Monday, February 7, 2011

ಬೇಜವಾಬ್ದಾರಿತನದ ಪರಾಕಾಷ್ಠೆ


ಕೆಲವು ದಿನಗಳ ಹಿಂದೆ ನಡೆದತಂತಹ ಸನ್ನಿವೇಶ .
ಬಿಸಿ ಬಿಸಿ ಮುದ್ದೆ ,ಸೊಪ್ಪಿನ ಸಾರು ,ಅನ್ನ  ಉಂಡು ನನ್ನ ರೂಮಿನ ಕಡೆ ಹೋಗುತ್ತಿದಾಗ ಸಮಯ ಸುಮಾರು ೯.೩೦.ಸ್ವಲ್ಪ ಚಳಿ ಇತ್ತಾದರೂ ಬೀಸುತ್ತಿದ್ದ ತಂಗಾಳಿ ಬಹಳ ಮುದ ನೀಡುತ್ತಿತ್ತು .ಆದರೆ ಮನಸ್ಸು ಮಾತ್ರ ಬಹಳ ಚಂಚಲತೆಯಿಂದ ಕೂಡಿತ್ತು .ಬೆಳಗ್ಗೆ ಎದ್ದು ಏನು ಮಾಡುವುದು ? ನಾಳೆಯಾದರು ಏನಾದ್ರು ಒಳ್ಳೆ ಕೆಲಸ ಆಗುತ್ತಾ? ಹೀಗೆ ಹತ್ತು ಹಲವಾರು ಯೋಚನೆಗಳೊಂದಿಗೆ ,ಮರು ದಿನಕ್ಕೆ ಯೋಜನೆಗಳನ್ನು ಹಾಕುತ್ತಿದ್ದ ವೇಳೆಗೆ ನಮ್ಮ ರೂಮಿನ ಹತ್ತಿರದ ಕ್ರಾಸ್ ಬಳಿ ಬಂದಿದ್ದೆ.


ಆ ಕ್ರಾಸ್ ಬಳಿ ಇದ್ದ ಗಣಪನಿಗೊಂದು ಸಲಾಂ ಹಾಕಿ ಆ ತಿರುವಿನಲ್ಲಿ ತಿರುಗಿದ್ದೇ ಕ್ಷಣ ಹತ್ತಾರು ಹೆಂಗಸರು ಮತ್ತು ಆಗೊಂದು ಈಗೊಂದು ಗಂಡಸರ ಧ್ವನಿ ಯಲ್ಲಿ ಕೂಗಾಟ ಕೇಳುತ್ತಿತ್ತು .


ಒಹ್, ನಮ್ಮ ಬೀದಿಯಲ್ಲಿ  ಯಾರದೋ ಮನೆಯಲ್ಲಿ ಏನೋ ಆಗಿರಬೇಕು ಅಂದು ಕೊಳ್ಳುತ್ತಾ ,ಯಾರಿಗದ್ರು ಏನಾದ್ರು ಆಯ್ತಾ ಅಂತ ಯೋಚಿಸುತ್ತ ಮುಂದೆ ಬಂದು ನೋಡಿದ್ರೆ ಅಷ್ಟೂ ಜನ ನಮ್ಮ ಬಿಲ್ಡಿಂಗಿನ ಮುಂದೆಯೇ ನಿಂತಿದ್ದಾರೆ.


