Wednesday, September 14, 2011

ಮರುಕಳಿಸಿದ ನೆನಪುಗಳು !!!

ಸುಮಾರು ೬ ವರ್ಷದ ನಂತರ ಎಲ್ಲರೂ ಒಟ್ಟಿಗೆ ಸೇರಿದ ದಿನ ಅದು..ಕಳೆದ ವಾರ ನಮ್ಮ ಪಿ.ಯು.ಸಿ ಹಾಸ್ಟೆಲ್ಲಿನ ಹುಡುಗರೆಲ್ಲ ಒಟ್ಟಿಗೆ ಭೇಟಿ ಆಗಿದ್ದೆವು...ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕು ರಾಮಕುಂಜ ಎಂಬ ಗ್ರಾಮದ ಬೋರ್ಡಿಂಗ್ ಹಾಸ್ಟೆಲ್ಲಿನಲ್ಲಿ ೨ ವರ್ಷ ಒಟ್ಟಿಗೆ ಕಳೆದ ನಾವು ಮತ್ತೆ ಆ ನೆನಪುಗಳನ್ನು ಹೊತ್ತು ಭೇಟಿ ಆದೆವು...
ರಾಮಕುಂಜ ಇದು ಉಪ್ಪಿನಂಗಡಿ ಇಂದ ಸುಭ್ರಮಣ್ಯ ಹೋಗುವ ದಾರಿಯಲ್ಲಿ ಇದೆ..ಇದು ಈಗಿನ ಪೇಜಾವರ ಯತಿಗಳಾದ ಶ್ರೀ ವಿಶ್ವೇಶ ತೀರ್ಥರ ಹುಟ್ಟೂರು,ಮತ್ತು ವನವಾಸದ ಕಾಲದಲ್ಲಿ ರಾಮನು ಇಲ್ಲಿ ಈಶ್ವರನನ್ನು ಪೂಜಿಸಿದ್ದರಿಂದ ಇಂದು ರಾಮಕುಂಜ ಎಂದು ಮತ್ತು ಅಲ್ಲಿನ ಈಶ್ವರನಿಗೆ ರಾಮಕುಂಜೇಶ್ವರ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ...(ಇದು ಮೊದಲ ವರ್ಷದ ಮೊದಲ ಕನ್ನಡ ಕ್ಲಾಸಿನಲ್ಲಿ ನಮ್ಮ ಉಪನ್ಯಾಸಕರಾದ ಗಣರಾಜ್ ಕುಂಬ್ಳೆ ಅವರು ಹೇಳಿದ ವಿಷಯ,ಈ ಊರಿನ ಇತಿಹಾಸದ ಬಗ್ಗೆ ಒಂದು ಪುಸ್ತಕ ಕೂಡ ಬರೆದಿದ್ದಾರೆ).....
ಇಲ್ಲಿ ದೇವಸ್ಥಾನ,ಒಂದು ಪ್ರೈಮರಿ ಶಾಲೆ,ಒಂದು ಸಣ್ಣ ಗುಡ್ಡದ ಮೇಲೆ ನಮ್ಮ ಕಾಲೇಜು,ಅಲ್ಲಿಂದ ಸ್ವಲ್ಪ ದೂರದಲ್ಲಿ ಇನ್ನೊಂದು ಸಣ್ಣ ಗುಡ್ಡದ ಮೇಲೆ ನಮ್ಮ ಹಾಸ್ಟೆಲ್....ದೇವಾಲಯದ ಬಳಿ ರಥದ ಮನೆ ಹತ್ತಿರ ಒಬ್ಬ ಭಟ್ಟರ ಮನೆ,ಜೊತೆಗೆ ಅವರು ನಡೆಸುತ್ತಿದ್ದ ಒಂದು ಅಂಗಡಿ(ಈ ಅಂಗಡಿ ನಮಗೆ ತುಂಬ Important )...ಅಷ್ಟು ಬಿಟ್ಟರೆ ಅಲ್ಲಿ ಏನೇನು ಇಲ್ಲ... ಮನೆಗಳು ಇವೆಯಾದರೂ ಅಲ್ಲಿಂದ ಸುಮಾರು ದೂರ ಹೋಗಬೇಕು... ಸುತ್ತ ಮುತ್ತ ಬೆಟ್ಟ ಗುಡ್ಡಗಳು,ಉರಿ ಬಿಸಿಲು, ಹೊತ್ತಿಲ್ಲದ ಹೊತ್ತಲ್ಲಿ ಬರುವ ಮಳೆ,ಇಂಥ ಊರಲ್ಲಿ ೨ ವರ್ಷ ಕಳೆದ ರೋಮಾಂಚಕಾರಿ ಘಟನೆಗಳನ್ನು ಮೆಲುಕು ಹಾಕಲು, ಅವುಗಳ ಬಗ್ಗೆ ಚರ್ಚೆಗೆ ನೆರವಾಗಿದ್ದು ಮೊನ್ನೆಯ ನಮ್ಮೆಲ್ಲರ ಭೇಟಿ... 

