Friday, February 18, 2011

ಹೋಟೆಲಿನಲ್ಲಿ ಒಂದಿಷ್ಟು ದಿನ

 ಹೋಟೆಲಿನಲ್ಲಿ ,ಮ್ಯಾನೇಜರ್  ಆಗುವ ಅರ್ಹತೆ ಉಳ್ಳ ಹುಡುಗ ಮಾಣಿಯಾಗಿ ಅನುಭವಿಸಿದ ಕಥೆ.

ಮಲೆನಾಡಿನ ಒಂದು ಹಳ್ಳಿಯ ಸ್ವಾಭಿಮಾನಿ ಹುಡುಗ..ತನ್ನ ಡಿಗ್ರಿ ಮುಗಿಸಿ ಬೃಹತ್ ಬೆಂಗಳೂರಿಗೆ ಕೆಲಸ ಹುಡುಕಲು ಬರುತ್ತಾನೆ.ಬಂದವನೇ ತನ್ನ ನೆಂಟರ ಮನೆಯಲ್ಲಿ ಸ್ವಲ್ಪ ದಿನದ ಮಟ್ಟಿಗೆ ಆಶ್ರಯ ಪಡೆಯುತ್ತಾನೆ.ತನಗೆ ಇಷ್ಟ ಇಲ್ಲದಿದ್ದರೂ ತಮ್ಮ ಮನೆಯ ಹಣಕಾಸಿನ ತೊಂದರೆ ಮತ್ತು ತನ್ನ ತಂದೆ ತಾಯಿಯ ಬಲವಂತದಿಂದಾಗಿ ತನ್ನ ನೆಂಟರ ಮನೆಯಲ್ಲಿ ಕೆಲಸ ಸಿಗುವವರೆಗೂ ಇರಲು ಒಪ್ಪಿಕೊಳ್ಳುತ್ತಾನೆ.
೨-೩ ತಿಂಗಳಾದರೂ ಎಲ್ಲೂ ಕೆಲಸ ಸಿಗದೇ ಬಹಳ ನಿರಾಸೆಗೊಂಡಿರುತ್ತಾನೆ.ಹಾಗೆ ಒಂದು ದಿನ ಇನ್ನೊಂದು ಕಂಪೆನಿಯಿಂದ ಸಂದರ್ಶನಕ್ಕೆ ಕರೆ ಬಂದಾಗ "ಏನಾದ್ರು ಮಾಡಿ ಇಲ್ಲಿ ಕೆಲಸ ಸಿಗಲೇಬೇಕು " ಅಂತ ಪಣ ತೊಟ್ಟು ಹೊರಡುತ್ತಾನೆ. ಅಷ್ಟೊತ್ತಿಗಾಗಲೇ ತಾನು ಇದ್ದ ಮನೆಯಲಿ ತುಂಬಾ ನೋವು ಅನುಭವಿಸಿರುತ್ತಾನೆ ,ಕಾರಣ ಆ ಮನೆಯಲ್ಲಿದ್ದ  ತನ್ನ ವಯಸ್ಸಿನ ಇನ್ನೊಬ್ಬ ಹುಡುಗ.ಅವನಿಗೆ ಈ ಹುಡುಗ ಆ ಮನೆಯಲ್ಲಿ ಇರುವುದು ಸ್ವಲ್ಪವೂ ಇಷ್ಟ ಇರುವುದಿಲ್ಲ,ಆದ್ದರಿಂದ  ಒಂದು ರೀತಿಯ ಮಾನಸಿಕ ಹಿಂಸೆ ಕೊಡುತ್ತಿರುತ್ತಾನೆ.ಅದರ ಜೊತೆಗೆ ತನ್ನ ಮನೆಯಲ್ಲಿ ದುಡ್ಡಿನ ಕಷ್ಟ.ಡಿಗ್ರಿ ಮುಗಿದರೂ  ತನ್ನ ಖರ್ಚಿಗೆ ಮನೆಯಲ್ಲಿ ಇನ್ನೂ ದುಡ್ಡು ಕೇಳಬೇಕೆ? ಎಂಬ ಪ್ರಶ್ನೆ.ಈ ಕಾರಣದಿಂದ ತುಂಬಾ ನೊಂದ ಈ ಹುಡುಗ ಆದಷ್ಟು ಬೇಗ ಎಲ್ಲಾದರೂ ಸರಿ ಎಂತಾದರು ಸರಿ ಒಂದು ಕೆಲಸ ಹುಡುಕಿಕೊಳ್ಳಬೇಕು ಎಂದು ನಿರ್ಧಾರ ಮಾಡುತ್ತಾನೆ. ಆದರೆ ಅವನ ದುರಾದೃಷ್ಟ ಆ ಕಂಪೆನಿಯಲ್ಲಿ ಕೂಡ ಕೆಲಸ ಸಿಗುವುದಿಲ್ಲ.

