Monday, February 28, 2011

ಚಿನ್ನದಂಥ ಮಾತು

ಒಮ್ಮೆ ಬೆಂಗಳೂರಿನಿಂದ ನಮ್ಮ ಊರಿಗೆ ಬೆಳಗಿನ ರೈಲಿನಲ್ಲಿ  ಹೋಗುತ್ತಿದ್ದೆ.ಕಿಡಕಿ ಬದಿಯ ಸೀಟಿನಲ್ಲಿ ಕುಳಿತು ಪೇಪರ್ ಓದುತ್ತ ಕುಳಿತಿದ್ದೆ.ಯಶವಂತಪುರದಲ್ಲಿ ಸುಮಾರು ೫-೬ ಜನ ೪೦-೫೦ ವರ್ಷದ ಜನರು ಬಂದು ನಾನು ಕುಳಿತಿದ್ದ ಆಚೀಚಿನ ಸೀಟಿನಲ್ಲಿ ಕುಳಿತಿಕೊಂಡರು.ನನ್ನ ಪಾಡಿಗೆ ಪೇಪರ್ ಓದಿದ ಮೇಲೆ ಒಂದು ಪುಸ್ತಕ ಓದುತ್ತ ಕುಳಿತೆ. ಅಷ್ಟೂ ಜನ ತಮಿಳಿನಲ್ಲಿ,ಸ್ವಲ್ಪ  ಕನ್ನಡದಲ್ಲಿ ಕೂಡ  ಏನೇನೋ ಮಾತಾಡುತ್ತ ಇದ್ದರು.ನಾನೇನು ಅಷ್ಟು ಅವರ ಕಡೆಗೆ ಗಮನ ಕೊಡಲಿಲ್ಲ.
ತುಮಕೂರು ದಾಟಿದ ಮೇಲೆ ನಾನು ಪುಸ್ತಕ ಮುಚ್ಚಿಟ್ಟು ಸುಮ್ಮನೆ ಕುಳಿತಿದ್ದೆ.ಸ್ವಲ್ಪ ಸಮಯದ ನಂತರ ಅವರಲ್ಲೊಬ್ಬರು ನನ್ನನ್ನು ಕುರಿತು "ನೀನು ಏನೋ ಯೋಚಿಸ್ತಿದ್ಯ?ಯಾವುದೋ ವಿಷಯ ನಿನ್ನನ್ನು ಬಹಳ ಕಾಡುತ್ತಿದೆ?ನೀನು ಬಹಳ ಬೇಜಾರ್ ಆಗಿರೋದ್ ನೋಡಿದ್ರೆ ನೀನು ಬಹಳ ದಿನದಿಂದ ಏನೋ ನೋವು ಅನುಭವಿಸುತ್ತಿದ್ದಿಯ? " ಹಾಗೆ ನನ್ನ ಬಲಗೈ ಹಸ್ತ ನೋಡಿ "ಸುಮಾರು ೮-೯ ತಿಂಗಳಿನಿಂದ ನೀನು ಏನ್ ಮಾಡಬೇಕು ಅನ್ಕೊತಿಯ ಅದನ್ನ ಮಾಡಕ್ಕೆ ಆಗ್ತಿಲ್ಲ ತಾನೆ ?"ಅಂತ ಹೇಳಿದರು.
ನಾನು  ಕಕ್ಕಾಬಿಕ್ಕಿಯಾಗಿ ನೋಡ ತೊಡಗಿದೆ,ಕಾರಣ ಅದರಲ್ಲಿ ಎಳ್ಳಷ್ಟೂ ಸುಳ್ಳಿರಲಿಲ್ಲ. 
"ಇಲ್ಲ ,ಹಾಗೇನಿಲ್ಲ " ಅಂದೆ.
"ನಿನ್ನನ್ನ ನೋಡಿದ್ರೆ ಗೊತ್ತಾಗುತ್ತಪ್ಪ ನಂಗೆ..ನಿನ್ನ ಹೆಸರೇನು?ಏನ್ ಓದ್ತಾ ಇದ್ದೀಯ ?"ಅಂತ ಕೇಳಿದ್ರು.
"ಗಿರೀಶ್ ಅಂತ,ಇಂಜಿನಿಯರಿಂಗ್ ಮುಗಿಸಿದ್ದೀನಿ "
"ಇವಾಗ ಏನ್ ಮಾಡ್ತಿದ್ಯ,ಎಲ್ಲಾದರು ವರ್ಕ್ ಮಾಡ್ತಿದ್ಯ "
"ಕೆಲಸ ಹುಡ್ಕ್ತ ಇದೀನಿ "ಅಂದೆ.
"ಇದೆ ನೋಡು ನಿನ್ನನ್ನ ಬಹಳ ಕಾಡ್ತಿರೋದು, ಎಷ್ಟು ದಿನ ಆಯಿತು ನಿನ್ನ ಇಂಜಿನಿಯರಿಂಗ್ ಮುಗಿಸಿ ,ಎಷ್ಟು ನಿನ್ನ ವಯಸ್ಸು ಇವಾಗ "
"೪ ತಿಂಗಳು ಆಗಿದೆ ಇಂಜಿನಿಯರಿಂಗ್ ಮುಗಿದು"
"ನಿನ್ನ ವಯಸ್ಸು "ಅಂತ ಮತ್ತೆ ಕೇಳಿದರು.
"೨೧ "ಅಂದೆ.
"ನೋಡು ಗಿರೀಶ್ ಒಂದು ಮಾತು ಹೇಳ್ತೀನಿ.ನಿಂಗೆ ಈ ವಯಸ್ಸಿಗೆ ಕೈ ತುಂಬ ದುಡ್ಡು ಸಿಗೋ ಕೆಲಸ ಸಿಕ್ಕಿದ್ರೆ ನಿನ್ನ ಚಪ್ಪಲಿ ಕಾಲಲ್ಲಿ ಇರಲ್ಲ ,ತಲೆ ಮೇಲೆ ಬಂದು ಬಿಡುತ್ತೆ,ಹಾಗಂತ ನಿಂಗೆ ಈಗ ಕೆಲಸ ಸಿಗದೇ ಇರಲಿ ಅಂತ ನಾನು ಹೇಳಲ್ಲ " ಅಂತ ಚಿನ್ನದಂಥ ಮಾತು ಹೇಳಿ ಮತ್ತೆ ಶುರು ಮಾಡಿದರು.
"ಒಂದಲ್ಲ ಒಂದು ದಿನ ಕೆಲಸ ಸಿಗುತ್ತೆ,ತಾಳ್ಮೆ ಇಂದ ಕಾಯಬೇಕು ಅಷ್ಟೇ, ಆ ದೇವರು ಎಲ್ಲರನ್ನು ಈ ಥರಾ ಪರೀಕ್ಷೆ ಮಾಡಲ್ಲ,ನಿನ್ನನ್ನ ಮಾಡ್ತಿದ್ದಾನೆ ಅಂದ್ರೆ ಖುಷಿ ಪಡು, ಒಂದು ದಿನ ನಿಂಗೆ ಒಳ್ಳೆದಾಗುತ್ತೆ  "ಅಂತ ಧೈರ್ಯ ತುಂಬಿದರು.
ನನಗೆ ಪರಿಚಯವೇ ಇಲ್ಲದ,ಇನ್ನೂ ಸ್ವಲ್ಪ ಒತ್ತು ಕಳೆದರೆ ಅವರೂ ತಮ್ಮ ಸ್ಟೇಷನ್ ನಲ್ಲಿ ನಾನು ನನ್ನ ಸ್ಟೇಷನ್ ನಲ್ಲಿ ನಮ್ಮ ನಮ್ಮ ದಾರಿ ಹಿಡಿದು ಹೋಗುತ್ತೇವೆ.ಆಮೇಲೆ ಅವರ್ಯಾರೋ ನಾನ್ಯಾರೋ? ನನ್ನ ಆತ್ಮೀಯರು ಕೂಡ ಈ ರೀತಿ ಧೈರ್ಯ ತುಂಬಿರಲಿಲ್ಲ,ಕೆಲವು ನೆಂಟರು ಇನ್ನೂ ಕೆಲಸ ಸಿಕ್ಕಿಲ್ಲ ಅಂತ ಹೀಯಾಳಿಸುತ್ತಲೇ ಇದ್ದರು. ಇಂಥ ಪರಿಸ್ಥಿತಿಯಲ್ಲಿ ಅವರು ಹೇಳಿದ ಈ ಮಾತುಗಳು ನನ್ನನ್ನು ತುಂಬ ಕಾಡಿದವು ಮತ್ತು ಅಷ್ಟೇ ಅರ್ಥ ಪೂರ್ಣ ಆಗಿದ್ದವು. ಅವರ ಮಾತಿಗೆ ಏನು ಹೇಳಲು ಗೊತ್ತಾಗದೆ ಸುಮ್ಮನೆ ಕುಳಿತಿದ್ದೆ.
"ಜೀವನದಲ್ಲಿ ಈ ಥರಾ ಕಷ್ಟ,ನೋವು ಅನುಭವಿಸಿದರೆ ಮಾತ್ರ ಅದಕ್ಕೆ ಒಂದು ಅರ್ಥ,ಮುಂದೆ ಒಂದು ಇದನೆಲ್ಲ ನೆನಪು ಮಾಡ್ಕೋತಿಯ.ಅವಾಗ ಗೊತ್ತಾಗುತ್ತೆ ಇದರ ಬೆಲೆ ನಿಂಗೆ ,ಸ್ವಲ್ಪ ದಿನ ಅಷ್ಟೇ ಒಳ್ಳೆ ಕೆಲಸ ಸಿಗುತ್ತೆ ಬಿಡು "ಅಂತ ನನ್ನನ್ನು ಹುರಿದುಂಬಿಸುತ್ತಿದ್ದರು .
ನಂತರ ನನ್ನ ಊರು,ನನ್ನ ಕುಟುಂಬದ ಬಗ್ಗೆ ವಿಚಾರಿಸಿ,ಅವರೂ ತನ್ನ ಸ್ನೇಹಿತರೊಡನೆ ಪ್ರತಿ ತಿಂಗಳು ಅಮಾವಾಸ್ಯೆಯಂದು ತಿಪಟೂರಿನ ಬಳಿ ಒಂದು ದೇವಸ್ಥಾನಕ್ಕೆ ೧೨ ವರ್ಷದಿಂದ ತಪ್ಪದೆ ಹೋಗುವ,ಮತ್ತು ಅದೂ ಕೂಡ ಇದೆ ರೈಲಿನಲ್ಲಿ ಹೋಗುವ ವಿಷಯವನ್ನು ಹೇಳಿದರು.
ಇನ್ನೇನು  ಅವರು ಇಳಿಯುವ ಸ್ಟೇಷನ್ ಹತ್ತಿರ ಬರುತ್ತಿದ್ದಾಗ ಕೊನೆಯದಾಗಿ "ನಾನು ಕೂಡ ಬೆಂಗಳುರಿಗ ಕೆಲಸ ಹುಡುಕಲು ಅದೂ ಕೂಡ ತಮಿಳುನಾಡಿನಿಂದ ಬಂದು ಸುಮಾರು ೮ ತಿಂಗಳು ಇದೆ ರೀತಿ ಅನುಭವಿಸಿದ್ದೆ ,ಎಲ್ಲಾ ನೆಂಟರು ನನ್ನನ್ನು ದೂರ ಇಟ್ಟಿದ್ದರು,ಜಾಸ್ತಿ ಯೋಚನೆ ಮಾಡಬೇಡ "ಅಂತ ಹೇಳಿ ಹೋದರು.
ಅವರು ಹೋದ ಮೇಲೆ ಅವರಾಡಿದ ಮಾತುಗಳು ನನ್ನನ್ನು ಧೈರ್ಯವಾಗಿಸಿದವು,ಅವರ ಹೇಳಿದ ಒಂದೊಂದು ಮಾತುಗಲ್ಲು ಯೋಚಿಸುತ್ತ ಕುಳಿತಿದ್ದೆ.
ಮನೆಗೆ ತಲುಪಿದ ಮೇಲೆ ನನ್ನ ತಾಯಿಗೆ  ಈ ವಿಷಯವನ್ನು ಹೇಳಿದ ಮೇಲೆ ಅವರು "ನೋಡು ಎಂಥ ಮಾತು ಹೇಳಿದರೆ,ಸಾಯೋವರ್ಗೂ ನೆನಪಿಟ್ಕೋ"ಅಂತ ಹೇಳಿದರು.

