Wednesday, January 25, 2012

ಕಾಯಿ ಚಟ್ನಿ ಅನ್ನ ಮತ್ತು ಭಂಗಿ ಸೊಪ್ಪು

೫ನೆ ಕ್ಲಾಸ್ ತನಕ ಹಾಸನದಲ್ಲಿ ಓದುತ್ತಿದ್ದ ನನಗೆ ಅನಿವಾರ್ಯ ಕಾರಣಗಳಿಂದಾಗಿ ಮುಂದಿನ ಓದಿಗೆ ಊರಿಗೆ ವಾಪಸ್ ಬರಬೇಕಾಗಿ ಬಂತು.ಅಲ್ಲಿವರೆಗೂ ದೊಡ್ಡಪ್ಪನ ಮನೆಯಲ್ಲಿ ಓದಿಕೊಂಡಿದ್ದ ನಾನು ಊರಿಗೆ ಬರುತ್ತಿದ್ದದ್ದು ದಸರಾ ಮತ್ತು ಬೇಸಿಗೆ ರಜಾಕ್ಕೆ ಮಾತ್ರ,ಮತ್ತೆ ಅದೇ ರಜದಲ್ಲಿ ಅಜ್ಜಿ ಮನೆ,ನೆಂಟರು ಮನೆ ಎಲ್ಲ ಸುತ್ತಾಡದು..ಹೀಗೆ ಹಾಸನದಿಂದ ನಮ್ಮೂರಿಗೆ ಬಂದಾಗ ಹಳ್ಳಿಯ ಯಾವುದೇ ಕೆಲಸಗಳು ನನಗೆ ಬರ್ತಿರಲಿಲ್ಲ..ಆಮೇಲೆ ಒಂದೊಂದಾಗಿ ಕಲಿಯುತ್ತಾ ಹೋದೆ,ದನ ಕಟ್ಟಕ್ಕೂ ಬರ್ತಿರಲಿಲ್ಲ,ನಮ್ಮ ಅಪ್ಪ ಅಮ್ಮ ಅದೆಷ್ಟು ಸಾರಿ ಹೇಳಿಕೊಟ್ಟರು ನಂದು ಅದೇ ಹಣೆ ಬರಹ.ನಾನೇನಾದ್ರು ಹೊಲದಲ್ಲಿ ಹಸು ಕಟ್ಟಿ ಬಂದ್ರೆ ಅದು ಕಿತ್ತ್ಕೊಂಡು ಎಲ್ಲಾದರು ಹೊಗಿರದು,ಕೆಲವೊಮ್ಮೆ ಬೇರೆಯವರ ತೋಟಕ್ಕೆ ಕೂಡ..ಅದೇನ್ ನಾಯಿ ಗಂಟು ಕಟ್ತಾನೆ ಅಂತ ನಮ್ಮಮ್ಮ ಹೆಳವರು.ಕೊನೆಗೂ ದನ ಕಟ್ಟದು ಕಲ್ತಿದ್ದಾಯಿತು.ಹಾಗೆ ಮನೆಗೆಲಸ ತೋಟದ ಕೆಲಸ,ನೀರು ಆಯಿಸುವುದು,ಕಾಯಿ ಕೆಡವುವುದು ಎಲ್ಲ ಕಲಿತೆ.ಅದೇ ಅಲ್ಲದೆ ಎಂದೂ ಆಡಿರದ ಗಿಲ್ಲಿ ದಾಂಡು,ಮರ ಕೋತಿ ಆಟ ಮುಂತಾದ ಹಳ್ಳಿ ಆಟಗಳು ಆಡುತ್ತಿದ್ದದ್ದು ,ಹೀಗೆ ಹಳ್ಳಿ ಜೀವನ ಸಂಪ್ರದಾಯಕ್ಕೆ ಹೊಂದಿಕೊಳ್ಳುತ್ತಿದ್ದೆ. ನಮ್ಮ ಊರಿನವರೇ ಆದರೂ  ಎಷ್ಟೋ ಜನ ನಂಗೆ ಗೊತ್ತೇ ಇರಲಿಲ್ಲ,ಸಂಪರ್ಕವೇ ಇರದ ಕಾರಣ.ಮನೆ ಪಕ್ಕದಲ್ಲೇ ನಮ್ಮೂರ ಶಾಲೆ ಇತ್ತಾದರೂ ನಾನು ಹಳೇಬೀಡಿಗೆ ಹೋಗುತ್ತಿದ್ದೆ.ಆದರೆ ಒಬ್ಬೊಬ್ಬರಾಗಿ ಮನೆ ಪಕ್ಕದ ಸ್ಕೂಲಿನ ಹುಡುಗರು ಪರಿಚಯ ಆಗತೊಡಗಿದರು.ಸಿಟಿಗಿಂತ ಹಳ್ಳಿ ವಾತಾವರಣವೇ ನನಗೆ ಇಷ್ಟ ಆಗುತಿತ್ತು.

 ಅಷ್ಟಕಷ್ಟೇ ಪರಿಚಯ ಇದ್ದ ಹುಡುಗರೆಲ್ಲ ಆಗ ತುಂಬ ಪರಿಚಯ ಆದರು.ಅವರ ಗುಂಪಿಗೆ ನಾನೂ ಸೇರಿಕೊಂಡೆ.ಮತ್ತೆ ಅವರೊಂದಿಗೆ ಆಟಗಳು ಶುರುವಾದವು.ನಮ್ಮ ಊರಿನ ಹತ್ತಿರ ಪುಷ್ಪಗಿರಿ(ಹಳೇಬೀಡಿನಿಂದ ೨ ಕಿಮಿ) ಅಂತ ಬೆಟ್ಟ ಇದೆ.ಅಲ್ಲಿ ಮಲ್ಲಿಕಾರ್ಜುನ ಸ್ವಾಮಿ ಮತ್ತು ಪಾರ್ವತಮ್ಮ ದೇವಸ್ಥಾನ,ಅಲ್ಲದೆ  ವೀರಭದ್ರೇಶ್ವರ ದೇವಸ್ಥಾನ ಇದೆ .ತುಂಬ ಹಳೆಯದು.ಅಲ್ಲಿನ ಅರ್ಚಕರುಗಳು ನಮ್ಮ ಉರು ಮತ್ತು ನಮ್ಮ ಪಕ್ಕದ ಊರಿನವರು.ಅಲ್ಲಿನ ಪದ್ದತಿ ಹೇಗೆ ಅಂದರೆ ವಾರಕ್ಕೆ ಒಂದು ಮನೆಯವರು ಪೂಜೆ ಮಾಡಬೇಕು.ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ದತಿ.ಮಂಗಳವಾರದಿಂದ ಮುಂದಿನ ಸೋಮವಾರದವರೆಗೆ ಒಂದು ಮನೆಯವರು ಪೂಜೆ ಮಾಡಬೇಕು,ಸೋಮವಾರ ಸಂಜೆ ಅವರು ಪೂಜೆಯನ್ನು ಇನ್ನೊಬ್ಬರಿಗೆ ವಹಿಸಿಕೊಡಬೇಕು.ಅಧಿಕಾರ ಹಸ್ತಾಂತರಿಸಿದ ಹಾಗೆ,ದೇವಸ್ಥಾನದ ಬೀಗ,ಪೂಜಾ ಸಾಮಗ್ರಿಗಳು ಎಲ್ಲವನ್ನು .ಅಲ್ಲಿ ಪೂಜೆ ಮಾಡುವ ಪ್ರತಿಯೊಬ್ಬರಿಗೂ ಒಂದಿಷ್ಟು ಜಮೀನು ಕೊಟ್ಟಿದ್ದಾರೆ.ಎಲ್ಲರು ಅದನ್ನ "ದೇವರ ಹೊಲ" ಅಂತ ಕರೀತಾರೆ.ನಮ್ಮ ತಾತ ಸುಮಾರು ೭೫ ವರ್ಷದ ಹಿಂದೆ ಈ ಊರಿಗೆ ಬಂದು ಓಲೆ ಹಾಕಿದ್ದರಿಂದ,ಅದಕ್ಕೂ ಮುಂಚೆ ಇಂದಲೂ ಈ ಪದ್ದತಿ ಇದ್ದರಿಂದ ನಮ್ಮ ಮನೆಯವರಿಗೆ ಅಲ್ಲಿ ಪೂಜೆ ಮಾಡುವ ಅವಕಾಶ ಇಲ್ಲ.ನಮ್ಮ ಉರಿನಲ್ಲಿ ಸುಮಾರು ೪೦ ಮನೆ,ಪಕ್ಕದ ಉರಿನಲ್ಲಿ ೨೦ ಮನೆಯವರು ಅಲ್ಲಿ ಪೂಜೆ ಮಾಡುತ್ತಾರೆ.ಹೀಗೆ ಒಬ್ಬರಾದ ನಂತರ ಇನ್ನೊಬ್ಬರು ಹೀಗೆ ಸರಪಳಿ ಸಾಗುತ್ತದೆ.ಎಲ್ಲರದು ಮುಗಿದ ಮೇಲೆ ಮತ್ತೆ ಮೊದಲಿಂದ.

