Tuesday, June 5, 2012

ವಿಶ್ವ ಪರಿಸರ ದಿನ


ಗಿಡ ನೆಟ್ಟರೆ,ಭವಿಷ್ಯದ ಬದುಕಿಗೆ ಭರವಸೆ ನೆಟ್ಟಂತೆ,
ಬದುಕಿನ ಆಶಯಕ್ಕೆ ನೀರೆರೆದಂತೆ..

                                                ಸೂರ್ಯ,ಭೂಮಿಗೆ ಹೊಸ ಗೆಳೆಯನ ಕೊಟ್ಟಂತೆ,
                                                    ಅವರ ಗೆಳೆತನವ ಪೋಷಿಸಿದಂತೆ...
                                           ಮೆಲುಗಾಳಿಯ ಚುಂಬನ ಸವೆದು ಪಾವನವಾದಂತೆ,
                                                ಪ್ರಕೃತಿಯ ರಮ್ಯತೆಯ ಅನುಭವಿಸಿದಂತೆ...
                                                   ಸ್ವರ್ಗದ ಬಳಿ ಮನೆ ಕಟ್ಟಿದಂತೆ,
                                           ಹಾಡಿಗೆ ಹಕ್ಕಿಯ ಚಿಲಿಪಿಲಿ ಇಂಚರ ನಾದವಾದಂತೆ...
                                                ಶಾಂತ ನೀರವ ಇಳಿಬೆಳಕಿನಲ್ಲಿ ಸ್ವರ್ಗದ
                                                  ತ್ರಿವಿಧ ಇಂಪು ಆಲಿಸಿದಂತೆ...
                                               ಹಸಿರಿನೊಡನೆ ಬೆಸುಗೆಯ ಬೆಸೆದಂತೆ,
                                                    ಭೂ ತಾಯಿಯ ಉಳಿಸಿದಂತೆ..


                              ಹಸಿರು ಬೆಳೆಸೋಣ..ಪ್ರಕೃತಿ ಉಳಿಸೋಣ...ಹಸಿರಲ್ಲಿ ಉಸಿರಿದೆ...

                       ವಿಶ್ವ ಪರಿಸರ ದಿನದಂದು ಹಸಿರು ಬೆಳಸಲು,ಮರ ಬೆಳೆಸಲು ಮುನ್ನುಡಿ ಬರೆಯೋಣ...

ಫೋಟೋ:ಗಿರೀಶ್.ಎಸ್

Thursday, April 5, 2012

ತೇಜಸ್ವಿ,ನಿಮ್ಮ ಹುಡುಕುತ್ತಾ ..

ಏಪ್ರಿಲ್ ೫ ರಂದು ಪೂರ್ಣಚಂದ್ರ ತೇಜಸ್ವಿ ಅವರ ಸಂಸ್ಮರಣಾ ದಿನ.ಈ ದಿನದ ಅಂಗವಾಗಿ "ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜೀವ ವೈವಿಧ್ಯ ಸಂಶೋಧನಾ ಕೇಂದ್ರ ಮತ್ತು ವಿಸ್ಮಯ ಪ್ರತಿಷ್ಠಾನ,ಕೊಟ್ಟಿಗೆಹಾರ" ಸಂಸ್ಥೆಯು ಒಂದು ದಿನದ ಚಾರಣ ಕಾರ್ಯಕ್ರಮವನ್ನು ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟ್ ಬಳಿಯ ಸೋಮನ ಹೊಳೆಯಲ್ಲಿ ಏಪ್ರಿಲ್ ಒಂದರಂದು ಹಮ್ಮಿಕೊಂಡಿತ್ತು.

ಚಾರಣದಲ್ಲಿ ಭಾಗವಹಿಸಿದ್ದ ತಂಡ
ಈ ಕಾರ್ಯಕ್ರಮಕ್ಕೆ ವಿವಿದೆಡೆ ಇಂದ ಚಾರಣ ಪ್ರಿಯರು ,ಆಸಕ್ತರು ಮತ್ತು ವಿಸ್ಮಯ ಪ್ರತಿಷ್ಠಾನದ ಸದಸ್ಯರು ಮತ್ತು ತೇಜಸ್ವಿ ಅವರ ಒಡನಾಡಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.ಈ ಸಂದರ್ಭದಲ್ಲಿ ತೇಜಸ್ವಿ ಅವರ ಸ್ನೇಹಿತರು ಮತ್ತು ಒಡನಾಡಿಗಳೂ ಆದ ಸ್ಥಳೀಯರಾದ ರಾಘವೇಂದ್ರ,ಕಾಡಿನ ಸಂತ ಪುಸ್ತಕದ ಲೇಖಕ ಧನಂಜಯ ಜೀವಾಳ, ಜೆ.ಪಿ.ಬಸವರಾಜು,ಸಂಶೋಧನಾ ಕೇಂದ್ರದ ಮೇಲ್ವಿಚಾರಕರಾದ ಬಿ.ಸಿ. ಬಾಪು ದಿನೇಶ್,ಹಳೆಕೋಟೆ ರಮೇಶ್,ಶಿವಕುಮಾರ್  ಮುಂತಾದವರು ಪಾಲ್ಗೊಂಡು ಪೂಚಂತೇ ಅವರ ಜೊತೆ ತಮ್ಮ ಒಡನಾಟ ಮತ್ತು ಅನುಭವಗಳನ್ನು ನಮ್ಮ ಜೊತೆ ಹಂಚಿಕೊಂಡರು.ಈ ಚಾರಣವು ಬೆಳಗ್ಗೆ ಪ್ರತಿಷ್ಠಾನದ ಕಚೇರಿಯಲ್ಲಿ ಉಪಹಾರ ಸೇವಿಸಿ ಅಲ್ಲಿಂದ ಸೋಮನ ಹೊಳೆವರೆಗೆ ಜೀಪಿನಲ್ಲಿ ತೆರಳಿ ಅಲ್ಲಿಂದ ಸುಮಾರು ೮ ಕಿಮಿ ವರೆಗೆ ನಡೆದು,ಕಾಡಿನ ಮಧ್ಯೆ ಊಟ ಸೇವಿಸಿ,ಕಾಡಿನಲ್ಲಿ ಸಿಕ್ಕಿದ ಹಣ್ಣುಗಳನ್ನ ತಿನ್ನುತ್ತ ಸಂಜೆಯ ವೇಳೆಗೆ ಅಂತ್ಯ ಗೊಂಡಿತು.ಈ ಸಮಯದಲ್ಲಿ ತೇಜಸ್ವಿ ಬಗ್ಗೆ ಅವರ ಸ್ನೇಹಿತರು ಹಂಚಿಕೊಂಡ ಅನುಭವಗಳು ಸಾಕಷ್ಟು.

ಕಾಫೀ ಬೆಳೆಗಾರರ ಸಂಘ:
ಸುಮಾರು ೭೦ರ ದಶಕದಲ್ಲಿ ಸಮಾಜವಾದಿ ಚಳುವಳಿ ಕರ್ನಾಟಕದಲ್ಲಿ ಬಿರುಸಾಗಿ ನಡೆಯುತ್ತಿದ್ದ ಸಮಯ.ಅದೇ ಸಮಯದಲ್ಲಿ ರಾಜ್ಯ ರೈತ ಸಂಘ ಕೂಡ ದೇಣಿ ಪದ್ಧತಿ ಮತ್ತು ಮುಂತಾದ ಕ್ರಮಗಳ ವಿರುದ್ಧ ಹೋರಾಟ ನಡೆಸುತ್ತಿತ್ತು.ಆ ಸಮಯದಲ್ಲಿ ತೇಜಸ್ವಿ ಅವರು ಮೂಡಿಗೆರೆ ಸುತ್ತಮುತ್ತಲ ಬೆಳೆಗಾರರನ್ನು ಒಗ್ಗೂಡಿಸಿ ಬೆಳೆಗಾರರ ಸಂಘವನ್ನು ಹುಟ್ಟು ಹಾಕಿದರು.ಆಗ ಈ ಸಂಘವು ರೈತ ಸಂಘದ ಜೊತೆಗೆ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿತ್ತು,ಆಗ ಸ್ವತಹ ತೇಜಸ್ವಿ ಕೂಡ ರೈತರ ಜೊತೆ ಚಳುವಳಿಗಳಲ್ಲಿ ಭಾಗವಹಿಸುತ್ತಿದ್ದರಂತೆ.ತಮಾಷೆ ಮಾಡಿಕೊಂಡು ಎಲ್ಲರೊಡನೆ ಬೆರೆಯುತ್ತಿದ್ದರು ಎಂದು ಅವರ ಸ್ನೇಹಿತರು ತಿಳಿಸಿದರು.

ಆ ಸಂದರ್ಭದಲ್ಲಿ ಬೆಳಗ್ಗೆ ಇಂದ ಸಂಜೆವರೆಗೆ ಎಲ್ಲರೊಡನೆ ಬೆರೆತು ಹೋರಾಟ ಮಾಡುತ್ತಿದ್ದರಂತೆ.ಎಲ್ಲರ ಮಧ್ಯೆ ಒಬ್ಬರಂತೆ,ಯಾವುದೇ ಪ್ರತ್ಯೇಕ ಉಪಚಾರ ಬಯಸದೆ ಮಾಮೂಲಿ ಮನುಷ್ಯರಂತೆ ಇರಲು ಬಯಸುತ್ತಿದ್ದ ತೇಜಸ್ವಿಯವರಿಗೆ ಯಾರಾದರು ಉಪಚಾರ ಮಾಡಲು ಹೋದರೆ ಬೈದು ಕಳಿಸುತ್ತಿದ್ದರಂತೆ.

ಯಾರಾದರು ಇಂತಿಂತವರು ಬ್ಯಾಂಕಿನಿಂದ ಸಾಲ ತೆಗೆದು ಕೊಂಡಿದ್ದರು,ತೀರಿಸಲಾರದೆ ಆತ್ಮಹತ್ಯೆ ಮಾಡಿಕೊಂಡರು ಅಂದರೆ "ಥೂ ನನ್ ಮಕ್ಳ,ಸಾಲ ತಗಂಡವನು ಯಾಕೋ ಸಾಯಬೇಕು,ಸಾಲ ಕೊಟ್ಟವನು ನೇಣು ಹಾಕಿಕೊಂಡು ಸಾಯಬೇಕು,ಬುದ್ಧಿ ಇಲ್ಲ ಕಣ್ರಲ್ಲ ನಿಮಗೆ,ಹಿಂಗಾದ್ರೆ ಬೆಳೆಗಾರರು ಬದಕದು ಹ್ಯಾಗೆ,ನೀವ್ ಈ ಜನ್ಮದಲ್ಲಿ ಉದ್ಧಾರ ಆಗಲ್ಲ"ಅಂತ ಬೈತಿದ್ದರಂತೆ.

