Wednesday, September 19, 2012

ನಾವು ಹಿಂಗೆ ಗಣಪತಿ ಇಡ್ತಿದ್ದಿದ್ದು...

ಕಳೆದ ವಾರ ಊರಿಗೆ ಹೋದಾಗ ಹಳೆಬೀಡಿನ ಸ್ನೇಹಿತ ಪೃಥ್ವಿ ಮನೆಗೆ ಹೋದೆ...ಅವನ ಮನೆಯ ಪಕ್ಕದಲ್ಲಿ ಆ ಬೀದಿಯ ಚಿಳ್ಳೆ ಮಿಳ್ಳೆ ಮಕ್ಕಳೆಲ್ಲ ಸೇರಿ ಗಣಪನ ಕೂರಿಸೋಕ್ಕೆ ಪೆಂಡಾಲ್ ರೆಡಿ ಮಾಡ್ತಿದ್ರು...ಇವನು "ಏನ್ರೋ ಇನ್ನು ಇಷ್ಟೇನಾ ಕೆಲ್ಸ ಆಗಿರೋದು,ಬೇಗೆ ಬೇಗ ರೆಡಿ ಮಾಡ್ರೋ" ಅಂದ...ಅಲ್ಲಿದ್ದ ಒಬ್ಬ ಹುಡ್ಗ"ಅಣ್ಣ,ನಿಮಗ್ಯಾಕೆ ಅದೆಲ್ಲ.ನಾವು ಒಟ್ಟಿನಲ್ಲಿ ಎಲ್ಲ ರೆಡಿ ಮಾಡಿದ್ರೆ ಆಯ್ತಲ್ವ? ನಿಮ್ಮ ಕೆಲ್ಸ ಗಣಪತಿ ಕೊಡ್ಸೋದು ಅಷ್ಟೇ" ಅಂದ..ಇನ್ನೊಬ್ಬ ಇದ್ದವನು"ಆಕಡೆ ಬೀದಿಯವ್ರು ಎರಡೂವರೆ ಅಡಿ ಗಣಪತಿ ಇಡ್ತಾರಂತೆ,ನಾವು ಆಗಿದ್ದು ಆಗ್ಲಿ ೪ ಅಡಿದು ಇಡಲೇ ಬೇಕು" ಅಂದ..ಇವನು"ಲೋ ಅಷ್ಟು ದೊಡ್ಡದು ಬೇಡ ಕಣ್ರೋ,೩ ಅಡಿದು ಸಾಕು" ಅಂದ್ರೆ "ಥೋ ಥೋ ಥೋ ಆಗಲ್ಲ,ತಲೆ ಮೇಲೆ ತಲೆ ಬೀಳಲಿ,ಅವರಗಿಂತ ದೊಡ್ಡದು ಕೂರಿಸ್ಲೆ ಬೇಕು,ಇಲ್ಲ ಅಂದ್ರೆ ಹಳೆ ಸಂತೆ ಬೀದಿಗೆ ಮರ್ಯಾದೆ ಇರತ್ತಾ"ಅಂದ... "ಏನಾದ್ರೂ ಮಾಡ್ಕಂಡು ಹಾಳಾಗಿ ಹೋಗಿ,ಎಷ್ಟೋ ಒಂದು ಇಡ್ರಿ ಅತ್ಲಾಗಿ" ಅಂತ ಹೇಳಿ ಹೊರಟ್ವಿ..ಹಿಂದೆ ಯಿಂದ "ಹಾಸನ್ ಇಂದ ತರಬೇಕು,ಈ ಲೋಕಲ್ ಗಣಪತಿ ಆಗಲ್ಲ" ಅಂತ ಇನ್ನೊಬ್ಬ ಕಿರುಚಿದ .."ನೋಡ್ಲಾ ಗಿರಿ,ಈ ಬಡ್ಡಿ ಮಕ್ಳು,ಕೊಡ್ಸಕ್ಕೆ ಒಪ್ಕಂಡಿದ್ದೀನಿ,ಕೇಳಿದ್ದು ಕೊಡ್ಸದೆ ಇದ್ರೆ ಮರ್ಯಾದೆ ತಗಿತಾರೆ" ಅಂದ..

ಇದನ್ನ ನೋಡಿದಾಗ ನಾವು ಚಿಕ್ಕವರಿದ್ದಾಗ ಗಣಪತಿ ಕೂರಿಸ್ತಿದ್ದ ಪರಿ,ನಮ್ಮ ಉತ್ಸಾಹ,ಮನೆ ಮನೆ ಸುತ್ತಿ ದುಡ್ಡು ಎತ್ತಿದ್ದು,ಹಬ್ಬದ ಪ್ರಯುಕ್ತ ನಡೆಯುತ್ತಿದ್ದ ವಿವಿಧ ಆಟೋಟಗಳು ,ವಿಸರ್ಜನೆ ದಿನ ಬಹುಮಾನ ವಿತರಣೆ ಎಲ್ಲ ಒಮ್ಮೆಲೇ ಗಿರಕಿ ಹೊಡೆಯೋಕ್ಕೆ ಶುರು ಆಯಿತು...ಯಾರಾದ್ರೂ ದುಡ್ಡು ಕೊಡೋಕ್ಕೆ ಸತಾಯ್ಸಿದ್ರೆ "ಏನ್ ಅಂಕಲ್,ಇಷ್ಟು ದುಡ್ಡು ಮನೆಗೆ ಇಷ್ಟೇನಾ ದುಡ್ಡು"ಅಂತೆಲ್ಲ ಪೀಡಿಸಿ ವಸೂಲಿ ಮಾಡ್ತಿದ್ವಿ...೬ ವರ್ಷ ಹಾಸನದಲ್ಲಿದ್ದ ಸಮಯದಲ್ಲಿ ನಮ್ಮ ಬೀದಿಗೂ ಪಕ್ಕದ ಬೀದಿಗೂ ಪ್ರತಿ ವರ್ಷ ಗಣಪನ್ನ ಕೂರಿಸೋ ವಿಚಾರದಲ್ಲಿ ಪೈಪೋಟಿ.. ಯಾರು ದೊಡ್ಡ ಗಣಪನ್ನ ಕೂರಿಸ್ತಾರೆ,ಯಾರು ಜಾಸ್ತಿ ದಿನ ಇಟ್ಟಿರ್ತಾರೆ..ಯಾರು ಚೆನ್ನಾಗಿ ಅಲಂಕಾರ ಮಾಡಿದ್ದಾರೆ..ಹೀಗೆ ... ಬೀದಿ ಬೀದಿಗಳ ಪೈಪೋಟಿಗೆ ಪಾಪ ಮುಗ್ಧ ಗಣಪ ಬಲಿ ಆಗ್ತಿದ್ದ...

ಇಲಿ ಪುರಾಣ:
ಒಂದು ವರ್ಷ ಏನಾಯ್ತು ಅಂದ್ರೆ,ಗೌರಮ್ಮ ಮತ್ತೆ ಗಣಪನ್ನ ಕೂರ್ಸಿ ಪೂಜೆ ಗೀಜೆ ಎಲ್ಲ ಆಯ್ತು,ಮೈಕ್ ಸೆಟ್ ಎಲ್ಲ ಜೋಡ್ಸಿದ್ವಿ,ಜೋರಾಗಿ ಹಾಡು ಹಾಕಿ ಕುಣಿತಿದ್ವಿ..ನಮ್ಮ ಬೀದಿಯ ಒಬ್ರು ಮಹನೀಯರು ಪೂಜೆ ಮಾಡಿಸ್ಕಂಡ್ ಹೋಗೋಕ್ಕೆ ಬಂದವರು,ಒಮ್ಮೆಲೇ"ಎಲ್ರೋ ಹುಡುಗರ,ಗಣಪತಿ ಇದೆ,ಇಲಿನೆ ಇಲ್ವಲ್ರೋ" ಅಂದ್ರು..ಆಗ ನಾವೆಲ್ಲ ಸೇರಿ ಎಲ್ಲೋಯ್ತು ಎಲ್ಲೋಯ್ತು ಅಂತ ವಿಮರ್ಶೆ ಮಾಡಿದಾಗ,ಎಲ್ಲರು ನಂಗೊತ್ತಿಲ್ಲ ನೊಂಗೊತ್ತಿಲ್ಲ ಅಂದ್ರು.ಆಮೇಲೆ ಅಂಗಡಿಗೆ ತರಕ್ಕೆ ಹೋಗಿದ್ದ ಒಬ್ಬ ಪುಣ್ಯಾತ್ಮ ಆಟೋದಲ್ಲಿ ಹಿಂದೆ ಇಟ್ಟಿದ್ದೆ,ಅಲ್ಲೇ ಮರ್ತೆ ಅನ್ಸುತ್ತೆ ಅಂದ..ಆಗ ಇನ್ನೇನ್ ಮಾಡೋದು ಆ ಅಟೋದವನನ್ನ ಹುಡುಕೋ ಕೆಲ್ಸ ಅಂತು ಆಗಲ್ಲ,ಸರಿ ಅಂತ ಮತ್ತೆ ಅಂಗಡಿಗೆ ಹೋದ್ರೆ ಅವನು ಬರಿ ಇಲಿ ಕೊಡಕ್ಕೆ ಆಗಲ್ಲ ,ಒಂದೊಂದು ಗಣಪತಿಗೆ ಒಂದೊಂದು ಇಲಿ ಮಾಡಿರ್ತಿವಿ ಅಂದ.ಎಷ್ಟೇ ದಮ್ಮಯ್ಯ ಅಂದ್ರು, ಕೊಡಲ್ಲ,ಬೇಕಾದ್ರೆ ಗಣಪತಿ ತಗೊಳ್ಳಿ,ಅದರ ಜೊತೆಗೆ ಇಲಿ ಕೊಡ್ತೀನಿ ಅಂದ..ಸರಿ ಕೊಡಪ್ಪ ಅಂತ ತಂದು ಇಟ್ಟಿದ್ದು ಆಯ್ತು...ಆಮೇಲೆ ಆಟೋದಲ್ಲಿ ಇಲಿ ಬಿಟ್ಟು ಬಂದವನಿಗೆ ಎಲ್ಲರು ಸೇರಿ ಬೈದಿದ್ದೇ ಬೈದಿದ್ದು...

