Monday, December 28, 2015

ಕುಪ್ಪಳ್ಳಿ

ಸುಮಾರು ಮೂರು ತಿಂಗಳ ಹಿಂದೆ ಭದ್ರಾವತಿಯ ತಂಗಿಯ ಮನೆಯಲ್ಲಿ ತಿಂಡಿ ತಿಂದು ತೀರ್ಥಹಳ್ಳಿಗೆ ಹೊರಟು ಕವಲೇದುರ್ಗ ಕೋಟೆಗೆ ಹೋಗುವ ಯೋಜನೆ ಹಾಕಿಕೊಂಡಿದ್ದೆ. ನಾನು ತೀರ್ಥಹಳ್ಳಿ ತಲುಪುವ ವೇಳೆಗೆ ಕವಲೇದುರ್ಗ ಹೋಗುವ ಬಸ್ ಅದಾಗಲೇ ಹೊರಟು ಹೋಗಿತ್ತು . ಮತ್ತೆ ಮಧ್ಯಾಹ್ನ ಎರಡು ಘಂಟೆಗೆ ಬಸ್ ಇದ್ದಿದ್ದರಿಂದ ಯೋಜನೆಯನ್ನು ಬದಲಾಯಿಸಿ ಕುಪ್ಪಳ್ಳಿ ಕಡೆಗೆ ಹೊರಟೆ. 

ತೀರ್ಥಹಳ್ಳಿಯಿಂದ ಸುಮಾರು ೧೮ ಕಿ.ಮೀ ದೂರದಲ್ಲಿ ಕುಪ್ಪಳ್ಳಿ ಇದೆ. ಬಸ್ಸಿನಿಂದ ಇಳಿದ ಕೂಡಲೆ ಕುಪ್ಪಳ್ಳಿಗೆ ಹೋಗುವ ನಿರ್ದೇಶನ ಫಲಕ ಸಿಗುತ್ತದೆ. ಅಲ್ಲಿಂದ ಕವಿಮನೆ ತಲುಪಬೇಕಾದರೆ ಸುಮಾರು ೨ ಕಿ.ಮೀ ದೂರ ನಡೆದು ಹೋಗಬೇಕು.


ಈ ಸ್ಥಳದಿಂದ ಸುಮಾರು ೧ ಕಿ. ಮೀ ಸಾಗಿದರೆ ಮೊದಲು ಸಿಗುವುದು ಪೂರ್ಣಚಂದ್ರ ತೇಜಸ್ವಿ ಅವರ ಸಮಾಧಿ . ಅದರ ಎದುರಲ್ಲೇ ಕವಿಶೈಲಕ್ಕೆ ಹೋಗುವ ದಾರಿಯೂ ಇದೆ. 

Way to KaviShaila



ತೇಜಸ್ವಿ ಸಮಾಧಿ 

ಇಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಕುವೆಂಪು ಜನ್ಮಶತಮಾನೋತ್ಸವ ಭವನ ಸಿಗುತ್ತದೆ. 'ಓ ನನ್ನ ಚೇತನ , ಆಗು ನೀ ಅನಿಕೇತನ. ಎಂಬ ಕುವೆಂಪ ಅವರ ಸುಪ್ರಸಿದ್ಧ ಸಾಲು ಈ ಭವನದ ಮುಖ್ಯದ್ವಾರದಲ್ಲಿ ನಮ್ಮನ್ನು ಸ್ವಾಗತಿಸುತ್ತದೆ. ಈ ಭವನವು ಯಾತ್ರಿ ನಿವಾಸವು ಕೂಡ ಆಗಿದ್ದು ಇದರ ಒಳಗೆ ಪ್ರತಿ ಗೋಡೆಯಲ್ಲೂ ಕುವೆಂಪು ಅವರ ಹಲವಾರು ಉಲ್ಲೇಖಗಳನ್ನು ಕೆತ್ತಲಾಗಿದೆ. ಕುವೆಂಪು ಮಲ್ಟಿ ಮೀಡಿಯಾ ಹಾಲ್ ಮತ್ತು ತೇಜಸ್ವಿ ಗ್ಯಾಲರಿ ಕೂಡ ಇದ್ದು , ತೇಜಸ್ವಿ ಅವರ ಹಲವಾರು ಪಕ್ಷಿ ಛಾಯಾ ಚಿತ್ರಗಳ ಪ್ರದರ್ಶನ ಇದೆ. ಅಲ್ಲದೆ ಕುವೆಂಪು ಅವರ ಜೀವನದ ಕೆಲವು ಘಟನೆಗಳು ಮತ್ತು ಹಲವಾರು ಹಿರಿಯ ಸಾಹಿತಿಗಳು ಮತ್ತು ರಾಜಕಾರಣಿಗಳ ಜೊತೆ ಇರುವ ಛಾಯಾಚಿತ್ರಗಳು ಕೂಡ ಪ್ರದರ್ಶನಕ್ಕಿವೆ . ಈ ಪ್ರದೇಶದಲ್ಲಿ ಕುವೆಂಪು ಅವರ ಹಲವಾರು ಕವಿತೆಗಳನ್ನು ಕೆತ್ತಲಾಗಿದ್ದು , ಅವರ ಕಾದಂಬರಿಗಳ  ಮುಖ್ಯ ಪಾತ್ರಗಳಾದ ನಾಯಿಗುತ್ತಿ ಮತ್ತು ಹೆಗ್ಗಡತಿಯ ಕಲಾಕೃತಿ ಕೂಡ ಇದೆ . ಅಲ್ಲಿಂದ ಸ್ವಲ್ಪ ದೂರ ಸಾಗಿದರೆ ಸಿಗುವುದು ಕವಿಮನೆ. ಕುವೆಂಪು ಅವರು ಹುಟ್ಟಿ ಬೆಳೆದಂತಹ ಮನೆ . ಈಗ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವು ಇದನ್ನು ಕುವೆಂಪು ಸ್ಮಾರಕವನಾಗಿ ಪರಿವರ್ತಿಸಿ ಅದರ ರೂಪುರೇಷೆಗಳನ್ನು ನೋಡಿಕೊಳ್ಳುತ್ತಿದೆ. 

