ಸುಮಾರು ೧೫೦ ಮನೆಗಳಿರುವ ಗ್ರಾಮ ಕೆಂಚಾಪುರ..ಕೃಷಿಯಿಂದ ಹಿಡಿದು ಕಮ್ಮಾರ,ಚಮ್ಮಾರ,ಹಜಾಮ,ಕುಕ್ಕೆ ನೆಯ್ಯುವ ಕುಕ್ಕೆ ಕೊರ್ಮರು ,ವ್ಯಾಪಾರ,ಬೆಸ್ತರು,ಗಾಣಿಗ ವೃತ್ತಿ,ಹೀಗೆ ಹಲವಾರು ಕುಲ ಕಸುಬುಗಳನ್ನು ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಜನ.ಬಡವರಿಂದ ಹಿಡಿದು ಶ್ರಿಮಂತರಾದಿಯಾಗಿ ಜನರು,ಗುಡಿಸಲಿನಿಂದ ಹಿಡಿದು ಹೆಂಚಿನ ಮನೆಯಾದಿಯಾಗಿ ತಾರಸಿ ಮನೆಗಳೂ ಅಲ್ಲಲ್ಲಿ ಕಾಣಸಿಗುತ್ತಿದ್ದವು.ಇಂಥ ಒಂದು ಊರಲ್ಲಿ ಕೆಲವರು ಕುಟುಂಬ ಸಮೇತರಾಗಿ ಊರು ಬಿಟ್ಟು ಪಟ್ಟಣಗಳಿಗೆ ವಲಸೆ ಹೋಗಿ ಜೀವನ ಮಾಡುತ್ತಿದ್ದರು.ಇನ್ನು ಕೆಲವು ಯುವಕರು ಕುಲ ಕಸುಬು ಮಾಡಲು ಹಿಂಜರಿಕೆಯೋ ಅಥವಾ ತಮ್ಮ ಪೂರ್ವಜರ ಕೆಲಸವು ಆರಾಮದಾಯಕದಲ್ಲದು ಎಂದೋ ಅಥವಾ ಇದು ಅಷ್ಟೂ ಲಾಭದಾಯಕವಲ್ಲದು ಎಂದೋ ಅಥವಾ ನಗರದ ಐಶಾರಾಮಿ ಜೀವನಕ್ಕೆ ಆಕರ್ಶಿತರಾಗಿಯೋ ಅಥವಾ ಇನ್ನ್ಯಾವುದು ಕಾರಣಕ್ಕೋ ಉರೋ ಬಿಟ್ಟು ನಗರ ಸೇರಿ ಕೆಲಸ ಮಾಡತೊಡಗಿದರು.ಕೆಲವರು ತಮ್ಮ ಕುಲ ಕಸುಬನ್ನು ನಗರದಲ್ಲಿ ಕೂಡ ಮಾಡ ತೊಡಗಿದರು.
ಹೀಗೆ ಊರು ಬಿಟ್ಟು ಪಟ್ಟಣ ಸೇರಿದ ಯುವಕರನ್ನು ಕಂಡರೆ ಊರಿನ ಕೆಲವರಿಗೆ ಒಂದು ರೀತಿಯ ಅಸಡ್ಡೆ.ನಗರ ಸೇರಿದ ಹುಡುಗರು ಕೆಟ್ಟ ಕೆಟ್ಟ ಅಭ್ಯಾಸಗಳಿಗೆ ದಾಸರಾಗುತ್ತಾರೆ ,ಕುಡಿಯೋದು,ಜೂಜಾಡುವು ದು,ಇನ್ನೂ ಕೆಲವರಿಗೆ ಹುಡುಗಿಯರ ಚಟ ಬೇರೆ ಇರುತ್ತೆ ಅಂತ ಅವರ ತರ್ಕ.ಕೆಲವು ಹುಡುಗರು ಕೆಲಸ ಹುಡುಕಿಕೊಂಡು ಹೋಗಿ ಕೆಲ ಸಮಯದ ನಂತರ ಊರಿಗೆ ಯಾವುದೋ ಹಬ್ಬ ಹರಿದಿನಕ್ಕೆ ಬಂದಾಗ ಅವರ ವೇಷ ಭೂಷಣಗಳಲ್ಲಾಗಲಿ ,ಅವರ ನಡವಳಿಕೆಗಳಲ್ಲಾಗಲಿ ಭಾರೀ ಬದಲಾವಣೆ ಆಗುತ್ತಿತ್ತು.