Thursday, March 22, 2012

ಪೋಲಿಸ್ ಸ್ಟೇಷನ್ನಲ್ಲಿ ಮ್ಯಾಚ್ ನೋಡಿದ್ದು ಹಿಂಗೆ...

ಈ ಉಗಾದಿ ಹಬ್ಬಕ್ಕೆ ಊರಿಗೆ ಹೋಗಬೇಕಾದ್ರೆ ಏನಾದ್ರೂ ಒಂದು ತಾಪತ್ರೆ ಆಗುತ್ತೆ...ಅವಾಗ ಒಂದ್ಸಲ ಹಿಂಗೆ ದುಡ್ಡು ಕಳ್ಕೊಂಡು ಹೋಗಿದ್ದೆ ... ಹೋದ ವರ್ಷ ಹೋಗಬೇಕಾದ್ರೆ ಇನ್ನೂ ವಿಚಿತ್ರ... ಅದೇನಾಯ್ತು ಅಂದ್ರೆ ಎಲ್ಲರೂ ಮನೇಲಿ ಕೂತು ಕ್ರಿಕೆಟ್ ನೋಡ್ತಿದ್ರೆ ನಾವು ಪೋಲಿಸ್ ಸ್ಟೇಷನ್ ನಲ್ಲಿ ನೋಡ್ತಾ ಇದ್ವಿ ...... The story goes like this...

ಹಬ್ಬ ಇದ್ದಿದ್ದು ಸೋಮವಾರ... ಅದಕ್ಕಿಂತ ಎರಡು ದಿನ ಮುಂಚೆ ಅಂದ್ರೆ ಶನಿವಾರ ವಿಶ್ವ ಕಪ್ ಫೈನಲ್ ಮ್ಯಾಚ್ ಇತ್ತು.. ನಮ್ಮ  ದೇಶ ಮತ್ತೆ ಶ್ರೀಲಂಕಾ ನಡುವೆ... ಅವತ್ತೇ ಊರಿಗೆ ಹೊರಡೋ ಪ್ಲಾನ್ ಹಾಕಿಕೊಂಡೆ..ಬೆಳಗ್ಗೆ ಟ್ರೈನ್ ಪ್ರತಿ ಶನಿವಾರ ಫುಲ್ ರಶ್ ಇರತ್ತೆ...ಅದು ಅಲ್ಲದೆ ಇದು ಹಬ್ಬದ ವಾರ ಬೇರೆ..ಇನ್ನೂ ರಶ್ ಇರತ್ತೆ..ಹೇಗೂ ಇವತ್ತು ಫೈನಲ್ ಇರೋದ್ರಿಂದ ಸಂಜೆ ಟ್ರೈನ್ ಅಷ್ಟು ರಶ್ ಆಗಲ್ಲ ಅಂತ,ಅದಕ್ಕೆ ಹೋಗೋ ನಿರ್ಧಾರ ಮಾಡಿದೆ..ಹೇಗೂ ಊರಿಗೆ ಹೋಗಿ ಕಡಿದು ಕಟ್ಟೆ ಕಟ್ಟದು ಅಷ್ಟರಲ್ಲೇ ಇದೆ ಅಂತ.. ಕ್ರಿಕೆಟ್ ನೋಡದು ಬಿಟ್ಟು ಜಮಾನ ಆದ್ದರಿಂದ ಅವತ್ತು ಕೂಡ ಮ್ಯಾಚ್ ನೋಡೋ ಗೋಜಿಗೆ ತಲೆ ಕೆಡಿಸಿಕೊಳ್ಳಲಿಲ್ಲ...ಸರಿ ಸಂಜೆ ಟ್ರೈನ್ ಗೆ ಹೋದರೆ ಯಾವಾಗಲು ಖಾಲಿ ಇರೋದು ಅವತ್ತು ನೋಡಿದ್ರೆ ಸ್ವಲ್ಪ ಜನ ತುಂಬಿದ್ದರು.ಹಿಂದಿನ ದಿನ ಇದ್ದ ಮೂರ್ಖರ ದಿನ ಮೂರ್ಖ ಆಗಿರಲಿಲ್ಲ...ಆದರೆ ಅವತ್ತು ಆಗ್ಬಿಟ್ಟೆ...ಸೀಟು ಸಿಗುತ್ತೆ ಮ್ಯಾಚ್ ಇರೋದ್ರಿಂದ ಅಂತ ಈ ರೈಲಿಗೆ ಬಂದ್ರೆ ಇದರಲ್ಲೂ ಸಿಗಲಿಲ್ಲ...ಥೋ ಇನ್ನೇನ್ ಮಾಡೋದ್ ಅಂತ ಸುಮ್ಮನಾದೆ...

