Wednesday, June 27, 2012

"ಪುಸ್ತಕ ಮನೆ" ಎಂಬ ವಿಸ್ಮಯ ಲೋಕದ ಸುತ್ತ !!!!



ಕಳೆದ ವಾರ ಒಂದಿಷ್ಟು ಜನ ಬ್ಲಾಗಿಗರೆಲ್ಲರೂ ಸೇರಿ "ಪುಸ್ತಕ ಮನೆ" ಎಂಬ ವಿಶಿಷ್ಟ,ವಿಸ್ಮಯ ಲೋಕಕ್ಕೆ ಹೋಗಿದ್ದೆವು.ಅದೊಂದು ಪುಸ್ತಕದ ಸಾಗರ,ಅಲ್ಲಿ ಯಾವ ವಿಷಯಕ್ಕೆ ಸಂಬಂಧಿಸಿದ ಪುಸ್ತಕ ಬೇಕಾದರೂ ಸಿಗುತ್ತದೆ,ಅದು ಕೇವಲ ಒಬ್ಬ ವ್ಯಕ್ತಿ ತನ್ನ ಜೀವಮಾನವಿಡಿ ದುಡಿದ ದುಡ್ಡಿನಿಂದ ಕೊಂಡ ಪುಸ್ತಕಗಳು.ನಿಸ್ವಾರ್ಥತೆಯಿಂದ ತನ್ನ ಜೀವನವನ್ನು ಕೇವಲ ಪುಸ್ತಕ ಸಂಗ್ರಹಕ್ಕಾಗಿ ಯೋಜಿಸಿ ಕೂಡಿಟ್ಟ ಪುಸ್ತಕಗಳು.ಇಂಥ ಒಂದು ಸರಸ್ವತಿ ಲೋಕದ ನಿರ್ಮಾತೃ,ಶ್ರೀಯುತ ಅಂಕೇಗೌಡರು.
ಪುಸ್ತಕ ಮನೆಗೆ ಭೇಟಿ ಕೊಡುವ ಮೊದಲು ಅವರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ,ತಮ್ಮ ಶಿಕ್ಷಣದ ನಂತರ ಕೆಲ ಸಮಯ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸಿ,ನಂತರ ಮೈಸೂರಿನಲ್ಲಿ ಡಿಗ್ರಿ ಮುಗಿಸಿ ಓದಿನ ನಂತರ ಪಾಂಡವಪುರ ಸಕ್ಕರೆ ಕಾರ್ಖಾನೆ ಯಲ್ಲಿ ಟೈಮ್ ಆಫಿಸರ್ ಆಗಿ ಕೆಲಸಕ್ಕೆ ಸೇರಿ ಕೊಂಡರು.ತಮ್ಮ ಗುರುಗಳಾದ ಕೆ.ಅನಂತರಾಮು ಅನ್ನುವವರು "ಮನುಷ್ಯನಿಗೆ ಒಳ್ಳೆಯ ಹವ್ಯಾಸಕ್ಕಿಂತ ಮೌಲ್ಯಯುತವಾದ ಗುಣ ಯಾವುದು ಇಲ್ಲ,ಪುಸ್ತಕಗಳನ್ನು ಸಂಗ್ರಹಿಸು,ಬಡವರಿಗೆ ಸಹಾಯ ಆಗಬಹುದು" ಎಂದಿದ್ದರಂತೆ,ಅದನ್ನೇ ತಲೆಯಲ್ಲಿಟ್ಟುಕೊಂಡು ಮುಂದೆ ಸಂಗ್ರಹ ಕಾರ್ಯಕ್ಕೆ ನಾಂದಿ ಹಾಡಿದರು.ಅದರ ಪ್ರತಿಫಲವೇ ಇಂದು ನಮ್ಮೆದುರಿಗೆ ಕಂಡ ರಾಶಿ ರಾಶಿ ಪುಸ್ತಕ.
ಅವರ ಕೆಲಸದಲ್ಲಿದ್ದಾಗ ತಮ್ಮ ಕ್ವಾಟ್ರಸ್ ತುಂಬಾ ಬರಿ ಪುಸ್ತಕಗಳೇ ಇದ್ದವಂತೆ,ಮಧ್ಯದಲ್ಲಿ ಒಬ್ಬರಿಗೆ ಓಡಾಡಲು ಜಾಗ ಬಿಟ್ಟರೆ,ಇನ್ನೆಲ್ಲ ಜಾಗ ಪುಸ್ತಕಗಳಿಂದ ತುಂಬಿತ್ತು,ನಂತರ ಆ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದು ಬಂದ ಪಿ.ಎಫ್ ಹಣ,ಅಲ್ಲದೆ ತಮ್ಮ ಗದ್ದೆಯಲ್ಲಿ ಬೆಳೆದಿದ್ದ ಕಬ್ಬು ಮಾರಿ ಬಂದ ಹಣ,ಎಲ್.ಐ.ಸಿ ಏಜೆಂಟ್ ಆಗಿ ದುಡಿದಿದ್ದ ಹಣ,ಅದೂ ಸಾಲದೆ ಮೈಸೂರಿನಲ್ಲಿದ್ದ ತಮ್ಮ ನಿವೇಶನವನ್ನು ಕೂಡ ಮಾರಿ ಅದರಿಂದ ಬಂದ ಹಣವನ್ನು ಪುಸ್ತಕ ಸಂಗ್ರಹಕ್ಕಾಗಿ ಬಳಸಿದ್ದಾರೆ.ಒಂದು ಸಮಯದಲ್ಲಿ ಆ ಪುಸ್ತಕಗಳನ್ನು ಸರಿಯಾಗಿ ಜೋಡಿಸುವ ಕಾರ್ಯ ಆಗಲಿ,ಅವುಗಳನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳುವುದೇ ಅಂದು ಜವಾಬ್ದಾರಿ ಕೆಲಸ ವಾಗಿತ್ತು,ಆ ಸಮಯದಲ್ಲಿ ಅವರ ಆಪ್ತ ಸ್ನೇಹಿತರೆಲ್ಲರೂ ಸೇರಿ ಒಂದು ಯೋಜನೆ ರೂಪಿಸಲು ನಿರ್ಧರಿಸಿದ್ದರು.ಅದೇ ಸಮಯದಲ್ಲಿ ಕೆ.ಅರ್.ಎಸ್ ನ ಹಿನ್ನೀರಿನಲ್ಲಿ  ಮುಳುಗಿ ಹೋಗಿದ್ದ ವೇಣು ಗೋಪಾಲ ಸ್ವಾಮೀ ದೇವಸ್ಥಾನವನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿತ್ತು,ಅದನ್ನು ಖ್ಯಾತ ಉದ್ಯಮಿ  ಶ್ರೀ ಹರಿ ಖೋಡೆಯವರು ನಿಭಾಯಿಸುತ್ತಿದ್ದರು,ಆ ಸಮಯದಲ್ಲಿ ಈ ಪುಸ್ತಕ ಸಂಗ್ರಹಣೆಯ ಮತ್ತು ಅವುಗಳಿಗೆ ಸರಿಯಾದ ವ್ಯವಸ್ಥೆ ಇಲ್ಲದಿರುವುದನ್ನು   ಸ್ಥಳೀಯರಿಂದ ಮನಗಂಡ ಖೋಡೆಯವರು ಅಂಕೇಗೌಡರ ಸಹಾಯಕ್ಕೆ ಬಂದರು.

ಈ ಪುಸ್ತಕ ಸಂಗ್ರಹಣೆಗೆ ಮನಸೋತ ಖೋಡೆಯವರು ಅಂಕೇಗೌಡರಿಗೆ ಹಣ ಸಹಾಯ ಮಾಡಲು ಮುಂದೆ ಬಂದಾಗ ಅವರು ತಮಗೆ ಹಣಕ್ಕಿಂತ ಈ ಪುಸ್ತಕಗಳಿಗೆ ಒಂದು ಸರಿಯಾದ ವ್ಯವಸ್ಥೆ ಮಾಡಿಕೊಟ್ಟರೆ ಸಾಕು ಎಂದಾಗ ಖೋಡೆಯವರು ಒಬ್ಬ ಇಂಜಿನಯರ್ ಮತ್ತು ಅವರೊಂದಿಗೆ ನಲವತ್ತು ಜನ ಸಹಾಯಕರನ್ನು ಆ ಪುಸ್ತಕಗಳ ವಿಂಗಡಣೆ ಮಾಡಲು ಕಳುಹಿಸಿಕೊಟ್ಟರು,ನಂತರ ಆ ಗ್ರಾಮದಲ್ಲಿ ಒಂದು ಹಳೆಯ ಟೆಂಟ್ ಅನ್ನು ಕೊಂಡು ಅದನ್ನು ಅಂಕೇಗೌಡ ಜ್ಞಾನ ಪ್ರತಿಷ್ಠಾನದ ಹೆಸರಿಗೆ ನೊಂದಾಯಿಸಿ ಕೊಟ್ಟಿದ್ದಾರೆ.ಆ ಸಮಯದಲ್ಲಿ ಸುತ್ತಮುತ್ತಲಿನ ಹಳ್ಳಿಯ ಜನ ನಾ ಮುಂದು ತಾ ಮುಂದು ಅನ್ನುವ ಹಾಗೆ ಆ ವಿಂಗಡಣೆ ಕಾರ್ಯ ನಡೆಯುವಾಗ ಆ ಕೆಲಸದವರಿಗೆ ಪ್ರತಿ ದಿನ ಊಟ ತಿಂಡಿಯ ವ್ಯವಸ್ಥೆ ಮಾಡಿ ಕೊಟ್ಟಿದ್ದನ್ನು ಶ್ರೀಯುತರು ಸ್ಮರಿಸಿದರು.ಅಲ್ಲದೆ ಅವರ ಕೆಲವು ಆಪ್ತ ಸ್ನೇಹಿತರು ಕೂಡ ಅವರಿಗೆ ತುಂಬಾ ಸಹಾಯ ಮಾಡಿದ್ದಾರೆ ಎಂದು ಕೂಡ ಹೇಳಿದರು.
ಯಾವ ಸಂಸ್ಥೆಯಲ್ಲಿ ಇಲ್ಲದ ಪುಸ್ತಕಗಳು ಕೂಡ ಇಲ್ಲಿ ಸಿಗುತ್ತವೆ,ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಇಲ್ಲಿಗೆ ತಮ್ಮ ಅಧ್ಯಯನಕ್ಕೆ ಅವಶ್ಯ ಇರುವ ಹೆಚ್ಚಿನ ಪುಸ್ತಕಗಳನ್ನು ಹರಸಿ ಇಲ್ಲಿಗೆ ಬರುತ್ತಾರೆ.ಇಲ್ಲಿ ಜೈನ ಸಾಹಿತ್ಯ,ಶರಣ ಸಾಹಿತ್ಯ,ದಾಸ ಸಾಹಿತ್ಯ,ಪುರಾಣ,ಹಳ ಗನ್ನಡ ಕೃತಿಗಳು,ಕಥಾ ಸಂಕಲನಗು,ಕಾವ್ಯ ಸಂಕಲನಗಳು,ಕಾದಂಬರಿ,ಪ್ರಭಂದ,ಆತ್ಮ ಚರಿತ್ರೆ,ನಾಟಕಗಳು,ಇನ್ನು ಯಾವ್ಯಾವ ಸಾಹಿತ್ಯ ಪ್ರಕಾರಗಳು ಇವೆಯೋ ಅವೆಲ್ಲವೂ ಕೂಡ ಇಲ್ಲಿ ಸಿಗುತ್ತದೆ,ಅಲ್ಲದೆ ದೇಶ ವಿದೇಶದ ನಾಣ್ಯಗಳು,ಹಳೆ ಕಾಲದ ಲಗ್ನ ಪತ್ರಿಕೆಗಳು ,ಅದಕ್ಕಿಂತ ಮಿಗಿಲಾಗಿ ಭಾರತದ ರಾಜ ಮಹಾರಾಜರುಗಳ ಫೋಟೋಗಳು ಸಿಗುತ್ತವೆ...

