ಬಹಳ ದಿನದಿಂದ ಹಿಮಾಲಯಕ್ಕೆ ಚಾರಣ ಹೋಗಬೇಕೆಂಬ ಬಯಕೆ ಇತ್ತು. ಸಮಯ ಕೂಡಿ ಬಂದಿರಲಿಲ್ಲ. ಹೀಗೆ ಕೆಲವು ದಿನಗಳ ಹಿಂದೆ ಪ್ರಶಸ್ತಿಯ ಜೊತೆ ಮಾತನಾಡುವಾಗ . ಈ ವರ್ಷದ ಕೊನೆಯಲ್ಲಿ ಏನೇ ಆದರೂ ಹಿಮಾಲಯ ಚಾರಣಕ್ಕೆ ಹೋಗಬೇಕೆಂದಿದ್ದೇನೆ ಎಂದಾಗ,ಅವನು ಕೂಡ ಹೋಗಬೇಕು ಅಂದ. ಕೆಲವೇ ದಿನಗಳಲ್ಲಿ ಅವನ ಸ್ನೇಹಿತರು ಕೂಡ ಚಾರಣಕ್ಕೆ ಹೋಗುತ್ತಿರುವುದಾಗಿ ಹೇಳಿ,ನನ್ನನ್ನು ಅವರ ಜೊತೆ ಸೇರಿಸಿಕೊಂಡು ಚಾರಣದ ಸ್ಥಳವನ್ನು ಸಂದಾಕ್ಫು (Sandakphu ) ಹಾಗು ಹೊರಡುವ ದಿನವನ್ನು ನಿಗದಿ ಪಡಿಸಿ ಆಯಿತು. ಪಶ್ಚಿಮ ಘಟ್ಟಗಳಲ್ಲಿ ಬಹಳಷ್ಟು ಚಾರಣ ಮಾಡಿದ್ದರೂ ಹಿಮಾಲಯದ ಚಾರಣದ ಬಗ್ಗೆ ಕುತೂಹಲ ಇಮ್ಮಡಿಯಾಗಿತ್ತು . ನಮ್ಮ ಚಾರಣ ಚಳಿಗಾಲದಲ್ಲಿ ಇದ್ದಿದ್ದರಿಂದ ಹಿಮಪಾತ ಆಗಬಹುದೆಂಬ ನಿರೀಕ್ಷೆ, ಹವಾಮಾನ ವೈಪರೀತ್ಯ ಹೀಗೆ ಬಹಳಷ್ಟು ಕುತೂಹಲಗಳು . ಹೊರಡಲು ಇನ್ನೇನು ಕೆಲವು ದಿನಗಳು ಇವೆ ಅನ್ನುವಷ್ಟರಲ್ಲಿ ಹಿಮಾಲಯದ ಹವಾಮಾನಕ್ಕೆ ಅನುಗುಣವಾಗಿ ಬಟ್ಟೆ ಬರೆಗಳು, ಚಾರಣಕ್ಕೆ ಅವಶ್ಯಕ ವಸ್ತುಗಳನ್ನು ಖರೀದಿ ಮಾಡಿದ್ದಾಯ್ತು . ದಿನ ಸಮೀಪಿಸಿದಂತೆ ಕುತೂಹಲ ಹೆಚ್ಚಾಗುತ್ತಾ ಹೋಯಿತು .
ನಾವು ಚಾರಣಕ್ಕೆ ಹೊರಟಿದ್ದ ಸ್ಥಳದ ಬಗ್ಗೆ ಕಿರು ಮಾಹಿತಿಯನ್ನು ಕೊಟ್ಟು ಮುಂದುವರೆಯುತ್ತೇನೆ .
Sandakphu , ಪಶ್ಚಿಮ ಬಂಗಾಳದ ಅತಿ ಎತ್ತರದ ಪ್ರದೇಶ . ಇದು ಸಿಗ್ನಲಿಯಾ (Singalia National Park) ವನ್ಯಜೀವಿ ಅಭಯಾರಣ್ಯ ಪ್ರದೇಶಕ್ಕೆ ಒಳಪಡುತ್ತದೆ ಮತ್ತು ಡಾರ್ಜೀಲಿಂಗ್ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದೆ. ಅಲ್ಲದೆ ಇದು ಪಶ್ಚಿಮ ಬಂಗಾಳ ಮತ್ತು ನೇಪಾಳದ ಗಡಿಯಲ್ಲಿ ಬರುವಂತಹ ಶಿಖರ. ಇದು ಸಮುದ್ರ ಮಟ್ಟದಿಂದ ೩೬೩೬ ಮೀಟರ್ (೧೧೯೪೧ ಅಡಿ) ಎತ್ತರದ್ಲಲಿರುವ ಶೃಂಗ ಪ್ರದೇಶ . ಇಲ್ಲಿಂದ ಕಾಂಚನಜುಂಗಾ ಮತ್ತು ಎವರೆಸ್ಟ್ ಪರ್ವತಗಳನ್ನು ಕಾಣಬಹುದು. ಇಂಥ ಒಂದು ಕುತೂಹಲಕಾರಿ ಶಿಖರ ಏರಲು ನಾವು ಹವಣಿಸುತ್ತಿದ್ದೆವು.
ಬೆಂಗಳೂರಿನಿಂದ ಕೋಲ್ಕತ್ತಾಗೆ ನಮ್ಮ ಪ್ರಯಾಣ ಶುರು ಆಗಿದ್ದು ಡಿಸೆಂಬರ್ ೧೬, ೨೦೧೬. ಬೆಂಗಳೂರಿನಿಂದ ನಾವು ಒಟ್ಟು ನಾಲ್ಕು ಜನದ ತಂಡ ಹೊರಟಿದ್ದು . ಬನಶಂಕರಿ ಅಲ್ಲಿ ಶೈಲೇಶನನ್ನ ಭೇಟಿ ಆಗಿ, ಅಲ್ಲಿಂದ ಇಬ್ಬರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೊರಟೆವು . ನಾವು ಅಲ್ಲಿ ತಲುಪುವ ವೇಳೆಗೆ ಪ್ರಶಸ್ತಿ ಮತ್ತು ಹರೀಶ್ ಬಂದು ನಮಗಾಗಿ ಕಾಯುತ್ತಿದ್ದರು . ಶೈಲೇಶ್ ಮತ್ತು ಹರೀಶ್ ಇಬ್ಬರನ್ನು ನಾನು ಭೇಟಿ ಆಗಿದ್ದು ಇದೆ ಮೊದಲು . ಹರೀಶ್ ನಮ್ಮ ಗುಂಪಿನ ಆಯೋಜಕ ಮತ್ತು ಖಜಾಂಚಿ.