 ಈ ಸಂಘವನ್ನು ಸ್ಥಾಪಿಸಿದ್ದಲ್ಲದೆ ಮೂಡಿಗೆರೆಯಲ್ಲಿ SBI ತನ್ನ ಶಾಖೆಯನ್ನು ತೆರೆಯುವ ಹಿಂದೆ ಅವರ ಪರಿಶ್ರಮ ಇತ್ತು ಎಂದು ಅವರೆಲ್ಲ ನೆನಪಿಸಿಕೊಂಡರು.

ಶಿಕಾರಿ ಮತ್ತು ಮೀನು ಹಿಡಿಯುವುದು:
ತೇಜಸ್ವಿ ಅವರ ಶಿಕಾರಿಯ ಬಗ್ಗೆ ಮತ್ತು ಮೀನು ಹಿಡಿಯುವುದರ ಬಗ್ಗೆ ಹೇಳಬೇಕಾಗಿಲ್ಲ.ಅವರಿಗೆ ಅದೊಂದು ಹವ್ಯಾಸ.ಸ್ವತಹ ಕೋವಿ ಹಿಡಿದು ಶಿಕಾರಿಗೆ ಅಥವಾ ಗಾಳ ಹಿಡಿದು ಮೀನು ಹಿಡಿಯಲು ಸುತ್ತ ಮುತ್ತಲ ಹಳ್ಳಗಳಿಗೆ ಹೋಗುತ್ತಿದ್ದರಂತೆ.ಅಲ್ಲದೆ  ಅವರು ನಾನ್-ವೆಜ್ ತಿನ್ನುವುದರಲ್ಲಿ ಎತ್ತಿದ ಕೈ.ಮೀನು ಹಿಡಿಯಲು ಹೋದಾಗ ಎಷ್ಟೋ ಬಾರಿ ಅಲ್ಲೇ ಅದನ್ನು ಬೇಯಿಸಿ ತಿಂದು ಬರುತ್ತಿದ್ದರಂತೆ.ಶಿಕಾರಿಗೆ ಹೋದಾಗ ಕೂಡ ಊರಿನವರ ಜೊತೆ ಸೇರಿ ಅಡುಗೆ ಮಾಡಿ ಸೇವಿಸುತ್ತಿದರು.
ಅವರ ಸ್ನೇಹಿತರು ಹೇಳುವ ಪ್ರಕಾರ ತುಂಬ ಮಾಂಸಹಾರ ತಿನ್ನುತ್ತಿದ್ದರಿಂದ ಅವರಿಗೆ ಕೆಲವು ಹೃದಯ ಸಂಬಂಧಿ  ಕಾಯಿಲೆಗಳು ಅಂಟಿಕೊಂಡಿದ್ದವು.ಅವರಿಗೆ ತಿನ್ನುವುದರ ಬಗ್ಗೆ ಸ್ವಲ್ಪ ಕಂಟ್ರೋಲ್ ಇದ್ದಿದ್ದರೆ ಇನ್ನಷ್ಟು ವರ್ಷ ಬದುಕುತ್ತಿದ್ದರು ಎಂದು ಅವರ ಸ್ನೇಹಿತರಾದ ಬಸವರಾಜು ಅವರು ಹೇಳಿದರು.
ಇವು ಅಲ್ಲದೆ ಅವರಿಗೆ ಪೇಂಟಿಂಗ್ ನೆಚ್ಚಿನ ಹವ್ಯಾಸ ಆಗಿತ್ತು.

ಮಂತ್ರ ಮಾಂಗಲ್ಯ:
ಇದು ಕುವೆಂಪು ಅವರು ರಚಿಸಿದ ಒಂದು ಸರಳ ವಿವಾಹ ಪದ್ಧತಿ.ಕುವೆಂಪು ಅವರು ಒಂದು ಕಡೆ "ಈ ಪದ್ಧತಿಯನ್ನು ಜಾರಿಗೆ ತರಲು ತಮ್ಮ ಮಗನ  ಮದುವೆ  ತನಕ ಕಾಯಬೇಕಾಗಿ ಬಂತು" ಎಂದು ಹೇಳಿದ್ದಾರೆ.ತೇಜಸ್ವಿ ಅವರು ತಮ್ಮ ಸ್ನೇಹಿತರಾದ ಕಡಿದಾಳು ಶಾಮಣ್ಣ ಮತ್ತು ಸುಂದರೇಶ್ ಅವರ ಜೊತೆ ಸೇರಿ ಮೂಡಿಗೆರೆಯ ಸುತ್ತ ಮುತ್ತ ಎಷ್ಟೋ ಮದುವೆಗಳನ್ನು ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮಾಡಿಸಿದ್ದಾರಂತೆ.ಕೆಲವರು ಇದಕ್ಕೆ ಒಪ್ಪಿಗೆ ಕೊಟ್ಟರೆ,ಕೆಲವು ಕಡೆ ಮದುಮಕ್ಕಳು ಒಪ್ಪಿಗೆ ಇದ್ದರೆ  ಮನೆಯವರದು ಇರುತ್ತಿರಲಿಲ್ಲವಂತೆ.ಇನ್ನೂ ಕೆಲವು ಕಡೆ ಇವರ ಜೊತೆ ಜಗಳ ಮಾಡಿದವರೂ ಇದ್ದಾರೆ,ಈ ಮೂವರಿಗೂ ಹೊಡೆಯಲು ಹೋದವರೂ ಇದ್ದಾರೆ.
(ಕಡಿದಾಳು ಶಾಮಣ್ಣನವರು ಕೂಡ ತಮ್ಮ ಆತ್ಮಕಥೆ 'ಕಾಡು ತೊರೆಯ ಜಾಡು' ಪುಸ್ತಕದಲ್ಲಿ ಮಂತ್ರ ಮಾಂಗಲ್ಯದ ಪ್ರಕಾರ ಮದುವೆ ಆಗುವಂತೆ ಎಲ್ಲರನ್ನೂ  ಒತ್ತಾಯಿಸುತ್ತಿದ್ದದು,ಕೆಲವರ ಜೊತೆ ಜಗಳ ಕಾದಿದ್ದು ಎಲ್ಲ ಬರೆದಿದ್ದಾರೆ)

ಸ್ಕೂಟರ್:
ಇನ್ನು ಅವರ ಸ್ಕೂಟರ್,ಹಿಂದಿನ ಸೀಟನ್ನು ತೆಗೆದಿಟ್ಟಿದ್ದರು ಎಂಬುದಕ್ಕೆ ಹೆಸರುವಾಸಿ.ಕೆಲವರು ಹೇಳುವಂತೆ ಅವರು ಹಿಂದೆ ಯಾರನ್ನೂ ಕೂರಿಸಿಕೊಳ್ಳಲು ಇಷ್ಟ ಪಡುತ್ತಿರಲಿಲ್ಲ,ಅದಕ್ಕೂ ಕಾರಣ ಇದೆ,ಕೆಲವರು ಸುಮ್ಮನೆ ಕೂರದೆ ಇಲ್ಲಸಲ್ಲದ ವಿಚಾರಗಳನ್ನು ಮಾತಾಡುತ್ತಿದ್ದರು,ಅದು ಅವರಿಗೆ ಇಷ್ಟ ಆಗುತ್ತಿರಲಿಲ್ಲ ಮತ್ತು ಅವರ ಒಡನಾಡಿಗಳು ಒಬ್ಬರು ಹೇಳಿದಂತೆ ತೇಜಸ್ವಿ ಅವರು ಯಾವಾಗಲು ಎಲೆ ಅಡಿಕೆ ಹಾಕುತ್ತಿದ್ದರು,ಮರೆತು ಉಗಿದರೆ ಎಲ್ಲಿ ಹಿಂದೆ ಇರುವರಿಗೆ ಬೀಳುತ್ತದೆ ಎಂದು ಯಾರನ್ನು ಕೂರಲು ಬಿಡುತ್ತಿರಲಿಲ್ಲವಂತೆ.

ಅವರ ಎಷ್ಟೋ ಕಥೆಗಳಲ್ಲಿ ಬರುವ ಆ ಸ್ಕೂಟರ್ ಅನ್ನು  ಇವಾಗ ಮೂಡಿಗೆರೆಯ ತೋಟದ ಮನೆಯಲ್ಲಿ ಮೂಲೆಯಲ್ಲಿ ಪ್ಯಾಕ್ ಮಾಡಿ ಇಟ್ಟಿದ್ದಾರಂತೆ.
ಇನ್ನೊಂದು ಸ್ವಾರಸ್ಯ ಅಂದರೆ ಆ ಸ್ಕೂಟರ್ ಎಷ್ಟೇ ಕೆಟ್ಟು ಹೋಗಿ ಯಾರಾದರು ಹೊಸದು ತಗೊಳ್ಳಿ ಅಂದರೆ ಮತ್ತೆ ಅದನ್ನೇ ರಿಪೇರಿ ಮಾಡಿಸಿಕೊಳ್ಳುತ್ತಿದ್ದರು.ಅಲ್ಲದೆ ಅವರ ಸ್ನೇಹಿತರು ಕೂಡ  ಅವರ ಸ್ಕೂಟರ್ ಹಿಂದೆ ಸವಾರಿ ಮಾಡಿಲ್ಲವಂತೆ.

ಬಿರಿಯಾನಿ ಕರಿಯಪ್ಪ:
ನಮ್ಮ ಚಾರಣ ತಂಡದಲ್ಲಿದ್ದ ಸ್ಥಳೀಯರಾದ ರಮೇಶ್ ಎಂಬುವವರು ಬೇರೆ ಉರಿನಲ್ಲಿ ಡಿಗ್ರಿ ಮಾಡುತ್ತಿದ್ದಾಗ ಅವರಿಗೆ ಕರ್ವಾಲೋ ಕಾದಂಬರಿಯು ಪಾಠ ವಾಗಿತ್ತಂತೆ.ಇವರು ಮೂಡಿಗೆರೆಯವರು  ಎಂದು ತಿಳಿದಾಗ ಸ್ನೇಹಿತರು,ಉಪನ್ಯಾಸಕರಾದಿಯಾಗಿ ತೇಜಸ್ವಿ ಅವರ ಬಗ್ಗೆ ಕೇಳುತ್ತಿದ್ದರಂತೆ.ಅದಕ್ಕಿಂತ ಮುಖ್ಯವಾಗಿ ಆ ಕಾದಂಬರಿಯಲ್ಲಿ ಬರುವ ಬಿರಿಯಾನಿ ಕರಿಯಪ್ಪನ ಬಗ್ಗೆ ಕೇಳುತ್ತಿದ್ದರಂತೆ.ಅವಾಗ ಇವರಿಗೆ ತೇಜಸ್ವಿ ಅವರ ಪರಿಚಯ ಇರಲಿಲ್ಲ.ಕಾಲೇಜಿನಲ್ಲಿ ಎಲ್ಲರೂ ಕೇಳುವುದಕ್ಕೆ ರೋಸಿ ಹೋಗಿ "ಹೇ ಆ ಕರಿಯಪ್ಪ ಸತ್ತೋಗೆ ತುಂಬ ವರ್ಷ ಆಯ್ತು"ಅಂದಿದ್ದರಂತೆ.ಎಷ್ಟೋ ದಿನಗಳ ನಂತರ ಗೊತ್ತಾಗಿದ್ದು ಆ ಕರಿಯಪ್ಪ ಇನ್ನೂ ಬದುಕಿದ್ದಾನೆ ಅಂತ.