.ಅಲ್ಲದೆ  ಶತಮಾನಗಳಷ್ಟು  ಹಳೆಯ   ಪುಸ್ತಕಗಳು ಇಲ್ಲಿ ಸಿಗುತ್ತವೆ.ಅದೆಲ್ಲದಕ್ಕಿಂತ ನಮಗೆ ಒಂದು ಆಶ್ಚರ್ಯ ಕಾದಿತ್ತು.ಇದುವರೆಗೆ ಕನ್ನಡದಲ್ಲಿ ಕಿಟ್ಟೆಲ್ ನ ಶಬ್ದಕೊಶವೇ ಮೊದಲನೆಯದು ಎಂದು ಭಾವಿಸಿದ್ದ ನಮಗೆ ಅಲ್ಲಿ ಒಂದು ಸತ್ಯ ಗೋಚರವಾಯಿತು.ಕಿಟ್ಟೆಲ್ ನ ಶಬ್ದಕೊಶ ಬಂದಿದ್ದು ೧೮೯೪ರಲ್ಲಿ,ಅದಕ್ಕಿಂತ ಮುಂಚೆಯೇ ಇದ್ದ ಶಬ್ದಕೋಶ ಅಂದರೆ " A Dictionary-Carnese and English" by Rev W.Reeve ಎಂಬುದು...ಅಲ್ಲಿ ಇದ್ದಿದ್ದು ಇದರ ಪರಿಷ್ಕೃತ ಆವೃತ್ತಿ "Revised,enlarged and corrected by Daniel Sanderson"..Daniel Sanderson ಎಂಬಾತ ಆ ಶಬ್ದಕೋಶವನ್ನು ೧೮೫೮ರಲ್ಲಿ ಪರಿಷ್ಕರಿಸಿದ್ದಾನೆ,ಅಂದರೆ ೧೮೫೮ಕ್ಕಿನ್ತ ಹಳೆಯದು ಎಂಬುದು.ಅಲ್ಲದೆ ಇದು ಸುಮಾರು ೧೦೦೦ ಪುಟಗಳಿಷ್ಟಿದೆ.
೧೮೫೮ರಲ್ಲಿ ಪ್ರಕಟಗೊಂಡಿರುವ ಶಬ್ದಕೋಶ 
ಇಷ್ಟೇ ಅಲ್ಲದೆ ಅಲ್ಲಿ  ಕೇವಲ ಕನಡದ ಪುಸ್ತಕಗಳು ಮಾತ್ರ ಸಿಗುವುದಿಲ್ಲ,ಬದಲಾಗಿ ತಮಿಳು,ತೆಲುಗು,ಕೊಡವ,ಉರ್ದು,ಮಲಯಾಳಂ,ಆಂಗ್ಲ,ಫ್ರೆಂಚ್,ಜಪಾನಿ,ಚೀನಿ ಪುಸ್ತಕಗಳು ಸಿಗುತ್ತವೆ,ಅಲ್ಲದೆ ಜಗತ್ತಿನ ಶ್ರೇಷ್ಠ ಕೃತಿಗಳು ಇಲ್ಲಿ ಲಭ್ಯ, ಶೇಕ್ಸ್ಪಿಯರ್ ನ ಕೃತಿಗಳು,ವರ್ಡ್ ವರ್ತ್,ಸಿಡ್ನಿ  ಶೆಲ್ದೊನ್ ನ ಕಾದಂಬರಿಗಳು ಸಿಗುತ್ತವೆ.ವೈಜ್ಞಾನಿಕ,ಭೌಗೋಳಿಕ,ಇತಿಹಾಸ,ವಾಸ್ತು ಶಿಲ್ಪಿ,ಶಿಲ್ಪಕಲೆ,ಇನ್ನು ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ..ಹಾಗೆ ಅಲ್ಲಿ ಸಿಗದ ವಿಷಯ ಇಲ್ಲ.." You give the topic,he will get you the book" ಎಂಬುದು ಆ ಪುಸ್ತಕ ಮನೆಯ ಸೂತ್ರ....

ಇಷ್ಟೇ ಅಲ್ಲದೆ ಮೈಸೂರು  ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ವಿಧ್ಯಾರ್ಥಿ ಒಬ್ಬರು ಇವರ ಬಗ್ಗೆ ಪ್ರಭಂದವನ್ನು ಮಂಡಿಸಿದ್ದಾರೆ.ಒಂದು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಪದವಿಗೆ ಇವರು ವಿಷಯ ಆಗಿದ್ದಾರೆ ಅಂದರೆ ಅದಕ್ಕಿಂತ ಹಿರಿಮೆ,ಸಾರ್ಥಕತೆ ಬೇಕೇ?

ಈ ಪುಸ್ತಕ ಮನೆಯಿಂದ ಸುತ್ತಮುತ್ತಲ ಬಡ ವಿದ್ಯಾರ್ಥಿಗಳಿಗೆ,ಅಲ್ಲದೆ ಮೈಸೂರು,ಮಂಡ್ಯದಿಂದ ಕೂಡ ಪದವಿ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅನುಕೂಲವಾಗಿದೆ.ಇದೆಲ್ಲದರ ಹಿಂದೆ ಅವರ ಅವಿರತ ಪರಿಶ್ರಮ ಇದೆ,ಅದಕ್ಕಿಂತ ಮಿಗಿಲಾಗಿ ಆ ಒಂದು ದೃಷ್ಟಿಕೋನ ಅವರಲ್ಲಿದೆ.ಇಲ್ಲಿ ಅಂಕೇಗೌಡ ರನ್ನು ಮತ್ತು ಅವರ ಕಾಯಕವನ್ನು ಮೆಚ್ಚುವುದಕ್ಕಿಂತ ಹೆಚ್ಚಾಗಿ ಅವರ ಶ್ರೀಮತಿಯವರಾದ ಜಯಲಕ್ಷ್ಮಿ ಅವರಿಗೆ ಕೂಡ ಕೋಟಿ ಪ್ರಣಾಮಗಳನ್ನು ಸಲ್ಲಿಸಬೇಕು,ಈ ಒಂದು ಕೆಲಸದ ಹಿಂದೆ ಅವರ ಪರಿಶ್ರಮ ಮತ್ತು ಅವರ ಸೇವೆ ಕೂಡ ಮಿಗಿಲಾದದ್ದು.ಈ ಒಂದು ಗ್ರಂಥಾಲಯದ ಹಿಂದೆ ಅವರು ಪಟ್ಟಿದ್ದು ಶ್ರಮ ಮಾತ್ರ ಅಲ್ಲ,ನೋವು,ಅವಮಾನವನ್ನು ಕೂಡ ಸಹಿಸಿಕೊಂಡಿದ್ದಾರೆ.ಕೆಲವರು ಇವರನ್ನು "ಹುಚ್ಚರಂತೆ ಏನೇನೋ ಮಾಡ್ತಾರೆ" ಎಂದು ಕೂಡ ನಿಂದಿಸಿದ್ದಾರೆ,ಎಂದು ತಮ್ಮ ಹಳೆಯ ನೆನಪುಗಳನ್ನು ಹೇಳಿಕೊಂಡರು.

ಅಲ್ಲಿಗೆ ಭೇಟಿ ಕೊಡುವ ಪ್ರತಿಯೊಬ್ಬರನ್ನು ಕೂಡ ಬಹಳ ವಿನಮ್ರತೆಯಿಂದ ,ಸೌಜನ್ಯದಿಂದ ಮಾತಾಡಿಸುತ್ತಾರೆ,ಸತ್ಕರಿಸುತ್ತಾರೆ.ಅದು ಅವರ ದೊಡ್ಡ ಗುಣ...


ಅಲ್ಲಿನ ಕೆಲವು ಪುಸ್ತಕಗಳತ್ತ ಒಂದು ಕಣ್ಣು ಹಾಯಿಸೋಣ..







ಎಂಥಾ ಸೌಜನ್ಯ..