ನಮ್ಮ ಬಿಲ್ದಿಂಗಿನಲ್ಲೇ ಏನೋ ಅಚಾತುರ್ಯ ನಡೆದಿದೆ ಅಂತ ಯೋಚಿಸುವಷ್ಟರಲ್ಲೇ  ಯಾರೋ ಒಬ್ಬ ಹೆಂಗಸು "ಎಲ್ಲಪ್ಪಾ,ನಿಮ್ಮಮ್ಮ ಇನ್ನೂ ಬಂದಿಲ್ವಾ ,ಬೇಗ ಹೋಗಿ ಕರ್ಕೊಂಡು ಬಾ " ಅಂತ ನಮ್ಮ ಪಕ್ಕದ ಮನೆಯ ಹುಡುಗನಿಗೆ ಹೇಳಿದ್ರು.
"ಫೋನ್ ಮಾಡಿದಿನಿ ,ಬರ್ತಾ ಇದಾರಂತೆ" ಅಂತ ಸ್ವಲ್ಪ ಮೆದು ಧ್ವನಿ ಯಲ್ಲಿ ಹೇಳಿದ .
ನೋಡಿದ್ರೆ ನಮ್ಮ ಅಕ್ಕ ಪಕ್ಕ ,ಎದುರು ,ಮೇಲೆ ಕೆಳಗಡೆ ಎಲ್ಲ ಮನೆಯ ಹೆಂಗಸರು ಗಂಡಸರುಗಳು ಅಲ್ಲಿ ಜಮಾಯಿಸದ್ದರು,ಏನೋ ಸರ್ಕಸ್ ನಡೀತಿದೆ ಅನ್ನುವ ಥರಾ.
ಈ ನಮ್ಮ ಪಕ್ಕದ ಮನೆಯ ಪುಣ್ಯಾತ್ಮರು ಈ ಮನೆಗೆ ಬಂದು ೨ ತಿಂಗಳು ಆಗಿದೆ ,ಆದರೆ ಮನೆ ಮುಂದೆ ಒಂದು ದಿನ ಕೂಡ ಕಸ ಗುಡಿಸಿದ್ದನ್ನು ನಾನು ನೋಡೇ ಇಲ್ಲ .ಮನೆ ಕ್ಲೀನ್ ಆಗಿ ಇಟ್ಕೊಳ್ಳಿ ಅಂತ ಪಾಪ ಓನರ್ ಅದೆಷ್ಟು ಸಾರಿ ಹೇಳಿದ್ದಾರೋ ಗೊತ್ತಿಲ್ಲ .


ಇವ್ರು ಏನೋ ಕಿತಾಪತಿ ಮಾಡಿದ್ದಾರೆ ಅಂತ ಯೋಚಿಸುವಷ್ಟರಲ್ಲೇ ,ನಮ್ಮ ಓನರ್ ಸಾಹೇಬರು ಅವನ ಮುಂದೆ ಬಂದು ೨ ಕೈಗಳನ್ನು ಜೋಡಿಸಿ ನಮಸ್ಕರಿಸಿ "ನೋಡಪ್ಪ ,ಬೆಳಗ್ಗೆ ಎದ್ದ ಕೂಡಲೇ ನಿಮ್ಮ ಅಡ್ವಾನ್ಸ್ ದುಡ್ಡು ಕೊಡ್ತೀನಿ ,ದಯವಿಟ್ಟು ಮನೆ ಖಾಲಿ ಮಾಡ್ರಪ್ಪ " ಅಂತ ತಮ್ಮ ಮಗನಿಗಿಂತ ಚಿಕ್ಕ ವಯಸ್ಸಿನ ಆ ಹುಡುಗನಿಗೆ ಹೇಳಿದ್ರು .
ಮೊದಲೇ ವಿಳ ವಿಳ ಒದ್ದಾಡುತಿದ್ದ ನನ್ನ ಮನಸ್ಸಿನಲ್ಲಿ .ಇಲ್ಲಿ ಏನು ನಡೀತಿದೆ ಎಂದು ಊಯಿಸುವುದು ಸ್ವಲ್ಪ ಕಷ್ಟ ಆಯ್ತು.ಆಗ ತಕ್ಷಣ ನಮ್ಮೆ ಓನರ್ ನ ಮಗನನ್ನು "ಅಣ್ಣ, ಏನಾಯಿತು ?" ಅಂತ ಕೇಳಿದೆ .
ನಮ್ಮ ಪಕ್ಕದ ಮನೆಯ ಕಡೆ ಬೆಟ್ಟು ಮಡಿ ತೋರಿಸಿ "ಆ ಮನೆಯವರು ಸಾಂಬಾರನ್ನು stove  ಮೇಲೆ ಬಿಸಿ ಮಾಡಕ್ಕೆ ಇಟ್ಟು,ಬೀಗ ಹಾಕಿಕೊಂಡು ಎಲ್ಲೋ ಹೋಗಿದ್ದಾರೆ .ಈಗ ಆ ಸಾರು ಉಕ್ಕಿ stove  ಆಫ್  ಆಗಿ ಗ್ಯಾಸ್ ಲೀಕ್ ಆಗಿದೆ .ಇಷ್ಟೊತ್ತು ತುಂಬಾ ವಾಸನೆ ಬರ್ತಿತ್ತು " ಅಂತ ಬಹಳ ಯೋಚನಾ ಮಗ್ಧರಾಗಿ ಹೇಳುತ್ತಿದ್ದವರನ್ನು ನಿಲ್ಲಿಸಿ "ಮತ್ತೆ ಈಗ ಏನ್ ಕಥೆ ?" ಅಂತ ಕೇಳ್ದೆ .


