Sunday, August 16, 2015

ಸ್ವಾತಂತ್ರ್ಯ ದಿನಾಚರಣೆ - ನನ್ನ ಭಾಷಣ


ಎಲ್ಲರಿಗೂ  ೬೯ನೇ ಸ್ವಾತಂತ್ರ್ಯ ದಿನದ ಶುಭ ಕಾಮನೆಗಳು. ಈ ಸಂದರ್ಭದಲ್ಲಿ ನಮ್ಮ ಗುಬ್ಬಿ ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನು ಮಾಡಿದ ಭಾಷಣದ ಕೆಲವು ವಿಷಯಗಳನ್ನು ಇಲ್ಲಿ ಹಂಚಿಕೊಳ್ಳ ಬಯಸುತ್ತೇನೆ . 

ಬ್ರಿಟೀಷರಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿರಬಹುದು ,  ಯಾವಾಗ ಕೃಷಿಕ ವರ್ಗದ ಘನತೆಹೆಚ್ಚಿದಾಗ , ಸೈನಿಕರಿಗೆ ಸೂಕ್ತ ಗೌರವ ಸಿಕ್ಕಾಗ , ಪ್ರತಿಯೊಬ್ಬ ಮಗುವಿಗೆ ಶಿಕ್ಷಣ ಸಿಕ್ಕಾಗ , ಪ್ರತಿಯೊಬ್ಬ ಪ್ರತಿಭಾವಂತರಿಗೆ ಸರಿಯಾದ ಅವಕಾಶ ಸಿಕ್ಕಿದಾಗ ಅದು ನಿಜವಾದ ಸ್ವಾತಂತ್ಯ ,ಶಿಕ್ಷಣದಿಂದ ವಂಚಿತರಾಗಿರುವವರು ಬಹಳಷ್ಟು ಮಂದಿ ಇನ್ನೂ ನಮ್ಮ ದೇಶದಲ್ಲಿ ಇದ್ದಾರೆ , ಅಂಥವರಿಗೆ ಸೂಕ್ತ ಶಿಕ್ಷಣ ಮತ್ತು ಅವಕಾಶಗಳು ಸಿಗಬೇಕಾಗಿದೆ ಮತ್ತು ಸರ್ಕಾರ ಕೂಡ ಇದರ ಬಗ್ಗೆ ಗಮನ ಹರಿಸಬೇಕಾಗಿದೆ 


ಈ ಕಾರ್ಯಕ್ರಮದಲ್ಲಿ ನಮ್ಮ ದೇಶದ ಸ್ವರಾಜ್ಯಕ್ಕಾಗಿ ಹೋರಾಡಿದದವರನ್ನು ನೆನೆಯದೇ ಸ್ವಾತಂತ್ಯ ದಿನವನ್ನು ಆಚರಿಸಲು ಆಗುತ್ತದೆಯೇ ??  ಬ್ರಿಟೀಷರ ಆಳ್ವಿಕೆಯಿಂದ ಹೊರಬಂದು ಪೂರ್ಣ ಸ್ವರಾಜ್ಯ ದೇಶ ನಿರ್ಮಿಸುವಲ್ಲಿ ಲಕ್ಷಾಂತರ ಹೋರಾಟಗಾರರ ಶ್ರಮ ಬಲಿದಾನ ಇದೆ. ನಮ್ಮ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಕೆಲವೇ ಕೆಲವು ನಾಯಕರನ್ನು ಮಾತ್ರ ಬಿಂಬಿಸಿ ತೋರಿಸಲಾಗುತ್ತದೆ . ಆದರೆ ಎಲೆ ಮರೆಯ ಕಾಯಿಯಂತೆ ಹೋರಾಡಿದ ಅದೆಷ್ಟೋ ಜನ ತಮ್ಮ ಜೀವ ಜೀವನವನ್ನು ದೇಶಕ್ಕೆ , ತಾಯಿ ಭಾರತಾಂಬೆಯ ಸಲುವಾಗಿ ಅರ್ಪಿಸಿದ್ದಾರೆ .  