ಅವರ್ರ ಸಾಧನೆಗೆ ದೊರೆತ ಪ್ರತಿಫಲ...ಇನ್ನು ಸಾಕಷ್ಟು ಪ್ರಶಸ್ತಿ ಪತ್ರಗಳು ಅಲ್ಲಲ್ಲಿ ಇದ್ದವು.


ಭಾರತದ ಎಷ್ಟೋ ರಾಜರುಗಳ ಫೋಟೋಗಳು ಇಲ್ಲಿ ಸಿಗುತ್ತವೆ






ಗ್ರಂಥಾಲಯದ ಒಳ ನೋಟ
50 Wonders of teh World ಎಂಬ ಪುಸ್ತಕವನ್ನು ತೋರಿಸುತ್ತಿದ್ದಾರೆ..


ಇಷ್ಟೆಲ್ಲಾ ಸಂಗ್ರಹಣೆಗೆ ಸಾಥ್ ನೀಡಿದ ಅವರ ಪತ್ನಿಯೊಂದಿಗೆ ಅಂಕೇಗೌಡರು

ಅವರ ಆಪ್ತ ಸ್ನೇಹಿತರು..


ಮಹಾಯುದ್ಧಕ್ಕೆ ಸಂಭದಿಸಿದ್ದು


Encyclopedia
ಎಲ್ಲೆಲ್ಲೂ ಪುಸ್ತಕದ ರಾಶಿ

ಸುಧಾ ಪತ್ರಿಕೆಯ ಮೊದಲ ಸಂಚಿಕೆ ಬಂದಿದ್ದು ಜನವರಿ ೧೧,೧೯೬೫ ರಲ್ಲಿ..ಅದರ ಒಳಪುಟ....

ಸುಧಾ ವಾರ ಪತ್ರಿಕೆಯ ಮೊದಲ ಸಂಚಿಕೆ


ಎಲ್ಲೆಲ್ಲೂ ಪುಸ್ತಕದ ರಾಶಿ
ಸರಳ ಸಜ್ಜನಿಕೆಯ ಅಂಕೇಗೌಡರು

ಸರಸ್ವತಿ ಸಾಗರದ ಮಧ್ಯೆ ನಮ್ಮ ಬ್ಲಾಗಿಗರ ತಂಡ

ಇಷ್ಟೊಂದು ಪುಸ್ತಕ ಸಂಗ್ರಹ ಮಾಡಿರುವ ಶ್ರೀಯುತರ ಬಗ್ಗೆ ಒಬ್ಬರು "ಈ ಪರಿಯ ಪುಸ್ತಕ ಪ್ರೇಮ" ಎಂಬ ಪುಸ್ತಕವನ್ನು ಬರೆದಿದ್ದಾರೆ.
ಇದುವರೆಗೆ ಯಾವುದೇ ಸಹಾಯ ಅಸ್ಥ ನೀಡದ ರಾಜ್ಯ ಸರಕಾರ ೨-೧೨-೧೩ ನೆ ಸಾಲಿನ ಬಜೆಟ್ನಲ್ಲಿ ಈ ಒಂದು ಗ್ರಂಥಾಲಯಕ್ಕೆ ೫೦ ಲಕ್ಷ ರುಪಾಯಿಗಳನ್ನು ಮೀಸಲಿಟ್ಟಿದೆ..

ಜೀವಮಾನದಲ್ಲಿ ಇಂಥ ಒಂದು ಸ್ಥಳವನ್ನು ನೋಡಲೇಬೇಕು,ಅಂಕೇಗೌಡರ ಇಂಥ ಒಂದು ಸಾಧನೆಯನ್ನು,ಅವರ ದೀರ್ಘ ತಪಸ್ಸಿನ ಪ್ರತಿಫಲವನ್ನು ಕಣ್ತುಂಬ ನೋಡಲೇಬೇಕು.ದಯವಿಟ್ಟು ಒಮ್ಮೆ ಹೋಗಿ ಬನ್ನಿ,ಅವರ ವಿಳಾಸ ಈ ಕೆಳಗಿನಂತಿದೆ.ಸಾಧ್ಯವಾದರೆ ಆ ಪುಸ್ತಕ ಸಾಗರಕ್ಕೆ ನೀವೂ ಒಂದು ಪುಸ್ತಕವನ್ನು ಕಾಣಿಕೆ ನೀಡಿ.ಇಂತಃ ಒಂದು ಸಮಾಜ ಕಾರ್ಯಕ್ಕೆ ನಮ್ಮಿಂದ ಕೂಡ ಒಂದು ಅಳಿಲು ಸೇವೆ ಆಗಲಿ. 
ಈ ಪುಸ್ತಕದ ಮನೆಯು ಮಂಡ್ಯ ಜಿಲ್ಲೆ,ಪಾಂಡವಪುರ ರೈಲ್ವೆ ನಿಲ್ದಾಣದಿಂದ ಸುಮಾರು ೨ ಕಿಮಿ ದೂರದಲ್ಲಿ,ಮೈಸೂರು-ನಾಗಮಂಗಲ ರಸ್ತೆಯಲ್ಲಿ ಇದೆ..

ಅಂಕೇಗೌಡ ಜ್ಞಾನ ಪ್ರತಿಷ್ಠಾನ,
ಪುಸ್ತಕ ಮನೆ,ಹರಳಹಳ್ಳಿ,
ಪಾಂಡವಪುರ ತಾಲ್ಲೂಕು,ಮಂಡ್ಯ ಜಿಲ್ಲೆ,
ದೂರವಾಣಿ:9242822934.

ಫೋಟೋಗಳು:ಗಿರೀಶ್ ಮತ್ತು ನವೀನ್ 

Tuesday, June 5, 2012

ವಿಶ್ವ ಪರಿಸರ ದಿನ


ಗಿಡ ನೆಟ್ಟರೆ,ಭವಿಷ್ಯದ ಬದುಕಿಗೆ ಭರವಸೆ ನೆಟ್ಟಂತೆ,
ಬದುಕಿನ ಆಶಯಕ್ಕೆ ನೀರೆರೆದಂತೆ..

                                                ಸೂರ್ಯ,ಭೂಮಿಗೆ ಹೊಸ ಗೆಳೆಯನ ಕೊಟ್ಟಂತೆ,
                                                    ಅವರ ಗೆಳೆತನವ ಪೋಷಿಸಿದಂತೆ...
                                           ಮೆಲುಗಾಳಿಯ ಚುಂಬನ ಸವೆದು ಪಾವನವಾದಂತೆ,
                                                ಪ್ರಕೃತಿಯ ರಮ್ಯತೆಯ ಅನುಭವಿಸಿದಂತೆ...
                                                   ಸ್ವರ್ಗದ ಬಳಿ ಮನೆ ಕಟ್ಟಿದಂತೆ,
                                           ಹಾಡಿಗೆ ಹಕ್ಕಿಯ ಚಿಲಿಪಿಲಿ ಇಂಚರ ನಾದವಾದಂತೆ...
                                                ಶಾಂತ ನೀರವ ಇಳಿಬೆಳಕಿನಲ್ಲಿ ಸ್ವರ್ಗದ
                                                  ತ್ರಿವಿಧ ಇಂಪು ಆಲಿಸಿದಂತೆ...
                                               ಹಸಿರಿನೊಡನೆ ಬೆಸುಗೆಯ ಬೆಸೆದಂತೆ,
                                                    ಭೂ ತಾಯಿಯ ಉಳಿಸಿದಂತೆ..


                              ಹಸಿರು ಬೆಳೆಸೋಣ..ಪ್ರಕೃತಿ ಉಳಿಸೋಣ...ಹಸಿರಲ್ಲಿ ಉಸಿರಿದೆ...

                       ವಿಶ್ವ ಪರಿಸರ ದಿನದಂದು ಹಸಿರು ಬೆಳಸಲು,ಮರ ಬೆಳೆಸಲು ಮುನ್ನುಡಿ ಬರೆಯೋಣ...

ಫೋಟೋ:ಗಿರೀಶ್.ಎಸ್

Thursday, April 5, 2012

ತೇಜಸ್ವಿ,ನಿಮ್ಮ ಹುಡುಕುತ್ತಾ ..

ಏಪ್ರಿಲ್ ೫ ರಂದು ಪೂರ್ಣಚಂದ್ರ ತೇಜಸ್ವಿ ಅವರ ಸಂಸ್ಮರಣಾ ದಿನ.ಈ ದಿನದ ಅಂಗವಾಗಿ "ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜೀವ ವೈವಿಧ್ಯ ಸಂಶೋಧನಾ ಕೇಂದ್ರ ಮತ್ತು ವಿಸ್ಮಯ ಪ್ರತಿಷ್ಠಾನ,ಕೊಟ್ಟಿಗೆಹಾರ" ಸಂಸ್ಥೆಯು ಒಂದು ದಿನದ ಚಾರಣ ಕಾರ್ಯಕ್ರಮವನ್ನು ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟ್ ಬಳಿಯ ಸೋಮನ ಹೊಳೆಯಲ್ಲಿ ಏಪ್ರಿಲ್ ಒಂದರಂದು ಹಮ್ಮಿಕೊಂಡಿತ್ತು.

