲಿ ಕೂಡ ಇಡಬೇಕು.ನಮ್ಮ ತಾತನಿಗೆ ಮುಂಚೆ ಬಾಟಲಿ ಇಡವ್ರಂತೆ,ಆಮೇಲೆ ನಮ್ಮಮ್ಮ ಅತ್ತೆ ಎಲ್ಲ ಸೇರಿ ಕಿರಿಕ್ ತಗೆದಿದ್ದಕ್ಕೆ ಅದನ್ನ ಇಡದು ನಿಲ್ಲಿಸಿದರಂತೆ..ಒಂದ್ಸಲ ಯಾವ್ದೋ ಬೀಡಿ ತಂದಿದ್ದೆ,ಆಮೇಲೆ ಪುನಃ ವಾಪಸ್ ಕಳ್ಸಿದ್ರು ಮನೆ ಇಂದ ಯಾಕೆ ಅಂದ್ರೆ ನಮ್ಮ ತಾತ ಸೇದುತ್ತಿದ್ದದ್ದು ಸತೀಶ್ ಬೀಡಿ ಅಂತೆ,ಅದಕ್ಕೆ ಅದನ್ನೇ ಇಡಬೇಕಂತೆ ಹಂಗಾಗಿ.ಜೊತೆಗೆ ಭಂಗಿ ಸೊಪ್ಪು ಕೂಡ ಇಡಬೇಕಿತ್ತು.ಆದರೆ ಈ ಬೀಡಿ ಬಾಟಲಿ ಎಲ್ಲ ಅರಮಾಗಿ ಸಿಗತ್ತೆ,ಈ ಭಂಗಿ ಸೊಪ್ಪು ಎಲ್ಲೂ ಪಬ್ಲಿಕ್ ಆಗಿ ಮಾರೋ ಹಂಗಿಲ್ಲ..ಅದೇ ದೊಡ್ಡ ಗೋಳು ..ನಮ್ಮ ತಾತ ಸೇದವ್ರಂತೆ...ಅದೇನೋ ಹೇಳ್ತಾರಲ್ಲ ಈ ಶಾನುಭೋಗ ತಲೆ ಕೆಟ್ಟು ಹಳೆ ಕಥೆ ಹುಡುಕಿದನಂತೆ,ಹಂಗೆ ನಾನು ನಮ್ಮ ಮನೆ ಪಿಟಾರಿ ತೆಗೆದು ನೋಡ್ತಿದ್ದೆ,ಅವಾಗ ಒಂದು ಸಣ್ಣ ಕೊಳವೆ ಸಿಕ್ಕಿತ್ತು,ಸುಮಾರು ೩ ಇಂಚು ,ಮಣ್ಣಿನದು,ಪೀಪಿ ಥರ ಇತ್ತು ....,ಅದೇನು ಅಂತ ಕೇಳ್ದಾಗ ಅದು ನಮ್ಮ ತಾತ ಭಂಗಿ ಸೇದುವ ಪೀಪಿ ಅಂತೆ..ನಮ್ಮ ಅಜ್ಜನ ಹತ್ತಿರ ಬೆಳ್ಳಿಯದು ತಾಮ್ರದು ಇತ್ತಂತೆ...ಯಾವಾಗಲು ನಮ್ಮ ದೊಡ್ಡಪ್ಪ ತಂದು ಕೊಡವರು ಈ ಹಬ್ಬಕ್ಕೆ..ಅವರು ಕೂಡ ಸೇದುವವರು ಆಗಾಗಿ,ಕೆಲವೊಂದ ಸಲ ಇವರೆಲ್ಲ ಸೇದಿ ಆ ಬೀಜ ಅಲ್ಲೇ ಬಿಸಾಕುವವರು ,ಅದು ಹಂಗೆ ಅಲ್ಲೇ ಗಿಡ ಆಗಿರದು..ಇದೆ ಥರ ನಮ್ಮ ಗದ್ದೆ ಹೊಲದಲ್ಲಿ ಕೂಡ ಆ ಗಿಡ ಬೇಕಾದಷ್ಟು ಇತ್ತು...ಆದರೆ ಅದನ್ನ ಬೆಳೆಯದು illegal ..ಆಗಾಗಿ ಕಂಡ ಕೂಡಲೇ ಕಿತ್ತು ಬಿಸಾಕಿ ಅದಕ್ಕೆ ತೆಂಗಿನ ಸೋಗೆ ಮುಚ್ಚಿ ಬಿಡವ್ರು ನಮ್ಮ ಅಪ್ಪ ಮತ್ತೆ ಚಿಕ್ಕಪ್ಪ...ಆಮೇಲೆ ಅದು ಒಣಗಿದ ಮೇಲೆ ಸುಡದು..

ಪುಷ್ಪಗಿರಿ ಇಂದ ದ್ವಾರಸಮುದ್ರದ(ಹಳೇಬೀಡು) ಒಂದು ವಿಹಂಗಮ ನೋಟ


ಹಿಂಗೆ ಒಂದ್ಸಲ ಒಂದು ಹಬ್ಬಕ್ಕೆ ನಮ್ಮ ದೊಡ್ಡಪ್ಪ ಇರಲಿಲ್ಲ,ಆಗಾಗಿ ಈ ಭಂಗಿ ಸೊಪ್ಪು ಬೇಕಿತ್ತಲ್ಲ,ನಮ್ಮ ಅಪ್ಪ ಇದ್ದವರು ಮರಿ ಆ ಅಂಗಡಿಲಿ ೧೦ ರುಪಾಯಿದು ತಗಂಡು ಬಾ ಅಂದ್ರು,ಹಳೆಬೀಡಿನ ಹತ್ತಿರದ ಉರು.ನಮ್ಮ ಅಮ್ಮ ರೀ ,ಆ ಹುಡುಗನ್ನ ಕಳಿಸಿದರೆ ಅವರು ಕೊಡಬೇಕಲ್ಲ,ನೀವು ಹೋಗಿ ತನ್ನಿ ಅಂದ್ರು.ಏ ಕೊಡ್ತಾನೆ ಬಿಡೆ ಅವ್ನು ಅಂತ್ಹೇಳಿ ನನ್ನನ್ನೇ ಕಳ್ಸಿದ್ರು.ನಾನಿದ್ದವನು ರೀ ದುಡ್ಡು ಕೊಟ್ಟರೆ ಯಾಕ್ ಕೊಡಲ್ಲ ಅಂತ ನಮ್ಮ ತಾಯಿಗೆ ದಬಾಯಿಸಿ ಹೋದೆ..ಆಗ ನನಗಿನ್ನು ಈ ಭಂಗಿ ಸೊಪ್ಪಿನ ಬಗ್ಗೆ ಗೊತ್ತಿರಲಿಲ್ಲ..ಏನು ಅಂತ ಕೇಳೆ ಇರಲಿಲ್ಲ.. ಮಾಮೂಲಿ ದಂಟಿನ ಸೋಪ್ಪೋ.ಮೆಂತ್ಯ ಸೋಪ್ಪೋ ಅನ್ಕಂಡಿದ್ದೆ..ಸೀದಾ ಹೋದವನೇ ಅಂಗಡಿ ಮುಂದೆ ಸೈಕಲ್ ನಿಲ್ಲಿಸಿ "ಅಂಕಲ್ ೧೦ ರುಪಾಯಿ ಭಂಗಿ ಸೊಪ್ಪು ಕೊಡಿ " ಅಂದೇ..ಬಹಳ ಗಂಭೀರವಾಗಿ ಕೇಳಿದ್ದೆ...ಅದೊಂದು ಸಣ್ಣ ಪೆಟ್ಟಿಗೆ ಅಂಗಡಿ.. ಆ ಅಂಗಡಿಯಾತನಿಗೆ ಕಾಲಿರಲಿಲ್ಲ..ನನಗೆ ಅದೇ ಗುರುತು ನಮ್ಮಪ್ಪ ಹೇಳಿ ಕಳ್ಸಿದ್ದು..ಆ ಅಂಗಡಿ ಮುಂದೆ ತ್ರಿ ಚಕ್ರ ಸೈಕಲ್ ಇರತ್ತೆ ಅಂತ...ನಾನು ಹಾಗೆ ಕೇಳಿದ್ದೇ ತಡ ದುರುಗುಟ್ಟಿಕೊಂಡು ನೋಡಕ್ಕೆ ಶುರು ಮಾಡಿದ..ನನಗೆ ಫುಲ್ ಹೆದರಿಕೆ...."ಯಾರ್ ಕಳ್ಸಿದ್ದು ನಿನ್ನನ್ನ,ಯಾವೂರು ನಿಂದು,ನಮ್ಮ ಹತ್ತಿರ ಸಿಗಲ್ಲ ಅದು" ಅಂತ ಜೋರಾಗಿ ಹೇಳಿದ..ಪಕ್ಕದಲ್ಲೇ ಇನ್ನೊಬ್ಬರು ಏನೋ ತಗಳ್ತಿದ್ದರು,ಅವರಿಗೆ ಚಿಲ್ಲರೆ ಕೊಟ್ಟು ಕಳಿಸಿದ ಮೇಲೂ ನಾನು ಅಲ್ಲೇ ನಿಂತಿದ್ದೆ"ಅಂಕಲ್...." ಅಂತ ಗೋಗರೆಯುತ್ತಾ ..ನಮ್ಮಪ್ಪ ಹೇಳಿದ್ರು ಇಲ್ಲಿ ಬಿಟ್ರೆ ಬೇರೆ ಎಲ್ಲೂ ಸಿಗಲ್ಲ ಕೊಡಿ ಪ್ಲೀಸ್ ಅಂತ..ಅವರು ಅದಾದ್ ಮೇಲೆ ಸ್ವಲ್ಪ ಒತ್ತು ಬಿಟ್ಟಿ ಬಾ ಇಲ್ಲಿ ಯಾರು ಇಲ್ದೆ ಇದ್ದಾಗ ಅಂತ ನಿಧಾನಕ್ಕೆ ಗದರಿಸಿ ಕಳ್ಸಿದ್ರು.. ನಾನು ಅಲ್ಲೇ ಒಂದೆರಡು ಸುತ್ತು ಸೈಕಲ್ಲಿನಲ್ಲಿ ತಿರುಗಿ ಬಂದೆ..ಅವಾಗ ಮತ್ತೆ ಯಾವೂರು ಅಂದ್ರು... ಸಿದ್ದಾಪುರ ಅಂದೇ..ಯಾರ್ ಮನೆ ಅಂತ ಕೇಳಿದ್ರು.. ಸಣ್ಣಗೌಡ್ರು ಮನೆ ಅಂದೇ...ಓಹೋ ಸ್ಕೂಲ್ ಪಕ್ಕ ಮನೆ ಇದ್ಯಲ್ಲ ಆ ಸಣ್ಣಗೌಡಜ್ಜನ ಮೊಮ್ಮಗನ ನೀನು ಅಂದಾಗ ಹೌದು ಅಂತ ಕತ್ತು ಅಲ್ಲಾಡಿಸಿದೆ ...ಹಂಗೆಲ್ಲ ಎಲ್ಲರ ಮುಂದೆ ಕೇಳಬಾರದು ಮಗ,ಇದನ್ನ ಮಾರನ್ಗಿಲ್ಲ..ಅವಾಗ್ಲೇ ಯಾರೋ ಇದ್ದರಲ್ಲ ಅದಕ್ಕೆ ವಾಪಸ್ ಕಳಿಸ್ದೆ ಅಷ್ಟೇ ಅಂತ ಒಂದು ಸಣ್ಣ ಪೇಪರ್ ಸುತ್ತಿ ಕೊಟ್ಟರು..ಯಾರಿಗೂ ಹೇಳಬೇಡ..ಸೀದಾ ಮನೆಗೆ ಹೋಗು ಬೇಗ ಅಂತೇಳಿ ಕಳ್ಸಿದ್ರು..ಪರವಾಗಿಲ್ಲ ನಮ್ಮ ಅಜ್ಜನ ಹೆಸರು ಸತ್ತು ಇಷ್ಟು ವೆರ್ಷ ಆದಮೇಲು ಬೇಕಾಯ್ತು ಅಂತೇಳಿ ಮನೆಗೆ ಹೋಗಿ ಎಲ್ಲ ಹೇಳಿದೆ.. ತೂ ನಿನ್ನ ಹಂಗೆ ಎಲ್ಲರ ಮುಂದೆ ಕೆಳ್ತಾರ ಅಂತ ನಮ್ಮ ಅಪ್ಪ ಕೇಳಿದಾಗ,ನಂಗೇನ್ ಗೊತ್ತು..ಮೊದಲೇ ಹೇಳಬೇಕಿತ್ತು ಅಂತ ಅವರಿಗೆ ದಬಾಯ್ಸಿದ್ದೆ,ಅವರದೇ ತಪ್ಪು ಅಂತ..
ಆಮೇಲೆ ಆ ಪೇಪರ್ ತೆಗೆದು ನೋಡಿದ್ರೆ ಬಹಳ ಕಡಿಮೆ ಇತ್ತು.ಇದೇನ್ ಇಷ್ಟೇ ಕೊಟ್ಟವರಲ್ಲ ಅಂದ್ರೆ,ಇನ್ನು ಎಷ್ಟ್ ಕೊಡ್ತಾರೆ ಹತ್ತು ರುಪಾಯಿಗೆ,ಇದನ್ನ ಸೇದಕ್ಕೆ ಸಾಕಾಗಿ ಹೋಗುತ್ತೆ ಅಂದ್ರು.

