Monday, November 28, 2011

ಇವ್ರು ಇದ್ದಾರಲ್ಲ........

ಇವ್ರು ಇದ್ದಾರಲ್ಲ ಇವ್ರು.ಈ LIC Agent ಗಳು,ಅದೇನ್ ಕಾಟ ಕೊಡ್ತಾರೋ ನಾ ಕಾಣೆ.ನಾವ್ ಸತ್ತ ಮೇಲೆ ,ನಾವು ಕೂಡಿಟ್ಟಿದ್ದ ಹಣವನ್ನು ಬೇರೆಯವರಿಗೆ ಕೊಡಿಸೋ ಜವಾಬ್ದಾರಿ ಇವರದು..ಸಾಲ ತಗೊಂಡು ಕಣ್ಣು ತಪ್ಪಿಸಿ ಓಡಾಡುವ ಹಾಗೆ,ಇವರ ಕಣ್ಣು ತಪ್ಪಿಸಿ ಓಡಾಡ ಬೇಕಾದ ಪರಿಸ್ಥಿತಿ ಬಂದಿದೆ.. ಈ ಸ್ಥಿತಿ ನನಗೆ ಮಾತ್ರ ಅಂದು ಕೊಂಡಿದ್ದೆ,ನನ್ನ ಎಷ್ಟೋ ಸ್ನೇಹಿತರಿಗೆ ಇದೆ ರೀತಿ ಪ್ರಾಣ ಹಿಂಡುತ್ತಿದ್ದಾರಂತೆ...

ಅದೇನ್ ಆಯಿತು ಅಂದ್ರೆ,ಅದೊಂದು ದಿನ ನಮ್ಮೂರಿನ ಬ್ಯಾಂಕ್ ನಲ್ಲಿ ನನ್ನ ಎಜುಕೇಶನ್ ಲೋನ್ ಕಟ್ಟಿ ಹೊರಗಡೆ ಬಂದೆ ,ಅಲ್ಲೊಬ್ರು ಪಾರ್ಟಿ ಸಿಕ್ಕಿದರು...ನಾನು ಹೈ ಸ್ಕೂಲ್ಗೆ  ಹಳೇಬೀಡಿನಿಂದ ಬೇಲೂರಿಗೆ ಹೋಗುತ್ತಿದ್ದಾಗ ಅವರ ಮಗ ನಮ್ಮ ಸ್ಕೂಲಿನಲ್ಲಿ  ಪ್ರೈಮರಿ ಓದುತ್ತಿದ್ದ..  ಆಗಾಗಿ ಅವನನ್ನು ಕರೆದುಕೊಂಡು ಹೋಗುವುದು,ಬರುವುದು ಕೆಲವು ಹೊಣೆಗಳು ನಮ್ಮ ಮೇಲಿತ್ತು...ವಾರಕ್ಕೆರಡು ದಿನ ಕಬಾಬ್ ತಿಂದು ನನ್ನ ಹತ್ತಿರ ಬದು ಅಣ್ಣ ನಮ್ಮಪ್ಪಂಗೆ ಹೇಳ್ಬೇಡಿ ಅಂತ ಹೇಳ್ತಿದ್ದ...ನನಗೆ ಅಲ್ಲಿ ಸಿಕ್ಕಿದ್ದು ಅವನ ತಂದೆ...ಸರಿ ಯಾರದೋ ಜೊತೆ ಮಾತಾಡ್ತಾ ಇದ್ದವರು ನನ್ನನ್ನು ನೋಡಿ ಮಾತಾಡಿಸಿದರು...ಜೊತೆಯಲ್ಲಿದ್ದವರಿಗೆ ನನ್ನನ್ನು ಪರಿಚಯ ಮಾಡಿಕೊಟ್ಟರು .ಅವರು ಹೋದ ಮೇಲೆ ಎಲ್ಲಿ ಇರುವುದು,ಎಲ್ಲಿ ಕೆಲಸ ಮಾಡುತ್ತಿರುವುದು ಎಲ್ಲ ಉಭಯ ಕುಶಲೋಪರಿ ಆದ ಮೇಲೆ ತನ್ನ ಮಗನ ಬಗ್ಗೆ ಹೇಳಿ ಹೆಗಲ ಮೇಲೆ ಕೈ
ಹಾಕಿಕೊಂಡು ಟೀ ಕುಡಿಯಣ ಬಾ ಅಂತ ಕರ್ಕೊಂಡು ಹೊರಟರು...ಹೆಗಲ ಮೇಲೆ ಕೈ ಹಾಕಿದಾಗಲೇ ಎಲ್ಲೋ ಏನೋ ಎಡವಟ್ಟು ಆಗ್ತಿದೆ ಅನ್ಕೊಂಡೆ...ಅಲ್ಲ ಎಲೈಸಿ ಗಿಲ್ಲೈಸಿ ಮಾಡ್ಸಿದ್ಯೋ ಇಲ್ವೋ,ಇಲ್ಲ ಅಂದ್ರೆ ಮಾಡ್ಸು ನನ್ನ ಹತ್ತಿರಾನೆ ಅಂದ್ರು... ಒಹ್ ಇದಾ ವಿಷ್ಯ ಅಂತ ನಮ್ಮ ಅಪ್ಪನೆ  ಕಟ್ತವ್ರೆ..ಮತ್ತಿನ್ಯಾಕೆ ಅಂದೇ... ಅಲ್ದೆ ಆಫಿಸಿನಲ್ಲಿ ಬೇರೆ ಇದೆ ಅಂದೇ...ಅಯ್ಯೋ ಅದೆಲ್ಲ
ಪ್ರೈವೇಟ್,ಇದು lic ದು ಒಂದು ಮಾಡ್ಸು ಅಂದ್ರು...ಮಾಡ್ಸನ.ಸ್ವಲ್ಪ ಈ ಲೋನ್ ಮುಗಿದು ಬಿಡ್ಲಿ...ಆಮೇಲೆ ಮಾಡಿಸ್ತೀನಿ  ಅಂದೆ... ಇವಾಗ್ಲೆ ಒಳ್ಳೆ ಒಳ್ಳೆ ಸ್ಕೀಮ್ ಗಳು ಇದೆ ನೋಡು ಅಂತ ಮತ್ತೆ ಹೇಳಿದ್ರು . ಯಾಕೋ  ಬಿಡೋ ಹಾಗೆ ಕಾಣಲಿಲ್ಲ.......ಇರ್ಲಿ ತಾಳಿ, ಮಾಡಿಸ್ತೀನಿ ಅಂತ ಹೇಳಿ ಬೇಗ ಹೋಗಬೇಕು ಅಂತ ಹೊರಟೆ ...ಸರಿ ನೆಕ್ಸ್ಟ್  ಟೈಮ್ ಬಂದಾಗ ನಂಗೆ ಫೋನ್ ಮಾಡು
ಅಂದಾಗ ಸರಿ ಸರಿ ಅಂತ ಕಾಲು ಕಿತ್ತಿದ್ದು  ಆಯಿತು......ಅದಾದ್ ಮೇಲೆ ಒಂದಿನ ಅವರ ಹೆಂಡತಿ ಸಿಕ್ಕಿ ನಮ್ಮ ಮನೆಯವರು ಹೇಳ್ತಿದರು  ನೀನ್ ಪಾಲಿಸಿ ಕೊಡ್ತಿಯ ಅಂತ,ಇನ್ನು ಕೊಟ್ಟಿಲ್ವಂತೆ ಅನ್ನಬೇಕಾ..ಕೊಡ್ತೀನಿ ಕೊಡ್ತೀನಿ ಅಂತ ಹೇಳಿ ಅದು ಇದು ಮಾತಾಡಿ ತಪ್ಪಿಸಿಕೊಂಡಿದ್ದಾಯಿತು...
-------------------------------------
ಇನ್ನೊಬ್ಬ ಸ್ನೇಹಿತ ನನ್ನ ಸ್ಕೂಲ್ ಮೇಟ್, ಪಿಯುಸಿಗೆ ರಾಷ್ಟ್ರ ಗೀತೆ ಹಾಡಿ "ಇಲ್ಲಿ ಸಲ್ಲದವನು ಅಲ್ಲಿಯೂ ಸಲ್ಲನಯ್ಯ" ಅನ್ನೋ ಹಾಗೆ ೩ -೪ ಬಿಸಿನೆಸ್ ಮಾಡಿ ಕೈ ಸುಟ್ಟುಕೊಂಡು ಕೊನೆಗೆ ಎಲೈಸಿ ಏಜೆಂಟ್ ಆಗಿದ್ದಾನೆ ...ಸೈಡ್ ಬಿಸಿನೆಸ್ಸ್ ಅಷ್ಟೇ... ...  ...
ಅದಿನ್ನು ನಾನು ಕಾಲೇಜಿನಲ್ಲೇ ಇದ್ದೆ,ಹೀಗೆ ಊರಿಗೆ ಹೋದಾಗ ಇಬ್ಬರು ಭೇಟಿ ಮಾಡಿ ತೋಟ ಗದ್ದೆ ಎಲ್ಲ ಸುತ್ತಾಡೋ ಪರಿ ಪಾಠ,ಪ್ರತಿ ಸಾರಿ ಅಂತೆ ಅವನಿಗೆ ಫೋನ್ ಮಾಡಿ ಮನೆಗೆ ಬರ್ತಿದ್ದೀನಿ ಅಂದ್ರೆ  "ಏ ಇಲ್ಲ,ನನಗೆ exam ಇದೆ" ಅಂದ...,ಒಹ್ ಪಿಯುಸಿ ಕಟ್ಟಿದ್ದಾನೆ ಅನ್ಕೊಂಡು ಇರ್ಲಿ ಅವನ ಅಪ್ಪ ಅಮ್ಮನ್ನಾದ್ರು ಮಾತಾಡಿಸಿಕೊಂಡು ಬರಣ ಅಂತ  ಅವನ ಮನೆಗೆ ಹೋದ್ರೆ ದಪ್ಪದೊಂದು ಬುಕ್ ಇಟ್ಕೊಂಡು ಓದ್ತಿದ್ದ...ನಂಗೆ ನಾಳಿದ್ದು exam ಇದೆ... ಅದಾದ್  ಮೇಲೆ ಎಲ್ಲಾದರು ಹೋಗಣ..ಇವತ್ತು ಬೇಡ ಅಂದ...ಸರಿ ಏನ್ exam ಅಂತ ಕೇಳಿದ್ರೆ LIC ಏಜನ್ಸಿ ತಗಳಕ್ಕೆ ಬರಿತ್ತಿದ್ದಿನಿ... ಮೈಸೂರಿನಲ್ಲಿ ಇದೆ ಅಂದ.. ಸರಿ ದೇವ್ರು ಒಳ್ಳೇದ್ ಮಾಡ್ಲಿ..ಇದನ್ನಾದ್ರು ಪಾಸ್ ಆಗು ಅಂತ ಹೇಳಿ ಅವನ ಮನೇಲಿ ಮಜ್ಜಿಗೆ ಕುಡಿದ ಹೊರಟೆ... ಹಿಂದೆ ಇಂದ ಲೇ ಮಗನೆ ಕೆಲಸ ಸಿಕ್ಕಿದ ಮೇಲೆ ನನಗೆ ಒಂದು ಪಾಲಿಸಿ ಕೊಡದೆ ಹೋಗು,ಕತ್ತ್ ಹಿಚಿಕಿ ಸಾಯಿಸ್ತಿನಿ ನಿನ್ನ ಅಂದ... ೩ ಮೆಣಸಿನ ಕಾಯಿ ಉದ್ದ ಇಲ್ಲ.. ನನ್ನ ಪಕ್ಕ ನಿಂತರೆ ನನ್ನ ಎದೆ ಮಟ್ಟಕ್ಕೆ ಬರಲ್ಲ, ಹಿಂಗೆ ಅವಾಜ್ ಹಾಕ್ತಿಯ ಅಂತ ಅನ್ಕೊಂಡು ಹೋಗ್ಲ ಲೋ...ನೀನ್ ಪಾಸ್ ಆಗಲ್ಲ ಅಂದು ಮನೆಗೆ ಹೊರಟೆ... ಕೊನೆಗೆ ಅದೇಗೆ ಪಾಸ್ ಆದ್ನೋ ಅವನ ಮಂದೆವರು ಮಲ್ಲಪ್ಪಂಗೆ ಗೊತ್ತು...ನನಗೆ ಕೆಲ್ಸನು ಸಿಕ್ಕಿಲ್ಲ.ಇನ್ನು ಓದ್ತಾ ಇದ್ದೆ,,ಅವನಿಗೆ ಇನ್ನು  ಏಜೆನ್ಸಿ ಸಿಕ್ಕಿಲ್ಲ..ಆಗ್ಲೇ ನನ್ನಿಂದೆ ಬಿದ್ದಿದ್ದ.... ಈಗಲೂ ಊರಿಗೆ ಹೋದ್ರೆ ಭೇಟಿ ಮಾಡೇ ಮಾಡ್ತೀನಿ...ಅವನು ಮತ್ತೆ ಪೀಡ್ಸೆ ಪೀಡಿಸ್ತಾನೆ.. ಭೇಟಿ ಮಾಡದೆ ವಿಧಿ ಇಲ್ಲ... ಜಿಗರಿ ದೋಸ್ತ್ ಬೇರೆ...ನನ್ನ ಕಷ್ಟ ನೋಡಿ ಅವನೇ ಸುಮ್ಮನಾಗಿದ್ದಾನೆ ಇವಾಗ ...
---------------------------------
ಹಿಂಗೆ ಒಂದ್ಸಲಿ ತಿಪಟೂರ್  ಹತ್ತಿರ ನನ್ನ ನೆಂಟರ ಮನೆಗೆ ಹೋಗಿದ್ದೆ...ವಾಪಸ್ ಬರಬೇಕಾದರೆ ಎಷ್ಟೋ ಹೊತ್ತು ಕಾದರು ಬಸ್ ಆಗ್ಲಿ  ಆಟೋ ಆಗ್ಲಿ  ಬರಲಿಲ್ಲ...ಆಗ್ಲೇ ನನ್ನ ಟ್ರೈನ್ ಗೆ ಲೇಟ್ ಆಗ್ತಿತ್ತು..ನನ್ನನ ಬಿಡಕ್ಕೆ ಬಂದಿದ್ದ ನನ್ನ ಕಸಿನ್ ,ಬೈಕ್ನಲ್ಲಿ ಬರುತ್ತಿದ್ದ ಅದೇ ಊರಿನ ಒಬ್ಬರನ್ನು ನಿಲ್ಲಿಸಿ ನಮ್ಮ ಅಣ್ಣನ್ನ ತಿಪಟೂರಿಗೆ ಬಿಡಿ ಅಂಕಲ್ ಅಂದ್ಲು..ಸರಿ ಅವರು ಕೂಡ ಅಲ್ಲಿಗೆ ಹೋಗ್ತಿದ್ರು,ನಮ್ಮ ಮನೆಗೆ ಹೋಗಿ ಒಂದು ಪತ್ರ ಇದೆ ಅದನ್ನ ತಗೊಂಡು ಹೋಗಬೇಕು ಅಂದ್ರು..ನಾನು ಸಮ್ಮತಿಸಿದೆ...ಅವರ ತೋಟದ ಮನೆಗೆ ಹೋಗಿ ಹೊರಟೆವು,ಸುತ್ತ ತಂತಿ ಭೇಲಿ ತೋರಿಸಿ ಇದಷ್ಟು ನಮ್ಮದೇ ತೋಟ ಅಂದ್ರು ...ಏನಿಲ್ಲ ಅಂದ್ರು ಹತ್ತು ಏಕರಿಗಿಂತ ಜಾಸ್ತಿ ಇತ್ತು..ಮನೆ ಪಕ್ಕ ಬೇರೆ ಅಡಕೆ ಮರದ ತುಂಡುಗಳನ್ನು ಸುತ್ತ ಕಟ್ಟಿ  ಕಾಯಿಗಳನ್ನು ಕೊಬ್ಬರಿಗೆ ಹಾಕಿದ್ದರು ...ಒಳ್ಳೆ ಕುಳ ಅಂತ ಅನ್ನಿಸ್ತು... ಅಷ್ಟೊತ್ತಿಗಾಗಲೇ ನನ್ನ ಉರು,qualificaton ,ಕೆಲಸ ಎಲ್ಲಾದರ ಬಗ್ಗೆ ಕೇಳಿದ್ರು..ನನ್ನ ಮಗನು MBA ಮಾಡಿದ್ದಾನೆ... ಅಲ್ಲೇ ಬೆಂಗಳೂರಿನಲ್ಲಿ ಸ್ವಲ್ಪ ದಿನ ಕೆಲಸ ಮಾಡಿದ...ಆಮೇಲೆ ಯಾಕೋ ಭೆಜಾರ್ ಆಗಿ ಇಲ್ಲೇ lecture ಆಗಿದ್ದಾನೆ...ಹೌದಾ ಅಂದೇ.. ದೊಡ್ಡ ಮಗಳು ಎಂ.ಫಿಲ್ ಆಗಿ,ಅವಳು ಕೆಲಸ ಮಾಡ್ತಿದ್ಲು,ಮದ್ವೆ ಮಾಡಿದ್ವಿ... ಇಬ್ಬರೇ ಮಕ್ಕಳ ಅಂದೇ...ಇನ್ನೊಬ್ಳು ಇದ್ದಾಳೆ...ಅವಳು ಈ ವರ್ಷ ಎಂ.ಎಸ್ಸಿ ಸೇರಿದಳು,ಬೆಂಗಳೂರ್ ಯುನಿವರ್ಸಿಟಿನಲ್ಲಿ....ಫ್ಯಾಮಿಲಿ ವಿಷ್ಯ ಎಲ್ಲ ಹೇಳ್ತಾವ್ರೆ ಏನಪ್ಪಾ ಇದು ಮಗಳನ್ನು ಏನಾದ್ರೂ ಕೊಟ್ಟು ಸಂಭಂದ ಗಿಮ್ಬಂದ ಕುದ್ರಿಸಿ ಕೊಳ್ಳಕ್ಕೆ ನೋಡ್ತಿದ್ದಾರ ಅಂತ ಮನಸಲ್ಲೇ ಅನ್ನಿಸ್ತು.. ಇರ್ಲಿ ಅನ್ಕೊಂಡು ಎಂ.ಎಸ್ಸಿ ನಲ್ಲಿ ಯಾವ ಡಿಪಾರ್ಟಮೆಂಟ್ ಅಂದೇ... ಮ್ಯಾಥ್ಸ್ ಅಂದ್ರು.. ಸರಿ..ಸ್ವಲ್ಪ ದೂರ ಬಂದ ಮೇಲೆ,ನೀವು lic  ಪಾಲಿಸಿ ಮಾಡ್ಸಿದ್ದಿರಾ ಅಂದ್ರು.. ಅಲೆಲೆಲೆಲೇ ಇದಾ ವಿಷ್ಯಾ...ಇವಾಗ ಬಂದ್ರು ನೋಡಿ ಟ್ರಾಕ್ ಗೆ ಅನ್ಕೊಂಡು..ಆಫಿಸಿನಲ್ಲೇ ಇದೆ ಅಂದೇ..ಅಯ್ಯೋ ಅದು ಬಿಡಿ,ನೀವು ಪದೇ ಪದೆ ಕಂಪನಿ ಚೇಂಜ್ ಮಾಡ್ತಿರ್ತಿರಾ,ಅದೆಲ್ಲ ಪ್ರಾಬ್ಲಂ,ಒಂದು LIC ಪಾಲಿಸಿ ಮಾಡಿಸ್ಬಿಡಿ... ಸುಮ್ನೆ ಟ್ಯಾಕ್ಸ್ ಎಲ್ಲ ಜಾಸ್ತಿ ಯಾಕ್ ಕಟ್ಟುತ್ತಿರಾ... ನಿಮಗೆ ಇದಿದ್ರೆ ಟ್ಯಾಕ್ಸ್ excemption ಆಗುತ್ತೆ...ಇದನ್ನೆಲ್ಲಾ ನಿಮಗೆ ಹೇಳಿ ಕೊಡಬೇಕಾಗಿಲ್ಲ ಅಲ್ವ? ಅಂದ್ರು.. ಅದು ಹೌದು ಇವಾಗ ಸ್ವಲ್ಪ ಟೈಟ್ ಇದೆ ದುಡ್ಡು ಆಗಾಗಿ,ಇಲ್ಲಿಗೆನ್ ಅವಾಗಾವಾಗ ಬರ್ತಿರ್ತೀನಿ ಮಾಡಿಸ್ತೀನಿ ಬಿಡಿ...ಸರಿ ಏನಿಲ್ಲ ನೀವು ನಿಮ್ಮ ಮಾರ್ಕ್ಸ್ ಕಾರ್ಡ್,ವೋಟರ್ ಐಡಿ ಕೊಟ್ಟರೆ ಸಾಕು ಅದರ ಜೊತೆಗೆ ಫೋಟೋ  ಅಂದ್ರು..ಸರಿ ಬಿಡಿ ಮುಂದಿನ ಸಾಲಿ ಬಂದಾಗ ನಿಮ್ಮನ್ನ ಭೇಟಿ ಮಾಡ್ತೀನಿ ಅನ್ನುವಷ್ಟೊತ್ತಿಗೆ ತಿಪಟೂರಿಗೆ ಬಂದಾಗಿತ್ತು..ನನ್ನ ಮೊಬೈಲ ನಂಬರ ತಗೊಂಡು ಅವರ ವಿಸಿಟಿಂಗ್ ಕಾರ್ಡ್ ಕೊಟ್ಟು ಹೊರಟರು.. ಅಬ್ಬ ಬಿಸೋ ದೊಣ್ಣೆ ಹೇಗೋ ತಪ್ಪಿಸಿ ಕೊಂಡಿದ್ದಾಯಿತು ಅಂತ ನಿಟ್ಟುಸಿರು  ಬಿಟ್ಟೆ....
----------------------------