"ಅಯ್ಯೋ ಅದೊಂದ್ ದೊಡ್ಡ ಕಥೆ .ಅವರ ಅಡುಗೆ ಮನೆಯ ಕಿಡಕಿ ಹೊಡೆದು ಹಾಕಿ ,ಗ್ಯಾಸ್ ಆಫ್   ಮಾಡಿದ್ದಾಯ್ತು ". "ಇವನೇ ಆಫ್ ಮಾಡಿದ್ದು" ಅಂತ ನಮ್ಮ ಕೆಳಗಡೆ ಮನೆಯ ಹುಡುಗನ ಕಡೆ ತೋರಿಸಿದರು .


ಅದೇ ಸಮಯದಲ್ಲಿ ಇನ್ನೊಬ್ಬ ಹೆಂಗಸು "ಹೇಗ್ ಆಫ್   ಮಾಡಿದ್ಯೋ ?" ಅಂತ ಅವನನ್ನು ಪ್ರಶ್ನಿಸುತ್ತಾರೆ .
"ಆ ಕೋಲು ತಗಂಡು ಮಾಡಿದೆ ಕಣ್ರೀ " ಅಂತ ವೀರಾವೇಶದಿಂದ ಹೇಳಿದ.
"ಸಾರು ಚೆನ್ನಾಗಿತ್ತು ಕಣ್ರೀ,ಒಳ್ಳೆ ವಾಸನೆ ಬರುತಿತ್ತು ,ಮೊಳಕೆ ಹುರುಳಿಕಲು ಸಾರು " ಅಂತ ಹೇಳುತ್ತಿದ್ದಾಗ ನಂಗೆ ಬಾಯಲ್ಲಿ ನೀರು ಬರುತಿತ್ತು ,ಹಾಗೆಯೇ ನಮ್ಮ ಒವ್ನೆರ್ ನ ಮಗ "ರೀ ಆ ಮನೆಯಲ್ಲಿ ಶಾರ್ಟ್ circuit  ಆಗಿದೆ ,ಕರೆಂಟ್ ಇಲ್ಲ ಇವಾಗ ಅಲ್ಲಿ  " ಅಂತ ಏನೋ ಸ್ವಾರಸ್ಯಕರ ಸುದ್ದಿಯಂತೆ ಎಲ್ಲರಿಗೂ ಒಪ್ಪಿಸಿದರು.


