Thursday, March 28, 2013

ಬಳಲಿದ ಕಾಯ !!!

ಮಳೆ ನೀರು ಸೋರುವ ಗುಡಿಸಲು,
ಒಲೆ ಮುಂದೆ ಕುಳಿತ ಒಣ ದೇಹ ,
ಗಂಜಿ ಬೇಯಿಸಲು ಒಲೆ ಹಚ್ಚಲೂ ಇರದ ಶಕ್ತಿ,
ಕಬ್ಬಿಣದಂತಿಹ ಆಕೆಯ ಎಲುಬುಗಳು
ಬತ್ತಿ ಹೋಗಿರುವ ಎದೆ ಹಾಲು
ರವಿಕೆಯಿಂದ ಮೊಲೆಗಳು ಹೊರ ಇಣುಕಿದ್ದರೂ,
ಸೆರಗು ಎಳೆಯಲಾರದಷ್ಟು ಇಲ್ಲದ ಪ್ರಜ್ಞೆ..
ಹಸಿದ ಮಗುವಿನ ಚಿಂತೆಯಲಿ
ಇನ್ನೂ ಬಾರದ ಗಂಡನ ಕಾಯುವಿಕೆಯಲಿ..


ಹೊರಗೆ ಮಲಗಿರುವ ಹಸುಗೂಸು,
ಬಳ್ಳಿಗೂ ಸಾಟಿ ಎಂಬಂತೆ ಒಣಗುತ್ತಿಹುದು,
ಹಸಿವು ತಾಳಲಾರದ ಆಕ್ರಂದನ,
ಎದೆ ಹಾಲಿನ ರುಚಿಯೂ ತಿಳಿಯದ ಬಡ ಕೂಸು,
ಬಲಿತಿರದ ನಾಲಗೆಯಲ್ಲಿ ಹಸಿವನ್ನು,
ಅಳದೆ ಹೇಗೆ ಬಣ್ಣಿಸಿತು ?


ಅಳಲು ತಾಯಿಯ ಹೃದಯ ಮುಟ್ಟಿತೇ ಹೊರತು
ಸಂತೆ ಬೀದಿಯ ಹೆಂಡದಂಗಡಿಯಲ್ಲಿ
ಶರಾಬು ಕುಡಿದು,
ಹೆಂಡತಿ ಮಗುವಿನ ಚಿಂತೆಯಿಲ್ಲದೆ
ಊರೊರಗಿನ ತೋಟದ ಮನೆಯಲ್ಲಿ,
ಸೂಳೆಯ ಮಗ್ಗುಲಲಿ ಮಲಗಿರುವ
ಹುಟ್ಟಿಸಿದಾತನ ಕಲ್ಲು ಹೃದಯವನಲ್ಲ...

Friday, March 8, 2013

ಹೆಣ್ಣು ಹೆಣ್ಣಲ್ಲ ,ಹೆಣ್ಣು ರಕ್ಕಸಿಯಲ್ಲ !!!!


ಹೆಣ್ಣು ಸಮಾಜದ ಮತ್ತು ಸಂಸಾರದ ಒಂದು ದೈತ್ಯ ಸ್ತಂಭ ಇದ್ದ ಹಾಗೆ ... ತಾಯಿ,ಮಡದಿ,ಸೋದರಿಯಾಗಿ ಪ್ರೀತಿಯ ಧಾರೆಯನ್ನೇ ಎರೆಯುತ್ತಾಳೆ ... ಆಕೆ ಕೆಲವೊಮ್ಮೆ ತಾಳ್ಮೆಯ ಪ್ರತಿರೂಪವು ಹೌದು,ಇನ್ನು ಕೆಲವೊಮ್ಮೆ ಉಗ್ರ ರೂಪವೂ ಹೌದು .. ಆಕೆ ಕ್ಷಮಯಾಧರಿತ್ರಿ ,ಚಂಚಲೆ..

ಇತಿಹಾಸದ ಗರ್ಭದಲ್ಲಿ ನೋಡಿದಾಗ ಹೆಣ್ಣನ್ನು ಸಮಾಜ ಕಂಡ ರೀತಿ ಅಷ್ಟು ಗೌರವಯುತವಾಗಿರಲಿಲ್ಲ ... ಸಮಾಜದ ಮುಖ್ಯ ವಾಹಿನಿಗೆ ಬರದ ಹಾಗೆ ಬಂಧಿ ಆಗಿದ್ದಳು ... ಅಂದಿನಿಂದ ಇಂದಿನವರೆಗೂ ಆಕೆ ಶೋಷಣೆಗೆ ಒಳಪಟ್ಟಿದ್ದಳು..ಆದರೂ ಅವನ್ನೆಲ್ಲ ಎದುರಿಸಿದ ಧೀರೆ ಹೆಣ್ಣು ... ಹೆಣ್ಣಿನ ಜನ್ಮವೇ ಒಂದು ಪಾಪದ ಜನ್ಮ ಎಂಬಂತೆ ಆಕೆಯನ್ನು ಬಿಂಬಿಸಲಾಗಿತ್ತು ... ಕಾಲಕ್ರಮೇಣ ಈ ಪರಿಸ್ಥಿತಿ ಬದಲಾಗಿ ಆಕೆಯೂ ಕಾಯಕ ಸಾಹಿತ್ಯ ಆಡಳಿತ ಹೀಗೆ ನಾನಾ ಕ್ಷೇತ್ರಗಳಲ್ಲಿ ಮುಂದೆ ಬಂದಳು ... ಆದರೆ ಶರಣ ಚಳುವಳಿಯಲ್ಲಿ ಹೆಣ್ಣಿಗೆ ಎಲ್ಲ ಕ್ಷೇತ್ರಗಳಲ್ಲೂ ಸಮಾನ ಸ್ಥಾನಮಾನ ನೀಡಲಾಯಿತು ..

ಇಂದಿನ ಪರಿಸ್ಥಿತಿಯಲ್ಲಿ ಹೆಣ್ಣನ್ನು ನಾವು ನೋಡುವ ಮನಸ್ಥಿತಿ ಬದಲಾಗಬೇಕು... ಹೆಣ್ಣನ್ನು ಪೂಜನೀಯ ಭಾವದಲ್ಲಿ ನೋಡಿದಾಗ ಮಾತ್ರ ಆಕೆಯನ್ನು ಗೌರವಿಸಲು ಸಾಧ್ಯ ...

೧೨ನೆ ಶತಮಾನದ ಕಾಲಘಟ್ಟ ಕರ್ನಾಟಕ ಇತಿಹಾಸದಲ್ಲಿ ಒಂದು ಸಾಮಾಜಿಕ,ಆರ್ಥಿಕ,ಧಾರ್ಮಿಕ ಬದಲಾವಣೆಗಳನ್ನು ಕಂಡ ಯುಗ. ಸ್ತ್ರೀ ಸಮಾನತೆ ಅಸ್ತಿತ್ವಕ್ಕೆ ಬಂದ ಕಾಲ ಅದು .. ಶರಣರು ತಮ್ಮ ವಚನಗಳಲ್ಲಿ ಹೆಣ್ಣನ್ನು ಪುಷ್ಟೀಕರಿಸಿದ ಮತ್ತು ಹೆಣ್ಣನ್ನು ಕಂಡ ರೀತಿಯನ್ನು ಕೆಲವು ವಚನಗಳ ಮುಖಾಂತರ ತಿಳಿದುಕೊಳ್ಳಲು ಒಂದು ಇಣುಕು ನೋಟ ಇಲ್ಲಿದೆ ..

ಮೊದಲಿಗೆ ಅಧ್ಯಾತ್ಮ ಪ್ರಲೊಭನೆಯ ಬಗ್ಗೆ ಕೆಲವು ವಚನಗಳು ...

ಹಲವಾರು ವಚನಕಾರರು "ಹೆಣ್ಣು,ಹೊನ್ನು,ಮಣ್ಣು" ಎಂಬ ಶೀರ್ಷಿಕೆಗಳನ್ನ ಉದಾಹರಿಸಿಕೊಂಡು ಅವುಗಳನ್ನು ಮಾಯೆ ಎಂದು ವರ್ಣಿಸುತ್ತಾ ಅವುಗಳ ಮೇಲಿನ ವ್ಯಾಮೋಹವನ್ನು ಬಿಡಬೇಕು,ಅವುಗಳನ್ನು ದೂರವಿರಿಸಬೇಕು ಎಂದು ಹೇಳುತ್ತಾರೆ.. ಈ ಪೀಠಿಕೆಯಲ್ಲಿ ಅಲ್ಲಮಪ್ರಭು ಒಂದು ವಚನದಲ್ಲಿ ಈ ಮೂರನ್ನು ಕನ್ನಡಿಯಾಗಿರಿಸಿಕೊಂಡು ಇವೆಲ್ಲದಕ್ಕಿಂತ ಮನದೊಳಗಿನ ಆಸೆಯೇ ಮಾಯೆ ಎಂದು ವರ್ಣಿಸುತ್ತಾರೆ...ಇಲ್ಲಿ ಹೊನ್ನು ಮತ್ತು ಮಣ್ಣಿಗೆ ಅಷ್ಟು ಆಕರ್ಷಣೀಯ ಸೆಳೆ ಇಲ್ಲ,ಆದರೆ ಹೆಣ್ಣಿನಲ್ಲಿ ಸತೀತ್ವ ನಾಶದ ಸೆಳೆತೆ ಹೆಚ್ಚು ಎಂಬುದು ವಚನಕಾರನ ಅಭಿಪ್ರಾಯ....

ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ.
ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ.
ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ.
ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರ!

