Friday, August 15, 2014

ಹುತಾತ್ಮರ ಸ್ಮಾರಕ

ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾವಿರಾರು ಹೋರಾಟಗಾರು ಭಾಗಿಯಾಗಿದ್ದರು , ಭಗತ್ ಸಿಂಗ್,ವೀರ್ ಸಾವರ್ಕರ್ ಅವರಂಥ ಕ್ರಾಂತಿಕಾರಿಗಳಿಂದ  ಉತ್ತೇಜಿತರಾದ ಎಷ್ಟೋ ವಿದ್ಯಾರ್ಥಿಗಳು ತಮ್ಮ ವ್ಯಾಸಂಗವನ್ನು ಅರ್ಧಕ್ಕೆ ಬಿಟ್ಟು ಚಳವಳಿಗಳಲ್ಲಿ ಭಾಗಿಯಾಗುತ್ತಾರೆ. ನಮ್ಮ ನಾಡಿನ ಖ್ಯಾತ ಶಿಕ್ಷಣ ತಜ್ಞರಾದ ಡಾ।। ಹೆಚ್.ನರಸಿಂಹಯ್ಯನವರು ಕೂಡ ತಮ್ಮ ವಿದ್ಯಾರ್ಥಿ ಜೀವನದ ಸಮಯದಲ್ಲಿಯೇ ಗಾಂಧೀಜಿ ಅವರಿಂದ ಪ್ರೇರಿತರಾಗಿ ಕ್ವಿಟ್ ಇಂಡಿಯಾ ಚಳವಳಿ ಮತ್ತು ಹಲವಾರು ಚಳವಳಿಗಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದ್ದರು. ಅದೇ ರೀತಿ ಎಲೆ ಮರೆ ಕಾಯಿಯಂತೆ ಬೆಂಗಳೂರಿನ ಇನ್ನೂ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರ ನೆನಪಿನಲ್ಲಿ ಹಲವಾರು ಸ್ಮಾರಕಗಳಿವೆ. ಅದೇ ರೀತಿಯಲ್ಲಿ ಬೆಂಗಳೂರಿನ ಹೃದಯ ಭಾಗದಲ್ಲಿ ಒಂದು ಸ್ಮಾರಕ ಇದೆ . ಈ ಸ್ಮಾರಕ ಇರುವುದು ಮೈಸೂರ್ ಬ್ಯಾಂಕ್ ಸರ್ಕಲ್ ನಲ್ಲಿ. ಈ ಸ್ಮಾರಕವು , ೧೯೪೨ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾಗಿ ಬ್ರಿಟೀಷರ ವಿರುದ್ಧ ಹೋರಾಡಿ ಅವರ ಗುಂಡಿಗೆ ಬಲಿಯಾದ ೪ ವಿಧ್ಯಾರ್ಥಿಗಳ ನೆನಪಿನಲ್ಲಿ ನಿರ್ಮಾಣವಾದದ್ದು.  
ಶ್ರೀ ಶಾಮಣ್ಣ ಬಿನ್ ಬೇಟೆ ರಂಗಪ್ಪ , ಶ್ರೀ ಜೆ.ವಿ . ತಿರುಮಲಯ್ಯ , ಶ್ರೀ ಪ್ರಹ್ಲಾದ ಶೆಟ್ಟಿ  , ಶ್ರೀ  ಗುಂಡಪ್ಪ ಎಂಬ ನಾಲ್ಕು ಜನ ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳು ಆ ಚಳವಳಿಯಲ್ಲಿ ಬಲಿಯಾಗಿದ್ದರು . ಈ ಹುತಾತ್ಮರ ನೆನಪಿಗಾಗಿ ಕೇಂದ್ರ ಸರ್ಕಾರವು ೧೯೭೨ನೆ ಇಸವಿಯಲ್ಲಿ ಈ ಸ್ಮಾರಕವನ್ನು ನಿರ್ಮಾಣ ಮಾಡಿತ್ತು ಮತ್ತು ೨೫ನೆ ಸ್ವಾತಂತ್ರ ದಿನದ ನೆನಪಿನಲ್ಲಿ  ಅಂದರೆ ಆಗಸ್ಟ್ ೧೫, ೧೯೭೩ನೆ ಇಸವಿಯಲ್ಲಿ ಇದನ್ನು ಅನಾವರಣ ಮಾಡಿತ್ತು. ಸುಮಾರು ಹತ್ತು ಅಡಿ ಎತ್ತರ ಇರುವ ಈ ಸ್ಮಾರಕದಲ್ಲಿ ಆ ನಾಲ್ಕು ಹುತಾತ್ಮ ವಿಧ್ಯಾರ್ಥಿಗಳ ಹೆಸರನ್ನು ಕೆತ್ತಿಸಲಾಗಿದೆ.