ಹೀಗೆ ನಮ್ಮ ಆಂಟಿ ಒಬ್ಬರ ಮನೆಗೆ ಹೋದಾಗ ಒಂದು ಬುಕ್ ತಗಂಡು ನನ್ನ ಎಲ್ಲ ಮಾಹಿತಿ ಕೇಳಿದ್ರು,ಹುಟ್ಟಿದ ದಿನ,ಕಂಪನಿ ಹೆಸರು ಎಲ್ಲ... ಆಮೇಲೆ ಇನ್ನೊಂದ್ ಬುಕ್ ತಗಂಡು ಬಂದು ಕೂತು ಎಲ್ಲ ಪಾಲಿಸಿಗಳ ಬಗ್ಗೆ ಹೇಳಕ್ಕೆ ಶುರು ಮಾಡಿದ್ರು...ನನಗೆ ಯಾಕೆ ಹೇಳ್ತಿದ್ದಾರೆ ಅಂತ ಯೋಚನೆ ಮಾಡ್ತಿದ್ರೆ,ನೀನು ಇದು ಕಟ್ಟು..ಇಷ್ಟಿಷ್ಟು ಕಂತು,ಇಷ್ಟಿಷ್ಟು ವರ್ಷ ಅಂತ ಅವರೇ ಡಿಸೈಡ್ ಮಾಡ್ಬಿಟ್ರು... ಹೀಗ್ ಬೇಡ ಸುಮ್ನಿರ್ರಿ ನನ್ನ ಎಲ್ಲ ತಾಪತ್ರೆಗಳನ್ನು ಮುಗಿಸ್ಕೊತಿನಿ ಮೊದಲು ಅಂದ್ರು ಕೇಳಂಗಿಲ್ಲ,ಇನ್ನೆರಡು ತಿಂಗಳಲ್ಲಿ ನಿನ್ನ ಹುಟ್ಟಿದ ದಿನ ಇದೆ,ಅದಾದಮೇಲೆ ನೀನು ಪಾಲಿಸಿ ಮಾಡ್ಸಿದ್ರೆ ಕಂತು ಜಾಸ್ತಿ ಕಟ್ಟಬೇಕಾಗುತ್ತೆ ಅಂತೆಲ್ಲ ಹೇಳಿ ಅವರ ಸೀನಿಯರ್ ಯಾರೋ ಒಬ್ಬರಿಗೆ ಫೋನ್ ಬೇರೆ ಮಾಡಿ ಕೊಟ್ರು...ಅವರು ಕೂಡ ಈ ಪಾಲಿಸಿ ಚೆನ್ನಾಗಿದೆ ಅಂತ ಯಾವೊದೋ ಹೇಳಿದ್ರು,ಇದರಲ್ಲಿ ಲೈಫ್ ರಿಸ್ಕ್ ಕೂಡ ಇದೆ,ಜೊತೆಗೆ ಇದು ದುಡ್ಡು ಮೆಚುರ್  ಆದ ಮೇಲೆ  ಲೈಫ್ ಟರ್ಮ್ ಇರತ್ತೆ ಅಂತ... ಲೈಫ್ ರಿಸ್ಕ್ ಅಂದ್ರೆ ನಾವು ಸತ್ತರೆ ನಮ್ಮ ನಾಮಿನಿಗೆ ದುಡ್ಡು ಹೋಗುತ್ತಂತೆ...ಬೇರೆ ಎಲ್ಲ ಪಾಲಿಸಿಗಳು ಅದರ term ಮುಗಿದ ಮೇಲೆ ಮುಗಿದ ಹಾಗೆ,,ಆದರೆ ಇದು ಟರ್ಮ್ ಮುಗಿದು ನಾವು ಸಾಯೋವರ್ಗೂ ಇರುತ್ತೆ...ಒಂದು ಫಾರಂ ತಗಂಡು ಅದಕ್ಕೆ ನನ್ನ ಸೈನ್ ಹಾಕಿಸ್ಕೊಂದ್ರು,ಹೇಗಾದ್ರು ಮಾಡಿ ತಪ್ಪಿಸ್ಕೋ ಬೇಕು ಅಂತ,ಥೋ ಇವಾಗ ದುಡ್ಡಿಲ್ಲ,ಇನ್ನೊಂದ್ ಸ್ವಲ್ಪ ದಿನ ಬಿಟ್ಟು ಮಾಡಿಸ್ತೀನಿ ಬಿಡ್ರಿ ಅಂದ್ರೆ,ಈ ನಾನು ಈ ಕಂತು ಕಟ್ಟಿರ್ತೀನಿ,ನೀನು ನಿಧಾನಕ್ಕೆ ಕೊಡು ಅಂದ್ಬಿಟ್ಟು,ಸ್ವಲ್ಪ ದಿನ ಆದ ಕೂಡಲೇ ದುಡ್ಡು ಬೇಕಿತ್ತು, ಈ ತಿಂಗಳು ಕೊಡು ಅಂತ ಕೇಳ್ಬೇಕಾ ?ಬೇಡ ಬೇಡ ಅಂದ್ರು ದುಡ್ಡು ಕಟ್ಟಿ ಇವಾಗ ನನ್ನ ಬುಡಕ್ಕೆ ಕೊಡಲಿ ಪೆಟ್ಟು...
---------------------------------------------
ಇನ್ ಕೆಲವರು ಇದ್ದಾರೆ ಅವರು ಹೇಗೆ ಅಂದ್ರೆ ಸಮಯ ಸಾಧಕರು... ಹೆಗೇಗ್ ಟೈಮ್ ಟು ಟೈಮ್ ಆಟ ಆಡ್ತಾರೆ ಅಂದ್ರೆ ಹೇಳಕ್ಕೆ ತೀರದು..ಹೊಸ ವರ್ಷ ಹತ್ತಿರ ಬಂತು ಅಂದ್ರೆ ಸಾಕು ಜೊತೇಲಿ ಒಂದಿಷ್ಟು ಡೈರಿ ಗಳು ಮತ್ತೆ ಕ್ಯಾಲೆಂಡರ್ ಗಳನ್ನ ಇಟ್ಕೊಂಡಿರ್ತಾರೆ.... ಅಪರೂಪಕ್ಕೆ ಸಿಕ್ಕಿದ್ರೆ ಸಾಕು ಅವರಿಗೆ ಒಂದು ಡೈರಿ ಕೊಟ್ಟು "ಎಷ್ಟ್ ದಿನದಿಂದ ಹುಡುಕಿದೆ ನಿಮ್ಮನ್ನ,ಅವತ್ತು ಸಂತೆಲೂ  ಸಿಗಲಿಲ್ಲ'ಹೀಗೆ ಒಂದಿಷ್ಟು ಬುರುಡೆ ಕಚ್ಚಿ ಹೋಗುತ್ತಾರೆ...ಮತ್ತೆ ಇನ್ ಕೆಲವರು ಹೇಗೆ ಅಂದ್ರೆ ಸುತ್ತ ಮುತ್ತ ಊರುಗಳಲ್ಲಿ ಯಾರದಾದರು  ಮದ್ವೆ ಆಗ್ತಿದೆ ಅಂದ್ರೆ ಮೊದಲೇ ಬುಕ್ ಮಾಡ್ಕೋ ಬಿಡ್ತಾರೆ,ಅವರ ಹೆಂಡತಿಯ ಹೆಸರಲ್ಲಿ ಒಂದು ಪಾಲಿಸಿ ತಗಳಕ್ಕೆ..ಆಮೇಲೆ ಸುತ್ತ ಮುತ್ತ ಊರಲ್ಲಿ ಯಾರಿಗಾದರು ಕೆಲಸ ಸಿಗ್ತು ಅಂದ್ರೆ ಅವರ ಹಿಂದೆ ದೊಂಬಾಲು ಬೀಳುತ್ತಾರೆ... ಈ ಅನುಭವ ನಂಗೆ ಮಾತ್ರ ಅನ್ಕೊಂಡಿದ್ದೆ,ಆಮೇಲೆ ಗೊತ್ತಾಯ್ತು ನನ್ನ ಸ್ನೇಹಿತರು  ಎಷ್ಟೋ ಜನಕ್ಕೆ ಇದೆ ತರಹ ಕಾಟ ಇದೆ ಅಂತ...ಅಲ್ಲದೆ ಇವರ ಮೇಲ್ ಟಾರ್ಗೆಟ್ ಮೇಷ್ಟ್ರು  ಮೇಡಂಗಳು...ಯಾಕೆ ಅಂತ ಗೊತ್ತಿಲ್ಲ... ಅಲ್ಲದೆ ಎಲ್ಲಾದರು ಮಕ್ಕಳು ಹುಟ್ಟಿದೆ ಅಂತ ಗೊತ್ತಾದ್ರೆ ಸಾಕು, ಆ ಮಗುವಿನ ಅಪ್ಪ  ಅಮ್ಮಂಗೆ ತಲೆ ತಿಂದು ೧೮ ವರ್ಷ,೨೫ ವರ್ಷಕೀ ದುಡ್ಡು ಬರುತ್ತೆ...ಅದು ಇದು ಎಲ್ಲಾ ತಲೆಗೆ ತುಂಬಿ ಆ ಮಕ್ಕಳ ಹೆಸರಲ್ಲಿ ಒಂದು ಪಾಲಿಸಿ ಮಾಡಿಸ್ಬಿಡ್ತಾರೆ...
-------------------------------------
ಇದೆ ತರಹ ನಾನು ಈ ಜಗತ್ತಿಗೆ ಕಾಲಿಡುತ್ತಿದ್ದ ಹಾಗೆ ನನ್ನ ಹೆಸರಿಗೆ ಒಂದು ಪಾಲಿಸಿ ಮಾಡಿಸಿದರು ಒಬ್ಬ ಮಹಾಶಯರು... ಫ್ಯಾಮಿಲ ಡಾಕ್ಟರ್,ಫ್ಯಾಮಿಲಿ ಲಾಯರ್ ಇದ್ದ ಹಾಗೆ ಇವರು ಒಂದು ತರಹ ಫ್ಯಾಮಿಲಿ ಇನ್ಸುರೆನ್ಸ್ ಏಜೆಂಟ್ ಇದ್ದ ಹಾಗೆ...... ನಾನು ಹುಟ್ಟಿದ ಕೂಡಲೇ ಹೆಂಗೆ ಪಾಲಿಸಿ ಮಾಡಿಸ್ಕೊಂಡ್ರೋ ಹಾಗೆ ನನಗೂ ಮದ್ವೆ ಗಿದ್ವೆ ಆಗಿ ಮಕ್ಕಳಾದರೆ ಅದಕ್ಕೂ ಒಂದು ಪಾಲಿಸಿ ಮಾಡಿಸದೆ ಬಿಡೋ ಅಸ್ಸಾಮಿ ಅಲ್ಲ ಇವರು...ಹಿಂಗೆ ಊರಿಗೆ ಹೋದಾಗ ನಮ್ಮೂರ ಹತ್ತಿರ ಒಂದು ದೇವಸ್ಥಾನದಲ್ಲಿ ನಮ್ಮ ಬಳಗ ದಿಂದ ಒಂದು ಕಾರ್ಯಕ್ರಮ ಆಯೋಜಿಸುವ ಸಲುವಾಗಿ ನಡೆಯುತ್ತಿದ್ದ  ಮೀಟಿಂಗ್ ನಲ್ಲಿದ್ದೆ.... ಎಷ್ಟೋ ದಿನದಿಂದ ತಪ್ಪಿಸಿಕೊಂಡು ಇದ್ದೆ..ಅವತ್ತು ಅದೇಗೆ ನಾನು ಊರಿಗೆ ಬಂದಿರೋ ವಿಷಯ ಗೊತ್ತಾಯ್ತೋ  ಗೊತ್ತಿಲ್ಲ,ಮನಗೆ ಹುಡುಕಿಕೊಂಡು ಬಂದಿದ್ರು,ನಾನ್ ಮೀಟಿಂಗ್ ನಲ್ಲಿದ್ದೀನಿ ಅಂತ ನಮ್ಮ ಅಪ್ಪ ಹೇಳಿದ್ದೆ ತಡ ಅಲ್ಲಿಗೆ ಬಂದ್ರು... ಯಾರ್ ಹತ್ತಿರನೋ ಹೇಳಿ ಕಳಿಸಿ ಹೊರಗೆ ಕರಿಸ್ಕೊಂದು ಸೈನ್ ಮಾಡಿಸ್ಕೊಂಡೆ ಬಿಟ್ರು ಆ ಫಾರ್ಮ್ ಗೆ.... ಇನ್ನು ಸ್ವಲ್ಪ ದಿನ ಬಿಟ್ಟು ಮಾಡಿಸ್ತೀನಿ ಅಂದ್ರೆ ಈ ನಿಮ್ಮ ಅಪ್ಪ ಕತ್ತುತ್ತಾರಂತ ಬಿಡು ಅಂದ್ರು... ಅದೆಲ್ಲ ಆಗದ ಮಾತು ಅನ್ಕೊಂಡು  ಸಂಜೆ ಸಿಗ್ತೀನಿ ಮೀಟಿಂಗ್ ಮುಗಿದ ಮೇಲೆ ಅಂದ್ರು ಕೇಳಲಿಲ್ಲ,ಡಾಕ್ಯುಮೆಂಟ್ ಎಲ್ಲಾ ನಿಧಾನಕ್ಕೆ ಕೋಡು,ಇಲ್ಲ ಕೊರಿಯರ್ ಮಾಡು ಅಂತ ಹೇಳಿ ಹೋದರು...ನಾನು ಮೀಟಿಂಗ್ ಗೆ ಹೋಗೋ ಗಡಿಬಿಡಿ ಯಲ್ಲಿದ್ದೆ,ಆಗಾಗಿ ಅವರು ಹೇಳಿದ್ದ ಕಡೆ ಎಲ್ಲಾ ಸೈನ್ ಮಾಡಿ ಹೇಗೂ ಡಾಕ್ಯುಮೆಂಟ್ ಕೊಡಬೇಕು ಅಲ್ವ,ಅದು ಇಲ್ದೆ ಏನು ಮಾಡಕ್ಕಾಗಲ್ಲ ಅಂತ... ಕೊನೆಗೆ ಎಷ್ಟೋ  ದಿನದ ತನಕ ಕಾಯ್ಸಿ ಕೊಟ್ಟಿದ್ದ್ ಆಯಿತು... ಕೊಡದೆ ಇದ್ದರೆ ಬಿಡಬೇಕಲ್ಲ ಅವರು .