ಸರಿ ಆಮೇಲೆ ಏನಾಯ್ತು ಅಂದ್ರೆ ನನ್ನ ಹಳೆ ಚಾಳಿ ಅಂತೆ ಅಕ್ಕ ಪಕ್ಕದವರ ಜೊತೆ ಹರಟೆ ಹೊಡೆಯೋದು ಶುರು ಆಯ್ತು... ಸೀಟು ಸಿಕ್ಕಿದ್ದರೆ ಯಾವುದಾದರು ಪುಸ್ತಕ ಓದುತ್ತ ಕೂರ್ತಿದ್ದೆ...ನಿಂತಿದ್ದನಲ್ಲ ವಿಧಿ ಇಲ್ಲದೆ ಅವರಿವರ ಜೊತೆ ಮಾತು ಶುರು ಆಯ್ತು...ಎಲ್ಲಾರ್ಗೂ ಮ್ಯಾಚ್ ಬಗ್ಗೆನೇ ಚಿಂತೆ...ಅವಾಗ ಒಬ್ರು ಜಗದೀಶ್ ಅಂತ ಪರಿಚಯ ಆದರು,ನಮ್ಮ ಊರಿನ ಹತ್ತಿರದವರೇ...ಸಹಜ ಸ್ವಭಾವ,ನಮ್ಮ ಹತ್ತಿರದವರು ಎಲ್ಲಾದರು ಕಂಡಾಗ ಮಿತಿಗಿಂತ ಜಾಸ್ತಿ ಮಾತಾಡ್ತೀವಿ..ನಾವಿಬ್ಬರೂ ಅರಸಿಕೆರೆಯಲ್ಲಿ ಇಳಿದು ಒಂದೇ ಬಸ್ಸಿಗೆ ಹಳೇಬೀಡಿಗೆ ಹೋಗಬೇಕಿತ್ತು...ಅದು ನಮಗೆ ಕೊನೆ ಬಸ್..ಆಗಾಗಿ ನನಗೂ ಒಬ್ಬರು ಜೊತೆ ಸಿಕ್ಕಿದರು,ಅವರಿಗೂ ಸಿಕ್ಕಿದರು,ಮಾತು ಕಥೆ ಶುರು ಆಯ್ತು...ನಮ್ಮ ನಮ್ಮ ಊರಿನ ಬಗ್ಗೆ,ನಮ್ಮ ಕೆಲಸದ ಬಗ್ಗೆ,ಬೆಂಗಳೂರಿನಲ್ಲಿ ಎಲ್ಲಿರದು,ಅದು ಇದು ಎಲ್ಲಾ...

ಅಷ್ಟೊತ್ತಿಗಾಗಲೇ ಶ್ರೀಲಂಕಾ ಬ್ಯಾಟಿಂಗ್ ಮುಗಿದು ನಮ್ಮ ಇಂಡಿಯಾ ಬ್ಯಾಟಿಂಗ್ ಶುರು ಆಗಿತ್ತು... ಅದಕ್ಕೂ  ಮುಂಚೆ  ನನ್ನ ಸಹೋದ್ಯೋಗಿ ಒಬ್ಬ ಫೋನ್ ಮಾಡಿ ಅವ್ರು ಇಷ್ಟಿಷ್ಟು ಸ್ಕೋರ್ ಮಾಡಿದ್ದಾರೆ,ಬೆಟ್ ಗಿಟ್ ಕಟ್ಟುತ್ತೀಯ ಅಂತ ಕೇಳಿದ ...ಇಲ್ಲ ಗುರು,ನನಗೆ ಅದರ ಸಹವಾಸ ಬೇಡ ಅಂತ ಹೇಳಿ,ಅವನು, ಇವತ್ತು ನಮ್ಮವರು ಸೋಲ್ತಾರೆ ಅಂತ ಹೇಳಿ ಫೋನ್ ಇಟ್ಟ..ಅದಾದ್ ಮೇಲೆ ಬೇಡ ಬೇಡ ಅಂದ್ರು ಪಕ್ಕದಲ್ಲಿದ್ದವರು ಸ್ಕೋರ್ ಹೇಳಕ್ಕೆ ಶುರು ಮಾಡಿದ್ರು,ಒಹ್ ಸೆಹವಾಗ್ ಔಟ್ ಆದ,ಸಚಿನ್ ಔಟಾದ..ಗೆಲ್ಲಲ್ಲ ಬಿಡಿ ಹಂಗೆ ಹೀಗೆ ಅಂತ ಬಹುತೇಕ ಎಲ್ಲರ ಬಾಯಲ್ಲೂ ಇದೆ ಮಾತು...