Friday, February 18, 2011

ಹೋಟೆಲಿನಲ್ಲಿ ಒಂದಿಷ್ಟು ದಿನ

 ಹೋಟೆಲಿನಲ್ಲಿ ,ಮ್ಯಾನೇಜರ್  ಆಗುವ ಅರ್ಹತೆ ಉಳ್ಳ ಹುಡುಗ ಮಾಣಿಯಾಗಿ ಅನುಭವಿಸಿದ ಕಥೆ.

ಮಲೆನಾಡಿನ ಒಂದು ಹಳ್ಳಿಯ ಸ್ವಾಭಿಮಾನಿ ಹುಡುಗ..ತನ್ನ ಡಿಗ್ರಿ ಮುಗಿಸಿ ಬೃಹತ್ ಬೆಂಗಳೂರಿಗೆ ಕೆಲಸ ಹುಡುಕಲು ಬರುತ್ತಾನೆ.ಬಂದವನೇ ತನ್ನ ನೆಂಟರ ಮನೆಯಲ್ಲಿ ಸ್ವಲ್ಪ ದಿನದ ಮಟ್ಟಿಗೆ ಆಶ್ರಯ ಪಡೆಯುತ್ತಾನೆ.ತನಗೆ ಇಷ್ಟ ಇಲ್ಲದಿದ್ದರೂ ತಮ್ಮ ಮನೆಯ ಹಣಕಾಸಿನ ತೊಂದರೆ ಮತ್ತು ತನ್ನ ತಂದೆ ತಾಯಿಯ ಬಲವಂತದಿಂದಾಗಿ ತನ್ನ ನೆಂಟರ ಮನೆಯಲ್ಲಿ ಕೆಲಸ ಸಿಗುವವರೆಗೂ ಇರಲು ಒಪ್ಪಿಕೊಳ್ಳುತ್ತಾನೆ.
೨-೩ ತಿಂಗಳಾದರೂ ಎಲ್ಲೂ ಕೆಲಸ ಸಿಗದೇ ಬಹಳ ನಿರಾಸೆಗೊಂಡಿರುತ್ತಾನೆ.ಹಾಗೆ ಒಂದು ದಿನ ಇನ್ನೊಂದು ಕಂಪೆನಿಯಿಂದ ಸಂದರ್ಶನಕ್ಕೆ ಕರೆ ಬಂದಾಗ "ಏನಾದ್ರು ಮಾಡಿ ಇಲ್ಲಿ ಕೆಲಸ ಸಿಗಲೇಬೇಕು " ಅಂತ ಪಣ ತೊಟ್ಟು ಹೊರಡುತ್ತಾನೆ. ಅಷ್ಟೊತ್ತಿಗಾಗಲೇ ತಾನು ಇದ್ದ ಮನೆಯಲಿ ತುಂಬಾ ನೋವು ಅನುಭವಿಸಿರುತ್ತಾನೆ ,ಕಾರಣ ಆ ಮನೆಯಲ್ಲಿದ್ದ  ತನ್ನ ವಯಸ್ಸಿನ ಇನ್ನೊಬ್ಬ ಹುಡುಗ.ಅವನಿಗೆ ಈ ಹುಡುಗ ಆ ಮನೆಯಲ್ಲಿ ಇರುವುದು ಸ್ವಲ್ಪವೂ ಇಷ್ಟ ಇರುವುದಿಲ್ಲ,ಆದ್ದರಿಂದ  ಒಂದು ರೀತಿಯ ಮಾನಸಿಕ ಹಿಂಸೆ ಕೊಡುತ್ತಿರುತ್ತಾನೆ.ಅದರ ಜೊತೆಗೆ ತನ್ನ ಮನೆಯಲ್ಲಿ ದುಡ್ಡಿನ ಕಷ್ಟ.ಡಿಗ್ರಿ ಮುಗಿದರೂ  ತನ್ನ ಖರ್ಚಿಗೆ ಮನೆಯಲ್ಲಿ ಇನ್ನೂ ದುಡ್ಡು ಕೇಳಬೇಕೆ? ಎಂಬ ಪ್ರಶ್ನೆ.ಈ ಕಾರಣದಿಂದ ತುಂಬಾ ನೊಂದ ಈ ಹುಡುಗ ಆದಷ್ಟು ಬೇಗ ಎಲ್ಲಾದರೂ ಸರಿ ಎಂತಾದರು ಸರಿ ಒಂದು ಕೆಲಸ ಹುಡುಕಿಕೊಳ್ಳಬೇಕು ಎಂದು ನಿರ್ಧಾರ ಮಾಡುತ್ತಾನೆ. ಆದರೆ ಅವನ ದುರಾದೃಷ್ಟ ಆ ಕಂಪೆನಿಯಲ್ಲಿ ಕೂಡ ಕೆಲಸ ಸಿಗುವುದಿಲ್ಲ.

ಸೂರ್ಯನ ಕಿರಣದಂತೆ ಮಿನುಗಬೇಕಾದಂತಹ ಈ "ಕಿರಣ " ಎಂಬ ಹುಡುಗ ಬಹಳ ಹತಾಶೆಗೊಳ್ಳುತ್ತಾನೆ.ಈ ಬೇಸರದಿಂದ ತನ್ನ ಊರಿನವರೆ ಆದ ತಮ್ಮ ಕುಟುಂಬದ  ಆಪ್ತರೊಬ್ಬರ ಆಫೀಸಿಗೆ ಹೋಗುತ್ತಾನೆ,ಅವರಿಗೆ ಈ ಹುಡುಗ ತುಂಬಾ ದಿನದಿಂದ ಕೆಲಸ ಹುಡುಕುತ್ತಿದ್ದ ವಿಷಯ ಗೊತ್ತಿದ್ದರಿಂದ,ಆ ಹುಡುಗನ ಮನೆಯ ಪರಿಸ್ಥಿತಿ ತಿಳಿದಿದ್ದರಿಂದ ಕಿರಣನನ್ನು ತಮ್ಮ ಆಫೀಸಿನ ಬಳಿಯ ಒಂದು ಹೋಟೆಲಿನಲ್ಲಿ ಕೆಲಸ ಕೊಡಿಸಿದರು.ಹೇಗೂ ಬೇರೆ ಯಾವುದಾದರು ಕಂಪೆನಿಯಲ್ಲಿ ಸಿಗುವವರೆಗೂ ಇಲ್ಲೇ ಇರು ,ಮನೆಯಲ್ಲಿ ದುಡ್ಡು ಕೇಳುವುದು ತಪ್ಪುತ್ತದೆ ,ನಿನಗೂ ಖರ್ಚಿಗೆ ಆಗುತ್ತೆ ಅಂತ ಹೇಳಿ ಈ ಹುಡುಗನನ್ನು ಆ ಹೋಟೆಲಿನ ಓನರ್ ಹತ್ತಿರ ಕರೆದುಕೊಂಡು ಹೋಗುತ್ತಾರೆ.ಅವರೂ ಕೂಡ ಇವರ ಮಾತಿಗೆ ಸಮ್ಮತಿಸಿ  ಆ ಹುಡುಗನಿಗೆ ತನ್ನ ಲಗೆಜನ್ನು ಮಾರನೆಯ ದಿನ ತಂದು ಕೆಲಸಕ್ಕೆ ಸೇರಿಕೊಳ್ಳಲು ಹೇಳಿ ಕಳುಹಿಸುತ್ತಾರೆ.

