ನಮ್ಮ ಆಫೀಸಿನಲ್ಲಿ ಒಂದು ಕ್ರಿಕೆಟ್ tournament ಆಯೋಜಿಸಿದ್ದರು,ಹಾಗೆಯೇ ನಮ್ಮ ಬಾಲ್ಯದ ನೆನಪಾಗಿ,ನಮ್ಮ ಆಗಿನ ಕ್ರಿಕೆಟ್ ಶೈಲಿ,,ನಮ್ಮ ತಂಡಗಳು,ನಮ್ಮ ಆಟದ ಪರಿ ನೆನಪಾಗಿ,ಅದರ ಬಗ್ಗೆ ಒಂದಿಷ್ಟನ್ನು ನಿಮ್ಮ ಜೊತೆ ಹಂಚಿಕೊಳ್ಳೋಣ ಅನ್ನಿಸಿತು..
ನಮ್ಮ ಹಳ್ಳಿಯಲ್ಲಿ ಸಂಕ್ರಾಂತಿ ಕಳೆದರೆ ಸುಗ್ಗಿಯ ಕಾಲ,ಅಂದರೆ ರಾಗಿ ಕುಯ್ಯುವ ಕಾಲ.ರಾಗಿ ಕುಯ್ದು,ಹುಲ್ಲು ಮತ್ತು ರಾಗಿಯನ್ನು ಬೇರ್ಪಡಿಸಲು ಒಂದು ಕಣ ಮಾಡುತ್ತಾರೆ...
ಕಣ ಅಂದರೆ ಸುಮಾರು ೩೦*೩೦ ಜಾಗದಲ್ಲಿ ಸಮತಟ್ಟು ಮಾಡಿ ಸಗಣಿಯಿಂದ ಸಾರಿಸುತ್ತಾರೆ...ನಂತರ ಅಲ್ಲಿ ರಾಗಿಯನ್ನು ತೆನೆಯಿಂದ ಬೇರ್ಪಡಿಸುವ ಕಾರ್ಯ ಶುರು,ನಂತರ ಹುಲ್ಲನ್ನು ರಾಗಿಯನ್ನು ಒಣಗಿಸಲು ಮತ್ತು ಸ್ವಲ್ಪ ದಿನ ಅಲ್ಲಿಯೇ ಅದನ್ನು ಗುಡ್ಡೆ ಮಾಡಿ,ಒಂದು ದಿನ ಪೂಜೆ ಮಾಡಿ,ಅಲ್ಲಿಂದ ರಾಗಿಯನ್ನು ತಮ್ಮ ಮನೆಗಳಿಗೆ ಸಾಗಿಸುತ್ತಾರೆ..
ಈ ಕಣವನ್ನು ಒಂದೊಂದು ಮನೆಯವರೇ ಮಾಡುವುದಿಲ್ಲ,ಬದಲಾಗಿ ೨-೩ ಮನೆಯವರು ಒಟ್ಟಿಗೆ ಸೇರಿ ಮಾಡುತ್ತಾರೆ..ಇದರಿಂದ ಅವರ ನಡುವೆ ಭಾಂದವ್ಯ ಚೆನ್ನಾಗಿರುತ್ತದೆ,ಮತ್ತು ಅಷ್ಟೂ ಮನೆಯವರು ಎಲ್ಲಾ ಮನೆಯವರ ಕೆಲಸವನ್ನು ಒಟ್ಟಿಗೆ ಮಾಡುತ್ತಾರೆ,ರಾಗಿ ಕುಯ್ಯುವುದರಿಂದ ಹಿಡಿದು,ಅದನ್ನು ಬೇರ್ಪಡಿಸಿ,ರಾತ್ರಿ ಸಮಯದಲ್ಲಿ ಕಣದಲ್ಲೇ ಮಲಗಿ ಕಾಯುವುದು,ಕಣ ತಯ್ಯಾರು ಮಾಡುವುದು,ಎಲ್ಲವೂ,ಒಬ್ಬರ ಮನೆಯ ಕೆಲಸಕ್ಕೆ ಇನ್ನೊಬ್ಬರು ಬರುತ್ತಾರೆ,ಅವರ ಮನೆಯ ಕೆಲಸಕ್ಕೆ ಇವರು,ಇವರ ಮನೆಯ ಕೆಲಸಕ್ಕೆ ಅವರು..ಆದ್ದರಿಂದ ಕೂಲಿ ಕೆಲಸದವರನ್ನು ಕರೆಸುವುದು ತಪ್ಪುತ್ತದೆ..ಈ ರೀತಿ ಒಬ್ಬರ ಮನೆಗೆ ನಾವು ಹೋಗಿ,ನಮ್ಮ ಮನೆಯ ಕೆಲಸಕ್ಕೆ ಅವರು ಬರುವು ಪದ್ಧತಿಗೆ 'ಮುಯ್ಯಿ ಆಳು' ಎಂದು ಕರೆಯುತ್ತಾರೆ..