ಹಿಂದಿನ ತಿಂಗಳ ಸಂಬಳ ಎಲ್ಲಾ ಖಾಲಿ ಆಗಿ ಮುಂದಿನ ತಿಂಗಳ ಸಂಬಳ ಎಲ್ಲೆಲ್ಲಿ ಎಷ್ಟು ಕಟ್ಟಬೇಕು,ನನಗೆ ಎಷ್ಟು ಉಳಿಯುತ್ತೆ ಅಂತೆಲ್ಲ ಪೂರ್ತಿ ಪ್ಲಾನ್ ಮಾಡಿ ಕೊಂಡಿರುತ್ತೀವಿ ,ಆಗ ಮನೆಯಿಂದ ಅಮ್ಮನ ಫೋನ್ "ಪಾಪ,ಪ್ರೀಮಿಯಂ ಕಟ್ಟು ,ಬಿಲ್ ಬಂದಿದೆ" ಅಂತ... ಥೋ ತ್ತರಿಕೆ ,ನಮ್ಮ ಪ್ಲಾನ್ ಎಲ್ಲ  ಆಳಾಗಿ ಹೋಯಿತಲ್ಲ ಅಂತ ತಲೆ ಚಚ್ಚಿ ಕೊಳ್ಳಬೇಕು...ಇಂಥ ಟೈಮ್ ನಲ್ಲಿ ಇವರೆಲ್ಲ ನೆನಪಾಗ್ತಾರೆ...ಇನ್ ಸ್ವಲ್ಪ ದಿನ ಬಿಟ್ಟು ಅಪ್ಪ ಫೋನ್ ಮಾಡಿ"ಮರಿ,ಇನ್ಸುರೆನ್ಸ್ ಕಟ್ಟಿದ್ಯ,ಲಾಸ್ಟ್ ಡೇಟ್ ಆಗೋದರೊಳಗೆ ಕಟ್ಟು"...ನೀವೊಬ್ರು ಕಮ್ಮಿ ಆಗಿದ್ರಿ ಅನ್ಕೊಂಡು ಸುಮ್ನಿರ ಬೇಕು ಅಷ್ಟೇ...
ಬಹುಶ ಇಂಥ ಅನುಭವಗಳು ತುಂಬ ಜನಕ್ಕೆ ಆಗಿರುತ್ತೆ...

  

Sunday, October 30, 2011

ಮತಾಂತರ !!!

ಎಂದೂ ತಪ್ಪದ ದೇವಸ್ಥಾನದ ಪೂಜೆ,ಸ್ವಾಮಿಗಳಿಗೆ ನಿಷ್ಟರಾಗಿದ್ದ ಜನ ,ಎಲ್ಲರೂ ಒಂದೊಂದು ಕೆಲಸಗಳಲ್ಲಿ ತೊಡಗಿಕೊಂಡಿದ್ದ ಜನ ಇದ್ದಂತಹ ಊರಲ್ಲಿ ಒಂದು ಹಲಗೇರಿ ಇತ್ತು..ಊರು ಇದ್ದ ಕಡೆ ಹೊಲಗೇರಿ ಎಂಬಂತೆ.ಯಾವ ಕುಲಕ್ಕೂ ಸೀಮಿತವಾಗದ ದೇವಸ್ಥಾನದಲ್ಲಿ ಮೇಲ್ಜಾತಿಯವರೇ ಪೂಜೆ ಮಾಡುತ್ತಿದ್ದರೂ,ಊರಿನ ಕುಲದಿನೆಂಟು ಜಾತಿಯವರೂ,ಹಕ್ಕಿ ಶಿಕಾರ್ರು,ಕುಕ್ಕೆ ಕೊರಮರು ಹೀಗೆ ನಾನಾ ಪಂಗಡಗಳಿಗೆ ಸೇರಿದ ಜನರು  ಅಲ್ಲಿಗೆ ಬರುತ್ತಿದ್ದರು,ಕೆಲವೊಮ್ಮೆ ಭಜನೆಗೂ ಎಲ್ಲಾ ಜನರು ಬರುತ್ತಿದ್ದರು.

ಇಂಥ ಊರಲ್ಲಿ ಇದಕಿದ್ದ ಹಾಗೆ ಹೊಲಗೇರಿಯ ಕೆಲವು ದಲಿತರ ಮನೆಗಳ ಮೇಲೆ ಶಿಲುಬೆ ಏರತೊಡಗಿತು,ಕಾರ್ತಿಕ ಮಾಸ ಮುಗಿದ ಕೂಡಲೇ ಮನೆ ಮುಂದೆ ಕ್ರಿಸ್ಮಸ್ ನಕ್ಷತ್ರಗಳು  ಮೀನುಗ  ತೊಡಗಿತು.ಆ ಕಾಲೋನಿಯ ಎಷ್ಟೋ ಜನರು ದೇವಸ್ಥಾನಕ್ಕೆ ಬರುವುದನ್ನು ನಿಲ್ಲಿಸಿದರು.ಶಿವ,ರಾಮ,ಹರಿಯ ಭಜನೆ ಮಾಡುತ್ತಿದ್ದವರು ಏಸು ಪ್ರಭು ಎಂದು ಗುನುಗುನಿಸಲು ಶುರು ಮಾಡಿದರು.ಇದೆಲ್ಲರ ಹಿಂದಿನ ರೂವಾರಿ,ದಲಿತರ ಕಾಲೋನಿಯ ಏಕೈಕ ಡಿಗ್ರಿ ಪಧವಿದರ ಸುರೇಶ ಮತ್ತು ಗ್ರಾಮ ಪಂಚಯ್ತೀ ಸದಸ್ಯೆಯೂ ಆದ,ತನ್ನ ತಾಯಿ ವಿಧವೆ ನೀಲಮ್ಮ.

ಕೆಲವು ಪಂಗಡಗಳ ಜನರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದರು,ಅದನ್ನೂ ಅರ್ಧಕ್ಕೆ ಮೊಟಕುಗೊಳಿಸಿ ತಮ್ಮ ಜೊತೆ ಕೆಲಸಕ್ಕೆ ಹಾಕಿಕೊಳ್ಳುತ್ತಿದ್ದರು.ಆದರೆ ಕೆಲವು ಮೇಲ್ಜಾತಿ ವರ್ಗದವರು ಮಾತ್ರ ಹೆಚ್ಹಾಗಿ ಓದಿಕೊಂಡಿದ್ದರು.ಇಂಥ ಸನ್ನಿವೇಶದಲ್ಲಿ ತಂದೆ ಕಳೆದುಕೊಂಡ ಸುರೇಶ ಮಾತ್ರ ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳದೆ ಡಿಗ್ರಿ ಓದಲು ಪಟ್ಟಣಕ್ಕೆ ಹೋಗುತ್ತಾನೆ.

ಒಂದು ಕ್ರೈಸ್ತ ಮಿಷನರಿ ನಡೆಸುತ್ತಿದ್ದ ಉಚಿತ ಹಾಸ್ಟೆಲ್ಲಿನಲ್ಲಿ ಸೇರುತ್ತಾನೆ,ಬೇರೆ ಕಡೆ ದುಡ್ಡು ಕಟ್ಟುವ ಶಕ್ತಿ ಇಲ್ಲದ ಕಾರಣ..ಹೀಗೆ ಅವನ ಓದು ಸಾಗುತ್ತಿದ್ದಾಗ,ಅವನ ಕಾಲೇಜಿನಲ್ಲೇ ಓದುತ್ತಿದ್ದ ಹಾಸ್ಟೆಲ್ಲಿನ ಪಕ್ಕದಲ್ಲೇ ಇದ್ದ ಚರ್ಚಿಗೆ ಪ್ರತಿ ಭಾನುವಾರ ಬರುತ್ತಿದ್ದ ಹುಡುಗಿಯ ಪರಿಚಯವಾಯಿತು.ಮೊದಮೊದಲು ನೆಪವೊಡ್ಡಿ ಚರ್ಚಿಗೆ ತಪ್ಪಿಸಿಕೊಳ್ಳುತ್ತಿದ್ದ ,ಬೈಬಲ್ ಓದಲು ಇಷ್ಟ ಪಡದ  ಸುರೇಶ ಅವಳ ಜೊತೆ ಚರ್ಚಿಗೆ ಹೋಗಲು ಮೊದಲು ಮಾಡಿದ.

ಬಿರುಗಾಳಿಯನ್ನು ತಡೆಯಲು ಹೇಗೆ ಸಾಧ್ಯ?ಸಮುದ್ರದ ಭೀಕರ ತೊರೆಯನ್ನು ನಿಲ್ಲಿಸಲು ಹೇಗೆ ಸಾಧ್ಯ ? ಅದೇಗೆ ಏಸು ಇದ್ದ ಒಂದು ರೊಟ್ಟಿಯನ್ನು ಅಷ್ಟೊಂದು ರೊಟ್ಟಿ ಮಾಡಿ ಸಾವಿರಾರು ಜನರಿಗೆ ನೀಡಿದ? ಇದೆಲ್ಲ ನಿಮ್ಮ ಮೂಡ ನಂಬಿಕೆ ಏನು ಬೈಬಲ್ಲಿನ ಸನ್ನಿವೇಶಗಳನ್ನು ಸುಳ್ಳು ಎಂದು ವಾದ ಮಾಡುತ್ತಿದ್ದ...ಕಾಲ ಜರುಗಿದಂತೆ ಫ್ಲೇವಿಯ ಎಂಬ ಹುಡುಗಿಯ ಪ್ರೀತಿಯ ಹಂಬಲದಲ್ಲಿ ಬಿದ್ದು,ಅವಳು ಮಡಿದ ಬೈಬಲ್ ಪಟನೆಗೆ ತಲೆದೂಗತೊಡಗಿದ.ಊರಿನ ತನ್ನ ಮನೆಯಲ್ಲಿದ್ದ  ಭಜನೆ ಪುಸ್ತಕಗಳು,ಶಾಲೆಯಲ್ಲಿ ಕೊಟ್ಟಿದ್ದ ಭಗವದ್ಗೀತೆ ಎಲ್ಲಾ ಓಲೆ ಸೇರಿದವು,ತಾನು ಕೂಡ ಬೈಬಲ್ ಓದಲು ಶುರು ಮಾಡಿದ..

ತಮ್ಮಿಬ್ಬರ ಮದುವೆ ಆಗಬೇಕೆಂದರೆ ಸುರೇಶ ತಮ್ಮ ಧರ್ಮಕ್ಕೆ ಬರಬೇಕು,ಅವನು ಇದನ್ನೇ ಪಾಲಿಸಬೇಕು ಎಂದು ಅರಿತಿದ್ದ ಫ್ಲೇವಿಯ ಅವನ ತಾಯಿಯನ್ನು ಹೇಗಾದರೂ ಒಪ್ಪಿಸಬೇಕು ಎಂದು ಪಣ ತೊಟ್ಟು,ಆಗಾಗ ಅವನ ಜೊತೆ ಇವನ ಹಳ್ಳಿಗೆ ಬರಲು ಶುರು ಮಾಡಿದಳು.ಪ್ರತಿ ಬಾರಿ ಬಂದಾಗಲು,ಸುರೇಶನ ತಾಯಿಗೆ ಏನೇನೋ ತುಂಬಲು ಶುರು ಮಾಡಿದಳು.ಮೇಲ್ಜಾತಿಯವರು ನಿಮ್ಮ ಓಣಿಗೆ ಬರಲ್ಲ,ನಿಮ್ಮ ಕೈಲಿ ದೇವಸ್ಥಾನದಲ್ಲಿ ಪೂಜೆ ಮಾಡುವುದಕ್ಕೆ ಬಿಡಲ್ಲ,ಇಲ್ಲಿ ಸಮಾನತೆ ಇಲ್ಲ,ಆದರೆ ನಮ್ಮ ಧರ್ಮದಲ್ಲಿ ಈ ರೀತಿ ಇಲ್ಲ... ಏನೇನೋ ಹೇಳತೊಡಗಿದಳು...

ನೀವು ನಮ್ಮ ಧರ್ಮಕ್ಕೆ ಬನ್ನಿ,ನಿಮ್ಮ ಒಳ್ಳೆಯ ಸವಲತ್ತು ಗಳನ್ನು  ಕೊಡುತ್ತೇವೆ ಎಂದೆಲ್ಲಾ ಹೇಳಿ ಮೊದಲೇ ದುಡ್ಡು ಎಂದರೆ  ಬಾಯಿ ಬಿಡುತ್ತಿದ ನೀಲಮ್ಮ ಚರ್ಚಿನವರು ಕೊಟ್ಟ ಒಂದಷ್ಟು ಪಡೆದು  ಅಲ್ಲಿ ಒಂದು ಪುಸ್ತಕಕ್ಕೆ ಸಹಿ ಮಾಡಿ ಆ ಧರ್ಮಕ್ಕೆ ಮತಾಂತರಗೊಂಡಳು..ಇದರ ಹಿಂದೆಯೇ ತನ್ನ ಮದುವೆಗೆ ಅನುಕೂಲವಾಗುತ್ತದೆ ಎಂದು ಮೊದಲೇ ಅರಿತಿದ್ದ ಸುರೇಶ ಕೂಡ...ಇದರ ಜೊತೆಗೆ ಈ ಉರಿನಲ್ಲಿ ಹೊಸ ಪಂಗಡ ಒಂದು ಶುರು ಆಯಿತು..