ಮೊದಲಿಗೆ ವೀರ್ ಸಾವರ್ಕರ್ ಬಗ್ಗೆ ಹೇಳುತ್ತೇನೆ . ದೇಶ ಕಂಡ ಒಬ್ಬ ಅದ್ಭುತ ದೂರದೃಷ್ಟಿಯುಳ್ಳ ನಾಯಕ , ಚಿಂತಕ ಮತ್ತು ಕವಿ . ಸಾವರ್ಕರ್ ಅವರು ಕೇವಲ ಭಾರತದಲ್ಲಿದ್ದುಕೊಂಡು ಬ್ರಿಟೀಷರ ವಿರುದ್ಧ ಹೋರಾಡಲಿಲ್ಲ. ಲಂಡನ್ ಗೆ ಉನ್ನತ ವ್ಯಾಸಂಗಕ್ಕೆ ಹೋದ ಇವರು ಅಲ್ಲಿ "ಅಭಿನವ ಭಾರತ" ಎಂಬ  ಗುಪ್ತ ಕ್ರಾಂತಿಕಾರಿ ಸಂಘಟನೆಯನ್ನು ಶುರು ಮಾಡಿ ಬ್ರಿಟೀಷರ ವಿರುದ್ಧ ಹೋರಾಡುತ್ತಾರೆ . ಈತ ಒಬ್ಬ ಸಾಮಾನ್ಯನಲ್ಲ , ಈತನಿಂದ ನಮಗೆ ಕಂಟಕ ತಪ್ಪಿದ್ದಲ್ಲ ಎಂದು ಅರಿತ ಬ್ರಿಟೀಷರು ಸಾವರ್ಕರ್ ಅವರ ಹಿಂದೆ ಬಿದ್ದು ಅವರ ಬಗ್ಗೆ ಮಾಹಿತಿಯನ್ನು ಕಲೆಹಾಕಲು ಶುರು ಮಾಡುತ್ತಾರೆ . ನಂತರ ಅವರನ್ನು ಬಂಧಿಸಿ ಭಾರತಕ್ಕೆ ಹಡಗಿನ ಮೂಲಕ ಕರೆತರಲಾಗುತ್ತದೆ. ಆಗ ಸಾವರ್ಕರ್ ಫ್ರಾನ್ಸ್ ನ ಗಡಿಯತ್ತ ಬಂದಾಗ ಹಡಗಿನಿಂದ ಜಿಗಿದು ಸಮುದ್ರದಲ್ಲಿ ಈಜಿಕೊಂಡು ತಪ್ಪಿಸಿಕೊಂಡು ಹೋಗುತ್ತಾರೆ .ಫ್ರಾನ್ಸಿನ ಅಧಿಕಾರಿಗಳಿಂದ ಮತ್ತೆ ಬಂಧಿಯಾದ ಸಾವರ್ಕರ್ ಅವರನ್ನು ಬ್ರಿಟೀಷ್  ಅಧಿಕಾರಿಗಳು ಫ್ರಾನ್ಸಿನ ಅಧಿಕಾರಿಗಳಿಗೆ ಲಂಚ ಕೊಟ್ಟು ಮತ್ತೆ ಬಂಧಿಸಿ ಭಾರತಕ್ಕೆ ತಂದು ಅಂಡಮಾನ್ ಜೈಲಿನಲ್ಲಿ ಇರಿಸುತ್ತಾರೆ .  ಬಹುಷಃ ವಿಶ್ವದಲ್ಲೇ ಎರಡು ಜೀವಾವಧಿ ಶಿಕ್ಷೆ ಅನುಭವಿಸಿದ ಏಕೈಕ ವ್ಯಕ್ತಿ ಸಾವರ್ಕರ್ ಇರಬಹುದು . ಎರಡು ಜೀವಾವಧಿ ಅಂದರೆ ಆಗಿನ ಕಾನೂನಿನ ಪ್ರಕಾರ ೫೦ ವರ್ಷಗಳ ಜೈಲು ವಾಸ . ನಂತರ ಸಾವರ್ಕರ್ ಅವರನ್ನು ಜೈಲಿನಿಂದ ಬಿಡಿಸಲು ದೇಶಾದ್ಯಂತ ಎಲ್ಲರಿಂದ ಸಹಿ ಸಂಗ್ರಹವನ್ನು ಮಾಡಲಾಗುತ್ತದೆ , ಕೆಲವು ಹಿರಿಯ ನಾಯಕರ ಬಳಿ ಅದನ್ನು ತೆಗೆದುಕೊಂಡು ಹೋಗಿ ಅವರ ಸಹಿ ಮತ್ತು ಬೆಂಬಲವನ್ನು ಅಪೇಕ್ಷಿಸಿದಾಗ ಆ ಸಹಿ ಸಂಗ್ರಹದ ಹಾಳೆಯನ್ನು ಹರಿದು ಬಿಸಾಕುತ್ತಾರೆ . ಇದು ನಮ್ಮ ಕೆಲವು ನಾಯಕರಿಗೆ ಹೋರಾಟಗಾರರಿಗೆ ನಮ್ಮದೇ ನಾಯಕರು ನಡೆಸಿಕೊಂಡ ರೀತಿ . ನಮ್ಮ ದೇಶಕ್ಕೆ ಸ್ವಾತಂತ್ರ್ಯ ದಕ್ಕಿಸುವಲ್ಲಿ ಸಾವರ್ಕರ್ ಅವರ ಕೊಡುಗೆಯನ್ನು ಹೆಚ್ಚು ಪ್ರಚರ ಪಡಿಸುವ ಅವಶ್ಯಕತೆ ಇದೆ ಮತ್ತು ಇಂದಿಗೂ ಅವರು ಎಷ್ಟೋ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ . 