ಇರಲಿ ವಿಷಯಕ್ಕೆ ಬರೋಣ,ಈ ಸುಗ್ಗಿಯೆಲ್ಲ ಮುಗಿಯುವುದು ಉಗಾದಿಯ ಹೊತ್ತಿಗೆ,ಅಂದರೆ ಹತ್ತಿರ ಹತ್ತಿರ ಮಾರ್ಚ್,ಅಂದರೆ ನಮ್ಮೆ ವಾರ್ಷಿಕ ಪರೀಕ್ಷೆ ಮುಗಿದು,ಬೇಸಿಗೆ ರಜ ಶುರು ಆಗುವ ಸಮಯ..
ಬೇಸಿಗೆ ರಜೆಯಲ್ಲಿ ನಮಗೆ ಈ ಕಣವೇ ಕ್ರಿಕೆಟ್ ಪಿಚ್ ,ಹೇಗೂ ಮಳೆಗಾಲ ಶುರು ಆಗುವವರೆಗೂ ಆ ಜಮೀನಲ್ಲಿ ಅವರು ಉಳುವುದಿಲ್ಲ,.ಭೇಸಾಯ ಮಾಡಿದರು ಏನನ್ನೂ ಬೆಳೆಯಲು ಸಾಧ್ಯವಿಲ್ಲ,ನೀರಿನ ಸಮಸ್ಯೆ ಮುಖ್ಯವಾಗಿ..ಏನೇ ಆದರೂ ಅದು ಹಾಗೆ ಬಿಟ್ಟಿರುತ್ತಾರೆ..ಇದು ತುಂಬ ಹಿಂದಿನಿಂದ ನಡೆದು ಬಂದಿದೆ..ಮಳೆಗಾಲ ಶುರು ಆಗುಯ ಸ್ವಲ್ಪ ಮುಂಚೆ ಅದನ್ನು ಉಳುತ್ತಾರೆ,ಅಲ್ಲದೆ ಸ್ವಲ್ಪ ದಿನದ ಮಟ್ಟಿಗೆ ಆ ಜಮೀನಿಗೆ ರಸ್ಟ್ ಕೊಡುವ ಪರಿಭಾಷೆಯೂ ಇರಬಹುದು....
ಸರಿ,ಆ ಕಣ ಕೇವಲ ಪಿಚ್ ಮಾತ್ರ,ನಮ್ಮ ಬೌಂಡರಿ ಇರುತ್ತಿದ್ದದ್ದು,ಮಳೆ ಬಂದ ದಿನ(ಅದೂ ಜೋರಾಗಿ)ಮಾತ್ರ ಹರಿಯುವ ಹಳ್ಳ,ಅಥವಾ ಹೊಲದ ತಂತಿ ಬೇಲಿ,ಹೊಲದ ಬದಿ ಇರಬಹುದು,ಹೀಗೆ ಸಾಗುತ್ತಿತ್ತು..
