Sunday, January 20, 2013

ಕುಮಾರ ಪರ್ವತ

ಬಹಳ ದಿನಗಳಿಂದ ಕುಮಾರ ಪರ್ವತಕ್ಕೆ ಚಾರಣ ಹೋಗಬೇಕು ಎಂದು ಕೊಂಡಿದ್ದೆನಾದರು ಅದು ಕೈ ಗೂಡಿರಲಿಲ್ಲ..ನನ್ನ ಪಾಲಿಗೆ ಅದು ಮರೀಚಿಕೆ ಆಗಿಬಿಟ್ಟಿತ್ತು..ಕೆಲ ದಿನಗಳ ಹಿಂದೆ ಶ್ರೀಕಾಂತ್ ಅವರ ಜೊತೆ ಮಾತಾಡುವಾಗ ಸಧ್ಯದಲ್ಲೇ ಕುಮಾರ ಪರ್ವತಕ್ಕೆ ಚಾರಣ ಹೋಗುವ ಯೋಜನೆ ಇದೆ ಅಂದರು..ಥಟ್ ಅಂತ ನಾನು ಬರಬಹುದೇ ನಿಮ್ಮ ತಂಡದ ಜೊತೆ ಎಂದಾಗ ತತ್ ಕ್ಷಣ ಆಗಬಹುದು ಎಂದು ಸಮ್ಮತಿ ಇತ್ತರು.ಜೊತೆಗೆ ನನ್ನ ಸ್ನೇಹಿತನೂ ಕೂಡ ಬರುತ್ತಾನೆ ಅಂದಾಗ,ಆಕಾಶ ನೋಡೋಕ್ಕೆ ನೂಕು ನುಗ್ಗಲಂತೆ ,ಕರ್ಕೊಂಡು ಬನ್ನಿ ಅವರನ್ನು ಕೂಡ ಅಂದರು.

ಸರಿ ಜನವರಿ ಮೊದಲ ವಾರಾಂತ್ಯ ಹೋಗುವುದು ಎಂದು ನಿಶ್ಚಯ ಆಯಿತು.ನನಗೆ ಮತ್ತು ನನ್ನ ಗೆಳೆಯ ದರ್ಶನ ಇಬ್ಬರಿಗೂ ಅಲೆಮಾರಿಗಳು ಗುಂಪಿನ ಜೊತೆಗೆ ಮೊದಲ ಚಾರಣ.ಜೊತೆಗೆ ಕುಮಾರ ಪರ್ವತ ಕೂಡ ಮೊದಲ ಬಾರಿ.ಒಳಗೆ ಏನೋ ತುಮುಲ,ಕುಮಾರ ಪರ್ವತ ನೋಡುವ ಸಿರಿಗೋ,ಅಲ್ಲಿನ ಗಿರಿ ಕಂದರಗಳನ್ನು ಅನುಭವಿಸುವ ತವಕಕ್ಕೋ ಇರಬೇಕು.

ಜನವರಿ ೪ನೆ ತಾರೀಖು ರಾತ್ರಿ ೯.೦೦ ಘಂಟೆಗೆ ನಾನು,ದರ್ಶನ್ ಇಬ್ಬರೂ ಅಲೆಮಾರಿಗಳ ಸದಸ್ಯರಾದ ಶ್ರೀಕಾಂತ್,ಸಂದೀಪ್,ಪ್ರಶಾಂತ್ ಮತ್ತು  ರವಿಕಾಂತ್ ಎಲ್ಲರನ್ನೂ ಮೆಜೆಸ್ಟಿಕ್ ನಲ್ಲಿ ಒಂದು ಗೂಡಿ ಸುಭ್ರಮಣ್ಯ ಬಸ್ಸನ್ನು ಏರಿದೆವು..ಕುಮಾರ ಪರ್ವತವನ್ನು ಏರುವ ತವಾಕದಲ್ಲಿ ಸರಿಯಾಗಿ ನಿದ್ದೆಯೂ ಬರಲಿಲ್ಲ.ಮಾರನೆ ದಿನ ಬೆಳಗ್ಗೆ ೫.೦೦ ಘಂಟೆಗೆ ಸುಭ್ರಮಣ್ಯ ತಲುಪಿದಾಗ ಎಲ್ಲಿಂದ ಶುರು ಮಾಡುವುದು ಎನ್ನುವುದೊಂದೇ ಪ್ರಶ್ನೆ ನನಗಂತು.
ಕಾಡಿನ ಹಾದಿ 