ಡಿಗ್ರಿ ಮುಗಿಸಿ ಹೋಟೆಲಿನಲ್ಲಿ ಕೆಲಸಕ್ಕೆ ಸೇರುವುದು ಅಷ್ಟೊಂದು ತರವಲ್ಲ ಎನಿಸಿತಾದರು ಒಲ್ಲದ ಮನಸಿನಿಂದ ಕೆಲಸಕ್ಕೆ ಬರಲು ಒಪ್ಪಿಕೊಂಡ ಕಿರಣನಿಗೆ ಮುಂದೇನು ಮಾಡುವುದು ಎಂದು ಬಹಳ ಕಾಡ ತೊಡಗಿತು.ಆದರು ಮಾರನೆಯ ದಿನ ತಾನು ಹೋಟೆಲಿನಲ್ಲಿ ಕೆಲಸಕ್ಕೆ ಸೇರುತ್ತಿದ್ದೇನೆ ಎಂಬ ವಿಷಯವನ್ನು ಯಾರಿಗೂ ತಿಳಿಸದೇ ,ತಾನು ಇದ್ದ ನೆಂಟರ ಮನೆಯಲ್ಲಿ ಊರಿಗೆ ಹೋಗುತ್ತಿರುವುದಾಗಿ ಸುಳ್ಳು ಹೇಳಿ ,ತನ್ನ ತಂದೆ ತಾಯಿಗೂ ಇದನ್ನು ಹೇಳದೆ ತನ್ನ ಪಾಲಿಗೆ ನರಕವಾದ  ಹೋಟೆಲ್ ಎಂಬ ಲೋಕಕ್ಕೆ ಬರುತ್ತಾನೆ.ತನ್ನ ಸ್ವಾಭಿಮಾನಕ್ಕೆ ದಕ್ಕೆ ಬರದಹಾಗೆ ಇರುತ್ತಾನೆ.

ಅಲ್ಲಿ ಅವ್ನ ಕೆಲಸ ಬಿಲ್ ಮಾಡುವುದು ಮತ್ತು ದಿನದ ಕೊನೆಯಲ್ಲಿ ಅದರ ಲೆಕ್ಕವನ್ನು ತೋರಿಸುವುದು. ಮೊದಲ ದಿನ ಆ ಬಿಲ್ಲಿಂಗ್ ಸಾಫ್ಟ್ವೇರ್ ಬಗ್ಗೆ ಅಲ್ಲಿದ್ದ ಒಬ್ಬ ವೇಟರ್ ಹತ್ತಿರ ತಿಳಿದುಕೊಂಡ ಈ ಕಿರಣನಿಗೆ ಏನೋ ಒಂದು ರೀತಿಯ ಚಂಚಲತೆ ಇನ್ನೂ ಕಾಡುತಿತ್ತು.ಒಂದೆರಡು ದಿನ ಹೀಗೆ ಬಿಲ್ಲಿಂಗ್ ಮಾಡುತ್ತಾ ರಾತ್ರಿ ಅದರ ಲೆಕ್ಕವನ್ನು ಅಚ್ಚುಕಟ್ಟಾಗಿ ತೋರಿಸುತ್ತಾನೆ.೨ ದಿನ ಆದರು ಮನೆಯಲ್ಲಿ ತಾನು ಹೋಟೆಲಿನಲ್ಲಿ ಕೆಲಸ ಮಾಡುತ್ತಿರುವ ವಿಷಯ ತಿಳಿಸಿಲ್ಲ.ಆತ್ಮ ವಂಚನೆ ಮಾಡುತ್ತಿದ್ದಿನೆಂಬ ಗೊಂದಲ ಮನಸಿನಲ್ಲಿ.ಹೀಗೆಲ್ಲ ಇರುವಾಗ ಆ ಹುಡುಗನಿಗೆ ನಿದ್ರೆ ಎಲ್ಲಿಂದ ಬರಬೇಕು.ಆಗೂ ಹೇಗೂ ಎರಡು ದಿನ ಕಳೆಯುತ್ತಾನೆ.
ನಂತರ ಶುರು ಆಯಿತು ಮ್ಯಾನೇಜರ್ ಮತ್ತು ಓನರ್ ನಿಂದ  ಕಿರಿಕಿರಿ.

"ನಿನ್ನದು ಬರಿ ಬಿಲ್ ಮಾಡುವುದಷ್ಟೇ ಕೆಲಸ ಅಲ್ಲ ,ಹೋಗಿ ಗಿರಾಕಿಗಳ ಹತ್ತಿರ ಏನೇನು ಬೇಕು ಅಂತ ಆರ್ಡರ್ ತಗೊಂಡು ವೇಟರ್ ಗೆ ನೀನೆ ಚೀಟಿ ಕೊಡಬೇಕು " ಅಂತ ದಬಾಯಿಸುವುದಕ್ಕೆ ಶುರು ಮಾಡುತ್ತಾರೆ. ಮೂರನೆ  ದಿನ ಸ್ವಲ್ಪ ಬದಲಾವಣೆ ಆಯಿತು ಅವನ ಕೆಲಸದಲ್ಲಿ,ಸ್ವಲ್ಪ ಜವಾಬ್ದಾರಿ ಹೆಚ್ಚಾಯಿತು.ಹಾಗೆ ಹಿಂಸೆಯೂ ಆಗುತಿತ್ತು ಆ  ಹುಡುಗನಿಗೆ.

ಇನ್ನೇನ್ ಮಾಡೋದು,ಗ್ರಹಚಾರ ಕೆಟ್ಟಾಗ ಇಂಥ ಪರಿಸ್ಥಿತಿ ಅನುಭವಿಸಬೇಕು ಅಂತ ಅದಕ್ಕೂ ಒಪ್ಪಿಕೊಂಡು ಆರ್ಡರ್ ತೆಗೆದುಕೊಳ್ಳಲು ಶುರು ಮಾಡುತ್ತಾನೆ ಅವನು .
***********************************************

ಈ ಕಿರಿಕಿರಿಯ ಒಂದೆರಡು ದಿನಗಳ ನಂತರ ಒಂದು ಭಾನುವಾರ  ಅಕಸ್ಮಾತ್ತಾಗಿ ತನ್ನ ಕಾಲೇಜಿನ ಇಬ್ಬರು ಗೆಳೆಯರು ಆ ಹೋಟೆಲ್ಲಿಗೆ ಕಾಫಿ ಕುಡಿಯಲು ಬರುತ್ತಾರೆ.ಅವರೂ ಕೂಡ ಈ ಹುಡುಗನ ಹಾಗೆ ಕೆಲಸ ಹುಡುಕಲು ಬೆಂಗಳೂರಿಗೆ ಬಂದು ಬೇರೆ ಕಡೆ ಕೆಲಸ ಮಾಡುತ್ತಿರುತ್ತಾರೆ.ಅವನ ಅದೃಷ್ಟಕ್ಕೆ ಆ ಸಮಯದಲ್ಲಿ ಅವನು ಕೌಂಟರ್ ಬಳಿ ಇರಲಿಲ್ಲ.

ಆ ಇಬ್ಬರು ಸ್ನೇಹಿತರು ಇವನನ್ನು ನೋಡಿದ್ದೇ ತಡ "ಏ ಏನ್ ಮಚ್ಚಾ, ಏನ್ ಇಲ್ಲಿ ?ಏನ್ ಸಮಾಚಾರ ?ಹೇಗಿದೆ ಜೀವನ ?"ಅಂತ ಮಾತಿಗಿಳಿಯುತ್ತಾರೆ.ಪಾಪ ಅವರಿದೆ ಏನ್ ಗೊತ್ತು ಇವನ ಸ್ಥಿತಿ.

ಆಗ ಕಿರಣನ ಮನಸಿನಲ್ಲಿ  ಆದಂತಹ ಗೊಂದಲ ಒಂದೆರಡಲ್ಲ.ಮೊದಲನೆಯದು ತಾನು ಇಲ್ಲಿ ಕೆಲಸ ಮಾಡುತ್ತಿರುವ ವಿಷಯ ಅವರಿಬ್ಬರಿಗೂ ತಿಳಿಯಕೂಡದು,ಕಾರಣ ತನ್ನ ವಿಧ್ಯಾಬ್ಯಾಸಕ್ಕೆ ತಕ್ಕ ಕೆಲಸ ಇದಲ್ಲ ಹಾಗು ಅವರ ಮುಂದೆ ತನಗೆ ಅವಮಾನ ಆಗಬಹುದೆಂಬ ಯೋಚನೆ.

ಎರಡನೆಯದು,ತಾನು ಇವರ ಜೊತೆ ಮಾತನಾಡುತ್ತ ನಿಂತಿರಬೇಕಾದರೆ ಯಾರಾದರು ಇವನನ್ನು ಕರೆದರೆ ಅವರಿಗೆ ಇವನ ಮೇಲೆ ಸಂದೇಹ ಬರುಬಹುದೆಂಬ ಕಸಿವಿಸಿ.

ಮೂರನೆಯದು,ಇವರಿಬ್ಬರನ್ನು ಆದಷ್ಟು ಬೇಗ ಕಳುಹಿಸಬೇಕು.
ಇಷ್ಟರ ನಡುವೆ ಅವನು ಅವರಿಬ್ಬರಿಗೆ "ಇಲ್ಲೇ ಪಕ್ಕದಲ್ಲೇ ನನ್ನ ನೆಂಟರೊಬ್ಬರ ಆಫೀಸ್ ಇದೆ.ಅವರನ್ನ ಮೀಟ್ ಮಾಡೋಕ್ಕೆ ಬಂದಿದ್ದೆ.ಹಾಗೆ ಕಾಫಿ ಕುಡಿಯಕ್ಕೆ ಬಂದಿದ್ದೆ "ಅಂತ ಸಮಜಾಯಿಸಿ ನೀಡಿ,ಮೂರು ಜನ ಒಂದು ಟೇಬಲಿನಲ್ಲಿ ಕೂರುತ್ತಾರೆ.

ಬಂದಿರುವ ಗಿರಾಕಿಗಳ ಹತ್ತಿರ ತಾನು ಆರ್ಡರ್ ತಗೋಬೇಕಿತ್ತು,ಆದರೆ ತಾನೇ ದೊಡ್ಡ ಗಿರಾಕಿಯ ಥರಾ ತನ್ನ ಸ್ನೇಹಿತರ ಜೊತೆ ಕೂತಿದ್ದಾನೆ ಅವನು .ನಂತರ ಅಲ್ಲಿದ್ದ ಒಬ್ಬ ವೇಟರ್ ಬಂದು ಕಕ್ಕಾಬಿಕ್ಕಿಯಾಗಿ ನೋಡತೋಡಗುತ್ತಾನೆ .ಅದೇ ಸಮಯದಲ್ಲಿ ಕಿರಣ ಅವರಿಬ್ಬರಿಗೂ ಗೊತ್ತಾಗದ ಹಾಗೆ ಆ ವೇಟರ್ ಗೆ ಕಣ್ಣಿನಲ್ಲಿ ಸಂಜ್ಞೆ ಮಾಡಿ ,ಸ್ವಲ್ಪ ಹೊತ್ತು ಸುಮ್ಮನಿರುವಂತೆ ಹೇಳಿದ್ದಾಗ,ಆ ವೇಟರ್ ಕೂಡ ಅವರಿಬ್ಬರಿಗೂ ಗೊತ್ತಾಗದ ಹಾಗೆ ಒಪ್ಪಿಕೊಳ್ಳುತ್ತಾನೆ. ತನ್ನ ಗೆಳೆಯರು ಆರ್ಡರ್ ಮಾಡಿದ ಕಾಫಿ ಮತ್ತು ತಾನು ತೆಗೆಯಬೇಕಿದ್ದ  ಅದರ ಬಿಲ್ಲನ್ನು ಆ ವೇಟರ್ ತಂದು ಕೊಡುತ್ತಾನೆ.