(ಅವಧಿಯಲ್ಲಿ ಪ್ರಕಟಗೊಂಡಿದೆ,ಅದರ ಲಿಂಕ್ )

Wednesday, September 14, 2011

ಮರುಕಳಿಸಿದ ನೆನಪುಗಳು !!!

ಸುಮಾರು ೬ ವರ್ಷದ ನಂತರ ಎಲ್ಲರೂ ಒಟ್ಟಿಗೆ ಸೇರಿದ ದಿನ ಅದು..ಕಳೆದ ವಾರ ನಮ್ಮ ಪಿ.ಯು.ಸಿ ಹಾಸ್ಟೆಲ್ಲಿನ ಹುಡುಗರೆಲ್ಲ ಒಟ್ಟಿಗೆ ಭೇಟಿ ಆಗಿದ್ದೆವು...ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕು ರಾಮಕುಂಜ ಎಂಬ ಗ್ರಾಮದ ಬೋರ್ಡಿಂಗ್ ಹಾಸ್ಟೆಲ್ಲಿನಲ್ಲಿ ೨ ವರ್ಷ ಒಟ್ಟಿಗೆ ಕಳೆದ ನಾವು ಮತ್ತೆ ಆ ನೆನಪುಗಳನ್ನು ಹೊತ್ತು ಭೇಟಿ ಆದೆವು...
ರಾಮಕುಂಜ ಇದು ಉಪ್ಪಿನಂಗಡಿ ಇಂದ ಸುಭ್ರಮಣ್ಯ ಹೋಗುವ ದಾರಿಯಲ್ಲಿ ಇದೆ..ಇದು ಈಗಿನ ಪೇಜಾವರ ಯತಿಗಳಾದ ಶ್ರೀ ವಿಶ್ವೇಶ ತೀರ್ಥರ ಹುಟ್ಟೂರು,ಮತ್ತು ವನವಾಸದ ಕಾಲದಲ್ಲಿ ರಾಮನು ಇಲ್ಲಿ ಈಶ್ವರನನ್ನು ಪೂಜಿಸಿದ್ದರಿಂದ ಇಂದು ರಾಮಕುಂಜ ಎಂದು ಮತ್ತು ಅಲ್ಲಿನ ಈಶ್ವರನಿಗೆ ರಾಮಕುಂಜೇಶ್ವರ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ...(ಇದು ಮೊದಲ ವರ್ಷದ ಮೊದಲ ಕನ್ನಡ ಕ್ಲಾಸಿನಲ್ಲಿ ನಮ್ಮ ಉಪನ್ಯಾಸಕರಾದ ಗಣರಾಜ್ ಕುಂಬ್ಳೆ ಅವರು ಹೇಳಿದ ವಿಷಯ,ಈ ಊರಿನ ಇತಿಹಾಸದ ಬಗ್ಗೆ ಒಂದು ಪುಸ್ತಕ ಕೂಡ ಬರೆದಿದ್ದಾರೆ).....
ಇಲ್ಲಿ ದೇವಸ್ಥಾನ,ಒಂದು ಪ್ರೈಮರಿ ಶಾಲೆ,ಒಂದು ಸಣ್ಣ ಗುಡ್ಡದ ಮೇಲೆ ನಮ್ಮ ಕಾಲೇಜು,ಅಲ್ಲಿಂದ ಸ್ವಲ್ಪ ದೂರದಲ್ಲಿ ಇನ್ನೊಂದು ಸಣ್ಣ ಗುಡ್ಡದ ಮೇಲೆ ನಮ್ಮ ಹಾಸ್ಟೆಲ್....ದೇವಾಲಯದ ಬಳಿ ರಥದ ಮನೆ ಹತ್ತಿರ ಒಬ್ಬ ಭಟ್ಟರ ಮನೆ,ಜೊತೆಗೆ ಅವರು ನಡೆಸುತ್ತಿದ್ದ ಒಂದು ಅಂಗಡಿ(ಈ ಅಂಗಡಿ ನಮಗೆ ತುಂಬ Important )...ಅಷ್ಟು ಬಿಟ್ಟರೆ ಅಲ್ಲಿ ಏನೇನು ಇಲ್ಲ... ಮನೆಗಳು ಇವೆಯಾದರೂ ಅಲ್ಲಿಂದ ಸುಮಾರು ದೂರ ಹೋಗಬೇಕು... ಸುತ್ತ ಮುತ್ತ ಬೆಟ್ಟ ಗುಡ್ಡಗಳು,ಉರಿ ಬಿಸಿಲು, ಹೊತ್ತಿಲ್ಲದ ಹೊತ್ತಲ್ಲಿ ಬರುವ ಮಳೆ,ಇಂಥ ಊರಲ್ಲಿ ೨ ವರ್ಷ ಕಳೆದ ರೋಮಾಂಚಕಾರಿ ಘಟನೆಗಳನ್ನು ಮೆಲುಕು ಹಾಕಲು, ಅವುಗಳ ಬಗ್ಗೆ ಚರ್ಚೆಗೆ ನೆರವಾಗಿದ್ದು ಮೊನ್ನೆಯ ನಮ್ಮೆಲ್ಲರ ಭೇಟಿ... 

ಹತ್ತನೇ ತರಗತಿ ಮುಗಿಸು ಕಾಲೇಜುಗಳ ಅನ್ವೇಷಣೆಯಲ್ಲಿದ್ದಾಗ ತಂದೆಯ ಸ್ನೇಹಿತರೊಬ್ಬರು ಕೊಟ್ಟ ಸಲಹೆ ಮೇರೆಗೆ ಅಲ್ಲಿಗೆ ಹೋದಾಗ ನಮಗೆ ಕಂಡಿದ್ದು ಅದೇ ಕಾಲೇಜು ಬಿಲ್ಡಿಂಗ್,ಹಾಸ್ಟೆಲ್,ದೇವಸ್ಥಾನ,ಒಂದು ಶಾಲೆ ಮತ್ತು ಅಂಗಡಿ ಇಷ್ಟೇ...ಬೆಳಗ್ಗೆ ೫.೩೦ ಕ್ಕೆ ಎದ್ದು,೫.೪೫ ಗೆ ಪ್ರಾರ್ಥನೆ ,ನಂತರ ಚಹಾ ಕುಡಿದು ೬.೦೦ ಘಂಟೆ ಇಂದ ೮.೦೦ ರವರೆಗೆ ಓದು..ನಂತರ ಊಟ(ಗಂಜಿ ಊಟ),ನಂತರ ರೆಡಿ ಆಗಿ ೯.೩೦ ಕ್ಕೆ ಕಾಲೇಜಿಗೆ ಹೊರಡುವುದು...೯.೪೫ ಇಂದ ೧೨.೫೦ ಕಾಲೇಜು,೧.೦೦ ಊಟ,ಮತ್ತೆ ೧.೩೦ ಕ್ಕೆ ಕಾಲೇಜಿಗೆ ಹೊರಡುವುದು...೧.೪೫ ಇಂದ ೩.೫೦ ರವರೆಗೆ ಕಾಲೇಜು,ಮತ್ತೆ ಹಿಂದಿರುಗಿ ೪.೦೦ ಕ್ಕೆ ಕಾಫಿ ತಿಂಡಿ,ನಂತರ ೫.೪೫ ವರೆಗೆ ಆಟೋಟ,ಮತ್ತೆ ೬.೩೦ಕ್ಕೆ ಪ್ರಾರ್ಥನೆ,೬.೪೫ ಇಂದ ೮.೩೦ ರವರೆಗೆ ಸ್ಟಡಿ ಪೀರಿಯಡ್...ಮತ್ತೆ ಊಟದ ನಂತರ ೮.೫೦ ಇಂದ ೯.೫೦ ರವರೆಗೆ ಸ್ಟಡಿ ಪೀರಿಯಡ್,ಹತ್ತು ಘಂಟೆಗೆ ಎಲ್ಲಾ ಲೈಟ್ಸ್ ಆಫ್. ವಾರಕ್ಕೆ ಎರಡು ದಿನ ಸಮವಸ್ತ್ರ,ಮತ್ತೆ ಹಾಸ್ಟೆಲಿನಲ್ಲಿ ಇಂಥ ಸ್ಟ್ರಿಕ್ಟ್ ರೂಲ್ಸ್ ಗಳು...ಅಲಿ ಬಿಟ್ಟು ಬೇರೆ ಎಲ್ಲೂ ಹೋಗುವ ಅವಕಾಶವೇ ಇರಲಿಲ್ಲ....ನಮ್ಮ ಬಳಿ ಯಾವುದೇ ಕಾರಣಕ್ಕೂ ದುಡ್ಡು ಇಟ್ಟಿಕೊಳ್ಳುವ ಹಾಗಿರಲಿಲ್ಲ..ಬೇರೆಯವರ ರೂಮಿಗೆ ಹೋಗುವ ಹಾಗಿರಲಿಲ್ಲ...ಎಲ್ಲದಕ್ಕೂ permission ತಗೋಬೇಕು.ಆಟಕ್ಕೆ ಹೋಗಲಿಲ್ಲ ಅಂದರೂ,ರಾತ್ರಿ ಹತ್ತರ ನಂತರ ಓದಬೇಕು ಅಂದರೂ,ಬೇಗೆ ಮಲಗ ಬೇಕು ಅಂದ್ರೂ..ಅಲ್ಲದೆ ಪ್ರತಿ ತಿಂಗಳ ನಮ್ಮ ಬಿಲ್ ಜೊತೆ ಕಳುಹಿಸುತ್ತಿದ್ದ ನಮ್ಮ ರಿಪೋರ್ಟ್ ಗಳು ,ಅಲ್ಲದೆ ತಿಂಗಳಿಗೆ ಒಂದೇ ದಿನ(ಅದೂ ನಮಗೆ ಮೀಸಲಿಟ್ಟ ದಿನವೇ) ಮನೆಯಿಂದ ಫೋನ್ ಮಾಡಬಹುದಿತ್ತು,...ಬೇರೆ ದಿನ ಮಾಡಿದರೆ useless ...೩ ತಿಂಗಳಿಗೆ ಒಮ್ಮೆ ಮಾತ್ರ ಮನೆಗೆ ಕಳುಹಿಸುತ್ತಿದ್ದರು...ಅದೂ ರಜ ಸಿಕ್ಕಿದ್ರೆ,ಇಲ್ಲಾಂದ್ರೆ ಅದೂ ಇಲ್ಲ...ಹಾಸ್ಟೆಲ್ ನಲ್ಲೆ ಇರುತ್ತಿದ್ದ ನಮ್ಮ ಉಪನ್ಯಾಸಕರು....ನಮ್ಮ ಜೊತೆಗೆ ಊಟ,ನಮ್ಮ ಜೊತೆಯಲ್ಲಿ ಆಟ ಕೂಡ ಆಡುತ್ತಿದ್ದರು..ಸಿಟಿಗೆ ಬರಬೇಕು ಅಂದರೂ ಅಲ್ಲಿಂದ ಸುಮಾರು ೧೨ ಕಿಮಿ..ಅದೂ ಹುಷಾರಿಲ್ಲ ಅಂದರೆ ಅವರೇ ಕರ್ಕೊಂಡು ಬರುವವರು...ಅಲ್ಲೇ ಎಲ್ಲಾ ಇರುತ್ತಿದ್ದ stationary ಸಾಮಗ್ರಿಗಳು...ಬಹುಷಃ ಇಂಥ ಪರಿಸರ ನೋಡೇ ಇರಬೇಕು,ನಮ್ಮ ತಂದೆ 'ಈ ಬಡ್ಡಿ ಮಗಂಗೆ ಇದೆ ಸರಿಯಾದ ಜಾಗ,ಇಲ್ಲಾದರೆ ಬಾಲ ಮುದುರಿಕೊಂಡು ಇರ್ತಾನೆ'ಅಂತ ತಂದು ಸೇರಿಸಿಯೇ ಬಿಟ್ಟರು...