ಸೂರ್ಯನ ಕಿರಣದಂತೆ ಮಿನುಗಬೇಕಾದಂತಹ ಈ "ಕಿರಣ " ಎಂಬ ಹುಡುಗ ಬಹಳ ಹತಾಶೆಗೊಳ್ಳುತ್ತಾನೆ.ಈ ಬೇಸರದಿಂದ ತನ್ನ ಊರಿನವರೆ ಆದ ತಮ್ಮ ಕುಟುಂಬದ  ಆಪ್ತರೊಬ್ಬರ ಆಫೀಸಿಗೆ ಹೋಗುತ್ತಾನೆ,ಅವರಿಗೆ ಈ ಹುಡುಗ ತುಂಬಾ ದಿನದಿಂದ ಕೆಲಸ ಹುಡುಕುತ್ತಿದ್ದ ವಿಷಯ ಗೊತ್ತಿದ್ದರಿಂದ,ಆ ಹುಡುಗನ ಮನೆಯ ಪರಿಸ್ಥಿತಿ ತಿಳಿದಿದ್ದರಿಂದ ಕಿರಣನನ್ನು ತಮ್ಮ ಆಫೀಸಿನ ಬಳಿಯ ಒಂದು ಹೋಟೆಲಿನಲ್ಲಿ ಕೆಲಸ ಕೊಡಿಸಿದರು.ಹೇಗೂ ಬೇರೆ ಯಾವುದಾದರು ಕಂಪೆನಿಯಲ್ಲಿ ಸಿಗುವವರೆಗೂ ಇಲ್ಲೇ ಇರು ,ಮನೆಯಲ್ಲಿ ದುಡ್ಡು ಕೇಳುವುದು ತಪ್ಪುತ್ತದೆ ,ನಿನಗೂ ಖರ್ಚಿಗೆ ಆಗುತ್ತೆ ಅಂತ ಹೇಳಿ ಈ ಹುಡುಗನನ್ನು ಆ ಹೋಟೆಲಿನ ಓನರ್ ಹತ್ತಿರ ಕರೆದುಕೊಂಡು ಹೋಗುತ್ತಾರೆ.ಅವರೂ ಕೂಡ ಇವರ ಮಾತಿಗೆ ಸಮ್ಮತಿಸಿ  ಆ ಹುಡುಗನಿಗೆ ತನ್ನ ಲಗೆಜನ್ನು ಮಾರನೆಯ ದಿನ ತಂದು ಕೆಲಸಕ್ಕೆ ಸೇರಿಕೊಳ್ಳಲು ಹೇಳಿ ಕಳುಹಿಸುತ್ತಾರೆ.

ಡಿಗ್ರಿ ಮುಗಿಸಿ ಹೋಟೆಲಿನಲ್ಲಿ ಕೆಲಸಕ್ಕೆ ಸೇರುವುದು ಅಷ್ಟೊಂದು ತರವಲ್ಲ ಎನಿಸಿತಾದರು ಒಲ್ಲದ ಮನಸಿನಿಂದ ಕೆಲಸಕ್ಕೆ ಬರಲು ಒಪ್ಪಿಕೊಂಡ ಕಿರಣನಿಗೆ ಮುಂದೇನು ಮಾಡುವುದು ಎಂದು ಬಹಳ ಕಾಡ ತೊಡಗಿತು.ಆದರು ಮಾರನೆಯ ದಿನ ತಾನು ಹೋಟೆಲಿನಲ್ಲಿ ಕೆಲಸಕ್ಕೆ ಸೇರುತ್ತಿದ್ದೇನೆ ಎಂಬ ವಿಷಯವನ್ನು ಯಾರಿಗೂ ತಿಳಿಸದೇ ,ತಾನು ಇದ್ದ ನೆಂಟರ ಮನೆಯಲ್ಲಿ ಊರಿಗೆ ಹೋಗುತ್ತಿರುವುದಾಗಿ ಸುಳ್ಳು ಹೇಳಿ ,ತನ್ನ ತಂದೆ ತಾಯಿಗೂ ಇದನ್ನು ಹೇಳದೆ ತನ್ನ ಪಾಲಿಗೆ ನರಕವಾದ  ಹೋಟೆಲ್ ಎಂಬ ಲೋಕಕ್ಕೆ ಬರುತ್ತಾನೆ.ತನ್ನ ಸ್ವಾಭಿಮಾನಕ್ಕೆ ದಕ್ಕೆ ಬರದಹಾಗೆ ಇರುತ್ತಾನೆ.

ಅಲ್ಲಿ ಅವ್ನ ಕೆಲಸ ಬಿಲ್ ಮಾಡುವುದು ಮತ್ತು ದಿನದ ಕೊನೆಯಲ್ಲಿ ಅದರ ಲೆಕ್ಕವನ್ನು ತೋರಿಸುವುದು. ಮೊದಲ ದಿನ ಆ ಬಿಲ್ಲಿಂಗ್ ಸಾಫ್ಟ್ವೇರ್ ಬಗ್ಗೆ ಅಲ್ಲಿದ್ದ ಒಬ್ಬ ವೇಟರ್ ಹತ್ತಿರ ತಿಳಿದುಕೊಂಡ ಈ ಕಿರಣನಿಗೆ ಏನೋ ಒಂದು ರೀತಿಯ ಚಂಚಲತೆ ಇನ್ನೂ ಕಾಡುತಿತ್ತು.ಒಂದೆರಡು ದಿನ ಹೀಗೆ ಬಿಲ್ಲಿಂಗ್ ಮಾಡುತ್ತಾ ರಾತ್ರಿ ಅದರ ಲೆಕ್ಕವನ್ನು ಅಚ್ಚುಕಟ್ಟಾಗಿ ತೋರಿಸುತ್ತಾನೆ.೨ ದಿನ ಆದರು ಮನೆಯಲ್ಲಿ ತಾನು ಹೋಟೆಲಿನಲ್ಲಿ ಕೆಲಸ ಮಾಡುತ್ತಿರುವ ವಿಷಯ ತಿಳಿಸಿಲ್ಲ.ಆತ್ಮ ವಂಚನೆ ಮಾಡುತ್ತಿದ್ದಿನೆಂಬ ಗೊಂದಲ ಮನಸಿನಲ್ಲಿ.ಹೀಗೆಲ್ಲ ಇರುವಾಗ ಆ ಹುಡುಗನಿಗೆ ನಿದ್ರೆ ಎಲ್ಲಿಂದ ಬರಬೇಕು.ಆಗೂ ಹೇಗೂ ಎರಡು ದಿನ ಕಳೆಯುತ್ತಾನೆ.
ನಂತರ ಶುರು ಆಯಿತು ಮ್ಯಾನೇಜರ್ ಮತ್ತು ಓನರ್ ನಿಂದ  ಕಿರಿಕಿರಿ.