ಹತ್ತನೇ ತರಗತಿ ಮುಗಿಸು ಕಾಲೇಜುಗಳ ಅನ್ವೇಷಣೆಯಲ್ಲಿದ್ದಾಗ ತಂದೆಯ ಸ್ನೇಹಿತರೊಬ್ಬರು ಕೊಟ್ಟ ಸಲಹೆ ಮೇರೆಗೆ ಅಲ್ಲಿಗೆ ಹೋದಾಗ ನಮಗೆ ಕಂಡಿದ್ದು ಅದೇ ಕಾಲೇಜು ಬಿಲ್ಡಿಂಗ್,ಹಾಸ್ಟೆಲ್,ದೇವಸ್ಥಾನ,ಒಂದು ಶಾಲೆ ಮತ್ತು ಅಂಗಡಿ ಇಷ್ಟೇ...ಬೆಳಗ್ಗೆ ೫.೩೦ ಕ್ಕೆ ಎದ್ದು,೫.೪೫ ಗೆ ಪ್ರಾರ್ಥನೆ ,ನಂತರ ಚಹಾ ಕುಡಿದು ೬.೦೦ ಘಂಟೆ ಇಂದ ೮.೦೦ ರವರೆಗೆ ಓದು..ನಂತರ ಊಟ(ಗಂಜಿ ಊಟ),ನಂತರ ರೆಡಿ ಆಗಿ ೯.೩೦ ಕ್ಕೆ ಕಾಲೇಜಿಗೆ ಹೊರಡುವುದು...೯.೪೫ ಇಂದ ೧೨.೫೦ ಕಾಲೇಜು,೧.೦೦ ಊಟ,ಮತ್ತೆ ೧.೩೦ ಕ್ಕೆ ಕಾಲೇಜಿಗೆ ಹೊರಡುವುದು...೧.೪೫ ಇಂದ ೩.೫೦ ರವರೆಗೆ ಕಾಲೇಜು,ಮತ್ತೆ ಹಿಂದಿರುಗಿ ೪.೦೦ ಕ್ಕೆ ಕಾಫಿ ತಿಂಡಿ,ನಂತರ ೫.೪೫ ವರೆಗೆ ಆಟೋಟ,ಮತ್ತೆ ೬.೩೦ಕ್ಕೆ ಪ್ರಾರ್ಥನೆ,೬.೪೫ ಇಂದ ೮.೩೦ ರವರೆಗೆ ಸ್ಟಡಿ ಪೀರಿಯಡ್...ಮತ್ತೆ ಊಟದ ನಂತರ ೮.೫೦ ಇಂದ ೯.೫೦ ರವರೆಗೆ ಸ್ಟಡಿ ಪೀರಿಯಡ್,ಹತ್ತು ಘಂಟೆಗೆ ಎಲ್ಲಾ ಲೈಟ್ಸ್ ಆಫ್. ವಾರಕ್ಕೆ ಎರಡು ದಿನ ಸಮವಸ್ತ್ರ,ಮತ್ತೆ ಹಾಸ್ಟೆಲಿನಲ್ಲಿ ಇಂಥ ಸ್ಟ್ರಿಕ್ಟ್ ರೂಲ್ಸ್ ಗಳು...ಅಲಿ ಬಿಟ್ಟು ಬೇರೆ ಎಲ್ಲೂ ಹೋಗುವ ಅವಕಾಶವೇ ಇರಲಿಲ್ಲ....ನಮ್ಮ ಬಳಿ ಯಾವುದೇ ಕಾರಣಕ್ಕೂ ದುಡ್ಡು ಇಟ್ಟಿಕೊಳ್ಳುವ ಹಾಗಿರಲಿಲ್ಲ..ಬೇರೆಯವರ ರೂಮಿಗೆ ಹೋಗುವ ಹಾಗಿರಲಿಲ್ಲ...ಎಲ್ಲದಕ್ಕೂ permission ತಗೋಬೇಕು.ಆಟಕ್ಕೆ ಹೋಗಲಿಲ್ಲ ಅಂದರೂ,ರಾತ್ರಿ ಹತ್ತರ ನಂತರ ಓದಬೇಕು ಅಂದರೂ,ಬೇಗೆ ಮಲಗ ಬೇಕು ಅಂದ್ರೂ..ಅಲ್ಲದೆ ಪ್ರತಿ ತಿಂಗಳ ನಮ್ಮ ಬಿಲ್ ಜೊತೆ ಕಳುಹಿಸುತ್ತಿದ್ದ ನಮ್ಮ ರಿಪೋರ್ಟ್ ಗಳು ,ಅಲ್ಲದೆ ತಿಂಗಳಿಗೆ ಒಂದೇ ದಿನ(ಅದೂ ನಮಗೆ ಮೀಸಲಿಟ್ಟ ದಿನವೇ) ಮನೆಯಿಂದ ಫೋನ್ ಮಾಡಬಹುದಿತ್ತು,...ಬೇರೆ ದಿನ ಮಾಡಿದರೆ useless ...೩ ತಿಂಗಳಿಗೆ ಒಮ್ಮೆ ಮಾತ್ರ ಮನೆಗೆ ಕಳುಹಿಸುತ್ತಿದ್ದರು...ಅದೂ ರಜ ಸಿಕ್ಕಿದ್ರೆ,ಇಲ್ಲಾಂದ್ರೆ ಅದೂ ಇಲ್ಲ...ಹಾಸ್ಟೆಲ್ ನಲ್ಲೆ ಇರುತ್ತಿದ್ದ ನಮ್ಮ ಉಪನ್ಯಾಸಕರು....ನಮ್ಮ ಜೊತೆಗೆ ಊಟ,ನಮ್ಮ ಜೊತೆಯಲ್ಲಿ ಆಟ ಕೂಡ ಆಡುತ್ತಿದ್ದರು..ಸಿಟಿಗೆ ಬರಬೇಕು ಅಂದರೂ ಅಲ್ಲಿಂದ ಸುಮಾರು ೧೨ ಕಿಮಿ..ಅದೂ ಹುಷಾರಿಲ್ಲ ಅಂದರೆ ಅವರೇ ಕರ್ಕೊಂಡು ಬರುವವರು...ಅಲ್ಲೇ ಎಲ್ಲಾ ಇರುತ್ತಿದ್ದ stationary ಸಾಮಗ್ರಿಗಳು...ಬಹುಷಃ ಇಂಥ ಪರಿಸರ ನೋಡೇ ಇರಬೇಕು,ನಮ್ಮ ತಂದೆ 'ಈ ಬಡ್ಡಿ ಮಗಂಗೆ ಇದೆ ಸರಿಯಾದ ಜಾಗ,ಇಲ್ಲಾದರೆ ಬಾಲ ಮುದುರಿಕೊಂಡು ಇರ್ತಾನೆ'ಅಂತ ತಂದು ಸೇರಿಸಿಯೇ ಬಿಟ್ಟರು...