ಆ ಕರಿಯಪ್ಪನಿಂದ ಬಿರಿಯಾನಿ ಮಾಡಿಸಿಕೊಂಡು ತಿನ್ನ ಬೇಕೆಂಬುದು ಎಲ್ಲರ ಆಸೆ ಆಗಿತ್ತಂತೆ.

ಸಹಜ ಕೃಷಿ:
ಇನ್ನು ಫುಕುಹೊಕಾರ ಸಹಜ ಕೃಷಿ ಪದ್ದತಿ ಅನುಸರಿಸಲು ಹೋಗಿ ಪಟ್ಟ ಪಾಡನ್ನು 'ಸಹಜ ಕೃಷಿ' ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.ಆಗ ಅವರಿಗೆ ಇದರ ಬಗ್ಗೆ ತಲೆ ತಿಂದಿದ್ದು ಅವರ ಸ್ನೇಹಿತರಾದ ದಿನೇಶ್ ಎಂಬುವವರೆಂದು ಅವರ  ಒಡನಾಡಿ  ಒಬ್ಬರು  ಹೇಳಿದರು.ಇದರ ಪರಿಣಾಮ ಎಷ್ಟೋ ಕಾಫೀ ತೋಟವನ್ನು ಕಡಿದು ಭತ್ತ  ಬೆಳೆಯಲು ಹೋಗಿದ್ದು,ಕೊನೆಗೆ ಬಿತ್ತಿದ್ದ  ಭತ್ತವೆಲ್ಲ ಹಕ್ಕಿಗಳು ತಿಂದು ನಾಶ ಪಡಿಸಿದ್ದು ,ಅಲ್ಲದೆ ಬೇರೆಯವರಿಗೆ ಕೂಡ ಸಹಜ ಕೃಷಿಯನ್ನು  ಅಳವಡಿಸಿಕೊಳ್ಳುವಂತೆ  ಪ್ರೇರೇಪಿಸುತ್ತಿದ್ದದ್ದು  ಎಲ್ಲದನ್ನು  ಹಂಚಿಕೊಂಡರು.

ಕೊನೆಯದಾಗಿ ಕೊಟ್ಟಿಗೆಹಾರದಿಂದ  ಮೂಡಿಗೆರೆಗೆ ಬರುವಾಗ ನಮ್ಮ ಜೊತೆ ಇದ್ದ ಹರ್ಷ ಎಂಬ ಸ್ಥಳೀಯ ತಾನು ಶಾಲೆಗೆ  ಹೋಗುವಾಗ  ಹ್ಯಾಂಡ್ ಪೋಸ್ಟ್ ಬಳಿ ಅವರನ್ನು ನೋಡುತ್ತಿದ್ದೆ ಎಂದು  ಯಾವಾಗಲೂ  ಅವರ ಜೊತೆ ಕ್ಯಾಮೆರ ಇರುತ್ತಿತ್ತು,ಅವರ ಹಿಂದೆ ಅವರ ಮನೆಯ ನಾಯಿ 'ಕಿವಿ' ಇರುತ್ತಿತ್ತು ಎಂದು ತನ್ನ ಹಳೆ ನೆನಪುಗಳನ್ನು ನಮ್ಮೊಡನೆ ಹಂಚಿಕೊಂಡರು.ಅವರನ್ನು ತಾನು ನೀಲಿ ಬಣ್ಣದ  ಅಂಗಿಯಲ್ಲಿ  ಜಾಸ್ತಿ ನೋಡಿದ್ದು ಎಂದು ಕೂಡ ಹೇಳಿದರು.
ಇನ್ನೊಂದು ವಿಷಯ ಆತ ಹೇಳಿದಂತೆ ಅಲ್ಲಿ ತೇಜಸ್ವಿ ಅವರಿಗೆ ಯಾವುದೇ ತರಹದ ಡಿಸ್ಟರ್ಬ್ ಇರಲಿಲ್ಲ,ಮುಖ್ಯವಾಗಿ ಜನರಿಂದ.ಬೇರೆ ಕಡೆ ಹಾಗೆ ಯಾರಾದರು ಸ್ವಲ್ಪ ದೊಡ್ಡ ವ್ಯಕ್ತಿ ಬಂದರೆ ಅವರ ಹಿಂದೆ ಸುತ್ತುವ ಹಾಗೆ ಅಲ್ಲಿ ಅಂತ ಪರಿಸ್ಥಿತಿ ಇರಲಿಲ್ಲ..ಒಬ ಸಾಮಾನ್ಯ ಮನುಷ್ಯನಂತೆ ಸ್ವಚ್ಚಂದವಾಗಿ ಸ್ವತಂತ್ರವಾಗಿ ಓಡಾಡಿ ಕೊಂಡಿರಲು ಅವರಿಗೆ ಅವಕಾಶ ಇತ್ತು.ಹಾಗಾಗಿಯೇ ಅವರು ಆ ಉರು ಬಿಟ್ಟು ಬೇರೆ ಕಡೆ ಹೋಗದೆ ಅಲ್ಲೇ ನೆಲೆಸಿದ್ದು ಎಂದು ಹೇಳಿದರು.

ಇನ್ನೊಂದು ವಿಷಯ ಅಂದಂತೆ ಮೂಡಿಗೆರೆ ಸುತ್ತಮುತ್ತ ಜನ ತೇಜಸ್ವಿ ಅವರನ್ನು ಒಬ್ಬ ಲೇಖಕನಾಗಿ ಗುರುತಿಸಿದ್ದು ಬಹಳ ಕಡಿಮೆ,ಬದಲಾಗಿ ಅವರ ಛಾಯಾಚಿತ್ರ ಮತ್ತು ಇನ್ನಿತರ ಚಟುವಟಿಕೆಗಳ ಮುಖಾಂತರ ಗುರುತಿಸಿದ್ದೆ ಹೆಚ್ಚು.

ವಿಸ್ಮಯ ಪ್ರತಿಷ್ಠಾನ,ಕೊಟ್ಟಿಗೆಹಾರ


ಹೀಗೆ ಚಾರಣದ ಸಮಯದಲ್ಲಿ ಅವರ ಒಡನಾಡಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಈ ಚಾರಣ ಕಾರ್ಯಕ್ರಮವನ್ನು ಏರ್ಪಡಿಸಿದ್ದ ವಿಸ್ಮಯ ಪ್ರತಿಷ್ಠಾನಕ್ಕೆ ಅಭಿನಂದನೆಗಳು ಮತ್ತು ತೇಜಸ್ವಿ ಬದುಕು-ಬರಹ ಚಿಂತನೆಗಳನ್ನು ಪಸರಿಸಲು ಅವರು ಹಮ್ಮಿಕೊಳ್ಳುತ್ತಿರುವ ಎಲ್ಲ ಕಾರ್ಯಕ್ರಮಗಳು ಮತ್ತು ಸಂಸ್ಥೆಯ ಆಶಯಗಳಿಗೆ ಶುಭ ಕೋರುತ್ತೇನೆ.

                             (ಅವಧಿಯಲ್ಲಿ ಈ ಲೇಖನ ಪ್ರಕಟಗೊಂಡಿದೆ ತೇಜಸ್ವಿ,ನಿಮ್ಮ ಹುಡುಕುತ್ತಾ ..)

Thursday, March 22, 2012

ಪೋಲಿಸ್ ಸ್ಟೇಷನ್ನಲ್ಲಿ ಮ್ಯಾಚ್ ನೋಡಿದ್ದು ಹಿಂಗೆ...

ಈ ಉಗಾದಿ ಹಬ್ಬಕ್ಕೆ ಊರಿಗೆ ಹೋಗಬೇಕಾದ್ರೆ ಏನಾದ್ರೂ ಒಂದು ತಾಪತ್ರೆ ಆಗುತ್ತೆ...ಅವಾಗ ಒಂದ್ಸಲ ಹಿಂಗೆ ದುಡ್ಡು ಕಳ್ಕೊಂಡು ಹೋಗಿದ್ದೆ ... ಹೋದ ವರ್ಷ ಹೋಗಬೇಕಾದ್ರೆ ಇನ್ನೂ ವಿಚಿತ್ರ... ಅದೇನಾಯ್ತು ಅಂದ್ರೆ ಎಲ್ಲರೂ ಮನೇಲಿ ಕೂತು ಕ್ರಿಕೆಟ್ ನೋಡ್ತಿದ್ರೆ ನಾವು ಪೋಲಿಸ್ ಸ್ಟೇಷನ್ ನಲ್ಲಿ ನೋಡ್ತಾ ಇದ್ವಿ ...... The story goes like this...

