Saturday, October 1, 2011

ಅಳಲು !!!

ದೊಡ್ಡೇಗೌಡ ಊರಿನ ಪ್ರಮುಖ ವ್ಯಾಪಾರಿಗಳಲ್ಲಿ ಒಬ್ಬ...ವರ್ತಕರ ಸಂಘದ ಸದಸ್ಯ ಕೂಡ....ಉರಿನಲ್ಲಿ ಒಳ್ಳೆ ಹೆಸರಿದೆ... ಸಂತೆ ಬೀದಿಯಲ್ಲಿ ಬಿಳಿ ಪಂಚೆ,ಬಿಳಿ ಅಂಗಿ ಹಾಕಿಕೊಂಡು ನಡೆದು ಬಂದ ಅಂದರೆ ಅಲ್ಲಿರುವವರೆಲ್ಲರೂ ಎದ್ದು ನಮಸ್ಕರಿಸುತ್ತಾರೆ... ಗಟ್ಟಿಗ,ಧೈರ್ಯವಂತ,ಯಾರೊಬ್ಬರಿಗೂ ಒಂದು ರೂಪಾಯೀ ಮೋಸ ಮಾಡಿಲ್ಲ,ವ್ಯಾಪಾರದಲ್ಲಿ ಕೂಡ,ಹಾಗೆ ಯಾರೇ ಇವನಿಗೆ ಮೋಸ ಮಾಡಿದರೆ ಹಾಗೆ ಬಿಡುವ ಅಸ್ಸಾಮಿ ಅಲ್ಲ... ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಹಿರಿ ಮಗ ವೆಂಕಟೇಶ ಮತ್ತು ಕೊನೆ ವರ್ಷದ  ಡಿಗ್ರಿ ಮಾಡುತ್ತಿರುವ ಮಗಳು,ಇಬ್ಬರು ಮಕ್ಕಳ ಮದುವೆಯನ್ನು ಒಂದೇ ಚಪ್ಪರದಲ್ಲಿ ಮಾಡ ಬೇಕೆಂಬ ಆಸೆಯೊಂದಿಗೆ ಇಬ್ಬರಿಗೂ ವಧು ಮತ್ತು ವರನ ಅನ್ವೇಷಣೆಯಲ್ಲಿ ಕೂಡ ಇದ್ದನು...
ಅದೊಂದು ಭಾನುವಾರ ತನ್ನ ತೋಟ ಮತ್ತು ಅಂಗಡಿಯ ಕೆಲಸದವರಿಗೆ  ಬಟವಾಡೆ ಎಲ್ಲ ಮುಗಿಸಿ ತೋಟದ ಕಡೆ ಹೋಗಿದ್ದ... ಮನೆಯಲ್ಲಿ ಹೆಂಡತಿ ಒಬ್ಬಳೇ ಇದ್ದಳು... ಮಗ ವೆಂಕಟೇಶ ಒಂದು ಹುಡುಗಿಯ ಜೊತೆ ಮನೆಗೆ ಬಂದು,ತನ್ನ ತಾಯಿ ಹತ್ತಿರ ಅವಳನ್ನು ಮದುವೆ ಹಾಗಿರುವುದಾಗಿ ತಿಳಿಸಿದ....
ದೊಡ್ಡೇಗೌಡನ  ಹೆಂಡತಿ ದ್ಯಾವಮ್ಮ ಕುಸಿದು ಬೀಳುವಂತಾದಳು.... ಆಕಾಶ ಕಳಚಿ ತಲೆ ಮೇಲೆ ಬಿದ್ದ ಹಾಗೆ ಆದಳು...ಮಗನ ಈ ಮಾತಿಗೆ ಏನು ಹೇಳಬೇಕೆಂದು ತೋಚದೆ ಗಾಬರಿ ಬಿದ್ದಳು...ಇಂತ ಸಮಯದಲ್ಲಿ ಗಂಡ ಮನೆಯಲ್ಲಿ ಇರಬೇಕಿತ್ತು ಎಂದು ಕೊಂಡಳು ... ಅಳು ಬಂದರೂ ನುಂಗಿಕೊಂಡು "ಯಾಕ್ ಹೀಗ್ ಮಾಡಿದೆ? ನಮಗೆ ಹೇಳಿದ್ರೆ ನಾವೇ ಮದುವೆ ಮಾಡಿಸ್ತಿರ್ಲಿಲ್ವ ? ಯಾವಾಗ ಮದುವೆ ಆದೆ ? ಎಲ್ಲಿ ಆದೆ ? ಅವಳ ಮನೆಯಲ್ಲಿ ಈ ವಿಷಯ ಗೊತ್ತ ?" ಹೀಗೆ ಒಂದರ ಮೇಲೆ ಒಂದು ಪ್ರಶ್ನೆಯನ್ನು ಕೇಳಿದಳು...
ಮನಸ್ಸಿನಲ್ಲಿ ಇನ್ನು  ಮಗಳ ಮದುವೆ   ಮಾಡಬೇಕು,ಈ ವಿಷಯ ಊರಿನ ಜನರಿಗೆ ಗೊತ್ತಾದರೆ ಬಾಯಿಗೆ ಬಂದ ಹಾಗೆ ಮಾತಾಡುತ್ತಾರೆ,ನಮ್ಮ ಮರ್ಯಾದೆ ಏನಾಗಬೇಕು,ಊರವರ ಬಾಯಿಗೆ ಹುಳ ಹಾಗಿ ಬಿಟ್ವಿ....ಹೀಗೆ ಹತ್ತು ಹಲವಾರು ಯೋಚನೆಗಳು ತೊಳಲಾಡ ತೊಡಗಿದವು..
"ಒಂದು ವಾರ ಆಯಿತು ಮದುವೆ ಆಗಿ,ಅಲ್ಲೇ ಸಬ್ ರೆಜಿಸ್ಟ್ರಾರ್ ಆಫಿಸಿನಲ್ಲಿ ಆದ್ವಿ,ಏನೋ ಸ್ವಲ್ಪ ಪ್ರಾಬ್ಲಂ ಆಯಿತು,ಅದಕ್ಕೆ ಆದ್ವಿ..ಹೇಳಬೇಕು ಅಂತ ಇದ್ವಿ,ಹೇಗೂ ಹೇಳಲೇ ಬೇಕು ಅಂತ ಸುಮ್ಮನಾದ್ವಿ ಅಷ್ಟೇ"

