Wednesday, December 31, 2014

ಬಲ್ಲಾಳರಾಯನದುರ್ಗ

ಡಿಸೆಂಬರ್ ೨೮ ರಂದು  "ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜೀವ ವೈವಿಧ್ಯ ಸಂಶೋಧನಾ ಕೇಂದ್ರ ಮತ್ತು ವಿಸ್ಮಯ ಪ್ರತಿಷ್ಠಾನ,ಕೊಟ್ಟಿಗೆಹಾರ" ಸಂಸ್ಥೆಯು ಒಂದು ದಿನದ ಚಾರಣ ಕಾರ್ಯಕ್ರಮವನ್ನು ಮೂಡಿಗೆರೆ ತಾಲ್ಲೂಕಿನ ಬಲ್ಲಾಳರಾಯನದುರ್ಗ ಕೋಟೆಗೆ ಹಮ್ಮಿಕೊಂಡಿತ್ತು . ಈ ಚಾರಣ ಕಾರ್ಯಕ್ರಮಕ್ಕೆ ನಾಡಿನ ವಿವಿದೆಡೆಯಿಂದ ಚಾರಣ ಪ್ರಿಯರು,ಪರಿಸರ ಪ್ರಿಯರು,ಛಾಯಾಗ್ರಾಹಕರು,ವಿಸ್ಮಯ ಪ್ರತಿಷ್ಠಾನದ ಸದಸ್ಯರು,ತೇಜಸ್ವಿ ಅವರ ಸ್ನೇಹಿತರು ಮತ್ತು ಒಡನಾಡಿಗಳು ಮತ್ತು ತೇಜಸ್ವಿ ಅವರ ಅಭಿಮಾನಿಗಳು ಭಾಗವಹಿಸಿದ್ದರು.. ಬಲ್ಲಾಳರಾಯನದುರ್ಗ ಕೋಟೆಯು ಹೊಯ್ಸಳರ ಒಬ್ಬ ಪಾಳೆಗಾರ ಎಂದು ತಿಳಿದು ಬರುತ್ತದೆ . ಆತ ಕಟ್ಟಿಸಿದ ಕೋಟೆ ಎಂಬ ಅಭಿಪ್ರಾಯ ಜನರಲ್ಲಿದೆ. ಇದು ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಂಚಿನಲ್ಲಿದೆ . 



ಬೆಳಗ್ಗೆ ವಿಸ್ಮಯ ಪ್ರತಿಷ್ಠಾನದ ಕಾರ್ಯಾಲಯದಲ್ಲಿ ತಿಂಡಿ ಸೇವಿಸಿ ಅಲ್ಲಿಂದ ನಮಗಾಗಿ ಕಾದಿದ್ದ ವಾಹನದಲ್ಲಿ ಸುಂಕಸಾಲೆ (ಹಿಂದೆ ಈ ಗ್ರಾಮವು ಸುಂಕ ವಸೂಲಿ ಮಾಡುವ ಕೇಂದ್ರವಾಗಿತ್ತು )ಗ್ರಾಮದ ಮೂಲಕ ದುರ್ಗದಹಳ್ಳಿಯ ತಪ್ಪಲನ್ನು ತಲುಪಿದೆವು .  ನಮ್ಮ ಚಾರಣ ಶುರುವಾಗುವುದು ಇಲ್ಲಿಂದ. ಇಲ್ಲಿ ಸ್ವಲ್ಪ ದೂರ ಸಾಗಿದ ನಂತರ ರಾಣಿ ಝರಿ ಕಾಣುತ್ತದೆ . ಪಾತಾಳದಂತೆ ಇರುವ ಈ ಜಾಗವನ್ನು ಬಹಳ ಜಾಗರೂಕತೆಯಿಂದ ನೆಲದ ಮೇಲೆ ಮಲಗಿ ನೋಡಬೇಕು . ನಂತರ ಕಾಡಿನ ಹಾದಿಯಲ್ಲಿ ನಡೆದು ಕೋಟೆಯನ್ನು ತಲುಪಬೇಕು . ಈಗ ಕೋಟೆಯ ಅವಶೇಷ ಮಾತ್ರ ಕಾಣ ಸಿಗುತ್ತದೆ . ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಕಾಣ ಸಿಗುವ ಬಹುತೇಕ ಕೋಟೆಗಳ ಪರಿಸ್ಥಿತಿ ಇದೆ ಆಗಿದೆ .  