ಅಲ್ಲಿಂದ ಶುರು ಆಯಿತು ನಮ್ಮ ಓದು,ನಮ್ಮ ಇತರ ಚಟುವಟಿಕೆಗಳು,ರೂಲ್ಸ್ ವಿರುದ್ದ ನಡೆಯುವುದು...ಎಲ್ಲಾ...ಅಲ್ಲಿ ಬಿಟ್ಟು ೬ ವರ್ಷ ಆದರೂ ಆ ನೆನಪುಗಳು,ಆ ಊರು,ಆ ಘಟನೆಗಳು....ಯಾವುದನ್ನು ಮರೆಯಲು ಸಾಧ್ಯವಿಲ್ಲ...ಬೆಳ್ಳಗೆ ಬೆಳ್ಳಗೆ ಗಂಜಿ ಊಟ(ದಕ್ಷಿಣ ಕನ್ನಡ ಸ್ಪೆಷಲ್,ಕುಸುಲಕ್ಕಿ ಇಂದ ಮಾಡುತ್ತಾರೆ,ಅನ್ನ ಬೇಯಿಸಿದ ನಂತರ ಗಂಜಿಯನ್ನು ಬಸಿಯದೆ ಹಾಗೆ ಬಡಿಸುತ್ತಾರೆ),....ಜತೆಗೆ ಮಿಡಿ ಮಾವಿನ ಉಪ್ಪಿನಕಾಯಿ,ಚಟ್ನಿ.... ಖಾಲಿ ಡಬ್ಬಕ್ಕೆ ಕಲ್ಲು ಹಾಕಿ ಅಲ್ಲಾಡಿಸಿದ ಹಾಗೆ ಆಗುತ್ತಿದ್ದ ,ಏನು ಅರ್ಥವಾಗದ ತುಳು ಭಾಷೆ.....,ಆ ರಣ ಬಿಸಿಲು,....ಯಾವಾಗ ಬೇಕೋ ಅವಾಗ ಸುರಿಯುತ್ತಿದ್ದ ಮಳೆ,....ರವಿವಾರ ಮಾತ್ರ ಗಂಜಿ ಊಟದ ಬದಲಾಗಿ ಇರುತ್ತಿದ್ದ ಇಡ್ಲಿಗೆ ಕಾಯುತ್ತಿದ್ದ ಪರಿ,......ಕದ್ದು ಭೇಲಿ ಹಾರಿ(ಕೆಲವರು ನುಸುಳುತ್ತಿದ್ದರು,ಕೆಲವರು ಹಾರುತ್ತಿದ್ದರು) ಹೋಗುತ್ತಿದ್ದ ಆ ದೇವಸ್ಥಾನದ ಹತ್ತಿರ ಇದ್ದ ಆ ಭಟ್ಟರ ಅಂಗಡಿ.....,ಕೆಲವೊಮ್ಮೆ ಸಿಕ್ಕಿ ಹಾಕಿಕೊಂಡು ಬರೆದ ಅದೆಷ್ಟೋ Apology ಲೆಟರ್ ಗಳು,....ಕೆಲವೊಮ್ಮೆ ಮಧ್ಯ ರಾತ್ರಿ(ಶಾರ್ಪ್ ೨.೦೦ ಘಂಟೆ ) ಶುರು ಆಗುತ್ತಿದ್ದ ನಮ್ಮ ಕಾರ್ಯಾಚರಣೆ,ಕತ್ತಲಿನಲ್ಲಿ ಬೇಲಿ ಹಾರಿ ಹೋಗುತ್ತಿದ್ದ ಆ ನಮ್ಮ ಧೈರ್ಯ,....ಕತ್ತಲಿನಲ್ಲಿ ಹರಿದ ಅದೆಷ್ಟೋ ಲುಂಗಿಗಳು.....,ಕಳೆದುಕೊಂಡ ಟಾರ್ಚ್ ಗಳು,....ಹಾಸ್ಟೆಲ್ ವಿಧ್ಯಾರ್ಥಿಗಳಿಗಾಗಿ ಮಧ್ಯ ರಾತ್ರಿ ೧೨.೦೦ ಇಂದ ೨.೦೦ ರವರೆಗೆ ಕಾಯುತ್ತಿದ್ದ ಅಂಗಡಿಯ ಭಟ್ಟರು.....,ಅಂಗಡಿ ಇಂದ ತರುತ್ತಿದ್ದ ಕೋವಾ,ಚಕ್ಲಿ,ಕಡ್ಲೆ ಬೀಜ,ಸೋ೦ಟೆ ಗಳು,....ಪ್ರತಿ ಗುರುವಾರ ಸಂಜೆ ಭಜನೆ,ಭಜನೆ ನಂತರ ಬೆಲ್ಲದ ಅವಲಕ್ಕಿ...ರವಿವಾರ ಸಿಹಿ ಊಟ,....ನಮಗೆ ನಿಗದಿ ಆದ ರವಿವಾರ ಮನೆಯಿಂದ ಫೋನ್ ಬರುವುದೇನೋ ಎಂದು ಕಾಯುವ ರೀತಿ.... ಮನೆ ಇನ್ದೆನಾದರು ಅಪ್ಪ ಅಥವಾ ಅಮ್ಮ ಬರಬಹುದೇನೂ ಎಂದು ಪರಿತಪಿಸುವುದು.....(ನಾನು ಯಾವ ಭಾನುವಾರವೂ ಅಪ್ಪ ಅಮ್ಮನಿಗಾಗಿ ಕಾದಿಲ್ಲ ..ನನಗೆ ಗೊತ್ತು ನಮ್ಮ ಮನೆ ಇಂದ ಬರಲ್ಲ ಅಂತ.. ೨ ವರ್ಷದಲ್ಲಿ ನಮ್ಮ ಹಾಸ್ಟೆಲ್ ಡೇ ಗೆ ಇಬ್ಬರೂ ಬಂದಿದ್ದರು...ಅದೂ ಬಿಟ್ಟರೆ admission ಮತ್ತು ವರ್ಷದ ಮೊದಲ ದಿನ ಬಿಟ್ಟು ಹೋಗಲು,ಅದೂ ಲಗೇಜು ಇರುತ್ತೆ ಅಂತ,ನಮ್ಮ ಅಪ್ಪ ಬಂದಿದ್ದರು ಅಷ್ಟೇ)....ಮಳೆಯಲ್ಲೂ ಮಿಂದು ಆಡುತಿದ್ದ ಆ ಮಜಾ,..ಕಾಲೇಜು ಡೇ ಗಿಂತ ಅದ್ದೂರಿಯಾಗಿ ಮಾಡುತ್ತಿದ್ದ ಹಾಸ್ಟೆಲ್ ಡೇ,..ಹಾಸ್ಟೆಲ್ ಡೇ ದಿನದ ಭರ್ಜರಿ ಊಟ....ಹಾಸ್ಟೆಲ್ ಡೇ ಗೆ ಮಾಡುತ್ತಿದ್ದ ತಿಂಗಳು ಗಟ್ಟಲೆ preparation ಗಳು...ಹಾಸ್ಟೆಲ್ ಡೇ,ಕಾಲೇಜು ಡೇ,ಎದುರಿಗಿನ ಸ್ಕೂಲ್ ಡೇ,ಮೂರು ಕಾರ್ಯಕ್ರಮಗಳಲ್ಲಿ ಒಂದೇ ಭಾಷಣ ಮಾಡುತ್ತಿದ್ದ ಒಬ್ಬ ಅಸ್ಸಾಮಿ..."ನಾನು ಅಮೇರಿಕಾಕ್ಕೆ ಹೋಗಿದ್ದಾಗ......" ಈ ಕಥೆಯನ್ನು ಹೇಳಲು ಮರೆಯುತ್ತಿರಲಿಲ್ಲ....ಒಟ್ಟು ೬ ಬಾರಿ ಇದೆ ಕಥೆಯನ್ನು ಕೇಳಿದ್ದೇವೆ....ಕಾರ್ಯಕ್ರಮಕ್ಕೆ ನಮ್ಮ physica lecturer ನ music....ಪೇಜಾವರ ಮತ್ತು ಸುಭ್ರಮಣ್ಯ ಶ್ರೀಗಳ ಆಶೀರ್ವಚನ... ....ಎಂದೂ ಮಾತಾಡಿಸದ ನಮ್ಮ ಕ್ಲಾಸ್ ಮೇಟ್ ಹುಡುಗಿಯರು.... ಕಾಲೇಜು ಡೇ ಗೆ ನಡೆಯುತ್ತಿದ್ದ ಆಟೋಟಗಳು.... ಕಲಾ ಮತ್ತು ನಮ್ಮ ವಿಜ್ಞಾನ ವಿಭಾಗದ ನಡುವೆ ನಡೆಯುತ್ತಿದ್ದ ಜಗಳಗಳು....ನಂತರ ಗಲಾಟೆ ಮಾಡಿಕೊಂಡ ತಪ್ಪಿಗೆ ನಮ್ಮ ಇಡಿ ವಿಭಾಗವನ್ನು ಆ ವರ್ಷ ಎಲ್ಲಾ ಸ್ಪರ್ಧೆ ಗಳಿಂದ boycott ಮಾಡಿ,ನಂತರ ಪ್ರಾಂಶುಪಾಲರ ಹತ್ತಿರ ಒಪ್ಪಿಸಿ ಮತ್ತೆ ಸ್ಪರ್ಧೆಗೆ ಇಳಿದಿದ್ದು.....ಪಕ್ಕದ ತೋಟಗಳಿಗೆ ಗೇರು ಹಣ್ಣು ತಿನ್ನಲು ಹೋಗಿ,ಮಾಲಿಕನ ಬಳಿ ಸಿಕ್ಕಿ ಹಾಕಿಕೊಂಡು ಅವರು ಬೀಸಿದ ಕಲ್ಲಿನಿಂದ ತಪ್ಪಿಸಿ ಕೊಂಡು ಓಡೋಡಿ ಬಂದಿದ್ದು.... ತುಳು ಪ್ಲಾಸ್ಟಿಕ್ ಡಬ್ಬಕ್ಕೆ ಕಲ್ಲು ಹಾಕಿ ಅಲ್ಲಾಡಿಸಿದ ಹಾಗೆ ಆಗುತ್ತಿದ್ದರೆ,ಕಾಸರಗೋಡಿನ ನಮ್ಮ ಸ್ನೇಹಿತರು ಆಡುತ್ತಿದ್ದ ಮಲಯಾಳಂ ಸ್ಟೀಲ್ ಡಬ್ಬಕ್ಕೆ ಕಲ್ಲು ಹಾಕಿ ಅಲ್ಲಾಡಿಸಿದ ಹಾಗೆ ಆಗುತ್ತಿತ್ತು.....ವಾರ ಗಟ್ಟಲೆ ನಡೆಯುತ್ತಿದ್ದ ದೇವಸ್ಥಾನದ ಜಾತ್ರೆ... ಮೊದಲ ಬಾರಿ ನಿದ್ದೆ ಗೆಟ್ಟು ನೋಡಿದ ಯಕ್ಷಗಾನ....ದಕ್ಷಿಣ ಕನ್ನಡ ವಿಶೇಷವಾದ ಹುಲಿ ವೇಷದ ಕುಣಿತ....ಜಾತ್ರೆಯ ಕೊನೆಯಲ್ಲಿ ಕೋಳಿ ಜಗಳ.... ಭಾಜಿ ಕಟ್ಟುತ್ತಿದ್ದ ಜನಗಳು....ಅರ್ಧಂಬರ್ಧ ಅರ್ಥ ಆದ ತುಳು ನಾಟಕಗಳು...ಹೆಸರು ಮರೆತು ಹೋಗಿವೆ...ಜಾತ್ರೆ ಬಂತು ಅಂದರೆ ನಮಗೆ ಸುಗ್ಗಿಯೋ ಸುಗ್ಗಿ... ಕೈಗೆ ಒಂದಿಷ್ಟು ದುಡ್ಡು ಕೊಡುತ್ತಿದ್ದರು(ತಿಂಗಳ ಬಿಲ್ಲಿನಲ್ಲಿ ಅದನ್ನು ಸೇರಿಸಿ ಮನೆಗೆ ಕಳುಹಿಸುತ್ತಿದ್ದರು).... ಜಾತ್ರೆಗೆ ಕೊಡುವ ದುಡ್ಡನ್ನು ೩೦ ರೂಪಾಯೀ ಇಂದ ೫೦ ರೂಪಯ್ಯೇ ವರೆಗೂ ಒಪ್ಪಿಸಲು ಆಫೀಸು ರೂಮಿನಲ್ಲಿ ಕಾಡಿ ಬೇಡಿದ್ದು....ಜಾತ್ರೆ ದಿನ ಆಮ್ಲೆಟ್ ಗಾಗಿ ಕಾಯುತ್ತಿದ್ದ ನಮ್ಮ ಕೆಲವು ಸ್ನೇಹಿತರು....ಅದನ್ನೇ ಚಿಕನ್ ತಿಂದಷ್ಟು ಖುಷಿಯಲ್ಲಿ ತಿನ್ನುತ್ತಿದ್ದರು...ನನ್ನಂಥ ಪುಳ್ಚಾರಿಗಳಿಗೆ ಐಸ್-ಕ್ರೀಂ ಮತ್ತು ಚುರುಮುರಿಯೇ ಗತಿ....
ಆಫೀಸು ರೂಮಿಗೆ ಮಾತ್ರ ಸೀಮಿತವಾಗಿದ್ದ TV ಯನ್ನು ಯಾವುದಾದರು ಕ್ರಿಕೆಟ್ ಮ್ಯಾಚ್ ಇದ್ದಾಗ ಕಾರಿಡಾರ್ ಗೆ ತರಿಸಿ ನೋಡುತ್ತಿದ್ದದ್ದು..ಎರಡನೇ ವರ್ಷಕ್ಕೆ ಬಂದಾಗ ಒಂದು ಹೊಸ TV ಅನ್ನು ನಮ್ಮ ಮೆಸ್ಸ್ ಗೆ ಇಟ್ಟು,ಅದೂ ಕೇವಲ ರಾತ್ರಿ ೮.೩೦ ರ DD 1 ರ ಇಂಗ್ಲೀಶ್ ಮತ್ತು ಹಿಂದಿ ನ್ಯೂಸ್ ನೋಡಲು ಅವಕಾಶ..ಬರುತ್ತಿದ್ದದ್ದು ಅದು ಒಂದೇ ಚಾನೆಲ್...ಮತ್ತೆ ಕ್ರಿಕೆಟ್ ಮ್ಯಾಚ್ ಇದ್ದಾಗ...
ಟ್ಯಾಂಕ್ ಹಿಂದೆ ಅಥವಾ ಯಾವುದೋ ಮರದ ಹಿಂದೆ ಕತ್ತಲಿನಲ್ಲಿ ನಿಂತು ಸ್ಟಡಿ ರೂಮಿನಲ್ಲಿ ನಿದ್ದೆ ಮಾಡುವವರನ್ನು ಹಿಡಿಯುತ್ತಿದ್ದ ನಮ್ಮ ಮ್ಯಾನೇಜರ್....ಸ್ಟಡಿ ಹವರ್ ನಲ್ಲಿ ಸ್ಟಡಿ ರೂಮಿನಲ್ಲಿ ನಿದ್ದೆ ಮಾಡಿ ಸಿಕ್ಕಿ ಬಿದ್ದ ಮೇಲೆ ಐದು ಐದು ಬಾರಿ,ಕೆಲವೊಮ್ಮೆ ಹತ್ತು ಹತ್ತು ಬಾರಿ ಬರೆಯುತ್ತಿದ್ದ Imposition ಗಳು...Imposition ಗೆ ಸಿಗುತ್ತಿದ್ದದ್ದು Physics ನ derivation ಗಳು,chemistry ಯ ಯಾವುದಾದರೂ acid preparation ಗಳು...Biology ಯ ಚಿತ್ರಗಳು...Maths ನ ಲೆಕ್ಕಗಳು...ಕೆಲವೊಮ್ಮೆ ನಮ್ಮ ಗ್ರೌಂಡ್ ನಲ್ಲಿ ೫ ಅಥವಾ ೧೦ ಸುತ್ತು ಓಡುವುದು....ರಾತ್ರಿ ಹತ್ತರ ನಂತರ ಓದುತ್ತಿದ್ದ(ನಮಗೆ ೯.೩೦ ಕ್ಕೆ ನಿದ್ರಾ ದೇವಿ ಒಲಿದು ಬಿಡುತ್ತಿದ್ದಳು..ಅದಕ್ಕಾಗಿ ಎಷ್ಟೋ ದಿನ imposition ಬರೆದಿದ್ದೇನೆ)ನಮ್ಮ ಕುಳ್ಳ ಶಾಸ್ತ್ರಿ.... ತನ್ನ ರಕ್ತ ಹೀರಿದ ಸೊಳ್ಳೆಗಳನ್ನು ಸಾಯಿಸಿ ಅವನ್ನೆಲ್ಲ ಒಂದು ಪೇಪರ್ ಗೆ ಅಂಟಿಸಿ ಹಿಡುತ್ತಿದ್ದ....ಅಲ್ಲದೆ ಮಧ್ಯ ರಾತ್ರಿಯಲ್ಲಿ ಕಾಲೇಜಿಗೆ ಹೋಗಿ ನಾವು ಬೆಳಗ್ಗೆ ಅದನ್ನು ಪರೆಶೀಲಿಸಲು ಏನಾದರು ಗುರುತು ಇಟ್ಟು ಬರುತ್ತಿದ್ದ ಪುಂಡ....ಕೆಲವೊಮ್ಮೆ ಬೇಗ ನಿದ್ರೆ ಬಂದರೆ ಸುಮ್ಮನೆ ತಲೆ ನೋವು,ಜ್ವರ ಅಂತ ಸುಳ್ಳು ಹೇಳಿ ಮಾತ್ರೆ ತೆಗೆದು ಕೊಂಡು,ಅದನ್ನು ಹೊರಗಡೆ ಬಂದ ಕೂಡಲೇ ಬಿಸಾಡಿ ಮಲಗುತ್ತಿದ್ದ ಉಪಾಯಗಳು....ಸಣ್ಣ ಪುಟ್ಟ ಜಗಳಗಳು..ಮತ್ತೆ ಹೊಂದಾಣಿಕೆ....ಎಲ್ಲರಿಗೂ ಒಂದೊಂದು ಅಡ್ಡ ಹೆಸರುಗಳು....
ಒಮ್ಮೆ ನಾವು ನಾಲ್ಕೈದು ಜನ ದೇವಸ್ಥಾನಕ್ಕೆ ಹೋಗಿ(with permission) ಅಲ್ಲಿಂದ ಹಾಗೆ ಯಾವುದೋ ದಾರಿ ಹಿಡಿದು ಗುಡ್ಡ ಎಲ್ಲಾ ಹಟ್ಟಿ,ಕೊನೆಗೆ ಬಂದ ದಾರಿ ಗೊತ್ತಾಗದೆ ಎಲ್ಲೆಲ್ಲೋ ಸುತ್ತಿ,ಕೊನೆಗೆ ಯಾರನ್ನೋ ಕೇಳಿಕೊಂಡು ಹಾಸ್ಟೆಲ್ ಸೇರಿದ್ದಾಯಿತು....ವಿಷಯ ಅಂದರೆ ನಾವು ಹೋಗಿದ್ದು ವಾರ್ಡನ್ ಗೆ ಗೊತ್ತಾಗಲಿಲ್ಲ..ಇಲ್ಲ ಅಂದಿದ್ರೆ ಅದೇ ಲೆಟರ್...ಮೊಬೈಲ್ ಇಟ್ಟುಕೊಳ್ಳಲು ಅವಕಾಶ ಇಲ್ಲದ ಪರಿಸ್ಥಿತಿಯಲ್ಲಿ ಮೊಬೈಲ್ ಇಟ್ಟಿಕೊಂಡು ಕರ್ತವ್ಯ ಲೋಪ ಹೆಸಗಿದ ಹಾಸ್ಟೆಲ್ ಲೀಡರ್ ನನ್ನು ಆ ಸ್ಥಾನದಿಂದ ಕೆಳಗಿಲಿಸಿದ್ದು(ಬೇಲಿಯೇ ಎದ್ದು ಹೊಲ ಮಯ್ದರೆ ಸರಿ ಇರಲ್ಲ ಅಲ್ವ ಅದಕ್ಕಾಗಿ)....
ವಾರಕ್ಕೆ ಒಂದು ರೂಮಿನವರು ಊಟ ಬಡಿಸುವ ವಿಧಾನ... ಒಮ್ಮೆ ಊಟ ಬಡಿಸುವಾಗ ಲುಂಗಿ ಉಡಲು ಬರದ ನಮ್ಮ ಪ್ರಜ್ವಲ್ ನ ಲುಂಗಿ ನಮ್ಮ ಮೆಸ್ ನಲ್ಲಿ ಜಾರಿ ಕೆಳಗೆ ಬಿದ್ದಿದ್ದು...ನಾನ್-ವೆಜ್ ತಿನ್ನುವ ಸಲುವಾಗಿ ಸ್ವಲ್ಪ ದೊಡ್ಡ ಕಾಯಿಲೆಗಳನ್ನು ಬರೆಸಿಕೊಲ್ಲುತ್ತಿದ್ದ ಇವನು ಪುತ್ತೂರು ಅಥವಾ ಉಪ್ಪಿನಂಗಡಿಗೆ ಹೋಗುತ್ತಿದ್ದ...ಸಣ್ಣ ಪುಟ್ಟ ಕಾಯಿಲೆ ಅಂದರೆ ಅಲ್ಲೇ ೨ ಕಿಮಿ ದೂರದ ಅತೂರಿಗೆ ಕಳುಹಿಸುತ್ತಿದ್ದರು ಅದಕ್ಕಾಗಿ....ಮನೆ ಇಂದ ಬಂದ ಕೂಡಲೇ ಅಲ್ಪ ಸ್ವಲ್ಪ ಚಿಲ್ಲರೆ ಕೊಟ್ಟು,ಬರುವಾಗ ಉಳಿದಿದ್ದು ಇಷ್ಟು,ನಮ್ಮ Personnal account ನಲ್ಲಿ ಇಡಿ ಅಂತ ಹೇಳಿ ನಮ್ಮ ಸಾಚಾತನವನ್ನು ತೋರಿಸುತ್ತಿದ್ದೆವು..ಆದ್ರೆ ಅಲ್ಲಿ ಇಲ್ಲಿ ಒಂದಿಷ್ಟು ದುಡ್ಡು ಇಟ್ಟಿಕೊಂಡು ಇರುತ್ತಿದ್ದೆವು...ಭಟ್ಟರ ಅಂಗಡಿಗೆ ಹೋಗಲು ಬೇಕಲ್ಲ...ಆ ದುಡ್ಡನ್ನು ದಿಂಬಿನ ಹೊಳಗೆ, ನಮ್ಮ Rack ಗಳ ಮೇಲೆ ಯಾವುದಾದರು ವೇಸ್ಟ್ ಡಬ್ಬದ ಹೊಳಗೆ ಅಥವಾ ಇನ್ನೆಲ್ಲೋ ಬಚ್ಚಿಡುತಿದ್ದೆವು...ಯಾವಾಗ IT ರೈಡ್ ಯಾಗುವುದು ಅಂತ ಹೇಳಕ್ಕೆ ಆಗುತಿರಲಿಲ್ಲ...
ಟ್ಯಾಂಕ್ ಕ್ಲೀನ್ ಮಾಡುವ ನೆಪದಲ್ಲಿ ಈಜು ಆಡುತ್ತಿದ್ದು....ಯಾರದೋ ಹಾಸಿಗೆ ಇಂದ ಅತ್ತಿದ ತಿಗಣೆ ಕಾಟ ತಾಳಲಾರದೆ ಎಲ್ಲಾ ಮಂಚಗಳನ್ನು ತೊಳೆದು ಅದಕ್ಕೆ DDT ಹಾಕಿ ತೊಳೆದು,ಕೊನೆಗೆ ಹಾಸಿಗೆಗಳನ್ನೇ ಬಿಸಾಡಿದ್ದು....ನಮ್ಮ Physics sir ನ ಟಾ೦ಟು ಗಳು, ಅವರ ಮದುವೆ ನಿಶ್ಚಯ ಆದಾಗ,ಪ್ರವೃತ್ತಿಯಲ್ಲಿ ಕೀ ಬೋರ್ಡ್ ವಾದಕರಾದ ಅವರಿಗೆ ನಿಮ್ಮ ಮಗು ಹುಟ್ಟುವಾಗಲೇ "ಸ ರೀ ಗ ಮ ಪ " ಅಂತ ಹೇಳುತ್ತದೆ ಅಂತ ಹೇಳಿ ತಿರುಗು ಬಾಣ ಬಿಟ್ಟಿದ್ದು...biology ಯ Human reproduction ಪಾಠ ನಡೆಯುವಾಗ ಕಿಸಕ್ಕನೆ ನಕ್ಕ ಒಬ್ಬ ಕ್ಲಾಸ್ ಮೇಟ್ ನನ್ನು ಬೈದು ಹೊರಗೆ ಕಳುಹಿಸಿದ್ದು...ಮುಖ್ಯವಾಗಿ ಹಾಸ್ಟೆಲ್ ವಿಧ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿ ತೋರಿಸಿದ,ನಮ್ಮನ್ನು ಅಷ್ಟೇ ಮಮತೆ ಇಂದ ನೋಡಿದ ಮತ್ತು ನಮ್ಮ ಆಟಗಳನ್ನು ಸಹಿಸಿಕೊಂಡು ಒಂದೂ ದಿನ ಬೇಜಾರು ಮಾಡಿಕೊಳ್ಳದ ನಮ್ಮ ಕ್ಲಾಸ್ ಟೀಚರ್ ಆದ ನಮ್ಮ maths ಮೇಡಂ...ಸ್ವಲ್ಪ ಸ್ಟ್ರಿಕ್ಟ್ ಇಂದ ನೋಡಿಕೊಂಡು ನಮ್ಮನ್ನು ಸ್ವಲ್ಪ ಹತೋಟಿಯಲ್ಲಿ ಇಟ್ಟಿಕೊಂಡಿದ್ದ ನಮ್ಮ chemistry ಸರ್ ಮತ್ತು ಅವರೇ ನಮ್ಮ ವಾರ್ಡನ್ ಕೂಡ....ಎರಡನೆ ವರ್ಷೆ ಅವರು ಬಿಟ್ಟು ಹೋಗಿ ಬೇರೆ ಉಪನ್ಯಾಸಕರೆ ಇಲ್ಲದೆ ಇದ್ದಾಗ ಬೇರೆ ಕಾಲೇಜಿನ ಒಬ್ಬರು ನಮಗೆ ಬಂದು ಪಾಠ ಮಾಡುತ್ತಿದ್ದರು...ಜಪಾನ್ ನ ರೈತ Fukuoka ಬಗ್ಗೆ ಇದ್ದ ಪಾಟವನ್ನು ಬಹಳ ಮೆಚ್ಹುಗೆ ಇಂದ ಮಾಡುತ್ತಿದ್ದ ನಮ್ಮ ಇಂಗ್ಲಿಷ್ ಉಪನ್ಯಾಸಕರಿಗೆ ನಮ್ಮ ಸೀನಿಯರ್ಸ್ ಅದೇ ಅಡ್ಡ ಹೆಸರು ಇಟ್ಟಿದ್ದರು....