"ಏನ್ ಅಂತ ಪ್ರಾಬ್ಲಂ.ಮನೇಲಿ ಹೇಳಿದ್ರೆ ಆಗ್ತಿರಲಿಲ್ವ,ನಿಮ್ಮ ಅಪ್ಪನ ಹತ್ತಿರನಾದ್ರು ಹೇಳಬಾರದಿತ್ತಾ ?? "

"ಅದನ್ನೆಲ್ಲ ಹೇಳಕ್ಕೆ ಆಗಲ್ಲ,ಇವಾಗೆನ್ ಅವರನ್ನು ಒಪ್ಪಿಸ್ತೀನಿ ಬಿಡು "

"ಏನ್ ಒಪ್ಕೋತಾರೆ,ನಿಮ್ಮ ಅಪ್ಪಂಗೆ ನೀನ್ ಹುಟ್ಟಿದ್ಯೋ ಅಥ್ವಾ ನಿಮ್ಮ ಅಪ್ಪ ನಿನಗೆ ಹುಟ್ಟಿದನೋ ? ಮಾಡೋದ್ ಮಾಡ್ಬಿಟ್ಟು ಹೇಳದು ನೋಡು,ಏನಾದ್ರೂ ಮಾಡ್ಕೋ  " ಅಂತ ಹೇಳಿ ಸಿಟ್ಟು  ನುಂಗಿ ಕೊಂಡು ಸೆರಗನ್ನು ಬಾಯಲ್ಲಿ ಕಚ್ಚಿಕೊಂಡು ಹಿತ್ತಲ ಬಾಗಿಲ ಬಳಿ ಹೋಗಿ ಕುಳಿತಳು....ಮಕ್ಕಳ ಮದುವೆ ಬಗ್ಗೆ ಕಂಡ ಕನಸುಗಳೆಲ್ಲ ಮಳೆ ನೀರಿನಲ್ಲಿ ಕೊಚ್ಚಿ ಹೋದಂತೆ ಆದವು...