"ನಿನ್ನದು ಬರಿ ಬಿಲ್ ಮಾಡುವುದಷ್ಟೇ ಕೆಲಸ ಅಲ್ಲ ,ಹೋಗಿ ಗಿರಾಕಿಗಳ ಹತ್ತಿರ ಏನೇನು ಬೇಕು ಅಂತ ಆರ್ಡರ್ ತಗೊಂಡು ವೇಟರ್ ಗೆ ನೀನೆ ಚೀಟಿ ಕೊಡಬೇಕು " ಅಂತ ದಬಾಯಿಸುವುದಕ್ಕೆ ಶುರು ಮಾಡುತ್ತಾರೆ. ಮೂರನೆ  ದಿನ ಸ್ವಲ್ಪ ಬದಲಾವಣೆ ಆಯಿತು ಅವನ ಕೆಲಸದಲ್ಲಿ,ಸ್ವಲ್ಪ ಜವಾಬ್ದಾರಿ ಹೆಚ್ಚಾಯಿತು.ಹಾಗೆ ಹಿಂಸೆಯೂ ಆಗುತಿತ್ತು ಆ  ಹುಡುಗನಿಗೆ.

ಇನ್ನೇನ್ ಮಾಡೋದು,ಗ್ರಹಚಾರ ಕೆಟ್ಟಾಗ ಇಂಥ ಪರಿಸ್ಥಿತಿ ಅನುಭವಿಸಬೇಕು ಅಂತ ಅದಕ್ಕೂ ಒಪ್ಪಿಕೊಂಡು ಆರ್ಡರ್ ತೆಗೆದುಕೊಳ್ಳಲು ಶುರು ಮಾಡುತ್ತಾನೆ ಅವನು .
***********************************************

ಈ ಕಿರಿಕಿರಿಯ ಒಂದೆರಡು ದಿನಗಳ ನಂತರ ಒಂದು ಭಾನುವಾರ  ಅಕಸ್ಮಾತ್ತಾಗಿ ತನ್ನ ಕಾಲೇಜಿನ ಇಬ್ಬರು ಗೆಳೆಯರು ಆ ಹೋಟೆಲ್ಲಿಗೆ ಕಾಫಿ ಕುಡಿಯಲು ಬರುತ್ತಾರೆ.ಅವರೂ ಕೂಡ ಈ ಹುಡುಗನ ಹಾಗೆ ಕೆಲಸ ಹುಡುಕಲು ಬೆಂಗಳೂರಿಗೆ ಬಂದು ಬೇರೆ ಕಡೆ ಕೆಲಸ ಮಾಡುತ್ತಿರುತ್ತಾರೆ.ಅವನ ಅದೃಷ್ಟಕ್ಕೆ ಆ ಸಮಯದಲ್ಲಿ ಅವನು ಕೌಂಟರ್ ಬಳಿ ಇರಲಿಲ್ಲ.

ಆ ಇಬ್ಬರು ಸ್ನೇಹಿತರು ಇವನನ್ನು ನೋಡಿದ್ದೇ ತಡ "ಏ ಏನ್ ಮಚ್ಚಾ, ಏನ್ ಇಲ್ಲಿ ?ಏನ್ ಸಮಾಚಾರ ?ಹೇಗಿದೆ ಜೀವನ ?"ಅಂತ ಮಾತಿಗಿಳಿಯುತ್ತಾರೆ.ಪಾಪ ಅವರಿದೆ ಏನ್ ಗೊತ್ತು ಇವನ ಸ್ಥಿತಿ.

ಆಗ ಕಿರಣನ ಮನಸಿನಲ್ಲಿ  ಆದಂತಹ ಗೊಂದಲ ಒಂದೆರಡಲ್ಲ.ಮೊದಲನೆಯದು ತಾನು ಇಲ್ಲಿ ಕೆಲಸ ಮಾಡುತ್ತಿರುವ ವಿಷಯ ಅವರಿಬ್ಬರಿಗೂ ತಿಳಿಯಕೂಡದು,ಕಾರಣ ತನ್ನ ವಿಧ್ಯಾಬ್ಯಾಸಕ್ಕೆ ತಕ್ಕ ಕೆಲಸ ಇದಲ್ಲ ಹಾಗು ಅವರ ಮುಂದೆ ತನಗೆ ಅವಮಾನ ಆಗಬಹುದೆಂಬ ಯೋಚನೆ.

ಎರಡನೆಯದು,ತಾನು ಇವರ ಜೊತೆ ಮಾತನಾಡುತ್ತ ನಿಂತಿರಬೇಕಾದರೆ ಯಾರಾದರು ಇವನನ್ನು ಕರೆದರೆ ಅವರಿಗೆ ಇವನ ಮೇಲೆ ಸಂದೇಹ ಬರುಬಹುದೆಂಬ ಕಸಿವಿಸಿ.