ದೂರದಿಂದ ಕಂಡ ಕೋಟೆ 

ಕೋಟೆಗೆ ದಾರಿ

ಕೋಟೆಯ ಮತ್ತೊಂದು ಸುತ್ತನ್ನು ಕಾಣಬಹುದು 

View Point

ಬೆಂಗಳೂರಿನಿಂದ ಹೋಗಿದ್ದ ನಮ್ಮ ಸ್ನೇಹಿತರ  ತಂಡ  


ಈಗ ಆ ಕೋಟೆಯಲ್ಲಿ ಒಂದು ಗುಡಿಸಲು ಇದ್ದು , ಅಲ್ಲಿ ಲೋಕಪ್ಪ ಎಂಬ ಸ್ಥಳೀಯ ವ್ಯಕ್ತಿ ಇದ್ದರು . ಅವರು ಆ ಊರಿನ ಎಲ್ಲರ ದನಗಳನ್ನು ಮೇಯಿಸಿಕೊಂಡು ಅಲ್ಲೇ ಬಿಡಾರ ಹೂಡಿದ್ದಾರೆ . ಈ ಕಾಯಕ ಅವರ ಕುಟುಂಬಕ್ಕೆ ತಲೆತಲಾಂತರದಿಂದ ಬಂದಿರುವಂಥದ್ದು . ವಾರಕ್ಕೊಮ್ಮೆ ಬೆಟ್ಟದಿಂದ ಕೆಳಗೆ ಇಳಿದು ವಾರಕ್ಕೆ ಬೇಕಾದ ಅಡುಗೆ ಸಾಮಾನುಗಳನ್ನೆಲ್ಲ ಕೊಂಡೊಯ್ಯುತ್ತಾರೆ . ಪ್ರತಿ ವರ್ಷ ಮಳೆಗಾಲ ಮುಗಿದ ಮೇಲೆ ಸುಮಾರು ೩-೪ ತಿಂಗಳು ಅವರು ಅಲ್ಲೇ ವಾಸಿಸುತ್ತಾರೆ . ಕೋಟೆಯಿಂದ ಸ್ವಲ್ಪ ಕೆಳಗಿಳಿದರೆ ಅಲ್ಲಿ ಒಂದು ಸಣ್ಣ ಕೆರೆ ಇದೆ, ಅಲ್ಲಿಂದಲೇ ಅವರು ನೀರನ್ನು ಹೊತ್ತೊಯ್ದು ಬಳಸಬೇಕು . ಅವರೊಡನೆ ಮಾತಿಗಿಳಿದಾಗ ಅಲ್ಲಿ ಹುಲಿ ಕಾಟ ಇದ್ದು ,ಕೆಲವು ಹಸುಗಳು ರಾತ್ರೋ ರಾತ್ರಿ ಮಾಯ ಆಗಿರುತ್ತವೆ ಮತ್ತು ಕೆಲವು ಸಲ ದಕ್ಷಿಣ ಕನ್ನಡ ಜೆಲ್ಲೆಯಿಂದ  ಕೆಲವರು ಬಂದು ಕದ್ದೊಯ್ಯುತ್ತಾರೆ ಎಂದು ಹೇಳಿದರು . 
ಕೋಟೆಯ ಒಳಗೆ ಇರುವ ಗುಡಿಸಲು , ಅದರ ಮುಂದೆ ಲೋಕಪ್ಪ ಮತ್ತು ಇನ್ನೋರ್ವ ಸ್ಥಳೀಯ 