ಸರಿ ಟ್ರೈನ್ ಅರಸೀಕೆರೆಗೆ ಬಂತು.. ಹೊಟ್ಟೆಗೆ ಸ್ವಲ್ಪ ತಳ ಕಟ್ಟಿಕೊಂಡು ನಾನು ಮತ್ತು ಜಗದೀಶ್ ಇಬ್ಬರೂ ನಮ್ಮ ಕೊನೆ ಬಸ್ ಹತ್ತಿ ಹೊರಟ್ವಿ..ನನಗೂ ಕೆಲ ಸ್ನೇಹಿತರು ಅವಾಗವಾಗ updates ಕೊಡ್ತಿದ್ರು..ಮ್ಯಾಚ್ ನೋಡಲಿಲ್ಲ ಅಂದ್ರು ಸ್ವಲ್ಪ excitment ಇದ್ದೆ ಇತ್ತು...ಅವರಿಗೂ ಕೆಲವರು ಸ.ಮೊ.ಸ ಕಳಿಸ್ತಿದ್ರು..ಇನ್ನ ೮೪ ಎಸೆತ ೮೪ ರನ್ ಬೇಕಿತ್ತು.. ಅದೇ ಸಮಯಕ್ಕೆ ಸರಿಯಾಗಿ ಜಾವಗಲ್ಲಿಗೆ(ಜಾವಗಲ್ ಶ್ರೀನಾಥ್ ಅವರ ಊರು) ಬಂದಿದ್ವಿ.ಅಲ್ಲಿ ಉಟಕ್ಕೆ ಅಂತ ೧೦ ನಿಮಿಷ ಬಸ್ ನಿಲ್ಲಿಸಿದರು,ಆಗ ನನ್ನ ಜೊತೆಗಿದ್ದ ಜಗದೀಶ್ ಅವರು,ಮುಂಚೆ ಅವರು ಕೂಡ ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡಿ,ಅಲ್ಲಿ ಬಿಟ್ಟು ಆಗ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು.ಅವರು ಪೋಲಿಸ್ ಆಗಿದ್ದಾಗ ಇದ್ದ ಸ್ನೇಹಿತರು ಕೆಲವರು ಆ ಸಮಯದಲ್ಲಿ ಜಾವಗಲ್ ಗೆ ವರ್ಗಾವಣೆ ಆಗಿದ್ದರು,ಆಗಾಗಿ "ಬನ್ನಿ ಗಿರೀಶ್,ಒಂದ್ ಹತ್ತು ನಿಮಿಷ ಮ್ಯಾಚ್ ನೋಡ್ಕಂಡು ಬರೋಣ" ಅಂತ ಬಸ್ ನಿಲ್ದಾಣದ ಪಕ್ಕದಲ್ಲೇ ಇರೋ ಅಲ್ಲಿನ ಪೋಲಿಸ್ ಸ್ಟೇಷನ್ ಗೆ ಕರ್ಕೊಂಡು ಹೊರಟರು.."ಬೇಡ ಸರ್,ಅಲ್ಲೇನ್ ಟಿವಿ ಇರುತ್ತಾ" ಅಂತ ಕೇಳ್ದಾಗ,"ಹೇ ನಮ್ಮ ಫ್ರೆಂಡ್ ಅಲ್ಲೇ ಇದ್ದಾನೆ,ಇಷ್ಟೊತ್ತು ಅವನೇ ನನಗೆ ಮೆಸೇಜ್ ಕಳ್ಸಿದ್ದು,ಫೋನ್ ಮಾಡಿದ್ದೆ,ಬನ್ನಿ ಅಂದ" ಅಂತ ಹೇಳಿ ಕರ್ಕೊಂಡ್ ಹೊರಟರು.."ಮತ್ತೆ ಬಸ್ ಗಿಸ್ ಮಿಸ್ ಆದ್ರೆ ಕಷ್ಟ" ಅಂದ್ರೆ"ಏ,ಕಂಡಕ್ಟರ್ ಗೆ ಹೇಳ್ತೀನಿ ತಾಳಿ,ಒಂದೆರಡು ಓವರ್ ನೋಡ್ಕಂಡ್ ಬರಣ" ಅಂತ ಕರ್ಕಂಡ್ ಹೊರಟರು...
"ನಿಮ್ ಬ್ಯಾಗ್ ಇದ್ರೆ ತಗಳಿ,ರಾತ್ರಿ ಬೇರೆ,ಸುಮ್ನೆ ಯಾಕ್ ರಿಸ್ಕ್,ಯಾವನಾದ್ರು ಎತ್ಕಂಡ್ ಹೋದ್ರೆ" ಅಂತ ಎಚ್ಚರಿಸಿ ಕರ್ಕಂಡ್ ಹೊರಟರು... ಅಲ್ಲಿ ಮುಂಬಯಿಯಲ್ಲಿ ಟೀಂ ಇಂಡಿಯಾದವರು ರನ್ chase ಮಾಡ್ತಿದ್ರೆ ನಮಗೆ ಇಲ್ಲಿ ಬಸ್ chase ಮಾಡಕ್ಕೆ ಆಗ್ಲೇ ಇಲ್ಲ...