ಸೋಮವಾರ ಸಂಜೆ ಬೆಟ್ಟ ಹತ್ತಿದರು ಎಂದರೆ ಮುಂದಿನ ಸೋಮವಾರ ಬೇರೆಯವರಿಗೆ ವಹಿಸಿ ಕೊಟ್ಟು ಮಂಗಳವಾರ ಬೆಳಗ್ಗೆನೇ ಕೆಳಗೆ ಇಳಿಯುತ್ತಿದ್ದದ್ದು.ಯಾಕಂದ್ರೆ ದೇವಸ್ಥಾನ ಕೂಡ ಅವರೇ ಕಾಯಬೇಕಿತ್ತು,ಅವರು ಅಲ್ಲೇ ಮಲಗೆಬೇಕಿತ್ತು.ಅವರ ಜೊತೆ ಅಕ್ಕ ಪಕ್ಕದ ಮನೆಯವರು,ಊರಿನ ಇನ್ನು ಅನೇಕರು ಹೋಗುವುದು ವಾಡಿಕೆ.ಒಬ್ಬರ ಮನೆ ಪೂಜೆ ಇದ್ದಾಗ ಮತ್ತೊಬ್ಬರು,ಅವರ ಮನೆಯದ್ದು ಇದ್ದಾಗ ಇವರು ಹೋಗುತ್ತಿದ್ದರು.ಆಗ ಬೇಸಿಗೆ ರಜದಲ್ಲಿ ನಾನೂ ಎಲ್ಲಿಗೂ ಹೋಗದಿದ್ದರೆ,ನಮ್ಮ ಸ್ನೇಹಿತರ ಮನೆಯವರ ಪೂಜೆ ಇದ್ದಾಗ ನಾನೂ ಅವರ ಜೊತೆ ಹೋಗುತ್ತಿದ್ದೆ..ಪ್ರತಿ ದಿನ ರಾತ್ರಿ ಗುಂಪು ಗುಂಪಾಗಿ ಹೋಗುತ್ತಿದ್ದೆವು,ಜೊತೆಗೆ  ಹೊದಿಯಲು ಬೆಡ್ ಶೀಟ್ ಎಲ್ಲ ತಗಂಡು ಹೋಗ್ತಿದ್ವಿ.ನಮ್ಮ ಜೊತೆ ದೊಡ್ಡವರೆಲ್ಲ ಬರ್ತಿದ್ರು ,ಆದರೂ ನಮಗೆ ರಾತ್ರಿ ಬೆಟ್ಟ ಹತ್ತಲು ಹೆದರಿಕೆ.ನಮ್ಮ ಹುಡುಗರೆಲ್ಲ  ಹೇಳುತ್ತಿದ್ದ ಕಥೆಗಳು,ನಮ್ಮಜ್ಜಿ ಹೇಳಿದ್ದ ಕಥೆಗಳು ಹಾಗಿದ್ದವು..ಆ ಬೆಟ್ಟದಲ್ಲಿ ಚಿರತೆಗಳಿಗೂ ಕಾಡು ಕಿರುಬಗಳಿಗೂ ಯಾವುದೇ ಕೊರತೆ ಇರಲ್ಲಿಲ.ಎಷ್ಟೋ ಸಾರಿ ಊರಿನ ಒಳಗೆ  ಕೂಡ ಬಂದ ಉದಾಹರಣೆಗಳಿವೆ.ನಮ್ಮ  ಮಾವ ಒಬ್ಬರು ಸಂಜೆ ಸಮಯದಲ್ಲಿ ಹೊಲದಲ್ಲಿ ಇದ್ದಾಗ,ಚಿರತೆ ಕಂಡು,ಬೆಳಗ್ಗೆವರೆಗೂ ಕಬ್ಬಿನ ಗದ್ದೆ ಒಳಗೆ ಇದ್ದು ಬಂದಿದ್ದು ಎಲ್ಲ ಕೇಳಿದ್ದೆವು,ಅಲ್ಲದೆ ಹೀರೆಗೌಡ ಅಂತ ಅವರ ಮಗ ದನ ಕಾಯಲು ಅದೇ ಗುಡ್ಡಕ್ಕೆ  ಹೋಗಿದ್ದಾಗ ಒಂದು ಚಿರತೆ ಮರಿ ಸಿಕ್ಕಿತ್ತು,ಬೆಕ್ಕಿನಷ್ಟು ಇತ್ತು,ಇನ್ನೂ ಮರಿ.ಅದನ್ನವರು ತಗಂಡು ಬಂದು ಮನೇಲಿ ಇಟ್ಕಂದಿದ್ದರು.ನಮಗೆಲ್ಲ ಹೆದರಿಕೆ ಅವಾಗ.ಇದು ದೊಡ್ಡದಾದ ಮೇಲೆ ಮನುಷ್ಯರನ್ನು ತಿನುತ್ತೆ ಅಂತ.ಆಗ ಕೆಲವರು ಅದಕ್ಕೆ ಮಾಂಸದ ರುಚಿ ತೋರಿಸದೆ ಇದ್ದರೆ ಆಯಿತು ಅಂತಿದ್ದರು.ಸುಮಾರು ೧೫ ದಿನ ಆದ ಮೇಲೆ ಅರಣ್ಯ ಇಲಾಖೆ ಅವ್ರಿಗೆ ಗೊತ್ತಾಗಿ  ಬಂದು ಅದನ್ನ ತಗಂಡು ಹೋದರು.ಅಷ್ಟೊತ್ತಿಗೆ ಅದರ ಪಾಡು ಚಿಂತಾನಜನಕ ಆಗಿತ್ತು...ಥೇಟ್ ಬೆಕ್ಕಿನ ಹಾಗೆ... ಅಕ್ಕ ಪಕಕ್ದ ಊರಿನ ಜನ ಎಲ್ಲ ನೋಡ್ಕಂಡು ಹೋಗಕ್ಕೆ ಬರ್ತಿದ್ರು.. ಬಂದವರು ಸುಮ್ನೆ ನೋಡ್ತಿದ್ರ,ಅದು ಬಿಟ್ಟು ಮುಟ್ಟಿ ,ಕೆಲವರು  ಮುದ್ದು ಮಾಡಿ,ಇನ್ನು ಕೆಲವರು ಗಂಡೋ ಹೆಣ್ಣೋ ಅಂತ ಉಲ್ಟಾ ಮಾಡಿ ನೋಡದು,ಹೀಗಾಗಿ ಆ ಚಯಾರ್ತೆ ಬೆಕ್ಕಿನಂತೆ ಆಗಿತ್ತು.. ಇವನ್ನೆಲ್ಲ ಕಣ್ಣಾರೆ ಕಂಡಿದ್ದರಿಂದ ಸ್ವಲ್ಪ ಹೆದರಿಕೆ ಆಗ್ತಿತ್ತು,ಆಗ ನಮ್ಮ ಜೊತೆ ಇದ್ದ ದೊಡ್ಡವರೆಲ್ಲ ಇಷ್ಟು ಜನ ಇದ್ದೀವಿ ,ಒಂದು ಚಿರತೆನ ಹೊಡ್ಯಕ್ಕೆ ಆಗಲ್ವೆನ್ರುಲ ಅಂತ ಬಹಳ ಧೈರ್ಯವಾಗಿ ಹೇಳ್ತಿದ್ದರು.ನಮ್ಮ ಅದೃಷ್ಟಕ್ಕೆ ಒಂದು ದಿನ ಕೂಡ ಯಾವದೇ ಚಿರತೆ ಬರಲಿಲ್ಲ..ಆದರೂ ಬೆಟ್ಟ ಹತ್ತುವಾಗ ನಮ್ಮ ಓರಗೆಯ ಹುಡುಗರೆಲ್ಲ ಈಗ ಚಿರತೆ ಬಂದ್ರೆ ಏನ್ ಮಾಡೋದು,ಯಾವ್ ಕಡೆ ಇಂದ ಬಂದ್ರೆ ಯಾವ್ ಕಡೆ ಓದಿ ಹೋಗ್ಬೇಕು ಅಂತೆಲ್ಲ ಮಾತಾಡ್ತಿದ್ವಿ.ಯಾವಾಗಲೋ ಹಿಂದೆ ನಮ್ಮ ಮನೆ ಕೊಟ್ಟಿಗೆ ಕಿಡಕಿಯಲ್ಲಿ ಇಣುಕಿ ನೋಡ್ತಿತ್ತಂತೆ,ಆಗ ಹಸುಗಳೆಲ್ಲ  ಅರಚಿಕೊಳ್ಳಕ್ಕೆ ಶುರು ಮಾಡಿದ್ವಂತೆ,ಆಗ ಎದ್ದು ನೋಡಿದ್ರೆ ಚಿರತೆ, ಆಮೇಲೆ ಸ್ವಲ್ಪ ಒತ್ತಾದ ಮೇಲೆ ಹೋಯ್ತಂತೆ.ಹೀಗೆ ನಮ್ಮ ಮೆನೆಲಿ ಕೆಲಸಕ್ಕೆ ಇದ್ದ ಆಳುಗಳು ಹೇಳಿದ್ರು.
ಪುಷ್ಪಗಿರಿಯ ಒಂದು ನೋಟ..ಮಲ್ಲಿಕಾರ್ಜುನ ಸ್ವಾಮೀ ದೇವಸ್ಥಾನ