ಆಗ ನಮಗೆ ಇದ್ದ ಒಂದು ನಂಬಿಕೆ ಏನು ಅಂದ್ರೆ ಗಣಪತಿ ಹಬ್ಬದ ದಿನ ಚಂದ್ರನನ್ನು ನೋಡಬಾರದು ಅಂತ..ನೋಡಿದ್ರೆ ಆ ವರ್ಷ ಪೂರ್ತಿ ನಮಗೆ ಒಳ್ಳೇದ್ ಆಗಲ್ಲ ಅಂತ..ನಾವು ಹುಡುಗರಂತು ಯಾರಾದ್ರೂ ನೋಡಿಲ್ಲ ಅಂದ್ರೆ ಅವನನ್ನ ಕೈ ಕಾಲು ಹಿಡಿದು ಮೇಲಕ್ಕೆ ಮುಖ ಮಾಡಿ ಚಂದ್ರನ್ನ ತೋರಿಸ್ತಿದ್ವಿ..ಇದೆಲ್ಲಾ ತಮಾಷೆ ಈಗ

ಆಮೇಲೆ ಸ್ವಲ್ಪ ದಿನ ಆದ್ಮೇಲೆ ವಿಸರ್ಜನೆ ಕಾರ್ಯಕ್ರಮ.ನಾವಿನ್ನು ಚಿಕ್ಕ ಹುಡುಗರು,ಎಲ್ಲಿ ಬಾವಿಗೆ ಬಿದ್ದು ಬಿಡ್ತಾರೋ ಅಂತ ನಮ್ಮನ್ನ ಕಳಿಸ್ತಿರ್ಲಿಲ್ಲ.ಆಟೋದಲ್ಲಿ ಮೆರೆವಣಿಗೆ ಮಾಡಿ ಜವೆನಹಳ್ಳಿ ಮಠದ ಬಾವಿಯಲ್ಲಿ ಕೆಲವು ದೊಡ್ಡವರು ಹೋಗಿ  ಬಿಟ್ಟು ಬರ್ತಿದ್ರು,ಆದರೆ ಆ ೬ ವರ್ಷದಲ್ಲಿ ಒಂದೇ ಒಂದು ಸಾರಿ ನಮ್ಮ ಬೀದಿಯ ಗಣಪನ ವಿಸರ್ಜನೆ ಮಾಡೋದನ್ನ ನೋಡಕ್ಕೆ ಆಗಿರಲಿಲ್ಲ..

ಅಲ್ಲದೆ ಒಂದು ಬಟ್ಟಲಿನಲ್ಲಿ ಅಕ್ಷತೆ ಕಾಳು(ಅಕ್ಕಿ ಮತ್ತು ಹರಿಶಿನ) ಹಿಡಿದು ಇಡೀ ಹಾಸನ ಸುತ್ತುತಿದ್ವಿ...  ಆ ದಿನ  ಒಟ್ಟು ೧೦೮ ಗಣಪತಿಯನ್ನು ನೋಡೋದು ನಮ್ಮ ಗುರಿ...ಮನೆ ಮನೆ,ಬೀದಿ ಬೀದಿ ಸುತ್ತಿ ಒಟ್ಟು ೧೦೮ ಗಣಪನನ್ನು ನೋಡಿ ಬರ್ತಿದ್ವಿ...

ಅದರ ಮುಂದಿನ ವರ್ಷ ನಮ್ಮೂರಿಗೆ,ನಮ್ಮ ಹಳ್ಳಿಗೆ ಬಂದಾಗ ಅಲ್ಲಿ ಹಬ್ಬದ ಆಚರಣೆ ಇನ್ನೂ ಚೆನ್ನಾಗಿತ್ತು.ಅಲ್ಲಿಂದ ಮುಂದೆ ಪ್ರತಿ ವರ್ಷ ಹಳ್ಳಿಯ ಜೀವನದ ಜೊತೆ ನಾನು ಬೆರೆತು ಹೋಗಿದ್ದೆ.ನನಗೆ ತುಂಬ ಕುಶಿ ಕೊಟ್ಟಿದ್ದು ನಮ್ಮ ಹಳ್ಳಿಯ ಆಚರಣೆ ಮತ್ತು ಸಂಪ್ರದಾಯ.

ಇನ್ನು ಮನೆನಲ್ಲಿ ಚೌಥಿ ಹೊಡೆಯದು..ಅದಕ್ಕೆ ಒಂದಷ್ಟು ಪುಸ್ತಕ,ಸೇರು ಕುಡುಗೋಲು ಎಲ್ಲ ಹಿಡವ್ರು..ನಾನಂತು ನನಗೆ ಕಷ್ಟದ ವಿಷಯದ ಪುಸ್ತಕ ಹಿಡ್ತಿದ್ದೆ..ಗಣಪ ಏನಾದ್ರೂ ಕೃಪೆ ತೋರಬಹುದು ಅಂತ.. ನಮ್ಮ ಮನೇಲಿ ಸಿಕ್ಕ ಸಿಕ್ಕಿದ್ದಕ್ಕೆಲ್ಲ ಈಡು ಕಾಯಿ ಹೊಡೆಯವ್ರು..ಮಾರನೆ ದಿನ ಅದೇ ಕಾಯಲ್ಲಿ ಕಾಯಿ ಕಡುಬು ಮಾಡೋವ್ರು...

ನಮ್ಮೂರಲ್ಲಿ ಗಣಪತಿ ಕೂರಿಸೋ ಮುಂಚೆ ಗಂಗೆ ಪೂಜೆ ಎಲ್ಲ ಮಾಡಿ ವಾದ್ಯದವರ ಜೊತೆ ಗಣಪನ್ನ ತಂದು ಕೂರಿಸ್ತಿದ್ವಿ.ಊರೆಲ್ಲ ಕೇಳೋ ಹಗೆ ಮೈಕ್ ಸೆಟ್ ಇರಲೇ ಬೇಕಿತ್ತು..ಇಲ್ಲೂ ಕೂಡ ಸುತ್ತ ಮುತ್ತ  ಉರಿನವರಿಗಿಂತ ದೊಡ್ಡದನ್ನು ಕೂರಿಸಬೇಕು ಅಂತ ಪೈಪೋಟಿ..ಅದು ಅಲ್ದೆ ಪ್ರತಿ ವರ್ಷ ನಮ್ಮ ಊರಲ್ಲೇ ಗಣಪತಿಯನ್ನ ಮಾಡ್ತಿದ್ವಿ,ಅಲ್ಲೇ ಸುತ್ತ ಮುತ್ತ ಎಲ್ಲಿಂದನಾದ್ರು ಜೇಡಿ ಮಣ್ಣು ತಂದು ಮಾಡಿಸ್ತಿದ್ವಿ.ಯಾವುದೇ ಅಂಗಡಿ ಇಂದ ತರೋ ಪ್ರಮೇಯವೇ ಇರಲಿಲ್ಲ.
ಇದೆಲ್ಲ ಆದಮೇಲೆ ಪ್ರತಿ ದಿನ ಸಂಜೆ ಪೂಜೆ ಇರ್ತಿತ್ತು, ಪ್ರತಿ ದಿನ ಒಂದೊಂದು ಮನೆ ಇಂದ ಚರ್ಪು ಮಾಡಬೇಕಿತ್ತು.೮.೩೦ಕ್ಕೆ ಸರಿಯಾಗಿ ಯಾರಾದ್ರೂ ಘಂಟೆ ಬಾರಿಸವ್ರು,ಅದೇ ಟೈಮ್ ಅಲ್ಲಿ ಯಾಕಂದ್ರೆ ಎಲ್ಲ ಚಾನೆಲ್ ಗಳಲ್ಲಿ ವಾರ್ತೆ ಬರೋ ಸಮಯ ಅದು..ಅಪ್ಪಿ ತಪ್ಪಿ ಕೂಡ ಜನ ಧಾರವಾಹಿ ಮಿಸ್ ಮಾಡ್ಕೊತಾರೆಯೇ? ಆಗಾಗಿ ಎಲ್ಲರೂ ಧಾರಾವಾಹಿ ನೋಡಿ ಘಂಟೆ ಸದ್ದು ಕೇಳಿದ ಕೂಡಲೇ ದೇವಸ್ಥಾನದ ಬಳಿ ಹಾಜರ್. ಪೂಜೆ ಆಗಿ ನೈವೇದ್ಯೇ ಆದಮೇಲೆ ಚರ್ಪು ಹಂಚೋ ಕಾರ್ಯಕ್ರಮ.೯.೦೦ ಘಂಟೆ ಒಳಗೆ ಪೂಜೆ ಎಲ್ಲ ಆಗಿ ಮುಂದಿನ ಧಾರವಾಹಿ ನೋಡೋಕ್ಕೆ ಅಣಿ ಆಗ್ತಿದ್ರು..