ಇಂಥದ್ದೊಂದು ಸ್ಮಾರಕ ಇರುವುದು ಬೆಂಗಳೂರಿನ ಎಷ್ಟೋ ಜನರಿಗೆ ಗೊತ್ತಿಲ್ಲ ಎಂಬುದು ನನ್ನ ಭಾವನೆ . ಇಂಥ ಸ್ಮಾರಕಗಳು ನಮ್ಮ ಮುಂದಿನ ಪೀಳಿಗೆಗಳಿಗೆ ಪರಿಚಯವಾಗಬೇಕು . ಅಂದು ವಿದ್ಯಾರ್ಥಿಗಳು ಕೂಡ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದರು ಎಂಬುದು ಈಗಿನ ಯುವ ಪೀಳಿಗೆಗೆ ಸ್ಪೂರ್ತಿ ಆಗಬೇಕು . 

೬೮ನೆ ಸ್ವಾತಂತ್ರ್ಯ ದಿನಾಚರಣೆಯ ಈ ದಿನದಂದು  ನಮ್ಮ ಸ್ನೇಹಿತರೊಡಗೂಡಿ ಈ ಸ್ಮಾರಕಕ್ಕೆ ಭೇಟಿ ನೀಡಿ ಆ ಹುತಾತ್ಮರಿಗೆ ನಮ್ಮ ಗೌರವವನ್ನು ಸಮರ್ಪಿಸಿ ಬಂದೆವು . 

ಇಂದಿನ ಈ ಸ್ಮಾರಕದ ಸ್ಥಿತಿ ಹೇಗಿದೆ ಅಂದರೆ  ಈ ಸ್ಮಾರಕ ಇರುವ ಜಾಗವನ್ನು ಪಕ್ಕದ ದೇವಸ್ಥಾನದವರು ಅತಿಕ್ರಮಣ ಮಾಡಿಕೊಂಡು ಅದರ ಸುತ್ತಲು ಕಾಂಪೌಂಡ್ ಅನ್ನು ನಿರ್ಮಿಸಿಕೊಂಡಿದ್ದಾರೆ. ಬೃಹತ್ ಬೆಂಗಳೂರು ಮಹಾನಾಗರ ಪಾಲಿಕೆಯು ಇದರ ಬಗ್ಗೆ ಮುತುವರ್ಜಿ ವಹಿಸಿ ಈ ಸ್ಮಾರಕವನ್ನು ದೇವಸ್ಥಾನದ ಪ್ರಾಂಗಣದಿಂದ ಪ್ರತ್ಯೆಕಗೊಳಿಸಿ ಇದನ್ನು ಸಂರಕ್ಷಿಸಿದರೆ ಒಳ್ಳೆಯದು ಎಂಬುದು ನನ್ನ ಅನಿಸಿಕೆ . 

Thursday, August 29, 2013

ಆಹಾರ ಭದ್ರತೆ ಕಾಯ್ದೆ

ಆಹಾರ ಭದ್ರತೆ ಕಾಯ್ದೆಗೆ ಅನುಮೋದನೆ ಸಿಕ್ಕ ಮೊದಲ ದಿನವೇ ರೂಪಾಯಿ ಮೌಲ್ಯದಲ್ಲಿ ಭಾರಿ ಕುಸಿತ ಕಂಡಿದೆ . ಒಂದೇ ದಿನದಲ್ಲಿ ರೂಪಾಯಿ ಮೌಲ್ಯವು ಡಾಲರ್ ವಿರುದ್ಧ ೨ ರೂಪಾಯಿಯಷ್ಟು ಕುಸಿದಿದೆ ಅಂದರೆ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಹೇಗೆ ಬಿಗಡಾಯಿಸಬಹುದು ಎಂಬುದನ್ನು ಶಂಕಿಸಿ .