ಅದರ ಜೊತೆಗೆ ಇವನು ಅವರಿಬ್ಬರ ಸಂಗಡ ಅದು ಇದು ವಿಷಯ ಮಾತಾಡುತ್ತಾನೆ,ಆದಾರು ಮನಸಿನಲ್ಲಿ ಹೆದರಿಕೆ ,"ಎಲ್ಲಿ ಮ್ಯಾನೇಜರ್ ಅಥವಾ ಓನರ್  ಬಂದು ತಾನು ಇಲ್ಲಿ ಕೂತಿರುವುದನ್ನು ನೋಡುತ್ತಾರೋ ?"ಎಂಬ ಗುಮಾನಿ.ಆ  ವೇಟರ್ ಗೆ ಬೇಕಾದರೆ ಹೇಗೋ ಇವರು ತನ್ನ ಸ್ನೇಹಿತರು ಅಂತ ಹೇಳಿ ಸಮಾಧನ ಮಾಡಿದ್ದಾಗಿದೆ,ಇವನ ಕಡೆ ಇಂದ ಏನೂ ತೊಂದರೆ ಇಲ್ಲ ಎಂಬ ಸಮಾಧಾನ.

ಸ್ವಲ್ಪ ಸಮಯದ ನಂತರ ಅವರಿಬ್ಬರೂ ಹೊರಟು ಹೋಗುತ್ತಾರೆ. ಹೇಗೋ ಅವರಿಬ್ಬರಿಗೂ ತಾನು ಇಲ್ಲಿ ಕೆಲಸ ಮಾಡುತ್ತಿರುವ ಸಂದೇಹ ಬರಲಿಲ್ಲ ಎಂಬ ಸಮಾಧಾನದಿಂದ ಇದ್ದರೆ,ಆ ಮ್ಯಾನೇಜರ್ ಮತ್ತು ಓನರ್ ಇಬ್ಬರೂ ಬಂದು ಆ  ಹುಡುಗನ ಮೇಲೆ ರೇಗಾಡುತ್ತಾರೆ.

"ನೆಟ್ಟಗೆ ಕೆಲಸ ಮಾಡೋದು ಬಿಟ್ಟು, ಫ್ರೆಂಡ್ಸ್ ಗಳ ಜೊತೆ ಹರಟೆ ಹೊಡಿತಾ ಕೂರ್ತಿಯ? ಎಷ್ಟೊತ್ತು ಮಾತಾಡೋದು  ?ಸ್ವಲ್ಪ ಹೊತ್ತು ಮಾತಾಡಿ ಕಳಿಸ್ತಾರೆ ,ಅದೂ ಬಿಟ್ಟು ಇಷ್ಟೊತ್ತ  ಮಾತಾಡೋದು ?ಅದೂ ಕೆಲಸ ಬಿಟ್ಟು "
******************************************
ಸದ್ಯ ತನ್ನ ಸ್ನೇಹಿತರ ಮುಂದೆ ಈ ಮಾತುಗಳನ್ನು ಹೇಳಲಿಲ್ಲವಲ್ಲ ಅಂತ ಸಮಾಧಾನದಿಂದ ಒಂದು ಕಡೆ ಆದ್ರೆ ,ತನಗೇನು ಬಂದಿದೆ,ಇವರ ಹತ್ತಿರ ಈ ರೀತಿ ಅನ್ನಿಸಿಕೊಳ್ಳಬೇಕು ಅಂತ  ಬೇಜಾರು ಆದರೂ ಕೂಡ ಅದನ್ನು ಸಹಿಸಿಕೊಂಡು ಸುಮ್ಮನಿರುತ್ತಾನೆ. ಇನ್ನೂ ಏನೇನು ಅನುಭವಿಸಬೇಕು ಈ ಜನರ ನಡುವೆ ಅಂತ ಚಿಂತಿಸುತ್ತಾ ಆ ದಿನವನ್ನು ಹೇಗೋ ಕಳೆದು ಮಲಗಲು ಹೋಗುತ್ತಾನೆ.ಆದ್ರೆ ನಿದ್ರಾ ದೇವಿ ಒಲಿಯುವುದೇ ಇಲ್ಲ.ಮಲೆನಾಡಿನ ಹಚ್ಚ ಹಸಿರಿನ ನಡುವೆ ಬೆಳೆದ  ಸೂರ್ಯ ರಶ್ಮಿಯಂತೆ ಹೊಳೆಯಬೇಕಾದ ಈ ಕಿರಣನ ಜೀವನದಲ್ಲಿ ಕಪ್ಪು ಕಗ್ಗತ್ತಲು ಆವರಿಸಿದಂತೆ ಭಾಸವಾಯಿತು ಅವನಿಗೆ.   ಇಷ್ಟರ ನಡುವೆ ತನಗೆ ಇಂಥ ಜೀವನ ಬೇಡವೇ ಬೇಡ ಎಂದು ಆತ್ಮಹತ್ಯೆ ಮಾಡಲು ನಿರ್ಧಾರ ಮಾಡುತ್ತಾನೆ..ಆ  ಯುವಕ.ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ.ತಟ್ಟನೆ ತಾನು ಹೋಟೆಲಿನಲ್ಲಿ ಇರುವ ವಿಷಯವನ್ನು ತನ್ನ ತಾಯಿಗೆ ಹೇಳಲು ತಿಳಿಸಲು ಯೋಚಿಸಿ ತನ್ನ ಮನೆಗೆ ಫೋನ್ ಮಾಡಲು ತನ್ನ ಮೊಬೈಲನ್ನು ತೆಗೆದುಕೊಂಡು ನೋಡಿದಾಗ ಸಮಯ ಮಧ್ಯ ರಾತ್ರಿ ೨ ಗಂಟೆ . ಇಷ್ಟೊತ್ತಿನಲ್ಲಿ ಫೋನ್ ಮಾಡಿದರೆ ತನ್ನ ತಂದೆ ತಾಯಿ ಗಾಬರಿಗೊಳ್ಳುತ್ತಾರೆ ಎಂದು ಸುಮ್ಮನಾಗಿ ಸುಮ್ಮನೆ ನಿದ್ದೆ ಮಾಡದೆ  ಹಾಗೆ ಏನೇನೋ ಯೋಚಿಸುತ್ತ  ಕೂರುತ್ತಾನೆ.
****************************************
ಅಲ್ಲಿಗೆ ಬಂದು ಒಂದು ವಾರ ಕೆಳೆದಿದೆಯಷ್ಟೇ ನನಗೆ ಈ ರೀತಿ ಬೇಸರವಾಗಿರಬೇಕಾದರೆ ಇಲ್ಲಿ ಇರುವ ಬೇರೆ ಕೆಲಸಗಾರರು ಹೇಗೆ ಜೀವನ ಮಾಡುತ್ತಿರಬೇಕು ಎಂದು ಯೋಚಿಸುತ್ತ ಅಳುತ್ತ ಕೂತಿದ್ದಾನೆ.ಆದರೂ ಅವನ ಬಗ್ಗೆ ವಿಚಾರಿಸಲು ಅಲ್ಲಿ ತನ್ನವರು ಯಾರು ಅಂತ ಇದ್ದಾರೆ.ತನ್ನ ಕಷ್ಟ ಹೇಳಿಕೊಳ್ಳಲು ಯಾರು ಇಲ್ಲ.ತನ್ನ  ಸ್ನೇಹಿತರಿಗೆ  ತಾನು ತನ್ನ ನೆಂಟರ ಮನೆಯಲ್ಲಿ ಇರುವುದಾಗಿ ,ತನ್ನ ಮನೆಯವರಿಗೆ ತಾನು ತನ್ನ ಸ್ನೇಹಿತರ ಜೊತೆ ಇರುವುದಾಗಿ ಹೇಳಿಕೊಂಡು ತನ್ನ ಮೇಲೆ ಬೇಸರ ಪಟ್ಟುಕೊಂಡು ಕೂತಿರುತ್ತಾನೆ.ತಾನು ತನ್ನ ತಂದೆ  ತಾಯಿಗೆ ಈ ವಿಷಯವನ್ನು ಹೇಳದೆ ಮೋಸ ಮಾಡುತಿದ್ದೆನೆಂಬ ಯೋಚನೆ.