ಕೆಲವರಂತೂ ಊರಿನ ಮುಂದೆ ಇರುವ ಪೆಟ್ಟಿಗೆ ಅಂಗಡಿಯಲ್ಲಿ ಸಿಗರೇಟ್ ಕೊಂಡು ಹಿಂದೂ ಮುಂದು ನೋಡದೆ ಯಾರಿಗೂ ಹೆದರದೆ ರಾಜಾರೋಷವಾಗಿ ಸೇದುತ್ತಾ ದಾರಿಯಲ್ಲಿ ನಡೆದು ಹೋಗುತ್ತಿದ್ದರು ಎಂಬುದೇ ಇದಕ್ಕೆ ಕಾರಣ.ಇದನ್ನು ಕಂಡ ಕೆಲವರು ಪಟ್ಟಣ ಸೇರಿ ಹಾಳಾಗಿ ಹೋದ ಮುಂಡೆದು,ಹಿರಿಯರು ಕಿರಿಯರು ಅನ್ನೋ ಭಯ ಭಕ್ತಿ ಇಲ್ಲ ಇವಕ್ಕೆ ಅಂತ ಹಿಂದಿನಿದ ಬೈದು ಕೊಳ್ಳುತ್ತಿದ್ದರು.
ಊರು ಬಿಟ್ಟು ಕೆಲಸ ಹರಸಿ ನಗರ ಸೇರಿದ ಎಷ್ಟೋ ಹುಡುಗರು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳದೆ ಊರಿಗೆ ವಾಪಸ್ ಬಂದರು.ಅಲ್ಲದೆ ಇನ್ನಷ್ಟು ಯುವಕರು ಈಗಾಗಲೇ ಪಟ್ಟಣ ಸೇರಿ ಅಲ್ಲಿ ಹಳೆ ಹುಲಿಗಳಾಗಿರುವ ತಮ್ಮ ಸ್ನೇಹಿತರ ಅಪೇಕ್ಷೆಯ ಮೇರೆಗೆ ಮತ್ತು ಅವರಲ್ಲಾದ ಶೋಕಿಯ ಬದಲಾವಣೆ ಕಂಡು ತಾವು ಅವರಂತಾಗಬೇಕೆಂದು ಹಳ್ಳಿ ಬಿಟ್ಟು ನಗರ ಸೇರಿದರು.ಇವರೆಲ್ಲ ಊರಿನವರ ಕೆಂಗಣ್ಣಿಗೆ ಕಾರಣರಾಗಿದ್ದರೂ,ಇವರ್ಯಾರು ಯಾರಿಗೂ ಕ್ಯಾರೆ ಅನ್ನುತ್ತಿರಲಿಲ್ಲ.ಇದರಲ್ಲಿ ಕೆಲವರು ಮತ್ತೆ ಊರಿಗೆ ಬರುವ ಯೋಜನೆ ಹಾಕಿಕೊಂಡಿದ್ದರೂ,ಇನ್ನೂ ಕೆಲವರು ತಮಗೆ ಬೇಕಾದ ಹುಡುಗಿಯರನ್ನು ನೋಡಿಕೊಂಡು ಮದುವೆಯಾದರು.ಇದರಲ್ಲಿ ಕೆಲವು ಹುಡುಗರು ದುಡಿದ ದುಡ್ಡನ್ನು ಬಿಟ್ಟಿ ಶೋಕಿ ಮಾಡುತ್ತಾ ಬೇಕಾಬಿಟ್ಟಿ ಖರ್ಚು ಮಾಡಿಕೊಂಡು ಮನೆಗೆ ನಯಾ ಪೈಸೆ ಕೊಡದೆ ಇದ್ದು ಬಿಡುತ್ತಿದ್ದರು,ಇನ್ನು ಕೆಲವರು ಭುದ್ದಿವಂತರು ಮನೆಗೊಂದಿಷ್ಟು ದುಡ್ಡಿ ಕಳಿಸುತ್ತಾ ತಾವು ಒಂದಿಷ್ಟನ್ನು ಉಳಿಸಿಕೊಳ್ಳುತ್ತಿದ್ದರು.