ಸ್ವತಂತ್ರ ದಿನ ಸಲುವಾಗಿ ನಡೆಯುವ 'ಸೃಜನ' ಕಾರ್ಯಕ್ರಮದಲ್ಲಿ ಇವರು ಹಾಡಿದ್ದ 'ಉತ್ತರ ಧ್ರುವಧಿಂ ದಕ್ಷಿಣ ಧ್ರುವಕೂ....' ಹಾಡು.... ಬಹಳ ಸುಲಲಿತವಾಗಿ ವಿವರಿಸುತ್ತಿದ್ದ ಕನ್ನಡ ಉಪನ್ಯಾಸಕರು...ಇವರು ಭೋದಿಸಿದ ಯಯಾತಿ ನಾಟಕ....ಉತ್ತಮ ವಾಗ್ಮಿಗಳು ಕೂಡ...ಇವರುಗಳ ಒಡನಾಟ ಪಡೆದದಕ್ಕೆ ಧನ್ಯೋಸ್ಮಿ !!!
ಎಲ್ಲಾ ವಿಷಯಗಳನ್ನು ಚಾಡಿ ಹೇಳಿ ಎಷ್ಟೋ apology ಲೆಟರ್ ಮತ್ತು ಸಹಿ ಗಳಿಗೆ ಕಾರಣನಾದ ಒಬ್ಬನಿಗೆ ಕರೆಂಟ್ ಹೋದಾಗ ,ಮೊದಲೇ ಜನರೇಟರ್ ಅನ್ನು ಸ್ವಲ್ಪ ಲೇಟ್ ಆಗಿ ಸ್ಟಾರ್ಟ್ ಮಾಡಲು ತೀರ್ಮಾನಿಸಿ ,ಬೆಡ್ ಶೀಟ್ ಮುಚ್ಚಿ ಧರ್ಮದೇಟು ಕೊಟ್ಟು ಕೊನೆಗೆ ತಮಾಷೆಗೆ ಎಂದಿದ್ದು...ಆದರೂ ಬುದ್ಧಿ ಬರಲಿಲ್ಲ ಅವನಿಗೆ....
ಹಾಸ್ಟೆಲ್ ಡೇ ಕೆಲವು ಸ್ಪರ್ಧೆಗಳು..ಅದರಲ್ಲಿ ಬೆಳಗ್ಗೆ ಬೆಳಗ್ಗೆ ನೀರು ಕುಡಿಯುವ ಸ್ಪರ್ಧೆ ಕೂಡ ಒಂದು....ನೀರು ಕುಡಿದು ಒಂದು ನಿಮಿಷ ವಾಂತಿ ಮಾಡುವ ಹಾಗಿಲ್ಲ...
ಒಬ್ಬನ ವಾಚ್ ಕದ್ದು ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಅದನ್ನು ಟಾಯ್ಲೆಟ್ ಗೆ ಬಿಸಾಕಿ ಕೊನೆಗೂ ಸಿಕ್ಕಿ ಬಿದ್ದ ಅವನ ಮನೆ ಇಂದ ಕರೆಸಿ ಬುದ್ಧಿ ಹೇಳಿದ ವಾರ್ಡನ್....
ಕೆಲವು ಸಿಟಿ ಹುಡುಗರಿಗೆ ಇತ್ತ ಲುಂಗಿ ಉಡಲು ಬರಲ್ಲ,ಪ್ಯಾಂಟ್ ಹಾಕಬೇಕಂದ್ರೆ ಒಂದು ಥರಾ ಹಿಂಸೆ,ಜೊತೆಗೆ ಬರ್ಮುಡಾ ಹಾಕಿಕೊಳ್ಳುವ ಹಾಗಿಲ್ಲದ ನಮ್ಮ ರೂಲ್ಸ್ ,ಅಂತ ನಮ್ಮ ಸ್ನೇಹಿತರು ಒಳಗೆ ಬರ್ಮುಡಾ ಚಡ್ಡಿ ಹಾಕಿಕೊಂಡು,ಹೇಗ್ ಬೇಕೋ ಹಾಕಿ ಪಂಚೆ ಸುತ್ತಿಕೊಂಡು ನಡೆಯುವಾಗ ಕೆಳಗೆ ಬಿಳುತ್ತಿದ್ದರು....
ಧನುರ್ ಮಾಸದಲ್ಲಿ ಬೆಳಗ್ಗೆ ಆ ಕೊರೆಯುವ ಚಳಿಯಲ್ಲಿ ತಣ್ಣೀರು ಸ್ನಾನ ಮಾಡಿ ದೇವಸ್ಥಾನದ ಮಹಾ ಮಂಗಳಾರತಿಗೆ ಹೋಗುತ್ತಿದ್ದ ನಮ್ಮ ಭಕ್ತಿ....
ಪ್ರದೀಪ ಎಂದು ಕೂಗಿದ ಹೆಸರನ್ನು ಪ್ರತಿಭಾ ಎಂದು ತಪ್ಪು ತಿಳಿದು ,ಆ ಹುಡುಗಿ ಕಂಪ್ಲೇಂಟ್ ಕೊಟ್ಟು,"ನೀವು ಇಲ್ಲಿ ಅಷ್ಟೂ ದೂರದಿಂದ ಓದಕ್ಕೆ ಬಂದಿದ್ದಿರ,ಒಳ್ಳೆ ಮಾರ್ಕ್ಸ್ ಮತ್ತು ಹೆಸರು ತಗೊಂಡ್ ಹೋಗಿ,ಅದೂ ಬಿಟ್ಟು ಲವ್ ಅಂತ ಸುತ್ತಾಡಿದರೆ ಹೇಳಿ,ಮದುವೆ ಕೂಡ ಇಲ್ಲೇ ಮಾಡಿ ಕಳುಹಿಸುತ್ತೇವೆ"ಅಂತ ಮೀಟಿಂಗ್ ನಲ್ಲಿ ಹೇಳಿದ್ದು....
ಯಾರೋ ಪುಣ್ಯಾತ್ಮ ಕೊಡದು ಕೊಟ್ಟ,೪ ಅಥವಾ ೫ kg ಕೊಡ್ತಾರೆ,ಅದೂ ಬಿಟ್ಟು ಬರೋಬ್ಬರಿ ೨ ಚೀಲ ತೊಂಡೆ ಕಾಯಿ ಕೊಟ್ಟಿದ್ದ,೪ ದಿನ ಮಧ್ಯಾನ ಸಾರು,ರಾತ್ರಿ ಸಾರು,ಪಲ್ಯ ಎಲ್ಲಾ ತೊಂಡೆ ಕಾಯಿಂದೆ....ಕೊನೆಗೆ ಬೇಸತ್ತು ಅವರೇ ಅದನ್ನು ಮಾಡುವುದನ್ನು ಕಡಿಮೆ ಮಾಡಿಬಿಟ್ಟರು...
ಇಂಥ ಹಾಸ್ಟೆಲ್ನಲ್ಲಿ ೨ ವರ್ಷ ಮನೆ ಇಂದ,ಮನೆಯವರಿಂದ ದೂರ ಇದ್ದ ನಾವುಗಳು ಇಂಥ ಹತ್ತು ಹಲವಾರು ನೆನಪುಗಳನ್ನು ಹೊತ್ತು ಕಳೆದ ವಾರ ಭೇಟಿ ಮಾಡಿ ಮತ್ತೆ ಈ ನೆನಪುಗಳನ್ನು ಮೆಲುಕು ಹಾಕುತ್ತಾ,ಅಲ್ಲಿ ಇಲ್ಲಿ ಸುತ್ತಾಡಿ,ಆ ದಿನಗಳ ಹಾಗೆ ರಾಜಕೀಯ,ಕ್ರೀಡೆ,ಸಿನೆಮಾ ಹೀಗೆ ಹಲವಾರು ವಿಷಯಗಳ ಚರ್ಚೆ,ಜೊತೆಗೆ ಕಾಲೇಜು ಬಿಟ್ಟ ಮೇಲೆ ನಮ್ಮ ಜೀವನ ಸಾಗಿದ ಪಥ,ಕೆಲವರು ಬೇರೆ ದೇಶಕ್ಕೆ ಹೋಗಿ ಬಂದ ಅನುಭವಗಳು,ಕೆಲವರು ನಂತರ ಕಾಲೇಜು ಬಿಟ್ಟು ಬಿಸಿನೆಸ್ ಶುರು ಮಾಡಿದ್ದು,ಕೆಲವರು ನಂತರ ಕಾಲೇಜಿನಲ್ಲಿ ಆದ ಅವರ ವಿಫಲ ಪ್ರೇಮ ಕಥೆಗಳು,ಹುಡುಗಿ ಕೈ ಕೊಟ್ಟು ಹೋದ ಮೇಲೆ ಸ್ವಲ್ಪ ದಿನ ಹದ ಗೆಟ್ಟಿದ್ದ ಜೀವನ,ಕೆಲಸ ಸಿಗದೆ ಅಲೆದ ದಿನಗಳು,ಹೀಗೆ ಎಷ್ಟೋ ವಿಷಯಗಳನ್ನು ಮಾತಾಡಿ ಹಳೆ ನೆನಪುಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಕೊನೆಗೆ ಭರ್ಜರಿ ಪಾರ್ಟಿ ಮಾಡಿ,ಮಧ್ಯ ರಾತ್ರಿ ೪.೦೦ ಘಂಟೆ ವರೆಗೆ ಮೈಸೂರು ರಸ್ತೆಯಲ್ಲಿ ಬೈಕ್ ಗಳಲ್ಲಿ ಸುತ್ತಾಡಿ ಒಟ್ಟಾರೆ ಮಸ್ತ್ ಎಂಜಾಯ್ ಮಾಡಿದ್ವಿ....
ಇಷ್ಟೆಲ್ಲಾ ನೆನಪುಗಳು ಮರುಕಳಿಸುವುದಕ್ಕೆ ಕಾರಣವಾಗಿದ್ದು ಮಂಗಳೂರು,ಮುಂಬಯಿ,ಮಂಡ್ಯ,ಚಿಕ್ಕಬಳ್ಳಾಪುರ,ಚೆನ್ನೈ ಇಂದ ಬಂದಿದ್ದ ನಮ್ಮ ಸ್ನೇಹಿತರು,ಕೆಲವರು ಕಾರಣಾಂತರಗಳಿಂದ ಬರಲಿಲ್ಲ...ಈ ಒಂದು ದಿನವನ್ನು ಮಿಸ್ ಮಾಡಿಕೊಂಡರು..ಇದಕ್ಕೂ ಮುಂಚೆ ಎಷ್ಟೋ ಬಾರಿ ಭೇಟಿ ಆಗಿದ್ದೇವೆ ಆದರೂ,ಇಷ್ಟೊಂದು ಜನ ಒಟ್ಟಿಗೆ ಸೇರಿದ್ದು ಬಹುಶಃ ಕಾಲೇಜು ಬಿಟ್ಟ ಮೇಲೆ ಇದೆ ಮೊದಲು....