ಸ್ವಲ್ಪ ಸಮಯದ ನಂತರ ತೋಟದಿಂದ ಬಂದ ದೊಡ್ದೆ ಗೌಡನಿಗೆ ಹೆಂಡತಿ "ಒಳಗೆ ಹೋಗಿ ನೋಡಿ,ಯಾವಳೋ ತಾಟ್ಗಿತ್ತಿನ ಮದುವೆ ಹಾಗಿ ಬಂದವನೇ ನಿಮ್ಮ ಮಗ "

ಇವನಿಗೆ ಏನು ಹೇಳಬೇಕೋ ತೋಚದೆ ಸೀದಾ ಒಳ ನಡೆದು ಮಗನ ಮುಂದೆ ನಿಂತ...ಏನು ಮಾತಾಡ ಬೇಕು ಎಂದು ತಿಳಿಯದೆ ತನ್ನ ಕೋಪ ಸಿಟ್ಟು ಯಾವುದನ್ನು  ತೋರಿಸಿಕೊಳ್ಳದೆ ಸುಮ್ಮನೆ ನಿಂತು ಬಿಟ್ಟ...ತನ್ನ ವ್ಯಾಪಾರದಲ್ಲಿ ನಷ್ಟ ಆದಾಗ ಕೂಡ ಧೃತಿ ಗೆಡದೆ ಇದ್ದ ಅವನ ತಂದೆಗೆ ಕಣ್ಣೀರು ಗೊತ್ತಿಲ್ಲದೇ ಹರಿಯಿತು... ಈಗ ಬಹಳ ಬುದ್ಧಿವಂತಿಕೆ ಇಂದ ಕೆಲಸ ಮಾಡಬೇಕಾದ  ಪರಿಸ್ಥಿತಿ ಬಂತು... ಊರಿನವರಿಗೆ ವಿಷಯ ಗೊತ್ತಾದರೆ ತನ್ನ ಮರ್ಯಾದೆ ಹೋಗುತ್ತದೆ...

ಮದುವೆ ಆಗಿ ಬಂದಿರುವುದರಿಂದ ಮನೆ ತುಂಬಿಸಿಕೊಳ್ಳುವ ಅನಿವಾರ್ಯತೆ ಇತ್ತು,ಇಲ್ಲದೆ ಹೋದರೆ ಉರಿಬ ದೊಡ್ಡ ಮನುಷ್ಯನೇ ಹೀಗೆ ಮಾಡಿದರೆ ಸರಿ ಇರುವುದಿಲ್ಲ....ಆ ಹುಡುಗಿ ಬೇರೆ ಜಾತಿ ಎಂದು ತಿಳಿದಾಗಲಂತೂ ಅವನ ಅಪ್ಪ ಅಮ್ಮ ಇಬ್ಬರೂ ಕೆಂಡಾಮಂಡಲವಾದರು  .... ಆದರೂ  ಬೇರೆ ದಾರಿ ಇಲ್ಲ...ಹುಡುಗಿಯ ಮನೆಯಲ್ಲಿ ಒಪ್ಪದೇ ಇರುವ ವಿಷಯ ತಿಳಿದು ಅವರ ಮನೆಗೆ ಹೋದರೆ ಹುಡುಗಿಯ ತಂದೆ "ತನಗೆ ಯಾವುದೇ ಸಂಬಂಧ ಇಲ್ಲ "ಎಂದು ಮಗಳ ಬಗ್ಗೆ ಕನಿಕರ ಇಲ್ಲದೆ ಸಾರಾ ಸಗಟಾಗಿ ಹೇಳಿಬಿಟ್ಟರು....