ಹಬ್ಬ ಇದ್ದಿದ್ದು ಸೋಮವಾರ... ಅದಕ್ಕಿಂತ ಎರಡು ದಿನ ಮುಂಚೆ ಅಂದ್ರೆ ಶನಿವಾರ ವಿಶ್ವ ಕಪ್ ಫೈನಲ್ ಮ್ಯಾಚ್ ಇತ್ತು.. ನಮ್ಮ  ದೇಶ ಮತ್ತೆ ಶ್ರೀಲಂಕಾ ನಡುವೆ... ಅವತ್ತೇ ಊರಿಗೆ ಹೊರಡೋ ಪ್ಲಾನ್ ಹಾಕಿಕೊಂಡೆ..ಬೆಳಗ್ಗೆ ಟ್ರೈನ್ ಪ್ರತಿ ಶನಿವಾರ ಫುಲ್ ರಶ್ ಇರತ್ತೆ...ಅದು ಅಲ್ಲದೆ ಇದು ಹಬ್ಬದ ವಾರ ಬೇರೆ..ಇನ್ನೂ ರಶ್ ಇರತ್ತೆ..ಹೇಗೂ ಇವತ್ತು ಫೈನಲ್ ಇರೋದ್ರಿಂದ ಸಂಜೆ ಟ್ರೈನ್ ಅಷ್ಟು ರಶ್ ಆಗಲ್ಲ ಅಂತ,ಅದಕ್ಕೆ ಹೋಗೋ ನಿರ್ಧಾರ ಮಾಡಿದೆ..ಹೇಗೂ ಊರಿಗೆ ಹೋಗಿ ಕಡಿದು ಕಟ್ಟೆ ಕಟ್ಟದು ಅಷ್ಟರಲ್ಲೇ ಇದೆ ಅಂತ.. ಕ್ರಿಕೆಟ್ ನೋಡದು ಬಿಟ್ಟು ಜಮಾನ ಆದ್ದರಿಂದ ಅವತ್ತು ಕೂಡ ಮ್ಯಾಚ್ ನೋಡೋ ಗೋಜಿಗೆ ತಲೆ ಕೆಡಿಸಿಕೊಳ್ಳಲಿಲ್ಲ...ಸರಿ ಸಂಜೆ ಟ್ರೈನ್ ಗೆ ಹೋದರೆ ಯಾವಾಗಲು ಖಾಲಿ ಇರೋದು ಅವತ್ತು ನೋಡಿದ್ರೆ ಸ್ವಲ್ಪ ಜನ ತುಂಬಿದ್ದರು.ಹಿಂದಿನ ದಿನ ಇದ್ದ ಮೂರ್ಖರ ದಿನ ಮೂರ್ಖ ಆಗಿರಲಿಲ್ಲ...ಆದರೆ ಅವತ್ತು ಆಗ್ಬಿಟ್ಟೆ...ಸೀಟು ಸಿಗುತ್ತೆ ಮ್ಯಾಚ್ ಇರೋದ್ರಿಂದ ಅಂತ ಈ ರೈಲಿಗೆ ಬಂದ್ರೆ ಇದರಲ್ಲೂ ಸಿಗಲಿಲ್ಲ...ಥೋ ಇನ್ನೇನ್ ಮಾಡೋದ್ ಅಂತ ಸುಮ್ಮನಾದೆ...

ಸರಿ ಆಮೇಲೆ ಏನಾಯ್ತು ಅಂದ್ರೆ ನನ್ನ ಹಳೆ ಚಾಳಿ ಅಂತೆ ಅಕ್ಕ ಪಕ್ಕದವರ ಜೊತೆ ಹರಟೆ ಹೊಡೆಯೋದು ಶುರು ಆಯ್ತು... ಸೀಟು ಸಿಕ್ಕಿದ್ದರೆ ಯಾವುದಾದರು ಪುಸ್ತಕ ಓದುತ್ತ ಕೂರ್ತಿದ್ದೆ...ನಿಂತಿದ್ದನಲ್ಲ ವಿಧಿ ಇಲ್ಲದೆ ಅವರಿವರ ಜೊತೆ ಮಾತು ಶುರು ಆಯ್ತು...ಎಲ್ಲಾರ್ಗೂ ಮ್ಯಾಚ್ ಬಗ್ಗೆನೇ ಚಿಂತೆ...ಅವಾಗ ಒಬ್ರು ಜಗದೀಶ್ ಅಂತ ಪರಿಚಯ ಆದರು,ನಮ್ಮ ಊರಿನ ಹತ್ತಿರದವರೇ...ಸಹಜ ಸ್ವಭಾವ,ನಮ್ಮ ಹತ್ತಿರದವರು ಎಲ್ಲಾದರು ಕಂಡಾಗ ಮಿತಿಗಿಂತ ಜಾಸ್ತಿ ಮಾತಾಡ್ತೀವಿ..ನಾವಿಬ್ಬರೂ ಅರಸಿಕೆರೆಯಲ್ಲಿ ಇಳಿದು ಒಂದೇ ಬಸ್ಸಿಗೆ ಹಳೇಬೀಡಿಗೆ ಹೋಗಬೇಕಿತ್ತು...ಅದು ನಮಗೆ ಕೊನೆ ಬಸ್..ಆಗಾಗಿ ನನಗೂ ಒಬ್ಬರು ಜೊತೆ ಸಿಕ್ಕಿದರು,ಅವರಿಗೂ ಸಿಕ್ಕಿದರು,ಮಾತು ಕಥೆ ಶುರು ಆಯ್ತು...ನಮ್ಮ ನಮ್ಮ ಊರಿನ ಬಗ್ಗೆ,ನಮ್ಮ ಕೆಲಸದ ಬಗ್ಗೆ,ಬೆಂಗಳೂರಿನಲ್ಲಿ ಎಲ್ಲಿರದು,ಅದು ಇದು ಎಲ್ಲಾ...

ಅಷ್ಟೊತ್ತಿಗಾಗಲೇ ಶ್ರೀಲಂಕಾ ಬ್ಯಾಟಿಂಗ್ ಮುಗಿದು ನಮ್ಮ ಇಂಡಿಯಾ ಬ್ಯಾಟಿಂಗ್ ಶುರು ಆಗಿತ್ತು... ಅದಕ್ಕೂ  ಮುಂಚೆ  ನನ್ನ ಸಹೋದ್ಯೋಗಿ ಒಬ್ಬ ಫೋನ್ ಮಾಡಿ ಅವ್ರು ಇಷ್ಟಿಷ್ಟು ಸ್ಕೋರ್ ಮಾಡಿದ್ದಾರೆ,ಬೆಟ್ ಗಿಟ್ ಕಟ್ಟುತ್ತೀಯ ಅಂತ ಕೇಳಿದ ...ಇಲ್ಲ ಗುರು,ನನಗೆ ಅದರ ಸಹವಾಸ ಬೇಡ ಅಂತ ಹೇಳಿ,ಅವನು, ಇವತ್ತು ನಮ್ಮವರು ಸೋಲ್ತಾರೆ ಅಂತ ಹೇಳಿ ಫೋನ್ ಇಟ್ಟ..ಅದಾದ್ ಮೇಲೆ ಬೇಡ ಬೇಡ ಅಂದ್ರು ಪಕ್ಕದಲ್ಲಿದ್ದವರು ಸ್ಕೋರ್ ಹೇಳಕ್ಕೆ ಶುರು ಮಾಡಿದ್ರು,ಒಹ್ ಸೆಹವಾಗ್ ಔಟ್ ಆದ,ಸಚಿನ್ ಔಟಾದ..ಗೆಲ್ಲಲ್ಲ ಬಿಡಿ ಹಂಗೆ ಹೀಗೆ ಅಂತ ಬಹುತೇಕ ಎಲ್ಲರ ಬಾಯಲ್ಲೂ ಇದೆ ಮಾತು...

ಸರಿ ಟ್ರೈನ್ ಅರಸೀಕೆರೆಗೆ ಬಂತು.. ಹೊಟ್ಟೆಗೆ ಸ್ವಲ್ಪ ತಳ ಕಟ್ಟಿಕೊಂಡು ನಾನು ಮತ್ತು ಜಗದೀಶ್ ಇಬ್ಬರೂ ನಮ್ಮ ಕೊನೆ ಬಸ್ ಹತ್ತಿ ಹೊರಟ್ವಿ..ನನಗೂ ಕೆಲ ಸ್ನೇಹಿತರು ಅವಾಗವಾಗ updates ಕೊಡ್ತಿದ್ರು..ಮ್ಯಾಚ್ ನೋಡಲಿಲ್ಲ ಅಂದ್ರು ಸ್ವಲ್ಪ excitment ಇದ್ದೆ ಇತ್ತು...ಅವರಿಗೂ ಕೆಲವರು ಸ.ಮೊ.ಸ ಕಳಿಸ್ತಿದ್ರು..ಇನ್ನ ೮೪ ಎಸೆತ ೮೪ ರನ್ ಬೇಕಿತ್ತು.. ಅದೇ ಸಮಯಕ್ಕೆ ಸರಿಯಾಗಿ ಜಾವಗಲ್ಲಿಗೆ(ಜಾವಗಲ್ ಶ್ರೀನಾಥ್ ಅವರ ಊರು) ಬಂದಿದ್ವಿ.ಅಲ್ಲಿ ಉಟಕ್ಕೆ ಅಂತ ೧೦ ನಿಮಿಷ ಬಸ್ ನಿಲ್ಲಿಸಿದರು,ಆಗ ನನ್ನ ಜೊತೆಗಿದ್ದ ಜಗದೀಶ್ ಅವರು,ಮುಂಚೆ ಅವರು ಕೂಡ ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡಿ,ಅಲ್ಲಿ ಬಿಟ್ಟು ಆಗ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು.ಅವರು ಪೋಲಿಸ್ ಆಗಿದ್ದಾಗ ಇದ್ದ ಸ್ನೇಹಿತರು ಕೆಲವರು ಆ ಸಮಯದಲ್ಲಿ ಜಾವಗಲ್ ಗೆ ವರ್ಗಾವಣೆ ಆಗಿದ್ದರು,ಆಗಾಗಿ "ಬನ್ನಿ ಗಿರೀಶ್,ಒಂದ್ ಹತ್ತು ನಿಮಿಷ ಮ್ಯಾಚ್ ನೋಡ್ಕಂಡು ಬರೋಣ" ಅಂತ ಬಸ್ ನಿಲ್ದಾಣದ ಪಕ್ಕದಲ್ಲೇ ಇರೋ ಅಲ್ಲಿನ ಪೋಲಿಸ್ ಸ್ಟೇಷನ್ ಗೆ ಕರ್ಕೊಂಡು ಹೊರಟರು.."ಬೇಡ ಸರ್,ಅಲ್ಲೇನ್ ಟಿವಿ ಇರುತ್ತಾ" ಅಂತ ಕೇಳ್ದಾಗ,"ಹೇ ನಮ್ಮ ಫ್ರೆಂಡ್ ಅಲ್ಲೇ ಇದ್ದಾನೆ,ಇಷ್ಟೊತ್ತು ಅವನೇ ನನಗೆ ಮೆಸೇಜ್ ಕಳ್ಸಿದ್ದು,ಫೋನ್ ಮಾಡಿದ್ದೆ,ಬನ್ನಿ ಅಂದ" ಅಂತ ಹೇಳಿ ಕರ್ಕೊಂಡ್ ಹೊರಟರು.."ಮತ್ತೆ ಬಸ್ ಗಿಸ್ ಮಿಸ್ ಆದ್ರೆ ಕಷ್ಟ" ಅಂದ್ರೆ"ಏ,ಕಂಡಕ್ಟರ್ ಗೆ ಹೇಳ್ತೀನಿ ತಾಳಿ,ಒಂದೆರಡು ಓವರ್ ನೋಡ್ಕಂಡ್ ಬರಣ" ಅಂತ ಕರ್ಕಂಡ್ ಹೊರಟರು...
"ನಿಮ್ ಬ್ಯಾಗ್ ಇದ್ರೆ ತಗಳಿ,ರಾತ್ರಿ ಬೇರೆ,ಸುಮ್ನೆ ಯಾಕ್ ರಿಸ್ಕ್,ಯಾವನಾದ್ರು ಎತ್ಕಂಡ್ ಹೋದ್ರೆ" ಅಂತ ಎಚ್ಚರಿಸಿ ಕರ್ಕಂಡ್ ಹೊರಟರು... ಅಲ್ಲಿ ಮುಂಬಯಿಯಲ್ಲಿ ಟೀಂ ಇಂಡಿಯಾದವರು ರನ್ chase ಮಾಡ್ತಿದ್ರೆ ನಮಗೆ ಇಲ್ಲಿ ಬಸ್ chase ಮಾಡಕ್ಕೆ ಆಗ್ಲೇ ಇಲ್ಲ...