ಇಷ್ಟೆಲ್ಲಾ ಯೋಚಿಸುತ್ತ ಕುತಿರಬೇಕಾದರೆ ಆಗಲೇ ಸೂರ್ಯೋದಯ ಆಗಿತ್ತು.ಇನ್ನೇನು ೧೧ ಗಂಟೆಗೆ ಮತ್ತೆ ಕೆಲ್ಸಕ್ಕೆ ಹೋಗಬೇಕು ಅಂತ ಯೋಚಿಸುತ್ತ ತನ್ನ ತಾಯಿಗೆ ಫೋನ್ ಮಾಡಿ ಮಾತಾಡದೆ ಸುಮ್ಮನೆ ಅಳುತ್ತಿದ್ದಾನೆ, ಅತ್ತ ಹೆತ್ತ  ಕರುಳಿಗೆ ತನ್ನ ಮಗ ಬೆಳಗ್ಗೆ ಬೆಳಗ್ಗೆ ಫೋನ್ ಮಾಡಿ ಅಳುತ್ತಿರುವುದನ್ನು ನೋಡಿ ಸಂಕಟ ಆಗುತ್ತಿದೆ.ಅವನ ತಾಯಿಯ ಗೋಳು ನೋಡಿ ಅವನ ತಂದೆ ಮಾತಾಡಲು ಬಯಸಿ ಫೋನ್ ತೆಗೆದುಕೊಂಡರೆ ಇನ್ನೂ ಅಳುತ್ತಿದ್ದಾನೆ.ಆ ತಂದೆಗೂ ಕೂಡ ತಮ್ಮ ಒಬ್ಬನೇ ಮಗ ಹೀಗೆ ಅಳುತ್ತಿರುವುದಕ್ಕೆ ಕಾರಣ ಗೊತ್ತಿಲ್ಲದೇ ಅವರೂ ಯೋಚನಾ ಮಗ್ಧರಾಗುತ್ತಾರೆ.ವಿಷಯ ಗೊತ್ತಿಲ್ಲದೇ ಏನು ಅಂತ ಸಮಾಧಾನ ಮಾಡುವುದು ಎಂದು ಅವರಿಗೂ ಗೊತ್ತಿಲ್ಲದೇ ಸುಮ್ಮನಿರುತ್ತಾರೆ.
ನಂತರ ಆ ಹುಡುಗ ಆವರನ್ನು ನೋಡಬೇಕು ಅಂತ ಅನ್ನಿಸುತ್ತಿದೆ ಅಂತ ಹೇಳಿ ಮತ್ತೆ ಸತ್ಯವನ್ನು ಮುಚ್ಚಿಡುತ್ತಾನೆ.ಈ ಸುಳ್ಳಿನಿಂದ ಇಷ್ಟೇ ಸಮಸ್ಯೆ ಎಂಬ ಸುಳ್ಳು ನಂಬಿಕೆಯಿಂದ ಅವನ ಹೆತ್ತವರು ಸಮಾಧಾನಗೊಳ್ಳುತ್ತಾರೆ.

************************************
ನಂತರ ಮತ್ತೆ ಶುರು ಆಗುತ್ತದೆ ಅವನಿಗೆ ಕಿರಿಕಿರಿ.ಹೀಗೆ ಒಂದೆರಡು ದಿನ ಕಳೆದ ಮೇಲೆ ಅವನಿಗೆ ಪರಿಚಯದ ಹುಡುಗಿಯೊಬ್ಬಳು ಹೋಟೆಲ್ಲಿಗೆ ತನ್ನ ಸ್ನೇಹಿತರೊಡನೆ ಬರುತ್ತಾಳೆ.ಮತ್ತಷ್ಟು ಕಕ್ಕಾಬಿಕ್ಕಿಯಾದ ಇವನು ಏನು ಮಾಡಲು ತೋಚದೆ ಆ ಕಡೆ ಈ ಕಡೆ ಹೊದಾದಳು ಶುರು ಮಾಡುತ್ತಾನೆ.ಇವನನ್ನು ಗಮನಿಸಿದ ಆ ಹುಡುಗಿ ಇವನನ್ನು ಮಾತಾಡಿಸಿದಾಗ ಹೀಗೆ ಕಾಫಿ ಕುಡಿಯಲು ಬಂದಿದ್ದಾಗಿಯೂ,ತಾನು ಬೇರೆಡೆಗೆ ಹೋಗಬೇಕೆಂದು ಹೇಳಿ ತಾನು ಮಲಗುತ್ತಿದ್ದ ಕೋಣೆಗೆ ಹೋಗುತ್ತಾನೆ.
ಇದನ್ನು ಗಮನಿಸಿದ ಹೋಟೆಲಿನಲ್ಲಿ  ಬಹಳ ದಿನದಿಂದ ಅಲ್ಲಿ ಕೆಲಸಮಾಡುತ್ತಿದ್ದ ಕುಳ್ಳ ಕೇಶವ ಅವನಲ್ಲಿಗೆ ಬಂದು "ಕೆಲಸ ಮಾಡೋದು ಬಿಟ್ಟು ಆರಾಮಾಗಿ ಇಲ್ಲಿ ಬಂದು ಕೂತಿದ್ಡಿಯ " ಅಂತ ರೇಗಾಡುತ್ತಾನೆ.
"ಗಿರಾಕಿಗಳು ಜಾಸ್ತಿ ಇರಲಿಲ್ಲವಲ್ಲ,ಹಾಗೆ ತಲೆ ನೋಯುತ್ತಿತ್ತು,ಅದಕ್ಕೆ ಬಂದೆ ಅಷ್ಟೇ "ಅಂತ ಸಮಾಧಾನದಿಂದ ,ತಲೆ ತಗ್ಗಿಸಿಕೊಂಡು ಏನೋ ತಪ್ಪು ಮಾಡಿರುವನ ತರ ಹೇಳುತ್ತಾನೆ.
ಅವನ ಮೆದು ಧ್ವನಿಯನ್ನು,ಅವನ ಗಂಭೀರತೆಯನ್ನು ಉಪಯೋಗಿಸಿಕೊಂಡ ಕೇಶವ ಸುಮ್ಮನೆ ವಿನಾ ಕಾರಣ ಅವನ ಮೇಲೆ ರೇಗುತ್ತಾನೆ.ಇದು ಒಂದು ರೀತಿಯಲ್ಲಿ ತಾನು ಇಲ್ಲಿ ದೊಡ್ಡ ಮನುಷ್ಯ ಎಂದು ತೋರುವ ಹಾಗಿತ್ತು.
ಕೊನೆಗೆ "ಏನೂ ಕೆಲಸ ಇಲ್ಲ ಅಂದ್ರೆ ಆ ಸ್ವೀಟ್ ಶೋ ಕೇಸ್ ಧೂಳು ಹಿಡಿದಿದೆ ,ಅದನ್ನ ಒರಸು ಹೋಗು "ಅಂತ ಹೇಳಿ ಹೋಗುತ್ತಾನೆ.
"ಸರಿ ಸ್ವಲ್ಪ ಹೊತ್ತು ಬಿಟ್ಟು ಹೋಗುತ್ತೀನಿ "ಅಂತ ಗೊಣಗುತ್ತಾನೆ ಕಿರಣ.
ಆ ಹುಡುಗಿಯರು ಹೋಗಿರಬಹುದು ಎಂಬ ನಿರೀಕ್ಷೆಯೊಂದಿಗೆ ಸ್ವಲ್ಪ ಸಮಯ ಬಿಟ್ಟು ತನ್ನ ಕೆಲಸದ ಜಾಗಕ್ಕೆ ಬರುತ್ತಾನೆ.ಸದ್ಯ ಅವರೂ ಹೊರಟು ಹೋಗಿರುವುದನ್ನು ಗಮನಿಸಿ ಸ್ವಲ್ಪ ಸಮಾಧಾನ ಗೊಳ್ಳುತ್ತಾನೆ.ನಂತರ ಅವನು ವಹಿಸಿದ್ದ ಕೆಲಸ ಮುಗಿಸಿ ಅವನಿಗೆ ತೋರಿಸುತ್ತಾನೆ.
*********************************
ಇನ್ನೊಂದು ದಿನ ಒಬ್ಬ ದಡೂತಿ ಮನುಷ್ಯ ಇನ್ನೊಬ್ಬ ಹೆಂಗಸಿನ ಜೊತೆ ಬಂದು ಕೂರುತ್ತಾನೆ.ಆವರನ್ನು ಗಮನಿಸಿದ ವೇಟರ್ ಒಬ್ಬ "ಈ ವಯ್ಯ ಒಂದೊಂದ್ ದಿನ ಒಂದೊಂದ್ ಹುಡುಗಿ ಜೊತೆ ಬರ್ತಾನಪ್ಪ  "ಅಂದ.
ಆಗ ಇನ್ನೊಬ್ಬ ವೇಟರ್ "ಲೇ ಅವನು ಎಷ್ಟ್ ಜನದ ಜೊತೆ ಬಂದ್ರೆ ನಿನಗೆನ್ ಕಷ್ಟ ,ಸುಮ್ನೆ ಹೋಗಿ ಕೆಲಸ ನೋಡು "ಅಂತ ಆ ವೇಟರ್ ಗೆ ಹೇಳುತ್ತಾನೆ.
ಇವನು ತನ್ನ ಮಾಮೂಲಿ ಕೆಲಸದಂತೆ ಅವರ ಬಳಿ ಹೋಗಿ ಆರ್ಡರ್ ತೆಗೆದುಕೊಂಡು ಬರುತ್ತಾನೆ.ಆ ಹುಡುಗನ  ದುರದೃಷ್ಟ ಅವನು ಆರ್ಡರ್ ಮಾಡಿದವುಗಳನ್ನು ವೇಟರ್ ಸ್ವಲ್ಪ ಲೇಟಾಗಿ ತರುತ್ತಾನೆ.ಇದಕ್ಕೆ ಕೋಪಗೊಂಡ ಆ ದಡೂತಿ "ಲೇ ***ಮಗನೆ ಎಷ್ಟ್ ಹೊತ್ತು ಕಾಯಬೇಕು ಇಲ್ಲಿ "ಅಂತ ಪಾಪದ ಹುಡುಗನ  ಕೊರಳ ಪಟ್ಟಿಗೆ ಕೈ ಹಾಕಿ ಹರಿಹಾಯುತ್ತಾನೆ.ಆಗ ಆ ಹುಡುಗ "ಸರ್ ನಾನೇನು ಮಾಡ್ಲಿ,ಸ್ವಲ್ಪ ಹೊತ್ತು ಇರ್ರಿ ,ತರುತ್ತಾರೆ "ಅಂತ ಹೇಳಿದ್ರು ,ಅವನು ಇನ್ನೂ ಕೈಯನ್ನು ಅವನ ಶರ್ಟ್ ಇಂದ ತೆಗೆದಿರುವುದಿಲ್ಲ.
ಅಷ್ಟೊತ್ತಿಗೆ ಅಲ್ಲಿದ್ದ ಎಲ್ಲಾ ವೇಟರ್ ಗಳು ಬಂದು ಅವನನ್ನು ಬಿಡಿಸುತ್ತಾರೆ.
ಆದರೂ ತನ್ನ ದರ್ಪವನ್ನು ಬಿಟ್ಟಿರಲಿಲ್ಲ  ಆ ದಡೂತಿ ದೇಹದವನು.
ಆಗ ಸಭ್ಯ ಹುಡುಗ "ಸರ್ ,ನಮಗೂ ಸ್ವಾಬಿಮನ ಅನ್ನೋದು ಇದೆ,ಸ್ವಲ್ಪ ಮಾತಾಡಬೇಕಾದರೆ ನಾಲಗೆ ಹಿಡಿತದಲ್ಲಿರಲಿ" ಅಂತ ಹೇಳುತ್ತಾನೆ.
ಇನ್ನಷ್ಟು ಕೋಪಗೊಂಡ ಅವನು "ನೀನ್ ಯಾವನೋ ಅದನ್ನ ಹೇಳಕ್ಕೆ?"ಅಂತ ಹೇಳಿ ಮತ್ತೆ ಅವನ ಮೇಲೆ ಕೈ ಮಾಡುತ್ತಾನೆ.
ಕೋಪಗೊಂಡ ಆ ಹುಡುಗ  "ನನ್ ಮಗನೆ ನಿನ್ನ ವಯಸ್ಸಿಗೆ ಮರ್ಯಾದೆ ಕೊಟ್ಟು ಸುಮ್ಮನಿದ್ದೆ "ಅಂತ ಹೇಳಿ ತನ್ನ ಕೈ ಮುಷ್ಠಿ ಗಟ್ಟಿಗೊಳಿಸಿ ಅವನ ಮುಖಕ್ಕೆ ಒಡೆಯುತ್ತಾನೆ.
ಅಷ್ಟೊತ್ತಿಗೆ ಅಲ್ಲಿಗೆ ಬಂದ ಓನರ್ ಏನು ಮಾತಾಡದೆ ಸುಮ್ಮನಿರುತ್ತಾನೆ. ಅವನ ವಿರುದ್ಧ ಮಾತಾಡಿದರೆ ಗಿರಾಕಿ ಕಳೆದುಕೊಳ್ಳುತ್ತೀನಿ ಎಂಬ ಭಯ,ಆದರೆ ಕೊನೆಗ ಓನರ್ ಕೂಡ ಈ ಹುಡುಗನಿಗೆ "ಗಿರಾಕಿಗಳ  ಜೊತೆ ಹೇಗೆ  ಇರಬೇಕು ಅಂತ ಗೊತ್ತಾಗಲ್ವ ನಿಂಗೆ "ಅಂತ ಬೈಯುತ್ತಾನೆ.
"ಅವನೇ ನೆಟ್ಟಗೆ ಮಾತಾಡಿದ್ರೆ ನಾನ್ಯಾಕೆ ಅವನ ಜೊತೆ ಈ ಥರ ಮಾತಾಡಲಿ "ಅಂತ ಸಮರ್ಥಿಸಿಕೊಂದರೂ ಇವನದೇ ತಪ್ಪು ಎಂಬ ರೀತಿಯಲ್ಲಿ ಮಾತಾಡುತ್ತಾರೆ.
ಇದರಿಂದ ಬೇಸರಗೊಂಡ ಈ ಹುಡುಗ ಮತ್ತೆ ತನ್ನ ಕೊನೆಗೇ ಹೋಗಿ ಅಳುತ್ತ ಮಲಗುತ್ತಾನೆ.ಮತ್ತೆ ಅದೇ ಯೋಚನೆಗಳು,ಆತ್ಮ ವಂಚನೆ ಮಾಡುತ್ತಿದ್ದಿನೆಂಬ ಭ್ರಮೆ.ತಂದೆ ತಾಯಿಗೆ  ಮೋಸ ಮಾಡುತ್ತಿದ್ದಿನೆಂಬ ಆತಂಕ.ಕೊನೆಗೂ ತಾನು ಇಲ್ಲಿ ಇರುವುದು ಸರಿ ಇಲ್ಲ ಎಂದು ಮಾರನೆಯೇ ದಿನ ಬೆಳಗ್ಗೆ ಅಲ್ಲಿಂದ ಹೊರಡಲು ತೀರ್ಮಾನಿಸುತ್ತಾನೆ.ಆದರೆ ಎಲ್ಲಿಗೆ ಎಂಬುದು ಇನ್ನೂ ನಿಶ್ಚಯವಾಗಿಲ್ಲ.
 ************************************
ಬೆಳಗ್ಗೆ ಎದ್ದವನೇ,ಇನ್ನೂ ಯಾವ ಕೆಲಸಗಾರರು ಎದ್ದಿಲ್ಲದಿರುವುದನ್ನು ಪರೀಕ್ಷಿಸಿ ತನ್ನ ಲಗೇಜನ್ನು ಎತ್ತಿ ಕೊಂಡು ಹೊರಡುತ್ತಾನೆ.ಕೊನೆಗೇ ಮನೆಗೆ ವಾಪಸ್ಸು ಹೋಗುವುದು ಒಳ್ಳೆಯದು ಎಂದು ಮನೆಗೆ ಹೋಗುತ್ತಾನೆ.