ಇವನ ತಂದೆ ಎಷ್ಟೇ ಒಪ್ಪಿಸಲು ಪ್ರಯತ್ನ ಪಟ್ಟರೂ ಸಾಧ್ಯ ಆಗಲಿಲ್ಲ... ಕೊನೆಗೆ ಅವಳ ಅಪ್ಪ "ಮದುವೆಗೆ ಮುಂಚೆ ಬಸುರಿ ಆಗಿ ಬಂದು,ನಮ್ಮ ಮನೆತನದ ಗೌರವ ಹಾಳು ಮಾಡಿದ್ದು ಸಾಕು,ಇನ್ನು ಮುಂದೆ ಅವಳು ನಮ್ಮ ಮನೆಗೆ ಬರುವುದು ಬೇಡ" ಎಂದು
ಹೇಳಿದಾಗಲೇ ಅವನು  ಯಾಕೆ ಮನೆಯಲ್ಲಿ ಹೇಳದೆ ಮದುವೆ ಆಗಿದ್ದು ಮತ್ತು ಅವನು ಮುಚ್ಚಿಟ್ಟಿದ್ದ ಸತ್ಯ ತಿಳಿದಿದ್ದು....

ಸುಮಾರು ಒಂದು ತಿಂಗಳ ಹಿಂದೆಯೇ ಇವರಿಬ್ಬರೂ ಬಂದು ಇವಳು ಗರ್ಭಿಣಿ ಆಗಿರುವ ವಿಷಯ ತಿಳಿಸಿದ್ದು ಮತ್ತು ತಾನು ಮದುವೆ ಮಾಡಿಕೊಡಲು ಒಪ್ಪದೇ ಇದ್ದಿದಕ್ಕೆ ಇವರು ಮದುವೆ ಆಗಿರಬೇಕು ಎಂದು,ಎಲ್ಲ ವಿಷಯಗಳನ್ನು ಹುಡುಗಿಯ ತಾಯಿ ದೊಡ್ದೆಗೌಡನಿಗೆ ಹೇಳುತ್ತಾಳೆ...

ಈ ಸಂಗತಿ ತಿಳಿದಾಗ ಬಹಳ ಜಾಗರೂಕರಾದ ಗೌಡ ಉಪಾಯ ಮಾಡಿ ರೆಜಿಸ್ಟಾರ್ ಆಫಿಸಿನಲ್ಲಿ ಆಗಿರುವ ಮದುವೆಯನ್ನು  ಇನ್ನೊಮ್ಮೆ ಶಾಸ್ತ್ರೋಕ್ತವಾಗಿ ಮಾಡಿಸಲು ನಿಶ್ಚಯಿಸುತ್ತಾನೆ..ಜೊತೆಗೆ ಒಳಗೆ ತಳಮಳ ಶುರು ಆಯಿತು ಅವನಿಗೆ,ಬೇರೆ ಜಾತಿಯ ಹುಡುಗಿಯನ್ನು ಮನೆ ಸೊಸೆ ಮಾಡಿ ಕೊಂಡರೆ ತನ್ನ ಸಮಾಜದಲ್ಲಿ ತನಗೆ ಇರುವ ಹೆಸರು ಕೆಡುತ್ತದೆ ಅಲ್ಲದೆ ಇಬ್ಬರಿಗೂ,ಇರುವ ಇನ್ನೊಬ್ಬ ಮಗಳ ಮದುವೆಯ ಬಗ್ಗೆ ಚಿಂತ ಅತ್ತ ತೊಡಗಿತು... ಅಣ್ಣ ಈ ರೀತಿ ಮಾಡಿದ್ದಾನೆ ಅಂತ ಗೊತ್ತಾದರೆ ಇವಳನ್ನು ಮದುವೆ  ಆಗುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ ಎಂಬ ಆತಂಕ....