ಇದಕಿದ್ದಂತೆ ಹಾಗೆ ಇನ್ನೊಮ್ಮೆ ಎಚೆತ್ತ ನಮ್ಮೆ ಒವ್ನೆರ್ ಸಾಹೇಬರು "ಬೆಳಗ್ಗೆ ದುಡ್ಡು ಕೊಡ್ತೀನಿ ,ಮೊದಲು ಮನೆ ಖಾಲಿ ಮಾಡ್ರಪ್ಪ ನೀವು ", ಅಂತ ಹೇಳಿ ನಿಲ್ಲುವಸ್ತರಲ್ಲೇ ಅವರ ಧರ್ಮಪತ್ನಿಯವರು "ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಮನೆ ಕಟ್ತಿರ್ತಿವಿ, ಏನಾದ್ರು ಹೆಚ್ಚು ಕಡಿಮೆ ಹಾಗಿ ಆ ಸಿಲಿಂಡರ್ ಬರ್ಸ್ಟ್ ಆಗಿದ್ರೆ ನಾವು ಏನ್ ಮಾಡಬೇಕಿತ್ತು ? ಸದ್ಯ ಇವಾಗ ಬರೀ ಕರೆಂಟ್ ಹೋಗಿದೆ ಅಷ್ಟೇ " ಅಂತ ದಬಾಯಿಸುತ್ತಾರೆ, ಆಗ ಹಿಂದೆ ಇಂದ ಒಂದಿಷ್ಟು ಜನ "ಇನ್ಸೂರೆನ್ಸ್ ಮಾಡ್ಸಿದ್ದರೆ ಒಳ್ಳೆದಾಗುತಿತ್ತು " ಅಂತ ಮಾತನಾಡುತ್ತಿರುವಾಗಲೇ , ಯಾರೋ ಒಬ್ಬ ಹೆಂಗಸು ಈ ಸನ್ನಿವೇಶದ ಮುಖ್ಯ ರೂವಾರಿಗಳಾದಂಥಹ  ನಮ್ಮ ಪಕ್ಕದ ಮನೆಯ ಯುವಕನ ಹೆಂಡತಿ ಮತ್ತು ಅವನ ತಾಯಿಯನ್ನು ನೆನಪಿಸಿಕೊಂಡು "ಎಲ್ಲಪ್ಪಾ ,ನಿಮ್ಮಮ್ಮ ,ನಿನ್ ಹೆಂಡತಿ ಇನ್ನೂ ಬರಲಿಲ್ವ ,ಗ್ಯಾಸ್ ಆನ್ ಮಾಡಿ,ಬೀಗ ಹಾಕಿಕೊಂಡು ಹೋಗಿದ್ದಾರಲ್ಲ,ಅವರಿಗೆ ಸ್ವಲ್ಪನೂ ಜವಾಬ್ದಾರಿ ಇಲ್ವಾ " ಅಂತ ದಬಾಯಿಸುತ್ತಾರೆ.
ಅದೇ ವೇಳೆಗೆ ನಮ್ಮ ಮನಸ್ಸಿನಲ್ಲಿ ಆ ಸಿಲಿಂಡರ್ ಏನಾದ್ರು ಬರ್ಸ್ಟ್ ಆಗಿದ್ದರೆ ನಮ್ಮ ರೂಮು ಕೂಡ ಏನಾದ್ರು ಒಂದು ಗತಿ ಕಾಣುತಿತ್ತು ಅನ್ನಿಸುತಿತ್ತು ,ಕಾರಣ ನಮ್ಮ  ಮತ್ತು ಆ ಮನೆಗೆ ಒಂದು ಕಾಮನ್ ಗೋಡೆ ಇದೆ .ಹೀಗೆ ಯೋಚಿಸುತ್ತಿದ್ದಾಗ ನಮ್ಮ ರೂಮಿನ ಮುಂದೆಯೇ ನನ್ನ ರೂಂ ಮೇಟ್ ವಿನಯ್ ನಿಂತಿರುವುದನ್ನು ಗಮನಿಸಿ ,ಅವನತ್ತ ತಿರುಗಿ "ಏನಿದು ?" ಅಂತ ಕೈ ನಲ್ಲೆ ಸಂಜ್ಞೆ ಮಾಡಿದೆ.
ಅವನು ತನ್ನ ಹಣೆಗೆ ಕೈ ಚಚ್ಚಿ ಕೊಳ್ಳುತ್ತಾ "ಅದೊಂದು ದೊಡ್ಡ ಕಥೆ " ಅಂತ ಹೇಳಿದ .
ಸದ್ಯ ಏನೂ ಅನಾವುತ ಆಗಿಲ್ವಲ್ಲ,ಎಲ್ಲಾ ಹೇಗೋ ಬಚಾವಾದ್ವಿ ಅಂತ ಯೋಚಿಸುತ್ತಿದ್ದ ವೇಳೆಗೆ ,ತಪ್ಪಿದ ಸಿಲಿಂಡರ್ ಸ್ಪೋಟದ ರೂವಾರಿಯಲ್ಲಿ ಒಬ್ಬಳಾದ ಸೊಸೆ ಬರುತ್ತಿರುವದನ್ನು ಗಮನಿಸಿದ ಯಾರೋ ಒಬ್ಬರು ಹೆಂಗಸು "ಬಂದಳು ನೋಡಿ ಹಿರೋಯಿನ್  " ಅಂತ ಅಂದ್ರು . ಯಾವ angle  ಇಂದ ಹಿರೋಯಿನ್  ಅಂತ ಇನ್ನೂ ತಲೆ ಕೆಡಿಸಿಕೊಂಡಿದ್ದೀನಿ.