ಇಂಥ ಒಂದು ಯುವಕರ ಪಡೆಯಲ್ಲಿ ಸದಾಶಿವ ಎಂಬ ಹುಡುಗನೂ ಇದ್ದ.ಬೇರೆಯವರಿಗಿಂತ ಸ್ವಲ್ಪ ಬುದ್ಧಿವಂತನೂ ಆಗಿದ್ದ.ಸ್ವಲ್ಪ ಛಲವಾದಿ,ಏನಾದರೂ ಸಾಧಿಸಬೇಕೆಂಬ ಆಸೆ.ಬಡತನದಿಂದ ಅನುಭವಿಸಿದ ಯಾತನೆ ಅವನನ್ನು ಹಾಗೆ ಮಾಡಿತ್ತು. ಇತರೆ ಹುಡುಗರೆಲ್ಲ ಕೆಲವೇ ವರ್ಷಗಳಲ್ಲಿ ವಾಪಸ್ ಹಳ್ಳಿಗೆ ಮರಳಿದರೆ,ಇವನು ಸುಮಾರು ವರ್ಷಗಳ ತನಕ ನಗರದಲ್ಲೇ ಕೆಲಸ ಮಾಡಿಕೊಂಡಿದ್ದ,ಅಲ್ಲದೆ ವಾಪಸ್ ಮರಳಿದ ಹುಡುಗರಲ್ಲಿ ಯಾರನ್ನಾದರೂ ಯಾಕೆ ಕೆಲಸ ಬಿಟ್ಟು ಬಂದ್ರಿ,ಅವನು ನೋಡಿದ್ರೆ ಇನ್ನೂ ಚೆನ್ನಾಗಿ ದುಡಿತಿದ್ದಾನೆ ಅಂದ್ರೆ ತಮ್ಮ ತಮ್ಮ ತೇಪೆಗಳನ್ನು ಮುಚ್ಚಿಕೊಳ್ಳುವುದಕ್ಕೋಸ್ಕರ "ಅಯ್ಯೋ,ಅವನೆಲ್ಲಿ ಕೆಲಸ ಮಾಡ್ತಾನೆ,ಆರಾಮಾಗಿ ಯಾವ್ ಯಾವನ್ ಜೊತೆಗೋ ಅಲೆದಾಡಿಕೊಂಡು ಇದ್ದಾನೆ,ಯಾರ್ಯಾರದೋ ಸಹವಾಸ" ಅಂತ ಹೇಳಿಬಿಡುತ್ತಿದ್ದರು.ಇಷ್ಟು ಸಾಲದು ಅನ್ನದೆ ಮದುವೆ ಆಗೂ ಅಂದರೆ ಈಗಲೇ ಬೇಡ ಅಂತ ಹೇಳುತ್ತಿದ್ದನು.ಇದನ್ನೆಲ್ಲಾ ಕಂಡ ಜನರಿಗೆ ಇವನ ಮೇಲೆ ಒಂದು ತೆರೆನಾದ ಗುಮಾನಿ ಎದ್ದು ಬಿಟ್ಟಿತ್ತು.ಬೇರೆಯವರೆಲ್ಲ ಊರಿಗೆ ವಾಪಸ್ ಬನದ್ರೂ,ಅವರೆಲ್ಲ ಮದುವೆ ಆದರೂ,ಇವನ ಮದುವೆ ಆಗದೆ ಊರಿಗೆ ಬರದೆ ಇರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿತ್ತು.ಅಲ್ಲದೆ ಇವನು ಮದುವೆ ಆಗ್ತೀನಿ ಅಂದರೂ ಹೆಣ್ಣು ಕೊಡಲು ಯಾರು ಮುಂದೆ ಬರುತ್ತಿರಲಿಲ್ಲ.ಆಗಂತ ಅವನೇನು ಸಾಚ ಆಗಿರಲ್ಲಿಲ.ಅವನಿಗೂ ಕೆಲವು ಚಟಗಲಿದ್ದವು.
ಕೆಲ ವರ್ಷದ ನಂತರ,ತನ್ನ ೪೦ರ ವಯಸ್ಸಿನ ಆಸುಪಾಸಿನಲ್ಲಿ ನಗರ ಜೀವನಕ್ಕೆ ವಿದಾಯ ಹೇಳಿ ಊರಲ್ಲಿ ತನ್ನ ಸ್ವಂತ ವ್ಯಾಪಾರ ಶುರು ಮಾಡಲು ಮರಳಿದ.ಇಷ್ಟು ವರ್ಷ ದುಡಿದ ದುಡ್ಡಿನಲ್ಲಿ ವ್ಯಾಪಾರ ಆರಂಭಿಸಲು ಯೋಚಿಸಿದ್ದನು.ಆಗ ತನ್ನ ತಾಯಿಯ ಒತ್ತಾಯಕ್ಕೆ ಮಣಿದು ಮದುವೆ ಆಗಲು ಒಪ್ಪಿಕೊಂಡ.ಹುಡುಗಿಯ ಹುಡುಕಾಟವೂ ಶುರು ಆಯಿತು.ಜೊತೆಗೆ ಊರಿನವರ ಬಾಯಿಗೆ ಹುಳು ಆಗಿ ಬಿಟ್ಟಿದ್ದ.ಯಾರ ಹತ್ತಿರಾನೋ ಕೆಲಸ ಮಾಡ್ತಿದ್ದನಲ್ಲ,ಅಲ್ಲಿ ಅವರ ಹತ್ತಿರ ಒಂದಿಷ್ಟು ದುಡ್ಡು ದೋಚಿಕೊಂಡು ಬಂದಿದ್ದಾನೆ,ಅಂತ ಬಾಯಿಂದ ಬಾಯಿಗೆ ಹಬ್ಬಿ ಬಿಟ್ಟಿತ್ತು.ಇವನಿಗೆ ಸುತ್ತ ಮುತ್ತ ಊರಿನವರು ಹೆಣ್ಣು ಕೊಡಲು ತಯ್ಯಾರಿರಲಿಲ್ಲ.ಕೊನೆಗೆ ಅದೇ ಊರಿನ ಮಾದಪ್ಪನ ಮಗಳನ್ನು ಕೇಳಿದ.ಮಾದಪ್ಪನಿಗೆ ಇದ್ದದ್ದು ಸ್ವಲ್ಪವೇ ಜಮೀನು,ಆಗಾಗಿ ಕೂಲಿಯನ್ನು ಮಾಡುತ್ತಾ ತನ್ನ ಪಿತ್ರಾರ್ಜಿತ ನಾಟಿ ಹೆಂಚಿನ ಹಳೆ ಮನೆಯಲ್ಲಿ ವಾಸ ಮಾಡುತ್ತಿದ್ದ.ತನ್ನ ಮಗನನ್ನು ನಗರಕ್ಕೆ ಕಳಿಸಿ ದುಡಿಸಬೇಕೆಂಬ ಹಂಬಲ ಅವನಲ್ಲೂ ಇತ್ತು,ಬೇರೆಯವರಂತೆ ಕೆಡದಿದ್ದರೆ ಸಾಕು,ಸ್ವಲ್ಪ ದುಡಿದು ಕೊಟ್ಟರೆ ಸಾಕು ಎಂಬ ಬಲವಾದ ಹಂಬಲ ಇತ್ತು.ಆದರೆ ಅವನು ಬೇರೆ ಹುಡುಗರ ಜೀವ ಶೈಲಿಗೂ ಮರುಳಾಗದೆ ಕಷ್ಟವೂ ಪಡದೆ ಬಹಳ ಸೋಮಾರಿಯಾಗಿ ಓದನ್ನೂ ಮುಂದುವರಿಸದೆ ಸುಖಾ ಸುಮ್ಮನೆ ಉರಿನಲ್ಲಿ ತಿರುಗಿ ಕೊಂಡು ಕಾಲ ಹರಣ ಮಾಡಿಕೊಂಡಿದ್ದನು.ಇವನ ಬೇಜವಾಬ್ದಾರಿಯನ್ನು ಮನಗಂಡ ಮಾದಪ್ಪ ಇವನು ತನ್ನ ತಂಗಿಯ ಮದುವೆಯನ್ನು ಮಾಡಲು ಜವಾಬ್ದಾರಿ ವಹಿಸುವುದಿಲ್ಲ ಎಂದೂ ತಿಳಿದಿದ್ದ.
