Tuesday, April 23, 2013

ಸೂತಕದ ಛಾಯೆ !!!

ತಾಯಿ ಭ್ರೂಣದಿಂದ
ಹೊರಬಂದ ಹಸುಗೂಸು
ಪಾಪ,
ಏನೂ ತಿಳಿದಿರದು, ದೇವರಂತ ಮನಸು
ಹೊಸ ಜಗತ್ತಿನೊಳ್ ಬಿಟ್ಟಿತು ಕಣ್ಣ
ಅದಕ್ಕೂ ಅಂಟಿಸಿದರು ಸೂತಕದ ಹೂರಣ.
ಓ ಮೂಢ,ಜನನ ಸೂತಕ ಅಲ್ಲ
ಅದು ಹೊಸ ಜೀವದ ಮೊದಲ ಉಸಿರು

ಮುಟ್ಟು ಕಂಡವಳನ್ನು ಹೊರಗಿರಿಸಿದಿರಿ,
ದೇವರ ಕೋಣೆಗೂ ಕಾಲಿರಿಸದಂತೆ
ಸ್ತೋತ್ರವ ಪಠಿಸದಂತೆ..
ಕಾಣುವಿರಿ ಪಶುವಿನಂತೆ..
ಮುಟ್ಟು ನಿಲ್ಲದ ಹೊರತು
ಹುಟ್ಟದು ಇನ್ನೊಂದು ಜೀವ.
ಓ ಮೂಢ,ರಜ ಸೂತಕ ಅಲ್ಲ
ಅದೊಂದು ಜೈವಿಕ ಕ್ರಿಯೆ

ಹೆಣದ ಮೇಲಿನ ಒಡವೆಯ ಧರಿಸುವಿರಿ,
ಹೆಣಕ್ಕೂ ನೀರೆರೆಯುವಿರಿ,
ಪೂಜೆಯ ಗೈಯ್ಯುವಿರಿ, ಉಸಿರಿಲ್ಲದ ದೇಹಕ್ಕೂ....
ವಿಗ್ರಹಕ್ಕೂ ಮಿಗಿಲಾಗಿ ಅಲಂಕರಿಸುವಿರಿ...
ಆದರೂ ಮನದ ಮೂಲೆಯಲ್ಲಿ ಸೂತಕದ ಬಿಂಬ
ಓ ಮೂಢ, ಸಾವು ಸೂತಕ ಅಲ್ಲ
ಅದು ಅವನ ಅಂತ್ಯ

ಓ ಮರುಳ ಮನಸೇ,
ಜನನ ಸೂತಕವಲ್ಲ
ರಜ ಸೂತಕವಲ್ಲ
ಸಾವು ಸೂತಕವಲ್ಲ
ಇವೆಲ್ಲ ಪ್ರಕೃತಿಯ ನಿಯಮವಷ್ಟೇ ...
ಸೂತಕ ಸೂತಕ ಎನ್ನುವ ನಿನ್ನ ಮನಸೇ ಸೂತಕ ನೋಡಾ !!!

19 comments:

 1. ಅರ್ಥಪೂರ್ಣ ಕವನ ಗಿರೀಶ್... ಎಲ್ಲರೂ ಅರಿತುಕೊಳ್ಳಬೇಕು ಅಷ್ಟೆ...

  ReplyDelete
  Replies
  1. ಹೌದು ಅಕ್ಕ, ಎಲ್ಲರು ಅರಿತರೆ ಒಳ್ಳೆಯದು .. ಇತ್ತೀಚಿಗೆ ಬಹಳ ಬದಲಾವಣೆ ಆಗುತ್ತಿದೆ ಆದರೂ,ಕೆಲವು ಕಡೆ ವಿದ್ಯಾವಂತರು ಕೂಡ ಈ ಸಂಪ್ರದಾಯಗಳನ್ನು ಪಾಲಿಸುತ್ತಿರುವುದು ಸೋಜಿಗವೇ ಸರಿ...

   Delete
 2. ಎಂದಿನಂತೆ ನಿಮ್ಮ ಬರಹದಲ್ಲಿ ಸಾಮಾಜಿಕ ವ್ಯವಸ್ಥೆ,ಅದರಲ್ಲಿನ ಸಂಪ್ರದಾಯಗಳ ಬಗೆಗಿನ ವಿಚಾರಗಳು ಕಾಣಿಸ್ತಾ ಇವೆ....
  ಇಂಥಹ ಕವನಗಳನ್ನಾ ನೋಡಿದ್ರೆ ಇದರಲ್ಲಿ ವಚನಗಳ ಪ್ರಭಾವ ದಟ್ಟಗಿರುವುದು ಕಾಣ್ತಾ ಇದೆ....ಯಾವುದನ್ನೇ ಆದರೂ ವಿಮರ್ಶಾತ್ಮಕವಾಗಿ ನೋಡಿ ಒಪ್ಪಿಕೊಳ್ಳುವುದು ಈಗಿನ ಜನರೇಷನನ ರೀತಿ..ನೀವು ಅದನ್ನು ಪ್ರತಿಬಿಂಬಿಸಿದ್ದೀರಿ ಅನಿಸಿತು..
  ವೈಯಕ್ತಿಕವಾಗಿ ನನಗೆ ಈ ವಿಷಯದ ಬಗ್ಗೆ ಭಿನ್ನಾಭಿಪ್ರಾಯಗಳಿರಬಹುದು,ಆದರೆ ಕವಿ ಸಮಯದಲ್ಲಿ ಬಂದ ಸಾಲುಗಳನ್ನು ಮೆಚ್ಚಿ,ನಿಮಗೊಂದು ಧನ್ಯವಾದಗಳನ್ನು ಹೇಳಬಯಸುತ್ತೇನೆ..ಒಳ್ಳೆಯ ನಿರೂಪಣೆ...
  ಬರೆಯುತ್ತಿರಿ..
  ನಮಸ್ತೆ :)

  ReplyDelete
  Replies
  1. ಚಿನ್ಮಯ್ ,ವಚನಗಳ ಪ್ರಭಾವ ಅನ್ನುವುದಕ್ಕಿಂತ ಕೆಲವು ಸನ್ನಿವೇಶಗಳಲ್ಲಿ ಜನ ನಡೆದು ಕೊಳ್ಳುವ ರೀತಿಯಿಂದ ಬೇಸತ್ತು ಈ ಅಭಿಪ್ರಾಯ ಮೂಡಿದೆ .. ನಾವು ಬರೆದದ್ದನ್ನು ಎಲ್ಲರೂ ಒಪ್ಪಿಕೊಳ್ಳೋದು ತುಸು ಕಷ್ಟವೇ ಸರಿ .. ಆಗಾಗಿ ಕೆಲವು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಸಹಜ,ಅವು ನಾವು ಬೆಳೆದು ಬಂದ ವಾತಾವರಣ ಮತ್ತು ನಾವು ಸಮಾಜವನ್ನು ನೋಡುವ ದೃಷ್ಟಿಯ ಮೇಲೂ ಅವಲಂಭಿತವಾಗಿದೆ ... ಈ ಎಲ್ಲಾ ಆಚರಣೆಗಳ ಹಿಂದೆ ವೈಜ್ಞಾನಿಕ ಕಾರಣ ಇದ್ದರೂ ಕೂಡ ಅದನ್ನು ಆಚರಿಸುವ ರೀತಿ ತಪ್ಪು ಎನ್ನುವುದು ನನ್ನ ಭಾವನೆ .. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

   Delete
 3. ಸೂತ್ರವಿಲ್ಲದ ಪಟ
  ಸುಸೂತ್ರವಿಲ್ಲದ ಅಧಿಕಾರ
  ಸುತರಾಂ ಒಪ್ಪದ ಹಠ
  ತರುವುದು ಸೂತಕ ಎನ್ನುವ ಪರಿಕರ
  ಸುಂದರವಾದ ಪದಗಳ ಜೋಡಣೆ ಗಿರೀಶ್!
  ಪ್ರಾಪಂಚಿಕ ಪದ್ದತಿಗಳನ್ನು ಧಿಕ್ಕರಿಸುತ್ತಲೇ ಹೇಳಬೇಕಾದ ಸಂದೇಶವನ್ನು ಹೇಳುವ ಧಾಟಿ ಇಷ್ಟವಾಯಿತು

  ReplyDelete
  Replies
  1. ಶ್ರೀಕಾಂತ್ ಸರ್ ,ವಿದ್ಯಾವಂತರಾದ ನಾವು ಈ ಅನಿಷ್ಟ ಪದ್ಧತಿಗಳನ್ನು ಧಿಕ್ಕರಿಸಬೇಕಾದ ಅಗತ್ಯ ಇಂದಿನ ಪರಿಸ್ಥಿತಿಯಲ್ಲಿ ಇದೆ ಅನ್ನುವ ಮನೋಭಾವ ನನ್ನದು ... ಎಷ್ಟೋ ಜನರಿಗೆ ಈ ವಿಷಯವಾಗಿ ಆದಷ್ಟು ತಿಳಿ ಹೇಳಲು ಪ್ರಯತ್ನಿಸಿದ್ದೇನೆ .. ಇದು ಕವಿತೆಯ ಮೂಲಕ ಇನ್ನೊಂದು ಪ್ರಯತ್ನ ... ನಿಮ್ಮ ಮೆಚ್ಚುಗೆಯ ನುಡಿಗೆ ಧನ್ಯವಾದ..

