Wednesday, September 19, 2012

ನಾವು ಹಿಂಗೆ ಗಣಪತಿ ಇಡ್ತಿದ್ದಿದ್ದು...

ಕಳೆದ ವಾರ ಊರಿಗೆ ಹೋದಾಗ ಹಳೆಬೀಡಿನ ಸ್ನೇಹಿತ ಪೃಥ್ವಿ ಮನೆಗೆ ಹೋದೆ...ಅವನ ಮನೆಯ ಪಕ್ಕದಲ್ಲಿ ಆ ಬೀದಿಯ ಚಿಳ್ಳೆ ಮಿಳ್ಳೆ ಮಕ್ಕಳೆಲ್ಲ ಸೇರಿ ಗಣಪನ ಕೂರಿಸೋಕ್ಕೆ ಪೆಂಡಾಲ್ ರೆಡಿ ಮಾಡ್ತಿದ್ರು...ಇವನು "ಏನ್ರೋ ಇನ್ನು ಇಷ್ಟೇನಾ ಕೆಲ್ಸ ಆಗಿರೋದು,ಬೇಗೆ ಬೇಗ ರೆಡಿ ಮಾಡ್ರೋ" ಅಂದ...ಅಲ್ಲಿದ್ದ ಒಬ್ಬ ಹುಡ್ಗ"ಅಣ್ಣ,ನಿಮಗ್ಯಾಕೆ ಅದೆಲ್ಲ.ನಾವು ಒಟ್ಟಿನಲ್ಲಿ ಎಲ್ಲ ರೆಡಿ ಮಾಡಿದ್ರೆ ಆಯ್ತಲ್ವ? ನಿಮ್ಮ ಕೆಲ್ಸ ಗಣಪತಿ ಕೊಡ್ಸೋದು ಅಷ್ಟೇ" ಅಂದ..ಇನ್ನೊಬ್ಬ ಇದ್ದವನು"ಆಕಡೆ ಬೀದಿಯವ್ರು ಎರಡೂವರೆ ಅಡಿ ಗಣಪತಿ ಇಡ್ತಾರಂತೆ,ನಾವು ಆಗಿದ್ದು ಆಗ್ಲಿ ೪ ಅಡಿದು ಇಡಲೇ ಬೇಕು" ಅಂದ..ಇವನು"ಲೋ ಅಷ್ಟು ದೊಡ್ಡದು ಬೇಡ ಕಣ್ರೋ,೩ ಅಡಿದು ಸಾಕು" ಅಂದ್ರೆ "ಥೋ ಥೋ ಥೋ ಆಗಲ್ಲ,ತಲೆ ಮೇಲೆ ತಲೆ ಬೀಳಲಿ,ಅವರಗಿಂತ ದೊಡ್ಡದು ಕೂರಿಸ್ಲೆ ಬೇಕು,ಇಲ್ಲ ಅಂದ್ರೆ ಹಳೆ ಸಂತೆ ಬೀದಿಗೆ ಮರ್ಯಾದೆ ಇರತ್ತಾ"ಅಂದ... "ಏನಾದ್ರೂ ಮಾಡ್ಕಂಡು ಹಾಳಾಗಿ ಹೋಗಿ,ಎಷ್ಟೋ ಒಂದು ಇಡ್ರಿ ಅತ್ಲಾಗಿ" ಅಂತ ಹೇಳಿ ಹೊರಟ್ವಿ..ಹಿಂದೆ ಯಿಂದ "ಹಾಸನ್ ಇಂದ ತರಬೇಕು,ಈ ಲೋಕಲ್ ಗಣಪತಿ ಆಗಲ್ಲ" ಅಂತ ಇನ್ನೊಬ್ಬ ಕಿರುಚಿದ .."ನೋಡ್ಲಾ ಗಿರಿ,ಈ ಬಡ್ಡಿ ಮಕ್ಳು,ಕೊಡ್ಸಕ್ಕೆ ಒಪ್ಕಂಡಿದ್ದೀನಿ,ಕೇಳಿದ್ದು ಕೊಡ್ಸದೆ ಇದ್ರೆ ಮರ್ಯಾದೆ ತಗಿತಾರೆ" ಅಂದ..