ಮನಸಲ್ಲೇ ಜಗದೀಶ್ ಅವ್ರಿಗೆ ಬೈಕೊಂಡು "ಈಗೇನ್ ಮಾಡೋದ್ ಸರ್?" ಅಂದೆ,"ಏ ಬನ್ನಿ ಗಿರೀಶ್,ಮ್ಯಾಚ್ ನೋಡ್ಕಂಡ್ ಆಮೇಲೆ ನೋಡನ.. ಸಖತ್ ಇಂಟರೆಸ್ಟಿಂಗ್ ಇದೆ ಮ್ಯಾಚ್,ಯಾರ್ದಾರ ಬೈಕ್ ಇಸ್ಕಂಡ್ ಹೋಗಣ,ನಿಮ್ಮ ಊರಿಗೆ ಬಿಡ್ತೀನಿ ನಾನು" ಅಂತ ಧೈರ್ಯ ಕೊಟ್ರು..ಆದರು ಸಮಾಧಾನ ಆಗ್ಲಿಲ್ಲ..ಮತ್ತೆ ಸ್ಟೇಷನ್ ಗೆ ಹೋದ್ರೆ,ಅಲ್ಲಿದ್ದ ಬೇರೆ ಪೋಲಿಸಿನವರು ಯಾವೂರು ಅಂತ ಕೇಳಿದ್ರು,ಸಿದ್ದಾಪುರ ಅಂದೆ..ಆ ಊರಿನವರು ಒಬ್ರು  ಇದೆ ಸ್ಟೇಷನ್ ನಲ್ಲಿ ಇದ್ರು ಕಣಪ್ಪ ಮುಂಚೆ.. ಈಗ ಸಕಲೇಶಪುರದಲ್ಲಿ ಇದ್ದಾರೆ...ಅಯ್ಯೋ,ಅವರು ನಮ್ಮ ಚಿಕ್ಕಪ್ಪನೇ ಸರ್ ಅಂದೆ...ಬಿಡು ಮತ್ತೆ ನಮ್ಮವರೇ ನೀವು, ಯಾಕ್ ಯೋಚನೆ ಮಾಡ್ತಿಯ,ಬೈಕ್ ಕೊಡ್ತೀವಿ ತಗಂಡ್ ಹೋಗಿ,ಹೆಂಗೂ ಇವನು ಇದ್ದಾನಲ್ಲಾ ,ಬಿಡ್ತಾನೆ ಅಂದ್ರು...ಅವಾಗ ಸ್ವಲ್ಪ ಸಮಾಧಾನ ಆಯ್ತು..

ಸರಿ ಮ್ಯಾಚ್ ಮುಗಿತು,ನಮ್ಮವರು ಗೆದ್ದರು,ಇನ್ನೇನ್ ಹೊರಡೋಣ ಅಂತ ಇದ್ವಿ,ಆಗ ನಮ್ಮಂಗೆ ಹೊರಗಿನವರು ಅಲ್ಲಿ ಮ್ಯಾಚ್ ನೋಡ್ತಿದ್ದವರಲ್ಲಿ ಒಬ್ಬರು,'ಏ ಇಷ್ಟೊತ್ತು ಇದ್ದೀರಾ,ಅತ್ಲಾಗಿ ಕಪ್ ಕೊಡೋದನ್ನು  ನೋಡ್ಕಂಡ್ ಹೋಗಿ"ಅಂದ್ರು..ಅವರಿಗೆ ಪರಮಾತ್ಮ ಮೈ ಮೇಲೆ ಬಂದಿದ್ದ..."ಗೆದ್ದರಲ್ಲ ಅಷ್ಟು ಸಾಕು ಬಿಡಿ" ಅಂದಾಗ' "ನೋಡ್ರಿ ಅಲ್ಲಿ ನಮ್ ಅಣ್ಣ ಸಚಿನ್ ನ ಹೆಂಗೆ ಹೊತ್ಕಂಡವ್ರೆ" ಅಂತ ಆತ ಕೂಡ ಕುಣಿಯಕ್ಕೆ ಶುರು ಮಾಡಿದ...ಆಗ ಅಲ್ಲಿದ್ದ ಒಬ್ಬ ಪೀಸಿ ರೀ ಸಾಹೇಬರು ಬರ್ತಾರೆ ಇವಾಗ,ನಡೀರಿ ನಡೀರಿ,ನಾವು ಹೊರಡಬೇಕು..ಎಲ್ಲಾದರು ಗಲಾಟೆ ಗಿಲಾಟೆ ಆಗುತ್ತೆ ಅಂತ ರೌಂಡ್ಸ್ ಹೋಗಕ್ಕೆ ಹೇಳಿದ್ದಾರೆ ಅಂತ ಹೊರಟರು.. ಆಗ ಈ  ಜಗದೀಶ್ ಇದ್ದವರು ಅವರ ಫ್ರೆಂಡ್ ಹತ್ತಿರ ಬೈಕ್ ತಗೊಂಡು ನಾವು ಹೊರಟ್ವಿ...ನೋಡಿದ್ರೆ ದಾರಿ ಮಧ್ಯೆ ಎಲ್ಲಾ ಹಳ್ಳೀಲೂ celebrations ಫುಲ್ ಜೋರಾಗಿತ್ತು.. ತಮಟೆ ಬಾರಿಸ್ತಾ ಡೋಲು ಬಾರಿಸ್ತಾ ರಸ್ತೆ ಮಧ್ಯೆದಲ್ಲೇ ಕುಣಿತಿದ್ದರು..