ಅಂಗು ಹಿಂಗು ಬೆಟ್ಟ ಹತ್ತಿ ಹೋಗ್ತಿದ್ವಿ,ಮನೇಲೆ ಉಟ ಮಾಡಿ ಹೋಗ್ತಿದ್ವಿ ಯಾವಾಗಲು,ಆದ್ರೆ ಸೋಮವಾರ ಮಾತ್ರ ಅಲ್ಲೇ ಉಟ.ಬೇರೆ ದಿನ ಹೋದ ಕೂಡಲೇ ದೇವಸ್ಥಾನದ ಒಳಗೆ ಮಲ್ಗದು,ಕೆಲವರು ಅಲ್ಲೇ ಪಕ್ಕದಲ್ಲಿ ಜೆನರೆಟರ್  ರೂಮಿನಲ್ಲಿ ಇಸ್ಪೀಟು ಆಡುತ್ತಿದ್ದರು,ದೇವಸ್ಥಾನದ ಒಳಗೆ ಆಡುವ ಆಗಿರಲಿಲ್ಲ ಹಾಗಾಗಿ .ನಮ್ಮಂಥ ಸಣ್ಣ ಹುಡುಗರಿಗೆ ಅಲ್ಲಿ ಅವಕಾಶ ಇರಲಿಲ್ಲ.ಆದರೂ   ಕಾಡಿ ಬೇಡಿ ಸ್ವಲ್ಪ ಹೊತ್ತು ನೋಡ್ತಿರ್ತಿದ್ವಿ.ಇನ್ನೂ ಕೆಲವರು ಅಲ್ಲಿ ಇಲ್ಲಿ ಸುತ್ತಾಡವ್ರು.ಆಮೇಲೆ ಮಲಗುವುದು.ಗರ್ಭ ಗುಡಿ ಇಂದ ಹೊರಗೆ ಒಂದು ದೊಡ್ಡ ವರಾಂಡ ಥರ ಇತ್ತು.ಅಲ್ಲಿ ಸಂಕ್ರಾಂತಿ ಮತ್ತು ನವರಾತ್ರಿಯಲ್ಲಿ  ದೇವರನ್ನ ಪಟ್ಟಕ್ಕೆ ಕೂರಿಸ್ತಾರೆ.ಅದಕ್ಕಿಂತ ಹೊರಗೆ ಇನ್ನೂ ದೊಡ್ಡ  ವರಾಂಡ   .ಅಲ್ಲಿ ನಂದಿ ವಿಗ್ರಹ ಇತ್ತು.ಅದು ಶಿವನ ದೇವಸ್ಥಾನ ಆದ್ದರಿಂದ ಅಲ್ಲಿ ನಂದಿ ವಿಗ್ರಹ ಇತ್ತು....ಆ ನಂದಿಯ ಮುಂದೆ ಇದ್ದ ಬಾಗಿಲನ್ನು ರಾತ್ರಿ ಮುಚ್ಚುವವರು.ಆ ಬಾಗಿಲಿನ ಚಿಲ್ಕ ಎಷ್ಟು ದಪ್ಪ ಇತ್ತು ಅಂದರೆ ನಮ್ಮ ಕಾಲಿನಷ್ಟು..ಅದಕ್ಕಿಂತ ದಪ್ಪಗೆ ಇದ್ದಿದ್ದು ಮುಖ್ಯ ಬಾಗಿಲಿನ ಚಿಲ್ಕ.ನಾವೆಲ್ಲಾ ಆ ನಂದಿಗಿಂತ ಹಿಂದೆ ಮಲಗುತ್ತಿದ್ದೆವು.ನಂದಿಯ ಮುಂದೆ ಮಲಗುವ ಆಗಿರಲಿಲ್ಲ..ಮತ್ತು ದೇವರ ವಿಗ್ರಹದ ನೇರಕ್ಕೆ ಎಲ್ಲೂ ಮಲಗುವ ಆಗಿರಲಿಲ್ಲ..ನಂದಿಗಿಂತ ಮುಂದೆ ಅಡ್ಡ ಬಿದ್ದು ನಮಸ್ಕಾರ ಕೂಡ ಮಾಡುವ ಆಗಿಲ್ಲ...ಯಾಕೆ ಅಂತ ಕೇಳಿದರೆ ಏನೇನೋ ಕಥೆ ಹೆಳವರು.ನೇರಕ್ಕೆ ಮಲಗಿದರೆ ದೇವ್ರು ಬೇರೆ ಕಡೆಗೆ ನಿಮ್ಮನ್ನ ಒದೆಯುತ್ತೆ ಅಂತೆಲ್ಲ..ಆದ್ರೆ  ಹೆದರಿಕೆಗೆ ನಾವು ಅಲ್ಲಿ ಮಲಗುವ ಸಾಹಸಕ್ಕೆ ಹೋಗ್ತಿರಲಿಲ್ಲ.ಏನಿದ್ರು ಗೋಡೆ ಬದಿಯಲ್ಲಿ ನಮ್ಮ ನಿದ್ರೆ.ಅಷ್ಟು  ದೊಡ್ಡ ಚಿಲ್ಕ ಹಾಕಿ ಮಲಗಿದರೆ ಬೆಳಗ್ಗೆ ಎದ್ದ ಕೂಡಲೇ ನಾವೆಲ್ಲಾ ಊರಿಗೆ ವಾಪಸ್ ಬರ್ತಿದ್ವಿ,ಪೂಜಾರರು ಪೂಜೆಗೆ ತಯಾರಿ ಮಾಡ್ತಿದ್ರು.