ಆ ಹುಡುಗಿ ಪ್ರತಿ ಬಾರಿ ಊರಿಗೆ ಬಂದಾಗ ಸುರೇಶನ ಮನೆಯಲ್ಲಿ ಒಂದೊಂದು ಬದಲಾವಣೆ ಆಗ ತೊಡಗಿತು.ಮೊದಲು ಪ್ರತಿ ಸೋಮವಾರ ನಡೆಯುತ್ತಿದ್ದ ಪೂಜೆ ನಿಂತಿತು,ಭಾನುವಾರ ಚರ್ಚಿಗೆ ಹೋಗಲು ಶುರು ಮಾಡಿದಳು ನೀಲಮ್ಮ...ನಂತರ ಮನೆಯಲ್ಲಿದ್ದ ಗಣಪತಿ,ಶಿವ,ಲಕ್ಷ್ಮಿ ಪಟಗಳು ಗೋಡೆಯಿಂದ ತೆಗೆಯಲ್ಪಟ್ಟಿತ್ತು...ಇವೆಲ್ಲ ಸುಟ್ಟು ಬೂದಿ ಆದವು...ಶಿಲುಬೆಯ ಆಕೃತಿ ಗೋಡೆಯಲ್ಲಿ ಅಲಂಕಾರ ಗೊಂಡಿತು...ನಂತರ ಈ ಒಡವೆ ಗಳೆಲ್ಲ ಬರೀ ವಿಜೃಂಭಣೆ ,ಇದು ಏಸುವಿಗೆ ಇಷ್ಟವಿಲ್ಲ ಎಂದು ಹೇಳಿ,ನೀಲಮ್ಮನ ಬಳೆ,ಕಿವಿಯಲ್ಲಿದ್ದ ಓಲೆ,ಸರಗಳನ್ನು ತೆಗೆಸಿದಳು...ಹಣೆಗೆ ಕುಂಕುಮ ಹರಿಶಿನ ಹಚ್ಚಿಕೊಳ್ಳುವುದು ನಿಂತ ನಂತರ ಅವುಗಳೆಲ್ಲ ತಿಪ್ಪೆ ಸೇರಿದವು..ಹಬ್ಬ ಹರಿದಿನಗಳು  ಗುತ್ತು ಗುರಿ ಇಲ್ಲದಂತಾಯಿತು...ಕೇವಲ ಕ್ರಿಸ್ಮಸ್ ಆಚರಣೆ ಶುರು ಆಯಿತು..ಹೀಗೆ ಒಂದೊಂದು ಬದಲಾವಣೆ ಆದ ನಂತರ ನೀಲಮ್ಮ ಪೂರ್ತಿ ಕ್ರೈಸ್ತ ಮಹಿಳೆ ಆದಳು...

ತನ್ನ ಅಣ್ಣ,ತನ್ನ ಮಗಳನ್ನು ಸುರೇಶನಿಗೆ ಕೊಟ್ಟು ಮದುವೆ ಮಾಡುತ್ತೇವೆ ಎಂದಾಗ ,ಅದು ಚರ್ಚಿನಲ್ಲಿ ಮದುವೆ ಸಮಾರಂಭ ಇಟ್ಟು ಕೊಳ್ಳೋಣ ಎಂದ್ದಾಗ,ಈ ಮದುವೆ ಮುರಿದು ಬಿತ್ತು ಅಲ್ಲದೆ ನೀಲಮಮ್ನ ಅಣ್ಣ ಅವಳ ಜೊತೆ ಜಗಳ ಮಾಡಿಕೊಂಡು ಹೋದ...

ಗ್ರಾಮದಲ್ಲಿ ನಡೆಯುವ ಸಿದ್ಧ ಮಲ್ಲೇಶ್ವರನ ಜಾತ್ರೆಗೆ ಹೋಗುವುದನ್ನು ನಿಲ್ಲಿಸಿದಳು...ದೇವಸ್ಥಾನಕ್ಕೆ ಕಾಣಿಕೆ ನಿಲ್ಲಿಸಿದಳು...ಆಗಾಗ ಮನೆಗೆ ಬರುತ್ತಿದ್ದ ಸ್ವಾಮಿಯನ್ನು ಕರೆಯುವುದನ್ನು ನಿಲ್ಲಿಸಿದಳು..ಬದಲಾಗಿ ಚರ್ಚಿನ ಫಾದರ್ ಗಳು ಬರಲು ಶುರು ಮಾಡಿದರು...

ಇದೆಲ್ಲದರ ಜೊತೆಗೆ ಮನೆಯಲ್ಲಿ ಒಂದಿಷ್ಟು ಬೈಬಲ್ ಪ್ರತಿಗಳನ್ನು ಇಟ್ಟುಕೊಂಡು,ತನ್ನ ಓಣಿಯ ಹೆಂಗಸರಿಗೆಲ್ಲ ಓದಲು ಬರದ ನೀಲಮ್ಮ,ತನ್ನ ಮಗನಿಂದ ಮತ್ತು ಆ ಹುಡುಗಿಯಿಂದ ಮತ್ತು ಚರ್ಚಿನಲ್ಲಿ ಹೇಳುತ್ತಿದ್ದ ಬೈಬಲ್ಲಿನ ಪಾಠವನ್ನು ಒಪ್ಪಿಸ ತೊಡಗಿದಳು...ಇದಕ್ಕೆಲ್ಲ ಕಾರಣ,ಇನೊಂದಿಷ್ಟು ಜನರನ್ನು ಚರ್ಚಿಗೆ ತಂದರೆ ಇನ್ನಷ್ಟು ದುಡ್ಡನ್ನು ಕೊಡುತ್ತೇವೆ ಎಂದು ಹೇಳಿದ್ದೆ ಕಾರಣ...

ಇದರಿಂದ ತಮಗೂ ಒಂದಿಷ್ಟು ದುಡ್ಡು ಸಿಗುತ್ತದೆ ಎಂದು ತಿಳಿದ ಎಮ್ಮೆ ಮಲ್ಲನ ಹೆಂಡತಿ ನಾಗಮ್ಮ, ಸುಣ್ಣದ ಬಸವನ ಸೊಸೆ ಕಾಳಮ್ಮ..ಹೀಗೆ ಒಬ್ಬೊಬ್ಬರಾಗಿ ಚರ್ಚಿಗೆ ಹೋಗಲು ಶುರು ಮಾಡಿದರು...

ಕೆಲವು ಗಂಡಸರು ಮಾತ್ರ ತಮ್ಮ ಮನೆಗೆ ಬಂದ ಫಾದರ ಗಳಿಗೆ ಬೈದು ,ಇನ್ನೊಮ್ಮೆ ಬಂದರೆ ಕಾಲು ಮುರಿಯುವುದಾಗಿ ಬೆದರಿಸಿ ಕಳುಹಿಸಿದರು..

ಅಲ್ಲದೆ ಅವರು ಮುಖ್ಯ ಗುರಿಯಾಗಿಸಿಕೊಂಡಿದ್ದು ಕಾಯಿಲೆ ಬಿದ್ದವರನ್ನು ,ಅವರಿಗೆ ಬೈಬಲ್ ನಲ್ಲಿರುವ ಏಸು ಕಾಯಿಲೆ ವಾಸಿ ಮಾಡಿದ ಪ್ರಸಂಗಗಳನ್ನು ಹೇಳಿ ತಾವು ಚರ್ಚಿಗೆ ಬಂದರೆ ತಮ್ಮ ಕಾಯಿಲೆಗಳನ್ನು ವಾಸಿ ಮಾಡುವುದಾಗಿ ಹೇಳಿದರೂ,ಚರ್ಚಿಗೆ ಹೋದರು ತಮ್ಮ ಕಾಯಿಲೆ ವಾಸಿ ಆಗದೆ ಇದ್ದಾಗ ಇದೆಲ್ಲ ಸುಳ್ಳು ಎಂದು ನಂಬಿ ತಮಗೆ ಸಿಕ್ಕ ದುಡ್ಡನ್ನು ಇಟ್ಟಿಕೊಂಡು ಚರ್ಚಿಗೆ ಹೋಗುವುದನ್ನು ಕೆಲವರು ನಿಲ್ಲಿಸಿದರು...

ವರ್ಷಕ್ಕೊಮ್ಮೆ ಮಾಸ್ತಮ್ಮ ದೇವರಿಗೆ ಕೋಳಿ,ಕುರು ಬಲಿ ಕೊಡಲು ಓಣಿಗೆ ಒಣಿಯೇ ಗಾಡಿಗಳಲ್ಲಿ ಹೋಗುತ್ತಿದ್ದರೆ,ಈ ಬಾರಿ ಹೋಗುವವರ ಸಂಖ್ಯೆ ಕಡಿಮೆ ಆಗ ತೊಡಗಿತು...

ಹೀಗೆ ಕೆಲವು ಜನರು ಊರಿನ ಹಿರಿಯರ ಸಲಹೆ ಅಂತೆ ಮತ್ತೆ ತಮ್ಮ ಮೂಲ ಸಂಸ್ಕೃತಿಯನ್ನು ಅಳವಡಿಸಿಕೊಂಡು ಹಾಗೆ ಮುಂದುವರೆದರು, ನೀಲಮ್ಮನಂಥ  ಕೆಲವರು ಚರ್ಚಿಗೆ ಹೋಗಲು ನಿಲ್ಲಿಸಲಿಲ್ಲ... ಸುರೇಶ ಫ್ಲೆವಿಯಳನ್ನು ಮದುವೆ ಆಗಿ ಅದೇ ಚರ್ಚಿನಲ್ಲಿ ಕೆಲಸಕ್ಕೆ ಆ ಧರ್ಮ ಪ್ರಚಾರಕ್ಕೆ ಕೆಲ್ಸಕ್ಕೆ ಸೇರಿಕೊಂಡ... ತನ್ನ ಉರಿನಲ್ಲಿ ಕೂಡ ಇನ್ನಷ್ಟು ಜನರನ್ನು ಚರ್ಚಿಗೆ ಕರೆ ತರಲು ಪ್ರಯತ್ನ ಮಾಡಿದರೂ  ಊರಿನ ಗಂಡಸರೆಲ್ಲ ಸೇರಿ ಧರ್ಮದೇಟು ಕೊಟ್ಟಾಗ ತನ್ನ ಉರಿನಲ್ಲಿ ಆ ಸಾಹಸಕ್ಕೆ ಮತ್ತೆ ಕೈ ಹಾಕಲಿಲ್ಲ....

--------------------------------------------------------------------------
## ಕಥೆ ##

Saturday, October 1, 2011

ಅಳಲು !!!

ದೊಡ್ಡೇಗೌಡ ಊರಿನ ಪ್ರಮುಖ ವ್ಯಾಪಾರಿಗಳಲ್ಲಿ ಒಬ್ಬ...ವರ್ತಕರ ಸಂಘದ ಸದಸ್ಯ ಕೂಡ....ಉರಿನಲ್ಲಿ ಒಳ್ಳೆ ಹೆಸರಿದೆ... ಸಂತೆ ಬೀದಿಯಲ್ಲಿ ಬಿಳಿ ಪಂಚೆ,ಬಿಳಿ ಅಂಗಿ ಹಾಕಿಕೊಂಡು ನಡೆದು ಬಂದ ಅಂದರೆ ಅಲ್ಲಿರುವವರೆಲ್ಲರೂ ಎದ್ದು ನಮಸ್ಕರಿಸುತ್ತಾರೆ... ಗಟ್ಟಿಗ,ಧೈರ್ಯವಂತ,ಯಾರೊಬ್ಬರಿಗೂ ಒಂದು ರೂಪಾಯೀ ಮೋಸ ಮಾಡಿಲ್ಲ,ವ್ಯಾಪಾರದಲ್ಲಿ ಕೂಡ,ಹಾಗೆ ಯಾರೇ ಇವನಿಗೆ ಮೋಸ ಮಾಡಿದರೆ ಹಾಗೆ ಬಿಡುವ ಅಸ್ಸಾಮಿ ಅಲ್ಲ... ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಹಿರಿ ಮಗ ವೆಂಕಟೇಶ ಮತ್ತು ಕೊನೆ ವರ್ಷದ  ಡಿಗ್ರಿ ಮಾಡುತ್ತಿರುವ ಮಗಳು,ಇಬ್ಬರು ಮಕ್ಕಳ ಮದುವೆಯನ್ನು ಒಂದೇ ಚಪ್ಪರದಲ್ಲಿ ಮಾಡ ಬೇಕೆಂಬ ಆಸೆಯೊಂದಿಗೆ ಇಬ್ಬರಿಗೂ ವಧು ಮತ್ತು ವರನ ಅನ್ವೇಷಣೆಯಲ್ಲಿ ಕೂಡ ಇದ್ದನು...
ಅದೊಂದು ಭಾನುವಾರ ತನ್ನ ತೋಟ ಮತ್ತು ಅಂಗಡಿಯ ಕೆಲಸದವರಿಗೆ  ಬಟವಾಡೆ ಎಲ್ಲ ಮುಗಿಸಿ ತೋಟದ ಕಡೆ ಹೋಗಿದ್ದ... ಮನೆಯಲ್ಲಿ ಹೆಂಡತಿ ಒಬ್ಬಳೇ ಇದ್ದಳು... ಮಗ ವೆಂಕಟೇಶ ಒಂದು ಹುಡುಗಿಯ ಜೊತೆ ಮನೆಗೆ ಬಂದು,ತನ್ನ ತಾಯಿ ಹತ್ತಿರ ಅವಳನ್ನು ಮದುವೆ ಹಾಗಿರುವುದಾಗಿ ತಿಳಿಸಿದ....
ದೊಡ್ಡೇಗೌಡನ  ಹೆಂಡತಿ ದ್ಯಾವಮ್ಮ ಕುಸಿದು ಬೀಳುವಂತಾದಳು.... ಆಕಾಶ ಕಳಚಿ ತಲೆ ಮೇಲೆ ಬಿದ್ದ ಹಾಗೆ ಆದಳು...ಮಗನ ಈ ಮಾತಿಗೆ ಏನು ಹೇಳಬೇಕೆಂದು ತೋಚದೆ ಗಾಬರಿ ಬಿದ್ದಳು...ಇಂತ ಸಮಯದಲ್ಲಿ ಗಂಡ ಮನೆಯಲ್ಲಿ ಇರಬೇಕಿತ್ತು ಎಂದು ಕೊಂಡಳು ... ಅಳು ಬಂದರೂ ನುಂಗಿಕೊಂಡು "ಯಾಕ್ ಹೀಗ್ ಮಾಡಿದೆ? ನಮಗೆ ಹೇಳಿದ್ರೆ ನಾವೇ ಮದುವೆ ಮಾಡಿಸ್ತಿರ್ಲಿಲ್ವ ? ಯಾವಾಗ ಮದುವೆ ಆದೆ ? ಎಲ್ಲಿ ಆದೆ ? ಅವಳ ಮನೆಯಲ್ಲಿ ಈ ವಿಷಯ ಗೊತ್ತ ?" ಹೀಗೆ ಒಂದರ ಮೇಲೆ ಒಂದು ಪ್ರಶ್ನೆಯನ್ನು ಕೇಳಿದಳು...
ಮನಸ್ಸಿನಲ್ಲಿ ಇನ್ನು  ಮಗಳ ಮದುವೆ   ಮಾಡಬೇಕು,ಈ ವಿಷಯ ಊರಿನ ಜನರಿಗೆ ಗೊತ್ತಾದರೆ ಬಾಯಿಗೆ ಬಂದ ಹಾಗೆ ಮಾತಾಡುತ್ತಾರೆ,ನಮ್ಮ ಮರ್ಯಾದೆ ಏನಾಗಬೇಕು,ಊರವರ ಬಾಯಿಗೆ ಹುಳ ಹಾಗಿ ಬಿಟ್ವಿ....ಹೀಗೆ ಹತ್ತು ಹಲವಾರು ಯೋಚನೆಗಳು ತೊಳಲಾಡ ತೊಡಗಿದವು..
"ಒಂದು ವಾರ ಆಯಿತು ಮದುವೆ ಆಗಿ,ಅಲ್ಲೇ ಸಬ್ ರೆಜಿಸ್ಟ್ರಾರ್ ಆಫಿಸಿನಲ್ಲಿ ಆದ್ವಿ,ಏನೋ ಸ್ವಲ್ಪ ಪ್ರಾಬ್ಲಂ ಆಯಿತು,ಅದಕ್ಕೆ ಆದ್ವಿ..ಹೇಳಬೇಕು ಅಂತ ಇದ್ವಿ,ಹೇಗೂ ಹೇಳಲೇ ಬೇಕು ಅಂತ ಸುಮ್ಮನಾದ್ವಿ ಅಷ್ಟೇ"

"ಏನ್ ಅಂತ ಪ್ರಾಬ್ಲಂ.ಮನೇಲಿ ಹೇಳಿದ್ರೆ ಆಗ್ತಿರಲಿಲ್ವ,ನಿಮ್ಮ ಅಪ್ಪನ ಹತ್ತಿರನಾದ್ರು ಹೇಳಬಾರದಿತ್ತಾ ?? "

"ಅದನ್ನೆಲ್ಲ ಹೇಳಕ್ಕೆ ಆಗಲ್ಲ,ಇವಾಗೆನ್ ಅವರನ್ನು ಒಪ್ಪಿಸ್ತೀನಿ ಬಿಡು "

"ಏನ್ ಒಪ್ಕೋತಾರೆ,ನಿಮ್ಮ ಅಪ್ಪಂಗೆ ನೀನ್ ಹುಟ್ಟಿದ್ಯೋ ಅಥ್ವಾ ನಿಮ್ಮ ಅಪ್ಪ ನಿನಗೆ ಹುಟ್ಟಿದನೋ ? ಮಾಡೋದ್ ಮಾಡ್ಬಿಟ್ಟು ಹೇಳದು ನೋಡು,ಏನಾದ್ರೂ ಮಾಡ್ಕೋ  " ಅಂತ ಹೇಳಿ ಸಿಟ್ಟು  ನುಂಗಿ ಕೊಂಡು ಸೆರಗನ್ನು ಬಾಯಲ್ಲಿ ಕಚ್ಚಿಕೊಂಡು ಹಿತ್ತಲ ಬಾಗಿಲ ಬಳಿ ಹೋಗಿ ಕುಳಿತಳು....ಮಕ್ಕಳ ಮದುವೆ ಬಗ್ಗೆ ಕಂಡ ಕನಸುಗಳೆಲ್ಲ ಮಳೆ ನೀರಿನಲ್ಲಿ ಕೊಚ್ಚಿ ಹೋದಂತೆ ಆದವು...