ಈ ವಚನದಲ್ಲಿ ಅಲ್ಲಮ,ನಮ್ಮ ಮನದೊಳಗಿನ ಮಾಯೆಗೆ ಕಡಿವಾಣ ಹಾಕಿ ಮನಸ್ಸು ಶುದ್ಧ ವಾಗಿಸಿಕೊಳ್ಳಿ ಅನಂತರ ನಾವು ಕಾಣುವುದೆಲ್ಲದರಲ್ಲಿ ಒಳಿತನ್ನು ಕಾಣುತ್ತೇವೆ ಎಂದು ಶರಣರಿಗೆ ಎಚ್ಚರಿಕೆ ನೀಡಿದ ಹಾಗಿದೆ ...

"ಪುರುಷನ ಮುಂದೆ ಮಾಯೆ ಸ್ತ್ರೀ ಎಂಬ ಅಭಿಮಾನವಾಗಿ ಕಾಡುವುದು,
ಸ್ತ್ರೀಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡುವುದು...." ಎಂದು ಅಕ್ಕಮಹಾದೇವಿ ಹೇಳುತ್ತಾ ಪುರುಷನಿಗೆ ಹೆಣ್ಣು ಅಂದರೆ ಮಾಯೆ ಅನ್ನುತ್ತಾಳೆ....

ಅದೇ ರೀತಿ ಅಪ್ಪಿದೆವಯ್ಯ ಎಂಬ ವಚನಕಾರ ಹೀಗೆ ಹೇಳುತ್ತಾನೆ "ಹೊನ್ನು,ಹೆಣ್ಣು,ಮಣ್ಣು ಬಿಡಿಸದ ಗುರುವಿನ ಉಪದೇಶವನೊಲ್ಲೆ .. " ಎಂದು ... ಈ ಮೂರರ ಸಂಗವ ಬಿಡಿಸುವುದು ಗುರುವಿನ ಕರ್ತವ್ಯ ಎಂಬುದು ಅಪ್ಪಿದೇವಯ್ಯನ ಅಭಿಪ್ರಾಯ ...

"ಹೊನ್ನು, ಹೆಣ್ಣು, ಮಣ್ಣು ಎಂಬ ಸೊಕ್ಕನಿಕ್ಕಿ ನಿಕ್ಕಿಸಿ ಕೆಡಹದನಯ್ಯ ಜೀವರ." ಇದು ಸ್ವತಂತ್ರ ಸಿದ್ಧಲಿಂಗೇಶ್ವರರ ಅಭಿಪ್ರಾಯ ...

ಹೀಗೆ ನಾನಾ ವಚನಕಾರರು ಬೇರೆ ಬೇರೆ ರೀತಿಯ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ ...

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ,
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ,
ಕೂಟಕ್ಕೆ ಸ್ತ್ರಿಯಾಗಿ ಕೂಡಿದಳು ಮಾಯೆ,
ಇದಾವ ಪರಿಯಲ್ಲು ಕಾಡಿತ್ತು ಮಾಯೆ.
ಈ ಮಾಯೆಯ ಕಳೆವಡೆ ಎನ್ನಳವಲ್ಲ
ನೀವೇ ಬಲ್ಲಿರಿ ಕೂಡಲಸಂಗಮದೇವ.


ಇಲ್ಲಿ ಬಸವಣ್ಣ ಹೆಣ್ಣು ಯಾವ ಯಾವ ಪರಿಯಲ್ಲಿ ಮಾಯೆಯಾಗಿ ಕಾಡುತ್ತಾಳೆ ಎಂದು ಹೇಳುತ್ತಾನೆ .. ಜನ್ಮ ನೀಡಲು ತಾಯಿಯಾಗಿ, ಮೋಹಕ್ಕೆ ಮಗಳಾಗಿ ,ಅದೇ ರೀತಿ ಸಭೆ ಸಮಾರಂಭಗಳಲ್ಲಿ ಸ್ತ್ರೀಯಾಗಿ ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ನಿಲ್ಲುತ್ತಾಳೆ ಎಂದು ಹೇಳುತ್ತಾನೆ .. ಈ ಎಲ್ಲ ಮಾಯೆಗಳಿಂದ ಹೊರ ಬರಲು ನನ್ನಿಂದ ಸಾಧ್ಯವಿಲ್ಲ,ನೀನು ಮಾತ್ರ ಬಲ್ಲೆ ಎಂದು ಕೂಡಲಸಂಗಮದೇವನಲ್ಲಿ ಕೇಳಿಕೊಳ್ಳುತ್ತಾನೆ ... ಇಲ್ಲಿ ಕೂಟಕ್ಕೆ ಸ್ತ್ರಿಯಾಗಿ ಕೂಡಿದಳು ಮಾಯೆ ಎಂಬಲ್ಲಿ ಗಮನಿಸಬಹುದಾದ ಅಂಶ ಎಂದರೆ ಶರಣ ಚಳುವಳಿಯ ಸಮಯದಲ್ಲಿ ಹೆಣ್ಣು ಮಕ್ಕಳು ಅನುಭವ ಮಂಟಪಗಳಂಥ ಕೂಟಗಳಲ್ಲಿ ಭಾಗವಹಿಸುತ್ತಿದ್ದರು ಎಂಬುದನ್ನು ಉಲ್ಲೇಖಿಸಿದ ಹಾಗೆ ಇದೆ ಈ ವಚನ ...

ಬಸವಣ್ಣನ ಪ್ರಕಾರ ಅಪವಿತ್ರತೆ ಎಂಬುದು ಕೇವಲ ಹೆಣ್ಣಿನ ಭೋಗದಿಂದಲ್ಲ, ಬದಲಾಗಿ ಪರಸ್ತ್ರೀ ಮೇಲಿನ ವ್ಯಾಮೋಹ ಎಂದು ಕೆಳಗಿನ ವಚನದಲ್ಲಿ ಹೇಳುತ್ತಾನೆ..
ಇಂದ್ರಿಯ ನಿಗ್ರಹವ ಮಾಡಿದಡೆ ಹೊಂದುವುವು ದೋಷಂಗಳು;
ಮುಂದೆ ಬಂದು ಕಾಡುವುವು ಪಂಚೇಂದ್ರಿಯಗಳು;
ಸತಿ ಪತಿ ರತಿ ಸುಖವ ಬಿಟ್ಟರೆ ಸಿರಿಯಾಳ ಚೆಂಗಳೆಯರು?
ಸತಿ ಪತಿ ರತಿ ಭೋಗೋಪಭೋಗ ವಿಲ್ಲಾಸವ ಬಿಟ್ಟನೆ ಸಿಂಧು ಬಲ್ಲಾಳನು?
ನಿಮ್ಮ ಮುಟ್ಟಿ ಪರಧನ -ಪರಸತಿಯರಿಗೆಲ್ಲಾಸಿದಡೆ
ನಿಮ್ಮ ಚರಣಕ್ಕೆ ದೂರ ಕೂಡಲಸಂಗಮದೇವ..

ಈ ವಚನದ ಕೊನೆಯಲ್ಲಿ ಬಸವ ಹೇಳುತ್ತಾನೆ,ಪರಸ್ತ್ರೀ ಮೇಲಿನ ವ್ಯಾಮೊಹದಿಂದಾಗಿ ತಾನು ದೇವರಿಂದ ದೂರ ಆಗಬೇಕಾದ ಪರಿಸ್ಥಿತಿ ಬಂದಿದೆ ಎಂದು .. ಬಸವಣ್ಣ ತನ್ನ ಬಹುತೇಕ ವಚನಗಳಲ್ಲಿ ಪರಸ್ತ್ರೀ ವ್ಯಾಮೋಹ ಮತ್ತು ವ್ಯಭಿಚಾರವನ್ನು ವಿರೋಧಿಸುತ್ತಾರೆ ..

ಭಕ್ತನೆಂತೆಂಬೆನಯ್ಯಾ ಭವಿಯ ಸಂಗ ಬಿಡದನ್ನಕ್ಕ?
ಮಹೇಶ್ವರನೆಂತೆಂಬೆನಯ್ಯಾ ಪರಸ್ತ್ರೀ ಪರರರ್ಥದಾಸೆ ಬಿಡದನ್ನಕ್ಕ ?

ಈ ವಚನದಲ್ಲಿ ಕೂಡ ಬಸವ ಪರಸ್ತ್ರೀ ವ್ಯಾಮೋಹ ತಪ್ಪು ಎಂದು ಶರಣರಿಗೆ ಎಚ್ಚರಿಕೆ ನೀಡುತ್ತಾನೆ ....
ಇದೆ ರೀತಿ ತನ್ನ ಇನ್ನೊಂದು ವಚನದಲ್ಲಿ ಪರನಾರಿಯ ತೊರೆಯಿರಿ ಎಂದು ಕೇಳಿಕೊಳ್ಳುತ್ತಾನೆ .

ತೊರೆಯ ಮೀವ ಅಣ್ಣಗಳಿರಾ ,ತೊರೆಯ ಮೀವ ಸ್ವಾಮಿಗಳಿರಾ
ತೊರೆಯಿಂ ಭೋ, ತೊರೆಯಿಂ ಭೋ!
ಪರನಾರಿಯ ಸಂಗವ ತೊರೆಯಿಂ ಭೋ! ಪರಧನದಾಮಿಷವ ತೊರೆಯಿಂ ಭೋ

ಇಲ್ಲಿ ಪರನಾರಿಯ ಸಂಗವ ಬಿಡು ಎಂದು ಆಧ್ಯಾತ್ಮ ದೃಷ್ಟಿಯಲ್ಲಿ ಮತ್ತು ಸಾಮಾಜಿಕ ದೃಷ್ಟಿಯಲ್ಲಿ ಕೂಡ ಹೇಳಿರುವುದನ್ನು ಗಮನಿಸಬಹುದು... ಹೀಗೆ ಶರಣರು ಅನ್ಯ ಸ್ತ್ರೀ ಮೇಲಿನ ವ್ಯಾಮೋಹ ವಿರೋಧಿಸಿದ್ದು ಅವರು ಹೆಣ್ಣಿಗೆ ನೀಡುತ್ತಿದ್ದ ಗೌರವವನ್ನು ತೋರಿಸುತ್ತದೆ ...