ಅಲ್ಲಿಂದ ಸೀದಾ ನಿಯೋ ಮೈಸೂರ್ ಕೆಫೆಯಲ್ಲಿ ಲಘು ಉಪಹಾರ ಮುಗಿಸಿ ಪರ್ವತದ ತುದಿಗೆ ಹೆಜ್ಜೆ ಹಾಕುತ್ತಾ ಸಾಗಿದೆವು.ಅದಾಗಲೇ ನಮ್ಮ ರೀತಿಯ ಅನೇಕ ತಂಡಗಳು ಕೂಡ ಚಾರಣಕ್ಕೆ ಸಿದ್ಧ ಆಗಿದ್ದವು.ಅಲ್ಲಿಂದ ಸುಮಾರು ೫ ಕಿಲೋ ಮೀಟರ್  ವರೆಗೆ ಕಾಡಿನ ಹಾದಿಯಲ್ಲಿ ಸಾಗಬೇಕು.ಚಾರಣದ ಈ ಹಂತ ಅಷ್ಟೇನೂ ಆಯಾಸ ಅಲ್ಲದಿದ್ದರೂ ಮುಂದಿನ ಹಾದಿ ಸ್ವಲ್ಪ ಕಷ್ಟವೇ ಅನ್ನಬೇಕು.ಈ ಹಾದಿಯಲ್ಲೇ ಮಧ್ಯದಲ್ಲಿ ಸಿಗುವುದು ಭೀಮನ ಕಲ್ಲು..ಆ ಕಲ್ಲಿಗೆ ಬೆನ್ನು ತಾಗಿಸಿ ಮಲಗಿದರೆ ಅದೇನೋ ಒಂದು ರೀತಿಯ ಆಯಾಸ ಮಾಯವಾದಂತೆ...ಕೆಲ ಕಾಲ ಅಲ್ಲಿ ಮಲಗಿ,ಚಾಕೊಲೇಟ್ ಗಳನ್ನ ತಿಂದು ಮತ್ತೆ ಚಾರಣ ಶುರು ಮಾಡಿದೆವು.ಕಾಡಿನ ಹಾದಿ ಮುಗಿದ ಕೂಡಲೇ ಪುಷ್ಪಗಿರಿ ವ್ಯಾಪ್ತಿಯಲ್ಲಿ ಬರುವ ಹುಲ್ಲುಗಾವಲು ಸಿಗುತ್ತದೆ.ಇಲ್ಲಿ ಮತ್ತೆ ಒಂದು ಸಣ್ಣ ವಿಶ್ರಾಂತಿ ತೆಗೆದು ಕೊಂಡಿದ್ದು ಆಯಿತು.ಜೊತೆಗೆ ಒಂದಷ್ಟು ತಿನಿಸುಗಳು ನಮ್ಮ ಹೊಟ್ಟೆ ಸೇರಿದವು.

ಪುಷ್ಪಗಿರಿ ವ್ಯಾಪ್ತಿಯಲ್ಲಿ ಬರುವ ಹುಲ್ಲುಗಾವಲು 


ಅಲ್ಲಿಂದ ನಮ್ಮ ಚಾರಣ ಮುಂದುವರೆಸಿ ಸೀದಾ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಬಳಿಗೆ ಬಂದೆವು..ಅದಕ್ಕೂ ಮುಂಚೆ ಸಿಗುವುದೇ ಭಟ್ಟರ ಮನೆ(ಭಟ್ಟರ ಮನೆ ಬಗ್ಗೆ ಮುಂದೆ ಬರೆಯುತ್ತೇನೆ)..ಅರಣ್ಯ ಅಧಿಕಾರಿಗಳ ಸಲಹೆ ಯಂತೆ ಅಲ್ಲೇ ಒಂದು ಮರದ ನೆರಳಿನಲ್ಲಿ ಕೂತು ತಂದಿದ್ದ ತಿನಿಸುಗಳನ್ನು ತಿನ್ನಲು ಅಣಿ ಆದೆವು... ಅವರ ಸಹಾಯಕ ಕೂಡ ನಮಗೆ ನೀರು ಎಲ್ಲವನ್ನು ಕೊಟ್ಟು ಸಹಕರಿಸಿದರು... ತಂದಿದ್ದ ರೊಟ್ಟಿ,ಚಪಾತಿ,ಪರೋಟ  ಎಲ್ಲವೂ  ಚಟ್ನಿ ಪುಡಿ,ಉಪ್ಪಿನ ಕಾಯಿ ,ಮೊಸರಿನ ಜೊತೆ ಸೇರಿಕೊಂಡು ಲೀಲಾಜಾಲವಾಗಿ ಅನ್ನನಾಳದಲ್ಲಿ ಇಳಿದು ಹೊಟ್ಟೆ ಸೇರಿಕೊಂಡಿತು...ನಂತರ ಕೆಲ ಕಾಲ ಅಲ್ಲಿ ನಿದ್ದೆ ಮಾಡಿ ನಮ್ಮ ಮುಂದಿನ ಹಾದಿಯನ್ನು ಹಿಡಿದೆವು...
ಅಲ್ಲಿ ಹೋಗುವ ಪ್ರತಿಯೊಬ್ಬ ಚಾರಣಿಗ ಕೂಡ ಚೆಕ್ ಪೋಸ್ಯ್ನಲ್ಲಿ ನಿಗದಿತ ೨೦೦ ರೂಪಾಯಿ ಗಳನ್ನ ಕೊಟ್ಟು ಚಾರಣಕ್ಕೆ ಅನುಮತಿಯನ್ನು ಪಡೆಯಬೇಕು...