ಸ್ವಲ್ಪ ಸಮಯದ ನಂತರ ತೋಟದಿಂದ ಬಂದ ದೊಡ್ದೆ ಗೌಡನಿಗೆ ಹೆಂಡತಿ "ಒಳಗೆ ಹೋಗಿ ನೋಡಿ,ಯಾವಳೋ ತಾಟ್ಗಿತ್ತಿನ ಮದುವೆ ಹಾಗಿ ಬಂದವನೇ ನಿಮ್ಮ ಮಗ "

ಇವನಿಗೆ ಏನು ಹೇಳಬೇಕೋ ತೋಚದೆ ಸೀದಾ ಒಳ ನಡೆದು ಮಗನ ಮುಂದೆ ನಿಂತ...ಏನು ಮಾತಾಡ ಬೇಕು ಎಂದು ತಿಳಿಯದೆ ತನ್ನ ಕೋಪ ಸಿಟ್ಟು ಯಾವುದನ್ನು  ತೋರಿಸಿಕೊಳ್ಳದೆ ಸುಮ್ಮನೆ ನಿಂತು ಬಿಟ್ಟ...ತನ್ನ ವ್ಯಾಪಾರದಲ್ಲಿ ನಷ್ಟ ಆದಾಗ ಕೂಡ ಧೃತಿ ಗೆಡದೆ ಇದ್ದ ಅವನ ತಂದೆಗೆ ಕಣ್ಣೀರು ಗೊತ್ತಿಲ್ಲದೇ ಹರಿಯಿತು... ಈಗ ಬಹಳ ಬುದ್ಧಿವಂತಿಕೆ ಇಂದ ಕೆಲಸ ಮಾಡಬೇಕಾದ  ಪರಿಸ್ಥಿತಿ ಬಂತು... ಊರಿನವರಿಗೆ ವಿಷಯ ಗೊತ್ತಾದರೆ ತನ್ನ ಮರ್ಯಾದೆ ಹೋಗುತ್ತದೆ...

ಮದುವೆ ಆಗಿ ಬಂದಿರುವುದರಿಂದ ಮನೆ ತುಂಬಿಸಿಕೊಳ್ಳುವ ಅನಿವಾರ್ಯತೆ ಇತ್ತು,ಇಲ್ಲದೆ ಹೋದರೆ ಉರಿಬ ದೊಡ್ಡ ಮನುಷ್ಯನೇ ಹೀಗೆ ಮಾಡಿದರೆ ಸರಿ ಇರುವುದಿಲ್ಲ....ಆ ಹುಡುಗಿ ಬೇರೆ ಜಾತಿ ಎಂದು ತಿಳಿದಾಗಲಂತೂ ಅವನ ಅಪ್ಪ ಅಮ್ಮ ಇಬ್ಬರೂ ಕೆಂಡಾಮಂಡಲವಾದರು  .... ಆದರೂ  ಬೇರೆ ದಾರಿ ಇಲ್ಲ...ಹುಡುಗಿಯ ಮನೆಯಲ್ಲಿ ಒಪ್ಪದೇ ಇರುವ ವಿಷಯ ತಿಳಿದು ಅವರ ಮನೆಗೆ ಹೋದರೆ ಹುಡುಗಿಯ ತಂದೆ "ತನಗೆ ಯಾವುದೇ ಸಂಬಂಧ ಇಲ್ಲ "ಎಂದು ಮಗಳ ಬಗ್ಗೆ ಕನಿಕರ ಇಲ್ಲದೆ ಸಾರಾ ಸಗಟಾಗಿ ಹೇಳಿಬಿಟ್ಟರು....

ಇವನ ತಂದೆ ಎಷ್ಟೇ ಒಪ್ಪಿಸಲು ಪ್ರಯತ್ನ ಪಟ್ಟರೂ ಸಾಧ್ಯ ಆಗಲಿಲ್ಲ... ಕೊನೆಗೆ ಅವಳ ಅಪ್ಪ "ಮದುವೆಗೆ ಮುಂಚೆ ಬಸುರಿ ಆಗಿ ಬಂದು,ನಮ್ಮ ಮನೆತನದ ಗೌರವ ಹಾಳು ಮಾಡಿದ್ದು ಸಾಕು,ಇನ್ನು ಮುಂದೆ ಅವಳು ನಮ್ಮ ಮನೆಗೆ ಬರುವುದು ಬೇಡ" ಎಂದು
ಹೇಳಿದಾಗಲೇ ಅವನು  ಯಾಕೆ ಮನೆಯಲ್ಲಿ ಹೇಳದೆ ಮದುವೆ ಆಗಿದ್ದು ಮತ್ತು ಅವನು ಮುಚ್ಚಿಟ್ಟಿದ್ದ ಸತ್ಯ ತಿಳಿದಿದ್ದು....

ಸುಮಾರು ಒಂದು ತಿಂಗಳ ಹಿಂದೆಯೇ ಇವರಿಬ್ಬರೂ ಬಂದು ಇವಳು ಗರ್ಭಿಣಿ ಆಗಿರುವ ವಿಷಯ ತಿಳಿಸಿದ್ದು ಮತ್ತು ತಾನು ಮದುವೆ ಮಾಡಿಕೊಡಲು ಒಪ್ಪದೇ ಇದ್ದಿದಕ್ಕೆ ಇವರು ಮದುವೆ ಆಗಿರಬೇಕು ಎಂದು,ಎಲ್ಲ ವಿಷಯಗಳನ್ನು ಹುಡುಗಿಯ ತಾಯಿ ದೊಡ್ದೆಗೌಡನಿಗೆ ಹೇಳುತ್ತಾಳೆ...

ಈ ಸಂಗತಿ ತಿಳಿದಾಗ ಬಹಳ ಜಾಗರೂಕರಾದ ಗೌಡ ಉಪಾಯ ಮಾಡಿ ರೆಜಿಸ್ಟಾರ್ ಆಫಿಸಿನಲ್ಲಿ ಆಗಿರುವ ಮದುವೆಯನ್ನು  ಇನ್ನೊಮ್ಮೆ ಶಾಸ್ತ್ರೋಕ್ತವಾಗಿ ಮಾಡಿಸಲು ನಿಶ್ಚಯಿಸುತ್ತಾನೆ..ಜೊತೆಗೆ ಒಳಗೆ ತಳಮಳ ಶುರು ಆಯಿತು ಅವನಿಗೆ,ಬೇರೆ ಜಾತಿಯ ಹುಡುಗಿಯನ್ನು ಮನೆ ಸೊಸೆ ಮಾಡಿ ಕೊಂಡರೆ ತನ್ನ ಸಮಾಜದಲ್ಲಿ ತನಗೆ ಇರುವ ಹೆಸರು ಕೆಡುತ್ತದೆ ಅಲ್ಲದೆ ಇಬ್ಬರಿಗೂ,ಇರುವ ಇನ್ನೊಬ್ಬ ಮಗಳ ಮದುವೆಯ ಬಗ್ಗೆ ಚಿಂತ ಅತ್ತ ತೊಡಗಿತು... ಅಣ್ಣ ಈ ರೀತಿ ಮಾಡಿದ್ದಾನೆ ಅಂತ ಗೊತ್ತಾದರೆ ಇವಳನ್ನು ಮದುವೆ  ಆಗುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ ಎಂಬ ಆತಂಕ....

ಇಂಥ ಆತಂಕದ ನಡುವೆ , ಆಗಿರುವ ಮದುವೆಗೆ ಇನ್ನೊಮ್ಮೆ ನಾಮಕಾವಸ್ಥೆ ಶಾಸ್ತ್ರೋಕ್ತವಾಗಿ ಮಾಡಿಯೂ ಆಯಿತು.... ಆದರೆ ಹುಡುಗಿಯ ಮನೆ ಕಡೆ ಇಂದ ಯಾರು ಬರಲಿಲ್ಲ... ತಂಗಿಯ ಮದುವೆ ಮೊದಲು ಮಾಡುವ ಬದಲು ಇವನು ಯಾಕೆ ಆದ,ಜವಾಬ್ದಾರಿ ಇಲ್ಲದವನು ಎಂದು ಕೆಲವರು ಬೈದು ಕೊಂಡರೆ,ಇನ್ನು ಕೆಲವರು ಹುಡುಗಿಯ ಮನೆ ಕಡೆಯವರು ಯಾರು ಬರದೆ ಇರುವ ವಿಷಯ ತಿಳಿದು ಏನೋ ಎಡವಟ್ಟಾಗಿದೆ ,ಅದಕ್ಕೆ ಈ ರೀತಿ ಇಷ್ಟು ಬೇಗ ಮಾಡುತ್ತಿದ್ದಾರೆ ಎಂದು ಮಾತಾಡಲು ಶುರು ಮಾಡಿದರೆ,ಕೆಲವರ ಸಂಶಯದ ನಡುವೆ ಕಲ್ಯಾಣ ಮುಗಿಯಿತು...ಆದರೆ ದೊಡ್ದೆ ಗೌಡ ಆಗಲಿ ಅವನ ಹೆಂಡತಿಯ ಮುಖದಲ್ಲಿ ಯಾವುದೇ ತರಹದ ಸಂತೋಷದ ಛಾಯೆ ಇರಲಿಲ್ಲ,ಬದಲಾಗಿ ದುಖ, ಸಮಾಜದಲ್ಲಿ ತಲೆ ತಗ್ಗಿಸಬೇಕಾದ ಪರಿಸ್ಥಿತಿ ಬಂದಿರುವುದಕ್ಕೆ ಅಂಜಿಕೆ ಎದ್ದು ಕಾಣುತಿತ್ತು...

ಬಹಳ ವಿಜೃಂಭಣೆಯಿಂದ  ಮಾಡಬೇಕು ಎಂದು ಕನಸು ಕಟ್ಟಿ ಕೊಂಡಿದ್ದ ಮದುವೆ ಈ ರೀತಿ ಆಗುತ್ತಿರುವುದಕ್ಕೆ ಬೇಸರ ಅಲ್ಲದೆ ಒಂದು ರೀತಿಯ ಸೂತಕದ ಲಕ್ಷಣಗಳು ಕಂಡವು...ವ್ಯಾಪಾರದಲ್ಲಿ ನಷ್ಟ ಆದಾಗ ಕೂಡ ಮಂಕಾಗದ ಅವನ ತಂದೆ ಇವತ್ತು ಮಂಕಾಗಿದ್ದರು,ಇಬ್ಬರಲ್ಲೂ ನೊಂದ ಭಾವ ಅಡಗಿತ್ತು....ಮಗನನ್ನು ಬೆಳೆಸಿ ಓದಿಸಿದಕ್ಕೆ ಇವನು ಕೊಟ್ಟ ದೊಡ್ಡ ಉಡುಗೊರೆ ಎಂದರೆ ತಮ್ಮ ಕನಸುಗಳನ್ನು ನುಚ್ಚು ನೂರು ಮಾಡಿದ್ದು ಮತ್ತು ಸಮಾಜದಲ್ಲಿ ತಮ್ಮ ಗೌರವ ಘನತೆ ಆಳು ಮಾಡಿದ್ದು....

ಸಂಭ್ರಮ ಇಲ್ಲದ ಮದುವೆ ಮುಗಿದು ದಂಪತಿಗಳನ್ನು ಕಳಿಸಿದ ಮೇಲೆ ಉರಿನಲ್ಲಿ ಇವರ ಮದುವೆ ವಿಷಯ ಎಲ್ಲರ ಬಾಯಲ್ಲಿ ಹರಿದಾಡ ತೊಡಗಿತು... ಕೆಲವರಿಗೆ ನಿಜ ಸಂಗತು ತಿಳಿಯ ತೊಡಗಿತು... ಊರಿನ ಜನರೆಲ್ಲಾ ಇವನ ಮನೆಯವರನ್ನು ಒಂದು ವಿಚಿತ್ರ ರೀತಿಯಲ್ಲಿ ನೋಡ ತೊಡಗಿದರು...ಮದುವೆ ಆಗಿ ೬ ವರೆ ತಿಂಗಳಿಗೆ ಮಗು ಆದಾಗ  ಜನ  ಕೆಟ್ಟ ರೀತಿಯಲ್ಲಿ ಕಾಣತೊಡಗಿದರು,ಅಲ್ಲದೆ ಅವನ ತಂಗಿಗೆ ಒಂದು ಸಂಭಂದ ಹುಡುಕುವುದು ಕಷ್ಟ ಆಯಿತು...ಅವಳು ತನ್ನ ಅಳಲು ತೋಡಿಕೊಳ್ಳಲು ಆಗದ ಪರಿಸ್ಥಿತಿ ತಲುಪಿದಳು....ನೆಂಟರಿಷ್ಟರು ದೂರ ಮಾಡಲು ಶುರು ಮಾಡಿದರು....

ಎಲ್ಲದರಿಂದ ಆಸಕ್ತಿ ಕಳೆದು ಕೊಂಡ ತಂದೆ ಮಗಳ ಮದುವೆ ಬಗ್ಗೆ ಚಿಂತ ಮಾಡತೊಡಗಿದ .......ಇವೆಲ್ಲದರಿಂದ ಬೇಸತ್ತ ವೆಂಕಟೇಶನ ತಾಯಿ ಅರೆ  ಹುಚ್ಚಿ ಆಗಿಬಿಟ್ಟಳು...

Wednesday, September 14, 2011

ಮರುಕಳಿಸಿದ ನೆನಪುಗಳು !!!