ಚಾರಣದಲ್ಲಿ ಭಾಗವಹಿಸಿದ್ದ ತಂಡ
ಈ ಕಾರ್ಯಕ್ರಮಕ್ಕೆ ವಿವಿದೆಡೆ ಇಂದ ಚಾರಣ ಪ್ರಿಯರು ,ಆಸಕ್ತರು ಮತ್ತು ವಿಸ್ಮಯ ಪ್ರತಿಷ್ಠಾನದ ಸದಸ್ಯರು ಮತ್ತು ತೇಜಸ್ವಿ ಅವರ ಒಡನಾಡಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.ಈ ಸಂದರ್ಭದಲ್ಲಿ ತೇಜಸ್ವಿ ಅವರ ಸ್ನೇಹಿತರು ಮತ್ತು ಒಡನಾಡಿಗಳೂ ಆದ ಸ್ಥಳೀಯರಾದ ರಾಘವೇಂದ್ರ,ಕಾಡಿನ ಸಂತ ಪುಸ್ತಕದ ಲೇಖಕ ಧನಂಜಯ ಜೀವಾಳ, ಜೆ.ಪಿ.ಬಸವರಾಜು,ಸಂಶೋಧನಾ ಕೇಂದ್ರದ ಮೇಲ್ವಿಚಾರಕರಾದ ಬಿ.ಸಿ. ಬಾಪು ದಿನೇಶ್,ಹಳೆಕೋಟೆ ರಮೇಶ್,ಶಿವಕುಮಾರ್  ಮುಂತಾದವರು ಪಾಲ್ಗೊಂಡು ಪೂಚಂತೇ ಅವರ ಜೊತೆ ತಮ್ಮ ಒಡನಾಟ ಮತ್ತು ಅನುಭವಗಳನ್ನು ನಮ್ಮ ಜೊತೆ ಹಂಚಿಕೊಂಡರು.ಈ ಚಾರಣವು ಬೆಳಗ್ಗೆ ಪ್ರತಿಷ್ಠಾನದ ಕಚೇರಿಯಲ್ಲಿ ಉಪಹಾರ ಸೇವಿಸಿ ಅಲ್ಲಿಂದ ಸೋಮನ ಹೊಳೆವರೆಗೆ ಜೀಪಿನಲ್ಲಿ ತೆರಳಿ ಅಲ್ಲಿಂದ ಸುಮಾರು ೮ ಕಿಮಿ ವರೆಗೆ ನಡೆದು,ಕಾಡಿನ ಮಧ್ಯೆ ಊಟ ಸೇವಿಸಿ,ಕಾಡಿನಲ್ಲಿ ಸಿಕ್ಕಿದ ಹಣ್ಣುಗಳನ್ನ ತಿನ್ನುತ್ತ ಸಂಜೆಯ ವೇಳೆಗೆ ಅಂತ್ಯ ಗೊಂಡಿತು.ಈ ಸಮಯದಲ್ಲಿ ತೇಜಸ್ವಿ ಬಗ್ಗೆ ಅವರ ಸ್ನೇಹಿತರು ಹಂಚಿಕೊಂಡ ಅನುಭವಗಳು ಸಾಕಷ್ಟು.

ಕಾಫೀ ಬೆಳೆಗಾರರ ಸಂಘ:
ಸುಮಾರು ೭೦ರ ದಶಕದಲ್ಲಿ ಸಮಾಜವಾದಿ ಚಳುವಳಿ ಕರ್ನಾಟಕದಲ್ಲಿ ಬಿರುಸಾಗಿ ನಡೆಯುತ್ತಿದ್ದ ಸಮಯ.ಅದೇ ಸಮಯದಲ್ಲಿ ರಾಜ್ಯ ರೈತ ಸಂಘ ಕೂಡ ದೇಣಿ ಪದ್ಧತಿ ಮತ್ತು ಮುಂತಾದ ಕ್ರಮಗಳ ವಿರುದ್ಧ ಹೋರಾಟ ನಡೆಸುತ್ತಿತ್ತು.ಆ ಸಮಯದಲ್ಲಿ ತೇಜಸ್ವಿ ಅವರು ಮೂಡಿಗೆರೆ ಸುತ್ತಮುತ್ತಲ ಬೆಳೆಗಾರರನ್ನು ಒಗ್ಗೂಡಿಸಿ ಬೆಳೆಗಾರರ ಸಂಘವನ್ನು ಹುಟ್ಟು ಹಾಕಿದರು.ಆಗ ಈ ಸಂಘವು ರೈತ ಸಂಘದ ಜೊತೆಗೆ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿತ್ತು,ಆಗ ಸ್ವತಹ ತೇಜಸ್ವಿ ಕೂಡ ರೈತರ ಜೊತೆ ಚಳುವಳಿಗಳಲ್ಲಿ ಭಾಗವಹಿಸುತ್ತಿದ್ದರಂತೆ.ತಮಾಷೆ ಮಾಡಿಕೊಂಡು ಎಲ್ಲರೊಡನೆ ಬೆರೆಯುತ್ತಿದ್ದರು ಎಂದು ಅವರ ಸ್ನೇಹಿತರು ತಿಳಿಸಿದರು.

ಆ ಸಂದರ್ಭದಲ್ಲಿ ಬೆಳಗ್ಗೆ ಇಂದ ಸಂಜೆವರೆಗೆ ಎಲ್ಲರೊಡನೆ ಬೆರೆತು ಹೋರಾಟ ಮಾಡುತ್ತಿದ್ದರಂತೆ.ಎಲ್ಲರ ಮಧ್ಯೆ ಒಬ್ಬರಂತೆ,ಯಾವುದೇ ಪ್ರತ್ಯೇಕ ಉಪಚಾರ ಬಯಸದೆ ಮಾಮೂಲಿ ಮನುಷ್ಯರಂತೆ ಇರಲು ಬಯಸುತ್ತಿದ್ದ ತೇಜಸ್ವಿಯವರಿಗೆ ಯಾರಾದರು ಉಪಚಾರ ಮಾಡಲು ಹೋದರೆ ಬೈದು ಕಳಿಸುತ್ತಿದ್ದರಂತೆ.

ಯಾರಾದರು ಇಂತಿಂತವರು ಬ್ಯಾಂಕಿನಿಂದ ಸಾಲ ತೆಗೆದು ಕೊಂಡಿದ್ದರು,ತೀರಿಸಲಾರದೆ ಆತ್ಮಹತ್ಯೆ ಮಾಡಿಕೊಂಡರು ಅಂದರೆ "ಥೂ ನನ್ ಮಕ್ಳ,ಸಾಲ ತಗಂಡವನು ಯಾಕೋ ಸಾಯಬೇಕು,ಸಾಲ ಕೊಟ್ಟವನು ನೇಣು ಹಾಕಿಕೊಂಡು ಸಾಯಬೇಕು,ಬುದ್ಧಿ ಇಲ್ಲ ಕಣ್ರಲ್ಲ ನಿಮಗೆ,ಹಿಂಗಾದ್ರೆ ಬೆಳೆಗಾರರು ಬದಕದು ಹ್ಯಾಗೆ,ನೀವ್ ಈ ಜನ್ಮದಲ್ಲಿ ಉದ್ಧಾರ ಆಗಲ್ಲ"ಅಂತ ಬೈತಿದ್ದರಂತೆ.

 ಈ ಸಂಘವನ್ನು ಸ್ಥಾಪಿಸಿದ್ದಲ್ಲದೆ ಮೂಡಿಗೆರೆಯಲ್ಲಿ SBI ತನ್ನ ಶಾಖೆಯನ್ನು ತೆರೆಯುವ ಹಿಂದೆ ಅವರ ಪರಿಶ್ರಮ ಇತ್ತು ಎಂದು ಅವರೆಲ್ಲ ನೆನಪಿಸಿಕೊಂಡರು.

ಶಿಕಾರಿ ಮತ್ತು ಮೀನು ಹಿಡಿಯುವುದು:
ತೇಜಸ್ವಿ ಅವರ ಶಿಕಾರಿಯ ಬಗ್ಗೆ ಮತ್ತು ಮೀನು ಹಿಡಿಯುವುದರ ಬಗ್ಗೆ ಹೇಳಬೇಕಾಗಿಲ್ಲ.ಅವರಿಗೆ ಅದೊಂದು ಹವ್ಯಾಸ.ಸ್ವತಹ ಕೋವಿ ಹಿಡಿದು ಶಿಕಾರಿಗೆ ಅಥವಾ ಗಾಳ ಹಿಡಿದು ಮೀನು ಹಿಡಿಯಲು ಸುತ್ತ ಮುತ್ತಲ ಹಳ್ಳಗಳಿಗೆ ಹೋಗುತ್ತಿದ್ದರಂತೆ.ಅಲ್ಲದೆ  ಅವರು ನಾನ್-ವೆಜ್ ತಿನ್ನುವುದರಲ್ಲಿ ಎತ್ತಿದ ಕೈ.ಮೀನು ಹಿಡಿಯಲು ಹೋದಾಗ ಎಷ್ಟೋ ಬಾರಿ ಅಲ್ಲೇ ಅದನ್ನು ಬೇಯಿಸಿ ತಿಂದು ಬರುತ್ತಿದ್ದರಂತೆ.ಶಿಕಾರಿಗೆ ಹೋದಾಗ ಕೂಡ ಊರಿನವರ ಜೊತೆ ಸೇರಿ ಅಡುಗೆ ಮಾಡಿ ಸೇವಿಸುತ್ತಿದರು.
ಅವರ ಸ್ನೇಹಿತರು ಹೇಳುವ ಪ್ರಕಾರ ತುಂಬ ಮಾಂಸಹಾರ ತಿನ್ನುತ್ತಿದ್ದರಿಂದ ಅವರಿಗೆ ಕೆಲವು ಹೃದಯ ಸಂಬಂಧಿ  ಕಾಯಿಲೆಗಳು ಅಂಟಿಕೊಂಡಿದ್ದವು.ಅವರಿಗೆ ತಿನ್ನುವುದರ ಬಗ್ಗೆ ಸ್ವಲ್ಪ ಕಂಟ್ರೋಲ್ ಇದ್ದಿದ್ದರೆ ಇನ್ನಷ್ಟು ವರ್ಷ ಬದುಕುತ್ತಿದ್ದರು ಎಂದು ಅವರ ಸ್ನೇಹಿತರಾದ ಬಸವರಾಜು ಅವರು ಹೇಳಿದರು.
ಇವು ಅಲ್ಲದೆ ಅವರಿಗೆ ಪೇಂಟಿಂಗ್ ನೆಚ್ಚಿನ ಹವ್ಯಾಸ ಆಗಿತ್ತು.