ಅವಳು ಅಲ್ಲಿ ಬಂದು ನಿಂತಿದ್ದೆ ತಡ ಒಬ್ಬರ ನಂತರ ಇನ್ನೊಬ್ಬರು "ಏನಮ್ಮ ನಿನಗೆ ಸ್ವಲ್ಪನೂ ಜವಾಬ್ದಾರಿ ಇಲ್ವಾ ,ಏನಾದ್ರು ಹಾಗಿದ್ರೆ ಏನು ಮಾಡ್ತಿದ್ದೆ ನೀನು " ಅಂತ ಗದರಿಸುತ್ತಾರೆ. ಸೆಪ್ಪಗೆ ಮುಖ ಮಾಡಿ ಇನ್ನೇನು ಅಳು ಬರಬೇಕು ಅನ್ನುವ ಸ್ಥಿತಿ ತಲುಪಿದ ಅವಳು ಯಾರ ಪ್ರಶ್ನೆಗೂ ಉತ್ತರಿಸದೆ ಸುಮ್ಮನೆ ನಿಂತು ಬಿಡುತ್ತಾಳೆ.
ಹಾಗೆ ಎಲ್ಲರೂ ಅವಳಿಗೆ ಬೈಯುತ್ತಿದ್ದ ವೇಳೆಗೆ ಅವಳ ಅತ್ತೆ ಗಜ ಗಾಂಭೀರ್ಯದಿಂದ ಆನೆ ನಡಿಗೆಯಲ್ಲಿ ಬರುತ್ತಿದ್ದನ್ನು ಗಮನಿಸಿದ ಒಬ್ಬ ಹೆಂಗಸು "ಬೇಗ ಬಾರಮ್ಮ ,ಬೇಗ ಬೀಗ ತೆಗೆದು ಗ್ಯಾಸ್ ಆಫ್ ಮಾಡು, ಅದು ಇನ್ನೂ ಕರೆಕ್ಟ್ ಆಗಿ ಆಫ್ ಆಗಿಲ್ಲ ಅನ್ನಿಸುತ್ತೆ " ಅನ್ನುವಾಗ ಅಲ್ಲಿಗೆ ಬಂದಂತಹ ಆ ಅತ್ತೆ "ರೀ ನಾನು ಅವಳಿಗೆ (ಸೊಸೆ) ಹೇಳಿದ್ದೆ ಕಣ್ರೀ ,ಗ್ಯಾಸ್ ಆಫ್ ಮಾಡು ಅಂತ ,ಆದ್ರೆ ಅವಳು ಮಾಡದೇ ಹೋಗಿದ್ದಾಳೆ " ಅಂತ ಮೊಸಳೆ  ಕಣ್ಣಿರಿಡುತ್ತಿದ್ದಾಗ ಅಷ್ಟೊತ್ತು ಗಪ್ ಚುಪ್ ಅನ್ನದೆ ಸುಮ್ಮನಿದ್ದ ಸೊಸೆ "ನನಗೆಲ್ಲಿ ಹೇಳಿದ್ರಿ ನೀವು. ನೀವೇ ಆಫ್ ಮಾಡ್ತಿರ ಅಂದುಕೊಂಡಿದ್ದೆ ,ನಿಮಗಿಂತ ಮುಂಚೆನೇ ಹೋಗಿರ್ಲಿಲ್ವ ನಾನು ?" ಅಂತ ಅತ್ತೆಯನ್ನು ಅಷ್ಟೂ ಜನರ ಮುಂದೆ ,ಅದೂ ಬೀದಿಯಲ್ಲಿ ಜಗಳ ಶುರು ಮಾಡುತ್ತಾಳೆ.
ಆಗ ಇನ್ನೊಮ್ಮೆ ನಮ್ಮ ಒವ್ನೆರ್ ಸಾಹೇಬರು ಆ ಅತ್ತೆ ಹತ್ತಿರ "ನೋಡಮ್ಮ ಬೆಳಗ್ಗೆ ಎದ್ದ ಕೂಡಲೇ ನಿಮ್ಮ ದುಡ್ಡು ಕೊಡ್ತೀವಿ ,ದಯವಿಟ್ಟು ಮನೆ ಖಾಲಿ ಮಾಡಿ " ಅಂತ ಎಚ್ಚರಿಸುತ್ತಾರೆ .
"ಅಯ್ಯೋ ಮನೆ ಖಾಲಿ ಮಾಡ್ಕೊಂಡು ಎಲ್ಲಿ ಹೋಗ್ಲಿ ನಾನು , ನೋಡಿ ಅವಳು (ಸೊಸೆ) ಮಡಿದ ಈ ಕೆಲಸಕ್ಕೆ ನಾನು ಅನುಭವಿಸಬೇಕು " ಅಂತ ಗೊಗರೆಯುತ್ತಾಳೆ .
ಇದ್ದಕಿದ್ದಂತೆ ಇನ್ನೊಬ್ಬ ಹೆಂಗಸು "ಅವಳ ಮೇಲೆ ಏನಮ್ಮ ಹೇಳ್ತಿಯಾ? ನೀನು ಆಫ್ ಮಾಡಿ ಹೋಗ್ಬೇಕು ಅಂತ ಗೊತ್ತಾಗಲಿಲ್ವ ,ಅತ್ತೆ ಸೊಸೆ ಇಬ್ಬರಿಗೂ ಜವಾಬ್ದಾರಿ ಇಲ್ಲ. ಯಾವ ಸೀಮೆ ಹೆಂಗಸರು ನೀವು ? ಅದೇನು ಸಂಸಾರ ಮಾಡ್ತಿರ?" ಅಂತ ಹೇಳ್ತಾರೆ.
ಇನ್ನೂ ಕೂಡ ಅತ್ತೆ  ಸೊಸೆ ಮಧ್ಯ ವಾಗ್ವಾದ ನಡೆಯುತ್ತಲೇ ಇತ್ತು.