ಅಲ್ಲಿಂದ ನಮ್ಮ ಗುರಿ ಇದ್ದದ್ದು ಕಲ್ಲು ಮಂಟಪದ ಬಳಿಗೆ.ಅರಣ್ಯ ಕಚೇರಿ ಬಿಟ್ಟರೆ ನಮಗೆ ನೀರು ದೊರೆಯುವ ಸ್ಥಳ ಇದ್ದದ್ದು ಆ ಮಂಟಪ ಬಳಿ   ಮಾತ್ರ.ಆಗಾಗಿ ಅಲ್ಲಿವರೆಗೂ ಸಾಧ್ಯ ಆದಷ್ಟು ನೀರನ್ನು ತೆಗೆದು ಕೊಂಡು ಹೋಗುವುದು ಸೂಕ್ತ. ಅಲ್ಪ ಸ್ವಲ್ಪ ನೆರಳು ಇತ್ತು..ಈ ಜಾಗದಿಂದ ಮಂಟಪದವರೆಗೆ ಹುಲ್ಲುಗಾವಲು  ಪ್ರದೇಶ...ಕೆಲವು ಕಡೆ ಸಮತಟ್ಟವಾದ  ಪ್ರದೇಶ.ಇನ್ನು ಕೆಲವು ಕಡೆ ಒರೆ ಕೊರೆಯಾದ ಪ್ರದೇಶ... ಅದಾಗಲೇ ಕುಮಾರ ಪರ್ವತ ನಮ್ಮ ಕಣ್ಣಿಗೆ ಕಾಣುತಿತ್ತು..ಆದಷ್ಟು ಬೇಗೆ ಅದನ್ನು ತಲುಪಬೇಕು ಎಂಬ ಹುಮ್ಮಸು.ಆದರೆ ಸ್ವಲ್ಪ ಆಯಾಸ ನೀಗಿಸಿ ಕೊಳ್ಳಲೇ ಬೇಕಾಗಿತ್ತು.. ಅಂತು ಇಂತೂ ಕಲ್ಲು ಮಂಟಪವನ್ನು ನಮ್ಮ ಪೂರ್ವ ನಿಗದಿತ ಸಮಯ ೨.೩೦ ಕ್ಕೆ ತಲುಪಿ,ಅಲ್ಲಿ ಕೊಂಚ ವಿಶ್ರಾಂತಿ ತೆಗೆದು ಕೊಂಡಿದ್ದಾಯಿತು.ನನಗೆ ಕೂರಲು ಸಹ ಮನಸ್ಸಿಲ್ಲ,ಮುಂದೆ ಹೋಗುತ್ತಿರಬೇಕು ಎಂಬ ಆಸೆ,ಆದರೂ ಎಲ್ಲರ ಜೊತೆ ಒಂದಷ್ಟು ಕಾಲ ವಿಶ್ರಮಿಸಿ ಮತ್ತೆ ಬಿಸ್ಕೆಟ್ ಮತ್ತು ಅದು ಇದು ತಿಂಡಿಗಳನ್ನು  ತಿಂದು ಅಲ್ಲೇ ಹರಿಯುತ್ತಿದ್ದ ಸಣ್ಣ ಝರಿ ಯಲ್ಲಿ ನೀರು ಕುಡಿದು ಮುಂದೆ ಹೊರಟೆವು... ಆ ಝರಿಯ ನೀರು ಮಾತ್ರ ಬಹಳ ರುಚಿಯಾಗಿತ್ತು ಮತ್ತು ಅಷ್ಟೇ ಸ್ವಚ್ಚವಾಗಿ  ಕೂಡ ಇತ್ತು. ಮುಂದೆ ಇದೆ ನೀರು ಹೋಗಿ ಸುಭ್ರಮಣ್ಯ ದಲ್ಲಿ ಹರಿಯುವ ಕುಮಾರ ಧಾರ ನದಿಯನ್ನು ತಲುಪುತ್ತದೆ ಎಂದು ಶ್ರೀಕಾಂತ್ ವಿವರಿಸಿದರು.

ಇನ್ನು ಬಹಳ ದೂರ ಸಾಗಬೇಕಿದೆ
ಕಲ್ಲು ಮಂಟಪ 

ಅಲ್ಲಿಂದ ಸೀದಾ ಶೇಷ ಪರ್ವತದ ಕಡೆ ನದಿಗೆ ಶುರು ಆಯಿತು.ಈ ಹಾದಿ ಕೂಡ ತುಸು ಕಷ್ಟ ಎಂದೇ ಹೇಳಬೇಕು ..ಆಯಾಸ ಆಗುವ ಜಾಗ...ಸ್ವಲ್ಪ ಕಡಿದಾದ ದಾರಿ ಕೂಡ...ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ಶೇಷ ಪರ್ವತ ತಲುಪಿ ಕೆಲ ಕ್ಷಣ ಸುತ್ತಮುತ್ತಲ ಪ್ರಕೃತಿಯ ಸುಂದರ್ಯವನ್ನು ಸವೆದು ಅಲ್ಲಿಂದ ತುಸು ದೂರ ನೆಡೆದು ಸಿಗುವ ಕಾಡಿನ ಪ್ರದೇಶದಲ್ಲಿ ನಮ್ಮ ಬಿಡಾರ ಹೂಡುವುದು ಎಂದು ನಿಶ್ಚಯ ವಾಯಿತು.ನಮ್ಮ ಟೆಂಟ್ ಗಳನ್ನ ತೆಗೆದು ಸಿದ್ಧ ಮಾಡಿದ್ದಾಯಿತು..ನಂತರ  ಸಂದೀಪ್ ಪುನಃ ಶೇಷ ಪರ್ವತಕ್ಕೆ ಹೋಗಿ ಬರುದಾಗಿ ತಿಳಿಸಿದರು. ಪ್ರಶಾಂತ್ ಅನ್ನು ಅಲ್ಲೇ ಬಿಡಾರದ ಬಳಿ  ಕೂರಿಸಿ ನಾನು,ದರ್ಶನ್,ಶ್ರೀಕಾಂತ್ ಮತ್ತು ರವಿ,,ಇಷ್ಟೂ ಜನ ಸ್ವಲ್ಪ ಮುಂದೆ ಹೋಗಿ ಅಲ್ಲಿ ಹರಿಯುತ್ತಿದ್ದ ಒಂದು ಸಣ್ಣ ಝರಿಯಲ್ಲಿ ನೀರು ತರಲು ಹೋದೆವು.. ಆ ನೀರು ಯಾವ ಬಿಸ್ಲೆರಿ ಗಿಂತ ಏನೂ ಕಡಿಮೆ ಇರಲಿಲ್ಲ ಎಂದೇ ಹೇಳಬಹುದು....ಸರಿ ನಾವು ನೀರು ತರುವಷ್ಟರಲ್ಲಿ ಪ್ರಶಾಂತ್ ಅಡುಗೆಗೆ ಬೇಕಾದ ಕಟ್ಟಿಗೆಗಳನ್ನು  ಸಿದ್ಧ ಮಾಡಿ ಇಟ್ಟಿದ್ದರು...