ಕುವೆಂಪು ಜನ್ಮಶತಮಾನೋತ್ಸವ ಭವನ 




Thejaswi Gallery

ಮಲೆನಾಡಿನ ಹಸಿರಿನ ನಡುವೆ ಇರುವ ಈ ಕವಿಮನೆಯು ಮಲೆನಾಡಿನ ವಿಶಿಷ್ಟ ವಾಸ್ತುಶಿಲ್ಪವನ್ನು ಹೊಂದಿದೆ. ಈ ಮನೆಯ ಒಳಗೆ ಛಾಯಾಚಿತ್ರ ತೆಗೆಯುವುದು ನಿಷೇದ ಇರುವ ಕಾರಣ ಯಾವುದೇ ಛಾಯಾಚಿತ್ರವನ್ನು ಈ ಲೇಖನದಲ್ಲಿ ಸೇರಿಸಲಾಗುತ್ತಿಲ್ಲ. ಈ ಮನೆಯ ಕೆಲ ಮಹಡಿಯಲ್ಲಿ ಹಲವಾರು ಹಳೆಯ ಮನೆ ಬಳಕೆ ವಸ್ತುಗಳು ಪ್ರದರ್ಶನಕ್ಕಿವೆ. ಅದರಲ್ಲಿ ಮುಖ್ಯವಾದದ್ದು ಕುವೆಂಪ ಅವರ ಮಾಡುವೆ ಆದಂತಹ ಮಂಟಪ , ಅವರ ಲಗ್ನ ಪತ್ರಿಕೆ , ದವಸ ಧಾನ್ಯಗಳನ್ನು ಶೇಕರಿಸಿ ಇದುತ್ತಿದ್ದಂತಹ ಮರದ ಡಬ್ಬಿಗಳು  ತೊಟ್ಟಿಲು , ಅಡುಗೆ ಮನೆಯ ಪಾತ್ರೆಗಳು , ಶಾವಿಗೆ ಮಣೆ , ಮಜ್ಜಿಗೆ ಕಡೆಯುವ ಪಂತು ಅಥವಾ ಕಡೆಗೋಲು , ಹೊಗೆ ಅಟ್ಟ ಇತ್ಯಾದಿ . ಅಲ್ಲದೆ ಬಾಣಂತಿ ಮನೆ ಎಂಬ ಇನ್ನೊಂದು ಕೋಣೆ ಕೂಡ ಇದೆ . 


