Thursday, March 16, 2017

ಬೇಟೆ

ವಾರದಿಂದ ದೇಹ ಯಾಕೋ ಬಹಳ ನಿಶ್ಯಕ್ತಿ ಇಂದ ಕೂಡಿದೆ, ದುಶ್ಚಟಗಳ ಸಹವಾಸದಿಂದ ಹೀಗಾಗಿರಬೇಕು ಎಂದು ಯೋಚಿಸಿದರೆ, ಅಯ್ಯೋ ಬೋಳಿಮಗನೆ, ನಿನ್ನ ಮನಸ್ಸು ನಿಶ್ಯಕ್ತಿಯಿಂದ ಬಳಲುತ್ತಿರುವುದು ಎಂದು ಯಾರೋ ಕೂಗಿ ಹೇಳಿದ ಹಾಗೆ ಭಾಸವಾಗುತ್ತಿದೆ.  ಎಷ್ಟು ಕೂತು ಯೋಚಿಸಿದರೂ ಅಷ್ಟೇ , ನೀನೆಷ್ಟು ಅವಲೋಕಿಸಿದರೂ ಅಷ್ಟೇ , ಒಂದೊಮ್ಮೆ ಅದರ ಕಾರಣ ನಿನಗೆ ಅರಿವಾದರೂ, ಅದನ್ನು ತೊರೆದು ಬೇರೋದು ಹಾದಿ ಹಿಡಿದು ಸಾಗುವ ತಾಕತ್ತು ನಿನಗಿಲ್ಲ ಎಂದು ಮನಸ್ಸು ಹೇಳುತ್ತಿದೆ. 

ಏನಾದರೂ ಸಾಧಿಸಬೇಕೆಂದರೆ , ನಿಧಾನ ಆದರೂ ಸರಿ ಎಂದು ದಿನಗಟ್ಟಲೆ ತಿಂಗಳುಗಟ್ಟಲೆ ತಾಳ್ಮೆಯಿಂದ ಕಾದು ದಕ್ಕಿಸಿಕೊಂಡಿದ್ದೇನೆ. ಆದರೆ ಈಗ ಎಂಥ ನಿರ್ವೀರ್ಯ ಮನಸ್ಥಿತಿ ಅಂದರೆ, ಸಿಕ್ಕಿದ್ದರಲ್ಲಿ ತೃಪ್ತಿ ಪಡುವಂತದ್ದು. ಥೂ .. ಛಲ ಅನ್ನುವುದು ನನ್ನಿಂದ ದೂರ ಆಗಿದೆಯೇ? ಅಥವಾ ಸಮಯ ಹಾಗೆ ಮಾಡಿಸುತ್ತಿದೆಯೇ ?? ನನಗೆ ನಾನೇ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದೇನೆ ಎನ್ನುವ ಭಾವನೆ... ನನ್ನೊಬ್ಬನ ಶಕ್ತಿಯಿಂದ ದಕ್ಕಿಸಿಕೊಳ್ಳಬಹುದಾದನ್ನು ಪಡೆದಿದ್ದೇನೆ, ಆದರೆ ನನ್ನೊಬ್ಬನಿಂದಲೇ ಪಡೆಯಲಾಗದ್ದು ಬಹಳಷ್ಟಿವೆ. ಅವುಗಳ ಮೇಲಿನ ಆಸೆಯನ್ನೇ ಬಿಟ್ಟಾಗಿದೆ. 