ಇಂಥ ಆತಂಕದ ನಡುವೆ , ಆಗಿರುವ ಮದುವೆಗೆ ಇನ್ನೊಮ್ಮೆ ನಾಮಕಾವಸ್ಥೆ ಶಾಸ್ತ್ರೋಕ್ತವಾಗಿ ಮಾಡಿಯೂ ಆಯಿತು.... ಆದರೆ ಹುಡುಗಿಯ ಮನೆ ಕಡೆ ಇಂದ ಯಾರು ಬರಲಿಲ್ಲ... ತಂಗಿಯ ಮದುವೆ ಮೊದಲು ಮಾಡುವ ಬದಲು ಇವನು ಯಾಕೆ ಆದ,ಜವಾಬ್ದಾರಿ ಇಲ್ಲದವನು ಎಂದು ಕೆಲವರು ಬೈದು ಕೊಂಡರೆ,ಇನ್ನು ಕೆಲವರು ಹುಡುಗಿಯ ಮನೆ ಕಡೆಯವರು ಯಾರು ಬರದೆ ಇರುವ ವಿಷಯ ತಿಳಿದು ಏನೋ ಎಡವಟ್ಟಾಗಿದೆ ,ಅದಕ್ಕೆ ಈ ರೀತಿ ಇಷ್ಟು ಬೇಗ ಮಾಡುತ್ತಿದ್ದಾರೆ ಎಂದು ಮಾತಾಡಲು ಶುರು ಮಾಡಿದರೆ,ಕೆಲವರ ಸಂಶಯದ ನಡುವೆ ಕಲ್ಯಾಣ ಮುಗಿಯಿತು...ಆದರೆ ದೊಡ್ದೆ ಗೌಡ ಆಗಲಿ ಅವನ ಹೆಂಡತಿಯ ಮುಖದಲ್ಲಿ ಯಾವುದೇ ತರಹದ ಸಂತೋಷದ ಛಾಯೆ ಇರಲಿಲ್ಲ,ಬದಲಾಗಿ ದುಖ, ಸಮಾಜದಲ್ಲಿ ತಲೆ ತಗ್ಗಿಸಬೇಕಾದ ಪರಿಸ್ಥಿತಿ ಬಂದಿರುವುದಕ್ಕೆ ಅಂಜಿಕೆ ಎದ್ದು ಕಾಣುತಿತ್ತು...

ಬಹಳ ವಿಜೃಂಭಣೆಯಿಂದ  ಮಾಡಬೇಕು ಎಂದು ಕನಸು ಕಟ್ಟಿ ಕೊಂಡಿದ್ದ ಮದುವೆ ಈ ರೀತಿ ಆಗುತ್ತಿರುವುದಕ್ಕೆ ಬೇಸರ ಅಲ್ಲದೆ ಒಂದು ರೀತಿಯ ಸೂತಕದ ಲಕ್ಷಣಗಳು ಕಂಡವು...ವ್ಯಾಪಾರದಲ್ಲಿ ನಷ್ಟ ಆದಾಗ ಕೂಡ ಮಂಕಾಗದ ಅವನ ತಂದೆ ಇವತ್ತು ಮಂಕಾಗಿದ್ದರು,ಇಬ್ಬರಲ್ಲೂ ನೊಂದ ಭಾವ ಅಡಗಿತ್ತು....ಮಗನನ್ನು ಬೆಳೆಸಿ ಓದಿಸಿದಕ್ಕೆ ಇವನು ಕೊಟ್ಟ ದೊಡ್ಡ ಉಡುಗೊರೆ ಎಂದರೆ ತಮ್ಮ ಕನಸುಗಳನ್ನು ನುಚ್ಚು ನೂರು ಮಾಡಿದ್ದು ಮತ್ತು ಸಮಾಜದಲ್ಲಿ ತಮ್ಮ ಗೌರವ ಘನತೆ ಆಳು ಮಾಡಿದ್ದು....