|
Arrival at Kolkata Airport. |
ಬೆಂಗಳೂರಿನಿಂದ ಹೊರಟ ವಿಮಾನ ಕೋಲ್ಕತ್ತಾ ತಲುಪಿದ್ದು ಮಧ್ಯಾಹ್ನ ೧೨:೪೫. ಅಲ್ಲಿಂದ ಸಿಲಿಗುರಿಗೆ ನಮ್ಮ ರೈಲು ಇದ್ದಿದ್ದು ರಾತ್ರಿ ೧೧ಕ್ಕೆ, ಆಗಾಗಿ ನಮ್ಮ ಗಂಟುಮೂಟೆಯನ್ನು ರೈಲ್ವೆ ಸ್ಟೇಷನ್ನಿನಲ್ಲಿ ಇಟ್ಟು ಕೋಲ್ಕತ್ತಾ ನಗರ ಸುತ್ತಲು ಹೊರಟೆವು. Sealdah ರೈಲು ನಿಲ್ದಾಣದಿಂದ ನಾವು ಸೀದಾ ದಕ್ಷಿಣೇಶ್ವರಕ್ಕೆ ಹೊರಟೆವು . ದಕ್ಷಿಣೇಶ್ವರದಲ್ಲಿ ಕಾಳಿ ಮತ್ತು ಜ್ಯೋತಿರ್ಲಿಂಗಗಳ ದರ್ಶನ ಪಡೆದು ಪುನೀತರಾದೆವು . ಹೂಗ್ಲಿ ನದಿಯ ದಂಡೆಯಲ್ಲಿರುವ ಕಾಳಿ ಮಂದಿರದಿಂದ ನಮ್ಮ ಪ್ರಯಾಣ ಬೇಲೂರು ಮಠಕ್ಕೆ ದೋಣಿಯಲ್ಲಿ ಸಾಗಿತು. ದಕ್ಷಿಣೇಶ್ವರದಿಂದ ಬೇಲೂರು ಮಠಕ್ಕೆ ಹೋಗುವಾಗ ವಿವೇಕಾನಂದ ಸೇತುವಿನ ಕೆಳಗೆ ಹೋಗಬೇಕು, ಹೂಗ್ಲಿ ನದಿಯ ಮೇಲಿರುವ ಈ ಸೇತುವೆಯನ್ನು Willingdon Bridge ಮತ್ತು Bally Bridge ಎಂದೂ ಕರೆಯುತ್ತಾರೆ. ಸಂಜೆ ೪:೩೦ ರ್ ಸುಮಾರಿಗೆ ಹೂಗ್ಲಿ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ನಮ್ಮ ಪ್ರಯಾಣ ಶುರು ಆಯಿತು, ಅದಾಗಲೇ ಕೋಲ್ಕತಾದಲ್ಲಿ ಸೂರ್ಯಾಸ್ತದ ಸಮಯವೂ ಆಗಿತ್ತು. ಹೂಗ್ಲಿ ನದಿಯಲ್ಲಿ ಸೂರ್ಯಾಸ್ತವನ್ನು ಕಂಡು ಬೇಲೂರು ಮಠ ತಲುಪುವ ವೇಳೆಗೆ ಅಲ್ಲಿ ದಿನ ನಿತ್ಯದಂತೆ ಸಂಜೆ ಆರತಿ ಕಾರ್ಯಕ್ರಮ ಶುರು ಆಗಿತ್ತು. ಸಾವಿರಾರು ಜನರು ನೆರೆದಿದ್ದರೂ ಮನಸ್ಸಿಗೆ ಮುದ ನೀಡುವಷ್ಟು ಪ್ರಶಾಂತವಾದ ಸ್ಥಳ ಅದು. ಸ್ವತಃ ವಿವೇಕಾನಂದರೇ ಅಲ್ಲಿ ಇದ್ದಾರೆ ಎಂಬಂತಿತ್ತು ಆ ಪ್ರದೇಶ . ಮಠದ ಹೊರಗೆ paaprichat ತಿಂದು ಅಲ್ಲಿಂದ ಸೀದಾ howrah ಸೇತುವೆಯ ಕಡೆ ಹೊರಟೆವು . ಕೋಲ್ಕತ್ತಾದಲ್ಲಿ ಬಸ್ಸಿನ ದರ ನಮ್ಮ ಬೆಂಗಳೂರಿನ ಬಸ್ಸಿನ ದರಕ್ಕಿಂತ ಬಹಳ ಕಡಿಮೆ. ಬೇಲೂರು ಮಠದಿಂದ ಹೌರಾಗೆ ದೋಣಿಯಲ್ಲೇ ಹೋಗಬಹುದಾಗಿದ್ದರೂ ನಮ್ಮ ಸಮಯಕ್ಕೆ ಯಾವುದೇ ದೋಣಿ ಇರಲಿಲ್ಲ. ಆಗಾಗಿ ಅಲ್ಲಿಂದ ಬಸ್ಸಿನಲ್ಲಿ ಹೊರಟೆವು. ಈ ಪ್ರಯಾಣದಲ್ಲಿ ಕೆಲವು ಆಶ್ಚರ್ಯಕರವಾದ ಸಂಗತಿಗಳು ಗೋಚರಿಸಿದವು. ಬಾರಿನ ಮುಂದೆ ಯಾವುದೇ ನೂಕು ನುಗ್ಗಲಿಲ್ಲದೆ, ಸರದಿ ಸಾಲಿನಲ್ಲಿ ನಿಂತು ಜನರು ಸಾರಾಯಿಯನ್ನು ಕೊಳ್ಳುತ್ತಿದ್ದರು. ಬಹುಷ ಭಾರತದ ಯಾವುದೇ ನಗರದಲ್ಲಿ ಇಂತಹ ಒಂದು ಶಿಸ್ತು ಬಾರಿನಲ್ಲಿ ಕಾಣಲು ಸಾಧ್ಯವಿಲ್ಲ. ಹೌರಾ ಸೇತುವೆಯ ಮೇಲೆ ಒಂದು ದಡದಿಂದ ಇನ್ನೊಂದು ದಡಕ್ಕೆ ನೂಕು ನುಗ್ಗಲಿನಲ್ಲೇ ಬಂದಿದ್ದಾಯಿತು , ವೇಗವಾಗಿ ನಡೆಯುವ ಜನ ಒಂದು ಕಡೆ. ಆದರೆ ಪಾದಚಾರಿ ಮಾರ್ಗದಲ್ಲಿ ತರಕಾರಿ, ಹಣ್ಣು ಇತ್ಯಾದಿಗಳನ್ನು ಮಾರುತ್ತಿರುವವರು ಒಂದು ಕಡೆ. ಆದರೆ ,ಗಂಗಾ ನದಿಯ ಸೇತುವೆಯ ಮೇಲೆ ನಡೆದಾಡಿದ ಆ ಒಂದು ಅನುಭವ ಮರೆಯಲಾಗದ್ದು. ಅಲ್ಲಿಂದ ಸೀದಾ ರೈಲ್ವೆ ಸ್ಟೇಷನ್ನಿಗೆ ಬಂದು ಅದರ ಸುತ್ತ ಇದ್ದ ಮಾರುಕಟ್ಟೆಯಲ್ಲಿ ಒಂದು ಪ್ರದಕ್ಷಿಣೆ ಹಾಕಿ ಹೊಟ್ಟೆಗೆ ಒಂದಷ್ಟು ತಂಪಾಗುವಂತೆ ಮಣ್ಣಿನ ಮಡಕೆಯಲ್ಲಿ ಲಸ್ಸಿ ಕುಡಿದು ನಮ್ಮ ರೈಲಿಗೆ ಕಾಯುತ್ತಾ ಕೂತೆವು . ಈ Sealdah ನಿಲ್ದಾಣದಲ್ಲಿ ಲೋಕಲ್ ರೈಲು ಮತ್ತು ಬೇರೆ ನಗರಗಳಿಗೆ ಹೋಗುವ ರೈಲುಗಳೂ ಇದ್ದಿದ್ದರಿಂದ ಜನ ಒಂದು ರೈಲಿನಿಂದ ಇಳಿದು ಇನ್ನೊಂದು ರೈಲನ್ನು ಹಿಡಿಯಲು ಹಿಂದೆ ಮುಂದೆ ನೋಡದೆ ಓಟದ ಸ್ಪರ್ಧೆಯಲ್ಲಿ ಓಡಿದಂತೆ ಹೋಗುತ್ತಿರುತ್ತಾರೆ. ಇಲ್ಲಿಂದ ರಾತ್ರಿ ೧೧ಕ್ಕೆ ನಮ್ಮ ಪ್ರಯಾಣ ಜಲಪೈಗುರಿಗೆ (ಸಿಲಿಗುರಿಯ ಹತ್ತಿರ) ಹೊರಟಿತು.
|
Dakshineshwar Kali temple on the banks of Hoogley river |
|
Willingdon Bridge |
|
Vivekananda Setu or Bally Bridge |
|
Sunset at Hoogley river |
|
Belur Math, Kolkata |
|
Howrah Bridge |
|
Market under Howrah bridge |
ಬೆಳಗ್ಗೆ ಸುಮಾರು ೮ಕ್ಕೆ ಸಿಲಿಗುರಿ ತಲುಪಬೇಕಿದ್ದ ನಮ್ಮ ರೈಲು ೧೦ ಘಂಟೆಗೆ ಸಿಲಿಗುರಿ ತಲುಪಿತು . ಅಲ್ಲಿಂದ ಟ್ಯಾಕ್ಸಿಯಲ್ಲಿ ಡಾರ್ಜೀಲಿಂಗ್ ಕಡೆಗೆ ಹೊರಟೆವು. ಇಲ್ಲಿಂದ ನಮ್ಮ ಚಾರಣದ ವೇಳಾಪಟ್ಟಿ ಶುರು.