ಮೂರನೆಯದು,ಇವರಿಬ್ಬರನ್ನು ಆದಷ್ಟು ಬೇಗ ಕಳುಹಿಸಬೇಕು.
ಇಷ್ಟರ ನಡುವೆ ಅವನು ಅವರಿಬ್ಬರಿಗೆ "ಇಲ್ಲೇ ಪಕ್ಕದಲ್ಲೇ ನನ್ನ ನೆಂಟರೊಬ್ಬರ ಆಫೀಸ್ ಇದೆ.ಅವರನ್ನ ಮೀಟ್ ಮಾಡೋಕ್ಕೆ ಬಂದಿದ್ದೆ.ಹಾಗೆ ಕಾಫಿ ಕುಡಿಯಕ್ಕೆ ಬಂದಿದ್ದೆ "ಅಂತ ಸಮಜಾಯಿಸಿ ನೀಡಿ,ಮೂರು ಜನ ಒಂದು ಟೇಬಲಿನಲ್ಲಿ ಕೂರುತ್ತಾರೆ.

ಬಂದಿರುವ ಗಿರಾಕಿಗಳ ಹತ್ತಿರ ತಾನು ಆರ್ಡರ್ ತಗೋಬೇಕಿತ್ತು,ಆದರೆ ತಾನೇ ದೊಡ್ಡ ಗಿರಾಕಿಯ ಥರಾ ತನ್ನ ಸ್ನೇಹಿತರ ಜೊತೆ ಕೂತಿದ್ದಾನೆ ಅವನು .ನಂತರ ಅಲ್ಲಿದ್ದ ಒಬ್ಬ ವೇಟರ್ ಬಂದು ಕಕ್ಕಾಬಿಕ್ಕಿಯಾಗಿ ನೋಡತೋಡಗುತ್ತಾನೆ .ಅದೇ ಸಮಯದಲ್ಲಿ ಕಿರಣ ಅವರಿಬ್ಬರಿಗೂ ಗೊತ್ತಾಗದ ಹಾಗೆ ಆ ವೇಟರ್ ಗೆ ಕಣ್ಣಿನಲ್ಲಿ ಸಂಜ್ಞೆ ಮಾಡಿ ,ಸ್ವಲ್ಪ ಹೊತ್ತು ಸುಮ್ಮನಿರುವಂತೆ ಹೇಳಿದ್ದಾಗ,ಆ ವೇಟರ್ ಕೂಡ ಅವರಿಬ್ಬರಿಗೂ ಗೊತ್ತಾಗದ ಹಾಗೆ ಒಪ್ಪಿಕೊಳ್ಳುತ್ತಾನೆ. ತನ್ನ ಗೆಳೆಯರು ಆರ್ಡರ್ ಮಾಡಿದ ಕಾಫಿ ಮತ್ತು ತಾನು ತೆಗೆಯಬೇಕಿದ್ದ  ಅದರ ಬಿಲ್ಲನ್ನು ಆ ವೇಟರ್ ತಂದು ಕೊಡುತ್ತಾನೆ.

ಅದರ ಜೊತೆಗೆ ಇವನು ಅವರಿಬ್ಬರ ಸಂಗಡ ಅದು ಇದು ವಿಷಯ ಮಾತಾಡುತ್ತಾನೆ,ಆದಾರು ಮನಸಿನಲ್ಲಿ ಹೆದರಿಕೆ ,"ಎಲ್ಲಿ ಮ್ಯಾನೇಜರ್ ಅಥವಾ ಓನರ್  ಬಂದು ತಾನು ಇಲ್ಲಿ ಕೂತಿರುವುದನ್ನು ನೋಡುತ್ತಾರೋ ?"ಎಂಬ ಗುಮಾನಿ.ಆ  ವೇಟರ್ ಗೆ ಬೇಕಾದರೆ ಹೇಗೋ ಇವರು ತನ್ನ ಸ್ನೇಹಿತರು ಅಂತ ಹೇಳಿ ಸಮಾಧನ ಮಾಡಿದ್ದಾಗಿದೆ,ಇವನ ಕಡೆ ಇಂದ ಏನೂ ತೊಂದರೆ ಇಲ್ಲ ಎಂಬ ಸಮಾಧಾನ.

ಸ್ವಲ್ಪ ಸಮಯದ ನಂತರ ಅವರಿಬ್ಬರೂ ಹೊರಟು ಹೋಗುತ್ತಾರೆ. ಹೇಗೋ ಅವರಿಬ್ಬರಿಗೂ ತಾನು ಇಲ್ಲಿ ಕೆಲಸ ಮಾಡುತ್ತಿರುವ ಸಂದೇಹ ಬರಲಿಲ್ಲ ಎಂಬ ಸಮಾಧಾನದಿಂದ ಇದ್ದರೆ,ಆ ಮ್ಯಾನೇಜರ್ ಮತ್ತು ಓನರ್ ಇಬ್ಬರೂ ಬಂದು ಆ  ಹುಡುಗನ ಮೇಲೆ ರೇಗಾಡುತ್ತಾರೆ.