ಇದೆ ರೀತಿ ಹೆಣ್ಣಿನ ದೈವಾಜ್ಞೆ ಮತ್ತು ಕಟ್ಟಳೆಯ ಕುರಿತು ...

ಬಸವಣ್ಣನ ಹಾಗೆ ಚೆನ್ನಬಸವಣ್ಣ ಕೂಡ ಪರಸ್ತ್ರೀಯ ಸಂಬಂಧ ಶರಣರಿಗೆ ಸಲ್ಲದು ಎಂದು ತನ್ನ ವಚನಗಳಲ್ಲಿ ಬುದ್ಧಿವಾದವನ್ನು ತಿಳಿ ಹೇಳುತ್ತಾನೆ . ಈ ಕೆಳಗಿನ ವಚನದಲ್ಲಿ ಹೆಣ್ಣಿನ ನಡುವಳಿಕೆಯ ಬಗ್ಗೆ ಮತ್ತು ಜ್ಞಾನದ ಬಗ್ಗೆ ಸವಿಸ್ತಾರವಾಗಿ ವರ್ಣಿಸುತ್ತಾನೆ

ಕ್ರಿಯೆಯೇ ಜ್ಞಾನ,ಆ ಜ್ಞಾನವೇ ಕ್ರಿಯೆ
ಜ್ಞಾನ ವೆಂದಡೆ ತಿಳಿಯುವುದು
ಕ್ರಿಯೆಯೆಂದಡೆ ತಿಳಿದಂತೆ ಮಾಡುವುದು
ಪರಸ್ತ್ರೀಯ ಭೋಗಿಸ ಬಾರದೆಂಬುದೆ ಜ್ಞಾನ,
ಅದರಂತೆ ಆಚರಿಸುವುದೇ ಕ್ರಿಯೆ ಅಂತು ಆಚರಿಸದಿದ್ದಡೆ ಅದೇ ಅಜ್ಞಾನ ನೋಡಾ
ಕೂಡಲಚೆನ್ನಸಂಗಮದೇವಾ !!!

ಪ್ರತಿಯೊಂದು ಕ್ರಿಯೆಯು ಪ್ರತಿ ಛಾಯೆಯನ್ನು ಉಂಟು ಮಾಡಿದಂತೆ,ಪ್ರತಿಯೊಂದು ಜ್ಞಾನವು ಕ್ರಿಯೆಯಾಗಬೇಕೆಂದು ಪ್ರಚೋದಿಸುವ ಈ ವಚನದಲ್ಲಿ ಚೆನ್ನಬಸವಣ್ಣ ಪರಸ್ತ್ರೀ ಭೋಗಿಸಬಾರದು (ಕ್ರಿಯೆ) ಎಂಬುದೇ ಜ್ಞಾನ ಎಂದು ಹೇಳುತ್ತಾನೆ .

ಅದೇ ರೀತಿ ತನ್ನ ಇನೊಂದು ವಚನದಲ್ಲಿ

ಪರರ ಹೆಣ್ಣಿಗೆ ಕಣ್ಣಿಡದಿಹುದೇ ಒಂದನೆಯ ಆಚಾರ,
ಪರರ ದ್ರವ್ಯವ ಅಪಹಾರ ಮಾಡದಿಹುದೇ ಎರಡನೆಯ ಆಚಾರ,
ಸುಳ್ಳಾಡದಿರುವುದೇ ಮೂರನೆಯ ಆಚಾರ..

ಇಲ್ಲಿ ಚೆನ್ನ ಬಸವಣ್ಣ ಪರರ ಹೆಣ್ಣನ್ನು ಬಯಸಬಾರದು ಎಂಬುದು ಮೊದಲ ದೈವಾಜ್ಞೆ ಎಂದು ಹೇಳುತ್ತಾನೆ ...

ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶ ಎಂದರೆ ಪರಸ್ತ್ರೀ ಮೇಲಿನ ವ್ಯಾಮೋಹವನ್ನು ಬಹುತೇಕ ವಚನಕಾರರು ಧಿಕ್ಕರಿಸಿದರೂ ಕೂಡ,ಚೆನ್ನಬಸವಣ್ಣ ಈ ಮೋಹವನ್ನು ಧಿಕ್ಕರಿಸಲು ಮೊದಲ ಆದ್ಯತೆಯನ್ನು ನೀಡುತ್ತಾನೆ ..

ಜ್ಞಾನ ಮತ್ತು ಕ್ರಿಯೆಗೆ ಸಂಭದಿಸಿದಂತೆ ಚೆನ್ನಬಸವಣ್ಣ ವಿವರಿಸಿದ ಹಾಗೆ ಸಿದ್ಧರಾಮಣ್ಣ ಕೂಡ ತನ್ನ ಒಂದು ವಚನದಲ್ಲಿ ಹೀಗೆ ಹೇಳುತ್ತಾನೆ ..

ಜ್ಞಾನಿಗಳು ತಾವಾದ ಬಳಿಕ,ಅನ್ಯರ ಸ್ತೋತ್ರಕ್ಕೆ ಒಳಗಾಗ ಬಾರದು,
ಜ್ಞಾನಿಗಳು ತಾವಾದ ಬಳಿಕ,ಗುರು ಹಿರಿಯರಿಗಂಜಿ ನಡೆಯಬೇಕು,
ಜ್ಞಾನಿಗಳು ತಾವಾದ ಬಳಿಕ,ಅನ್ಯ ಸ್ತ್ರೀ ತನ್ನ ಮಾತೆಯಂತಿರಬೇಕು.
ಕಪಿಲಸಿದ್ಧಮಲ್ಲಿಕಾರ್ಜುನ

ಇಲ್ಲಿ ಸಿದ್ಧರಾಮ ಪರಸ್ತ್ರೀಯನ್ನು ತನ್ನ ತಾಯಿಯಂತೆ ಎಂದು ಹೇಳುತ್ತಾನೆ.ಈ ವಚನ,ಶರಣರು ಹೆಣ್ಣನ್ನು ಗೌರವಿಸುತ್ತಿದ್ದ ಉಚ್ಚ ಸ್ಥಿತಿಯನ್ನು ತೋರಿಸುವ ಕೈಗನ್ನಡಿಯಂತಿದೆ ...


ಇನ್ನು ಕೆಲವು ವಚನಗಳು ಗಂಡು ಹೆಣ್ಣಿನ ಸಮಾನತೆಯ ಕುರಿತು ಸಾಕ್ಷಿಯಾಗಿವೆ..

ಮೊಲೆ ಮೂಡಿ ಬಂದರೆ ಹೆಣ್ಣೆಂಬರು
ಗಡ್ಡ ಮೀಸೆ ಬಂದರೆ ಗಂಡೆಂಬರು
ನಡುವೆ ಸುಳಿವ ಆತ್ಮನು ಗಂಡೂ ಅಲ್ಲ, ಹೆಣ್ಣೂ ಅಲ್ಲ
ಕಾಣಾ ರಾಮನಾಥ

ಈ ವಚನದ ಪ್ರಕಾರ ದಾಸಿಮಯ್ಯ ಹೇಳುವುದು ಗಂಡು ಮತ್ತು ಹೆಣ್ಣು ಅಂದರೆ ಕೇವಲ ದೈಹಿಕ ವ್ಯತ್ಯಾಸ ಮತ್ತು ಕಣ್ಣಿಗೆ ಕಾಣುವ ಬಹಿರಂಗ ನೋಟ..ಅಂತರಂಗದಲ್ಲಿ ಆತ್ಮ ಎಂಬುದು ಒಂದು ಇದೆಯಲ್ಲ,ಅದು ಗಂಡೂ ಅಲ್ಲ,ಹೆಣ್ಣೂ ಅಲ್ಲ ಅದರಿಂದ ವ್ಯಕ್ತಿಯನ್ನು ಅಳೆದರೆ ಯಾವುದೇ ವ್ಯಾತ್ಯಾಸವಿಲ್ಲ...ಒಂದು ಬಿದಿರು ಕಡ್ಡಿಯನ್ನು ಎರಡು ಹೋಳು ಮಾಡಿದರೆ,ಒಂದು ಗಂಡಿನ ಹಾಗೆ,ಇನ್ನೊಂದು ಹೆಣ್ಣಿನ ಹಾಗೆ. ಅವೆರಡನ್ನೂ ಉಜ್ಜಿದರೆ ಬರುವ ಬೆಂಕಿಯನ್ನು ಗಂಡು ಅಥವಾ ಹೆಣ್ಣು ಎಂದು ನಿರ್ಧರಿಸಲು ಆಗುವುದಿಲ್ಲ, ಹಾಗೆ ಮನುಷ್ಯನ ಆತ್ಮ ಕೂಡ. ಆದ್ದರಿಂದ ಗಂಡು, ಹೆಣ್ಣು ಎಂಬ ಭೇದ ಸಲ್ಲದು ಎಂದು ಹೇಳುತ್ತಾನೆ.ಈ ವಚನದ ಸಾರದಿಂದಲೇ ಅರ್ಥೈಸಿಕೊಳ್ಳಬಹುದು ಅಂದು ೧೨ನೇ ಶತಮಾನದಲ್ಲೇ ಹೆಣ್ಣು-ಗಂಡಿಗೆ ಯಾವುದೇ ವ್ಯತ್ಯಾಸವಿಲ್ಲ ಎಲ್ಲರೂ ಒಂದೇ ಎಂಬ ಭಾವವನ್ನು ವ್ಯಕ್ತಪಡಿಸಿ ಅಂತೆಯೇ ಹೆಣ್ಣನ್ನೂ ಗೌರವಿಸುತ್ತಿದ್ದ ಕಾಲವದು.
ಹೆಣ್ಣಿನ ಬಗ್ಗೆ ಇದ್ದ ತಾತ್ಸಾರ ಭಾವನೆ ಶರಣ ಚಳುವಳಿಯಲ್ಲಿ ಸ್ವಲ್ಪ ಮಟ್ಟಿಗಾದರೂ ಕೊನೆಗೊಂಡಿತು ಎಂದರೆ ಅತಿಶಯೋಕ್ತಿ ಅಲ್ಲ.