ಅಲ್ಲಿಂದ ಶುರು ಆಯಿತು ನಮ್ಮ ಓದು,ನಮ್ಮ ಇತರ ಚಟುವಟಿಕೆಗಳು,ರೂಲ್ಸ್ ವಿರುದ್ದ ನಡೆಯುವುದು...ಎಲ್ಲಾ...ಅಲ್ಲಿ ಬಿಟ್ಟು ೬ ವರ್ಷ ಆದರೂ ಆ ನೆನಪುಗಳು,ಆ ಊರು,ಆ ಘಟನೆಗಳು....ಯಾವುದನ್ನು ಮರೆಯಲು ಸಾಧ್ಯವಿಲ್ಲ...ಬೆಳ್ಳಗೆ ಬೆಳ್ಳಗೆ ಗಂಜಿ ಊಟ(ದಕ್ಷಿಣ ಕನ್ನಡ ಸ್ಪೆಷಲ್,ಕುಸುಲಕ್ಕಿ ಇಂದ ಮಾಡುತ್ತಾರೆ,ಅನ್ನ ಬೇಯಿಸಿದ ನಂತರ ಗಂಜಿಯನ್ನು ಬಸಿಯದೆ ಹಾಗೆ ಬಡಿಸುತ್ತಾರೆ),....ಜತೆಗೆ ಮಿಡಿ ಮಾವಿನ ಉಪ್ಪಿನಕಾಯಿ,ಚಟ್ನಿ.... ಖಾಲಿ ಡಬ್ಬಕ್ಕೆ ಕಲ್ಲು ಹಾಕಿ ಅಲ್ಲಾಡಿಸಿದ ಹಾಗೆ ಆಗುತ್ತಿದ್ದ ,ಏನು ಅರ್ಥವಾಗದ ತುಳು ಭಾಷೆ.....,ಆ ರಣ ಬಿಸಿಲು,....ಯಾವಾಗ ಬೇಕೋ ಅವಾಗ ಸುರಿಯುತ್ತಿದ್ದ ಮಳೆ,....ರವಿವಾರ ಮಾತ್ರ ಗಂಜಿ ಊಟದ ಬದಲಾಗಿ ಇರುತ್ತಿದ್ದ ಇಡ್ಲಿಗೆ ಕಾಯುತ್ತಿದ್ದ ಪರಿ,......ಕದ್ದು ಭೇಲಿ ಹಾರಿ(ಕೆಲವರು ನುಸುಳುತ್ತಿದ್ದರು,ಕೆಲವರು ಹಾರುತ್ತಿದ್ದರು) ಹೋಗುತ್ತಿದ್ದ ಆ ದೇವಸ್ಥಾನದ ಹತ್ತಿರ ಇದ್ದ ಆ ಭಟ್ಟರ ಅಂಗಡಿ.....,ಕೆಲವೊಮ್ಮೆ ಸಿಕ್ಕಿ ಹಾಕಿಕೊಂಡು ಬರೆದ ಅದೆಷ್ಟೋ Apology ಲೆಟರ್ ಗಳು,....ಕೆಲವೊಮ್ಮೆ ಮಧ್ಯ ರಾತ್ರಿ(ಶಾರ್ಪ್ ೨.೦೦ ಘಂಟೆ ) ಶುರು ಆಗುತ್ತಿದ್ದ ನಮ್ಮ ಕಾರ್ಯಾಚರಣೆ,ಕತ್ತಲಿನಲ್ಲಿ ಬೇಲಿ ಹಾರಿ ಹೋಗುತ್ತಿದ್ದ ಆ ನಮ್ಮ ಧೈರ್ಯ,....ಕತ್ತಲಿನಲ್ಲಿ ಹರಿದ ಅದೆಷ್ಟೋ ಲುಂಗಿಗಳು.....,ಕಳೆದುಕೊಂಡ ಟಾರ್ಚ್ ಗಳು,....ಹಾಸ್ಟೆಲ್ ವಿಧ್ಯಾರ್ಥಿಗಳಿಗಾಗಿ ಮಧ್ಯ ರಾತ್ರಿ ೧೨.೦೦ ಇಂದ ೨.೦೦ ರವರೆಗೆ ಕಾಯುತ್ತಿದ್ದ ಅಂಗಡಿಯ ಭಟ್ಟರು.....,ಅಂಗಡಿ ಇಂದ ತರುತ್ತಿದ್ದ ಕೋವಾ,ಚಕ್ಲಿ,ಕಡ್ಲೆ ಬೀಜ,ಸೋ೦ಟೆ ಗಳು,....ಪ್ರತಿ ಗುರುವಾರ ಸಂಜೆ ಭಜನೆ,ಭಜನೆ ನಂತರ ಬೆಲ್ಲದ ಅವಲಕ್ಕಿ...ರವಿವಾರ ಸಿಹಿ ಊಟ,....ನಮಗೆ ನಿಗದಿ ಆದ ರವಿವಾರ ಮನೆಯಿಂದ ಫೋನ್ ಬರುವುದೇನೋ ಎಂದು ಕಾಯುವ ರೀತಿ.... ಮನೆ ಇನ್ದೆನಾದರು ಅಪ್ಪ ಅಥವಾ ಅಮ್ಮ ಬರಬಹುದೇನೂ ಎಂದು ಪರಿತಪಿಸುವುದು.....(ನಾನು ಯಾವ ಭಾನುವಾರವೂ ಅಪ್ಪ ಅಮ್ಮನಿಗಾಗಿ ಕಾದಿಲ್ಲ ..ನನಗೆ ಗೊತ್ತು ನಮ್ಮ ಮನೆ ಇಂದ ಬರಲ್ಲ ಅಂತ.. ೨ ವರ್ಷದಲ್ಲಿ ನಮ್ಮ ಹಾಸ್ಟೆಲ್ ಡೇ ಗೆ ಇಬ್ಬರೂ ಬಂದಿದ್ದರು...ಅದೂ ಬಿಟ್ಟರೆ admission ಮತ್ತು ವರ್ಷದ ಮೊದಲ ದಿನ ಬಿಟ್ಟು ಹೋಗಲು,ಅದೂ ಲಗೇಜು ಇರುತ್ತೆ ಅಂತ,ನಮ್ಮ ಅಪ್ಪ ಬಂದಿದ್ದರು ಅಷ್ಟೇ)....ಮಳೆಯಲ್ಲೂ ಮಿಂದು ಆಡುತಿದ್ದ ಆ ಮಜಾ,..ಕಾಲೇಜು ಡೇ ಗಿಂತ ಅದ್ದೂರಿಯಾಗಿ ಮಾಡುತ್ತಿದ್ದ ಹಾಸ್ಟೆಲ್ ಡೇ,..ಹಾಸ್ಟೆಲ್ ಡೇ ದಿನದ ಭರ್ಜರಿ ಊಟ....ಹಾಸ್ಟೆಲ್ ಡೇ ಗೆ ಮಾಡುತ್ತಿದ್ದ ತಿಂಗಳು ಗಟ್ಟಲೆ preparation ಗಳು...ಹಾಸ್ಟೆಲ್ ಡೇ,ಕಾಲೇಜು ಡೇ,ಎದುರಿಗಿನ ಸ್ಕೂಲ್ ಡೇ,ಮೂರು ಕಾರ್ಯಕ್ರಮಗಳಲ್ಲಿ ಒಂದೇ ಭಾಷಣ ಮಾಡುತ್ತಿದ್ದ ಒಬ್ಬ ಅಸ್ಸಾಮಿ..."ನಾನು ಅಮೇರಿಕಾಕ್ಕೆ ಹೋಗಿದ್ದಾಗ......" ಈ ಕಥೆಯನ್ನು ಹೇಳಲು ಮರೆಯುತ್ತಿರಲಿಲ್ಲ....ಒಟ್ಟು ೬ ಬಾರಿ ಇದೆ ಕಥೆಯನ್ನು ಕೇಳಿದ್ದೇವೆ....ಕಾರ್ಯಕ್ರಮಕ್ಕೆ ನಮ್ಮ physica lecturer ನ music....ಪೇಜಾವರ ಮತ್ತು ಸುಭ್ರಮಣ್ಯ ಶ್ರೀಗಳ ಆಶೀರ್ವಚನ... ....ಎಂದೂ ಮಾತಾಡಿಸದ ನಮ್ಮ ಕ್ಲಾಸ್ ಮೇಟ್ ಹುಡುಗಿಯರು.... ಕಾಲೇಜು ಡೇ ಗೆ ನಡೆಯುತ್ತಿದ್ದ ಆಟೋಟಗಳು.... ಕಲಾ ಮತ್ತು ನಮ್ಮ ವಿಜ್ಞಾನ ವಿಭಾಗದ ನಡುವೆ ನಡೆಯುತ್ತಿದ್ದ ಜಗಳಗಳು....ನಂತರ ಗಲಾಟೆ ಮಾಡಿಕೊಂಡ ತಪ್ಪಿಗೆ ನಮ್ಮ ಇಡಿ ವಿಭಾಗವನ್ನು ಆ ವರ್ಷ ಎಲ್ಲಾ ಸ್ಪರ್ಧೆ ಗಳಿಂದ boycott ಮಾಡಿ,ನಂತರ ಪ್ರಾಂಶುಪಾಲರ ಹತ್ತಿರ ಒಪ್ಪಿಸಿ ಮತ್ತೆ ಸ್ಪರ್ಧೆಗೆ ಇಳಿದಿದ್ದು.....