"ನೆಟ್ಟಗೆ ಕೆಲಸ ಮಾಡೋದು ಬಿಟ್ಟು, ಫ್ರೆಂಡ್ಸ್ ಗಳ ಜೊತೆ ಹರಟೆ ಹೊಡಿತಾ ಕೂರ್ತಿಯ? ಎಷ್ಟೊತ್ತು ಮಾತಾಡೋದು  ?ಸ್ವಲ್ಪ ಹೊತ್ತು ಮಾತಾಡಿ ಕಳಿಸ್ತಾರೆ ,ಅದೂ ಬಿಟ್ಟು ಇಷ್ಟೊತ್ತ  ಮಾತಾಡೋದು ?ಅದೂ ಕೆಲಸ ಬಿಟ್ಟು "
******************************************
ಸದ್ಯ ತನ್ನ ಸ್ನೇಹಿತರ ಮುಂದೆ ಈ ಮಾತುಗಳನ್ನು ಹೇಳಲಿಲ್ಲವಲ್ಲ ಅಂತ ಸಮಾಧಾನದಿಂದ ಒಂದು ಕಡೆ ಆದ್ರೆ ,ತನಗೇನು ಬಂದಿದೆ,ಇವರ ಹತ್ತಿರ ಈ ರೀತಿ ಅನ್ನಿಸಿಕೊಳ್ಳಬೇಕು ಅಂತ  ಬೇಜಾರು ಆದರೂ ಕೂಡ ಅದನ್ನು ಸಹಿಸಿಕೊಂಡು ಸುಮ್ಮನಿರುತ್ತಾನೆ. ಇನ್ನೂ ಏನೇನು ಅನುಭವಿಸಬೇಕು ಈ ಜನರ ನಡುವೆ ಅಂತ ಚಿಂತಿಸುತ್ತಾ ಆ ದಿನವನ್ನು ಹೇಗೋ ಕಳೆದು ಮಲಗಲು ಹೋಗುತ್ತಾನೆ.ಆದ್ರೆ ನಿದ್ರಾ ದೇವಿ ಒಲಿಯುವುದೇ ಇಲ್ಲ.ಮಲೆನಾಡಿನ ಹಚ್ಚ ಹಸಿರಿನ ನಡುವೆ ಬೆಳೆದ  ಸೂರ್ಯ ರಶ್ಮಿಯಂತೆ ಹೊಳೆಯಬೇಕಾದ ಈ ಕಿರಣನ ಜೀವನದಲ್ಲಿ ಕಪ್ಪು ಕಗ್ಗತ್ತಲು ಆವರಿಸಿದಂತೆ ಭಾಸವಾಯಿತು ಅವನಿಗೆ.   ಇಷ್ಟರ ನಡುವೆ ತನಗೆ ಇಂಥ ಜೀವನ ಬೇಡವೇ ಬೇಡ ಎಂದು ಆತ್ಮಹತ್ಯೆ ಮಾಡಲು ನಿರ್ಧಾರ ಮಾಡುತ್ತಾನೆ..ಆ  ಯುವಕ.ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ.ತಟ್ಟನೆ ತಾನು ಹೋಟೆಲಿನಲ್ಲಿ ಇರುವ ವಿಷಯವನ್ನು ತನ್ನ ತಾಯಿಗೆ ಹೇಳಲು ತಿಳಿಸಲು ಯೋಚಿಸಿ ತನ್ನ ಮನೆಗೆ ಫೋನ್ ಮಾಡಲು ತನ್ನ ಮೊಬೈಲನ್ನು ತೆಗೆದುಕೊಂಡು ನೋಡಿದಾಗ ಸಮಯ ಮಧ್ಯ ರಾತ್ರಿ ೨ ಗಂಟೆ . ಇಷ್ಟೊತ್ತಿನಲ್ಲಿ ಫೋನ್ ಮಾಡಿದರೆ ತನ್ನ ತಂದೆ ತಾಯಿ ಗಾಬರಿಗೊಳ್ಳುತ್ತಾರೆ ಎಂದು ಸುಮ್ಮನಾಗಿ ಸುಮ್ಮನೆ ನಿದ್ದೆ ಮಾಡದೆ  ಹಾಗೆ ಏನೇನೋ ಯೋಚಿಸುತ್ತ  ಕೂರುತ್ತಾನೆ.
****************************************
ಅಲ್ಲಿಗೆ ಬಂದು ಒಂದು ವಾರ ಕೆಳೆದಿದೆಯಷ್ಟೇ ನನಗೆ ಈ ರೀತಿ ಬೇಸರವಾಗಿರಬೇಕಾದರೆ ಇಲ್ಲಿ ಇರುವ ಬೇರೆ ಕೆಲಸಗಾರರು ಹೇಗೆ ಜೀವನ ಮಾಡುತ್ತಿರಬೇಕು ಎಂದು ಯೋಚಿಸುತ್ತ ಅಳುತ್ತ ಕೂತಿದ್ದಾನೆ.ಆದರೂ ಅವನ ಬಗ್ಗೆ ವಿಚಾರಿಸಲು ಅಲ್ಲಿ ತನ್ನವರು ಯಾರು ಅಂತ ಇದ್ದಾರೆ.ತನ್ನ ಕಷ್ಟ ಹೇಳಿಕೊಳ್ಳಲು ಯಾರು ಇಲ್ಲ.ತನ್ನ  ಸ್ನೇಹಿತರಿಗೆ  ತಾನು ತನ್ನ ನೆಂಟರ ಮನೆಯಲ್ಲಿ ಇರುವುದಾಗಿ ,ತನ್ನ ಮನೆಯವರಿಗೆ ತಾನು ತನ್ನ ಸ್ನೇಹಿತರ ಜೊತೆ ಇರುವುದಾಗಿ ಹೇಳಿಕೊಂಡು ತನ್ನ ಮೇಲೆ ಬೇಸರ ಪಟ್ಟುಕೊಂಡು ಕೂತಿರುತ್ತಾನೆ.ತಾನು ತನ್ನ ತಂದೆ  ತಾಯಿಗೆ ಈ ವಿಷಯವನ್ನು ಹೇಳದೆ ಮೋಸ ಮಾಡುತಿದ್ದೆನೆಂಬ ಯೋಚನೆ.