     

Monday, February 7, 2011

ಬೇಜವಾಬ್ದಾರಿತನದ ಪರಾಕಾಷ್ಠೆ


ಕೆಲವು ದಿನಗಳ ಹಿಂದೆ ನಡೆದತಂತಹ ಸನ್ನಿವೇಶ .
ಬಿಸಿ ಬಿಸಿ ಮುದ್ದೆ ,ಸೊಪ್ಪಿನ ಸಾರು ,ಅನ್ನ  ಉಂಡು ನನ್ನ ರೂಮಿನ ಕಡೆ ಹೋಗುತ್ತಿದಾಗ ಸಮಯ ಸುಮಾರು ೯.೩೦.ಸ್ವಲ್ಪ ಚಳಿ ಇತ್ತಾದರೂ ಬೀಸುತ್ತಿದ್ದ ತಂಗಾಳಿ ಬಹಳ ಮುದ ನೀಡುತ್ತಿತ್ತು .ಆದರೆ ಮನಸ್ಸು ಮಾತ್ರ ಬಹಳ ಚಂಚಲತೆಯಿಂದ ಕೂಡಿತ್ತು .ಬೆಳಗ್ಗೆ ಎದ್ದು ಏನು ಮಾಡುವುದು ? ನಾಳೆಯಾದರು ಏನಾದ್ರು ಒಳ್ಳೆ ಕೆಲಸ ಆಗುತ್ತಾ? ಹೀಗೆ ಹತ್ತು ಹಲವಾರು ಯೋಚನೆಗಳೊಂದಿಗೆ ,ಮರು ದಿನಕ್ಕೆ ಯೋಜನೆಗಳನ್ನು ಹಾಕುತ್ತಿದ್ದ ವೇಳೆಗೆ ನಮ್ಮ ರೂಮಿನ ಹತ್ತಿರದ ಕ್ರಾಸ್ ಬಳಿ ಬಂದಿದ್ದೆ.


ಆ ಕ್ರಾಸ್ ಬಳಿ ಇದ್ದ ಗಣಪನಿಗೊಂದು ಸಲಾಂ ಹಾಕಿ ಆ ತಿರುವಿನಲ್ಲಿ ತಿರುಗಿದ್ದೇ ಕ್ಷಣ ಹತ್ತಾರು ಹೆಂಗಸರು ಮತ್ತು ಆಗೊಂದು ಈಗೊಂದು ಗಂಡಸರ ಧ್ವನಿ ಯಲ್ಲಿ ಕೂಗಾಟ ಕೇಳುತ್ತಿತ್ತು .


ಒಹ್, ನಮ್ಮ ಬೀದಿಯಲ್ಲಿ  ಯಾರದೋ ಮನೆಯಲ್ಲಿ ಏನೋ ಆಗಿರಬೇಕು ಅಂದು ಕೊಳ್ಳುತ್ತಾ ,ಯಾರಿಗದ್ರು ಏನಾದ್ರು ಆಯ್ತಾ ಅಂತ ಯೋಚಿಸುತ್ತ ಮುಂದೆ ಬಂದು ನೋಡಿದ್ರೆ ಅಷ್ಟೂ ಜನ ನಮ್ಮ ಬಿಲ್ಡಿಂಗಿನ ಮುಂದೆಯೇ ನಿಂತಿದ್ದಾರೆ.


ನಮ್ಮ ಬಿಲ್ದಿಂಗಿನಲ್ಲೇ ಏನೋ ಅಚಾತುರ್ಯ ನಡೆದಿದೆ ಅಂತ ಯೋಚಿಸುವಷ್ಟರಲ್ಲೇ  ಯಾರೋ ಒಬ್ಬ ಹೆಂಗಸು "ಎಲ್ಲಪ್ಪಾ,ನಿಮ್ಮಮ್ಮ ಇನ್ನೂ ಬಂದಿಲ್ವಾ ,ಬೇಗ ಹೋಗಿ ಕರ್ಕೊಂಡು ಬಾ " ಅಂತ ನಮ್ಮ ಪಕ್ಕದ ಮನೆಯ ಹುಡುಗನಿಗೆ ಹೇಳಿದ್ರು.
"ಫೋನ್ ಮಾಡಿದಿನಿ ,ಬರ್ತಾ ಇದಾರಂತೆ" ಅಂತ ಸ್ವಲ್ಪ ಮೆದು ಧ್ವನಿ ಯಲ್ಲಿ ಹೇಳಿದ .
ನೋಡಿದ್ರೆ ನಮ್ಮ ಅಕ್ಕ ಪಕ್ಕ ,ಎದುರು ,ಮೇಲೆ ಕೆಳಗಡೆ ಎಲ್ಲ ಮನೆಯ ಹೆಂಗಸರು ಗಂಡಸರುಗಳು ಅಲ್ಲಿ ಜಮಾಯಿಸದ್ದರು,ಏನೋ ಸರ್ಕಸ್ ನಡೀತಿದೆ ಅನ್ನುವ ಥರಾ.
ಈ ನಮ್ಮ ಪಕ್ಕದ ಮನೆಯ ಪುಣ್ಯಾತ್ಮರು ಈ ಮನೆಗೆ ಬಂದು ೨ ತಿಂಗಳು ಆಗಿದೆ ,ಆದರೆ ಮನೆ ಮುಂದೆ ಒಂದು ದಿನ ಕೂಡ ಕಸ ಗುಡಿಸಿದ್ದನ್ನು ನಾನು ನೋಡೇ ಇಲ್ಲ .ಮನೆ ಕ್ಲೀನ್ ಆಗಿ ಇಟ್ಕೊಳ್ಳಿ ಅಂತ ಪಾಪ ಓನರ್ ಅದೆಷ್ಟು ಸಾರಿ ಹೇಳಿದ್ದಾರೋ ಗೊತ್ತಿಲ್ಲ .