ಸಂಭ್ರಮ ಇಲ್ಲದ ಮದುವೆ ಮುಗಿದು ದಂಪತಿಗಳನ್ನು ಕಳಿಸಿದ ಮೇಲೆ ಉರಿನಲ್ಲಿ ಇವರ ಮದುವೆ ವಿಷಯ ಎಲ್ಲರ ಬಾಯಲ್ಲಿ ಹರಿದಾಡ ತೊಡಗಿತು... ಕೆಲವರಿಗೆ ನಿಜ ಸಂಗತು ತಿಳಿಯ ತೊಡಗಿತು... ಊರಿನ ಜನರೆಲ್ಲಾ ಇವನ ಮನೆಯವರನ್ನು ಒಂದು ವಿಚಿತ್ರ ರೀತಿಯಲ್ಲಿ ನೋಡ ತೊಡಗಿದರು...ಮದುವೆ ಆಗಿ ೬ ವರೆ ತಿಂಗಳಿಗೆ ಮಗು ಆದಾಗ  ಜನ  ಕೆಟ್ಟ ರೀತಿಯಲ್ಲಿ ಕಾಣತೊಡಗಿದರು,ಅಲ್ಲದೆ ಅವನ ತಂಗಿಗೆ ಒಂದು ಸಂಭಂದ ಹುಡುಕುವುದು ಕಷ್ಟ ಆಯಿತು...ಅವಳು ತನ್ನ ಅಳಲು ತೋಡಿಕೊಳ್ಳಲು ಆಗದ ಪರಿಸ್ಥಿತಿ ತಲುಪಿದಳು....ನೆಂಟರಿಷ್ಟರು ದೂರ ಮಾಡಲು ಶುರು ಮಾಡಿದರು....

ಎಲ್ಲದರಿಂದ ಆಸಕ್ತಿ ಕಳೆದು ಕೊಂಡ ತಂದೆ ಮಗಳ ಮದುವೆ ಬಗ್ಗೆ ಚಿಂತ ಮಾಡತೊಡಗಿದ .......ಇವೆಲ್ಲದರಿಂದ ಬೇಸತ್ತ ವೆಂಕಟೇಶನ ತಾಯಿ ಅರೆ  ಹುಚ್ಚಿ ಆಗಿಬಿಟ್ಟಳು...

20 comments:

  1. ಪ್ರೇಮ,ಗೀಮ, ಅಂತರ್ಜಾತೀಯ ಮದುವೆ ಇವೆಲ್ಲ ಕೇಳಲಿಕ್ಕೆ ಚೆನ್ನ. ಅದರಿಂದ ಉದ್ಭವಿಸುವ ವಾಸ್ತವ ಸಮಸ್ಯೆಗಳನ್ನು ಚೆನ್ನಾಗಿ ಚಿತ್ರಿಸಿದ್ದೀರಿ.

    ReplyDelete
  2. ಪ್ರೀತಿ ಪ್ರೇಮ ಗಳಿಂದ ಅಂತರ್ಜಾತೀಯ ವಿವಾಹಗಳಿಂದ ಕುಟುಂಬ ಸಂಬಂದದೊಳಗೆ ಬಿಗಡಾಯಿಸುವ ಸಮಸ್ಯೆಗಳ ಕುರಿತಾದ ನೈಜ ಚಿತ್ರಣ...
    ಆದರೂ ಎಲ್ಲೊ ಒಂದು ಕಡೆ ಹೆತ್ತವರ ಪ್ರತಿಷ್ಠೆಯ ಮುಂದೆ ಮಕ್ಕಳ ಕನಸುಗಳು, ಆಸೆಗಳು ಸೊರಗುವುದು ಕೂಡ ತಪ್ಪೆಂದು ಅನಿಸುವುದಿಲ್ಲವೇ....?
    ಏನೇ ಆದರೂ ಮಕ್ಕಳು ಆತುರದ ನಿರ್ಧಾರ ತೆಗೆದುಕ್ಕೊಳ್ಳಬಾರದು...ಹೆತ್ತವರ ನಂಬಿಕೆಗೂ ಮೋಸ ಮಾಡಬಾರದು...ಹೆತ್ತವರನ್ನು ಒಲಿಸಿ ತಮ್ಮ ಇಚ್ಛೆಯನ್ನು ಸಾಕಾರಗೊಳಿಸಬೇಕು...

    ಗಿರೀಶ್ ಸರ್....ಕತೆ ಬಹಳ ಇಷ್ಟವಾಯ್ತು....