ಆ ಪಿಚ್ ಮಾತ್ರ ಸಮ ವಾಗಿರುತ್ತಿತ್ತು,ಉಳಿದಂತೆ ಹೊಲದಲ್ಲಿ ಮಣ್ಣಿನ ಉಂಡೆಗಳು(ಹೆಂಟೆ ),ಬಾಲ್ ಆ ಹೆಂಟೆಗೆ ತಾಗಿ ಮುಂದಕ್ಕೆ ಹೋಗಬಹುದು,ಬಲಕ್ಕೂ ,ಎಡಕ್ಕೂ ಯಾವ ದಿಕ್ಕಿಗೂ ಹೋಗಬಹುದು,ಒಟ್ಟಿನಲ್ಲಿ ಅಲ್ಲಿ fielding
ಮಾಡುವವನ ಗತಿ ಅಧೋಗತಿ,ಅದರಲ್ಲೂ ಆ ಮಣ್ಣಿನ ಹೆಂಟೆ ಗಳಲ್ಲಿ ಓಡಿ ಬಾಲ್ ಹಿಡಿಯಬೇಕು.fielding ಮಾಡುವುದು ಒಂದು ರೀತಿಯ ಹಿಂಸೆಯೇ ಸರಿ,ಆದರೂ ಉತ್ಸಾಹಕ್ಕೆನು ಕಡಿಮೆ ಇರಲಿಲ್ಲ...
ಇಂಥ ಗುಣಮಟ್ಟದ ಪಿಚ್ನಲ್ಲಿ ಕೂಡ ಸುತ್ತ ಮುತ್ತಲಿನ ಊರಿನವರ ಜೊತೆ ಪಂದ್ಯಗಳನ್ನು ಆಡುತ್ತಿದ್ದೆವು..
ನಮ್ಮ ಪಕ್ಕದ ಉರಿನಲ್ಲಿ ಕೆರೆ ಇತ್ತು,ಅವರು ಆ ಕೆರೆಯಲ್ಲಿ ಆಡುತ್ತಿದ್ದರು,ಅದು ಸ್ವಲ್ಪ ದಿನದ ಮಟ್ಟಿಗೆ ಕ್ಷಣಿಕ ಸುಖ,ಕಾರಣ,ಕೆರೆಯ ಮಣ್ಣನ್ನು ತಮ್ಮ ತಮ್ಮ ಜಮೀನಿಗೆ ಹಾಕಿಸಿಕೊಳ್ಳಲು ಅಲ್ಲಲ್ಲಿ ದೊಡ್ಡ ದೊಡ್ಡ ಗುಂಡಿ ತೆಗೆಯುತ್ತಿದ್ದರು.ಹಾಗಾಗಿ ಪಿಚ್ ಆಳು ಮಾಡುತ್ತಿದ್ದರು..
ಕೆಲವೊಮ್ಮೆ ನಾವು ತೆಂಗಿನ ಗರಿಗಳನ್ನು ಸವರಿ,ಅದರ ಎಡವು ಮಟ್ಟೆಯನ್ನು ಮಚ್ಚಿನಿಂದ ಅಥವಾ ಕುಡುಗೋಲಿನಿಂದ ತುಂಡು ಮಾಡಿ,ಬ್ಯಾಟ್ ಮಾಡುತ್ತಿದ್ದೆವು,ಊರಿನವರೆಲ್ಲ ಒಂದಷ್ಟು ದುಡ್ಡು ಹಾಕಿ ಬ್ಯಾಟ್ ತರುವುದಕ್ಕೂ ಮುಂಚೆ ನಮಗೆ nature ಗಿಫ್ಟ್ ಬ್ಯಾಟ್ ಗತಿಯಾಗಿತ್ತು..
ನೀಲಗಿರಿಯ ಕಡ್ಡಿಗಳನ್ನು ಸವರಿ,ಅದಕ್ಕೆ ಮೂತಿಯನ್ನು ಕೆತ್ತಿ ವಿಕೆಟ್ ಮಾಡಿ ಕೊಂಡಿದ್ದೆವು,ಒಬ್ಬೊಬ್ಬರು ೧-೨ ರುಪಾಯೀ ಸೇರಿಸಿ ಬಾಲ್ ತರುತ್ತಿದ್ದೆವು..ಹೀಗಿತ್ತು ನಮ್ಮ ಕ್ರಿಕೆಟ್..
ಇದರ ಜೊತೆಗೆ ಹಸು ಮೇಯಿಸುವುದು ,ತೋಟಕ್ಕೆ ನೀರು ಬಿಡುವುದು,ಮತ್ತೆ ಮೇವು ತರುವುದು ಇವೆಲ್ಲ ಕೆಲಸಗಳನ್ನು ಮಾಡಬೇಕಿತ್ತು..