ಹಲವಾರು ವಚನಾಗಾರ್ತಿಯರು ಸ್ತ್ರೀತನದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಮ್ಮ ವಚನಗಳ ಮುಖಾಂತರ ಹೇಳುತ್ತಾರೆ..

ನೀಲಮ್ಮನ ಈ ಕೆಳಗಿನ ವಚನ ಹೆಣ್ಣು ಜನ್ಮ ಎಂಬುದು ಒಂದು ಕರ್ಮವಿದ್ದಂತೆ ಎಂದು ಹೇಳುತ್ತಾಳೆ. ಬಹುಷಃ,ಶರಣ ಚಳುವಳಿಗೂ ಮುಂಚೆ ಹೆಣ್ಣನ್ನು ಸಮಾಜ ನೋಡುತ್ತಿದ್ದ ದೃಷ್ಟಿಯಲ್ಲಿ ಬೇಸತ್ತು ಈ ರೀತಿ ಬರೆದಿರಬಹುದು..

ಏಕೆನ್ನ ಪುಟ್ಟಿಸಿದೆಯಯ್ಯಾ ಹೆಣ್ಣು ಜನ್ಮದಲ್ಲಿ,ಪುಣ್ಯವಿಲ್ಲದ ಪಾಪಿಯ ?
ನಾನು ಇಹ ಪರಕ್ಕೂ ದೂರಳಯ್ಯ
ಎನ್ನ ನಾಮ ಹೆಣ್ಣು ನಾಮವಲ್ಲಯ್ಯಾ
ನಾನು ಸಿರಿಯಿದ್ದ ವಸ್ತುವಿನ ವಧುವಾದ ಕಾರಣ
ಸಂಗಯ್ಯನಲ್ಲಿ ಬಸವಣ್ಣ ವಧುವಾದ ಕಾರಣ
ಎನಗೆ ಹೆಣ್ಣು ನಾಮವಿಲ್ಲಯ್ಯ

ಹೆಣ್ಣು ಜನ್ಮ ಎಂದರೆ ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಕೃತ್ಯದಿಂದಾಗಿ ಹುಟ್ಟಿದ್ದು ಎಂಬ ಭಾವನೆ ಇದ್ದ ಸ್ಥಿತಿಯಲ್ಲಿ, ನೀಲಮ್ಮ ಪ್ರಶ್ನಿಸುತ್ತಾಳೆ ನಾನು ನಿಜಕ್ಕೂ ಅಂತ ಜನ್ಮ ಪಡೆಯಲು ಅರ್ಹಳೆ ಎಂದು. ಆಕೆಯ ಪ್ರಕಾರ ತಾನು ಈ ಜನ್ಮದಲ್ಲಿ ಅದಕ್ಕಿಂತ ಮಿಗಿಲಾದವಳು. ಕೊನೆಯದಾಗಿ ಬಸವಣ್ಣ ಶರಣ ಸತಿ, ಲಿಂಗ ಪತಿ ಎಂಬ ಉಚ್ಚ ಸ್ಥಾನಯನ್ನು ತಲುಪಿದ್ದಾತ ,ಇಷ್ಟಲಿಂಗಕ್ಕೆ ಹೆಂಡತಿಯಾಗಿದ್ದವನು. ಆದರೆ ನೀಲಮ್ಮ ಇಂಥ ಹೆಂಡತಿಯನ್ನು ಒಪ್ಪುವುದಿಲ್ಲ. ಬಸವಣ್ಣನ ಶರಣ ಸತಿ ಸೂತ್ರ ಆತನ ಮಡದಿ ನೀಲಮ್ಮನಿಗೆ ಒಪ್ಪಿಗೆ ಆಗುವುದಿಲ್ಲ.

ಈ ವಚನ ಎಲ್ಲದಕ್ಕಿಂತ ಹೆಚ್ಹಾಗಿ ನೀಲಮ್ಮನ ಸ್ವತಂತ್ರ ಸ್ಥಾನವನ್ನು ಎತ್ತಿ ಹಿಡಿಯುತ್ತದೆ,, ಅದು ಶರಣ ಚಳುವಳಿಯಲ್ಲಿ ಬೇರೆ ಸ್ತ್ರೀಯರಿಗೆ ಕೂಡ ಮಾದರಿಯಾಗಿತ್ತು..

"ಶರಣ ಸತಿ,ಲಿಂಗಪತಿ " ಎಂದು ಸಾರಿದ ವಚನ ಸಾಹಿತ್ಯದಲ್ಲಿ ಕೆಲವು ವಚನಕಾರು ತಮ್ಮನ್ನೇ ಲಿಂಗದ ಸತಿ ಎಂದು ಭಾವಿಸಿಕೊಂಡು ತಮ್ಮ ಅಭಿಪ್ರಾಯವನ್ನು ಹೊರ ಹಾಕುತ್ತಾರೆ...

ಎಲೆ ಗಂಡು ಗೂಸೆ ಈ ಕೇಳಾ, ನಿನಗೊಬ್ಬಂಗೆಂದುಟ್ಟೆ ಗಂಡುಡಿಗೆಯನು !
ಮತ್ತೊಮ್ಮೆ ಯಾನು ಗಂಡೆಪ್ಪೆನಯ್ಯಾ
ಮತ್ತೊಮ್ಮೆ ಯಾನು ಹೆಣ್ಣಪ್ಪೆನಯ್ಯಾ
ಕೂಡಲಸಂಗಮದೇವಾ
ನಿಮಗೆ ವೀರನಪ್ಪೆ, ನಿಮ್ಮ ಶರಣರಿಗೆ ವಧುವಪ್ಪೆ

ಇಲ್ಲಿ ಇಷ್ಟಲಿಂಗವನ್ನೇ ಮದುವೆಯಾಗುವುದು ,ಲಿಂಗ ಪತಿಯ ಸಂಬಂಧ ಕಲ್ಪಿಸುವುದು ಬಹಳ ಕಷ್ಟ . ಇಲ್ಲಿ ಇಷ್ಟಲಿಂಗವನ್ನು ಮದುವೆಯಾಗುವುದಾದರೆ ,ತಾನು ಧರಿಸಿರುವ ಉಡುಪು ಅಷ್ಟು ಪರಿಣಾಮಕಾರಿಯಲ್ಲ,ಹೊರನೋಟಕ್ಕೆ ಗಂಡಿನಂತೆ ಕಂಡರೂ ,ತಾನು ಇಷ್ಟ ಲಿಂಗಕ್ಕೆ ಸತಿಯಾಗುವುದು ಅಂದರೆ ತಾನು ಹೆಣ್ಣಿನ ಪಾತ್ರವೂ ಹೌದು ಎಂದು ಬಸವ ಹೇಳುತ್ತಾನೆ.. ತಾನೊಬ್ಬ ಶಿವ ಭಕ್ತ ,ತಾನೊಬ್ಬ ವೀರ ಎಂದು ಹೇಳುತ್ತಾ ಬಸವಣ್ಣ ತಾನು ಶಿವ ಭಕ್ತನಿಗೆ ವಧುವಾಗ ಬಲ್ಲೆ ಎಂದು ಹೇಳುತ್ತಾನೆ. ಅಂದರೆ ತಾನು ಶಿವನನ್ನು ಆರಾಧಿಸಿದ ಹಾಗೆ,ಶಿವ ಭಕ್ತರನ್ನು ಕೂಡ ಸಮಾನವಾಗಿ ಸ್ವೀಕರಿಸುತ್ತೇನೆ ಎಂದು ..

ಇದೆ ರೀತಿ ಗಂಡು,ಹೆಣ್ಣು ಲಿಂಗ ಪರಿವರ್ತನೆ ಮಾನಸಿಕವಾಗಿ ಆಗುವಂತೆ ಬಸವ,ಸಿದ್ಧರಾಮರು ಬರೆದ ಹಾಗೆ ಕೆಲವು ವಚನಕಾರರು ಕೂಡ ಬರೆದಿದ್ದರು .. ಮಹಾದೇವಿಯಮ್ಮನ ಈ ವಚನ ಹೀಗಿದೆ :

ಚಿತ್ರದ ಬೊಂಬೆಯ ಹಾಹೆ,
ಎಲ್ಲಕ್ಕೂ ಅತ್ಮನಿಂದ ಚೇತನಿಸಿ ನಡೆಯುತ್ತಿಹವೆ?
ಅವು ಸೂತ್ರಾಧಿಕನ ಭೇದ,
ಎನ್ನ ಶಕ್ತಿ ಜಾತಿಯ ಲಕ್ಷಣ
ನಿಮ್ಮ ಭಕ್ತಿ ಸೂತ್ರದಿಂದ ಎನ್ನ ಸ್ತ್ರೀ ಜಾತಿ,ನಿಮ್ಮ ಸರೆ ಪಾದದಲ್ಲಿ ಅಡಗಿತ್ತು..
ಎನಗೆ ಬಿನ್ನದ ಮಾತಿಲ್ಲ
ಎನ್ನಯ ಪ್ರಿಯ ಇಮ್ಮಡಿ ನಿಃ ಕಳನ್ಹ ಮಲ್ಲಿಕಾರ್ಜುನ ನೆಂಬುವರು ನೀವೇ ..

