Tuesday, August 28, 2012

"ಅನುಭಾವ"ದ ಜಾಡು ಹಿಡಿದು ಹೊರಟ ಯುವ ಪಡೆ !!!


ಆರ್ಕುಟ್,ಫೇಸ್ಬುಕ್ ಗಳಂಥ ಸಾಮಾಜಿಕ ತಾಣಗಳನ್ನು ಈಗಿನ ಯುವ ಪೀಳಿಗೆ ಉಪಯೋಗಿಸುವುದು ಸರ್ವೇ ಸಾಮಾನ್ಯ.ಕೆಲವರು ಕೇವಲ ಚಾಟಿಂಗ್ ಮತ್ತು ಇನ್ನಿತರ ಮೋಜಿಗೆ ಇಂಥ ತಾಣಗಳನ್ನು ಉಪಯೋಗಿಸುವುದುಂಟು.ಇನ್ನು ಕೆಲವರಿಗೆ ಹೊಸ ಸ್ನೇಹಿತರು ಸಿಗುತ್ತಾರೆ ಎಂಬ ಬಯಕೆ..ಆದರೆ ಇಲ್ಲೊಂದು ಯುವಕರ ಗುಂಪು ಇಂಥ ಸಾಮಾಜಿಕ ತಾಣದ ಒಂದು ಗುಂಪಿನ ಮುಖೇನ ಪರಿಚಯಗೊಂಡು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ.ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಆಸರೆ ಆಗಿದ್ದಾರೆ..'ಅನುಭಾವ'ದ ಜಾಡು ಹಿಡಿದು ಹೊರಟಿರುವ ಅನುಭವಿಗಳಲ್ಲದ  ಈ ಯುವಕರ ತಂಡದ ಹೆಸರು "ಟೀಂ ಅನುಭಾವ"..ಮೊದಮೊದಲು ಕೇವಲ ಹರಟೆ ಮತ್ತು ಇನ್ನಿತರ ವಿಷಯಗಳಿಗೆ ಸೀಮಿತವಾಗಿದ್ದ ಈ ಗುಂಪು,ನಂತರ ಕೆಲವರ ಸಲಹೆ ಮತ್ತು  ನಿರ್ಧಾರಗಳಿಂದಾಗಿ ಏನಾದರು ಸಮಾಜ ಸೇವೆ ಮಾಡಬೇಕೆಂಬ ಬಯಕೆ ಇಂದ ಈ ತಂಡ ಮೊದಲಿಗೆ ಅಸ್ತಿತ್ವಕ್ಕೆ ಬಂತು..
ಈ ಯುವ ಪಡೆಯ ಪ್ರತಿಯೊಂದು ಮನಸ್ಸಿನಲ್ಲಿ  ಶಿಕ್ಷಣಕ್ಕೆ  ಮೊದಲ  ಆದ್ಯತೆ ಕೊಡಬೇಕೆಂಬ ಹಂಬಲ ಇತ್ತು.ಅಂತ ಸಮಯದಲ್ಲಿ  ಇವರಿಗೆ ಈ ಒಂದು ಸಕಾರ್ಯ ಮಾಡುವುದಕ್ಕೆ ಸಿಕ್ಕಿದ್ದು ಮಾಗಡಿ ತಾಲ್ಲೂಕಿನಲ್ಲಿರುವ ಒಂದು ವಿದ್ಯಾರ್ಥಿ ನಿಲಯ.ಕೆಂಚಗಲ್ ಬಂಡೆ ಮಠದ ವತಿಯಿಂದ ನಡೆಯುತ್ತಿರುವ ಉಚಿತ ವಿದ್ಯಾರ್ಥಿ ನಿಲಯದಲ್ಲಿ ಸುಮಾರು ೧೫೦ ಬಡ ವಿದ್ಯಾರ್ಥಿಗಳಿದ್ದಾರೆ.ಅದರಲ್ಲಿ ಎಷ್ಟೋ ಮಕ್ಕಳ ಪೋಷಕರು ದೂರದ  ಊರುಗಳಿಂದ ಬೆಂಗಳೂರು ಮತ್ತು ಇನ್ನಿತರ ಕಡೆ ಕೆಲಸ ಅರಸಿ ಬಂದು ತಮ್ಮ ಮಕ್ಕಳನ್ನು ಇಲ್ಲಿ ಸೇರಿಸಿದ್ದಾರೆ,ಮತ್ತು ಅವರಲ್ಲಿ ಬಹುತೇಕ ವಿದ್ಯಾರ್ಥಿಗಳು ಬಡತನದಿಂದ ಬಂದವರೇ.ಅಲ್ಲದೆ ಆ ಸಂಸ್ಥೆಗೆ ಕೂಡ ಇಷ್ಟು ಮಕ್ಕಳಿಗೆ ಎಲ್ಲಾ ರೀತಿಯ ಅವಶ್ಯಕತೆಗಳನ್ನು ಪೂರೈಸಬಲ್ಲ ಶಕ್ತಿ ಇರಲಿಲ್ಲ..ಇಂಥ ಸನ್ನಿವೇಶದಲ್ಲಿ ಅಲ್ಲಿನ ಮಕ್ಕಳಿಗೆ ಸಹಾಯಕ್ಕೆ ಬಂದಿದ್ದು ಈ ಯುವ ಪಡೆ.