Vinayak Damodar Savarkar


ಅದೇ ರೀತಿ ಯುವಕರಿಗೆ ಇನ್ನೊಬ್ಬ ಮಾದರಿ ನಾಯಕ ಎಂದರೆ ಸುಭಾಶ್ ಚಂದ್ರ ಬೋಸ್ . ಹಲವಾರು ನೇತಾಗಳಿದ್ದರೂ ನೇತಾಜಿ ಮಾತ್ರ ಒಬ್ಬರೇ . ಇವರ ಪರಿಸ್ಥಿತಿಯೂ ಒಂದು ಮಟ್ಟದಲ್ಲಿ ಸಾವರ್ಕರ್ ಅವರ ರೀತಿಯದ್ದೇ . Indian National Army ಸ್ಥಾಪಿಸಿದ ಬೋಸರಿಗೆ ದೇಶಕ್ಕಾಗಿ ಮುಡಿಪಾಗಿಟ್ಟ ಇಂಥ ಒಂದು ಸೈನ್ಯವನ್ನು ನಮ್ಮ ದೇಶದ ಒಳಗೆ ಶುರು ಮಾಡಲು ಆಗದೆ , ಬೇರೆ ದೇಶದಲ್ಲಿ ಶುರು ಮಾಡಿ ಅಲ್ಲಿಂದ ಬ್ರಿಟೀಷರ ವಿರುದ್ಧ ಹೋರಾಡುತ್ತಾರೆ . ಬ್ರಿಟೀಷ್ ಸೈನ್ಯದ ಭಾಗವಾಗಿದ್ದ ಅದೆಷ್ಟೋ ಭಾರತೀಯ ಸೈನಿಕರು ಬೋಸರಿಂದ ಪ್ರೇರಿತರಾಗಿ INA ಯನ್ನು ಸೇರಿಕೊಳ್ಳುತ್ತಾರೆ . ಇದು ಬೋಸರ ನಾಯಕ ಗುಣ .  ಸಾವರ್ಕರ್ ಅವರ ರೀತಿಯಲ್ಲಿ ಬೋಸರು ಕೂಡ ಬ್ರಿಟೀಷರಿಗೆ ದುಸ್ವಪ್ನವಾಗಿ ಕಾಡಿದ್ದರು , ಬೋಸರನ್ನು ಬಂಧಿಸಲು ಬ್ರಿಟೀಷರು ಹಲವಾರು ಮಸಲತ್ತುಗಳನ್ನುಮಾಡುತ್ತಾರೆ . ಇಂಥ ಬೋಸರನ್ನು ಬಂಧಿಸಲು ನಮ್ಮ ಕೆಲವು ನಾಯಕರು ಬೋಸರಿಂದ ತಮಗೆ ತೊಂದರೆ ಎಂದು ಅರಿತು  ಬ್ರಿಟೀಷರಿಗೆ ಬೆಂಬಲ ಕೊಟ್ಟಿದ್ದು ಇತಿಹಾಸದ ಒಂದು ಕಪ್ಪು ಚುಕ್ಕೆ . 

Subash Chandra Bose


ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾದ ಮತ್ತೊಬ್ಬ ನಾಯಕ ಅಂದರೆ ಸರ್ದಾರ್ ವಲ್ಲಭಭಾಯಿ ಪಟೇಲ್ . ಆಗಸ್ಟ್ ೧೫, ೧೯೪೭ ರಲ್ಲಿ ಸ್ವಾತಂತ್ರ್ಯ ಬಂದ ನಂತರವೂ ನಮ್ಮ ದೇಶದಲ್ಲಿ ಹಲವಾರು ಸಮಸ್ಯೆಗಳಿದ್ದವು . ಒಂದು ಕಡೆ ದೇಶ ಇಬ್ಬಾಗ ಆಗಿದೆ , ಇನ್ನೊಂದು ಕಡೆ ಎಲ್ಲ ರಾಜ ಮನೆತನಗಳು ಯಾವ ಕಡೆಗೆ ಹೋಗಬೇಕೆಂಬ ಅವರ ಡೋಲಾಯಮಾನ ಸ್ಥಿತಿ. ಇಂಥ ಸನೀವೆಶದಲ್ಲಿ ಮುಂಚೂಣಿಗೆ ಬಂದಿದ್ದು ಉಕ್ಕಿನ ಮನುಷ್ಯ ಪಟೇಲ್ .  ೫೫೦ಕ್ಕೂ ಹೆಚ್ಚಿನ  ಸಂಸ್ಥಾನಗಳನ್ನು ಒಗ್ಗೂಡಿಸಿ "Great Republic India" ನಿರ್ಮಿಸುವಲ್ಲಿ ಅವರ ಪಾತ್ರ ಮುಖ್ಯವಾದದ್ದು .  ಬಹುಷಃ ಪಟೇಲರಲ್ಲದೇ ಬೇರೆ ಯಾರಿಂದಲೂ ಈ ಕಾರ್ಯ ಯಶಸ್ವಿಗೊಳಿಸಲು ಸಾಧ್ಯವಾಗುತ್ತಿರಲಿಲ್ಲ . ಈ ಕಾರ್ಯಚರಣೆಯಲ್ಲಿ ಮುಖ್ಯವಾಗಿ ನೆನಪಿಸಿಕೊಳ್ಳಬೇಕಾದ್ದು  ಪಾಕಿಸ್ತಾನಕ್ಕೆ ಸೇರುತ್ತೇನೆ ಎಂದಿದ್ದ  ಹೈದರಾಬಾದಿನ ನಿಜಾಮರನ್ನು ಭಾರತದ ತೆಕ್ಕೆಗೆ ತರುವಲ್ಲಿ ನಡೆಸಿದ "Operation Polo" . 
Sardar Patel