   Delete
 4. ವಾಸ್ತವಕ್ಕೆ ಹತ್ತಿರವಾಗೋ ಭಾವ ...
  ನಿಮ್ಮೀ ಅಕ್ಷರ ಗಳೇ ಸಮಾಜದಲ್ಲೊಂದು ಬದಲಾವಣೆ ತರೋಕೇ ಸಾಧ್ಯ ..
  ತುಂಬಾ ಇಷ್ಟವಾಯ್ತು ...

  ReplyDelete
  Replies
  1. ಭಾಗ್ಯ,ಈ ನನ್ನ ಸಾಲುಗಳು ಸಮಾಜದಲ್ಲಿ ಕೆಲವರ ಮಟ್ಟಿಗಾದರೂ ಬದಲಾವಣೆ ತಂದರೆ ನನಗೆ ಅದು ಸಾರ್ಥಕ ಭಾವನೆಯನ್ನು ಉಂಟುಮಾಡುತ್ತದೆ ... ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು ..

   Delete
 5. ಗಿರಿಶಿಖರದಲ್ಲಿ ಮೂಡತೆಯ ಮೋಡಗಳನ್ನು ಸರಿಸುವಂತಹ ಸರಳ ಸುಂದರ ಸೂರ್ಯನಂತಹ ಕವನ..
  ನಮಗೆ ಅರ್ಥವಾಗದ್ದೆಲ್ಲಾ ಅಸತ್ಯ, ಮೂಡತೆಯೆನ್ನೋ ಅಭಿಪ್ರಾಯ ನನ್ನದಲ್ಲ.. ಆದರೂ ಕವಿಮನದ ಸಾಳುಗಳಿಗೆ ನನ್ನದೂ ಸಹಮತ. ಅಭಿನಂದನೆಗಳು :-)

  ReplyDelete
  Replies
  1. ಪ್ರಶಸ್ತಿ,ಕೆಲವು ಕ್ರಿಯೆಗಳು ನಾವು ಬದುಕಿದ ವಾತಾವರಣಕ್ಕೆ ಮತ್ತು ನಮ್ಮ ಸಾಮಾಜಿಕ ನಿಲುವಿಗೆ ತಕ್ಕಂತೆ ಮೂಢತೆ ಅನಿಸಿದ್ದು ಸತ್ಯ .. ಕೆಲವು ಬಾರಿ ಒಂದು ವಿಷಯಕ್ಕೆ ಹಲವಾರು ಅಭಿಪ್ರಾಯಗಳು ಬರುತ್ತವೆ .. ಹಾಗೆ ಇದು ಕೂಡ .. ವೈಜ್ಞಾನಿಕ ರೀತಿಯಲ್ಲಿ ನೋಡಿದಾಗ ಅವುಗಳು ಕೇವಲ ಒಂದು ಕ್ರಿಯೆ ಅನ್ನುವುದಂತು ಸತ್ಯ ಅಲ್ಲವೇ ? ನಿಮ್ಮ ಸಹಮತಕ್ಕೆ ವಂದನೆಗಳು ..

   Delete
 6. ಬಹಳ ಸುಂದರ ಕವನ ಗಿರಿಶು..
  ತುಂಬಾ ಇಷ್ಟವಾಯ್ತು...

  ReplyDelete
  Replies
  1. ಪ್ರಕಾಶಣ್ಣ ಬಹಳ ದಿನದ ನಂತರ ನನ್ನ ಬ್ಲಾಗಿನತ್ತ ಬಂದಿದ್ದೀರಿ ... ಕವಿತೆ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು .. ಬರುತ್ತಿರಿ ..

   Delete
 7. ಮನುಜನ ಮೂಢ ನಂಬಿಕೆಗಳಿಯ ಮೂಲ ಬೇರೆಲ್ಲೋ ಇದೆ ಗೆಳೆಯ. ಯಾವುದೋ ಪಟ್ಟಭದ್ರ ಹಿತಾಸಕ್ತಿಯೊಂದು ತಮ್ಮ ಬೇಳೆ ಬೇಯಿಸಿಕೊಳ್ಳಲು ಯಾವುದೋ ಓಬೀರಾಯನ ಕಾಲದಲ್ಲಿ ಹಬ್ಬಿಸಿದ ಮೂಡನಂಬಿಕೆಗಳಂತಿವೆ. ಇವೆಲ್ಲ.

  "ಹೆಣದ ಮೇಲಿನ ಒಡವೆಯ ಧರಿಸುವಿರಿ" ಎನ್ನುತ್ತಾ ಸರಿಯಾಗಿ ಜಾಡಿಸಿದ್ದೀರಿ, ಬಂಗಾರಕ್ಕೆ, ಆಸ್ತಿಗೆ, ಹಣಕ್ಕೆ ಸೂತಕವಿಲ್ಲವೇ? ಬರೀ ಅನುಕೂಲಕ್ಕೆ ತಕ್ಕಂತಾ ಪದ್ಧತಿಗಳು.

  ಒಳ್ಳೆಯ ಸಾಮಾಜಿಕ ಕಳಕಳಿಯ ಕವನ.

  ReplyDelete
  Replies
  1. ಬದರಿ ಸರ್ ,ಆ ಎಲ್ಲ ನೈಸರ್ಗಿಕ ಕ್ರಿಯೆಗಳಿಗೆ ಇಲ್ಲ ಸಲ್ಲದ ಅರ್ಥ ಕಲ್ಪಿಸಿ ಆಚರಿಸುವ ಮೂಢತೆ ನಮ್ಮ ಸಮಾಜದಲ್ಲಿ ಇನ್ನು ಮುಂದಾದರು ನಿಲ್ಲಬೇಕು .. ಜನರಲ್ಲಿ ಅವುಗಳ ಅರಿವು ಅಗತ್ಯ ಇದೆ ಅನ್ನುವುದು ನನ್ನ ಅನಿಸಿಕೆ .. .ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು .. ತಪ್ಪು ಒಪ್ಪುಗಳನ್ನು ತಿದ್ದುತ್ತಿರಿ ..

   Delete
 8. super girish... as usual...
  ಮುಟ್ಟು ಕಂಡವಳನ್ನು ಹೊರಗಿರಿಸಿದಿರಿ,
  ದೇವರ ಕೋಣೆಗೂ ಕಾಲಿರಿಸದಂತೆ
  ಸ್ತೋತ್ರವ ಪಠಿಸದಂತೆ..
  ಕಾಣುವಿರಿ ಪಶುವಿನಂತೆ..
  ಮುಟ್ಟು ನಿಲ್ಲದ ಹೊರತು
  ಹುಟ್ಟದು ಇನ್ನೊಂದು ಜೀವ.
  ಓ ಮೂಢ,ರಜ ಸೂತಕ ಅಲ್ಲ
  ಅದೊಂದು ಜೈವಿಕ ಕ್ರಿಯೆ
  tumba ishtavaaytu..:)

  ReplyDelete
  Replies
  1. ಸಂಧ್ಯಾ ತುಂಬ ತುಂಬ ಧನ್ಯಾವದಗಳು .. ನನ್ನ ಈ ಕವಿತೆಯ ಮೂಲ ವಸ್ತು ಇದ್ದದ್ದು ಮುಟ್ಟಿನ ವಿಷ್ಯ ಮಾತ್ರ .. ಆ ಆಚರಣೆಗಳು ಅನಗತ್ಯವೇ ಸರಿ ಅನ್ನುವುದು ನನ್ನ ಭಾವನೆ ..

   Delete
 9. Hey Girish,

  You exactly penned down my thoughts like the way I think. It's a very healthy thought. It's sad to know that our society looks at this in opposite way. The cruelity in name of these traditions is still there. Thumba ishtavayitu..

  ReplyDelete
  Replies
  1. Hi Tanu,
   Thanks a lot for your kind words on my poem.Atleast these traditions should end up by the educateds.

   Delete
 10. ತುಂಬಾ ಹರಿತವಾದ ಮತ್ತು ಪ್ರಭಾವಿ ಸಾಲುಗಳು...
  ನನ್ನ ಸುತ್ತ ಮುತ್ತ ಗೆಳೆಯರಿಗೆಲ್ಲಾ ತೋರಿಸಿದೆ. ವಿಶ್ಲೇಷಣಾರ್ಹ ಕವಿತೆ..ಸಾಮಾಜಿಕ ಬದುಕಿನ ಮೌಢ್ಯವನ್ನು ತೋರಿಸುವಂತ ಭಾವಗಳು..:) ಇನ್ನಾದರೂ ಬದಲಾಗಲಿ ಬದುಕಿನ ಅರ್ಥಗಳು...

  ReplyDelete