ಸುಮಾರು ೬ ವರ್ಷದ ನಂತರ ಎಲ್ಲರೂ ಒಟ್ಟಿಗೆ ಸೇರಿದ ದಿನ ಅದು..ಕಳೆದ ವಾರ ನಮ್ಮ ಪಿ.ಯು.ಸಿ ಹಾಸ್ಟೆಲ್ಲಿನ ಹುಡುಗರೆಲ್ಲ ಒಟ್ಟಿಗೆ ಭೇಟಿ ಆಗಿದ್ದೆವು...ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕು ರಾಮಕುಂಜ ಎಂಬ ಗ್ರಾಮದ ಬೋರ್ಡಿಂಗ್ ಹಾಸ್ಟೆಲ್ಲಿನಲ್ಲಿ ೨ ವರ್ಷ ಒಟ್ಟಿಗೆ ಕಳೆದ ನಾವು ಮತ್ತೆ ಆ ನೆನಪುಗಳನ್ನು ಹೊತ್ತು ಭೇಟಿ ಆದೆವು...
ರಾಮಕುಂಜ ಇದು ಉಪ್ಪಿನಂಗಡಿ ಇಂದ ಸುಭ್ರಮಣ್ಯ ಹೋಗುವ ದಾರಿಯಲ್ಲಿ ಇದೆ..ಇದು ಈಗಿನ ಪೇಜಾವರ ಯತಿಗಳಾದ ಶ್ರೀ ವಿಶ್ವೇಶ ತೀರ್ಥರ ಹುಟ್ಟೂರು,ಮತ್ತು ವನವಾಸದ ಕಾಲದಲ್ಲಿ ರಾಮನು ಇಲ್ಲಿ ಈಶ್ವರನನ್ನು ಪೂಜಿಸಿದ್ದರಿಂದ ಇಂದು ರಾಮಕುಂಜ ಎಂದು ಮತ್ತು ಅಲ್ಲಿನ ಈಶ್ವರನಿಗೆ ರಾಮಕುಂಜೇಶ್ವರ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ...(ಇದು ಮೊದಲ ವರ್ಷದ ಮೊದಲ ಕನ್ನಡ ಕ್ಲಾಸಿನಲ್ಲಿ ನಮ್ಮ ಉಪನ್ಯಾಸಕರಾದ ಗಣರಾಜ್ ಕುಂಬ್ಳೆ ಅವರು ಹೇಳಿದ ವಿಷಯ,ಈ ಊರಿನ ಇತಿಹಾಸದ ಬಗ್ಗೆ ಒಂದು ಪುಸ್ತಕ ಕೂಡ ಬರೆದಿದ್ದಾರೆ).....
ಇಲ್ಲಿ ದೇವಸ್ಥಾನ,ಒಂದು ಪ್ರೈಮರಿ ಶಾಲೆ,ಒಂದು ಸಣ್ಣ ಗುಡ್ಡದ ಮೇಲೆ ನಮ್ಮ ಕಾಲೇಜು,ಅಲ್ಲಿಂದ ಸ್ವಲ್ಪ ದೂರದಲ್ಲಿ ಇನ್ನೊಂದು ಸಣ್ಣ ಗುಡ್ಡದ ಮೇಲೆ ನಮ್ಮ ಹಾಸ್ಟೆಲ್....ದೇವಾಲಯದ ಬಳಿ ರಥದ ಮನೆ ಹತ್ತಿರ ಒಬ್ಬ ಭಟ್ಟರ ಮನೆ,ಜೊತೆಗೆ ಅವರು ನಡೆಸುತ್ತಿದ್ದ ಒಂದು ಅಂಗಡಿ(ಈ ಅಂಗಡಿ ನಮಗೆ ತುಂಬ Important )...ಅಷ್ಟು ಬಿಟ್ಟರೆ ಅಲ್ಲಿ ಏನೇನು ಇಲ್ಲ... ಮನೆಗಳು ಇವೆಯಾದರೂ ಅಲ್ಲಿಂದ ಸುಮಾರು ದೂರ ಹೋಗಬೇಕು... ಸುತ್ತ ಮುತ್ತ ಬೆಟ್ಟ ಗುಡ್ಡಗಳು,ಉರಿ ಬಿಸಿಲು, ಹೊತ್ತಿಲ್ಲದ ಹೊತ್ತಲ್ಲಿ ಬರುವ ಮಳೆ,ಇಂಥ ಊರಲ್ಲಿ ೨ ವರ್ಷ ಕಳೆದ ರೋಮಾಂಚಕಾರಿ ಘಟನೆಗಳನ್ನು ಮೆಲುಕು ಹಾಕಲು, ಅವುಗಳ ಬಗ್ಗೆ ಚರ್ಚೆಗೆ ನೆರವಾಗಿದ್ದು ಮೊನ್ನೆಯ ನಮ್ಮೆಲ್ಲರ ಭೇಟಿ... 

ಹತ್ತನೇ ತರಗತಿ ಮುಗಿಸು ಕಾಲೇಜುಗಳ ಅನ್ವೇಷಣೆಯಲ್ಲಿದ್ದಾಗ ತಂದೆಯ ಸ್ನೇಹಿತರೊಬ್ಬರು ಕೊಟ್ಟ ಸಲಹೆ ಮೇರೆಗೆ ಅಲ್ಲಿಗೆ ಹೋದಾಗ ನಮಗೆ ಕಂಡಿದ್ದು ಅದೇ ಕಾಲೇಜು ಬಿಲ್ಡಿಂಗ್,ಹಾಸ್ಟೆಲ್,ದೇವಸ್ಥಾನ,ಒಂದು ಶಾಲೆ ಮತ್ತು ಅಂಗಡಿ ಇಷ್ಟೇ...ಬೆಳಗ್ಗೆ ೫.೩೦ ಕ್ಕೆ ಎದ್ದು,೫.೪೫ ಗೆ ಪ್ರಾರ್ಥನೆ ,ನಂತರ ಚಹಾ ಕುಡಿದು ೬.೦೦ ಘಂಟೆ ಇಂದ ೮.೦೦ ರವರೆಗೆ ಓದು..ನಂತರ ಊಟ(ಗಂಜಿ ಊಟ),ನಂತರ ರೆಡಿ ಆಗಿ ೯.೩೦ ಕ್ಕೆ ಕಾಲೇಜಿಗೆ ಹೊರಡುವುದು...೯.೪೫ ಇಂದ ೧೨.೫೦ ಕಾಲೇಜು,೧.೦೦ ಊಟ,ಮತ್ತೆ ೧.೩೦ ಕ್ಕೆ ಕಾಲೇಜಿಗೆ ಹೊರಡುವುದು...೧.೪೫ ಇಂದ ೩.೫೦ ರವರೆಗೆ ಕಾಲೇಜು,ಮತ್ತೆ ಹಿಂದಿರುಗಿ ೪.೦೦ ಕ್ಕೆ ಕಾಫಿ ತಿಂಡಿ,ನಂತರ ೫.೪೫ ವರೆಗೆ ಆಟೋಟ,ಮತ್ತೆ ೬.೩೦ಕ್ಕೆ ಪ್ರಾರ್ಥನೆ,೬.೪೫ ಇಂದ ೮.೩೦ ರವರೆಗೆ ಸ್ಟಡಿ ಪೀರಿಯಡ್...ಮತ್ತೆ ಊಟದ ನಂತರ ೮.೫೦ ಇಂದ ೯.೫೦ ರವರೆಗೆ ಸ್ಟಡಿ ಪೀರಿಯಡ್,ಹತ್ತು ಘಂಟೆಗೆ ಎಲ್ಲಾ ಲೈಟ್ಸ್ ಆಫ್. ವಾರಕ್ಕೆ ಎರಡು ದಿನ ಸಮವಸ್ತ್ರ,ಮತ್ತೆ ಹಾಸ್ಟೆಲಿನಲ್ಲಿ ಇಂಥ ಸ್ಟ್ರಿಕ್ಟ್ ರೂಲ್ಸ್ ಗಳು...ಅಲಿ ಬಿಟ್ಟು ಬೇರೆ ಎಲ್ಲೂ ಹೋಗುವ ಅವಕಾಶವೇ ಇರಲಿಲ್ಲ....ನಮ್ಮ ಬಳಿ ಯಾವುದೇ ಕಾರಣಕ್ಕೂ ದುಡ್ಡು ಇಟ್ಟಿಕೊಳ್ಳುವ ಹಾಗಿರಲಿಲ್ಲ..ಬೇರೆಯವರ ರೂಮಿಗೆ ಹೋಗುವ ಹಾಗಿರಲಿಲ್ಲ...ಎಲ್ಲದಕ್ಕೂ permission ತಗೋಬೇಕು.ಆಟಕ್ಕೆ ಹೋಗಲಿಲ್ಲ ಅಂದರೂ,ರಾತ್ರಿ ಹತ್ತರ ನಂತರ ಓದಬೇಕು ಅಂದರೂ,ಬೇಗೆ ಮಲಗ ಬೇಕು ಅಂದ್ರೂ..ಅಲ್ಲದೆ ಪ್ರತಿ ತಿಂಗಳ ನಮ್ಮ ಬಿಲ್ ಜೊತೆ ಕಳುಹಿಸುತ್ತಿದ್ದ ನಮ್ಮ ರಿಪೋರ್ಟ್ ಗಳು ,ಅಲ್ಲದೆ ತಿಂಗಳಿಗೆ ಒಂದೇ ದಿನ(ಅದೂ ನಮಗೆ ಮೀಸಲಿಟ್ಟ ದಿನವೇ) ಮನೆಯಿಂದ ಫೋನ್ ಮಾಡಬಹುದಿತ್ತು,...ಬೇರೆ ದಿನ ಮಾಡಿದರೆ useless ...೩ ತಿಂಗಳಿಗೆ ಒಮ್ಮೆ ಮಾತ್ರ ಮನೆಗೆ ಕಳುಹಿಸುತ್ತಿದ್ದರು...ಅದೂ ರಜ ಸಿಕ್ಕಿದ್ರೆ,ಇಲ್ಲಾಂದ್ರೆ ಅದೂ ಇಲ್ಲ...ಹಾಸ್ಟೆಲ್ ನಲ್ಲೆ ಇರುತ್ತಿದ್ದ ನಮ್ಮ ಉಪನ್ಯಾಸಕರು....ನಮ್ಮ ಜೊತೆಗೆ ಊಟ,ನಮ್ಮ ಜೊತೆಯಲ್ಲಿ ಆಟ ಕೂಡ ಆಡುತ್ತಿದ್ದರು..ಸಿಟಿಗೆ ಬರಬೇಕು ಅಂದರೂ ಅಲ್ಲಿಂದ ಸುಮಾರು ೧೨ ಕಿಮಿ..ಅದೂ ಹುಷಾರಿಲ್ಲ ಅಂದರೆ ಅವರೇ ಕರ್ಕೊಂಡು ಬರುವವರು...ಅಲ್ಲೇ ಎಲ್ಲಾ ಇರುತ್ತಿದ್ದ stationary ಸಾಮಗ್ರಿಗಳು...ಬಹುಷಃ ಇಂಥ ಪರಿಸರ ನೋಡೇ ಇರಬೇಕು,ನಮ್ಮ ತಂದೆ 'ಈ ಬಡ್ಡಿ ಮಗಂಗೆ ಇದೆ ಸರಿಯಾದ ಜಾಗ,ಇಲ್ಲಾದರೆ ಬಾಲ ಮುದುರಿಕೊಂಡು ಇರ್ತಾನೆ'ಅಂತ ತಂದು ಸೇರಿಸಿಯೇ ಬಿಟ್ಟರು...