ಅಲ್ಲದೆ ಪ್ರತಿ ಹುಣ್ಣಿಮೆ ದಿನ ಭಜನೆ ಎಲ್ಲ ಮಾಡ್ತಿದ್ವಿ.ಅವಾಗ ನೋಡಿರದ ಎಷ್ಟೋ ಸಂಗೀತ ಸಲಕರಣೆಗಳನ್ನು ವಾದ್ಯಗಳನ್ನು ನೋಡಿದ್ದೇ.ಎಷ್ಟೋ ಪದಗಳನ್ನು ಹಾಡುಗಳನ್ನು  ಕಲ್ತಿದ್ದೆ...
ದೇವಸ್ಥಾನದಿಂದ ಇನ್ನೂ ಮೇಲಕ್ಕೆ ಇರುವ ಕೋಡುಗಲ್ಲು

ಆದರೆ ಅವರ ಪೂಜೆಯ ಕೊನೆ ದಿನ ನಾವೆಲ್ಲಾ ಅಲ್ಲಿಗೇ ಊಟಕ್ಕೆ ಹೋಗ್ತಿದ್ವಿ,ಅವತ್ತು ಜಾಸ್ತಿ ಜನ ಬರವ್ರು,ಬೇರೆಯವರಿಗೆ ಪೂಜೆ ವಹಿಸಿಕೊಡುವ ದಿನ..ಅವತ್ತು ಮಂಗಳಾರತಿಗೆ ಬಂದಿದ್ದ ಕಾಯಿಗಳಲ್ಲಿ ಕಾಯಿ ಚಟ್ನಿ ಮಾಡಿ,ಅನ್ನ ಮಾಡಿ ಎಲ್ಲ ಒಟ್ಟಿಗೆ ಮಾಡ್ತಿದ್ವಿ..ಎಲ್ಲ ಅಲ್ಲೇ ಅಡುಗೆ ಮಾಡುತ್ತಿದ್ದದ್ದು.. ಬರಿ ಗಂಡಸರೇ ಸೇರಿ.. ಪ್ರಸಾದ ನಿಲಯ ಅಂಥ ಇದೆ..ಅಲ್ಲಿ ಉತ ಮಾಡ್ತಿದ್ವಿ...ಅಲ್ಲಿ ತಳಿಗೆ ಮಾಡಲು ಜನ ಬಹಳ ಬರ್ತಾರೆ,ಆಗಾಗಿ ಅಲ್ಲಿ ಇಲ್ಲಿ ರುಬ್ಬುವ ಕಲ್ಲು(ಒಳಕಲ್ಲು) ಇತ್ತು.. ನಾವು ಚಟ್ನಿ ರುಬ್ಬುತಿದ್ದದ್ದು ಅಲ್ಲೇ...ಎಲ್ಲರು ಸ್ವಲ್ಪ ಸ್ವಲ್ಪ ಸಮಯ ರುಬ್ಬುವುದು.. ಆ ಕಲ್ಲನ್ನು ಒಬ್ಬರೇ ತಿರುಗಿಸುವುದಕ್ಕೆ ಆಗ್ತಿರಲಿಲ್ಲ.. ಮೂರು ನಾಲ್ಕು ಜನ ಸೇರಿ ಚಟ್ನಿ ಅರಿತಿದ್ವಿ.. ಅಲ್ಲಿ ಮಾಡಿದ ಚಟ್ನಿ ರುಚಿ ಅಂದ್ರೆ ರುಚಿ....ಆ ದಿನ ಕೆಲವರು ಭಂಗಿ ಸೊಪ್ಪು ಸೇದವ್ರು,ಅವಾಗ ಅದು ಏನಂತ ನಮಗೆ ಗೊತ್ತಿರ್ಲಿಲ್ಲ..ಸಿಗರೇಟ್ ಇಂದ ತಂಬಾಕು ತೆಗೆದು ಅದರ ಒಳಕ್ಕೆ ಈ ಭಂಗಿ ಸೊಪ್ಪನ್ನು ಎಡಗೈ ಹಸ್ತದ ಮೇಲೆ ಹಾಕಿ ಬಲ ಹೆಬ್ಬೆಟ್ಟಿನಿಂದ ಉಜ್ಜಿ ಉಜ್ಜಿ ಪುಡಿ ಮಾಡಿ ಅದರ ಬೀಜ ಎಸೆದು ಆ ಪುಡಿಯನ್ನು ಸಿಗರೆಟ್ ಒಳಕ್ಕೆ ತುಂಬಿ ನಂತರ ಅದನ್ನು ಸೇದುತ್ತಿದ್ದರು.. ನಾವೆಲ್ಲಾ ಗೊಂಬೆಗಳ ಹಾಗೆ ನೋಡುತ್ತಾ ಕೂರ್ತಿದ್ವಿ.ಈ ಭಂಗಿ ಸೊಪ್ಪನ್ನು ಹಚ್ಚುವುದು ಬೀಡಿ ಸಿಗರೇಟ್ಅನ್ನು ಹಚ್ಚಿದಷ್ಟು ಸುಲಭ ಇರಲಿಲ್ಲ...ಕೆಲವು ಪಂಟರ್ ಗಳಿದ್ದರು..ಅವರು ಮಾತ್ರ ಬೇಗ ಹಚ್ಚಿ ಬಿಡವ್ರು, ಏನಿಲ್ಲ ಅಂದ್ರು ೧ ನಿಮಿಷವಾದರು ಧಂ ಅನ್ನು ಒಳಕ್ಕೆ ಎಳೆಯ ಬೇಕಿತ್ತು ..ಕೆಲವರು ಉಸಿರು ಕಟ್ಟಿ ಮತ್ತೆ ಇಳಿಸಿ ಮತ್ತೆ ಎಳೆಯುವವರು.. ಅಂತೂ ಇಂತೂ ಬಹಳ ಕಷ್ಟ ಪಡುವವರು...ಕೆಲವರು ಸೇದುವಾಗ ೨ ನಿಮಿಷದವರೆಗೆ ಧಂ ಎಳೆದು ಬಿಡುವವರು..ಹಾಗೆ ಎಳೆಯುತ್ತಿದ್ದವರು ಬಹಳ expert ಗಳು...ಇನ್ನು ಕೆಲವರು ಹೊಸಬ್ಬರು ಇದ್ದರು.ಮಲ್ಲೇಶಣ್ಣ ಅಂತ ಒಬ್ಬರು ಇದ್ದರು,ಅವರು ಅವತ್ತೇ ಮೊದಲೇ ಭಂಗಿ ಸೇದಿದ್ದು... ಎರಡೇ ಧಂ ಎಳೆದಿದ್ದು,ಅದೇನಾಯಿತೋ ಗೊತ್ತಿಲ್ಲ,ಸುಮ್ಮನೆ ನಗ್ತಾ ಕೂತು ಬಿಟ್ರು.ಎಲ್ಲರು ಎದ್ದು "ಲೋ ಮಲ್ಲ ಯಾಕ್ಲ ಏನಾಯ್ತೋ" ಅಂದ್ರು, ಅಸ್ಸಾಮಿ ಎಲ್ಲರ ಮುಖ ನೋಡದು,ನಗದು,ಮಾತು ಗೀತು ಏನು ಇಲ್ಲ.ಹಿಂಗೆ ಸುಮಾರು ೧ ಘಂಟೆಗಿಂತ ಜಾಸ್ತಿ ಇದ್ದರು.ಆಮೇಲೆ ಊಟ ಕೊಟ್ಟರೆ ೩ ಜನ ತಿನ್ನೋ ಅಷ್ಟು ಅನ್ನ ಕಾಯಿ ಚಟ್ನಿ ಒಬ್ಬರೇ ತಿಂದಿದ್ದರು.. ಇದೆಲ್ಲ ಭಂಗಿ ಸೇದಿದ ಕಿಕ್ಕಿನ ಪ್ರಭಾವ ಅಂತೆ..ಅವಾಗ ಕೆಲವರು ಅವರ ಹಳೆ ಅನುಭವಗಳನ್ನ ಹೇಳಿದ್ರು.ಕೆಲವರು ಅಳುತ್ತ ಇದ್ದರಂತೆ,ಕೆಲವರು ಗಂಭೀರವಾಗಿ ಏನು ಮಾತಾಡದೆ ಕೂರುವವರಂತೆ,ಇನ್ ಕೆಲವರು ಬಾಯಿಗೆ ಬಂದಹಾಗೆ ಕಿರುಚವರಂತೆ.ನಮಗೂ ಒಂದು ಧಂ ಎಳೀಬೇಕು,ಹೆಂಗಿರುತ್ತೆ ಅಂತ ನೋಡಬೇಕು ಅನ್ನಿಸದು,ನಮ್ಮ ವಯಸಿನ ಹುಡುಗರಿಗೆಲ್ಲ,ಹಂಗೆನಾದರು ನಾವು ಕೇಳಿದ್ದೇ ಆದರೆ ನಮ್ಮ ಅಪ್ಪಂದಿರು ನಮ್ಮ ಚಮಡ ಸುಲಿದು ಬಿಡವ್ರು ಅನ್ಸುತ್ತೆ ...

ಹೀಗೆ ನಮ್ಮ ಬೆಟ್ಟ ಹತ್ತಿ ಮಲಗಿ ಬರುವ ಕಥೆ ನಡೆಯುತ್ತಿತ್ತು.ನಾನು,ನಮ್ಮ ಗೆಳೆಯರಾದ ದಿವಾಕರ,ಮಂಜ,ದರ್ಶನ್,ದಿಲೀಪ,ವಿಜಯ  ಎಲ್ಲ ಒಟ್ಟಿಗೆ ಹೋಗ್ತಾ ಇದ್ದ್ವಿ..ನಮ್ಮ  ಒಂದು ಗುಂಪು ಇದು .. 
ಹಿಂದಿನಿಂದ ಪುಷ್ಪಗಿರಿ ಹೀಗಿದೆ..
ಈ ಭಂಗಿ ಸೊಪ್ಪು ಅಂದಾಗ ಇನ್ನೊಂದ್ ವಿಷಯ ನೆನಪಾಗುತ್ತೆ.. ನಮ್ಮ ಕಡೆ ಉಗಾದಿ ಮತ್ತೆ ದೀಪಾವಳಿ ಹಬ್ಬದಲ್ಲಿ ಎಡೆ ಇಡದು ,ಹಿರಿಯರಿಗೆ ಇಡದು ಅಂತ ಹೇಳ್ತಾರೆ,ಕೆಲವರು ಬಟ್ಟೆ ಇಡದು ಅನ್ತಾಳು ಹೇಳ್ತಾರೆ..ಅಂದ್ರೆ ಮನೆಯ ಹಿರಿಯರು ತೀರಿ ಹೋಗಿರ್ತಾರಲ್ಲ ಅವರಿಗೆ ಎಡೆ ಇಟ್ಟುವುದು ..ಮನೇಲಿ ಕಳಸ ಹೂಡಿ,ಅದರ ಸುತ್ತ ಹೊಸ ಬಟ್ಟೆ ಇಟ್ಟಿ ಪೂಜೆ ಮಾಡಿ, ಮಾಡಿದ ಅಡುಗೆ ನೈವೇದ್ಯ ಮಾಡಿ ಆಮೇಲೆ ನಮ್ಮ ಉಟ.ಈ ಎಡೆ ಇಡಬೇಕಾದರೆ ಅವರಿಗೆ ಏನೇನ್ ಚಟಗಲಿದ್ವು ಅವನ್ನೆಲ್ಲ ಇಡಬೇಕು.ಕೆಲವರಿಗೆ ಬೀಡಿ ಸಿಗರೇಟ್ ಇಡಬೇಕು,ಇನ್ನು ಮೇಲಾಗಿ ಕುಡಿಯುವರಿಗೆ ಎಣ್ಣೆ ಬಾಟಲಿ ಕೂಡ ಇಡಬೇಕು.ನಮ್ಮ ತಾತನಿಗೆ ಮುಂಚೆ ಬಾಟಲಿ ಇಡವ್ರಂತೆ,ಆಮೇಲೆ ನಮ್ಮಮ್ಮ ಅತ್ತೆ ಎಲ್ಲ ಸೇರಿ ಕಿರಿಕ್ ತಗೆದಿದ್ದಕ್ಕೆ ಅದನ್ನ ಇಡದು ನಿಲ್ಲಿಸಿದರಂತೆ..ಒಂದ್ಸಲ ಯಾವ್ದೋ ಬೀಡಿ ತಂದಿದ್ದೆ,ಆಮೇಲೆ ಪುನಃ ವಾಪಸ್ ಕಳ್ಸಿದ್ರು ಮನೆ ಇಂದ ಯಾಕೆ ಅಂದ್ರೆ ನಮ್ಮ ತಾತ ಸೇದುತ್ತಿದ್ದದ್ದು ಸತೀಶ್ ಬೀಡಿ ಅಂತೆ,ಅದಕ್ಕೆ ಅದನ್ನೇ ಇಡಬೇಕಂತೆ ಹಂಗಾಗಿ.ಜೊತೆಗೆ ಭಂಗಿ ಸೊಪ್ಪು ಕೂಡ ಇಡಬೇಕಿತ್ತು.ಆದರೆ ಈ ಬೀಡಿ ಬಾಟಲಿ ಎಲ್ಲ ಅರಮಾಗಿ ಸಿಗತ್ತೆ,ಈ ಭಂಗಿ ಸೊಪ್ಪು ಎಲ್ಲೂ ಪಬ್ಲಿಕ್ ಆಗಿ ಮಾರೋ ಹಂಗಿಲ್ಲ..ಅದೇ ದೊಡ್ಡ ಗೋಳು ..ನಮ್ಮ ತಾತ ಸೇದವ್ರಂತೆ...ಅದೇನೋ ಹೇಳ್ತಾರಲ್ಲ ಈ ಶಾನುಭೋಗ ತಲೆ ಕೆಟ್ಟು ಹಳೆ ಕಥೆ ಹುಡುಕಿದನಂತೆ,ಹಂಗೆ ನಾನು ನಮ್ಮ ಮನೆ ಪಿಟಾರಿ ತೆಗೆದು ನೋಡ್ತಿದ್ದೆ,ಅವಾಗ ಒಂದು ಸಣ್ಣ ಕೊಳವೆ ಸಿಕ್ಕಿತ್ತು,ಸುಮಾರು ೩ ಇಂಚು ,ಮಣ್ಣಿನದು,ಪೀಪಿ ಥರ ಇತ್ತು ....,ಅದೇನು ಅಂತ ಕೇಳ್ದಾಗ ಅದು ನಮ್ಮ ತಾತ ಭಂಗಿ ಸೇದುವ ಪೀಪಿ ಅಂತೆ..ನಮ್ಮ ಅಜ್ಜನ ಹತ್ತಿರ ಬೆಳ್ಳಿಯದು ತಾಮ್ರದು ಇತ್ತಂತೆ...ಯಾವಾಗಲು ನಮ್ಮ ದೊಡ್ಡಪ್ಪ ತಂದು ಕೊಡವರು ಈ ಹಬ್ಬಕ್ಕೆ..ಅವರು ಕೂಡ ಸೇದುವವರು ಆಗಾಗಿ,ಕೆಲವೊಂದ ಸಲ ಇವರೆಲ್ಲ ಸೇದಿ ಆ ಬೀಜ ಅಲ್ಲೇ ಬಿಸಾಕುವವರು ,ಅದು ಹಂಗೆ ಅಲ್ಲೇ ಗಿಡ ಆಗಿರದು..ಇದೆ ಥರ ನಮ್ಮ ಗದ್ದೆ ಹೊಲದಲ್ಲಿ ಕೂಡ ಆ ಗಿಡ ಬೇಕಾದಷ್ಟು ಇತ್ತು...ಆದರೆ ಅದನ್ನ ಬೆಳೆಯದು illegal ..ಆಗಾಗಿ ಕಂಡ ಕೂಡಲೇ ಕಿತ್ತು ಬಿಸಾಕಿ ಅದಕ್ಕೆ ತೆಂಗಿನ ಸೋಗೆ ಮುಚ್ಚಿ ಬಿಡವ್ರು ನಮ್ಮ ಅಪ್ಪ ಮತ್ತೆ ಚಿಕ್ಕಪ್ಪ...ಆಮೇಲೆ ಅದು ಒಣಗಿದ ಮೇಲೆ ಸುಡದು..

ಪುಷ್ಪಗಿರಿ ಇಂದ ದ್ವಾರಸಮುದ್ರದ(ಹಳೇಬೀಡು) ಒಂದು ವಿಹಂಗಮ ನೋಟ


ಹಿಂಗೆ ಒಂದ್ಸಲ ಒಂದು ಹಬ್ಬಕ್ಕೆ ನಮ್ಮ ದೊಡ್ಡಪ್ಪ ಇರಲಿಲ್ಲ,ಆಗಾಗಿ ಈ ಭಂಗಿ ಸೊಪ್ಪು ಬೇಕಿತ್ತಲ್ಲ,ನಮ್ಮ ಅಪ್ಪ ಇದ್ದವರು ಮರಿ ಆ ಅಂಗಡಿಲಿ ೧೦ ರುಪಾಯಿದು ತಗಂಡು ಬಾ ಅಂದ್ರು,ಹಳೆಬೀಡಿನ ಹತ್ತಿರದ ಉರು.ನಮ್ಮ ಅಮ್ಮ ರೀ ,ಆ ಹುಡುಗನ್ನ ಕಳಿಸಿದರೆ ಅವರು ಕೊಡಬೇಕಲ್ಲ,ನೀವು ಹೋಗಿ ತನ್ನಿ ಅಂದ್ರು.ಏ ಕೊಡ್ತಾನೆ ಬಿಡೆ ಅವ್ನು ಅಂತ್ಹೇಳಿ ನನ್ನನ್ನೇ ಕಳ್ಸಿದ್ರು.ನಾನಿದ್ದವನು ರೀ ದುಡ್ಡು ಕೊಟ್ಟರೆ ಯಾಕ್ ಕೊಡಲ್ಲ ಅಂತ ನಮ್ಮ ತಾಯಿಗೆ ದಬಾಯಿಸಿ ಹೋದೆ..ಆಗ ನನಗಿನ್ನು ಈ ಭಂಗಿ ಸೊಪ್ಪಿನ ಬಗ್ಗೆ ಗೊತ್ತಿರಲಿಲ್ಲ..ಏನು ಅಂತ ಕೇಳೆ ಇರಲಿಲ್ಲ.. ಮಾಮೂಲಿ ದಂಟಿನ ಸೋಪ್ಪೋ.ಮೆಂತ್ಯ ಸೋಪ್ಪೋ ಅನ್ಕಂಡಿದ್ದೆ..ಸೀದಾ ಹೋದವನೇ ಅಂಗಡಿ ಮುಂದೆ ಸೈಕಲ್ ನಿಲ್ಲಿಸಿ "ಅಂಕಲ್ ೧೦ ರುಪಾಯಿ ಭಂಗಿ ಸೊಪ್ಪು ಕೊಡಿ " ಅಂದೇ..ಬಹಳ ಗಂಭೀರವಾಗಿ ಕೇಳಿದ್ದೆ...ಅದೊಂದು ಸಣ್ಣ ಪೆಟ್ಟಿಗೆ ಅಂಗಡಿ.. ಆ ಅಂಗಡಿಯಾತನಿಗೆ ಕಾಲಿರಲಿಲ್ಲ..ನನಗೆ ಅದೇ ಗುರುತು ನಮ್ಮಪ್ಪ ಹೇಳಿ ಕಳ್ಸಿದ್ದು..ಆ ಅಂಗಡಿ ಮುಂದೆ ತ್ರಿ ಚಕ್ರ ಸೈಕಲ್ ಇರತ್ತೆ ಅಂತ...ನಾನು ಹಾಗೆ ಕೇಳಿದ್ದೇ ತಡ ದುರುಗುಟ್ಟಿಕೊಂಡು ನೋಡಕ್ಕೆ ಶುರು ಮಾಡಿದ..ನನಗೆ ಫುಲ್ ಹೆದರಿಕೆ...."ಯಾರ್ ಕಳ್ಸಿದ್ದು ನಿನ್ನನ್ನ,ಯಾವೂರು ನಿಂದು,ನಮ್ಮ ಹತ್ತಿರ ಸಿಗಲ್ಲ ಅದು" ಅಂತ ಜೋರಾಗಿ ಹೇಳಿದ..ಪಕ್ಕದಲ್ಲೇ ಇನ್ನೊಬ್ಬರು ಏನೋ ತಗಳ್ತಿದ್ದರು,ಅವರಿಗೆ ಚಿಲ್ಲರೆ ಕೊಟ್ಟು ಕಳಿಸಿದ ಮೇಲೂ ನಾನು ಅಲ್ಲೇ ನಿಂತಿದ್ದೆ"ಅಂಕಲ್...." ಅಂತ ಗೋಗರೆಯುತ್ತಾ ..ನಮ್ಮಪ್ಪ ಹೇಳಿದ್ರು ಇಲ್ಲಿ ಬಿಟ್ರೆ ಬೇರೆ ಎಲ್ಲೂ ಸಿಗಲ್ಲ ಕೊಡಿ ಪ್ಲೀಸ್ ಅಂತ..ಅವರು ಅದಾದ್ ಮೇಲೆ ಸ್ವಲ್ಪ ಒತ್ತು ಬಿಟ್ಟಿ ಬಾ ಇಲ್ಲಿ ಯಾರು ಇಲ್ದೆ ಇದ್ದಾಗ ಅಂತ ನಿಧಾನಕ್ಕೆ ಗದರಿಸಿ ಕಳ್ಸಿದ್ರು.. ನಾನು ಅಲ್ಲೇ ಒಂದೆರಡು ಸುತ್ತು ಸೈಕಲ್ಲಿನಲ್ಲಿ ತಿರುಗಿ ಬಂದೆ..ಅವಾಗ ಮತ್ತೆ ಯಾವೂರು ಅಂದ್ರು... ಸಿದ್ದಾಪುರ ಅಂದೇ..ಯಾರ್ ಮನೆ ಅಂತ ಕೇಳಿದ್ರು.. ಸಣ್ಣಗೌಡ್ರು ಮನೆ ಅಂದೇ...ಓಹೋ ಸ್ಕೂಲ್ ಪಕ್ಕ ಮನೆ ಇದ್ಯಲ್ಲ ಆ ಸಣ್ಣಗೌಡಜ್ಜನ ಮೊಮ್ಮಗನ ನೀನು ಅಂದಾಗ ಹೌದು ಅಂತ ಕತ್ತು ಅಲ್ಲಾಡಿಸಿದೆ ...ಹಂಗೆಲ್ಲ ಎಲ್ಲರ ಮುಂದೆ ಕೇಳಬಾರದು ಮಗ,ಇದನ್ನ ಮಾರನ್ಗಿಲ್ಲ..ಅವಾಗ್ಲೇ ಯಾರೋ ಇದ್ದರಲ್ಲ ಅದಕ್ಕೆ ವಾಪಸ್ ಕಳಿಸ್ದೆ ಅಷ್ಟೇ ಅಂತ ಒಂದು ಸಣ್ಣ ಪೇಪರ್ ಸುತ್ತಿ ಕೊಟ್ಟರು..ಯಾರಿಗೂ ಹೇಳಬೇಡ..ಸೀದಾ ಮನೆಗೆ ಹೋಗು ಬೇಗ ಅಂತೇಳಿ ಕಳ್ಸಿದ್ರು..ಪರವಾಗಿಲ್ಲ ನಮ್ಮ ಅಜ್ಜನ ಹೆಸರು ಸತ್ತು ಇಷ್ಟು ವೆರ್ಷ ಆದಮೇಲು ಬೇಕಾಯ್ತು ಅಂತೇಳಿ ಮನೆಗೆ ಹೋಗಿ ಎಲ್ಲ ಹೇಳಿದೆ.. ತೂ ನಿನ್ನ ಹಂಗೆ ಎಲ್ಲರ ಮುಂದೆ ಕೆಳ್ತಾರ ಅಂತ ನಮ್ಮ ಅಪ್ಪ ಕೇಳಿದಾಗ,ನಂಗೇನ್ ಗೊತ್ತು..ಮೊದಲೇ ಹೇಳಬೇಕಿತ್ತು ಅಂತ ಅವರಿಗೆ ದಬಾಯ್ಸಿದ್ದೆ,ಅವರದೇ ತಪ್ಪು ಅಂತ..
ಆಮೇಲೆ ಆ ಪೇಪರ್ ತೆಗೆದು ನೋಡಿದ್ರೆ ಬಹಳ ಕಡಿಮೆ ಇತ್ತು.ಇದೇನ್ ಇಷ್ಟೇ ಕೊಟ್ಟವರಲ್ಲ ಅಂದ್ರೆ,ಇನ್ನು ಎಷ್ಟ್ ಕೊಡ್ತಾರೆ ಹತ್ತು ರುಪಾಯಿಗೆ,ಇದನ್ನ ಸೇದಕ್ಕೆ ಸಾಕಾಗಿ ಹೋಗುತ್ತೆ ಅಂದ್ರು.

(ಅವಧಿಯಲ್ಲಿ ಪ್ರಕಟಗೊಂಡಿದೆ,ಅದರ ಲಿಂಕ್ )

25 comments:

  1. ಒಳ್ಳೆಯ ಲೇಖನ ಗಿರೀಶ್ ಓದುತ್ತಾ ಯಾವುದೋ ಲೋಕಕ್ಕೆ ಹೋಗಿ ಬಂದಂತೆ ಆಯಿತು. ಗ್ರಾಮೀಣ ಬದಿಕಿನ ನೆನಪುಗಳೇ ಹಾಗೆ ಜೀವನದಲ್ಲಿ ಮರೆಯಾಗದೆ ಸುಂದರ ನೆನಪಾಗಿ ಕಾಡುತ್ತವೆ.ನೀವು ಬೆಳೆದ ಪರಿಸರದ ಸುಂದರ ವಿವರಣೆ , ಗ್ರಾಮದ ಆಚರಣೆ, ಅಲ್ಲಿನ ಜೀವನ ಶೈಲಿಯ ಸುಂದರ ಪರಿಚಯವಾಯಿತು.ನಿಮಗೆ ಧನ್ಯವಾದಗಳು.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
    Replies
    1. ಬಾಲು ಸರ್ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು... ನೀವು ಹೇಳಿದಂತೆ ಗ್ರಾಮೀಣ ಬದುಕಿನ ನೆನಪುಗಳು ಯಾವಾಗಲು ಹಚ್ಚ ಹಸಿರಾಗಿ ಇರುತ್ತದೆ...ಆ ದಿನಗಳು ಮತ್ತೆ ಮರುಕಳಿಸುವುದಿಲ್ಲ ಅನ್ನುವ ಕೊರಗು ಇದೆ ನನಗೆ...

      Delete
  2. ಗಿರೀಶರೆ,
    ನಿಮ್ಮದು ದಟ್ಟ ಅನುಭವದ ಬಾಲ್ಯ. ಇಂತಹ ಇನ್ನೂ ಅನೇಕ ರೋಚಕ ಅನುಭವಗಳ ಭಂಡಾರ ನಿಮ್ಮಲ್ಲಿ ಇರಬೇಕು. ದಯವಿಟ್ಟು ನಮಗೆ ಉಣಬಡಿಸಿ.

    ReplyDelete
    Replies
    1. ಸುನಾಥ್ ಸರ್.. ಇಂಥ ಸಾಕಷ್ಟು ಅನುಭವಗಳು,ನಮ್ಮ ಹುಡುಗಾಟಿಕೆಯ ನೆನಪುಗಳು ಇವೆ...ಅವುಗಳನ್ನೆಲ್ಲ ಖಂಡಿತ ಬರೆಯುತ್ತೇನೆ.. ನಿಮ್ಮ ಪ್ರೋತ್ಸಾಹಕ್ಕೆ ಚಿರ ಋಣಿ..

      Delete
  3. ಭಂಗಿ ಸೊಪ್ಪು ಏನೋ ನಾನು ಕಂಡೆ ಇಲ್ಲ.. ನಿಮ್ಮ ಬಾಲ್ಯದ ಕಥೆಗಳು ಓದೋಕ್ಕೆ ಮಜಾ. ಹಳ್ಳಿಯ ಸೊಗಡು ಇರತ್ತೆ. ಉತ್ತಮ ಬರಹ.

    ReplyDelete
    Replies
    1. ಸಹನಾ ಅವರೇ.. ಭಂಗಿ ಸೊಪ್ಪು ಅಂದ್ರೆ ಒಂಥರಾ ಡ್ರಗ್ ಇದ್ದ ಹಾಗೆ.. ಹಿಂದಿನ ಕಾಲದಲ್ಲಿ ಅದನ್ನು ಋಷಿ ಮುನಿಗಳು ಸಹ ಸೇದುವರು ಅಂತ ಹೇಳ್ತಾರೆ.... ಹಳ್ಳಿಯ ಸೊಗಡು ಅಂದ್ರೆ ಕಣ್ಣ ಮುಂದೆ ತಟ್ಟುತ್ತದೆ ಅಲ್ಲವೇ ? ವಂದನೆಗಳು ನಿಮಗೆ...