ಪಕ್ಕದ ತೋಟಗಳಿಗೆ ಗೇರು ಹಣ್ಣು ತಿನ್ನಲು ಹೋಗಿ,ಮಾಲಿಕನ ಬಳಿ ಸಿಕ್ಕಿ ಹಾಕಿಕೊಂಡು ಅವರು ಬೀಸಿದ ಕಲ್ಲಿನಿಂದ ತಪ್ಪಿಸಿ ಕೊಂಡು ಓಡೋಡಿ ಬಂದಿದ್ದು.... ತುಳು ಪ್ಲಾಸ್ಟಿಕ್ ಡಬ್ಬಕ್ಕೆ ಕಲ್ಲು ಹಾಕಿ ಅಲ್ಲಾಡಿಸಿದ ಹಾಗೆ ಆಗುತ್ತಿದ್ದರೆ,ಕಾಸರಗೋಡಿನ ನಮ್ಮ ಸ್ನೇಹಿತರು ಆಡುತ್ತಿದ್ದ ಮಲಯಾಳಂ ಸ್ಟೀಲ್ ಡಬ್ಬಕ್ಕೆ ಕಲ್ಲು ಹಾಕಿ ಅಲ್ಲಾಡಿಸಿದ ಹಾಗೆ ಆಗುತ್ತಿತ್ತು.....ವಾರ ಗಟ್ಟಲೆ ನಡೆಯುತ್ತಿದ್ದ ದೇವಸ್ಥಾನದ ಜಾತ್ರೆ... ಮೊದಲ ಬಾರಿ ನಿದ್ದೆ ಗೆಟ್ಟು ನೋಡಿದ ಯಕ್ಷಗಾನ....ದಕ್ಷಿಣ ಕನ್ನಡ ವಿಶೇಷವಾದ ಹುಲಿ ವೇಷದ ಕುಣಿತ....ಜಾತ್ರೆಯ ಕೊನೆಯಲ್ಲಿ ಕೋಳಿ ಜಗಳ.... ಭಾಜಿ ಕಟ್ಟುತ್ತಿದ್ದ ಜನಗಳು....ಅರ್ಧಂಬರ್ಧ ಅರ್ಥ ಆದ ತುಳು ನಾಟಕಗಳು...ಹೆಸರು ಮರೆತು ಹೋಗಿವೆ...ಜಾತ್ರೆ ಬಂತು ಅಂದರೆ ನಮಗೆ ಸುಗ್ಗಿಯೋ ಸುಗ್ಗಿ... ಕೈಗೆ ಒಂದಿಷ್ಟು ದುಡ್ಡು ಕೊಡುತ್ತಿದ್ದರು(ತಿಂಗಳ ಬಿಲ್ಲಿನಲ್ಲಿ ಅದನ್ನು ಸೇರಿಸಿ ಮನೆಗೆ ಕಳುಹಿಸುತ್ತಿದ್ದರು).... ಜಾತ್ರೆಗೆ ಕೊಡುವ ದುಡ್ಡನ್ನು ೩೦ ರೂಪಾಯೀ ಇಂದ ೫೦ ರೂಪಯ್ಯೇ ವರೆಗೂ ಒಪ್ಪಿಸಲು ಆಫೀಸು ರೂಮಿನಲ್ಲಿ ಕಾಡಿ ಬೇಡಿದ್ದು....ಜಾತ್ರೆ ದಿನ ಆಮ್ಲೆಟ್ ಗಾಗಿ ಕಾಯುತ್ತಿದ್ದ ನಮ್ಮ ಕೆಲವು ಸ್ನೇಹಿತರು....ಅದನ್ನೇ ಚಿಕನ್ ತಿಂದಷ್ಟು ಖುಷಿಯಲ್ಲಿ ತಿನ್ನುತ್ತಿದ್ದರು...ನನ್ನಂಥ ಪುಳ್ಚಾರಿಗಳಿಗೆ ಐಸ್-ಕ್ರೀಂ ಮತ್ತು ಚುರುಮುರಿಯೇ ಗತಿ....
ಆಫೀಸು ರೂಮಿಗೆ ಮಾತ್ರ ಸೀಮಿತವಾಗಿದ್ದ TV ಯನ್ನು ಯಾವುದಾದರು ಕ್ರಿಕೆಟ್ ಮ್ಯಾಚ್ ಇದ್ದಾಗ ಕಾರಿಡಾರ್ ಗೆ ತರಿಸಿ ನೋಡುತ್ತಿದ್ದದ್ದು..ಎರಡನೇ ವರ್ಷಕ್ಕೆ ಬಂದಾಗ ಒಂದು ಹೊಸ TV ಅನ್ನು ನಮ್ಮ ಮೆಸ್ಸ್ ಗೆ ಇಟ್ಟು,ಅದೂ ಕೇವಲ ರಾತ್ರಿ ೮.೩೦ ರ DD 1 ರ ಇಂಗ್ಲೀಶ್ ಮತ್ತು ಹಿಂದಿ ನ್ಯೂಸ್ ನೋಡಲು ಅವಕಾಶ..ಬರುತ್ತಿದ್ದದ್ದು ಅದು ಒಂದೇ ಚಾನೆಲ್...ಮತ್ತೆ ಕ್ರಿಕೆಟ್ ಮ್ಯಾಚ್ ಇದ್ದಾಗ...
ಟ್ಯಾಂಕ್ ಹಿಂದೆ ಅಥವಾ ಯಾವುದೋ ಮರದ ಹಿಂದೆ ಕತ್ತಲಿನಲ್ಲಿ ನಿಂತು ಸ್ಟಡಿ ರೂಮಿನಲ್ಲಿ ನಿದ್ದೆ ಮಾಡುವವರನ್ನು ಹಿಡಿಯುತ್ತಿದ್ದ ನಮ್ಮ ಮ್ಯಾನೇಜರ್....ಸ್ಟಡಿ ಹವರ್ ನಲ್ಲಿ ಸ್ಟಡಿ ರೂಮಿನಲ್ಲಿ ನಿದ್ದೆ ಮಾಡಿ ಸಿಕ್ಕಿ ಬಿದ್ದ ಮೇಲೆ ಐದು ಐದು ಬಾರಿ,ಕೆಲವೊಮ್ಮೆ ಹತ್ತು ಹತ್ತು ಬಾರಿ ಬರೆಯುತ್ತಿದ್ದ Imposition ಗಳು...Imposition ಗೆ ಸಿಗುತ್ತಿದ್ದದ್ದು Physics ನ derivation ಗಳು,chemistry ಯ ಯಾವುದಾದರೂ acid preparation ಗಳು...Biology ಯ ಚಿತ್ರಗಳು...Maths ನ ಲೆಕ್ಕಗಳು...ಕೆಲವೊಮ್ಮೆ ನಮ್ಮ ಗ್ರೌಂಡ್ ನಲ್ಲಿ ೫ ಅಥವಾ ೧೦ ಸುತ್ತು ಓಡುವುದು....ರಾತ್ರಿ ಹತ್ತರ ನಂತರ ಓದುತ್ತಿದ್ದ(ನಮಗೆ ೯.೩೦ ಕ್ಕೆ ನಿದ್ರಾ ದೇವಿ ಒಲಿದು ಬಿಡುತ್ತಿದ್ದಳು..ಅದಕ್ಕಾಗಿ ಎಷ್ಟೋ ದಿನ imposition ಬರೆದಿದ್ದೇನೆ)ನಮ್ಮ ಕುಳ್ಳ ಶಾಸ್ತ್ರಿ.... ತನ್ನ ರಕ್ತ ಹೀರಿದ ಸೊಳ್ಳೆಗಳನ್ನು ಸಾಯಿಸಿ ಅವನ್ನೆಲ್ಲ ಒಂದು ಪೇಪರ್ ಗೆ ಅಂಟಿಸಿ ಹಿಡುತ್ತಿದ್ದ....ಅಲ್ಲದೆ ಮಧ್ಯ ರಾತ್ರಿಯಲ್ಲಿ ಕಾಲೇಜಿಗೆ ಹೋಗಿ ನಾವು ಬೆಳಗ್ಗೆ ಅದನ್ನು ಪರೆಶೀಲಿಸಲು ಏನಾದರು ಗುರುತು ಇಟ್ಟು ಬರುತ್ತಿದ್ದ ಪುಂಡ....ಕೆಲವೊಮ್ಮೆ ಬೇಗ ನಿದ್ರೆ ಬಂದರೆ ಸುಮ್ಮನೆ ತಲೆ ನೋವು,ಜ್ವರ ಅಂತ ಸುಳ್ಳು ಹೇಳಿ ಮಾತ್ರೆ ತೆಗೆದು ಕೊಂಡು,ಅದನ್ನು ಹೊರಗಡೆ ಬಂದ ಕೂಡಲೇ ಬಿಸಾಡಿ ಮಲಗುತ್ತಿದ್ದ ಉಪಾಯಗಳು....ಸಣ್ಣ ಪುಟ್ಟ ಜಗಳಗಳು..ಮತ್ತೆ ಹೊಂದಾಣಿಕೆ....ಎಲ್ಲರಿಗೂ ಒಂದೊಂದು ಅಡ್ಡ ಹೆಸರುಗಳು....