ಮನಸಲ್ಲೇ ಜಗದೀಶ್ ಅವ್ರಿಗೆ ಬೈಕೊಂಡು "ಈಗೇನ್ ಮಾಡೋದ್ ಸರ್?" ಅಂದೆ,"ಏ ಬನ್ನಿ ಗಿರೀಶ್,ಮ್ಯಾಚ್ ನೋಡ್ಕಂಡ್ ಆಮೇಲೆ ನೋಡನ.. ಸಖತ್ ಇಂಟರೆಸ್ಟಿಂಗ್ ಇದೆ ಮ್ಯಾಚ್,ಯಾರ್ದಾರ ಬೈಕ್ ಇಸ್ಕಂಡ್ ಹೋಗಣ,ನಿಮ್ಮ ಊರಿಗೆ ಬಿಡ್ತೀನಿ ನಾನು" ಅಂತ ಧೈರ್ಯ ಕೊಟ್ರು..ಆದರು ಸಮಾಧಾನ ಆಗ್ಲಿಲ್ಲ..ಮತ್ತೆ ಸ್ಟೇಷನ್ ಗೆ ಹೋದ್ರೆ,ಅಲ್ಲಿದ್ದ ಬೇರೆ ಪೋಲಿಸಿನವರು ಯಾವೂರು ಅಂತ ಕೇಳಿದ್ರು,ಸಿದ್ದಾಪುರ ಅಂದೆ..ಆ ಊರಿನವರು ಒಬ್ರು  ಇದೆ ಸ್ಟೇಷನ್ ನಲ್ಲಿ ಇದ್ರು ಕಣಪ್ಪ ಮುಂಚೆ.. ಈಗ ಸಕಲೇಶಪುರದಲ್ಲಿ ಇದ್ದಾರೆ...ಅಯ್ಯೋ,ಅವರು ನಮ್ಮ ಚಿಕ್ಕಪ್ಪನೇ ಸರ್ ಅಂದೆ...ಬಿಡು ಮತ್ತೆ ನಮ್ಮವರೇ ನೀವು, ಯಾಕ್ ಯೋಚನೆ ಮಾಡ್ತಿಯ,ಬೈಕ್ ಕೊಡ್ತೀವಿ ತಗಂಡ್ ಹೋಗಿ,ಹೆಂಗೂ ಇವನು ಇದ್ದಾನಲ್ಲಾ ,ಬಿಡ್ತಾನೆ ಅಂದ್ರು...ಅವಾಗ ಸ್ವಲ್ಪ ಸಮಾಧಾನ ಆಯ್ತು..

ಸರಿ ಮ್ಯಾಚ್ ಮುಗಿತು,ನಮ್ಮವರು ಗೆದ್ದರು,ಇನ್ನೇನ್ ಹೊರಡೋಣ ಅಂತ ಇದ್ವಿ,ಆಗ ನಮ್ಮಂಗೆ ಹೊರಗಿನವರು ಅಲ್ಲಿ ಮ್ಯಾಚ್ ನೋಡ್ತಿದ್ದವರಲ್ಲಿ ಒಬ್ಬರು,'ಏ ಇಷ್ಟೊತ್ತು ಇದ್ದೀರಾ,ಅತ್ಲಾಗಿ ಕಪ್ ಕೊಡೋದನ್ನು  ನೋಡ್ಕಂಡ್ ಹೋಗಿ"ಅಂದ್ರು..ಅವರಿಗೆ ಪರಮಾತ್ಮ ಮೈ ಮೇಲೆ ಬಂದಿದ್ದ..."ಗೆದ್ದರಲ್ಲ ಅಷ್ಟು ಸಾಕು ಬಿಡಿ" ಅಂದಾಗ' "ನೋಡ್ರಿ ಅಲ್ಲಿ ನಮ್ ಅಣ್ಣ ಸಚಿನ್ ನ ಹೆಂಗೆ ಹೊತ್ಕಂಡವ್ರೆ" ಅಂತ ಆತ ಕೂಡ ಕುಣಿಯಕ್ಕೆ ಶುರು ಮಾಡಿದ...ಆಗ ಅಲ್ಲಿದ್ದ ಒಬ್ಬ ಪೀಸಿ ರೀ ಸಾಹೇಬರು ಬರ್ತಾರೆ ಇವಾಗ,ನಡೀರಿ ನಡೀರಿ,ನಾವು ಹೊರಡಬೇಕು..ಎಲ್ಲಾದರು ಗಲಾಟೆ ಗಿಲಾಟೆ ಆಗುತ್ತೆ ಅಂತ ರೌಂಡ್ಸ್ ಹೋಗಕ್ಕೆ ಹೇಳಿದ್ದಾರೆ ಅಂತ ಹೊರಟರು.. ಆಗ ಈ  ಜಗದೀಶ್ ಇದ್ದವರು ಅವರ ಫ್ರೆಂಡ್ ಹತ್ತಿರ ಬೈಕ್ ತಗೊಂಡು ನಾವು ಹೊರಟ್ವಿ...ನೋಡಿದ್ರೆ ದಾರಿ ಮಧ್ಯೆ ಎಲ್ಲಾ ಹಳ್ಳೀಲೂ celebrations ಫುಲ್ ಜೋರಾಗಿತ್ತು.. ತಮಟೆ ಬಾರಿಸ್ತಾ ಡೋಲು ಬಾರಿಸ್ತಾ ರಸ್ತೆ ಮಧ್ಯೆದಲ್ಲೇ ಕುಣಿತಿದ್ದರು..

ಅಂತು ಇಂತು ಮನೆ ತಲುಪಿದಾಗ ರಾತ್ರಿ ೧೨.೩೦...ಆ ಬಸ್ಸಿಗೆ ಹೋಗಿದ್ದರೆ ೧೦.೧೫ಕ್ಕೆ ಮನೇಲಿ ಇರ್ತಿದ್ದೆ.. ಇನ್ನೂ ಬರದೆ ಇದ್ದದಕ್ಕೆ ಅಪ್ಪ ಫೋನ್ ಮಾಡಿದ್ದಾರೆ..ನನ್ನ ಮೊಬೈಲ್ out of coverage area ಇತ್ತು... ಕೊನೆಗೆ ಬರ್ತಾನೆ ಬಿಡು ಅಂತ ಸುಮ್ನಾಗಿದ್ರಂತೆ...ಅವತ್ತು ನಮ್ಮ ದೊಡ್ಡಮ್ಮ ಬಂದಿದ್ದರು ಅಂತ ಪಾಯಸ ಮಾಡ್ಕೊಂಡು ನನಗೋಸ್ಕರ ಉಟಕ್ಕೆ ಕಾದು ಕಾದು ಸಾಕಾಗಿ ಫೋನ್ ಮಾಡಿ ಮಾಡಿ ಸುಸ್ತಾಗಿ "ಏಲ್ ಹೋದ ಈ ನನ್ ಮಗ" ಅಂತ ಬೈಕೊಂಡು,ಹೊಟ್ಟೆ ಹಸಿದ ಮೇಲೆ ಊಟ ಮಾಡಿ ಮಲಗಿದ್ದರು.. ಮನೆಗೆ ಹೋಗಿ ಯಾಕ್ ಲೇಟ್ ಅಂತ ಅವ್ರು ಕೇಳ್ದಾಗ,ಹಿಂಗಿಂಗೆ ಆಯ್ತು,ಅವ್ರು ಬಂದು ಬಿಟ್ಟು ಹೋದರು,ಅಂದೆ..ನಮ್ ಅಪ್ಪಾಜಿ ತಲೆ ತಲೆ ಚಚ್ಕಂಡ್ ನಕ್ಕಿದ್ರೆ,ನಮ್ ಅಮ್ಮ "ಅವ್ರು ಬೈಕ್ ಕೊಡಬಾರದಿತ್ತು ಕಣ್ಲ ನಿಮಗೆ,ಅಷ್ಟು ಪರಿಜ್ಞಾನ ಬ್ಯಾಡವೇ ?" ಅಂತ ಒಂದ್ ಲುಕ್ ಕೊಟ್ಟು "ಹೊಗ್ ಪಾಯಸ ತಣ್ಣಗೆ ಆಗಿದೆ,ಅದನ್ನೇ ತಿನ್ನು" ಅಂತೇಳಿ ಮಲಗಿದರು.. ಹಳೇಬೀಡಿನಲ್ಲಿ  ನನ್ನ ಫ್ರೆಂಡ್ ಪೃಥ್ವಿ ಮನೇಲಿ ಇದ್ದೀನಿ,ಅಲ್ಲಿ ಮ್ಯಾಚ್ ನೋಡ್ತಾ ಇದ್ದೆ ಅಂತ ತಿಳ್ಕಂಡಿದ್ದರಂತೆ...


ಹೋದ ವರ್ಷ ಹಿಂಗೆ ಆಗಿತ್ತು...ಈ ವರ್ಷ ಈ ಥರ ಏನು adventurous ಸಂಗತಿ ನಡೆಯಲ್ಲ.. ಯಾಕಂದ್ರೆ ಬೆಳಗ್ಗೆ ಟ್ರೈನ್ ಗೆ ಹೋಗ್ತಿರದು.. ಅಲ್ಲದೆ ಜೊತೆಗೆ ಫ್ರೆಂಡ್ಸ್ ಇರ್ತಾರೆ...ನನ್ ಕಥೆ ಯಾವಾಗ್ಲೂ ಹಿಂಗೆ ...ಅದ್ ಬಿಡಿ...


ಪ್ರಕೃತಿಯ ಹೊಸ ಚಿಗುರಿನೊಂದಿಗೆ,ಹುರುಪಿನೊಂದಿಗೆ ನವ 'ನಂದನ' ಸಂವತ್ಸರದ ಪಯಣ ಸಾಗಲಿ...
ಸುಖ ದುಃಖ,ಸಿಹಿ ಕಹಿ ಎಲ್ಲವನ್ನೂ ಸಮನಾಗಿ ಸ್ವೀಕರಿಸುತ್ತಾ ಬದುಕು ಸಾಗಲಿ...
ಸಮಸ್ತರಿಗೂ ಯುಗಾದಿಯ ಶುಭಾಶಯಗಳು... ಒಳ್ಳೇದ್  ಆಗ್ಲಿ ...