ಇಷ್ಟೆಲ್ಲಾ ಯೋಚಿಸುತ್ತ ಕುತಿರಬೇಕಾದರೆ ಆಗಲೇ ಸೂರ್ಯೋದಯ ಆಗಿತ್ತು.ಇನ್ನೇನು ೧೧ ಗಂಟೆಗೆ ಮತ್ತೆ ಕೆಲ್ಸಕ್ಕೆ ಹೋಗಬೇಕು ಅಂತ ಯೋಚಿಸುತ್ತ ತನ್ನ ತಾಯಿಗೆ ಫೋನ್ ಮಾಡಿ ಮಾತಾಡದೆ ಸುಮ್ಮನೆ ಅಳುತ್ತಿದ್ದಾನೆ, ಅತ್ತ ಹೆತ್ತ  ಕರುಳಿಗೆ ತನ್ನ ಮಗ ಬೆಳಗ್ಗೆ ಬೆಳಗ್ಗೆ ಫೋನ್ ಮಾಡಿ ಅಳುತ್ತಿರುವುದನ್ನು ನೋಡಿ ಸಂಕಟ ಆಗುತ್ತಿದೆ.ಅವನ ತಾಯಿಯ ಗೋಳು ನೋಡಿ ಅವನ ತಂದೆ ಮಾತಾಡಲು ಬಯಸಿ ಫೋನ್ ತೆಗೆದುಕೊಂಡರೆ ಇನ್ನೂ ಅಳುತ್ತಿದ್ದಾನೆ.ಆ ತಂದೆಗೂ ಕೂಡ ತಮ್ಮ ಒಬ್ಬನೇ ಮಗ ಹೀಗೆ ಅಳುತ್ತಿರುವುದಕ್ಕೆ ಕಾರಣ ಗೊತ್ತಿಲ್ಲದೇ ಅವರೂ ಯೋಚನಾ ಮಗ್ಧರಾಗುತ್ತಾರೆ.ವಿಷಯ ಗೊತ್ತಿಲ್ಲದೇ ಏನು ಅಂತ ಸಮಾಧಾನ ಮಾಡುವುದು ಎಂದು ಅವರಿಗೂ ಗೊತ್ತಿಲ್ಲದೇ ಸುಮ್ಮನಿರುತ್ತಾರೆ.
ನಂತರ ಆ ಹುಡುಗ ಆವರನ್ನು ನೋಡಬೇಕು ಅಂತ ಅನ್ನಿಸುತ್ತಿದೆ ಅಂತ ಹೇಳಿ ಮತ್ತೆ ಸತ್ಯವನ್ನು ಮುಚ್ಚಿಡುತ್ತಾನೆ.ಈ ಸುಳ್ಳಿನಿಂದ ಇಷ್ಟೇ ಸಮಸ್ಯೆ ಎಂಬ ಸುಳ್ಳು ನಂಬಿಕೆಯಿಂದ ಅವನ ಹೆತ್ತವರು ಸಮಾಧಾನಗೊಳ್ಳುತ್ತಾರೆ.