ಇನ್ನು ಸ್ವಲ್ಪ ದಿನ ಆದ್ಮೇಲೆ ಗಣಪತಿ ಬಿಡೋ ಕಾರ್ಯಕ್ರಮ..ನಮ್ಮೂರಲ್ಲಿ ಒಂದು ಹೊಯ್ಸಳರ ಕಾಲದ ಕಲ್ಯಾಣಿ ಇದೆ..ಅದು ಬತ್ತಿ ಹೋಗಿ ಬಹಳ ವರ್ಷಗಳೇ ಆಗಿದೆ..ವರ್ಷ ಪೂರ್ತಿ ಅದರ ಒಳಗೆ ಕೆಲಸಕ್ಕೆ ಬಾರದ ಗಿಡ ಗಂಟೆಗಳು,ಸೀಮೆ ಸೀಗೆ,ಮುಟ್ರು ಮುನಿ(ಮುಟ್ಟಿದರೆ ಮುನಿ,ಟಚ್ ಮಿ ನಾಟ್) ಬೆಳೆದಿರುತ್ತದೆ..ಆದರ ಗಣಪನ ದೆಸೆಯಿಂದ ವರ್ಷಕ್ಕೆ ಒಂದು ಸಾರಿ ಆ ಗಿಡಗಳನ್ನೆಲ್ಲ ಕಿತ್ತು ಸ್ವಚ್ಛ ಮಾಡ್ತಿದ್ವಿ..ಸುತ್ತ ಮುತ್ತ ಯಾರದಾದರು ಪಂಪ್ ಇಂದ ನೀರು ಬಿಟ್ಟು ತುಂಬಿಸ್ತಿದ್ವಿ..ಗಣಪತಿ ಬಿಡಬೇಕಲ್ಲಾ ಆಗಾಗಿ... ಆಗ ಚಿಕ್ಕ ಮಕ್ಕಳಾದ ನಮಗೆ ಸುಗ್ಗಿಯೋ ಸುಗ್ಗಿ..

ಈಜು ಬರದವರು ಈಜು ಕಲಿಯೊಕ್ಕೆ ಎಲ್ಲ ಬಹಳ ಸಹಾಯ ಆಗ್ತಿತ್ತು...ಆಗ ಕೆಲವರ ಮನೆಯಲ್ಲಿ ಈಜು ಬುರುಡೆ ಇತ್ತು.. ಈಜು ಬುರುಡೆ ಅಂದ್ರೆ ಒಂದೇ ಜಾತಿಯ ಸೋರೆಕಾಯಿಯನ್ನು ಒಣಗಿಸಿ ಅದಕ್ಕೆ ಹಗ್ಗ ಕಟ್ಟಿ ಇರ್ತಿದ್ರು..ನಾವು ಅದನ್ನ ಬೆನ್ನಿಗೆ  ಕಟ್ಟಿಕೊಂಡು ಈಜು ಆಡ್ತಿದ್ವಿ...ನಮ್ಮೂರಿನ ಬಹುತೇಕ ಮಕ್ಕಳು ಈಜು ಕಲಿತಿದ್ದು ,ಆ ಬುರುಡೆಯ ಮೂಲಕವೇ...ನನ್ನ ಬಳಿ ಆ ರೀತಿಯ ಬುರುಡೆ ಇಲ್ಲದ ಕಾರಣ,ಅವರಿವರ ತೋಟದಲ್ಲಿ ಹುಡುಕಿ,ಕೊನೆಗೂ ಒಂದು ಸೋರೆಕಾಯಿ ತಂದು,ಅದನ್ನ ಒಣಗಿಸಿ ದೊಡ್ಡಪ್ಪನ ಹತ್ತಿರ ಅದಕ್ಕೆ ಹಗ್ಗ ಕಟ್ಟಿ ಕೊಡೋಕ್ಕೆ ಹೇಳಿದ್ದೆ..ನನ್ನ ದುರದೃಷ್ಟವಶಾತ್ ಆ ಸೋರೆಕಾಯಿ ಹೊಡೆದು ಹೋಯಿತು..ನನ್ನ ಕನಸು ಛಿದ್ರ ಛಿದ್ರ ಆಯ್ತು.ಕೆಲವರು ಮುಲಾಜಿಲ್ಲದೆ ಕೊಡಲ್ಲ ಅಂತಿದ್ರು,ಆಗಾಗಿ ನನಗೆ ಬೇರೆಯವರನ್ನ ಕೇಳೋಕ್ಕೆ ಒಂಥರಾ ಮುಜುಗರ,ಆದರು ಕೆಲವು ಸ್ನೇಹಿತರು ಸ್ವಲ್ಪ ಒತ್ತು ಈಜಾಡಲು ಕೊಡ್ತಿದ್ರು.

ನನ್ನ ಕಷ್ಟ ನೋಡಕ್ಕೆ ಆಗದೆ ನನ್ನ ದೊಡ್ಡಪ್ಪ,ನಮ್ಮ ತೋಟದಲ್ಲಿರುವ ಕಲ್ಲು ಬಾವಿಗೆ ಕರ್ಕಂಡ್ ಹೋಗಿ ನನಗೆ ಈಜು ಕಲ್ಸೋಕ್ಕೆ ಶುರು ಮಾಡಿದ್ರು..ಸುಮಾರು ೭೦-೮೦ ಅಡಿಯ ಬಾವಿ ನಮ್ಮ ತೋಟದಲ್ಲಿರೋದು...ಮೊದ ಮೊದಲು ಉಡುದಾರ ಹಿಡಿದು,ಕಾಲು ಬಡಿಯೋದು ಕೈ ಬಡಿಯೋದು ಎಲ್ಲ ಹೇಳಿ ಕೊಡ್ತಿದ್ರು.ಆಮೇಲೆ ಒಂದೆರಡು ದಿನ ಆದಮೇಲೆ ಕೂದಲು ಹಿಡಿದು ಮೂರ್ನಾಲ್ಕು ಬಾರಿ ಮುಳುಗಿಸಿ ದಮ್ಮಯ್ಯ ಅಂದ್ರು ಕರುಣೆ ತೋರದೆ ನೀರು ಕುಡಿಸಿ ಮೇಲಕ್ಕೆ ಎತ್ತುತ್ತಿದ್ದರು.. ಆಮೇಲೆ ಸೊಂಟಕ್ಕೆ ನಮ್ಮ ಮನೆಯ ಹೋರಿಯ ಹಗ್ಗಗಳನ್ನು ಕಟ್ಟಿ ಮೇಲಿಂದ ನನ್ನನ್ನು ಬಿಸಾಕಿ ಈಜು ಹೊಡೆಯಲು ಹೇಳ್ತಿದ್ರು..ಅವರು ಬಾವಿಯ ಸುತ್ತ ಹಗ್ಗ ಹಿಡಿದು ಸುತ್ತವ್ರು..ಕೊನೆಗೂ ನನಗೆ ಏನೇನೋ ಹರ ಸಾಹಸ ಮಾಡಿ ಈಜು ಕಲ್ಸಿದ್ರು...ನಮ್ಮ ಅಪ್ಪ ಒಂದ್ಸಲ ಬಾವಿಗೆ ಬಿದ್ದಿದ್ದಾಗ ನಮ್ಮ ದೊಡ್ದಪ್ಪನೆ ಮೇಲಕ್ಕೆ ಎತ್ತಿದ್ರಂತೆ..ಆಗಾಗಿ ನನಗೆ ಇವರ ಮೇಲೆ ಸ್ವಲ್ಪ ಧೈರ್ಯ ಇತ್ತು...

ಇನ್ನು ಗಣಪತಿ ಬಿಡೋ ಹಿಂದಿನ ದಿನ ನಂದಿ ಧ್ವಜ ಕುಣಿತ,ಕೆಲೋವೊಮ್ಮೆ ಕೀಲು ಕುದುರೆ ಎಲ್ಲ ಇರ್ತಿತ್ತು...ಎಲ್ಲ ಮನೆಯಲ್ಲೂ ಮತ್ತೆ ಹಬ್ಬ...ಮಾರನೆ ದಿನ ಬೆಳಗ್ಗೆ ೭.೦೦ ಘಂಟೆಗೆ ಮೆರವಣಿಗೆ ಶುರು... ಎಲ್ಲ ಮನೆಯ ಮುಂದೆ ಹೋಗಿ,ಪ್ರತಿ ಮನೆ ಇಂದ ಮಂಗಳಾರತಿ ಆಗಿ ಮುಂದೆ ಸಾಗುತ್ತಿತ್ತು..ನಮ್ಮ ಪಟಾಲಂ ಹುಡುಗರಿಗೆ ಬಣ್ಣ ಎರಚಿಕ್ನ್ದು ಕುಣಿದು ಕೊನೆಗೆ ಬಾವಿಗೆ ಹೋಗಿ ಬೀಳ್ತಿದ್ವಿ..ಯಾರಾದ್ರೂ ಅಪ್ಪಿ ತಪ್ಪಿ ಬಣ್ಣ ಹಚ್ಚಿಸಿಕೊಳ್ಳಲ್ಲ ಅಂದ್ರೆ ಮುಗಿತು ಅವನ ಕಥೆ..ನಾವು ದೊಡ್ಡವರ ಸಹವಾಸಕ್ಕೆ ಹೋಗ್ತಿರ್ಲಿಲ್ಲ,ಒಮ್ಮೆ ಮಾತ್ರ ಒಬ್ಬ ಪುಣ್ಯಾತ್ಮನ ಬಿಳಿ ಅಂಗಿಗೆ ಬಣ್ಣ ಬಿತ್ತು,ಮೆರವಣಿಗೆ ನಡುವೆಯೇ ಅದೆಂಗೆ ಮುಂದಕ್ಕೆ ಹೋಗ್ತಿರಾ,ಅಂತ ಕಿತಾಪತಿ ತೆಗೆದ.ಆಮೇಲೆ ಕೆಲವು ಹಿರಿಯರು ಎಲ್ಲ ಸೇರಿ "ಏನೋ ಮಕ್ಳು,ಆಡ್ತವ್ರೆ.ಹೋಗ್ಲಿ ಬಿಡಪ್ಪ ಅಂತ ಸಮಾಧಾನ ಮಾಡೋಕ್ಕೆ ಹೋದ್ರೆ ಅವರ ಜೊತೆ ಜಗಳಕ್ಕೆ ಬಿದ್ದರು.ಆಮೇಲೆ ಇನ್ನೊಬ್ರು"ಲೋ,ವಂಕ ನಿನ್ನ ಮಗನು ಬಣ್ಣ ಆಡ್ತಾವ್ನೆ,*** ಮುಚ್ಕಂಡು ಹೋಗ್ಲ" ಅಂತ ಬೈದಾಗ ಸುಮ್ನಾದ್ರು.