    ReplyDelete
  3. ಒಳ್ಳೆ ಕಥೆ, ನೈಜತೆ ತುಂಬಿದ ಕಥೆ. ಚೆನ್ನಾಗಿದೆ ಗಿರೀಶ್ :)

    ReplyDelete
  4. ಕಥೆ ಚೆನ್ನಾಗಿದೆ.ಇಂತಹ ಘಟನೆಗಳು ಬಹಳಷ್ಟು ನೆಡೆಯುತ್ತವೆ.... ಬೇಸರ ತರಿಸುವುದು ನಿಜ.. ಮಕ್ಕಳು ಹುಟ್ಟಿ ತಂದೆತಾಯಿಗೆ ನೋವು ತರಿಸುವ ಘಟನೆಗಳು ಈಗೀಗ ಹೆಚ್ಚಾಗಿವೆ. ಕಥೆ ಬರೆದ ಶೈಲಿ ಚೆನ್ನಾಗಿದೆ..

    ReplyDelete
  5. ಬರವಣಿಗೆಯ ಶೈಲಿ ತುಂಬಾ ಹಿಡಿಸಿತು......

    ReplyDelete
  6. ಇಂಥ ಮಗು ಬೇಕಿತ್ತಾ ನಮಗೆ ಎನಿಸುವ ಹಾಗೆ ಮಾಡಿಬಿಟ್ಟರೆ ಮಕ್ಕಳು, ಅಷ್ಟು ವರ್ಷ ಅವರಿಗಾಗಿ ಸವೆದ ಜೀವನವೆಲ್ಲ ವ್ಯರ್ಥ ಎನಿಸುತ್ತದೆ. ಕಥೆಯಲ್ಲಿ ಸೂಕ್ಷ್ಮ ಸತ್ಯ ಬಹಳ ಇವೆ. ಒಳ್ಳೆಯ ಬರವಣಿಗೆ ಗಿರೀಶ. ಹಳ್ಳಿಯ ಜೀವನದ ಬಗ್ಗೆಯೇ ಬರಿಯುತ್ತೀರಲ್ಲ ಹೆಚ್ಚು.. ಕಾರಣ ಕೇಳಬಹುದೇ?

    ReplyDelete
  7. [Sunaath Sir]ಖಂಡಿತ ಸತ್ಯ... ಸಮಾಜದ ದೃಷ್ಟಿಯಲ್ಲಿ ಅಂತರ್ಜಾತಿ ಮದುವೆ ಆದರೆ ಅಂಥವರನ್ನು ಮತ್ತು ಅವರ ಮನೆಯವರನ್ನು ಬಹಳ ಕೀಳು ಮಟ್ಟದಲ್ಲಿ ನೋಡುವ ಪರಿಸ್ಥಿತಿ ಸಂಭವಿಸಿದೆ...

    ReplyDelete
  8. [Sushma]ಮಕ್ಕಳಿಗೆ ಅವರದೇ ಆದ ಆಸೆ,ಕನಸುಗಳು ಇರುತ್ತವೆ... ಆದರೆ ಅವುಗಳು ತಂದೆ ತಾಯಿಯನ್ನು ನೋಯಿಸಬಾರದು ಅಲ್ಲವೇ ? ನೀವೇ ಹೇಳಿದಂತೆ ಹೆತ್ತವರನ್ನು ಒಲಿಸಿ ತಮ್ಮ ಇಚ್ಛೆಯನ್ನು ಸಾಕಾರಗೊಳಿಸಬೇಕು... ಕಥೆ ಇಷ್ಟ ಪಟ್ಟಿದಕ್ಕೆ ಧನ್ಯವಾದಗಳು....

    ReplyDelete
  9. [Ishwar Bhat]ಧನ್ಯವಾದಗಳು ಸರ್....

    ReplyDelete
  10. [Suguna Madam]ಹೌದು ಇಂಥ ಘಟನೆಗಳು ಬಹಳ ಹೆಚ್ಚಾಗಿವೆ.... ಇಂಥ ಸನ್ನಿವೇಶಗಳಿಂದ ಎಷ್ಟೋ ತಂದೆ ತಾಯಿಗಳು ಮಾನಸಿಕವಾಗಿ ಬಹಳ ನೊಂದಿದ್ದಾರೆ.... ಕಥೆ ಮೆಚ್ಚಿದಕ್ಕೆ ಧನ್ಯವಾದಗಳು...