ಮಂತ್ರ ಮಾಂಗಲ್ಯ:
ಇದು ಕುವೆಂಪು ಅವರು ರಚಿಸಿದ ಒಂದು ಸರಳ ವಿವಾಹ ಪದ್ಧತಿ.ಕುವೆಂಪು ಅವರು ಒಂದು ಕಡೆ "ಈ ಪದ್ಧತಿಯನ್ನು ಜಾರಿಗೆ ತರಲು ತಮ್ಮ ಮಗನ  ಮದುವೆ  ತನಕ ಕಾಯಬೇಕಾಗಿ ಬಂತು" ಎಂದು ಹೇಳಿದ್ದಾರೆ.ತೇಜಸ್ವಿ ಅವರು ತಮ್ಮ ಸ್ನೇಹಿತರಾದ ಕಡಿದಾಳು ಶಾಮಣ್ಣ ಮತ್ತು ಸುಂದರೇಶ್ ಅವರ ಜೊತೆ ಸೇರಿ ಮೂಡಿಗೆರೆಯ ಸುತ್ತ ಮುತ್ತ ಎಷ್ಟೋ ಮದುವೆಗಳನ್ನು ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮಾಡಿಸಿದ್ದಾರಂತೆ.ಕೆಲವರು ಇದಕ್ಕೆ ಒಪ್ಪಿಗೆ ಕೊಟ್ಟರೆ,ಕೆಲವು ಕಡೆ ಮದುಮಕ್ಕಳು ಒಪ್ಪಿಗೆ ಇದ್ದರೆ  ಮನೆಯವರದು ಇರುತ್ತಿರಲಿಲ್ಲವಂತೆ.ಇನ್ನೂ ಕೆಲವು ಕಡೆ ಇವರ ಜೊತೆ ಜಗಳ ಮಾಡಿದವರೂ ಇದ್ದಾರೆ,ಈ ಮೂವರಿಗೂ ಹೊಡೆಯಲು ಹೋದವರೂ ಇದ್ದಾರೆ.
(ಕಡಿದಾಳು ಶಾಮಣ್ಣನವರು ಕೂಡ ತಮ್ಮ ಆತ್ಮಕಥೆ 'ಕಾಡು ತೊರೆಯ ಜಾಡು' ಪುಸ್ತಕದಲ್ಲಿ ಮಂತ್ರ ಮಾಂಗಲ್ಯದ ಪ್ರಕಾರ ಮದುವೆ ಆಗುವಂತೆ ಎಲ್ಲರನ್ನೂ  ಒತ್ತಾಯಿಸುತ್ತಿದ್ದದು,ಕೆಲವರ ಜೊತೆ ಜಗಳ ಕಾದಿದ್ದು ಎಲ್ಲ ಬರೆದಿದ್ದಾರೆ)

ಸ್ಕೂಟರ್:
ಇನ್ನು ಅವರ ಸ್ಕೂಟರ್,ಹಿಂದಿನ ಸೀಟನ್ನು ತೆಗೆದಿಟ್ಟಿದ್ದರು ಎಂಬುದಕ್ಕೆ ಹೆಸರುವಾಸಿ.ಕೆಲವರು ಹೇಳುವಂತೆ ಅವರು ಹಿಂದೆ ಯಾರನ್ನೂ ಕೂರಿಸಿಕೊಳ್ಳಲು ಇಷ್ಟ ಪಡುತ್ತಿರಲಿಲ್ಲ,ಅದಕ್ಕೂ ಕಾರಣ ಇದೆ,ಕೆಲವರು ಸುಮ್ಮನೆ ಕೂರದೆ ಇಲ್ಲಸಲ್ಲದ ವಿಚಾರಗಳನ್ನು ಮಾತಾಡುತ್ತಿದ್ದರು,ಅದು ಅವರಿಗೆ ಇಷ್ಟ ಆಗುತ್ತಿರಲಿಲ್ಲ ಮತ್ತು ಅವರ ಒಡನಾಡಿಗಳು ಒಬ್ಬರು ಹೇಳಿದಂತೆ ತೇಜಸ್ವಿ ಅವರು ಯಾವಾಗಲು ಎಲೆ ಅಡಿಕೆ ಹಾಕುತ್ತಿದ್ದರು,ಮರೆತು ಉಗಿದರೆ ಎಲ್ಲಿ ಹಿಂದೆ ಇರುವರಿಗೆ ಬೀಳುತ್ತದೆ ಎಂದು ಯಾರನ್ನು ಕೂರಲು ಬಿಡುತ್ತಿರಲಿಲ್ಲವಂತೆ.

ಅವರ ಎಷ್ಟೋ ಕಥೆಗಳಲ್ಲಿ ಬರುವ ಆ ಸ್ಕೂಟರ್ ಅನ್ನು  ಇವಾಗ ಮೂಡಿಗೆರೆಯ ತೋಟದ ಮನೆಯಲ್ಲಿ ಮೂಲೆಯಲ್ಲಿ ಪ್ಯಾಕ್ ಮಾಡಿ ಇಟ್ಟಿದ್ದಾರಂತೆ.
ಇನ್ನೊಂದು ಸ್ವಾರಸ್ಯ ಅಂದರೆ ಆ ಸ್ಕೂಟರ್ ಎಷ್ಟೇ ಕೆಟ್ಟು ಹೋಗಿ ಯಾರಾದರು ಹೊಸದು ತಗೊಳ್ಳಿ ಅಂದರೆ ಮತ್ತೆ ಅದನ್ನೇ ರಿಪೇರಿ ಮಾಡಿಸಿಕೊಳ್ಳುತ್ತಿದ್ದರು.ಅಲ್ಲದೆ ಅವರ ಸ್ನೇಹಿತರು ಕೂಡ  ಅವರ ಸ್ಕೂಟರ್ ಹಿಂದೆ ಸವಾರಿ ಮಾಡಿಲ್ಲವಂತೆ.

ಬಿರಿಯಾನಿ ಕರಿಯಪ್ಪ:
ನಮ್ಮ ಚಾರಣ ತಂಡದಲ್ಲಿದ್ದ ಸ್ಥಳೀಯರಾದ ರಮೇಶ್ ಎಂಬುವವರು ಬೇರೆ ಉರಿನಲ್ಲಿ ಡಿಗ್ರಿ ಮಾಡುತ್ತಿದ್ದಾಗ ಅವರಿಗೆ ಕರ್ವಾಲೋ ಕಾದಂಬರಿಯು ಪಾಠ ವಾಗಿತ್ತಂತೆ.ಇವರು ಮೂಡಿಗೆರೆಯವರು  ಎಂದು ತಿಳಿದಾಗ ಸ್ನೇಹಿತರು,ಉಪನ್ಯಾಸಕರಾದಿಯಾಗಿ ತೇಜಸ್ವಿ ಅವರ ಬಗ್ಗೆ ಕೇಳುತ್ತಿದ್ದರಂತೆ.ಅದಕ್ಕಿಂತ ಮುಖ್ಯವಾಗಿ ಆ ಕಾದಂಬರಿಯಲ್ಲಿ ಬರುವ ಬಿರಿಯಾನಿ ಕರಿಯಪ್ಪನ ಬಗ್ಗೆ ಕೇಳುತ್ತಿದ್ದರಂತೆ.ಅವಾಗ ಇವರಿಗೆ ತೇಜಸ್ವಿ ಅವರ ಪರಿಚಯ ಇರಲಿಲ್ಲ.ಕಾಲೇಜಿನಲ್ಲಿ ಎಲ್ಲರೂ ಕೇಳುವುದಕ್ಕೆ ರೋಸಿ ಹೋಗಿ "ಹೇ ಆ ಕರಿಯಪ್ಪ ಸತ್ತೋಗೆ ತುಂಬ ವರ್ಷ ಆಯ್ತು"ಅಂದಿದ್ದರಂತೆ.ಎಷ್ಟೋ ದಿನಗಳ ನಂತರ ಗೊತ್ತಾಗಿದ್ದು ಆ ಕರಿಯಪ್ಪ ಇನ್ನೂ ಬದುಕಿದ್ದಾನೆ ಅಂತ.

ಆ ಕರಿಯಪ್ಪನಿಂದ ಬಿರಿಯಾನಿ ಮಾಡಿಸಿಕೊಂಡು ತಿನ್ನ ಬೇಕೆಂಬುದು ಎಲ್ಲರ ಆಸೆ ಆಗಿತ್ತಂತೆ.

ಸಹಜ ಕೃಷಿ:
ಇನ್ನು ಫುಕುಹೊಕಾರ ಸಹಜ ಕೃಷಿ ಪದ್ದತಿ ಅನುಸರಿಸಲು ಹೋಗಿ ಪಟ್ಟ ಪಾಡನ್ನು 'ಸಹಜ ಕೃಷಿ' ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.ಆಗ ಅವರಿಗೆ ಇದರ ಬಗ್ಗೆ ತಲೆ ತಿಂದಿದ್ದು ಅವರ ಸ್ನೇಹಿತರಾದ ದಿನೇಶ್ ಎಂಬುವವರೆಂದು ಅವರ  ಒಡನಾಡಿ  ಒಬ್ಬರು  ಹೇಳಿದರು.ಇದರ ಪರಿಣಾಮ ಎಷ್ಟೋ ಕಾಫೀ ತೋಟವನ್ನು ಕಡಿದು ಭತ್ತ  ಬೆಳೆಯಲು ಹೋಗಿದ್ದು,ಕೊನೆಗೆ ಬಿತ್ತಿದ್ದ  ಭತ್ತವೆಲ್ಲ ಹಕ್ಕಿಗಳು ತಿಂದು ನಾಶ ಪಡಿಸಿದ್ದು ,ಅಲ್ಲದೆ ಬೇರೆಯವರಿಗೆ ಕೂಡ ಸಹಜ ಕೃಷಿಯನ್ನು  ಅಳವಡಿಸಿಕೊಳ್ಳುವಂತೆ  ಪ್ರೇರೇಪಿಸುತ್ತಿದ್ದದ್ದು  ಎಲ್ಲದನ್ನು  ಹಂಚಿಕೊಂಡರು.