ಅಲ್ಲಿಂದ ಶುರು ಆಯಿತು ನಮ್ಮ ಓದು,ನಮ್ಮ ಇತರ ಚಟುವಟಿಕೆಗಳು,ರೂಲ್ಸ್ ವಿರುದ್ದ ನಡೆಯುವುದು...ಎಲ್ಲಾ...ಅಲ್ಲಿ ಬಿಟ್ಟು ೬ ವರ್ಷ ಆದರೂ ಆ ನೆನಪುಗಳು,ಆ ಊರು,ಆ ಘಟನೆಗಳು....ಯಾವುದನ್ನು ಮರೆಯಲು ಸಾಧ್ಯವಿಲ್ಲ...ಬೆಳ್ಳಗೆ ಬೆಳ್ಳಗೆ ಗಂಜಿ ಊಟ(ದಕ್ಷಿಣ ಕನ್ನಡ ಸ್ಪೆಷಲ್,ಕುಸುಲಕ್ಕಿ ಇಂದ ಮಾಡುತ್ತಾರೆ,ಅನ್ನ ಬೇಯಿಸಿದ ನಂತರ ಗಂಜಿಯನ್ನು ಬಸಿಯದೆ ಹಾಗೆ ಬಡಿಸುತ್ತಾರೆ),....ಜತೆಗೆ ಮಿಡಿ ಮಾವಿನ ಉಪ್ಪಿನಕಾಯಿ,ಚಟ್ನಿ.... ಖಾಲಿ ಡಬ್ಬಕ್ಕೆ ಕಲ್ಲು ಹಾಕಿ ಅಲ್ಲಾಡಿಸಿದ ಹಾಗೆ ಆಗುತ್ತಿದ್ದ ,ಏನು ಅರ್ಥವಾಗದ ತುಳು ಭಾಷೆ.....,ಆ ರಣ ಬಿಸಿಲು,....ಯಾವಾಗ ಬೇಕೋ ಅವಾಗ ಸುರಿಯುತ್ತಿದ್ದ ಮಳೆ,....ರವಿವಾರ ಮಾತ್ರ ಗಂಜಿ ಊಟದ ಬದಲಾಗಿ ಇರುತ್ತಿದ್ದ ಇಡ್ಲಿಗೆ ಕಾಯುತ್ತಿದ್ದ ಪರಿ,......ಕದ್ದು ಭೇಲಿ ಹಾರಿ(ಕೆಲವರು ನುಸುಳುತ್ತಿದ್ದರು,ಕೆಲವರು ಹಾರುತ್ತಿದ್ದರು) ಹೋಗುತ್ತಿದ್ದ ಆ ದೇವಸ್ಥಾನದ ಹತ್ತಿರ ಇದ್ದ ಆ ಭಟ್ಟರ ಅಂಗಡಿ.....,ಕೆಲವೊಮ್ಮೆ ಸಿಕ್ಕಿ ಹಾಕಿಕೊಂಡು ಬರೆದ ಅದೆಷ್ಟೋ Apology ಲೆಟರ್ ಗಳು,....ಕೆಲವೊಮ್ಮೆ ಮಧ್ಯ ರಾತ್ರಿ(ಶಾರ್ಪ್ ೨.೦೦ ಘಂಟೆ ) ಶುರು ಆಗುತ್ತಿದ್ದ ನಮ್ಮ ಕಾರ್ಯಾಚರಣೆ,ಕತ್ತಲಿನಲ್ಲಿ ಬೇಲಿ ಹಾರಿ ಹೋಗುತ್ತಿದ್ದ ಆ ನಮ್ಮ ಧೈರ್ಯ,....ಕತ್ತಲಿನಲ್ಲಿ ಹರಿದ ಅದೆಷ್ಟೋ ಲುಂಗಿಗಳು.....,ಕಳೆದುಕೊಂಡ ಟಾರ್ಚ್ ಗಳು,....ಹಾಸ್ಟೆಲ್ ವಿಧ್ಯಾರ್ಥಿಗಳಿಗಾಗಿ ಮಧ್ಯ ರಾತ್ರಿ ೧೨.೦೦ ಇಂದ ೨.೦೦ ರವರೆಗೆ ಕಾಯುತ್ತಿದ್ದ ಅಂಗಡಿಯ ಭಟ್ಟರು.....,ಅಂಗಡಿ ಇಂದ ತರುತ್ತಿದ್ದ ಕೋವಾ,ಚಕ್ಲಿ,ಕಡ್ಲೆ ಬೀಜ,ಸೋ೦ಟೆ ಗಳು,....ಪ್ರತಿ ಗುರುವಾರ ಸಂಜೆ ಭಜನೆ,ಭಜನೆ ನಂತರ ಬೆಲ್ಲದ ಅವಲಕ್ಕಿ...ರವಿವಾರ ಸಿಹಿ ಊಟ,....ನಮಗೆ ನಿಗದಿ ಆದ ರವಿವಾರ ಮನೆಯಿಂದ ಫೋನ್ ಬರುವುದೇನೋ ಎಂದು ಕಾಯುವ ರೀತಿ.... ಮನೆ ಇನ್ದೆನಾದರು ಅಪ್ಪ ಅಥವಾ ಅಮ್ಮ ಬರಬಹುದೇನೂ ಎಂದು ಪರಿತಪಿಸುವುದು.....(ನಾನು ಯಾವ ಭಾನುವಾರವೂ ಅಪ್ಪ ಅಮ್ಮನಿಗಾಗಿ ಕಾದಿಲ್ಲ ..ನನಗೆ ಗೊತ್ತು ನಮ್ಮ ಮನೆ ಇಂದ ಬರಲ್ಲ ಅಂತ.. ೨ ವರ್ಷದಲ್ಲಿ ನಮ್ಮ ಹಾಸ್ಟೆಲ್ ಡೇ ಗೆ ಇಬ್ಬರೂ ಬಂದಿದ್ದರು...ಅದೂ ಬಿಟ್ಟರೆ admission ಮತ್ತು ವರ್ಷದ ಮೊದಲ ದಿನ ಬಿಟ್ಟು ಹೋಗಲು,ಅದೂ ಲಗೇಜು ಇರುತ್ತೆ ಅಂತ,ನಮ್ಮ ಅಪ್ಪ ಬಂದಿದ್ದರು ಅಷ್ಟೇ)....ಮಳೆಯಲ್ಲೂ ಮಿಂದು ಆಡುತಿದ್ದ ಆ ಮಜಾ,..ಕಾಲೇಜು ಡೇ ಗಿಂತ ಅದ್ದೂರಿಯಾಗಿ ಮಾಡುತ್ತಿದ್ದ ಹಾಸ್ಟೆಲ್ ಡೇ,..ಹಾಸ್ಟೆಲ್ ಡೇ ದಿನದ ಭರ್ಜರಿ ಊಟ....ಹಾಸ್ಟೆಲ್ ಡೇ ಗೆ ಮಾಡುತ್ತಿದ್ದ ತಿಂಗಳು ಗಟ್ಟಲೆ preparation ಗಳು...ಹಾಸ್ಟೆಲ್ ಡೇ,ಕಾಲೇಜು ಡೇ,ಎದುರಿಗಿನ ಸ್ಕೂಲ್ ಡೇ,ಮೂರು ಕಾರ್ಯಕ್ರಮಗಳಲ್ಲಿ ಒಂದೇ ಭಾಷಣ ಮಾಡುತ್ತಿದ್ದ ಒಬ್ಬ ಅಸ್ಸಾಮಿ..."ನಾನು ಅಮೇರಿಕಾಕ್ಕೆ ಹೋಗಿದ್ದಾಗ......" ಈ ಕಥೆಯನ್ನು ಹೇಳಲು ಮರೆಯುತ್ತಿರಲಿಲ್ಲ....ಒಟ್ಟು ೬ ಬಾರಿ ಇದೆ ಕಥೆಯನ್ನು ಕೇಳಿದ್ದೇವೆ....ಕಾರ್ಯಕ್ರಮಕ್ಕೆ ನಮ್ಮ physica lecturer ನ music....ಪೇಜಾವರ ಮತ್ತು ಸುಭ್ರಮಣ್ಯ ಶ್ರೀಗಳ ಆಶೀರ್ವಚನ... ....ಎಂದೂ ಮಾತಾಡಿಸದ ನಮ್ಮ ಕ್ಲಾಸ್ ಮೇಟ್ ಹುಡುಗಿಯರು.... ಕಾಲೇಜು ಡೇ ಗೆ ನಡೆಯುತ್ತಿದ್ದ ಆಟೋಟಗಳು.... ಕಲಾ ಮತ್ತು ನಮ್ಮ ವಿಜ್ಞಾನ ವಿಭಾಗದ ನಡುವೆ ನಡೆಯುತ್ತಿದ್ದ ಜಗಳಗಳು....ನಂತರ ಗಲಾಟೆ ಮಾಡಿಕೊಂಡ ತಪ್ಪಿಗೆ ನಮ್ಮ ಇಡಿ ವಿಭಾಗವನ್ನು ಆ ವರ್ಷ ಎಲ್ಲಾ ಸ್ಪರ್ಧೆ ಗಳಿಂದ boycott ಮಾಡಿ,ನಂತರ ಪ್ರಾಂಶುಪಾಲರ ಹತ್ತಿರ ಒಪ್ಪಿಸಿ ಮತ್ತೆ ಸ್ಪರ್ಧೆಗೆ ಇಳಿದಿದ್ದು.....ಪಕ್ಕದ ತೋಟಗಳಿಗೆ ಗೇರು ಹಣ್ಣು ತಿನ್ನಲು ಹೋಗಿ,ಮಾಲಿಕನ ಬಳಿ ಸಿಕ್ಕಿ ಹಾಕಿಕೊಂಡು ಅವರು ಬೀಸಿದ ಕಲ್ಲಿನಿಂದ ತಪ್ಪಿಸಿ ಕೊಂಡು ಓಡೋಡಿ ಬಂದಿದ್ದು.... ತುಳು ಪ್ಲಾಸ್ಟಿಕ್ ಡಬ್ಬಕ್ಕೆ ಕಲ್ಲು ಹಾಕಿ ಅಲ್ಲಾಡಿಸಿದ ಹಾಗೆ ಆಗುತ್ತಿದ್ದರೆ,ಕಾಸರಗೋಡಿನ ನಮ್ಮ ಸ್ನೇಹಿತರು ಆಡುತ್ತಿದ್ದ ಮಲಯಾಳಂ ಸ್ಟೀಲ್ ಡಬ್ಬಕ್ಕೆ ಕಲ್ಲು ಹಾಕಿ ಅಲ್ಲಾಡಿಸಿದ ಹಾಗೆ ಆಗುತ್ತಿತ್ತು.....ವಾರ ಗಟ್ಟಲೆ ನಡೆಯುತ್ತಿದ್ದ ದೇವಸ್ಥಾನದ ಜಾತ್ರೆ... ಮೊದಲ ಬಾರಿ ನಿದ್ದೆ ಗೆಟ್ಟು ನೋಡಿದ ಯಕ್ಷಗಾನ....ದಕ್ಷಿಣ ಕನ್ನಡ ವಿಶೇಷವಾದ ಹುಲಿ ವೇಷದ ಕುಣಿತ....ಜಾತ್ರೆಯ ಕೊನೆಯಲ್ಲಿ ಕೋಳಿ ಜಗಳ.... ಭಾಜಿ ಕಟ್ಟುತ್ತಿದ್ದ ಜನಗಳು....ಅರ್ಧಂಬರ್ಧ ಅರ್ಥ ಆದ ತುಳು ನಾಟಕಗಳು...ಹೆಸರು ಮರೆತು ಹೋಗಿವೆ...ಜಾತ್ರೆ ಬಂತು ಅಂದರೆ ನಮಗೆ ಸುಗ್ಗಿಯೋ ಸುಗ್ಗಿ... ಕೈಗೆ ಒಂದಿಷ್ಟು ದುಡ್ಡು ಕೊಡುತ್ತಿದ್ದರು(ತಿಂಗಳ ಬಿಲ್ಲಿನಲ್ಲಿ ಅದನ್ನು ಸೇರಿಸಿ ಮನೆಗೆ ಕಳುಹಿಸುತ್ತಿದ್ದರು).... ಜಾತ್ರೆಗೆ ಕೊಡುವ ದುಡ್ಡನ್ನು ೩೦ ರೂಪಾಯೀ ಇಂದ ೫೦ ರೂಪಯ್ಯೇ ವರೆಗೂ ಒಪ್ಪಿಸಲು ಆಫೀಸು ರೂಮಿನಲ್ಲಿ ಕಾಡಿ ಬೇಡಿದ್ದು....ಜಾತ್ರೆ ದಿನ ಆಮ್ಲೆಟ್ ಗಾಗಿ ಕಾಯುತ್ತಿದ್ದ ನಮ್ಮ ಕೆಲವು ಸ್ನೇಹಿತರು....ಅದನ್ನೇ ಚಿಕನ್ ತಿಂದಷ್ಟು ಖುಷಿಯಲ್ಲಿ ತಿನ್ನುತ್ತಿದ್ದರು...ನನ್ನಂಥ ಪುಳ್ಚಾರಿಗಳಿಗೆ ಐಸ್-ಕ್ರೀಂ ಮತ್ತು ಚುರುಮುರಿಯೇ ಗತಿ....
ಆಫೀಸು ರೂಮಿಗೆ ಮಾತ್ರ ಸೀಮಿತವಾಗಿದ್ದ TV ಯನ್ನು ಯಾವುದಾದರು ಕ್ರಿಕೆಟ್ ಮ್ಯಾಚ್ ಇದ್ದಾಗ ಕಾರಿಡಾರ್ ಗೆ ತರಿಸಿ ನೋಡುತ್ತಿದ್ದದ್ದು..ಎರಡನೇ ವರ್ಷಕ್ಕೆ ಬಂದಾಗ ಒಂದು ಹೊಸ TV ಅನ್ನು ನಮ್ಮ ಮೆಸ್ಸ್ ಗೆ ಇಟ್ಟು,ಅದೂ ಕೇವಲ ರಾತ್ರಿ ೮.೩೦ ರ DD 1 ರ ಇಂಗ್ಲೀಶ್ ಮತ್ತು ಹಿಂದಿ ನ್ಯೂಸ್ ನೋಡಲು ಅವಕಾಶ..ಬರುತ್ತಿದ್ದದ್ದು ಅದು ಒಂದೇ ಚಾನೆಲ್...ಮತ್ತೆ ಕ್ರಿಕೆಟ್ ಮ್ಯಾಚ್ ಇದ್ದಾಗ...
ಟ್ಯಾಂಕ್ ಹಿಂದೆ ಅಥವಾ ಯಾವುದೋ ಮರದ ಹಿಂದೆ ಕತ್ತಲಿನಲ್ಲಿ ನಿಂತು ಸ್ಟಡಿ ರೂಮಿನಲ್ಲಿ ನಿದ್ದೆ ಮಾಡುವವರನ್ನು ಹಿಡಿಯುತ್ತಿದ್ದ ನಮ್ಮ ಮ್ಯಾನೇಜರ್....ಸ್ಟಡಿ ಹವರ್ ನಲ್ಲಿ ಸ್ಟಡಿ ರೂಮಿನಲ್ಲಿ ನಿದ್ದೆ ಮಾಡಿ ಸಿಕ್ಕಿ ಬಿದ್ದ ಮೇಲೆ ಐದು ಐದು ಬಾರಿ,ಕೆಲವೊಮ್ಮೆ ಹತ್ತು ಹತ್ತು ಬಾರಿ ಬರೆಯುತ್ತಿದ್ದ Imposition ಗಳು...Imposition ಗೆ ಸಿಗುತ್ತಿದ್ದದ್ದು Physics ನ derivation ಗಳು,chemistry ಯ ಯಾವುದಾದರೂ acid preparation ಗಳು...Biology ಯ ಚಿತ್ರಗಳು...Maths ನ ಲೆಕ್ಕಗಳು...ಕೆಲವೊಮ್ಮೆ ನಮ್ಮ ಗ್ರೌಂಡ್ ನಲ್ಲಿ ೫ ಅಥವಾ ೧೦ ಸುತ್ತು ಓಡುವುದು....ರಾತ್ರಿ ಹತ್ತರ ನಂತರ ಓದುತ್ತಿದ್ದ(ನಮಗೆ ೯.೩೦ ಕ್ಕೆ ನಿದ್ರಾ ದೇವಿ ಒಲಿದು ಬಿಡುತ್ತಿದ್ದಳು..ಅದಕ್ಕಾಗಿ ಎಷ್ಟೋ ದಿನ imposition ಬರೆದಿದ್ದೇನೆ)ನಮ್ಮ ಕುಳ್ಳ ಶಾಸ್ತ್ರಿ.... ತನ್ನ ರಕ್ತ ಹೀರಿದ ಸೊಳ್ಳೆಗಳನ್ನು ಸಾಯಿಸಿ ಅವನ್ನೆಲ್ಲ ಒಂದು ಪೇಪರ್ ಗೆ ಅಂಟಿಸಿ ಹಿಡುತ್ತಿದ್ದ....ಅಲ್ಲದೆ ಮಧ್ಯ ರಾತ್ರಿಯಲ್ಲಿ ಕಾಲೇಜಿಗೆ ಹೋಗಿ ನಾವು ಬೆಳಗ್ಗೆ ಅದನ್ನು ಪರೆಶೀಲಿಸಲು ಏನಾದರು ಗುರುತು ಇಟ್ಟು ಬರುತ್ತಿದ್ದ ಪುಂಡ....ಕೆಲವೊಮ್ಮೆ ಬೇಗ ನಿದ್ರೆ ಬಂದರೆ ಸುಮ್ಮನೆ ತಲೆ ನೋವು,ಜ್ವರ ಅಂತ ಸುಳ್ಳು ಹೇಳಿ ಮಾತ್ರೆ ತೆಗೆದು ಕೊಂಡು,ಅದನ್ನು ಹೊರಗಡೆ ಬಂದ ಕೂಡಲೇ ಬಿಸಾಡಿ ಮಲಗುತ್ತಿದ್ದ ಉಪಾಯಗಳು....ಸಣ್ಣ ಪುಟ್ಟ ಜಗಳಗಳು..ಮತ್ತೆ ಹೊಂದಾಣಿಕೆ....ಎಲ್ಲರಿಗೂ ಒಂದೊಂದು ಅಡ್ಡ ಹೆಸರುಗಳು....
ಒಮ್ಮೆ ನಾವು ನಾಲ್ಕೈದು ಜನ ದೇವಸ್ಥಾನಕ್ಕೆ ಹೋಗಿ(with permission) ಅಲ್ಲಿಂದ ಹಾಗೆ ಯಾವುದೋ ದಾರಿ ಹಿಡಿದು ಗುಡ್ಡ ಎಲ್ಲಾ ಹಟ್ಟಿ,ಕೊನೆಗೆ ಬಂದ ದಾರಿ ಗೊತ್ತಾಗದೆ ಎಲ್ಲೆಲ್ಲೋ ಸುತ್ತಿ,ಕೊನೆಗೆ ಯಾರನ್ನೋ ಕೇಳಿಕೊಂಡು ಹಾಸ್ಟೆಲ್ ಸೇರಿದ್ದಾಯಿತು....ವಿಷಯ ಅಂದರೆ ನಾವು ಹೋಗಿದ್ದು ವಾರ್ಡನ್ ಗೆ ಗೊತ್ತಾಗಲಿಲ್ಲ..ಇಲ್ಲ ಅಂದಿದ್ರೆ ಅದೇ ಲೆಟರ್...ಮೊಬೈಲ್ ಇಟ್ಟುಕೊಳ್ಳಲು ಅವಕಾಶ ಇಲ್ಲದ ಪರಿಸ್ಥಿತಿಯಲ್ಲಿ ಮೊಬೈಲ್ ಇಟ್ಟಿಕೊಂಡು ಕರ್ತವ್ಯ ಲೋಪ ಹೆಸಗಿದ ಹಾಸ್ಟೆಲ್ ಲೀಡರ್ ನನ್ನು ಆ ಸ್ಥಾನದಿಂದ ಕೆಳಗಿಲಿಸಿದ್ದು(ಬೇಲಿಯೇ ಎದ್ದು ಹೊಲ ಮಯ್ದರೆ ಸರಿ ಇರಲ್ಲ ಅಲ್ವ ಅದಕ್ಕಾಗಿ)....
ವಾರಕ್ಕೆ ಒಂದು ರೂಮಿನವರು ಊಟ ಬಡಿಸುವ ವಿಧಾನ... ಒಮ್ಮೆ ಊಟ ಬಡಿಸುವಾಗ ಲುಂಗಿ ಉಡಲು ಬರದ ನಮ್ಮ ಪ್ರಜ್ವಲ್ ನ ಲುಂಗಿ ನಮ್ಮ ಮೆಸ್ ನಲ್ಲಿ ಜಾರಿ ಕೆಳಗೆ ಬಿದ್ದಿದ್ದು...ನಾನ್-ವೆಜ್ ತಿನ್ನುವ ಸಲುವಾಗಿ ಸ್ವಲ್ಪ ದೊಡ್ಡ ಕಾಯಿಲೆಗಳನ್ನು ಬರೆಸಿಕೊಲ್ಲುತ್ತಿದ್ದ ಇವನು ಪುತ್ತೂರು ಅಥವಾ ಉಪ್ಪಿನಂಗಡಿಗೆ ಹೋಗುತ್ತಿದ್ದ...ಸಣ್ಣ ಪುಟ್ಟ ಕಾಯಿಲೆ ಅಂದರೆ ಅಲ್ಲೇ ೨ ಕಿಮಿ ದೂರದ ಅತೂರಿಗೆ ಕಳುಹಿಸುತ್ತಿದ್ದರು ಅದಕ್ಕಾಗಿ....ಮನೆ ಇಂದ ಬಂದ ಕೂಡಲೇ ಅಲ್ಪ ಸ್ವಲ್ಪ ಚಿಲ್ಲರೆ ಕೊಟ್ಟು,ಬರುವಾಗ ಉಳಿದಿದ್ದು ಇಷ್ಟು,ನಮ್ಮ Personnal account ನಲ್ಲಿ ಇಡಿ ಅಂತ ಹೇಳಿ ನಮ್ಮ ಸಾಚಾತನವನ್ನು ತೋರಿಸುತ್ತಿದ್ದೆವು..ಆದ್ರೆ ಅಲ್ಲಿ ಇಲ್ಲಿ ಒಂದಿಷ್ಟು ದುಡ್ಡು ಇಟ್ಟಿಕೊಂಡು ಇರುತ್ತಿದ್ದೆವು...ಭಟ್ಟರ ಅಂಗಡಿಗೆ ಹೋಗಲು ಬೇಕಲ್ಲ...ಆ ದುಡ್ಡನ್ನು ದಿಂಬಿನ ಹೊಳಗೆ, ನಮ್ಮ Rack ಗಳ ಮೇಲೆ ಯಾವುದಾದರು ವೇಸ್ಟ್ ಡಬ್ಬದ ಹೊಳಗೆ ಅಥವಾ ಇನ್ನೆಲ್ಲೋ ಬಚ್ಚಿಡುತಿದ್ದೆವು...ಯಾವಾಗ IT ರೈಡ್ ಯಾಗುವುದು ಅಂತ ಹೇಳಕ್ಕೆ ಆಗುತಿರಲಿಲ್ಲ...
ಟ್ಯಾಂಕ್ ಕ್ಲೀನ್ ಮಾಡುವ ನೆಪದಲ್ಲಿ ಈಜು ಆಡುತ್ತಿದ್ದು....ಯಾರದೋ ಹಾಸಿಗೆ ಇಂದ ಅತ್ತಿದ ತಿಗಣೆ ಕಾಟ ತಾಳಲಾರದೆ ಎಲ್ಲಾ ಮಂಚಗಳನ್ನು ತೊಳೆದು ಅದಕ್ಕೆ DDT ಹಾಕಿ ತೊಳೆದು,ಕೊನೆಗೆ ಹಾಸಿಗೆಗಳನ್ನೇ ಬಿಸಾಡಿದ್ದು....ನಮ್ಮ Physics sir ನ ಟಾ೦ಟು ಗಳು, ಅವರ ಮದುವೆ ನಿಶ್ಚಯ ಆದಾಗ,ಪ್ರವೃತ್ತಿಯಲ್ಲಿ ಕೀ ಬೋರ್ಡ್ ವಾದಕರಾದ ಅವರಿಗೆ ನಿಮ್ಮ ಮಗು ಹುಟ್ಟುವಾಗಲೇ "ಸ ರೀ ಗ ಮ ಪ " ಅಂತ ಹೇಳುತ್ತದೆ ಅಂತ ಹೇಳಿ ತಿರುಗು ಬಾಣ ಬಿಟ್ಟಿದ್ದು...biology ಯ Human reproduction ಪಾಠ ನಡೆಯುವಾಗ ಕಿಸಕ್ಕನೆ ನಕ್ಕ ಒಬ್ಬ ಕ್ಲಾಸ್ ಮೇಟ್ ನನ್ನು ಬೈದು ಹೊರಗೆ ಕಳುಹಿಸಿದ್ದು...ಮುಖ್ಯವಾಗಿ ಹಾಸ್ಟೆಲ್ ವಿಧ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿ ತೋರಿಸಿದ,ನಮ್ಮನ್ನು ಅಷ್ಟೇ ಮಮತೆ ಇಂದ ನೋಡಿದ ಮತ್ತು ನಮ್ಮ ಆಟಗಳನ್ನು ಸಹಿಸಿಕೊಂಡು ಒಂದೂ ದಿನ ಬೇಜಾರು ಮಾಡಿಕೊಳ್ಳದ ನಮ್ಮ ಕ್ಲಾಸ್ ಟೀಚರ್ ಆದ ನಮ್ಮ maths ಮೇಡಂ...ಸ್ವಲ್ಪ ಸ್ಟ್ರಿಕ್ಟ್ ಇಂದ ನೋಡಿಕೊಂಡು ನಮ್ಮನ್ನು ಸ್ವಲ್ಪ ಹತೋಟಿಯಲ್ಲಿ ಇಟ್ಟಿಕೊಂಡಿದ್ದ ನಮ್ಮ chemistry ಸರ್ ಮತ್ತು ಅವರೇ ನಮ್ಮ ವಾರ್ಡನ್ ಕೂಡ....ಎರಡನೆ ವರ್ಷೆ ಅವರು ಬಿಟ್ಟು ಹೋಗಿ ಬೇರೆ ಉಪನ್ಯಾಸಕರೆ ಇಲ್ಲದೆ ಇದ್ದಾಗ ಬೇರೆ ಕಾಲೇಜಿನ ಒಬ್ಬರು ನಮಗೆ ಬಂದು ಪಾಠ ಮಾಡುತ್ತಿದ್ದರು...ಜಪಾನ್ ನ ರೈತ Fukuoka ಬಗ್ಗೆ ಇದ್ದ ಪಾಟವನ್ನು ಬಹಳ ಮೆಚ್ಹುಗೆ ಇಂದ ಮಾಡುತ್ತಿದ್ದ ನಮ್ಮ ಇಂಗ್ಲಿಷ್ ಉಪನ್ಯಾಸಕರಿಗೆ ನಮ್ಮ ಸೀನಿಯರ್ಸ್ ಅದೇ ಅಡ್ಡ ಹೆಸರು ಇಟ್ಟಿದ್ದರು....