ಕೊನೆಗೆ ಮೆರವಣಿಗೆ ಮುಗ್ಸಿ ಬಾವಿ ಹತ್ತಿರ ಬಂದು ಬೆಲ್ಲದ ಹಚ್ಚಿನ ಮಣೆ(ತೆಪ್ಪದ ರೀತಿಯಲ್ಲಿ) ಮೇಲೆ ಗಣಪನ್ನ ಕೂರ್ಸಿ ಎರಡೂ ಕಡೆ ಹಗ್ಗ ಹಾಕಿ ಎಳೆದು ಬಾವಿ ಮಧ್ಯಕ್ಕೆ ತಂದು ಜೈ ಗಣಪ ಅಂತ ಕೂಗಿ ಆ ಮಣೆಯನ್ನು ಬಲಗಡೆಗೆ ತಿರುಗಿಸಿ ವಿಸರ್ಜನೆ ಮಾಡ್ತಿದ್ರು... ಆ ಸಮಯದಲ್ಲಿ ಯಾರಾದ್ರೂ ಈಜು ಬರುವವರು ಬಾವಿಗೆ ಇಳಿಯದೆ ಅವರ ಕಥೆ ಮುಗಿಯಿತು.ಅವರಾಗೆ ಇಳಿದರೆ ಬಚಾವು,ಇಲ್ಲ ಅಂದ್ರೆ ಉಟ್ಟ ಬಟ್ಟೆಯಲ್ಲೇ ಅವರನ್ನ ಬಾವಿಗೆ ಬಿಸಾಡೋ ಪದ್ಧತಿ...ಅಲ್ಲಿ ಹೋಗ್ಬೇಕು,ಇಲ್ಲಿಗೆ ಹೋಗ್ಬೇಕು,ಜಪ್ಪಯ್ಯ,ದಮ್ಮಯ್ಯ ಅಂದ್ರು ಯಾರೂ ಕೇಳ್ತಿರಲಿಲ್ಲ..ಬೇಕಾದ್ರೆ ಬಟ್ಟೆ ಚೇಂಜ್ ಮಾಡ್ಕಂಡ್ ಹೋಗು ಅಂತ ಹೇಳಿ ಸೀದಾ ಬಾವಿಗೆ ಬಿಸಾಕೋದೇ...ಅವರು ದೊಡ್ಡವರಾದರು ಪರವಾಗಿಲ್ಲ,ಚಿಕ್ಕವರಾದ್ರು ಪರವಾಗಿಲ್ಲ....

ಅದು ಅಲ್ದೆ ಯಾವತ್ತಾದ್ರು ಒಂದು ದಿನ ಊರಿನ ದೇವಸ್ಥಾನದ ಹತ್ತಿರ ಟಿವಿ ಮತ್ತೆ ವಿಸಿಪಿ,ವಿಸಿಡಿ ತಂದು ರಾತ್ರಿ ಇಡೀ ಒಂದಷ್ಟು ಚಲನಚಿತ್ರಗಳನ್ನು ನೋಡೋ ಕಾರ್ಯಕ್ರಮಗಳು ಇರ್ತಿದ್ವು...ಆಗಿನ್ನೂ ವಿಸಿಡಿ ಕಾಲ..ಇನ್ನು ಸಿಡಿ ಎಲ್ಲ ಇರ್ಲಿಲ್ಲ ಅವಾಗ...

ಹೀಗೆ ಸಾಗ್ತಿತ್ತು ನಮ್ಮೂರಿನ ಗಣಪತಿ ಹಬ್ಬದ ಪುರಾಣ...



                      ಎಲ್ಲರಿಗೂ ಅವ್ವ-ಮಗ ಒಳ್ಳೇದ್ ಮಾಡ್ಲಿ... ಹಬ್ಬದ ಶುಭಾಶಯಗಳು..

                                 ಅವಧಿಯಲ್ಲಿ ಈ ಲೇಖನ: ನಮೂರ್ ಗಣಪ್ಪನ ಪುರಾಣ...

Photo-Courtesy:Intenet

Monday, September 3, 2012

ನೆನಪಿನ ಬುತ್ತಿಯಲಿ "ಆ ದಿನಗಳು"

೫ನೆ ಕ್ಲಾಸ್ ತನಕ ಹಾಸನದಲ್ಲಿ ಓದಿ,ನಂತರ ಕಾರಣಾಂತರಗಳಿಂದ ಮರಳಿ ಊರಿಗೆ ಬರಬೇಕಾಯಿತು.ನಂತರ ೨ ವರ್ಷ ಹಳೇಬೀಡಿನಲ್ಲಿ ಓದಿ,ಹೈ ಸ್ಕೂಲಿಗೆ ,ಮತ್ತೆ ಬೇರೆ ಊರಿಗೆ ಸೇರಬೇಕಾದ ಪರಿಸ್ಥಿತಿ ಬಂತು.ಮತ್ತೆ ಹಾಸನವೋ ಅಥವಾ ಮಂಗಳೂರು ಸುತ್ತ ಮುತ್ತ ಯಾವುದಾದರು ವಸತಿ ಶಾಲೆಗೋ ಎಂಬ ಗೊಂದಲದಲ್ಲಿದ್ದಾಗ ಕಡೆಯದಾಗಿ ಬೇಲೂರಿಗೆ ಸೇರುವುದು ಎಂದು ನಿಶ್ಚಯವಾಯಿತು.ಮನೆಯಲ್ಲಿ ಒಮ್ಮತದ ತೀರ್ಮಾನವೂ ಆಯಿತು.ನಮ್ಮ ಕ್ಲಾಸಿನಿಂದ ನಾವು ೪ ಜನ ಒಂದು ಶಾಲೆಗೆ,ಇನ್ನು ೪ ಜನ ಇನ್ನೊಂದು ಶಾಲೆಗೆ ಸೇರಿಕೊಂಡೆವು.ಅಲ್ಲಿವರೆಗೂ ಕೇವಲ ಸ್ಕೂಲು,ಮನೆ,ಹೊಲ,ತೋಟ ಇವಷ್ಟೇ ನಮ್ಮ ಪ್ರಪಂಚ ಆಗಿತ್ತು.ಅದು ಬಿಟ್ಟರೆ ಆಗೊಮ್ಮೆ ಹೀಗೊಮ್ಮೆ ಹಳೆಬೀಡಿನ ಹೊಯ್ಸಳೇಶ್ವರ ದೇವಸ್ಥಾನ ಅಥವಾ ಜೈನ ಬಸದಿಗಳಿಗೆ ನಾವೆಲ್ಲಾ ಹೋಗುತ್ತಿದ್ದೆವು.ಏನೇ ಮಾಡಬೇಕೆಂದರೂ,ಎಲ್ಲಿಗೆ ಹೋಗಬೇಕೆಂದರೂ ನಮ್ಮೆಲ್ಲರ ಮನೆಯಿಂದ ಅನುಮತಿ ಬೇಕಿತ್ತು.ಸ್ವತಂತ್ರ ಸ್ವಲ್ಪ ಕಡಿಮೆಯೇ ಇತ್ತು ಅನ್ನಬಹುದು.ಯಾವಾಗ ನಾವೆಲ್ಲರೂ ಬೇಲೂರಿಗೆ ಹೈ ಸ್ಕೂಲಿಗೆ ಸೇರಿಕೊಂಡೆವೋ ಆಗ ಸ್ವಲ್ಪ ಸ್ವತಂತ್ರವಾಗಿ ,ಸ್ವಚ್ಚಂದವಾಗಿ ಓಡಾಡ ತೊಡಗಿದೆವು.ಮನೆಗೆ ಲೇಟಾಗಿ ಹೋದರೆ ಯಾವಗಾಲೋ ರೆಡಿಮೇಡ್ ಉತ್ತರ ಇರುತ್ತಿತ್ತು."ಬಸ್ ಲೇಟ್,ನಾವೇನ್ ಮಾಡಕ್ಕಾಗುತ್ತೆ" ಅನ್ನೋದು.ಒಟ್ಟಿನಲ್ಲಿ ಅಲ್ಲಿವರೆಗೂ ಸರಿಸೃಪಗಳಂತಿದ್ದ ನಾವುಗಳು ಒಮ್ಮೆಲೇ ಬಾಲ ಬಿಚ್ಚಿದ ವಾನರರಂತೆ ಆದೆವು.

ಪ್ರತಿ ದಿನ ಬೆಳಗ್ಗೆ ೮.೦೦ ಘಂಟೆಗೆ ನಮ್ಮ ಬಸ್ಸು.ಅಷ್ಟರೊಳಗೆ ನಮ್ಮ ಊರಿಂದ ಸೈಕಲ್ಲಿನಲ್ಲಿ ಹಳೇಬೀಡಿಗೆ ಹೋಗಿ,ಅಲ್ಲಿ ಪರಿಚಯದವರ ಅಂಗಡಿಯ ಮುಂದೆ ಅದನ್ನು ನಿಲ್ಲಿಸಿ ಹೋಗಬೇಕಾಗಿತ್ತು.ಮತ್ತೆ ಅರ್ಧ ಘಂಟೆ ಪ್ರಯಾಣದ ನಂತರ ಬೇಳೂರು ತಲುಪುತ್ತಿದ್ದೆವು.ಅಲ್ಲಿ ಬಸ್ ನಿಲ್ದಾಣದಿಂದ ಸುಮಾರು ಒಂದೂವರೆ ಕಿಲೋ ಮೀಟರ್ ದೂರದಲ್ಲಿ ನಮ್ಮ ಶಾಲೆ... ನಮ್ಮೆದುರಿಗಿನ ಶಾಲೆಗೆ ನಮ್ಮ ಕ್ಲಾಸಿನ ಇನ್ನು ೪ ಜನ ಸೇರಿದ್ದರು..ನಾವೆಲ್ಲರೂ ಪ್ರತಿ ದಿನ ಒಟ್ಟಿಗೆ ಪ್ರಯಾಣ,ಮತ್ತೆ ಶಾಲೆಯ ಹತ್ತಿರ ಬಂದಾಗ ಅವರು ಅವ್ರ ಸ್ಕೂಲಿನ ಕಡೆ,ನಾವು ನಮ್ಮ ದಾರಿ ಹಿಡಿದು ಹೋಗುತ್ತಿದ್ದೆವು.
 