೪ ವರ್ಷದ ಹಿಂದೆ ಕೇವಲ ಬೆರಳೆಣಿಕೆ ಅಷ್ಟು ಜನರಿಂದ ಶುರುವಾದ ತಂಡ ಈಗ ಸುಮಾರು ೧೦೦-೧೫೦ ಸಕ್ರಿಯ ಸದಸ್ಯರನ್ನು ಹೊಂದಿದೆ.ಈ ಟೀಂನ ವತಿಯಿಂದ ಆ ಹಾಸ್ಟೆಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಯ  ಎಲ್ಲಾ ಅವಶ್ಯಗಳನ್ನು ಪೂರೈಸಲಾಗುತ್ತಿದೆ..ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಅವರಿಗೆ ಅಗತ್ಯ ಇರುವ ಪುಸ್ತಕಗಳು,ಸಮವಸ್ತ್ರ  ಮತ್ತು ಸ್ಟೇಷನರಿ ಸಾಮಗ್ರಿಗಳನ್ನು ವಿತರಿಸಲಾಗುತ್ತದೆ.ಅಲ್ಲದೆ ಅವರ ದಿನ ನಿತ್ಯದ ಬಳಕೆಗಳಾದ ಸೋಪು,ಬ್ರಶ್ ಇವುಗಳನ್ನು ಕೂಡ ಒದಗಿಸುತ್ತಾರೆ.ಇಷ್ಟೇ ಅಲ್ಲದೆ ಪ್ರತಿ ರಾಷ್ಟ್ರೀಯ ಹಬ್ಬಗಳಂದು ಆ ವಿದ್ಯಾರ್ಥಿಗಳಿಗೆ ಪಥ್ಯೇತರ  ಚಟುವಟಿಕೆಗಳನ್ನು ಏರ್ಪಡಿಸಿ ಅವರಲ್ಲಿ ಸ್ಪರ್ಧಾ  ಮನೋಭಾವನೆಯನ್ನು ಬೆಳೆಸುತ್ತಾರೆ.ಪ್ರತಿ ವರ್ಷ ಆರೋಗ್ಯ ಶಿಬಿರವನ್ನು ಕೂಡ ಏರ್ಪಡಿಸಿ ಮಕ್ಕಳ ಆರೋಗ್ಯದ ಬಗ್ಗೆ ಕೂಡ ಕಾಳಜಿ ವಹಿಸುತ್ತಾರೆ..ವಾರ್ಷಿಕ ಕ್ರೀಡಾಕೂಟ ಕೂಟವನ್ನು ಕೂಡ ೪ ವರ್ಷದಿಂದ ಈ ತಂಡ ಆಯೋಜಿಸುತ್ತ ಬಂದಿದೆ...ಅಲ್ಲಿನ ವಿದ್ಯಾರ್ಥಿಗಳಿಗೆ  ಅನುಕೂಲವಾಗುವಂತೆ ಮತ್ತು ಮಕ್ಕಳಲ್ಲಿ ಕಂಪ್ಯೂಟರ್ ಜ್ಞಾನ ಬೆಳೆಸಲು ವಿದ್ಯಾರ್ಥಿ ನಿಲಯದಲ್ಲಿ ಸುಮಾರು ೮ ಕಂಪ್ಯೂಟರ್ಗಳನ್ನು ಒದಗಿಸಿ ಒಂದು ಲ್ಯಾಬ್ ಅನ್ನು ಕೂಡ ಸ್ವತಃ ಮಾಡಿದ್ದಾರೆ,ಅಲ್ಲದೆ ಅದರ ನಿರ್ವಹಣೆ  ಕೂಡ ಈ  ತಂಡದ್ದೆ .ಅಲ್ಲದೆ ನಾನಾ ರೀತಿಯ ೫೦೦ ಕ್ಕೂ ಹೆಚ್ಚು ಪುಸ್ತಕಗಳನ್ನು ನೀಡಿ ಗ್ರಂಥಾಲಯವನ್ನು ಕೂಡ ಮಾಡಿ ಮಕ್ಕಳ ಜ್ಞಾನಾರ್ಜನೆಗೆ ಸಹಾಯವಾಗುವಂತೆ ಮಾಡಿದ್ದಾರೆ.ಇದರಲ್ಲಿ ವ್ಯಕ್ತಿತ್ವ ವಿಕಸನ,ಆಧ್ಯಾತ್ಮಿಕ ಅಲ್ಲದೆ ವ್ಯಾಕರಣ ಹೀಗೆ ಅವರ ಶೈಕ್ಷಣಿಕ ವಿಷಯಕ್ಕೆ ಸಂಭಂದ ಪಟ್ಟ ಪುಸ್ತಕಗಳು ಈ ಸಂಗ್ರಹದಲ್ಲಿವೆ.