ಮೆಟ್ಟಿಲುಗಳನ್ನು ಏರಿ ಮೊದಲನೇ ಮಹಡಿ ತಲುಪಿದರೆ ಅಲ್ಲಿ ಕುವೆಂಪು ಅವರು ಬಳಸುತ್ತಿದ್ದ ಕನ್ನಡಕ ಛತ್ರಿ ಪೆನ್ನು, ಬಾಚಣಿಗೆ , ಉರು ಗೋಲು , ಕೋಟು ಮುಂತಾದ ವಸ್ತುಗಳಿವೆ . ಅಲಲ್ದೆ ಅವರ ಪದ್ಮ ಭೂಷಣ ಮತ್ತು ಪದ್ಮ ವಿಭೂಷಣ , ಕರ್ನಾಟಕ ರತ್ನ ಪ್ರಶಸ್ತಿಗಳು ಕೂಡ ಇದೆ . ಎರಡನೇ ಮಹಡಿಯಲ್ಲಿ ಅವರ ಕೃತಿಗಳು ಮತ್ತು ಎಷ್ಟೋ ವಿಶ್ವವಿದ್ಯಾಲಯಗಳಿಂದ ದೊರಕಿದ ಗೌರವ ಡಾಕ್ಟರೇಟ್ ಪದವಿಗಳು ಕೂಡ ಅಲ್ಲಿ ಪ್ರದರ್ಶನಕ್ಕಿದೆ . 

ಕವಿ ಮನೆಯ ಹೊರಗೆ ಇನ್ನೊಂದು ಸಣ್ಣ ಮನೆ ಇದ್ದು ಅಲ್ಲಿ ಕೃಷಿ ಸಲಕರಣೆಗಳನ್ನು ಇಡಲಾಗಿದೆ. 

ಅಲ್ಲಿಂದ ಸೀದಾ ನನ್ನ ನದಿಗೆ ಕವಿ ಶೈಲದ ಕಡೆಗೆ ತಿರುಗಿತು . ಕವಿಮನೆಯ ಪಕ್ಕದಲ್ಲೇ ಕವಿಶೈಲಕ್ಕೆ ಕಾಲುದಾರಿ ಇದೆ, 

Kavimane



Way to Kavishaila from Kavimane

Signboard

Entrance of Kavishaila

ಕವಿ ಸಮಾಧಿ 


Signatures of legends

ಕವಿಶೈಲದಲ್ಲಿ ಕುವೆಂಪು ಅವರ ಸಮಾಧಿ ಇದ್ದು , ಅಲ್ಲಿ ಒಂದು ಕಲ್ಲಿನ ಮೇಲೆ ಕುವೆಂಪ ಅವರ ಹಸ್ತಾಕ್ಷರ ಇದ್ದು, ಅವರ ಗುರುಗಳಾದ ಟಿ .ಎಸ್  ವೆಂಕಣ್ಣಯ್ಯ ಮತ್ತು ಬಿ.ಎಮ್.ಶ್ರಿ ಅವರ ಸಹಿ ಕೂಡ ಇದೆ. ಅಲ್ಲದೆ ಪೂರ್ಣಚಂದ್ರ ತೇಜಸ್ವಿ ಅವರದ್ದು ಕೂಡ . 

ಕವಿಮನೆಯಲ್ಲಿ ಕುವೆಂಪು ಮತ್ತು ತೇಜಸ್ವಿ ಅವರ ಪುಸ್ತಕಗಳು ಕೂಡ ಮಾರಟಕ್ಕೆ ಲಭ್ಯವಿದೆ.

ಹೀಗೆ ಕುಪ್ಪಳ್ಳಿಯ ಸೊಬಗನ್ನು ಸವಿದು ಇಬ್ಬರು ಮಹಾನ ಲೇಖಕರ ಅಸ್ತಿತ್ವವನ್ನು ಅರಿತು ಅಲ್ಲಿಂದ ಕವಲೇದುರ್ಗದ ಕಡೆಗೆ ನನ್ನ ಏಕಾಂಗಿ  ಪಯಣ ಸಾಗಿತು . ಮುಂದಿನ ಸಂಚಿಕೆಯಲ್ಲಿ ಕವಲೇದುರ್ಗದ ಇತಿಹಾಸವನ್ನು ಮತ್ತು ನನ್ನ ಅನುಭವಗಳನ್ನು ಕೆಲವು ಛಾಯಾಚಿತ್ರಗಳ ಜೊತೆ ಹಂಚಿಕೊಳ್ಳುತ್ತೇನೆ. 

1 comment:

  1. ಚೆಂದದ ಲೇಖನ ಗುರುಗಳೇ. ವರ್ಷಗಳ ಹಿಂದೆ ಕುಪ್ಪಳ್ಳಿಗೆ ಹೋದ ನೆನಪು ಮರುಕಳಿಸಿತು. ಕವಲೇದುರ್ಗಕ್ಕೆ ಹೋದ ಲೇಖನ ಬರಲೇ ಇಲ್ಲ. ನಾನೂ ಬರೀಬೇಕಂತಿದ್ದೆ. ಇನ್ನೂ ಬರೆಯಲಾಗಿಲ್ಲ. ಯಾರು ಮೊದಲು ಬರೀತೀವೋ ನೋಡೋಣ ;-)


    ReplyDelete