ಅಲ್ಲೇ ಇದ್ದ ಕಲ್ಲುಗಳನ್ನು ಜೋಡಿಸಿ ಒಲೆಯನ್ನು ಸಿಧ್ಹ ಮಾಡಿ,ತಂದಿದ್ದ ಎಂ ಟಿ ಅರ್  ಸಿಧ್ಹ ಅಡುಗೆ ಪೊಟ್ಟಣಗಳನ್ನು ಬೇಯಿಸಿ ತಿನ್ದಿದ್ದಾಯಿತು.ಬಿಸಿಬೇಳೆ ಬಾತ್.ಪಲಾವ್ ,ಅನ್ನ ರಸಂ,ಕೇಸರಿ ಬಾತ್,ಮಸಾಲ ರೈಸ್,ಟೊಮೇಟೊ ರೈಸ್ ಹೀಗೆ ಎಲ್ಲ ಬಗೆಯ ಪದಾರ್ಥಗಳು ನಮ್ಮ ಹೊಟ್ಟೆ ಸೇರಿಕೊಂಡವು.
ಒಂದಷ್ಟು ಕಾಲ ಹರಟೆ ಹೊಡೆದು ತ್ರಾಸ  ಪಟ್ಟಿದ್ದ ನಮ್ಮ ಕಾಲುಗಳಿಗೆ ಕೊಂಚ ವಿಶ್ರಾಮ ಕೊಟ್ಟೆವು..ಆದರೆ ಮನಸ್ಸಿಗೆ ಮಾತ್ರ ತ್ರಾಸ  ಆಗಿರಲಿಲ್ಲ,ಬದಲಾಗಿ ಕುಮಾರ ಪರ್ವತದ ತುದಿಯನ್ನು ನೋಡುವ ತವಕ..
ನಮ್ಮ ಟೆಂಟ್ ಮುಂದೆ ಅಡುಗೆ ಮಾಡಿ ಸವೆದಿದ್ದು 

ಮತ್ತೆ ಎಚ್ಚರ ಆಗಿದ್ದು ಬೆಳಗ್ಗೆ ೫ ಘಂಟೆಗೆ ನಮ್ಮ ಅಲಾರಂ  ಸದ್ದು ಮಾಡಿದಾಗಲೇ.ಒಬ್ಬೊಬ್ಬರಾಗಿ ಎದ್ದು ಕುಮಾರ ಪರ್ವತಕ್ಕೆ ಸೂರ್ಯೋದಯ ನೋಡಲು ಅಣಿ ಆದೆವು..ಅಷ್ಟರಲ್ಲಿ ಕೆಲವು ಬಗೆಯ ಸೂಪ್ ಗಳನ್ನು  ಕೂಡ ತಯಾರಿಸಿ ಸವೆದು ಹೊರಟೆವು...ಬಿಸಿ ಬಿಸಿ ಸೂಪ್ ಒಂದು ರೀತಿಯಲ್ಲಿ ಮುದ ನೀಡಿದ್ದಂತು ಸತ್ಯ. ನಾವು ತಂಗಿದ್ದ ಪ್ರದೇಶ ದಿಂದ ಸುಮಾರು ೨೦ ನಿಮಿಷ ಸಾಗಿದರೆ ಕುಮಾರ ಪರ್ವತದ ತುದಿ..ಮಧ್ಯದಲ್ಲಿ ಒಂದು ಸಣ್ಣ ಫಾಲ್ಸ್ ಕೂಡ ಸಿಗುತ್ತದೆ..ಅದನ್ನು ಕೂಡ ದಾಟಿ ಹೋಗಬೇಕು...ಮಳೆಗಾದಲ್ಲಿ ಅದು ಹರಿಯುತ್ತಿರುತ್ತದೆ...ಕುಮಾರ ಧಾರಾ ನದಿಯ ಮೂಲ ಇಲ್ಲೇ ಎಂದು ಹೇಳಬಹುದು..

ಕುಮಾರ ಪರ್ವತಕ್ಕೂ ಮುಂಚೆ ಸಿಗುವ ಒಂದು ಜಲಪಾತ..ಇಲ್ಲೇ ಕುಮಾರ ಧಾರಾ ನದಿ ಮೂಲ ಇರಬಹುದು...

ಅಲ್ಲಿ ಸೂರ್ಯೋದಯವನ್ನು ಸವೆದು ಅಲ್ಲೇ ಇದ್ದ ಸಣ್ಣ  ದೇವಸ್ಥಾನದಲ್ಲಿ ಪ್ರಾರ್ಥನೆ ಕೂಡ ಮಾಡಿದ್ದಾಯಿತು...ಆ ಎತ್ತರದ ಪ್ರದೇಶದಲ್ಲಿ ನಾನು ೪-೫ ಬಾರಿ ಪ್ರಣವವನ್ನು ಕೂಡ ಮಾಡಿದೆ...ಆ ಅನುಭವವನ್ನು ವಿವರಿಸಲು ಕಷ್ಟ..ಆದರೆ ಆ ಕ್ಷಣ  ಅದು ಬಹಳ ಹಿತವಾಗಿತ್ತು ಮತ್ತು ಅಷ್ಟೇ ಅಮೋಘವಾಗಿತ್ತು..
ಕುಮಾರ ಪರ್ವತದಿಂದ ಕಾಣುವ ಶೇಷ ಪರ್ವತ 

ಸೂರ್ಯೋದಯ 

ಕುಮಾರ ಪರ್ವತದಿಂದ ಕಾಣುವ  ಸುತ್ತ ಮುತ್ತಲ ಮನಮೋಹಕ ದೃಶ್ಯ ಕೆಲ ಕಾಲ ಅಲ್ಲಿ ಸಮಯ ಕಳೆದು ಮತ್ತೆ ನಮ್ಮ ಟೆಂಟ್ ಕಡೆಗೆ ಒಲ್ಲದ ಮನಸ್ಸಿನಿಂದ ಹೊರಟೆವು..ಬರುವಾಗ ಏನೋ ಒಂದು ಸಾಧಿಸಿದ ಸಂಭ್ರಮ,ಏನೋ ಒಂದು ಶಕ್ತಿ ಪಡೆದ ದಿವ್ಯ ಅನುಭವ...ಅಷ್ಟು ರೋಮಾಂಚನಕಾರಿ ಆಗಿತ್ತು ಕುಮಾರ ಪರ್ವತದ ತುತ್ತ ತುದಿ...

ಬೆಳಗ್ಗೆ ಬೆಳಗ್ಗೆ ದೇವರಿಗೆ ನಮನ 
ಕುಮಾರ ಪರ್ವತದ ತುತ್ತ ತುದಿಯಲ್ಲಿ ಅಲೆಮಾರಿಗಳು

ನಾವೆಲ್ಲಾ ಅಲ್ಲಿಂದ ಬರುವಷ್ಟರಲ್ಲಿ ಸಂದೀಪ್ ನ ಕೈ ಚಳಕದಲ್ಲಿ "ಅಲೆಮಾರಿಗಳು" ಎಂದು ಹೆಸರು ಅರಳಿತ್ತು.... ಅಲ್ಲಿ ಮತ್ತೆ ಒಂದಷ್ಟು ಫೋಟೋಗಳನ್ನು ತೆಗೆದು ಪರ್ವತವನ್ನು ಇಳಿಯಲು ಶುರು ಮಾಡಿದೆವು..ಮಧ್ಯದಲ್ಲೂ ಮತ್ತೆ ಹರಟೆ ಜೊತೆಗೆ ತಂದಿದ್ದ ಬಿಸ್ಕೆಟ್ ಮತ್ತು ಚಾಕೊಲೇಟ್ ಗಳು  ಖಾಲಿ  ಆಗುತ್ತಾ ನಮ್ಮ ಬ್ಯಾಗುಗಳ ತೂಕ ಕಡಿಮೆ ಆಗುತ್ತಿತ್ತು...