************************************
ನಂತರ ಮತ್ತೆ ಶುರು ಆಗುತ್ತದೆ ಅವನಿಗೆ ಕಿರಿಕಿರಿ.ಹೀಗೆ ಒಂದೆರಡು ದಿನ ಕಳೆದ ಮೇಲೆ ಅವನಿಗೆ ಪರಿಚಯದ ಹುಡುಗಿಯೊಬ್ಬಳು ಹೋಟೆಲ್ಲಿಗೆ ತನ್ನ ಸ್ನೇಹಿತರೊಡನೆ ಬರುತ್ತಾಳೆ.ಮತ್ತಷ್ಟು ಕಕ್ಕಾಬಿಕ್ಕಿಯಾದ ಇವನು ಏನು ಮಾಡಲು ತೋಚದೆ ಆ ಕಡೆ ಈ ಕಡೆ ಹೊದಾದಳು ಶುರು ಮಾಡುತ್ತಾನೆ.ಇವನನ್ನು ಗಮನಿಸಿದ ಆ ಹುಡುಗಿ ಇವನನ್ನು ಮಾತಾಡಿಸಿದಾಗ ಹೀಗೆ ಕಾಫಿ ಕುಡಿಯಲು ಬಂದಿದ್ದಾಗಿಯೂ,ತಾನು ಬೇರೆಡೆಗೆ ಹೋಗಬೇಕೆಂದು ಹೇಳಿ ತಾನು ಮಲಗುತ್ತಿದ್ದ ಕೋಣೆಗೆ ಹೋಗುತ್ತಾನೆ.
ಇದನ್ನು ಗಮನಿಸಿದ ಹೋಟೆಲಿನಲ್ಲಿ  ಬಹಳ ದಿನದಿಂದ ಅಲ್ಲಿ ಕೆಲಸಮಾಡುತ್ತಿದ್ದ ಕುಳ್ಳ ಕೇಶವ ಅವನಲ್ಲಿಗೆ ಬಂದು "ಕೆಲಸ ಮಾಡೋದು ಬಿಟ್ಟು ಆರಾಮಾಗಿ ಇಲ್ಲಿ ಬಂದು ಕೂತಿದ್ಡಿಯ " ಅಂತ ರೇಗಾಡುತ್ತಾನೆ.
"ಗಿರಾಕಿಗಳು ಜಾಸ್ತಿ ಇರಲಿಲ್ಲವಲ್ಲ,ಹಾಗೆ ತಲೆ ನೋಯುತ್ತಿತ್ತು,ಅದಕ್ಕೆ ಬಂದೆ ಅಷ್ಟೇ "ಅಂತ ಸಮಾಧಾನದಿಂದ ,ತಲೆ ತಗ್ಗಿಸಿಕೊಂಡು ಏನೋ ತಪ್ಪು ಮಾಡಿರುವನ ತರ ಹೇಳುತ್ತಾನೆ.
ಅವನ ಮೆದು ಧ್ವನಿಯನ್ನು,ಅವನ ಗಂಭೀರತೆಯನ್ನು ಉಪಯೋಗಿಸಿಕೊಂಡ ಕೇಶವ ಸುಮ್ಮನೆ ವಿನಾ ಕಾರಣ ಅವನ ಮೇಲೆ ರೇಗುತ್ತಾನೆ.ಇದು ಒಂದು ರೀತಿಯಲ್ಲಿ ತಾನು ಇಲ್ಲಿ ದೊಡ್ಡ ಮನುಷ್ಯ ಎಂದು ತೋರುವ ಹಾಗಿತ್ತು.
ಕೊನೆಗೆ "ಏನೂ ಕೆಲಸ ಇಲ್ಲ ಅಂದ್ರೆ ಆ ಸ್ವೀಟ್ ಶೋ ಕೇಸ್ ಧೂಳು ಹಿಡಿದಿದೆ ,ಅದನ್ನ ಒರಸು ಹೋಗು "ಅಂತ ಹೇಳಿ ಹೋಗುತ್ತಾನೆ.
"ಸರಿ ಸ್ವಲ್ಪ ಹೊತ್ತು ಬಿಟ್ಟು ಹೋಗುತ್ತೀನಿ "ಅಂತ ಗೊಣಗುತ್ತಾನೆ ಕಿರಣ.
ಆ ಹುಡುಗಿಯರು ಹೋಗಿರಬಹುದು ಎಂಬ ನಿರೀಕ್ಷೆಯೊಂದಿಗೆ ಸ್ವಲ್ಪ ಸಮಯ ಬಿಟ್ಟು ತನ್ನ ಕೆಲಸದ ಜಾಗಕ್ಕೆ ಬರುತ್ತಾನೆ.ಸದ್ಯ ಅವರೂ ಹೊರಟು ಹೋಗಿರುವುದನ್ನು ಗಮನಿಸಿ ಸ್ವಲ್ಪ ಸಮಾಧಾನ ಗೊಳ್ಳುತ್ತಾನೆ.ನಂತರ ಅವನು ವಹಿಸಿದ್ದ ಕೆಲಸ ಮುಗಿಸಿ ಅವನಿಗೆ ತೋರಿಸುತ್ತಾನೆ.
*********************************
ಇನ್ನೊಂದು ದಿನ ಒಬ್ಬ ದಡೂತಿ ಮನುಷ್ಯ ಇನ್ನೊಬ್ಬ ಹೆಂಗಸಿನ ಜೊತೆ ಬಂದು ಕೂರುತ್ತಾನೆ.ಆವರನ್ನು ಗಮನಿಸಿದ ವೇಟರ್ ಒಬ್ಬ "ಈ ವಯ್ಯ ಒಂದೊಂದ್ ದಿನ ಒಂದೊಂದ್ ಹುಡುಗಿ ಜೊತೆ ಬರ್ತಾನಪ್ಪ  "ಅಂದ.
ಆಗ ಇನ್ನೊಬ್ಬ ವೇಟರ್ "ಲೇ ಅವನು ಎಷ್ಟ್ ಜನದ ಜೊತೆ ಬಂದ್ರೆ ನಿನಗೆನ್ ಕಷ್ಟ ,ಸುಮ್ನೆ ಹೋಗಿ ಕೆಲಸ ನೋಡು "ಅಂತ ಆ ವೇಟರ್ ಗೆ ಹೇಳುತ್ತಾನೆ.
ಇವನು ತನ್ನ ಮಾಮೂಲಿ ಕೆಲಸದಂತೆ ಅವರ ಬಳಿ ಹೋಗಿ ಆರ್ಡರ್ ತೆಗೆದುಕೊಂಡು ಬರುತ್ತಾನೆ.ಆ ಹುಡುಗನ  ದುರದೃಷ್ಟ ಅವನು ಆರ್ಡರ್ ಮಾಡಿದವುಗಳನ್ನು ವೇಟರ್ ಸ್ವಲ್ಪ ಲೇಟಾಗಿ ತರುತ್ತಾನೆ.ಇದಕ್ಕೆ ಕೋಪಗೊಂಡ ಆ ದಡೂತಿ "ಲೇ ***ಮಗನೆ ಎಷ್ಟ್ ಹೊತ್ತು ಕಾಯಬೇಕು ಇಲ್ಲಿ "ಅಂತ ಪಾಪದ ಹುಡುಗನ  ಕೊರಳ ಪಟ್ಟಿಗೆ ಕೈ ಹಾಕಿ ಹರಿಹಾಯುತ್ತಾನೆ.ಆಗ ಆ ಹುಡುಗ "ಸರ್ ನಾನೇನು ಮಾಡ್ಲಿ,ಸ್ವಲ್ಪ ಹೊತ್ತು ಇರ್ರಿ ,ತರುತ್ತಾರೆ "ಅಂತ ಹೇಳಿದ್ರು ,ಅವನು ಇನ್ನೂ ಕೈಯನ್ನು ಅವನ ಶರ್ಟ್ ಇಂದ ತೆಗೆದಿರುವುದಿಲ್ಲ.