ಇದೊಂದು ಆಹಾರ ಭದ್ರತೆ ಕಾಯ್ದೆ ಅಲ್ಲ,ನಮ್ಮ ದೇಶದ ಆರ್ಥಿಕ ಕುಸಿತಕ್ಕೆ ಒಂದು ವಿಷ ಇದ್ದಂತೆ .

ಇದರ ಪರಿಣಾಮಗಳು :ಮೊದಲನೆಯದಾಗಿ ,ಅಕ್ಕಿ,ಗೋಧಿ,ರಾಗಿ ಮುಂತಾದ ದವಸ ಧಾನ್ಯಗಳನ್ನು ಕಡಿಮೆ ಬೆಲೆಯಲ್ಲಿ ಹಂಚುತ್ತಾರೆ ಅಂದರೆ ರೈತರಿಂದ ಕೂಡ ಕಡಿಮೆ ಬೆಲೆಯಲ್ಲೇ ಖರೀದಿಸುತ್ತಾರೆ. ಆಗಾಗಿ ಕಷ್ಟ ಪಟ್ಟು ಬೆಳೆದ ರೈತರಿಗೆ ಭಾರಿ ಪೆಟ್ಟು ನೀಡಿದಂತೆಮತ್ತು ನಮ್ಮ ದೇಶದ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗದೆ,ರೈತರಿಗೆ ಹಲವಾರು ರೀತಿಯಲ್ಲಿ ಕೆಡುಕುಂಟಾಗುತ್ತದೆ .
ಎರಡನೆಯದಾಗಿ ,ಇದರ ವ್ಯತಿರಿಕ್ತ ಪರಿಣಾಮವಾಗಿ ದೇಶದಲ್ಲಿ ಆಹಾರ ಉತ್ಪಾದನೆ ಕಡಿಮೆ ಆಗಬಹುದು,ಕಾರಣ ಕಡಿಮೆ ಬೆಲೆಯಲ್ಲಿ ಎಲ್ಲ ಸಿಗಬೇಕಾದರೆ ಯಾರೂ ಬೆಳೆಯುವ ಗೋಜಿಗೆ ಹೋಗುವುದಿಲ್ಲ. ಇದರಿಂದ ಕೃಷಿ ಕ್ಷೇತ್ರಕ್ಕೆ ನಷ್ಟ ಅಲ್ಲದೇ ,ನಮ್ಮಲ್ಲಿ ಉತ್ಪಾದನೆ ಕಡಿಮೆ ಆದರೆ ,ಬೇರೆ ಕಡೆಯಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ ,ಅದು ಖಂಡಿತ ನಮ್ಮ ಅರ್ಥ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ..

ಈ ಕಾಯ್ದೆಯಿಂದಾಗಿ ರೂಪಾಯಿ ಮೌಲ್ಯ ಕುಸಿತ ಕಂಡರೆ ,ಅದು ಬೇರೆ ವಲಯಗಳಲ್ಲೂ ಕೂಡ ಏರು ಪೆರು ಆಗುವ ಸಾಧ್ಯತೆ ಇದೆ.
ಉದಾ : ಪೆಟ್ರೋಲಿಯಂ ವಲಯ : ಇದರಿಂದ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರುವ ಸಂಭವ ಇದೆ .(ಈಗಾಗಲೇ ಹಲವಾರು ಕಂಪೆನಿಗಳುಡೀಸೆಲ್ ಬೆಲೆಯನ್ನು ೧೦ ರುಪಾಯಿಯಷ್ಟು ಹೆಚ್ಚಿಸಲು ಬೇಡಿಕೆ ಇಟ್ಟಿದೆ).ಇದರಿಂದ ಸಾರಿಗೆ ವೆಚ್ಚ ಏರುತ್ತದೆ. ಕೊನೆಯದಾಗಿ ಇದು ಪರಿಣಾಮ ಬೀರುವುದು ಮಧ್ಯಮ ವರ್ಗ ಮತ್ತು ಬಡವರ ಮೇಲೆಯೇ ಹೆಚ್ಚು .

