Saturday, December 31, 2011

Happy New Year !!!

ಗಳಿಗೆಗಳು ಉರುಳಿದಂತೆ ದಿನಗಳು
ದಿನಗಳು ಉರುಳಿದಂತೆ ವರುಷಗಳು
ಸುಖ ದುಃಖಗಳನ್ನು  ಹೊತ್ತು ಸಾಗುತ್ತಿದೆ ಜೀವನ !!!

ಆರಕ್ಕೇರದೆ ಮೂರಕ್ಕಿಳಿಯದೆ
ನಾಲ್ಕೈದರಲ್ಲೇ ಜೋತಾಡುತ್ತಿದೆ
ನಮ್ಮ ಭವಣೆ ,ಸಾಧನೆ...

*************************

ಕೈ ಜಾರಿ ನಯವಂಚಕನ ಸೇರಿದ ದುಡಿಮೆಯ ಫಲ
ಇದು ನನ್ನ ದಡ್ಡತನದಿ  ಗತಿಸಿದ ತಪ್ಪು
ನನ್ನ ನಂಬಿಕೆಗ ಅವ ಬಗೆದ ದ್ರೋಹ !
ಆದರೆ,ನನಗದು ಶಿಕ್ಷೆ,ಅಪ್ಪನ ಮಾತು ಕೇಳದ್ದಕ್ಕೆ ತಕ್ಕ ಶಾಸ್ತಿ.
ಬರೀ ಶಿಕ್ಷೆ ಅಲ್ಲ,ಈಗಲಾದರೂ
ಜಾಗರೂಕನಾಗು ಎಂಬ ಭೋಧನೆ..
ಇಲ್ಲ,ಇನ್ನೊಮ್ಮೆ ಮೋಸ ಹೋಗಲಾರೆ !
ಕೊನೆಗೆ ಅನಿಸಿದ್ದು ಅಪ್ಪನ ಮಾತು ಕೇಳಬೇಕಿತ್ತು .
ಕೈಯೊಳಗಿನ ರಂಧ್ರಗಳಿಗೆ ತೇಪೆ ಹಾಕಬೇಕು...
ಸಮಯ ಕೈ ಜಾರುವ ಮುನ್ನ ಎಚ್ಚೆತ್ತುಕೊಳ್ಳಬೇಕು,

***********************

ನನಸಾಗದೇ ಉಳಿದಿವೆ ಅದೆಷ್ಟೋ ಕನಸುಗಳು
ಕಾರ್ಯಗತವಾಗದ ನಿರ್ಣಯಗಳು
ಪಟ್ಟು ಬಿಡದೆ ಸಾಧಿಸಬೇಕಿದೆ ಕನಸು ಮತ್ತು ನಿರ್ಣಯಗಳನು...

ಚಿಂತಿಸದೆ  ಗತಿಸಿದ ಕರ್ಮಗಳನು
ಯೋಚಿಸದೆ ಮುಂದಿನ ಕಾರ್ಯಗಳನು
ಜೀವಿಸಬೇಕು ವರ್ತಮಾನದಲಿ..
****************************


                                       ನೇಸರನ ನವ ಕಿರಣಗಳು ನಿಮ್ಮ ಬಾಳಲ್ಲಿ ಹೊಂಗಿರಣವಾಗಲಿ..
                                      ಸುಖ ದುಃಖಗಳನ್ನೂ ಸಮವಾಗಿ ಸ್ವೀಕರಿಸುವ ಶಕ್ತಿ ನಿಮ್ಮದಾಗಲಿ..
                                             ಶಾಂತಿ,ನೆಮ್ಮದಿ ನಿಮಗೆ ಆಸರೆ ಆಗಲಿ..
                                             ಆತ್ಮ ಸ್ಥೈರ್ಯವೇ ನಿಮ್ಮ ಶಕ್ತಿಯಾಗಲಿ..
                                  ಎಲ್ಲರಿಗೂ ನವ ವಸಂತದ ಹಾರ್ದಿಕ  ಶುಭಾಶಯಗಳು....

Photo Courtesy:Girish.S

Sunday, December 4, 2011

ಕಡಿಮೆ ವೆಚ್ಚದ ಗೋಬರ್ ಗ್ಯಾಸ್ !!!