ಇದೇ ರೀತಿ ಬ್ರಿಟೀಷರ ವಿರುದ್ಧ ಹೋರಾಡಿದ ನಮ್ಮ ಕೆಚ್ಚೆದೆಯ ರಾಜರು ಅಂದರೆ ತಮಿಳುನಾಡಿನ ಪುಲಿ ದೇವರ್ (Puli Thevar ). ಕೇರಳದ ವರ್ಮಾ ಪಜಾಸ್ಸಿ ರಾಜಾ (Pazhassi ರಾಜ ) ಇವರಿಬ್ಬರೂ ೧೮ನೆ ಶತಮಾದಲ್ಲೇ ಅವರ ವಿರುದ್ಧ ಹೋರಾಡಿದ್ದವರು . ಅದೇ ರೀತಿ ೧೯ನೆ ಶತಮಾದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ , ಸಂಗೊಳ್ಳಿ ರಾಯಣ್ಣ ಕೂಡ ಬ್ರಿಟೀಷರ ವಿರುದ್ಧ ಹೋರಾಡಿದ್ದಾರೆ . ಇವರನ್ನು ಕೂಡ ಇಂದು ನಾವು ಸ್ಮರಿಸಿಕೊಳ್ಳಬೇಕು . ನಂತರ ೧೮೫೭ರ ಸಿಪಾಯಿ ದಂಗೆ , ಮಂಗಲ್ ಪಾಂಡೆಯ ನೇತೃತ್ವದಲ್ಲಿ ಶುರು ಆಯಿತು . ಇದು ಬ್ರಿಟೀಷರ ವಿರುದ್ಧ ನಡೆದ ಹೋರಾಟಗಳಲ್ಲಿ ಅತೀ ಮುಖ್ಯವಾದದ್ದು ಮತ್ತು ಸ್ವಾತಂತ್ಯ ಹೋರಾಟಕ್ಕೆ ಮುಖ್ಯ ತಿರುವನ್ನು ಕೊಟ್ಟಿದ್ದು . ಈ ದಂಗೆಯ ಬಗ್ಗೆ ಸಾವರ್ಕರ್ ಬರೆದ ಪುಸ್ತಕ, ಬಿಡುಗಡೆಗೆ ಮುನ್ನವೇ ಬ್ರಿಟೀಷರಿಂದ ನಿಷೇಧಗೊಳ್ಳುತ್ತದೆ. ಇಂಗ್ಲೆಂಡ್ ನಲ್ಲಿ ಹಚ್ಚು ಹಾಕಿಸಲು ಆಗದೆ ಈ ಪುಸ್ತಕವನ್ನು ಹಾಲೆಂಡ್ ನಲ್ಲಿ ಮುದ್ರಿಸಿ ಭಾರತಕ್ಕೆ  ಈ ಪುಸ್ತಕವನ್ನು ರವಾನೆ ಗೊಳಿಸುತ್ತಾರೆ. ೧೯೦೦ ರ ನಂತರ ಈ ಪುಸ್ತಕ ಎಷ್ಟೋ  ಜನರಿಗೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೇರಲು ಸ್ಪೂರ್ತಿ ಆಗುತ್ತದೆ, ಅವರ ಹೋರಾಟಕ್ಕೆ ಮುನ್ನುಡಿ ಆಗುತ್ತದೆ . ನಂತರ ೧೯೧೯ರ ಜಲಿಯನ್ ವಾಲಾ  ಭಾಗ್ ದುರಂತ . ಈ ದುರಂತವನ್ನು ಕಣ್ಣಾರೆ ಕಂಡ  ಭಗತ್ ಸಿಂಗ್ ಎಂಬ ಚಿಕ್ಕ ಬಾಲಕ ಬ್ರಿಟೀಷರ ವಿರುದ್ಧ ಹೋರಾಡಲು ಸಿದ್ಧಗೊಳ್ಳುತ್ತಾನೆ , ಎಷ್ಟೋ ಯುವಕರಿಗೆ ಸ್ಪೂರ್ತಿ ಆಗುತ್ತಾರೆ ಭಗತ್ ಸಿಂಗ್. 

ಇದೇ ರೀತಿ ೧೯೪೨ರ "Quit India Movement" ನಲ್ಲಿ ಕೂಡ ಅದೆಷ್ಟೋ ಜನ ಎಲ್ಲ ವರ್ಗದ  ಎಲ್ಲ ವಯಸ್ಸಿನವರು ಭಾಗಿ ಆಗುತ್ತಾರೆ . ನಮ್ಮ ಖ್ಯಾತ ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ನವರು ಕೂಡ ಈ ಚಳುವಳಿಯಲ್ಲಿ ಭಾಗಿಯಾಗುತ್ತಾರೆ . H.N ಅವರು ತಮ್ಮ ಪರೀಕ್ಷೆಯನ್ನು ಬಿಟ್ಟು ಈ ಚಳುವಳಿಯಲ್ಲಿ ಭಾಗವಹಿಸುತ್ತಾರೆ , ಜೈಲುವಾಸವನ್ನು ಕೂಡ ಅನುಭವಿಸುತ್ತಾರೆ . ಜೈಲಿನಿಂದ ಬಿಡುಗಡೆ ಆದ ನಂತರ ತಮ್ಮ ಶಿಕ್ಷಣವನ್ನು ಮುಂದುವರೆಸುತ್ತಾರೆ . ಇದೇ ರೀತಿ ಬೆಂಗಳುರಿನ ಮೈಸೂರ್ ಬ್ಯಾಂಕ್ ಸರ್ಕಲ್ ನಲ್ಲಿರುವ ಹುತಾತ್ಮರ ಸ್ಮಾರಕದ ಬಗ್ಗೆ ಹೇಳಲೇಬೇಕು . ಈ ಸ್ಮಾರಕವನ್ನು ೧೯೪೨ರ ಚಳುವಳಿಯಲ್ಲಿ ಭಾಗವಹಿಸಿ ಬ್ರಿಟೀಷರ ಗುಂಡೇಟಿಗೆ ಬಲಿಯಾಗಿ ಹುತಾತ್ಮರಾದ  ಸೆಂಟ್ರಲ್ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳ ನೆನಪಿಗಾಗಿ ನಿರ್ಮಿಸಲಾಗಿದೆ . ಈ ಸ್ಮಾರಕದ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಓದಿ ( http://giri-shikhara.blogspot.in/2014/08/blog-post.html) 