ಅವಶ್ಯಕವಾಗಿರುವಷ್ಟು ಉತ್ಪಾದನೆಯೇ ಇಲ್ಲದ ಮೇಲೆ ,ಹೀಗೆ ಕಾಯ್ದೆಯ ಮೂಲಕ ಅಕ್ಕಿ,ಗೋಧಿಯನ್ನು ಎಲ್ಲಿಂದ ಒದಗಿಸಲು ಸಾಧ್ಯ .. ಆದಕ್ಕೆ ಮೂಲ ಇದೆಯೇ ? ಇದು ದೇಶದಲ್ಲಿ ಬಡತನವನ್ನು ಇನ್ನಷ್ಟು ಹೆಚ್ಚಿಸುತ್ತದೆಯೇ ಹೊರತು ,ಮಾತ್ಯಾವುದೇ ಸಾಧನೆ ಅಲ್ಲ .

೪ ದಶಕದ ಹಿಂದೆ ಜಾರಿಗೆ ಬಂದ 'ಗರೀಬಿ ಹಠಾವೊ' ಕಾರ್ಯಕ್ರಮವು ಹೇಗೆ ದೇಶದಲ್ಲಿ ಬಡತನವನ್ನು ನಿರ್ಮೂಲನೆ ಮಾಡಲು ವಿಫಲವಾಯಿತೋ ಹಾಗೆ ಈ ಆಹಾರ ಭದ್ರತೆ ಕಾಯ್ದೆ ಕೂಡ ದೇಶದಲ್ಲಿ ಬಡತನವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಒಬ್ಬ ಮನುಷ್ಯನಿಗೆ ಪ್ರತಿದಿನ ಮೀನನ್ನು ತಿನ್ನಲು ಕೊಟ್ಟು ಅವನನ್ನು ಸೋಮಾರಿಯನ್ನಾಗಿಸುವ ಬದಲು ,ಅವನಿಗೆ ಮೀನು ಹಿಡಿಯುವುದನ್ನು ಹೇಳಿ ಕೊಟ್ಟರೆ ತನ್ನ ಆಹಾರವನ್ನು ತಾನೇ ಸಂಪಾದಿಸಿಕೊಳ್ಳುತ್ತಾನೆ ಅಲ್ಲವೇ ?

ಈ ನಿಟ್ಟಿನಲ್ಲಿ ಭಾರತ ಅರ್ಥ ವ್ಯವಸ್ಥೆಯು ತೀರಾ ಕಳಪೆ ಮಟ್ಟಕ್ಕೆ ಇಳಿಯುವ ಸಾಧ್ಯತೆ ಇದೆ ..

ಕೊನೆಯದಾಗಿ ,ನನ್ನ ಪ್ರಕಾರ ಇದು 'Food Security Bill' ಅಲ್ಲ ,ಯು.ಪಿ.ಎ ಅನುಮೋದಿಸಿದ 'Financial Suicide Bill' ಈಗಾಗಲೇ ಹದಗೆಟ್ಟಿರುವ ಭಾರತದ ಅರ್ಥ ವ್ಯವಸ್ಥೆಯನ್ನು ಸಂಪೂರ್ಣ ನಾಶಮಾಡುವ ಕಾಯ್ದೆ ಅಷ್ಟೇ ...

Monday, June 17, 2013

ಮಲ್ಲಕಂಭ ಪ್ರವೀಣರ ಊರೇ ಮಲ್ಲಾಪುರ !!!

ನನ್ನ ಊರು ಸುಂದರ ಕಲೆಗಳ ತವರೂರು,ಶಿಲ್ಪಕಲೆಗಳ ಬೀಡು ಹಳೇಬೀಡಿಗೆ ಕಾಲ್ನಡಿಗೆಯ ದೂರದಲ್ಲಿರುವ ಸಿದ್ದಾಪುರ ಎಂಬುದು.. ನನ್ನ ಹಳ್ಳಿಗೆ,ಈ ಹೆಸರು ಹೇಗೆ ಬಂತು ಎಂಬುದು ಸರಿಯಾಗಿ ತಿಳಿದಿಲ್ಲ ,ಆದರ ಹೊಯ್ಸಳರು ಆಳಿದ ಹಳೇಬೀಡು ಮತ್ತು ಸುತ್ತಮುತ್ತಲ ಕೆಲವು ಊರುಗಳ ಬಗ್ಗೆ ವಿಶ್ಲೇಷಣೆ ಕೊಡ ಬಯಸುತ್ತೇನೆ..