ಆಗಲೇ ಕಾಲೆಜು ಮುಗಿಸಿದ್ದ ಅವನ ಮಗಳು ಯಮುನಾಳಿಗೆ ಮದುವೆ ಮಾಡಬೇಕೆಂದು ನಿಶ್ಚಯಿಸಿದ್ದ ವೇಳೆಗೆ,ಸದಾಶಿವ ಅವಳನ್ನು ಮದುವೆ ಆಗುವುದಾಗಿ ಕೇಳಿಕೊಂಡ.ಊರಿನ ಜನರೆಲ್ಲಾ ಸೇರಿ ಮಾದಪ್ಪನಿಗೆ "ಅಷ್ಟು ದೊಡ್ದವನಿಗೆ ಯಾಕ್ ಕೊಡ್ತಿಯ,ನಿನಗೆನ್ ಬುದ್ಧಿ ಗಿದ್ದಿ ಇದ್ಯಾ?" ಅಂತ ಹೇಳಿ "ಅಲ್ಲದೆ,ಇಷ್ಟು ವರ್ಷ ಪ್ಯಾಟೆಲಿ ಇದ್ದವನು,ಯಾರ್ಯಾರ್ ಸಹವಾಸವೋ,ಯಾರಿಗೋ ಮೋಸ ಮಾಡಿ ದುಡ್ಡು ತಗಂಡು ಬಂದು ಇಲ್ಲಿ ವ್ಯಾಪಾರ ಶುರು ಮಾಡಿದ್ದಾನೆ,ಅವರು ಯಾವಾಗ ಹುಡುಕಿಕೊಂಡು ಬರ್ತಾರೋ?" ಅಂತೆಲ್ಲ ಹೇಳಿ ಒಟ್ಟಿನಲ್ಲಿ ಹೆಣ್ಣು ಕೊಡುವುದು ಬೇಡ ಅಂತ ಪುಸಲಾಯಿಸಿದ್ದರು.ಆದರೆ ಆ ಸಮಯದಲ್ಲಿ ಮಾದಪ್ಪನ ಮಗ "ಸದಾಶಿವನಿಗೆ ಕೊಟ್ಟು ಮದುವೆ ಮಾಡಬೇಕು,ಇಲ್ಲದಿದ್ದರೆ ತಾನು ಸಾಯುವುದಾಗಿ " ಎಂದು ಹಠ ಹಿಡಿದ.ತನ್ನ ಬೇಜವಾಬ್ದಾರಿ ಮಗನ ಮೇಲೆ ಯಾವುದೇ ಮಮಕಾರ ಮಾದಪ್ಪನಿಗೆ ಇರಲಿಲ್ಲ.ಆದರೂ ಮಗನ ಸಾವು ಅಂತ ಹೆದರಿ ಮನಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡ.ಯಮುನಾ ಕೂಡ ಒಂದು ಕಡೆಯಿಂದ ಸದಾಶಿವನ ಶ್ರೀಮಂತಿಕೆಗೆ ಮರುಳಾಗಿ,ಇಷ್ಟು ವರ್ಷ ಬಡತನದಲ್ಲಿ ಕಷ್ಟ ಪಟ್ಟಿದ್ದು ಸಾಕು,ಇನ್ನು ಮುಂದೆ ಆದರೂ ಸುಖವಾಗಿರಬಗುದು ಎಂದು ತಿಳಿದು ಅವನನ್ನು ಮದುವೆ ಆಗಲು ಒಪ್ಪಿಕೊಂಡಳು.ಇಬ್ಬರ ವಯಸ್ಸಿನ ಅಂತರ ತಿಳಿದಿದ್ದ ಅವಳ ಒಳ ಮನಸ್ಸು ಒಪ್ಪಿರಲಿಲ್ಲ,ಆದರೂ ವಯಸ್ಸಿನ ವಿಷಯವನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸದೆ ಕೇವಲ ಸುಖ ಭೋಗದ ಕನಸು ಕಂಡಳು.ಅಲ್ಲದೆ ಮಾದಪ್ಪನಿಗೆ ಆದಷ್ಟು ಬೇಗ ಮಗಳ ಮದುವೆ ಮಾಡಬೇಕೆಂದು ಅವನ ಸುಪ್ತದಲ್ಲಿ ಅಡಕವಾಗಿತ್ತು.ಕೊನೆಗೊಂದು ದಿನ ಮದುವೆಯೂ ಆಯಿತು,ಅವಳು ಗಂಡನ ಮನೆಯನ್ನೂ ಸೇರಿದಳು.