Memorial at Mysore Bank Circle, Bengaluru



ಇನ್ನ ಸ್ವಾತಂತ್ರ್ಯ ಬಂದ ನಂತರ ನಮ್ಮ ಪರಿಸ್ಥಿತಿ ಭಿನ್ನವಾಗಿತ್ತು . ಒಂದು ಕಡೆ ಬ್ರಿಟೀಷರ ಆಳ್ವಿಕೆಯಿಂದ ಬಿಡುಗಡೆ ಆಗಿದ್ದು ಸಂಭ್ರಮ ಮತ್ತು ಸಮಾಧಾನಕರ ವಿಷಯವಾದರೆ ದೇಶ ಇಬಾಗ ಆಗಿದ್ದು ದುರಂತವೇ ಸರಿ . ಕೆಲವು ನಾಯಕರ ತಮ್ಮ ಸ್ವಂತ ಹಿತಾಸಕ್ತಿಗಳಿಗೋಸ್ಕರ ದೇಶ ಹೊಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಭಾರತದಿಂದ ಪಾಕಿಸ್ತಾನಕ್ಕೆ , ಪಾಕಿಸ್ತಾನದಿಂದ ಭಾರತಕ್ಕೆ ಅದೆಷ್ಟೋ ಮಂದಿ ವಲಸೆ ಬಂದರು , ಲಕ್ಷಾಂತರ ಅಮಾಯಕರು ಬಲಿಯಾದರು . ಸ್ವಾತಂತ್ರ್ಯ ಭಾರತದ ಮೊದಲ ದುರಂತ . 


ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಹೇಳುವುದಾದರೆ ವಿಶ್ವದಾದ್ಯಂತ ಭಾರತೀಯರ ಸಾಧನೆ. ವಿಶ್ವದ ದೊಡ್ಡ ದೊಡ್ಡ IT ಸಂಸ್ಥೆಗಳ ಚುಕ್ಕಾಣಿಯನ್ನು ಭಾರತೀಯರು ಹಿಡಿಯುತ್ತಿರುವುದು ಹೆಮ್ಮೆಯ ಸಂಗತಿ ಆಗಿರಬಹುದು , ಜೊತೆಗೆ ಅದರ ಬಗ್ಗೆ ಸ್ವಲ್ಪ ಯೋಚಿಸುವ ಅವಶ್ಯಕತೆ ಕೂಡ ಇದೆ .  ಇದೇ ವ್ಯಕ್ತಿಗಳಿಗೆ ನಮ್ಮ ದೇಶದಲ್ಲೇ ಸೂಕ್ತ ಅವಕಾಶಗಳು ದೊರಕಿದಲ್ಲಿ ತಮ್ಮ ಸ್ವಂತ ಸಂಸ್ಥೆಯನ್ನು ಶುರು ಮಾಡುವ ಸಾಮರ್ಥ್ಯ ಇದೆ . ಇಂಥ ಅವಕಾಶವನ್ನು ಉಪಯೋಗಿಸಿಕೊಳ್ಳುವ ವಿದೇಶಿ ಸಂಸ್ಥೆಗಳು ಭಾರತೀಯ ಪ್ರತಿಭಾವಂತ ಯುವಕರನ್ನು ಆಕರ್ಷಕ ಸಂಬಳ ಕೊಟ್ಟು ತಮ್ಮ ಸಂಸ್ಥೆಗೆ ದುಡಿಸಿಕೊಳ್ಳುತಾರೆ.ಇಂಥಹ ವಿದ್ಯಾರ್ಥಿಗಳು ಒಂದು ಸಂಸ್ಥೆಯನ್ನು ಹುಟ್ಟು ಹಾಕಿದರೆ ವಿದೇಶಿ ಕಂಪೆನಿಗಳಿಗೆ ಸೆಡ್ಡು ಹೊಡೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ. ಅಂತ ಸಾಮರ್ಥ್ಯ ನಮ್ಮ ಯುವ ಪೀಳಿಗೆಗೆ ಇದೆ . ಇವರನ್ನು ತಮ್ಮ ಸಂಸ್ಥೆಗೆ ಸೇರಿಸಿಕೊಳ್ಳದಿದ್ದರೆ ತಮಗೆ competitor ಆಗುತ್ತಾರೆ ಎಂಬ ಹೆದರಿಕೆ ಕೂಡ ಕೆಲವು ವಿದೇಶಿ ಕಂಪೆನಿಗಳಿಗೆ ಇದೆ.. ಆದ್ದರಿಂದಲೇ ಅವರು ಹೆಚ್ಚು ಸಂಬಳ ಕೊಡಲೂ ತಾಯಾರಗಿರುತ್ತಾರೆ .   ನಮ್ಮ ದೇಶದ ವಿದ್ಯಾರ್ಥಿಗಳಲ್ಲಿ ಕೂಡ ದೊಡ್ಡ ದೊಡ್ಡ ವಿದೇಶಿ ಸಂಸ್ಥೆಗಳಲ್ಲಿ ಕೆಲಸ ಗಿಟ್ಟಿಸುವ ಬಯಕೆ ಇದ್ದೇ ಇತ್ತು . 
.
ಇಂಥ ಮನಸ್ಥಿತಿ ಕಳೆದ ೪-೫ ವರ್ಷದಿಂದ ಈಚೆಗೆ ಸ್ವಲ್ಪ ಬದಲಾಗಿದೆ ಎಂದರೆ ಅತಿಶಯೋಕ್ತಿ ಅಲ್ಲ . ಇತ್ತೀಚಿಗೆ ಭಾರತೀಯ ಯುವಕರಿಂದ ಶುರು ಆಗಿರುವ ಅದೆಷ್ಟೋ ಸಂಸ್ಥೆಗಳು ಒಳ್ಳೆಯ ಕಾರ್ಯ ನಿರ್ವಹಿಸುತ್ತಿದ್ದು , ಬೇರೆಯವರಿಗೆ ಕೂಡ ಮಾದರಿ ಆಗಿದೆ .ಉದಾಹರಣೆಗೆ ಇತ್ತೀಚಿನ start -up ಕಂಪೆನಿಗಳಾದ  flipkart , snapdeal ,ola cabs ಮುಂತಾದವು ಭಾರತೀಯರಿಂದ ಶುರು ಆದ ಸಂಸ್ಥೆಗಳು . ಇವತ್ತು ಬೆಳಗ್ಗೆ ಪ್ರಧಾನ ಮಂತ್ರಿಗಳು ಕೆಂಪು ಕೋಟೆಯಿಂದ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವಾಗ strat-up ಕಂಪನಿಗಳ ಬಗ್ಗೆ ಉಲ್ಲೇಖಿಸುತ್ತ ಹೇಳುತ್ತಾರೆ "We want to enable Start-ups to make India no 1 in this field. Start-up India and Stand-up India" ತಮ್ಮ ಸರ್ಕಾರ ಮಂಡಿಸಿದ ೨೦೧೪ರ ಬಜೆಟ್ ನಲ್ಲಿ ಕೂಡ ಇಂಥ start-up ಸಂಸ್ಥೆಗಳಿಗೆ ಸಹಾಯ ಧನವನ್ನು ನೀಡುವುದಾಗಿ  ಘೋಷಿಸಿರುವ ನರೇಂದ್ರ ಮೋದಿ ಸರ್ಕಾರ ಅದಕ್ಕಾಗಿ ಹಣವನ್ನು ಕೂಡ ಮೀಸಲಿಟ್ಟಿದೆ. ಇಂಥ ಅವಕಾಶವನ್ನು ನಮ್ಮ ಯುವಕರು ಬಳಸಿಕೊಂಡು ದೇಶದ ಅಭಿವೃದ್ಧಿಗೆ ಮತ್ತು ದೇಶದ ಒಳಿತಿಗಾಗಿ ಕಾರ್ಯ ನಿರ್ವಹಿಸಿಬೇಕಾಗಿದೆ. ಇದಕ್ಕೆ ಪುಷ್ಟಿ ಕೊಡುವಂತೆ "Make In India " ಯೋಜನೆ ಕೂಡ ಇದೆ 

ಇದೆ ರೀತಿ ಭಾರತದಲ್ಲಿ ನಡೆಯುತ್ತಿರುವ ಸಂಶೋಧನೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿರುವ ತೊಡಕುಗಳ ಬಗ್ಗೆ ಹೇಳಬಯಸುತ್ತೇನೆ.  ನಮ್ಮ ದೇಶದಲ್ಲಿ ನಡೆದ ಹಲವಾರು ಸಂಶೋಧನೆಗಳಲ್ಲಿ "Param" ಎಂಬ Super Computer , ಪೋಖ್ರಾನ್ ಅಣು ಪರೀಕ್ಷೆ ಮತ್ತು ಇತ್ತೀಚಿನ Mars Mission ಮುಖ್ಯವಾದವು . ಇವೆಲ್ಲ ಯಾವ ದೇಶದ ಸಹಾಯ ಇಲ್ಲದೆ ಸ್ವತಂತ್ರವಾಗಿ ನಡೆದಂಥವು . ಅತೀ ಕಡಿಮೆ ವೆಚ್ಚದಲ್ಲಿ ಮುಗಿಸಿದಂತಹ "Mars Mission " ನಿಜಕ್ಕೂ ಅದ್ಭುತವೇ ಸರಿ . ಬೇರೆ ರಾಷ್ಟಗಳು ಹಲವಾರು ಪ್ರಯತ್ನಗಳ ನಂತರ ಸಫಲರಾಗುತ್ತಾರೆ , ಆದರೆ ಭಾರತ ಮೊದಲನೇ ಪ್ರಯತ್ನದಲ್ಲೇ ಯಶಸ್ವಿ ಗೊಳ್ಳುತ್ತದೆ . ಅದು ನಮ್ಮ ವಿಜ್ಞಾನಿಗಳ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. ಅಣು ಸಂಶೋಧನೆಯಲ್ಲಿ ಬೇರೆ ದೇಶಗಳು(ಮುಖ್ಯವಾಗಿ ಅಮೇರಿಕಾ ಮತ್ತು ರಷ್ಯ) ಗೂಢಚಾರರ ಮುಖಾಂತರ ಅವರು ಬಳಸುತ್ತಿರುವ ತಂತ್ರಜ್ಞಾನದ ಬಗ್ಗೆ ಮಾಹಿತಿ ಕಲೆ ಹಾಕಿಕೊಂಡು ಸಂಶೋಧನೆ ನಡೆಸಿದರೆ , ಭಾರತ ಯಾರ ಮೇಲೂ ಅವಲಂಭಿತವಾಗದೆ ಸ್ವಂತ ತಂತ್ರಜ್ಞಾನಗಳ ಮೂಲಕ ಅಭಿವೃದ್ಧಿ ಪಡಿಸಿದೆ 

ಆದರೂ ಕೂಡ ಬೇರೆ ದೇಶಕ್ಕೆ ಹೋಲಿಸಿಕೊಂಡರೆ ಭಾರತದಲ್ಲಿ ಆಗುತ್ತಿರುವ ಸಂಶೋಧಾನ ಕಾರ್ಯಗಳು ಬಹಳ ಕಡಿಮೆ . ಭಾರತದಿಂದ ಹೊರಬರುತ್ತಿರುವ  ಸಂಶೋಧನಾ ಕೃತಿಗಳು (research papers ) ಬೇರೆ ದೇಶಗಳಿಗೆ ಹೋಲಿಸಿದರೆ ಬಹಳ ಕಡಿಮೆ . ಇದಕ್ಕೆ ಕಾರಣ ಸಂಶೋಧನಾ ಕ್ಷೇತ್ರಕ್ಕೆ ಬರುತ್ತಿರುವ ಯುವಕರು ಮತ್ತು ಪದವೀಧರರು ಬಹಳ ಕಡಿಮೆ . ಮುಖ್ಯ ಕಾರಣ ಅವರಿಗೆ ಸರಿಯಾದ ಅರ್ಥಿಕ ಪ್ರೋತ್ಸಾಹ ಸಿಗದೇ ಇರುವುದು . ಬಹುತೇಕ ಮಧ್ಯಮ ವರ್ಗದವರೇ ಇರುವ ನಮ್ಮ ದೇಶದಲ್ಲಿ ಯುವಕರು ಪದವಿ ಗಳಿಸಿದ ನಂತರ ಜೀವನ ನಡೆಸಲು ಯಾವುದಾದರು ಒಂದು ಕೆಲಸ ಸಿಕ್ಕಿದರೆ ಸಾಕು ಆನುವ ಮನೋಭಾವನೆ ಇದೆ . ಕೆಲವೇ ಕೆಲವು ಸಂಸ್ಥೆಗಳಲ್ಲಿ (IISC , IIT ,BARC )ಮಾತ್ರ ಸಂಶೋಧನಾ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗುತ್ತಿದೆ . ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಈ ವಿದ್ಯಾರ್ಥಿ ವೇತನವನ್ನು ಇನ್ನು ಹಲವಾರು ವಿಶ್ವವಿದ್ಯಾನಿಲಯಗಳಿಗೆ ವಿಸ್ತರಿಸಿದರೆ ಬಹಳಷ್ಟು ವಿದ್ಯಾರ್ಥಿಗಳಿಗೆ  ಅನುಕೂಲ ಆಗುತ್ತದೆ   ಇಂಥ ಪ್ರತಿಭಾವಂತರಿಗೆ ಸೂಕ್ತ ಅವಕಾಶ ಸಿಕ್ಕರೆ ಭಾರತ ಸಂಶೋಧನಾ ಕ್ಷೇತ್ರದಲ್ಲಿ ಕೂಡ ಭಾರತ ಮಹತ್ತರವಾದ ಸಾಧನೆಯನ್ನು ಮಾಡಬಹುದು . ನಮ್ಮಲ್ಲಿರುವ ಮಾನವ ಸಂಪನ್ಮೂಲ ಮತ್ತು ಜ್ಞಾನ ಸಂಪನ್ಮೂಲವನ್ನು ಸೂಕ್ತವಾಗಿ ಬಳಸಿಕೊಂಡರೆ ಭಾರತ ವಿಶ್ವ ಗುರು ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಸಂಸ್ಕೃತ  ಭಾಷೆಯ ಮೂಲ ಭಾರತ . ಭಾರತ ಮೂಲದ vedic mathematics ಬಗ್ಗೆ ಭಾರತಕ್ಕಿಂತ ಜರ್ಮನಿ ಯಲ್ಲಿ ಆಗುತ್ತಿರುವ ಸಂಶೋಧನೆಗಳೇ ಹೆಚ್ಚು . ಜರ್ಮನಿಯ ೧೪ ವಿಶ್ವವಿದ್ಯಾನಿಲಯಗಳಲ್ಲಿ ಸಂಸ್ಕೃತ ಅಧ್ಯಯನ ಕೇಂದ್ರ ಇದೆ . ಭಾರತದಲ್ಲಿ ಕೇವಲ ಏಳು ಸಂಸ್ಕೃತ  ವಿಶ್ವವಿದ್ಯಾನಿಲಯಗಳಿವೆ . ಭಾರತದಲ್ಲಿ ಸಂಸ್ಕೃತ ಅಧ್ಯಯನಕ್ಕೆ ಹೊತ್ತು ಕೊಟ್ಟರೆ ಅದನ್ನು ಶಿಕ್ಷಣದಲ್ಲಿ ಕೇಸರೀಕರಣ ಎಂಬ ಹಣೆ ಪಟ್ಟಿ ಕಟ್ಟಿ ಅದನ್ನು ವಿರೋಧಿಸುತ್ತಾರೆ ನಮ್ಮ ಪ್ರಗತಿಪರರು ಮತ್ತು ಜಾತ್ಯಾತೀತವಾದಿಗಳು  . ಆದರೆ ಜರ್ಮನಿ ಅಲ್ಲದೆ ಆಸ್ಟ್ರೇಲಿಯ , ಜಪಾನ್ , ಯುರೋಪಿನ ಹಲವಾರು ದೇಶಗಳು ಮತ್ತು ಅಮೇರಿಕಾ ಸಂಸ್ಕೃತ ಶಿಕ್ಷಣಕ್ಕೆ ಹೊತ್ತು ಕೊಡುತ್ತಿದೆ . ನಮ್ಮ ಜ್ಞಾನ ಭಂಡಾರದ ಅಧ್ಯಯನಕ್ಕೆ ಬೇರೆ ದೇಶಗಳು ಕೊಡುತ್ತಿರುವ ಪ್ರಾಮುಖ್ಯತೆಯನ್ನುನಮ್ಮ ದೇಶದಲ್ಲಿ ಕೊಡುತ್ತಿಲ್ಲ . ಇದರ ಬಗ್ಗೆ ಕೂಡ ನಾವು ಯೋಚಿಸಬೇಕಾದ ಅವಶ್ಯಕತೆ ಇದೆ . Vedic mathematics ಬಗ್ಗೆ ಭಾರತಕ್ಕಿಂತ ಬೇರೆ ದೇಶಗಳಿಂದಲೇ ಹೆಚ್ಚು ಸಂಶೋಧನಾ ಕೃತಿಗಳು ಬರುತ್ತಿವೆ . 