ಪ್ರತಿ ಸೋಮವಾರ ಸಂತೆ ಮುಗಿಸಿ ಕುಡಿದು ಬರುವವರ ಜೊತೆ ಜಗಳ ಕಾಯುತ್ತಿದ್ದದ್ದು,ಪಾಸ್ ಇರುವವರು ನಿಂತ್ಕೊಂಡು ಟಿಕೆಟ್ ಇರುವವರಿಗೆ ಸೀಟ್ ಬಿಡಿ ಅನ್ನುವ ಕಂಡಕ್ಟರ್ ಗಳಿಗೆ ನಾವು ಬಡ್ಡಿ ದುಡ್ಡಲ್ಲಿ ಓಡಾಡುತ್ತಿದ್ದೇವೆ ಅಂತ ದಬಾಯಿಸುತ್ತಿದ್ದದ್ದು(ಯಾರಾದರು ವಯಸ್ಸಾದವರು ಬಂದ್ರೆ ಸೆಟ್ ಬಿಟ್ಟು ಕೊಡುವ ಸೌಜನ್ಯ ನಮ್ಮೆಲ್ಲರಲ್ಲೂ ಇತ್ತು,ಆದರೆ ಬೇರೆಯವರಿಗೆ ಅಷ್ಟು ಸುಲಭವಾಗಿ ಬಿಡುತ್ತಿರಲಿಲ್ಲ), ಬೇರೆಯವರು ನಮ್ಮನ್ನು ಹೊಡೆಯಬೇಕು ಅನ್ನುವಷ್ಟು  ಸಿಟ್ಟು ಬರುವ ಹಾಗೆ ಜೋರು ಜೋರಾಗಿ ಕೂಗಾಡುತ್ತಿದ್ದದ್ದು,ಗಲಾಟೆ ಮಾಡುತ್ತಿದ್ದದ್ದು..ಹೀಗೆ ಒಂದೇ ಎರಡೇ ನಮ್ಮ ಆಟಗಳು...
ಒಟ್ಟಿನಲ್ಲಿ ದಿನೇ ದಿನೇ ನಮ್ಮ ಬಾಲ ಬೆಳೆಯುತ್ತಲೇ ಹೋಯಿತು...
 
ಆ ಸಮಯದಲ್ಲಿ  ನಡೆದ ಕೆಲವು ಘಟನೆಗಳನ್ನು ಹಂಚಿ ಕೊಳ್ಳಬೇಕು ಅನ್ನೋದು ನನ್ನ ಬಯಕೆ.

ಶಿವಪ್ರಸಾದ ಅಲಿಯಾಸ್ ಶುಕ್ಲಾಚಾರಿ ಕಲ್ಲು ಹಿಡಿದು ನಿಂತಿದ್ದು:

ಹಳೇಬೀಡಿನಿಂದ ಬೇಲೂರಿಗೆ ೧೬ ಕಿಲೋಮೀಟರ್.ಮುಂಚೆ ಎಕ್ಸ್ ಪ್ರೆಸ್ ಬಸ್ಸಿನಲ್ಲಿ ಹೆಬ್ಬಾಳು ಅನ್ನುವ ಗ್ರಾಮದಲ್ಲಿ ಮಾತ್ರ ನಿಲುಗಡೆ ಇತ್ತು.ಅದು ಹಳೇಬೀಡಿನಿಂದ ೯ ಕಿ.ಮಿ ದೂರದಲ್ಲಿದೆ.. ಕೆಲವು ದಿನದ ನಂತರ ಫಾರಂ ಗಡಿ(ಹಳೇಬೀಡಿನಿಂದ ೪ ಕಿ.ಮಿ) ಅನ್ನುವ ಕಡೆ ನಿಲುಗಡೆ ಕೊಡಬೇಕಾಗಿ ಸುತ್ತೋಲೆ ಹೊರಡಿಸಲಾಯಿತು.ನಮ್ಮ ಈ ಕಥೆಯ ಹೀರೋ ಶಿವಪ್ರಸಾದ ಆ ಗಡಿಯಿಂದ ೨ ಕಿ.ಮಿ ದೂರದ ಊರಿನಿಂದ ಬರುತ್ತಿದ್ದ.ಹಳೇಬೀಡು ಬೇಲೂರಿನ ಮಧ್ಯದಲ್ಲೇ ಅವನ ಉರು ಇತ್ತಾದರೂ ಅಲ್ಲಿ ನಿಲುಗಡೆ ಇಲ್ಲದ ಕಾರಣ,ಮತ್ತು ಯಾವಾಗಲು ಗ್ರಾಮೀಣ ಬಸ್ಸನ್ನೇ ನೆಚ್ಚಿಕೊಂಡು ಇರಲು ಸಾಧ್ಯ ವಾಗದೆ ಪ್ರತಿ ದಿನ ತನ್ನ ತಂಗಿಯೊಡನೆ ಹಳೇಬೀಡಿಗೆ ಸೈಕಲ್ಲಿನಲ್ಲಿ ಬಂದು ಅಲ್ಲಿಂದ ಬಸ್ಸು ಅತ್ತುತ್ತಿದ್ದ.ಯಾವಾಗ ಆ ಫಾರಂ ಗಾಡಿಯಲ್ಲಿ ನಿಲುಗಡೆ ಕೊಡಬೇಕು ಅಂತ ಘೋಷಣೆ ಆಯಿತೋ,ಆಗಿನಿಂದ ಅಲ್ಲಿಗೆ ಬಂದು ಬಸ್ಸು ಏರಲು ಶುರು ಮಾಡಿದ.

ದುರದೃಷ್ಟವಶಾತ್ ಕೆಲವು ಚಾಲಕರು ಮೊದಮೊದಲು ಅಲ್ಲಿ ನಿಲ್ಲಿಸಲು ಸಪ್ಪೆ ಮೊರೆ ಮಾಡುತ್ತಿದ್ದರು.ಈ ಪುಣ್ಯಾತ್ಮ ಶುಕ್ಲಾಚಾರಿಗೆ ಅವರ ನೆಂಟರೊಬ್ಬರು ಸಾರಿಗೆ ಇಲಾಖೆಯಲ್ಲಿ ಇದ್ದರು ,ಅವರ ಮುಖಾಂತರ ಈ ವಿಷಯ ತಿಳಿದು,ಸುತ್ತೋಲೆ ಹೊರಡಿಸಿದ ಮಾರನೆಯ ದಿನವೇ ಅಲ್ಲಿ ಬಸ್ಸಿಗಾಗಿ ಕಾದಿದ್ದ.ನಾವೆಲ್ಲರೂ ಇವನು ಬಹುಷಃ ಇವತ್ತು ರಜ ಹಾಕಿದ್ದಾನೆ ಅಂದುಕೊಂಡು ಸುಮ್ಮನಿದ್ದೆವು.ನೋಡಿದರೆ ಫಾರಂ ಗಡಿ ನಿಲ್ದಾಣದಲ್ಲಿ ಕೈ ಅಡ್ಡ ಹಿಡಿದು ಬಸ್ಸು ನಿಲ್ಲಿಸಿ ಅಂತ ನಿಂತಿದ್ದ.ನಮ್ಮ ಡ್ರೈವರ್ ಮುಕುಂದಪ್ಪ ಆಗಲ್ಲ  ಆಗಲ್ಲ ಅಂತ ಕೈ ಸನ್ನೆ ಮಾಡಿ ಹೊರಟ.ಸರಿ ಹಿಂದೆ ಯಿಂದ ಯಾವುದೋ ಟೆಂಪೋಗೆ ಬಂದ ಅನ್ನಿಸುತ್ತೆ,ಸಂಜೆ ಮತ್ತೆ ಅದೇ ಬಸ್ಸಿಗೆ ವಾಪಸ್ ಬರಬೇಕಾದರೆ ಬೇಲೂರು ಬಸ್ ಸ್ಟ್ಯಾಂಡ್ನಲ್ಲೆ ಜಗಳ ತೆಗೆದ."ಫಾರಂ ಗಾಡಿಯಲ್ಲಿ ನಿಲ್ಲಿಸಬೇಕು ಅಂತ circulation ಇದೆ,ನೀವು ನೋಡಿದ್ರೆ ಇವತ್ತು ಬೆಳಗ್ಗೆ ನಿಲ್ಲಿಸಲಿಲ್ಲ,ಇನ್ನು ಮುಂದೆ ಹೀಗೆ ಮಾಡಿದ್ರೆ ಸರಿ ಇರಲ್ಲ ನೋಡಿ,ಇವಾಗ್ಲು ಅಲ್ಲಿ ಸ್ಟಾಪ್ ಕೊಡ್ಬೇಕು " ಅಂತ ಡ್ರೈವರ್,ಕಂಡಕ್ಟರ್ ಇಬ್ಬರಿಗೂ ವಾರ್ನಿಂಗ್ ಕೊಟ್ಟು ಬಸ್ಸು ಹತ್ತಿದ.ನಾವೆಲ್ಲಾ ಸುಮ್ಮನೆ ನೋಡ್ತಾ ಇದ್ವಿ.ಅವತ್ತು ಸಂಜೆ ವಾಪಸ್ ಹೋಗಬೇಕಾದ್ರೆ ಫಾರಂ ಗಡಿ ಹತ್ತಿರ ಬಂದಾಗ ಮತ್ತೆ ಸ್ಟಾಪ್ ಕೊಡಲಿಲ್ಲ."ಯಾಕ್ರೀ ಸ್ಟಾಪ್ ಕೊಡಲ್ಲ ನೀವು,ಇವಾಗ ನಿಲ್ಲಿಸದೆ ಇದ್ರೆ ನಾಳೆ ನೀವು ಈ ರೂಟಲ್ಲಿ ಬರೋ ತಾಕತ್ತು ಇದ್ದೀಯ ನಿಮಗೆ" ಅಂತ ದಬಾಯಿಸಿದ.
"ನಿಲ್ಲಿಸಲ್ಲ ಕಣೋ ಅದೇನ್ ಕಿತ್ಕೊತಿಯ,ಕಿತ್ಕೊ" ಅಂದ ಡ್ರೈವರ್.
"ನನ್ನತ್ರ ಡಿಪೋ ಇಂದ ತಂದಿರೋ ಲೆಟರ್ ಇದೆ,ನಿಮ್ಮ ಮೇಲೆ ಕಂಪ್ಲೇಂಟ್ ಕೊಡ್ತೀನಿ" ಅಂದ ಇವ್ನು.
ನಾವೆಲ್ಲಾ ಸೇರಿ,ಇವತ್ತು ಅವನು ಸೈಕಲ್ ತಂದಿಲ್ಲ,ಹಳೇಬೀಡಿಗೆ ಅವನು ಬಂದ್ರೆ,ನಡೆದು ಕೊಂಡು ಅಥವಾ ಆಟೋಗೆ ಬರಬೇಕು,ಇಲ್ಲೇ ಸ್ಟಾಪ್ ಕೊಟ್ಟು ಬಿಡಿ ಇವತ್ತೊಂದಿನ ಅನ್ದ್ವ್ವಿ,ಸರಿ ಅಂತ
ಸುಮಾರು ಅರ್ಧ ಕಿ.ಮಿ ಹೋದ ಮೇಲೆ ಬಸ್ಸು ನಿಲ್ಲಿಸಿ "ಇಳ್ಕೋ ಹೋಗು,ಜಾಸ್ತಿ ಮಾತಡಬೇಡ" ಅಂತ ಡ್ರೈವರ್,ಕಂಡಕ್ಟರ್ ಇಬ್ರು ಹೇಳಿದ್ರು.
"ನಾಳೆ ನಿಲ್ಲಿಸದೆ ಇದ್ರೆ ಕಲ್ಲು ಹೊಡಿತೀನಿ,ನನ್ನ ಹತ್ರ ಲೆಟರ್ ಕೂಡ ಇದೆ" ಅಂತ ಹೇಳಿ ತನ್ನ ತಂಗಿ ಜೊತೆ ಇಳಿದು ಹೋದ.
ಇಳಿಬೇಕಾದರೆ ಅಪ್ಪ,ಅಕ್ಕ,ಅವ್ವ ಎಲ್ಲರನ್ನು ನೆನಪಿಸಿ ಹೋಗಿದ್ದ ಅಸ್ಸಾಮಿ.ಮಾರನೆ ದಿನ ಬಸ್ಸು ನಿಲ್ಲಿಸದೆ ಇದ್ದರೆ ಇವನು ಖಂಡಿತ ಕಲ್ಲು ಹೊಡಿತಾನೆ ಅನ್ನುವುದರಲ್ಲಿ ಯಾವುದೇ ಸಂಶಯ ಇರಲಿಲ್ಲ..ಯಾಕಂದ್ರೆ ಬಹಳ ಭಂಡ ಇವನು .. ೭ನೆ  ಕ್ಲಾಸ್  ನಲ್ಲಿದ್ದಾಗ ಒಮ್ಮೆ ಕನ್ನಡ ಪೀರಿಯಡ್ ನಲ್ಲಿ "ಚಕ್ರವ್ಯೂಹ ರಚಿಸಿದ್ದು ಯಾರು" ಎಂದು ಇವನಿಗೆ ಪ್ರಶ್ನೆ ಕೇಳಲಾಗಿತ್ತು,ಉತ್ತರ ಗೊತ್ತಿಲ್ಲದ ಇವನಿಗೆ,ಅವನ ಪಕ್ಕದಲ್ಲಿದ್ದ ವಿನೋದ್ ಎಂಬುವನು "ಶುಕ್ಲಾಚಾರಿ" ಅಂತ ತಪ್ಪು ಉತ್ತರ ಹೇಳಿಕೊಟ್ಟಿದ್ದ,ಇವನು ಅದನ್ನೇ ಮೇಡಂ ಹತ್ತಿರ ಒದರಿದಾಗ, ಅವರು  ಬೈದು ,"ದ್ರೋಣಾಚಾರ್ಯ" ಅನ್ನೋದು ಗೊತಿಲ್ವ ನಿನಗೆ ಅಂದಿದ್ದರು.
Immediately,he reacted.ಸರಿಯಾಗಿ ಬೆನ್ನಿಗೆ ಬಿತ್ತು ನೋಡಿ ವಿನೋದನಿಗೆ  ಶಿವ ಪ್ರಸಾದನಿಂದ ಪ್ರಸಾದ(ಏಟು) ,ಮೇಡಂ ಮುಂದೇನೆ...

 ಈ ನನ್ ಮಗನ ಹತ್ರ ಯಾವ್ ಲೆಟರ್ರೋ,ಅದೇನ್ ಕಥೆನೋ ಅಂತ ನಾವು ಯೋಚಿಸ್ಕೊಂಡು,ಅಲ್ಲ ಈ ಬಡ್ಡಿ ಮಗ ಕಲ್ಲು ಹೊಡಿತೀನಿ ಅಂತಾನಲ್ಲ,ನಿಜವಾಗಲು ಇವನಿಗೆ ಅಷ್ಟು ಮೀಟರ್ ಇದ್ಯಾ ಅಂತ ಯೋಚಿಸ್ತಾ ಮಾರನೆ ದಿನ ಬಂದ್ರೆ,ಮತ್ತೆ ಹಳೇಬೀಡಿನಲ್ಲಿ ಬಸ್ ಹತ್ತಲಿಲ್ಲ..ಅಲ್ಲೇ ಫಾರಂ ಗಾಡಿಯಲ್ಲಿ ನಿಂತಿದ್ದ.ಹಿಂದಿನ ದಿನ ಹೇಳಿದ ಹಾಗೆ,ಎಡಗೈಯಲ್ಲಿ ಒಂದು ಲೆಟರ್,ಬಲಗೈಯಲ್ಲಿ ಒಂದು ದಪ್ಪ ಕಲ್ಲು ಹಿಡಿದು ನಿಂತಿದ್ದ.ಜೊತೆಗೆ ಅವನ ತಂಗಿ ಬಿಟ್ಟರೆ ಇನ್ನ್ಯಾರು ಇರಲಿಲ್ಲ ಅಲ್ಲಿ.ನಾವು ಯಾವಾಗಲು ಮುಂದಿನ ಸೀಟಿನಲ್ಲಿ ಕೂರುತ್ತಿದ್ದರಿಂದ ಒಂದು ರೀತಿ ಭಯವೂ ಶುರು ಆಯಿತು.ಅಪ್ಪಿ ತಪ್ಪಿ ಅವನು ಕಲ್ಲು ಹೊಡೆದರೆ ಎಲ್ಲಿ ನಮ್ಮ ಮೇಲೆ ಬೀಳುತ್ತೋ ಅಂತ.
ಕೊಪಗ್ರಸ್ಥನಾಗಿ ತನ್ನ ಕೈಯನ್ನು ಮೇಲಕ್ಕೆ ಎತ್ತಿದಾಗ ನಮ್ಮ ಉದ್ದ ಮೂತಿ ಮುಕುಂದನಿಗೆ ಗಾಬರಿ ಆಗಿ,ಬಸ್ಸು ನಿಲ್ಲಿಸಿದ.ಸರಿ ಬಸ್ಸು ಹತ್ತಿದ ಕೂಡಲೇ ಆ ಲೆಟರ್ ಅನ್ನು ಕಂಡಕ್ಟರ್ ಮತ್ತು ಡ್ರೈವರ್ ಇಬ್ಬರಿಗೂ ತೋರಿಸಿ,"ಇಲ್ಲಿ ನೋಡಿ,ಡಿಪೋ ಇಂದ ತಂದಿದ್ದೀನಿ" ಅಂತ ತೋರಿಸಿದ.ಅವಾಗ,ಹಿಂದಿನ ದಿನ ಸ್ವಲ್ಪ ಗಾಂಚಲಿ ಮಾಡಿದ್ದ ಡ್ರೈವರ್ ಮತ್ತು ಕಂಡಕ್ಟರ್ ಇಬ್ರೂ ಸುಮ್ಮನಾದರು.
ಅವತ್ತಿನಿಂದ ಅವರು ಅಲ್ಲಿ ನಿಲ್ಲಿಸಲು ಶುರು ಮಾಡಿದರು.ಆ ಬಸ್ಸು ಅರಸೀಕೆರೆ ಡಿಪೋಗೆ ಸೇರಿದ್ದು,ಮತ್ತು ಅವರು ಅಲ್ಲಿಂದ ಪ್ರತಿ ದಿನ ಬೆಳಗ್ಗೆ ೫.೩೦ಕ್ಕೆ ಹೊರಡುವುದು,ಅಲ್ಲದೆ  ಸಂಜೆ ತಲುಪುವುದು ೬.೩೦ಕ್ಕೆ.ಆದ್ದರಿಂದ ಅವರಿಗೆ ಆ ಸುತ್ತೋಲೆ ತಲುಪಿರಲಿಲ್ಲ,ಮತ್ತೆ ೨-೩ ದಿನದ ನಂತರ ಬೇರೆ ಬಸ್ಸಿನ ಚಾಲಕರು,ನಿರ್ವಾಹಕರು ವಿಷಯ ತಿಳಿಸಿದ್ದರಿಂದ ಅವರಿಗೆ ಸ್ವಲ್ಪ ತಡವಾಗಿ ವಿಷಯ ತಿಳಿಯಿತು ಅಷ್ಟೇ.


