Tuesday, December 25, 2012

ಅವಳ ಹೆಣ ಸುಟ್ರಂತೆ

ದೀಪಾವಳಿಯ ಅಮಾವಾಸ್ಯೆಯ ದಿನ ಲಕ್ಷ್ಮೀ ಪೂಜೆ ಮಾಡಿ,ಬಂದ ಹೆಣ್ಣುಮಕ್ಕಳಿಗೆ ಕುಂಕುಮ ನೀಡಿ ಎಲ್ಲರಿಗೂ ಸಿಹಿ ಹಂಚಿ, ಬಾಗಿಲಿಗೆ ದೀಪ ಹಚ್ಚಿಟ್ಟಿದ ನಂತರ,ಅಂದು ಬೆಳಗ್ಗೆ ಮನೆ ಮುಂದೆ ಸಗಣಿ ಸಾರಿಸಿ ಬಿಟ್ಟಿದ್ದ ರಂಗೋಲಿಯನ್ನು ಕಣ್ತುಂಬಿ ಕೊಳ್ಳುತ್ತಾ ರಂಗೋಲಿಯ ಮೇಲೂ ಮೂರ್ನಾಲ್ಕು ದೀಪಗಳನ್ನು ಹಚ್ಚಿಟ್ಟಳು ಸರೋಜಮ್ಮ .ವ್ಯಾಪಾರಿಯೂ ಆದ ತನ್ನ ಗಂಡ ಪ್ರತಿ ವರ್ಷ ಒಳ್ಳೆ ದುಡಿಮೆಯನ್ನೇ ಮಾಡುತ್ತಿದ್ದ.ಪ್ರತಿಷ್ಠೆಗಾಗಿ ಗರಿ ಗರಿ ನೋಟುಗಳನ್ನೇ ಪೂಜೆಗೆ ಇಡುತ್ತಿದ್ದ.ಸಾವಿರಾರು ರೂಪಾಯಿಗಳ ಪಟಾಕಿಗಳನ್ನು ಮಕ್ಕಳು ಸುಡುತ್ತಿದ್ದರು .ಪಟಾಕಿಯ ವಿಷಯದಲ್ಲೂ ಪ್ರತಿಷ್ಠೆ  ಮೆರೆಯುತ್ತಿದ್ದ.ಆದರೆ ಈ ವರ್ಷ ಸರಿಯಾಗಿ ಮಳೆ ಆಗದೆ ಇದ್ದಿದ್ದರಿಂದ,ರೈತರಿಗೆ ಬೆಳೆಯೂ ಸರಿಯಾಗಿ ಆಗಲಿಲ್ಲ.ಈ ವರ್ಷ ರಾಮೇಗೌಡನ ವ್ಯಾಪಾರವೂ ಸ್ವಲ್ಪ ಮಟ್ಟಿಗೆ ಮಂಕಾಯಿತು.ಅವನ ಮಕ್ಕಳಿಗೆ ಹಚ್ಚು ಪಟಾಕಿ ಸಿಡಿಸಲಿಲ್ಲ ಎಂಬ ಅಸಮಧಾನ ತಳ ಊರಿತು.

ಈ ವರ್ಷ ನೆಟ್ಟಗೆ ಮಳೆ ಇಲ್ಲ ,ಬೆಲೆ ಇಲ್ಲ,ಆಗಾಗಿ ವ್ಯಾಪರನೂ ಅಷ್ಟಾಗಿ ಆಗಲಿಲ್ಲ,ಅದಕ್ಕೆ ಈ ವರ್ಷ ಅಷ್ಟು ಜೋರಾಗಿ ಪೂಜೆ ಮಾಡಲಿಲ್ಲ ಎಂದು ಬಂದವರಿಗೆಲ್ಲ ಗಂಡ ಹೆಂಡತಿ ಇಬ್ಬರೂ ಸಬೂಬು ಕೊಟ್ಟಿದ್ದಾಯಿತು.ಊರಿಗೆ ಊರೇ ಮಳೆರಾಯನಲ್ಲಿ ಮೊರೆಯಿಡುತ್ತಿತ್ತು.ಮಳೆಗಾಗಿ ಪೂಜೆ,ಹವನಗಳು,ಪರೇವುಗಳು ನಡೆದವು.ಆದರೂ ಮಳೆರಾಯ ಕೃಪೆ ತೋರಲಿಲ್ಲ.
 ------------------------------

ಸ್ವಲ್ಪ ಹೊತ್ತಿನ ನಂತರ ಅಲ್ಲಿಗೆ ರಾಮೇಗೌಡನ ಹಮಾಲಿ ವೆಂಕಟ ಬಂದ .ಬಂದವನು ಮತ್ತೇರಿಸಿಕೊಂಡೆ ಬಂದಿದ್ದನು. ತೂರಾಡುತ್ತಿದ್ದ ವೆಂಕಟನನ್ನು ದುರುಗುಟ್ಟಿಕೊಂಡು ನೋಡಿದ ಗೌಡ" ಥೂ ಹಲ್ಕಾ ನನ್ ಮಗನೆ.ಹಬ್ಬದ ದಿನನಾದ್ರು ನೆಟ್ಟಗೆ ಇರಕ್ಕೆ ಆಗಲ್ವೆನ್ಲಾ ನಿಂಗೆ,ಕೊಟ್ಟಿದ್ದ ದುಡ್ಡೆಲ್ಲ ಬರಿ ಕುಡಿಯೋಕ್ಕೆ ಆಯ್ತೇನೋ " ಎಂದು ಬೈಯ್ಯುತ್ತಿದ್ದಾಗ ಉರಿಯೋ ಬೆಂಕಿಗೆ ತುಪ್ಪ ಅನ್ನೋ ಹಾಗೆ ಹಾಗೆ,ಸರೋಜಮ್ಮ ಕೂಡ "ಮಕ್ಕಳಿಗೆ ಏನಾದ್ರೂ ಕೊಡ್ಸಿದ್ಯೋ ಇಲ್ವೋ ?" ಎನ್ನುತ್ತಾ "ಇನ್ ಮುಂದೆ ಈ ಹೆಂಡ ಗುಡುಕನಿಗೆ ದುಡ್ಡು ಕೊಡ ಬ್ಯಾಡಿ,ಇವನ ಕೂಲಿ ದುಡ್ಡನ್ನೆಲ್ಲ ಇವನ ಹೆಂಡತಿ ಕೈಲಿ ಕೊಡಿ" ಎಂದು ಗಂಡನಿಗೆ ತಾಕಿತು ಮಾಡಿದಳು.


"ಅಯ್ಯೋ ನಾನು ಕುಡಿದಿರೋದು ಬಿಟ್ಟಾಕಿ,ಈ ವರ್ಷ ನೋಡಿ ಮಳೆ ಇಲ್ದೆ ನಿಮ್ಮ ವ್ಯಾಪಾರ ಇಲ್ಲ.ಲಕ್ಷ್ಮಿ ಪೂಜೆ ಹೀಗೆ ಮಾಡಬೇಕಾಯಿತು" ಎಂದು ಬೇರೆ ಕಡೆ ಮಾತು ಎಳೆಯಲು ನೋಡಿದ.


"ಹೋಗ್ಲಿ ಬಿಡ್ಲಾ ಈ ವರ್ಷ ಹಿಂಗಾಯಿತು.ಮುಂದಿನ ವರ್ಷ ಮಳೆ ಚೆನ್ನಾಗಿ ಆಗುತ್ತೆ" ಅಂದ ಗೌಡ.


"ಥೋ ಗೌಡ್ರೆ,ಮುಂದಿನ ವರ್ಷ ಯಾಕೆ,ನಾಳೆನೆ ಮಳೆ ಬರುತ್ತೆ ನೋಡಿ" ಎಂದು ಅಭಯ ಸೂಚಿಸಿದ.


"ಮುಚ್ಕಂಡು ಹೋಗ್ಲ,ಅದೇನೋ ಹಬ್ಬದ ಊಟ ಇಸ್ಕಂಡು ಉಂಡು,ಮಲ್ಕೋ ಹೋಗು.ಕುಡಿದಿರೋದು ಇಳಿದ ಮೇಲೇ ಬೆಳಗ್ಗೆ ಬಾ" ಎಂದು ಗದರಿದ..


"ಇಲ್ಲ ಗೌಡ್ರೆ,ಈ ವರ್ಷ ಮಳೆ ಬರದೆ ಇರೋದಕ್ಕೆ ನಿಮ್ಮ ಜಾತಿಯವರೇ ಕಾರಣ.ಆ ಹುಚ್ಚಿ ಇದ್ಲಲ್ಲ ಆ ತೀರ್ಥಿ ಅವಳೇ ಕಾರಣ"ಅಂದ..

--------------------------------------
ತೀರ್ಥಿ,ಚಿಕ್ಕ ವಯಸ್ಸಿಗೆ ಮದುವೆ ಮಾಡಿಸಿದ್ದರಿಂದ ಸಂಸಾರ ಮಾಡಲು ಒಲ್ಲೆ ಎಂದು ಕೆಲವೆ ದಿನಗಳಲ್ಲಿ ತವರಿಗೆ ಬಂದಿದ್ದಳು.ಊರಿನ ಜನ ಗಂಡ ಬಿಟ್ಟವಳು ಎಂದು ಚೇಡಿಸುತ್ತಿದ್ದರು.ಗಂಡನ ಮನೆಯಿಂದ ಬರುವಷ್ಟರಲ್ಲಿ ಗರ್ಭಿಣಿ ಆಗಿದ್ದ ತೀರ್ಥಿ ಕೆಲವು ದಿನಗಳಲ್ಲಿ ಒಂದು ಹೆಣ್ಣು ಮಗುವನ್ನು ಹಡೆದಳು .ಅಷ್ಟರಲ್ಲೇ ಎಲ್ಲರ ಹಿರಿತದ ಮಾತುಗಳನ್ನು ಕೇಳಿ ಕೇಳಿ ಅವಳ ಮನಸ್ಥಿತಿ ಹದಗೆಟ್ಟಿತ್ತು.ತನ್ನ ಮಗುವಿಗೆ ಎದೆ ಹಾಲು ಉಣಿಸುವಷ್ಟು ಪ್ರಮೇಯವೂ ಅವಳಲ್ಲಿ ಇರಲಿಲ್ಲ..ಎಲ್ಲರೂ ತಲೆ ಕೆಟ್ಟವಳು ಎಂದು ಕರೆಯುತ್ತಿದ್ದರು.ಕೊನೆಗೊಂದು ದಿನ ಅವಳು ಹುಚ್ಚಿಯೇ ಆಗಿಬಿಟ್ಟಳು.

ಅವಳ ಗಂಡ ಬಂದು ತನ್ನ ಮಗುವನ್ನು ಕರೆದು ಕೊಂಡು ಹೋದ.ಇವಳನ್ನು ಯಾವ ಆಸ್ಪತ್ರೆಗೆ ತೋರಿಸಿದರೂ ಕಾಯಿಲೆ ವಾಸಿ ಆಗಲಿಲ್ಲ.ಕೊನೆಗೆ ತವರು ಮನೆಯವರು ಕೂಡ ಮನೆಯಿಂದ ಹೊರದಬ್ಬಿದರು.ನಂತರ ವರ್ಷಾನು ಗಟ್ಟಲೆ ಬೀದಿ ಬೀದಿ ಅಲೆಯುತ್ತ,ಊರೂರು ಅಲೆಯುತ್ತ ಯಾರ್ಯಾರೋ ಮನೆಯಲ್ಲಿ ಉಳಿದಿದ್ದು ಅಳಸಿದ್ದನೆಲ್ಲ ಕೊಟ್ಟರೆ ಅದನ್ನೇ ಇಸಿದು ಕೊಂಡು ತಿಂದು ಬದುಕುತ್ತಿದ್ದಳು. ಅವಳನ್ನು ಕಂಡು ದಯೆ ತೋರಿದವರು ಒಂದಷ್ಟು ಜನ.ಅಯ್ಯೋ ಪಾಪ ಎಂದು ಮರುಗಿದವರು ಇನ್ನಷ್ಟು ಜನ.ತಿಂಗಳು ಗಟ್ಟಲೆ ಉಟ್ಟ ಸೀರೆಯಲ್ಲೇ ಇದ್ದು ,ರವಿಕೆ ಎಲ್ಲ ಹರಿದು ಹೊಗಿ,ಸ್ತನಗಳೆಲ್ಲ ಕಾಣಿಸುತ್ತಿದ್ದರೂ ಅದರ ಪ್ರಮೇಯವೇ ಇಲ್ಲದೆ ಅವಳು ಓಡಾಡುತ್ತಿದ್ದಾಗ ಬಟ್ಟೆ ಉಡಿಸಿದ ಹೆಂಗಸರು ಒಂದಷ್ಟು ಜನ.ಕೆಲವೊಮ್ಮೆ ಸೆರಗು ಕೆಳಗಿಳಿದು ಹೇಗೆ ಬೇಕಾಗಿ ಹಾಗೆ ಇದ್ದಾಗ,ಛೇಡಿಸಿದ ಮನಸುಗಳು ಕೆಲವು ,ಕಾಮಾಂಧತೆ ಇಂದ ನೋಡಿದ ಕಣ್ಣುಗಳು ಹಲವು.ಹೀಗಿದ್ದ ತೀರ್ಥಿ ಒಂದು ದಿನ ಸತ್ತಳು.

"ಪಾಪ,ಆ ಹುಚ್ಚಿ ಏನ್ ಮಾಡಿದ್ಲು ನಿಮಗೆ ?ಏನೋ ಸತ್ತಳು,ಅವಳು ಬದುಕಿದ್ದರು ಏನ್ ಪ್ರಯೋಜನ ಇತ್ತು ಬಿಡಿ,ಪಾಪ ಅವಳ ಮಗಳು ಬೇರೆ ದೊಡ್ದವಳಾಗುತಿದ್ದಾಳೆ. ಇಂಥವಳು ತನ್ನ ತಾಯಿ ಅಂತ ಅವಳಿಗೆ ಗೊತ್ತಾಗದೆ ಇರೋದೇ ಒಳ್ಳೇದು.ಪಾಪ ಅವಳ ಗಂಡ ಹೇಗೋ ಸಾಕ್ತಿದ್ದಾನೆ ಆ ಮಗೂನ."ಎಂದು ಅವಳ ಬಗ್ಗೆ ಕರುಣೆ ತೋರುತ್ತಾ ವೆಂಕಟನಿಗೆ ಹೇಳಿದಳು

"ಅಯ್ಯೋ,ಅಮ್ಮ ಅವಳ ಬೆನ್ನಲ್ಲಿ ತೊನ್ನು ಇತ್ತು.ಅವಳನ್ನು ಹೂತಾಕುವ ಬದಲು ಸುಟ್ಟಿದ್ರೆ ಈ ಥರ ಬರಗಾಲ ಬರುತ್ತಿರಲಿಲ್ಲ" ಎಂದು ಮುಂದುವರೆಸಿದ..

'ಅವಳಿಗೆ ತೊನ್ನು ಇದ್ದದಕ್ಕು ,ಮಳೆ ಬರದೆ ಇರೋದಕ್ಕೂ ಏನ್ಲಾ ಸಂಭಂದ "ಎಂದು ಗೌಡ ಗದರಿದ.

'ಆ ತೊನ್ನು ಭೂಮಿ ಒಳಗೆ ಕರಗಲ್ವಂತೆ ಬುದ್ಧಿ.. ಆ ಮೂಳೆಗಳು ಬೇರು ಬಿಡುತ್ತಂತೆ..ಅದು ಹಾಗೆ ಬೆಳಿತಾ ಹೋಗುತ್ತೆ.ಅಲ್ದೆ ಅವರ ಬಾಯಿ ಯಾವಾಗಲೂ ಕಿಸ್ಕೊಂಡೆ ಇರುತ್ತಂತೆ.ಅಂಥವರನ್ನ ಸುಡಬೇಕಂತೆ.ಹೂತಾಕಿದರೆ ಅದೊಂಥರ ಶಾಪ ಇದ್ದ ಹಾಗೆ,ಮಳೆ ಬರಲ್ವಂತೆ .ನೋಡಿ ಅವಳು ಸತ್ತಿದ್ದು ಯುಗಾದಿಗು ಮುಂಚೆ.ಅವತ್ತಿಂದ ಇವತ್ತಿನವರೆಗೂ ಒಂದು ಹನಿ ಮಳೆ ಬಂದಿಲ್ಲ": ಅಂದ..

ಗೌಡ ಯೋಚನಾ ಮಗ್ನನಾಗಿದ್ದಾಗ ವೆಂಕಟ ಮತ್ತೆ ಮುಂದುವರೆಸುತ್ತಾ "ಈ ವರ್ಷ ಈ ಅಶ್ವಿನಿ,ಭರಣಿ ಮಳೆ ಯಾವ್ದು ಬರಲಿಲ್ಲ.ಏಕಾದಶಿ ದಿನ ಕಡೆ ಪಕ್ಷ ಒಂದು ಹನಿನಾದ್ರು ಮಳೆ ಬರೋದು..ಈ ವರ್ಷ ಆ ಪಾಪ್ ಮುಂಡೆ ದೆಸೆ ಇಂದ ಒಂದೇ ಒಂದು ಹನಿ ಮಳೆ ಇಲ್ಲ..ಇನ್ನೊಂದೆರಡು ತಿಂಗಳು ಕುಡಿಯೋಕ್ಕೂ ನೀರಿರಲ್ಲ ನೋಡ್ತಿರ್ರಿ" ಅಂದ.

ಅಷ್ಟರೊಳಗೆ ಸ್ವಲ್ಪ ವಿಜ್ಞಾನ ಓದಿಕೊಂಡಿದ್ದ ಗೌಡನ ಹಿರಿ ಮಗ ಬಂದು: "ವೆಂಕಟಪ್ಪ ಚರ್ಮದಲ್ಲಿ ಮೆಲಾನಿನ್ ಅಂಶ ಕಡಿಮೆ ಆದಾಗ ಚರ್ಮ ಬಿಳಿ ಬಣ್ಣಕ್ಕೆ ತಿರುಗುತ್ತೆ.ಅದು ಒಂಥರಾ ಚರ್ಮ ರೋಗ ಅಷ್ಟೇ.ಅದಕ್ಕೂ ಮಳೆ ಬರದೇ ಇರೋದಕ್ಕೂ ಏನು ಸಂಭಂದ ಇಲ್ಲ. ಕುಡಿದು ಏನೇನೋ ಮಾತಾಡಬೇಡ ಹೋಗು"ಅಂದ..

"ನೋಡ್ತಿರ್ರಿ.ನೀವೆಲ್ಲ ,ಇವತ್ತು ಅವಳ ಹೆಣ ಹೊರಗೆ ತೆಗೆದು ಸುಡ್ತಿವಿ,ನಮ್ಮ ಹಟ್ಟಿಯವರು,ಬೆಸ್ತರ ಹಟ್ಟಿಯವರು ಎಲ್ಲ ಸೇರ್ಕೊಂಡು " ಎಂದು ತಾನು ಏನೋ ಸಾಧಿಸಲು ಹೊರಟಿರುವ ಹಾಗೆ ಬೀಗಿದ..

"ಯಾರೋ ನಿಂಗೆ ಇದನ್ನೆಲ್ಲಾ ಹೇಳಿದ್ದು "ಅಂದಾಗ "ಪಕ್ಕದ ಊರಿನ ಭೋರಾಚಾರಿ .ಅದೇ ಶಾಸ್ತ್ರ ಹೇಳುತ್ತಾನಲ್ಲ ಅವನು"ಅಂದ.

"ಗೌಡ್ರೆ,ಇವತ್ತು ಅಮಾವಾಸ್ಯೆ ಅಲ್ವ ಇವತ್ತೇ ಮಧ್ಯ ರಾತ್ರಿ ಹೆಣ ಹೊರಕ್ಕೆ ತೆಗೆದು ಸಡಬೇಕಂತೆ.ಇವತ್ತು ನಾವೊಂದು ೧೫-೨೦ ಜನ ನಮ್ಮ ಹಟ್ಟಿಯವರು ಹೋಗ್ತಿದ್ದೀವಿ .ಹೋದ ತಿಂಗಳು ಅಮಾವಾಸ್ಯೆ ದಿನ ಸಡಕ್ಕೆ ಯೋಚನೆ ಮಾಡಿದ್ವಿ.ಆ ಆಚಾರಿ ಯಾವ್ದೋ ಊರಿಗೆ ಪೂಜೆಗೆ ಹೋಗಿದ್ದ,ಅದಕ್ಕೆ ಈ ತಿಂಗಳು ಅಮಾವಾಸ್ಯೆ  ದಿನ ಪೂಜೆ ಮಾಡ್ತೀನಿ ಅಂತ ಹೇಳಿದ್ದ "

"ಮುಚ್ಕಂಡ್ ಹೋಗ್ಲಾ , ಆ ಅಚಾರಿಗೆ ಯಾವ್ದು ಗಂಟು ಹೊಡೆಯೋ ಪೂಜೆ ಇರಲಿಲ್ಲ ಅನ್ಸುತ್ತೆ ಈ ಅಮಾವಾಸ್ಯೆಗೆ ,ಅದಕ್ಕೆ ನಿಮಗೆ ಏನೇನೋ ತಲೆಗೆ ಹಚ್ಚಿದ್ದಾನೆ ಅವನು, ಮಳೆ ಬರೋ ಹಾಗಿದ್ರೆ ಹೋದ ತಿಂಗಳೇ ಸುಟ್ಟಿದ್ದರೆ ಇಷ್ಟೊತ್ತಿಗೆ ಮಳೆ ಬರೋದಲ್ವ " ಎಂದು ಕೇಳಿದ ..

"ಹೋಗ್ಲಿ ಬಿಡಿ,ನಾಳೆ ಒಳಗೆ ಮಳೆ ಬರ್ಲಿಲ್ಲ ಅಂದರೆ ಕೇಳಿ,ಅವಾಗ ಮಾತಾಡ್ತೀನಿ,ನಿನ್ನೆ ಪೂಜೆಗೆ ಬೇಕಾಗಿರೋ ಸಾಮನುಗಳನ್ನ ಕೊಡ್ಸಿ ಬಂದಿದ್ದೀವಿ."ಎಂದು ತಿರುಗುತ್ತರ ನೀಡಿ ಹಬ್ಬದ ಊಟ ಉಂಡು ಮನೆ ಕಡೆ ಹೊರಟ .

ಕುಡಿದ ಅಮಲಿನಲ್ಲಿ ವಾಕ್ ಇಲ್ಲದವನ ಹಾಗೆ ಮಾತಾಡುತ್ತಿದ್ದಾನೆ ಬಡ್ಡಿ ಮಗ,ನಾಳೆ ಬರಲಿ,ಜಾಡಿಸ್ತಿನಿ ಎಂದು ಗೊಣಗುತ್ತಾ ಒಳ ನಡೆದ ಗೌಡ..
 ______________________________________________

ಬೆಳ ಬೆಳಗ್ಗೆ ಬಾಗಿಲಿಗೆ ನೀರು ಹಾಕಿ ಸಾರಿಸಲು ಹೊರ ಬಂದ ಸರೋಜಮ್ಮ ಹಿಂದಿನ ದಿನ ರಂಗೋಲಿಯ ಮೇಲೆ ಇಟ್ಟಿದ್ದ ದೀಪ ತರಲು ಹೋದಾಗ ,ರಂಗೊಲಿಯೆಲ್ಲ ಅಳಿಸಿ ಹೋಗಿದ್ದು,ಸಾರಿಸಿದ ಸಗಣಿ ಎಲ್ಲ ಮರೆಯಾಗಿದ್ದು,ದೀಪಗಳು ಕೂಡ ರಾತ್ರಿ ಇಡೀ ಸುರಿದ ಮಳೆಯ ನೀರಿನ ಜೊತೆ ಕೊಚ್ಚಿ ಕೊಂಡು ಹೋಗಿತ್ತು ಅಷ್ಟರಲ್ಲಿ ಮನೆಯ ಕೆಲಸಕ್ಕೆ ಬಂದ ವೆಂಕಟನ ಹೆಂಡತಿ "ಅಮ್ಮ, ರಾತ್ರಿ,ಆ ಆಚಾರಿ,ಆ ಹುಚ್ಚಿ ಇದ್ಲಲ್ಲ ತೀರ್ಥಿ ,ಅವಳ ಹೆಣಾನ ಸಮಾಧಿ ಇಂದ ಹೊರಕ್ಕೆ ತೆಗೆದು ಸುಟ್ಟು ಹಾಕಿದನಂತೆ "ಎಂದಳು.