ಅಷ್ಟೊತ್ತಿಗೆ ಅಲ್ಲಿದ್ದ ಎಲ್ಲಾ ವೇಟರ್ ಗಳು ಬಂದು ಅವನನ್ನು ಬಿಡಿಸುತ್ತಾರೆ.
ಆದರೂ ತನ್ನ ದರ್ಪವನ್ನು ಬಿಟ್ಟಿರಲಿಲ್ಲ  ಆ ದಡೂತಿ ದೇಹದವನು.
ಆಗ ಸಭ್ಯ ಹುಡುಗ "ಸರ್ ,ನಮಗೂ ಸ್ವಾಬಿಮನ ಅನ್ನೋದು ಇದೆ,ಸ್ವಲ್ಪ ಮಾತಾಡಬೇಕಾದರೆ ನಾಲಗೆ ಹಿಡಿತದಲ್ಲಿರಲಿ" ಅಂತ ಹೇಳುತ್ತಾನೆ.
ಇನ್ನಷ್ಟು ಕೋಪಗೊಂಡ ಅವನು "ನೀನ್ ಯಾವನೋ ಅದನ್ನ ಹೇಳಕ್ಕೆ?"ಅಂತ ಹೇಳಿ ಮತ್ತೆ ಅವನ ಮೇಲೆ ಕೈ ಮಾಡುತ್ತಾನೆ.
ಕೋಪಗೊಂಡ ಆ ಹುಡುಗ  "ನನ್ ಮಗನೆ ನಿನ್ನ ವಯಸ್ಸಿಗೆ ಮರ್ಯಾದೆ ಕೊಟ್ಟು ಸುಮ್ಮನಿದ್ದೆ "ಅಂತ ಹೇಳಿ ತನ್ನ ಕೈ ಮುಷ್ಠಿ ಗಟ್ಟಿಗೊಳಿಸಿ ಅವನ ಮುಖಕ್ಕೆ ಒಡೆಯುತ್ತಾನೆ.
ಅಷ್ಟೊತ್ತಿಗೆ ಅಲ್ಲಿಗೆ ಬಂದ ಓನರ್ ಏನು ಮಾತಾಡದೆ ಸುಮ್ಮನಿರುತ್ತಾನೆ. ಅವನ ವಿರುದ್ಧ ಮಾತಾಡಿದರೆ ಗಿರಾಕಿ ಕಳೆದುಕೊಳ್ಳುತ್ತೀನಿ ಎಂಬ ಭಯ,ಆದರೆ ಕೊನೆಗ ಓನರ್ ಕೂಡ ಈ ಹುಡುಗನಿಗೆ "ಗಿರಾಕಿಗಳ  ಜೊತೆ ಹೇಗೆ  ಇರಬೇಕು ಅಂತ ಗೊತ್ತಾಗಲ್ವ ನಿಂಗೆ "ಅಂತ ಬೈಯುತ್ತಾನೆ.
"ಅವನೇ ನೆಟ್ಟಗೆ ಮಾತಾಡಿದ್ರೆ ನಾನ್ಯಾಕೆ ಅವನ ಜೊತೆ ಈ ಥರ ಮಾತಾಡಲಿ "ಅಂತ ಸಮರ್ಥಿಸಿಕೊಂದರೂ ಇವನದೇ ತಪ್ಪು ಎಂಬ ರೀತಿಯಲ್ಲಿ ಮಾತಾಡುತ್ತಾರೆ.
ಇದರಿಂದ ಬೇಸರಗೊಂಡ ಈ ಹುಡುಗ ಮತ್ತೆ ತನ್ನ ಕೊನೆಗೇ ಹೋಗಿ ಅಳುತ್ತ ಮಲಗುತ್ತಾನೆ.ಮತ್ತೆ ಅದೇ ಯೋಚನೆಗಳು,ಆತ್ಮ ವಂಚನೆ ಮಾಡುತ್ತಿದ್ದಿನೆಂಬ ಭ್ರಮೆ.ತಂದೆ ತಾಯಿಗೆ  ಮೋಸ ಮಾಡುತ್ತಿದ್ದಿನೆಂಬ ಆತಂಕ.ಕೊನೆಗೂ ತಾನು ಇಲ್ಲಿ ಇರುವುದು ಸರಿ ಇಲ್ಲ ಎಂದು ಮಾರನೆಯೇ ದಿನ ಬೆಳಗ್ಗೆ ಅಲ್ಲಿಂದ ಹೊರಡಲು ತೀರ್ಮಾನಿಸುತ್ತಾನೆ.ಆದರೆ ಎಲ್ಲಿಗೆ ಎಂಬುದು ಇನ್ನೂ ನಿಶ್ಚಯವಾಗಿಲ್ಲ.
 ************************************
ಬೆಳಗ್ಗೆ ಎದ್ದವನೇ,ಇನ್ನೂ ಯಾವ ಕೆಲಸಗಾರರು ಎದ್ದಿಲ್ಲದಿರುವುದನ್ನು ಪರೀಕ್ಷಿಸಿ ತನ್ನ ಲಗೇಜನ್ನು ಎತ್ತಿ ಕೊಂಡು ಹೊರಡುತ್ತಾನೆ.ಕೊನೆಗೇ ಮನೆಗೆ ವಾಪಸ್ಸು ಹೋಗುವುದು ಒಳ್ಳೆಯದು ಎಂದು ಮನೆಗೆ ಹೋಗುತ್ತಾನೆ.

     

2 comments:

 1. very touching story.......:)

  Thanna Vidyegu ,aa hotel jeevanakku ,yetthaninda yettha sambhanda..........???

  "kiran"na Swabhimanakke,hats off.....:)

  Bere yavra hangu illada, 1 hottadru thaane dudidu thinna beku anno manobhava..........great:)

  ReplyDelete
 2. ವಿದ್ಯೆ ಇದ್ದರೂ ಕೆಲವೊಮ್ಮೆ ಅದಕ್ಕೆ ತಕ್ಕಂತ ಕೆಲಸ ದೊರಕುವುದಿಲ್ಲ. ಜೀವನದಲ್ಲಿ ಹಣ ಬಹಳ ಮುಖ್ಯವಾಗಿ ಏನೆಲ್ಲಾ ಕೆಲಸಗಳನ್ನು ಮಾಡಿಸಿಬಿಡುತ್ತವೆ.

  ReplyDelete