ರಾಮಕುಂಜದಲ್ಲಿ ಕಳೆದೆ ದಿನಗಳ ನೆನಪುಗಳು ಅಚ್ಚಳಿಯದ ಹಾಗೆ ಇನ್ನು ಹಚ್ಹ ಹಸುರಾಗಿದೆ....ಇದು ನನ್ನ ಜೀವನದಲ್ಲಿ ಬಹಳ ದೊಡ್ಡ ತಿರುವು ಕೊಟ್ಟ ಸ್ಥಳ... ಜೀವನದ ಎಷ್ಟೋ ಬಹು ಮುಖ್ಯ ಪಾಠಗಳನ್ನು ಹೇಳಿಕೊಟ್ಟಿದೆ....ಸಾಮಾಜಿಕವಾಗಿ ಬಹಳ ವಿಷಯಗಳನ್ನು ತಿಳಿಸಿದೆ.... ಎಂದೂ ಮರೆಯಲಾಗದ ದಿನಗಳು ಅವು....
ನಮ್ಮ ಹಾಸ್ಟೆಲ್ ಮತ್ತು ಸುತ್ತಮುತ್ತಲ ಪ್ರದೇಶಗಳ ಒಂದು ಕಿರು ನೋಟ ..... ಈ ಲಿಂಕ್ ನಲ್ಲಿದೆ....

Monday, September 5, 2011

ಜೀವನ ಒಂದು ಆಯ್ಕೆ !!!

ಟ್ರೈನು ಸಕಲೇಶಪುರ ದಾಟಿ ಶಿರಾಡಿ ಘಾಟಿನಲ್ಲಿ ಸಾಗುತ್ತಿದೆ...ಕಿಡಕಿ ಬದಿಯ ಸೀಟಿನಲ್ಲಿ ಕೂತು ಪ್ರಕೃತಿಯ ವಿಹಂಗಮ ನೋಟವನ್ನು ನೋಡುತ್ತಾ,ಹಸಿರು ಸೊಬಗನ್ನು ಅನುಭವಿಸುತ್ತಾ ಕಣ್ಣಿನಲ್ಲೇ ಎಲ್ಲವನ್ನೂ ಸೆರೆ ಹಿಡಿಯುತ್ತ ರೈಲಿನ ಜೊತೆ
ನಿಧಾನವಾಗಿ ಸಾಗುತ್ತಿದ್ದೇನೆ...ಪಕ್ಕದಲ್ಲೇ ಒಂದು ಗೆಳೆಯರ ಗುಂಪು.ಒಂದಷ್ಟು ಜನ ಹುಡುಗರು, ಒಂದಿಷ್ಟು ಹುಡುಗಿಯರು..,ಅವರು ಕೂಡ ನನ್ನ ಹಾಗೆ ಟ್ರಿಪ್ ಹೋಗುತ್ತಿರಬಹುದು,ಆದರೆ ನಾನು ಒಬ್ಬನೇ,ಅವರು ಗುಂಪಿನಲ್ಲಿದ್ದಾರೆ...

ಸ್ವಲ್ಪ ಸಮಯದ ನಂತರ ಒಬ್ಬ ಹುಡುಗ ಪಕ್ಕದಲ್ಲಿದ್ದ ಹುಡುಗಿಗೆ ಕೈ ಸಂಜ್ಞೆ ಮಾಡಿ ಕ್ಯಾಮೆರ ಹಿಡಿದು ಹೊರಟ,ಜೊತೆಯಲ್ಲಿ ಎಲ್ಲರೂ ಬಾಗಿಲ ಬಳಿ ಹೋದರು,ಕೊನೆಗೆ ಉಳಿದಿದ್ದು ಒಬ್ಬ ಹುಡುಗ ಮತ್ತು ಹುಡುಗಿ,ಎದುರು ಬದುರು ಸೀಟಿನಲ್ಲಿ...ಬೇರೆ ಯಾರೂ ಇಲ್ಲ...

"ಸುಷ್ಮಾ,ಒಂದು ಮಾತು ಕೇಳಲಾ ?"

"ಹಾ..ಕೇಳು "ಎಂದು ಹೇಳುವಂತೆ ಕಣ್ಣಲ್ಲೇ ಸಂಜ್ಞೆ ಮಾಡಿದಳು...

"ಅಲ್ಲ,ನಾನು ನಿನ್ನ ತುಂಬ ಇಷ್ಟ ಪಡ್ತೀನಿ,ನಾನು ನಿನ್ನನ್ನ ತುಂಬ ಪ್ರೀತಿಸ್ತೀನಿ,ನಾವಿಬ್ಬರು ಒಟ್ಟಿಗೆ ಬೆಳೆದಿದ್ದೇವೆ,ಆದರೆ ನೀನು ನನ್ನನ್ನ ಒಪ್ಪಿಕೊಳ್ಳಲೇ ಇಲ್ಲ ? ಅವನನ್ನು ಮದುವೆ ಆಗೋಕ್ಕೆ ಒಪ್ಪಿಕೊಂಡೆ " ಅಂತ ಮುಖ ಗಂಟು ಹಾಕಿಕೊಂಡೆ ಕೇಳಿದ.

"ನೋಡು ಅಜಯ್,ಒಬ್ಬ ಶಿಲ್ಪಿ ಒಂದು ದೇವಸ್ಥಾನ ಕಟ್ಟಬೇಕಾದರೆ ಒಂದೇ ಗುಡ್ಡದಿಂದ ಬಂಡೆಗಳನ್ನು ತರುತ್ತಾನೆ,ಆದರೆ ಅವನು ಅದರಲ್ಲಿ ಒಂದನ್ನು ಮಾತ್ರ ದೇವರ ವಿಗ್ರಹ ಮಾಡುವುದಕ್ಕೆ ಬಳಸಿಕೊಳುತ್ತಾನೆ.ಮಿಕ್ಕ ಕಲ್ಲುಗಳನ್ನು ಕಂಬ ಅಥವಾ ದೇವಸ್ಥಾನದ ಹೊರಗಡೆ ಮೆಟ್ಟಿಲು ಮಾಡುವುದಕ್ಕೆ ಉಪಯೋಗಿಸುತ್ತಾನೆ... ಆ ವಿಗ್ರಹ ಆಗೋ ಕಲ್ಲಿಗೆ ಅ ಪುಣ್ಯ ಇರುತ್ತೆ..ಅಷ್ಟೇ...ಅದೇ ತರಹ ಈ ವಿಷಯದಲ್ಲಿ ನಂದೂ ಆಯ್ಕೆ ಅಷ್ಟೇ !!!"

"ಹಾಗಾದ್ರೆ ನಾsssssssssssss... " 'ಮೆಟ್ಟಿಲಿಗೆ ಸಮಾನನ?' ಅಂತ ಅವನು ಹೇಳಿ ಮುಗಿಸುವ ಮೊದಲೇ,ಕತ್ತನ್ನು ಸಲ್ಪ ಎಡಕ್ಕೆ ಬಾಗಿಸಿ 'ಇರಬಹುದೇನೋ ?' ಎನ್ನೋ ಭಾವದಲ್ಲಿ ಮುಖ ಮಾಡಿದಳು...

ರೈಲು ಕಿಲೋ ಮೀಟರ್ ಉದ್ದದ ಸುರಂಗದೊಳಗೆ ಹೊಕ್ಕಿದೊಡನೆ ಭೋಗಿ ಒಳಗೆ ಕೂಡ ಕತ್ತಲು ಆವರಿಸಲು ಶುರು ಆಯಿತು,ಅದೇ ರೀತಿ ಅವನ ಭಾವದಲ್ಲಿ ಕೂಡ....

Wednesday, July 20, 2011

ದೇಹದಾನ !!!

"ಏನ್ ತಾತ,ನಮ್ಮಪ್ಪ ಬಂದು ಕೇಳಿದ್ರೆ ಕೊಡಲ್ಲ ಅಂದಂತೆ "....ಮುಸ್ಸಂಜೆಯಲ್ಲಿ ಹೊಲದಿಂದ ಬಂದು,ಪುಷ್ಪಾಳಿಗೆ   ಟೀ ತರಲು ಏಳಿ ಜಗುಲಿಯ ಮೇಲೆ ಬೀಡಿ ಸೇದುತ್ತ ಕುಳಿತಿದ್ದಾಗ,ಏಕಾ  ಏಕಿ ಯಮುನಾ ಬಂದು ಹೀಗೆ ಕೂಗಾಡಿದಳು...
ಯಮುನಾ ನನ್ನ ಮೊದಲನೇ ಮಗ ಶೇಖರನ  ಮಗಳು....ಪುಷ್ಪ ನನ್ನ ಎರಡನೇ ಮಗ ಮೂರ್ತಿಯ ಹೆಂಡತಿ..
ಇಬ್ಬರೂ ಮಕ್ಕಳಿಗೂ ಬೇರೆ ಬೇರೆ ಮನೆ ಕಟ್ಟಿಸಿ ಕೊಟ್ಟಿದ್ದೇನೆ,
ಹಿರಿಯ ಮಗ ಶೇಖರನಿಗೆ ಹೊಸ ಮನೆಯನ್ನು ಕೊಟ್ಟಿದ್ದೇನೆ,ನನ್ನ ಪಿತ್ರಾರ್ಜಿತ ಹಳೆ ಮನೆಯನ್ನು ಕಿರಿಯ ಮಗನಿಗೆ ಕೊಟ್ಟು,ನಾನು ಅವನ ಮನೆಯಲ್ಲೇ ಇದ್ದೇನೆ,
ಆಗಾಗ  ಎರಡೂ  ಮನೆಗೆ ಹೋಗಿ ಬರುತ್ತಿರುತ್ತೇನೆ...
ಯಮುನಾ ಹೀಗೆ ಗದರುವುದನ್ನು ಕೇಳಿಸಿಕೊಂಡ ಪುಷ್ಪ ಹೊಳಗಿನಿಂದ ಬಂದು "ಏ ಇದೆಲ್ಲ ದೊಡ್ಡವರ ವಿಷಯ,ನಿಮ್ಮಪ್ಪ ಬಂದು ಮಾತಾಡುತ್ತಾರೆ,ನೀನ್ ಇದರಲೆಲ್ಲ ತಲೆ ಹಾಕಬೇಡ,ಸುಮ್ನೆ ಹೋಗಿ ಓದ್ಕೋ ಹೋಗು,
ಯಜಮಾನಗಿತ್ತಿ ತರಹ ಬಂದು ಬಿಟ್ಟಳು " ಅಂತ ಅಂದಳು..
"ಏನ್ ಚಿಕ್ಕಮ್ಮ ,ನಾನೇನ್ ಚಿಕ್ಕವಳಲ್ಲ,ನಾನು ಇವಾಗ ಮೇಜರ್ ,ನನಗೂ ಕೇಳೋ ಹಕ್ಕಿದೆ,ನಿಮಗೆಷ್ಟು  ಹಕ್ಕಿದ್ಯೋ ಅಷ್ಟೇ ನನಗೂ ಇದೆ  "ಎಂದಾಗ ಒಂದು ಕ್ಷಣ ನನ್ನ ಎದೆ ಬಡಿತ ನಿಂತು ಬಿಟ್ಟಿತ್ತು...
ಇವಳೇನಾ ಹದಿನೆಂಟು ವರ್ಷದಿಂದ ಮುದ್ದಾಗಿ ಸಾಕಿದ ಮೊಮ್ಮಗಳು,ನನ್ನ ತೊಡೆ ಮೇಲೆ ಮಲಗಿಕೊಂಡು ಕಥೆ ಕೇಳುತ್ತಿದ್ದವಳು ಇವಳೇನಾ,
ಎಷ್ಟು ಪ್ರೀತಿಯಿಂದ ಸಾಕಿದ್ದೆ,ಪ್ರತಿ ವರ್ಷ ಊರ ಅಮ್ಮನ ಜಾತ್ರೆಗೆ ಹೊಸ ಬಟ್ಟೆ ಕೊಡಿಸುತ್ತಿದ್ದೆ....
ಇದಕಿಂತ ಎರಡು  ದಿನ ಮುಂಚೆ ಅವಳ ಅಪ್ಪ ಬಂದು  ಇದೆ ರೀತಿ ಗಲಾಟೆ ಮಾಡಿದ್ದ..ಹುಟ್ಟಿಸಿದ ತಪ್ಪಿಗೆ ನನ್ನ ಎದೆ ಮೇಲೆ ಒದ್ದಿದ್ದಾನೆ...
ಇಬ್ಬರೂ ಮಕ್ಕಳಿಗೆ ನಾನೇನು ಕಡಿಮೆ ಮಾಡಿಲ್ಲ..
ಇಬ್ಬರ ಹೆಸರಿಗೂ ಇರುವ ಜಮೀನನ್ನು ಸರಿಯಾಗಿ ಪಾಲು ಮಾಡಿ ಪಾಲುಪಾರಿಕತ್ತು ಬರೆದಾಗಿದೆ...ಹಿರಿ ಮಗನ ಗಲಾಟೆ ತಾಳಲಾರದೆ ಈ  ಕೆಲಸವನ್ನು ಬಹಳ ಹಿಂದೆಯೇ ಮಾಡಿ ಬಿಟ್ಟಿದ್ದೇನೆ...ಆದರೆ ಅವರ ಹೆಸರಿಗೆ ಇನ್ನು ನೊಂದಾಯಿಸಿಲ್ಲ ಅಷ್ಟೇ...ಹೇಗೆ ಆದರೂ ಅವರಿಗೆ ಆ ಜಮೀನು ..ಆದರೂ ಹಿರಿ ಮಗ ಮಾತ್ರ ಆದಷ್ಟು ಬೇಗ ತನ್ನ ಹೆಸರಿಗೆ ಮಾಡಿಸಿಕೊಳ್ಳಲು ನೋಡುತ್ತಿದ್ದಾನೆ...
ಕೆಲವು ದಿನಗಳ ಹಿಂದೆ ನಂಜೇಗೌಡ ಬಂದು ಅವರವರ  ಜಮೀನನ್ನು ಅವರ ಹೆಸರಿಗೆ ಮಾಡಿಕೊಡು,ಸುಮ್ನೆ ಯಾಕೆ ಇನ್ನು ನಿನ್ನ ಹೆಸರಲ್ಲಿ ಇಟ್ಕೊ೦ಡಿದಿಯ ಅಂತ ಕೇಳಿದ್ದ,ನಿನಗ್ಯಾಕೆ ನಮ್ಮ ಮನೆ ವಿಚಾರ ಅಂತ ಬೈದು ಕಳ್ಸಿದ್ದೆ..ನಂಜೇಗೌಡ ಅಂದ್ರೆ ಕೆರೆ ಪಕ್ಕದ ನಮ್ಮ ಗದ್ದೆಯ ಪಕ್ಕದಲ್ಲೇ ಅವನ ಗದ್ದೆ ಇದೆ..ಅಲ್ಲಿ ನನ್ನ ಇಬ್ಬರೂ ಮಕ್ಕಳಿಗೂ ಪಾಲಿದೆ,ಅದರಲ್ಲಿ ಶೇಖರ ತನ್ನ ಪಾಲನ್ನು ನಂಜೇಗೌಡನಿಗೆ  ಮಾರುವುದಾಗಿ ಹೇಳಿ ಅವನ ಹತ್ತಿರ ಸ್ವಲ್ಪ ಹಣ ಕೂಡ ತಗೊಂಡಿದ್ದಾನೆ...ಅದಕ್ಕಾಗಿ ಈ ರೀತಿ ಅಪ್ಪ ಮಗಳು ಇಬ್ಬರೂ ಜಗಳ ಮಾಡುತ್ತಿದ್ದಾರೆ..

ಇಬ್ಬರು  ಮಕ್ಕಳಲ್ಲಿ ಈ ಶೇಖರ ತುಂಬ ಸೋಮಾರಿ...ಇಬಾರಿಗೂ ತಮ್ಮ ತಮ್ಮ ಜಮೀನನ್ನು ಪಾಲು ಮಾಡಿ ಕೊಟ್ಟು ೨ ವರ್ಷ ಆಯಿತು...ಈ ಮೂರ್ತಿನಾದರು,ಏನಾದ್ರು ಬೆಳೆ ಬೆಳೆದು ಜೀವನ ಮಾಡ್ತಿದ್ದಾನೆ...ಅದರ ಜೊತೆಗೆ ಎರಡು ಹಸು ಸಾಕಿದ್ದಾನೆ...ಗಂಡ ಹೆಂಡತಿ ಇಬ್ಬರೂ ವಿದ್ಯಾವಂತರು... 
ಮನೆ ಹಿರಿ ಮಗ ಆಗಿ ಅವನು ಇರುವ ಜಮೀನನ್ನು ಮಾರಲು ತಯ್ಯಾರಿದ್ದಾನೆ..
ಬೇಲಿಯೇ ಎದ್ದು ಹೊಲ ಮೆಯ್ದ ಹಾಗೆ   ಆಯಿತು..

೩೦ ವರ್ಷದ ಹಿಂದೆ ಸಿಕ್ಕ ಮೇಷ್ಟು ಕೆಲಸ ಬಿಟ್ಟೆ,ಬರಿ ೪೦ ರುಪಯೀ ಸಂಬಳ...ಆಗಿನ ಕಾಲದಲ್ಲಿ ಅದೇ ಹೆಚ್ಚು...ಆದರೂ ನಾನು ನನ್ನ ಅಣ್ಣ ಇಬ್ಬರೂ ಕೆಲಸಕ್ಕೆ ಸೇರಲಿಲ್ಲ...ನಮ್ಮ ಜಮೀನಿನಲ್ಲೆ ಬೇಕಾದಷ್ಟು ಆದಾಯ ಬರುತಿತ್ತು...
ಪಿತ್ರಾರ್ಜಿತ ಆಸ್ತಿಯ ಜೊತೆಗೆ ಒಂದಷ್ಟು ಬೇರೆಯವರಿಂದ ಕೊಂಡು..ಹೊಸ ಮನೆ ಕಟ್ಟಿಸಿ,ಅದನ್ನು ಹಿರಿಯ ಮಗನಿಗೆ ಕೊಟ್ಟಿದ್ದೇನೆ....ಮೂರ್ತಿ ಮತ್ತು ಅವನ ಹೆಂಡತಿ ಇಬ್ಬರಿಗೂ ಸ್ವಲ್ಪ  ಜವಾಬ್ದಾರಿ ಅನ್ನೋದು ಇದೆ...ಆದರೆ ಶೇಖರ ಆಗಲಿ ಅವನ ಹೆಂಡತಿಗಾಗಲಿ ಇಬ್ಬರೂ ಸೋಮಾರಿಗಳೇ...ಭಂಡರು..ದುಡಿದು ತಿನ್ನ ಬೇಕೆಂಬ ಯೋಚನೆಯೇ ಇಲ್ಲ...ಇರುವ ಆಸ್ತಿಯನ್ನು ಮಾರಿ ತಮ್ಮ ಮಗಳ ಮದುವೆ ಮಾಡುವ ನಿರ್ಧಾರ ಮಾಡಿರಬಹುದು..
ಬೇಕಾದಷ್ಟು ಸಾಲ ಮಾಡಿದ್ದಾನೆ,ಅದನ್ನೆಲ್ಲೇ ತೀರಿಸಲು ಈಗ ಜಮೀನನ್ನು  ತನ್ನ ಹೆಸರಿದೆ ಮಾಡಿ ಕೊಡಿ ಎಂದು ಪೀಡಿಸುತ್ತಿದ್ದಾನೆ..

ಅಪ್ಪನ ಆಸ್ತಿಯಲ್ಲಿ ಬೆವರು ಸುರಿದಿ ದುಡಿದು ಅದಕ್ಕೆ ಇನ್ನೊಂದಿಷ್ಟು ಹೊಲ ಗದ್ದೆಗಳನ್ನು ತೆಗೆದು ಕೊಂಡಿದ್ದೇನೆ... ಈಗ ಅವನ ಹೆಸರಿಗೆ ಮಾಡಿ ಕೊಟ್ಟರೆ ಅದನ್ನೆಲ್ಲಾ ನನ್ನ ಕಣ್ಣ ಮುಂದೆಯೇ ಮಾರುತ್ತಾನೆ,,ಅದಕ್ಕೆ ಅವನ ಹೆಸರಿಗೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ದೇನೆ...
ಇದೆಲ್ಲಕಿಂತ ಮಿಗಿಲಾಗಿ  ನನ್ನ ಮುದ್ದು ಮೊಮ್ಮಗಳು ಬಂದು ಈ ರೀತಿ ಕೇಳಿದಳಲ್ಲ?ಅದೇ ಬೇಜಾರು..
"ಸರಿ ಹೋಗಮ್ಮ ,ನಿಮ್ಮ ಅಪ್ಪನ ಬರಕ್ಕೆ ಹೇಳು...ಮುಂದಿನ ವಾರ ತಾಲೂಕ್ ಆಫೀಸಿನಲ್ಲಿ ಎಲ್ಲಾ ದಾಖಲೆಗಳನ್ನ ಕೊಡ್ತೀನಿ ಅಂತ ಹೇಳು ನಿನ್ನ ಅಪ್ಪಂಗೆ "ಅಂದ ಕೂಡಲೇ ಹಿಂದಕ್ಕೆ ತಿರುಗಿ  ನೋಡದ  ಹಾಗೆ ಹೋದಳು..
ನನಗೂ ಅವಳ ಮುಖ ನೋಡಲಿ ಇಷ್ಟ ಇಲ್ಲದೆ ಕತ್ತು ಬಗ್ಗಿಸಿ ಕೊಂಡಿಯೇ ಇದ್ದೆ.....
ಮೊಮ್ಮಗಳ ಆಸೆ ಕೂಡ ಅದೇ ಆಗಿರಬೇಕು...ನನ್ನ ಮಗಳು ಯಾವತ್ತು ಕೂಡ ಈ ರೀತಿ ತಿರುಗಿ ಮಾತಾಡಿರಲಿಲ್ಲ..ಆದರೆ...
ಶೇಖರ ತನ್ನ ಜಮೀನನ್ನು ನಂಜೇಗೌಡರಿಗೆ  ಮಾರುವುದಂತು ಖಚಿತ..ಅವರ ಅಸ್ತಿ ಏನು ಬೇಕಾದರೂ ಮಾಡಿಕೊಳ್ಳಲಿ...

ನನ್ನ ಹೆಂಡತಿ ತೀರಿಕೊಂಡಾಗ,ಶೇಖರ ತನ್ನ ಪಾಲಿನ ಹೊಲದಲ್ಲಿ ಅಂತ್ಯಕ್ರಿಯೆ ಮಾಡಲು ಚಕಾರ ಎತ್ತಿದ್ದ....ತಾಯಿ ಅಂತ್ಯಕ್ರಿಯೇಯಲ್ಲೂ ಸಣ್ಣ ಪುಟ್ಟದಕ್ಕೆ ಲೆಕ್ಕ ಬರೆದು ಮೂರ್ತಿ ಹತ್ತಿರ ಖರ್ಚಿನ  ಅರ್ಧ ಭಾಗ ತೆಗೆದು ಕೊಂಡಿದ್ದ...
ನನಗೂ ವಯಸ್ಸಾಯಿತು...ನನ್ನ ಆಯಸ್ಸು ಕೂಡ ಮುಗಿಯುತ್ತ ಬಂತು...ಅವರ ಹೆಸರಿಗೆ ಹೊಲ ತೋಟ ಎಲ್ಲಾ ಮುಂದಿನ ವಾರ ಮಾಡಿಕೊಡುತ್ತೇನೆ..
ಈಗಾಗಲೇ ನನ್ನ ಮರ್ಯಾದೆಯನ್ನು ಮಗ ,ಮೊಮ್ಮಗಳು ಸೇರಿ ಊರವರ  ಮುಂದೆ  ಕಳೆದು ಹಾಗಿದೆ...
ಅದಕ್ಕೆ ಇವರ ಚಿಂತೆಯೇ ಬೇಡ...
ಆಗ ಸಿಕ್ಕಿದ್ದ ಮೇಷ್ಟು ಕೆಲಸಕ್ಕೆ ಹೋಗಿದ್ದರೆ ಈಗ ಈ ರೀತಿ ಹರಿದ ಚಪ್ಪಲಿ ಹಾಕಿಕೊಂಡು ಓಡಾಡುವ  ಸ್ಥಿತಿ ಇರುತ್ತಿರಲಿಲ್ಲ...ಈ ನನ್ನ ಹಿರಿ ಮಗನಿಗೆ ಕಡೆ ಪಕ್ಷ ಒಂದು ಜೊತೆ ಚಪ್ಪಲಿ ಕೊಡಿಸಬೇಕೆಂಬ ಆಸೆ ಇಲ್ಲ,ಆದರೆ ಜಮೀನು ಮಾತ್ರ ಬೇಕು...ಆ ಕೆಲ್ಸಕ್ಕೆ ಹೋಗಿದ್ದರೆ ಪಿಂಚಣಿಯಾದರು ಬರುತ್ತಿತ್ತು...
ಅವರಾದರೂ ನೆಟ್ಟಗೆ ಓದಿದ್ದರೆ ಈ ರೀತಿಯ ದುರ್ಬುದ್ಧಿ ಅವನಿಗೆ ಬರುತ್ತಿರಲಿಲ್ಲ... ಆದರೂ ಓದುತ್ತಿರುವ ಮೊಮ್ಮಗಳಿಗೆ ಏಕೆ ಬಂತು?....
ಇನ್ನೇನು ಮಾಡಲು ಸಾಧ್ಯವಿಲ್ಲ...ನಾನು ಸತ್ತಾಗ ಕೂಡ ನನ್ನ ಮಕ್ಕಳು ಕಿತ್ತಾಡುವುದು  ಬೇಡ..ಮರ್ಯಾದೆ ಹಾಳು ಮಾಡಿಕೊಳ್ಳುವುದು ಬೇಡ...ಮತ್ತೆ ಅದೇ ತರಹ ಜಗಳ ಮಾಡಿಕೊಂಡು ಕೂರುವುದು ಬೇಡ...
......ಅದಕ್ಕೆ ಯಾವುದಾದರು ಕಾಲೇಜಿಗೆ ದೇಹದಾನ ಮಾಡಲು ನಿರ್ಧಾರ ಮಾಡಿದ್ದೇನೆ ,ಯಾವುದಾದರು ಆಸ್ಪತ್ರೆಗೆ ಪತ್ರ ಬರೆಯಬೇಕು ಎಂದು ಕೊಂಡಿದ್ದೇನೆ..
ಯಾವ ಮಕ್ಕಳಾದರು ನನ್ನ ದೇಹದಿಂದ ಎನಾದ್ರೂ  ಕಲಿತುಕೊಳ್ಳಲಿ....ಅವರಿಗಾದರೂ ಒಳ್ಳೆಯದಾಗಲಿ...
ಮನೆಯ ಹಿರಿ ಮಗನಿಗೆ ಜವಾಬ್ದಾರಿ ಇಲ್ಲ ಅಂದರೆ ಅಥವಾ ಅವನಿಗೆ ದುಡಿದು ತಿನ್ನ ಬೇಕು ಎಂಬ ಹಂಬಲ ಇಲ್ಲ ಅಂದರೆ,ಹೆತ್ತವರ ಮೇಲೆ ಗೌರವ ಇಲ್ಲ ಅಂದರೆ ಇದೆ ಕಥೆ..
ಏನೋ ಇನ್ನು ಮುಂದೆ ನನಗೆ ನನ್ನ ಬೀಡಿಯೇ ಸಂಗಾತಿ...ಜೀವನದ ಕೊನೆಗಾಲವನ್ನು ಈ ರೀತಿ ಕಳೆಯುತ್ತೇನೆ ಎಂದು ಯಾವತ್ತಿಗೂ ಭಾವಿಸಿರಲಿಲ್ಲ...
 ಕೊನೆ ದಿನಗಳ ಎಣಿಕೆಯಲ್ಲಿ ಸಾಗುತ್ತಿದ್ದೇನೆ..
ಅವನು ತನ್ನ ಜಮ್ಮೀನನ್ನು ನನ್ನ ಕಣ್ಣ ಮುಂದೆ ಬೇರೆಯವರಿಗೆ ಮಾರುವ ಮೊದಲು ನನ್ನ ಕಣ್ಣು ಶಾಶ್ವತವಾಗಿ ಮುಚ್ಚಿದರೆ  ಒಳ್ಳೆಯದು...