ಹೊಯ್ಸಳ ಕಪ್,ವೀರಭದ್ರ ಕಪ್,ಪುಷ್ಪಗಿರಿ ಕಪ್..ಹೀಗೆಲ್ಲ ಕೆಲವ ಪಂದ್ಯಾವಳಿಗಳು ನಡೆಯುತ್ತಿದ್ದವು....
ಹೀಗೆ ಸುತ್ತಮುತ್ತಲ ಗ್ರಾಮಗಳಿಗೆ ಹೋಗುತ್ತಿದ್ದೆವು ,ನಮ್ಮ ಊರಿನ ಪಿಚ್ ಗಳು ಹೊಲದ ಮಧ್ಯೆ ಇದ್ದದ್ದರಿಂದ ಅಷ್ಟು ಅನುಕೂಲಕರವಲ್ಲವೆನ್ದು ನಾವು ಯಾವ ಪಂದ್ಯಾವಳಿಗಳನ್ನು ಆಯೋಜಿಸಿರಲಿಲ್ಲ.
ಹೀಗೆ ಒಮ್ಮೆ ೭ನೆ ಕ್ಲಾಸ್ ಅನ್ನಿಸುತ್ತದೆ,ನಮ್ಮೂರಿಂದ ಸುಮಾರು ೬-೭ ಕಿಮೀ ದೂರದ ಊರಿಗೆ ಹೋಗಿದ್ದೆವು,ಮೊದಲ ಪಂದ್ಯ ಗೆದ್ದು,ಎರಡನೇ ಪಂದ್ಯ ಸೋತು ವಾಪಸ್ ಬರುತ್ತಿದ್ದೆವು.ನಮ್ಮೂರಿಂದ ಕೆಲವರು ಸೈಕಲ್ ನಲ್ಲಿ,ಕೆಲವರು ಬಸ್ ನಲ್ಲಿ ಹೋಗಿದ್ದೆವು.ನಾನು ಮತ್ತು ನನ್ನ ಸ್ನೇಹಿತ ನನ್ನ ಸೈಕಲ್ ನಲ್ಲಿ ಹೋಗಿದ್ದೆವು.ವಾಪಸ್ ಬರುವಾಗೆ ಸೈಕಲ್ ಚೈನು ಕಟ್ ಆಯಿತು.ಹಳೇಬೀಡಿಗೆ ಇನ್ನು ಸುಮಾರು ೨ ಕಿಮೀ ಇದೆ,ಅಲ್ಲಿಂದ ನಮ್ಮೂರಿಗೆ ೧ ೧/೨ ಕಿಮೀ,ಹೇಗಪ್ಪ ಈಗ ಹಳೆಬೀಡಿನ ತನಕ ಹೋಗುವುದು,ಅಲ್ಲಿ ಹೇಗೂ ರಿಪೇರಿ ಮಾಡಿಸಿ ಕೊಂಡರಾಯಿತು ಎಂಬ ಯೋಚನೆ ಇದ್ದಾಗ,ಅಲ್ಲೇ ಪಕ್ಕದ ತೋಟಕ್ಕೆ ಹೋಗಿ,ಒಂದು ದಾರ ಮತ್ತು ಸಣ್ಣ ತಂತಿಯನ್ನು ಅವರಿಂದ ಪಡೆದು ಹೇಗೂ ಪೇಟೆಯವರೆಗೆ ತಲುಪಿ ರಿಪೇರಿ ಮಾಡಿಸಿಕೊಳ್ಳುವವರೆಗೂ ನಾವಿಬ್ಬರು ಪಟ್ಟ ವ್ಯಥೆ ಕೇಳತೀರದು,ಅದು ಮಧ್ಯದಲ್ಲಿ ಇನ್ನೊಮ್ಮೆ ಹರಿದು ಹೋಗಿ,ಮತ್ತೆ ತಾತ್ಕಾಲಿಕವಾಗಿ ಆ ಚೈನಿಗೆ ತಂತಿ ಸಿಗಿಸೆದ್ದೆವು.