ಇವ್ರು ಏನೋ ಕಿತಾಪತಿ ಮಾಡಿದ್ದಾರೆ ಅಂತ ಯೋಚಿಸುವಷ್ಟರಲ್ಲೇ ,ನಮ್ಮ ಓನರ್ ಸಾಹೇಬರು ಅವನ ಮುಂದೆ ಬಂದು ೨ ಕೈಗಳನ್ನು ಜೋಡಿಸಿ ನಮಸ್ಕರಿಸಿ "ನೋಡಪ್ಪ ,ಬೆಳಗ್ಗೆ ಎದ್ದ ಕೂಡಲೇ ನಿಮ್ಮ ಅಡ್ವಾನ್ಸ್ ದುಡ್ಡು ಕೊಡ್ತೀನಿ ,ದಯವಿಟ್ಟು ಮನೆ ಖಾಲಿ ಮಾಡ್ರಪ್ಪ " ಅಂತ ತಮ್ಮ ಮಗನಿಗಿಂತ ಚಿಕ್ಕ ವಯಸ್ಸಿನ ಆ ಹುಡುಗನಿಗೆ ಹೇಳಿದ್ರು .
ಮೊದಲೇ ವಿಳ ವಿಳ ಒದ್ದಾಡುತಿದ್ದ ನನ್ನ ಮನಸ್ಸಿನಲ್ಲಿ .ಇಲ್ಲಿ ಏನು ನಡೀತಿದೆ ಎಂದು ಊಯಿಸುವುದು ಸ್ವಲ್ಪ ಕಷ್ಟ ಆಯ್ತು.ಆಗ ತಕ್ಷಣ ನಮ್ಮೆ ಓನರ್ ನ ಮಗನನ್ನು "ಅಣ್ಣ, ಏನಾಯಿತು ?" ಅಂತ ಕೇಳಿದೆ .
ನಮ್ಮ ಪಕ್ಕದ ಮನೆಯ ಕಡೆ ಬೆಟ್ಟು ಮಡಿ ತೋರಿಸಿ "ಆ ಮನೆಯವರು ಸಾಂಬಾರನ್ನು stove  ಮೇಲೆ ಬಿಸಿ ಮಾಡಕ್ಕೆ ಇಟ್ಟು,ಬೀಗ ಹಾಕಿಕೊಂಡು ಎಲ್ಲೋ ಹೋಗಿದ್ದಾರೆ .ಈಗ ಆ ಸಾರು ಉಕ್ಕಿ stove  ಆಫ್  ಆಗಿ ಗ್ಯಾಸ್ ಲೀಕ್ ಆಗಿದೆ .ಇಷ್ಟೊತ್ತು ತುಂಬಾ ವಾಸನೆ ಬರ್ತಿತ್ತು " ಅಂತ ಬಹಳ ಯೋಚನಾ ಮಗ್ಧರಾಗಿ ಹೇಳುತ್ತಿದ್ದವರನ್ನು ನಿಲ್ಲಿಸಿ "ಮತ್ತೆ ಈಗ ಏನ್ ಕಥೆ ?" ಅಂತ ಕೇಳ್ದೆ .


"ಅಯ್ಯೋ ಅದೊಂದ್ ದೊಡ್ಡ ಕಥೆ .ಅವರ ಅಡುಗೆ ಮನೆಯ ಕಿಡಕಿ ಹೊಡೆದು ಹಾಕಿ ,ಗ್ಯಾಸ್ ಆಫ್   ಮಾಡಿದ್ದಾಯ್ತು ". "ಇವನೇ ಆಫ್ ಮಾಡಿದ್ದು" ಅಂತ ನಮ್ಮ ಕೆಳಗಡೆ ಮನೆಯ ಹುಡುಗನ ಕಡೆ ತೋರಿಸಿದರು .


ಅದೇ ಸಮಯದಲ್ಲಿ ಇನ್ನೊಬ್ಬ ಹೆಂಗಸು "ಹೇಗ್ ಆಫ್   ಮಾಡಿದ್ಯೋ ?" ಅಂತ ಅವನನ್ನು ಪ್ರಶ್ನಿಸುತ್ತಾರೆ .
"ಆ ಕೋಲು ತಗಂಡು ಮಾಡಿದೆ ಕಣ್ರೀ " ಅಂತ ವೀರಾವೇಶದಿಂದ ಹೇಳಿದ.
"ಸಾರು ಚೆನ್ನಾಗಿತ್ತು ಕಣ್ರೀ,ಒಳ್ಳೆ ವಾಸನೆ ಬರುತಿತ್ತು ,ಮೊಳಕೆ ಹುರುಳಿಕಲು ಸಾರು " ಅಂತ ಹೇಳುತ್ತಿದ್ದಾಗ ನಂಗೆ ಬಾಯಲ್ಲಿ ನೀರು ಬರುತಿತ್ತು ,ಹಾಗೆಯೇ ನಮ್ಮ ಒವ್ನೆರ್ ನ ಮಗ "ರೀ ಆ ಮನೆಯಲ್ಲಿ ಶಾರ್ಟ್ circuit  ಆಗಿದೆ ,ಕರೆಂಟ್ ಇಲ್ಲ ಇವಾಗ ಅಲ್ಲಿ  " ಅಂತ ಏನೋ ಸ್ವಾರಸ್ಯಕರ ಸುದ್ದಿಯಂತೆ ಎಲ್ಲರಿಗೂ ಒಪ್ಪಿಸಿದರು.