(ಹಳ್ಳಿ ಕಡೆ ಯುಗಾದಿ ದಿನ ಹೊನ್ನಾರು ಅಂತ ಆಚರಣೆ ಮಾಡ್ತಾರೆ... ಅದರ ಬಗ್ಗೆ ಒಂದೇ ಲೇಖನ ಇದೆ ನೋಡಿ...)


Tuesday, February 28, 2012

ಅವಳು

ಸುಮಾರು ೧೫೦ ಮನೆಗಳಿರುವ ಗ್ರಾಮ ಕೆಂಚಾಪುರ..ಕೃಷಿಯಿಂದ ಹಿಡಿದು ಕಮ್ಮಾರ,ಚಮ್ಮಾರ,ಹಜಾಮ,ಕುಕ್ಕೆ ನೆಯ್ಯುವ ಕುಕ್ಕೆ ಕೊರ್ಮರು ,ವ್ಯಾಪಾರ,ಬೆಸ್ತರು,ಗಾಣಿಗ ವೃತ್ತಿ,ಹೀಗೆ ಹಲವಾರು ಕುಲ ಕಸುಬುಗಳನ್ನು ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಜನ.ಬಡವರಿಂದ ಹಿಡಿದು ಶ್ರಿಮಂತರಾದಿಯಾಗಿ ಜನರು,ಗುಡಿಸಲಿನಿಂದ  ಹಿಡಿದು ಹೆಂಚಿನ ಮನೆಯಾದಿಯಾಗಿ ತಾರಸಿ ಮನೆಗಳೂ ಅಲ್ಲಲ್ಲಿ ಕಾಣಸಿಗುತ್ತಿದ್ದವು.ಇಂಥ ಒಂದು ಊರಲ್ಲಿ ಕೆಲವರು ಕುಟುಂಬ ಸಮೇತರಾಗಿ ಊರು ಬಿಟ್ಟು ಪಟ್ಟಣಗಳಿಗೆ ವಲಸೆ ಹೋಗಿ ಜೀವನ ಮಾಡುತ್ತಿದ್ದರು.ಇನ್ನು ಕೆಲವು ಯುವಕರು ಕುಲ ಕಸುಬು ಮಾಡಲು ಹಿಂಜರಿಕೆಯೋ ಅಥವಾ ತಮ್ಮ ಪೂರ್ವಜರ ಕೆಲಸವು  ಆರಾಮದಾಯಕದಲ್ಲದು ಎಂದೋ ಅಥವಾ ಇದು ಅಷ್ಟೂ ಲಾಭದಾಯಕವಲ್ಲದು ಎಂದೋ ಅಥವಾ ನಗರದ ಐಶಾರಾಮಿ ಜೀವನಕ್ಕೆ ಆಕರ್ಶಿತರಾಗಿಯೋ ಅಥವಾ ಇನ್ನ್ಯಾವುದು ಕಾರಣಕ್ಕೋ ಉರೋ ಬಿಟ್ಟು ನಗರ ಸೇರಿ ಕೆಲಸ ಮಾಡತೊಡಗಿದರು.ಕೆಲವರು ತಮ್ಮ ಕುಲ ಕಸುಬನ್ನು ನಗರದಲ್ಲಿ ಕೂಡ ಮಾಡ ತೊಡಗಿದರು.

ಹೀಗೆ ಊರು ಬಿಟ್ಟು ಪಟ್ಟಣ ಸೇರಿದ ಯುವಕರನ್ನು ಕಂಡರೆ ಊರಿನ ಕೆಲವರಿಗೆ ಒಂದು ರೀತಿಯ ಅಸಡ್ಡೆ.ನಗರ ಸೇರಿದ ಹುಡುಗರು ಕೆಟ್ಟ ಕೆಟ್ಟ ಅಭ್ಯಾಸಗಳಿಗೆ ದಾಸರಾಗುತ್ತಾರೆ ,ಕುಡಿಯೋದು,ಜೂಜಾಡುವುದು,ಇನ್ನೂ ಕೆಲವರಿಗೆ ಹುಡುಗಿಯರ ಚಟ ಬೇರೆ ಇರುತ್ತೆ ಅಂತ ಅವರ ತರ್ಕ.ಕೆಲವು ಹುಡುಗರು ಕೆಲಸ ಹುಡುಕಿಕೊಂಡು ಹೋಗಿ ಕೆಲ ಸಮಯದ ನಂತರ ಊರಿಗೆ ಯಾವುದೋ ಹಬ್ಬ ಹರಿದಿನಕ್ಕೆ ಬಂದಾಗ ಅವರ ವೇಷ ಭೂಷಣಗಳಲ್ಲಾಗಲಿ ,ಅವರ ನಡವಳಿಕೆಗಳಲ್ಲಾಗಲಿ ಭಾರೀ ಬದಲಾವಣೆ ಆಗುತ್ತಿತ್ತು.ಕೆಲವರಂತೂ ಊರಿನ ಮುಂದೆ ಇರುವ ಪೆಟ್ಟಿಗೆ ಅಂಗಡಿಯಲ್ಲಿ ಸಿಗರೇಟ್ ಕೊಂಡು ಹಿಂದೂ ಮುಂದು ನೋಡದೆ ಯಾರಿಗೂ ಹೆದರದೆ ರಾಜಾರೋಷವಾಗಿ ಸೇದುತ್ತಾ ದಾರಿಯಲ್ಲಿ ನಡೆದು ಹೋಗುತ್ತಿದ್ದರು ಎಂಬುದೇ ಇದಕ್ಕೆ ಕಾರಣ.ಇದನ್ನು ಕಂಡ ಕೆಲವರು ಪಟ್ಟಣ ಸೇರಿ ಹಾಳಾಗಿ ಹೋದ ಮುಂಡೆದು,ಹಿರಿಯರು ಕಿರಿಯರು ಅನ್ನೋ ಭಯ ಭಕ್ತಿ ಇಲ್ಲ ಇವಕ್ಕೆ ಅಂತ ಹಿಂದಿನಿದ ಬೈದು ಕೊಳ್ಳುತ್ತಿದ್ದರು.

ಊರು ಬಿಟ್ಟು ಕೆಲಸ ಹರಸಿ ನಗರ ಸೇರಿದ ಎಷ್ಟೋ ಹುಡುಗರು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳದೆ ಊರಿಗೆ ವಾಪಸ್ ಬಂದರು.ಅಲ್ಲದೆ ಇನ್ನಷ್ಟು ಯುವಕರು ಈಗಾಗಲೇ ಪಟ್ಟಣ ಸೇರಿ  ಅಲ್ಲಿ  ಹಳೆ ಹುಲಿಗಳಾಗಿರುವ ತಮ್ಮ ಸ್ನೇಹಿತರ ಅಪೇಕ್ಷೆಯ ಮೇರೆಗೆ ಮತ್ತು ಅವರಲ್ಲಾದ ಶೋಕಿಯ ಬದಲಾವಣೆ ಕಂಡು ತಾವು ಅವರಂತಾಗಬೇಕೆಂದು ಹಳ್ಳಿ ಬಿಟ್ಟು ನಗರ ಸೇರಿದರು.ಇವರೆಲ್ಲ ಊರಿನವರ ಕೆಂಗಣ್ಣಿಗೆ ಕಾರಣರಾಗಿದ್ದರೂ,ಇವರ್ಯಾರು ಯಾರಿಗೂ ಕ್ಯಾರೆ ಅನ್ನುತ್ತಿರಲಿಲ್ಲ.ಇದರಲ್ಲಿ ಕೆಲವರು ಮತ್ತೆ ಊರಿಗೆ ಬರುವ ಯೋಜನೆ ಹಾಕಿಕೊಂಡಿದ್ದರೂ,ಇನ್ನೂ ಕೆಲವರು ತಮಗೆ ಬೇಕಾದ ಹುಡುಗಿಯರನ್ನು ನೋಡಿಕೊಂಡು ಮದುವೆಯಾದರು.ಇದರಲ್ಲಿ ಕೆಲವು  ಹುಡುಗರು ದುಡಿದ ದುಡ್ಡನ್ನು ಬಿಟ್ಟಿ ಶೋಕಿ ಮಾಡುತ್ತಾ ಬೇಕಾಬಿಟ್ಟಿ ಖರ್ಚು ಮಾಡಿಕೊಂಡು ಮನೆಗೆ ನಯಾ ಪೈಸೆ ಕೊಡದೆ ಇದ್ದು ಬಿಡುತ್ತಿದ್ದರು,ಇನ್ನು ಕೆಲವರು ಭುದ್ದಿವಂತರು ಮನೆಗೊಂದಿಷ್ಟು ದುಡ್ಡಿ ಕಳಿಸುತ್ತಾ ತಾವು ಒಂದಿಷ್ಟನ್ನು ಉಳಿಸಿಕೊಳ್ಳುತ್ತಿದ್ದರು.