ಈ ವಚನದಲ್ಲಿ ಮಹಾದೇವಿಯಮ್ಮ ತನ್ನ ಪುರಾತನ ಜನ್ಮದ ಪಾಪದಿಂದ ಈ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಿದೆ ಎಂದು ಭಾವಿಸಿಕೊಳ್ಳುತ್ತಾ ತನ್ನನ್ನು ಶಿವನಿಗೆ ಸಮರ್ಪಿಸಿಕೊಂಡು ತನ್ನ ಸ್ತ್ರೀ ಜಾತಿಯನ್ನು ಶಿವನ ಪಾದದಲ್ಲಿ ಅಡಗಿಸಿದ್ದೆ ಎಂದು ಹೇಳಿಕೊಳ್ಳುತ್ತಾಳೆ . ಕಾಶ್ಮೀರದ ರಾಜ ಮೋಳಿಗೆಯ ಮಾರಯ್ಯನ ಮಡದಿಯಾದ ಮಹಾದೇವಿಯಮ್ಮನಿಗೆ ಬಹಶಃ ರಾಜಕುಮಾರಿಯಾಗಿ ಮೆರೆದಿದ್ದು ಕೂಡ ತೃಪ್ತಿ ಕೊಡಲಿಲ್ಲ ಎಂದು ಭಾವಿಸಬಹುದು .. ಅದಕ್ಕಾಗಿ ಆಕೆ ಭಕ್ತಿಯ ಮತ್ತು ಕಾಯಕದ ಮಾರ್ಗವನ್ನು ಹಿಡಿದು ಕಾಯಕ ಶರಣೆಯಾದಳು ..

ಇನ್ನು ಶಿವಶರಣೆಯರಲ್ಲಿ ಮುಂಚೂಣಿಯಲ್ಲಿದ್ದವಳು ಅಕ್ಕಮಹಾದೇವಿ .. ತನ್ನ ಗಂಡನೂ ಆದ ರಾಜ ಕೌಶಿಕನಿಂದ ಬೇರ್ಪಟ್ಟು ಲೌಕಿಕ ಜೀವನವನ್ನು ಬಿಟ್ಟು ,ಶರಣ ಚಳುವಳಿಯಲ್ಲಿ ಭಾಗವಹಿಸಿ ಅಧ್ಯಾತ್ಮ ಮೂರ್ತಿಯಾಗಿ ಶಿಖರದೆತ್ತರಕ್ಕೆ ಬೆಳೆದವಳು ಅಕ್ಕ ... ಕೌಶಿಕನಿಂದ ದೂರವಾದ ಮೇಲೆ,ಅಧ್ಯಾತ್ಮ ಭಕ್ತಿಯಲ್ಲೇ ಮುಳುಗಿದ ಅಕ್ಕ ಶ್ರೀ ಶೈಲದ ಚೆನ್ನಮಲ್ಲಿಕಾರ್ಜುನನೇ ತನ್ನ ಪತಿಯೆಂದು ಭಾವಿಸಿ ,ತನ್ನೆಲದನ್ನು ಶಿವ ಸ್ವರೂಪಿಯಾದ ಆತನಿಗೆ ಸಮರ್ಪಿಸಿಕೊಳ್ಳುವಳು .. ಅಲ್ಲದೆ ತನ್ನ ಉಡುಗೆ ತೊಡುಗೆಯನ್ನೆಲ್ಲ ಕಳಚಿ ಕೇವಲ ತನ್ನ ಕೂದಲಿನಿಂದ ತನ್ನ ಮೈಯನ್ನು ಮುಚ್ಚಿಕೊಂಡಿದ್ದನ್ನು ಈ ವಚನದಲ್ಲಿ ಸಮರ್ಥಿಸಿಕೊಳ್ಳುತ್ತಾಳೆ ...


ಕೈಸಿರಿಯ ದಂಡವ ಕೊಳಬಹುದಲ್ಲದೆ
ಮೈಸಿರಿಯ ದಂಡವ ಕೊಳಲುಂಟೆ?
ಉಟ್ಟಂತ ಉಡಿಗೆತೊಡಿಗೆಯನೆಲ್ಲ ಸೆಳೆದುಕೊಳಬಹುದಲ್ಲದೆ
ಮುಚ್ಚಿ ಮುಸುಕಿರ್ದ ನಿರ್ವಾಣವ ಸೆಳೆದುಲೊಳಬಹುದೇ?
ಚೆನ್ನಮಲ್ಲಿಕಾರ್ಜುನದೇವರ ಬೆಳಗನುಟ್ಟು ಲಜ್ಜೆಗೆಟ್ಟವಳಿಗೆ
ಉಡುಗೆ ತೊಡಿಗೆಯ ಹಂಗೆಕೋ ಮರುಳೇ ?

ಇಲ್ಲಿ ಗಮನಿಸಬೇಕಾದ ಕೆಲವು ಸಂಗತಿಗಳು ಅಂದರೆ,ಚೆನ್ನಮಲ್ಲಿಕಾರ್ಜುನನೇ ತನ್ನ ಗಂಡ ಎಂದು ಇಲ್ಲಿ ಅಕ್ಕ ಒಪ್ಪಿಕೊಳ್ಳುತ್ತಾಳೆ .. ಹಾಗೆ ಆತನಿಗೆ ತನ್ನನ್ನು ತಾನು ಸಮರ್ಪಿಸಿಕೊಂಡೆ ಎಂಬಂತೆ ತನ್ನನ್ನು ಲಜ್ಜೆಗೆಟ್ಟವಳು ಎಂದುಕೊಳ್ಳುತ್ತಾ ಉಡಿಗೆ ತೊಡಿಗೆ ಯನ್ನು ಕಳಚಿಟ್ಟೆ ಎನ್ನುತ್ತಾರೆ .. ಹಾಗೆ ಇದು ಅಲ್ಲಮಪ್ರಭಿವಿನ ಶೂನ್ಯ ಸಂಪಾದನೆಯ ಸಿದ್ಧಾಂತಕ್ಕೆ ಒಪ್ಪುವಂತಹ ವಚನ ...




ಒಂದು ಕಡೆ ದೇವರನ್ನು ಗಂಡ ಎನ್ನುವ ಅಕ್ಕ ,ಅದೇ ರೀತಿ ಕೆಲವು ವೇಶ್ಯೆಯರು ಕೂಡ ಶರಣ ಚಳುವಳಿಯಲ್ಲಿ ಭಾಗಿಯಾಗಿದ್ದರು .. ಇಂಥ ವೇಶ್ಯೆಯರಲ್ಲಿ ಸೂಳೆ ಸಂಕವ್ವೆ ಮತ್ತು ಪುಣ್ಯ ಸ್ತ್ರೀ ಗಂಗಮ್ಮ ಎಂದಿಬ್ಬರು ..

ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ
ಹಿಡಿದಡೆ ಬೆತ್ತಲೆ ನಿಲಿಸಿ ಕೊಲುವರಯ್ಯಾ
ವ್ರತಹೀನನರಿದು ಬೇರೆದಡೆ
ಕಾದ ಕತ್ತಿಯಲ್ಲಿ ಕೈ ಕಿವಿ ಮೂಗ ಕೊಯ್ಯುವರಯ್ಯಾ
ಒಳ್ಳೆನೊಲ್ಲೆ ಬಲ್ಲನಾಗಿ ,ನಿಮ್ಮಾಣೆ ನಿರ್ಲಜ್ಜೇಶ್ವರ !!!

ಈ ವಚನದಲ್ಲಿ ಸಂಕವ್ವೆ ತನ್ನ ವೃತ್ತಿಯಲ್ಲಿನ ನಿಷ್ಠೆಯನ್ನು ಏಕದೇವೋಪಾಸನೆಗೆ ಹೋಲಿಸಿಕೊಳ್ಳುತ್ತಾಳೆ .. ಅಂದರೆ ಇಲ್ಲಿ ಆಕೆ ,ಶಿವನನ್ನು ಅಂದರೆ ಇಷ್ಟಲಿಂಗವನ್ನು ಆರಾಧಿಸುವ ಹಾಗೆ ತಾನು ವೃತ್ತಿಪರತೆ ಯಲ್ಲಿ ಒಬ್ಬನಿಗೆ ಮಾತ್ರ ಸಹಕರಿಸಿ ಬೇರೆ ಗಂಡಸನ್ನು ದೂರ ಇಟ್ಟಿರುತ್ತೇನೆ ಎಂದು ಹೇಳುತ್ತಾಳೆ .. ಇಲ್ಲಿ ಆಕೆಯ ಶಿವನ ಮೇಲಿನ ಭಕ್ತಿಯನ್ನು ಕೂಡ ಮನಗಾಣಬಹುದು .. ಅಂದರೆ ತಾನು ಭಕ್ತಿಯಲ್ಲಿ ಶಿವನಿಗೆ ವಿದೆಯಕನಾದ ಹಾಗೆ ,ವೃತ್ತಿಯಲ್ಲಿ ಕೂಡ ಒಬ್ಬನಿಗೆ ಮಾತ್ರ ವಿದೇಯಳು ,ಅಂದರೆ ಇಲ್ಲಿ ಆಕೆಯ ಕಾಯಕ ಗುಣ ಮತ್ತು ಭಕ್ತಿ ಎರಡನ್ನೂ ತಾಳೆಹಾಕಬಹುದು ..


ಇನ್ನು ಗಂಡ ಹೆಂಡತಿಯ ನಡುವಿನ ಧರ್ಮಾಚರಣೆಯ ಸಂಬಂಧಕ್ಕೆ ಬಂದರೆ ಕೆಲವು ವಚನಗಳು ನಿದರ್ಶನ ಸಿಗುತ್ತವೆ...

ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ,
ಸತಿ ಪತಿಗಳೊಂದಾಗದವನ ಭಕ್ತಿ ಅಮೃತದೊಳ್ ವಿಷ ಬೆರೆತಂತೆ
ಕಣಾ ರಾಮನಾಥ

ಇಲ್ಲಿ ದಾಸಿಮಯ್ಯ ಹೇಳುತ್ತಾನೆ,ಗಂಡ ಹೆಂಡತಿ ನಡುವಿನ ಸಂಬಂಧ ಕೇವಲ ಲೌಕಿಕವಾಗಿ ಅಲ್ಲ. ಅದು ಧಾರ್ಮಿಕವಾಗಿ ಕೂಡ ಇರಬೇಕು ಎಂದು .. ಇಲ್ಲದಿದ್ದರೆ ಭಕ್ತಿಗೆ ಅರ್ಥವಿರುವುದಿಲ್ಲ ಎಂದು ಹೇಳುತ್ತಾರೆ .. ಅವರೊಳಗೆ ಒಂದಾಗದ ಭಕ್ತಿ ಅಮೃತದಲ್ಲಿ ವಿಷ ಬೆರೆತಂತೆ ಅಪವಿತ್ರ ಎನ್ನುತ್ತಾರೆ ... ಇಲ್ಲಿ ಪತ್ನಿಯನ್ನು ಭಕ್ತಿಯ ಮಾರ್ಗದಲ್ಲಿ ಕರೆದೊಯ್ಯುವುದು ಗಂಡನಾದವನ ಕರ್ತವ್ಯ ಎನ್ನುತ್ತಾ ಅವರಿಬ್ಬರಲ್ಲೂ ಒಂದಾದ ಭಕ್ತಿ ಶಿವನಿಗೆ ಹಿತವಾಗುತ್ತದೆ ಎನ್ನುತ್ತಾರೆ ...

ಅದೇ ರೀತಿ ಬಸವಣ್ಣ ತನ್ನ ವಚನದಲ್ಲಿ ಗಂಡ ಹೆಂಡತಿ ನಡುವೆ ಭಕ್ತಿ ಸಂಪ್ರದಾಯ ಹೇಗಿರಬೇಕು ಎಂದು ಕೆಳಗಿನ ವಚನದಲ್ಲಿ ವಿವರಿಸುತ್ತಾನೆ ..

ಗಂಡ ಶಿವಲಿಂಗ ದೇವರ ಭಕ್ತ,
ಹೆಂಡತಿ ಮಾರಿ ಮಸಣೆಯ ಭಕ್ತೆ ,
ಗಂಡ ಕೊಂಬುದು ಪಾದೋದಕ ಪ್ರಸಾದ,
ಹೆಂಡತಿ ಕೊಂಬುದು ಸುರೆ ಮಾಂಸ.
ಭಾಂಡ ಭಾಜನ ಶುದ್ದ ವಿಲ್ಲದವರ ಭಕ್ತಿ
ಹೆಂಡದ ಮಡಕೆಯ ಹೊರಗಡೆ ತೊಳೆದಂತೆ ಕೂಡಲಸಂಗಮದೇವಾ

ಇಲ್ಲಿ ಗಂಡ ಪಾದೋದಕ ಸವೆಯುವ ಶಿವ ಭಕ್ತನಾದರೆ,ಹೆಂಡತಿ ಸುರೆ ಮಾಂಸ ಸೇವಿಸುವ ಮರಿಯ ಭಕ್ತೆ.. ಇಂಥ ಸಂಸಾರ ಸೌಖ್ಯ ಕರವಾಗಿರುವುದಿಲ್ಲ ಮತ್ತು ಇದು ಅಂತರಂಗ ಶುದ್ಧವಿಲ್ಲದ ಸಂಸಾರ ಎಂದು ಹೆಂಡದ ಮಡಕೆಯ ಹೊರಗೆ ತೊಳೆದಂತೆ ಎಂದು ಹೋಲಿಸುತ್ತಾರೆ ...

ಈ ವಚನದಲ್ಲಿ ಗಂಡ ಹೆಂಡತಿ ಇಬ್ಬರೂ ಏಕದೆವೋಪಾಸನೆಯಲ್ಲಿ ತೊಡಗಿ ಅವರಿಬ್ಬರ ಭಕ್ತಿ ಮೇಲಿನ ದಾಸಿಮಯ್ಯನ ವಚನದಂತೆ ಶಿವನಿಗೆ ಹಿತವಾಗಿರಬೇಕು ಎಂದು ಹೇಳುತ್ತಾ,ಇಲ್ಲಿ ಹೆಣ್ಣಿನ ಸಂಸಾರದ ಹೊಣೆಯನ್ನು ಕೂಡ ಎತ್ತಿ ಹಿಡಿಯುತ್ತಾರೆ ಬಸವಣ್ಣ. ಹೆಣ್ಣು ಸಂಸಾರದ ಕಣ್ಣು ಎಂಬಂತೆ ಆಕೆ ಧಾರ್ಮಿಕ ವಿಧಿ ವಿಧಾನಗಳನ್ನು ನಿಭಾಯಿಸಬೇಕಾದವಳು ,ಅಲ್ಲದೆ ಸಂಸಾರವನ್ನು ಅಚ್ಚು ಕಟ್ಟಾದ ರೀತಿಯಲ್ಲಿ ನಡೆಸಿಕೊಂಡು ಹೋಗುವ ಶಕ್ತಿ, ಹೊಣೆ ಮತ್ತು ತಾಳ್ಮೆ ಆಕೆಗೆ ಇರಬೇಕು ಎನುತ್ತಾರೆ. ಇಲ್ಲಿ ಸಂಸಾರದಲ್ಲಿ ಹೆಣ್ಣಿನ ಪ್ರಾಮುಖ್ಯತೆಯನ್ನು ವಿವರಿಸುತ್ತಾರೆ.. ಒಂದು ಸಂಸಾರವನ್ನು ಅದ್ದು ಬಸ್ತಿನಲ್ಲಿಡುವ ಶಕ್ತಿ ಮತ್ತು ಹಾಳುಗೆಡವುವ ಶಕ್ತಿ ಎರಡೂ ಹೆಣ್ಣಿಗೆ ಇದೆ. ಇಲ್ಲಿ ಹೆಣ್ಣು ತಪ್ಪು ದಾರಿಯಲ್ಲಿ ನಡೆದರೆ,ಇಡೀ ಸಂಸಾರ ಹಾಳು ಗೆಟ್ಟಂತೆ ಎಂದು ಆಕೆಯ ನಾಯಕತ್ವವನ್ನು ವಿವರಿಸುತ್ತಾರೆ.

ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದರೆ ನಿಲಬಾರದು.
ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ
ತಂದೆ ಕೂಡಲಸಂಗಮದೇವ
ನೀ ಹುಟ್ಟಿಸಿ ಜೀವನ ಭವದುಃಖಿಯ ಮಾಡಿದ ಬಳಿಕ.
ಬಿಡಿಸುವರಾರುಂಟು ?

ಈ ವಚನದಲ್ಲಿ ಬಸವಣ್ಣ ನಾರಿಯ ನಾಯಕತ್ವದ ಗುಣ ಹೇಗಿರಬೇಕೆಂದು ವಿವರಿಸುತ್ತಾನೆ. ಸಂಸಾರದಲ್ಲಿ ಸ್ತ್ರೀ ಪಾತ್ರವನ್ನು ಬಹಳ ಮನೋಜ್ಞವಾಗಿ ಈ ವಚನದಲ್ಲಿ ಚಿತ್ರಿಸಿದ್ದಾರೆ. ನಾರಿಯು ತನ್ನ ಮನೆಯಲ್ಲಿ ಕಳ್ಳತನ ಮಾಡುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂದು ಹೇಳುವ ಬಸವಣ್ಣ ಸಂಸಾರದಲ್ಲಿ ಹೆಣ್ಣಿನದು ಪ್ರಮುಖ ಜವಾಬ್ದಾರಿ ಎಂದು ಹೇಳುತ್ತಾನೆ..

ಅದೇ ರೀತಿ ತನ್ನ ಇನ್ನೊಂದು ವಚನದಲ್ಲಿ"""ನಾರಿಗೆ ಗುಣವೇ ಶೃಂಗಾರ" ಎಂದು ಹೇಳುತ್ತಾನೆ. ವ್ಯಭಿಚಾರ ಸಲ್ಲದು ಎಂದು ಹಲವಾರು ವಚನಗಳಲ್ಲಿ ಹೇಳುವ ಬಸವಣ್ಣ ಇಲ್ಲಿ ಹೆಣ್ಣಿಗೆ ಗುಣವೇ ಶೋಭೆ .. ಆಕೆ ಸರ್ವಗುಣ ಸಂಪನ್ನೆ ಆಗಿರಬೇಕು ಎಂದು ಹೇಳುತ್ತಾನೆ...