 ಇಂದು ಬೆಳಗ್ಗೆ  ನರೇಂದ್ರ ಮೋದಿಯವರು ಭಾಷಣ ಮಾಡುವಾಗ "This is Team India, a team of 125 crore Indians. This is the Team that makes the Nation and takes our Nation to new heights" ಎಂದು ಹೇಳುತ್ತಾರೆ . ಖಂಡಿತ ದೇಶದ ಪ್ರತಿಯೊಬ್ಬ ಪ್ರಜೆಯು ದೇಶದ ಒಳಿತಿಗಾಗಿ ಶ್ರಮ ಪಟ್ಟರೆ , ಒಗ್ಗೂಡಿ ನಡೆದರೆ ದೇಶ ಉನ್ನತ ಸ್ಥಾನಕ್ಕೆ ಏರುತ್ತದೆ . ದೇಶವನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯಲು ಎಲ್ಲರೂ ಶ್ರಮಿಸೋಣ , ಭಾರತವನ್ನು ವಿಶ್ವಗುರು ಮಾಡೋಣ . ಮತ್ತೊಮ್ಮೆ ಎಲ್ಲರಿಗು ಸ್ವಾತಂತ್ಯ ದಿನದ ಶುಭಾಶಯಗಳು .

Pic of National Flag with Emblem location : Vidhana Soudha, Bengaluru
 
       
 

9 comments:

  1. ಗಿರೀಶರೆ,
    ನಿಮಗೂ ಸಹ ಸ್ವಾತಂತ್ರ್ಯದಿನದ ಶುಭಾಶಯಗಳು. ನೀವು ಮಾಡಿದ ಭಾಷಣವು ಉದ್ಬೋಧಕವಾಗಿದೆ ಹಾಗು ಸ್ಫೂರ್ತಿದಾಯಕವಾಗಿದೆ. ಅಭಿನಂದನೆಗಳು.

    ReplyDelete
  2. ಚೆನ್ನಾಗಿದೆ ಗಿರಿ ಭಾಷಣ, ಎಲ್ಲರಲ್ಲಿ ಹುಮ್ಮಸ್ಸು ಮೂಡಿಸುವಂತಿದೆ.

    ReplyDelete
  3. ಉತ್ತಮ ಲೇಖನ.
    ಆದರೆ ಸಂಸ್ಕ್ರುತ ಭಾರತದಲ್ಲಿ ಹುಟ್ಟಿದ ಭಾಷೆಯಲ್ಲ. ಆರ್ಯರೊಂದಿಗೆ ಇಲ್ಲಿಗೆ ಬಂದ ಭಾಷೆ!!! ಉತ್ತರ ಭಾರತ ಹಾಗೂ ಯೂರೋಪಿನ ಹೆಚ್ಚಿನ ಭಾಷೆಗಳ ಮೂಲ ಸಂಸ್ಕ್ರುತದ ಮೂಲ ಭಾಷೆ.

    ReplyDelete
  4. ಕನ್ನಡ ದ ಈ ಭಾಷ ನ super sir

    ReplyDelete