ಹಳೆಬೀಡಿನ ಇನ್ನೊಂದು ಹೆಸರು ದ್ವಾರಸಮುದ್ರ ಎಂದು .. ಇಲ್ಲಿ ಹೊಯ್ಸಳರಿಗಿಂತ ಮುಂಚೆ ರಾಷ್ಟಕೂಟರು ಸಾವಿರಾರು ಹೆಕ್ಟೇರುಗಳಷ್ಟು ದೊಡ್ಡದಾದ ಒಂದು ಕೆರೆಯನ್ನು ನಿರ್ಮಿಸಿದ್ದರು .. ಅದು ಸಮುದ್ರದಷ್ಟು ವಿಶಾಲವಾಗಿತ್ತು .. ನಂತರ ಈ ಊರು ಹೊಯ್ಸಳರ ರಾಜಧಾನಿ ಆಯಿತು.. ರಾಜಧಾನಿ ಅಂದರೆ ಅವರ ಆಡಳಿತದ ಮತ್ತು ರಾಜ್ಯದ ಹೆಬ್ಬಾಗಿಲು ಇದ್ದ ಹಾಗೆ.. ಆಗಾಗಿ ಇದಕ್ಕೆ ದ್ವಾರಸಮುದ್ರ ಎಂಬ ಹೆಸರು ಬಂತು ..ನಂತರ ಮಲ್ಲಿಕಾಫ಼ರ್ ನ ದಂಗೆಯಿಂದ ಇಡೀ ಊರು ಚೆಲ್ಲಾಪಿಲ್ಲಿಯಾಗಿ ಹಾಳಾಗಿ ಹೋಯಿತು.. ಕ್ರಮೇಣ ಇದು ಜನರ ಬಾಯಲ್ಲಿ ಹಾಳಾದ ಬೀಡು, ಹಳೆಯ ಬೀಡು ಹೀಗೆ ಒಬ್ಬರಿಂದ ಒಬ್ಬರಿಗೆ ತಲುಪಿ ಹಳೇಬೀಡು ಎಂದಾಯಿತು ಎಂದು ವಿಶ್ಲೇಷಿಸುತ್ತಾರೆ ..
 
ಹೊಯ್ಸಳರ ಲಾಂಛನ

 
ಇದೆ ರೀತಿ ಹಳೆಬೀಡಿನ ಸುತ್ತಮುತ್ತಲ ಕೆಲವು ಗ್ರಾಮಗಳ ಬಗ್ಗೆ ಒಂದು ಇಣುಕು ನೋಟ .. ಹಳೇಬೀಡಿಗೆ ಹೊಂದಿಕೊಂಡೇ ಇರುವ ಗ್ರಾಮ ಬಸ್ತಿಹಳ್ಳಿ .. ಇಲ್ಲಿ ಸಧ್ಯ ೫ ಜೈನ ತೀರ್ಥಂಕರರ ಬಸದಿಗಳಿವೆ .. ಮೂಲತಃ ಜೈನರಾಗಿದ್ದ ಹೊಯ್ಸಳರು ನಿರ್ಮಿಸಿದ್ದ ಬಸದಿಗಳು ಇವು .. ಇದಕ್ಕೂ ಮುಂಚೆ ಇಲ್ಲಿ ನೂರಾರು ಬಸದಿಗಳು ಇದ್ದವು ಎಂದು ಕೆಲವು ಸಂಶೋಧಕರು ಅಭಿಪ್ರಾಯ ಪಡುತ್ತಾರೆ .. ಬಸದಿಗಳ ಹಳ್ಳಿ ಎಂಬುದು ಕ್ರಮೇಣ ಬಸ್ತಿಹಳ್ಳಿ ಆಯಿತು ...
 