ಸರಿ ಅವತ್ತು ಬಸ್ಸು ಇಳಿದು ಶಾಲೆಯ ಕಡೆ ಹೆಜ್ಜೆ ಹಾಕುವಾಗ,ನಮಗೆ ಈ ಶುಕ್ಲಾಚಾರಿ  ಹೀರೋ ಆಗಿ ಬಿಟ್ಟಿದ್ದ..ನಮಗೆ ದಾರಿಯಲ್ಲಿ ಹೋಗುವಾಗ,ಅದು ಇದು ಭೊಗಳೆ ಹೊಡೆಯಲು ಶುರು ಮಾಡಿದ"ಇವತ್ತು,ಆ **ಮಕ್ಳು ನಿಲ್ಲಿಸದೆ ಹೋಗಿದ್ರೆ,ತೋರಿಸ್ತಿದ್ದೆ ಅವ್ರಿಗೆ,ನಾನ್ ಏನು ಅಂತ" ಅಂದ.ನಾವೆಲ್ಲಾ ಸೇರಿ,"ನೆಡ್ಯಲ್ಲೋ ಮುಚ್ಕಂಡು,ನಿನ್ ಬ್ಯಾಳೆ ಗೊತ್ತಿಲ್ವ ನಮಗೆ" ಅನ್ದ್ವ್ವಿ."ಥೋ ಅವರವ್ವನ್,ಆ ನನ್ ಮಕ್ಳು ನಾಳೆ ಈ ರೂಟಲ್ಲಿ ಬರಕ್ಕೆ ಆಗ್ತಿತ್ತೇನ್ಲ ಗಿರಿಯ,ಬಚಾವಾದರು " ಅಂತ ತಾನು ಏನೋ ಸಾಧಿಸಲು ಹೊರಟಿದ್ದೆ ಅನ್ನುವ ಹಾಗೆ ಬಡಾಯಿ ಕೊಚ್ಚಿಕೊಂಡ.ಅವನ ಕೆಲವು ಮಾತುಗಳು ಸ್ವಲ್ಪ ಅತಿಶಯೋಕ್ತಿ ಆದರೂ ನಾವೆಲ್ಲಾ ಕೇಳ್ಕೊಂಡು ಸುಮ್ಮನಾದ್ವಿ.
 
ಪಾಸ್ ಕಳೆದು ಕೊಂಡು ಒಂದು ವಾರ ಬಿಟ್ಟಿ ಓಡಾಡಿದ್ದು:
 
ಬಹುಷಃ ಒಂಬತ್ತನೇ ತರಗತಿಯಲ್ಲಿದ್ದಾಗ ಅನ್ಸುತ್ತೆ,ಜನವರಿ ತಿಂಗಳು ಇರಬಹುದು.ಎಂದಿನಂತೆ ಸಂಜೆ ಶಾಲೆ ಇಂದ ಹೊರಟು ಬಸ್ಸು ಏರಿ ಹೊರಟೆವು,ನೋಡಿದರೆ ನನ್ನ ಜೇಬಲ್ಲಿ ಪರ್ಸ್ ಕಾಣೆ,ಪರ್ಸ್ ಅಂದರೆ ಜೊತೆಗೆ ನನ್ನ ಬಸ್ ಪಾಸ್ ಕೂಡ ಮಂಗಮಾಯ,ಅಲ್ಲದೆ ಹತ್ತು ರುಪಾಯಿ ದುಡ್ಡು ಬೇರೆ.ನನಗೆ ಗಾಬರಿ ಶುರು ಆಯಿತು,ಥೋ ಏನ್ ಮಾಡದಪ್ಪ ಇವಾಗ,ಇನ್ನು ೩ ತಿಂಗಳು ಇದೆ ನಮ್ಮ ವಾರ್ಷಿಕ ಪರೀಕ್ಷೆ ಮುಗಿಯೋಕೆ,ಅಲ್ಲದೆ ಈ ಸಮಯದಲ್ಲಿ ಮತ್ತೆ ಪಾಸ್ ಮಾಡಿಸಿಕೊಳ್ಳಲು  ಆಗಲ್ಲ,ದುಡ್ಡು ಕೊಟ್ಟು ಓಡಾಡಬೇಕು,ಅಪ್ಪನ ಹತ್ತಿರ ಪಾಸ್ ಕಳ್ಕೊಂಡೆ ಅಂತ ಅಂದ್ರೆ ಬಯ್ಗುಳ,ಇದೆಂತ ಪರಿಸ್ಥಿತಿ ಬಂತು ನಂಗೆ ಅಂತ ಯೋಚನೆ ಮಾಡ್ತಾ,ನನ್ನ ಸ್ನೇಹಿತರ ಹತ್ರ ವಿಚಾರ ಮಾಡಿದಾಗ,"ಲೋ ಮಗಾ,ನೋಡೋ ಬೆಳಗ್ಗೆ ಹೆಂಗೂ ಮುಕುಂದನ ಬಸ್ಸಿಗೆ ಬರೋದು,ಆ ಕಂಡಕ್ಟರ್ ನಮ್ಮನ್ನ ಯಾವತ್ತೂ ಪಾಸ್ ತೋರ್ಸಿ ಅಂತ ಕೇಳಲ್ಲ" ಅಂತ ಒಬ್ಬ ಅಂದ್ರೆ,ಇನ್ನೊಬ್ಬ",ಸಂಜೆ ಬೇರೆ ಬೇರೆ ಗಾಡಿಗೆ ಬಂದ್ರು ಕೂಡ,ಕೆಲವರು ಸ್ಟೂಡೆಂಟ್ ಹತ್ರ ಪಾಸ್ ಇರುತ್ತೆ ಅಂತ ಕೇಳೋ ಗೋಜಿಗೆ ಹೋಗಲ್ಲ,ಇನ್ನು ಕೆಲವರು ಲಾಸ್ಟ್ ೩ ನಂಬರ್ ಕೇಳಿ ಬರ್ಕೊತಾರೆ,ಹಂಗು ಹಿಂಗು ಕೆಲವು ಪಿರ್ಕಿ ನನ್ ಮಕ್ಳು ಕೇಳ್ತಾರೆ,ಆಗ ಹಾಲ್ಫ್(ಅರ್ಧ) ಟಿಕೆಟ್ ತಗಂಡ್ರೆ ಆಯ್ತು ಬಿಡು" ಅಂದ.
ಬಹುತೇಕ ಎಲ್ಲಾ ಕಂಡಕ್ಟರ್ ಗಳು ಪರಿಚಯ ಇದ್ದ ಕಾರಣ ನನಗೆ ಅಷ್ಟು ಚಿಂತೆ ಆಗಲಿಲ್ಲ.ಇನ್ನೊಬ್ಬ"ಲೋ ಶನಿವಾರ ಧರ್ಮಸ್ಥಳ ಗಾಡಿಗೆ ಬರಬೇಕು,ಆ ಡಿಪೋ ಕಂಡಕ್ಟರ್ ಗಳು ತಲೆ ಪ್ರತಿಷ್ಠೆಗಳು,ಅವತ್ತು ಒಂದು ದಿನ  ಟಿಕೆಟ್ ತಗಳಲೇ ಬೇಕು " ಅಂದ.ಅಷ್ಟರಲ್ಲಿ ನಮ್ಮ ಜೂನಿಯರ್ ಒಬ್ಬ"ಅಣ್ಣ,ಸಂಜೆ ಲೋಕಣ್ಣನ ಗಾಡಿಗೆ ಹೋದ್ರೆ ಆಯಿತು,ಅವರಿಗೆ ಪಾಸ್ ಕಳ್ದು ಹೋಗಿದೆ ಅಂದ್ರು ಕೂಡ ನಡೆಯುತ್ತೆ,ಯಾವ್ದಾದ್ರು ಹಳೆ ಟಿಕೆಟ್ ಕೊಡ್ತಾರೆ' ಅಂದ,ಸ್ನೇಹಿತರ ಅಭಯ ನುಡಿಗಳಿಂದ ನನಗೆ ಗಜ ಬಲ ಬಂದ ಹಾಗೆ ಆಯ್ತು.ಅವತ್ತು ಮನೆಗೆ ಹೋಗಿ ಅಮ್ಮನ ಹತ್ರ ಹಿಂಗಿಂಗೆ ಕಳೆದು ಹೋಗಿದೆ,ತಾವು ದೊಡ್ಡ ಮನಸ್ಸು ಮಾಡಿ ತಮ್ಮ ಯಜಮಾನರಿಗೆ ಈ ವಿಷಯ ತಿಳಿಸದ ಹಾಗೆ ಇನ್ನೆರಡು ತಿಂಗಳು  ಸ್ವಲ್ಪ ದುಡ್ಡು ಕೊಡಿ,ಟಿಕೆಟ್ ತಗಂಡು ಓಡಾಡಬೇಕು ಆಗಾಗಿ,ಹಾಗೆ ಸ್ವಲ್ಪ ಸೀಕ್ರೆಟ್ ಆಗಿ ಇಡಿ ಈ ವಿಷಯವನ್ನು ಅಂತ ಹೇಳಿದ್ದೆ.
 