ಹೀಗೆ ಸತಿ ಪತಿಗಳ ಭಕ್ತಿಯನ್ನು ವಿವರಿಸುವ ಬಸವಣ್ಣ ಇನ್ನೊಂದು ವಚನದಲ್ಲಿ ಹೇಳುತ್ತಾನೆ

"ಸತಿ ಪುರುಷರಿಬ್ಬರೂ ಪ್ರತಿ ದೃಷ್ಟಿಯಾಗಿ ಮಾಡಬಲ್ಲಡೆ ಅದೇ ಮಾಟ ,
ಕೂಡಲಸಂಗಮದೇವರ ಕೂಡುವ ಕೂಟ" ಎಂದು

ಸತಿ ಪತಿಗಳ ಸಂಬಂಧ ಚೆನ್ನಾಗಿದ್ದರೆ ಅಂದರೆ,ಅದು ಲೌಕಿಕ ಸಂಬಂಧ ಅಥವಾ ಭಕ್ತಿಯ ಸಂಬಂಧ ಯಾವುದೇ ಇರಬಹುದು, ಅದೊಂದು ಸುಂದರ ಚಿತ್ರವಿದ್ದಂತೆ ಎಂದು ಹೇಳುತ್ತಾ ಅಂತ ಸಂಬಂಧವನ್ನು ಆಧ್ಯಾತ್ಮಕ್ಕೂ ಹೋಲಿಸುತ್ತಾ ಹೇಳುತ್ತಾರೆ ಅದು ದೇವರನ್ನು ಸೇರುವ ಸಂಬಂಧ ಎಂದು.

ಹೀಗೆ ಗಂಡ ಹೆಂಡತಿಯೊಡನೆಯ ಸಂಬಂಧಗಳನ್ನೂ ಲೌಕಿಕ, ಆಧ್ಯಾತ್ಮಿಕವಾಗಿ ವಿವರಿಸಿದ ಶರಣರು, ಕೆಲವು ಕಡೆ ಹೆಣ್ಣು ಹೇಗೆ ಸೂತಕಗಳಲ್ಲಿ ಭಾಗಿಯಾಗುತ್ತಾಳೆ ಮತ್ತು ಅವು ನಿಜಕ್ಕೂ ಸೂತಕಗಳೇ ಎಂದು ಕಟುವಾಗಿ ಪ್ರಶ್ನಿಸುತ್ತಾರೆ.

ಹೆಣ್ಣು ಮುಟ್ಟಾಗುವುದನ್ನು ಸೂತಕ ಏನು ಭಾವಿಸಿದ ಜನರನ್ನು ಬಹಳ ವಚನಕಾರರು ತೀಕ್ಷ್ಣವಾಗಿ ಟೀಕಿಸುತ್ತಾರೆ.

ಜಾತಿ ಸೂತಕ ಬಿಡದು,ಜನನ ಸೂತಕ ಬಿಡದು,
ಪ್ರೇತ ಸೂತಕ ಬಿಡದು,ರಜ ಸೂತಕ ಬಿಡದು,
ಉಚ್ಚಿಷ್ಟ ಸೂತಕ ಬಿಡದು,ಕುಲ ಸೂತಕ ಬಿಡದು
ಕೂಡಲಚೆನ್ನಸಂಗಮದೇವಯ್ಯಾ
ಸಧ್ಭಕ್ತನಿಗೆ ಸೂತಕ ಮಾಡಲು ಇಲ್ಲ

ಈ ವಚನದಲ್ಲಿ ಚೆನ್ನಬಸವಣ್ಣ ಹುಟ್ಟು,ಸಾವು,ಕುಲ,ಜಾತಿ,ಮುಟ್ಟು,ಪ್ರೇತ ಇವ್ಯಾವು ಸದ್ಭಕ್ತನಾದವನಿಗೆ ಸೂತಕವಲ್ಲ ಎಂದು ಹೇಳುತ್ತಾರೆ. ಇದೆ ರೀತಿ ಚೆನ್ನ ಬಸವಣ್ಣ ಹಲವಾರು ವಚನಗಳಲ್ಲಿ ಟೀಕಿಸುತ್ತಾನೆ.

ಇಲ್ಲಿ ಗಮನಿಸಬೇಕಾದ ಒಂದು ಅಂಶ ಎಂದರೆ,ಶರಣರ ವಚನಗಳಲ್ಲಿ ಎಲ್ಲಿ ಕೂಡ ಸ್ತ್ರೀ ಸ್ವರೂಪವನ್ನು ನಿಂದಾತ್ಮಕವಾಗಿ ಬಳಸಿಲ್ಲ ಹಾಗೆ ಹೆಣ್ಣಿನ ಮೇಲಿನ ಅವಿಧೇಯತೆಯನ್ನು ಕೂಡ ತೋರಿಲ್ಲ. ಇದು ಶರಣರು ಹೆಣ್ಣಿಗೆ ತೋರುತ್ತಿದ್ದ ಘನತೆಯನ್ನು ಎತ್ತಿ ಹಿಡಿಯುತ್ತದೆ.ಬಸವಣ್ಣ,ದಾಸಿಮಯ್ಯ,ಸಿದ್ಧರಾಮ ಇವರುಗಳ ಕೆಲವು ವಚನಗಳು ನಿಂದಾತ್ಮಕವಾಗಿ ಕಂಡು ಬಂದರೂ ಅವುಗಳ ಹಿಂದೆ ಎಷ್ಟೋ ಒಳ ಅರ್ಥಗಳು ಗೋಚರಿಸುತ್ತವೆ. ಈ ವಚನಗಳ ಮರ್ಮ ಕೇವಲ ವ್ಯಭಿಚಾರವನ್ನು ವಿರೋಧಿಸುವುದಲ್ಲ ಬದಲಾಗಿ ಬಹುದೆವೋಪಾಸನೆಯ ವಿರುದ್ಧ ಕೂಗು ಕೂಡ.

ಇನ್ನು ವಚನ ಸಾಹಿತ್ಯ ಸ್ತ್ರೀ ಸಮಾನತೆಯನ್ನು ಬಹುವಾಗಿ ಪ್ರತಿಪಾದಿಸಿತು.. ಹೆಣ್ಣು ,ಗಂಡು ಎಂಬ ಭೇದವನ್ನು ದೂರ ಮಾಡಿತು . ಹೆಣ್ಣನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತಂದಿದ್ದು ಶರಣ ಚಳುವಳಿ. ಹೆಣ್ಣಿಗೆ ಎಲ್ಲಾ ಸಾಮಾಜಿಕ ಸ್ಥಾನ ಮಾನಗಳನ್ನು ನೀಡಲಾಯಿತು. ಅನುಭವ ಮಂಟಪದಲ್ಲಿ ವಿಚಾರ ಗೋಷ್ಠಿಯಲ್ಲಿ ಭಾಗಿಯಾದರು.

೧೨ ನೆ ಶತಮಾನದ ಶರಣ ಚಳುವಳಿ ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಎರಡು ರೀತಿಯ ಮಹತ್ತರವಾದ ಬದಲಾವಣೆಯನ್ನು ಕಂಡಿತು. ಮೊದಲನೆಯದು ಶರಣರು ಕ್ಲಿಷ್ಟಕರವಾದ ಸಂಸ್ಕೃತವನ್ನು ತ್ಯಜಿಸಿ, ಸರಳ ಭಾಷೆಯಲ್ಲಿ ಸಾಮಾಜಿಕ, ಆಧ್ಯಾತ್ಮಿಕ ಭೋಧನೆಗಳನ್ನು ವಚನಗಳ ಮೂಲಕ ಜನ ಸಾಮಾನ್ಯರಿಗೆ ತಲುಪುವಂತೆ ಹರಿದುಬಿಟ್ಟರು ಅಲ್ಲದೆ ಅವರಿಗೂ ಕೂಡ ಬರೆಯಲು ಪ್ರೇರೇಪಿಸಿದರು. ಎರಡನೆಯದು,ಮೊದಲ ಕವಯಿತ್ರಿಗಳು ಬೆಳಕಿಗೆ ಬಂದಿದ್ದು ಈ ಕಾಲದಲ್ಲೆ. ಅಕ್ಕಮಹಾದೇವಿ, ಮುಕ್ತಾಯಕ್ಕ, ಆಯಕ್ಕಿ ಲಕ್ಕಮ್ಮ,ಸೂಳೆ ಸಂಕವ್ವೆ, ರುಮ್ಮವ್ವೆ ಹೀಗೆ ಹಲವಾರು ಕಾಯಕ ಶರಣೆಯರು ಕೂಡ ಚಳುವಳಿಯಲ್ಲಿ ಭಾಗಿಯಾಗಿ ವಚನಗಳನ್ನು ರಚಿಸಿದರು.

ಭಕ್ತಿ ಸಂಪನ್ನ ,ಧರ್ಮ ನಿಷ್ಠರಾದ ಹಲವು ವಚನಗಾರ್ತಿಯರು ಅನುಭವ ಮಂಟಪದಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನು ಮಾಳಿಗೆಯ ಮಾರಯ್ಯ ತನ್ನ ಪತ್ನಿಯನ್ನ ತನ್ನ ಭಕ್ತಿಯ ಶಕ್ತಿ ಎಂದು ಬಿಂಬಿಸುತ್ತಾನೆ. ಆತನ ಪ್ರಕಾರ ಆಧ್ಯಾತ್ಮ ಶಕ್ತಿ ಎಂದರು ಮನುಷ್ಯ ದೇವರಲ್ಲಿ ಲೀನವಾಗುವುದು..