ಒಮ್ಮೆ ನಾವು ನಾಲ್ಕೈದು ಜನ ದೇವಸ್ಥಾನಕ್ಕೆ ಹೋಗಿ(with permission) ಅಲ್ಲಿಂದ ಹಾಗೆ ಯಾವುದೋ ದಾರಿ ಹಿಡಿದು ಗುಡ್ಡ ಎಲ್ಲಾ ಹಟ್ಟಿ,ಕೊನೆಗೆ ಬಂದ ದಾರಿ ಗೊತ್ತಾಗದೆ ಎಲ್ಲೆಲ್ಲೋ ಸುತ್ತಿ,ಕೊನೆಗೆ ಯಾರನ್ನೋ ಕೇಳಿಕೊಂಡು ಹಾಸ್ಟೆಲ್ ಸೇರಿದ್ದಾಯಿತು....ವಿಷಯ ಅಂದರೆ ನಾವು ಹೋಗಿದ್ದು ವಾರ್ಡನ್ ಗೆ ಗೊತ್ತಾಗಲಿಲ್ಲ..ಇಲ್ಲ ಅಂದಿದ್ರೆ ಅದೇ ಲೆಟರ್...ಮೊಬೈಲ್ ಇಟ್ಟುಕೊಳ್ಳಲು ಅವಕಾಶ ಇಲ್ಲದ ಪರಿಸ್ಥಿತಿಯಲ್ಲಿ ಮೊಬೈಲ್ ಇಟ್ಟಿಕೊಂಡು ಕರ್ತವ್ಯ ಲೋಪ ಹೆಸಗಿದ ಹಾಸ್ಟೆಲ್ ಲೀಡರ್ ನನ್ನು ಆ ಸ್ಥಾನದಿಂದ ಕೆಳಗಿಲಿಸಿದ್ದು(ಬೇಲಿಯೇ ಎದ್ದು ಹೊಲ ಮಯ್ದರೆ ಸರಿ ಇರಲ್ಲ ಅಲ್ವ ಅದಕ್ಕಾಗಿ)....
ವಾರಕ್ಕೆ ಒಂದು ರೂಮಿನವರು ಊಟ ಬಡಿಸುವ ವಿಧಾನ... ಒಮ್ಮೆ ಊಟ ಬಡಿಸುವಾಗ ಲುಂಗಿ ಉಡಲು ಬರದ ನಮ್ಮ ಪ್ರಜ್ವಲ್ ನ ಲುಂಗಿ ನಮ್ಮ ಮೆಸ್ ನಲ್ಲಿ ಜಾರಿ ಕೆಳಗೆ ಬಿದ್ದಿದ್ದು...ನಾನ್-ವೆಜ್ ತಿನ್ನುವ ಸಲುವಾಗಿ ಸ್ವಲ್ಪ ದೊಡ್ಡ ಕಾಯಿಲೆಗಳನ್ನು ಬರೆಸಿಕೊಲ್ಲುತ್ತಿದ್ದ ಇವನು ಪುತ್ತೂರು ಅಥವಾ ಉಪ್ಪಿನಂಗಡಿಗೆ ಹೋಗುತ್ತಿದ್ದ...ಸಣ್ಣ ಪುಟ್ಟ ಕಾಯಿಲೆ ಅಂದರೆ ಅಲ್ಲೇ ೨ ಕಿಮಿ ದೂರದ ಅತೂರಿಗೆ ಕಳುಹಿಸುತ್ತಿದ್ದರು ಅದಕ್ಕಾಗಿ....ಮನೆ ಇಂದ ಬಂದ ಕೂಡಲೇ ಅಲ್ಪ ಸ್ವಲ್ಪ ಚಿಲ್ಲರೆ ಕೊಟ್ಟು,ಬರುವಾಗ ಉಳಿದಿದ್ದು ಇಷ್ಟು,ನಮ್ಮ Personnal account ನಲ್ಲಿ ಇಡಿ ಅಂತ ಹೇಳಿ ನಮ್ಮ ಸಾಚಾತನವನ್ನು ತೋರಿಸುತ್ತಿದ್ದೆವು..ಆದ್ರೆ ಅಲ್ಲಿ ಇಲ್ಲಿ ಒಂದಿಷ್ಟು ದುಡ್ಡು ಇಟ್ಟಿಕೊಂಡು ಇರುತ್ತಿದ್ದೆವು...ಭಟ್ಟರ ಅಂಗಡಿಗೆ ಹೋಗಲು ಬೇಕಲ್ಲ...ಆ ದುಡ್ಡನ್ನು ದಿಂಬಿನ ಹೊಳಗೆ, ನಮ್ಮ Rack ಗಳ ಮೇಲೆ ಯಾವುದಾದರು ವೇಸ್ಟ್ ಡಬ್ಬದ ಹೊಳಗೆ ಅಥವಾ ಇನ್ನೆಲ್ಲೋ ಬಚ್ಚಿಡುತಿದ್ದೆವು...ಯಾವಾಗ IT ರೈಡ್ ಯಾಗುವುದು ಅಂತ ಹೇಳಕ್ಕೆ ಆಗುತಿರಲಿಲ್ಲ...
ಟ್ಯಾಂಕ್ ಕ್ಲೀನ್ ಮಾಡುವ ನೆಪದಲ್ಲಿ ಈಜು ಆಡುತ್ತಿದ್ದು....ಯಾರದೋ ಹಾಸಿಗೆ ಇಂದ ಅತ್ತಿದ ತಿಗಣೆ ಕಾಟ ತಾಳಲಾರದೆ ಎಲ್ಲಾ ಮಂಚಗಳನ್ನು ತೊಳೆದು ಅದಕ್ಕೆ DDT ಹಾಕಿ ತೊಳೆದು,ಕೊನೆಗೆ ಹಾಸಿಗೆಗಳನ್ನೇ ಬಿಸಾಡಿದ್ದು....ನಮ್ಮ Physics sir ನ ಟಾ೦ಟು ಗಳು, ಅವರ ಮದುವೆ ನಿಶ್ಚಯ ಆದಾಗ,ಪ್ರವೃತ್ತಿಯಲ್ಲಿ ಕೀ ಬೋರ್ಡ್ ವಾದಕರಾದ ಅವರಿಗೆ ನಿಮ್ಮ ಮಗು ಹುಟ್ಟುವಾಗಲೇ "ಸ ರೀ ಗ ಮ ಪ " ಅಂತ ಹೇಳುತ್ತದೆ ಅಂತ ಹೇಳಿ ತಿರುಗು ಬಾಣ ಬಿಟ್ಟಿದ್ದು...biology ಯ Human reproduction ಪಾಠ ನಡೆಯುವಾಗ ಕಿಸಕ್ಕನೆ ನಕ್ಕ ಒಬ್ಬ ಕ್ಲಾಸ್ ಮೇಟ್ ನನ್ನು ಬೈದು ಹೊರಗೆ ಕಳುಹಿಸಿದ್ದು...ಮುಖ್ಯವಾಗಿ ಹಾಸ್ಟೆಲ್ ವಿಧ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿ ತೋರಿಸಿದ,ನಮ್ಮನ್ನು ಅಷ್ಟೇ ಮಮತೆ ಇಂದ ನೋಡಿದ ಮತ್ತು ನಮ್ಮ ಆಟಗಳನ್ನು ಸಹಿಸಿಕೊಂಡು ಒಂದೂ ದಿನ ಬೇಜಾರು ಮಾಡಿಕೊಳ್ಳದ ನಮ್ಮ ಕ್ಲಾಸ್ ಟೀಚರ್ ಆದ ನಮ್ಮ maths ಮೇಡಂ...ಸ್ವಲ್ಪ ಸ್ಟ್ರಿಕ್ಟ್ ಇಂದ ನೋಡಿಕೊಂಡು ನಮ್ಮನ್ನು ಸ್ವಲ್ಪ ಹತೋಟಿಯಲ್ಲಿ ಇಟ್ಟಿಕೊಂಡಿದ್ದ ನಮ್ಮ chemistry ಸರ್ ಮತ್ತು ಅವರೇ ನಮ್ಮ ವಾರ್ಡನ್ ಕೂಡ....ಎರಡನೆ ವರ್ಷೆ ಅವರು ಬಿಟ್ಟು ಹೋಗಿ ಬೇರೆ ಉಪನ್ಯಾಸಕರೆ ಇಲ್ಲದೆ ಇದ್ದಾಗ ಬೇರೆ ಕಾಲೇಜಿನ ಒಬ್ಬರು ನಮಗೆ ಬಂದು ಪಾಠ ಮಾಡುತ್ತಿದ್ದರು...ಜಪಾನ್ ನ ರೈತ Fukuoka ಬಗ್ಗೆ ಇದ್ದ ಪಾಟವನ್ನು ಬಹಳ ಮೆಚ್ಹುಗೆ ಇಂದ ಮಾಡುತ್ತಿದ್ದ ನಮ್ಮ ಇಂಗ್ಲಿಷ್ ಉಪನ್ಯಾಸಕರಿಗೆ ನಮ್ಮ ಸೀನಿಯರ್ಸ್ ಅದೇ ಅಡ್ಡ ಹೆಸರು ಇಟ್ಟಿದ್ದರು....