ಅವಶ್ಯಕತೆ ಮತ್ತು ಇರುವ ವಸ್ತುಗಳು ಮತ್ತು ಉಪಯೋಗಿಸದೆ ಬಿಟ್ಟ ಸರಕುಗಳನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂದು  ತಿಳಿದರೆ ಏನೆಲ್ಲಾ ಕಂಡು ಹಿಡಿಯಬಹುದು  ಎಂಬುದಕ್ಕೆ ಇದೊಂದು ನಿದರ್ಶನ ಅಂತ ಹೇಳಬಹುದು...
ನಾನೀಗ ಹೇಳುತ್ತಿರುವುದು ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಸಿದ್ಧನಹಳ್ಳಿ ಗ್ರಾಮದ ಹಾಲೇಗೌಡ ಎಂಬ ರೈತರ ಮನೆಯಲ್ಲಿ ಇರುವ ಒಂದು ಗೋಬರ್ ಗ್ಯಾಸ್ ಬಗ್ಗೆ.....ಇದಕ್ಕೆ ತಗುಲಿರುವ ವೆಚ್ಚ ಕೇವಲ ೫೦೦ ರುಪಾಯಿ ಎಂದರೆ ಆಶ್ಚರ್ಯ ಆಗಬಹುದು.... ಆದರೆ ಇದು ಸತ್ಯ...ಇದರ ಹಿಂದಿನ ಕತೃ ಅಲ್ಲೇ ಹತ್ತಿರದ ಊರಿನ ಸಿದ್ಧರಾಮಣ್ಣ ಅಂತ.. ಸದ್ಯ ಬೆಂಗಳೂರಿನಲ್ಲಿ GKVK ಯಲ್ಲಿ APOF ಎಂಬ ಅಂಗ ಸಂಸ್ಥೆಯಲ್ಲಿ  ರೈತರಿಗೆ ತರಬೇತಿ ಕೊಡುತ್ತಿದ್ದಾರೆ... ಈ ಗ್ಯಾಸ್ ಉತ್ಪಾದನೆಯ ತಂತ್ರಜ್ಞಾನ ಅವರ ಐಡಿಯಾ.

ಇವರು ಇಲ್ಲಿ ಉಪಯೋಗಿಸಿರುವುದು ಒಂದಿಷ್ಟು ಸೆಮೆಂಟ್ ಚೀಲಗಳನ್ನು ಹರಿದು ಅದರಿಂದ ಟಾರ್ಪೆಲ್ ಮಾಡಿದ್ದಾರೆ...ಜೊತೆಗೆ ಅಷ್ಟೇ ಆಕಾರದ ಇನ್ನೊಂದು ಪ್ಲಾಸ್ಟಿಕ್ ಟಾರ್ಪೆಲ್  ತಂದಿದ್ದಾರೆ...ಹನಿ ನೀರಾವರಿ ಪದ್ದತಿ ಯಲ್ಲಿ ಉಪಯೋಗಿಸುವ ಒಂದಿಷ್ಟು ಪೈಪ್ ಮತ್ತು ೩-೪ ಅಡಿ ಅಷ್ಟು PVC  ಪೈಪ್....  ಸುಮಾರು ೪೦-೫೦ ಇಟ್ಟಿಗೆ ಮತ್ತು ಸೀಮೆಂಟ್ ಅಷ್ಟೇ...