ಸಂಸಾರ ನೌಕೆ ಸಾಗುತ್ತಿತ್ತು.ಒಂದು ವರ್ಷ ಕಳೆಯಿತು.ಅಷ್ಟರೊಳಗೆ ಸಣ್ಣ ಪುಟ್ಟ ಜಗಳಗಳು ವಿರಸಗಳು ನಡೆದಿದ್ದವು.ಕೆಲವನ್ನು ಸದಾಶಿವನ ತಾಯಿ ಹೇಗೋ ನಿಭಾಯಿಸಿ ಮತ್ತೆ ಒಂದು ಮಾಡುತ್ತಿದ್ದಳು.ಕೇವಲ ಸುಖ ಜೀವನದ ಆಸೆ ಹೊತ್ತಿದ್ದ ಯಮುನಾಳಿಗೆ ತನಗಿಂತ ದುಪ್ಪಟ್ಟು ವಯಸ್ಸಿನ ಗಂಡನೊಡನೆ ಸಂಸಾರ ನಡೆಸುವುದು ಕಷ್ಟ ಆಗುತ್ತಿತ್ತು.ಹೆಣ್ಣು ಮೊದಲೇ ಚಂಚಲೆ.ಅಲ್ಲದೆ ಇಬ್ಬರ ಮನಸ್ಥಿತಿಯಲ್ಲಿ ಯಾವೊಂದು ಸಾಮ್ಯತೆ ಇರಲಿಲ್ಲ.ಇಷ್ಟು ಅಲ್ಲದೆ ಅವನು,ಇಷ್ಟು ವರ್ಷ ನಗರದಲ್ಲಿದ್ದು ಬಂದವನು,ಇವಳು ಹಳ್ಳಿಯಲ್ಲೇ ಕೂತು ಪಟ್ಟಣದ ಕಲ್ಪನೆ ಮಾಡಿಕೊಂಡವಳು,ಮತ್ತು ಅಂತ ಒಂದು ಜೀವನದ ಬಗ್ಗೆ ಆಸೆ ಇಟ್ಟು ಕೊಂಡವಳು.ಇದೆಲ್ಲದಕ್ಕಿಂತ ಅವಳಿಗೆ ಹೆಚ್ಹಾಗಿ ಕಾಡುತ್ತಿದ್ದದ್ದು ವಯಸ್ಸಿನ ಅಂತರ,ಅವಳ ಬಯಕೆಗೆ ಬೇಕಾದ ಪ್ರೀತಿ ಪ್ರೇಮವನ್ನು ಅವನಿಂದ ನೀಡಲು ಸಾಧ್ಯ ಆಗಲಿಲ್ಲ.. ಹೆಣ್ಣು ತನ್ನ ಗಂಡನಿಂದ ಕೇವಲ ಸುಖ ಭೋಗಗಳನ್ನು ನಿರೀಕ್ಷಿಸುವುದಿಲ್ಲ,ಬದಲಾಗಿ ಪ್ರೀತಿಯನ್ನೂ ಅಪೇಕ್ಷಿಸುತ್ತಾಳೆ.ಅಲ್ಲೇ ಅವನು ವಿಫಲನಾದದ್ದು.ಕೇವಲ ತನ್ನ ವ್ಯಾಪಾರವೇ ಅವನಿಗೆ ಹೆಚ್ಹಾಗಿ ಹೋಗಿತ್ತು.ಇಬ್ಬರೂ ಯಾವುದಾದರು ಕಾರ್ಯಕ್ರಮಕ್ಕೆ ಹೋದರೆ "ಎಂಥ ಸುಖ ದಂಪತಿ" "ಇಬ್ಬರೂ ಸೌಭಾಗ್ಯರು" ಎಂದು ಜನ ಮಾತಾಡುತ್ತಿದ್ದರು,ನಿಜಾಂಶ ಗೊತ್ತಿದ್ದು ಅವಳಿಗೆ ಮಾತ್ರ.ಆದರೆ ಸದಾಶಿವ ಮಾತ್ರ ತನ್ನ ಕೆಲಸದಲ್ಲಿ ನಿರತನಾಗಿದ್ದ.ಅವಳಿಗೆ ತಾನೊಬ್ಬಳು ಶ್ರೀಮಂತ ನೊಬ್ಬನಿಗೆ ತನ್ನನ್ನು ತಾನು ಮಾರಿಕೊಂದವಳು ಎಂದು ಭಾಸವಾಗುತ್ತಿತ್ತು.ಇದೊಂದು ಪ್ರೀತಿ ಇಲ್ಲದ ಗೊಡ್ಡು ಸಂಸಾರ ಎಂದು ತಿಳಿದಿದ್ದಳು.
ಇಂಥ ಇಕ್ಕಟ್ಟಿನಲ್ಲಿ ತನಗೆ ಜೀವನವೇ ಬೇಡವೆಂದು,ತಾನು ಇವನನ್ನು ಮದುವೆ ಆಗಿ ತಪ್ಪು ಮಾಡಿದೆನೆಂದು ವಿಷ ಕುಡಿದು ಸಾಯಲು ಪ್ರಯತ್ನಿಸಿದಳು.ಆದರೆ ಹೇಗೋ ಬದುಕುಳಿದಳು.ಮತ್ತೆ ಗಂಡನೊಂದಿಗೆ ಹೊಂದಾಣಿಕೆಯ ಸಂಸಾರದ ಯಾವುದೇ ಭರವಸೆ ಅವಳಲ್ಲಿ ಇರಲಿಲ್ಲ.ಆದರೆ ಕಡೆ ಪಕ್ಷ ಬದುಕಬಹುದೆಂಬ ಆಶಾ ಭಾವನೆ ಇತ್ತು.ಮತ್ತೂ ಗಂಡನ ಪ್ರೀತಿಯಿಂದ ದೂರವಿದ್ದಳು.ಅವಳ ಮನಸ್ಸಿನಲ್ಲಿ ಕೆಲವು ರೀತಿಯ ಬದಲಾವಣೆಗಳು ಆಗ ತೊಡಗಿದವು .ವಯೋಸಹಜ ಪ್ರೀತಿಯ ಅಭಿಲಾಷೆ ಇದ್ದೆ ಇತ್ತು .ಅದೇ ಊರಿನ ಗುಡಿಸಲಿನಲ್ಲಿ ವಾಸವಾಗಿದ್ದ ತನ್ನ ವಯಸ್ಸಿನ ಹುಡುಗನ ಜೊತೆ ಅವಳಿಗೆ ಪ್ರೀತಿ ಬೆಳೆದಿತ್ತು.ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.ಇವರ ಸಂಭಂದವನ್ನು ಗಮನಿಸಿದ ಮತ್ತು ತಿಳಿದ ಕೆಲವರು "ಎಂಥ ಮರ್ಯಾದಸ್ಥನಿಗೆ,ಎಂಥ ಹೆಂಡತಿ" ಎಂದು ಅವಳನ್ನು ದೂಷಿಸಿದರು.ಪಟ್ಟಣದಿಂದ ವಾಪಸ್ ಬಂದವನು,ಇಷ್ಟು ವರ್ಷ ಮದುವೆ ಆಗದಿರುವುದಕ್ಕೆ ಯಾವುದೋ ಕಾಯಿಲೆ ಸಮಸ್ಯೆಯೂ ಅಥವಾ ಇನ್ನೇನೂ ಕಾರಣ ಕೊಟ್ಟು,ಅವನನ್ನು ಹಿಂದಿನಿದ ಬೈಯುತ್ತಿದ್ದ ಜನ ಇಗ ಅವಳನ್ನೇ ಬೈಯುತ್ತಿದ್ದಾರೆ.ಕೊನೆಗೆ ಅವಳಿಗೆ ವೇಶ್ಯೆಯ ಪಟ್ಟವನ್ನೂ ಕಟ್ಟಿದರು.
ಶ್ರೀಮಂತನೊಬ್ಬನಿಗೆ ತನ್ನ ದೇಹ ಮಾರಿಕೊಂಡಂತೆ ನಡೆಸುತ್ತಿದ್ದ ತನ್ನ ಸಂಸಾರವನ್ನು ಹಾಲಿನಂತ ಸಂಸಾರ ಎಂದೂ,ತಾನು ಸುಖದಿಂದ ಪ್ರೇಮವನ್ನು ಅನುಭವಿಸಿದ ಈ ಪ್ರೀತಿಯ ಸಂಭಂದವನ್ನು ಕೆಟ್ಟ ಕಳ್ಳ ಸಂಭಂದ ಎಂದ ಜನರ ಮೇಲೆ ಅಸಾಧ್ಯ ಕೋಪ ಬರುತ್ತಿತ್ತು,ಆದರೂ ಅಸಹಾಯಕಳಾಗಿದ್ದಳು.ಅವರ ಮಾತಿಗೆ ತಲೆ ಕೆಡಿಸಿಕೊಳ್ಳಲಿಲ್ಲ.
ಕೊನೆಗೆ ಆತ್ಮ ವಿಮರ್ಶೆ,ಆತ್ಮಾಭಿಮಾನಕ್ಕೊಳಗಾಗಿ ತನ್ನ ಗಂಡನೊಂದಿಗಿನ ಸಂಸಾರವನ್ನು,ಆತನೊಂದಿಗಿನ ಸಂಭಂದವನ್ನು
ತನ್ನ ಮನಸ್ಸಿನೊಳಗೆ ಪಣಕ್ಕಿಟ್ಟಲು..ಎಷ್ಟೇ ಕಷ್ಟ ಬಂದರೂ ನೆಮ್ಮದಿ ಇಲ್ಲದಿದ್ದರೂ ಪ್ರೀತಿಯ ಧಾರೆ ಇಲ್ಲದಿದ್ದರೂ ಗಂಡನೊಂದಿಗೆ ಇರುವುದಾಗಿ ನಿಶ್ಚಯಿಸಿದಳು.ಎರಡು ಆತ್ಮ ಹತ್ಯೆಯಲ್ಲಿ ವಿಫಲಳಾದವಳು ತಾನು ಎಂದು ಭಾವಿಸಿಕೊಂಡು ಮತ್ತೊಮ್ಮೆ ಗಂಡನೊಂದಿಗೆ ಪ್ರೀತಿ ಪ್ರೇಮದ ಆಶಾ ಭಾವನೆ ಇಲ್ಲದೆ ಸಂಸಾರ ಮಾಡ ತೊಡಗಿದಳು.
ತನ್ನ ಮನಸ್ಸಿನೊಳಗೆ ಪಣಕ್ಕಿಟ್ಟಲು..ಎಷ್ಟೇ ಕಷ್ಟ ಬಂದರೂ ನೆಮ್ಮದಿ ಇಲ್ಲದಿದ್ದರೂ ಪ್ರೀತಿಯ ಧಾರೆ ಇಲ್ಲದಿದ್ದರೂ ಗಂಡನೊಂದಿಗೆ ಇರುವುದಾಗಿ ನಿಶ್ಚಯಿಸಿದಳು.ಎರಡು ಆತ್ಮ ಹತ್ಯೆಯಲ್ಲಿ ವಿಫಲಳಾದವಳು ತಾನು ಎಂದು ಭಾವಿಸಿಕೊಂಡು ಮತ್ತೊಮ್ಮೆ ಗಂಡನೊಂದಿಗೆ ಪ್ರೀತಿ ಪ್ರೇಮದ ಆಶಾ ಭಾವನೆ ಇಲ್ಲದೆ ಸಂಸಾರ ಮಾಡ ತೊಡಗಿದಳು.
ಜನರ ಬಾಯಲ್ಲಿ "ಅವಳು" "ಅವನ ಹೆಂಡತಿ"ಯಾಗಿಯೇ ಉಳಿದಳು.