ಕೊನೆಯದಾಗಿ ಕೊಟ್ಟಿಗೆಹಾರದಿಂದ  ಮೂಡಿಗೆರೆಗೆ ಬರುವಾಗ ನಮ್ಮ ಜೊತೆ ಇದ್ದ ಹರ್ಷ ಎಂಬ ಸ್ಥಳೀಯ ತಾನು ಶಾಲೆಗೆ  ಹೋಗುವಾಗ  ಹ್ಯಾಂಡ್ ಪೋಸ್ಟ್ ಬಳಿ ಅವರನ್ನು ನೋಡುತ್ತಿದ್ದೆ ಎಂದು  ಯಾವಾಗಲೂ  ಅವರ ಜೊತೆ ಕ್ಯಾಮೆರ ಇರುತ್ತಿತ್ತು,ಅವರ ಹಿಂದೆ ಅವರ ಮನೆಯ ನಾಯಿ 'ಕಿವಿ' ಇರುತ್ತಿತ್ತು ಎಂದು ತನ್ನ ಹಳೆ ನೆನಪುಗಳನ್ನು ನಮ್ಮೊಡನೆ ಹಂಚಿಕೊಂಡರು.ಅವರನ್ನು ತಾನು ನೀಲಿ ಬಣ್ಣದ  ಅಂಗಿಯಲ್ಲಿ  ಜಾಸ್ತಿ ನೋಡಿದ್ದು ಎಂದು ಕೂಡ ಹೇಳಿದರು.
ಇನ್ನೊಂದು ವಿಷಯ ಆತ ಹೇಳಿದಂತೆ ಅಲ್ಲಿ ತೇಜಸ್ವಿ ಅವರಿಗೆ ಯಾವುದೇ ತರಹದ ಡಿಸ್ಟರ್ಬ್ ಇರಲಿಲ್ಲ,ಮುಖ್ಯವಾಗಿ ಜನರಿಂದ.ಬೇರೆ ಕಡೆ ಹಾಗೆ ಯಾರಾದರು ಸ್ವಲ್ಪ ದೊಡ್ಡ ವ್ಯಕ್ತಿ ಬಂದರೆ ಅವರ ಹಿಂದೆ ಸುತ್ತುವ ಹಾಗೆ ಅಲ್ಲಿ ಅಂತ ಪರಿಸ್ಥಿತಿ ಇರಲಿಲ್ಲ..ಒಬ ಸಾಮಾನ್ಯ ಮನುಷ್ಯನಂತೆ ಸ್ವಚ್ಚಂದವಾಗಿ ಸ್ವತಂತ್ರವಾಗಿ ಓಡಾಡಿ ಕೊಂಡಿರಲು ಅವರಿಗೆ ಅವಕಾಶ ಇತ್ತು.ಹಾಗಾಗಿಯೇ ಅವರು ಆ ಉರು ಬಿಟ್ಟು ಬೇರೆ ಕಡೆ ಹೋಗದೆ ಅಲ್ಲೇ ನೆಲೆಸಿದ್ದು ಎಂದು ಹೇಳಿದರು.

ಇನ್ನೊಂದು ವಿಷಯ ಅಂದಂತೆ ಮೂಡಿಗೆರೆ ಸುತ್ತಮುತ್ತ ಜನ ತೇಜಸ್ವಿ ಅವರನ್ನು ಒಬ್ಬ ಲೇಖಕನಾಗಿ ಗುರುತಿಸಿದ್ದು ಬಹಳ ಕಡಿಮೆ,ಬದಲಾಗಿ ಅವರ ಛಾಯಾಚಿತ್ರ ಮತ್ತು ಇನ್ನಿತರ ಚಟುವಟಿಕೆಗಳ ಮುಖಾಂತರ ಗುರುತಿಸಿದ್ದೆ ಹೆಚ್ಚು.

ವಿಸ್ಮಯ ಪ್ರತಿಷ್ಠಾನ,ಕೊಟ್ಟಿಗೆಹಾರ


ಹೀಗೆ ಚಾರಣದ ಸಮಯದಲ್ಲಿ ಅವರ ಒಡನಾಡಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಈ ಚಾರಣ ಕಾರ್ಯಕ್ರಮವನ್ನು ಏರ್ಪಡಿಸಿದ್ದ ವಿಸ್ಮಯ ಪ್ರತಿಷ್ಠಾನಕ್ಕೆ ಅಭಿನಂದನೆಗಳು ಮತ್ತು ತೇಜಸ್ವಿ ಬದುಕು-ಬರಹ ಚಿಂತನೆಗಳನ್ನು ಪಸರಿಸಲು ಅವರು ಹಮ್ಮಿಕೊಳ್ಳುತ್ತಿರುವ ಎಲ್ಲ ಕಾರ್ಯಕ್ರಮಗಳು ಮತ್ತು ಸಂಸ್ಥೆಯ ಆಶಯಗಳಿಗೆ ಶುಭ ಕೋರುತ್ತೇನೆ.

                             (ಅವಧಿಯಲ್ಲಿ ಈ ಲೇಖನ ಪ್ರಕಟಗೊಂಡಿದೆ ತೇಜಸ್ವಿ,ನಿಮ್ಮ ಹುಡುಕುತ್ತಾ ..)

Thursday, March 22, 2012

ಪೋಲಿಸ್ ಸ್ಟೇಷನ್ನಲ್ಲಿ ಮ್ಯಾಚ್ ನೋಡಿದ್ದು ಹಿಂಗೆ...

ಈ ಉಗಾದಿ ಹಬ್ಬಕ್ಕೆ ಊರಿಗೆ ಹೋಗಬೇಕಾದ್ರೆ ಏನಾದ್ರೂ ಒಂದು ತಾಪತ್ರೆ ಆಗುತ್ತೆ...ಅವಾಗ ಒಂದ್ಸಲ ಹಿಂಗೆ ದುಡ್ಡು ಕಳ್ಕೊಂಡು ಹೋಗಿದ್ದೆ ... ಹೋದ ವರ್ಷ ಹೋಗಬೇಕಾದ್ರೆ ಇನ್ನೂ ವಿಚಿತ್ರ... ಅದೇನಾಯ್ತು ಅಂದ್ರೆ ಎಲ್ಲರೂ ಮನೇಲಿ ಕೂತು ಕ್ರಿಕೆಟ್ ನೋಡ್ತಿದ್ರೆ ನಾವು ಪೋಲಿಸ್ ಸ್ಟೇಷನ್ ನಲ್ಲಿ ನೋಡ್ತಾ ಇದ್ವಿ ...... The story goes like this...

ಹಬ್ಬ ಇದ್ದಿದ್ದು ಸೋಮವಾರ... ಅದಕ್ಕಿಂತ ಎರಡು ದಿನ ಮುಂಚೆ ಅಂದ್ರೆ ಶನಿವಾರ ವಿಶ್ವ ಕಪ್ ಫೈನಲ್ ಮ್ಯಾಚ್ ಇತ್ತು.. ನಮ್ಮ  ದೇಶ ಮತ್ತೆ ಶ್ರೀಲಂಕಾ ನಡುವೆ... ಅವತ್ತೇ ಊರಿಗೆ ಹೊರಡೋ ಪ್ಲಾನ್ ಹಾಕಿಕೊಂಡೆ..ಬೆಳಗ್ಗೆ ಟ್ರೈನ್ ಪ್ರತಿ ಶನಿವಾರ ಫುಲ್ ರಶ್ ಇರತ್ತೆ...ಅದು ಅಲ್ಲದೆ ಇದು ಹಬ್ಬದ ವಾರ ಬೇರೆ..ಇನ್ನೂ ರಶ್ ಇರತ್ತೆ..ಹೇಗೂ ಇವತ್ತು ಫೈನಲ್ ಇರೋದ್ರಿಂದ ಸಂಜೆ ಟ್ರೈನ್ ಅಷ್ಟು ರಶ್ ಆಗಲ್ಲ ಅಂತ,ಅದಕ್ಕೆ ಹೋಗೋ ನಿರ್ಧಾರ ಮಾಡಿದೆ..ಹೇಗೂ ಊರಿಗೆ ಹೋಗಿ ಕಡಿದು ಕಟ್ಟೆ ಕಟ್ಟದು ಅಷ್ಟರಲ್ಲೇ ಇದೆ ಅಂತ.. ಕ್ರಿಕೆಟ್ ನೋಡದು ಬಿಟ್ಟು ಜಮಾನ ಆದ್ದರಿಂದ ಅವತ್ತು ಕೂಡ ಮ್ಯಾಚ್ ನೋಡೋ ಗೋಜಿಗೆ ತಲೆ ಕೆಡಿಸಿಕೊಳ್ಳಲಿಲ್ಲ...ಸರಿ ಸಂಜೆ ಟ್ರೈನ್ ಗೆ ಹೋದರೆ ಯಾವಾಗಲು ಖಾಲಿ ಇರೋದು ಅವತ್ತು ನೋಡಿದ್ರೆ ಸ್ವಲ್ಪ ಜನ ತುಂಬಿದ್ದರು.ಹಿಂದಿನ ದಿನ ಇದ್ದ ಮೂರ್ಖರ ದಿನ ಮೂರ್ಖ ಆಗಿರಲಿಲ್ಲ...ಆದರೆ ಅವತ್ತು ಆಗ್ಬಿಟ್ಟೆ...ಸೀಟು ಸಿಗುತ್ತೆ ಮ್ಯಾಚ್ ಇರೋದ್ರಿಂದ ಅಂತ ಈ ರೈಲಿಗೆ ಬಂದ್ರೆ ಇದರಲ್ಲೂ ಸಿಗಲಿಲ್ಲ...ಥೋ ಇನ್ನೇನ್ ಮಾಡೋದ್ ಅಂತ ಸುಮ್ಮನಾದೆ...

ಸರಿ ಆಮೇಲೆ ಏನಾಯ್ತು ಅಂದ್ರೆ ನನ್ನ ಹಳೆ ಚಾಳಿ ಅಂತೆ ಅಕ್ಕ ಪಕ್ಕದವರ ಜೊತೆ ಹರಟೆ ಹೊಡೆಯೋದು ಶುರು ಆಯ್ತು... ಸೀಟು ಸಿಕ್ಕಿದ್ದರೆ ಯಾವುದಾದರು ಪುಸ್ತಕ ಓದುತ್ತ ಕೂರ್ತಿದ್ದೆ...ನಿಂತಿದ್ದನಲ್ಲ ವಿಧಿ ಇಲ್ಲದೆ ಅವರಿವರ ಜೊತೆ ಮಾತು ಶುರು ಆಯ್ತು...ಎಲ್ಲಾರ್ಗೂ ಮ್ಯಾಚ್ ಬಗ್ಗೆನೇ ಚಿಂತೆ...ಅವಾಗ ಒಬ್ರು ಜಗದೀಶ್ ಅಂತ ಪರಿಚಯ ಆದರು,ನಮ್ಮ ಊರಿನ ಹತ್ತಿರದವರೇ...ಸಹಜ ಸ್ವಭಾವ,ನಮ್ಮ ಹತ್ತಿರದವರು ಎಲ್ಲಾದರು ಕಂಡಾಗ ಮಿತಿಗಿಂತ ಜಾಸ್ತಿ ಮಾತಾಡ್ತೀವಿ..ನಾವಿಬ್ಬರೂ ಅರಸಿಕೆರೆಯಲ್ಲಿ ಇಳಿದು ಒಂದೇ ಬಸ್ಸಿಗೆ ಹಳೇಬೀಡಿಗೆ ಹೋಗಬೇಕಿತ್ತು...ಅದು ನಮಗೆ ಕೊನೆ ಬಸ್..ಆಗಾಗಿ ನನಗೂ ಒಬ್ಬರು ಜೊತೆ ಸಿಕ್ಕಿದರು,ಅವರಿಗೂ ಸಿಕ್ಕಿದರು,ಮಾತು ಕಥೆ ಶುರು ಆಯ್ತು...ನಮ್ಮ ನಮ್ಮ ಊರಿನ ಬಗ್ಗೆ,ನಮ್ಮ ಕೆಲಸದ ಬಗ್ಗೆ,ಬೆಂಗಳೂರಿನಲ್ಲಿ ಎಲ್ಲಿರದು,ಅದು ಇದು ಎಲ್ಲಾ...

ಅಷ್ಟೊತ್ತಿಗಾಗಲೇ ಶ್ರೀಲಂಕಾ ಬ್ಯಾಟಿಂಗ್ ಮುಗಿದು ನಮ್ಮ ಇಂಡಿಯಾ ಬ್ಯಾಟಿಂಗ್ ಶುರು ಆಗಿತ್ತು... ಅದಕ್ಕೂ  ಮುಂಚೆ  ನನ್ನ ಸಹೋದ್ಯೋಗಿ ಒಬ್ಬ ಫೋನ್ ಮಾಡಿ ಅವ್ರು ಇಷ್ಟಿಷ್ಟು ಸ್ಕೋರ್ ಮಾಡಿದ್ದಾರೆ,ಬೆಟ್ ಗಿಟ್ ಕಟ್ಟುತ್ತೀಯ ಅಂತ ಕೇಳಿದ ...ಇಲ್ಲ ಗುರು,ನನಗೆ ಅದರ ಸಹವಾಸ ಬೇಡ ಅಂತ ಹೇಳಿ,ಅವನು, ಇವತ್ತು ನಮ್ಮವರು ಸೋಲ್ತಾರೆ ಅಂತ ಹೇಳಿ ಫೋನ್ ಇಟ್ಟ..ಅದಾದ್ ಮೇಲೆ ಬೇಡ ಬೇಡ ಅಂದ್ರು ಪಕ್ಕದಲ್ಲಿದ್ದವರು ಸ್ಕೋರ್ ಹೇಳಕ್ಕೆ ಶುರು ಮಾಡಿದ್ರು,ಒಹ್ ಸೆಹವಾಗ್ ಔಟ್ ಆದ,ಸಚಿನ್ ಔಟಾದ..ಗೆಲ್ಲಲ್ಲ ಬಿಡಿ ಹಂಗೆ ಹೀಗೆ ಅಂತ ಬಹುತೇಕ ಎಲ್ಲರ ಬಾಯಲ್ಲೂ ಇದೆ ಮಾತು...

ಸರಿ ಟ್ರೈನ್ ಅರಸೀಕೆರೆಗೆ ಬಂತು.. ಹೊಟ್ಟೆಗೆ ಸ್ವಲ್ಪ ತಳ ಕಟ್ಟಿಕೊಂಡು ನಾನು ಮತ್ತು ಜಗದೀಶ್ ಇಬ್ಬರೂ ನಮ್ಮ ಕೊನೆ ಬಸ್ ಹತ್ತಿ ಹೊರಟ್ವಿ..ನನಗೂ ಕೆಲ ಸ್ನೇಹಿತರು ಅವಾಗವಾಗ updates ಕೊಡ್ತಿದ್ರು..ಮ್ಯಾಚ್ ನೋಡಲಿಲ್ಲ ಅಂದ್ರು ಸ್ವಲ್ಪ excitment ಇದ್ದೆ ಇತ್ತು...ಅವರಿಗೂ ಕೆಲವರು ಸ.ಮೊ.ಸ ಕಳಿಸ್ತಿದ್ರು..ಇನ್ನ ೮೪ ಎಸೆತ ೮೪ ರನ್ ಬೇಕಿತ್ತು.. ಅದೇ ಸಮಯಕ್ಕೆ ಸರಿಯಾಗಿ ಜಾವಗಲ್ಲಿಗೆ(ಜಾವಗಲ್ ಶ್ರೀನಾಥ್ ಅವರ ಊರು) ಬಂದಿದ್ವಿ.ಅಲ್ಲಿ ಉಟಕ್ಕೆ ಅಂತ ೧೦ ನಿಮಿಷ ಬಸ್ ನಿಲ್ಲಿಸಿದರು,ಆಗ ನನ್ನ ಜೊತೆಗಿದ್ದ ಜಗದೀಶ್ ಅವರು,ಮುಂಚೆ ಅವರು ಕೂಡ ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡಿ,ಅಲ್ಲಿ ಬಿಟ್ಟು ಆಗ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು.ಅವರು ಪೋಲಿಸ್ ಆಗಿದ್ದಾಗ ಇದ್ದ ಸ್ನೇಹಿತರು ಕೆಲವರು ಆ ಸಮಯದಲ್ಲಿ ಜಾವಗಲ್ ಗೆ ವರ್ಗಾವಣೆ ಆಗಿದ್ದರು,ಆಗಾಗಿ "ಬನ್ನಿ ಗಿರೀಶ್,ಒಂದ್ ಹತ್ತು ನಿಮಿಷ ಮ್ಯಾಚ್ ನೋಡ್ಕಂಡು ಬರೋಣ" ಅಂತ ಬಸ್ ನಿಲ್ದಾಣದ ಪಕ್ಕದಲ್ಲೇ ಇರೋ ಅಲ್ಲಿನ ಪೋಲಿಸ್ ಸ್ಟೇಷನ್ ಗೆ ಕರ್ಕೊಂಡು ಹೊರಟರು.."ಬೇಡ ಸರ್,ಅಲ್ಲೇನ್ ಟಿವಿ ಇರುತ್ತಾ" ಅಂತ ಕೇಳ್ದಾಗ,"ಹೇ ನಮ್ಮ ಫ್ರೆಂಡ್ ಅಲ್ಲೇ ಇದ್ದಾನೆ,ಇಷ್ಟೊತ್ತು ಅವನೇ ನನಗೆ ಮೆಸೇಜ್ ಕಳ್ಸಿದ್ದು,ಫೋನ್ ಮಾಡಿದ್ದೆ,ಬನ್ನಿ ಅಂದ" ಅಂತ ಹೇಳಿ ಕರ್ಕೊಂಡ್ ಹೊರಟರು.."ಮತ್ತೆ ಬಸ್ ಗಿಸ್ ಮಿಸ್ ಆದ್ರೆ ಕಷ್ಟ" ಅಂದ್ರೆ"ಏ,ಕಂಡಕ್ಟರ್ ಗೆ ಹೇಳ್ತೀನಿ ತಾಳಿ,ಒಂದೆರಡು ಓವರ್ ನೋಡ್ಕಂಡ್ ಬರಣ" ಅಂತ ಕರ್ಕಂಡ್ ಹೊರಟರು...
"ನಿಮ್ ಬ್ಯಾಗ್ ಇದ್ರೆ ತಗಳಿ,ರಾತ್ರಿ ಬೇರೆ,ಸುಮ್ನೆ ಯಾಕ್ ರಿಸ್ಕ್,ಯಾವನಾದ್ರು ಎತ್ಕಂಡ್ ಹೋದ್ರೆ" ಅಂತ ಎಚ್ಚರಿಸಿ ಕರ್ಕಂಡ್ ಹೊರಟರು... ಅಲ್ಲಿ ಮುಂಬಯಿಯಲ್ಲಿ ಟೀಂ ಇಂಡಿಯಾದವರು ರನ್ chase ಮಾಡ್ತಿದ್ರೆ ನಮಗೆ ಇಲ್ಲಿ ಬಸ್ chase ಮಾಡಕ್ಕೆ ಆಗ್ಲೇ ಇಲ್ಲ...