ಸ್ವತಂತ್ರ ದಿನ ಸಲುವಾಗಿ ನಡೆಯುವ 'ಸೃಜನ' ಕಾರ್ಯಕ್ರಮದಲ್ಲಿ ಇವರು ಹಾಡಿದ್ದ 'ಉತ್ತರ ಧ್ರುವಧಿಂ ದಕ್ಷಿಣ ಧ್ರುವಕೂ....' ಹಾಡು.... ಬಹಳ ಸುಲಲಿತವಾಗಿ ವಿವರಿಸುತ್ತಿದ್ದ ಕನ್ನಡ ಉಪನ್ಯಾಸಕರು...ಇವರು ಭೋದಿಸಿದ ಯಯಾತಿ ನಾಟಕ....ಉತ್ತಮ ವಾಗ್ಮಿಗಳು ಕೂಡ...ಇವರುಗಳ ಒಡನಾಟ ಪಡೆದದಕ್ಕೆ ಧನ್ಯೋಸ್ಮಿ !!!
ಎಲ್ಲಾ ವಿಷಯಗಳನ್ನು ಚಾಡಿ ಹೇಳಿ ಎಷ್ಟೋ apology ಲೆಟರ್ ಮತ್ತು ಸಹಿ ಗಳಿಗೆ ಕಾರಣನಾದ ಒಬ್ಬನಿಗೆ ಕರೆಂಟ್ ಹೋದಾಗ ,ಮೊದಲೇ ಜನರೇಟರ್ ಅನ್ನು ಸ್ವಲ್ಪ ಲೇಟ್ ಆಗಿ ಸ್ಟಾರ್ಟ್ ಮಾಡಲು ತೀರ್ಮಾನಿಸಿ ,ಬೆಡ್ ಶೀಟ್ ಮುಚ್ಚಿ ಧರ್ಮದೇಟು ಕೊಟ್ಟು ಕೊನೆಗೆ ತಮಾಷೆಗೆ ಎಂದಿದ್ದು...ಆದರೂ ಬುದ್ಧಿ ಬರಲಿಲ್ಲ ಅವನಿಗೆ....
ಹಾಸ್ಟೆಲ್ ಡೇ ಕೆಲವು ಸ್ಪರ್ಧೆಗಳು..ಅದರಲ್ಲಿ ಬೆಳಗ್ಗೆ ಬೆಳಗ್ಗೆ ನೀರು ಕುಡಿಯುವ ಸ್ಪರ್ಧೆ ಕೂಡ ಒಂದು....ನೀರು ಕುಡಿದು ಒಂದು ನಿಮಿಷ ವಾಂತಿ ಮಾಡುವ ಹಾಗಿಲ್ಲ...
ಒಬ್ಬನ ವಾಚ್ ಕದ್ದು ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಅದನ್ನು ಟಾಯ್ಲೆಟ್ ಗೆ ಬಿಸಾಕಿ ಕೊನೆಗೂ ಸಿಕ್ಕಿ ಬಿದ್ದ ಅವನ ಮನೆ ಇಂದ ಕರೆಸಿ ಬುದ್ಧಿ ಹೇಳಿದ ವಾರ್ಡನ್....
ಕೆಲವು ಸಿಟಿ ಹುಡುಗರಿಗೆ ಇತ್ತ ಲುಂಗಿ ಉಡಲು ಬರಲ್ಲ,ಪ್ಯಾಂಟ್ ಹಾಕಬೇಕಂದ್ರೆ ಒಂದು ಥರಾ ಹಿಂಸೆ,ಜೊತೆಗೆ ಬರ್ಮುಡಾ ಹಾಕಿಕೊಳ್ಳುವ ಹಾಗಿಲ್ಲದ ನಮ್ಮ ರೂಲ್ಸ್ ,ಅಂತ ನಮ್ಮ ಸ್ನೇಹಿತರು ಒಳಗೆ ಬರ್ಮುಡಾ ಚಡ್ಡಿ ಹಾಕಿಕೊಂಡು,ಹೇಗ್ ಬೇಕೋ ಹಾಕಿ ಪಂಚೆ ಸುತ್ತಿಕೊಂಡು ನಡೆಯುವಾಗ ಕೆಳಗೆ ಬಿಳುತ್ತಿದ್ದರು....
ಧನುರ್ ಮಾಸದಲ್ಲಿ ಬೆಳಗ್ಗೆ ಆ ಕೊರೆಯುವ ಚಳಿಯಲ್ಲಿ ತಣ್ಣೀರು ಸ್ನಾನ ಮಾಡಿ ದೇವಸ್ಥಾನದ ಮಹಾ ಮಂಗಳಾರತಿಗೆ ಹೋಗುತ್ತಿದ್ದ ನಮ್ಮ ಭಕ್ತಿ....
ಪ್ರದೀಪ ಎಂದು ಕೂಗಿದ ಹೆಸರನ್ನು ಪ್ರತಿಭಾ ಎಂದು ತಪ್ಪು ತಿಳಿದು ,ಆ ಹುಡುಗಿ ಕಂಪ್ಲೇಂಟ್ ಕೊಟ್ಟು,"ನೀವು ಇಲ್ಲಿ ಅಷ್ಟೂ ದೂರದಿಂದ ಓದಕ್ಕೆ ಬಂದಿದ್ದಿರ,ಒಳ್ಳೆ ಮಾರ್ಕ್ಸ್ ಮತ್ತು ಹೆಸರು ತಗೊಂಡ್ ಹೋಗಿ,ಅದೂ ಬಿಟ್ಟು ಲವ್ ಅಂತ ಸುತ್ತಾಡಿದರೆ ಹೇಳಿ,ಮದುವೆ ಕೂಡ ಇಲ್ಲೇ ಮಾಡಿ ಕಳುಹಿಸುತ್ತೇವೆ"ಅಂತ ಮೀಟಿಂಗ್ ನಲ್ಲಿ ಹೇಳಿದ್ದು....
ಯಾರೋ ಪುಣ್ಯಾತ್ಮ ಕೊಡದು ಕೊಟ್ಟ,೪ ಅಥವಾ ೫ kg ಕೊಡ್ತಾರೆ,ಅದೂ ಬಿಟ್ಟು ಬರೋಬ್ಬರಿ ೨ ಚೀಲ ತೊಂಡೆ ಕಾಯಿ ಕೊಟ್ಟಿದ್ದ,೪ ದಿನ ಮಧ್ಯಾನ ಸಾರು,ರಾತ್ರಿ ಸಾರು,ಪಲ್ಯ ಎಲ್ಲಾ ತೊಂಡೆ ಕಾಯಿಂದೆ....ಕೊನೆಗೆ ಬೇಸತ್ತು ಅವರೇ ಅದನ್ನು ಮಾಡುವುದನ್ನು ಕಡಿಮೆ ಮಾಡಿಬಿಟ್ಟರು...
ಇಂಥ ಹಾಸ್ಟೆಲ್ನಲ್ಲಿ ೨ ವರ್ಷ ಮನೆ ಇಂದ,ಮನೆಯವರಿಂದ ದೂರ ಇದ್ದ ನಾವುಗಳು ಇಂಥ ಹತ್ತು ಹಲವಾರು ನೆನಪುಗಳನ್ನು ಹೊತ್ತು ಕಳೆದ ವಾರ ಭೇಟಿ ಮಾಡಿ ಮತ್ತೆ ಈ ನೆನಪುಗಳನ್ನು ಮೆಲುಕು ಹಾಕುತ್ತಾ,ಅಲ್ಲಿ ಇಲ್ಲಿ ಸುತ್ತಾಡಿ,ಆ ದಿನಗಳ ಹಾಗೆ ರಾಜಕೀಯ,ಕ್ರೀಡೆ,ಸಿನೆಮಾ ಹೀಗೆ ಹಲವಾರು ವಿಷಯಗಳ ಚರ್ಚೆ,ಜೊತೆಗೆ ಕಾಲೇಜು ಬಿಟ್ಟ ಮೇಲೆ ನಮ್ಮ ಜೀವನ ಸಾಗಿದ ಪಥ,ಕೆಲವರು ಬೇರೆ ದೇಶಕ್ಕೆ ಹೋಗಿ ಬಂದ ಅನುಭವಗಳು,ಕೆಲವರು ನಂತರ ಕಾಲೇಜು ಬಿಟ್ಟು ಬಿಸಿನೆಸ್ ಶುರು ಮಾಡಿದ್ದು,ಕೆಲವರು ನಂತರ ಕಾಲೇಜಿನಲ್ಲಿ ಆದ ಅವರ ವಿಫಲ ಪ್ರೇಮ ಕಥೆಗಳು,ಹುಡುಗಿ ಕೈ ಕೊಟ್ಟು ಹೋದ ಮೇಲೆ ಸ್ವಲ್ಪ ದಿನ ಹದ ಗೆಟ್ಟಿದ್ದ ಜೀವನ,ಕೆಲಸ ಸಿಗದೆ ಅಲೆದ ದಿನಗಳು,ಹೀಗೆ ಎಷ್ಟೋ ವಿಷಯಗಳನ್ನು ಮಾತಾಡಿ ಹಳೆ ನೆನಪುಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಕೊನೆಗೆ ಭರ್ಜರಿ ಪಾರ್ಟಿ ಮಾಡಿ,ಮಧ್ಯ ರಾತ್ರಿ ೪.೦೦ ಘಂಟೆ ವರೆಗೆ ಮೈಸೂರು ರಸ್ತೆಯಲ್ಲಿ ಬೈಕ್ ಗಳಲ್ಲಿ ಸುತ್ತಾಡಿ ಒಟ್ಟಾರೆ ಮಸ್ತ್ ಎಂಜಾಯ್ ಮಾಡಿದ್ವಿ....
ಇಷ್ಟೆಲ್ಲಾ ನೆನಪುಗಳು ಮರುಕಳಿಸುವುದಕ್ಕೆ ಕಾರಣವಾಗಿದ್ದು ಮಂಗಳೂರು,ಮುಂಬಯಿ,ಮಂಡ್ಯ,ಚಿಕ್ಕಬಳ್ಳಾಪುರ,ಚೆನ್ನೈ ಇಂದ ಬಂದಿದ್ದ ನಮ್ಮ ಸ್ನೇಹಿತರು,ಕೆಲವರು ಕಾರಣಾಂತರಗಳಿಂದ ಬರಲಿಲ್ಲ...ಈ ಒಂದು ದಿನವನ್ನು ಮಿಸ್ ಮಾಡಿಕೊಂಡರು..ಇದಕ್ಕೂ ಮುಂಚೆ ಎಷ್ಟೋ ಬಾರಿ ಭೇಟಿ ಆಗಿದ್ದೇವೆ ಆದರೂ,ಇಷ್ಟೊಂದು ಜನ ಒಟ್ಟಿಗೆ ಸೇರಿದ್ದು ಬಹುಶಃ ಕಾಲೇಜು ಬಿಟ್ಟ ಮೇಲೆ ಇದೆ ಮೊದಲು....

ರಾಮಕುಂಜದಲ್ಲಿ ಕಳೆದೆ ದಿನಗಳ ನೆನಪುಗಳು ಅಚ್ಚಳಿಯದ ಹಾಗೆ ಇನ್ನು ಹಚ್ಹ ಹಸುರಾಗಿದೆ....ಇದು ನನ್ನ ಜೀವನದಲ್ಲಿ ಬಹಳ ದೊಡ್ಡ ತಿರುವು ಕೊಟ್ಟ ಸ್ಥಳ... ಜೀವನದ ಎಷ್ಟೋ ಬಹು ಮುಖ್ಯ ಪಾಠಗಳನ್ನು ಹೇಳಿಕೊಟ್ಟಿದೆ....ಸಾಮಾಜಿಕವಾಗಿ ಬಹಳ ವಿಷಯಗಳನ್ನು ತಿಳಿಸಿದೆ.... ಎಂದೂ ಮರೆಯಲಾಗದ ದಿನಗಳು ಅವು....
ನಮ್ಮ ಹಾಸ್ಟೆಲ್ ಮತ್ತು ಸುತ್ತಮುತ್ತಲ ಪ್ರದೇಶಗಳ ಒಂದು ಕಿರು ನೋಟ ..... ಈ ಲಿಂಕ್ ನಲ್ಲಿದೆ....