ತಾಯಿಯಂತೆ ಮಗಳು ,ನೂಲಿನಂತೆ ಸೂಜಿ ,ಹಳೆಯ ಮಾತಾದರೆ ,ಅತ್ತೆಯಂತೆ ಸೊಸೆ ,ಇದು ಇಲ್ಲಿಯ ಮಾತು .ಸಂಸಾರದ ಬಗ್ಗೆ ಅರಿವೇ ಇಲ್ಲದ ಆ ಸೊಸೆಗೆ .ಯಾವಾಗಲು ಮೇಕ್ ಅಪ್ ಮಾಡಿಕೊಂಡು ಸುತ್ತಾಡುವಂತಹ ಹುಡುಗಾಟಿಕೆಯ ಮನೋಭಾವ ಮದುವೆ ಆದರೂ ಬಿಟ್ಟಿಲ್ಲ. ಅತ್ತೆಗೆ ಯಾವಾಗಲು ನೆಂಟರ ಮನೆ ಸುತ್ತುವುದೆ ಕೆಲಸ. stove  ಮೇಲೆ ಕಾಯಲು ಸಾಂಬಾರನ್ನು ಇಟ್ಟಿ ಅತ್ತೆ ಹೋಗಿದ್ದು ಅಣ್ಣನ ಮನೆಗೆ ,ಸೊಸೆ ಹೋಗಿದ್ದು ವಾಕಿಂಗ್ ಗೆ. ಇಳೆ ಗೊತ್ತಾಗುತ್ತೆ ಇವರು ಎಷ್ಟರ ಮಟ್ಟಿಗೆ ಜವಾಬ್ದಾರಿಯ ಹೆಂಗಸರು ಎಂಬುದು.
ಹೇಗೋ ಸದ್ಯ ಅನಾವುತ ಆಗಲಿಲ್ಲ. ಇದನ್ನು ತಪ್ಪಿಸಿದ ಕೆಳಗಡೆ ಮನೆಯ ಹುಡುಗನಿಗೆ ,ಅದಕ್ಕೂ ಮುಂಚೆ ಈ ಗ್ಯಾಸ್ ಸೋರುವಿಕೆಯ ವಾಸನೆ ಕಂಡು ಹಿಡಿದ ಒವ್ನೆರ್ ನ ಮಗನಿಗೂ ಮನಸ್ಸಿನಲ್ಲಿಯೇ ಥ್ಯಾಂಕ್ಸ್ ಹೇಳುತ್ತಾ ನನ್ನ ರೂಮಿನ ಬಳಿ ಬರುತ್ತಿದ್ದಾಗ ಆ ಗ್ಯಾಸ್ ನ ವಾಸನೆ ಇನ್ನೂ ಇತ್ತು .
ಹೇಗೋ ಒಂದು ಗಂಡಾ೦ತರದಿಂದ ಪಾರಾಗಿ ಬಂದು ,ಈ ಸನ್ನಿವೇಶದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನನ್ನ ರೂಂ ಮೇಟ್ ಹತ್ತಿರ ತಿಳಿದು ಕೊಳುತ್ತ ,ಆ ಅತ್ತೆ ಸೊಸೆಯಂದಿರ ಬೇಜವಾಬ್ದಾರಿತನದ ಬಗ್ಗೆ ಇನ್ನಷ್ಟು ಉದಾಹರಣೆಗಳನ್ನು ಕೊಡುತ್ತಾ ನೆಮ್ಮದಿಯ ನಿದ್ರಾ ಲೋಕಕ್ಕೆ ಗೊತ್ತಿಲ್ಲದಂತೆ ಜಾರಿ ಬಿಟ್ಟಿದ್ದೆ .     

1 comment: