Wednesday, September 14, 2011

ಮರುಕಳಿಸಿದ ನೆನಪುಗಳು !!!

ಸುಮಾರು ೬ ವರ್ಷದ ನಂತರ ಎಲ್ಲರೂ ಒಟ್ಟಿಗೆ ಸೇರಿದ ದಿನ ಅದು..ಕಳೆದ ವಾರ ನಮ್ಮ ಪಿ.ಯು.ಸಿ ಹಾಸ್ಟೆಲ್ಲಿನ ಹುಡುಗರೆಲ್ಲ ಒಟ್ಟಿಗೆ ಭೇಟಿ ಆಗಿದ್ದೆವು...ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕು ರಾಮಕುಂಜ ಎಂಬ ಗ್ರಾಮದ ಬೋರ್ಡಿಂಗ್ ಹಾಸ್ಟೆಲ್ಲಿನಲ್ಲಿ ೨ ವರ್ಷ ಒಟ್ಟಿಗೆ ಕಳೆದ ನಾವು ಮತ್ತೆ ಆ ನೆನಪುಗಳನ್ನು ಹೊತ್ತು ಭೇಟಿ ಆದೆವು...
ರಾಮಕುಂಜ ಇದು ಉಪ್ಪಿನಂಗಡಿ ಇಂದ ಸುಭ್ರಮಣ್ಯ ಹೋಗುವ ದಾರಿಯಲ್ಲಿ ಇದೆ..ಇದು ಈಗಿನ ಪೇಜಾವರ ಯತಿಗಳಾದ ಶ್ರೀ ವಿಶ್ವೇಶ ತೀರ್ಥರ ಹುಟ್ಟೂರು,ಮತ್ತು ವನವಾಸದ ಕಾಲದಲ್ಲಿ ರಾಮನು ಇಲ್ಲಿ ಈಶ್ವರನನ್ನು ಪೂಜಿಸಿದ್ದರಿಂದ ಇಂದು ರಾಮಕುಂಜ ಎಂದು ಮತ್ತು ಅಲ್ಲಿನ ಈಶ್ವರನಿಗೆ ರಾಮಕುಂಜೇಶ್ವರ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ...(ಇದು ಮೊದಲ ವರ್ಷದ ಮೊದಲ ಕನ್ನಡ ಕ್ಲಾಸಿನಲ್ಲಿ ನಮ್ಮ ಉಪನ್ಯಾಸಕರಾದ ಗಣರಾಜ್ ಕುಂಬ್ಳೆ ಅವರು ಹೇಳಿದ ವಿಷಯ,ಈ ಊರಿನ ಇತಿಹಾಸದ ಬಗ್ಗೆ ಒಂದು ಪುಸ್ತಕ ಕೂಡ ಬರೆದಿದ್ದಾರೆ).....
ಇಲ್ಲಿ ದೇವಸ್ಥಾನ,ಒಂದು ಪ್ರೈಮರಿ ಶಾಲೆ,ಒಂದು ಸಣ್ಣ ಗುಡ್ಡದ ಮೇಲೆ ನಮ್ಮ ಕಾಲೇಜು,ಅಲ್ಲಿಂದ ಸ್ವಲ್ಪ ದೂರದಲ್ಲಿ ಇನ್ನೊಂದು ಸಣ್ಣ ಗುಡ್ಡದ ಮೇಲೆ ನಮ್ಮ ಹಾಸ್ಟೆಲ್....ದೇವಾಲಯದ ಬಳಿ ರಥದ ಮನೆ ಹತ್ತಿರ ಒಬ್ಬ ಭಟ್ಟರ ಮನೆ,ಜೊತೆಗೆ ಅವರು ನಡೆಸುತ್ತಿದ್ದ ಒಂದು ಅಂಗಡಿ(ಈ ಅಂಗಡಿ ನಮಗೆ ತುಂಬ Important )...ಅಷ್ಟು ಬಿಟ್ಟರೆ ಅಲ್ಲಿ ಏನೇನು ಇಲ್ಲ... ಮನೆಗಳು ಇವೆಯಾದರೂ ಅಲ್ಲಿಂದ ಸುಮಾರು ದೂರ ಹೋಗಬೇಕು... ಸುತ್ತ ಮುತ್ತ ಬೆಟ್ಟ ಗುಡ್ಡಗಳು,ಉರಿ ಬಿಸಿಲು, ಹೊತ್ತಿಲ್ಲದ ಹೊತ್ತಲ್ಲಿ ಬರುವ ಮಳೆ,ಇಂಥ ಊರಲ್ಲಿ ೨ ವರ್ಷ ಕಳೆದ ರೋಮಾಂಚಕಾರಿ ಘಟನೆಗಳನ್ನು ಮೆಲುಕು ಹಾಕಲು, ಅವುಗಳ ಬಗ್ಗೆ ಚರ್ಚೆಗೆ ನೆರವಾಗಿದ್ದು ಮೊನ್ನೆಯ ನಮ್ಮೆಲ್ಲರ ಭೇಟಿ... 

ಹತ್ತನೇ ತರಗತಿ ಮುಗಿಸು ಕಾಲೇಜುಗಳ ಅನ್ವೇಷಣೆಯಲ್ಲಿದ್ದಾಗ ತಂದೆಯ ಸ್ನೇಹಿತರೊಬ್ಬರು ಕೊಟ್ಟ ಸಲಹೆ ಮೇರೆಗೆ ಅಲ್ಲಿಗೆ ಹೋದಾಗ ನಮಗೆ ಕಂಡಿದ್ದು ಅದೇ ಕಾಲೇಜು ಬಿಲ್ಡಿಂಗ್,ಹಾಸ್ಟೆಲ್,ದೇವಸ್ಥಾನ,ಒಂದು ಶಾಲೆ ಮತ್ತು ಅಂಗಡಿ ಇಷ್ಟೇ...ಬೆಳಗ್ಗೆ ೫.೩೦ ಕ್ಕೆ ಎದ್ದು,೫.೪೫ ಗೆ ಪ್ರಾರ್ಥನೆ ,ನಂತರ ಚಹಾ ಕುಡಿದು ೬.೦೦ ಘಂಟೆ ಇಂದ ೮.೦೦ ರವರೆಗೆ ಓದು..ನಂತರ ಊಟ(ಗಂಜಿ ಊಟ),ನಂತರ ರೆಡಿ ಆಗಿ ೯.೩೦ ಕ್ಕೆ ಕಾಲೇಜಿಗೆ ಹೊರಡುವುದು...೯.೪೫ ಇಂದ ೧೨.೫೦ ಕಾಲೇಜು,೧.೦೦ ಊಟ,ಮತ್ತೆ ೧.೩೦ ಕ್ಕೆ ಕಾಲೇಜಿಗೆ ಹೊರಡುವುದು...೧.೪೫ ಇಂದ ೩.೫೦ ರವರೆಗೆ ಕಾಲೇಜು,ಮತ್ತೆ ಹಿಂದಿರುಗಿ ೪.೦೦ ಕ್ಕೆ ಕಾಫಿ ತಿಂಡಿ,ನಂತರ ೫.೪೫ ವರೆಗೆ ಆಟೋಟ,ಮತ್ತೆ ೬.೩೦ಕ್ಕೆ ಪ್ರಾರ್ಥನೆ,೬.೪೫ ಇಂದ ೮.೩೦ ರವರೆಗೆ ಸ್ಟಡಿ ಪೀರಿಯಡ್...ಮತ್ತೆ ಊಟದ ನಂತರ ೮.೫೦ ಇಂದ ೯.೫೦ ರವರೆಗೆ ಸ್ಟಡಿ ಪೀರಿಯಡ್,ಹತ್ತು ಘಂಟೆಗೆ ಎಲ್ಲಾ ಲೈಟ್ಸ್ ಆಫ್. ವಾರಕ್ಕೆ ಎರಡು ದಿನ ಸಮವಸ್ತ್ರ,ಮತ್ತೆ ಹಾಸ್ಟೆಲಿನಲ್ಲಿ ಇಂಥ ಸ್ಟ್ರಿಕ್ಟ್ ರೂಲ್ಸ್ ಗಳು...ಅಲಿ ಬಿಟ್ಟು ಬೇರೆ ಎಲ್ಲೂ ಹೋಗುವ ಅವಕಾಶವೇ ಇರಲಿಲ್ಲ....ನಮ್ಮ ಬಳಿ ಯಾವುದೇ ಕಾರಣಕ್ಕೂ ದುಡ್ಡು ಇಟ್ಟಿಕೊಳ್ಳುವ ಹಾಗಿರಲಿಲ್ಲ..ಬೇರೆಯವರ ರೂಮಿಗೆ ಹೋಗುವ ಹಾಗಿರಲಿಲ್ಲ...ಎಲ್ಲದಕ್ಕೂ permission ತಗೋಬೇಕು.ಆಟಕ್ಕೆ ಹೋಗಲಿಲ್ಲ ಅಂದರೂ,ರಾತ್ರಿ ಹತ್ತರ ನಂತರ ಓದಬೇಕು ಅಂದರೂ,ಬೇಗೆ ಮಲಗ ಬೇಕು ಅಂದ್ರೂ..ಅಲ್ಲದೆ ಪ್ರತಿ ತಿಂಗಳ ನಮ್ಮ ಬಿಲ್ ಜೊತೆ ಕಳುಹಿಸುತ್ತಿದ್ದ ನಮ್ಮ ರಿಪೋರ್ಟ್ ಗಳು ,ಅಲ್ಲದೆ ತಿಂಗಳಿಗೆ ಒಂದೇ ದಿನ(ಅದೂ ನಮಗೆ ಮೀಸಲಿಟ್ಟ ದಿನವೇ) ಮನೆಯಿಂದ ಫೋನ್ ಮಾಡಬಹುದಿತ್ತು,...ಬೇರೆ ದಿನ ಮಾಡಿದರೆ useless ...೩ ತಿಂಗಳಿಗೆ ಒಮ್ಮೆ ಮಾತ್ರ ಮನೆಗೆ ಕಳುಹಿಸುತ್ತಿದ್ದರು...ಅದೂ ರಜ ಸಿಕ್ಕಿದ್ರೆ,ಇಲ್ಲಾಂದ್ರೆ ಅದೂ ಇಲ್ಲ...ಹಾಸ್ಟೆಲ್ ನಲ್ಲೆ ಇರುತ್ತಿದ್ದ ನಮ್ಮ ಉಪನ್ಯಾಸಕರು....ನಮ್ಮ ಜೊತೆಗೆ ಊಟ,ನಮ್ಮ ಜೊತೆಯಲ್ಲಿ ಆಟ ಕೂಡ ಆಡುತ್ತಿದ್ದರು..ಸಿಟಿಗೆ ಬರಬೇಕು ಅಂದರೂ ಅಲ್ಲಿಂದ ಸುಮಾರು ೧೨ ಕಿಮಿ..ಅದೂ ಹುಷಾರಿಲ್ಲ ಅಂದರೆ ಅವರೇ ಕರ್ಕೊಂಡು ಬರುವವರು...ಅಲ್ಲೇ ಎಲ್ಲಾ ಇರುತ್ತಿದ್ದ stationary ಸಾಮಗ್ರಿಗಳು...ಬಹುಷಃ ಇಂಥ ಪರಿಸರ ನೋಡೇ ಇರಬೇಕು,ನಮ್ಮ ತಂದೆ 'ಈ ಬಡ್ಡಿ ಮಗಂಗೆ ಇದೆ ಸರಿಯಾದ ಜಾಗ,ಇಲ್ಲಾದರೆ ಬಾಲ ಮುದುರಿಕೊಂಡು ಇರ್ತಾನೆ'ಅಂತ ತಂದು ಸೇರಿಸಿಯೇ ಬಿಟ್ಟರು...

ಅಲ್ಲಿಂದ ಶುರು ಆಯಿತು ನಮ್ಮ ಓದು,ನಮ್ಮ ಇತರ ಚಟುವಟಿಕೆಗಳು,ರೂಲ್ಸ್ ವಿರುದ್ದ ನಡೆಯುವುದು...ಎಲ್ಲಾ...ಅಲ್ಲಿ ಬಿಟ್ಟು ೬ ವರ್ಷ ಆದರೂ ಆ ನೆನಪುಗಳು,ಆ ಊರು,ಆ ಘಟನೆಗಳು....ಯಾವುದನ್ನು ಮರೆಯಲು ಸಾಧ್ಯವಿಲ್ಲ...ಬೆಳ್ಳಗೆ ಬೆಳ್ಳಗೆ ಗಂಜಿ ಊಟ(ದಕ್ಷಿಣ ಕನ್ನಡ ಸ್ಪೆಷಲ್,ಕುಸುಲಕ್ಕಿ ಇಂದ ಮಾಡುತ್ತಾರೆ,ಅನ್ನ ಬೇಯಿಸಿದ ನಂತರ ಗಂಜಿಯನ್ನು ಬಸಿಯದೆ ಹಾಗೆ ಬಡಿಸುತ್ತಾರೆ),....ಜತೆಗೆ ಮಿಡಿ ಮಾವಿನ ಉಪ್ಪಿನಕಾಯಿ,ಚಟ್ನಿ.... ಖಾಲಿ ಡಬ್ಬಕ್ಕೆ ಕಲ್ಲು ಹಾಕಿ ಅಲ್ಲಾಡಿಸಿದ ಹಾಗೆ ಆಗುತ್ತಿದ್ದ ,ಏನು ಅರ್ಥವಾಗದ ತುಳು ಭಾಷೆ.....,ಆ ರಣ ಬಿಸಿಲು,....ಯಾವಾಗ ಬೇಕೋ ಅವಾಗ ಸುರಿಯುತ್ತಿದ್ದ ಮಳೆ,....ರವಿವಾರ ಮಾತ್ರ ಗಂಜಿ ಊಟದ ಬದಲಾಗಿ ಇರುತ್ತಿದ್ದ ಇಡ್ಲಿಗೆ ಕಾಯುತ್ತಿದ್ದ ಪರಿ,......ಕದ್ದು ಭೇಲಿ ಹಾರಿ(ಕೆಲವರು ನುಸುಳುತ್ತಿದ್ದರು,ಕೆಲವರು ಹಾರುತ್ತಿದ್ದರು) ಹೋಗುತ್ತಿದ್ದ ಆ ದೇವಸ್ಥಾನದ ಹತ್ತಿರ ಇದ್ದ ಆ ಭಟ್ಟರ ಅಂಗಡಿ.....,ಕೆಲವೊಮ್ಮೆ ಸಿಕ್ಕಿ ಹಾಕಿಕೊಂಡು ಬರೆದ ಅದೆಷ್ಟೋ Apology ಲೆಟರ್ ಗಳು,....ಕೆಲವೊಮ್ಮೆ ಮಧ್ಯ ರಾತ್ರಿ(ಶಾರ್ಪ್ ೨.೦೦ ಘಂಟೆ ) ಶುರು ಆಗುತ್ತಿದ್ದ ನಮ್ಮ ಕಾರ್ಯಾಚರಣೆ,ಕತ್ತಲಿನಲ್ಲಿ ಬೇಲಿ ಹಾರಿ ಹೋಗುತ್ತಿದ್ದ ಆ ನಮ್ಮ ಧೈರ್ಯ,....ಕತ್ತಲಿನಲ್ಲಿ ಹರಿದ ಅದೆಷ್ಟೋ ಲುಂಗಿಗಳು.....,ಕಳೆದುಕೊಂಡ ಟಾರ್ಚ್ ಗಳು,....ಹಾಸ್ಟೆಲ್ ವಿಧ್ಯಾರ್ಥಿಗಳಿಗಾಗಿ ಮಧ್ಯ ರಾತ್ರಿ ೧೨.೦೦ ಇಂದ ೨.೦೦ ರವರೆಗೆ ಕಾಯುತ್ತಿದ್ದ ಅಂಗಡಿಯ ಭಟ್ಟರು.....,ಅಂಗಡಿ ಇಂದ ತರುತ್ತಿದ್ದ ಕೋವಾ,ಚಕ್ಲಿ,ಕಡ್ಲೆ ಬೀಜ,ಸೋ೦ಟೆ ಗಳು,....ಪ್ರತಿ ಗುರುವಾರ ಸಂಜೆ ಭಜನೆ,ಭಜನೆ ನಂತರ ಬೆಲ್ಲದ ಅವಲಕ್ಕಿ...ರವಿವಾರ ಸಿಹಿ ಊಟ,....ನಮಗೆ ನಿಗದಿ ಆದ ರವಿವಾರ ಮನೆಯಿಂದ ಫೋನ್ ಬರುವುದೇನೋ ಎಂದು ಕಾಯುವ ರೀತಿ.... ಮನೆ ಇನ್ದೆನಾದರು ಅಪ್ಪ ಅಥವಾ ಅಮ್ಮ ಬರಬಹುದೇನೂ ಎಂದು ಪರಿತಪಿಸುವುದು.....(ನಾನು ಯಾವ ಭಾನುವಾರವೂ ಅಪ್ಪ ಅಮ್ಮನಿಗಾಗಿ ಕಾದಿಲ್ಲ ..ನನಗೆ ಗೊತ್ತು ನಮ್ಮ ಮನೆ ಇಂದ ಬರಲ್ಲ ಅಂತ.. ೨ ವರ್ಷದಲ್ಲಿ ನಮ್ಮ ಹಾಸ್ಟೆಲ್ ಡೇ ಗೆ ಇಬ್ಬರೂ ಬಂದಿದ್ದರು...ಅದೂ ಬಿಟ್ಟರೆ admission ಮತ್ತು ವರ್ಷದ ಮೊದಲ ದಿನ ಬಿಟ್ಟು ಹೋಗಲು,ಅದೂ ಲಗೇಜು ಇರುತ್ತೆ ಅಂತ,ನಮ್ಮ ಅಪ್ಪ ಬಂದಿದ್ದರು ಅಷ್ಟೇ)....ಮಳೆಯಲ್ಲೂ ಮಿಂದು ಆಡುತಿದ್ದ ಆ ಮಜಾ,..ಕಾಲೇಜು ಡೇ ಗಿಂತ ಅದ್ದೂರಿಯಾಗಿ ಮಾಡುತ್ತಿದ್ದ ಹಾಸ್ಟೆಲ್ ಡೇ,..ಹಾಸ್ಟೆಲ್ ಡೇ ದಿನದ ಭರ್ಜರಿ ಊಟ....ಹಾಸ್ಟೆಲ್ ಡೇ ಗೆ ಮಾಡುತ್ತಿದ್ದ ತಿಂಗಳು ಗಟ್ಟಲೆ preparation ಗಳು...ಹಾಸ್ಟೆಲ್ ಡೇ,ಕಾಲೇಜು ಡೇ,ಎದುರಿಗಿನ ಸ್ಕೂಲ್ ಡೇ,ಮೂರು ಕಾರ್ಯಕ್ರಮಗಳಲ್ಲಿ ಒಂದೇ ಭಾಷಣ ಮಾಡುತ್ತಿದ್ದ ಒಬ್ಬ ಅಸ್ಸಾಮಿ..."ನಾನು ಅಮೇರಿಕಾಕ್ಕೆ ಹೋಗಿದ್ದಾಗ......" ಈ ಕಥೆಯನ್ನು ಹೇಳಲು ಮರೆಯುತ್ತಿರಲಿಲ್ಲ....ಒಟ್ಟು ೬ ಬಾರಿ ಇದೆ ಕಥೆಯನ್ನು ಕೇಳಿದ್ದೇವೆ....ಕಾರ್ಯಕ್ರಮಕ್ಕೆ ನಮ್ಮ physica lecturer ನ music....ಪೇಜಾವರ ಮತ್ತು ಸುಭ್ರಮಣ್ಯ ಶ್ರೀಗಳ ಆಶೀರ್ವಚನ... ....ಎಂದೂ ಮಾತಾಡಿಸದ ನಮ್ಮ ಕ್ಲಾಸ್ ಮೇಟ್ ಹುಡುಗಿಯರು.... ಕಾಲೇಜು ಡೇ ಗೆ ನಡೆಯುತ್ತಿದ್ದ ಆಟೋಟಗಳು.... ಕಲಾ ಮತ್ತು ನಮ್ಮ ವಿಜ್ಞಾನ ವಿಭಾಗದ ನಡುವೆ ನಡೆಯುತ್ತಿದ್ದ ಜಗಳಗಳು....ನಂತರ ಗಲಾಟೆ ಮಾಡಿಕೊಂಡ ತಪ್ಪಿಗೆ ನಮ್ಮ ಇಡಿ ವಿಭಾಗವನ್ನು ಆ ವರ್ಷ ಎಲ್ಲಾ ಸ್ಪರ್ಧೆ ಗಳಿಂದ boycott ಮಾಡಿ,ನಂತರ ಪ್ರಾಂಶುಪಾಲರ ಹತ್ತಿರ ಒಪ್ಪಿಸಿ ಮತ್ತೆ ಸ್ಪರ್ಧೆಗೆ ಇಳಿದಿದ್ದು.....ಪಕ್ಕದ ತೋಟಗಳಿಗೆ ಗೇರು ಹಣ್ಣು ತಿನ್ನಲು ಹೋಗಿ,ಮಾಲಿಕನ ಬಳಿ ಸಿಕ್ಕಿ ಹಾಕಿಕೊಂಡು ಅವರು ಬೀಸಿದ ಕಲ್ಲಿನಿಂದ ತಪ್ಪಿಸಿ ಕೊಂಡು ಓಡೋಡಿ ಬಂದಿದ್ದು.... ತುಳು ಪ್ಲಾಸ್ಟಿಕ್ ಡಬ್ಬಕ್ಕೆ ಕಲ್ಲು ಹಾಕಿ ಅಲ್ಲಾಡಿಸಿದ ಹಾಗೆ ಆಗುತ್ತಿದ್ದರೆ,ಕಾಸರಗೋಡಿನ ನಮ್ಮ ಸ್ನೇಹಿತರು ಆಡುತ್ತಿದ್ದ ಮಲಯಾಳಂ ಸ್ಟೀಲ್ ಡಬ್ಬಕ್ಕೆ ಕಲ್ಲು ಹಾಕಿ ಅಲ್ಲಾಡಿಸಿದ ಹಾಗೆ ಆಗುತ್ತಿತ್ತು.....ವಾರ ಗಟ್ಟಲೆ ನಡೆಯುತ್ತಿದ್ದ ದೇವಸ್ಥಾನದ ಜಾತ್ರೆ... ಮೊದಲ ಬಾರಿ ನಿದ್ದೆ ಗೆಟ್ಟು ನೋಡಿದ ಯಕ್ಷಗಾನ....ದಕ್ಷಿಣ ಕನ್ನಡ ವಿಶೇಷವಾದ ಹುಲಿ ವೇಷದ ಕುಣಿತ....ಜಾತ್ರೆಯ ಕೊನೆಯಲ್ಲಿ ಕೋಳಿ ಜಗಳ.... ಭಾಜಿ ಕಟ್ಟುತ್ತಿದ್ದ ಜನಗಳು....ಅರ್ಧಂಬರ್ಧ ಅರ್ಥ ಆದ ತುಳು ನಾಟಕಗಳು...ಹೆಸರು ಮರೆತು ಹೋಗಿವೆ...ಜಾತ್ರೆ ಬಂತು ಅಂದರೆ ನಮಗೆ ಸುಗ್ಗಿಯೋ ಸುಗ್ಗಿ... ಕೈಗೆ ಒಂದಿಷ್ಟು ದುಡ್ಡು ಕೊಡುತ್ತಿದ್ದರು(ತಿಂಗಳ ಬಿಲ್ಲಿನಲ್ಲಿ ಅದನ್ನು ಸೇರಿಸಿ ಮನೆಗೆ ಕಳುಹಿಸುತ್ತಿದ್ದರು).... ಜಾತ್ರೆಗೆ ಕೊಡುವ ದುಡ್ಡನ್ನು ೩೦ ರೂಪಾಯೀ ಇಂದ ೫೦ ರೂಪಯ್ಯೇ ವರೆಗೂ ಒಪ್ಪಿಸಲು ಆಫೀಸು ರೂಮಿನಲ್ಲಿ ಕಾಡಿ ಬೇಡಿದ್ದು....ಜಾತ್ರೆ ದಿನ ಆಮ್ಲೆಟ್ ಗಾಗಿ ಕಾಯುತ್ತಿದ್ದ ನಮ್ಮ ಕೆಲವು ಸ್ನೇಹಿತರು....ಅದನ್ನೇ ಚಿಕನ್ ತಿಂದಷ್ಟು ಖುಷಿಯಲ್ಲಿ ತಿನ್ನುತ್ತಿದ್ದರು...ನನ್ನಂಥ ಪುಳ್ಚಾರಿಗಳಿಗೆ ಐಸ್-ಕ್ರೀಂ ಮತ್ತು ಚುರುಮುರಿಯೇ ಗತಿ....
ಆಫೀಸು ರೂಮಿಗೆ ಮಾತ್ರ ಸೀಮಿತವಾಗಿದ್ದ TV ಯನ್ನು ಯಾವುದಾದರು ಕ್ರಿಕೆಟ್ ಮ್ಯಾಚ್ ಇದ್ದಾಗ ಕಾರಿಡಾರ್ ಗೆ ತರಿಸಿ ನೋಡುತ್ತಿದ್ದದ್ದು..ಎರಡನೇ ವರ್ಷಕ್ಕೆ ಬಂದಾಗ ಒಂದು ಹೊಸ TV ಅನ್ನು ನಮ್ಮ ಮೆಸ್ಸ್ ಗೆ ಇಟ್ಟು,ಅದೂ ಕೇವಲ ರಾತ್ರಿ ೮.೩೦ ರ DD 1 ರ ಇಂಗ್ಲೀಶ್ ಮತ್ತು ಹಿಂದಿ ನ್ಯೂಸ್ ನೋಡಲು ಅವಕಾಶ..ಬರುತ್ತಿದ್ದದ್ದು ಅದು ಒಂದೇ ಚಾನೆಲ್...ಮತ್ತೆ ಕ್ರಿಕೆಟ್ ಮ್ಯಾಚ್ ಇದ್ದಾಗ...
ಟ್ಯಾಂಕ್ ಹಿಂದೆ ಅಥವಾ ಯಾವುದೋ ಮರದ ಹಿಂದೆ ಕತ್ತಲಿನಲ್ಲಿ ನಿಂತು ಸ್ಟಡಿ ರೂಮಿನಲ್ಲಿ ನಿದ್ದೆ ಮಾಡುವವರನ್ನು ಹಿಡಿಯುತ್ತಿದ್ದ ನಮ್ಮ ಮ್ಯಾನೇಜರ್....ಸ್ಟಡಿ ಹವರ್ ನಲ್ಲಿ ಸ್ಟಡಿ ರೂಮಿನಲ್ಲಿ ನಿದ್ದೆ ಮಾಡಿ ಸಿಕ್ಕಿ ಬಿದ್ದ ಮೇಲೆ ಐದು ಐದು ಬಾರಿ,ಕೆಲವೊಮ್ಮೆ ಹತ್ತು ಹತ್ತು ಬಾರಿ ಬರೆಯುತ್ತಿದ್ದ Imposition ಗಳು...Imposition ಗೆ ಸಿಗುತ್ತಿದ್ದದ್ದು Physics ನ derivation ಗಳು,chemistry ಯ ಯಾವುದಾದರೂ acid preparation ಗಳು...Biology ಯ ಚಿತ್ರಗಳು...Maths ನ ಲೆಕ್ಕಗಳು...ಕೆಲವೊಮ್ಮೆ ನಮ್ಮ ಗ್ರೌಂಡ್ ನಲ್ಲಿ ೫ ಅಥವಾ ೧೦ ಸುತ್ತು ಓಡುವುದು....ರಾತ್ರಿ ಹತ್ತರ ನಂತರ ಓದುತ್ತಿದ್ದ(ನಮಗೆ ೯.೩೦ ಕ್ಕೆ ನಿದ್ರಾ ದೇವಿ ಒಲಿದು ಬಿಡುತ್ತಿದ್ದಳು..ಅದಕ್ಕಾಗಿ ಎಷ್ಟೋ ದಿನ imposition ಬರೆದಿದ್ದೇನೆ)ನಮ್ಮ ಕುಳ್ಳ ಶಾಸ್ತ್ರಿ.... ತನ್ನ ರಕ್ತ ಹೀರಿದ ಸೊಳ್ಳೆಗಳನ್ನು ಸಾಯಿಸಿ ಅವನ್ನೆಲ್ಲ ಒಂದು ಪೇಪರ್ ಗೆ ಅಂಟಿಸಿ ಹಿಡುತ್ತಿದ್ದ....ಅಲ್ಲದೆ ಮಧ್ಯ ರಾತ್ರಿಯಲ್ಲಿ ಕಾಲೇಜಿಗೆ ಹೋಗಿ ನಾವು ಬೆಳಗ್ಗೆ ಅದನ್ನು ಪರೆಶೀಲಿಸಲು ಏನಾದರು ಗುರುತು ಇಟ್ಟು ಬರುತ್ತಿದ್ದ ಪುಂಡ....ಕೆಲವೊಮ್ಮೆ ಬೇಗ ನಿದ್ರೆ ಬಂದರೆ ಸುಮ್ಮನೆ ತಲೆ ನೋವು,ಜ್ವರ ಅಂತ ಸುಳ್ಳು ಹೇಳಿ ಮಾತ್ರೆ ತೆಗೆದು ಕೊಂಡು,ಅದನ್ನು ಹೊರಗಡೆ ಬಂದ ಕೂಡಲೇ ಬಿಸಾಡಿ ಮಲಗುತ್ತಿದ್ದ ಉಪಾಯಗಳು....ಸಣ್ಣ ಪುಟ್ಟ ಜಗಳಗಳು..ಮತ್ತೆ ಹೊಂದಾಣಿಕೆ....ಎಲ್ಲರಿಗೂ ಒಂದೊಂದು ಅಡ್ಡ ಹೆಸರುಗಳು....
ಒಮ್ಮೆ ನಾವು ನಾಲ್ಕೈದು ಜನ ದೇವಸ್ಥಾನಕ್ಕೆ ಹೋಗಿ(with permission) ಅಲ್ಲಿಂದ ಹಾಗೆ ಯಾವುದೋ ದಾರಿ ಹಿಡಿದು ಗುಡ್ಡ ಎಲ್ಲಾ ಹಟ್ಟಿ,ಕೊನೆಗೆ ಬಂದ ದಾರಿ ಗೊತ್ತಾಗದೆ ಎಲ್ಲೆಲ್ಲೋ ಸುತ್ತಿ,ಕೊನೆಗೆ ಯಾರನ್ನೋ ಕೇಳಿಕೊಂಡು ಹಾಸ್ಟೆಲ್ ಸೇರಿದ್ದಾಯಿತು....ವಿಷಯ ಅಂದರೆ ನಾವು ಹೋಗಿದ್ದು ವಾರ್ಡನ್ ಗೆ ಗೊತ್ತಾಗಲಿಲ್ಲ..ಇಲ್ಲ ಅಂದಿದ್ರೆ ಅದೇ ಲೆಟರ್...ಮೊಬೈಲ್ ಇಟ್ಟುಕೊಳ್ಳಲು ಅವಕಾಶ ಇಲ್ಲದ ಪರಿಸ್ಥಿತಿಯಲ್ಲಿ ಮೊಬೈಲ್ ಇಟ್ಟಿಕೊಂಡು ಕರ್ತವ್ಯ ಲೋಪ ಹೆಸಗಿದ ಹಾಸ್ಟೆಲ್ ಲೀಡರ್ ನನ್ನು ಆ ಸ್ಥಾನದಿಂದ ಕೆಳಗಿಲಿಸಿದ್ದು(ಬೇಲಿಯೇ ಎದ್ದು ಹೊಲ ಮಯ್ದರೆ ಸರಿ ಇರಲ್ಲ ಅಲ್ವ ಅದಕ್ಕಾಗಿ)....
ವಾರಕ್ಕೆ ಒಂದು ರೂಮಿನವರು ಊಟ ಬಡಿಸುವ ವಿಧಾನ... ಒಮ್ಮೆ ಊಟ ಬಡಿಸುವಾಗ ಲುಂಗಿ ಉಡಲು ಬರದ ನಮ್ಮ ಪ್ರಜ್ವಲ್ ನ ಲುಂಗಿ ನಮ್ಮ ಮೆಸ್ ನಲ್ಲಿ ಜಾರಿ ಕೆಳಗೆ ಬಿದ್ದಿದ್ದು...ನಾನ್-ವೆಜ್ ತಿನ್ನುವ ಸಲುವಾಗಿ ಸ್ವಲ್ಪ ದೊಡ್ಡ ಕಾಯಿಲೆಗಳನ್ನು ಬರೆಸಿಕೊಲ್ಲುತ್ತಿದ್ದ ಇವನು ಪುತ್ತೂರು ಅಥವಾ ಉಪ್ಪಿನಂಗಡಿಗೆ ಹೋಗುತ್ತಿದ್ದ...ಸಣ್ಣ ಪುಟ್ಟ ಕಾಯಿಲೆ ಅಂದರೆ ಅಲ್ಲೇ ೨ ಕಿಮಿ ದೂರದ ಅತೂರಿಗೆ ಕಳುಹಿಸುತ್ತಿದ್ದರು ಅದಕ್ಕಾಗಿ....ಮನೆ ಇಂದ ಬಂದ ಕೂಡಲೇ ಅಲ್ಪ ಸ್ವಲ್ಪ ಚಿಲ್ಲರೆ ಕೊಟ್ಟು,ಬರುವಾಗ ಉಳಿದಿದ್ದು ಇಷ್ಟು,ನಮ್ಮ Personnal account ನಲ್ಲಿ ಇಡಿ ಅಂತ ಹೇಳಿ ನಮ್ಮ ಸಾಚಾತನವನ್ನು ತೋರಿಸುತ್ತಿದ್ದೆವು..ಆದ್ರೆ ಅಲ್ಲಿ ಇಲ್ಲಿ ಒಂದಿಷ್ಟು ದುಡ್ಡು ಇಟ್ಟಿಕೊಂಡು ಇರುತ್ತಿದ್ದೆವು...ಭಟ್ಟರ ಅಂಗಡಿಗೆ ಹೋಗಲು ಬೇಕಲ್ಲ...ಆ ದುಡ್ಡನ್ನು ದಿಂಬಿನ ಹೊಳಗೆ, ನಮ್ಮ Rack ಗಳ ಮೇಲೆ ಯಾವುದಾದರು ವೇಸ್ಟ್ ಡಬ್ಬದ ಹೊಳಗೆ ಅಥವಾ ಇನ್ನೆಲ್ಲೋ ಬಚ್ಚಿಡುತಿದ್ದೆವು...ಯಾವಾಗ IT ರೈಡ್ ಯಾಗುವುದು ಅಂತ ಹೇಳಕ್ಕೆ ಆಗುತಿರಲಿಲ್ಲ...
ಟ್ಯಾಂಕ್ ಕ್ಲೀನ್ ಮಾಡುವ ನೆಪದಲ್ಲಿ ಈಜು ಆಡುತ್ತಿದ್ದು....ಯಾರದೋ ಹಾಸಿಗೆ ಇಂದ ಅತ್ತಿದ ತಿಗಣೆ ಕಾಟ ತಾಳಲಾರದೆ ಎಲ್ಲಾ ಮಂಚಗಳನ್ನು ತೊಳೆದು ಅದಕ್ಕೆ DDT ಹಾಕಿ ತೊಳೆದು,ಕೊನೆಗೆ ಹಾಸಿಗೆಗಳನ್ನೇ ಬಿಸಾಡಿದ್ದು....ನಮ್ಮ Physics sir ನ ಟಾ೦ಟು ಗಳು, ಅವರ ಮದುವೆ ನಿಶ್ಚಯ ಆದಾಗ,ಪ್ರವೃತ್ತಿಯಲ್ಲಿ ಕೀ ಬೋರ್ಡ್ ವಾದಕರಾದ ಅವರಿಗೆ ನಿಮ್ಮ ಮಗು ಹುಟ್ಟುವಾಗಲೇ "ಸ ರೀ ಗ ಮ ಪ " ಅಂತ ಹೇಳುತ್ತದೆ ಅಂತ ಹೇಳಿ ತಿರುಗು ಬಾಣ ಬಿಟ್ಟಿದ್ದು...biology ಯ Human reproduction ಪಾಠ ನಡೆಯುವಾಗ ಕಿಸಕ್ಕನೆ ನಕ್ಕ ಒಬ್ಬ ಕ್ಲಾಸ್ ಮೇಟ್ ನನ್ನು ಬೈದು ಹೊರಗೆ ಕಳುಹಿಸಿದ್ದು...ಮುಖ್ಯವಾಗಿ ಹಾಸ್ಟೆಲ್ ವಿಧ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿ ತೋರಿಸಿದ,ನಮ್ಮನ್ನು ಅಷ್ಟೇ ಮಮತೆ ಇಂದ ನೋಡಿದ ಮತ್ತು ನಮ್ಮ ಆಟಗಳನ್ನು ಸಹಿಸಿಕೊಂಡು ಒಂದೂ ದಿನ ಬೇಜಾರು ಮಾಡಿಕೊಳ್ಳದ ನಮ್ಮ ಕ್ಲಾಸ್ ಟೀಚರ್ ಆದ ನಮ್ಮ maths ಮೇಡಂ...ಸ್ವಲ್ಪ ಸ್ಟ್ರಿಕ್ಟ್ ಇಂದ ನೋಡಿಕೊಂಡು ನಮ್ಮನ್ನು ಸ್ವಲ್ಪ ಹತೋಟಿಯಲ್ಲಿ ಇಟ್ಟಿಕೊಂಡಿದ್ದ ನಮ್ಮ chemistry ಸರ್ ಮತ್ತು ಅವರೇ ನಮ್ಮ ವಾರ್ಡನ್ ಕೂಡ....ಎರಡನೆ ವರ್ಷೆ ಅವರು ಬಿಟ್ಟು ಹೋಗಿ ಬೇರೆ ಉಪನ್ಯಾಸಕರೆ ಇಲ್ಲದೆ ಇದ್ದಾಗ ಬೇರೆ ಕಾಲೇಜಿನ ಒಬ್ಬರು ನಮಗೆ ಬಂದು ಪಾಠ ಮಾಡುತ್ತಿದ್ದರು...ಜಪಾನ್ ನ ರೈತ Fukuoka ಬಗ್ಗೆ ಇದ್ದ ಪಾಟವನ್ನು ಬಹಳ ಮೆಚ್ಹುಗೆ ಇಂದ ಮಾಡುತ್ತಿದ್ದ ನಮ್ಮ ಇಂಗ್ಲಿಷ್ ಉಪನ್ಯಾಸಕರಿಗೆ ನಮ್ಮ ಸೀನಿಯರ್ಸ್ ಅದೇ ಅಡ್ಡ ಹೆಸರು ಇಟ್ಟಿದ್ದರು....