ಇಂಥ ಒಂದು ಯುವಕರ ಪಡೆಯಲ್ಲಿ ಸದಾಶಿವ ಎಂಬ ಹುಡುಗನೂ ಇದ್ದ.ಬೇರೆಯವರಿಗಿಂತ ಸ್ವಲ್ಪ ಬುದ್ಧಿವಂತನೂ ಆಗಿದ್ದ.ಸ್ವಲ್ಪ ಛಲವಾದಿ,ಏನಾದರೂ ಸಾಧಿಸಬೇಕೆಂಬ ಆಸೆ.ಬಡತನದಿಂದ ಅನುಭವಿಸಿದ ಯಾತನೆ ಅವನನ್ನು ಹಾಗೆ ಮಾಡಿತ್ತು. ಇತರೆ ಹುಡುಗರೆಲ್ಲ ಕೆಲವೇ ವರ್ಷಗಳಲ್ಲಿ ವಾಪಸ್ ಹಳ್ಳಿಗೆ ಮರಳಿದರೆ,ಇವನು ಸುಮಾರು ವರ್ಷಗಳ ತನಕ ನಗರದಲ್ಲೇ ಕೆಲಸ ಮಾಡಿಕೊಂಡಿದ್ದ,ಅಲ್ಲದೆ ವಾಪಸ್ ಮರಳಿದ ಹುಡುಗರಲ್ಲಿ ಯಾರನ್ನಾದರೂ ಯಾಕೆ ಕೆಲಸ ಬಿಟ್ಟು ಬಂದ್ರಿ,ಅವನು ನೋಡಿದ್ರೆ ಇನ್ನೂ ಚೆನ್ನಾಗಿ ದುಡಿತಿದ್ದಾನೆ ಅಂದ್ರೆ ತಮ್ಮ ತಮ್ಮ ತೇಪೆಗಳನ್ನು ಮುಚ್ಚಿಕೊಳ್ಳುವುದಕ್ಕೋಸ್ಕರ "ಅಯ್ಯೋ,ಅವನೆಲ್ಲಿ ಕೆಲಸ ಮಾಡ್ತಾನೆ,ಆರಾಮಾಗಿ ಯಾವ್ ಯಾವನ್ ಜೊತೆಗೋ ಅಲೆದಾಡಿಕೊಂಡು ಇದ್ದಾನೆ,ಯಾರ್ಯಾರದೋ ಸಹವಾಸ" ಅಂತ ಹೇಳಿಬಿಡುತ್ತಿದ್ದರು.ಇಷ್ಟು ಸಾಲದು ಅನ್ನದೆ ಮದುವೆ ಆಗೂ ಅಂದರೆ ಈಗಲೇ ಬೇಡ ಅಂತ ಹೇಳುತ್ತಿದ್ದನು.ಇದನ್ನೆಲ್ಲಾ ಕಂಡ ಜನರಿಗೆ ಇವನ ಮೇಲೆ ಒಂದು ತೆರೆನಾದ ಗುಮಾನಿ ಎದ್ದು ಬಿಟ್ಟಿತ್ತು.ಬೇರೆಯವರೆಲ್ಲ ಊರಿಗೆ ವಾಪಸ್ ಬನದ್ರೂ,ಅವರೆಲ್ಲ ಮದುವೆ ಆದರೂ,ಇವನ ಮದುವೆ ಆಗದೆ ಊರಿಗೆ ಬರದೆ ಇರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿತ್ತು.ಅಲ್ಲದೆ ಇವನು ಮದುವೆ ಆಗ್ತೀನಿ ಅಂದರೂ ಹೆಣ್ಣು ಕೊಡಲು ಯಾರು ಮುಂದೆ ಬರುತ್ತಿರಲಿಲ್ಲ.ಆಗಂತ ಅವನೇನು ಸಾಚ ಆಗಿರಲ್ಲಿಲ.ಅವನಿಗೂ ಕೆಲವು ಚಟಗಲಿದ್ದವು.

ಕೆಲ ವರ್ಷದ ನಂತರ,ತನ್ನ ೪೦ರ ವಯಸ್ಸಿನ ಆಸುಪಾಸಿನಲ್ಲಿ ನಗರ ಜೀವನಕ್ಕೆ ವಿದಾಯ ಹೇಳಿ ಊರಲ್ಲಿ ತನ್ನ ಸ್ವಂತ ವ್ಯಾಪಾರ ಶುರು ಮಾಡಲು ಮರಳಿದ.ಇಷ್ಟು ವರ್ಷ ದುಡಿದ ದುಡ್ಡಿನಲ್ಲಿ ವ್ಯಾಪಾರ ಆರಂಭಿಸಲು ಯೋಚಿಸಿದ್ದನು.ಆಗ ತನ್ನ ತಾಯಿಯ ಒತ್ತಾಯಕ್ಕೆ ಮಣಿದು ಮದುವೆ ಆಗಲು ಒಪ್ಪಿಕೊಂಡ.ಹುಡುಗಿಯ ಹುಡುಕಾಟವೂ ಶುರು ಆಯಿತು.ಜೊತೆಗೆ ಊರಿನವರ ಬಾಯಿಗೆ ಹುಳು ಆಗಿ ಬಿಟ್ಟಿದ್ದ.ಯಾರ ಹತ್ತಿರಾನೋ ಕೆಲಸ ಮಾಡ್ತಿದ್ದನಲ್ಲ,ಅಲ್ಲಿ ಅವರ ಹತ್ತಿರ ಒಂದಿಷ್ಟು ದುಡ್ಡು ದೋಚಿಕೊಂಡು ಬಂದಿದ್ದಾನೆ,ಅಂತ ಬಾಯಿಂದ ಬಾಯಿಗೆ ಹಬ್ಬಿ ಬಿಟ್ಟಿತ್ತು.ಇವನಿಗೆ ಸುತ್ತ ಮುತ್ತ ಊರಿನವರು ಹೆಣ್ಣು ಕೊಡಲು ತಯ್ಯಾರಿರಲಿಲ್ಲ.ಕೊನೆಗೆ ಅದೇ ಊರಿನ ಮಾದಪ್ಪನ ಮಗಳನ್ನು ಕೇಳಿದ.ಮಾದಪ್ಪನಿಗೆ ಇದ್ದದ್ದು ಸ್ವಲ್ಪವೇ ಜಮೀನು,ಆಗಾಗಿ ಕೂಲಿಯನ್ನು ಮಾಡುತ್ತಾ ತನ್ನ ಪಿತ್ರಾರ್ಜಿತ ನಾಟಿ ಹೆಂಚಿನ ಹಳೆ ಮನೆಯಲ್ಲಿ ವಾಸ ಮಾಡುತ್ತಿದ್ದ.ತನ್ನ ಮಗನನ್ನು ನಗರಕ್ಕೆ ಕಳಿಸಿ ದುಡಿಸಬೇಕೆಂಬ ಹಂಬಲ ಅವನಲ್ಲೂ ಇತ್ತು,ಬೇರೆಯವರಂತೆ ಕೆಡದಿದ್ದರೆ ಸಾಕು,ಸ್ವಲ್ಪ ದುಡಿದು ಕೊಟ್ಟರೆ ಸಾಕು ಎಂಬ ಬಲವಾದ ಹಂಬಲ ಇತ್ತು.ಆದರೆ ಅವನು ಬೇರೆ ಹುಡುಗರ ಜೀವ ಶೈಲಿಗೂ ಮರುಳಾಗದೆ ಕಷ್ಟವೂ ಪಡದೆ ಬಹಳ ಸೋಮಾರಿಯಾಗಿ ಓದನ್ನೂ ಮುಂದುವರಿಸದೆ ಸುಖಾ ಸುಮ್ಮನೆ ಉರಿನಲ್ಲಿ ತಿರುಗಿ ಕೊಂಡು ಕಾಲ ಹರಣ ಮಾಡಿಕೊಂಡಿದ್ದನು.ಇವನ ಬೇಜವಾಬ್ದಾರಿಯನ್ನು ಮನಗಂಡ ಮಾದಪ್ಪ ಇವನು ತನ್ನ ತಂಗಿಯ ಮದುವೆಯನ್ನು ಮಾಡಲು ಜವಾಬ್ದಾರಿ ವಹಿಸುವುದಿಲ್ಲ ಎಂದೂ ತಿಳಿದಿದ್ದ.

ಆಗಲೇ ಕಾಲೆಜು ಮುಗಿಸಿದ್ದ ಅವನ ಮಗಳು ಯಮುನಾಳಿಗೆ ಮದುವೆ ಮಾಡಬೇಕೆಂದು ನಿಶ್ಚಯಿಸಿದ್ದ ವೇಳೆಗೆ,ಸದಾಶಿವ ಅವಳನ್ನು ಮದುವೆ ಆಗುವುದಾಗಿ ಕೇಳಿಕೊಂಡ.ಊರಿನ ಜನರೆಲ್ಲಾ ಸೇರಿ ಮಾದಪ್ಪನಿಗೆ "ಅಷ್ಟು ದೊಡ್ದವನಿಗೆ ಯಾಕ್ ಕೊಡ್ತಿಯ,ನಿನಗೆನ್ ಬುದ್ಧಿ ಗಿದ್ದಿ ಇದ್ಯಾ?" ಅಂತ ಹೇಳಿ "ಅಲ್ಲದೆ,ಇಷ್ಟು ವರ್ಷ ಪ್ಯಾಟೆಲಿ ಇದ್ದವನು,ಯಾರ್ಯಾರ್ ಸಹವಾಸವೋ,ಯಾರಿಗೋ ಮೋಸ ಮಾಡಿ ದುಡ್ಡು ತಗಂಡು ಬಂದು ಇಲ್ಲಿ ವ್ಯಾಪಾರ ಶುರು ಮಾಡಿದ್ದಾನೆ,ಅವರು ಯಾವಾಗ ಹುಡುಕಿಕೊಂಡು ಬರ್ತಾರೋ?" ಅಂತೆಲ್ಲ ಹೇಳಿ ಒಟ್ಟಿನಲ್ಲಿ ಹೆಣ್ಣು ಕೊಡುವುದು ಬೇಡ ಅಂತ ಪುಸಲಾಯಿಸಿದ್ದರು.ಆದರೆ ಆ ಸಮಯದಲ್ಲಿ ಮಾದಪ್ಪನ ಮಗ "ಸದಾಶಿವನಿಗೆ ಕೊಟ್ಟು ಮದುವೆ ಮಾಡಬೇಕು,ಇಲ್ಲದಿದ್ದರೆ ತಾನು ಸಾಯುವುದಾಗಿ " ಎಂದು ಹಠ ಹಿಡಿದ.ತನ್ನ ಬೇಜವಾಬ್ದಾರಿ ಮಗನ ಮೇಲೆ ಯಾವುದೇ ಮಮಕಾರ ಮಾದಪ್ಪನಿಗೆ ಇರಲಿಲ್ಲ.ಆದರೂ ಮಗನ ಸಾವು ಅಂತ ಹೆದರಿ ಮನಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡ.ಯಮುನಾ ಕೂಡ ಒಂದು ಕಡೆಯಿಂದ ಸದಾಶಿವನ ಶ್ರೀಮಂತಿಕೆಗೆ ಮರುಳಾಗಿ,ಇಷ್ಟು ವರ್ಷ ಬಡತನದಲ್ಲಿ ಕಷ್ಟ ಪಟ್ಟಿದ್ದು ಸಾಕು,ಇನ್ನು ಮುಂದೆ ಆದರೂ ಸುಖವಾಗಿರಬಗುದು ಎಂದು ತಿಳಿದು ಅವನನ್ನು ಮದುವೆ ಆಗಲು ಒಪ್ಪಿಕೊಂಡಳು.ಇಬ್ಬರ ವಯಸ್ಸಿನ ಅಂತರ ತಿಳಿದಿದ್ದ ಅವಳ ಒಳ ಮನಸ್ಸು ಒಪ್ಪಿರಲಿಲ್ಲ,ಆದರೂ ವಯಸ್ಸಿನ ವಿಷಯವನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸದೆ ಕೇವಲ ಸುಖ ಭೋಗದ ಕನಸು ಕಂಡಳು.ಅಲ್ಲದೆ ಮಾದಪ್ಪನಿಗೆ ಆದಷ್ಟು ಬೇಗ ಮಗಳ ಮದುವೆ ಮಾಡಬೇಕೆಂದು ಅವನ ಸುಪ್ತದಲ್ಲಿ ಅಡಕವಾಗಿತ್ತು.ಕೊನೆಗೊಂದು ದಿನ ಮದುವೆಯೂ ಆಯಿತು,ಅವಳು ಗಂಡನ ಮನೆಯನ್ನೂ ಸೇರಿದಳು.