ದಿನ ೧ :
ಡಾರ್ಜೀಲಿಂಗ್ ಎಂದ ಕೂಡಲೇ ನೆನಪಾಗುವುದು ಹಿಮ ಮತ್ತು ಅಲ್ಲಿನ ರೈಲ್ವೆ. ನಾವು ಡಾರ್ಜೀಲಿಂಗ್ ತಲುಪುವ ವೇಳೆಗೆ ಮಧ್ಯಾಹ್ನ ೧ ಘಂಟೆ ಆಗಿತ್ತು . ನಮ್ಮ ಟ್ಯಾಕ್ಸಿ ಡಾರ್ಜೀಲಿಂಗ್ ನ ರೈಲು ನಿಲ್ದಾಣದ ಮುಂದೆಯೇ ನಿಂತಿತು. ಸಿಲಿಗುರಿ ಇಂದ ಡಾರ್ಜೀಲಿಂಗ್ ಬರುವಾಗ ದಾರಿ ಮಧ್ಯದಲ್ಲಿ ಬಹಳ ಕಡೆ ಈ ರೈಲ್ವೆ ಹಳಿಗಳನ್ನು ಕಂಡಿದ್ದೆವು . ಆ ಗುಡ್ಡಗಾಡು ಪ್ರದೇಶದಲ್ಲಿ ಇರುವ ಈ ರೈಲ್ವೆ ಸೇವೆಯು ಯುನೆಸ್ಕೋ ಪರಂಪರೆಯ ಪಟ್ಟಿಯಲ್ಲಿ ಕೂಡ ಸೇರಿದೆ. ಅಲ್ಲದೆ ಭಾರತದಲ್ಲಿ ಅತಿ ಎತ್ತರದ ಪ್ರದೇಶದಲ್ಲಿರುವ ರೈಲ್ವೆ ನಿಲ್ದಾಣ ಕೂಡ ಡಾರ್ಜೀಲಿಂಗ್ ಇಂದ ಸುಮಾರು ೮ ಕಿ.ಮೀ ದೂರದಲ್ಲಿರುವ ghoom ಎಂಬಲ್ಲಿದೆ. ಇದು ಡೀಸೆಲ್ ಮತ್ತು ಕಲ್ಲಿದ್ದಲಿನಿಂದ ಓಡುವ ರೈಲುಗಳು.
|
Railway station at Darjeeling, This rail is also called as Toy Train |
|
Workshop |
ಅಲ್ಲಿಂದ ಸುಮಾರು ೫ ನಿಮಿಷದ ನಡಿಗೆಯಲ್ಲಿ ನಾವು ವರದಿ ಮಾಡಿಕೊಳ್ಳಬೇಕಾಗಿದ್ದ ನಮ್ಮ ಶಿಬಿರಕ್ಕೆ ಹೊರಟೆವು. ನಮ್ಮ ಹಡಪಗಳನ್ನು ಕಂಡ ಕೆಲವು ಸ್ಥಳೀಯರಿಗೆ ನಾವು ಚಾರಣಕ್ಕೆ ಬಂದಿರಬಹುದೆಂದು ಊಹಿಸಿ , ನಮ್ಮ ಶಿಬಿರದ ದಾರಿಯನ್ನು ತಿಳಿಸಿದರು. YHAI (Youth Hostel) ನ ಶಿಬಿರ ತಲುಪಿ ನಮಗಾಗಿ ಕೊಟ್ಟ ಕೋಣೆಯಲ್ಲಿ ನಮ್ಮ ಬ್ಯಾಗುಗಳನ್ನು ಇಟ್ಟು ,ಅಲ್ಲೇ ಊಟದ ವ್ಯವಸ್ಥೆ ಇದ್ದರೂ ಕೂಡ ನಾವು ಬೇರೆ ಕಡೆ ಊಟಕ್ಕೆ ಹೊರಟೆವು. ಅಲ್ಲಿನ ಸ್ಥಳೀಯ ಖಾದ್ಯಗಳನ್ನು ಸೇವಿಸುವುದು ನಮ್ಮ ಮೂಲ ಇಂಗಿತ. ಸುಮಾರು ಹೋಟೆಲುಗಳ ಬಗ್ಗೆ ಹುಡುಕಿ ಕೊನೆಗೆ ನಮ್ಮನ್ನು ಸೆಳೆದಿದ್ದು 'Kunga ' ಎಂಬ ಟಿಬೆಟಿಯನ್ ರೆಸ್ಟೋರೆಂಟ್. ಅಲ್ಲಿ ಊಟವಾದ ನಂತರ ಸೀದಾ ಜಪಾನೀಸ್ ದೇವಸ್ಥಾನಕ್ಕೆ ಹೊರಟೆವು . ಸುಮಾರು ೩ ಕಿ.ಮೀ ಆ ಏರಿಳಿತದ ಪ್ರದೇಶದಲ್ಲಿ ನಡೆದೇ ಹೋದೆವು. ಆ ಹವಾಮಾನಕ್ಕೆ ಮತ್ತು ಚಾರಣಕ್ಕೆ ನಮ್ಮ ದೇಹವನ್ನು ಒಗ್ಗಿಸುವುದಕ್ಕೆ ಅಲ್ಲಿ ನಡೆದೇ ಹೋಗುವುದು ಒಂದಂಶದಲ್ಲಿ ಅವಶ್ಯಕವಾಗಿತ್ತು. ಬುದ್ಧನ ಶಾಂತಿ ಸ್ತೂಪ ಇದ್ದ ಆ ದೇವಾಲಯ ನಿಜಕ್ಕೂ ಪ್ರಶಾಂತವಾದ ಸ್ಥಳ. ಅದಾಗಲೇ ಸೂರ್ಯಾಸ್ತದ ಸಮಯ ಆಗಿತ್ತು , ಅಲ್ಲದೆ ಬೆಳ್ಳಗೆ ಕಾಣುತ್ತಿದ್ದ ಕಾಂಚನಜುಂಗಾ ಪರ್ವತದ ಬಣ್ಣ ಬದಲಾಗುತ್ತಿತ್ತು.
|
Peace of Pagoda |
|
Inside Japaneese Temple |
ದಿನ ೨:
ಹಿಂದಿನ ದಿನವೇ ನಮಗೆ ಈ ದಿನದ ವೇಳಾಪಟ್ಟಿಯನ್ನು ತಿಳಿಸಲಾಗಿತ್ತು.ಅದರಂತೆ ಬೆಳಗ್ಗೆ ಎದ್ದು ಆ ಚುಮು ಚುಮು ಚಳಿಯಲ್ಲಿ ಹತ್ತಿರದ ಒಂದು ಕಾಲೇಜಿನ ಮೈದಾನಕ್ಕೆ ಹೋದೆವು. ಅಲ್ಲಿ ಲಘು ವ್ಯಾಯಾಮದ ನಂತರ ಶಿಬಿರಕ್ಕೆ ಹಿಂತಿರುಗಿದೆವು. ಅಷ್ಟರಲ್ಲಿ ನಮ್ಮ ಹಿಂದಿನ ತಂಡ ಚಾರಣಕ್ಕೆ ಹೊರಟು ನಿಂತಿತ್ತು ಅವರಿಗೆ ಬೀಳ್ಕೊಟ್ಟು ,ನಮ ಉಪಹಾರದ ನಂತರ ನಮ್ಮನ್ನು Acclimatization walk ಗೆಂದು ಪುನಃ ನಾವು ಹಿಂದಿನ ದಿನ ಹೋಗಿದ್ದ ಜಪಾನೀಸ್ ದೇವಾಲಯಕ್ಕೆ ಕರೆದುಕೊಂಡು ಹೋದರು. ಅಲ್ಲಿ ದೇಶದ ಮೂಲೆ ಮೂಲೆಯಿಂದ ಬಂದಿದ್ದ ಸುಮಾರು ೪೨ ಜನರ ತಂಡದ ಪರಸ್ಪರ ಪರಿಚಯ ವಿನಿಮಯ ಗೋಷ್ಠಿಯು ನಡೆಯಿತು. ಅಲ್ಲಿ ನಮ್ಮ ತಂಡಕ್ಕೆ ಒಬ್ಬ ನಾಯಕ , ಸಹ ನಾಯಕ ಮತ್ತು ಪರಿಸರ ನಾಯಕನನ್ನು ಆಯ್ಕೆ ಮಾಡಿದ ನಂತರ ಮತ್ತೆ ಶಿಬಿರಕ್ಕೆ ವಾಪಸ್ ಬಂದೆವು. ಸಂಜೆಯ ವೇಳೆಗೆ ಚಾರಣದ ಬಗ್ಗೆ ಮತ್ತು