ಇದಕಿದ್ದಂತೆ ಹಾಗೆ ಇನ್ನೊಮ್ಮೆ ಎಚೆತ್ತ ನಮ್ಮೆ ಒವ್ನೆರ್ ಸಾಹೇಬರು "ಬೆಳಗ್ಗೆ ದುಡ್ಡು ಕೊಡ್ತೀನಿ ,ಮೊದಲು ಮನೆ ಖಾಲಿ ಮಾಡ್ರಪ್ಪ ನೀವು ", ಅಂತ ಹೇಳಿ ನಿಲ್ಲುವಸ್ತರಲ್ಲೇ ಅವರ ಧರ್ಮಪತ್ನಿಯವರು "ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಮನೆ ಕಟ್ತಿರ್ತಿವಿ, ಏನಾದ್ರು ಹೆಚ್ಚು ಕಡಿಮೆ ಹಾಗಿ ಆ ಸಿಲಿಂಡರ್ ಬರ್ಸ್ಟ್ ಆಗಿದ್ರೆ ನಾವು ಏನ್ ಮಾಡಬೇಕಿತ್ತು ? ಸದ್ಯ ಇವಾಗ ಬರೀ ಕರೆಂಟ್ ಹೋಗಿದೆ ಅಷ್ಟೇ " ಅಂತ ದಬಾಯಿಸುತ್ತಾರೆ, ಆಗ ಹಿಂದೆ ಇಂದ ಒಂದಿಷ್ಟು ಜನ "ಇನ್ಸೂರೆನ್ಸ್ ಮಾಡ್ಸಿದ್ದರೆ ಒಳ್ಳೆದಾಗುತಿತ್ತು " ಅಂತ ಮಾತನಾಡುತ್ತಿರುವಾಗಲೇ , ಯಾರೋ ಒಬ್ಬ ಹೆಂಗಸು ಈ ಸನ್ನಿವೇಶದ ಮುಖ್ಯ ರೂವಾರಿಗಳಾದಂಥಹ  ನಮ್ಮ ಪಕ್ಕದ ಮನೆಯ ಯುವಕನ ಹೆಂಡತಿ ಮತ್ತು ಅವನ ತಾಯಿಯನ್ನು ನೆನಪಿಸಿಕೊಂಡು "ಎಲ್ಲಪ್ಪಾ ,ನಿಮ್ಮಮ್ಮ ,ನಿನ್ ಹೆಂಡತಿ ಇನ್ನೂ ಬರಲಿಲ್ವ ,ಗ್ಯಾಸ್ ಆನ್ ಮಾಡಿ,ಬೀಗ ಹಾಕಿಕೊಂಡು ಹೋಗಿದ್ದಾರಲ್ಲ,ಅವರಿಗೆ ಸ್ವಲ್ಪನೂ ಜವಾಬ್ದಾರಿ ಇಲ್ವಾ " ಅಂತ ದಬಾಯಿಸುತ್ತಾರೆ.
ಅದೇ ವೇಳೆಗೆ ನಮ್ಮ ಮನಸ್ಸಿನಲ್ಲಿ ಆ ಸಿಲಿಂಡರ್ ಏನಾದ್ರು ಬರ್ಸ್ಟ್ ಆಗಿದ್ದರೆ ನಮ್ಮ ರೂಮು ಕೂಡ ಏನಾದ್ರು ಒಂದು ಗತಿ ಕಾಣುತಿತ್ತು ಅನ್ನಿಸುತಿತ್ತು ,ಕಾರಣ ನಮ್ಮ  ಮತ್ತು ಆ ಮನೆಗೆ ಒಂದು ಕಾಮನ್ ಗೋಡೆ ಇದೆ .ಹೀಗೆ ಯೋಚಿಸುತ್ತಿದ್ದಾಗ ನಮ್ಮ ರೂಮಿನ ಮುಂದೆಯೇ ನನ್ನ ರೂಂ ಮೇಟ್ ವಿನಯ್ ನಿಂತಿರುವುದನ್ನು ಗಮನಿಸಿ ,ಅವನತ್ತ ತಿರುಗಿ "ಏನಿದು ?" ಅಂತ ಕೈ ನಲ್ಲೆ ಸಂಜ್ಞೆ ಮಾಡಿದೆ.
ಅವನು ತನ್ನ ಹಣೆಗೆ ಕೈ ಚಚ್ಚಿ ಕೊಳ್ಳುತ್ತಾ "ಅದೊಂದು ದೊಡ್ಡ ಕಥೆ " ಅಂತ ಹೇಳಿದ .
ಸದ್ಯ ಏನೂ ಅನಾವುತ ಆಗಿಲ್ವಲ್ಲ,ಎಲ್ಲಾ ಹೇಗೋ ಬಚಾವಾದ್ವಿ ಅಂತ ಯೋಚಿಸುತ್ತಿದ್ದ ವೇಳೆಗೆ ,ತಪ್ಪಿದ ಸಿಲಿಂಡರ್ ಸ್ಪೋಟದ ರೂವಾರಿಯಲ್ಲಿ ಒಬ್ಬಳಾದ ಸೊಸೆ ಬರುತ್ತಿರುವದನ್ನು ಗಮನಿಸಿದ ಯಾರೋ ಒಬ್ಬರು ಹೆಂಗಸು "ಬಂದಳು ನೋಡಿ ಹಿರೋಯಿನ್  " ಅಂತ ಅಂದ್ರು . ಯಾವ angle  ಇಂದ ಹಿರೋಯಿನ್  ಅಂತ ಇನ್ನೂ ತಲೆ ಕೆಡಿಸಿಕೊಂಡಿದ್ದೀನಿ.
ಅವಳು ಅಲ್ಲಿ ಬಂದು ನಿಂತಿದ್ದೆ ತಡ ಒಬ್ಬರ ನಂತರ ಇನ್ನೊಬ್ಬರು "ಏನಮ್ಮ ನಿನಗೆ ಸ್ವಲ್ಪನೂ ಜವಾಬ್ದಾರಿ ಇಲ್ವಾ ,ಏನಾದ್ರು ಹಾಗಿದ್ರೆ ಏನು ಮಾಡ್ತಿದ್ದೆ ನೀನು " ಅಂತ ಗದರಿಸುತ್ತಾರೆ. ಸೆಪ್ಪಗೆ ಮುಖ ಮಾಡಿ ಇನ್ನೇನು ಅಳು ಬರಬೇಕು ಅನ್ನುವ ಸ್ಥಿತಿ ತಲುಪಿದ ಅವಳು ಯಾರ ಪ್ರಶ್ನೆಗೂ ಉತ್ತರಿಸದೆ ಸುಮ್ಮನೆ ನಿಂತು ಬಿಡುತ್ತಾಳೆ.
ಹಾಗೆ ಎಲ್ಲರೂ ಅವಳಿಗೆ ಬೈಯುತ್ತಿದ್ದ ವೇಳೆಗೆ ಅವಳ ಅತ್ತೆ ಗಜ ಗಾಂಭೀರ್ಯದಿಂದ ಆನೆ ನಡಿಗೆಯಲ್ಲಿ ಬರುತ್ತಿದ್ದನ್ನು ಗಮನಿಸಿದ ಒಬ್ಬ ಹೆಂಗಸು "ಬೇಗ ಬಾರಮ್ಮ ,ಬೇಗ ಬೀಗ ತೆಗೆದು ಗ್ಯಾಸ್ ಆಫ್ ಮಾಡು, ಅದು ಇನ್ನೂ ಕರೆಕ್ಟ್ ಆಗಿ ಆಫ್ ಆಗಿಲ್ಲ ಅನ್ನಿಸುತ್ತೆ " ಅನ್ನುವಾಗ ಅಲ್ಲಿಗೆ ಬಂದಂತಹ ಆ ಅತ್ತೆ "ರೀ ನಾನು ಅವಳಿಗೆ (ಸೊಸೆ) ಹೇಳಿದ್ದೆ ಕಣ್ರೀ ,ಗ್ಯಾಸ್ ಆಫ್ ಮಾಡು ಅಂತ ,ಆದ್ರೆ ಅವಳು ಮಾಡದೇ ಹೋಗಿದ್ದಾಳೆ " ಅಂತ ಮೊಸಳೆ  ಕಣ್ಣಿರಿಡುತ್ತಿದ್ದಾಗ ಅಷ್ಟೊತ್ತು ಗಪ್ ಚುಪ್ ಅನ್ನದೆ ಸುಮ್ಮನಿದ್ದ ಸೊಸೆ "ನನಗೆಲ್ಲಿ ಹೇಳಿದ್ರಿ ನೀವು. ನೀವೇ ಆಫ್ ಮಾಡ್ತಿರ ಅಂದುಕೊಂಡಿದ್ದೆ ,ನಿಮಗಿಂತ ಮುಂಚೆನೇ ಹೋಗಿರ್ಲಿಲ್ವ ನಾನು ?" ಅಂತ ಅತ್ತೆಯನ್ನು ಅಷ್ಟೂ ಜನರ ಮುಂದೆ ,ಅದೂ ಬೀದಿಯಲ್ಲಿ ಜಗಳ ಶುರು ಮಾಡುತ್ತಾಳೆ.
ಆಗ ಇನ್ನೊಮ್ಮೆ ನಮ್ಮ ಒವ್ನೆರ್ ಸಾಹೇಬರು ಆ ಅತ್ತೆ ಹತ್ತಿರ "ನೋಡಮ್ಮ ಬೆಳಗ್ಗೆ ಎದ್ದ ಕೂಡಲೇ ನಿಮ್ಮ ದುಡ್ಡು ಕೊಡ್ತೀವಿ ,ದಯವಿಟ್ಟು ಮನೆ ಖಾಲಿ ಮಾಡಿ " ಅಂತ ಎಚ್ಚರಿಸುತ್ತಾರೆ .
"ಅಯ್ಯೋ ಮನೆ ಖಾಲಿ ಮಾಡ್ಕೊಂಡು ಎಲ್ಲಿ ಹೋಗ್ಲಿ ನಾನು , ನೋಡಿ ಅವಳು (ಸೊಸೆ) ಮಡಿದ ಈ ಕೆಲಸಕ್ಕೆ ನಾನು ಅನುಭವಿಸಬೇಕು " ಅಂತ ಗೊಗರೆಯುತ್ತಾಳೆ .
ಇದ್ದಕಿದ್ದಂತೆ ಇನ್ನೊಬ್ಬ ಹೆಂಗಸು "ಅವಳ ಮೇಲೆ ಏನಮ್ಮ ಹೇಳ್ತಿಯಾ? ನೀನು ಆಫ್ ಮಾಡಿ ಹೋಗ್ಬೇಕು ಅಂತ ಗೊತ್ತಾಗಲಿಲ್ವ ,ಅತ್ತೆ ಸೊಸೆ ಇಬ್ಬರಿಗೂ ಜವಾಬ್ದಾರಿ ಇಲ್ಲ. ಯಾವ ಸೀಮೆ ಹೆಂಗಸರು ನೀವು ? ಅದೇನು ಸಂಸಾರ ಮಾಡ್ತಿರ?" ಅಂತ ಹೇಳ್ತಾರೆ.
ಇನ್ನೂ ಕೂಡ ಅತ್ತೆ  ಸೊಸೆ ಮಧ್ಯ ವಾಗ್ವಾದ ನಡೆಯುತ್ತಲೇ ಇತ್ತು.


ತಾಯಿಯಂತೆ ಮಗಳು ,ನೂಲಿನಂತೆ ಸೂಜಿ ,ಹಳೆಯ ಮಾತಾದರೆ ,ಅತ್ತೆಯಂತೆ ಸೊಸೆ ,ಇದು ಇಲ್ಲಿಯ ಮಾತು .ಸಂಸಾರದ ಬಗ್ಗೆ ಅರಿವೇ ಇಲ್ಲದ ಆ ಸೊಸೆಗೆ .ಯಾವಾಗಲು ಮೇಕ್ ಅಪ್ ಮಾಡಿಕೊಂಡು ಸುತ್ತಾಡುವಂತಹ ಹುಡುಗಾಟಿಕೆಯ ಮನೋಭಾವ ಮದುವೆ ಆದರೂ ಬಿಟ್ಟಿಲ್ಲ. ಅತ್ತೆಗೆ ಯಾವಾಗಲು ನೆಂಟರ ಮನೆ ಸುತ್ತುವುದೆ ಕೆಲಸ. stove  ಮೇಲೆ ಕಾಯಲು ಸಾಂಬಾರನ್ನು ಇಟ್ಟಿ ಅತ್ತೆ ಹೋಗಿದ್ದು ಅಣ್ಣನ ಮನೆಗೆ ,ಸೊಸೆ ಹೋಗಿದ್ದು ವಾಕಿಂಗ್ ಗೆ. ಇಳೆ ಗೊತ್ತಾಗುತ್ತೆ ಇವರು ಎಷ್ಟರ ಮಟ್ಟಿಗೆ ಜವಾಬ್ದಾರಿಯ ಹೆಂಗಸರು ಎಂಬುದು.
ಹೇಗೋ ಸದ್ಯ ಅನಾವುತ ಆಗಲಿಲ್ಲ. ಇದನ್ನು ತಪ್ಪಿಸಿದ ಕೆಳಗಡೆ ಮನೆಯ ಹುಡುಗನಿಗೆ ,ಅದಕ್ಕೂ ಮುಂಚೆ ಈ ಗ್ಯಾಸ್ ಸೋರುವಿಕೆಯ ವಾಸನೆ ಕಂಡು ಹಿಡಿದ ಒವ್ನೆರ್ ನ ಮಗನಿಗೂ ಮನಸ್ಸಿನಲ್ಲಿಯೇ ಥ್ಯಾಂಕ್ಸ್ ಹೇಳುತ್ತಾ ನನ್ನ ರೂಮಿನ ಬಳಿ ಬರುತ್ತಿದ್ದಾಗ ಆ ಗ್ಯಾಸ್ ನ ವಾಸನೆ ಇನ್ನೂ ಇತ್ತು .
ಹೇಗೋ ಒಂದು ಗಂಡಾ೦ತರದಿಂದ ಪಾರಾಗಿ ಬಂದು ,ಈ ಸನ್ನಿವೇಶದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನನ್ನ ರೂಂ ಮೇಟ್ ಹತ್ತಿರ ತಿಳಿದು ಕೊಳುತ್ತ ,ಆ ಅತ್ತೆ ಸೊಸೆಯಂದಿರ ಬೇಜವಾಬ್ದಾರಿತನದ ಬಗ್ಗೆ ಇನ್ನಷ್ಟು ಉದಾಹರಣೆಗಳನ್ನು ಕೊಡುತ್ತಾ ನೆಮ್ಮದಿಯ ನಿದ್ರಾ ಲೋಕಕ್ಕೆ ಗೊತ್ತಿಲ್ಲದಂತೆ ಜಾರಿ ಬಿಟ್ಟಿದ್ದೆ .