ಸ್ವತಂತ್ರ ದಿನ ಸಲುವಾಗಿ ನಡೆಯುವ 'ಸೃಜನ' ಕಾರ್ಯಕ್ರಮದಲ್ಲಿ ಇವರು ಹಾಡಿದ್ದ 'ಉತ್ತರ ಧ್ರುವಧಿಂ ದಕ್ಷಿಣ ಧ್ರುವಕೂ....' ಹಾಡು.... ಬಹಳ ಸುಲಲಿತವಾಗಿ ವಿವರಿಸುತ್ತಿದ್ದ ಕನ್ನಡ ಉಪನ್ಯಾಸಕರು...ಇವರು ಭೋದಿಸಿದ ಯಯಾತಿ ನಾಟಕ....ಉತ್ತಮ ವಾಗ್ಮಿಗಳು ಕೂಡ...ಇವರುಗಳ ಒಡನಾಟ ಪಡೆದದಕ್ಕೆ ಧನ್ಯೋಸ್ಮಿ !!!
ಎಲ್ಲಾ ವಿಷಯಗಳನ್ನು ಚಾಡಿ ಹೇಳಿ ಎಷ್ಟೋ apology ಲೆಟರ್ ಮತ್ತು ಸಹಿ ಗಳಿಗೆ ಕಾರಣನಾದ ಒಬ್ಬನಿಗೆ ಕರೆಂಟ್ ಹೋದಾಗ ,ಮೊದಲೇ ಜನರೇಟರ್ ಅನ್ನು ಸ್ವಲ್ಪ ಲೇಟ್ ಆಗಿ ಸ್ಟಾರ್ಟ್ ಮಾಡಲು ತೀರ್ಮಾನಿಸಿ ,ಬೆಡ್ ಶೀಟ್ ಮುಚ್ಚಿ ಧರ್ಮದೇಟು ಕೊಟ್ಟು ಕೊನೆಗೆ ತಮಾಷೆಗೆ ಎಂದಿದ್ದು...ಆದರೂ ಬುದ್ಧಿ ಬರಲಿಲ್ಲ ಅವನಿಗೆ....
ಹಾಸ್ಟೆಲ್ ಡೇ ಕೆಲವು ಸ್ಪರ್ಧೆಗಳು..ಅದರಲ್ಲಿ ಬೆಳಗ್ಗೆ ಬೆಳಗ್ಗೆ ನೀರು ಕುಡಿಯುವ ಸ್ಪರ್ಧೆ ಕೂಡ ಒಂದು....ನೀರು ಕುಡಿದು ಒಂದು ನಿಮಿಷ ವಾಂತಿ ಮಾಡುವ ಹಾಗಿಲ್ಲ...
ಒಬ್ಬನ ವಾಚ್ ಕದ್ದು ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಅದನ್ನು ಟಾಯ್ಲೆಟ್ ಗೆ ಬಿಸಾಕಿ ಕೊನೆಗೂ ಸಿಕ್ಕಿ ಬಿದ್ದ ಅವನ ಮನೆ ಇಂದ ಕರೆಸಿ ಬುದ್ಧಿ ಹೇಳಿದ ವಾರ್ಡನ್....
ಕೆಲವು ಸಿಟಿ ಹುಡುಗರಿಗೆ ಇತ್ತ ಲುಂಗಿ ಉಡಲು ಬರಲ್ಲ,ಪ್ಯಾಂಟ್ ಹಾಕಬೇಕಂದ್ರೆ ಒಂದು ಥರಾ ಹಿಂಸೆ,ಜೊತೆಗೆ ಬರ್ಮುಡಾ ಹಾಕಿಕೊಳ್ಳುವ ಹಾಗಿಲ್ಲದ ನಮ್ಮ ರೂಲ್ಸ್ ,ಅಂತ ನಮ್ಮ ಸ್ನೇಹಿತರು ಒಳಗೆ ಬರ್ಮುಡಾ ಚಡ್ಡಿ ಹಾಕಿಕೊಂಡು,ಹೇಗ್ ಬೇಕೋ ಹಾಕಿ ಪಂಚೆ ಸುತ್ತಿಕೊಂಡು ನಡೆಯುವಾಗ ಕೆಳಗೆ ಬಿಳುತ್ತಿದ್ದರು....
ಧನುರ್ ಮಾಸದಲ್ಲಿ ಬೆಳಗ್ಗೆ ಆ ಕೊರೆಯುವ ಚಳಿಯಲ್ಲಿ ತಣ್ಣೀರು ಸ್ನಾನ ಮಾಡಿ ದೇವಸ್ಥಾನದ ಮಹಾ ಮಂಗಳಾರತಿಗೆ ಹೋಗುತ್ತಿದ್ದ ನಮ್ಮ ಭಕ್ತಿ....
ಪ್ರದೀಪ ಎಂದು ಕೂಗಿದ ಹೆಸರನ್ನು ಪ್ರತಿಭಾ ಎಂದು ತಪ್ಪು ತಿಳಿದು ,ಆ ಹುಡುಗಿ ಕಂಪ್ಲೇಂಟ್ ಕೊಟ್ಟು,"ನೀವು ಇಲ್ಲಿ ಅಷ್ಟೂ ದೂರದಿಂದ ಓದಕ್ಕೆ ಬಂದಿದ್ದಿರ,ಒಳ್ಳೆ ಮಾರ್ಕ್ಸ್ ಮತ್ತು ಹೆಸರು ತಗೊಂಡ್ ಹೋಗಿ,ಅದೂ ಬಿಟ್ಟು ಲವ್ ಅಂತ ಸುತ್ತಾಡಿದರೆ ಹೇಳಿ,ಮದುವೆ ಕೂಡ ಇಲ್ಲೇ ಮಾಡಿ ಕಳುಹಿಸುತ್ತೇವೆ"ಅಂತ ಮೀಟಿಂಗ್ ನಲ್ಲಿ ಹೇಳಿದ್ದು....
ಯಾರೋ ಪುಣ್ಯಾತ್ಮ ಕೊಡದು ಕೊಟ್ಟ,೪ ಅಥವಾ ೫ kg ಕೊಡ್ತಾರೆ,ಅದೂ ಬಿಟ್ಟು ಬರೋಬ್ಬರಿ ೨ ಚೀಲ ತೊಂಡೆ ಕಾಯಿ ಕೊಟ್ಟಿದ್ದ,೪ ದಿನ ಮಧ್ಯಾನ ಸಾರು,ರಾತ್ರಿ ಸಾರು,ಪಲ್ಯ ಎಲ್ಲಾ ತೊಂಡೆ ಕಾಯಿಂದೆ....ಕೊನೆಗೆ ಬೇಸತ್ತು ಅವರೇ ಅದನ್ನು ಮಾಡುವುದನ್ನು ಕಡಿಮೆ ಮಾಡಿಬಿಟ್ಟರು...
ಇಂಥ ಹಾಸ್ಟೆಲ್ನಲ್ಲಿ ೨ ವರ್ಷ ಮನೆ ಇಂದ,ಮನೆಯವರಿಂದ ದೂರ ಇದ್ದ ನಾವುಗಳು ಇಂಥ ಹತ್ತು ಹಲವಾರು ನೆನಪುಗಳನ್ನು ಹೊತ್ತು ಕಳೆದ ವಾರ ಭೇಟಿ ಮಾಡಿ ಮತ್ತೆ ಈ ನೆನಪುಗಳನ್ನು ಮೆಲುಕು ಹಾಕುತ್ತಾ,ಅಲ್ಲಿ ಇಲ್ಲಿ ಸುತ್ತಾಡಿ,ಆ ದಿನಗಳ ಹಾಗೆ ರಾಜಕೀಯ,ಕ್ರೀಡೆ,ಸಿನೆಮಾ ಹೀಗೆ ಹಲವಾರು ವಿಷಯಗಳ ಚರ್ಚೆ,ಜೊತೆಗೆ ಕಾಲೇಜು ಬಿಟ್ಟ ಮೇಲೆ ನಮ್ಮ ಜೀವನ ಸಾಗಿದ ಪಥ,ಕೆಲವರು ಬೇರೆ ದೇಶಕ್ಕೆ ಹೋಗಿ ಬಂದ ಅನುಭವಗಳು,ಕೆಲವರು ನಂತರ ಕಾಲೇಜು ಬಿಟ್ಟು ಬಿಸಿನೆಸ್ ಶುರು ಮಾಡಿದ್ದು,ಕೆಲವರು ನಂತರ ಕಾಲೇಜಿನಲ್ಲಿ ಆದ ಅವರ ವಿಫಲ ಪ್ರೇಮ ಕಥೆಗಳು,ಹುಡುಗಿ ಕೈ ಕೊಟ್ಟು ಹೋದ ಮೇಲೆ ಸ್ವಲ್ಪ ದಿನ ಹದ ಗೆಟ್ಟಿದ್ದ ಜೀವನ,ಕೆಲಸ ಸಿಗದೆ ಅಲೆದ ದಿನಗಳು,ಹೀಗೆ ಎಷ್ಟೋ ವಿಷಯಗಳನ್ನು ಮಾತಾಡಿ ಹಳೆ ನೆನಪುಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಕೊನೆಗೆ ಭರ್ಜರಿ ಪಾರ್ಟಿ ಮಾಡಿ,ಮಧ್ಯ ರಾತ್ರಿ ೪.೦೦ ಘಂಟೆ ವರೆಗೆ ಮೈಸೂರು ರಸ್ತೆಯಲ್ಲಿ ಬೈಕ್ ಗಳಲ್ಲಿ ಸುತ್ತಾಡಿ ಒಟ್ಟಾರೆ ಮಸ್ತ್ ಎಂಜಾಯ್ ಮಾಡಿದ್ವಿ....
ಇಷ್ಟೆಲ್ಲಾ ನೆನಪುಗಳು ಮರುಕಳಿಸುವುದಕ್ಕೆ ಕಾರಣವಾಗಿದ್ದು ಮಂಗಳೂರು,ಮುಂಬಯಿ,ಮಂಡ್ಯ,ಚಿಕ್ಕಬಳ್ಳಾಪುರ,ಚೆನ್ನೈ ಇಂದ ಬಂದಿದ್ದ ನಮ್ಮ ಸ್ನೇಹಿತರು,ಕೆಲವರು ಕಾರಣಾಂತರಗಳಿಂದ ಬರಲಿಲ್ಲ...ಈ ಒಂದು ದಿನವನ್ನು ಮಿಸ್ ಮಾಡಿಕೊಂಡರು..ಇದಕ್ಕೂ ಮುಂಚೆ ಎಷ್ಟೋ ಬಾರಿ ಭೇಟಿ ಆಗಿದ್ದೇವೆ ಆದರೂ,ಇಷ್ಟೊಂದು ಜನ ಒಟ್ಟಿಗೆ ಸೇರಿದ್ದು ಬಹುಶಃ ಕಾಲೇಜು ಬಿಟ್ಟ ಮೇಲೆ ಇದೆ ಮೊದಲು....