ಅದಕ್ಕೆ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ನಮಗೆ ತಿಳಿಯಪಡಿಸಲು ಒಂದು ಅವಧಿ ಇತ್ತು. ಅಲ್ಲಿಯ ತನಕ ಸಮಯ ಇದ್ದ ಕಾರಣ ಮತ್ತೆ ನಾವು ೪ ಜನ ಡಾರ್ಜೀಲಿಂಗ್ ಸುತ್ತಲು ಹೊರಟೆವು. ಡಾರ್ಜೀಲಿಂಗ್ ನ ಪ್ರಸಿದ್ಧ ಚೌಕ ಚೌರಸ್ತಾದಲ್ಲಿ ಸುತ್ತಾಡಿ ಅಲ್ಲೇ ಹತ್ತಿರದಲ್ಲಿದ್ದ ಮಹಾಕಾಳ್ ಮಂದಿರಕ್ಕೆ ಭೇಟಿ ಕೊಟ್ಟೆವು. ಈ ದೇವಾಲಯದ ವಿಶೇಷ ಅಂದರೆ ಅದನ್ನು ಪೂಜೆ ಮಾಡುತ್ತಿದ್ದವರು ಭೌದ್ಧರು , ಶಿವಲಿಂಗದ ಪಕ್ಕದಲ್ಲೇ ಬುದ್ಧನ ವಿಗ್ರಹ ಇದ್ದದ್ದು ಇನ್ನೊಂದು ವಿಶೇಷ . ಸ್ವಲ್ಪ ಸಮಯ ಅಲ್ಲಿ ಕಳೆದು ಪುನಃ ಚೌರಸ್ತಾ ಕಡೆ ಬಂದೆವು. ಅಲ್ಲಿ ಒಂದಷ್ಟು ಶಾಲ್ ಮತ್ತು ಇನ್ನಿತರ ಉಡುಪುಗಳನ್ನು ಖರೀದಿಸಿದೆವು . ಡಾರ್ಜೀಲಿಂಗ್ ಗೆ ಬಂದು ಅಲ್ಲಿ ಚಹಾ ಸೇವಿಸಲಿಲ್ಲ ಅಂದರೆ ಹೇಗೇ .ಸರಿ ಎಂದು ಅಲ್ಲೇ ಹತ್ತಿರದಲ್ಲಿದ್ದ Nathmulls ಟೀ ಅಂಗಡಿಗೆ ಹೋದೆವು. ಒಂದು ಕಡೆಯಿಂದ ಹಿಮಾಲಯದ ಶ್ರೇಣಿಗಳನ್ನು ಕಾಣುವ ಸೊಬಗು , ಸೂರ್ಯಾಸ್ತದ ವೇಳೆಗೆ ಈ ಅಂಗಡಿಗೆ ಬಂದರೆ ಸೂರ್ಯಾಸ್ತವನ್ನು ನೋಡುತ್ತಾ ಚಹಾ ಸೇವಿಸಬಹುದು, ಅಂತಹ ಕಡೆ ಇದೆ ಈ ಅಂಗಡಿ. ಇಲ್ಲಿ Black tea ,white tea ,green tea ಹೀಗೆ ನಾನಾ ರೀತಿಯ ಚಹಾವನ್ನು ಸೇವಿಸಬಹುದಾಗಿದ್ದು, ಅಲ್ಲಿಂದ ಊರಿಗೆ ಒಂದಷ್ಟು ಚಹಾ ಪುಡಿ ಖರೀದಿಸಿ ಊಟಕ್ಕೆ ಹೊರಟೆವು. ನಮ್ಮ ಶಿಬಿರದಲ್ಲೇ ಊಟದ ವ್ಯವಸ್ಥೆ ಇದ್ದರೂ ಕೂಡ ಬೇರೆ ರುಚಿ ಸವಿಯುವ ಸಲುವಾಗಿ ಬೇರೊಂದು ರೆಸ್ಟೋರೆಂಟ್ ನ ಹುಡುಕಾಟಲ್ಲಿದ್ದಾಗ 'ದಿ ಪಾರ್ಕ್ ರೆಸ್ಟೋರೆಂಟ್' ಗೆ ಹೋಗುವುದೆಂದು ತೀರ್ಮಾನ ಆಯಿತು. ಹಿಂದಿನ ದಿನ ಟಿಬೆಟಿಯನ್ ರುಚಿ ಸವಿದಿದ್ದರಿಂದ ಇವತ್ತು ಥಾಯ್ ರುಚಿ ಸವಿಯಲು ನಮ್ಮ ನಾಲಿಗೆ ಹವಣಿಸುತ್ತಿತ್ತು. ಊಟದ ನಂತರ ಮತ್ತೆ ನಮ್ಮ ಶಿಬಿರಕ್ಕೆ ಬಂದೆವು . ಅದಾಗಲೇ ಕಾರ್ಯಕ್ರಮದ ನಿರೀಕ್ಷಕರಾದ ಬೆಂಗಳೂರಿನ ಸ್ವಾಮಿಯವರು ಅವಧಿ ತೆಗೆದುಕೊಳ್ಳುತ್ತಿದ್ದರು. ಹಿಮಾಲಯದ ಚಾರಣದಲ್ಲಿ ಸಂಭವಿಸಬಹುದಾದ ಘಟನೆಗಳು , ದೇಹದಲ್ಲಾಗುವ ಬದಲಾವಣೆಗಳು , ಅವುಗಳನ್ನು ಹೇಗೆ ಸರಿಪಡಿಸಿಕೊಳ್ಳಬೇಕು , ಹೀಗೆ ಇನ್ನಿತರ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಮರುದಿನದಿಂದ ಶುರು ಆಗುವ ನಮ್ಮ ಚಾರಣಕ್ಕೆ ದೇಹ ಮತ್ತು ಮನಸ್ಸು ಕಾತುರದಿಂದ ಕಾಯುತ್ತಿತ್ತು. ಆ ಅವಧಿಯ ತರುವಾಯ ಮರುದಿನದ ಚಾರಣಕ್ಕೆ ನಮ್ಮ ಬ್ಯಾಗನ್ನು ಸಿದ್ಧ ಪಡಿಸಿಕೊಳ್ಳಬೇಕಾಗಿತ್ತು.ಅದಾಗಲೇ ನಾವು ಸ್ನಾನ ಮಾಡಿ ೩ ದಿನ ಆಗಿತ್ತು. ಮರುದಿನ ಶುರು ಆದರೆ ಇನ್ನ ಚಾರಣ ಮುಗಿಯೋದು ೬ ದಿನದ ನಂತರ. ಅಲ್ಲಿಯ ತನಕ ಆ ಬೆಟ್ಟ ಗುಡ್ಡಗಳಲ್ಲಿ ಹವಾಮಾನ ಹೇಗಿರತ್ತೋ ಏನೋ . ಅಲ್ಲಿ ನೀರು ಸಿಗುತ್ತದೋ ಇಲ್ಲವೋ , ಸಿಕ್ಕರೂ ಹಿಮದ ರೂಪದಲ್ಲಿ ಸಿಕ್ಕರೆ ಹೇಗೆ ಎಂಬ ಪ್ರಶ್ನೆ ಕಾಡುತ್ತಿತ್ತು. ಆ ಚಳಿಯಲ್ಲಿ ಅಷ್ಟು ತಣ್ಣನೆ ನೀರಿನಲ್ಲಿ ಹೇಗೆ ಸ್ನಾನ ಮಾಡುವುದು ಎಂಬ ಅಂಜಿಕೆ . ಕೊನೆಗೆ ಆಗಿದ್ದಾಗಲಿ ಎಂದು ನಾವು ೪ ಜನ ಆ ಕೊರೆಯುವ ಚಳಿಯಲ್ಲಿ ಮಂಜುಗೆಡ್ಡೆಯಷ್ಟೇ ತಣ್ಣಗಿರುವ ನೀರಿನಲ್ಲಿ ಹರ ಶಿವ ಅನ್ಕೊಂಡು ಸ್ನಾನ ಮಾಡಿದ್ದಾಯಿತು. ತರುವಾಯ ಮತ್ತೆ ಡಾರ್ಜೀಲಿಂಗ್ ಸುತ್ತಲು ಹೊರಟೆವು,ಈ ಬಾರಿ ನಾವು ಅನ್ವೇಷಣೆ ಮಾಡಿರದ ದಿಕ್ಕಿಗೆ ಹೊರಟೆವು. ರಸ್ತೆ ಬದಿಯ ಅಂಗಡಿಯಲ್ಲಿ ಒಂದಷ್ಟು ತಿಂದು ಮತ್ತೆ ನಮ್ಮ ಶಿಬಿರಕ್ಕೆ ವಾಪಸ್ ಬಂದೆವು .