ಅಷ್ಟೇ ಅಲ್ಲದೆ ಹತ್ತನೇ ತರಗತಿ ಮತ್ತು ಪಿಯುಸಿ ಮಕ್ಕಳಿಗೆ ಅವರ ಮುಂದಿನ ವೃತ್ತಿ ಶಿಕ್ಷಣ ಮಾರ್ಗದರ್ಶನ  ನೀಡಲು ತರಬೇತಿ ಕಾರ್ಯಗಾರವನ್ನು ಏರ್ಪಡಿಸಲಾಗುತ್ತದೆ.ಅವರ ಪರೀಕ್ಷೆಗಳಿಗೆ ಮುಂಚೆ ಪರೀಕ್ಷೆಯ ಪೂರ್ವ ತಯಾರಿಯ ಬಗ್ಗೆ ಗಮನ ಹರಸಿ ಅದಕ್ಕೆ ಬೇಕಾದ ತರಬೇತಿಗಳನ್ನು  ಕೂಡ ಸ್ವತಃ ಈ ತಂಡದ ಸದಸ್ಯರೇ ಕೊಡುತ್ತಾರೆ.ಈ ತರಬೇತಿಯ ನಂತರ ಮಕ್ಕಳಲ್ಲಿ ಆತ್ಮ ವಿಶ್ವಾಸ ಗರಿಗೆದರುತ್ತದೆ ಮತ್ತು ಮಕ್ಕಳೇ ಹೇಳುವಂತೆ ಬೇರೆಯವರ ಜೊತೆ ನಮ್ಮನ್ನು ಸ್ಪರ್ಧೆಗೆ ಒಡ್ಡುವಂತೆ ನಮ್ಮಲ್ಲಿ ಆತ್ಮ ಸ್ಥೈರ್ಯ ತುಂಬುತ್ತಾರೆ ಅಲ್ಲದೆ ನಮ್ಮ ಮುಂದಿನ ಶಿಕ್ಷಣದ ಆಯ್ಕೆಯಲ್ಲಿ ಕೂಡ ಸಹಕಾರಿ ಆಗುತ್ತಾರೆ ಎಂದು ಹೇಳುತ್ತಾರೆ.ವಿದ್ಯಾರ್ಥಿಗಳಲ್ಲಿ ಒಂದು ಸ್ಪರ್ಧಾ ಮನೋಭಾವ ಉಂಟಾಗಿದೆ.