ರಾಮಕುಂಜದಲ್ಲಿ ಕಳೆದೆ ದಿನಗಳ ನೆನಪುಗಳು ಅಚ್ಚಳಿಯದ ಹಾಗೆ ಇನ್ನು ಹಚ್ಹ ಹಸುರಾಗಿದೆ....ಇದು ನನ್ನ ಜೀವನದಲ್ಲಿ ಬಹಳ ದೊಡ್ಡ ತಿರುವು ಕೊಟ್ಟ ಸ್ಥಳ... ಜೀವನದ ಎಷ್ಟೋ ಬಹು ಮುಖ್ಯ ಪಾಠಗಳನ್ನು ಹೇಳಿಕೊಟ್ಟಿದೆ....ಸಾಮಾಜಿಕವಾಗಿ ಬಹಳ ವಿಷಯಗಳನ್ನು ತಿಳಿಸಿದೆ.... ಎಂದೂ ಮರೆಯಲಾಗದ ದಿನಗಳು ಅವು....
ನಮ್ಮ ಹಾಸ್ಟೆಲ್ ಮತ್ತು ಸುತ್ತಮುತ್ತಲ ಪ್ರದೇಶಗಳ ಒಂದು ಕಿರು ನೋಟ ..... ಈ ಲಿಂಕ್ ನಲ್ಲಿದೆ....

