ಟ್ರೈನು ಸಕಲೇಶಪುರ ದಾಟಿ ಶಿರಾಡಿ ಘಾಟಿನಲ್ಲಿ ಸಾಗುತ್ತಿದೆ...ಕಿಡಕಿ ಬದಿಯ ಸೀಟಿನಲ್ಲಿ ಕೂತು ಪ್ರಕೃತಿಯ ವಿಹಂಗಮ ನೋಟವನ್ನು ನೋಡುತ್ತಾ,ಹಸಿರು ಸೊಬಗನ್ನು ಅನುಭವಿಸುತ್ತಾ ಕಣ್ಣಿನಲ್ಲೇ ಎಲ್ಲವನ್ನೂ ಸೆರೆ ಹಿಡಿಯುತ್ತ ರೈಲಿನ ಜೊತೆ
ನಿಧಾನವಾಗಿ ಸಾಗುತ್ತಿದ್ದೇನೆ...ಪಕ್ಕದಲ್ಲೇ ಒಂದು ಗೆಳೆಯರ ಗುಂಪು.ಒಂದಷ್ಟು ಜನ ಹುಡುಗರು, ಒಂದಿಷ್ಟು ಹುಡುಗಿಯರು..,ಅವರು ಕೂಡ ನನ್ನ ಹಾಗೆ ಟ್ರಿಪ್ ಹೋಗುತ್ತಿರಬಹುದು,ಆದರೆ ನಾನು ಒಬ್ಬನೇ,ಅವರು ಗುಂಪಿನಲ್ಲಿದ್ದಾರೆ...
ಸ್ವಲ್ಪ ಸಮಯದ ನಂತರ ಒಬ್ಬ ಹುಡುಗ ಪಕ್ಕದಲ್ಲಿದ್ದ ಹುಡುಗಿಗೆ ಕೈ ಸಂಜ್ಞೆ ಮಾಡಿ ಕ್ಯಾಮೆರ ಹಿಡಿದು ಹೊರಟ,ಜೊತೆಯಲ್ಲಿ ಎಲ್ಲರೂ ಬಾಗಿಲ ಬಳಿ ಹೋದರು,ಕೊನೆಗೆ ಉಳಿದಿದ್ದು ಒಬ್ಬ ಹುಡುಗ ಮತ್ತು ಹುಡುಗಿ,ಎದುರು ಬದುರು ಸೀಟಿನಲ್ಲಿ...ಬೇರೆ ಯಾರೂ ಇಲ್ಲ...
"ಸುಷ್ಮಾ,ಒಂದು ಮಾತು ಕೇಳಲಾ ?"
"ಹಾ..ಕೇಳು "ಎಂದು ಹೇಳುವಂತೆ ಕಣ್ಣಲ್ಲೇ ಸಂಜ್ಞೆ ಮಾಡಿದಳು...
"ಅಲ್ಲ,ನಾನು ನಿನ್ನ ತುಂಬ ಇಷ್ಟ ಪಡ್ತೀನಿ,ನಾನು ನಿನ್ನನ್ನ ತುಂಬ ಪ್ರೀತಿಸ್ತೀನಿ,ನಾವಿಬ್ಬರು ಒಟ್ಟಿಗೆ ಬೆಳೆದಿದ್ದೇವೆ,ಆದರೆ ನೀನು ನನ್ನನ್ನ ಒಪ್ಪಿಕೊಳ್ಳಲೇ ಇಲ್ಲ ? ಅವನನ್ನು ಮದುವೆ ಆಗೋಕ್ಕೆ ಒಪ್ಪಿಕೊಂಡೆ " ಅಂತ ಮುಖ ಗಂಟು ಹಾಕಿಕೊಂಡೆ ಕೇಳಿದ.
"ನೋಡು ಅಜಯ್,ಒಬ್ಬ ಶಿಲ್ಪಿ ಒಂದು ದೇವಸ್ಥಾನ ಕಟ್ಟಬೇಕಾದರೆ ಒಂದೇ ಗುಡ್ಡದಿಂದ ಬಂಡೆಗಳನ್ನು ತರುತ್ತಾನೆ,ಆದರೆ ಅವನು ಅದರಲ್ಲಿ ಒಂದನ್ನು ಮಾತ್ರ ದೇವರ ವಿಗ್ರಹ ಮಾಡುವುದಕ್ಕೆ ಬಳಸಿಕೊಳುತ್ತಾನೆ.ಮಿಕ್ಕ ಕಲ್ಲುಗಳನ್ನು ಕಂಬ ಅಥವಾ ದೇವಸ್ಥಾನದ ಹೊರಗಡೆ ಮೆಟ್ಟಿಲು ಮಾಡುವುದಕ್ಕೆ ಉಪಯೋಗಿಸುತ್ತಾನೆ... ಆ ವಿಗ್ರಹ ಆಗೋ ಕಲ್ಲಿಗೆ ಅ ಪುಣ್ಯ ಇರುತ್ತೆ..ಅಷ್ಟೇ...ಅದೇ ತರಹ ಈ ವಿಷಯದಲ್ಲಿ ನಂದೂ ಆಯ್ಕೆ ಅಷ್ಟೇ !!!"
"ಹಾಗಾದ್ರೆ ನಾsssssssssssss... " 'ಮೆಟ್ಟಿಲಿಗೆ ಸಮಾನನ?' ಅಂತ ಅವನು ಹೇಳಿ ಮುಗಿಸುವ ಮೊದಲೇ,ಕತ್ತನ್ನು ಸಲ್ಪ ಎಡಕ್ಕೆ ಬಾಗಿಸಿ 'ಇರಬಹುದೇನೋ ?' ಎನ್ನೋ ಭಾವದಲ್ಲಿ ಮುಖ ಮಾಡಿದಳು...
ರೈಲು ಕಿಲೋ ಮೀಟರ್ ಉದ್ದದ ಸುರಂಗದೊಳಗೆ ಹೊಕ್ಕಿದೊಡನೆ ಭೋಗಿ ಒಳಗೆ ಕೂಡ ಕತ್ತಲು ಆವರಿಸಲು ಶುರು ಆಯಿತು,ಅದೇ ರೀತಿ ಅವನ ಭಾವದಲ್ಲಿ ಕೂಡ....