ಸ್ವತಂತ್ರ ದಿನ ಸಲುವಾಗಿ ನಡೆಯುವ 'ಸೃಜನ' ಕಾರ್ಯಕ್ರಮದಲ್ಲಿ ಇವರು ಹಾಡಿದ್ದ 'ಉತ್ತರ ಧ್ರುವಧಿಂ ದಕ್ಷಿಣ ಧ್ರುವಕೂ....' ಹಾಡು.... ಬಹಳ ಸುಲಲಿತವಾಗಿ ವಿವರಿಸುತ್ತಿದ್ದ ಕನ್ನಡ ಉಪನ್ಯಾಸಕರು...ಇವರು ಭೋದಿಸಿದ ಯಯಾತಿ ನಾಟಕ....ಉತ್ತಮ ವಾಗ್ಮಿಗಳು ಕೂಡ...ಇವರುಗಳ ಒಡನಾಟ ಪಡೆದದಕ್ಕೆ ಧನ್ಯೋಸ್ಮಿ !!!
ಎಲ್ಲಾ ವಿಷಯಗಳನ್ನು ಚಾಡಿ ಹೇಳಿ ಎಷ್ಟೋ apology ಲೆಟರ್ ಮತ್ತು ಸಹಿ ಗಳಿಗೆ ಕಾರಣನಾದ ಒಬ್ಬನಿಗೆ ಕರೆಂಟ್ ಹೋದಾಗ ,ಮೊದಲೇ ಜನರೇಟರ್ ಅನ್ನು ಸ್ವಲ್ಪ ಲೇಟ್ ಆಗಿ ಸ್ಟಾರ್ಟ್ ಮಾಡಲು ತೀರ್ಮಾನಿಸಿ ,ಬೆಡ್ ಶೀಟ್ ಮುಚ್ಚಿ ಧರ್ಮದೇಟು ಕೊಟ್ಟು ಕೊನೆಗೆ ತಮಾಷೆಗೆ ಎಂದಿದ್ದು...ಆದರೂ ಬುದ್ಧಿ ಬರಲಿಲ್ಲ ಅವನಿಗೆ....
ಹಾಸ್ಟೆಲ್ ಡೇ ಕೆಲವು ಸ್ಪರ್ಧೆಗಳು..ಅದರಲ್ಲಿ ಬೆಳಗ್ಗೆ ಬೆಳಗ್ಗೆ ನೀರು ಕುಡಿಯುವ ಸ್ಪರ್ಧೆ ಕೂಡ ಒಂದು....ನೀರು ಕುಡಿದು ಒಂದು ನಿಮಿಷ ವಾಂತಿ ಮಾಡುವ ಹಾಗಿಲ್ಲ...
ಒಬ್ಬನ ವಾಚ್ ಕದ್ದು ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಅದನ್ನು ಟಾಯ್ಲೆಟ್ ಗೆ ಬಿಸಾಕಿ ಕೊನೆಗೂ ಸಿಕ್ಕಿ ಬಿದ್ದ ಅವನ ಮನೆ ಇಂದ ಕರೆಸಿ ಬುದ್ಧಿ ಹೇಳಿದ ವಾರ್ಡನ್....
ಕೆಲವು ಸಿಟಿ ಹುಡುಗರಿಗೆ ಇತ್ತ ಲುಂಗಿ ಉಡಲು ಬರಲ್ಲ,ಪ್ಯಾಂಟ್ ಹಾಕಬೇಕಂದ್ರೆ ಒಂದು ಥರಾ ಹಿಂಸೆ,ಜೊತೆಗೆ ಬರ್ಮುಡಾ ಹಾಕಿಕೊಳ್ಳುವ ಹಾಗಿಲ್ಲದ ನಮ್ಮ ರೂಲ್ಸ್ ,ಅಂತ ನಮ್ಮ ಸ್ನೇಹಿತರು ಒಳಗೆ ಬರ್ಮುಡಾ ಚಡ್ಡಿ ಹಾಕಿಕೊಂಡು,ಹೇಗ್ ಬೇಕೋ ಹಾಕಿ ಪಂಚೆ ಸುತ್ತಿಕೊಂಡು ನಡೆಯುವಾಗ ಕೆಳಗೆ ಬಿಳುತ್ತಿದ್ದರು....
ಧನುರ್ ಮಾಸದಲ್ಲಿ ಬೆಳಗ್ಗೆ ಆ ಕೊರೆಯುವ ಚಳಿಯಲ್ಲಿ ತಣ್ಣೀರು ಸ್ನಾನ ಮಾಡಿ ದೇವಸ್ಥಾನದ ಮಹಾ ಮಂಗಳಾರತಿಗೆ ಹೋಗುತ್ತಿದ್ದ ನಮ್ಮ ಭಕ್ತಿ....
ಪ್ರದೀಪ ಎಂದು ಕೂಗಿದ ಹೆಸರನ್ನು ಪ್ರತಿಭಾ ಎಂದು ತಪ್ಪು ತಿಳಿದು ,ಆ ಹುಡುಗಿ ಕಂಪ್ಲೇಂಟ್ ಕೊಟ್ಟು,"ನೀವು ಇಲ್ಲಿ ಅಷ್ಟೂ ದೂರದಿಂದ ಓದಕ್ಕೆ ಬಂದಿದ್ದಿರ,ಒಳ್ಳೆ ಮಾರ್ಕ್ಸ್ ಮತ್ತು ಹೆಸರು ತಗೊಂಡ್ ಹೋಗಿ,ಅದೂ ಬಿಟ್ಟು ಲವ್ ಅಂತ ಸುತ್ತಾಡಿದರೆ ಹೇಳಿ,ಮದುವೆ ಕೂಡ ಇಲ್ಲೇ ಮಾಡಿ ಕಳುಹಿಸುತ್ತೇವೆ"ಅಂತ ಮೀಟಿಂಗ್ ನಲ್ಲಿ ಹೇಳಿದ್ದು....
ಯಾರೋ ಪುಣ್ಯಾತ್ಮ ಕೊಡದು ಕೊಟ್ಟ,೪ ಅಥವಾ ೫ kg ಕೊಡ್ತಾರೆ,ಅದೂ ಬಿಟ್ಟು ಬರೋಬ್ಬರಿ ೨ ಚೀಲ ತೊಂಡೆ ಕಾಯಿ ಕೊಟ್ಟಿದ್ದ,೪ ದಿನ ಮಧ್ಯಾನ ಸಾರು,ರಾತ್ರಿ ಸಾರು,ಪಲ್ಯ ಎಲ್ಲಾ ತೊಂಡೆ ಕಾಯಿಂದೆ....ಕೊನೆಗೆ ಬೇಸತ್ತು ಅವರೇ ಅದನ್ನು ಮಾಡುವುದನ್ನು ಕಡಿಮೆ ಮಾಡಿಬಿಟ್ಟರು...
ಇಂಥ ಹಾಸ್ಟೆಲ್ನಲ್ಲಿ ೨ ವರ್ಷ ಮನೆ ಇಂದ,ಮನೆಯವರಿಂದ ದೂರ ಇದ್ದ ನಾವುಗಳು ಇಂಥ ಹತ್ತು ಹಲವಾರು ನೆನಪುಗಳನ್ನು ಹೊತ್ತು ಕಳೆದ ವಾರ ಭೇಟಿ ಮಾಡಿ ಮತ್ತೆ ಈ ನೆನಪುಗಳನ್ನು ಮೆಲುಕು ಹಾಕುತ್ತಾ,ಅಲ್ಲಿ ಇಲ್ಲಿ ಸುತ್ತಾಡಿ,ಆ ದಿನಗಳ ಹಾಗೆ ರಾಜಕೀಯ,ಕ್ರೀಡೆ,ಸಿನೆಮಾ ಹೀಗೆ ಹಲವಾರು ವಿಷಯಗಳ ಚರ್ಚೆ,ಜೊತೆಗೆ ಕಾಲೇಜು ಬಿಟ್ಟ ಮೇಲೆ ನಮ್ಮ ಜೀವನ ಸಾಗಿದ ಪಥ,ಕೆಲವರು ಬೇರೆ ದೇಶಕ್ಕೆ ಹೋಗಿ ಬಂದ ಅನುಭವಗಳು,ಕೆಲವರು ನಂತರ ಕಾಲೇಜು ಬಿಟ್ಟು ಬಿಸಿನೆಸ್ ಶುರು ಮಾಡಿದ್ದು,ಕೆಲವರು ನಂತರ ಕಾಲೇಜಿನಲ್ಲಿ ಆದ ಅವರ ವಿಫಲ ಪ್ರೇಮ ಕಥೆಗಳು,ಹುಡುಗಿ ಕೈ ಕೊಟ್ಟು ಹೋದ ಮೇಲೆ ಸ್ವಲ್ಪ ದಿನ ಹದ ಗೆಟ್ಟಿದ್ದ ಜೀವನ,ಕೆಲಸ ಸಿಗದೆ ಅಲೆದ ದಿನಗಳು,ಹೀಗೆ ಎಷ್ಟೋ ವಿಷಯಗಳನ್ನು ಮಾತಾಡಿ ಹಳೆ ನೆನಪುಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಕೊನೆಗೆ ಭರ್ಜರಿ ಪಾರ್ಟಿ ಮಾಡಿ,ಮಧ್ಯ ರಾತ್ರಿ ೪.೦೦ ಘಂಟೆ ವರೆಗೆ ಮೈಸೂರು ರಸ್ತೆಯಲ್ಲಿ ಬೈಕ್ ಗಳಲ್ಲಿ ಸುತ್ತಾಡಿ ಒಟ್ಟಾರೆ ಮಸ್ತ್ ಎಂಜಾಯ್ ಮಾಡಿದ್ವಿ....
ಇಷ್ಟೆಲ್ಲಾ ನೆನಪುಗಳು ಮರುಕಳಿಸುವುದಕ್ಕೆ ಕಾರಣವಾಗಿದ್ದು ಮಂಗಳೂರು,ಮುಂಬಯಿ,ಮಂಡ್ಯ,ಚಿಕ್ಕಬಳ್ಳಾಪುರ,ಚೆನ್ನೈ ಇಂದ ಬಂದಿದ್ದ ನಮ್ಮ ಸ್ನೇಹಿತರು,ಕೆಲವರು ಕಾರಣಾಂತರಗಳಿಂದ ಬರಲಿಲ್ಲ...ಈ ಒಂದು ದಿನವನ್ನು ಮಿಸ್ ಮಾಡಿಕೊಂಡರು..ಇದಕ್ಕೂ ಮುಂಚೆ ಎಷ್ಟೋ ಬಾರಿ ಭೇಟಿ ಆಗಿದ್ದೇವೆ ಆದರೂ,ಇಷ್ಟೊಂದು ಜನ ಒಟ್ಟಿಗೆ ಸೇರಿದ್ದು ಬಹುಶಃ ಕಾಲೇಜು ಬಿಟ್ಟ ಮೇಲೆ ಇದೆ ಮೊದಲು....

ರಾಮಕುಂಜದಲ್ಲಿ ಕಳೆದೆ ದಿನಗಳ ನೆನಪುಗಳು ಅಚ್ಚಳಿಯದ ಹಾಗೆ ಇನ್ನು ಹಚ್ಹ ಹಸುರಾಗಿದೆ....ಇದು ನನ್ನ ಜೀವನದಲ್ಲಿ ಬಹಳ ದೊಡ್ಡ ತಿರುವು ಕೊಟ್ಟ ಸ್ಥಳ... ಜೀವನದ ಎಷ್ಟೋ ಬಹು ಮುಖ್ಯ ಪಾಠಗಳನ್ನು ಹೇಳಿಕೊಟ್ಟಿದೆ....ಸಾಮಾಜಿಕವಾಗಿ ಬಹಳ ವಿಷಯಗಳನ್ನು ತಿಳಿಸಿದೆ.... ಎಂದೂ ಮರೆಯಲಾಗದ ದಿನಗಳು ಅವು....
ನಮ್ಮ ಹಾಸ್ಟೆಲ್ ಮತ್ತು ಸುತ್ತಮುತ್ತಲ ಪ್ರದೇಶಗಳ ಒಂದು ಕಿರು ನೋಟ ..... ಈ ಲಿಂಕ್ ನಲ್ಲಿದೆ....

Monday, September 5, 2011

ಜೀವನ ಒಂದು ಆಯ್ಕೆ !!!

ಟ್ರೈನು ಸಕಲೇಶಪುರ ದಾಟಿ ಶಿರಾಡಿ ಘಾಟಿನಲ್ಲಿ ಸಾಗುತ್ತಿದೆ...ಕಿಡಕಿ ಬದಿಯ ಸೀಟಿನಲ್ಲಿ ಕೂತು ಪ್ರಕೃತಿಯ ವಿಹಂಗಮ ನೋಟವನ್ನು ನೋಡುತ್ತಾ,ಹಸಿರು ಸೊಬಗನ್ನು ಅನುಭವಿಸುತ್ತಾ ಕಣ್ಣಿನಲ್ಲೇ ಎಲ್ಲವನ್ನೂ ಸೆರೆ ಹಿಡಿಯುತ್ತ ರೈಲಿನ ಜೊತೆ
ನಿಧಾನವಾಗಿ ಸಾಗುತ್ತಿದ್ದೇನೆ...ಪಕ್ಕದಲ್ಲೇ ಒಂದು ಗೆಳೆಯರ ಗುಂಪು.ಒಂದಷ್ಟು ಜನ ಹುಡುಗರು, ಒಂದಿಷ್ಟು ಹುಡುಗಿಯರು..,ಅವರು ಕೂಡ ನನ್ನ ಹಾಗೆ ಟ್ರಿಪ್ ಹೋಗುತ್ತಿರಬಹುದು,ಆದರೆ ನಾನು ಒಬ್ಬನೇ,ಅವರು ಗುಂಪಿನಲ್ಲಿದ್ದಾರೆ...

ಸ್ವಲ್ಪ ಸಮಯದ ನಂತರ ಒಬ್ಬ ಹುಡುಗ ಪಕ್ಕದಲ್ಲಿದ್ದ ಹುಡುಗಿಗೆ ಕೈ ಸಂಜ್ಞೆ ಮಾಡಿ ಕ್ಯಾಮೆರ ಹಿಡಿದು ಹೊರಟ,ಜೊತೆಯಲ್ಲಿ ಎಲ್ಲರೂ ಬಾಗಿಲ ಬಳಿ ಹೋದರು,ಕೊನೆಗೆ ಉಳಿದಿದ್ದು ಒಬ್ಬ ಹುಡುಗ ಮತ್ತು ಹುಡುಗಿ,ಎದುರು ಬದುರು ಸೀಟಿನಲ್ಲಿ...ಬೇರೆ ಯಾರೂ ಇಲ್ಲ...

"ಸುಷ್ಮಾ,ಒಂದು ಮಾತು ಕೇಳಲಾ ?"

"ಹಾ..ಕೇಳು "ಎಂದು ಹೇಳುವಂತೆ ಕಣ್ಣಲ್ಲೇ ಸಂಜ್ಞೆ ಮಾಡಿದಳು...

"ಅಲ್ಲ,ನಾನು ನಿನ್ನ ತುಂಬ ಇಷ್ಟ ಪಡ್ತೀನಿ,ನಾನು ನಿನ್ನನ್ನ ತುಂಬ ಪ್ರೀತಿಸ್ತೀನಿ,ನಾವಿಬ್ಬರು ಒಟ್ಟಿಗೆ ಬೆಳೆದಿದ್ದೇವೆ,ಆದರೆ ನೀನು ನನ್ನನ್ನ ಒಪ್ಪಿಕೊಳ್ಳಲೇ ಇಲ್ಲ ? ಅವನನ್ನು ಮದುವೆ ಆಗೋಕ್ಕೆ ಒಪ್ಪಿಕೊಂಡೆ " ಅಂತ ಮುಖ ಗಂಟು ಹಾಕಿಕೊಂಡೆ ಕೇಳಿದ.

"ನೋಡು ಅಜಯ್,ಒಬ್ಬ ಶಿಲ್ಪಿ ಒಂದು ದೇವಸ್ಥಾನ ಕಟ್ಟಬೇಕಾದರೆ ಒಂದೇ ಗುಡ್ಡದಿಂದ ಬಂಡೆಗಳನ್ನು ತರುತ್ತಾನೆ,ಆದರೆ ಅವನು ಅದರಲ್ಲಿ ಒಂದನ್ನು ಮಾತ್ರ ದೇವರ ವಿಗ್ರಹ ಮಾಡುವುದಕ್ಕೆ ಬಳಸಿಕೊಳುತ್ತಾನೆ.ಮಿಕ್ಕ ಕಲ್ಲುಗಳನ್ನು ಕಂಬ ಅಥವಾ ದೇವಸ್ಥಾನದ ಹೊರಗಡೆ ಮೆಟ್ಟಿಲು ಮಾಡುವುದಕ್ಕೆ ಉಪಯೋಗಿಸುತ್ತಾನೆ... ಆ ವಿಗ್ರಹ ಆಗೋ ಕಲ್ಲಿಗೆ ಅ ಪುಣ್ಯ ಇರುತ್ತೆ..ಅಷ್ಟೇ...ಅದೇ ತರಹ ಈ ವಿಷಯದಲ್ಲಿ ನಂದೂ ಆಯ್ಕೆ ಅಷ್ಟೇ !!!"

"ಹಾಗಾದ್ರೆ ನಾsssssssssssss... " 'ಮೆಟ್ಟಿಲಿಗೆ ಸಮಾನನ?' ಅಂತ ಅವನು ಹೇಳಿ ಮುಗಿಸುವ ಮೊದಲೇ,ಕತ್ತನ್ನು ಸಲ್ಪ ಎಡಕ್ಕೆ ಬಾಗಿಸಿ 'ಇರಬಹುದೇನೋ ?' ಎನ್ನೋ ಭಾವದಲ್ಲಿ ಮುಖ ಮಾಡಿದಳು...

ರೈಲು ಕಿಲೋ ಮೀಟರ್ ಉದ್ದದ ಸುರಂಗದೊಳಗೆ ಹೊಕ್ಕಿದೊಡನೆ ಭೋಗಿ ಒಳಗೆ ಕೂಡ ಕತ್ತಲು ಆವರಿಸಲು ಶುರು ಆಯಿತು,ಅದೇ ರೀತಿ ಅವನ ಭಾವದಲ್ಲಿ ಕೂಡ....

Monday, August 22, 2011

ಜೈಲು ... !!!

ಊರ ಹೊರಗಿನ ಹನುಮಪ್ಪನ ಗುಡಿ ದಾಟಿ ಸ್ವಲ್ಪ ಮುಂದೆ ಹೋದರೆ ಬಳೆಗಾರ ಶೆಟ್ಟರ ಕೆಂಗಾಡು ಹೊಲ...ಅಲ್ಲಿಂದ ಮುಂದೆ ಇರುವ ದಿಬ್ಬ ಹತ್ತಿ ಅಲ್ಲೇ ಪಕ್ಕದಲ್ಲೇ ಒಂದು ಎತ್ತಿನ ಗಾಡಿ ಹೋಗುವಷ್ಟು ಅಗಲವಾದ ಓಣಿ.. ಒಂದು ಫರ್ ಲಾಂಗ್ ಸಾಗಿದರೆ ಊರಿನವರೆಲ್ಲ ತಮ್ಮ ದನ ಕರುಗಳನ್ನು ಮೈ ತೊಳೆಯುವ ಚಿಕ್ಕದಾದ ಕಟ್ಟೆ ,ಅದರ ಹೆಸರು ಕೆಂಚನ ಕಟ್ಟೆ... ಕೆಲವು ಚಿಕ್ಕ ಮಕ್ಕಳು ಅಲ್ಲೇ ಈಜು ಆಡುತ್ತಾರೆ..ಅದೇಗೆ ಅದರಲ್ಲಿ ಬೀಳುತ್ತಾರೋ ಆ ಹನುಮಪ್ಪನೆ ಬಲ್ಲ.. ಪಕ್ಕದಲ್ಲೇ ಛೇರ್ಮನ್ ಮಲ್ಲೇಗೌಡರ ಜಮೀನು...ಇದು ಮುಂಚೆ ಗೋಮಾಳ ಆಗಿತ್ತಂತೆ... ಮಲ್ಲೇಗೌಡ ಛೇರ್ಮನ್ ಆದಮೇಲೆ ತನ್ನ ಹೆಸರಿಗೆ ಮಾಡಿಸಿಕೊಂಡ ಅಂತ ಉರವರೆಲ್ಲ ಹೇಳ್ತಾರೆ.... ಒಂದಾನೊಂದು ಕಾಲದ ಆ ಗೋಮಾಳ ಬಿಟ್ಟು ಮುಂದೆ ಹೋಗುತ್ತಾ ಎಡಗಡೆ ನೋಡಿದರೆ  ಮಾರಮ್ಮ ದೇವಸ್ಥಾನ ಇರುವ ಬೆಟ್ಟ. ದೇವಸ್ಥಾನ ದಿಂದ ಇನ್ನು ಮೇಲಕ್ಕೆ ಹೋದರೆ ಅದು ಕೋಡುಗಲ್ಲು .... ಆ ಗೋಮಾಳದಿಂದ ಮುಂದೆ ಹೋಗಿ ಅಲ್ಲೇ ಸ್ವಲ್ಪ ಎಡಗಡೆ,ಬೆಟ್ಟದ ಹಿಂದೆ ಬೆಸ್ತರ ಹಟ್ಟಿ ರಾಮಯ್ಯನ ಹೊಲ....

ರಾಮಯ್ಯ ತನ್ನ ವಂಶ ಪರಂಪರೆ ಅಂತೆ ಮೀನು ಹಿಡಿದು ಮಾರಿ ಜೀವನ ಸಾಗಿಸುತ್ತಿದ್ದಾನೆ..ಜೊತೆಗೆ ಸ್ವಲ್ಪ ಜಮೀನು ಇದೆ,ಮಳೆಗಾಲದಲ್ಲಿ ಅದು ಇದು ಬೆಳೆ ತೆಗೆಯುತ್ತಾನೆ,ಜೊತೆಗೆ ೨ ಹಸು ಮತ್ತು ಒಂದು ಜೊತೆ ಎತ್ತು ಇದೆ....ತನ್ನ ಎತ್ತಿನಲ್ಲಿ ತನ್ನ ಜಮೀನು ಅಲ್ಲದೆ ಬೇರೆಯವರ ಹೊಲದಲ್ಲಿ ಬೇಸಾಯ ಮಾಡಿ ಕೂಲಿ ತೆಗೆದು ಕೊಂಡು ಹೇಗೋ  ಸಂಪಾದನೆ ಮಾಡಿ ತನ್ನ ಇಬ್ಬರು ಮಕ್ಕಳನ್ನು ಓದಿಸುತ್ತಿದ್ದಾನೆ... ಇವನ ಮನೆ ಇರುವುದು ಭೈರಾಪುರದ ಹೊರ ಭಾಗದಲ್ಲಿ,ಬೆಸ್ತರ ಹಟ್ಟಿ ಅಂತ ಕರೆಯಲ್ಪಡುವ ಒಂದು ಕಾಲೋನಿ... ಅಲ್ಲಿ ರಾಮಯ್ಯ ಬಿಟ್ಟರೆ ಇನ್ನು ಯಾರು ತಮ್ಮ ಪೂರ್ವಜರ ವೃತ್ತಿಯನ್ನು ನಡೆಸಿಕೊಂಡು ಬಂದಿಲ್ಲ...

ಅದು ಗುರುವಾರ...ಭೈರಾಪುರದಿಂದ ೪ ಕಿಮಿ ದೂರ ಇರುವ ಸಿಂಗನೂರಿನಲ್ಲಿ ವಾರದ ಸಂತೆ... ಬೇರೆ ದಿನ ಯಾರದಾದರೂ ತೋಟದಲ್ಲಿ ಕೂಲಿ ಹೋಗುವ ರಾಮಯ್ಯ ಗುರುವಾರ ಯಾವುದೇ ಕಾರಣಕ್ಕೂ ಹೋಗಲ್ಲ...ಅವತ್ತು ಸಂತೆಗೆ ಬೆಳ್ಳಗೆ ಬೇಗನೆ ಎದ್ದು  ಮೀನು ಮಾರಲು ಹೋಗುತ್ತಾನೆ.... ತನ್ನ ವ್ಯಾಪಾರ ವಹಿವಾಟು ಮುಗಿದ ಮೇಲೆ ತನ್ನ ಹೆಂಡತಿಗೆ ದುಡ್ಡು ಕೊಟ್ಟು ಸಂತೆ ಮಾಡಲು ಕಳುಹಿಸುತ್ತಾನೆ.... ಹೆಣ್ಣು ಮಕ್ಕಳೇ ಸಂತೆ ಮಾಡಿದರೆ ಸರಿ,ಮನೆಗೆ ಏನೇನ್ ಬೇಕೋ ಅವರಿಗೆ ಚೆನ್ನಾಗಿ ಗೊತ್ತಿರದು ಅಲ್ವೇ?.ರಾಮಯ್ಯನ ಹೆಂಡತಿ ಪುಟ್ಟವ್ವ ಪ್ರತಿ ವಾರ ಮಧ್ಯಾನದ ವೇಳೆಗೆ ಅಕ್ಕ ಪಕ್ಕದ ಮನೆಯ ಹೆಣ್ಣು ಮಕ್ಕಳೊಂದಿಗೆ ಜೊತೆ ಗೂಡಿ ಸಂತೆ ಮಾಡಲು ನಡೆದೇ ಹೋಗುತ್ತಾರೆ....

ಅವತ್ತು ಮಾತ್ರ ತನಗೆ ಗ್ರಾಮ ಲೆಕ್ಕಾಧಿಕಾರಿ  ಹತ್ತಿರ ತನ್ನ ಜಮೀನಿಗೆ  ಸಂಭಂದ ಪಟ್ಟ ಕೆಲಸ ಇದ್ದರಿಂದ ಮತ್ತು ಆ ಪುಣ್ಯಾತ್ಮ ವಾರಕ್ಕೆ ಒಂದೇ ದಿನ ಕೈಗೆ ಸಿಗುವುದರಿಂದ  ಅವತ್ತೇ ಆ ಕೆಲಸ ಮಾಡಿಸಿ ಕೊಳ್ಳಬೇಕಿತ್ತು  ... ಸಂತೆ ಬೇರೆ,ತುಂಬ ಜನ ಇರುತ್ತಾರೆ,ಎಷ್ಟೊತ್ತು ಆಗುತ್ತೋ ಏನೋ ಎಂದು ತಿಳಿದು ತನ್ನ ಹೆಂಡತಿಗೆ ಇವತ್ತು ಪೇಟೆಯಲ್ಲಿ ನನಗೆ ಸ್ವಲ್ಪ ಕೆಲಸ ಇದೆ,ನಾನು ಬರುವುದು  ಲೇಟ್ ಆಗಬಹುದು...ನೀನು ಹಸುಗಳನ್ನು ಮೇಯಿಸುತ್ತಿರು,ಹಂಗೆ ಏನೇನ್ ತರ್ಬೇಕೋ ಒಂದು ಚೀಟಿ ಬರೆದು ಕೋಡು...ಇವತ್ತು ನಾನೇ ಸಂತೆ ಮಾಡ್ಕಂಡ್ ಬರುತ್ತೀನಿ ಅಂತ ಹೇಳಿ ಚೀಟಿ ತೆಗೆದು ಕೊಂಡು ಮೀನು ಮಾರಲು ಹೋದ...ಹೀಗೆ ಯಾವುದೇ ರೀತಿಯ ಅನುಮಾನ ಪಡದೆ  ಹೇಳಿ ಹೋದ ರಾಮಯ್ಯನಿಗೆ  ತಾನು ಅಕಸ್ಮಾತ್ ಬೇಗ ಬಂದರೆ ತನ್ನ ಹೆಂಡತಿಯ ಇನ್ನೊಂದು ಮುಖ ತಿಳಿಯುತ್ತದೆ ಎಂದು ಭಾವಿಸಿರಲಿಲ್ಲ...

ಜೆಲೇಬಿ ಮೀನು,ಹಾವು  ಮೀನು,ಕಾಟ್ಲ, ಮೀಸೆ ಮೀನು,ಗೆಂಡೆ ಮೆನು  ಎಲ್ಲವನ್ನು ಮಾರಿ ಆ ಗ್ರಾಮ ಲೆಕ್ಕಿಗನಿಗೆ ಹಂಗೆ ಒಂದು ಗಾಂಧೀ ಪೇಪರ್ ಕೊಟ್ಟು ತನ್ನ ಕೆಲಸವನ್ನು ಸ್ವಲ್ಪ ಸಲೀಸಾಗಿ ಮತ್ತು  ಬೇಗ  ಮುಗಿಸಿಕೊಂಡು,ಹೇಗೂ ಇನ್ನೂ ಸಮಯ ಇದೆ ,ಅವಳೇ ಸಂತೆ ಮಾಡಿದರೆ ಸರಿ,ಆಮೇಲೆ ಸುಮ್ನೆ ಅದು ತಂದಿಲ್ಲ,ಇದು ಬೇಡವಾಗಿತ್ತು ಅಂತ ರಗಳೆ ಯಾಕೆ,ಅವಳನ್ನೇ ಕಳಿಸಿದರಾಯಿತು ಅಂತ ಹಾಗೆ ಸ್ವಾರ್ಣಲೋಕ ಬಾರ್  ಕಡೆ ಹೆಜ್ಜೆ ಹಾಕಿ ಸಂಜೆಗೆ ಮೀನಿನ ಫ್ರೈ ಜೊತೆ ಬೇಕಾಗುತ್ತೆ ಅಂತ ಎರಡು ಕ್ವಾಟರ್ MC ವಿಸ್ಕಿ ತೆಗೆದು ಕೊಂಡು ಮೀನು ತಂದಿದ್ದ ಕುಕ್ಕೆಯಲ್ಲಿದ್ದ ತಕ್ಕಡಿಯಲ್ಲಿಟ್ಟು ಮನೆ ಕಡೆ ಹೊರಟ....ಬೇರೆ ದಿನ ಪ್ಯಾಕೆಟ್ ಸಾರಾಯಿ ಕುಡಿಯವ ರಾಮಯ್ಯ ಮೀನಿನ ವ್ಯಾಪಾರ ಜೋರಾಗಿತ್ತು ಅನ್ಸುತ್ತೆ ಅವತ್ತು ಮಾತ್ರ ಬಾರಿಗೆ ಹೋಗಿ ವಿಸ್ಕಿ ಕೊಂಡ.... ಜೇಬಲ್ಲಿ ದುಡ್ಡಿದ್ದರೆ ತೂಕ ಅಲ್ವ? ಅಲ್ಲದೆ ದುಡ್ಡು  ಜೇಬಲ್ಲಿ ಕುಣಿಯುತ್ತೆ ಬೇರೆ....

ಇತ್ತ ಪುಟ್ಟವ್ವ ಹಾಲು ಕರೆದು ಡೈರಿಗೆ ಹಾಕಿ ಬಂದು ಮಕ್ಕಳಿಗೆ ತಿಂಡಿ ಮಾಡಿ ಕೊಟ್ಟು ಅವರನ್ನು ಶಾಲೆಗೆ ಕಳಿಸಿ ಹೇಗೂ ಇವರೇ ಸಂತೆ ಮಾಡ್ಕೊಂಡು ಬರುತ್ತಾರೆ,ಹೊಲ ಬೇರೆ ಅಷ್ಟೂ ದೂರ ಅಂತ ಮಧ್ಯಾನಕ್ಕೆ  ಬುಟ್ಟಿ ಕಟ್ಟಿಕೊಂಡು   ಹಸುಗಳನ್ನು ಮೇಯಿಸುವುದಕ್ಕೆ  ಹೋಗಿದ್ದಾಳೆ....

ಇತ್ತ  ರಾಮಯ್ಯ ಮನೆಗೆ ಬಂದವನೇ ತಂದಿದ್ದ ಬಾಟಲಿಗಳನ್ನು ಅಟ್ಟದ ಮೇಲಿಟ್ಟು ಹೆಂಡತಿಯನ್ನು ಸಂತೆಗೆ ಕಳುಹಿಸುವ ಸಲುವಾಗಿ  ಹೊಲದ ಕಡೆ ಹೆಜ್ಜೆ ಹಾಕ ತೊಡಗಿದ...ತನ್ನ ಹೊಲದಲ್ಲಿ ಮಧ್ಯದಲ್ಲಿ ತೆಂಗಿನ ಗರಿ ಇಂದ ಒಂದು ಸಣ್ಣ ಗುಡಿಸಲು ಕಟ್ಟಿದ್ದಾನೆ,ಇಟ್ಟಿಗೆ ಇಂದ ಕಟ್ಟಿಸುವಷ್ಟು  ಶಕ್ತನಲ್ಲ ಹಾಗಾಗಿ...ಸೀದಾ ಬಂದವನೇ ಅತ್ತಿತ್ತ ಕಣ್ಣಾಯಿಸಿ ಹಸುಗಳನ್ನು ಕಟ್ಟಿದ್ದ
ಜಾಗಕ್ಕೆ ಹೋಗಿ,ಮತ್ತೊಮ್ಮೆ ಜೋಳದ ಮೇವು ಕೂಯ್ದು ಅವುಗಳಿಗೆ ಹಾಕಿ ಹೆಂಡತಿಯನ್ನು ಹುಡುಕಿದ,ಬಹುಷಃ ಗುಡಿಸಿಲಿನಲ್ಲಿ ಇರಬಹುದು ಎಂದು ಅತ್ತ ಹೊರಟ.... ಮಾರಮ್ಮ ಬೆಟ್ಟದ ಕೋಡುಗಲ್ಲಿನ ಮೇಲೆ ಇರುವ ಬೃಹದಾಕಾರದ ಒಂದು ಬಂಡೆ,ಚಿಕ್ಕವನಾಗಿದ್ದಾಗಿಂದಲೂ ಅದು ಹೇಗೆ ಪುಟ್ಟ ಪುಟ್ಟ ಬಂಡೆಗಳ ಮೇಲೆ ಕೂತಿದೆ ಎಂದು ಯೋಚಿಸುತ್ತಿದ್ದ ರಾಮಯ್ಯನಿಗೆ ಆ ದೊಡ್ಡ ಬಂಡೆ ಸೀದಾ ತನ್ನ ಮೇಲೆ ಉರುಳುತ್ತಿರುವಂತೆ ಭಾಸವಾಯಿತು....

 ತನ್ನ ಹೊಲದ ಪಕ್ಕದಲ್ಲೇ ಕಬ್ಬಿನ ಗದ್ದೆ ಮತ್ತು ಬಾಳೆ ತೋಟ,ಅಲ್ಲಿಂದ ಮುಂದೆ ಹೋದರೆ ಚೋಮನ ದೇವರ ಗುಡಿ ಇರುವ ಒಂದು  ಗುತ್ತಿ,ಅಲ್ಲೇ ಮುಂದೆ ಸಾಗಿದರೆ ಸಿಗುವ ಕಾಗೆ ಹಳ್ಳ ದಾಟಿ ಅರ್ಧ ಮೈಲಿ ಹೋದರೆ ೨೦ ಮನೆ ಇರುವ  ಕುಂಚನಗೆರೆ ಗ್ರಾಮ....ಆ ಕಬ್ಬಿನ ಗದ್ದೆ ಮತ್ತು ಬಾಳೆ ತೋಟ ಆ ಕುಂಚನಗೆರೆ ಪಟೇಲರ ಎರಡನೇ ಮಗ ಸಿದ್ದೇಗೌಡನಿಗೆ ಸೇರಿದ್ದು....ರಾಮಯ್ಯ ಬಲಕ್ಕೆ ಒಮ್ಮೆ ಕಣ್ಣಾಯಿಸಿ ನೋಡಿದಾಗ ಅಲ್ಲೇ ಒಂದು ಬುಲ್ಲೆಟ್ ಕಂಡಿತು,ಅದು ಸಿದ್ದೆಗೌಡನದ್ದು...ಸುತ್ತ ಎಂಟಳ್ಳಿಯಲ್ಲಿ ಇವನ ಹತ್ತಿರ ಬಿಟ್ಟರೆ ಬೇರೆ ಯಾರ ಹತ್ತಿರವೂ ಈ ಬೈಕು ಇಲ್ಲ....

ಗುಡಿಸಲಿನ ಮುಂದೆ ಎರಡು ಜೊತೆ ಚಪ್ಪಲಿಗಳನ್ನು ಕಂಡಾಗ ರಾಮಯ್ಯನಿಗೆ ದಿಗಿಲು ಬಡಿದಂತಾಯಿತು ...
ಸಿದ್ದೇಗೌಡನಿಗೆ ಮೀನು ತಿನ್ನುವ ಚಪಲ,ತನ್ನ ಮನೆಯಲ್ಲಿ ಪಕ್ಕಾ ಸಸ್ಯಾಹಾರಿ,ಬಹುಷಃ ಇವನಿಗೆ ಮಾಂಸ ತಿನ್ನುವ ಚಟ ಇದೆ ಅಂತ ತಿಳಿದರೆ ಅವನನ್ನು ಮನೆಯಿಂದ ಹೊರ ಹಾಕುವುದಕ್ಕೂ ಯೋಚಿಸಲ್ಲ ಅವನ ತಾಯಿ...
ಆದ್ದರಿಂದ ಅವಾಗವಾಗ ತನ್ನ ತೋಟದ ಪಕ್ಕದಲ್ಲೇ ಇರುವ ರಾಮಯ್ಯನಿಗೆ ಹೇಳಿ ತರಿಸಿಕೊಳ್ಳುತ್ತಿದ್ದ..ಹೇಗೂ ಇವನು ಮೀನು ಹಿಡಿದು ಮಾರುತ್ತಾನೆ,ಬರೀ ತಂದು ಕೊಟ್ಟರೆ ಸಾಲದು,ಅವನಿಗೇನು ಅಡುಗೆ  ಮಾಡಕ್ಕೆ ಬರುತ್ತಾ ?,ಪುಟ್ಟವ್ವನೆ ಅದನ್ನು ಭೇಯಿಸಿ ತಂದು ಕೊಡುತ್ತಿದ್ದಳು...ರಾಮಯ್ಯ ಸಿದ್ದೇಗೌಡನ  ತೋಟಕ್ಕೂ  ಕೂಲಿ ಕೆಲ್ಸಕ್ಕೆ ಹೋಗುತ್ತಿದ್ದನಾದ್ದರಿಂದ ಅವನು ಇವನಿಗೆ ಹೇಳಿ ತರಿಸುತ್ತಿದ್ದ...

ಒಂದು ಕ್ಷಣ ಪಟೇಲರು ಮೀನು ತಿನ್ನುವುದಕ್ಕೆ ಬಂದಿರಬಹುದು ಎಂದು ತಿಳಿದರೂ ಕೂಡ , ಗುಡಿಸಲಿನ ಬಾಗಿಲು ಹಾಕಿದ್ದರಿಂದ ಅವನಿಗೆ ಅನುಮಾನ ಶುರು ಆಯಿತು...ಬಾಗಿಲು ಹಾಕಿದರೆ ಒಳಗಡೆ ಬೆಳಕು ಬರುವುದಿಲ್ಲ... ಅ ಕತ್ತಲಲ್ಲಿ ತಿನ್ನಲು ಸಾಧ್ಯವಿಲ್ಲ...
ಯಾಕೋ ಮನಸ್ಸಿಗೆ  ಒಂದು ರೀತಿ ಆಗಿ,ದುಡುಕಬಾರದು ಎಂದು ತಿಳಿದು ಸಂಜೆ ಮನೆಯಲ್ಲಿ ವಿಚಾರಿಸಿದರೆ ಆಗುತ್ತದೆ ಎಂದು ಸಂತೆ ಕಡೆ ಹೊರಟ....

ಹೆಂಡತಿಯ ಮೇಲೆ ವಿಪರೀತ ಕೋಪ ಇದ್ದ ರಾಮಯ್ಯ ಸಂತೆ ಇಂದ ಬರುವಾಗ ಕುಂಟ ರಾಜನ ಪೆಟ್ಟಿಗೆ ಅಂಗಡಿಯಲ್ಲಿ ಕಂಠ ಪೂರ್ತಿ ಕುಡಿದು ಬಂದ,ಮಕ್ಕಳಿಬ್ಬರೂ ಕೂಡ ಪ್ರತಿ ದಿನ ಇವನ ಅಣ್ಣನ ಮನೆಗೆ ಓದಿಕೊಳ್ಳಲು ಹೋಗುತ್ತಾರೆ....ಅಲ್ಲಿ ಅಣ್ಣನ ಮಗಳು ಇವರು ಪಾಠ ಹೇಳಿಕೊಡುವುದರಿಂದ ಅಲ್ಲಿಗೆ ಹೋಗುವ ಅಭ್ಯಾಸ...ಇವತ್ತು ರಾಮಯ್ಯ ಸಂತೆ ಇಂದ ಬರುವ ವೇಳೆಗೆ ಮಕ್ಕಳು ಆಗಲೇ ಅಲ್ಲಿಗೆ ಹೋಗಿದ್ದರು,ಬಂದವನೇ ಹೆಂಡತಿಯ ಹತ್ತಿರ ಹೇಗೆ ಮಾತು ಶುರು ಮಾಡುವುದು ಎಂದು ತಿಳಿಯದೆ ಚಿಂತಿಸ ತೊಡಗಿದ...ಸೀದಾ ಮನೆ ಹೊರಗಡೆ ಹೋದವನೇ ಒಂದು ದಡಿ ಕೋಲು ತಂದು ಅಡುಗೆ ಮನೆಯಲ್ಲಿ  ಒಲೆ ಅಚ್ಚುತ್ತಿದ ಪುಟ್ಟವ್ವನಿಗೆ ಒಡೆಯಲು ಶುರು ಮಾಡಿದ ...

ಅಯ್ಯಯ್ಯೋ,ದಮ್ಮಯ್ಯ ,ಯಾಕೆ ಹೊಡಿತಿದ್ದಿರ ಅಂತ ಕಿರುಚಿದರೂ ಇನ್ನು ತನ್ನ ಆಟವನ್ನು ನಿಲ್ಲಿಸಿಲ್ಲ...
'ನಾನು ಮಧ್ಯಾನ ಹೊಲಕ್ಕೆ ಬಂದಿದ್ದೆ,ಆ ಪಟೇಲ ಗುಡಿಸಿನಲ್ಲೇ  ಇದ್ದ ಅಲ್ವಾ?' ಅಂತ ಹೇಳಿದಾಗ, ಯಾರೋ ಬಂದು ಹಸುಗಳಿಗೆ ಮೇವು  ಹಾಕಿ ಹೋಗಿರುವುದು ನೆನಪಾಗಿ  ,ಇದು ತನ್ನ ಗಂಡನೇ ಎಂದು ತಿಳಿದು ಅವಳಿಗೆ ತನ್ನ ತಪ್ಪಿನ ಅರಿವಾಯಿತು...

ಅಷ್ಟೊತ್ತಿಗಾಗಲೇ ಪಕ್ಕದ ಮನೆಯಲ್ಲೇ ಇದ್ದ ತಮ್ಮ ಮಕ್ಕಳು ಮತ್ತು ಅಣ್ಣ ಅತ್ತಿಗೆ ಎಲ್ಲಾ ಅಲ್ಲಿಗೆ ಬಂದರು...ಆದರೆ ಯಾಕೆ ಜಗಳ ಮಾಡುತ್ತಿದ್ದೀವಿ ಎಂದು ರಾಮಯ್ಯ ಅಥವಾ ಪುಟ್ಟವ್ವ ಇಬ್ಬರೂ  ಹೇಳುವ ಸ್ಥಿತಿಯಲ್ಲಿ ಇರಲಿಲ್ಲ..
ಎಲ್ಲರೂ ಕುಡಿದು ಬಂದು ಜಗಳ ಮಾಡುತ್ತಿದ್ದಾನೆ ಎಂದು ಸುಮ್ಮನಾದರು...

ನಂತರ  ಮಕ್ಕಳಿಗೆ ಊಟ ಬಡಿಸಿ ಅವರು ಮಲಗಿದ ನಂತರ ಅಟ್ಟದ ಮೇಲಿದ್ದ ವಿಸ್ಕಿ ಬಾಟಲಿಗೆ ಕೋಸಿಗೆ ಸಿಂಪಡಿಸಲು ತಂದಿದ್ದ ಔಷಧಿ ಬೆರೆಸಿ  ಕುಡಿದು ಬಿಟ್ಟಳು...ಊಟ ಮಾಡದೆ ಮನೆಯ ಜಗುಲಿಯ ಮೇಲೆ ಮಲಗಿದ್ದ ರಾಮಯ್ಯನಿಗೆ ಇದರ ಅರಿವೇ ಇಲ್ಲ....
ಮಧ್ಯ ರಾತ್ರಿ ಇದ್ದಕಿದ್ದ ಹಾಗೆ ನೋವು  ತಡೆಯಲಾರದೆ ಅವಳು ಕಿರುಚಲು ಶುರು ಮಾಡಿದಾಗ ಒಳಗೆ ಬಂದು ನೋಡಿದರೆ ನೆಲದ ಮೇಲೆ ಹೊರಳಾಡುತ್ತಿದ್ದಾಳೆ,ಮತ್ತು ಅವಳ ಬಾಯಲ್ಲಿ ಒಂದು ರೀತಿಯ ರಸ ಸೋರುವುದನ್ನು ಗಮನಿಸಿ ಏನೋ ಅನಾವುತ ಮಾಡಿಕೊಂಡಿದ್ದಾಳೆ ಎಂದು ತಿಳಿದು ನಡು ರಾತ್ರಿಯಲ್ಲಿ ಎತ್ತಿನ ಗಾಡಿಯಲ್ಲಿ ಅವಳನ್ನು ಪೇಟೆಗೆ ಆಸ್ಪತ್ರೆಗೆ ಕರೆದುಕೊಂಡು ಹೋದ...

ಬೆಳಗ್ಗೆ ಹೊತ್ತಿಗೆ ತನ್ನ ಅಣ್ಣ ಅತ್ತಿಗೆ ಮಕ್ಕಳು ಎಲ್ಲಾರಿಗೂ ವಿಷಯ ತಿಳಿದು ಎಲ್ಲಾ ಆಸ್ಪತ್ರೆಗೆ ಬಂದರು...ಪುಟ್ಟವ್ವನ ಸ್ಥಿತಿ ಆಗಲೇ ಗಂಭೀರ ಆಗಿತ್ತು...ಚಿಕಿತ್ಸೆ ಕೊಡುವ ಮೊದಲು ವೈದ್ಯರು ಒಂದು ಫಾರಂಗೆ ಇವನ ಬಳಿ ಸಹಿ ಪಡೆದಿದ್ದರು...ಇತ್ತ ರಾಮಯ್ಯನಿಗೂ ತನ್ನ ತಪ್ಪಿನ ಅರಿವಾಯಿತು...ಅವಳು ಬದುಕುವುದಿಲ್ಲ ಎಂದು ಖಾತರಿ ಆದ ಮೇಲೆ ಅಲ್ಲಿಂದ ಕಾಲು ಕಿತ್ತ...ಸ್ವಲ್ಪ ಸಮಯದಲ್ಲೇ
ಪುಟ್ಟವ್ವ ತೀರಿಕೊಂಡಳು....
ಸರಿ  ಅಷ್ಟೊತ್ತಿಗಾಗಲೇ ಅವನು ಪರಾರಿ ಆಗಿರುವ  ವಿಷಯ ಎಲ್ಲರಿಗೂ ತಿಳಿಯಿತು,ಅವನು ಬರುವುದಿಲ್ಲ ಎಂದು ತಿಳಿದು ಅವನ ಅಣ್ಣನೆ ಆಕೆಯ ಅಂತ್ಯ ಕ್ರಿಯೆ ಹೊಣೆ ಹೊತ್ತನು...ಅವಳ ಹೆಣವನ್ನು ಸುಡುವುದನ್ನು ರಾಮಯ್ಯ ಅದೇ ಕೋಡುಗಲ್ಲಿನ ದೊಡ್ಡ ಬಂಡೆಯ ಬಳಿ ನಿಂತು ಅಲ್ಲಿಂದ ನೋಡಿದ...೩-೪ ದಿನ ಅಲ್ಲಿ ಇಲ್ಲಿ ಸುತ್ತಾಡಿದ ಇವನು ,ತನ್ನ ಮಕ್ಕಳನ್ನು ನೆನೆದು ಮನೆಗೆ
ಹಿಂದಿರುಗಿದ,ಆದರೆ ಆಗಲೇ ಪೊಲೀಸರು ಇವನ ಹಿಂದೆ ಬಿದ್ದಿರುವುದು ಅವನಿಗೆ ತಿಳಿದೇ ಇರಲಿಲ್ಲ...

ಬಂದವನೇ ತನ್ನ ಸ್ನೇಹಿತ ರಂಗಯ್ಯನ ಹತ್ತಿರ ನಡೆದ ವಿಷ್ಯ ಎಲ್ಲಾ ಹೇಳಿದ್ದ,ರಂಗಯ್ಯನ ಮಗಳು ಮತ್ತು ಇವನ ಮಗಳು ಒಂದೇ ಕ್ಲಾಸ್ಸಿನಲ್ಲಿ ಓದುತ್ತಿದ್ದಾರೆ....ಪೊಲೀಸರಿಗೆ ಇವನು ಬಂದಿರುವ ಸುಳಿವು  ಸಿಕ್ಕೊಡನೆ ಇವನನ್ನು ಅರೆಸ್ಟ್ ಮಾಡಿದರು ಮತ್ತು ಕೋರ್ಟಿನಲ್ಲಿ ಇರಿಂಗ್  ನಡೆಯುತ್ತಿತ್ತು ,ಇವನು ಪೋಲಿಸ್ ವಶದಲಿದ್ದ...
ಇತ್ತ ಮಕ್ಕಳು ಅಣ್ಣನ ಮನೆಯಲ್ಲಿ ಇದ್ದಾರೆ ,ಅತ್ತಿಗೆಯೇ ಇವನ ಮಕ್ಕಳಿಂದ  ಪೊಲೀಸರಿಗೆ ದೂರು ಕೊಡೆಸಿದ್ದಳು.... ಏನು ಮಾಡುತ್ತಿದ್ದೇವೆ,ಇದರಿಂದ ತನ್ನ ತಂದೆ ಜೈಲಿಗೆ ಹೋಗುತ್ತಾರೆ ಎಂಬ ಸುಳಿವು ಸಿಗದ ಹಾಗೆ ಅವರಿಂದ ದೂರು ಕೊಡಿಸುತ್ತಾಳೆ....

ಈ ಮಕ್ಕಳಿಗೆ ಶಾಲೆಯಲ್ಲಿ ಒಂದು ರೀತಿಯ ಕಿರಿ ಕಿರು ಶುರು ಆಯಿತು....ಎಲ್ಲರೂ ನಿಮ್ಮಪ್ಪ ಜೈಲಲ್ಲಿ ಇದಾರಂತೆ,ನಿಮ್ಮ ಅಪ್ಪ,ನಿಮ್ಮ ಅಮ್ಮನ ಸಾಯ್ಸಿದರಂತೆ?ಹೀಗೆ ಕೇಳಲು ಶುರು ಮಾಡಿದರು... ಮಕ್ಕಳು ಅಳಲು  ಶುರು ಮಾಡಿದರು.... ಆಗ ರಂಗಯ್ಯನ ಮಗಳು ಮನೆಯಲ್ಲಿ  ಈ ವಿಷಯ ಹೇಳಿದಾಗ, ಎಲ್ಲಾ ವಿಷಯ ತಿಳಿದಿದ್ದ ರಂಗಯ್ಯ ಊರಿನ ಕೆಲವು ಮುಖಂಡರೊಡನೆ ಚರ್ಚಿಸಿ ,ಮಕ್ಕಳು ಓದುತ್ತಿದ್ದ ಶಾಲೆಯ ಮಾಸ್ತರು ಬಳಿ ವಿಷಯ ತಿಳಿಸಿ ರಾಮಯ್ಯನ ಮಕ್ಕಳಿಗೆ ತನ್ನ ತಂದೆಯ ತಪ್ಪಿಲ್ಲ ಮತ್ತು ಅವರು ಕೊಟ್ಟಿರುವ ದೂರನ್ನು ಹಿಂಪಡೆಯಲು  ಹೇಳಿ ಎಂದು ಹೇಳಿದ...ಅವನ ಅತ್ತಿಗೆಗೆ ಊರಿನವರೆಲ್ಲ ಇವನನ್ನು ಜೈಲಿನಿಂದ ಬಿಡಿಸಲು ಹೊಂಚು ಹಾಕುತ್ತಿದ್ದಾರೆ ಮತ್ತು ಮಕ್ಕಳ ಕಿವಿಗೆ  ಏನೇನೋ ತುಂಬುತ್ತಿದ್ದಾರೆ   ಎಂದು ತಿಳಿದು ಅವರನ್ನು ಶಾಲೆಗೇ ಕಳುಹಿಸುವುದನ್ನು ನಿಲ್ಲಿಸುತ್ತಾಳೆ..........

ಇತ್ತ ಮಕ್ಕಳಿಗೆ ತಾಯಿಯು ಸತ್ತಿದ್ದಾಳೆ,ಬದುಕಿರುವ ತಂದೆ ಜೈಲಿನಲ್ಲಿ  ಇದ್ದಾರೆ,ಒಂದು ರೀತಿಯಲ್ಲಿ ಮಾನಸಿಕೆ ಹಿಂಸೆ ಅಲ್ಲದೆ ತಮ್ಮ ದೊಡ್ಡಮ್ಮ ಕೂಡ ಹಿಂಸೆ ಕೊಡುತ್ತಿದ್ದಾರೆ ....,ಹೇಗೋ ಹಠ ಹಿಡಿದು ಕಡೆ ಪಕ್ಷ ಶಾಲೆಗಾದರು ಹೋಗಬೇಕು ಎಂದು ಶಾಲೆಗೇ ಹೋಗಲು ಶುರು ಮಾಡಿದರು... ಹಿಂದೆ ಒಂದು ದಿನ ತಮ್ಮ ಮೇಷ್ಟ್ರು ತಮ್ಮ ತಾಯಿ ಸತ್ತ ನಂತರ ತಮ್ಮ
ತಂದೆಯನ್ನು ಜೈಲಿನಿಂದ ಬಿಡಿಸುತ್ತೇವೆ ಎಂದು ಹೇಳಿದ್ದು  ನೆನಪಾಗಿ ಅವರ ಹತ್ತಿರ ಹೋದರು... ಮಾಸ್ತರಿಗೆ ಇವರು ಇಷ್ಟು ದಿನ ಯಾಕೆ ಶಾಲೆಗೇ ಬಂದಿರಲಿಲ್ಲ ಎಂಬ ವಿಷಯ ಗೊತ್ತಿತ್ತು ಮತ್ತು ಮಕ್ಕಳನ್ನು ನೋಯಿಸಬಾರದು ಎಂದು ಅದರ ಬಗ್ಗೆ ಕೇಳಲೇ ಇಲ್ಲ...

ರಂಗಯ್ಯನನ್ನು ಶಾಲೆಗೇ ಕರೆಸಿ ಮೇಷ್ಟ್ರು ಮತ್ತು ರಂಗಯ್ಯ ಇಬ್ಬರೂ ಮಕ್ಕಳಿಗೆ ತಮ್ಮ ತಂದೆ ಹೊಡೆದಿದ್ದರಿಂದ ತಮ್ಮ ತಾಯಿ ಸತ್ತಿಲ್ಲ,ಅವಳು ವಿಷ ಕುಡಿದು ಸತ್ತಿದ್ದು, ಅವನೇ ಹೊಡೆದಿದ್ದರೆ ಅವನಾಗೇ ಯಾಕೆ ಆಸ್ಪತ್ರೆಗೆ ಸೇರಿಸುತ್ತಿದ್ದ ಎಂದೆಲ್ಲ ಹೇಳಿದ ಮೇಲೆ, ಅವರಿಬ್ಬರಿಗೂ ನಡೆದ ವಿಷ್ಯ ಅರ್ಥ ಆಗ ತೊಡಗಿತು...ಆದರೆ ಮೇಷ್ಟ್ರು ಆಗಲಿ,ರಂಗಯ್ಯ ಆಗಲಿ ರಾಮಯ್ಯ ತನ್ನ ಹೆಂಡತಿಗೆ ಯಾಕೆ ಹೊಡೆದ,ಯಾಕೆ ಜಗಳ ಮಾಡಿದ ಎಂಬ ವಿಷಯವನ್ನು ಮಾತ್ರ ಮಕ್ಕಳಿಗೆ ಹೇಳಲಿಲ್ಲ,ಹೇಳಿದ್ದರೆ ಅವರಿಗೆ ತಮ್ಮ ತಾಯಿಯ ಮೇಲೆ ಅಸಡ್ಡೆ ಬರುತಿತ್ತೋ ಅಥವಾ ಅವರ ಮನಸ್ಸಿಗೆ ಎಂದೂ ಮಾಸದ ಗಾಯ ಆಗಿ ಬಿಡುತ್ತಿತ್ತು,...

ಹೇಗೋ ರಾಮಯ್ಯನ ಅತ್ತಿಗೆಗೆ ಗೊತ್ತಾಗದ ಹಾಗೆ ಮಕ್ಕಳನ್ನು ಓಲೈಸುವಲ್ಲಿ ಇವರಿಬ್ಬರೂ ಯಶಸ್ವಿ  ಆಗಿದ್ದರು...ಮುಂದಿನ ಇರಿಂಗ್ ಗೆ ಮಕ್ಕಳೊಡನೆ ಅವನ ಅಣ್ಣ ಮತ್ತು ಅತ್ತಿಗೆ ಇಬ್ಬರು ಬಂದರು,ರಂಗಯ್ಯ ಕೂಡ ಬಂದಿದ್ದ,ಆದರೆ ಮೇಷ್ಟ್ರು ಮಾತ್ರ ಬಂದಿರಲಿಲ್ಲ.... ಕೋರ್ಟಿನಲ್ಲಿ ಲಾಯರ್ ಕೇಳುವ ಪ್ರಶ್ನೆಗಳಿಗೆ ಏನೇನು ಉತ್ತರ ಹೇಳಬೇಕು ಎಂದು ಮೇಷ್ಟ್ರು ಹೇಳಿ ಕೊಟ್ಟಿದ್ದರು...

ಅದರಂತೆ ಮಕ್ಕಳು ತಮ್ಮ ತಂದೆಯನ್ನು ಜೈಲಿನಿಂದ ಕಳುಹಿಸಿ ಎಂದು  ತಮ್ಮ ಮುಗ್ಧ ಭಾವದಿಂದ ಕೇಳಿಕೊಂಡರು,ಕೆಲವು ಪ್ರಶ್ನೋತ್ತರಗಳು ಮುಗಿದ ಮೇಲೆ ದೂರು ಕೊಟ್ಟಿದ್ದ ಮಕ್ಕಳು,ಇದು ನಮಗೆ ತಿಳಿಯದಂತೆ ತಮ್ಮ ದೊಡ್ಡಮ್ಮ ಹೇಳಿಕೊಟ್ಟ ಹಾಗೆ ನಾವು ಪೋಲೀಸರ ಹತ್ತಿರ ಹೇಳಿದ್ದೆವು ಎಂದು ತಿಳಿಸದರು...ಇವರು  ಹೇಳಿದಂತೆ ಪೊಲೀಸರು ಬರೆದು ಕೊಂಡಿದ್ದರು ಅಷ್ಟೇ.... ಅಲ್ಲದೆ  ಇವನ ಅಣ್ಣ ಅತ್ತಿಗೆಗೆ ಒಂದು ರೀತಿಯ ಹಿನ್ನಡೆ ಆಯಿತು...ರಾಮಯ್ಯನ ಅತ್ತಿಗೆ ಈ ರೀತಿ ದೂರು ಕೊಡಲು ಒಂದು ಮುಖ್ಯ ಕಾರಣ ಎಂದರೆ,ಪುಟ್ಟವ್ವ ಅವಳ ಸ್ವಂತ ತಂಗಿ....

ಹೇಗೋ ಒಟ್ಟಿನಲ್ಲಿ ರಾಮಯ್ಯ ಜೈಲಿನಿಂದ ಬಿಡುಗಡೆ ಆದ,ಈಗ ಮಕ್ಕಳನ್ನು ಸಾಕುವ ಹೊಣೆ ಇದೆ,ಜೊತೆಗೆ ಅವರಿಗೆ ಇದರ ಹಿಂದಿನ ವಿಷಯ ತಿಳಿಯಬಾರದು ಮತ್ತು ಅವರಿಗೆ ತಾಯಿಯ ಕೊರಗು
ಬಾರದಂತೆ ನೋಡಿ ಕೊಳ್ಳಬೇಕು....

ಎಷ್ಟೋ ಜನ ಇನ್ನೊಂದು ಮದುವೆ ಮಾಡಿಕೊ ಎಂದರೂ ಕೂಡ,ಇವನು ಮರು ಮದುವೆ ಆಗದೆ ಹಾಗೆ ಇದ್ದಾನೆ....
ಮಕ್ಕಳಿಗೆ ಮಲತಾಯಿ ಬೇಡ ಎಂಬುದು ಇವನ ಆಶಯ...
------
^^^^^^

Sunday, August 7, 2011

Happy Friendship Day !!!!


ಇದೊಂದು ಅಮೂಲ್ಯ ಬೆಸುಗೆ....
ಇಲ್ಲಿ ವಯಸ್ಸಿನ ಅರಿವಿಲ್ಲ..,
ಗಂಡು ಹೆಣ್ಣೆಂಬ ಅಂತರವಿಲ್ಲ,
ಜಾತಿ,ಧರ್ಮಗಳ ಭೇದವಿಲ್ಲ...
ಕುಲ ಗೊತ್ರಗಳು ಲೆಕ್ಕಕಿಲ್ಲ...
ಪ್ರೀತಿ,ಔದಾರ್ಯಕ್ಕೆ ಕೊರತೆಯಿಲ್ಲ...
ಇದು ಬಿಡಿಸಲಾಗದ ಸ್ನೇಹ ಸಂಬಂಧ...
ಮಧುರ ಅನುಬಂಧ...
ಜೀವನಾನಂದ...

ಕಷ್ಟದಲ್ಲಿ ಸಹಾಯ ಹಸ್ತ ನೀಡುವರು...
ದುಃಖದಲ್ಲಿ ಭಾಗಿಯಾಗುವರು....
ಸಂತಸ ಹಂಚಿಕೊಳ್ಳುವರು...
ಸೋತಾಗ ಹುರಿದುಂಬಿಸುವರು...
ಗೆದ್ದಾಗ ನಮ್ಮಷ್ಟೇ ಹಿಗ್ಗುವರು...
ಕೋಟಿ ಕೊಟ್ಟರು ಸಿಗದವರು...
ಮುಸ್ಸಂಜೆ ತಂಗಾಳಿಯಂತೆ ಮುದ ನೀಡುವರು...
ಇವರು ಹೃದಯಸ್ಪರ್ಶಿ ಸ್ನೇಹಿತರು...

ನೀಡುವರು ನಿಷ್ಕಲ್ಮಶ ಪ್ರೀತಿ...
ಇದರಿಂದ ಬಾಳಲ್ಲಿ ಸಂಪ್ರೀತಿ...