    ReplyDelete
  11. [Sahana Madam]ಹಳ್ಳಿಯಲ್ಲೇ ಬೆಳೆದಿದ್ದರಿಂದ ಅಲ್ಲಿನ ಕೆಲವು ವಾಸ್ತವ ಚಿತ್ರಣಗಳನ್ನು ಹತ್ತಿರದಿಂದ ನೋಡಿದ್ದೇನೆ....ಆಗಾಗಿ ಹಳ್ಳಿಯ ಜೀವನದ ಬಗ್ಗೆ ಬರೆಯುತ್ತೇನೆ ಅಷ್ಟೇ...Thanks a lot..liked your observation...

    ReplyDelete
  12. ಯುವ ಪ್ರೇಮಿಗಳು ಮು೦ದಾಲೊಚನೆ ಇಲ್ಲದೆ ಮು೦ದುವರಿಯುವುದರಿ೦ದ ಉ೦ಟಾಗಬಹುದಾದ ಸಮಸ್ಯೆಗಳನ್ನು ಚೆನ್ನಾಗಿ ಚಿತ್ರಿಸಿದ್ದೀರಿ ಗಿರೀಶ್. ನಿರೂಪಣೆಯನ್ನು ಮತ್ತಷ್ಟು ಉತ್ತಮಗೊಳಿಸಿದರೆ ಕಥೆಯು ಇನ್ನು ಸು೦ದರವಾಗುತ್ತದೆ. ಅಭಿನ೦ದನೆಗಳು.

    ReplyDelete
  13. [Prabhamani Madam]ಖಂಡಿತ ನನ್ನ ಬರವಣಿಗೆ ಶೈಲಿಯನ್ನು ಉತ್ತಮಗೊಳಿಸಿಕೊಳ್ಳುತ್ತೇನೆ ... ನಿಮ್ಮ ಸಲಹೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು...

    ReplyDelete
  14. ಗಿರೀಶ್ ಅವರೆ, ನೀವು ಬರೆದ ಕಥೆ ಚೆನ್ನಾಗಿದೆ.ಸುಷಮಾ ಅವರ ಕಾಮೆಂಟ್ ಇಂದಿಗೆ ಪ್ರಸ್ತುತವಾಗಿದೆ. ಒಟ್ಟಿನಲ್ಲಿ ನಮ್ಮ ನಡತೆಗಳ ಬಗ್ಗೆ ಚಿಂತನೆಗೆ ಹಚ್ಚುವ ಈ ಬರಹ ಚೆನ್ನಾಗಿದೆ.
    ನನಗೆ ಕನ್ನಡ ಬ್ಲಾಗ್ ಗಳ ಬಗ್ಗೆ ತಿಳಿದೇ ಇರಲಿಲ್ಲ. ನಿಮ್ಮಿಂದಾಗಿ ನಾನು "ಬಯಲ ಹುಡಿ" "ಕೊಳಲು" "ಪೆನ್ನು ಪೇಪರು" ಇತ್ಯಾದಿಗಳನ್ನು ಓದುತ್ತಿದ್ದೇನೆ. ವೈಚಾರಿಕತೆಗೆ ಹಚ್ಚುವ ಇವುಗಳು ಚೆನಾಗಿವೆ. ಧನ್ಯವಾದಗಳು.
    ಲೀಲಾ ಗರಡಿ

    ReplyDelete
  15. [Leela Garady]ಲೀಲಾ ಗರಡಿ ಅವರೇ,ಮೊದಲಿಗೆ ತಮಗೆ ನನ್ನ ಬ್ಲಾಗಿಗೆ ಸ್ವಾಗತ... ಕಥೆ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.... ಹೀಗೆ ಭೇಟಿ ಕೊಡುತ್ತಿರಿ ...

    ReplyDelete
  16. samaajadalli atiyaada
    todakina paristhitiyannu
    sogasaagi chitrisiddiri,
    abhinandanegalu.

    ReplyDelete
  17. [Kalavathi Madam]ನಿಮ್ಮ ಪ್ರೀತಿ ಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete