Friday, August 15, 2014

ಹುತಾತ್ಮರ ಸ್ಮಾರಕ

ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾವಿರಾರು ಹೋರಾಟಗಾರು ಭಾಗಿಯಾಗಿದ್ದರು , ಭಗತ್ ಸಿಂಗ್,ವೀರ್ ಸಾವರ್ಕರ್ ಅವರಂಥ ಕ್ರಾಂತಿಕಾರಿಗಳಿಂದ  ಉತ್ತೇಜಿತರಾದ ಎಷ್ಟೋ ವಿದ್ಯಾರ್ಥಿಗಳು ತಮ್ಮ ವ್ಯಾಸಂಗವನ್ನು ಅರ್ಧಕ್ಕೆ ಬಿಟ್ಟು ಚಳವಳಿಗಳಲ್ಲಿ ಭಾಗಿಯಾಗುತ್ತಾರೆ. ನಮ್ಮ ನಾಡಿನ ಖ್ಯಾತ ಶಿಕ್ಷಣ ತಜ್ಞರಾದ ಡಾ।। ಹೆಚ್.ನರಸಿಂಹಯ್ಯನವರು ಕೂಡ ತಮ್ಮ ವಿದ್ಯಾರ್ಥಿ ಜೀವನದ ಸಮಯದಲ್ಲಿಯೇ ಗಾಂಧೀಜಿ ಅವರಿಂದ ಪ್ರೇರಿತರಾಗಿ ಕ್ವಿಟ್ ಇಂಡಿಯಾ ಚಳವಳಿ ಮತ್ತು ಹಲವಾರು ಚಳವಳಿಗಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದ್ದರು. ಅದೇ ರೀತಿ ಎಲೆ ಮರೆ ಕಾಯಿಯಂತೆ ಬೆಂಗಳೂರಿನ ಇನ್ನೂ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರ ನೆನಪಿನಲ್ಲಿ ಹಲವಾರು ಸ್ಮಾರಕಗಳಿವೆ. ಅದೇ ರೀತಿಯಲ್ಲಿ ಬೆಂಗಳೂರಿನ ಹೃದಯ ಭಾಗದಲ್ಲಿ ಒಂದು ಸ್ಮಾರಕ ಇದೆ . ಈ ಸ್ಮಾರಕ ಇರುವುದು ಮೈಸೂರ್ ಬ್ಯಾಂಕ್ ಸರ್ಕಲ್ ನಲ್ಲಿ. ಈ ಸ್ಮಾರಕವು , ೧೯೪೨ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾಗಿ ಬ್ರಿಟೀಷರ ವಿರುದ್ಧ ಹೋರಾಡಿ ಅವರ ಗುಂಡಿಗೆ ಬಲಿಯಾದ ೪ ವಿಧ್ಯಾರ್ಥಿಗಳ ನೆನಪಿನಲ್ಲಿ ನಿರ್ಮಾಣವಾದದ್ದು.  
ಶ್ರೀ ಶಾಮಣ್ಣ ಬಿನ್ ಬೇಟೆ ರಂಗಪ್ಪ , ಶ್ರೀ ಜೆ.ವಿ . ತಿರುಮಲಯ್ಯ , ಶ್ರೀ ಪ್ರಹ್ಲಾದ ಶೆಟ್ಟಿ  , ಶ್ರೀ  ಗುಂಡಪ್ಪ ಎಂಬ ನಾಲ್ಕು ಜನ ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳು ಆ ಚಳವಳಿಯಲ್ಲಿ ಬಲಿಯಾಗಿದ್ದರು . ಈ ಹುತಾತ್ಮರ ನೆನಪಿಗಾಗಿ ಕೇಂದ್ರ ಸರ್ಕಾರವು ೧೯೭೨ನೆ ಇಸವಿಯಲ್ಲಿ ಈ ಸ್ಮಾರಕವನ್ನು ನಿರ್ಮಾಣ ಮಾಡಿತ್ತು ಮತ್ತು ೨೫ನೆ ಸ್ವಾತಂತ್ರ ದಿನದ ನೆನಪಿನಲ್ಲಿ  ಅಂದರೆ ಆಗಸ್ಟ್ ೧೫, ೧೯೭೩ನೆ ಇಸವಿಯಲ್ಲಿ ಇದನ್ನು ಅನಾವರಣ ಮಾಡಿತ್ತು. 



ಸುಮಾರು ಹತ್ತು ಅಡಿ ಎತ್ತರ ಇರುವ ಈ ಸ್ಮಾರಕದಲ್ಲಿ ಆ ನಾಲ್ಕು ಹುತಾತ್ಮ ವಿಧ್ಯಾರ್ಥಿಗಳ ಹೆಸರನ್ನು ಕೆತ್ತಿಸಲಾಗಿದೆ.

ಇಂಥದ್ದೊಂದು ಸ್ಮಾರಕ ಇರುವುದು ಬೆಂಗಳೂರಿನ ಎಷ್ಟೋ ಜನರಿಗೆ ಗೊತ್ತಿಲ್ಲ ಎಂಬುದು ನನ್ನ ಭಾವನೆ . ಇಂಥ ಸ್ಮಾರಕಗಳು ನಮ್ಮ ಮುಂದಿನ ಪೀಳಿಗೆಗಳಿಗೆ ಪರಿಚಯವಾಗಬೇಕು . ಅಂದು ವಿದ್ಯಾರ್ಥಿಗಳು ಕೂಡ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದರು ಎಂಬುದು ಈಗಿನ ಯುವ ಪೀಳಿಗೆಗೆ ಸ್ಪೂರ್ತಿ ಆಗಬೇಕು . 

೬೮ನೆ ಸ್ವಾತಂತ್ರ್ಯ ದಿನಾಚರಣೆಯ ಈ ದಿನದಂದು  ನಮ್ಮ ಸ್ನೇಹಿತರೊಡಗೂಡಿ ಈ ಸ್ಮಾರಕಕ್ಕೆ ಭೇಟಿ ನೀಡಿ ಆ ಹುತಾತ್ಮರಿಗೆ ನಮ್ಮ ಗೌರವವನ್ನು ಸಮರ್ಪಿಸಿ ಬಂದೆವು . 

ಇಂದಿನ ಈ ಸ್ಮಾರಕದ ಸ್ಥಿತಿ ಹೇಗಿದೆ ಅಂದರೆ  ಈ ಸ್ಮಾರಕ ಇರುವ ಜಾಗವನ್ನು ಪಕ್ಕದ ದೇವಸ್ಥಾನದವರು ಅತಿಕ್ರಮಣ ಮಾಡಿಕೊಂಡು ಅದರ ಸುತ್ತಲು ಕಾಂಪೌಂಡ್ ಅನ್ನು ನಿರ್ಮಿಸಿಕೊಂಡಿದ್ದಾರೆ. ಬೃಹತ್ ಬೆಂಗಳೂರು ಮಹಾನಾಗರ ಪಾಲಿಕೆಯು ಇದರ ಬಗ್ಗೆ ಮುತುವರ್ಜಿ ವಹಿಸಿ ಈ ಸ್ಮಾರಕವನ್ನು ದೇವಸ್ಥಾನದ ಪ್ರಾಂಗಣದಿಂದ ಪ್ರತ್ಯೆಕಗೊಳಿಸಿ ಇದನ್ನು ಸಂರಕ್ಷಿಸಿದರೆ ಒಳ್ಳೆಯದು ಎಂಬುದು ನನ್ನ ಅನಿಸಿಕೆ .