ಮನಸಲ್ಲೇ ಜಗದೀಶ್ ಅವ್ರಿಗೆ ಬೈಕೊಂಡು "ಈಗೇನ್ ಮಾಡೋದ್ ಸರ್?" ಅಂದೆ,"ಏ ಬನ್ನಿ ಗಿರೀಶ್,ಮ್ಯಾಚ್ ನೋಡ್ಕಂಡ್ ಆಮೇಲೆ ನೋಡನ.. ಸಖತ್ ಇಂಟರೆಸ್ಟಿಂಗ್ ಇದೆ ಮ್ಯಾಚ್,ಯಾರ್ದಾರ ಬೈಕ್ ಇಸ್ಕಂಡ್ ಹೋಗಣ,ನಿಮ್ಮ ಊರಿಗೆ ಬಿಡ್ತೀನಿ ನಾನು" ಅಂತ ಧೈರ್ಯ ಕೊಟ್ರು..ಆದರು ಸಮಾಧಾನ ಆಗ್ಲಿಲ್ಲ..ಮತ್ತೆ ಸ್ಟೇಷನ್ ಗೆ ಹೋದ್ರೆ,ಅಲ್ಲಿದ್ದ ಬೇರೆ ಪೋಲಿಸಿನವರು ಯಾವೂರು ಅಂತ ಕೇಳಿದ್ರು,ಸಿದ್ದಾಪುರ ಅಂದೆ..ಆ ಊರಿನವರು ಒಬ್ರು  ಇದೆ ಸ್ಟೇಷನ್ ನಲ್ಲಿ ಇದ್ರು ಕಣಪ್ಪ ಮುಂಚೆ.. ಈಗ ಸಕಲೇಶಪುರದಲ್ಲಿ ಇದ್ದಾರೆ...ಅಯ್ಯೋ,ಅವರು ನಮ್ಮ ಚಿಕ್ಕಪ್ಪನೇ ಸರ್ ಅಂದೆ...ಬಿಡು ಮತ್ತೆ ನಮ್ಮವರೇ ನೀವು, ಯಾಕ್ ಯೋಚನೆ ಮಾಡ್ತಿಯ,ಬೈಕ್ ಕೊಡ್ತೀವಿ ತಗಂಡ್ ಹೋಗಿ,ಹೆಂಗೂ ಇವನು ಇದ್ದಾನಲ್ಲಾ ,ಬಿಡ್ತಾನೆ ಅಂದ್ರು...ಅವಾಗ ಸ್ವಲ್ಪ ಸಮಾಧಾನ ಆಯ್ತು..

ಸರಿ ಮ್ಯಾಚ್ ಮುಗಿತು,ನಮ್ಮವರು ಗೆದ್ದರು,ಇನ್ನೇನ್ ಹೊರಡೋಣ ಅಂತ ಇದ್ವಿ,ಆಗ ನಮ್ಮಂಗೆ ಹೊರಗಿನವರು ಅಲ್ಲಿ ಮ್ಯಾಚ್ ನೋಡ್ತಿದ್ದವರಲ್ಲಿ ಒಬ್ಬರು,'ಏ ಇಷ್ಟೊತ್ತು ಇದ್ದೀರಾ,ಅತ್ಲಾಗಿ ಕಪ್ ಕೊಡೋದನ್ನು  ನೋಡ್ಕಂಡ್ ಹೋಗಿ"ಅಂದ್ರು..ಅವರಿಗೆ ಪರಮಾತ್ಮ ಮೈ ಮೇಲೆ ಬಂದಿದ್ದ..."ಗೆದ್ದರಲ್ಲ ಅಷ್ಟು ಸಾಕು ಬಿಡಿ" ಅಂದಾಗ' "ನೋಡ್ರಿ ಅಲ್ಲಿ ನಮ್ ಅಣ್ಣ ಸಚಿನ್ ನ ಹೆಂಗೆ ಹೊತ್ಕಂಡವ್ರೆ" ಅಂತ ಆತ ಕೂಡ ಕುಣಿಯಕ್ಕೆ ಶುರು ಮಾಡಿದ...ಆಗ ಅಲ್ಲಿದ್ದ ಒಬ್ಬ ಪೀಸಿ ರೀ ಸಾಹೇಬರು ಬರ್ತಾರೆ ಇವಾಗ,ನಡೀರಿ ನಡೀರಿ,ನಾವು ಹೊರಡಬೇಕು..ಎಲ್ಲಾದರು ಗಲಾಟೆ ಗಿಲಾಟೆ ಆಗುತ್ತೆ ಅಂತ ರೌಂಡ್ಸ್ ಹೋಗಕ್ಕೆ ಹೇಳಿದ್ದಾರೆ ಅಂತ ಹೊರಟರು.. ಆಗ ಈ  ಜಗದೀಶ್ ಇದ್ದವರು ಅವರ ಫ್ರೆಂಡ್ ಹತ್ತಿರ ಬೈಕ್ ತಗೊಂಡು ನಾವು ಹೊರಟ್ವಿ...ನೋಡಿದ್ರೆ ದಾರಿ ಮಧ್ಯೆ ಎಲ್ಲಾ ಹಳ್ಳೀಲೂ celebrations ಫುಲ್ ಜೋರಾಗಿತ್ತು.. ತಮಟೆ ಬಾರಿಸ್ತಾ ಡೋಲು ಬಾರಿಸ್ತಾ ರಸ್ತೆ ಮಧ್ಯೆದಲ್ಲೇ ಕುಣಿತಿದ್ದರು..

ಅಂತು ಇಂತು ಮನೆ ತಲುಪಿದಾಗ ರಾತ್ರಿ ೧೨.೩೦...ಆ ಬಸ್ಸಿಗೆ ಹೋಗಿದ್ದರೆ ೧೦.೧೫ಕ್ಕೆ ಮನೇಲಿ ಇರ್ತಿದ್ದೆ.. ಇನ್ನೂ ಬರದೆ ಇದ್ದದಕ್ಕೆ ಅಪ್ಪ ಫೋನ್ ಮಾಡಿದ್ದಾರೆ..ನನ್ನ ಮೊಬೈಲ್ out of coverage area ಇತ್ತು... ಕೊನೆಗೆ ಬರ್ತಾನೆ ಬಿಡು ಅಂತ ಸುಮ್ನಾಗಿದ್ರಂತೆ...ಅವತ್ತು ನಮ್ಮ ದೊಡ್ಡಮ್ಮ ಬಂದಿದ್ದರು ಅಂತ ಪಾಯಸ ಮಾಡ್ಕೊಂಡು ನನಗೋಸ್ಕರ ಉಟಕ್ಕೆ ಕಾದು ಕಾದು ಸಾಕಾಗಿ ಫೋನ್ ಮಾಡಿ ಮಾಡಿ ಸುಸ್ತಾಗಿ "ಏಲ್ ಹೋದ ಈ ನನ್ ಮಗ" ಅಂತ ಬೈಕೊಂಡು,ಹೊಟ್ಟೆ ಹಸಿದ ಮೇಲೆ ಊಟ ಮಾಡಿ ಮಲಗಿದ್ದರು.. ಮನೆಗೆ ಹೋಗಿ ಯಾಕ್ ಲೇಟ್ ಅಂತ ಅವ್ರು ಕೇಳ್ದಾಗ,ಹಿಂಗಿಂಗೆ ಆಯ್ತು,ಅವ್ರು ಬಂದು ಬಿಟ್ಟು ಹೋದರು,ಅಂದೆ..ನಮ್ ಅಪ್ಪಾಜಿ ತಲೆ ತಲೆ ಚಚ್ಕಂಡ್ ನಕ್ಕಿದ್ರೆ,ನಮ್ ಅಮ್ಮ "ಅವ್ರು ಬೈಕ್ ಕೊಡಬಾರದಿತ್ತು ಕಣ್ಲ ನಿಮಗೆ,ಅಷ್ಟು ಪರಿಜ್ಞಾನ ಬ್ಯಾಡವೇ ?" ಅಂತ ಒಂದ್ ಲುಕ್ ಕೊಟ್ಟು "ಹೊಗ್ ಪಾಯಸ ತಣ್ಣಗೆ ಆಗಿದೆ,ಅದನ್ನೇ ತಿನ್ನು" ಅಂತೇಳಿ ಮಲಗಿದರು.. ಹಳೇಬೀಡಿನಲ್ಲಿ  ನನ್ನ ಫ್ರೆಂಡ್ ಪೃಥ್ವಿ ಮನೇಲಿ ಇದ್ದೀನಿ,ಅಲ್ಲಿ ಮ್ಯಾಚ್ ನೋಡ್ತಾ ಇದ್ದೆ ಅಂತ ತಿಳ್ಕಂಡಿದ್ದರಂತೆ...


ಹೋದ ವರ್ಷ ಹಿಂಗೆ ಆಗಿತ್ತು...ಈ ವರ್ಷ ಈ ಥರ ಏನು adventurous ಸಂಗತಿ ನಡೆಯಲ್ಲ.. ಯಾಕಂದ್ರೆ ಬೆಳಗ್ಗೆ ಟ್ರೈನ್ ಗೆ ಹೋಗ್ತಿರದು.. ಅಲ್ಲದೆ ಜೊತೆಗೆ ಫ್ರೆಂಡ್ಸ್ ಇರ್ತಾರೆ...ನನ್ ಕಥೆ ಯಾವಾಗ್ಲೂ ಹಿಂಗೆ ...ಅದ್ ಬಿಡಿ...


ಪ್ರಕೃತಿಯ ಹೊಸ ಚಿಗುರಿನೊಂದಿಗೆ,ಹುರುಪಿನೊಂದಿಗೆ ನವ 'ನಂದನ' ಸಂವತ್ಸರದ ಪಯಣ ಸಾಗಲಿ...
ಸುಖ ದುಃಖ,ಸಿಹಿ ಕಹಿ ಎಲ್ಲವನ್ನೂ ಸಮನಾಗಿ ಸ್ವೀಕರಿಸುತ್ತಾ ಬದುಕು ಸಾಗಲಿ...
ಸಮಸ್ತರಿಗೂ ಯುಗಾದಿಯ ಶುಭಾಶಯಗಳು... ಒಳ್ಳೇದ್  ಆಗ್ಲಿ ...


(ಹಳ್ಳಿ ಕಡೆ ಯುಗಾದಿ ದಿನ ಹೊನ್ನಾರು ಅಂತ ಆಚರಣೆ ಮಾಡ್ತಾರೆ... ಅದರ ಬಗ್ಗೆ ಒಂದೇ ಲೇಖನ ಇದೆ ನೋಡಿ...)