ಬೇಸಿಗೆ ಕಳೆದ ಮೇಲೆ ನಮಗೆ ನಮ್ಮೂರ ಶಾಲೆಯ ಮರಗಳ ನಡುವೆ ಇರುವ,ಶಾಲೆಯ ಮಕ್ಕಳು ಪ್ರಾರ್ಥನೆ ಮಾಡುವ ಜಾಗವೇ ಕ್ರಿಕೆಟ್ ಪಿಚ್ ಆಗುತ್ತಿತ್ತು.ಅಲ್ಲಿ ನಮ್ಮೂರಿನ ಕೆಲವರು ಆಡಲು ಬಿಡುತ್ತಿರಲಿಲ್ಲ.ಕಾರಣ ನಾವು ಶಾಲೆಯ ಹೆಂಚುಗಳನ್ನು ಹೊಡೆದು ಹಾಕುತ್ತಿವಿ ಎಂದು.ಸರಿ ಕೆಲ ದಿನಗಳು ಅಲ್ಲಿ ಆಡಿದೆ ನಂತರ ಎಲ್ಲರು ಬೈಯ್ಯಲು ಶುರು ಮಾಡುತ್ತಿದ್ದರು,ನಮ್ಮ ನಮ್ಮ ಮನೆಗಳಲ್ಲಿ ಕೂಡ.ಹಾಗಾಗಿ ಅಲ್ಲಿ ಆಡಲು ಬಿಟ್ಟೆವು ,ನಂತರ ಯಾರದಾದರೂ ಮನೆಯ ಬಳಿ ಜಾಗವೇ ಗತಿಯಾಗುತ್ತಿತ್ತು.
ನಮ್ಮ ಮನೆಯ ಪಕ್ಕದಲ್ಲಿ ಎತ್ತಿನ ಗಾಡಿ ನಿಲ್ಲಿಸುವ ಜಾಗದಲ್ಲಿ ಸ್ವಲ್ಪ ದಿನ ಆಡಿದೆವು.ಆಗ ನಡೆದಂತಹ ಒಂದು ಘಟನೆ.
ಆಟದ ಮಧ್ಯೆ ಒಮ್ಮೆ ಬಾಲು ಬೇಲಿಯ ಸಂಧಿ ಹೋಯಿತು.ಅಲ್ಲಿದ್ದ ಒಬ್ಬ ಹುಡುಗ ಬಾಲ್ ತರಲು ಹೋದವನು,"ಲೋ ಬರ್ರೋ ಇಲ್ಲಿ,ನೋಡ್ರೋ" ಅಂದ.
ಏನಪ್ಪಾ ಅಂತ ಹತ್ತಿರ ಹೋಗಿ ನೋಡಿದರೆ ಅಲ್ಲೊಂದು ಜೇನು ಕಟ್ಟಿತ್ತು.ಅದಕ್ಕೂ ಮುಂಚೆ ಯಾರು ಕೂಡ ಜೇನನ್ನು ಅಳಿಸಿರಲಿಲ್ಲ,ದೂರದಿನ್ದ ನೋಡಿದವರೇ.
ಸರಿ ಇನ್ನೇನು ಸಾಹಸಕ್ಕೆ ಕೈ ಹಾಕೋಣ ಎಂದು ನಿರ್ಧರಿಸಿ ಎಲ್ಲ ಸಾಮಗ್ರಿಗಳನ್ನಿ ಸಿದ್ಧ ಪಡಿಸಿಕೊಂಡೆವು.
ಒಬ್ಬ ಹೇಳಿದ 'ಇದು ಕೋಲು ಜೇನು ,ಸ್ವಲ್ಪ ಹುಷಾರಾಗಿರಬೇಕು,ಕಡಿದರೆ ಮುಖ ಊದುತ್ತದೆ"ಅಂತ.
ಸರಿ ಸೌದೆ,ತೆಂಗಿನ ಗರಿಗಳಿಗೇನೂ ಬರ ಇಲ್ಲ,ಬೆಂಕಿ ಪೊಟ್ಟಣ ಮತ್ತು ಒಂದು ಪಾತ್ರೆ ನಮ್ಮ ಮನೆಯಿಂದ ತಂದಿದ್ದಾಯಿತು.
