Monday, June 17, 2013

ಮಲ್ಲಕಂಭ ಪ್ರವೀಣರ ಊರೇ ಮಲ್ಲಾಪುರ !!!

ನನ್ನ ಊರು ಸುಂದರ ಕಲೆಗಳ ತವರೂರು,ಶಿಲ್ಪಕಲೆಗಳ ಬೀಡು ಹಳೇಬೀಡಿಗೆ ಕಾಲ್ನಡಿಗೆಯ ದೂರದಲ್ಲಿರುವ ಸಿದ್ದಾಪುರ ಎಂಬುದು.. ನನ್ನ ಹಳ್ಳಿಗೆ,ಈ ಹೆಸರು ಹೇಗೆ ಬಂತು ಎಂಬುದು ಸರಿಯಾಗಿ ತಿಳಿದಿಲ್ಲ ,ಆದರ ಹೊಯ್ಸಳರು ಆಳಿದ ಹಳೇಬೀಡು ಮತ್ತು ಸುತ್ತಮುತ್ತಲ ಕೆಲವು ಊರುಗಳ ಬಗ್ಗೆ ವಿಶ್ಲೇಷಣೆ ಕೊಡ ಬಯಸುತ್ತೇನೆ..

ಹಳೆಬೀಡಿನ ಇನ್ನೊಂದು ಹೆಸರು ದ್ವಾರಸಮುದ್ರ ಎಂದು .. ಇಲ್ಲಿ ಹೊಯ್ಸಳರಿಗಿಂತ ಮುಂಚೆ ರಾಷ್ಟಕೂಟರು ಸಾವಿರಾರು ಹೆಕ್ಟೇರುಗಳಷ್ಟು ದೊಡ್ಡದಾದ ಒಂದು ಕೆರೆಯನ್ನು ನಿರ್ಮಿಸಿದ್ದರು .. ಅದು ಸಮುದ್ರದಷ್ಟು ವಿಶಾಲವಾಗಿತ್ತು .. ನಂತರ ಈ ಊರು ಹೊಯ್ಸಳರ ರಾಜಧಾನಿ ಆಯಿತು.. ರಾಜಧಾನಿ ಅಂದರೆ ಅವರ ಆಡಳಿತದ ಮತ್ತು ರಾಜ್ಯದ ಹೆಬ್ಬಾಗಿಲು ಇದ್ದ ಹಾಗೆ.. ಆಗಾಗಿ ಇದಕ್ಕೆ ದ್ವಾರಸಮುದ್ರ ಎಂಬ ಹೆಸರು ಬಂತು ..ನಂತರ ಮಲ್ಲಿಕಾಫ಼ರ್ ನ ದಂಗೆಯಿಂದ ಇಡೀ ಊರು ಚೆಲ್ಲಾಪಿಲ್ಲಿಯಾಗಿ ಹಾಳಾಗಿ ಹೋಯಿತು.. ಕ್ರಮೇಣ ಇದು ಜನರ ಬಾಯಲ್ಲಿ ಹಾಳಾದ ಬೀಡು, ಹಳೆಯ ಬೀಡು ಹೀಗೆ ಒಬ್ಬರಿಂದ ಒಬ್ಬರಿಗೆ ತಲುಪಿ ಹಳೇಬೀಡು ಎಂದಾಯಿತು ಎಂದು ವಿಶ್ಲೇಷಿಸುತ್ತಾರೆ ..
 
ಹೊಯ್ಸಳರ ಲಾಂಛನ

 
ಇದೆ ರೀತಿ ಹಳೆಬೀಡಿನ ಸುತ್ತಮುತ್ತಲ ಕೆಲವು ಗ್ರಾಮಗಳ ಬಗ್ಗೆ ಒಂದು ಇಣುಕು ನೋಟ .. ಹಳೇಬೀಡಿಗೆ ಹೊಂದಿಕೊಂಡೇ ಇರುವ ಗ್ರಾಮ ಬಸ್ತಿಹಳ್ಳಿ .. ಇಲ್ಲಿ ಸಧ್ಯ ೫ ಜೈನ ತೀರ್ಥಂಕರರ ಬಸದಿಗಳಿವೆ .. ಮೂಲತಃ ಜೈನರಾಗಿದ್ದ ಹೊಯ್ಸಳರು ನಿರ್ಮಿಸಿದ್ದ ಬಸದಿಗಳು ಇವು .. ಇದಕ್ಕೂ ಮುಂಚೆ ಇಲ್ಲಿ ನೂರಾರು ಬಸದಿಗಳು ಇದ್ದವು ಎಂದು ಕೆಲವು ಸಂಶೋಧಕರು ಅಭಿಪ್ರಾಯ ಪಡುತ್ತಾರೆ .. ಬಸದಿಗಳ ಹಳ್ಳಿ ಎಂಬುದು ಕ್ರಮೇಣ ಬಸ್ತಿಹಳ್ಳಿ ಆಯಿತು ...
 
ಜೈನ ಬಸದಿ

 
ಹಳೇಬೀಡಿನಿಂದ ೯ ಕಿಲೋಮೀಟರ್ ದೂರದಲ್ಲಿರುವ ಊರು ಅಡಗೂರು... ಇಲ್ಲಿ ಈಗಲೂ ಹೊಯ್ಸಳರು ಕಟ್ಟಿದ್ದ ಕೋಟೆ,ಬಸದಿಗಳು ಇವೆ ..ಇಲ್ಲಿರುವ ಕೋಟೆಯಲ್ಲಿ ಮದ್ದು,ಗುಂಡುಗಳನ್ನು ಅಡಗಿಸಿ ಇಡುತ್ತಿದ್ದರಂತೆ ..ಮತ್ತು ಇಲ್ಲಿ ಯುದ್ಧಕ್ಕೆ ತಯಾರಿ ಕೂಡ ನೆಡೆಸುತ್ತಿದ್ದರು .... ಅಡಗಿಸಿಡುವ ಊರು,ಅಡಗೂರು ಎಂದಾಯಿತು ..

ಹೊಯ್ಸಳರ ರಾಜರ ಸಿರಿ,ಸಂಪತ್ತು,ವೈಡೂರ್ಯಗಳನ್ನು ಸಂಗ್ರಹಿಸಿ ಇಡುತ್ತಿದ್ದ ಊರು ರಾಜನಶಿರಿಯೂರು(ರಾಜನ+ಸಿರಿಯ +ಊರು ) ಎಂದಾಯಿತು ...
ಈ ಊರಿನ ಪಕಕ್ದಲ್ಲೇ ಇರುವ ಇನ್ನೊಂದು ಊರು ಮಲ್ಲಾಪುರ ಎಂದು .. ಇದು ಮಲ್ಲ ಕಂಭ ಪ್ರವೀಣರು ಇದ್ದಂತಹ ಊರು .. ಇಲ್ಲಿ ಹೊಯ್ಸಳರ ಕಾಲದಲ್ಲಿ ಮಲ್ಲ ಕಂಭ ಗಾರುಡಿಗರು ಇದ್ದರು ಎಂಬುದಕ್ಕೆ ಇಲ್ಲಿ ದೊರೆತಿರುವ ಮಲ್ಲ ಕಂಭಗಳು ಮತ್ತು ಗರಡಿ ಮನೆಗಳೇ ಸಾಕ್ಷಿ .. ಮತ್ತು ಇಲ್ಲಿನ ಗ್ರಾಮ ಪಂಚಾಯಿತಿ ಕೂಡ ಈ ನಿಟ್ಟಿನಲ್ಲಿ ಈ ಗ್ರಾಮದಲ್ಲಿ ಇತಿಹಾಸದ ಪುನರಾವರ್ತನೆ ಮಾಡುವಂತೆ ಮಲ್ಲ ಕಂಭ ಮತ್ತು ಗರಡಿ ಮನೆಗಳನ್ನುಅಭಿವೃದ್ಧಿ ಪಡಿಸಲು ಕೆಲವು ಯೋಜನೆಗಳನ್ನು ಕೈಗೊಂಡಿದೆ ..

ಇನ್ನು ಹಳೇಬೀಡಿನಿಂದ ಸುಮಾರು ೩-೪ ಕಿಲೋಮೀಟರ್ ದೂರದಲ್ಲಿರುವ ಊರುಗಳು ಪಂಡಿತನಹಳ್ಳಿ ಮತ್ತು ಭಂಡಾರಿಕಟ್ಟೆ .. ಹೊಯ್ಸಳರ ಆಸ್ಥಾನದ ಪಂಡಿತರುಗಳು ನೆಲೆಸಿದ್ದ ಊರು ಪಂಡಿತನಹಳ್ಳಿ .. ಇಲ್ಲಿ ಈಗಲೂ ಕೆಲವು ಪಂಡಿತರ ವಂಶ ಇದೆ ..
ಹಾಗೆ ಭಂಡಾರಿಗಳು,ಅಂದರೆ ಕ್ಷೌರಿಕರು ಇದ್ದಂತಹ ಊರು ಭಂಡಾರಿಕಟ್ಟೆ ..
ಹಳೇಬೀಡು ಸುತ್ತಮುತ್ತಲ ಕೆಲವು ಹಳ್ಳಿಗಳಿಗೆ ಈ ರೀತಿಯ ಇತಿಹಾಸದ ಹಿನ್ನೆಲೆ ಇದೆ ..

(ಈ ಲೇಖನವು ಜೂನ್ ೨೦, ೨೦೧೩ ರ "ಹಾಯ್ ಬೆಂಗಳೂರು" ಪತ್ರಿಕೆಯಲ್ಲಿ "ದಿಲ್ ನೆ ಫಿರ್ ಯಾದ್ ಕಿಯಾ" ಅಂಕಣದಲ್ಲಿ ಪ್ರಕಟಗೊಂಡಿದೆ .
'ನಿಮ್ಮ ಊರಿಗೆ ಹೆಸರು ಹೇಗೆ ಬಂತು?' ಎಂಬ ಶೀರ್ಷಿಕೆಯಲ್ಲಿ ಲೇಖನಗಳನ್ನು ಆಹ್ವಾನಿಸಲಾಗಿತ್ತು.  ಲೇಖನ ಪ್ರಕಟಿಸಿದ ಪತ್ರಿಕಾ ಬಳಗಕ್ಕೆ ಮನಃ ಪೂರ್ವಕ ಧನ್ಯವಾದಗಳು ) 

8 comments:

  1. ಊರುಗಳ ಹೆಸರಿನ ಹಿಂದೆ ಇರುವ ವಿಶೇಷತೆಗಳು ಎಷ್ಟೋ ಗೊತ್ತಿರುವುದಿಲ್ಲ... ಧನ್ಯವಾದಗಳು ಗಿರಿ...

    ReplyDelete
  2. ಭಾರತೀಯ ಭೂಪ್ರದೇಶದ ಪ್ರತಿ ಗ್ರಾಮ ಊರು, ಜಿಲ್ಲೆಗಳಿಗೆ ಇಟ್ಟಿರುವ ಕೊಟ್ಟಿರುವ ಹೆಸರು ಸುಮ್ಮನೆ ಅಲ್ಲ ಅದರ ಹಿಂದೆ ಕೆಲವು ಕಾರಣಗಳು ಇರುತ್ತವೆ. ಆಡು ಮಾತಿನ ಒರಳಿಗೆ ಸಿಕ್ಕಿ ರೂಪ ಹೊಂದಿ ಅಥವಾ ಕುರೂಪ ಹೊಂದಿ ಅರಿವಿಗೆ ಬರದೆ ಹೋಗಿರುತ್ತದೆ. ಇಂತಹ ಒಂದು ಸುಮಧುರ ಪ್ರಯತ್ನ ನಿಮ್ಮ ಲೇಖನದಲ್ಲಿ ಕಾಣುತ್ತಿದೆ ಗಿರಿ. ಸೂಪರ್ ಲೇಖನ

    ReplyDelete
  3. ಊರುಗಳ ಹೆಸರೊಳಗೆ ಅಡಗಿರುವ ಐತಿಹ್ಯದ ಕುರಿತು ಮಾಹಿತಿ ಒದಗಿಸಿದ, ಐತಿಹಾಸಿಕ ಲೇಖನ ಮೆಚ್ಚುಗೆಯಾಯಿತು. ಲೇಖಕ ಗಿರೀಶ್ ಎಸ್. ಇವರಿಗೆ ವಂದನೆಗಳು.

    ReplyDelete
  4. ಮಾಹಿತಿಯುಕ್ತ ಬರಹ.

    ReplyDelete
  5. ಹಾಯ್ ಬೆಂಗಳೂರು ಮತ್ತು ಗಿರೀಶ್ ಇಬ್ಬರಿಗೂ ಅಭಿನಂದನೆಗಳು. ನಾನು ನೋಡಬೇಕಾದ ವಿಶಾಲ ಕರ್ನಾಟಕ ಬಹಳಷ್ಟು ಬಾಕಿ ಇದೆ!

    ReplyDelete
  6. ಮಾಹಿತಿಪೂರ್ಣ ಬರಹ ಗಿರೀಶ್..
    ಒಳ್ಳೆಯ ಮಾಹಿತಿಯನ್ನೊದಗಿಸಿದ ನಿಮಗೊಂದು ಮನವಿ.. ಇಂತಹ ಮಾಹಿತಿಯುಕ್ತ ಲೇಖನಗಳನ್ನು ಬರೆದಾಗ ಅವನ್ನು ಕನ್ನಡ ವಿಕಿಯಲ್ಲೊಮ್ಮೆ ದಾಖಲಿಸುವ ಪ್ರಯತ್ನ ಮಾಡಿ.. ಈ ಮಾಹಿತಿ ನಿಮ್ಮ ಬ್ಲಾಗ್ ಪರಿಮಿತಿ ದಾಟಿ ವಿಶ್ವದಲ್ಲಿರೋ ಎಲ್ಲಾ ಕನ್ನಡಿಗರಿಗೂ ಸಿಗುವಂತದ್ದಾಗಲಿ ಎಂಬ ಬಯಕೆ..

    ReplyDelete
  7. ತುಂಬಾ ಚೆನ್ನಾಗಿದೆ ನಿಮ್ಮೂರ ಬಗೆಗಿನ ಮಾಹಿತಿ .
    ಓದಿದ ಮೇಲೆ ಒಮ್ಮೆ ಹಳೆಬೀಡು ನೋಡಲೇ ಬೇಕು ಅನಿಸಿದ್ದು ಸುಳ್ಳಲ್ಲ :)
    ಇಷ್ಟವಾಯ್ತು.

    ಹಾಗೇ ಹಾಯ್ ಬೆಂಗಳೂರಲ್ಲಿ ಬಂದಿದ್ದಕ್ಕೆ ಅಭಿನಂದನೆಗಳು

    ReplyDelete
  8. ಈ ಬರಹ ಹಾಯ್ ಬೆಂಗಳೂರಲ್ಲಿ ಓದಿದ್ದೆ. ಇವತ್ತು ಹಂಸಾನಂದಿಯವರ ಬ್ಲಾಗ್ ಮೂಲಕ ಈ ನಿಮ್ಮ ಬ್ಲಾಗ್ ಗೆ ಬಂದೆ. ಚೆನ್ನಾಗಿದೆ. ಧನ್ಯವಾದಗಳು

    ReplyDelete