ಅಂತು ಇಂತು ಮನೆ ತಲುಪಿದಾಗ ರಾತ್ರಿ ೧೨.೩೦...ಆ ಬಸ್ಸಿಗೆ ಹೋಗಿದ್ದರೆ ೧೦.೧೫ಕ್ಕೆ ಮನೇಲಿ ಇರ್ತಿದ್ದೆ.. ಇನ್ನೂ ಬರದೆ ಇದ್ದದಕ್ಕೆ ಅಪ್ಪ ಫೋನ್ ಮಾಡಿದ್ದಾರೆ..ನನ್ನ ಮೊಬೈಲ್ out of coverage area ಇತ್ತು... ಕೊನೆಗೆ ಬರ್ತಾನೆ ಬಿಡು ಅಂತ ಸುಮ್ನಾಗಿದ್ರಂತೆ...ಅವತ್ತು ನಮ್ಮ ದೊಡ್ಡಮ್ಮ ಬಂದಿದ್ದರು ಅಂತ ಪಾಯಸ ಮಾಡ್ಕೊಂಡು ನನಗೋಸ್ಕರ ಉಟಕ್ಕೆ ಕಾದು ಕಾದು ಸಾಕಾಗಿ ಫೋನ್ ಮಾಡಿ ಮಾಡಿ ಸುಸ್ತಾಗಿ "ಏಲ್ ಹೋದ ಈ ನನ್ ಮಗ" ಅಂತ ಬೈಕೊಂಡು,ಹೊಟ್ಟೆ ಹಸಿದ ಮೇಲೆ ಊಟ ಮಾಡಿ ಮಲಗಿದ್ದರು.. ಮನೆಗೆ ಹೋಗಿ ಯಾಕ್ ಲೇಟ್ ಅಂತ ಅವ್ರು ಕೇಳ್ದಾಗ,ಹಿಂಗಿಂಗೆ ಆಯ್ತು,ಅವ್ರು ಬಂದು ಬಿಟ್ಟು ಹೋದರು,ಅಂದೆ..ನಮ್ ಅಪ್ಪಾಜಿ ತಲೆ ತಲೆ ಚಚ್ಕಂಡ್ ನಕ್ಕಿದ್ರೆ,ನಮ್ ಅಮ್ಮ "ಅವ್ರು ಬೈಕ್ ಕೊಡಬಾರದಿತ್ತು ಕಣ್ಲ ನಿಮಗೆ,ಅಷ್ಟು ಪರಿಜ್ಞಾನ ಬ್ಯಾಡವೇ ?" ಅಂತ ಒಂದ್ ಲುಕ್ ಕೊಟ್ಟು "ಹೊಗ್ ಪಾಯಸ ತಣ್ಣಗೆ ಆಗಿದೆ,ಅದನ್ನೇ ತಿನ್ನು" ಅಂತೇಳಿ ಮಲಗಿದರು.. ಹಳೇಬೀಡಿನಲ್ಲಿ  ನನ್ನ ಫ್ರೆಂಡ್ ಪೃಥ್ವಿ ಮನೇಲಿ ಇದ್ದೀನಿ,ಅಲ್ಲಿ ಮ್ಯಾಚ್ ನೋಡ್ತಾ ಇದ್ದೆ ಅಂತ ತಿಳ್ಕಂಡಿದ್ದರಂತೆ...


ಹೋದ ವರ್ಷ ಹಿಂಗೆ ಆಗಿತ್ತು...ಈ ವರ್ಷ ಈ ಥರ ಏನು adventurous ಸಂಗತಿ ನಡೆಯಲ್ಲ.. ಯಾಕಂದ್ರೆ ಬೆಳಗ್ಗೆ ಟ್ರೈನ್ ಗೆ ಹೋಗ್ತಿರದು.. ಅಲ್ಲದೆ ಜೊತೆಗೆ ಫ್ರೆಂಡ್ಸ್ ಇರ್ತಾರೆ...ನನ್ ಕಥೆ ಯಾವಾಗ್ಲೂ ಹಿಂಗೆ ...ಅದ್ ಬಿಡಿ...


ಪ್ರಕೃತಿಯ ಹೊಸ ಚಿಗುರಿನೊಂದಿಗೆ,ಹುರುಪಿನೊಂದಿಗೆ ನವ 'ನಂದನ' ಸಂವತ್ಸರದ ಪಯಣ ಸಾಗಲಿ...
ಸುಖ ದುಃಖ,ಸಿಹಿ ಕಹಿ ಎಲ್ಲವನ್ನೂ ಸಮನಾಗಿ ಸ್ವೀಕರಿಸುತ್ತಾ ಬದುಕು ಸಾಗಲಿ...
ಸಮಸ್ತರಿಗೂ ಯುಗಾದಿಯ ಶುಭಾಶಯಗಳು... ಒಳ್ಳೇದ್  ಆಗ್ಲಿ ...


(ಹಳ್ಳಿ ಕಡೆ ಯುಗಾದಿ ದಿನ ಹೊನ್ನಾರು ಅಂತ ಆಚರಣೆ ಮಾಡ್ತಾರೆ... ಅದರ ಬಗ್ಗೆ ಒಂದೇ ಲೇಖನ ಇದೆ ನೋಡಿ...)