ಸತ್ವಗೆಟ್ಟಲ್ಲಿ ಕಾಷ್ಟವನೂರಿ ನಡೆಯಬೇಕು
ಮತ್ತತ್ವ ವಿದ್ದಲ್ಲಿ ನಿಶ್ಚಯವ ಹೇಳಲಾಗಿ
ಮಹಾಪ್ರಸಾದವೆಂದು ಕೈಕೊಳಬೇಕು
ಎನ್ನ ಭಕ್ತಿಗೆ ನೀ ಶಕ್ತಿಯಾದ ಕಾರಣ
ಎನ್ನ ಸತ್ಯಕ್ಕೆ ಬೇ ಸತಿಯಾದ ಕಾರಣ
ಎನ್ನ ಸುಖ ದುಃಖ, ನಿನ್ನ ಸುಖ ದುಃಖ ಅನ್ಯವಿಲ್ಲ
ಇದಕ್ಕೆ ಭಿನ್ನ ಬೇಡವೇನು ಹೇಳಾ
ನಿಃಕಳಂಕ ಮಲ್ಲಿಕಾರ್ಜುನ

ಈ ವಚನದಲ್ಲಿ ಮೋಳಿಗೆಯ ಮಾರಯ್ಯ ತನ್ನ ಪತ್ನಿಯಾದ ಮಹಾದೇವಿಯಮ್ಮ ಹೇಗೆ ತನಗೆ ಆಧ್ಯಾತ್ಮದ ಹಾದಿಯಲ್ಲಿ ಊರುಗೋಲು ಆಗುತ್ತಾಳೆ ಎಂಬುದನ್ನು ಹೇಳುತ್ತಾನೆ.ತನ್ನ ಭಕ್ತಿಗೆ ಆಕೆಯೇ ಶಕ್ತಿ ಮತ್ತು ದೇವರನ್ನು ಕಂಡುಕೊಳ್ಳುವ ಸತ್ಯದಲ್ಲಿ ಆಕೆಯೇ ಸತಿ ಎಂದು ಹೇಳುತ್ತಾ ಗಂಡಿಗೆ ಹೆಣ್ಣಿನ ಅವಶ್ಯಕತೆ ಭಕ್ತಿ ಮಾರ್ಗದಲ್ಲಿ ಹೇಗೆ ಎಂದು ವಿವರಿಸುತ್ತಾನೆ . ಹಾಗೆ ಲೌಕಿಕ ಜೀವನದಲ್ಲಿ ಹೆಂಡತಿ ತನ್ನ ಸುಖ ದುಃಖ ಎರಡನ್ನೂ ಹಂಚಿಕೊಳ್ಳುವ ಸ್ವರೂಪಿಣಿ ಎನ್ನುತ್ತಾ ಶಿವನಲ್ಲಿ ಪ್ರಶ್ನಿಸುತ್ತಾ ನಮ್ಮಿಬ್ಬರಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು . ಏಕೆಂದರೆ ಅವರು ದೇವರನ್ನು ಕಂಡುಕೊಳ್ಳುವ ರೀತಿ ಮತ್ತು ಬಾಳ್ವೆ ಮಾಡಿದ ರೀತಿ ಇಬ್ಬರೂ ಸಮನಾಗಿ ಅನುಭವಿಸಿದರು ಎಂದು. ಅಂದರೆ ಇಲ್ಲಿ ಸ್ತ್ರೀ ಸಮಾನತೆಯನ್ನು ಕೂಡ ಕಾಣಬಹುದು .

ಇನ್ನು ಕೆಲವು ವಚನಗಳಲ್ಲಿ ಹೆಣ್ಣನ್ನು ಸಾಕ್ಷಾತ್ ದೇವರು ಎಂದು ಬಿಂಬಿಸಲಾಗಿದೆ.. ಹೆಣ್ಣನ್ನು ಹೀಗೆ ಹೋಲಿಸಿದ ಮೊದಲ ವಚನಕಾರ ಸಿದ್ಧರಾಮ..

ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು
ತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತು
ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತು
ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು
ಅದು ಕಾರಣ ಹೆಣ್ಣು ಹೆಣ್ಣಲ್ಲ
ಹೆಣ್ಣು ರಕ್ಕಸಿಯಲ್ಲ
ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ

ಈ ವಚನದಲ್ಲಿ ಸಿದ್ಧರಾಮ ಪುರಾಣದ ಕೆಲವು ನಿದರ್ಶನಗಳ ಮೂಲಕ ಹೆಣ್ಣಿನ ಘನತೆಯನ್ನು ಹೆಚ್ಚಿಸುತ್ತಾನೆ. ಶಿವ ತನಗೆ ಮತ್ತು ಹಲವು ದೇವರುಗಳಿಗೆ ದೇವತೆಗಳನ್ನು ಸೃಷ್ಟಿ ಮಾಡಿದ.. ಗಂಗೆ ಶಿವನ ತಲೆಯ ಮೇಲೆ ಕೂತಳು, ಪಾರ್ವತಿ ಶಿವನ ತೊಡೆಯ ಮೇಲೆ ಸಿಂಗರಿಸಿದಳು. ಸರಸ್ವತಿ ಬ್ರಹ್ಮನ ನಾಲಗೆಯಲ್ಲಿ ಲೀನವಾದಳು. ಲಕ್ಷ್ಮಿ ವಿಷ್ಣುವಿನ ಎದೆಗೆ ಒರಗಿಕೊಂಡಳು. ಇಲ್ಲಿ ದೇವರುಗಳೇ ಹೆಣ್ಣಿನ ಸಂಗವನ್ನು ಬಯಸುವಾಗ. ಇನ್ನು ಹೆಣ್ಣು, ಅದರಲ್ಲೂ ಐಹಿಕ ಹೆಣ್ಣು, ಕೇವಲ ಗಂಡನ ಭೋಗದ ವಸ್ತು ಆಗುವುದಿಲ್ಲ ಅಥವಾ ದೆವ್ವ,ಭೂತಗಳ ಸ್ವರೂಪವಲ್ಲ, ಬದಲಾಗಿ ಆಕೆ ದೈವ ಸ್ವರೂಪ ಎಂದು ಸಿದ್ಧರಾಮ ಹೇಳುತ್ತಾನೆ.ಶರಣರು ಹೆಣ್ಣನ್ನು ಉಚ್ಚ ಸ್ಥಾನದಲ್ಲಿಟ್ಟು ಗೌರವಿಸಿದ್ದರು ಎಂಬುದಕ್ಕೆ ಈ ವಚನ ಸಾಕ್ಷಿ..

ಯತ್ರ ನಾರ್ಯಸ್ತು ಪೂಜ್ಯಂತೆ,ರಮಂತೆ ತತ್ರ ದೇವತಃ ಎಂಬ ಹಾಗೆ ಇಲ್ಲಿ ಸಿದ್ಧರಾಮ ಕೂಡ ಹೆಣ್ಣು ಪೂಜನೀಯ ಎಂದು ಹೇಳುತ್ತಾನೆ ....

(ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಎಲ್ಲ ಮಹಿಳೆಯರಿಗೆ ನನ್ನ ಹೃದಯಪೂರ್ವಕ ನಮನಗಳು ... ಪ್ರಸ್ತುತ ಪರಿಸ್ಥಿತಿಯಲ್ಲಿ ಸಮಾಜದಲ್ಲಿ ಹೆಣ್ಣನ್ನು ಕಾಣುತ್ತಿರುವ ಭಾವ ಬದಲಾಗಬೇಕು .. ಆಕೆಯನ್ನು ಗೌರವಿಸೋಣ .. ಪೂಜನೀಯ ಭಾವದಿಂದ ಕಾಣೋಣ ... ಆಗ ಆಕೆಯಲ್ಲಿ ದೈವತ್ವವನ್ನು ಕಾಣಬಹುದು .. ದೇಶದಲ್ಲಿ ಅತ್ಯಾಚಾರಗಳು ಕಡಿಮೆ
ಆಗಬೇಕೆಂದರೆ ಹೆಣ್ಣನ್ನು ಗೌರವದಿಂದ ಕಾಣಬೇಕಾದ ಅವಶ್ಯಕತೆ ಇದೆ... ಹೆಣ್ಣು.... ಅಕ್ಕ, ತಂಗಿ, ಹೆಂಡತಿ, ತಾಯಿ, ಮಗಳು ಹೀಗೆ ಹಲವು ಪಾತ್ರಗಳಲ್ಲಿ ಪ್ರತಿ ಮನೆಯಲ್ಲೂ ಒಂದಿಲ್ಲೊಂದು ಪಾತ್ರಗಳಲ್ಲಿ ತನ್ನ ಇರುವಿಕೆ ಸೃಷ್ಟಿಸಿಕೊಂಡಿದ್ದಾಳೆ. ಹೆಣ್ಣು ಕಣ್ಣಿಗೆ ಕಾಣುವ ಪ್ರಕೃತಿಯ ಒಡಲಂತೆ, ಹೆಣ್ಣು ಸಂತಾನ ಬೆಳಗಬೇಕೆಂದರೆ ಹೆಣ್ಣನ್ನು ಗೌರವಿಸಿ, ಬೆಳೆಸಲೇಬೇಕು. ಪೂಜನೀಯ ಸ್ವರೂಪದಲ್ಲಿ ಹೆಣ್ಣಿಗೆ ಈ ಲೇಖನ ಸಮರ್ಪಿತ )