ಸಂದೀಪ್ ನ ಕೈ ಚಳಕ

ಕಾನನದ ಮಧ್ಯೆ ಅಲೆಮಾರಿಗಳು


ಮಧ್ಯಾನದ ಊಟಕ್ಕೆ ಸೀದಾ ಭಟ್ಟರ ಮನೆಗೆ ಬಂದೆವು.....ಸುಭ್ರಮಣ್ಯ ದಿಂದ ೫ ಕಿಲೋ ಮೀಟರ್ ಕಾಡಿನ ದಾರಿ ಸವೆದ ಮೇಲೆ ಈ ಭಟ್ಟರ ಮನೆ ಸಿಗುತ್ತದೆ..ಅವರು ಸುಮಾರು ೩೫ ವರ್ಷದಿಂದ ಅಲ್ಲೇ ನೆಲೆಸಿದ್ದಾರೆ..ಅಲ್ಲೇ ಒಂದು ಸಣ್ಣ ತೋಟ ಕೂಡ ಮಾಡಿಕೊಂಡಿದ್ದಾರೆ...ಅಲ್ಲಿ ಹೋಗುವ ಪ್ರತಿ ಚಾರಣಿಗ ನಿಗೆ ಅಲ್ಲಿ ಉಳಿಯಲು ವ್ಯವಸ್ಥೆ ಮತ್ತು ಊಟದ ವ್ಯವಸ್ಥೆ ಇದೆ...ಅಲ್ಲಿನ ಸಿಬ್ಬಂದಿ ಪ್ರತಿ ದಿನ ಕುಕ್ಕೆ ಸುಭ್ರಮಣ್ಯ ದಿಂದ  ಅಡುಗೆಗೆ ಬೇಕಾದ ಸಾಮಾನುಗಳನ್ನು ಸುಮಾರು ೫-೬ ಕಿ.ಮೀ  ಹೊತ್ತುಕೊಂಡೇ ಬರಬೇಕು...ಎಲ್ಲೂ  ಕೂಡ ವಾಹನದಲ್ಲಿ ಸಾಗಿಸುವ ಅವಕಾಶವೇ ಇಲ್ಲ...ನಿಜಕ್ಕೂ ಅವರ ಸೇವೆ ಶ್ಲಾಘನೀಯ...ಕುಮಾರ ಪರ್ವತಕ್ಕೆ  ಹೋಗುವ ಪ್ರತಿಯೊಬ್ಬ ಚಾರಣಿಗೆ ಕೂಡ ಅಲ್ಲಿ ಊಟವನ್ನು ಸವೆಯಲೇ ಬೇಕು..ಅಷ್ಟು ರುಚಿ ಮತ್ತು ಶುಚಿ ಕೂಡ... ನಿಜಕ್ಕೂ  ಕೂಡ ಆ ಭೋಜನ ಮನ ತೃಪ್ತಿ  ನೀಡುತ್ತದೆ...ಆ ನಿರ್ಜನ ಪ್ರದೇಶದಲ್ಲಿ ಇರುವುದು ಈ ಭಟ್ಟರ ಮನೆ ಮಾತ್ರ..ಅವರ ಸೇವೆಗೆ ಒಂದು ಸಲಾಂ ಹೇಳಲೇಬೇಕು... ಊಟ ದ ನಂತರ ಮತ್ತೆ ಕೊಂಚ ವಿಶ್ರಮಿಸಿ ಕಾಫಿ ಕುಡಿದು ಕುಕ್ಕೆಯತ್ತ ಪಯಣ ಮುಂದುವರೆಸಿದವು...
ಭಟ್ಟರ ಮನೆ ಸಿಬ್ಬಂದಿ ಜೊತೆಗೆ ಅಲೆಮಾರಿಗಳು
ಕುಮಾರ ಪರ್ವತವನ್ನು ಇಳಿದು  ಹೋಗುತ್ತಿರುವುದಕ್ಕೆ ಮನಸ್ಸು ಭಾರವಾಗಿತ್ತಾದರೂ ಮತ್ತೆ ಮಳೆಗಾಲ ಮುಗಿದ ಮೇಲೆ ಆಕ್ಟೋಬರ್ ತಿಂಗಳಿನಲ್ಲಿ ಮತ್ತೆ ಬರುವುದಾಗಿ ನಿಶ್ಚಯ ಮಾಡಿಕೊಂಡು ದಾಪುಗಾಲಿಟ್ಟೆವು ..ಸುಮಾರು ೫.೦೦ ಕ್ಕೆ ಕುಕ್ಕೆ ತಲುಪಿ ದಣಿದಿದ್ದ ದೇಹವನ್ನು ಹೊತ್ತು  ಕುಮಾರ ಧಾರಾ ನದಿಯಲ್ಲಿ ಮಿಂದೆದ್ದೆವು ...

ಅಷ್ಟರಲ್ಲಿ ಸಂದೀಪ್ ಅವರ ಟ್ರೈ ಪಾಡ್ ಕಳೆದು ಹೋಗಿರುವುದು ತಿಳಿಯಿತು...ಕೊನೆಗೆ ನಾವು ಬಂದಿದ್ದ ಆಟೋ ಹಿಂದೆ "ಕೈ ಮುಗಿದು ಏರು,ಇದು ಹಿಂದುತ್ವದ ತೇರು" ಎಂದು ಬರೆದಿದ್ದನ್ನು ಮೊದಲೇ ಗಮನಿಸಿದ್ದೆ..ಆಗಾಗಿ ಈ ಒಂದು ಗುರುತನ್ನು ಹಿಡಿದು  ಕೊಂಡು ಬೇರೆ ಆಟೋದವರ ಬಳಿ ಕೇಳಿದಾಗ ಕೆಲವೇ ನಿಮಿಷಗಳಲ್ಲಿ ಆ ಅಟೋ ಚಾಲಕ ನವೀನ ನಮ್ಮ ಕಣ್ಣ ಮುಂದೆ ಇದ್ದರು. ಸಂದೀಪ್ ನ ಟ್ರೈ ಪಾಡ್ ನಮ್ಮ ಕೈ ಸೇರಿತ್ತು... ಇವರನನ್ನು ಸಂಪರ್ಕಿಸಲು ಸಹಾಯ ಮಾಡಿದ ಬೇರೆ ಆಟೋದವರ ನಿಸ್ವಾರ್ಥತೆ ನಿಜಕ್ಕೂ ಮೆಚ್ಚಬೇಕು...ಜೊತೆಗೆ ನವೀನ ಅವರ ಮನೋಧರ್ಮ ಕೂಡ ಮೆಚ್ಚಬೇಕು...

ನಂತರ ಅಲ್ಲಿಂದ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ಮತ್ತೆ ಲಘು ಉಪಹಾರ ಸೇವಿ ಸೀದಾ ಬಸ್  ನಿಲ್ದಾಣಕ್ಕೆ ಬಂದು ನಮಗಾಗಿ ಕಾದಿದ್ದ ಬಸ್ಸನ್ನು ಏರಿ ನಮ್ಮ ಲಗೇಜ್ ಗಳನ್ನೂ ಇಟ್ಟು ತಲೆಗಳನ್ನು ಸೀಟಿಗೆ ಒರಗಿಸಿ ಮಲಗಿದ್ದಷ್ಟೇ ಗೊತ್ತು,ಮತ್ತೆ ಎಚ್ಚರ  ಆದದ್ದು ಬೆಂಗಳೂರು ತಲುಪಿದ ಮೇಲೆಯೇ..ಆ ಚುಮು ಚುಮು ಚಳಿಯಲ್ಲಿ ಕಾಫಿ ಸೇವಿಸಿ ಅಲ್ಲಿಂದ ಎಲ್ಲ ಅಲೆಮಾರಿಗಳು ನಮ್ಮ ನಮ್ಮ ದಾರಿ ಹಿಡಿದು ಹೊರಟೆವು...