ಇದನ್ನ ನೋಡಿದಾಗ ನಾವು ಚಿಕ್ಕವರಿದ್ದಾಗ ಗಣಪತಿ ಕೂರಿಸ್ತಿದ್ದ ಪರಿ,ನಮ್ಮ ಉತ್ಸಾಹ,ಮನೆ ಮನೆ ಸುತ್ತಿ ದುಡ್ಡು ಎತ್ತಿದ್ದು,ಹಬ್ಬದ ಪ್ರಯುಕ್ತ ನಡೆಯುತ್ತಿದ್ದ ವಿವಿಧ ಆಟೋಟಗಳು ,ವಿಸರ್ಜನೆ ದಿನ ಬಹುಮಾನ ವಿತರಣೆ ಎಲ್ಲ ಒಮ್ಮೆಲೇ ಗಿರಕಿ ಹೊಡೆಯೋಕ್ಕೆ ಶುರು ಆಯಿತು...ಯಾರಾದ್ರೂ ದುಡ್ಡು ಕೊಡೋಕ್ಕೆ ಸತಾಯ್ಸಿದ್ರೆ "ಏನ್ ಅಂಕಲ್,ಇಷ್ಟು ದುಡ್ಡು ಮನೆಗೆ ಇಷ್ಟೇನಾ ದುಡ್ಡು"ಅಂತೆಲ್ಲ ಪೀಡಿಸಿ ವಸೂಲಿ ಮಾಡ್ತಿದ್ವಿ...೬ ವರ್ಷ ಹಾಸನದಲ್ಲಿದ್ದ ಸಮಯದಲ್ಲಿ ನಮ್ಮ ಬೀದಿಗೂ ಪಕ್ಕದ ಬೀದಿಗೂ ಪ್ರತಿ ವರ್ಷ ಗಣಪನ್ನ ಕೂರಿಸೋ ವಿಚಾರದಲ್ಲಿ ಪೈಪೋಟಿ.. ಯಾರು ದೊಡ್ಡ ಗಣಪನ್ನ ಕೂರಿಸ್ತಾರೆ,ಯಾರು ಜಾಸ್ತಿ ದಿನ ಇಟ್ಟಿರ್ತಾರೆ..ಯಾರು ಚೆನ್ನಾಗಿ ಅಲಂಕಾರ ಮಾಡಿದ್ದಾರೆ..ಹೀಗೆ ... ಬೀದಿ ಬೀದಿಗಳ ಪೈಪೋಟಿಗೆ ಪಾಪ ಮುಗ್ಧ ಗಣಪ ಬಲಿ ಆಗ್ತಿದ್ದ...

ಇಲಿ ಪುರಾಣ:
ಒಂದು ವರ್ಷ ಏನಾಯ್ತು ಅಂದ್ರೆ,ಗೌರಮ್ಮ ಮತ್ತೆ ಗಣಪನ್ನ ಕೂರ್ಸಿ ಪೂಜೆ ಗೀಜೆ ಎಲ್ಲ ಆಯ್ತು,ಮೈಕ್ ಸೆಟ್ ಎಲ್ಲ ಜೋಡ್ಸಿದ್ವಿ,ಜೋರಾಗಿ ಹಾಡು ಹಾಕಿ ಕುಣಿತಿದ್ವಿ..ನಮ್ಮ ಬೀದಿಯ ಒಬ್ರು ಮಹನೀಯರು ಪೂಜೆ ಮಾಡಿಸ್ಕಂಡ್ ಹೋಗೋಕ್ಕೆ ಬಂದವರು,ಒಮ್ಮೆಲೇ"ಎಲ್ರೋ ಹುಡುಗರ,ಗಣಪತಿ ಇದೆ,ಇಲಿನೆ ಇಲ್ವಲ್ರೋ" ಅಂದ್ರು..ಆಗ ನಾವೆಲ್ಲ ಸೇರಿ ಎಲ್ಲೋಯ್ತು ಎಲ್ಲೋಯ್ತು ಅಂತ ವಿಮರ್ಶೆ ಮಾಡಿದಾಗ,ಎಲ್ಲರು ನಂಗೊತ್ತಿಲ್ಲ ನೊಂಗೊತ್ತಿಲ್ಲ ಅಂದ್ರು.ಆಮೇಲೆ ಅಂಗಡಿಗೆ ತರಕ್ಕೆ ಹೋಗಿದ್ದ ಒಬ್ಬ ಪುಣ್ಯಾತ್ಮ ಆಟೋದಲ್ಲಿ ಹಿಂದೆ ಇಟ್ಟಿದ್ದೆ,ಅಲ್ಲೇ ಮರ್ತೆ ಅನ್ಸುತ್ತೆ ಅಂದ..ಆಗ ಇನ್ನೇನ್ ಮಾಡೋದು ಆ ಅಟೋದವನನ್ನ ಹುಡುಕೋ ಕೆಲ್ಸ ಅಂತು ಆಗಲ್ಲ,ಸರಿ ಅಂತ ಮತ್ತೆ ಅಂಗಡಿಗೆ ಹೋದ್ರೆ ಅವನು ಬರಿ ಇಲಿ ಕೊಡಕ್ಕೆ ಆಗಲ್ಲ ,ಒಂದೊಂದು ಗಣಪತಿಗೆ ಒಂದೊಂದು ಇಲಿ ಮಾಡಿರ್ತಿವಿ ಅಂದ.ಎಷ್ಟೇ ದಮ್ಮಯ್ಯ ಅಂದ್ರು, ಕೊಡಲ್ಲ,ಬೇಕಾದ್ರೆ ಗಣಪತಿ ತಗೊಳ್ಳಿ,ಅದರ ಜೊತೆಗೆ ಇಲಿ ಕೊಡ್ತೀನಿ ಅಂದ..ಸರಿ ಕೊಡಪ್ಪ ಅಂತ ತಂದು ಇಟ್ಟಿದ್ದು ಆಯ್ತು...ಆಮೇಲೆ ಆಟೋದಲ್ಲಿ ಇಲಿ ಬಿಟ್ಟು ಬಂದವನಿಗೆ ಎಲ್ಲರು ಸೇರಿ ಬೈದಿದ್ದೇ ಬೈದಿದ್ದು...

ಆಗ ನಮಗೆ ಇದ್ದ ಒಂದು ನಂಬಿಕೆ ಏನು ಅಂದ್ರೆ ಗಣಪತಿ ಹಬ್ಬದ ದಿನ ಚಂದ್ರನನ್ನು ನೋಡಬಾರದು ಅಂತ..ನೋಡಿದ್ರೆ ಆ ವರ್ಷ ಪೂರ್ತಿ ನಮಗೆ ಒಳ್ಳೇದ್ ಆಗಲ್ಲ ಅಂತ..ನಾವು ಹುಡುಗರಂತು ಯಾರಾದ್ರೂ ನೋಡಿಲ್ಲ ಅಂದ್ರೆ ಅವನನ್ನ ಕೈ ಕಾಲು ಹಿಡಿದು ಮೇಲಕ್ಕೆ ಮುಖ ಮಾಡಿ ಚಂದ್ರನ್ನ ತೋರಿಸ್ತಿದ್ವಿ..ಇದೆಲ್ಲಾ ತಮಾಷೆ ಈಗ

ಆಮೇಲೆ ಸ್ವಲ್ಪ ದಿನ ಆದ್ಮೇಲೆ ವಿಸರ್ಜನೆ ಕಾರ್ಯಕ್ರಮ.ನಾವಿನ್ನು ಚಿಕ್ಕ ಹುಡುಗರು,ಎಲ್ಲಿ ಬಾವಿಗೆ ಬಿದ್ದು ಬಿಡ್ತಾರೋ ಅಂತ ನಮ್ಮನ್ನ ಕಳಿಸ್ತಿರ್ಲಿಲ್ಲ.ಆಟೋದಲ್ಲಿ ಮೆರೆವಣಿಗೆ ಮಾಡಿ ಜವೆನಹಳ್ಳಿ ಮಠದ ಬಾವಿಯಲ್ಲಿ ಕೆಲವು ದೊಡ್ಡವರು ಹೋಗಿ  ಬಿಟ್ಟು ಬರ್ತಿದ್ರು,ಆದರೆ ಆ ೬ ವರ್ಷದಲ್ಲಿ ಒಂದೇ ಒಂದು ಸಾರಿ ನಮ್ಮ ಬೀದಿಯ ಗಣಪನ ವಿಸರ್ಜನೆ ಮಾಡೋದನ್ನ ನೋಡಕ್ಕೆ ಆಗಿರಲಿಲ್ಲ..

ಅಲ್ಲದೆ ಒಂದು ಬಟ್ಟಲಿನಲ್ಲಿ ಅಕ್ಷತೆ ಕಾಳು(ಅಕ್ಕಿ ಮತ್ತು ಹರಿಶಿನ) ಹಿಡಿದು ಇಡೀ ಹಾಸನ ಸುತ್ತುತಿದ್ವಿ...  ಆ ದಿನ  ಒಟ್ಟು ೧೦೮ ಗಣಪತಿಯನ್ನು ನೋಡೋದು ನಮ್ಮ ಗುರಿ...ಮನೆ ಮನೆ,ಬೀದಿ ಬೀದಿ ಸುತ್ತಿ ಒಟ್ಟು ೧೦೮ ಗಣಪನನ್ನು ನೋಡಿ ಬರ್ತಿದ್ವಿ...

ಅದರ ಮುಂದಿನ ವರ್ಷ ನಮ್ಮೂರಿಗೆ,ನಮ್ಮ ಹಳ್ಳಿಗೆ ಬಂದಾಗ ಅಲ್ಲಿ ಹಬ್ಬದ ಆಚರಣೆ ಇನ್ನೂ ಚೆನ್ನಾಗಿತ್ತು.ಅಲ್ಲಿಂದ ಮುಂದೆ ಪ್ರತಿ ವರ್ಷ ಹಳ್ಳಿಯ ಜೀವನದ ಜೊತೆ ನಾನು ಬೆರೆತು ಹೋಗಿದ್ದೆ.ನನಗೆ ತುಂಬ ಕುಶಿ ಕೊಟ್ಟಿದ್ದು ನಮ್ಮ ಹಳ್ಳಿಯ ಆಚರಣೆ ಮತ್ತು ಸಂಪ್ರದಾಯ.

ಇನ್ನು ಮನೆನಲ್ಲಿ ಚೌಥಿ ಹೊಡೆಯದು..ಅದಕ್ಕೆ ಒಂದಷ್ಟು ಪುಸ್ತಕ,ಸೇರು ಕುಡುಗೋಲು ಎಲ್ಲ ಹಿಡವ್ರು..ನಾನಂತು ನನಗೆ ಕಷ್ಟದ ವಿಷಯದ ಪುಸ್ತಕ ಹಿಡ್ತಿದ್ದೆ..ಗಣಪ ಏನಾದ್ರೂ ಕೃಪೆ ತೋರಬಹುದು ಅಂತ.. ನಮ್ಮ ಮನೇಲಿ ಸಿಕ್ಕ ಸಿಕ್ಕಿದ್ದಕ್ಕೆಲ್ಲ ಈಡು ಕಾಯಿ ಹೊಡೆಯವ್ರು..ಮಾರನೆ ದಿನ ಅದೇ ಕಾಯಲ್ಲಿ ಕಾಯಿ ಕಡುಬು ಮಾಡೋವ್ರು...

ನಮ್ಮೂರಲ್ಲಿ ಗಣಪತಿ ಕೂರಿಸೋ ಮುಂಚೆ ಗಂಗೆ ಪೂಜೆ ಎಲ್ಲ ಮಾಡಿ ವಾದ್ಯದವರ ಜೊತೆ ಗಣಪನ್ನ ತಂದು ಕೂರಿಸ್ತಿದ್ವಿ.ಊರೆಲ್ಲ ಕೇಳೋ ಹಗೆ ಮೈಕ್ ಸೆಟ್ ಇರಲೇ ಬೇಕಿತ್ತು..ಇಲ್ಲೂ ಕೂಡ ಸುತ್ತ ಮುತ್ತ  ಉರಿನವರಿಗಿಂತ ದೊಡ್ಡದನ್ನು ಕೂರಿಸಬೇಕು ಅಂತ ಪೈಪೋಟಿ..ಅದು ಅಲ್ದೆ ಪ್ರತಿ ವರ್ಷ ನಮ್ಮ ಊರಲ್ಲೇ ಗಣಪತಿಯನ್ನ ಮಾಡ್ತಿದ್ವಿ,ಅಲ್ಲೇ ಸುತ್ತ ಮುತ್ತ ಎಲ್ಲಿಂದನಾದ್ರು ಜೇಡಿ ಮಣ್ಣು ತಂದು ಮಾಡಿಸ್ತಿದ್ವಿ.ಯಾವುದೇ ಅಂಗಡಿ ಇಂದ ತರೋ ಪ್ರಮೇಯವೇ ಇರಲಿಲ್ಲ.
ಇದೆಲ್ಲ ಆದಮೇಲೆ ಪ್ರತಿ ದಿನ ಸಂಜೆ ಪೂಜೆ ಇರ್ತಿತ್ತು, ಪ್ರತಿ ದಿನ ಒಂದೊಂದು ಮನೆ ಇಂದ ಚರ್ಪು ಮಾಡಬೇಕಿತ್ತು.೮.೩೦ಕ್ಕೆ ಸರಿಯಾಗಿ ಯಾರಾದ್ರೂ ಘಂಟೆ ಬಾರಿಸವ್ರು,ಅದೇ ಟೈಮ್ ಅಲ್ಲಿ ಯಾಕಂದ್ರೆ ಎಲ್ಲ ಚಾನೆಲ್ ಗಳಲ್ಲಿ ವಾರ್ತೆ ಬರೋ ಸಮಯ ಅದು..ಅಪ್ಪಿ ತಪ್ಪಿ ಕೂಡ ಜನ ಧಾರವಾಹಿ ಮಿಸ್ ಮಾಡ್ಕೊತಾರೆಯೇ? ಆಗಾಗಿ ಎಲ್ಲರೂ ಧಾರಾವಾಹಿ ನೋಡಿ ಘಂಟೆ ಸದ್ದು ಕೇಳಿದ ಕೂಡಲೇ ದೇವಸ್ಥಾನದ ಬಳಿ ಹಾಜರ್. ಪೂಜೆ ಆಗಿ ನೈವೇದ್ಯೇ ಆದಮೇಲೆ ಚರ್ಪು ಹಂಚೋ ಕಾರ್ಯಕ್ರಮ.೯.೦೦ ಘಂಟೆ ಒಳಗೆ ಪೂಜೆ ಎಲ್ಲ ಆಗಿ ಮುಂದಿನ ಧಾರವಾಹಿ ನೋಡೋಕ್ಕೆ ಅಣಿ ಆಗ್ತಿದ್ರು..

ಇನ್ನು ಸ್ವಲ್ಪ ದಿನ ಆದ್ಮೇಲೆ ಗಣಪತಿ ಬಿಡೋ ಕಾರ್ಯಕ್ರಮ..ನಮ್ಮೂರಲ್ಲಿ ಒಂದು ಹೊಯ್ಸಳರ ಕಾಲದ ಕಲ್ಯಾಣಿ ಇದೆ..ಅದು ಬತ್ತಿ ಹೋಗಿ ಬಹಳ ವರ್ಷಗಳೇ ಆಗಿದೆ..ವರ್ಷ ಪೂರ್ತಿ ಅದರ ಒಳಗೆ ಕೆಲಸಕ್ಕೆ ಬಾರದ ಗಿಡ ಗಂಟೆಗಳು,ಸೀಮೆ ಸೀಗೆ,ಮುಟ್ರು ಮುನಿ(ಮುಟ್ಟಿದರೆ ಮುನಿ,ಟಚ್ ಮಿ ನಾಟ್) ಬೆಳೆದಿರುತ್ತದೆ..ಆದರ ಗಣಪನ ದೆಸೆಯಿಂದ ವರ್ಷಕ್ಕೆ ಒಂದು ಸಾರಿ ಆ ಗಿಡಗಳನ್ನೆಲ್ಲ ಕಿತ್ತು ಸ್ವಚ್ಛ ಮಾಡ್ತಿದ್ವಿ..ಸುತ್ತ ಮುತ್ತ ಯಾರದಾದರು ಪಂಪ್ ಇಂದ ನೀರು ಬಿಟ್ಟು ತುಂಬಿಸ್ತಿದ್ವಿ..ಗಣಪತಿ ಬಿಡಬೇಕಲ್ಲಾ ಆಗಾಗಿ... ಆಗ ಚಿಕ್ಕ ಮಕ್ಕಳಾದ ನಮಗೆ ಸುಗ್ಗಿಯೋ ಸುಗ್ಗಿ..

ಈಜು ಬರದವರು ಈಜು ಕಲಿಯೊಕ್ಕೆ ಎಲ್ಲ ಬಹಳ ಸಹಾಯ ಆಗ್ತಿತ್ತು...ಆಗ ಕೆಲವರ ಮನೆಯಲ್ಲಿ ಈಜು ಬುರುಡೆ ಇತ್ತು.. ಈಜು ಬುರುಡೆ ಅಂದ್ರೆ ಒಂದೇ ಜಾತಿಯ ಸೋರೆಕಾಯಿಯನ್ನು ಒಣಗಿಸಿ ಅದಕ್ಕೆ ಹಗ್ಗ ಕಟ್ಟಿ ಇರ್ತಿದ್ರು..ನಾವು ಅದನ್ನ ಬೆನ್ನಿಗೆ  ಕಟ್ಟಿಕೊಂಡು ಈಜು ಆಡ್ತಿದ್ವಿ...ನಮ್ಮೂರಿನ ಬಹುತೇಕ ಮಕ್ಕಳು ಈಜು ಕಲಿತಿದ್ದು ,ಆ ಬುರುಡೆಯ ಮೂಲಕವೇ...ನನ್ನ ಬಳಿ ಆ ರೀತಿಯ ಬುರುಡೆ ಇಲ್ಲದ ಕಾರಣ,ಅವರಿವರ ತೋಟದಲ್ಲಿ ಹುಡುಕಿ,ಕೊನೆಗೂ ಒಂದು ಸೋರೆಕಾಯಿ ತಂದು,ಅದನ್ನ ಒಣಗಿಸಿ ದೊಡ್ಡಪ್ಪನ ಹತ್ತಿರ ಅದಕ್ಕೆ ಹಗ್ಗ ಕಟ್ಟಿ ಕೊಡೋಕ್ಕೆ ಹೇಳಿದ್ದೆ..ನನ್ನ ದುರದೃಷ್ಟವಶಾತ್ ಆ ಸೋರೆಕಾಯಿ ಹೊಡೆದು ಹೋಯಿತು..ನನ್ನ ಕನಸು ಛಿದ್ರ ಛಿದ್ರ ಆಯ್ತು.ಕೆಲವರು ಮುಲಾಜಿಲ್ಲದೆ ಕೊಡಲ್ಲ ಅಂತಿದ್ರು,ಆಗಾಗಿ ನನಗೆ ಬೇರೆಯವರನ್ನ ಕೇಳೋಕ್ಕೆ ಒಂಥರಾ ಮುಜುಗರ,ಆದರು ಕೆಲವು ಸ್ನೇಹಿತರು ಸ್ವಲ್ಪ ಒತ್ತು ಈಜಾಡಲು ಕೊಡ್ತಿದ್ರು.

ನನ್ನ ಕಷ್ಟ ನೋಡಕ್ಕೆ ಆಗದೆ ನನ್ನ ದೊಡ್ಡಪ್ಪ,ನಮ್ಮ ತೋಟದಲ್ಲಿರುವ ಕಲ್ಲು ಬಾವಿಗೆ ಕರ್ಕಂಡ್ ಹೋಗಿ ನನಗೆ ಈಜು ಕಲ್ಸೋಕ್ಕೆ ಶುರು ಮಾಡಿದ್ರು..ಸುಮಾರು ೭೦-೮೦ ಅಡಿಯ ಬಾವಿ ನಮ್ಮ ತೋಟದಲ್ಲಿರೋದು...ಮೊದ ಮೊದಲು ಉಡುದಾರ ಹಿಡಿದು,ಕಾಲು ಬಡಿಯೋದು ಕೈ ಬಡಿಯೋದು ಎಲ್ಲ ಹೇಳಿ ಕೊಡ್ತಿದ್ರು.ಆಮೇಲೆ ಒಂದೆರಡು ದಿನ ಆದಮೇಲೆ ಕೂದಲು ಹಿಡಿದು ಮೂರ್ನಾಲ್ಕು ಬಾರಿ ಮುಳುಗಿಸಿ ದಮ್ಮಯ್ಯ ಅಂದ್ರು ಕರುಣೆ ತೋರದೆ ನೀರು ಕುಡಿಸಿ ಮೇಲಕ್ಕೆ ಎತ್ತುತ್ತಿದ್ದರು.. ಆಮೇಲೆ ಸೊಂಟಕ್ಕೆ ನಮ್ಮ ಮನೆಯ ಹೋರಿಯ ಹಗ್ಗಗಳನ್ನು ಕಟ್ಟಿ ಮೇಲಿಂದ ನನ್ನನ್ನು ಬಿಸಾಕಿ ಈಜು ಹೊಡೆಯಲು ಹೇಳ್ತಿದ್ರು..ಅವರು ಬಾವಿಯ ಸುತ್ತ ಹಗ್ಗ ಹಿಡಿದು ಸುತ್ತವ್ರು..ಕೊನೆಗೂ ನನಗೆ ಏನೇನೋ ಹರ ಸಾಹಸ ಮಾಡಿ ಈಜು ಕಲ್ಸಿದ್ರು...ನಮ್ಮ ಅಪ್ಪ ಒಂದ್ಸಲ ಬಾವಿಗೆ ಬಿದ್ದಿದ್ದಾಗ ನಮ್ಮ ದೊಡ್ದಪ್ಪನೆ ಮೇಲಕ್ಕೆ ಎತ್ತಿದ್ರಂತೆ..ಆಗಾಗಿ ನನಗೆ ಇವರ ಮೇಲೆ ಸ್ವಲ್ಪ ಧೈರ್ಯ ಇತ್ತು...

ಇನ್ನು ಗಣಪತಿ ಬಿಡೋ ಹಿಂದಿನ ದಿನ ನಂದಿ ಧ್ವಜ ಕುಣಿತ,ಕೆಲೋವೊಮ್ಮೆ ಕೀಲು ಕುದುರೆ ಎಲ್ಲ ಇರ್ತಿತ್ತು...ಎಲ್ಲ ಮನೆಯಲ್ಲೂ ಮತ್ತೆ ಹಬ್ಬ...ಮಾರನೆ ದಿನ ಬೆಳಗ್ಗೆ ೭.೦೦ ಘಂಟೆಗೆ ಮೆರವಣಿಗೆ ಶುರು... ಎಲ್ಲ ಮನೆಯ ಮುಂದೆ ಹೋಗಿ,ಪ್ರತಿ ಮನೆ ಇಂದ ಮಂಗಳಾರತಿ ಆಗಿ ಮುಂದೆ ಸಾಗುತ್ತಿತ್ತು..ನಮ್ಮ ಪಟಾಲಂ ಹುಡುಗರಿಗೆ ಬಣ್ಣ ಎರಚಿಕ್ನ್ದು ಕುಣಿದು ಕೊನೆಗೆ ಬಾವಿಗೆ ಹೋಗಿ ಬೀಳ್ತಿದ್ವಿ..ಯಾರಾದ್ರೂ ಅಪ್ಪಿ ತಪ್ಪಿ ಬಣ್ಣ ಹಚ್ಚಿಸಿಕೊಳ್ಳಲ್ಲ ಅಂದ್ರೆ ಮುಗಿತು ಅವನ ಕಥೆ..ನಾವು ದೊಡ್ಡವರ ಸಹವಾಸಕ್ಕೆ ಹೋಗ್ತಿರ್ಲಿಲ್ಲ,ಒಮ್ಮೆ ಮಾತ್ರ ಒಬ್ಬ ಪುಣ್ಯಾತ್ಮನ ಬಿಳಿ ಅಂಗಿಗೆ ಬಣ್ಣ ಬಿತ್ತು,ಮೆರವಣಿಗೆ ನಡುವೆಯೇ ಅದೆಂಗೆ ಮುಂದಕ್ಕೆ ಹೋಗ್ತಿರಾ,ಅಂತ ಕಿತಾಪತಿ ತೆಗೆದ.ಆಮೇಲೆ ಕೆಲವು ಹಿರಿಯರು ಎಲ್ಲ ಸೇರಿ "ಏನೋ ಮಕ್ಳು,ಆಡ್ತವ್ರೆ.ಹೋಗ್ಲಿ ಬಿಡಪ್ಪ ಅಂತ ಸಮಾಧಾನ ಮಾಡೋಕ್ಕೆ ಹೋದ್ರೆ ಅವರ ಜೊತೆ ಜಗಳಕ್ಕೆ ಬಿದ್ದರು.ಆಮೇಲೆ ಇನ್ನೊಬ್ರು"ಲೋ,ವಂಕ ನಿನ್ನ ಮಗನು ಬಣ್ಣ ಆಡ್ತಾವ್ನೆ,*** ಮುಚ್ಕಂಡು ಹೋಗ್ಲ" ಅಂತ ಬೈದಾಗ ಸುಮ್ನಾದ್ರು.

ಕೊನೆಗೆ ಮೆರವಣಿಗೆ ಮುಗ್ಸಿ ಬಾವಿ ಹತ್ತಿರ ಬಂದು ಬೆಲ್ಲದ ಹಚ್ಚಿನ ಮಣೆ(ತೆಪ್ಪದ ರೀತಿಯಲ್ಲಿ) ಮೇಲೆ ಗಣಪನ್ನ ಕೂರ್ಸಿ ಎರಡೂ ಕಡೆ ಹಗ್ಗ ಹಾಕಿ ಎಳೆದು ಬಾವಿ ಮಧ್ಯಕ್ಕೆ ತಂದು ಜೈ ಗಣಪ ಅಂತ ಕೂಗಿ ಆ ಮಣೆಯನ್ನು ಬಲಗಡೆಗೆ ತಿರುಗಿಸಿ ವಿಸರ್ಜನೆ ಮಾಡ್ತಿದ್ರು... ಆ ಸಮಯದಲ್ಲಿ ಯಾರಾದ್ರೂ ಈಜು ಬರುವವರು ಬಾವಿಗೆ ಇಳಿಯದೆ ಅವರ ಕಥೆ ಮುಗಿಯಿತು.ಅವರಾಗೆ ಇಳಿದರೆ ಬಚಾವು,ಇಲ್ಲ ಅಂದ್ರೆ ಉಟ್ಟ ಬಟ್ಟೆಯಲ್ಲೇ ಅವರನ್ನ ಬಾವಿಗೆ ಬಿಸಾಡೋ ಪದ್ಧತಿ...ಅಲ್ಲಿ ಹೋಗ್ಬೇಕು,ಇಲ್ಲಿಗೆ ಹೋಗ್ಬೇಕು,ಜಪ್ಪಯ್ಯ,ದಮ್ಮಯ್ಯ ಅಂದ್ರು ಯಾರೂ ಕೇಳ್ತಿರಲಿಲ್ಲ..ಬೇಕಾದ್ರೆ ಬಟ್ಟೆ ಚೇಂಜ್ ಮಾಡ್ಕಂಡ್ ಹೋಗು ಅಂತ ಹೇಳಿ ಸೀದಾ ಬಾವಿಗೆ ಬಿಸಾಕೋದೇ...ಅವರು ದೊಡ್ಡವರಾದರು ಪರವಾಗಿಲ್ಲ,ಚಿಕ್ಕವರಾದ್ರು ಪರವಾಗಿಲ್ಲ....

ಅದು ಅಲ್ದೆ ಯಾವತ್ತಾದ್ರು ಒಂದು ದಿನ ಊರಿನ ದೇವಸ್ಥಾನದ ಹತ್ತಿರ ಟಿವಿ ಮತ್ತೆ ವಿಸಿಪಿ,ವಿಸಿಡಿ ತಂದು ರಾತ್ರಿ ಇಡೀ ಒಂದಷ್ಟು ಚಲನಚಿತ್ರಗಳನ್ನು ನೋಡೋ ಕಾರ್ಯಕ್ರಮಗಳು ಇರ್ತಿದ್ವು...ಆಗಿನ್ನೂ ವಿಸಿಡಿ ಕಾಲ..ಇನ್ನು ಸಿಡಿ ಎಲ್ಲ ಇರ್ಲಿಲ್ಲ ಅವಾಗ...

ಹೀಗೆ ಸಾಗ್ತಿತ್ತು ನಮ್ಮೂರಿನ ಗಣಪತಿ ಹಬ್ಬದ ಪುರಾಣ...                      ಎಲ್ಲರಿಗೂ ಅವ್ವ-ಮಗ ಒಳ್ಳೇದ್ ಮಾಡ್ಲಿ... ಹಬ್ಬದ ಶುಭಾಶಯಗಳು..

                                 ಅವಧಿಯಲ್ಲಿ ಈ ಲೇಖನ: ನಮೂರ್ ಗಣಪ್ಪನ ಪುರಾಣ...

Photo-Courtesy:Intenet

6 comments:

 1. Girish,
  Very good article. Wish you Happy Ganesh chavati.

  ReplyDelete
 2. ಗಿರೀಶ್ ಗಣೇಶ ಹಬ್ಬದ ನಿಮ್ಮ ಅನುಭವ ಬಹಳ ಆಸಕ್ತಿ ಮೂಡಿಸಿತು. ನನ್ನ ಬಾಲ್ಯದ ನೆನಪು ಮೂಡಿಸಿತು. ಒಳ್ಳೆಯ ಲೇಖನ ಜೈ ಹೋ .
  ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

  ReplyDelete
 3. ಗಣೇಶ ಹಬ್ಬದ ಸವಿ ನೆನಪುಗಳನ್ನು ಸೊಗಸಾಗಿ ಹಂಚಿಕೊಂಡಿದ್ದೀರಿ.

  ReplyDelete
 4. ಹಬ್ಬದ ಆಚರಣೆ ಹಳ್ಳಿಯಲ್ಲಿ ಬಲು ಸೊಗಸು..ಹಳ್ಳಿಯಲ್ಲಿ ನಡೆಯುವ ಹಬ್ಬದ ವೈಭವ ಕಾಣದ ನಾನು..ನಿಮ್ಮ ಲೇಖನ ಓದಿದ ಮೇಲೆ ಹಾಗೆಯೇ ಕಣ್ಣ ಪಟಲದ ಮುಂದೆ ಸಿನಿಮಾ ನೋಡಿದ ಅನುಭವ ಕೊಟ್ಟಿತು..ನಿಜ..ಆ ಬಾಲ್ಯದ ಮುಗ್ದತೆ, ಸಂಭ್ರಮದ ಪರಿ..ಅದರ ಸೊಗಸೇ ಬೇರೆ...ತುಂಬಾ ಚಂದದ ಲೇಖನ ಗಿರೀಶ್.

  ReplyDelete
 5. ಚೆಂದದ ಲೇಖನ ಗಿರೀಶ್...ಇಷ್ಟವಾಯ್ತು...ಬರೆಯುತ್ತಿರಿ...

  ReplyDelete
 6. ಪ್ರತಿಕ್ರಿಯಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು.... ಪ್ರೀತಿ ಪ್ರೋತ್ಸಾಹ ಹೀಗೆ ಇರಲಿ....

  ReplyDelete