|
At Chowrastha |
|
Shiva at Mahakal Mandir |
|
Mahakali |
|
Nathmulls tea |
ದಿನ ೩:
ನಮ್ಮ ಚಾರಣ ಶುರು ಆಗುವ ದಿನ. ಬೆಳಗ್ಗೆ ಉಪಹಾರದ ನಂತರ ಶಿಬಿರದ ಮುಂದೆ ಎಲ್ಲರೂ ಹಾಜರ್ ಆದೆವು. ನಮಗಾಗಿ ಅದಾಗಲೇ ಜೀಪುಗಳು ಬಂದು ಕಾಯುತ್ತಿದ್ದವು. ಅಲ್ಲಿಂದ ನಮ್ಮ ಪಯಣ ಧೋತ್ರೆ (Dhotrey ) ಎಂಬ ಹಳ್ಳಿಗೆ . ಸುಮಾರು ೨ ಘಂಟೆಗಳ ಪ್ರಯಾಣದ ನಂತರ Dhotrey ತಲುಪಿದೆವು. ಅಲ್ಲಿ ತಲುಪುವ ಮುಂಚೆ maneybhanjan ಎಂಬಲ್ಲಿ Signilia National Park ನ ಚೆಕ್ ಪೋಸ್ಟ್ ಇದೆ . ಅಲ್ಲಿ ಆ ಅಭಯಾರಣ್ಯಕ್ಕೆ ಹೋಗಲು ಅನುಮತಿ ಪಡೆದು ಮುಂದೆ ಹೋಗಬೇಕು . ಈ maneybhanjan ಭಾರತ ಮತ್ತು ನೇಪಾಳದ ಗಡಿಯಲ್ಲಿದ್ದು, ಈ ಗಡಿಯು open border ಆಗಿರುವುದರಿಂದ ಅಲ್ಲಿ ಎರಡು ದೇಶಗಳ ನಡುವೆ ವಾಹನಗಳ ಮತ್ತು ಜನರ ಮುಕ್ತ ಸಂಚಾರ ನಡೆಯುತ್ತದೆ.
|
Starting point of our trek |
|
With our guides Norbu Sherpa(Blue jacket), Shibu Tapang(2nd from right) |
ಅಲ್ಲಿ ನಮ್ಮ ತಂಡಕ್ಕೆ ಇಬ್ಬರು ಸ್ಥಳೀಯ ಮಾರ್ಗದರ್ಶಕರು ಸಿದ್ಧರಾಗಿದ್ದರು. ಒಬ್ಬ ನೋರ್ಬು ಶೆರ್ಪಾ , ಇನ್ನೊಬ್ಬ ಶಿಬು ತಪಾಂಗ್ . ನಮ್ಮ ಮುಂದಿನ ೬ ದಿನದ ಚಾರಣದ ಪೂರ್ತಿ ಇವರಿಬ್ಬರೇ ಮಾರ್ಗದರ್ಶಕರು. ಅವರ ಪರಿಚಯ ಆದ ನಂತರ ಅಲ್ಲಿಂದ ನಮ್ಮ ಚಾರಣ ಶುರು ಆಯಿತು. ಕೆಲವರು ಸಹಾಯಕ್ಕಾಗಿ ಬೆತ್ತದ ಕೋಲುಗಳನ್ನು ಖರೀದಿಸಿದರು, ಇನ್ನು ಕೆಲವರು ಹಾಗೆ ನಡೆಯುತ್ತೇವೆ ಎಂದು ಅವುಗಳನ್ನು ಕೊಳ್ಳಲಿಲ್ಲ. ತಂಡದ ಮುಂದೆ ಒಬ್ಬ ಮಾರ್ಗದರ್ಶಕ, ಹಿಂದೆ ಒಬ್ಬ ಮಾರ್ಗದರ್ಶಕರು ನಿಗದಿ ಆದ ನಂತರ ಚಾರಣ ಶುರು ಆಯಿತು .. ಮೊದಲ ದಿನ ಆದ್ದರಿಂದ ಎಲ್ಲರೂ ಬಹಳ ಉತ್ಸುಕರಾಗಿದ್ದರು. ಹಿಮಾಲಯದ ಗುಡ್ಡಗಳ ನಡುವೆ ಹೋಗುವುದು ಒಂದು ರೋಮಾಂಚನೀಯ ಅನುಭವ. ನಡುವೆ ಭೇಟಿ ಆಗುತ್ತಿದ್ದ ಸ್ಥಳೀಯ ಜನರು , ಅವರ ಸಂಸ್ಕೃತಿ ಹೀಗೆ ಎಲ್ಲದರ ಅನುಭವ ಮತ್ತು ಅವುಗಳನ್ನು ನಮ್ಮ ಜೊತೆ ಇದ್ದ ಮಾರ್ಗದರ್ಶಕ ನೋರ್ಬು ವಿವರಿಸುತ್ತಿದ್ದ.
|
The Gang |
|
Enthu guys |
|
Happy posing |
ಅವತ್ತಿನ ಮಧ್ಯಾಹ್ನದ ಊಟದ ವ್ಯವಸ್ಥೆ Tonglu ಎಂಬ ಸ್ಥಳದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಊಟದ ನಂತರ ಲಘು ವಿಶ್ರಾಮದ ನಂತರ ನಮ್ಮ ನಡಿಗೆ ಅವತ್ತಿನ ತಂಗುವ ಸ್ಥಳ Tumlimg ಕಡೆಗೆ. ಸುಮಾರು ೨ ಘಂಟೆಗಳ ಚಾರಣದ ನಂತರ Tumlimg (೨೯೦೦ ಮೀ ) ತಲುಪಿದೆವು . ಈ ಊರು ಭಾರತ ಮತ್ತು ನೇಪಾಳದ ಗಡಿಯಲ್ಲಿಯೇ ಇದ್ದು , ಇಲ್ಲಿಗೆ ಹೋಗುವ ದಾರಿ ಕೂಡ ಎರಡು ದೇಶಗಳ ಒಳಗೆ ಸಾಗುತ್ತದೆ. ಆ ದಿನ ನಾವು ತಂಗಿದ್ದ ಮನೆ ನೇಪಾಳದ ಒಳಗೆ ಇತ್ತು ಮತ್ತು ಅಲ್ಲಿಂದ ೫-೬ ಅಡಿ ದೂರದಲ್ಲೇ ಗಡಿ ನಿಯಂತ್ರಣ ರೇಖೆಯಲ್ಲಿರುವ border outpost ಇತ್ತು . ಮೊದಲ ಬಾರಿ ವೀಸಾ ಮತ್ತು ಪಾಸ್ ಪೋರ್ಟ್ ಇಲ್ಲದೆ ಬೇರೆ ದೇಶಕ್ಕೆ ಹೋಗಿದ್ದು.
|
First day lunch point |
|
The Path |
|
This building is inside Nepal |
|
Legally we were inside Nepal |
ಇಲ್ಲಿನ ಮನೆಗಳ ಬಗ್ಗೆ ಒಂದು ಸಣ್ಣ ಅಂಶವನ್ನು ತಿಳಿಸಲೇಬೇಕು. ಇಲ್ಲಿ ವರ್ಷಕ್ಕೆ ೨-೩ ತಿಂಗಳು ಹಿಮಪಾತ ಆಗುವುದರಿಂದ ಮತ್ತು ಬಹುಮಟ್ಟಿಗೆ ಚಳಿ ಇರುವುದರಿಂದ, ಇಲ್ಲಿನ ಹವಾಮಾನಕ್ಕೆ ಅನುಗುಣವಾಗಿ ಇಲ್ಲಿನ ಮನೆಗಳನ್ನು ಮರ ಮುಟ್ಟಿನಿಂದ ಮಾಡಿರುತ್ತಾರೆ ಮತ್ತು ಅದಕ್ಕೆ ತಗಡಿನ ಹೊರ ಕವಚದಿಂದ ಮುಚ್ಚಿರುತ್ತಾರೆ. ನಾವು ತಂಗಿದ್ದ ಮನೆ ಕೂಡ ಮರಮುಟ್ಟುಗಳಿಂದ ಕಟ್ಟಿದ್ದ ಇಂಥ ಒಂದು ಮನೆಯಲ್ಲೇ. ನಮ್ಮ ಗುಂಪಿನವರೆಲ್ಲ ಸೇರಿ ಅಂತ್ಯಾಕ್ಶರಿ ಹಾಡಿದ್ದು ಮರೆಯಲಾಗದು.
|
Typical wooden home |
ದಿನ ೪:
ಸೂರ್ಯೋದಯವನ್ನು ನೋಡುವ ಕಾತುರ ನಮ್ಮೆಲ್ಲರಿಗೂ ಇತ್ತು . ಆದರೆ ಆ ದಿನ ನಮ್ಮ ಅದೃಷ್ಟ ಫಲಿಸಲಿಲ್ಲ. ಸುಮಾರು ಹೊತ್ತು ಕಾದರೂ ಮೋಡಗಳ ಆಟ ತಪ್ಪಲಿಲ್ಲ , ನಮಗೆ ಸೂರ್ಯೋದಯದ ಸೊಬಗು ಕಾಣಲಿಲ್ಲ. ಬೆಳಗಿನ ಚಹಾ, ಉಪಹಾರ ಸೇವಿಸಿ ಮಧ್ಯಾಹ್ನಕ್ಕೆ ಕೂಡ ಊಟವನ್ನು ತೆಗೆದುಕೊಂಡು ಚಾರಣ ಶುರು ಮಾಡಿದೆವು. ಸ್ವಲ್ಪ ದೂರ ಕ್ರಮಿಸಿದ ನಂತರ Signalia National Park ನ ಮತ್ತೊಂದು ಚೆಕ್ ಪೋಸ್ಟ್ ಇದೆ . ಅಲ್ಲಿ ಮತ್ತೆ ಆ ಅರಣ್ಯ ಪ್ರದೇಶಕ್ಕೆ ಪ್ರವೇಶಿಸಲು ಅನುಮತಿ ಪಡೆದು ಮುಂದೆ ಸಾಗಿದೆವು. ಅಲ್ಲಿಂದ ಸುಮಾರು ೧೦೦ ಮೀಟರ್ ದೂರದಲ್ಲಿ ಭಾರತೀಯ ಸೇನೆಯ ಒಂದು ಚೆಕ್ ಪೋಸ್ಟ್ ಇದೆ. ಅಲ್ಲಿ ಸೇನೆಯ ಒಂದು ತುಕಡಿ ಇದ್ದು, ಸುಮಾರು ಯೋಧರು ಇದ್ದರು . ಅವರಿಗೆಲ್ಲ ನಮ್ಮ ಕಡೆ ಇಂದ ವಂದನೆಗಳನ್ನು ತಿಳಿಸಿ ಮುಂದೆ ಹೊರಟೆವು .
|
Entry to Signalia national park |
|
Border check post |
ಮೊದಲ ದಿನದಂತೆ ಈ ದಿನ ಕೇವಲ ಎತ್ತರಕ್ಕೆ ಹೋಗುವಂತಿರಲಿಲ್ಲ ,ಬದಲಾಗಿ ಈ ದಿನದ ಚಾರಣ ಸ್ವಲ್ಪ ಏರು ಮತ್ತೆ ಸ್ವಲ್ಪ ದೂರ ಇಳಿತ ಹೀಗೆ ಸಾಗಿತ್ತು . ನಿಧಾನವಾಗಿ ನಮ್ಮ ದೇಹ ಆ ಹವಾಮಾನ ಮತ್ತು ತಂಡಿಗೆ ಹೊಂದಿಕೊಳ್ಳುತಿತ್ತು. ನಂತರ ತಲುಪಿದ್ದು gairibas(೨೬೨೫ mts ) ಎಂಬ ಸ್ಥಳ . ಇಲ್ಲಿ ಕೂಡ ಭಾರತೀಯ ಸೇನೆಯ ಒಂದು ತುಕಡಿ ಮತ್ತು ಚೆಕ್ ಪೋಸ್ಟ್ ಇದೆ. ಇಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿದ ನಂತರ ಅಲ್ಲೇ ಒಂದು ಸಣ್ಣ ಹೋಟೆಲ್ ಕೂಡ ಇದ್ದು, ಅಲ್ಲಿ ಚಹಾ ಸೇವಿಸಿ ಮುಂದಿನ ನಿಗದಿತ ಸ್ಥಳವಾದ kaiyakatta ಕಡೆಗೆ ಹೊರಟೆವು. ಈ ಊರು ನೇಪಾಳಕ್ಕೆ ಸೇರಿದ್ದು ಅಲ್ಲಿ ಊಟದ ನಂತರ ಅವತ್ತಿನ ನಮ್ಮ ಕ್ಯಾಂಪ್ ಇದ್ದಂತಹ ಸ್ಥಳವಾದ Kalaphokri (೩೧೦೮ ಮೀ ) ಕಡೆಗೆ ಸಾಗಿತು . ದಾರಿ ಮಧ್ಯದಲ್ಲಿ ಒಂದು ಸಣ್ಣ ಕೆರೆಯಿದ್ದು , ಅದನ್ನು ಭೌದ್ಧ ಧರ್ಮೀಯರು ಪವಿತ್ರ ಪ್ರದೇಶ ಎಂದು ಪೂಜಿಸುತ್ತಾರೆ.
|
At Gairibas, guys enjoying football in road itself |
|
One path is in Indian side and another in Nepal side |
|
We came across many such Indo-Nepal border posts |
Kalaphokri ಕೂಡ ನೇಪಾಳ ಮತ್ತು ಭಾರತ್ ಗಡಿಯಲ್ಲಿದ್ದು , ನಾವು ತಂಗಿದ್ದ ಮನೆ ನೇಪಾಳದ ಒಳಗೆ ಇತ್ತು. ಅಲ್ಲಿಂದ ೧೦ ಹೆಜ್ಜೆ ಬಂದರೆ ಭಾರತ . ಅಲ್ಲಿಂದ ಆ Kalaphokri ಕೆರೆಗೆ ಎರಡು ದಾರಿ ಇದ್ದು, ಒಂದು ಭಾರತದ ಪ್ರದೇಶದೊಳಗೆ ಇದ್ದಾರೆ ಇನ್ನೊಂದು ನೇಪಾಳದೊಳಗೆ . ಅವತ್ತಿನ ಸಂಜೆ ಅಂತ್ಯಾಕ್ಷರಿ ಜೊತೆ ಇನ್ನಷ್ಟು ಮನರಂಜನೆ ಕಾರ್ಯಕ್ರಮಗಳು. ನಮ್ಮ ಜೊತೆ ಬಂದಿದ್ದ ಮಾರ್ಗದರ್ಶಕರು ಇಬ್ಬರೂ ನೇಪಾಳಿ ಮೂಲದವಾರಾಗಿದ್ದು ಅಂದು ಸಂಜೆ ಕೆಲವು ನೇಪಾಳಿ ಹಾಡುಗಳನ್ನು ಹಾದಿ ಜೊತೆ ಆ ಶೈಲಿಯ ನೃತ್ಯಗಳನ್ನು ಕೂಡ ಮಾಡಿ ನಮ್ಮೆಲ್ಲರನ್ನೂ ರಂಜಿಸಿದರು . ಜೊತೆಗೆ ಆ ಹೋಟೆಲ್ ಮಾಲೀಕರ ಮಕ್ಕಳು ಕೂಡ ಹಾಡಿ ಕುಣಿದು ನಮ್ಮಗೆ ಮನರಂಜನೆ ನೀಡಿದರು .
|
Kaliphokri |
ದಿನ ೫:
ಈ ದಿನ ಕೂಡ ಮತ್ತೆ ಸೂರ್ಯೋದಯ ನೋಡುವ ಆಸೆ . ನೇಪಾಳದೊಳಗೆ ತಂಗಿದ್ದ ನಾವು ಭಾರತಕ್ಕೆ ಸೇರಿದ ಒಂದು ಗುಡ್ಡದ ಮೇಲೆ ಬಂದು ನಿಂತೆವು. ಆ ದಿನ ಕೂಡ ಮೋಡಗಳ ಚೆಲ್ಲಾಟದಿಂದ ಸುಮಾರು ಹೊತ್ತು ಕಾದರೂ ಸೂರ್ಯೋದಯ ಕಾಣಲಿಲ್ಲ . ಬಹಳಷ್ಟು ಜನ ಕಾದು ಕಾದು ಬೇಸತ್ತು ವಾಪಸ್ ಹೋದರು . ನಾವು ಒಂದಷ್ಟು ಜನ , ಇನ್ನು ಸ್ವಲ್ಪ ಸಮಯ ಕಾದು ಕುಳಿತೆವು. ಆಗ ನಿಧಾನವಾಗಿ ಅರುಣೋದಯ ದೂರದ ಬೆಟ್ಟದ ಹಿಂದಿನ ಮೋಡದೊಳಗಿಂದ ಆಯಿತು. ಕಾದದ್ದಕ್ಕೂ ಸಾರ್ಥಕ ಆಯಿತು ಎಂದುಕೊಂಡೆವು .
|
Before we say bye to Kaliphokri, group snap |
|
Owner's kids who entertained us with dance |
|
Trekked few kms in such terrain with little snowfall. |
ಉಪಹಾರದ ನಂತರ ಹೋಟೆಲ್ ಮಾಲಿಕರಿಗೆ ಅವರ ಮನೆಯವರಿಗೆ ಮತ್ತು ನಮ್ಮ ಕ್ಯಾಂಪ್ ಲೀಡರ್ ಗೆ ವಿದಾಯ ಹೇಳಿ ನಮ ಚಾರಣದ ಎತ್ತರದ ಶಿಖರ Sandakphu ಕಡೆಗೆ ಹೊರಟೆವು. ಮೊದಲೆರಡು ದಿನದ ಚಾರಣದ ಹವಾಮಾನ ಅಷ್ಟೊಂದು ತೃಪ್ತಿದಾಯಕವಾಗಿರಲಿಲ್ಲ. ಬರಿ ಮೋಡಗಳ ನಡುವೆ ಸಾಗಿದ್ದಾಗಿತ್ತು . ಈ ದಿನವೂ ಹೀಗೆ ಆದರೆ ನಮಗೆ ಕಾಂಚನಜುಂಗಾ ಆಗಲಿ ಎವರೆಸ್ಟ್ ಆಗಲಿ ಕಾಣ ಸಿಗುವುದಿಲ್ಲ ಎಂಬುದು ಕಾಡುತ್ತಿತ್ತು. ನಮ್ಮ ಅದೃಷ್ಟ ಚೆನ್ನಾಗಿತ್ತು ಅನ್ನಿಸುತ್ತದೆ, ಈ ದಿನ ಸೂರ್ಯದೇವನ ಕೃಪೆ ಇತ್ತು . ವಾತಾವರಣ ಸ್ವಲ್ಪ ಬಿಸಿಲು ಕೂಡ ಇತ್ತು . ಈ ದಿನದ ಚಾರಣ ಕೇವಲ ೭ ಕಿ.ಮೀ ಆದರೂ ಕೂಡ ಬಹಳ ಕಡಿದಾದ ಚಾರಣ. ಮೊದಲೆರಡು ದಿನ ಅಷ್ಟೊಂದು ಕಡಿದಾದ ಚಾರಣ ಇರಲಿಲ್ಲ . ಒಂದೇ ದಿನದಲ್ಲಿ ೩೧೦೮ ಮೀ ಎತ್ತರದಿಂದ ೩೬೩೬ ಮೀ ಎತ್ತರಕ್ಕೆ ಚಾರಣ ಮಾಡಿದ್ದೆವು. ಪಶ್ಚಿಮ ಬಂಗಾಳದ ಎತ್ತರದ ಶಿಖರ ಏರಿದ್ದೆವು .
|
Guide of another trek team, but was very friendly with me. |
|
Reached our camp Sandakphu at 3636 mts |
|
Sleeping Buddha, Mt.Kanchenjunga |
|
Buddhus in front of Sleeping Buddha |
ಇಲ್ಲಿಂದ ಕಾಂಚನಜುಂಗಾ ಶಿಖರವನ್ನು ನೋಡುವುದೇ ಒಂದು ಆನಂದ . ಸ್ಲೀಪಿಂಗ್ ಬುದ್ಧ (Sleeping Buddha ) ಎಂದು ಕೂಡ ಇದನ್ನು ಕರೆಯುತ್ತಾರೆ . ಅಲ್ಲದೆ ದೂರದಲ್ಲಿ ಎವರೆಸ್ಟ್ ಶ್ರೇಣಿ ಕೂಡ ಕಾಣುತ್ತದೆ .
|
Sunset from Sandakphu |
|
This is how Kanchejunga changed its color during sunset |
|
Another color magic |
ಮಧ್ಯಾಹ್ನ ಊಟದ ನಂತರ ಸ್ವಲ್ಪ ಹೊತ್ತು ವಿಶ್ರಮಿಸಿ , ಸಂಜೆ ೪ ಘಂಟೆಯ ಸುಮಾರಿಗೆ ಸೂರ್ಯಾಸ್ತ ನೋಡಲು ಅಲ್ಲಿಂದ ಸುಮಾರು ೨ ಕಿ,ಮೀ ದೂರದಲ್ಲಿರುವ ಒಂದು ಪ್ರದೇಶಕ್ಕೆ ಹೋದೆವು . ನಾವು ಮೋಡಗಳ ಮೇಲೆ ನಿಂತಿರುವಂತೆ ಭಾಸವಾಗುವ ಆ ಸೌಂದರ್ಯ , ಸಮುದ್ರದಂತೆ ದೂರ ದಿಗಂತದವರೆಗೆ ಕಾಣುವ ಮೋಡಗಳು. ನಾನು ಇದುವರೆಗೆ ಕಂಡಂತಹ ಅದ್ಭುತ ಸೂರ್ಯಾಸ್ತ ಇದು .ಸೂರ್ಯಾಸ್ತದ ಸಮಯದಲ್ಲಿ ಬೆಳ್ಳಗೆ ಹಾಲಿನಂತೆ ಇದ್ದ ಕಾಂಚನಜುಂಗಾ ಶಿಖರ ನಿಧಾನವಾಗಿ ಬಣ್ಣ ಬದಲಾಗುತ್ತಾ ಹೋಗುತ್ತದೆ.
|
Sunrise as seen from Sandakphu |
|
During sunrise |
. ದಿನ ೬:
ಬೆಳಗ್ಗೆ ಎದ್ದು ಮತ್ತೆ ನಮ್ಮ ೩-೪ ದಿನದ ಚಾಳಿಯಂತೆ ಸೂರ್ಯೋದಯ ನೋಡಲು ಅಲ್ಲೇ ಹತ್ತಿರದ ಒಂದು ಸಣ್ಣ ಗುಡ್ಡ ಏರಿದೆವು . ಇಲ್ಲಿ ಸೂರ್ಯೋದಯಕ್ಕಿಂತ ಹೆಚ್ಚಾಗಿ ಆ ಸಮಯದಲ್ಲಿ ಸೂರ್ಯನ ಕಿರಣಗಳು ಕಾಂಚಾಜುಂಗಾ ಮೇಲೆ ಬಿದ್ದು, ಅಲ್ಲಿ ನಡೆಯುವ ಬಣ್ಣದ ಆಟಕ್ಕೆ ಮನಸೋಲದೆ ಇದ್ದವರ್ಯಾರು ಇಲ್ಲ . ಅಂತ ಅದ್ಭುತ ಬದಲಾವಣೆ ಆಗುತ್ತದೆ ಆ ಶಿಖರದಲ್ಲಿ.
|
Mamu, who took care of everything during our stay in this hotel |
ಇಲ್ಲಿಂದ ಕೆಲವರು Gurudum ಕಡೆಗೆ ಇಳಿದರೆ , ಇನ್ನು ಕೆಲವರು Phalut ಎಂಬಲ್ಲಿಗೆ ಚಾರಣ ಮಾಡುತ್ತಾರೆ. ೩ ದಿನಗಳ ಕಾಲ ಎತ್ತರಕ್ಕೆತ್ತರಕ್ಕೆ ಏರಿ ಚಾರಣ ಮಾಡಿದ್ದ ನಾವು , ಈ ದಿನ ಕೆಳಗೆ ಇಳಿಯಬೇಕಿತ್ತು. ನಮ್ಮ ಮುಂದಿನ ಕ್ಯಾಂಪ್ ಇದ್ದಿದ್ದು Gurudum (೨೯೧೦ ಮೀ) ಒಂದೇ ದಿನ ೧೪ ಕಿ.ಮೀ ಕೆಳಗೆ ಇಳಿಯಬೇಕಿತ್ತು . ಚಾರಣದಲ್ಲಿ ಮೇಲೆ ಹತ್ತುವುದು ಇಳಿಯುವುದಕ್ಕಿಂತ ಸ್ವಲ್ಪ ಸುಲಭ. ಒಂದೇ ದಿನ ಕಡಿದಾದ ದಾರಿಯಲ್ಲಿ ಇಳಿಯಬೇಕಿತ್ತು. ೩ ದಿನ ಇರದಿದ್ದ ಕಾಲಸೆಳೆತ ಈ ದಿನ ಸ್ವಲ್ಪ ಮಟ್ಟಿಗೆ ಶುರು ಆಯಿತು . ಕಾಲುಗಳು ಪದ ಹಾಡಲು ಆರಂಭಿಸಿದ್ದವು. ಕೆಲವೇ ಸಮಯದಲ್ಲಿ ಅವತ್ತಿನ ಕ್ಯಾಂಪ್ ತಲುಪಿದೆವು . ಇಲ್ಲಿ ಬಂದ ಕೂಡಲೇ ನಮಗೆ ಸ್ನಾನ ಮಾಡಿಕೊಳ್ಳುವವರು ಮಾಡಿಕೊಳ್ಳಬಹುದು ಎಂದು ಅಲ್ಲಿನ ಕ್ಯಾಂಪ್ ಲೀಡರ್ ನಿರ್ದೇಶಿಸಿದರು . ಹಿಂದಿನ ದಿನ Sandakphu ಅಲ್ಲಿ ನೀರಿನ ಕೊರತೆ ಇದ್ದು, ಅವರು ಅಲ್ಲಿಂದ ಸ್ವಲ್ಪ ದೂರ ಕೆಳಗೆ ಕ್ರಮಿಸಿ ನೀರನ್ನು ತರಬೇಕು . ಆದರೆ Gurudum ಅಲ್ಲಿ ಆಗಿಲ್ಲ. ಸುತ್ತ ಗುಡ್ಡಗಳಿಂದ ಸುತ್ತುವರೆದು ಮಧ್ಯದಲ್ಲಿರುವ ಪುಟ್ಟ ಗ್ರಾಮ ಇದು. ಇಲ್ಲೇ ಹತ್ತಿರದಲ್ಲೇ ಒಂದು ಸಣ್ಣ ನದಿ ಹರಿಯುತ್ತಿದ್ದು ನೀರಿನ ಅಭಾವ ಇರಲಿಲ್ಲ.. ಸ್ವಲ್ಪ ತಗ್ಗು ಪ್ರದೇಶದಲ್ಲಿದ್ದ ಕಾರಣ ಮೇಲಿನ ಪ್ರದೇಶದ ಮಳೆ ನೀರು ಕೆಳಗೆ ಹರಿಯುವುದರಿಂದ ಇಲ್ಲಿಗೆ ನೀರಿನ ಕೊರತೆ ಇರಲಿಲ್ಲ. ಡಾರ್ಜೀಲಿಂಗ್ ನ ಕೊರೆಯುವ ಚಳಿಯಲ್ಲಿ ಆ ತಣ್ಣಗಿನ ನೀರಿನಲ್ಲಿ ಸ್ನಾನ ಮಾಡಿದ ನಂತರ ೪ ದಿನದಿಂದ ಎಲ್ಲೂ ಸ್ನಾನ ಮಾಡಿರಲಿಲ್ಲ . ಆ ದಿನ ಸ್ನಾನಕ್ಕೆ ನೀರು ಸಿಕ್ಕಿದ್ದು ದೇಹಕ್ಕೂ ಮನಸ್ಸಿಗೂ ಉಲ್ಲಾಸ ಭರಿತವಾಯಿತು.
|
Gurudum camp surrounded with hills |
ಈ ದಿನದ ಸಂಜೆಯ ಕಾರ್ಯಕ್ರಮ ಇನ್ನಷ್ಟು ಮನರಂಜಕವಾಗಿತ್ತು . ಚೆನ್ನೈ ಮೂಲದ ಶಂಕರ್ ಎಂಬ ಕ್ಯಾಂಪ್ ಲೀಡರ್ ಬಹಳ ಉತ್ಸುಕರಾಗಿದ್ದರು ಮತ್ತು ಎಲ್ಲರ ಜೊತೆ ಚೆನ್ನಾಗಿ ಬೆರೆಯುತ್ತಾ ,ಅವತ್ತಿನ ಸಂಜೆಯ ಕಾರ್ಯಕ್ರಮಕ್ಕೆ ಒಂದು ನಿರ್ಬಂಧನೆಯನ್ನು ಹಾಕಿದ್ದರು , ಪ್ರತಿಯೊಬ್ಬರೂ ಕೂಡ ಏನಾದರೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರದರ್ಶಿಸಬೇಕು ಎಂದು. ನಂತರ pole dance , ramp walk ಹೀಗೆ ಒಂದರ ಹಿಂದೆ ಒಂದು ಪ್ರದರ್ಶನ ಸಾಗಿತು . ಬೆಂಗಾಲಿ ಸ್ನೇಹಿತರು ಒಂದು ಬೆಂಗಾಲಿ ಹಾಡನ್ನು ಹಾಡಿದರು , ಕರ್ನಾಟಕದಿಂದ ಸುಮಾರು ೧೦ ಜನ ಇದ್ದ ನಾವು , ಸತ್ಯ ಹರಿಶ್ಚಂದ್ರ ಚಿತ್ರದ ಕುಲದಲ್ಲಿ ಕೀಳ್ಯಾವುದೋ ಹಾಡನ್ನು ಹಾಡಿದೆವು .
ದಿನ ೭:
|
Wooden bridge at Sirikola |
ಅಲ್ಲಿಂದ ಸ್ವಲ್ಪ ಸಮಯದಲ್ಲೇ ರೀಂಬಿಕ್ ಶಿಬಿರ ಸೇರಿದೆವು .ಅಲ್ಲಿನ ಕ್ಯಾಂಪ್ ಲೀಡರ್ ಮುಂಬೈ ಮೂಲದ ಸಂಜೀವಿನಿ ಅವರು. ಮೊದಲ ತಂಡದೊಂದಿಗೆ ಚಾರಣ ಮಾಡಿ ಕೊನೆಯ ಶಿಬಿರದಲ್ಲಿ ಕ್ಯಾಂಪ್ ಲೀಡರ್ ಆಗಿದ್ದರು . ನಾವು ಅಲ್ಲಿ ತಲುಪಿದ ಕೂಡಲೇ ನಮ್ಮನ್ನು ಸ್ವಾಗತಿಸಿ ಚಾರಣದ ಬಗ್ಗೆ ವಿಚಾರಿಸಿದರು.
ಚಹಾ ಸಮೋಸದ ನಂತರ ಆ ಸಣ್ಣ ಪಟ್ಟಣವನ್ನು ಸುತ್ತಲು ಹೊರಟೆವು . ಅಲ್ಲಿನ ಸ್ಥಳೀಯ ತಿನಿಸುಗಳನ್ನು ತಿನ್ನುವ ಆಸೆಯ ಸಲುವಾಗಿ . ಚಾರಣದ ಕೊನೆಯ ದಿನ ಆದ್ದರಿಂದ ಅಲ್ಲಿ ವಿಶೇಷ ಊಟದ ವ್ಯವಸ್ಥೆ ಆಗಿತ್ತು ,ಅಲ್ಲದೆ ಪ್ರತಿ ದಿನ ಸಂಜೆಯಂತೆ ಮನರಂಜನೆ ಕಾರ್ಯಕ್ರಮ . ಕೊನೆಯ ದಿನ ಆದರಿಂದ ಎಲ್ಲರೂ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡೆವು , ನಮ್ಮ ಮಾರ್ಗದರ್ಶಕರು ನೇಪಾಳಿ ಹಾಡನ್ನು ಹಾಡಿದರು , ಕೊನೆಗೆ ಎಲ್ಲರೂ ಸೇರಿ ಕುಣಿದು ಅವತ್ತಿನ ಕಾರ್ಯಕ್ರಮಕ್ಕೆ ವಿದಾಯ ಹೇಳಿದೆವು.
|
Last camp |
|
Closing ceremony |
|
Our trek guides singing Nepali song- Resham firiri |
ದಿನ ೮:
ಬೆಳಗ್ಗೆ ಉಪಹಾರದ ನಂತರ ನಮಗಾಗಿ ಜೀಪುಗಳು ಕಾಯುತ್ತಿದ್ದವು . ರೀಂಬಿಕ್ ಇಂದ ಡಾರ್ಜೀಲಿಂಗ್ ಗೆ ಸುಮಾರು ೪ ಘಂಟೆಯ ಪ್ರಯಾಣ . ಮಧ್ಯದಲ್ಲಿ ನಮ್ಮ ಚಾರಣ ಶುರು ಆಗಿದ್ದ Dhotrey ಅಲ್ಲಿ ನಮ್ಮ ಮಾರ್ಗದರ್ಶಕರಾಗಿ ಬಂದಿದ್ದ ನೋರ್ಬು ಮತ್ತು ಶಿಬು ಇಬ್ಬರಿಗೂ ಬೀಳ್ಕೊಟ್ಟು ಮುಂದೆ ಸಾಗಿದೆವು . ನಮ್ಮ ಮೂಲ ಶಿಬಿರದಲ್ಲಿ ನಮ್ಮ ನಮ್ಮ ಬ್ಯಾಗ್ ಗಳನ್ನ ಹಿಂಪಡೆದು ಎಲ್ಲರಿಗು ಬೀಳ್ಕೊಟ್ಟು , ಒಂದಷ್ಟು ಅನುಭವಗಳನ್ನು ಮರೆಯಲಾಗದಂತಹ ನೆನಪುಗಳನ್ನು ಆ ಸಮಯವನ್ನು ಹೊತ್ತು ನಮ್ಮ ಮುಂದಿನ ಪ್ರಯಾಣಕ್ಕೆ ಸಜ್ಜಾದೆವು.
೪೨ ಜನ ಇದ್ದ ತಂಡದಿಂದ ಬೀಳ್ಕೊಟ್ಟು ನಾವು ಬೆಂಗಳೂರಿನಿಂದ ಹೋಗಿದ್ದ ನಾವು ೪ ಜನ,ನಮಗಾಗಿ ಕಾಯುತ್ತಿದ್ದ ಟ್ಯಾಕ್ಸಿಯಲ್ಲಿ ಸಿಕ್ಕಿಂ ಕಡೆಗೆ ಪ್ರಯಾಣ ಬೆಳೆಸಿದೆವು.