ಸಂಸಾರ ನೌಕೆ ಸಾಗುತ್ತಿತ್ತು.ಒಂದು ವರ್ಷ ಕಳೆಯಿತು.ಅಷ್ಟರೊಳಗೆ ಸಣ್ಣ ಪುಟ್ಟ ಜಗಳಗಳು ವಿರಸಗಳು  ನಡೆದಿದ್ದವು.ಕೆಲವನ್ನು ಸದಾಶಿವನ  ತಾಯಿ ಹೇಗೋ ನಿಭಾಯಿಸಿ ಮತ್ತೆ ಒಂದು ಮಾಡುತ್ತಿದ್ದಳು.ಕೇವಲ ಸುಖ ಜೀವನದ ಆಸೆ ಹೊತ್ತಿದ್ದ  ಯಮುನಾಳಿಗೆ ತನಗಿಂತ ದುಪ್ಪಟ್ಟು ವಯಸ್ಸಿನ ಗಂಡನೊಡನೆ ಸಂಸಾರ ನಡೆಸುವುದು ಕಷ್ಟ ಆಗುತ್ತಿತ್ತು.ಹೆಣ್ಣು ಮೊದಲೇ ಚಂಚಲೆ.ಅಲ್ಲದೆ ಇಬ್ಬರ ಮನಸ್ಥಿತಿಯಲ್ಲಿ ಯಾವೊಂದು ಸಾಮ್ಯತೆ ಇರಲಿಲ್ಲ.ಇಷ್ಟು ಅಲ್ಲದೆ ಅವನು,ಇಷ್ಟು ವರ್ಷ ನಗರದಲ್ಲಿದ್ದು ಬಂದವನು,ಇವಳು ಹಳ್ಳಿಯಲ್ಲೇ ಕೂತು ಪಟ್ಟಣದ ಕಲ್ಪನೆ ಮಾಡಿಕೊಂಡವಳು,ಮತ್ತು ಅಂತ ಒಂದು ಜೀವನದ ಬಗ್ಗೆ ಆಸೆ ಇಟ್ಟು ಕೊಂಡವಳು.ಇದೆಲ್ಲದಕ್ಕಿಂತ ಅವಳಿಗೆ ಹೆಚ್ಹಾಗಿ ಕಾಡುತ್ತಿದ್ದದ್ದು ವಯಸ್ಸಿನ ಅಂತರ,ಅವಳ ಬಯಕೆಗೆ ಬೇಕಾದ ಪ್ರೀತಿ ಪ್ರೇಮವನ್ನು ಅವನಿಂದ ನೀಡಲು ಸಾಧ್ಯ ಆಗಲಿಲ್ಲ.. ಹೆಣ್ಣು ತನ್ನ ಗಂಡನಿಂದ ಕೇವಲ ಸುಖ ಭೋಗಗಳನ್ನು ನಿರೀಕ್ಷಿಸುವುದಿಲ್ಲ,ಬದಲಾಗಿ ಪ್ರೀತಿಯನ್ನೂ ಅಪೇಕ್ಷಿಸುತ್ತಾಳೆ.ಅಲ್ಲೇ ಅವನು ವಿಫಲನಾದದ್ದು.ಕೇವಲ ತನ್ನ ವ್ಯಾಪಾರವೇ ಅವನಿಗೆ ಹೆಚ್ಹಾಗಿ ಹೋಗಿತ್ತು.ಇಬ್ಬರೂ ಯಾವುದಾದರು ಕಾರ್ಯಕ್ರಮಕ್ಕೆ ಹೋದರೆ "ಎಂಥ ಸುಖ ದಂಪತಿ" "ಇಬ್ಬರೂ ಸೌಭಾಗ್ಯರು" ಎಂದು ಜನ ಮಾತಾಡುತ್ತಿದ್ದರು,ನಿಜಾಂಶ ಗೊತ್ತಿದ್ದು ಅವಳಿಗೆ ಮಾತ್ರ.ಆದರೆ ಸದಾಶಿವ ಮಾತ್ರ ತನ್ನ ಕೆಲಸದಲ್ಲಿ ನಿರತನಾಗಿದ್ದ.ಅವಳಿಗೆ ತಾನೊಬ್ಬಳು ಶ್ರೀಮಂತ ನೊಬ್ಬನಿಗೆ ತನ್ನನ್ನು ತಾನು ಮಾರಿಕೊಂದವಳು ಎಂದು  ಭಾಸವಾಗುತ್ತಿತ್ತು.ಇದೊಂದು ಪ್ರೀತಿ ಇಲ್ಲದ ಗೊಡ್ಡು ಸಂಸಾರ ಎಂದು ತಿಳಿದಿದ್ದಳು.

ಇಂಥ ಇಕ್ಕಟ್ಟಿನಲ್ಲಿ ತನಗೆ ಜೀವನವೇ ಬೇಡವೆಂದು,ತಾನು ಇವನನ್ನು ಮದುವೆ ಆಗಿ ತಪ್ಪು ಮಾಡಿದೆನೆಂದು  ವಿಷ ಕುಡಿದು ಸಾಯಲು ಪ್ರಯತ್ನಿಸಿದಳು.ಆದರೆ ಹೇಗೋ ಬದುಕುಳಿದಳು.ಮತ್ತೆ ಗಂಡನೊಂದಿಗೆ  ಹೊಂದಾಣಿಕೆಯ ಸಂಸಾರದ ಯಾವುದೇ ಭರವಸೆ ಅವಳಲ್ಲಿ ಇರಲಿಲ್ಲ.ಆದರೆ ಕಡೆ ಪಕ್ಷ ಬದುಕಬಹುದೆಂಬ ಆಶಾ ಭಾವನೆ ಇತ್ತು.ಮತ್ತೂ ಗಂಡನ ಪ್ರೀತಿಯಿಂದ ದೂರವಿದ್ದಳು.ಅವಳ ಮನಸ್ಸಿನಲ್ಲಿ ಕೆಲವು ರೀತಿಯ ಬದಲಾವಣೆಗಳು ಆಗ ತೊಡಗಿದವು .ವಯೋಸಹಜ ಪ್ರೀತಿಯ ಅಭಿಲಾಷೆ ಇದ್ದೆ ಇತ್ತು .ಅದೇ ಊರಿನ  ಗುಡಿಸಲಿನಲ್ಲಿ ವಾಸವಾಗಿದ್ದ ತನ್ನ ವಯಸ್ಸಿನ ಹುಡುಗನ ಜೊತೆ ಅವಳಿಗೆ ಪ್ರೀತಿ ಬೆಳೆದಿತ್ತು.ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.ಇವರ ಸಂಭಂದವನ್ನು ಗಮನಿಸಿದ ಮತ್ತು ತಿಳಿದ ಕೆಲವರು "ಎಂಥ ಮರ್ಯಾದಸ್ಥನಿಗೆ,ಎಂಥ ಹೆಂಡತಿ" ಎಂದು ಅವಳನ್ನು ದೂಷಿಸಿದರು.ಪಟ್ಟಣದಿಂದ ವಾಪಸ್ ಬಂದವನು,ಇಷ್ಟು ವರ್ಷ ಮದುವೆ ಆಗದಿರುವುದಕ್ಕೆ ಯಾವುದೋ ಕಾಯಿಲೆ ಸಮಸ್ಯೆಯೂ ಅಥವಾ ಇನ್ನೇನೂ ಕಾರಣ ಕೊಟ್ಟು,ಅವನನ್ನು ಹಿಂದಿನಿದ ಬೈಯುತ್ತಿದ್ದ ಜನ ಇಗ ಅವಳನ್ನೇ ಬೈಯುತ್ತಿದ್ದಾರೆ.ಕೊನೆಗೆ ಅವಳಿಗೆ ವೇಶ್ಯೆಯ ಪಟ್ಟವನ್ನೂ ಕಟ್ಟಿದರು.

ಶ್ರೀಮಂತನೊಬ್ಬನಿಗೆ ತನ್ನ ದೇಹ ಮಾರಿಕೊಂಡಂತೆ ನಡೆಸುತ್ತಿದ್ದ ತನ್ನ ಸಂಸಾರವನ್ನು ಹಾಲಿನಂತ ಸಂಸಾರ ಎಂದೂ,ತಾನು ಸುಖದಿಂದ ಪ್ರೇಮವನ್ನು ಅನುಭವಿಸಿದ ಈ ಪ್ರೀತಿಯ ಸಂಭಂದವನ್ನು  ಕೆಟ್ಟ ಕಳ್ಳ ಸಂಭಂದ ಎಂದ ಜನರ ಮೇಲೆ ಅಸಾಧ್ಯ ಕೋಪ ಬರುತ್ತಿತ್ತು,ಆದರೂ ಅಸಹಾಯಕಳಾಗಿದ್ದಳು.ಅವರ ಮಾತಿಗೆ ತಲೆ ಕೆಡಿಸಿಕೊಳ್ಳಲಿಲ್ಲ.

ಕೊನೆಗೆ ಆತ್ಮ ವಿಮರ್ಶೆ,ಆತ್ಮಾಭಿಮಾನಕ್ಕೊಳಗಾಗಿ ತನ್ನ ಗಂಡನೊಂದಿಗಿನ ಸಂಸಾರವನ್ನು,ಆತನೊಂದಿಗಿನ ಸಂಭಂದವನ್ನು
ತನ್ನ ಮನಸ್ಸಿನೊಳಗೆ ಪಣಕ್ಕಿಟ್ಟಲು..ಎಷ್ಟೇ ಕಷ್ಟ ಬಂದರೂ ನೆಮ್ಮದಿ ಇಲ್ಲದಿದ್ದರೂ ಪ್ರೀತಿಯ ಧಾರೆ ಇಲ್ಲದಿದ್ದರೂ ಗಂಡನೊಂದಿಗೆ ಇರುವುದಾಗಿ ನಿಶ್ಚಯಿಸಿದಳು.ಎರಡು ಆತ್ಮ ಹತ್ಯೆಯಲ್ಲಿ ವಿಫಲಳಾದವಳು ತಾನು ಎಂದು ಭಾವಿಸಿಕೊಂಡು ಮತ್ತೊಮ್ಮೆ ಗಂಡನೊಂದಿಗೆ ಪ್ರೀತಿ ಪ್ರೇಮದ ಆಶಾ ಭಾವನೆ ಇಲ್ಲದೆ ಸಂಸಾರ ಮಾಡ ತೊಡಗಿದಳು.
ಜನರ  ಬಾಯಲ್ಲಿ "ಅವಳು" "ಅವನ ಹೆಂಡತಿ"ಯಾಗಿಯೇ ಉಳಿದಳು.