ಜೈನ ಬಸದಿ

 
ಹಳೇಬೀಡಿನಿಂದ ೯ ಕಿಲೋಮೀಟರ್ ದೂರದಲ್ಲಿರುವ ಊರು ಅಡಗೂರು... ಇಲ್ಲಿ ಈಗಲೂ ಹೊಯ್ಸಳರು ಕಟ್ಟಿದ್ದ ಕೋಟೆ,ಬಸದಿಗಳು ಇವೆ ..ಇಲ್ಲಿರುವ ಕೋಟೆಯಲ್ಲಿ ಮದ್ದು,ಗುಂಡುಗಳನ್ನು ಅಡಗಿಸಿ ಇಡುತ್ತಿದ್ದರಂತೆ ..ಮತ್ತು ಇಲ್ಲಿ ಯುದ್ಧಕ್ಕೆ ತಯಾರಿ ಕೂಡ ನೆಡೆಸುತ್ತಿದ್ದರು .... ಅಡಗಿಸಿಡುವ ಊರು,ಅಡಗೂರು ಎಂದಾಯಿತು ..

ಹೊಯ್ಸಳರ ರಾಜರ ಸಿರಿ,ಸಂಪತ್ತು,ವೈಡೂರ್ಯಗಳನ್ನು ಸಂಗ್ರಹಿಸಿ ಇಡುತ್ತಿದ್ದ ಊರು ರಾಜನಶಿರಿಯೂರು(ರಾಜನ+ಸಿರಿಯ +ಊರು ) ಎಂದಾಯಿತು ...
ಈ ಊರಿನ ಪಕಕ್ದಲ್ಲೇ ಇರುವ ಇನ್ನೊಂದು ಊರು ಮಲ್ಲಾಪುರ ಎಂದು .. ಇದು ಮಲ್ಲ ಕಂಭ ಪ್ರವೀಣರು ಇದ್ದಂತಹ ಊರು .. ಇಲ್ಲಿ ಹೊಯ್ಸಳರ ಕಾಲದಲ್ಲಿ ಮಲ್ಲ ಕಂಭ ಗಾರುಡಿಗರು ಇದ್ದರು ಎಂಬುದಕ್ಕೆ ಇಲ್ಲಿ ದೊರೆತಿರುವ ಮಲ್ಲ ಕಂಭಗಳು ಮತ್ತು ಗರಡಿ ಮನೆಗಳೇ ಸಾಕ್ಷಿ .. ಮತ್ತು ಇಲ್ಲಿನ ಗ್ರಾಮ ಪಂಚಾಯಿತಿ ಕೂಡ ಈ ನಿಟ್ಟಿನಲ್ಲಿ ಈ ಗ್ರಾಮದಲ್ಲಿ ಇತಿಹಾಸದ ಪುನರಾವರ್ತನೆ ಮಾಡುವಂತೆ ಮಲ್ಲ ಕಂಭ ಮತ್ತು ಗರಡಿ ಮನೆಗಳನ್ನುಅಭಿವೃದ್ಧಿ ಪಡಿಸಲು ಕೆಲವು ಯೋಜನೆಗಳನ್ನು ಕೈಗೊಂಡಿದೆ ..

ಇನ್ನು ಹಳೇಬೀಡಿನಿಂದ ಸುಮಾರು ೩-೪ ಕಿಲೋಮೀಟರ್ ದೂರದಲ್ಲಿರುವ ಊರುಗಳು ಪಂಡಿತನಹಳ್ಳಿ ಮತ್ತು ಭಂಡಾರಿಕಟ್ಟೆ .. ಹೊಯ್ಸಳರ ಆಸ್ಥಾನದ ಪಂಡಿತರುಗಳು ನೆಲೆಸಿದ್ದ ಊರು ಪಂಡಿತನಹಳ್ಳಿ .. ಇಲ್ಲಿ ಈಗಲೂ ಕೆಲವು ಪಂಡಿತರ ವಂಶ ಇದೆ ..
ಹಾಗೆ ಭಂಡಾರಿಗಳು,ಅಂದರೆ ಕ್ಷೌರಿಕರು ಇದ್ದಂತಹ ಊರು ಭಂಡಾರಿಕಟ್ಟೆ ..
ಹಳೇಬೀಡು ಸುತ್ತಮುತ್ತಲ ಕೆಲವು ಹಳ್ಳಿಗಳಿಗೆ ಈ ರೀತಿಯ ಇತಿಹಾಸದ ಹಿನ್ನೆಲೆ ಇದೆ ..