ಇದೆ ರೀತಿ ಸುಮಾರು 2-3 ದಿನ ಪಾಸು ಇಲ್ಲದೆ,ಟಿಕೆಟು ಇಲ್ಲದೆ  ಓಡಾಡಿದೆ,ಭಾನುವಾರ ಕಳೆಯಿತು ಸೋಮವಾರ ಬಂತು,ಅವತ್ತು ಬೇಲೂರಿನಲ್ಲಿ ವಾರದ ಸಂತೆ,ಪ್ರತಿ ಸೋಮವಾರ ಸಂಜೆ ಬಸ್ಸು ಯಾವಾಗಲು ತುಂಬಿರುತ್ತೆ,ಅವತ್ತು ಕೂಡ.೪ ದಿನದಿಂದ ಶುರು ಆಗಿದ್ದ ಚಾಳಿಯಂತೆ ,ಟಿಕೆಟ್ ತಗೊಳ್ಳದೆ ಪ್ರಯಾಣ ಮಾಡಿದ್ದು ಆಯಿತು,ಇನ್ನೇನು ಫಾರಂ ಗಡಿ ದಾಟಿ,ಹಳೇಬೀಡು ಇನ್ನು ೨ ಕಿ.ಮಿ ಇದೆ,ಅಷ್ಟರಲ್ಲಿ ಚೆಕ್ಕಿಂಗ್ ನವರು ಬಸ್ಸ್ ಅಡ್ಡ ನಿಲ್ಲಿಸಿ ಹತ್ತಿದರು.ಭಯ ಶುರು ಆಗಿದ್ದು ಅವಾಗ,ಎಷ್ಟು ದಂಡ ಕಟ್ಟಬೇಕೋ ಅಂತ,ಹೇಗೂ ಬಸ್ಸು ಪೂರ್ತಿ ತುಂಬಿದ್ದರಿಂದ,ಅಲ್ಲದೆ ನಾವು ಮುಂದೆ ಕೂತಿದ್ದರಿಂದ ಪ್ರತಿಯೊಬ್ಬರ ಟಿಕೆಟ್ ಚೆಕ್ ಮಾಡಿಕೊಂಡು ಮುಂದೆ ಬರುವಷ್ಟರಲ್ಲಿ ಹಳೇಬೀಡು ತಲುಪಿತ್ತು.ಅಲ್ಲಿ ಬಸ್ಸ್ ನಿಲ್ದಾಣ ತಲುಪುವ ಮೊದಲು ಇನ್ನೊಂದು ಸ್ಟಾಪ್ ಇತ್ತು,ಅಲ್ಲಿ ನನ್ನ ಜೂನಿಯರ್ ಪವನ್ ಇಳಿದು,ಬೇಗೆ ಮುಂದೆ ಬಂದು ಡ್ರೈವರ್ ಹತ್ತಿರ ತನ್ನ ಪಾಸನ್ನು ಕೊಟ್ಟು ಹೋದ.ಅವ್ರು ಅದನ್ನ ನನಗೆ ಕೊಟ್ರು.ಆ ಚೆಕ್ಕಿಂಗ್ ನವರು ನನ್ನ ಹತ್ತಿರ ಬಂದಾಗ ನಾನು ಅವನ ಪಾಸನ್ನು ತೋರಿಸಿದೆ,ಅವರು ಕೂಡ ನಮ್ಮ ಹತ್ತಿರ ಇದ್ದೆ ಇರುತ್ತೆ ಅಂತ ಫೋಟೋ ಎಲ್ಲಾ ನೋಡಲು ಹೋಗಲಿಲ್ಲ.ಒಟ್ಟಿನಲ್ಲಿ ಅವತ್ತು ಪವನ್ ಮತ್ತು ನಮ್ಮೆಲ್ಲರ ಒಂದು ಪ್ಲಾನ್ ಇಂದ ಬಚಾವಾದೆ.ಅವಾಗ ಇನ್ ಮುಂದೆ ಈ ರೀತಿ ಆದ್ರೆ ಏನ್ ಮಾಡೋದು ಅಂತ ಯೋಚೆನ್ ಶುರು ಆಯಿತು.ಸಧ್ಯ ನನ್ನ ಪುಣ್ಯಕ್ಕೆ ನನ್ನ ಪರ್ಸ್ ಒಬ್ಬರಿಗೆ ಬೇಲೂರು ಬಸ್ ಸ್ಟಾಂಡ್ ಹತ್ತಿರ ಸಿಕ್ಕಿತ್ತು,ಅವರು ನಮ್ಮ ಹಳೆಬೀಡಿನ  ಪ್ಲಾಟ್ ಫಾರ್ಮ್ಮಿಗೆ ಬಂದು,ನನ್ನ ಪಾಸಿನಲ್ಲಿ ಇದ್ದ ನಮ್ಮ ಶಾಲೆಯ ವಿವರಗಳನ್ನೆಲ್ಲ ನೋಡಿ,ನಮ್ಮ ಇನ್ನೊಬ್ಬ ಜೂನಿಯರ್ ಚರಣ್ ಎನ್ನುವನ ಹತ್ತಿರ ಕೊಟ್ಟಿ ಹೋಗಿದ್ದರು.ಅವನು ಕೆಲವು ದಿನ ಬೆಳಗ್ಗೆ ಮತ್ತು ಸಂಜೆ ಸ್ಪೆಷಲ್ ಕ್ಲಾಸ್ ಮತ್ತು ಒಂದೆರಡು ದಿನ ಶಾಲೆಗೇ ಚಕ್ಕರ್ ಹೊಡೆದಿದ್ದ ಕಾರಣ,ನಮ್ಮ ಜೊತೆ ಬರುತ್ತಿರಲಿಲ್ಲ,ಹಾಗಾಗಿ ಅವನನ್ನು ಭೇಟಿ ಆಗಲು ಸಾಧ್ಯ ಇರಲಿಲ್ಲ.ಈ ಘಟನೆ ನಡೆದು ೨ ದಿನದ ನಂತರ ನನಗೆ ನನ್ನ ಪರ್ಸ್ ಮತ್ತು ಬಸ್ ಪಾಸನ್ನು ಕೊಟ್ಟ.ಅವಾಗ ನಿಟ್ಟುಸಿರು ಬಿಟ್ಟಂತಾಯಿತು.

 
ಚರಣನಿಗೆ ಅದನ್ನು ಕೊಟ್ಟವನು ಯಾರು ಅಂತ ನನಗೆ ಗೊತ್ತಿಲ್ಲ,ಆದರೆ ಆ ಪುಣ್ಯಾತ್ಮನಿಗೆ ಒಂದು ದೊಡ್ಡ ಥ್ಯಾಂಕ್ಸ್ ಹೇಳಲೇಬೇಕು ನಾನು.ಒಟ್ಟಿನಲ್ಲಿ ನಮಗೆ ಡ್ರೈವರ್ ಕಂಡಕ್ಟರ್ ಗಳು  ಅಣ್ಣ,ಮಾವ,ಅಂಕಲ್ಗಳು ಆಗಿದ್ದರು,ಕೆಲವರನ್ನು ಹೊರತುಪಡಿಸಿ,ಆದ್ದರಿಂದ ನಮಗೆ ಅಷ್ಟು ಚಿಂತೆ ಇರುತ್ತಿರಲಿಲ್ಲ,ಹೇಗೋ ಒಂದು ವಾರ ಈ ರೀತಿ ಓಡಾಡಿ,ಆಮೇಲೆ ಪಾಸು ಸಿಕ್ಕಿದ್ದು ಒಂದು ಕಡೆ ಖುಷಿಯೂ ಆಯಿತು,ಅಪ್ಪನಿಗೆ ಗೊತ್ತಾಗದ  ಹಾಗೆ ಅಮ್ಮನ ಹತ್ತಿರ ದುಡ್ಡು ಇಸಿದು ಕೊಳ್ಳುವುದು ತಪ್ಪಿತು.ಆದರೂ ಅಮ್ಮನ ಪರ್ಸ್ ಇಂದ ಬೇಕಾದಷ್ಟು ಸಲ ದುಡ್ಡು ಕದ್ದಿದ್ದೇನೆ,ಆದರೆ ಅಪ್ಪನ ಜೇಬಿಗೆ ಕೈ ಹಾಕುವ ಧೈರ್ಯ ಇನ್ನೂ ಇಲ್ಲ.
-----------------------------------------------------------------------------------------------------------------
ಇಂಥ ಹಲವಾರು ಘಟನೆಗಳು,ನೆನಪುಗಳು ಯಾವಾಗಲು ನೆನಪಾಗುತ್ತಿರುತ್ತದೆ,ಕೆಲವು ಕಾಡುತ್ತಿರುತ್ತವೆ.ಆ ಕಂಡಕ್ಟರ್ ಗಳು ಊರಿಗೆ ಹೋದಾಗ ಆಗೊಮ್ಮೆ,ಹೀಗೊಮ್ಮೆ ಸಿಗುತ್ತಿದ್ದರು..ಅಂದಿನಂತೆ ಏನೋ ಕೆಂಚ,ಹೆಂಗಿದ್ಯಲ್ಲ ಡುಮ್ಮ,ಏನ್ಲಾ ಗೌಡ ಸಮಾಚಾರ ಅಂತೆಲ್ಲ ಮಾತಾಡಿಸುತ್ತಾರೆ,ನಮ್ಮ ಸ್ನೇಹಿತರ ಬಗ್ಗೆ ಎಲ್ಲ ವಿಚಾರಿಸುತ್ತಾರೆ.ಒಟ್ಟಿಗೆ ಬೈಟು ಟೀ ಕುಡಿದಿದ್ದೇವೆ..ಬಡ್ಡಿ ಮಕ್ಳ ಹಂಗೆ ಮಾಡ್ತಿದ್ರು ನೀವೆಲ್ಲ ಸೇರಿ ಅಂತ ಅವರೇ ನೆನಪಿಸುತ್ತಿದ್ದರು..ಕೆಲವರ ಜೊತೆ ಅಂದು ಇದ್ದ ಭಾಂದವ್ಯ ಈಗಲೂ ಇದೆ.ಈಗ ಕೆಲವರು ಬೇರೆ ಬೇರೆ ಕಡೆಗೆ ವರ್ಗ ಆಗಿದ್ದಾರೆ,ಕೆಲವರು ನಿವೃತ್ತಿ ಆಗಿದ್ದಾರೆ,ಕೆಲವರು ಆಗೊಮ್ಮೆ ಹೆಗೊಮ್ಮೆ ಈಗಲೂ ಸಿಗುತ್ತಾರೆ,ಮತ್ತೆ ಅದೇ ರೀತಿ ಮಾತಾಡುತ್ತೇವೆ.ನೆನಪಿಸಿಕೊಳ್ಳುತ್ತೇವೆ.
 
ಇನ್ನು ಕೆಲವು ನಮ್ಮ ತಲೆ ಹರಟೆ ಘಟನೆಗಳು,ಜಗಳ ಆಡಿದ್ದು ಇಂಥ ಅನೇಕಾನೇಕ ಘಟನೆಗಳು ಇವೆ.ಅವನ್ನು ಇನ್ನೊಮ್ಮೆ ಬರೆಯುತ್ತೇನೆ.ಸಧ್ಯಕ್ಕೆ ಇಷ್ಟು ಸಾಕು ಅನ್ನೋದು ನನ್ನ ಮನವರಿಕೆ.