14 comments:

 1. ನಮ್ಮೂರ ನೆನಪಾಯಿತು...

  ReplyDelete
 2. chennagide lekhana.. oLLe nenapugaLu

  ReplyDelete
 3. ನೆನಪುಗಳ ಮಾತು ಮಧುರ..
  ನಿಜವಾಗಿಯೂ ಹುಡುಗಿಯಾಗಿದ್ದರೆ ಏನು ಗತಿ? ಪಿ ಯು ಸಿ ಯಲ್ಲಿ ಮದುವೆ.. ಊಹಿಸಲೂ ಭಯವಾಗುತ್ತದೆ! ಆದರೆ ಹೆದರಿಸಲು ಒಳ್ಳೆ ತಂತ್ರ ನೋಡಿ..

  ReplyDelete
 4. ಖುಷಿ ಕೊಟ್ಟಿತು ಲೇಖನ... ನಿಮ್ಮ ನೆನಪುಗಳು ಲೇಖನವಾದ್ದು :) :)

  ReplyDelete
 5. ಉಫ್...ಓದಿ ಸುಸ್ತಾದೆ.. ಒಳ್ಳೇ ಲೇಖನ .
  ಸವಿ ಸವಿ ನೆನಪು .ಸಾವಿರ ನೆನಪು

  ReplyDelete
 6. ಲೇಖನ ಖುಷಿ ಕೊಟ್ಟಿತು, ಇಂದು ನನಗೆ ನನ್ನ ನವೋದಯದ ನೆನಪುಗಳು ಮರುಕಳಿಸಿದ ದಿನ!!!

  ReplyDelete
 7. ಗಿರೀಶ್ ಇಷ್ಟವಾಯ್ತು ಲೇಖನ....ನಮ್ಮ ಕಾಲೇಜ್ ದಿನಗಳು ಘಟನೆಗಳಿಂದ ತುಂಬಿರುತ್ತವೆ ಅವನ್ನ ಹೆಕ್ಕಿ ತೆಗೆಯೋದು ಅವನ್ನ ಪದಗಳಲ್ಲಿ ಚೌಕಟ್ಟು ಹಾಕೋದು..ಸೂಪರ್...

  ReplyDelete
 8. [Nanda Kishore]ನಿಮ್ಮ ಊರನ್ನು ಮರೆಯಕ್ಕೆ ಸಾಧ್ಯ ಇಲ್ಲ ಮಾರಾಯ ನನಗೆ..... ನನ್ನ ಜೀವನದ ಅತಿ ದೊಡ್ಡ ತಿರುವು ಕೊಟ್ಟ ಉರು ಅದು...

  [Ishwar Bhat]ಲೇಖನ ಇಷ್ಟ ಪಟ್ಟಿದಕ್ಕೆ ಧನ್ಯವಾದಗಳು....

  ReplyDelete
 9. [Suguna Madam]ಬಹಳ ದಿನಗಳ ನಂತರ ನನ್ನ ಬ್ಲಾಗಿಗೆ ಬಂದಿದ್ದೀರ...ನಮ್ಮ ನೆನಪುಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...

  [Sahana]ಅಯ್ಯೋ ಒಳ್ಳೆ ಕಥೆ..ನಮ್ಮ ಹುಡುಗರು ಕೆಲವರು ಆಗಲೇ ಮದುವೆ ಆಗಕ್ಕೆ ರೆಡಿ ಇದ್ದರು....ಕಡೆಗೆ ಒಬ್ಬನಿಗೆ ಅಲ್ಲಿಯ ಹುಡುಗಿಯ ಜೊತೆಗೆ ನಿಶ್ಚಯ ಕೂಡ ಆಗಿದೆ.... ನೆನಪುಗಳ ಮಾತು ಕೇವಲ ಮಧುರ ಅಲ್ಲ..ಸುಮಧುರ...

  ReplyDelete
 10. [Chinamy Bhat]ಇಷ್ಟಕ್ಕೆ ಸುಸ್ತಾದರೆ ಹೇಗೆ...ಸಾವಿರ ಕಾಲಕ್ಕೋ ಸವೆಯದ ನೆನಪುಗಳು ಇನ್ನು ಎಷ್ಟೋ ಇವೆ...

  [Thanuj Kumar]Welcome to my blog buddy...Thanks for your reply...

  ReplyDelete
 11. [Kalavathi Madam]ನಮ್ಮ ನೆನಪುಗಳ ಲೇಖನ ಇಷ್ಟ ಪಟ್ಟ ನಿಮಗೆ ಧನ್ಯವಾದಗಳು ಮೇಡಂ ...

  [Azad Sir]ತುಂಬ ತುಂಬ ಧನ್ಯವಾದಗಳು ಸರ್ .... ಆ ಮರೆಯಲಾಗದ ಘಟನೆಗಳಿಂದ ಕೂಡಿದ ಲೇಖನ ಮೆಚ್ಚಿದ್ದಕ್ಕೆ...

  ReplyDelete
 12. ವಾಹ್ .....!!!
  ಮಸ್ತ್ ಮಸ್ತ್ ನೆನಪುಗಳು ..........:):)

  ReplyDelete
 13. [Kavya]ಇಂಥ ಇನ್ನು ನೂರಾರು ನೆನಪುಗಳು ಇವೆ..Thanks for your comment..

  ReplyDelete