      Delete
  4. ಗಿರೀಶ್ ಎಂತಹ ಅನುಭವ ನಿಮ್ಮದು... ನಿಜಕ್ಕೂ ಖುಷಿಯಾಗುತ್ತದೆ ಜೊತೆಗೆ ಮಜ ಕೊಡುತ್ತೆ. ಹಳ್ಳಿಯ ಸೊಗಡಿನಲ್ಲಿ ಬೆಳೆದರೆ ಇಂತಹ ಬಹಳಷ್ಟು ಅನುಭವವಗಳು ಇರುತ್ತವೆ ಅಲ್ಲವೇ.. ಚೆನ್ನಾಗಿದೆ ಹೀಗೆ ಮತ್ತಷ್ಟು ಬರಿತಾ ಇರಿ

    ReplyDelete
    Replies
    1. ಸುಗುಣ ಮೇಡಂ...ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿ ಆಯಿತು... ಹಳ್ಳಿಯ ಜೀವನವನ್ನು ಎಲ್ಲೋ ಮಿಸ್ ಮಾಡ್ಕೊತಿದಿನಿ ಅನ್ಸುತ್ತೆ ಇವಾಗ.. ಆದರೆ ಬಾಲ್ಯದ ಇಂಥ ನೆನಪುಗಳು ಇನ್ನು ಗಟ್ಟಿಯಾಗಿ ನೆಲೆಗೊಂಡಿವೆ... ಇನ್ನಷ್ಟು ನೆನಪುಗಳನ್ನು ಮತ್ತೊಮ್ಮೆ ಬರೆಯುತ್ತೇನೆ... ನಿಮ್ಮ ಪ್ರೋತ್ಸಾಹಕ್ಕೆ ಥ್ಯಾಂಕ್ಸ್..

      Delete
  5. girish, ee lekhana avadhiyalli nodi kushi ayitu. solpa busy biduvadaga matte odtene. thanks.

    ReplyDelete
    Replies
    1. ಸತೀಶಣ್ಣ,ಖಂಡಿತ ಬಿಡುವಾದಾಗ ಓದಿ.. ಪ್ರತಿಕ್ರಿಯೆ ತಿಳಿಸಿ.. ನಿಮ್ಮ ಪ್ರೀತಿಗೆ ಧನ್ಯೋಸ್ಮಿ...

      Delete
  6. ನಿಮ್ಮ ಬಾಲ್ಯದ ಅನುಭವಗಳ ಕಥನವು ನನಗೂ ನನ್ನ ಬಾಲ್ಯದ ಅನುಭವಗಳನ್ನು ಬರೆಯುವಂತೆ ಪ್ರೇರೇಪಿಸುತ್ತಿದೆ... ಚೆನ್ನಾಗಿದೆ....ಮುಂದುವರಿಯಲಿ....

    ReplyDelete
    Replies
    1. ಅಶೋಕ್ ಸರ್ ಧನ್ಯವಾದಗಳು... ನಿಮ್ಮ ಬಾಲ್ಯದ ಅನುಭವಗಳನ್ನು ಹಂಚಿಕೊಳ್ಳಿ ನಮ್ಮ ಜೊತೆ..

      Delete
  7. ಪ್ರೀತಿಯ ಗಿರೀಶ್, ಚೆನ್ನಾಗಿ ನಿರೂಪಿಸಿದ್ದೀರಿ. ಸ್ವಲ್ಪ ಮಿಸ್ಟೇಕ್ ಗಳು ಇವೆ. ಮುಂದೆ ಸರಿ ಮಾಡಿಕೊಳ್ಳಿ. ನನ್ನ ಕೆಲವು ಬಾಲ್ಯದ ನೆನಪುಗಳು ಕಣ್ಮುಂದೆ ಬಂದವು. ಧನ್ಯವಾದಗಳು.

    ReplyDelete
    Replies
    1. ಧನ್ಯವಾದಗಳು ಸರ್ ... ತಪ್ಪುಗಳನ್ನು ಸರಿಪಡಿಸುತ್ತೇನೆ.. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ಎಂಬ ಆಶಯ..

      Delete
  8. ಭಂಗಿ ಸೊಪ್ಪು! ಹಹಹಹ.. ಚೆನ್ನಾಗಿದೆ.ಚಿಕ್ಕವನಿದ್ದಾಗ ಗೆಳೆಯನೊಂದಿಗೆ ಅವನ ಅಣ್ಣನಿಗೆ ಗಾಂಜಾ ತಂದು ಕೊಡುವಾಗ ಇದೇ ರೀತಿಯ ಅನುಭವ ಆಗಿತ್ತು..ಬರೆಯಲು ಹೋದರೆ ಅದೊಂದು ವಿಚಿತ್ರ ಕತೆ. ಬರೆಯುತ್ತಿರಿ.. :-)

    ReplyDelete
    Replies
    1. ರಾಘವೇಂದ್ರ ಅವರೇ ನನ್ನ ಬ್ಲಾಗಿಗೆ ಸ್ವಾಗತ ತಮಗೆ... ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು... ಹೀಗೆ ಬರುತ್ತಿರಿ...

      Delete
  9. ನಿಮ್ಮ ಅನುಭವದ ಬುಟ್ಟಿಯ ನೆನಪಿನ ಸಿಹಿಯನ್ನು ನಮ್ಮೆಲ್ಲರಿಗೂ ಉಣಬಡಿಸಿದ್ದಿರಿ..
    ನೀವಡಿರೋ ಆಟ, ತುಂಟಾಟಗಳು ಚೆನ್ನಾಗಿದೆ....

    ಚಂದದ ಲೇಖನ.....

    ReplyDelete
    Replies
    1. ಸುಷ್ಮಾ ಅವರೇ ಲೇಖನ ಮೆಚ್ಚಿದಕ್ಕೆ ಪ್ರೀತಿಯ ಧನ್ಯವಾದಗಳು...

      Delete
  10. ಎಲ್ಲಾ ಕಣ್ಣಿನ ಮುಂದೆ ನಡೆದಂತೆ ಅನ್ನಿಸಿತು. ನಿಮ್ಮ ಅನುಭವ ಲೇಖನ ಚೆನ್ನಾಗಿತ್ತು.

    ReplyDelete
  11. ತುಂಬಾ ಚೆನ್ನಾಗಿದೆ ..........:)

    ReplyDelete
  12. ನನ್ನನ್ನು ಬಾಲ್ಯಕ್ಕೆ ಕೊಂಡು ಹೋದ ಬರಹ ಗಿರೀಶ್ ಭಾಯ್.

    ವರ್ತನೆ ಪ್ರಕಾರ ದೇವಸ್ಥಾನದ ಪೂಜೆ ಇದು ನನಗೆ ಗೊತ್ತಿರದಿದ್ದ ವಿಚಾರ. ಭಂಗೀ ಸೊಪ್ಪಿನ ಎಫೆಕ್ಟು, ಕಾಯಿ ಚಟ್ನಿ ಅನ್ನದ ಸಮಾರಾಧನೆ ಮತ್ತು ನಿಮ್ಮ ಗ್ರಾಮೀಣ ಬದುಕಿನ ಆಟಗಳು ನನ್ನನ್ನು ಮತ್ತೆ ನನ್ನ ಹಳ್ಳಿಗೆ ಕರೆದುಕೊಂಡು ಹೋದವು.

    ಒಳ್ಳೆಯ ಬರಹ. :)

    ReplyDelete
    Replies
    1. ಬದರಿ ಸರ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು....ಹಳ್ಳಿಯ ನೆನಪುಗಳೇ ಹಾಗೆ ಅಲ್ಲವೇ ? ಮತ್ತೆ ನಮ್ಮ ಹಿಂದಿನ ನೆನಪುಗಳನ್ನು ಕೆದಕುತ್ತವೆ,,

      Delete
  13. thumba swarasyakara anubhava adu., nanna jeevanadallu inta sangathigalu bahashtive..., nimma e lekhanadinda nanna balya ajji mane ella bahala nenapagtide.

    ReplyDelete