ಅಂತೂ ಇಂತೂ ಶಿಖರ ತಲುಪಿ ಬಂದೆವು..
(ಶ್ರೀಕಾಂತ್ ಮತ್ತು ಸಂದೀಪ್ ಇಬ್ಬರಿಗೂ ನನ್ನ ಮನಃ ಪೂರ್ವಕ ಧನ್ಯವಾದಗಳು...ಈ ಚಾರಣಕ್ಕೆ ನನ್ನನ್ನು ಕೂಡ ಸೇರ್ಸಿಕೊಂಡಿದ್ದಕ್ಕೆ ಮತ್ತು ಒಳ್ಳೆಯ ಸಮಯವನ್ನು ನಿಮ್ಮ ಜೊತೆ ಕಳೆಯಲು ಅವಕಾಶ ಮಾಡಿ ಕೊಟ್ಟಿದ್ದಕ್ಕೆ..)

14 comments:

 1. ಸುಂದರ ಲೇಖನ. ನನಗೂ ಒಮ್ಮೆ ಅಲ್ಲಿಗೆ ಹೋಗುವ ಮನಸಿದೆ. ನೀವು ಉಪಯೋಗಿಸಿದ ಆ ಟೆಂಟ್ ಎಲ್ಲಿ ಸಿಗುತ್ತೆ?? ರೇಟ್ ಎಷ್ಟು??

  ReplyDelete
  Replies
  1. ಧನ್ಯವಾದ ಸರ್... ಖಂಡಿತ ಹೋಗಿ ಬನ್ನಿ ಅಲ್ಲಿಗೆ... ತುಂಬ ಒಳ್ಳೆಯ ಜಾಗ.... ಆ ಟೆಂಟ್ ಗಳು wildcraft ಶೋ ರೂಂ ನಲ್ಲಿ ಸಿಗುತ್ತೆ... ಅಲ್ಲದೆ ಕೆಲವು ಸ್ಪೋರ್ಟ್ಸ್ ಅಂಗಡಿಗಳಲ್ಲಿ ಕೂಡ ಸಿಗುತ್ತೆ... ೩೦೦೦ ರೂಪಾಯಿ ಇಂದ ೫೦೦೦ ಸಾವಿರದ ವರೆಗೆ ಸಿಗುತ್ತದೆ....

   Delete
 2. ಉತ್ತಮ ಮಾಹಿತಿ ಒದಗಿಸಿದ್ದೀರಿ. ಧನ್ಯವಾದಗಳು.

  ReplyDelete
 3. ಸುಂದರ ಲೇಖನ ಗಿರೀಶ್...ನಿಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು....ಎಲ್ಲರಿಗೂ ಉಪಯೋಗವಾಗುವಂತಹ ಮಾಹಿತಿಗಳನ್ನು ಒದಗಿಸಿದ್ದಿರಿ ....ಮತ್ತೊಮ್ಮೆ ಧನ್ಯವಾದಗಳು....

  ReplyDelete
  Replies
  1. ಲೇಖನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು ಸರ್...

   Delete
 4. ಚೆನ್ನಾಗಿದೆ ಗಿರಿ ಅವರೇ :-)
  ನನ್ನ ಬ್ಲಾಗಿನಲ್ಲಿ ಸೋಮವರಪೇಟೆಯ ಕಡೆಯಿಂದ ಹತ್ತಿ, ಸುಬ್ರಮಣ್ಯದ ಕಡೆಯಿಂದ ಇಳಿದ ಬಗ್ಗೆ ಬರೆದಿದ್ದರೆ ನಿಮ್ಮ ಬ್ಲಾಗಿನಲ್ಲಿ ಸುಬ್ರಮಣ್ಯದ ಕಡೆಯಿಂದ ಹತ್ತಿ ಅತ್ತಲೇ ಇಳಿದ ಬಗ್ಗೆ ಬರೆದಿದ್ದೀರ.
  ಕೆಲವರು ಸುಬ್ರಮಣ್ಯದ ಕದೆಯಿಂದ ಹತ್ತಿ ಸೋಮವಾರಪೇಟೆಯ ಕಡೆಯಿಂದಲೂ ಇಳಿಯುತ್ತಾರೆ.
  ಎಲ್ಲವೂ ಮನೋಹರ ಅನುಭವಗಳೇ ಎಂದು ಕೇಳ್ಪಟ್ಟಿದ್ದೇನೆ.
  ನಿಮ್ಮಂತೆಯೂ ನಾನು ಕುಮಾರ ಪರ್ವತಕ್ಕೆ ಹೋದದ್ದೂ ಮೊದಲನೆಯ ಬಾರಿಯೇ.