ಗುಡಿಸಲಿನಲ್ಲಿದ್ದ ಒಳಕಲ್ಲು 


ಕೋಟೆಯಿಂದ ಇಳಿದುಬಂದ ದಾರಿಯಲ್ಲಿ ಇಳಿಯದೆ ಇನ್ನೊಂದು ದಿಕ್ಕಿನಲ್ಲಿ ಇಲಿಯ ತೊಡಗಿದೆವು . ಅಲ್ಲಿ ಒಂದು ಸಣ್ಣ ಕೆರೆ ಇದ್ದು,  ಆ ಕೆರೆಯ ದಡದಿಂದ ಕಾಡು ಶುರು ಆಗಲಿದ್ದು , ಅಲ್ಲಿ ಅದರ ಚಿಹ್ನೆ ಯಂತೆ ಅಲ್ಲಿ ೩-೪ ಕಲ್ಲುಗಳನ್ನು ಜೋಡಿಸಿದ್ದರು ,ಹಿಂದಿನ ಕಾಲದಲ್ಲಿ ಕಾಡಿಗೆ ಬೇಟೆ ಆಡಲು ಹೋಗುತ್ತಿದ್ದವರು ಆ ಕಲ್ಲಿಗೆ ಪೂಜೆ ಸಲ್ಲಿಸಿ ಅದಕ್ಕೆ ಬಲಿಯನ್ನು ಅರ್ಪಿಸಿ ಕಾಡನ್ನು ಪ್ರವೇಶಿಸುತ್ತಿದರು ಎಂಬ ನಂಬಿಕೆ . ಅಲ್ಲಿಂದ ಸ್ವಲ್ಪ ಮುಂದೆ ಹೋದ ಬಳಿಕೆ ಅಲ್ಲಿ ಒಂದು ರಾಕ್ಷಸಿ ಕಲ್ಲು ಇತ್ತು  .(ಕೆಲವರು ಇದು ಆ ಪಾಳೆಗಾರನ ಹೆಂಡತಿಯ ಸಮಾಧಿ ಸ್ಥಳವೆಂದು ಇನ್ನು ಕೆಲವರು  ಇಲ್ಲಿ ಕಾಡಿನ ದೇವಿಯನ್ನು ಪ್ರತಿಷ್ಠಾಪಿಸಿದ್ದಾರೆ ಮತ್ತು ಇಲ್ಲಿ ಹಿಂದೆ ಬಲಿ ಕೊಡುತ್ತಿದ್ದರು ಎಂದು ವರ್ಣಿಸಿದರು )

ಕಾಡಿನ ಗಡಿ ಎಂದು ಸೂಚಿಸುವ ಕಲ್ಲು 

ರಾಕ್ಷಸ ಕಲ್ಲು 




ಅಲ್ಲಿಂದ  ಮುಂದೆ ಸಾಗಿ ಅಲ್ಲಿದ್ದ ಒಂದು ಸಣ್ಣ ಝರಿಯ ಬಳಿ ಎಲ್ಲರೂ ಊಟ ಮುಗಿಸಿಕೊಂಡೆವು . (ಊಟದ ಪೊಟ್ಟಣವನ್ನು ಬೆಳಗ್ಗೆಯೇ ಎಲ್ಲರಿಗೂ ವಿತರಿಸಲಾಗಿತ್ತು ). ೧೦-೧೫ ನಿಮಿಷದ ವಿಶ್ರಾಂತಿಯ ಬಳಿಕ ಮುಂದೆ ಸಾಗಿದೆವು . ಅಲ್ಲಿ ನಮಗೆ ಅಚಾನಕ್ ಆಗಿ ಒಂದು ಕಾಡು ಮೊಲ ಕಂಡಿದ್ದೆ ನಮ್ಮ ದಿನದ ಸಾರ್ಥಕ ಎನ್ನಬಹುದು .  ಆ ಕಾಡಿನಲ್ಲಿ ಸ್ವಲ್ಪ ಮುಂದೆ ಹೋದಾಗ ನಮಗೆ ಕಂಡಿದ್ದು ಕೋಟೆಯ ಹೆಬ್ಬಾಗಿಲು . ಆ ಹೆಬ್ಬಾಗಿಲಿನ ಎರಡೂ ಬದಿಯಲ್ಲಿ ಕೆಲವು ಕೆತ್ತನೆಗಳು ಇದ್ದದ್ದು ಕಂಡು ಪಾಳೆಗಾರರು  ಕೂಡ ಶಿಲ್ಪಕಲೆಗೆ ಬೆಲೆ ಕೊಡುತ್ತಿದ್ದರು ಎಂದು ತಿಳಿಯಬಹುದು . ಅಲ್ಲಿಂದ ಕಡಿದಾದ ದಾರಿಯಲ್ಲಿ ಕೆಳಗೆ ಇಳಿಯುವಾಗ ಕೋಟೆಯ ಮತ್ತಷ್ಟು ಅವಶೇಷಗಳು ಕಂಡವು . 
ಕಾಡಿನ ಮಧ್ಯೆ ಇರುವ ಹೆಬ್ಬಾಗಿಲು 