ಮೊದಲು ಸ್ವಲ್ಪ ದೂರದಿನ್ದ ಸೋಗೆ ಗರಿಗಳಿಗೆ ಬೆಂಕಿ ಹಚ್ಚಿ ಉರುಲು ಕೊಟ್ಟೆವು,ಯಾಕೋ ಜೇನುಗಳು ಜಗ್ಗಲಿಲ್ಲ.ಜೋರಾಗಿ ಬೆಂಕಿ ಹಚ್ಚುವ ಅಂದರೆ ಹತ್ತಿರದಲ್ಲೇ ಹುಲ್ಲಿನ ಮೆದೆ ಇದೆ(ಹಸು ಕರುಗಳಿಗೆ)
.ನಂತರ ಒಂದೆರಡು ಬಕೆಟ್ ನೀರು ತಂದು ,ಸ್ವಲ್ಪ ಜೋರಾಗಿ ಬೆಂಕಿ ಕಾವು ಕೊಟ್ಟೆವು.ಆಗ ಜೇನು ಒಂದೊಂದಾಗಿ ಪರಾರಿಯಾಗಲು ಶುರು ಮಾಡಿದವು.ಜೊತೆಗೆ ಎಲ್ಲರಿಗು ಒಂದು ಅಥವಾ ಎರಡೆರಡು ಕಡೆ ಕಡಿದಿದ್ದವು.
ಸ್ವಲ್ಪ ಸಣ್ಣಗೆ ಊತ ಕೂಡ ಬಂದಿತ್ತು.ಎಷ್ಟೇ ಜೇನು ನೊಣಗಳು ಪರಾರಿಯಾದರು ಅಲ್ಲೊಂದು ಇಲ್ಲೊಂದು ಇದ್ದವು.ನಂತರ ಆ ಉಳಿದ ಗೆಡ್ಡೆಯನ್ನು ತೆಗೆದು ಹಿಂಡುತ್ತ ಹೋದರೆ ಸುಮಾರು ಅರ್ಧ ಲೀಟರ್ ಫ್ರೆಶ್ ಜೇನು ತುಪ್ಪ.
ಅಲ್ಲಿದ್ದ ಸುಮಾರು ೭-೮ ಜನ ತೃಪ್ತಿಯಿಂದ ಆಗುವಷ್ಟು ತಿಂದೆವು.
ಆಗ ಅಲ್ಲೊಬ್ಬ ಹುಡುಗ "ಯಾರು ಕೈ ತೊಳೆದು ಕೊಳ್ಳುವವರೆಗೂ ತಲೆ ಮುಟ್ಟಿ ಕೊಳ್ಳ ಬೇಡಿ ಕೂದಲೆಲ್ಲ ಬಿಳಿ ಆಗುತ್ತೆ "ಅಂದ.ಇದು ಎಷ್ಟರ ಮಟ್ಟಿಗೆ ನಿಜ ಅಂತ ಗೊತ್ತಿಲ್ಲ.
ಆ ಸಮಯದಲ್ಲಿ ನಮ್ಮ ಮನೆಯಲ್ಲಿ ಯಾರು ಇರಲಿಲ್ಲ.ಬಂದ ನಂತರ ಅಪ್ಪ ಅಮ್ಮನ ಹತ್ತಿರ ಈ ವಿಷಯ ಹೇಳಿದಾಗ ಅವ್ರು ಸರಿಯಾಗಿ ಕಡಿದಿದ್ದರೆ ಚೆನ್ನಾಗಿರುತಿತ್ತು.ಬರೀ ಇಷ್ಟೇನಾ ಊದಿರದು ಅಂತ ಹೇಳಿದ್ದರು.ನನಗೆ ನನ್ನ ತುಟಿಯಲ್ಲಿ ಸ್ವಲ್ಪ ಊದಿತ್ತು.ಮಾರನೆಯ ದಿನ ಶಾಲೆಗೇ ಅದೇ ಮುಖದಲ್ಲಿ ಹೋಗಿದ್ದೆ..
ಹೀಗೆ ನಮ್ಮ ಕ್ರಿಕೆಟ್ ಸಾಗುತ್ತಿತ್ತು.ಮಾಮೂಲಿ ಜಗಳಗಳು,ಮತ್ತೆ ಹೊಂದಾಣಿಕೆ ನಮ್ಮ ರಾಜಕೀಯ ಪಕ್ಷಗಳ ತರಹ ಸಾಗುತ್ತಿತ್ತು.