  ಸಖತ್ತಾದ ಲೇಖನ :-)

  ReplyDelete
  Replies
  1. ಮೊದಲಿಗೆ ನನ್ನ ಸ್ವಾಗತ ಪ್ರಶಸ್ತಿ...ನನ್ನ ಜೊತೆ ಇದ್ದವರಿಗೆ ಅದು ೫ನೆ ಬಾರಿಯ ಚಾರಣ ಅಲ್ಲಿ.. ಮತ್ತೆ ಅಲ್ಲಿಗೆ ಖಂಡಿತ ಹೋಗಲೇಬೇಕು ಎಂದು ನಿಶ್ಚಯ ಮಾಡಿದ್ದೇವೆ... ಮುಂದಿನ ಬಾರಿ ಸೋಮವಾರಪೇಟೆ ಕಡೆಯಿಂದ ಬರುವುದು ಎಂದು ಯೋಚಿಸುತ್ತಿದ್ದೇವೆ.. ಖಂಡಿತ ಅಲ್ಲಿನ ಅನುಭವ ಮನಮೋಹಕವಾದದ್ದು ...ನಿಮ್ಮ ಪ್ರತಿಕ್ರಿಯೆ ಧನ್ಯವಾದಗಳು....

   Delete
 5. ಸುಂದರ ಚಾರಣದ ಕಥನ ಗಿರೀಶ್....ಸಾಮಾನ್ಯ ನಾನು ಅನೇಕರ ಅನುಭವಗಳನ್ನು ಕೇಳಿದಂತೆ...ಕುಮಾರ ಪರ್ವತಕ್ಕೆ ಮೊದಲ ಪ್ರಯತ್ನ ಸಾಮಾನ್ಯ ಅರ್ಧದಲ್ಲಿ ನಿಲ್ಲುತ್ತದೆ ಎನ್ನುವುದು..ಆದ್ರೆ ನಿಮ್ಮ ಸ್ಥೈರ್ಯ, ಆತ್ಮವಿಶ್ವಾಸ ಮೊದಲ ಯತ್ನದಲ್ಲೇ ಯಶಸ್ಸನ್ನು ಕೊಟ್ಟಿತು...ಹೊಸಬರಿಗೆ ಹುಮ್ಮಸ್ಸನ್ನು ತುಂಬುವ...ಹಳಬರಿಗೆ ಆನಂದದ ಮೆಲುಕು ನೀಡುವ ಬರಹದ ರೀತಿ ಗಮನ ಸೆಳೆಯುತ್ತದೆ, ಚಿತ್ರಗಳು ಸುಂದರವಾಗಿದೆ

  ReplyDelete
  Replies
  1. ಶ್ರೀಕಾಂತ್ ಸರ್,ನಮ್ಮ ಈ ಚಾರಣದ ಮುಖ್ಯ ರೂವಾರಿ ನೀವು.. ನೀವು ಕೊಟ್ಟ ಪೀಠಿಕೆಯೇ ನಮಗೆ ಹುಮ್ಮಸ್ಸು ಬರಲು ಸಾಧ್ಯವಾಯಿತು.. ಅಂದ ಹಾಗೆ ಕುಮಾರ ಪರ್ವತ ಚಾರಣ ನನ್ನ ಬಹುದಿನಗಳಿಂದ ಇದ್ದ ಆಶಯ.... ಈಡೇರಿಸಿದ್ದು ನೀವು.. ಮತ್ತು ಅಲೆಮಾರಿಗಳು ಗುಂಪಿನ ಜೊತೆಯ ಅನುಭವ ತುಂಬ ಚೆನ್ನಾಗಿತ್ತು.. ನಿಮಗೆಲ್ಲರಿಗೂ ಕೂಡ ಮತ್ತೊಮ್ಮೆ ಧನ್ಯವಾದಗಳು...

   Delete
 6. ನಮಸ್ತೆ ಗಿರೀಶ್ ನಿಮ್ಮ ಹಾಗು ಅಲೆಮಾರಿ ತಂಡದ ಕುಮಾರ ಪರ್ವತದ ಚಾರಣ ಅನುಭವ ಕಣ್ಣಿಗೆ ಕಟ್ಟಿದಂತೆ ಬರೆದಿದ್ದೀರ. ನಾನೂ ಸಹ ನಿಮ್ಮ ಜೊತೆ ಇದ್ದೆ ಎಂಬ ಅನುಭವ ಮೂಡಿತು.ಚಿತ್ರಗಳಂತೂ ಬಹಳ ಸುಂದರವಾಗಿ ಮೂಡಿವೆ. ಇಂತಹ ಸುಂದರ ಪ್ರದೇಶ ನೋಡುವ ಭಾಗ್ಯ ನನಗೆ ಯಾವಾಗ ಸಿಗುವುದೋ ಎಂಬ ಆಸೆ ಇದೆ. ನಿಮ್ಮ ಚಾರಣ ಅನುಭವ ನನಗೆ ಹೊಟ್ಟೆ ಕಿಚ್ಚಿನಲ್ಲೂ ಸಂತಸ ತಂದಿದೆ.
  ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

  ReplyDelete
  Replies
  1. ಸರ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು... ಅಂದ ಹಾಗೆ ಮತ್ತೆ ಅಲ್ಲಿಗೆ ಚಾರಣಕ್ಕೆ ಹೋಗಬೇಕೆಂದು ಆಲೋಚನೆ ಇದೆ..ಶ್ರೀಕಾಂತ್ ಕೂಡ ಹೇಳುತ್ತಿದ್ದರು ... ಮುಂದಿನ ಸಾರಿ ಖಂಡಿತ ಒಟ್ಟಿಗೆ ಹೋಗೋಣ...ಕಾಡಿನ ಅಲೆದಾಟದ ಅನುಭವ ನಿಮಗೆ ಜಾಸ್ತಿ... ನಿಮ್ಮ ಜೊತೆ ಬರುವುದು ನಮಗೂ ಸಂತೋಷದ ಸಂಗತಿ....

   Delete