ನಾನು ನಿದ್ದೆ ಮಾಡುವ ಪರಿಯನ್ನು ಕಂಡು ಅದೆಷ್ಟು ಜನ ಹೊಟ್ಟೆ ಉರಿ ಪಟ್ಟು ಕೊಂಡಿದ್ದಾರೆ. ಈ ನನಮಗನಿಗೆ  ದಿಂಬಿಗೆ ತಲೆಕೊಟ್ಟು ಹತ್ತಿಪ್ಪತ್ತು ಸೆಕೆಂಡುಗಳಲ್ಲೇ ನಿದ್ದೆ ಬರುತ್ತೆ , ನಮಗೆ ಹಾಳಾದ್ದು ಘಂಟೆ ಆದರೂ ಬರಲ್ಲ ಅಂತ ಅಂದುಕೊಂಡವರು ಎಷ್ಟೋ , ಇವನಿಗೆ ಅಕ್ಕ ತಂಗಿಯರಮದುವೆ ಮಾಡಬೇಕು, ಮನೆ ಕಡೆ ನೋಡ್ಕೋಬೇಕು ಅಂತ ಚಿಂತೆ ಇಲ್ಲ,ಅದಕ್ಕೆ ಹಿಂಗೇ ಕುಂಭಕರ್ಣನ ಥರ ನಿದ್ದೆ ಮಾಡುತ್ತಾನೆ ಅಂತ ಮಾತಾಡಿಕೊಂಡವರೆಷ್ಟೋ. ಹೀಗೆ ಹೊತ್ತಲ್ಲದ ಹೊತ್ತಲ್ಲಿ, ಎಲ್ಲಿ ಬೇಕೆಂದರಲ್ಲಿ ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದವನಿಗೆ , ಹೀಗ ಮಧ್ಯರಾತ್ರಿ ೨-೩ ಘಂಟೆಯ ತನಕ ಹೊರಳಾಡಿ ಹೊರಳಾಡಿದರೂ ನಿದ್ದೆ ಬರುತ್ತಿಲ್ಲ, ರಾತ್ರಿಯೋ, ಬೆಳಗಿನ ಜಾವವೋ ಎಂಬ ಪರಿವೆಯೂ ಇಲ್ಲದಾಗಿದೆ. ಮುಂಚೆ ಇದ್ದಷ್ಟು ಕಷ್ಟಗಳೇನು ಇಲ್ಲ.. ಆಗ ಕಡಿಮೆ ಸಂಬಳ, ಹೆಚ್ಚು ಸಾಲ, ಆದರೂ ನಿದ್ದೆಗೆ ಮೋಸ ಇರಲಿಲ್ಲ. ಈಗ ಸ್ವಲ್ಪ ಹೆಚ್ಚು ಸಂಬಳ, ಅನಾವಶ್ಯಕವಾಗಿ ಮಾಡಿಕೊಂಡ ಸ್ವಲ್ಪ ಸಾಲ. ಇನ್ನ ೪-೫ ತಿಂಗಳಲ್ಲಿ ಬಹುತೇಕ ಸಾಲ ತೀರಿ ನಿರಾಳ ಆಗುತ್ತೇನೆ, ಆದರೂ ನೆಮ್ಮದಿಯಾಗಿ ನಿದ್ದೆ ಹತ್ತುತ್ತಿಲ್ಲ. ಥೂ ಸಾಲಕ್ಕಾಗಿ ತಲೆ ಕೆಡಿಸಿಕೊಂಡು ನಿದ್ದೆ ಬಿಟ್ಟವನಲ್ಲ. ಕೆಲಸವಿಲ್ಲದೆ  ವರ್ಷ ಪೂರ್ತಿ ಬೆಂಗಳೂರಲ್ಲಿ ಅಲೆದಾಗ,ಅಪ್ಪ ಅಮ್ಮನ ಬಳಿ ಇನ್ನು ಮುಂದೆ ದುಡ್ಡು ಕೇಳಬಾರದು ಎಂದುಕೊಂಡು ಅದೆಷ್ಟು ಜನ ಸ್ನೇಹಿತರ ಬಳಿ ಸಾಲ ತೆಗೆದುಕೊಂಡಿದ್ದೆ. ಯಾರೂ ಇಲ್ಲ ಎಂದವರಿಲ್ಲ  ನನಗೆ. ಎಷ್ಟೇ ಕಷ್ಟ ಬಂದರೂ ಹೇಗೋ ನಿಭಾಯಿಸಿಬಿಡುತ್ತಿದ್ದೆ. ಈಗಲೂ ದುಡ್ಡಿನ ವಿಷಯದಲ್ಲಿ ಹೇಗೋ ನಿಭಾಯಿಸುತ್ತೀನಿ. ಯಾರ ಬಳಿಯೂ ಎಂಥ ಕಷ್ಟದ ಪರಿಸ್ಥಿತಿಯಲ್ಲೂ ವ್ಯವಹಾರ ಕೆಡಿಸಿಕೊಂಡಿಲ್ಲ, ಹಾಗಾಗಿ ಸಾಲ ಸಿಗುವುದು ಕಷ್ಟವೇನಲ್ಲ. . ದುಡ್ಡಿನ ವಿಷಯಕ್ಕೆ ನಿದ್ದೆಗೆಟ್ಟವನಲ್ಲ.. ಆದರೂ ಇತ್ತೀಚಿಗೆ ನನಗೆ ತಿಳಿಯದಂತಹ ಒಂದು ಅಜ್ಞಾತ ಕಾರಣ ನನ್ನನ್ನು ಕಾಡುತ್ತಿದೆ, ಮನ ಕಲಕುತ್ತಿದೆ, ನಿದ್ದೆ ಗೆಡಿಸುತ್ತಿದೆ. ಅವಲೋಕನೆಗೆ ಬಾರದ ಹಾಗೆ ದಿಕ್ಕು ಬದಲಿಸುತ್ತಿದೆ. ಕಾರಣದ ಶಿಕಾರಿ ಮಾಡುತ್ತಾ ಹೋದರೆ ತಲೆಬುಡ ಇಲ್ಲದ ಏನೇನೋ ಯೋಚನೆಗಳು. ಈ ಹೊಸ ರೂಮಿಗೆ ಬಂದ ಮೇಲಂತೂ ಇಂಥ ಯೋಚನೆಗಳು ಜಾಸ್ತಿ ಆಗಿಬಿಟ್ಟಿವೆ. 

ನಾನು ಕೆಲಸ ಮಾಡುತ್ತಿರುವ ಕಂಪೆನಿ ಚೆನ್ನಾಗಿಲ್ಲವಾ, ಅಥವಾ ಪ್ರಾಜೆಕ್ಟ್ ಸರಿ ಇಲ್ಲವಾ , ನನ್ನ ಕೆಲಸಾನೇ ಸರಿ ಇಲ್ಲವಾ , ಹೀಗೆ ಯೋಚನೆಗಳ ಅಲೆಯೇ ಕಣ್ಮುಂದೆ ಬರುತ್ತದೆ. ಬಂದರೂ ಏನು ಪ್ರಯೋಜನ. ಈ ಕೆಲಸ ಬಿಟ್ಟು ಇನ್ನೊಂದನ್ನು ಪಡೆಯುವ ಶಕ್ತ್ಯ ಸಧ್ಯಕ್ಕೆ ಇಲ್ಲ. ನನಗೆ ಇಷ್ಟ ಇಲ್ಲದ ರೋಲ್ ಕೊಟ್ಟಾಗ ,ನನ್ನನ್ನು demote ಮಾಡುತ್ತಿದ್ದಾರೆ ಎಂಬ ಭಾವನೆ ೩-೪ ದಿನ ಮನಸ್ಸಿನಲ್ಲಿ ತೊಳಲಾಡಿ ತಲೆ ಕೆಡಿಸಿಕೊಂಡು ಕೂತಿದ್ದಾಯಿತು. ನಾ ಕೇಳಿದೆ ರೋಲ್ ಗೆ ನನಗೆ ಯೋಗ್ಯತೆ ಇಲ್ಲವಾ ? ಇಷ್ಟು ದಿನ ಇದಕ್ಕೆ justification ಕೊಟ್ಟಿಲ್ವಾ ಎನ್ನುವ ಯೋಚನೆಗಳು. ಇದಕ್ಕೆಲ್ಲ ಸಮಯ ಕಾದು ಉತ್ತರ ಕೊಡಬೇಕು ಎಂದು ಸುಮ್ಮನಾಗಿದ್ದೆ. ಅಷ್ಟರಲ್ಲೆ ಬೇರೊಂದು ಪ್ರಾಜೆಕ್ಟ್ ಸಿಕ್ಕಿದ್ದು ಸ್ವಲ್ಪ ಮಟ್ಟಿಗೆ ಸಮಾಧಾನದ ವಿಷಯ.  ಕೆಲಸ ಬಿಟ್ಟು ಸ್ವಲ್ಪ ದಿನ ಈ ಬೆಂಗಳೂರನ್ನು ಬಿಟ್ಟು career break ತಗೊಂಡು ಎಲ್ಲಾದರೂ ಹೋಗೋಣ ಅಂದರೆ, ತಿಂಗಳ ಮೊದಲನೇ ದಿನ ಅಕೌಂಟ್ ಇಂದ ಕಡಿತಗೊಳ್ಳುವ loan ನ EMI ನೆನಪಾಗುತ್ತದೆ. ಇನ್ನು ೪-೫ ತಿಂಗಳು ಈ ಸಾಲ ತೀರಿಸುವ ಸಲುವಾಗಿ ಆದರೂ ಕೆಲಸ ಮಾಡಲೇಬೇಕು. 

ಏನೇನೋ ಮಾಡಬೇಕು ಎಂಬ ಸಾಹಸಕ್ಕೆ ಕೈ ಹಾಕಲು ಹೊರಟು ಸ್ನೇಹಿತರ ಬಳಿ ಹೇಳಿಕೊಂಡರೆ , ಮಗಾ, ಈ ಸ್ಟೇಜ್ ಅಲ್ಲಿ ರಿಸ್ಕ್ ತಗೋಬೇಕಾ ? ಯೋಚನೆ ಮಾಡು ಎಂದು ಧೈರ್ಯ ಕುಂದಿಸುವ ಕೆಲವರು..  ನಿಮಗೆ ಏನು ಹೇಳದೆ ಏನಾದರೂ ಮಾಡಬೇಕು ಅಂತ  ಯೋಚಿಸಿ ಸ್ವಲ್ಪ ಹೊತ್ತಿಗೆ ಆ ಯೋಚನೆಯೇ ಮರೆತು ಹೋಗಿರುತ್ತದೆ, ಇಷ್ಟೇ, ನಿರ್ದಿಷ್ಟ ಗುರಿ ಇಲ್ಲದ, ನಿರ್ದಿಷ್ಟ ತಯಾರಿ ಇಲ್ಲದ ಯೋಚನೆಗಳು. ಅಯ್ಯೋ ಲೇ ಮಗನೇ  ನಿನ್ನ ಕೈಯಲ್ಲಿ ಏನೂ ಆಗಲ್ಲ ಕಣೋ , ಸುಮ್ಮನೆ ಬೇರೆಯವರನ್ನ ದೂರುತ್ತೀಯ ಎಂದು ಅಣಕಿಸುವ ಒಳ ಮನಸ್ಸು. ಅದು ಸತ್ಯ ಎಂದು ಒಪ್ಪಿಕೊಳ್ಳುವ ತಾಕತ್ತು ಇಲ್ಲ ನನಗೆ. ಅದನ್ನು ಸುಳ್ಳು ಮಾಡುವ ಧೈರ್ಯವೂ ಇಲ್ಲ..  

ಮನಸ್ಸಿನ ಇಂಥ ತೊಳಲಾಟವನ್ನು ಗೆಳೆಯನಲ್ಲಿ ಹೇಳಿಕೊಂಡರೆ, ಸ್ವಲ್ಪ ಧೈರ್ಯ ಆಗಿರು. ಏನೂ ಹೆಚ್ಚು ಕಡಿಮೆ ಮಾಡ್ಕೋಬೇಡ, bad time ಅಷ್ಟೇ . ಸ್ವಲ್ಪ ದಿನ ಎಲ್ಲ ಸರಿ ಆಗತ್ತೆ ಅಂತಾನೆ . 'ಹೆಚ್ಚು ಕಡಿಮೆ' ಆದ್ರೆ ಏನೋ ಅಂದ್ರೆ, ಅಪ್ಪಿ ತಪ್ಪಿ ಏನಾದ್ರೂ ಮಾಡ್ಕೋಬೇಡ ಮತ್ತೆ, ರೂಮಲ್ಲಿ ಒಬ್ಬನೇ ಬೇರೆ ಇದ್ದೀಯ. ಸುಮ್ಮನೆ ನಿಮ್ಮ ಮನೆ owner ಗೂ ತೊಂದರೆ ಆಗತ್ತೆ ಅಂತ ಸಮಜಾಯಿಸಿ ಕೊಟ್ಟ.  ಅಯ್ಯೋ ಬೋಳಿಮಗನೇ , ನಾನೇನು ನೇಣು ಹಾಕಿಕೊಂಡೋ,ವಿಷ ಕುಡಿದೋ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಧೈರ್ಯಗೆಡುಕನಲ್ಲ ಕಣೋ ..ಏನೇ  ಬಂದರೂ face ಮಾಡ್ತೀನಿ ಜೀವನದಲ್ಲಿ ಅಂತ ಬೈದಿದ್ದೆ. ಒಂದು ಕಾಲದಲ್ಲಿ ನಾನು ಅವನಿಗೆ ಬುದ್ಧಿವಾದ ಹೇಳ್ತಿದ್ದೆ , ಇವತ್ತು ತಿರುಗಿ ನನಗೆ ಹೇಳ್ತಿದ್ದಾನೆ.. 

ಕೆಲವೊಮ್ಮೆ ನಾ ಏನು ಮಾಡುತ್ತಿದ್ದೇನೆ ಎಂಬ ಪರಿವೆಯೇ ಇಲ್ಲದೆ, ಶೂನ್ಯ ಭಾವ ಆವರಿಸಿಕೊಂಡಿರುತ್ತದೆ. ಅದ್ಯಾವುದೋ ಪುಸ್ತಕ ಓದುತ್ತಾ ಕೂತವನು, ಅದೆಷ್ಟು ಹೊತ್ತು ಕೂತೇನೋ , ಏನು ಓದಿದೆನೋ ತಿಳಿಯಲಿಲ್ಲ. ಇದ್ದಕಿದ್ದ ಹಾಗೆ ಹೊಟ್ಟೆ ಹಸಿವು ಶುರು ಆಗಿತ್ತು.  ಆಫೀಸಿನಿಂದ ಬಂದವನು ಊಟ ಮಾಡಿಲ್ಲ ಅನ್ನುವುದು ಹಾಗ ನೆನಪಾಗಿ, ಮನೆ ಹೊರಗೆ ಬಂದು ಬೈಕನ್ನು ಸ್ಟಾರ್ಟ್ ಮಾಡುವ ಸಮಯಕ್ಕೆ ಎದುರು ಮನೆ ಹುಡುಗ ಬಂದು ಪಕ್ಕ ನಿಂತಿದ್ದ  'Uncle , I called you five times you know.  you didnot turned , So I only came ' ಅಂದಾಗಲೇ ತಿಳಿದಿದ್ದು ಈ ಹುಡುಗ ನನ್ನನ್ನು ಇಷ್ಟೊತ್ತು ಕೂಗುತ್ತಿದ್ದ ಎಂದು...  ಅಯ್ಯೋ, ಸಾರಿ ಪುಟ್ಟ ಎಂದು ಹೇಳಿ ಅವನ ಜೊತೆ ಒಂದಿಷ್ಟು ಹರಟೆ ಹೊಡೆದು,ಇನ್ನೇನು ಹೋಟೆಲುಗಳು ಮುಚ್ಚುವ ಸಮಯ ಎಂದು ಗಡಿಬಿಡಿಯಲ್ಲಿ ಹೊರಟೆ.  ತೆಗೆದಿದ್ದ ಒಂದೇ ಒಂದು ಗಾಡಿಯ ಮುಂದೆ ಹೋಗಿ ನಿಂತು , ಅವ ಏನು ಕೊಡ್ಲಿ ಸರ್ ಅಂದಾಗ ವೆಜ್ ಫ್ರೈಡ್ ರೈಸ್ ಎಂದಿದ್ದಷ್ಟೇ ನೆನಪು,ಏನನ್ನೋ ಯೋಚನೆ ಮಾಡುತ್ತಾ ಕೂತಿದ್ದಾಗ ಅವನು ಕೊಟ್ಟಿದ್ದನು ಹಿಂದೆ ಮುಂದೆ ನೋಡದೆ ತಿನ್ನಲು ಹೋದಾಗ ವಾಸನೆ ನೋಡಿದಾಗಲೇ ಗೊತ್ತಾಗಿದ್ದು, ಎಗ್ ಫ್ರೈಡ್ ರೈಸ್ ಕೊಟ್ಟಿದ್ದಾನೆ ಅಂತ. ಥೂ ಹಾಳದವನೇ ಮೊಟ್ಟೆ ತಿನ್ನಿಸ್ತಿದ್ದಲ್ಲೊ ಇವತ್ತು  ಅಂಥ ಬೈದು ಅದೆಷ್ಟು ದುಡ್ಡು ಕೊಟ್ಟು ಬಂದೆನೋ ಗೊತ್ತಿಲ್ಲ.. ಮನೆಗೆ ಬಂದು ಯಾವತ್ತೋ ತಂದಿಟ್ಟಿದ್ದ ಬಿಸ್ಕೆಟ್ ತಿಂದು ಮಲಗಲು ಯತ್ನಿಸಿದರೂ ಮತ್ತದೇ ಶೂನ್ಯ ಭಾವ, ಮತ್ತದೇ ನಿದ್ದೆ ಹತ್ತದ ಸ್ಥಿತಿ... ಯಾಕೋ ಒಬ್ಬಂಟಿ ಜೀವನ ಬೇಸರ ಮೂಡಿಸುತ್ತಿದೆ, ತಿಳಿದೋ ತಿಳಿಯದೆಯೋ ನನ್ನ ತನ್ನ ಕಳೆದುಕೊಳ್ಳುತ್ತಿದ್ದೀನಿ ಎಂಬ ಭಯ. ಎಲ್ಲದಕ್ಕೂ ಒಂದು ಅಂತ್ಯ ಬೇಕಿದೆ. ನಾಳೆಯ ಸೂರ್ಯನಾದರೂ ಹೊಸ ದಿಕ್ಕು ತೋರಿಸುತ್ತಾನೋ ನೋಡಬೇಕು., ಈ ಅಜ್ಞಾತ ಬೇಟೆ ಸಾಕಾಗಿದೆ...