ಮೊದಲಿಗೆ ಒಂದು ಟಾರ್ಪೆಲ್ ಸುತ್ತಿ ಸಿಲಿಂಡರ್ ಆಕಾರದಲ್ಲಿ ಮಾಡಬೇಕು... ಅದರ ಸುತ್ತ ಇನ್ನೊಂದು ಪದರ ಸ್ವಲ್ಪ ಗಟ್ಟಿಯಾದ ಟಾರ್ಪೆಲ್ ಸುತ್ತಬೇಕು.. ಇದನ್ನು ಸೀಮೆಂಟ್ ನಲ್ಲಿ ಕೂಡ ಕಟ್ಟಾ ಬಹುದು... ಆದರೆ ಅದು ತುಂಬ ದುಬಾರಿ.... ಈ ಟಾರ್ಪೆಲ್ ನಿಂದ ಸುತ್ತಿದ ಆಕೃತಿ ಇಲ್ಲಿ ಆ ದೊಮೆ ನ ಕಾರ್ಯ ನಿರ್ವಹಿಸುತ್ತದೆ...ಇಲ್ಲಿ ಉತ್ಪಾದನೆ ಆಗುವ ಗ್ಯಾಸ್ ಇದರ ಸಾಮರ್ಥ್ಯದ ಮೇಲೆ ಅವಲಂಭಿಸಿದೆ....ಇದನ್ನು ಎಷ್ಟು ದೊಡ್ಡದು ಮಾಡುತ್ತಿವಿ ಅಷ್ಟು  ಸಾಮರ್ಥ್ಯ ಹೊಂದಿರುತ್ತದೆ.ಇದಕ್ಕೆ ಎರಡು ಬದಿಯಲ್ಲಿ ೨-೩ ಅಡಿ ಉದ್ದದ PVC ಪೈಪ್ ಅನ್ನು ಜೋಡಿಸಬೇಕು... ಮತ್ತು ಮಧ್ಯದಲ್ಲಿ ಮೇಲೆ ಹನಿ ನೀರಾವರಿಯಲ್ಲಿ ಬಳಸುವ ಪೈಪ್ ಅನ್ನು  ಜೋಡಿಸಿ ಅದನ್ನು ಸ್ಟವ್ ಗೆ ಜೋಡಿಸಬೇಕು.... ಇಲ್ಲಿ ಈ ಸಿಲಿಂಡರ್ ಆಕಾರದ ಹೊಳಗೆ ಗಾಳಿ ಹೋಗದಂತೆ ನೋಡಿಕೊಳ್ಳಬೇಕು... ಪೈಪ್ ಜೋಡಿಸುವ ೩ ಕಡೆ ಚೆನ್ನಾಗಿ ಕವರ್ ಮಾಡಬೇಕು...
ಹಾಲೇಗೌಡರು ತಮ್ಮ ಮನೆಯಲ್ಲಿ ಅಳವಡಿಸಲಾಗಿರುವ ಗೋಬರ್ ಗ್ಯಾಸ್ ಅನ್ನು ತೋರಿಸುತ್ತಿರುವುದು...
ನಂತರ ಕೆಳಗಿನ ಚಿತ್ರದಂತೆ ಒಂದು ತೊಟ್ಟಿಯನ್ನು ಕಟ್ಟಬೇಕು... ತೊಟ್ಟಿಯ ಕೆಳ ಭಾಗದಲ್ಲಿ ಒಂದು ಪೈಪ್ ಅನ್ನು ಜೋಡಿಸಿ ಅದನ್ನು ಟಾರ್ಪೆಲ್ ನಿಂದ ಮಾಡಿರುವ dome ಗೆ ಜೋಡಿಸಬೇಕು.... ಈ ತೊಟ್ಟಿಯಲ್ಲಿ ಸಗಣಿಯನ್ನು ಕಲಸಿ ಹಾಕಿದರೆ ಅದು ಆ ಪೈಪ್ ಮುಖಾಂತರ ಆ dome ಒಳಗೆ ಹೋಗುತ್ತದೆ... ಅಲ್ಲಿ ಗ್ಯಾಸ್ ಉತ್ಪಾದನೆ ಆಗಿ ಮಧ್ಯದಲ್ಲಿ  ಒಂದು  ಸಣ್ಣ  ಪೈಪ್ ಮುಖೇನ ಅದನ್ನು ಸ್ಟವ್ ಗೆ ಜೋಡಿಸಬೇಕು.... ಇವರು ಸಧ್ಯ ಹನಿ ನೀರಾವರಿಯ ಪೈಪ್ ಅನ್ನು ಜೋಡಿಸಿ ಅದರ ನಲ್ಲಿ ಅನ್ನು Regulator ಆಗಿ ಉಪಯೋಗಿಸುತ್ತಿದ್ದಾರೆ.... ಈ dome ನಲ್ಲಿ ಈ ಸಣ್ಣ ಪೈಪ್ ಅನ್ನು ಜೋಡಿಸುವಾಗ Clamp  ಹಾಕಿದರೆ ಒಳ್ಳೆಯದು.... ಆಗ ಗಟ್ಟಿಯಾಗಿ  ಇರುತ್ತದೆ...



ಸಗಣಿಯನ್ನು ಕದಡಿ ಹಾಕುತ್ತಿರುವುದು...

ಪ್ರತಿ ದಿನ ಸುಮಾರು ೫-೧೦ kg ಸಗಣಿಯನ್ನು ಕದಡಿ ಹಾಕಿದರೆ ಸಾಕು...ಕೇವಲ ೧೦ ನಿಮಿಷದ ಕೆಲಸ..


ಇನ್ನೊಂದು ಬದಿಯಲ್ಲಿ ಕಾಂಪೋಸ್ಟ್ ಹೊರ ಬರಲು ಪೈಪ್ ಹಾಕಿರುವುದು...
ಪ್ರತಿ ದಿನ ಹೊರಗೆ ಬರುವ ಕಾಂಪೋಸ್ಟ್ ಅನ್ನು ಎರೆ ಹುಳದ ಗೊಬ್ಬರ ತಯಾರು ಮಾಡಲು ಬಲಸ ಬಹುದು ಅಥವಾ ಅದಕ್ಕೆ ಯಾವುದಾದರು ಹಿಟ್ಟು(ರಾಗಿ,ಮೆಕ್ಕೆ ಜೋಳ,ಜೋಳ,ರಾಗಿ,ಹುರುಳಿ ಕಾಲು ಹಿಟ್ಟು....) ಮತ್ತು ಬೆಲ್ಲ ಬೆರೆಸಿದರೆ ಅದು ಬಹಳ ಉತ್ತಮವಾದ ಗೊಬ್ಬರ ಆಗುತ್ತ್ತದೆ...ಸಾವಯವ ಕೃಷಿ ಮಾಡುವವರಿಗೆ ಇದು ಹೇಳಿ ಮಾಡಿಸಿದಂತಹ ರೆಡಿ ಮೇಡ್ ಗೊಬ್ಬರ....
ಗ್ಯಾಸ್ ಹೋಗಲು ಪೈಪ್ ಜೋಡಿಸಿರುವುದು...ಇದನ್ನು ಸ್ಟವ್ ಗೆ ಜೋಡಿಸಲಾಗಿದೆ...
ಇಲ್ಲಿ ಇವರು ಸೈಕಲ್ ಟ್ಯೂಬ್ ನಲ್ಲಿರುವ Clamp ಅನ್ನು ಹಾಕಿ ಅದನ್ನು ಸಣ್ಣ ಪೈಪ್ ಗೆ ಜೋಡಿಸಿ ಅದನ್ನು ಸ್ಟವ್ ಗೆ connect ಮಾಡಿದ್ದಾರೆ...


ಇವರ ಮನೆಯಲ್ಲಿ ಇರುವ dome ೧೫೦೦ ಲೀಟರ್ ಸಾಮರ್ಥ್ಯದ್ದು...ಇದರಿಂದ ೩-೪  ಜನಕ್ಕೆ ಸಲೀಸಾಗಿ ಒಂದು ದಿನದ ಅಡುಗೆ ಮಾಡಬಹುದು.... ಅದರ ಸಾಮರ್ಥ್ಯ ಹೆಚ್ಚಿಸಿದಂತೆ(ಅದರ ಗಾತ್ರ ದೊಡ್ಡ ಮಾಡಬೇಕು) ಅದರಿಂದ ಉತ್ಪಾದನೆ ಆಗುವ ಗ್ಯಾಸ್ ಕೂಡ ಜಾಸ್ತಿ ಆಗುತ್ತದೆ.... ಯಾವುದೋ ಹಳೆ ಸ್ಟವ್ ಅನ್ನು ಸಧ್ಯ ಉಪಯೋಗಿಸುತ್ತಿದ್ದಾರೆ... ಅ ಸ್ಟವ್ ಬಿಟ್ಟು ಅವರಿಗೆ ತಗುಲಿರುವ ವೆಚ್ಚ ಕೇವಲ ೫೦೦ ರುಪಾಯಿ... ಇದು ಕನಿಷ್ಠ ಪಕ್ಷ ಏನೇ ಆದರು ೨ ವರ್ಷ ಬಾಳಿಕೆ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ...



ಆ dome ಅನ್ನು ಪ್ಲಾಸ್ಟಿಕ್ ಟಾರ್ಪೆಲ್ ನಿಂದ ಮಾಡಿರುವಿದರಿಂದ ಅದನ್ನು ಸ್ವಲ್ಪ ನೆರಳಿನಲ್ಲಿ ಇಟ್ಟರೆ ಒಳ್ಳಯದು...ಯಾಕೆ ಅಂದರೆ ಆ ಪ್ಲಾಸ್ಟಿಕ್ ಟೆಂಪರ್ ಕಳೆದುಕೊಂಡು ಹರಿದು ಹೋಗುಬಹುದು...ಇಲ್ಲಿ ಪ್ಲಾಸ್ಟಿಕ್ ನಿಂದ ಮಾಡಿರುವ dome ಅನ್ನು ಫೈಬರ್ ನಿಂದ ಅಥವಾ ಇಟ್ಟಿಗೆ ಇಂದ ಕೂಡ ಮಾಡಬಹುದು.. ಆದರೆ ಅದು ತುಂಬ ದುಬಾರಿ ಆಗುತ್ತದೆ....ಇಲ್ಲಿ ಇನ್ನೊಂದು ವಿಶೇಷ ಅಂದರೆ LPG ಗ್ಯಾಸ್ ನ ಹಾಗೆ burst ಆಗುವ ಸಂಭವ ಇಲ್ಲವೇ ಇಲ್ಲ...


ಕಳೆದ ವಾರ ಹಳೇಬೀಡು ಬಳಿ ಪುಷ್ಪಗಿರಿ ಬೆಟ್ಟದಲ್ಲಿ ನಡೆದ ಕೃಷಿ ಮೇಳದಲ್ಲಿ ಇದರ ಪ್ರಾತ್ಯಕ್ಷಿಕೆ ಮಾದರಿ ಅನ್ನು ಇಡಲಾಗಿತ್ತು....ಕುತೂಹಲ ಜಾಸ್ತಿ ಆಗಿ ಇದನ್ನು ನೋಡಲೇ ಬೇಕು ಎಂದು ಅಲ್ಲಿ ಹೋಗಿ ನೋಡಿಕೊಂಡು ಬಂದ್ದದಾಯಿತು...
ಸಧ್ಯ ಆ ಉರಿನಲ್ಲಿ ಸುಮಾರು ೧೦-೧೫ ಮನೆಗಳಲ್ಲಿ ಇದನ್ನು ಅಳವಡಿಸಿಕೊಳ್ಳುತ್ತಿದ್ದಾರೆ... ಇಲ್ಲಿ ಹೊರ ಬರುವ ಕಾಂಪೋಸ್ಟ್ ಬರಿ ಸಗಣಿಗಿಂತ ಹೆಚ್ಚು ಸ್ಟ್ರಾಂಗ್ ಇದೆ.. ಆದ್ದರಿಂದ ಇದು ಬಹಳ ಒಳ್ಳೆಯ ಗೊಬ್ಬರ..


ಇಲ್ಲಿ ಆ ಪ್ಲಾಸ್ಟಿಕ್ dome ಒಳಗೆ ಇನ್ನು ಒಂದು ಅಥವಾ ಎರಡು ಪದರ ಪ್ಲಾಸ್ಟಿಕ್  ಹಾಕಿದರೆ ಸ್ವಲ್ಪ ಗಟ್ಟಿಯಾಗಿ ಇರುತ್ತದೆ.... ಮತ್ತು ಇದರ ಒಳಗೆ ಒಂದು ಪದರ ತಾಮ್ರದ ತಗಡು ಹಾಕಿದರೆ ವಿದ್ಯುತ್ ಅನ್ನು ಕೂಡ ಉತ್ಪಾದಿಸಬಹುದು... ಮತ್ತು Insulin ಕೂಡ ಇದರಿಂದ ತೆಗೆಯಬಹುದು ಎಂದು ಸಿದ್ದರಾಮಣ್ಣನವರು ತಿಳಿಸಿದರು...... ಇದರ ಬಗ್ಗೆ ಇನ್ನು ಕೆಲವೇ ದಿನದಲ್ಲಿ ಪ್ರಯೋಗ ಮಾಡಲಾಗುವುದು.. ..ಇದರ ಪ್ರಯೋಗ ಮುಗಿದ ನಂತರ ಇನ್ನೊಮ್ಮೆ ಅದರ ಬಗ್ಗೆ ಲೇಖನ ಬರೆಯುತ್ತೀನೆ...


"Necessity is the mother of Invention" ಅಂತ ಇದಕ್ಕೆ ಹೇಳಬಹುದು ಅಲ್ಲವೇ?

ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸಿದ್ಧರಾಮಣ್ಣ ಅವರನ್ನು ಸಂಪರ್ಕಿಸಬಹುದು ... ಅವರ ಮೊಬೈಲ್ ಸಂಖ್ಯೆ:9141859991