ಅವಳ ಧ್ವನಿಯಲ್ಲಿ ಆಶ್ಚರ್ಯ ಭಯ ಎಲ್ಲವೂ ಇತ್ತು ಮತ್ತು ಈ ಕಾರ್ಯ ಯೋಜನೆಯಲ್ಲಿ ಅವಳ ಗಂಡನ ಸಹ ಭಾಗಿತ್ವವೂ ಇದೆ ಮತ್ತು ಇದು ಮುಂಚೆಯೇ ಯೋಜಿಸಿದ್ದು ಎಂದು ಅವಳಿಗೆ ತಿಳಿದಂತೆ ಕಂಡು ಬರಲಿಲ್ಲ..

"ಅಯ್ಯೋ ಶಿವನೆ, ನೆನ್ನೆ ರಾತ್ರಿ ನಿನ್ನ ಗಂಡ ಹೇಳಿದಾಗ ನಾವು ಕುಡಿದು ಏನೇನೋ ಮಾತಾಡುತ್ತಿದ್ದಾನೆ ಅಂದು ಕೊಂಡಿದ್ವಿ ಆ ಆಚಾರಿ ಜೊತೆ ನಿನ್ನ ಗಂಡನೂ ಹೋಗಿದ್ದ ಅನ್ಸುತ್ತೆ " ಎಂದು ಹೇಳುತ್ತಾ "ಇನ್ನು ಏನೇನ್ ಕಾದಿದೆಯೋ ಈ ಊರಲ್ಲಿ" ಎಂದು ಗೊಣಗುತ್ತ ಮನೆ ಒಳ ಒಕ್ಕಳು ...

[ಈ ಕಥೆಯಲ್ಲಿ ಇರುವ ಪಾತ್ರಗಳು ಕಲ್ಪನೆ ಅಷ್ಟೇ... ಆದರೆ ಕೆಲವು ಸನ್ನಿವೇಶಗಳು ಕೆಲವು ಹಳ್ಳಿಗಳಲ್ಲಿ ಇರುವ ಒಂದು ಮೂಢ ನಂಬಿಕೆ.ಅದು ವಾಸ್ತವದ ಸಂಗತಿ ಕೂಡ ಹೌದು...]
(ಅಂದ ಹಾಗೆ ಬಹಳ ದಿನಗಳ ನಂತರ ಒಂದು ಕಥೆ ಬರೆದಿದ್ದೇನೆ..)

Wednesday, December 5, 2012

ಹನಿಗಳು

೧.ಅದೆಷ್ಟು ಸೊಕ್ಕು ನಿನ್ನ ಮುಂಗುರುಳಿಗೆ
ರೆಪ್ಪೆ ಹಾದು,ಕಣ್ಣಂಚನು ಸರಿದು
ಕೆನ್ನೆಯ ಸವರುವುದು....
ಆಗ ಅದೇನೋ ಸಂಕಟ ನನ್ನೊಳಗೆ
ಇಲ್ಲವಲ್ಲ ಈ ಅವಕಾಶ ಎಂದೂ ನನ್ನ ತುಟಿಗೆ....


೨.ಕಾಲಿಗೆ ಗೆಜ್ಜೆ ಕಟ್ತಾರೆ ನಮ್ಮ್ ಕೆಲವು ಹೆಣ್ಣ್ ಮಕ್ಕಳು
ಆದ್ರೆ ಯಾಕೋ ಒಂದೇ ಕಾಲಿಗ್ ಕಟ್ಟೋ ಗೀಳು..
ಇನ್ನೊಂದ್ ಎಲ್ಲವ್ವಾ,
ಬಿದ್ದ್ ಗಿದ್ದ್ ಹೊತೇನ್ ?
ಅಂತ ಕೇಳಿದ್ರೆ ಹೇಳ್ತಾರಾ
"ಯು ನೋ, ದಿಸ್ ಇಸ್ ಫ್ಯಾಶನ್ "