ಕಾಡಿನ ಮಧ್ಯೆ ಇರುವ ಹೆಬ್ಬಾಗಿಲು 


ಹೆಬ್ಬಾಗಿಲಿನ ಬದಿಯಲ್ಲಿರುವ ಗಣಪನ ಕೆತ್ತನೆ 

ಹೆಬ್ಬಾಗಿಲಿನಲ್ಲಿರುವಮತ್ತೊಂದು ಕೆತ್ತನೆ 



ನಂತರ ನಮಗಾಗಿ ಕಾದಿದ್ದ ವಾಹನಗಳಲ್ಲಿ ಮತ್ತೆ ಕೊಟ್ಟಿಗೆಹಾರದ ಕಡೆಗೆ ಹೊರಟೆವು . ಹಿಂದಿರುವಾಗ ಕೆಳಗೂರು(ಕೊಟ್ಟಿಗೆಹಾರದಿಂದ ಹೊರನಾಡು ಹೋಗುವ ದಾರಿಯಲ್ಲಿ ಈಗ್ರಾಮ ಇದೆ.ಇಲ್ಲಿ ಸಾಕಷ್ಟು ಟೀ ಎಸ್ಟೇಟ್ ಗಳು ಇವೆ ) ಎಂಬ ಉರಿನಲ್ಲಿ ಚಹಾ ಸೇವಿಸಿ ಅಲ್ಲಿಂದ ಹೊರಟು ಹೇಮಾವತಿ ನದಿಯ ಉಗಮ ಸ್ಥಾನಕ್ಕೆ ಹೊರಟೆವು

ಹೇಮಾವತಿ ನದಿಯ ಉಗಮ ಸ್ಥಾನ 



ಪಕ್ಕದಲ್ಲೇ ಇರುವ ಗಣಪತಿ ದೇವಸ್ಥಾನ 


ಹೇಮಾವತಿ ನದಿಯ ಉಗಮ ಸ್ಥಾನ ನೋಡಿದ ನಂತರ ಅಲ್ಲೇ ಇರುವ ಗಣಪತಿ ದೇವಸ್ಥಾನವನ್ನು ಪ್ರದಕ್ಷಿಣೆ ಹಾಕಿ  ಹೊರಟು  ಸಂಜೆಯ ಹೊತ್ತಿಗೆ ಕೊಟ್ಟಿಗೆಹಾರ ತಲುಪಿ ನಮ್ಮ ನಮ್ಮ ಊರಿನ ಕಡೆ ಹೊರಟು  ಬಂದೆವು . 

Friday, December 26, 2014

ಆಗಾಗ ಬಿದ್ದ ಹನಿಗಳು !!!

೧. ತಿಳಿನೀರಿಗೆ ಕಲ್ಲೆಸೆದು ಮೂಡಿದ ನೂರೆಂಟು ಬಿಂಬಗಳೆಂಬ
   'ನಾನು'ಗಳಲ್ಲೇ ಹುಡುಕುತ್ತಿಹೆನು ನಾನು ನನ್ನನು.. 

೨. ಮುಟ್ಟಿದರೆ ಮುದುಡುವ ನಾಚಿಕೆ ಗಿಡ ,
   ಮುತ್ತಿಟ್ಟರೆ ಅರಳುವ ಅವಳ ತುಟಿ ,
  ನಾಚಿದ ಬಳ್ಳಿಯಂತೆ ಮುದುಡುವುದವಳ ಕಣ್ಣ ರೆಪ್ಪೆ !!!

೩. ಅಲೆಯೊಂದು ಸೃಷ್ಟಿಯಾಯಿತು ನನ್ನೆದೆಯ ಬಡಿತಕ್ಕೆ,
   ಮತ್ತೊಂದು ಅಲೆ ಸೃಷ್ಟಿಯಾಯಿತು ಅವಳ ಗೆಜ್ಜೆ ಸದ್ದಿಗೆ ,
  ಎದೆಯ ಬಳಿ ಅವಳು ಹೆಜ್ಜೆ ಇಟ್ಟಾಗ 
  ಮಿಲನವಾದವು ಎರಡೂ ಅಲೆಗಳು ..
  ಸೃಷ್ಟಿಯಾಯಿತೊಂದು ಹೊಸ ಸ್ವರ...ನನ್ನೆದೆಯ ವೀಣೆಯಿಂದ.... 
  ಪದವೊಂದು ಹೊರಹೊಮ್ಮಿತು ಅವಳ ಮೃದು ಕಂಠದಿಂದ ...

೪. ನಿನ್ನ ಪ್ರೀತಿಗೆ ನನ್ನ ಸಿಹಿ ಮುತ್ತುಗಳೇ ಸುಂಕ ಗೆಳತಿ ,
    ಮುತ್ತಲ್ಲದೆ ಬೇರೇನೂ ಕೇಳಬೇಡ.. 

೫.. ಕಣ್ತುಂಬ ಕನಸುಗಳನ್ನು ಬಿತ್ತಿ ,
    ಕಣ್ಣಂಚಲೇ ಮರೆಯಾದವಳು .
   ನೆನಪುಗಳು ಅಳಿಯುವ ಮುನ್ನವೇ 
   ಹಳೆ ಕನಸುಗಳಿಗೆ ಹೊಸ ಬಣ್ಣ ಹಚ್ಚುತ್ತಿಹಳು..  

೬. ನನ್ನೆದೆಯ ವೀಣೆಯ ಸ್ವರಕ್ಕೆ ನುಡಿಯಾದವಳು ,
    ಕಣ್ಮುಚ್ಚಿ ಮಲಗಿದರೂ ಕಣ್ಣೊಳಗಿನ ಬಿಂಬವಾಗಿ ಕಾಡುತ್ತಿಹಳು.. 

೭. ಚಳಿಗೆ ಕನಸುಗಳೂ ಹೆಪ್ಪುಗಟ್ಟು ತ್ತಿವೆ ಗೆಳತಿ ,
    ನೀನಾದರೂ ಇರಬಾರದೇ ಸನಿಹ ?
   ಬೆಚ್ಚಗೆ ಅಪ್ಪಿಕೊಳ್ಳಲು , ಬಿಸಿ ಮುತ್ತೊಂದ ನೀಡಲು.. 

Friday, August 15, 2014

ಹುತಾತ್ಮರ ಸ್ಮಾರಕ

ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾವಿರಾರು ಹೋರಾಟಗಾರು ಭಾಗಿಯಾಗಿದ್ದರು , ಭಗತ್ ಸಿಂಗ್,ವೀರ್ ಸಾವರ್ಕರ್ ಅವರಂಥ ಕ್ರಾಂತಿಕಾರಿಗಳಿಂದ  ಉತ್ತೇಜಿತರಾದ ಎಷ್ಟೋ ವಿದ್ಯಾರ್ಥಿಗಳು ತಮ್ಮ ವ್ಯಾಸಂಗವನ್ನು ಅರ್ಧಕ್ಕೆ ಬಿಟ್ಟು ಚಳವಳಿಗಳಲ್ಲಿ ಭಾಗಿಯಾಗುತ್ತಾರೆ. ನಮ್ಮ ನಾಡಿನ ಖ್ಯಾತ ಶಿಕ್ಷಣ ತಜ್ಞರಾದ ಡಾ।। ಹೆಚ್.ನರಸಿಂಹಯ್ಯನವರು ಕೂಡ ತಮ್ಮ ವಿದ್ಯಾರ್ಥಿ ಜೀವನದ ಸಮಯದಲ್ಲಿಯೇ ಗಾಂಧೀಜಿ ಅವರಿಂದ ಪ್ರೇರಿತರಾಗಿ ಕ್ವಿಟ್ ಇಂಡಿಯಾ ಚಳವಳಿ ಮತ್ತು ಹಲವಾರು ಚಳವಳಿಗಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದ್ದರು. ಅದೇ ರೀತಿ ಎಲೆ ಮರೆ ಕಾಯಿಯಂತೆ ಬೆಂಗಳೂರಿನ ಇನ್ನೂ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರ ನೆನಪಿನಲ್ಲಿ ಹಲವಾರು ಸ್ಮಾರಕಗಳಿವೆ. ಅದೇ ರೀತಿಯಲ್ಲಿ ಬೆಂಗಳೂರಿನ ಹೃದಯ ಭಾಗದಲ್ಲಿ ಒಂದು ಸ್ಮಾರಕ ಇದೆ . ಈ ಸ್ಮಾರಕ ಇರುವುದು ಮೈಸೂರ್ ಬ್ಯಾಂಕ್ ಸರ್ಕಲ್ ನಲ್ಲಿ. ಈ ಸ್ಮಾರಕವು , ೧೯೪೨ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾಗಿ ಬ್ರಿಟೀಷರ ವಿರುದ್ಧ ಹೋರಾಡಿ ಅವರ ಗುಂಡಿಗೆ ಬಲಿಯಾದ ೪ ವಿಧ್ಯಾರ್ಥಿಗಳ ನೆನಪಿನಲ್ಲಿ ನಿರ್ಮಾಣವಾದದ್ದು.  
ಶ್ರೀ ಶಾಮಣ್ಣ ಬಿನ್ ಬೇಟೆ ರಂಗಪ್ಪ , ಶ್ರೀ ಜೆ.ವಿ . ತಿರುಮಲಯ್ಯ , ಶ್ರೀ ಪ್ರಹ್ಲಾದ ಶೆಟ್ಟಿ  , ಶ್ರೀ  ಗುಂಡಪ್ಪ ಎಂಬ ನಾಲ್ಕು ಜನ ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳು ಆ ಚಳವಳಿಯಲ್ಲಿ ಬಲಿಯಾಗಿದ್ದರು . ಈ ಹುತಾತ್ಮರ ನೆನಪಿಗಾಗಿ ಕೇಂದ್ರ ಸರ್ಕಾರವು ೧೯೭೨ನೆ ಇಸವಿಯಲ್ಲಿ ಈ ಸ್ಮಾರಕವನ್ನು ನಿರ್ಮಾಣ ಮಾಡಿತ್ತು ಮತ್ತು ೨೫ನೆ ಸ್ವಾತಂತ್ರ ದಿನದ ನೆನಪಿನಲ್ಲಿ  ಅಂದರೆ ಆಗಸ್ಟ್ ೧೫, ೧೯೭೩ನೆ ಇಸವಿಯಲ್ಲಿ ಇದನ್ನು ಅನಾವರಣ ಮಾಡಿತ್ತು. 



ಸುಮಾರು ಹತ್ತು ಅಡಿ ಎತ್ತರ ಇರುವ ಈ ಸ್ಮಾರಕದಲ್ಲಿ ಆ ನಾಲ್ಕು ಹುತಾತ್ಮ ವಿಧ್ಯಾರ್ಥಿಗಳ ಹೆಸರನ್ನು ಕೆತ್ತಿಸಲಾಗಿದೆ.

ಇಂಥದ್ದೊಂದು ಸ್ಮಾರಕ ಇರುವುದು ಬೆಂಗಳೂರಿನ ಎಷ್ಟೋ ಜನರಿಗೆ ಗೊತ್ತಿಲ್ಲ ಎಂಬುದು ನನ್ನ ಭಾವನೆ . ಇಂಥ ಸ್ಮಾರಕಗಳು ನಮ್ಮ ಮುಂದಿನ ಪೀಳಿಗೆಗಳಿಗೆ ಪರಿಚಯವಾಗಬೇಕು . ಅಂದು ವಿದ್ಯಾರ್ಥಿಗಳು ಕೂಡ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದರು ಎಂಬುದು ಈಗಿನ ಯುವ ಪೀಳಿಗೆಗೆ ಸ್ಪೂರ್ತಿ ಆಗಬೇಕು . 

೬೮ನೆ ಸ್ವಾತಂತ್ರ್ಯ ದಿನಾಚರಣೆಯ ಈ ದಿನದಂದು  ನಮ್ಮ ಸ್ನೇಹಿತರೊಡಗೂಡಿ ಈ ಸ್ಮಾರಕಕ್ಕೆ ಭೇಟಿ ನೀಡಿ ಆ ಹುತಾತ್ಮರಿಗೆ ನಮ್ಮ ಗೌರವವನ್ನು ಸಮರ್ಪಿಸಿ ಬಂದೆವು . 

ಇಂದಿನ ಈ ಸ್ಮಾರಕದ ಸ್ಥಿತಿ ಹೇಗಿದೆ ಅಂದರೆ  ಈ ಸ್ಮಾರಕ ಇರುವ ಜಾಗವನ್ನು ಪಕ್ಕದ ದೇವಸ್ಥಾನದವರು ಅತಿಕ್ರಮಣ ಮಾಡಿಕೊಂಡು ಅದರ ಸುತ್ತಲು ಕಾಂಪೌಂಡ್ ಅನ್ನು ನಿರ್ಮಿಸಿಕೊಂಡಿದ್ದಾರೆ. ಬೃಹತ್ ಬೆಂಗಳೂರು ಮಹಾನಾಗರ ಪಾಲಿಕೆಯು ಇದರ ಬಗ್ಗೆ ಮುತುವರ್ಜಿ ವಹಿಸಿ ಈ ಸ್ಮಾರಕವನ್ನು ದೇವಸ್ಥಾನದ ಪ್ರಾಂಗಣದಿಂದ ಪ್ರತ್ಯೆಕಗೊಳಿಸಿ ಇದನ್ನು ಸಂರಕ್ಷಿಸಿದರೆ ಒಳ್ಳೆಯದು ಎಂಬುದು ನನ್ನ ಅನಿಸಿಕೆ .