ಅಂತರ್ಜಾಲದ ಮೂಲಕ ಪರಿಚಯ ಆಗಿ ಮೊದಲು ಸಣ್ಣದಾಗಿ ಸೇವೆ ಆರಂಭಿಸಿದಾಗ ಅವರುಗಳು ಅಷ್ಟೇ ತಮ್ಮ ಸ್ವಂತ ಹಣದಲ್ಲಿ ಮಕ್ಕಳಿಗೆ ಏನಾದರು ಅನುಕೂಲ ಮಾಡಿಕೊಡುತ್ತಿದ್ದರು.ನಂತರ ಸ್ನೇಹಿತರಿಂದ ಸ್ನೇಹಿತರಿಗೆ ಹರಡಿ,ಅಂತರ್ಜಾಲದ ಮೂಲಕ ಕೂಡ ಒಬ್ಬರಿಂದ ಒಬ್ಬರಿಗೆ ತಿಳಿದು,ಅಲ್ಲಿ ಸೇವೆ ಮಾಡಲು  ಸ್ವಯಂ ಸೇವಕರು ಕೂಡ ದಿನೇ ದಿನೇ ಹೆಚ್ಚಾದರು ಅಲ್ಲದೆ ಎಲ್ಲರೂ ತಮ್ಮ ಕೈಲಾದಷ್ಟು ಆರ್ಥಿಕ ಸಹಾಯ ಮಾಡಲು ಮುಂದಾದರು.ಹೀಗೆ ಚಿಕ್ಕದಾಗಿ ಶುರು ಆದ ಇವರ ಸೇವೆ ಇಂದು ಅಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಅವರ ಅಗತ್ಯ ಪೂರೈಸಬಲ್ಲಷ್ಟು ಬೆಳೆದಿದೆ.ಈ ತಂಡದಲ್ಲಿ ನಾನ ವೃತ್ತಿಯ ಯುವಕ ಯುವತಿಯರು ಇದ್ದಾರೆ,ಅಲ್ಲದೆ ಸ್ವತಃ ವಿದ್ಯಾರ್ಥಿಗಳು ಕೂಡ ಇದ್ದಾರೆ.
ಹೀಗೆ ಒಬ್ಬರಿಂದ ಒಬ್ಬರಿಗೆ ತಿಳಿದು ಈ ತಂಡ ಇನ್ನು ಬೆಳೆಯುತ್ತಲೇ ಇದೆ,ಇಲ್ಲಿ ಎಲ್ಲರೂ ಆತ್ಮ ಸಾಕ್ಷಿಯಾಗಿ ತಮ್ಮ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ,ಪ್ರತಿಯೊಬ್ಬರಲ್ಲೂ ಈ ಮಕ್ಕಳಿಗೆ ಒಂದು ಒಳ್ಳೆಯ ಜೀವನ ಕಲ್ಪಿಸಬೇಕೆಂಬ ಮಹದಾಸೆ ಇದೆ.ಎಲ್ಲರಲ್ಲೂ ಒಂದು ಅರ್ಪಣಾ ಮನೋಭಾವ ಇದೆ.ಮೊದಲು ತಂಡದ ಸದಸ್ಯರಾಗಿದ್ದು ಈಗ ಉದ್ಯೋಗ ನಿಮಿತ್ತ ಹೊರ ರಾಜ್ಯ,ಹೊರ ದೇಶದಲ್ಲಿ ಕೂಡ ನೆಲೆಸಿರುವ ಕೆಲವರು ಧನ ಸಹಾಯ ಮಾಡುತ್ತಿದ್ದಾರೆ.ಪ್ರತಿಯೊಬ್ಬ ಸದಸ್ಯ ಕೂಡ ತನ್ನ ಕೈಲಾದಷ್ಟು ಹಣ ನೀಡುತ್ತಾರೆ ಮತ್ತು ಇವರು ಬೇರೆ ಯಾರನ್ನು ಕೂಡ ಅಂಗಲಾಚಿಲ್ಲ..ಎಲ್ಲರೂ ಸ್ವ ಮನಸ್ಸಿನಿಂದ ಸೇರಿಕೊಂಡವರು ಮತ್ತು ಆ ಬಡ ಮಕ್ಕಳಿಗೆ ಆಸರೆ ಆಗಬೇಕು ಅಂಬ ಧೃಡ ನಿರ್ಧಾರ ಹೊಂದಿದವರು..ಇವರಲ್ಲಿ ಪ್ರತಿಯೊಬ್ಬರೂ ನಾಯಕರೇ....

ಆ ಅನುಭಾವಿಗಳು ಹೇಳುವಂತೆ ತಮ್ಮನ್ನು ತಮ್ಮ ತಮ್ಮ ಪೋಷಕರು ಚೆನ್ನಾಗಿ ಸಾಕಿ ಈಗ ಒಂದು ಒಳ್ಳೆಯ ದುಡಿಮೆಯ ಹಂತದಲ್ಲಿದ್ದೇವೆ,ಇಂಥ ಬಡ ಮಕ್ಕಳ ಜೀವನ ಕೂಡ ಒಂದು ಸುಗಮವಾದ ಹಾದಿಯಲ್ಲಿ ಹೋಗಬೇಕೆಂದರೆ ಇವರಿಗೆ ಧನ ಸಹಾಯ ಆಗಿರಬಹುದು ಅಥವಾ ಧೈರ್ಯ ತುಂಬುವ ಮನಸ್ಸಿನ ಅವಶ್ಯಕತೆ ಇದೆ.ಅವರನ್ನು ಓದಿಸುವ ಶಕ್ತಿ ಎಷ್ಟೋ ಜನ ಪೋಷಕರಿಗೆ ಇಲ್ಲ,ಆದ್ದರಿಂದ ನಮ್ಮಿಂದ ಅವರಿಗೆ ಸಹಾಯಕಾರಿ ಆಗುವಂತೆ ಈ ಕಾರ್ಯವನ್ನು ಶುರು ಮಾಡಿದೆವು,ಈಗ ಅಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳನ್ನು ನಾವು ಪೂರೈಸುತ್ತಿದ್ದೇವೆ ಎಂದು ಹೇಳಿದರು.ಈ ಅನುಭಾವಿಗಳಲ್ಲಿ ಕಾಣುವ ಮಂದಹಾಸವೇ ಅವರ ಸಂಕಲ್ಪಕ್ಕೆ ಸಾಕ್ಷಿ..ಇವರ ಸಹಾಯದಿಂದ ಆ ಮಕ್ಕಳಲ್ಲಿ ಆತ್ಮ ವಿಶ್ವಾಸ ಇನ್ನಿಲ್ಲದಷ್ಟು ಹೆಚ್ಚುತ್ತಿದೆ.ಕೇವಲ ಈ ವಿದ್ಯಾರ್ಥಿ ನಿಲಯಕ್ಕೆ ಸೀಮಿತವಾಗದೆ ಬೇರೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಕೂಡ ಇವರು ಸಹಾಯ ಮಾಡಿದ್ದಾರೆ.ಅಥಣಿ ಮೂಲದ ಒಬ್ಬ ಬಾಲಕಿಗೆ ಆಕೆಯ ಡಿಪ್ಲೋಮಾ ಶಿಕ್ಷಣಕ್ಕೆ ನೆರವಾಗಿ ಪೂರ್ತಿ ಶುಲ್ಕ ಮತ್ತು ಅವಶ್ಯಕ ಪುಸ್ತಕಗಳಿನ್ನು ಒದಗಿಸಿ ಕೊಟ್ಟಿದ್ದಾರೆ....

ಆ ಹಾಸ್ಟೆಲ್ಲಿನ ಮೇಲ್ವಿಚಾರಕರು ಹೇಳುವಂತೆ ಈ ತಂಡದ ಸಹಾಯದಿಂದಾಗಿ ವಿದ್ಯಾರ್ಥಿಗಳ ಎಷ್ಟೋ ಕೊರತೆಗಳು ನೀಗಿವೆ ಮತ್ತು ಅವರಲ್ಲಿ ತಾವು ಕೂಡ ಮುಂದೊಂದು ದಿನ ಇದೆ ರೀತಿ ಸೇವೆ ಮಾಡಬೇಕೆಂಬ ಆಶಯ ಇದೆ ಎಂದು.ಆ ಮಕ್ಕಳು ಕೂಡ ಈ ತಂಡದ ಬಗ್ಗೆ ಬಹಳ ಕೃತಜ್ಞತಾಪೂರ್ವವಾಗಿ ಇವರಿಂದ ಆಗುತ್ತಿರುವ ಸಹಾಯದ ಬಗ್ಗೆ ಹೇಳಿದರು...

ಈ ಶೈಕ್ಷಣಿಕ ವರ್ಷದ ಶುರುವಿನಲ್ಲಿ,ಯಾ ವಿದ್ಯಾರ್ಥಿ ನಿಲಯದ ಮಕ್ಕಳಿಗೆ ಅನುಕೂಲವಾಗುವಂತೆ ಅಲ್ಲಿ ಒಂದು ಸುಸಜ್ಜಿತವಾದ ಕಂಪ್ಯೂಟರ್ ಲ್ಯಾಬ್ ಅನ್ನು ಕೂಡ ಅಳವಡಿಸಲಾಯಿತು,ಅಲ್ಲದೆ ಒಬ್ಬರು ಶಿಕ್ಷಕರನ್ನು ಕೂಡ ನೇಮಿಸಲಾಗಿದೆ...

ಇತ್ತೀಚೆಗೆ, ಈ ಸ್ವತಂತ್ರ ದಿನದಂದು ಈ ತಂಡದಿಂದ ವಿದ್ಯಾರ್ಥಿ ನಿಲಯ ಮತ್ತು ಅಲ್ಲಿನ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳಿಗೆ,ಆರೋಗ್ಯ ತಪಾಸನೆ ಶಿಬಿರವನ್ನು ಏರ್ಪಡಿಸಲಾಗಿತ್ತು.ಸುಮಾರು ೨೫೦-೩೦೦ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಂಡರು.ಅಲ್ಲದೆ ಕೆಲವು ವಿದ್ಯಾರ್ಥಿಗಳ ಹೆಚ್ಚಿನ ಚಿಕಿತ್ಸೆಯನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊಡಿಸಲಾಯಿತು.

ಆರೋಗ್ಯ ತಪಾಸಣೆ ಶಿಬಿರದ ಕೆಲವು ಫೋಟೋಗಳು:






                                                               



ಶಿಬಿರದಲ್ಲಿ ಪಾಲ್ಗೊಂಡಿದ್ದ ವೈದ್ಯರ ತಂಡ ಮತ್ತು ಅನುಭಾವ ಟೀಂನ ಸದಸ್ಯರು....


More Inforamtion:Anubhaava in Facebook

 http://www.anubhaava.org/

ಅವಧಿಯಲ್ಲಿ ಪ್ರಕಟಗೊಂಡಿದೆ..........
 
ಫೋಟೋಗಳು :ಶಿವ ಪುರೋಹಿತ್ ,ಕೀರ್ತೇಶ್.ಜಿ .ಆರ್ ಮತ್ತು ಗಿರೀಶ್.ಎಸ್