(ಈ ಲೇಖನವು ಜೂನ್ ೨೦, ೨೦೧೩ ರ "ಹಾಯ್ ಬೆಂಗಳೂರು" ಪತ್ರಿಕೆಯಲ್ಲಿ "ದಿಲ್ ನೆ ಫಿರ್ ಯಾದ್ ಕಿಯಾ" ಅಂಕಣದಲ್ಲಿ ಪ್ರಕಟಗೊಂಡಿದೆ .
'ನಿಮ್ಮ ಊರಿಗೆ ಹೆಸರು ಹೇಗೆ ಬಂತು?' ಎಂಬ ಶೀರ್ಷಿಕೆಯಲ್ಲಿ ಲೇಖನಗಳನ್ನು ಆಹ್ವಾನಿಸಲಾಗಿತ್ತು.  ಲೇಖನ ಪ್ರಕಟಿಸಿದ ಪತ್ರಿಕಾ ಬಳಗಕ್ಕೆ ಮನಃ ಪೂರ್ವಕ ಧನ್ಯವಾದಗಳು ) 

Tuesday, April 23, 2013

ಸೂತಕದ ಛಾಯೆ !!!

ತಾಯಿ ಭ್ರೂಣದಿಂದ
ಹೊರಬಂದ ಹಸುಗೂಸು
ಪಾಪ,
ಏನೂ ತಿಳಿದಿರದು, ದೇವರಂತ ಮನಸು
ಹೊಸ ಜಗತ್ತಿನೊಳ್ ಬಿಟ್ಟಿತು ಕಣ್ಣ
ಅದಕ್ಕೂ ಅಂಟಿಸಿದರು ಸೂತಕದ ಹೂರಣ.
ಓ ಮೂಢ,ಜನನ ಸೂತಕ ಅಲ್ಲ
ಅದು ಹೊಸ ಜೀವದ ಮೊದಲ ಉಸಿರು

ಮುಟ್ಟು ಕಂಡವಳನ್ನು ಹೊರಗಿರಿಸಿದಿರಿ,
ದೇವರ ಕೋಣೆಗೂ ಕಾಲಿರಿಸದಂತೆ
ಸ್ತೋತ್ರವ ಪಠಿಸದಂತೆ..
ಕಾಣುವಿರಿ ಪಶುವಿನಂತೆ..
ಮುಟ್ಟು ನಿಲ್ಲದ ಹೊರತು
ಹುಟ್ಟದು ಇನ್ನೊಂದು ಜೀವ.
ಓ ಮೂಢ,ರಜ ಸೂತಕ ಅಲ್ಲ
ಅದೊಂದು ಜೈವಿಕ ಕ್ರಿಯೆ

ಹೆಣದ ಮೇಲಿನ ಒಡವೆಯ ಧರಿಸುವಿರಿ,
ಹೆಣಕ್ಕೂ ನೀರೆರೆಯುವಿರಿ,
ಪೂಜೆಯ ಗೈಯ್ಯುವಿರಿ, ಉಸಿರಿಲ್ಲದ ದೇಹಕ್ಕೂ....
ವಿಗ್ರಹಕ್ಕೂ ಮಿಗಿಲಾಗಿ ಅಲಂಕರಿಸುವಿರಿ...
ಆದರೂ ಮನದ ಮೂಲೆಯಲ್ಲಿ ಸೂತಕದ ಬಿಂಬ
ಓ ಮೂಢ, ಸಾವು ಸೂತಕ ಅಲ್ಲ
ಅದು ಅವನ ಅಂತ್ಯ

ಓ ಮರುಳ ಮನಸೇ,
ಜನನ ಸೂತಕವಲ್ಲ
ರಜ ಸೂತಕವಲ್ಲ
ಸಾವು ಸೂತಕವಲ್ಲ
ಇವೆಲ್ಲ ಪ್ರಕೃತಿಯ ನಿಯಮವಷ್ಟೇ ...
ಸೂತಕ ಸೂತಕ ಎನ್ನುವ ನಿನ್ನ ಮನಸೇ ಸೂತಕ ನೋಡಾ !!!